ಚಿಟ್ಟೆಯೊಂದರ ಜೀವನದಲ್ಲಿ ಒಂದು ದಿನ
ನಿಮ್ಮ ದೈನಿಕ ನಿಯತಕ್ರಮವು ಒತ್ತಡಪೂರ್ಣವೂ, ಕಷ್ಟಕರವಾಗಿಯೂ ತೋರಿದರೆ, ಕಠಿನ ಪರಿಶ್ರಮಿಯಾದ ಚಿಟ್ಟೆಯ ಕುರಿತು ಯೋಚಿಸಿರಿ. ಒಂದು ಚಿಟ್ಟೆಯ ಕೆಲಸದ ವೇಳಾಪಟ್ಟಿಯು ವಿಶ್ರಾಂತಿಸುವ ರಜಾಸಮಯದಂತೆ ಕಾಣುತ್ತದೆ ಎಂದು ನೀವು ಮೊದಲಿಗೆ ಯೋಚಿಸಬಹುದು. ಹೂವಿನಿಂದ ಹೂವಿಗೆ ಹಾರಾಡುತ್ತಾ, ಇಲ್ಲಿ ಅಲ್ಲಿ ಸ್ವಲ್ಪ ಮಕರಂದವನ್ನು ಹೀರುತ್ತಾ, ಬಯಸಿದಾಗ ಬಿಸಿಲು ಕಾಯಿಸಿಕೊಳ್ಳುತ್ತಾ ಇರುವ ಚಿಟ್ಟೆಯು ಹಾಯಾದ ಜೀವನ ಶೈಲಿಯ ಸೂಕ್ಷ್ಮರೂಪವೆಂದು ತೋರುತ್ತದೆ.
ಆದರೆ ಕೀಟ ಜಗತ್ತಿನಲ್ಲಿ, ವಿಷಯಗಳು ತೋರುವಂತೆಯೇ ಯಾವಾಗಲೂ ಇರುವುದಿಲ್ಲ. ಸಮಯವು ವೇಗದಿಂದ ಚಲಿಸುತ್ತಿದೆಯೋ ಎಂಬಂತೆ ಸಂತತವಾಗಿ ಆತುರ ಪಡುತ್ತಾ, ಪ್ರಾಮುಖ್ಯವಾದ ಸೇವೆಯನ್ನು ಸಲ್ಲಿಸುವ ಕಾರ್ಯಮಗ್ನ ಜೀವಿಗಳು ಚಿಟ್ಟೆಗಳಾಗಿವೆ. ಪ್ರತಿನಿಧಿರೂಪದ ಕೆಲಸದ ದಿನವೊಂದರಲ್ಲಿ ನಾವು ಒಂದು ಚಿಟ್ಟೆಯ ಸಂಗಾತಿಯಾಗೋಣ.
ಸೂರ್ಯಪ್ರಕಾಶವುಳ್ಳ ಒಂದು ಹೊತ್ತರೂಟ
ತ್ರಾಣವಿಲ್ಲದ ಅನಿಸಿಕೆಯೊಂದಿಗೆ ನೀವು ಬೆಳಗ್ಗೆ ಏಳುತ್ತೀರೊ? ಪ್ರಾತಃಕಾಲದ ನಿರುತ್ಸಾಹಗಳು ಚಿಟ್ಟೆಗಳಲ್ಲಿ ನಿಯತವಾಗಿ ಕಂಡುಬರುವಂಥ ವಿಷಯವಾಗಿದೆ. ಕೆಲವು ದಿನ ಬೆಳಗ್ಗೆ, ಅಕ್ಷರಾರ್ಥಕವಾಗಿ ಅವುಗಳಿಗೆ ಚಲಿಸಲು ಸಾಧ್ಯವಾಗುವುದಿಲ್ಲ. ಅವುಗಳ ಸಮಸ್ಯೆಯು—ತಮ್ಮ ಸುತ್ತಮುತ್ತಲಿನ ಪರಿಸರಕ್ಕನುಸಾರ ಹೆಚ್ಚುಕಡಮೆಯಾಗುವ ದೇಹದ ಉಷ್ಣಾಂಶವಾಗಿದೆ. ತಣ್ಣನೆಯ ರಾತ್ರಿಯನ್ನು ಅವು ಎಲೆಯೊಂದರ ಮೇಲೆ ಕುಳಿತು ಕಳೆದ ಅನಂತರ, ಅವುಗಳ ರಕ್ತವು ಎಷ್ಟು ತಣ್ಣಗಾಗುತ್ತದೆಂದರೆ, ಅವುಗಳಿಗೆ ಚಲಿಸಲು ಸಾಧ್ಯವಾಗುವುದಿಲ್ಲ ಮತ್ತು ಖಂಡಿತವಾಗಿ ಹಾರಲಾಗುವುದಿಲ್ಲ. ಆದುದರಿಂದ ಅವು ಸೂರ್ಯನಿಗಾಗಿ ಕಾಯಬೇಕು.
ಸೂರ್ಯನು ಉದಯಿಸಿದಾಗ, ಚಿಟ್ಟೆಯು ತನ್ನ ರೆಕ್ಕೆಗಳನ್ನು ತೆರೆದು, ಅದರ ಬೆಚ್ಚಗಾಗಿಸುವ ಕಿರಣಗಳ ಕಡೆಗೆ ಅವುಗಳನ್ನು ಒರೆಯಾಗಿ ಇಡುತ್ತದೆ. ಪೂರ್ತಿ ಚಾಚಿದ ರೆಕ್ಕೆಗಳು, ಸಣ್ಣ ಸೌರ ಬ್ಯಾಟರಿ ಸೆಲ್ಲುಗಳಂತೆ ಕಾರ್ಯಮಾಡುತ್ತಾ, ಬೇಕಾದ ತಾಪವನ್ನು ಬೇಗನೆ ಸೆರೆಹಿಡಿಯುತ್ತವೆ ಮತ್ತು ಚಿಟ್ಟೆಯು ತೇಲಿ ಹೋಗುತ್ತದೆ. ಆದರೆ ಆಕಾಶದಲ್ಲಿ ಮೋಡ ಕವಿದಿದ್ದರೆ ಆಗೇನು? ತಣ್ಣನೆಯ ಸಮಶೀತೋಷ್ಣ ಪ್ರದೇಶಗಳಲ್ಲಿ, ಚಿಟ್ಟೆಗಳು ಅನುಕೂಲವಾದ ಒಂದು ಕೊಂಬೆ ಯಾ ಹೂವಿನ ಮೇಲೆ ಸೂರ್ಯನು ಪ್ರಕಾಶಿಸುವ ತನಕ ಅಚಲವಾಗಿ ಉಳಿಯಬೇಕು. ಇದು ಸೋಮಾರಿತನವಲ್ಲ. ಬರಿಯ ಒಂದು ಆವಶ್ಯಕತೆಯಾಗಿದೆ.
ದಿನವು ತುಂಬ ಬಿಸಿಯಾಗಿರದಿದ್ದರೆ, ಚಿಟ್ಟೆಯು ಆಗಿಂದಾಗ್ಗೆ ಹೆಚ್ಚಿನ ಸೂರ್ಯಪ್ರಕಾಶದ ಚಿಕಿತ್ಸೆಕಾಗಿ ನಿಲ್ಲುತ್ತದೆ. ಪೆಟ್ರೋಲ್ ಬಂಕ್ನಲ್ಲಿ ಇಂಧನವನ್ನು ಹಾಕಿಕೊಳ್ಳುವ ಕಾರಿನಂತೆ, ಸೌರ ಶಕ್ತಿಯ ಶೇಖರಣೆಯ ಅಗತ್ಯ ಅವನಿಗಿದೆ. ಉಷ್ಣವಲಯಗಳಲ್ಲಿ, ಪ್ರಾತಃಕಾಲದಲ್ಲಿ ಯಾ ಮಳೆಯ ಸುರಿತದ ಅನಂತರ, ಚಿಟ್ಟೆಗೆ ಬಿಸಿಲು ಕಾಯಿಸಿಕೊಳ್ಳುವ ಅಗತ್ಯ ಇರಬಹುದು. ಸಾಮಾನ್ಯವಾಗಿ ಮಾತಾಡುವುದಾದರೆ, ಹವಾಮಾನವು ತಣ್ಣಗಿದ್ದಷ್ಟು ಹೆಚ್ಚಿನ ಸಮಯವನ್ನು ಅವನು ಬಿಸಿಲು ಕಾಯಿಸಿಕೊಳ್ಳುವುದರಲ್ಲಿ ಕಳೆಯುತ್ತಾನೆ. ಅವನ ಶಕ್ತಿಯು ಒಮ್ಮೆ ಪುನಃಸ್ಥಾಪಿಸಲ್ಪಟ್ಟಾದ ಮೇಲೆ, ಮಾಡಬೇಕಾದ ಕೆಲಸವನ್ನು ಅವನು ಮುಂದುವರಿಸುತ್ತಾನೆ.
‘ಪ್ರಥಮ ಪರಿಮಳದಲ್ಲಿ ಪ್ರೀತಿ’
ಅತಿ ಜರೂರಿಯಾದ ಕೆಲಸವು ಒಬ್ಬ ಸಂಗಾತಿಯನ್ನು ಕಂಡುಹಿಡಿಯುವುದಾಗಿದೆ. ಕೆಲವೇ ವಾರಗಳನ್ನು ವಿರಳವಾಗಿ ಮೀರುವ ಒಂದು ಜೀವನ ನಿರೀಕ್ಷೆಯಲ್ಲಿ, ನಷ್ಟ ಮಾಡಲು ಸಮಯವಿಲ್ಲ. ಚಿಟ್ಟೆಯ ಲೋಕದಲ್ಲಿ ಸಂಗಾತಿಯನ್ನು ಕಂಡುಕೊಳ್ಳುವುದು ಸುಲಭ ವಿಷಯವಲ್ಲ—ಅದು ವೀರೋಚಿತ ತಾಳ್ಮೆ ಮತ್ತು ಪಟ್ಟುಹಿಡಿತವನ್ನು ಆವಶ್ಯಪಡಿಸುತ್ತದೆ.
“ಮೊದಲ ನೋಟದಲ್ಲಿ ಪ್ರೀತಿ” ಎಂಬುದು ಚಿಟ್ಟೆಗಳ ಮಧ್ಯದಲ್ಲಿ ಅಜ್ಞಾತ. ಅವು ಕುಪ್ರಸಿದ್ಧವಾಗಿ ಸಮೀಪದೃಷ್ಟಿ ದೋಷವುಳ್ಳವುಗಳಾಗಿವೆ ಮತ್ತು ಅನೇಕ ಬಾರಿ ಬೇರೆ ಜಾತಿಯ ಚಿಟ್ಟೆಯನ್ನು ತಮ್ಮ ಸ್ವಂತ ಜಾತಿಯದ್ದೆಂದು ತಪ್ಪಾಗಿ ಗ್ರಹಿಸುತ್ತವೆ. ತಾನು ಕಂಡದ್ದು ತನ್ನ ಸ್ವಂತ ಜಾತಿಯ ಹೆಣ್ಣು ಚಿಟ್ಟೆಯಲ್ಲವೆಂದು ಚಿಟ್ಟೆವರನು ಕೊನೆಗೆ ಗ್ರಹಿಸಿದಾಗ, ಅದು ಪ್ರಯೋಜನವಿಲ್ಲದ ಬೆನ್ನಟ್ಟುವಿಕೆಗೆ ಅನೇಕ ಬಾರಿ ನಡೆಸುತ್ತದೆ.
ಜೀವಿತವನ್ನು ಇನ್ನೂ ಹೆಚ್ಚು ಕಷ್ಟಕರವಾಗಿ ಮಾಡಲು, ಹೆಣ್ಣುಚಿಟ್ಟೆ ಸಾಮಾನ್ಯವಾಗಿ ಗಂಡನ್ನು ಅಂಗೀಕರಿಸುವುದಿಲ್ಲ. ಅವಳು ಕಟ್ಟಕಡೆಗೆ ಮೃದುವಾಗುತ್ತಾಳೆ ಎಂದು ನಿರೀಕ್ಷಿಸುತ್ತಾ, ಹೆಚ್ಚು ವೇಗದ ಆಕಾಶ ಕುಣಿದಾಟದ ಒಂದು ರೀತಿಯಲ್ಲಿ, ತೀವ್ರೋತ್ಸಾಹದ ಗಂಡು ಅವಳ ಸುತ್ತಲೂ ಬಿಡದೆ ಹಾರಾಡುತ್ತದೆ. ದುರದೃಷ್ಟದ ಗಂಡನ್ನು ಅವನ ಅನ್ವೇಷಣೆಯನ್ನು ಮುಂದುವರಿಸಲು ಬಿಡುತ್ತಾ ಹೆಣ್ಣು ಹಾರಿ ಹೋದಾಗ, ಈ ಪ್ರೇಕ್ಷಣೀಯವಾದ ಚಿಟ್ಟೆ ನೃತ್ಯಗಳು ಸಾಮಾನ್ಯವಾಗಿ ಹಠಾತ್ತಾದ ಸಮಾಪ್ತಿಗೆ ಬರುತ್ತವೆ.
ಆಶ್ಚರ್ಯಕರವಾಗಿ, ತನ್ನ ಗಂಡು ಜತೆಗಾರನ ವಿಚಿತ್ರ ಬಣ್ಣಗಳ ಕುರಿತು ಹೆಣ್ಣು ಅಷ್ಟೊಂದು ಉತ್ತೇಜಿತಳಾಗುವುದಿಲ್ಲ. ಚಿಟ್ಟೆಗಳ ಉಜ್ವಲ ಬಣ್ಣಗಳು ಯಾವುದೊ ‘ವಿಕಾಸವಾದದ ಲಾಭವನ್ನು’ ಒದಗಿಸಿತ್ತೆಂದು ಡಾರ್ವಿನ್ ಸಂತೋಷದಿಂದ ಊಹಿಸಿದ್ದರೂ, ಅದನ್ನು ರುಜುಪಡಿಸಲು ಯಾವ ಪ್ರಮಾಣವೂ ಇರುವುದಿಲ್ಲ. ಒಂದು ಪ್ರಯೋಗದಲ್ಲಿ, ಅನಾರ್ಟಿಯ ಅಮಾತಿಯ ಎಂಬ ಉತ್ತರ ಅಮೆರಿಕನ್ ಜಾತಿಯ ಹೆಣ್ಣುಗಳು, ಉಜ್ವಲ ಕಗ್ಗೆಂಪು ಮತ್ತು ಕಪ್ಪು ರೆಕ್ಕೆಗಳನ್ನು ಪೂರ್ತಿಯಾಗಿ ಕಪ್ಪು ಬಣ್ಣದಿಂದ ಬಣ್ಣಿಸಲ್ಪಟ್ಟ ಗಂಡುಗಳೊಂದಿಗೆ ಸಂತೋಷದಿಂದ ಕೂಡಿದವು. ಗಂಡಿನ ಹಾರಾಟದ ನಮೂನೆ, ಅವನ ಪಟ್ಟುಹಿಡಿತ, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಅಪೂರ್ವವಾದ “ಪ್ರೇಮ-ಧೂಳು” ಪ್ರಾಮುಖ್ಯವಾದ ವಿಷಯಗಳೆಂದು ತೋರುತ್ತದೆ.
ಈ ಪ್ರೇಮ-ಧೂಳಿನಲ್ಲಿ ಗಂಡಿನ ಅತಿ ಶಕ್ತಿಶಾಲಿ ಆಕರ್ಷಣೆಯಾಗಿರುವ ಫರಮೋನ್ ರಾಸಾಯನಿಕ ವಸ್ತು ಸೇರಿದೆ. ಅದು ತನ್ನ ಜಾತಿಯ ಹೆಣ್ಣುಗಳನ್ನು ಪ್ರಭಾವಿಸಲು ಅವನು ತಯಾರಿಸಿದ, ಅಮಲೇರಿಸುವ ಸುಗಂಧ ತೈಲವಾಗಿದೆ. ಪ್ರೇಮಯಾಚನೆಯ ಸಮಯದಲ್ಲಿ, ಈ “ಸುಗಂಧಾತೀತ”ದಿಂದ ಅವನು ಅವಳ ಮೇಲೆ ಧೂಳು ಉದುರಿಸಲು ಪ್ರಯತ್ನಿಸುತ್ತಾನೆ. ಈ ಪ್ರೇಮ-ಧೂಳು ಸಾಫಲ್ಯದ ಖಾತರಿಯಲ್ಲವಾದರೂ, ಇಷ್ಟವಿರುವ ಹೆಣ್ಣನ್ನು ಅಂತಿಮವಾಗಿ ಕಂಡುಕೊಂಡಾಗ, ಅದು ಒಳ್ಳೆಯ ಪರಿಣಾಮವನ್ನು ತರುತ್ತದೆ.
ಮಕರಂದದ ರುಚಿ
ಸಂಗಾತಿಗಾಗಿ ಈ ಹುಡುಕುವಿಕೆಯಲ್ಲಿ ವ್ಯಯಿಸಲಾದ ಎಲ್ಲಾ ಶಕ್ತಿಯು ಮತ್ತೆ ತುಂಬಿಸಲ್ಪಡಬೇಕು. ಆದಕಾರಣವೇ ಚಿಟ್ಟೆಗಳು ಮಕರಂದಕ್ಕಾಗಿ ಆಶೆಪಡುವುದು. ಈ ಹೆಚ್ಚು ಶಕ್ತಿಯ ಆಹಾರವನ್ನು ಹೂವುಗಳು ಆಕರ್ಷಣೀಯವಾದ ರೂಪಗಳ ಮತ್ತು ಬಣ್ಣಗಳ ಮೂಲಕ ಪ್ರಕಟಿಸುತ್ತವೆ. ಒಮ್ಮೆ ಅದು ಹೂವಿನ ಮೇಲೆ ಇಳಿದಾದ ಮೇಲೆ, ಹೂವಿನ ಅಡಿಗೆ ಚುಚ್ಚುವ ಒಂದು ಉದ್ದವಾದ ನಾಳದಂಥ ಹೀರು ಕೊಳವಿಯಿಂದ ಚಿಟ್ಟೆಯು ಕುಶಲವಾಗಿ ಮಕರಂದವನ್ನು ಚೀಪುತ್ತದೆ.
ಮಕರಂದವನ್ನು ಹೀರುವಾಗ, ರೋಮಗಳ್ಳುಳ ದೇಹದ ಮೇಲೆ ಪುಷ್ಪಧೂಳಿಯನ್ನು ಕೀಟವು ಪಡೆಯುತ್ತದೆ, ಹೀಗೆ ತನ್ನೊಂದಿಗೆ ಪುಷ್ಪಧೂಳಿಯನ್ನು ತಾನು ಭೇಟಿಮಾಡುವ ಮುಂದಿನ ಹೂವಿಗೆ ತೆಗೆದುಕೊಂಡು ಹೋಗುತ್ತದೆ. ಪ್ರತಿನಿಧಿರೂಪವಾದ ಕೆಲಸ ದಿನದಂದು, ನೂರಾರು ಹೂವುಗಳಿಗೆ ಪರಾಗಾಧಾನ ಮಾಡಲಾಗುತ್ತದೆ. ಆದರೆ ಉಷ್ಣವಲಯದ ಕಾಡುಗಳಲ್ಲಿ, ಹೂವುಗಳು ಯಥೇಚ್ಛವಾಗಿರುವುದಿಲ್ಲ. ಉಷ್ಣವಲಯದ ಚಿಟ್ಟೆಗಳು ಸಾಮಾನ್ಯವಾಗಿ ಏನು ಕುಡಿಯುತ್ತವೆ?
ಉಷ್ಣವಲಯದ ಚಿಟ್ಟೆಗಳು ಕೊಳೆತ ಹಣ್ಣನ್ನು ನುಂಗುವುದಕ್ಕಿಂತ ಹೆಚ್ಚಾಗಿ ಯಾವುದನ್ನೂ ಇಷ್ಟಪಡುವುದಿಲ್ಲ. ನೆಲಕ್ಕೆ ಬೀಳುವ ಮಿತಿಮೀರಿ ಹಣ್ಣಾದ ಹಣ್ಣು, ಅವುಗಳಿಗೆ ಸಕ್ಕರೆ ಇರುವ ಶಕ್ತಿಯ ಹೇರಳವಾದ ಮೂಲವನ್ನು ಒದಗಿಸುತ್ತದೆ.
ಚಿಟ್ಟೆಗಳು ಉಪ್ಪನ್ನು ಕೂಡ ಇಷ್ಟಪಡುತ್ತವೆ. ಒದ್ದೆಯಾದ ಪ್ರದೇಶದ ಒಂದು ಮಡಿನೆಲದಿಂದ ಉಪ್ಪಾದ ತೇವವನ್ನು ಅಥವಾ ಕೆಲವು ಸಂದರ್ಭಗಳಲ್ಲಿ ಒಬ್ಬ ಮಾನವ ಅಭಿಮಾನಿಯ ಕೈಯ ಮೇಲಿರುವ ಬೆವರನ್ನು ಅವು ಚೀಪುತ್ತಾ ಇರುವುದನ್ನು ಅನೇಕ ಬಾರಿ ಕಂಡುಕೊಳ್ಳಬಹುದು. ಧೈರ್ಯಶಾಲಿಯಾದ ಫ್ಲ್ಯಾಂಬೋ ಎಂಬ ಚಿಟ್ಟೆಯು ಕೇಮನ್ ಮೊಸಳೆಯ ಉಪ್ಪಾದ ಕಣ್ಣೀರುಗಳನ್ನು ಹೀರುತ್ತಾ ಇರುವುದನ್ನೂ ಕಾಣಲಾಗಿದೆ.
ಒಬ್ಬ ಸಂಗಾತಿಗಾಗಿ ಕಾರ್ಯಮಗ್ನನಾಗಿ ಹುಡುಕುತ್ತಾ, ಹೂವುಗಳ ಪರಾಗಾಧಾನ ಮಾಡುತ್ತಾ, ಮತ್ತು ಚೆನ್ನಾಗಿ ಊಟಮಾಡುತ್ತಾ ಇರುವಾಗ, ನಮ್ಮ ರೆಕ್ಕೆಯುಳ್ಳ ಮಿತ್ರನು ವೈರಿಗಳಿಗಾಗಿಯೂ ಕೂಡ ಜಾಗರೂಕನೂ ಎಚ್ಚರವುಳ್ಳವನೂ ಆಗಿರಬೇಕು. ಅವನು ಅರಕ್ಷಿತನಾಗಿ ಕಾಣಬಹುದು, ಆದರೆ ಸೆರೆಯನ್ನು ತಡೆಯಲು ಅವನಲ್ಲಿ ಹಲವಾರು ತಂತ್ರಗಳಿವೆ.
ಅಪಾಯವನ್ನು ಚಾತುರ್ಯದಿಂದ ತಪ್ಪಿಸುವುದು
ಕೀಟವನ್ನು ತಿನ್ನುವ ಯಾವುದೇ ಪಕ್ಷಿಗೆ, ಹುಲ್ಲುಗಾವಲಿನ ಮೇಲೆ ಸ್ಪಂದಿಸುವ ಥಳುಕಿನ ಒಂದು ಚಿಟ್ಟೆಯು ನಿಸ್ಸಂದೇಹವಾಗಿ ಆಕರ್ಷಕವಾದ ಒಂದು ತುತ್ತಾಗಿರಬಲ್ಲದು. ಆದರೆ ಚಿಟ್ಟೆಯ ಅಸಮವಾದ, ಬದಲಾಗುತ್ತಿರುವ ಹಾರಾಟವು, ಅದರ ಹಿಡಿಯುವಿಕೆಯನ್ನು ಬಹಳ ಯುಕ್ತಿಯ ಕೆಲಸವನ್ನಾಗಿ ಮಾಡುತ್ತದೆ. ಅನೇಕ ಪಕ್ಷಿಗಳು ಕೆಲವು ಪ್ರಯತ್ನಗಳ ಅನಂತರ ಬಿಟ್ಟುಬಿಡುತ್ತವೆ. ಪಕ್ಷಿಯೊಂದು ಚಿಟ್ಟೆಯನ್ನು ಹಿಡಿದಾಗಲೂ ಕೂಡ, ಪಕ್ಷಿಯ ಕೊಕ್ಕಿನಲ್ಲಿ ಅವನ ರೆಕ್ಕೆಯ ಒಂದು ಭಾಗವನ್ನು ಹಿಂದೆ ಬಿಡುವ ಮೂಲಕ ಕೀಟವು ತಪ್ಪಿಸಿಕೊಳ್ಳುವುದರಲ್ಲಿ ಸಫಲವಾಗಬಹುದು.
ಕಣ್ಣಿನ ದೃಷ್ಟಿಯು ಇನ್ನೊಂದು ಸಂರಕ್ಷಣೆಯಾಗಿದೆ. ಚಿಟ್ಟೆಗಳು ಸಮೀಪ ದೃಷ್ಟಿ ದೋಷವುಳ್ಳ ಕೀಟಗಳಾಗಿದ್ದರೂ, ಚಲನೆಯನ್ನು ಗುರುತಿಸುವಲ್ಲಿ ಅವುಗಳ ಸಂಯೋಜಿತ ಕಣ್ಣುಗಳು ಬಹಳ ಸಾಮರ್ಥ್ಯವುಳ್ಳದ್ದಾಗಿವೆ. ಒಂದು ಚಿಟ್ಟೆಯ ಛಾಯಾಚಿತ್ರವನ್ನು ತೆಗೆಯಲು ಪ್ರಯತ್ನಿಸಿದ ವ್ಯಕ್ತಿಗೆ ಬಹಳ ಚೆನ್ನಾಗಿ ಗೊತ್ತಿರುವಂತೆ, ಅಪಾಯದ ಯಾವುದೇ ಸುಳಿವು ಸಿಕ್ಕ ಕೊಡಲೆ ಅವು ಥಟ್ಟನೆ ಹಾರಿಹೋಗುವವು.
ನಿಧಾನವಾಗಿ ಹಾರುವ ಕೆಲವು ಚಿಟ್ಟೆಗಳಿಗೆ ಇನ್ನೊಂದು ಸುರಕ್ಷೆಯ ಸಾಧನವಿದೆ—ಅವುಗಳ ಕೊಳಕಾದ ಸ್ವಾದ. ಅವು ಕಂಬಳಿ ಹುಳುವಾಗಿ ಇದ್ದಾಗ ವಿಷಭರಿತ ಗಿಡಗಳ ಪೋಷಣೆ ಪಡೆಯುವ ಕಾರಣ ಅದು ಉಂಟಾಗುತ್ತದೆ. ಒಮ್ಮೆ ಅಂಥ ಒಂದು ಚಿಟ್ಟೆಯನ್ನು ಕಡಿದ ಬಳಿಕ, ಪಕ್ಷಿಯು ಸಾಮಾನ್ಯವಾಗಿ ಎರಡನೆಯ ಎದುರಿಸುವಿಕೆಯನ್ನು ತ್ಯಜಿಸುವುದು. ಅನೇಕ ವೇಳೆ ಈ ಹೊಲಸು ಸಾದ್ವದ—ಉಜ್ವಲವಾಗಿ ಬಣ್ಣಿಸಲ್ಪಟ್ಟ—ಮಾನರ್ಕ್ನಂತಹ ಚಿಟ್ಟೆಗಳು, ವಾಸ್ತವದಲ್ಲಿ ದೂರವಾಗಿರಲು ಪಕ್ಷಿಗಳಿಗೆ ನೆನಪು ಹುಟ್ಟಿಸುವ ಒಂದು ದೃಶ್ಯ ಎಚ್ಚರಿಕೆಯಾಗಿವೆ.
ಪಯಣದ ಅಂತ್ಯ
ಅನೇಕ ಚಿಟ್ಟೆಗಳು ಕೆಲವು ವಾರಗಳಿಗಿಂತ ಹೆಚ್ಚಿನ ಸಮಯ ಜೀವಿಸುವುದಿಲ್ಲವೆಂದು ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಗಮನಿಸುತ್ತದೆ, ಆದರೆ ಕೆಲವು ಜಾತಿಗಳು 18 ತಿಂಗಳುಗಳ ತನಕ ಜೀವಿಸಬಹುದು. ಚಳಿಗಾಲದಲ್ಲಿ ಯಾ ಉಷ್ಣವಲಯಗಳಲ್ಲಿ ಲಂಬಿಸುವ ಶುಷ್ಕ ಕಾಲದಲ್ಲಿ, ಕೆಲವು ಚಟುವಟಿಕೆರಹಿತವಾಗಿರುತ್ತವೆ.
ಆದರೆ ಅವುಗಳ ಅಲ್ಪಾಯುಷದ ಹೊರತೂ, ಚಿಟ್ಟೆಗಳು ಅದ್ಭುತಕರವಾದ ಚಮತ್ಕಾರ್ಯಗಳನ್ನು ಸಾಧಿಸಬಲ್ಲವು. ಕಳೆದ ಶತಮಾನದಲ್ಲಿ, ಆಫ್ರಿಕದ ತೀರದ ಆಚೆಕಡೆಯಲ್ಲಿರುವ ಕನೆರಿ ದ್ವೀಪಗಳಲ್ಲಿ ತನ್ನನ್ನು ಸ್ಥಾಪಿಸಿಕೊಳ್ಳಲು ಸಾಕಷ್ಟು ಸಂಖ್ಯೆಯಲ್ಲಿ ಮಾನರ್ಕ್ ಚಿಟ್ಟೆಯು ಅಟ್ಲಾಂಟಿಕ್ ಸಾಗರವನ್ನು ದಾಟಿತು. ಇನ್ನೊಂದು ಮಹಾ ಪ್ರಯಾಣಿಕನಾದ ಪೆಯಿಂಟೆಡ್ ಲೇಡಿ ಬೇಸಗೆ ಕಾಲದಲ್ಲಿ ಉತ್ತರ ಆಫ್ರಿಕದಿಂದ ಉತ್ತರ ಯೂರೋಪಿಗೆ ಕ್ರಮವಾಗಿ ಪ್ರಯಾಣ ಮಾಡುತ್ತದೆ.
ತಮ್ಮ ಸಂಕ್ಷಿಪ್ತವಾದ ಜೀವಾವಧಿಯಲ್ಲಿ, ಆಯಾಸಗೊಳ್ಳದ ಚಿಟ್ಟೆಗಳು ಹೂವುಗಳನ್ನು, ಕುರುಚಲು ಗಿಡಗಳನ್ನು, ಮತ್ತು ಹಣ್ಣು ಕೊಡುವ ಮರಗಳನ್ನು ಪರಾಗಾಧಾನ ಮಾಡುವಲ್ಲಿ ಪ್ರಾಮುಖ್ಯವಾದ ಒಂದು ಕೆಲಸವನ್ನು ಮಾಡುತ್ತವೆ. ಮತ್ತು ಅದಕ್ಕಿಂತ ಹೆಚ್ಚಿನದ್ದಾಗಿ, ಅವುಗಳ ಸಾನ್ನಿಧ್ಯವು ಹಳ್ಳಿಗಾಡು ಪ್ರದೇಶಕ್ಕೆ ಸೌಂದರ್ಯ ಮತ್ತು ಹರ್ಷದ ಒಂದು ಸ್ಪರ್ಶವನ್ನು ಕೂಡಿಸುತ್ತದೆ. ಅವುಗಳಿಲ್ಲದ ಬೇಸಗೆ ಬೇಸಗೆಯಾಗಿರಲಾರದು. (g93 10/8)
[ಪುಟ 20 ರಲ್ಲಿರುವ ಚಿತ್ರ]
ಪ್ರಾತಃಕಾಲದಲ್ಲಿ ಬಿಸಿಲು ಕಾಯಿಸಿಕೊಳ್ಳುವುದು
[ಪುಟ 21 ರಲ್ಲಿರುವ ಚಿತ್ರ]
ಒಂದು ಹೂವಿನಿಂದ ಮಕರಂದವನ್ನು ಹೀರಿಕೊಳ್ಳುವುದು
[ಪುಟ 22 ರಲ್ಲಿರುವ ಚಿತ್ರ]
ನೆಲದಿಂದ ತೇವವನ್ನು ತೆಗೆಯುವುದು
[ಕೃಪೆ]
Courtesy of Buckfast Butterfly Farm