ಜಗತ್ತನ್ನು ಗಮನಿಸುವುದು
ಆರ್ಥಿಕ ವಿಪತ್ತುಗಳು
“1930ಗಳಲ್ಲಿ ಕುಸಿತವಾದಂದಿನಿಂದ ಪ್ರಥಮ ಬಾರಿಗೆ, ಉದ್ಯೋಗಶೀಲ ದೇಶಗಳು ಹಾಗೂ ವರ್ಧಿಷ್ಣು ದೇಶಗಳು ನಿತ್ಯವಾಗಿರುವ ನಿರುದ್ಯೋಗವನ್ನು ಎದುರಿಸುತ್ತಿವೆ” ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ (ಐಎಲ್‌ಓ) ಜನರಲ್ ಡೈರೆಕ್ಟರರಾದ ಮಿಶೇಲ್ ಹಾನ್ಸೆನ್ ಹೇಳುತ್ತಾರೆ. ಜಾರ್ನಲ್ ಡೇ ಟಾರ್ಡಕ್ಕನುಸಾರ: “ಲೋಕದ ಕಾರ್ಮಿಕ ದಳದ ಮೂವತ್ತು ಪ್ರತಿಶತ ಮಂದಿ—ಸುಮಾರು 82 ಕೋಟಿ ಜನರು—ನಿರುದ್ಯೋಗಿಗಳಾಗಿದ್ದಾರೆ ಅಥವಾ ತಾತ್ಕಾಲಿಕ ಉದ್ಯೋಗಗಳಲ್ಲಿದ್ದಾರೆ.” ಲ್ಯಾಟಿನ್ ಅಮೆರಿಕದ ಐಎಲ್‌ಓನ ವರದಿಯ ಕುರಿತು ಜಾರ್ನಲ್ ಡೋ ಬ್ರಾಜೀಲ್ ಹೇಳಿಕೆ ನೀಡುವುದು: “ಕಾಫಿಯನ್ನು ಕೊಯ್ಯುವುದು ಮತ್ತು ಉತ್ಪಾದಿಸುವುದು, ಕಬ್ಬು ಕತ್ತರಿಸುವುದು, ರಫ್ತು ಮಾಡಲಿಕ್ಕಾಗಿ ಹತ್ತಿ, ಹಣ್ಣುಗಳು ಮತ್ತು ತರಕಾರಿಗಳನ್ನು ಕೊಯ್ದು ಸಂಗ್ರಹಿಸುವುದರಲ್ಲಿ ಕೆಲಸಮಾಡುತ್ತಿರುವ, ‘ಅನಿಶ್ಚಿತ’ ಕೆಲಸಗಾರರೆಂದು—ಅಲ್ಪವಾಗಿ ಸಂಬಳ ಕೊಡಲ್ಪಡುವ ತಾತ್ಕಾಲಿಕ ಕೆಲಸಗಾರರು—ಕರೆಯಲ್ಪಡುವವರ ಸಂಖ್ಯೆಯಲ್ಲಿ ಗಾಬರಿಗೊಳಿಸುವಂತಹ ಅಭಿವೃದ್ಧಿಯಾಗಿದೆ.” (g94 10⁄22)
ಶಾಲಾ ದಬ್ಬಾಳಿಕೆ
ಜಪಾನಿನ ಕೋಬೆ ಮುನಿಸಿಪಲ್ ಟೆಕ್ನಿಕಲ್ ಜೂನಿಯರ್ ಕಾಲೇಜ್‌ನಿಂದ ಹೊರಹಾಕಲ್ಪಟ್ಟ ಒಬ್ಬ ಹುಡುಗನು, ಶಿಕ್ಷಣ ಪಡೆಯಲಿಕ್ಕಾಗಿರುವ ತನ್ನ ಹಕ್ಕಿಗಾಗಿ ಮನವಿ ಸಲ್ಲಿಸುತ್ತಿದ್ದಾನೆ. ಯೆಹೋವನ ಸಾಕ್ಷಿಗಳಲ್ಲಿ ಒಬ್ಬನೋಪಾದಿ ತನ್ನ ಧಾರ್ಮಿಕ ಮನಸ್ಸಾಕ್ಷಿಯ ಕಾರಣದಿಂದ, ಶಾರೀರಿಕ ಶಿಕ್ಷಣದ ಒಂದು ಭಾಗದೋಪಾದಿ ಕಲಿಸಲ್ಪಡುವ ಕೆಂಡೊ (ಜಪಾನೀಯರ ಕತ್ತಿವರಸೆ) ಡ್ರಿಲ್‌ಗಳಲ್ಲಿ ಅವನು ಭಾಗವಹಿಸಲಿಲ್ಲ. ಶಾರೀರಿಕ ಶಿಕ್ಷಣಕ್ಕೆ ಕಡಿಮೆ ಬೆಲೆಯು ಕೊಡಲ್ಪಟ್ಟಿರುವಾಗ್ಯೂ, ಅವನು ಅತ್ಯಂತ ಅಗ್ರಸ್ಥಾನವನ್ನು ಪಡೆಯುವ ವಿದ್ಯಾರ್ಥಿಯಾಗಿದ್ದರೂ ಶಾಲೆಯು ಅವನನ್ನು ಹೊರಹಾಕಿತು. “ಶಾಲಾಕೆಲಸದಲ್ಲಿ ನ್ಯೂನತೆಯನ್ನು ಹೊರತು ಬೇರೆ ಸಮಸ್ಯೆಗಳನ್ನು ಹೊಂದಿರದ ಒಬ್ಬ ವಿದ್ಯಾರ್ಥಿಯನ್ನು, ಒಂದು ನಿರ್ದಿಷ್ಟ ವಿಷಯದಲ್ಲಿ ಕೆಲವು ಅಂಶಗಳಿಂದ ತೇರ್ಗಡೆಹೊಂದುವ ಗೆಲ್ಲಂಕವನ್ನು ಪಡೆದುಕೊಳ್ಳಲಿಲ್ಲವೆಂಬ ಕಾರಣದಿಂದ ಕಟ್ಟುನಿಟ್ಟಾಗಿ ಹೊರಹಾಕುವುದು, ಶಾಲೆಯಲ್ಲಿರುವ ಎಲ್ಲಾ ‘ಸಾಮಾನ್ಯ ಜ್ಞಾನ’ಕ್ಕೆ ವ್ಯತಿರಿಕ್ತವಾಗಿದೆ” ಎಂದು ಯೋಮಿಉರಿ ಶೀಂಬೂನ್‌ನಲ್ಲಿ ಟ್ಸೂಕೂಬ ವಿಶ್ವವಿದ್ಯಾನಿಲಯದ ಪ್ರೊಫೆಸರರಾದ ಟೆಟ್ಸುವೊ ಶೀಮೋಮೂರ ಹೇಳಿದರು. ಅವರು ಹೊಂದಿಕೊಳ್ಳುವಂತೆ ಕೇಳಿಕೊಂಡರು ಮತ್ತು ಬಳಿಕ ಹೇಳಿದ್ದು: “ಶಾಲೆಯ ಕಡೆಯಿಂದ ಇನ್ನೂ ಆಳವಾಗಿ ಬೇರೂರಿರುವ ದಬ್ಬಾಳಿಕೆಯ ಪ್ರವೃತ್ತಿಗಳೇ ಈ ವಿದ್ಯಮಾನದಲ್ಲಿ ಅಡಚಣೆಯನ್ನುಂಟುಮಾಡುತ್ತಿವೆ.” (g94 10⁄22)
ಹಾವಿನ ಕವಲೊಡೆದಿರುವ ನಾಲಿಗೆ
ಒಂದು ಹಾವಿಗೆ ಕವಲೊಡೆದಿರುವ ನಾಲಿಗೆಯಿಂದ ಯಾವ ಉಪಯೋಗವಿದೆ? ಇಂಟರ್‌ನ್ಯಾಷನಲ್ ಹೆರಲ್ಡ್ ಟ್ರಿಬ್ಯೂನ್‌ನಲ್ಲಿದ್ದ ವರದಿಯೊಂದಕ್ಕನುಸಾರ, ಶಬ್ದವೊಂದರ ದಿಕ್ಕನ್ನು ಕಂಡುಹಿಡಿಯಲು ನಮ್ಮ ಎರಡು ಕಿವಿಗಳು ಅಧಿಕಾಂಶ ಒಟ್ಟಿಗೆ ಕೆಲಸ ಮಾಡುವಂತಹ ರೀತಿಯಲ್ಲಿಯೇ, ವಾಸನೆಯ ಜಾಡನ್ನು ಹಿಂಬಾಲಿಸಲು ನಾಲಿಗೆಯು ಹಾವಿಗೆ ಸಹಾಯ ಮಾಡುತ್ತದೆ. ಅದು ತನ್ನ ಆಹಾರವನ್ನು ಅಥವಾ ಸಂಗಾತಿಯೊಂದನ್ನು ಹುಡುಕುತ್ತಿರುವಾಗ, ಹಾವು ಆಗಾಗ್ಗೆ ತನ್ನ ನಾಲಿಗೆಯನ್ನು—ತುದಿಗಳನ್ನು ಸಾಧ್ಯವಿರುವಷ್ಟು ಮಟ್ಟಿಗೆ ಪ್ರತ್ಯೇಕವಾಗಿ ಚಾಚುವ ಮೂಲಕ—ಥಟ್ಟನೆ ಹೊರಹಾಕುತ್ತದೆ. ಈ ರೀತಿಯಲ್ಲಿ, ಅದು ಕಂಡುಕೊಳ್ಳಲು ಪ್ರಯತ್ನಿಸುವ ಪ್ರಾಣಿಯ ದಿಕ್ಕನ್ನು ತಿಳಿದುಕೊಳ್ಳಲು ಅವಕಾಶ ಕಲ್ಪಿಸುತ್ತಾ, ಹಾವು ಎರಡು ಬಿಂದುಗಳಲ್ಲಿ ವಾಸನೆಯ ಬಲವನ್ನು ಪರೀಕ್ಷಿಸುತ್ತದೆ. (g94 11⁄8)
1914ರ ಸಂತತಿ
ಒಂದನೆಯ ಲೋಕ ಯುದ್ಧದಲ್ಲಿ ಭಾಗವಹಿಸಿದ್ದ ಅಮೆರಿಕದ 47,43,826 ಪುರುಷರು ಮತ್ತು ಸ್ತ್ರೀಯರಲ್ಲಿ ಕೇವಲ 2,72,000 ಮಂದಿ ಮಾತ್ರ 1984ರಲ್ಲಿ ಬದುಕಿ ಉಳಿದಿದ್ದರು. (ಅವೇಕ್!, 1988, ಎಪ್ರಿಲ್ 8) ವ್ಹೆಟರನ್ಸ್ ಅಫೇರ್ಸ್ ಇಲಾಖೆಗನುಸಾರ, ಇಂದು ಆ ಸಂಖ್ಯೆಯು ಅಂದಾಜುಮಾಡಲ್ಪಟ್ಟ 30,000ಕ್ಕೆ ಕ್ಷಿಣಿಸಿದೆ, ಮತ್ತು ಅವರ ಸರಾಸರಿ ವಯಸ್ಸು 95. ಆದಾಗ್ಯೂ, ಲೋಕವ್ಯಾಪಕವಾಗಿ 1992ರಲ್ಲಿ, 1914ರಲ್ಲಿ ಅಥವಾ ಅದಕ್ಕೆ ಮೊದಲು ಹುಟ್ಟಿದ ಸಂತತಿಯಲ್ಲಿ 6,14,86,000 ಜನರು ಇನ್ನೂ ಬದುಕಿದ್ದರು. (g94 11⁄8)
ಅಳಿದುಹೋಗುತ್ತಿರುವ ಒಂದು ಜಪಾನೀ ಸಂಪ್ರದಾಯವೊ?
ಜಪಾನೀ ಜನರು ತಮ್ಮ ಹಿರಿಯರಿಗೆ ಸಾಂಪ್ರದಾಯಿಕವಾಗಿ ತೋರಿಸಿರುವ ಗಾಢವಾದ ಪೂಜ್ಯ ಭಾವನೆಯು ಅವನತಿ ಹೊಂದುತ್ತಿರುವಂತೆ ಭಾಸವಾಗುತ್ತಿದೆ. ಹಿರಿಯರ ಕುರಿತ ಶಾರೀರಿಕ ಮತ್ತು ಮನಶ್ಶಾಸ್ತ್ರಾನುಗುಣವಾದ ಅಪಪ್ರಯೋಗವು ಅಧಿಕಗೊಳ್ಳುತ್ತಿದೆ. ಒಬ್ಬ ಪರಿಣತನಿಗನುಸಾರ, ಅನೇಕ ಆಧುನಿಕ ಕುಟುಂಬಗಳು ತಮ್ಮ ವೃದ್ಧ ಸಂಬಂಧಿಕರ ಆರೈಕೆಯನ್ನು ತಾವು ಅನಿಚ್ಛಾಪೂರ್ವಕವಾಗಿ ಮಾಡುತ್ತಿದ್ದೇವೆಂದು ಕಂಡುಕೊಂಡಿವೆ ಮತ್ತು ಒತ್ತಡವನ್ನು ನಿಭಾಯಿಸಲು ಅಶಕ್ತವಾಗಿವೆ ಎಂದು ಮೈನಿಚಿ ಡೇಲಿ ನ್ಯೂಸ್ ವಿವರಿಸುತ್ತದೆ. ಅವು ಅನೇಕವೇಳೆ ಹಿಂಸೆ ಮಾಡಲು ಮತ್ತು ಅಲಕ್ಷ್ಯಮಾಡಲು ತೊಡಗುತ್ತವೆ. ಮೈನಿಚಿ ಡೇಲಿ ನ್ಯೂಸ್‌ಗನುಸಾರ, ಒಂದು ಕೇಸಿನಲ್ಲಿ ಒಬ್ಬ ಮನುಷ್ಯನು “ತನ್ನ ತಂದೆಯು ಅವನ ವಿಶ್ರಾಂತಿ ವೇತನದ ಹಣವನ್ನು ಮಗನಿಗೆ ಕೊಡಲು ನಿರಾಕರಿಸಿದಾಗಲೆಲ್ಲಾ, 75 ವರ್ಷ ಪ್ರಾಯದ ಅವನನ್ನು ನೀಲಗಟ್ಟುವ ವರೆಗೆ ಹೊಡೆಯುವ ಹವ್ಯಾಸವನ್ನು” ರೂಢಿಸಿಕೊಂಡನು. ಇತರ ಪ್ರತಿನಿಧಿರೂಪದ ಉದಾಹರಣೆಗಳಲ್ಲಿ ಒಬ್ಬ ಮುಪ್ಪಿನ ತಂದೆಯ ಕೈಕಾಲುಗಳನ್ನು ಕಟ್ಟಿ ಕೋಣೆಯಲ್ಲಿ ಬೀಗಹಾಕಿ ಇಟ್ಟದ್ದು ಮತ್ತು ಒಬ್ಬ ವೃದ್ಧೆಯ ಬಾಯಿಗೆ ಚಿಂದಿಬಟ್ಟೆಯನ್ನು ತುರುಕಿಸಿದ್ದೂ ಸೇರಿವೆ. (g94 11⁄8)
ಚೈನಾದಲ್ಲಿ ಬಹಳ ಕಡಿಮೆ ಕಾರುಗಳಿರುವುದರ ಕಾರಣ
ಒಂದು ನೂರು ಕೋಟಿ ಜನರಿಗಿಂತಲೂ ಹೆಚ್ಚು ಜನಸಂಖ್ಯೆಯಿರುವ ಚೈನಾದಲ್ಲಿ, ಖಾಸಗಿ ಸ್ವಾಮ್ಯವಿರುವ ಕೇವಲ 50,000 ಮೋಟಾರು ಕಾರುಗಳಿವೆ. ಆದರೂ, ಚೈನಾ ಟುಡೇಗನುಸಾರ ಈ ಸಂಖ್ಯೆಯು “ಬೃಹತ್ಸಂಖ್ಯಾ ನೆಗೆತ”ವನ್ನು ಪ್ರತಿನಿಧಿಸುತ್ತದೆ. 1983ರಲ್ಲಿ ಆ ದೇಶದಲ್ಲಿ ಕೇವಲ 60 ಖಾಸಗಿ ಕಾರುಗಳಿದ್ದವು! ಸಮೀಪ ಭವಿಷ್ಯತ್ತಿನಲ್ಲಿ ಕಾರ್ ಒಡೆಯರ ಸಂಖ್ಯೆಯು ವೃದ್ಧಿಯಾಗುತ್ತದೆಂದು ನಿರೀಕ್ಷಿಸಲ್ಪಡುತ್ತದೆ. ಆದಾಗ್ಯೂ, ಭಾವಿ ಕೊಳ್ಳುಗನೊಬ್ಬನು ವೆಚ್ಚವನ್ನು ಲೆಕ್ಕಹಾಕಬೇಕು. ಚೈನಾದಲ್ಲಿ, ಒಂದು ಮೋಟಾರು ಕಾರಿನ ಬೆಲೆಯನ್ನು ಏರಿಸುವ 40 ವಿವಿಧ ರೀತಿಯ ತೆರಿಗೆಗಳಿವೆ. ಉದಾಹರಣೆಗೆ, “ಚೈನಾದಲ್ಲಿ ಒಂದು ಕಾರು 3,00,000 ಯೂಅನ್ (ಸುಮಾರು 37,000 ಅಮೆರಿಕನ್ ಡಾಲರುಗಳು)ಗೆ ವಿಕ್ರಯಿಸಲ್ಪಡಬಹುದಾದರೂ, ಬೇರೆ ದೇಶಗಳಲ್ಲಿ ಅದು 10,000 ಅಮೆರಿಕನ್ ಡಾಲರುಗಳಿಗಿಂತ ಹೆಚ್ಚಿಗೆ ಬೆಲೆಬಾಳುವುದಿಲ್ಲ.” ವಾಹನ ನಡೆಸುವುದನ್ನು ಕಲಿಯುವುದರ ವೆಚ್ಚದ ಕುರಿತಾಗಿ ಏನು? ಒಂದು ಡ್ರೈವಿಂಗ್ ಶಾಲೆಯು “ಸರಾಸರಿ ಸಂಬಳವನ್ನು ಸಂಪಾದಿಸುವವನ ವಾರ್ಷಿಕ ಆದಾಯಕ್ಕಿಂತ ಎರಡರಷ್ಟು” ಖರ್ಚನ್ನು ಹೊರಿಸುತ್ತದೆ ಎಂದು ಚೈನಾ ಟುಡೇ ಗಮನಿಸುತ್ತದೆ. (g94 11⁄8)
ಪಾತಕದ ತತ್ತರಗೊಳಿಸುವ ವೆಚ್ಚ
ಪ್ರತಿ ವರ್ಷ ಆಸ್ಟ್ರೇಲಿಯದಲ್ಲಿ ಪಾತಕದ ವೆಚ್ಚವು 2,600 ಕೋಟಿ ಡಾಲರುಗಳಿಗೆ ಸಮನಾಗಿದೆಯೆಂದು ಆಸ್ಟ್ರೇಲಿಯದ ಅಪರಾಧ ಶಾಸ್ತ್ರ ಸಂಸ್ಥೆಯ ಇತ್ತೀಚಿಗಿನ ವರದಿಯೊಂದು ಪ್ರಕಟಿಸಿತು. ಆಸ್ಟ್ರೇಲಿಯದಲ್ಲಿ ಇದು ಪ್ರತಿ ಪುರುಷ, ಸ್ತ್ರೀ, ಮತ್ತು ಮಗುವಿಗೆ ಸುಮಾರು 130 ಡಾಲರುಗಳನ್ನು ನಿರೂಪಿಸುತ್ತದೆ. ಸಿಡ್ನಿಯ ವಾರ್ತಾಪತ್ರಿಕೆಯಾದ ಸಂಡೇ ಟೆಲಿಗ್ರಾಫ್‌ನಲ್ಲಿ ಉದ್ಧರಿಸಲ್ಪಟ್ಟ ಪ್ರತಿನಿಧಿಯೊಬ್ಬನು ಹೇಳಿದ್ದೇನಂದರೆ, ಪಾತಕದ ಅತ್ಯಂತ ದುಬಾರಿ ವೆಚ್ಚದ ವಿಧವು ವಂಚನೆಯಾಗಿದೆ—ವರ್ಷವೊಂದಕ್ಕೆ ಬಹುಮಟ್ಟಿಗೆ 1,400 ಕೋಟಿಗಳಷ್ಟು ಡಾಲರುಗಳಿಗೆ ಬಹುಶಃ ಸಮಾನವಾಗಿದೆ. ಅಂದಾಜುಮಾಡಲಾದ ಇತರ ವೆಚ್ಚ: ಕೊಲೆ, ಒಂದು ವರ್ಷಕ್ಕೆ 27.5 ಕೋಟಿ ಡಾಲರುಗಳು; ಅಮಲೌಷಧ ಅಪರಾಧಗಳು, 120 ಕೋಟಿ ಡಾಲರುಗಳು; ಕನ್ನಹಾಕಿ ಒಳನುಗ್ಗುವುದು, 89.3 ಕೋಟಿ ಡಾಲರುಗಳು; ಮತ್ತು, ಆಶ್ಚರ್ಯಕರವಾಗಿಯೇ, ಅಂಗಡಿ ಕಳ್ಳತನವು 150 ಕೋಟಿ ಡಾಲರುಗಳ ವರೆಗೆ. ಪಾತಕದ ವೆಚ್ಚವು ಏಕಪ್ರಕಾರವಾಗಿ ಏರುತ್ತಿದೆ ಎಂಬ ಹೇಳಿಕೆಯೊಂದಿಗೆ ವರದಿಯು ಮುಕ್ತಾಯಗೊಂಡಿತ್ತು. (g94 10⁄22)
ಒಂದು ಜರ್ಜರಿತ ಲೋಕ
ಜರ್ಮನಿಯ ಹ್ಯಾಂಬರ್ಗ್ ವಿಶ್ವವಿದ್ಯಾನಿಲಯದ ರಾಜಕೀಯ ಸಂಸ್ಥೆಯಿಂದ ಬಂದ ವರದಿಗನುಸಾರ, 1994 ಆರಂಭವಾದಂತೆ, ಲೋಕವು 43 ಯುದ್ಧಗಳಿಂದ ಜರ್ಜರಿತಗೊಳಿಸಲ್ಪಟ್ಟಿತ್ತು. ವರದಿಯ ಕುರಿತು ಹೇಳಿಕೆ ನೀಡುತ್ತಾ, ಈಕ್ಯುಮೆನಿಕಲ್ ಪ್ರೆಸ್ ಸರ್ವಿಸ್ ಬರೆಯುತ್ತದೇನಂದರೆ ಏಷಿಯದಲ್ಲಿ 22, ಆಫ್ರಿಕದಲ್ಲಿ 13, ಲ್ಯಾಟಿನ್ ಅಮೆರಿಕದಲ್ಲಿ 5, ಮತ್ತು ಯೂರೋಪಿನಲ್ಲಿ 3 ಯುದ್ಧಗಳು ನಡೆಸಲ್ಪಟ್ಟವು. 1950ಗಳಲ್ಲಿ ಯುದ್ಧಗಳ ವಾರ್ಷಿಕ ಸರಾಸರಿಯು 12 ಆಗಿತ್ತೆಂದು ಸಹ ರಾಜಕೀಯ ಸಂಸ್ಥೆಯು ಕಂಡುಕೊಂಡಿತು. 1960ಗಳಲ್ಲಿ ಅದು 22ಕ್ಕೇರಿತು, ಮತ್ತು ಇಂದು ಆ ಸಂಖ್ಯೆಯು ಬಹುಮಟ್ಟಿಗೆ ದ್ವಿಗುಣವಾಗಿದೆ. (g94 10⁄22)
ಹೆಚ್ಚು ವೀಕ್ಷಣೆ—ಕಡಿಮೆ ಓದು
ಟೆಲಿವಿಷನನ್ನು ಬಹಳವಾಗಿ ವೀಕ್ಷಿಸುವ ಶಾಲಾ ಮಕ್ಕಳು ಓದುವುದರಲ್ಲಿ ಆಸಕ್ತಿಯನ್ನು ಏಕೆ ಕಳೆದುಕೊಳ್ಳುತ್ತಾರೆ? ಕಳೆದ ಮೂರು ವರ್ಷಗಳಲ್ಲಿ 1,000 ಡಚ್ ಪ್ರಾಥಮಿಕ ಶಾಲಾ ಮಕ್ಕಳ ನಡವಳಿಕೆಯನ್ನು ಅಭ್ಯಸಿಸಿದ ಬಳಿಕ, ಸಂಶೋಧಕರಾದ ಸಿ. ಎಮ್. ಕೋಲ್‌ಸ್ಟ್ರಾ ಎರಡು ಕಾರಣಗಳನ್ನು ಕಂಡುಕೊಂಡರು. ಟೆಲಿವಿಷನನ್ನು ಹೆಚ್ಚು ವೀಕ್ಷಿಸುವ ಮೂಲಕ, ಮಕ್ಕಳು ಓದುವುದರಲ್ಲಿ ತಮ್ಮ ಸಂತೋಷವನ್ನು ಕಳೆದುಕೊಳ್ಳುತ್ತಾರೆ ಮತ್ತು ಕೇಂದ್ರೀಕರಿಸುವ ತಮ್ಮ ಸಾಮರ್ಥ್ಯವನ್ನು ಕಡಿಮೆಮಾಡಿಕೊಳ್ಳುತ್ತಾರೆ. ವಾಡಿಕೆಯಾಗಿ ಟೆಲಿವಿಷನನ್ನು ವೀಕ್ಷಿಸುವವರಿಗೆ—ನೆದರ್‌ಲೆಂಡ್ಸ್‌ನಲ್ಲಿರುವ ಲೈಡೆನ್ ವಿಶ್ವವಿದ್ಯಾನಿಲಯದ ಒಂದು ವಾರ್ತಾ ಪತ್ರವು ವರದಿಸುತ್ತದೆ—ಅವರು ಏನನ್ನು ಓದುತ್ತಿದ್ದಾರೊ ಅದನ್ನು ಗ್ರಹಿಸುವುದು ಮತ್ತು ಅವರ ಮುಂದಿರುವ ಪುಟದ ಮೇಲೆ ತಮ್ಮ ಮನಸ್ಸನ್ನು ಸರಿಹೊಂದಿಸುವುದು ಕ್ರಮೇಣ ಕಷ್ಟವಾಗಿ ಪರಿಣಮಿಸುತ್ತದೆ. ಬೇಗನೆ ಅವರು ತಮ್ಮ ಪುಸ್ತಕವನ್ನು ದೂರ ತಳ್ಳುತ್ತಾರೆ ಮತ್ತು ಟಿವಿಯ ರಿಮೋಟ್ ಕಂಟ್ರೋಲ್‌ಗಾಗಿ ಕೈ ಚಾಚುತ್ತಾರೆ. ಕಾರ್ಯಕ್ರಮಗಳ ವಿಧವು ವ್ಯತ್ಯಾಸವನ್ನು ಮಾಡುವುದಿಲ್ಲ ಎಂದು ಸಹ ಸಂಶೋಧಕರು ಕಂಡುಕೊಂಡರು. ಮಕ್ಕಳು ಹೆಚ್ಚಾಗಿ ನಗೆಯಾಟ, ಮಕ್ಕಳ ಕಾರ್ಯಕ್ರಮಗಳು, ನಾಟಕ, ಅಥವಾ ಬೋಧಪ್ರದ ಕಾರ್ಯಕ್ರಮಗಳನ್ನು ವೀಕ್ಷಿಸಿದಿರ್ದಲಿ ಇಲ್ಲದಿರಲಿ, ಫಲಿತಾಂಶವು ಅದೇ ಆಗಿತ್ತು: “ಓದುವುದರಲ್ಲಿ ಅವನತಿ.” (g94 10⁄22)
ಮರುಭೂಮಿಗಳನ್ನು ಮತ್ತು ಅನಾರೋಗ್ಯವನ್ನು ಪ್ರವರ್ಧಿಸುವುದು
ಟಾನ್ಸೆನೀಯದ ಬಡ ಗ್ರಾಮೀಣ ಜನಸಂಖ್ಯೆಯಲ್ಲಿ 85 ಪ್ರತಿಶತ ಮಂದಿಗೆ ಅಡಿಗೆ ಮಾಡಲಿಕ್ಕಾಗಿ, ಕಾಯಿಸಲಿಕ್ಕಾಗಿ, ಮತ್ತು ಉರಿಹೊತ್ತಿಗೆಗಾಗಿ ಮರದ ಇಂಧನವು ಅತಿ ಹೆಚ್ಚಾಗಿ ಅಗತ್ಯವಿದ್ದಾಗ್ಯೂ, ದೇಶದ ಹೊಗೆಸೊಪ್ಪಿನ ಬೆಳೆಯನ್ನು ಹದಮಾಡಲಿಕ್ಕಾಗಿ ಪ್ರತಿ ವರ್ಷ 42,000 ಎಕರೆಗಳಷ್ಟು ವಿರಳ ಕಾಡುಪ್ರದೇಶವು ಕಡಿದುಹಾಕಲ್ಪಡುತ್ತಿದೆ, ಎಂದು ಅಂತಾರಾಷ್ಟ್ರೀಯ ಆರೋಗ್ಯಕ್ಕಾಗಿರುವ ಕೆನಡದ ಸಂಸ್ಥೆಯ ವಾರ್ತಾಪತ್ರವಾದ ಸಿನರ್ಜಿ ವರದಿಸುತ್ತದೆ. “ನಾವು ಅಮೂಲ್ಯವಾದ ಮರಗಳನ್ನು ಕಡಿದುಹಾಕುತ್ತಿರುವುದು ಮತ್ತು ಹೊಗೆಸೊಪ್ಪಿನ ರಫ್ತುಗಳಿಂದ ವಿದೇಶೀ ವಿನಿಮಯವನ್ನು ಪಡೆದುಕೊಳ್ಳಲಿಕ್ಕಾಗಿ ಮರುಭೂಮಿಗಳನ್ನು ನಿರ್ಮಿಸುತ್ತಿರುವುದು ವಾಸ್ತವವಾಗಿ ಅಸಮಂಜಸವಾಗಿದೆ” ಎಂದು ಟಾನ್ಸೆನೀಯದ ವೈದ್ಯಕೀಯ ಸಂಶೋಧನೆಗಾಗಿರುವ ರಾಷ್ಟ್ರೀಯ ಸಂಸ್ಥೆಯ ಡೈರೆಕ್ಟರ್ ಜನರಲ್ ಡಬ್ಲ್ಯು. ಎಲ್. ಕೀಲಾಮ ಹೇಳಿಕೆ ನೀಡುತ್ತಾರೆ. “ಅನಾರೋಗ್ಯವನ್ನು ಪ್ರವರ್ಧಿಸುತ್ತಿರುವ ಹೊಗೆಸೊಪ್ಪನ್ನು ವರ್ಧಿಷ್ಣು ದೇಶಗಳು ಉತ್ಪಾದಿಸುತ್ತಿರುವುದು ಸಮವಾಗಿ ಅಸಮಂಜಸವಾಗಿದೆ” ಎಂದು ಅವರು ಕೂಡಿಸುತ್ತಾರೆ. (g94 10⁄22)
ಕಾಮದ ಪಾತಕಗಳು ಅಧಿಕಗೊಳ್ಳುತ್ತಿವೆ
ಒಮ್ಮೆ ಪಾಶ್ಚಾತ್ಯ ಲೋಕದ ಸಮಸ್ಯೆಯೆಂದು ಭಾವಿಸಲಾಗಿದ್ದ ಕಾಮದ ಪಾತಕಗಳು—ಬಲಾತ್ಕಾರ ಸಂಭೋಗ, ಅಗಮ್ಯಗಮನ, ಮತ್ತು ಶಿಶು ಅಪಪ್ರಯೋಗ—ಆಫ್ರಿಕದ ಕೆಲವು ದೇಶಗಳಲ್ಲಿ ಸ್ಪಷ್ಟವಾಗಿಗಿ ಅಧಿಕಗೊಳ್ಳುತ್ತಿವೆ. ಇತ್ತೀಚಿಗಿನ ವರ್ಷಗಳಲ್ಲಿ, ಕಾಮದ ಪಾತಕಗಳ ಸಾಧನ ವ್ಯಾಪ್ತಿಯು ಸಾಧಾರಣವಾಗಿ ಪರಿಣಮಿಸಿದೆ. ಟೈಮ್ಸ್ ಆಫ್ ಜಾಂಬಿಯ ವರದಿಮಾಡಿದ್ದೇನಂದರೆ, ತನ್ನ 13 ವರ್ಷ ಪ್ರಾಯದ ಮಗಳೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಿದ ಕಾರಣದಿಂದಾಗಿ, 37ರ ಪ್ರಾಯದ ಪುರುಷನಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲ್ಪಟ್ಟಿತು ಮತ್ತು ಆರು ಛಡಿ ಏಟುಗಳನ್ನು ಪಡೆಯುವಂತೆ ಆಜ್ಞಾಪಿಸಲಾಯಿತು. ಅವನ ಹೆಂಡತಿಯು ಜಗಳವೊಂದರ ಅನಂತರ ಅವನನ್ನು ಬಿಟ್ಟುಹೋದ ಬಳಿಕ ಅವನು ಹುಡುಗಿಯನ್ನು ಲೈಂಗಿಕವಾಗಿ ದುರುಪಯೋಗಿಸಿದ್ದಾನೆಂದು ಕಂಡುಕೊಳ್ಳಲಾಯಿತು. ಕೋರ್ಟಿನ ವಿಚಾರಣೆಯ ಸಮಯದಲ್ಲಿ ಆ ಹುಡುಗಿಯು ತನ್ನ ತಂದೆಯನ್ನು ಸ್ವೀಕರಿಸಲು ನಿರಾಕರಿಸಿದ್ದಾಳೆಂದು ವದಂತಿ ಇದೆ. (g94 10⁄22)
ಚೈನಾದ ಏರುತ್ತಿರುವ ಜನಸಂಖ್ಯೆ
ಈ ವರ್ಷ ಚೈನಾದಲ್ಲಿರುವ ಜನರ ಸಂಖ್ಯೆಯು 120 ಕೋಟಿಗೆ ತಲಪುವುದೆಂದು, ಚೈನಾದ ವಾರ್ತಾ ಏಜೆನ್ಸಿಯು ವರದಿಮಾಡಿತು. ಕುಟುಂಬವೊಂದಕ್ಕೆ ಗರಿಷ್ಠ ಒಂದು ಮಗುವನ್ನು ಉತ್ತೇಜಿಸುವ, ಚೈನಾದ ಕಟ್ಟುನಿಟ್ಟಿನ ಕುಟುಂಬ ಯೋಜನೆಯ ಕಾರ್ಯಕ್ರಮದ ಹೊರತೂ, 120 ಕೋಟಿಗಳಿಗೆ ಜನಸಂಖ್ಯೆಯ ಹೆಚ್ಚಳವು ಜನಸಂಖ್ಯೆಯ ಯೋಜನಗಾರರು ನಿರೀಕ್ಷಿಸಿದ್ದಕ್ಕಿಂತಲೂ ಆರು ವರ್ಷಗಳಿಗೆ ಮೊದಲೇ ಬಂದಿದೆ. ಅಭಿವೃದ್ಧಿಗಾಗಿ ಎರಡು ಕಾರಣಗಳನ್ನು ವಾರ್ತಾ ಏಜೆನ್ಸಿಯು ಸೂಚಿಸಿತು: ಪ್ರಥಮವಾಗಿ, ಒಂದು ಮಗುವಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವುದಕ್ಕಾಗಿ ವಿಧಿಸಲ್ಪಡುವ ದಂಡವನ್ನು ತೆರಲು ಅನೇಕ ಗ್ರಾಮೀಣ ಸ್ತ್ರೀಯರು ಒಪ್ಪಿಕೊಳ್ಳುತ್ತಿದ್ದಾರೆ. ಎರಡನೆಯದಾಗಿ, ಗ್ರಾಮೀಣ ಕ್ಷೇತ್ರಗಳಿಂದ ನಗರಗಳಿಗೆ ಸ್ಥಳಾಂತರಿಸಿದ ವಲಸೆಗಾರ ಕೆಲಸಗಾರರು, ನೆಲೆಗೊಂಡ ಜನಸಂಖ್ಯೆಗಳಲ್ಲಿ ಜನನವನ್ನು ನಿಯಂತ್ರಿಸುವ ಕುಟುಂಬ ಯೋಜನಾ ನಿಯಂತ್ರಣಗಳನ್ನು ತಪ್ಪಿಸಿಕೊಳ್ಳಲು ಶಕ್ತರಾಗಿದ್ದಾರೆ. (g94 10⁄22)