ಪುಟ ಎರಡು
ಈ ಭೂಮಿಯು ಕಸದ ತಿಪ್ಪೆಯಾಗುತ್ತಿದೆಯೆ?
ಲೋಕ ನಾಯಕರು, ಪರಿಸರವಾದಿಗಳು ಮತ್ತು ಚಿಂತಾಮಗ್ನರಾಗಿರುವ ಜನತೆ ಕಾಣುತ್ತಿರುವ ಕಸದ ಬಿಕ್ಕಟ್ಟು, ಗಣನೆಗೆ ತೆಗೆದುಕೊಳ್ಳಲೇ ಬೇಕಾಗಿರುವ ಬೆಳೆಯುತ್ತಿರುವ ಸಮಸ್ಯೆ. ಇದನ್ನು “90ರ ದಶಕದ ಮಹಾ ಬಿಕ್ಕಟ್ಟು” ಎಂದು ಕರೆಯಲಾಗಿದೆ. ಈ ಭೂವ್ಯಾಪಕ ಪಾಡಿನ ಕುರಿತು ಎಚ್ಚರಿಕೆ ಕೊಡಲು ಪತ್ರಿಕೆಗಳು ಅನೇಕ ಅಂಕಣಗಳನ್ನು ಮೀಸಲಾಗಿಡುತ್ತವೆ. ನ್ಯೂಸ್‌ವೀಕ್ ಪತ್ರಿಕೆಯ ಹೊದಿಕೆಯು “ಜೀವಸಹಿತ ಹೂತಿಡುವಿಕೆ” ಎಂಬ ಶೀರ್ಷಿಕೆಯನ್ನು ಕೊಟ್ಟಿತು. ಆ ಪತ್ರಿಕೆ ಪ್ರಕಟಿಸಿದ್ದು: “ಅತಿರೇಕ ಕಸ: ಒಂದು ಪರಿಸರೀಯ ಬಿಕ್ಕಟ್ಟು ನಮ್ಮ ಮನೆಬಾಗಲನ್ನು ತಲುಪಿದೆ.” ಕಸವನ್ನು ಕುರಿತ, ಯು. ಎಸ್. ನ್ಯೂಸ್ ಎಂಡ್ ವರ್ಲ್ಡ್ ರಿಪೋರ್ಟ್ ಪತ್ರಿಕೆಯ ಲೇಖನ, “ಟನ್ನು, ಟನ್ನುಗಳಷ್ಟು ಕಚಡ, ಹಾಕಲು ಸ್ಥಳವಿಲ್ಲ” ಎಂದು ಹೇಳಿತು. ಟೈಮ್ ಪತ್ರಿಕೆ ದೊಡ್ಡ ಅಕ್ಷರಗಳಲ್ಲಿ, “ಕಸ, ಎಲ್ಲಿ ನೋಡಿದರೂ ಕಸ. ಹೂತಿಟ್ಟ ಕಚಡ ಪ್ರದೇಶಗಳು ತುಂಬಿ ಹರಿಯುತ್ತಿವೆ, ಆದರೆ ಅನ್ಯ ಮಾರ್ಗಗಳು ಕೊಂಚ,” ಎಂದು ಹೇಳಿತು. ಪ್ಯಾರಿಸಿನ ಇಂಟರ್ನ್ಯಾಷನಲ್ ಹೆರಲ್ಡ್ ಟ್ರಿಬ್ಯೂನ್ ಮೇಲ್ಪಂಕ್ತಿಯಾಗಿ ಹೇಳಿದ್ದು: “ಪಾಶ್ಚಿಮಾತ್ಯ ದೇಶಗಳ ಕಚಡ—ತೃತೀಯ ಜಗತ್ತಿಗೆ ಹೆಚ್ಚುತ್ತಿರುವ ಹೊರೆ.”