ಇಂದು ನಕ್ಷತ್ರ ವೀಕ್ಷಣ
“ವೈಟ್ ಹೌಸಿನಿಂದ ವಾಲ್‌ಸ್ಟ್ರೀಟಿನ ತನಕ ಜ್ಯೋತಿಶ್ಶಾಸ್ತ್ರ ಹಿಂದೆಂದೂ ಇಷ್ಟು ಜನಪ್ರಿಯವಾದದ್ದಿಲ್ಲ.” ಅಮೆರಿಕದಲ್ಲಿ ಜ್ಯೋತಿಷ್ಯದಲ್ಲಿರುವ ಸಾರ್ವಜನಿಕ ಆಸಕ್ತಿಯ ಕುರಿತು ಒಂದು ವಾರ್ತಾಪತ್ರಿಕೆಯ ವರದಿ ಈ ಮೇಲಿನಂತೆ ಆರಂಭವಾಗುತ್ತದೆ.
ಅಲ್ಲಿ ವೈಟ್‌ಹೌಸಿನ ವಿಷಯ ಹೇಳಿದ ಮಾತುಗಳು ಅಧ್ಯಕ್ಷರ ಮಾಜಿ ಸಹಾಯಕರೊಬ್ಬರಿಂದ ಹೆಚ್ಚು ಬಹಿರಂಗವಾಗಿದ್ದ ಒಂದು ವೃತ್ತಾಂತವನ್ನು ವಾಚಕರ ಮನಸ್ಸಿಗೆ ತರುತ್ತದೆ ಎಂಬುದು ನಿಸ್ಸಂಶಯ. ಫಾರ್ ದ ರೆಕರ್ಡ್ ಎಂಬ ಪುಸ್ತಕದಲ್ಲಿ ಡಾನಲ್ಡ್ ಡಿ. ರೀಗನ್ ಬರೆದುದು:
“ನಾನು ವೈಟ್ ಹೌಸಿನ ಪ್ರಧಾನ ಸಿಬ್ಬಂಧಿಯಾಗಿದ್ದಾಗ [ಅಧ್ಯಕ್ಷ] ರೀಗನ್ ಮತ್ತು ಪತ್ನಿ ಮಾಡಿದ ಪ್ರತಿಯೊಂದು ದೊಡ್ಡ ಕಾರ್ಯ ಅಥವಾ ನಿರ್ಣಯವನ್ನು ಸಾನ್ ಫ್ರಾನ್ಸಿಸ್ಕೊ ನಗರದ ಒಬ್ಬ ಮಹಿಳೆಯು ಮೊದಲು ಮಂಜೂರು ಮಾಡಬೇಕಾಗಿತ್ತು. ಆ ಕೆಲಸಕ್ಕೆ ಗ್ರಹಗಳು ಸರಿಯಾದ ಸ್ಥಾನನೆಲೆಯಲ್ಲಿವೆಯೋ ಎಂದು ಖಂಡಿತ ಮಾಡಲು ಆಕೆ ಜಾತಕ ನೋಡುತ್ತಿದ್ದಳು.”
ಈ ಕಥನದ ವಿಷಯ ಏನೇ ಹೇಳಿದರೂ, ಎಲ್ಲಿ ಜ್ಯೋತಿಷ್ಯದ ಕೊನೆಯ ಕುರುಹು ಸಹ ಆಧುನಿಕ ವಿಜ್ಞಾನದ ಕಾರಣ ತೊಲಗಿಸಲ್ಪಟ್ಟಿದೆ ಎಂದು ಹೇಳಲಾಗುತ್ತದೋ ಆ ಪಾಶ್ಚಾತ್ಯ ಲೋಕದಲ್ಲಿ ಜನರ ಮಧ್ಯೆ ಜ್ಯೋತಿಷ್ಯದಲ್ಲಿರುವ ಅತ್ಯಾಸಕ್ತಿಯನ್ನು ಬಹಿರಂಗಮಾಡಲು ಇದು ನಿಶ್ಚಯವಾಗಿ ಕಾರ್ಯನಡಿಸಿತು. ಈ ಕೆಳಗಿನ ಸಾಹಿತ್ಯಗಳನ್ನು ಯೋಚಿಸಿರಿ:
▪ ಅಮೆರಿಕದ ಜ್ಯೋತಿಷಿಗಳ ಸಂಘ [AFA] ಕ್ಕನುಸಾರವಾಗಿ, ಅಮೆರಿಕದಲ್ಲಿ ಸುಮಾರು 5,000 ಪೂರ್ಣ ಸಮಯದ ಕಸಬಿನ ಜ್ಯೋತಿಷಿಗಳೂ 50,000 ಮಂದಿ ಅಂಶಕಾಲದ ಜ್ಯೋತಿಷಿಗಳೂ ಇದ್ದಾರೆ. ಇವರ ಕೆಲಸಕ್ಕಾಗಿ ವಾರ್ಷಿಕವಾಗಿ ಇವರಿಗೆ ಜನರು ಕೊಡುವ ಹಣ ಸುಮಾರು ಐವತ್ತೆರಡೂವರೆ ಕೋಟಿ ರೂಪಾಯಿಗಳು.
▪ “ಫ್ರಾನ್ಸಿನಲ್ಲಿ ಪ್ರತಿವರ್ಷ . . . 1ಕೋಟಿಗೂ ಹೆಚ್ಚು ಜನರು ಅಧಿಕೃತವಾಗಿ ಮಂಜೂರಾಗಿರುವ 30,000ಕ್ಕೂ ಹೆಚ್ಚು ಜ್ಯೋತಿಷಿಗಳನ್ನು ಅಥವಾ ವಾಹಕರನ್ನು ವಿಚಾರಿಸುತ್ತಾರೆ” ಪ್ಯಾರಿಸಿನ ಸಾಪ್ತಾಹಿಕ ಪತ್ರಿಕೆ ಟೂ ಲನೂವೆಲ್.
▪ ಅಮೆರಿಕದ ವಾರ್ತಾಪತ್ರಿಕೆಗಳಲ್ಲಿ 92 ಸೇಕಡಾ ಅಥವಾ 1,500ಕ್ಕೂ ಹೆಚ್ಚು ಪತ್ರಿಕೆಗಳಲ್ಲಿ ಜಾತಕ ವೀಕ್ಷಣ ನಿಯತಕ್ರಮದ ವಿಷಯವಾಗಿದೆ. ಜರ್ಮನಿಯ ವೆಸರ್ ಕೊರಿಯರ್ ಎಂಬ ದೈನಿಕ ಒಂದು ದಿನ ಗ್ರಹವೀಕ್ಷಣ ಅಂಕಣವನ್ನು ಮುದ್ರಿಸದಿದ್ದಾಗ “ಮನೆಯಲ್ಲಿರಬೇಕೋ ಹೊರಗೆ ಹೋಗಬೇಕೋ ಮತ್ತು ಹಣವನ್ನು ಬಂಡವಾಳ ಹೂಡಬೇಕೋ ಮತ್ತು ಎಲ್ಲಿ” ಎಂದು ಕೇಳುವ ಫೋನುಗಳು ವಾಚಕರಿಂದ ಬಂದವು.
▪ ಹೆಚ್ಚೆಚ್ಚು ಜೋತಿಷಿಗಳು ಕಂಪ್ಯೂಟರನ್ನು ಉಪಯೋಗಿಸಲು ತೊಡಗಿದ್ದಾರೆ. ಉದಾಹರಣೆಗೆ, ಸ್ವಿಟ್ಸರ್‌ಲ್ಯಾಂಡಿನ ಆ್ಯಸ್ಟ್ರೋ ಇಂಟಲಿಜೆನ್ಸ್ ಎಂಬ ಸಂಸ್ಥೆ ಜಾತಕ ವಿಶ್ಲೇಷಣೆಯ ಕಂಪ್ಯೂಟರ್ ಮುದ್ರಿತ 20 ಪುಟಗಳನ್ನು 55 ಸ್ವಿಸ್ ಫ್ರಾಂಕ್ (ಸುಮಾರು 575ರೂ.) ಬೆಲೆಗೆ ಒದಗಿಸುತ್ತದೆ. ಒಬ್ಬ ಪ್ರಸಿದ್ಧ ಬ್ರಿಟಿಷ್ ಜ್ಯೋತಿಷಿ ವರ್ಷಕ್ಕೆ 20,000ಕ್ಕೂ ಹೆಚ್ಚು ಕಂಪ್ಯೂಟರೀಕರಿಸಿದ ವೈಯಕ್ತಿಕ ಜಾತಕಗಳನ್ನು ಒಂದಕ್ಕೆ ಸುಮಾರು 300ರೂ.ಗಳಂತೆ ಕಳುಹಿಸುತ್ತಾನೆ. ನ್ಯೂಯೋರ್ಕಿನಂಥ ನಗರಗಳಲ್ಲಿ ಜಾತಕ ನೀಡುವ ಟೆಲಿಫೋನ್ ಸೇವೆ ಸಹ ಈಗ ದೊರೆಯುತ್ತದೆ. ಪ್ರತಿ ತಿಂಗಳು ಸುಮಾರು 10 ಲಕ್ಷ ಈ ರೀತಿಯ ಟೆಲಿಫೋನ್ ಕರೆಗಳು ಬರುತ್ತವೆಂದು ನ್ಯೂಯೋರ್ಕ್ ಟೆಲಿಫೋನ್ ಕಂಪೆನಿ ವರದಿ ಮಾಡುತ್ತದೆ.
ಈ ಆಕರ್ಷಣೆ ಏಕೆ?
ಸ್ವಯಂ ಈಡೇರಿಕೆಯ ಈ ಯುಗದಲ್ಲಿ ಜೀವನದ ಅರ್ಥಕ್ಕೆ ಹೆಚ್ಚು ಒಳನೋಟವನ್ನೀಡುವ ಅಥವಾ ತನ್ನನ್ನು ಹೆಚ್ಚಾಗಿ ತಿಳಿದುಕೊಳ್ಳಲಿರುವ ಯಾವ ಸಾಧನವೂ ಸ್ವೀಕಾರಯೋಗ್ಯವಾಗುವುದು ಖಂಡಿತ. ಹೀಗೆ, ಒಬ್ಬ ಪ್ರೇಕ್ಷಕನ ಮಾತುಗಳಲ್ಲಿ ನೋಡುವುದಾದರೆ, ಜನರು ಜ್ಯೋತಿಶ್ಶಾಸ್ತ್ರಕ್ಕೆ ಆಕರ್ಷಿಸಲ್ಪಟ್ಟಿರುವ ಒಂದು ಕಾರಣವು: “ಅದು ಅತ್ಯಂತ ಪ್ರಾಮುಖ್ಯ ವ್ಯಕ್ತಿಯಾದ ನಿಮ್ಮ ವಿಷಯವೇ ನಿಮಗೆ ತಿಳುವಳಿಕೆ ನೀಡುತ್ತದೆಂದು ವಾದಿಸುವುದರಿಂದಲೇ.”
ಆದರೆ ಜ್ಯೋತಿಶ್ಶಾಸ್ತ್ರ ಇದನ್ನು ನಿಜವಾಗಿಯೂ ಮಾಡುತ್ತದೋ? ಮತ್ತು, ಅತಿ ಪ್ರಾಮುಖ್ಯವಾಗಿ, ನಕ್ಷತ್ರಗಳು ನಮ್ಮ ಜೀವನಗಳನ್ನು ನಿಜವಾಗಿಯೂ ನಿಯಂತ್ರಿಸುತ್ತವೋ? ಈ ಗಮನಾರ್ಹ ಘಟನೆಯ ಕುರಿತು ನಾವೀಗ ಹೆಚ್ಚು ಸಮೀಪದಿಂದ ಪರೀಕ್ಷಿಸೋಣ. (g89 11/22)