ಕರಿಯ ಮಖಮಲ್ಲು ಧರಿಸಿರುವ ಆ ಪುಟ್ಟ ಮಹಾಶಯ
ಬ್ರಿಟನಿನ ಎಚ್ಚರ! ಸುದ್ದಿಗಾರರಿಂದ
ಮಖಮಲ್ ಹೆಗ್ಗಣ (ಮೋಲ್)ಗಳು ಇಂಗ್ಲೆಂಡ್ನ ಉತ್ತರ ಭಾಗದಲ್ಲಿ ಅನೇಕಾನೇಕ ಇವೆ. ಆದರೆ ನಾನು ಹೊಲದ ಬಾಗಿಲಿನಿಂದಾಚೆ ಹುಲ್ಲುಗಾವಲನ್ನು ನೋಡಿದಾಗ ನಾನು ಕಂಡಷ್ಟು ಮಣ್ಣುದಿಬ್ಬಗಳನ್ನು ಆ ಹಿಂದೆ ನೋಡಿದ್ದಿರಲಿಲ್ಲ. ಚಿಕ್ಕ, ಹೊಸದಾಗಿ ಅಗೆದು ತೆಗೆದ ಮಣ್ಣಿನ ದಿನ್ನೆಗಳು ಹುಲ್ಲುಗಾವಲನ್ನು ಆವರಿಸಿದ್ದವು. ಮಖಮಲ್ ಹೆಗ್ಗಣವು ಯಾವ ರೀತಿಯ ಪ್ರಾಣಿ ಮತ್ತು ಅದು ಹೇಗೆ ಜೀವಿಸುತ್ತದೆಂದು ನಿಮಗೆ ಗೊತ್ತೊ?
ಒಂದು ಮಖಮಲ್ ಹೆಗ್ಗಣವನ್ನು ನೋಡಿರುವವರು ಕೊಂಚ ಜನ, ಏಕೆಂದರೆ ಅದು ತನ್ನ ಜೀವನದಲ್ಲಿ ಅಧಿಕಾಂಶವನ್ನು ನೆಲದೊಳಗೆ ಕಳೆಯುತ್ತದೆ. ಅದೊಂದು ಚಿಕ್ಕ ಪ್ರಾಣಿ, ಸುಮಾರು 15 ಸೆಂಟಿಮೀಟರ್ ಉದ್ದವುಳ್ಳದ್ದು. ಗಂಡು ಹೆಗ್ಗಣದ ತೂಕ 115 ಗ್ರ್ಯಾಮ್ಗಳಿಗಿಂತ ತುಸು ಕಡಮೆ. ಬ್ರಿಟಿಷ್ ಮಖಮಲ್ ಹೆಗ್ಗಣಕ್ಕೆ ಕರಿಯ ಬೂದು ಬಣ್ಣದ, ಬಹುಮಟ್ಟಿಗೆ ಕಪ್ಪಾದ ತುಪ್ಪುಳು ಚರ್ಮವಿದೆ, ಮತ್ತು ಅದನ್ನು ಸಾಮಾನ್ಯವಾಗಿ—ಮಮತೆಯಿಂದಲೂ—ಕರಿಯ ಮಖಮಲ್ಲು ಧರಿಸಿದ ಪುಟ್ಟ ಮಹಾಶಯ ಎಂದು ಕರೆಯಲಾಗುತ್ತದೆ.
ಈ ಹೆಗ್ಗಣದ ತುಪ್ಪುಳಿನ ಕೂದಲುಗಳು ಬಗ್ಗಿರುವುದಿಲ್ಲ, ಅಂದರೆ ಅವು ಚರ್ಮದಿಂದ ನೆಟ್ಟಗೆ ಮೇಲೇರುತ್ತವೆ. ಆದಕಾರಣ, ಹೆಗ್ಗಣವು ಮಣ್ಣಿನಲ್ಲಿ ಯಾವ ವಿಧದಲ್ಲಿ ತಿರುಚಿ ತಿರುಗಿದರೂ, ಅದು ಅದನ್ನು ಸುಲಭವಾಗಿ ಮಾಡಬಲ್ಲದು. ವರ್ಷಗಳಿಗೆ ಹಿಂದೆ ಹೆಗ್ಗಣ ಹಿಡಿಯುವವರು ಚರ್ಮಗಳನ್ನು ಬಟ್ಟೆಗಾಗಿ ಮಾರುತ್ತಿದ್ದರು, ಆದರೆ ಒಬ್ಬ ಹೆಗ್ಗಣ ಹಿಡಿಯುವವನು ವ್ಯಂಗ್ಯ ಪ್ರಶಂಸೆಯಿಂದ ಹೇಳಿದ್ದು: “ಒಂದು ಕೋಟನ್ನು ಮಾಡಬೇಕಾದರೆ ಎಷ್ಟೋ ಹೆಗ್ಗಣಗಳ ಚರ್ಮಗಳು ಬೇಕಾಗುತ್ತವೆ.”
ಮಖಮಲ್ ಹೆಗ್ಗಣದ ಶರೀರವು ಅದರ ಬಿಲ ಕೊರೆಯುವ ಕೆಲಸಕ್ಕೆ ತೀರ ವೈಶಿಷ್ಟ್ಯವುಳ್ಳದ್ದಾಗಿ ಮಾಡಲ್ಪಟ್ಟಿದೆ. ಅದರ ಮುಂಗಾಲುಗಳು ಅದರ ಶರೀರದ ಮುಂಭಾಗದಲ್ಲಿದ್ದು ಅದರ ಅಂಗಾಲುಗಳು ಹೊರಚಾಚಿರುವ ಸ್ಥಾನದಲ್ಲಿವೆ. ಐದು ಬೆರಳುಗಳು, ಮತ್ತೊಂದು ಕೂಡಿಸಲ್ಪಟ್ಟ ವೃದ್ಧಿಚಂದ್ರಾಕಾರದ ಎಲುಬು ಎರಡು ಕಾರ್ಯಸಾಧಕ ಗೋರು ಸಲಿಕೆಗಳನ್ನು ಉಂಟುಮಾಡುತ್ತವೆ. ಅದರ ಚಿಕ್ಕ ಹಿಂಗಾಲುಗಳು, ಅದರ ಬಲವುಳ್ಳ ಮುಂಗಾಲುಗಳಿಗೆ ಹೋಲಿಸುವಾಗ ಮಾತ್ರ ಬಲಹೀನವಾಗಿದ್ದರೂ, ಈ ಹೆಗ್ಗಣದ ಮುನ್ನೂಕುವಿಕೆಗೆ ಸಹಾಯ ನೀಡುತ್ತವೆ. ಒಂದು ಹೆಗ್ಗಣವನ್ನು ಮೆದುಮಣ್ಣಿನ ಮೇಲೆ ಇಡುವಲ್ಲಿ, ಅದು ಐದು ಸೆಕೆಂಡುಗಳೊಳಗೆ ನೆಲದೊಳಗೆ ಕಾಣೆಯಾಗುತ್ತದೆ! ಅದು ತನ್ನ ಕತ್ತಲಾದ ಮತ್ತು ತೇವವುಳ್ಳ ಬಿಲಗಳಲ್ಲಿ, ಅಥವಾ ನೆಲದ ಮೇಲ್ಭಾಗದಲ್ಲಿ, ಒಂದು ತಾಸಿಗೆ ಅಂದಾಜಿನ ಐದು ಕಿಲೊಮೀಟರುಗಳಷ್ಟು ವೇಗದಲ್ಲಿ ಓಡಬಲ್ಲದು.
ಅಸಾಧಾರಣವಾದ ಸಂವೇದನಾ ಶಕ್ತಿಗಳು
ಕೆಲವು ಜನರು ನೆನಸುವ ಹಾಗೆ, ಮಖಮಲ್ ಹೆಗ್ಗಣವು ಪೂರ್ತಿ ಕುರುಡಾಗಿರುವುದಿಲ್ಲ. ಬದಲಾಗಿ ಕೂದಲಿನೊಳಗೆ ಮರೆಯಾಗಿರುವ ಅದರ ಚಿಕ್ಕ ಕಣ್ಣುಗಳು ಪ್ರಾಯಶಃ ಆ ಪ್ರಾಣಿಗೆ ಕತ್ತಲೆಯಿಂದ ಬೆಳಕನ್ನು ಪ್ರತ್ಯೇಕಿಸಲು ಸಾಕಾಗುವಷ್ಟೇ ದೃಷ್ಟಿಯನ್ನು ಕೊಡುತ್ತದೆ. ಹೆಗ್ಗಣವು ಮಣ್ಣಿನಲ್ಲಿ ಬಿಲ ತೋಡಿದಂತೆ, ಕಣ್ಣುಗಳನ್ನು ರಕ್ಷಿಸುವರೆ ಉದ್ದ ಕೂದಲುಗಳು ಅವುಗಳ ಮೇಲೆ ಎಳೆಯಲ್ಪಡುತ್ತವೆ. ಆದರೂ, ದೃಷ್ಟಿಗಿಂತಲೂ ಹೆಚ್ಚು ಪ್ರಾಮುಖ್ಯವಾದುವುಗಳು ಅದರ ಘ್ರಾಣೇಂದ್ರಿಯ ಮತ್ತು ಸ್ಪರ್ಶೇಂದ್ರಿಯ.
ಯೂರೋಪಿಯನ್ ಮಖಮಲ್ ಹೆಗ್ಗಣದ ಎಳೆಗೆಂಪು ಬಣ್ಣದ ಮುಸುಡಿನ ತುದಿಯಲ್ಲಿ, ಸಾವಿರಾರು ಚಿಕ್ಕ ಹೊರಚಾಚುವಿಕೆಗಳು, ಸ್ಪರ್ಶಕ್ಕೆ ಸೂಕ್ಷ್ಮಗ್ರಾಹಿಗಳಾಗಿರುವ ಅವುಗಳ ಸ್ವಂತ ಕೂದಲುಗಳೊಂದಿಗಿವೆ. ಅದರ ತಲೆಯ ವಿವಿಧ ಭಾಗಗಳಲ್ಲಿ ಅದಕ್ಕೆ ಉದ್ದದ ಬಿರುಗೂದಲುಗಳೂ ಅದರ ಬಾಲದ ತುದಿಯಲ್ಲಿ ಹೆಚ್ಚಿಗೆ ಸಂವೇದನ ವಾಹಕ ಕೂದಲುಗಳೂ ಇವೆ. ಮಖಮಲ್ ಹೆಗ್ಗಣವು ತನ್ನ ಬಿಲದೊಳಗೆ ಚಲಿಸುವಾಗ ಮೇಲೇರುತ್ತಿರುವ ಒತ್ತಡದ ಅಲೆಗಳನ್ನು ತಿಳಿದುಕೊಳ್ಳುತ್ತದೆ. ಈ ವಿಧದಲ್ಲಿ ಅದು, ದೊಡ್ಡ ಕಲ್ಲುಗಳಂತಹ ಅಥವಾ ಕೊಂದು ತಿನ್ನುವ ಪ್ರಾಣಿಗಳಂತಹ ತಡೆಗಳನ್ನು ಕೂಡ ಕಂಡುಹಿಡಿಯಲು ಮತ್ತು ಅವುಗಳಿಂದ ತಪ್ಪಿಸಿಕೊಳ್ಳಲು ಶಕ್ತವಾಗುತ್ತದೆ.
ಮಖಮಲ್ ಹೆಗ್ಗಣಕ್ಕೆ ಸುವಿಕಸಿತ ಹೊರಗಣ ಕಿವಿಗಳು ಇಲ್ಲವಾದರೂ ಅದಕ್ಕೆ ತೀಕ್ಷೈವಾದ ಶ್ರವಣಶಕ್ತಿಯಿದೆ. ನೆಲದ ಮೂಲಕ ಸ್ಪಂದನಗಳನ್ನು ಗ್ರಹಿಸುವ ಮತ್ತು ಅವುಗಳಿಗೆ ಪ್ರತಿಕ್ರಿಯಿಸುವ ಸಾಮರ್ಥ್ಯ ಅದಕ್ಕಿದೆ. ಹೆಗ್ಗಣದ ಕಿವಿಗಳನ್ನು ನಿಮೀಲನ ಸ್ನಾಯುಗಳ ಮೂಲಕ ಮುಚ್ಚಸಾಧ್ಯವಿದೆ. ಇದು ಮಣ್ಣಿನ ಕಣಗಳು ಕೋಮಲವಾದ ಕಿವಿಕುಳಿಗಳನ್ನು ಪ್ರವೇಶಿಸದಂತೆ ತಡೆಯುತ್ತದೆಂದು ತೋರುತ್ತದೆ.
ಆಹಾರ ಮತ್ತು ಇಕ್ಕೆ
ಹುಲ್ಲುಗಾವಲಿನಾಚೆ ನೋಡುವಾಗ, ಮಖಮಲ್ ಹೆಗ್ಗಣಗಳು ಹೋಗಿಬರುವ ನೆಲದಡಿಯ ಹಾದಿ ಅಥವಾ ಪಥವನ್ನು ನನಗೆ ಗುರುತಿಸಲು ಸಾಧ್ಯವಾಗುತ್ತಿತ್ತು. ಅದು ಮೇಲ್ಮೈಯ ತುಸು ಕೆಳಗಿನಿಂದ ಹೋಗುತ್ತಿದ್ದು ಕೊಂಚ ಎತ್ತರಕ್ಕೇರಿಸಲ್ಪಟ್ಟಿತ್ತು. ಅಲ್ಲದೆ ಹೆಗ್ಗಣಗಳು ಹೊಸದಾಗಿ ಅಗೆದ ಮಣ್ಣನ್ನು ಮೇಲೆತ್ತಿ ಹಾಕಿದ್ದ ಹೊಸ ಮಣ್ಣುದಿನ್ನೆಗಳೂ ಕಂಡುಬರುತ್ತಿದ್ದವು. ಮಣ್ಣನ್ನು ಹೀಗೆ ತಿರುವಿ ಹಾಕುವುದು ಒಂದು ವಿಧದ ಉಳುವ ಕೆಲಸವಾಗಿದ್ದು, ಇದು ಮಣ್ಣನ್ನು ಬಸಿಯಲು ಮತ್ತು ಅದರ ಫಲಶಕ್ತಿಯನ್ನು ಕಾಪಾಡಲು ಸಹಾಯ ಮಾಡುತ್ತದೆ.
ಮಖಮಲ್ ಹೆಗ್ಗಣದ ಮುಖ್ಯ ಆಹಾರ ಎರೆಹುಳುಗಳು ಮತ್ತು ಅವು ಬಿಲಗಳನ್ನು ತೋಡುವ ಕಾರಣ ಇದೇ ಆಗಿದೆ. ಎರೆಹುಳುಗಳು ಮಣ್ಣಿನಲ್ಲಿ ಹರಿದಾಡುವಾಗ ಹೆಗ್ಗಣದ ಹಾದಿಗಳ ಜಾಲಬಂಧವನ್ನು ಪ್ರವೇಶಿಸುತ್ತವೆ. ಆಗ ಕತ್ತಲೆಯ ಅಗೆತಗಳ ಮಾರ್ಗವಾಗಿ ಓಡಿಯಾಡುವ ಹೆಗ್ಗಣವು ಬೇಗನೆ ತನ್ನ ಆಹಾರವನ್ನು ಕಂಡುಕೊಳ್ಳುತ್ತದೆ. ಆದರೆ ಅದು ಲೆದರ್ಜ್ಯಾಕೆಟ್ ಹುಳುಗಳು ಮತ್ತು ತಂತಿಹುಳುಗಳು ಒಳಗೊಂಡಿರುವ ಕೀಟಗಳನ್ನೂ ತಿನ್ನುತ್ತದೆ. ಮಖಮಲ್ ಹೆಗ್ಗಣವು ಪ್ರತಿ ಎರಡು ತಾಸುಗಳಿಗೊಮ್ಮೆ ತಿನ್ನಲೇ ಬೇಕು, ಇಲ್ಲದಿದ್ದಲ್ಲ ಸಾಯುವುದು.
ಮಖಮಲ್ ಹೆಗ್ಗಣದ ಚಿಕ್ಕ ಮಣ್ಣದಿನ್ನೆಗಳನ್ನು, ಅದರ ಇಕ್ಕೆಗಳೆಂದು ಅಪಾರ್ಥಮಾಡಿಕೊಳ್ಳಬಾರದು. ಇಕ್ಕೆಯು ಸುಮಾರು 30 ಸೆಂಟಿಮೀಟರ್ ಎತ್ತರ ಮತ್ತು ಒಂದು ಮೀಟರ್ ಅಗಲವಿದ್ದು ಹೆಚ್ಚು ದೊಡ್ಡದಾಗಿದೆ. ಇದನ್ನು ಸಾಮಾನ್ಯವಾಗಿ, ಎಲ್ಲಿ ಹುಲ್ಲು, ಚಿಗುರುಗಳು ಮತ್ತು ಎಲೆಗಳಂತಹ ಇಕ್ಕೆಯ ಸಾಮಾನುಗಳು ಸಿದ್ಧವಾಗಿ ಸಿಕ್ಕಸಾಧ್ಯವಿದೆಯೊ ಅಂತಹ ಆಶ್ರಯ ಸ್ಥಳದ ಬಳಿ—ಒಂದು ಮರದ ಕೆಳಗೆ ಅಥವಾ ಪೊದೆಯ ಸಾಲಿನ ಬಳಿ ಕಂಡುಕೊಳ್ಳಲಾಗುತ್ತದೆ.
ವಸಂತಕಾಲದ ಆದಿಭಾಗದಲ್ಲಿ ನಡೆಯುವ ಮರಿಹಾಕುವಿಕೆಯಲ್ಲಿ ಏಳರಷ್ಟು ಮರಿಗಳಿರುತ್ತವೆ. ಹುಟ್ಟಿನಲ್ಲಿ ಮರಿ ಹೆಗ್ಗಣಗಳು ಕುರುಡಾಗಿಯೂ ಬೋಳಾಗಿಯೂ ಇದ್ದು ಮೂರು ಗ್ರ್ಯಾಮ್ಗಳಿಗಿಂತಲೂ ಕಡಮೆ ತೂಕವುಳ್ಳವುಗಳಾಗಿರುತ್ತವೆ. ಐದು ವಾರಗಳ ಬಳಿಕ ಅವು ತಮ್ಮ ಪರಾಮರಿಕೆ ವಹಿಸುವಷ್ಟು ದೊಡ್ಡವುಗಳಾಗಿ, ಪ್ರಾಯಶಃ 1.5 ಕಿಲೊಮೀಟರಿನಷ್ಟು ದೂರ ಹೋಗುತ್ತವೆ. ಒಂಬತ್ತು ತಿಂಗಳುಗಳ ಬಳಿಕ ಅವು ಕೂಡಲು ಸಿದ್ಧವಾಗುತ್ತವೆ. ಮಖಮಲ್ ಹೆಗ್ಗಣದ ಸರಾಸರಿ ಆಯುಷ್ಯವು ಮೂರು ವರ್ಷ. ಆದರೂ ಕೊಂದು ತಿನ್ನುವ ಪ್ರಾಣಿಗಳು ಅವುಗಳಲ್ಲಿ ಅನೇಕವನ್ನು ಆ ಮೊದಲೇ ಕೊಲ್ಲುತ್ತವೆ.
ಒಂದು ಮಖಮಲ್ ಹೆಗ್ಗಣವು ನೀಟಾಗಿ ಕತ್ತರಿಸಿದ ಹುಲ್ಲಿನ ಉದ್ಯಾನದ ಕೆಳಗೆ ಅಥವಾ ಗಾಲ್ಫ್ ಆಟದ ಮುಖ್ಯ ಬಯಲಿನ ಕೆಳಗೆ ತನ್ನ ಆಹಾರವನ್ನು ಹುಡುಕುವಾಗ ಸಮಸ್ಯೆಗಳನ್ನು ಉಂಟುಮಾಡಬಲ್ಲದೆಂಬುದು ಒಪ್ಪಿಕೊಳ್ಳಬೇಕಾದ ವಿಷಯ. ಆದರೆ ಕರಿಯ ಮಖಮಲ್ಲು ಧರಿಸಿದ ನಮ್ಮ ಪುಟ್ಟ ಮಹಾಶಯನು ಗ್ರಾಮ ಪ್ರದೇಶದ ಜೀವನದಲ್ಲಿ ಕುತೂಹಲ ಕೆರಳಿಸುವ ಭಾಗವಾಗಿದ್ದಾನೆ.