ಸಣ್ಣ ಪರಿಪೂರ್ಣ ಗೃಹಕೃತ್ಯ ನಿರ್ವಾಹಕರು
ದಕ್ಷಿಣ ಆಫ್ರಿಕದಲ್ಲಿನ ಎಚ್ಚರ! ಸುದ್ದಿಗಾರರಿಂದ
ಆಫ್ರಿಕದ ಮಳೆ ಕಾಡುಗಳಲ್ಲಿರುವ ಕಣಿವೆಗಳು ಹಲವುವೇಳೆ ಬಾರ್ಟೀರಿಯ ಎಂದು ಕರೆಯಲ್ಪಡುವ ಟೊಳ್ಳಾದ ಕೊಂಬೆಗಳಿರುವ ಮರಗಳಿಂದ ತುಂಬಿರುತ್ತವೆ. ಅದರ ಅಧಿಕತಮ ಎತ್ತರವನ್ನು ತಲಪಲು, ಮರವು ಕಾಡಿನ ಮೇಲ್ಚಪ್ಪರವನ್ನು ತಲಪಲಿಕ್ಕೆ ಸಾಕಾಗುವಷ್ಟು ಎತ್ತರಕ್ಕೆ ಬೆಳೆಯಬೇಕು. ತನ್ನ ಹೋರಾಟದಲ್ಲಿ ಯಶಸ್ಸನ್ನು ಪಡೆಯಲು, ಅಡಗಿಸುವ ಬಳ್ಳಿಗಳಿಂದ ಮತ್ತು ಎಲೆಗಳಿಗೆ ಬೆಳಕು ತಲಪುವುದನ್ನು ತಡೆಯುವ ಪಾಚಿಯಿಂದ ತನ್ನನ್ನು ಸ್ವತಂತ್ರವಾಗಿರಿಸಿಕೊಳ್ಳಲು ಬಾರ್ಟೀರಿಯಕ್ಕೆ ಸಹಾಯದ ಅಗತ್ಯವಿದೆ. ಇಲ್ಲಿ ಕರಿಯ ಕುಟುಕು ಇರುವೆಗಳು ಗೃಹಕೃತ್ಯ ನಿರ್ವಾಹಕರಂತೆ ಪ್ರಾಮುಖ್ಯವಾದ ಒಂದು ಪಾತ್ರವನ್ನು ವಹಿಸುತ್ತವೆ. ಫಿಲ್ ಆಗ್ಲಂಡ್ ಮತ್ತು ಮೈಕಲ್ ರೋಜನ್ಬರ್ಗ್ರಿಂದ ತಯಾರಿಸಲ್ಪಟ್ಟ, ಟೀವೀ ಸಾಕ್ಷ್ಯಚಿತ್ರದ—ಆಫ್ರಿಕದ ಮಳೆ ಕಾಡು: ಕೋರೂಪ್—ಒಂದು ಭಾಗದೋಪಾದಿ, ಕ್ಯಾಮರೂನ್ನ ಒಂದು ಮಳೆ ಕಾಡಾದ ಕೋರೂಪ್ನಲ್ಲಿ, ಇರುವೆ ಮತ್ತು ಮರದ ನಡುವಿನ ಸಂಬಂಧವು ಚಿತ್ರಿಸಲ್ಪಟ್ಟಿತು.
ಒಂದು ಹೊಸ ರಾಣಿ ಇರುವೆಯು ಒಂದು ಬಾರ್ಟೀರಿಯ ಮರವನ್ನು ಹುಡುಕಿಕೊಂಡುಹೋಗುವುದನ್ನು ಸಾಕ್ಷ್ಯಚಿತ್ರವು ತೋರಿಸುತ್ತದೆ. ಸಹಜ ಪ್ರವೃತ್ತಿಯಂತೆ, ಅದರ ಟೊಳ್ಳಾದ ಕೊಂಬೆಗಳು ತನ್ನ ವಸಾಹತುವನ್ನು ಸ್ಥಾಪಿಸಲು ಆದರ್ಶ ಸ್ಥಳವಾಗಿದೆಯೆಂದು ಅವಳಿಗೆ ತಿಳಿದಿದೆ. ಒಂದು ಕೊಂಬೆಯಲ್ಲಿ ಒಂದು ರಂಧ್ರವನ್ನು ಮಾಡಿದ ಬಳಿಕ, ಅವಳು ಅದರೊಳಗೆ ತನ್ನ ಮೊಟ್ಟೆಗಳನ್ನು ಇಡುತ್ತಾಳೆ. ಈ ಟೊಳ್ಳಾದ ಕೊಂಬೆಗಳು, ಮರದ ಸಸ್ಯರಸವನ್ನು ತಿನ್ನುವ ಸಣ್ಣ ಶಲ್ಕ ಕೀಟಗಳಿಗೆ ಸಹ ಮನೆಯಾಗಿರುತ್ತದೆ. ಇರುವೆಗಳು ಈ ಕೀಟಗಳನ್ನು ಜಾನುವಾರುಗಳಂತೆ ಪೋಷಿಸುತ್ತವೆ ಮತ್ತು ಪುಷ್ಟೀಕರಿಸುವ ಪಾನೀಯವನ್ನು ಪಡೆದುಕೊಳ್ಳಲಿಕ್ಕಾಗಿ ಅವುಗಳಿಂದ ಹಾಲನ್ನು ತೆಗೆಯುತ್ತವೆ.
ಇರುವೆಯ ವಸಾಹತುವು ಸಾಕಷ್ಟು ದೊಡ್ಡದಾದ ಕೂಡಲೆ, ಅದು ಇತರ ನಿವಾಸಿಗಳನ್ನು ಹೊರಡಿಸಲು ಮತ್ತು ಮರವನ್ನು ಸ್ವಚ್ಛಗೊಳಿಸಲು ಆರಂಭಿಸುತ್ತದೆ. ಈ ಪ್ರತಿಭಾಪೂರ್ಣವಾದ ಸಣ್ಣ ಗೃಹಕೃತ್ಯ ನಿರ್ವಾಹಕರನ್ನು ವೀಕ್ಷಿಸುವುದು ಎಷ್ಟೊಂದು ಆಕರ್ಷಕವಾಗಿದೆ! ಕೆಲವು ಇರುವೆಗಳು ಮರದ ಬುಡಕ್ಕೆ ಇಳಿಯುತ್ತವೆ ಮತ್ತು ಅದನ್ನು ಅಡಗಿಸುವ ಬೆದರಿಕೆ ಹಾಕುವ ಬಳ್ಳಿಗಳನ್ನು ಆಕ್ರಮಿಸುತ್ತವೆ. ಅವು ಕಾಂಡಗಳ ಮೂಲಕ ನೇರವಾಗಿ ಅಗಿಯುತ್ತ ಹೋಗುತ್ತವೆ ಮತ್ತು ಹೀಗೆ ಬಳ್ಳಿಗಳನ್ನು ನಾಶಮಾಡುತ್ತವೆ. ಇತರ ಇರುವೆಗಳು ಭಗ್ನಾವಶೇಷ, ಪಾಚಿ ಮತ್ತು ಶಿಲಾವಲ್ಕಗಳನ್ನು ಸ್ವಚ್ಛಗೊಳಿಸುತ್ತವೆ. ಎಲೆಯೊಂದರ ಕೆಳಗಡೆ ಅಡಗಿಕೊಂಡಿದ್ದ ಒಂದು ಕಂಬಳಿಹುಳು ಸಹ ಓಡಿಸಲ್ಪಟ್ಟಿತು.
“ಭಗ್ನಾವಶೇಷದ ಪ್ರತಿಯೊಂದು ತುಂಡನ್ನೂ ಇರುವೆಗಳು ಮಿತಿಮೀರಿ ಸ್ವಚ್ಛಗೊಳಿಸಿದವು. ಹಾನಿಕಾರಕವಾದ ಎಲ್ಲಾ ಕೀಟಗಳನ್ನು ಮತ್ತು ಬಳ್ಳಿಗಳನ್ನು ಶುದ್ಧಗೊಳಿಸಿದಾಗ, ಬಾರ್ಟೀರಿಯವು ಈಗ ತನ್ನ ಇರುವೆಗಳಿಂದ ಸಂರಕ್ಷಿಸಲ್ಪಟ್ಟು ಇತರ ಮರಗಳೊಂದಿಗೆ, ಪರಿಣಾಮಕಾರಿಯಾಗಿ ಸ್ಪರ್ಧಿಸಬಲ್ಲದು. ಅದಕ್ಕೆ ಪ್ರತಿಫಲವಾಗಿ, ಇರುವೆಗಳು ತಮ್ಮ ಶಲ್ಕ ಕೀಟಗಳ—ಅವುಗಳ ಆಹಾರದ ಒಂದೇ ಒಂದು ಮೂಲ—ರಕ್ಷಣೆಮಾಡಲು ಮತ್ತು ತಮ್ಮ ಸಣ್ಣ ಇರುವೆಗಳನ್ನು ಬೆಳೆಸಲು, ಬಾರ್ಟೀರಿಯದ ಟೊಳ್ಳಾದ ಕೊಂಬೆಗಳನ್ನು ಉಪಯೋಗಿಸಬಲ್ಲವು,” ಎಂದು ಟಿವಿ ಸಾಕ್ಷ್ಯಚಿತ್ರವು ವಿವರಿಸುತ್ತದೆ.
ಎಂತಹ ಉದ್ಯೋಗಶೀಲ ಕೆಲಸಗಾರರು ಈ ಇರುವೆಗಳಾಗಿವೆ! ಪುರಾತನ ಜ್ಞಾನೋಕ್ತಿಯೊಂದು ಹೇಳುವುದು: “ಸೋಮಾರಿಯೇ, ಇರುವೆಯ ಹತ್ತಿರ ಹೋಗಿ ಅದರ ನಡವಳಿಕೆಯನ್ನು ನೋಡಿ ಜ್ಞಾನವನ್ನು ತಂದುಕೋ.”—ಜ್ಞಾನೋಕ್ತಿ 6:6. (g94 5/8)