ಮಾರ್ಚ್ 2-8, 2026
ಗೀತೆ 97 ವಾಕ್ಯವೇ ಜೀವಕ್ಕೆ ಆಧಾರ
“ದೇವರ ಮಾರ್ಗದರ್ಶನ” ಪಡ್ಕೊಳ್ತಾ ಇರಿ
2026ರ ವರ್ಷ ವಚನ: “ದೇವರ ಮಾರ್ಗದರ್ಶನ ಬೇಕಂತ ಅರ್ಥ ಮಾಡ್ಕೊಳ್ಳುವವರು ಖುಷಿಯಾಗಿ ಇರ್ತಾರೆ.”—ಮತ್ತಾ. 5:3.
ಈ ಲೇಖನದಲ್ಲಿ ಏನಿದೆ?
ನಾವು ಖುಷಿಯಾಗಿರೋಕೆ ದೇವರ ಮಾರ್ಗದರ್ಶನ ಪಡ್ಕೊಬೇಕು. ಏನು ಮಾಡಿದ್ರೆ ಇದನ್ನ ಪಡ್ಕೊಬಹುದು ಅಂತ ನೋಡೋಣ.
1. ಜೀವನ ಮಾಡೋಕೆ ನಮಗೆ ಏನೆಲ್ಲಾ ಬೇಕು? (ಮತ್ತಾಯ 5:3)
ನಮಗೇನು ಬೇಕು ಅಂತ ನಮ್ಮ ತಂದೆ ಯೆಹೋವನಿಗೆ ಚೆನ್ನಾಗಿ ಗೊತ್ತು. ಉದಾಹರಣೆಗೆ, ನಾವು ಜೀವನ ಮಾಡೋಕೆ ಊಟ, ಬಟ್ಟೆ ಮತ್ತು ಇರೋಕೆ ಮನೆ ಬೇಕು ಅಂತ ಆತನಿಗೆ ಗೊತ್ತು. ಇದ್ರಲ್ಲಿ ಯಾವುದಾದ್ರೂ ಒಂದು ಕಡಿಮೆಯಾದ್ರೂ ನಮ್ಮ ಜೀವನ ತಲೆ ಕೆಳಗೆ ಆಗಿಬಿಡುತ್ತೆ. ಆದ್ರೆ ಇದ್ರ ಜೊತೆಗೆ ನಮಗೆ ಬೇರೊಂದು ಅವಶ್ಯಕತೆನೂ ಇದೆ. ನಾವು ಯೆಹೋವ ದೇವರ ಬಗ್ಗೆ ತಿಳ್ಕೊಬೇಕು ಮತ್ತು ಆತನ ಮಾರ್ಗದರ್ಶನ ಪಡ್ಕೊಬೇಕು! (ಮತ್ತಾಯ 5:3 ಓದಿ, ಪಾದಟಿಪ್ಪಣಿ.) ಖುಷಿಯಾಗಿ ಇರೋಕೆ ಇವೆರಡು ನಮಗೆ ಬೇಕಿದೆ ಅಂತ ನಾವು ಅರ್ಥ ಮಾಡ್ಕೊಬೇಕು ಮತ್ತು ಅವನ್ನ ಪಡ್ಕೊಳ್ಳೋಕೆ ಪ್ರಯತ್ನನೂ ಹಾಕಬೇಕು.
2. “ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆ” ಇರೋರ ಪರಿಸ್ಥಿತಿ ಹೇಗಿದೆ? ಉದಾಹರಣೆ ಕೊಡಿ.
2 ಗ್ರೀಕ್ ಭಾಷೆಯಲ್ಲಿ “ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆ ಇರೋರು” ಅನ್ನೋ ಪದ ಭಿಕ್ಷುಕನನ್ನ ಸೂಚಿಸುತ್ತೆ. ಅವನ ಪರಿಸ್ಥಿತಿ ಹೇಗಿರುತ್ತೆ ಯೋಚಿಸಿ ನೋಡಿ. ಅವನು ಹರಿದಿರೋ ಬಟ್ಟೆ ಹಾಕಿರ್ತಾನೆ, ತಿನ್ನೋಕೆ ಅವನತ್ರ ಏನೂ ಇರಲ್ಲ. ಜನ ಅವನ ಕಡೆ ನೋಡೋಕೂ ಇಷ್ಟಪಡಲ್ಲ, ಅವನಿಗೆ ಮನೆ ಇರಲ್ಲ, ಬೀದಿಯಲ್ಲೇ ಕೂತಿರ್ತಾನೆ. ಬಿಸಿಲಲ್ಲಿ ಬೆಂದು ಹೋಗ್ತಿರ್ತಾನೆ, ಚಳಿಯಲ್ಲಿ ನಡುಗ್ತಿರ್ತಾನೆ, ಊಟ ಇಲ್ಲದೇ ಸೊರಗಿ ಹೋಗಿರ್ತಾನೆ. ಊಟ, ಬಟ್ಟೆಗೋಸ್ಕರ ಅವನು ಜನರ ಸಹಾಯ ಬೇಡ್ತಾ ಇರ್ತಾನೆ. ‘ದೇವರ ಮಾರ್ಗದರ್ಶನ ಬೇಕು’ ಅಂತ ಇರೋರು ಸಹ ದೇವರ ಹತ್ರ ಈ ರೀತಿ ಬೇಡ್ಕೊತಿರ್ತಾರೆ. ದೇವರ ಮಾರ್ಗದರ್ಶನ, ಸಹಾಯ ಇಲ್ಲದೇ ಬದುಕೋಕೆ ಆಗಲ್ಲ ಅಂತ ಅವರು ಅರ್ಥ ಮಾಡ್ಕೊಂಡಿರ್ತಾರೆ. ಅದಕ್ಕೇ ಅವರು ಯೆಹೋವನಿಂದ ಮಾರ್ಗದರ್ಶನ ಪಡ್ಕೊಳ್ಳೋಕೆ ತುದಿಗಾಲಲ್ಲಿ ಇರ್ತಾರೆ.
3. ಈ ಲೇಖನದಲ್ಲಿ ನಾವು ಏನು ಕಲಿತೀವಿ?
3 ಈ ಲೇಖನದಲ್ಲಿ ನಾವು ಯೇಸು ಹತ್ರ ಸಹಾಯಕ್ಕಾಗಿ ಬೇಡಿಕೊಂಡ ಫೊಯಿನಿಕೆ ಸ್ತ್ರೀ ಬಗ್ಗೆ ನೋಡೋಣ. ಯೆಹೋವ ದೇವರ ಮಾರ್ಗದರ್ಶನ ನಮಗೆ ಬೇಕಂದ್ರೆ ಅವಳ ತರ ನಾವು ಮೂರು ಗುಣಗಳನ್ನ ತೋರಿಸಬೇಕು. ಆ ಗುಣಗಳು ಯಾವುದು? ಪೇತ್ರ, ಪೌಲ ಮತ್ತು ದಾವೀದ ಸಹಾಯಕ್ಕಾಗಿ ಯೆಹೋವನ ಹತ್ರ ಬೇಡ್ಕೊಂಡ್ರು. ಇವ್ರಿಂದ ನಾವೇನು ಕಲಿಬಹುದು ಅಂತ ತಿಳ್ಕೊಳ್ಳೋಣ.
ದೀನತೆ, ಛಲ ಮತ್ತು ನಂಬಿಕೆಗೆ ಈಕೆ ಮಾದರಿ
4. ಫೊಯಿನಿಕೆ ಸ್ತ್ರೀ ಯೇಸು ಹತ್ರ ಏನಂತ ಬೇಡಿದಳು?
4 ಒಂದುಸಲ ಫೊಯಿನಿಕೆ ಸ್ತ್ರೀ ಯೇಸು ಹತ್ರ ಬಂದು, ‘ಕೆಟ್ಟ ದೂತನ ಕಾಟದಿಂದ ನನ್ನ ಮಗಳು ತುಂಬ ಕಷ್ಟಪಡ್ತಿದ್ದಾಳೆ, ಸಹಾಯ ಮಾಡು’ ಅಂತ ಮಂಡಿಯೂರಿ ಬೇಡ್ಕೊತಾಳೆ. (ಮತ್ತಾ. 15:21-28) ಈ ಘಟನೆಯಲ್ಲಿ ಅವಳು ತೋರಿಸಿದ ಮೂರು ಗುಣಗಳ ಬಗ್ಗೆ ನೋಡೋಣ.
5. (ಎ) ಫೊಯಿನಿಕೆ ಸ್ತ್ರೀ ಯಾವೆಲ್ಲ ಗುಣಗಳನ್ನ ತೋರಿಸಿದಳು? (ಬಿ) ಆಗ ಯೇಸು ಏನು ಮಾಡಿದನು? (ಚಿತ್ರ ನೋಡಿ.)
5 ಫೊಯಿನಿಕೆ ಸ್ತ್ರೀ ನಿಜವಾಗ್ಲೂ ದೀನತೆ ತೋರಿಸಿದಳು. ಅದನ್ನ ಹೇಗೆ ಹೇಳಬಹುದು? ಯೇಸು ಉದಾಹರಣೆ ಕೊಡ್ತಾ, ಫೊಯಿನಿಕೆ ಸ್ತ್ರೀಯನ್ನ ಒಂದು ನಾಯಿ ಮರಿಗೆ ಹೋಲಿಸಿದನು. ಅದನ್ನ ಕೇಳಿ ಆಕೆ ಕೋಪ ಮಾಡ್ಕೊಳ್ಳಲಿಲ್ಲ, ಬೇಜಾರೂ ಆಗ್ಲಿಲ್ಲ. ಒಂದುವೇಳೆ ಯೇಸು ಆ ಮಾತನ್ನ ಯೇಸು ನಿಮಗೆ ಹೇಳಿದ್ದಿದ್ರೆ, ಹೇಗೆ ಅನಿಸ್ತಿತ್ತು? ಕೋಪ ಮಾಡ್ಕೊಂಡು ‘ನೀವೂ ಬೇಡ, ನಿಮ್ಮ ಸಹಾಯನೂ ಬೇಡ’ ಅಂತ ಹೋಗಿಬಿಡ್ತಿದ್ರಾ? ಆದ್ರೆ ಆ ಸ್ತ್ರೀ ಆ ತರ ಮಾಡ್ಲಿಲ್ಲ. ಅವಳು ದೀನತೆ ಜೊತೆಗೆ ಛಲ ತೋರಿಸಿದಳು. ಯೇಸು ಹತ್ರ ಪದೇಪದೇ ಅದನ್ನೇ ಬೇಡ್ಕೊಂಡಳು. ಅವಳು ಯಾಕೆ ಆ ತರ ಕೇಳ್ತಾನೇ ಇದ್ದಳು? ಯಾಕಂದ್ರೆ ಅವಳಿಗೆ ಯೇಸು ಮೇಲೆ ಅಷ್ಟು ನಂಬಿಕೆ ಇತ್ತು. ಅವಳ ನಂಬಿಕೆ ನೋಡಿ ಆತನ ಮನ ಮುಟ್ತು. ಆಗ ಯೇಸು, ‘ದಾರಿತಪ್ಪಿದ ಕುರಿಗಳ ತರ ಇದ್ದ’ ಇಸ್ರಾಯೇಲ್ಯರಿಗೆ ಮಾತ್ರ ಸಹಾಯ ಮಾಡೋ ಮುಖ್ಯ ಕೆಲ್ಸ ಮಾಡ್ತಿದ್ದನು. ಆದ್ರೆ ಆಕೆ ತೋರಿಸಿದ ಈ ಗುಣಗಳನ್ನ ನೋಡಿ, ಯೇಸು ಒಂದು ಹೆಜ್ಜೆ ಮುಂದೆ ಹೋಗಿ ಆಕೆಗೆ ಸಹಾಯ ಮಾಡಿದ್ನು. ಕೆಟ್ಟ ದೂತನ ಕಾಟದಿಂದ ಆ ಸ್ತ್ರೀಯ ಮಗಳನ್ನ ಕಾಪಾಡಿದ್ನು.
ಸಹಾಯ ಪಡ್ಕೊಳ್ಳೋಕೆ ಫೊಯಿನಿಕೆ ಸ್ತ್ರೀ ದೀನತೆ, ಛಲ ಮತ್ತು ನಂಬಿಕೆ ತೋರಿಸಬೇಕಿತ್ತು (ಪ್ಯಾರ 5 ನೋಡಿ)
6. ಫೊಯಿನಿಕೆ ಸ್ತ್ರೀಯಿಂದ ನಾವೇನು ಕಲಿಬಹುದು?
6 ಯೆಹೋವನ ಮಾರ್ಗದರ್ಶನ ಪಡಿಬೇಕಂದ್ರೆ ನಾವೂ ಆ ಫೊಯಿನಿಕೆ ಸ್ತ್ರೀ ತರ ನಡ್ಕೊಬೇಕು. ಆಕೆ ತರ ದೀನತೆ, ಛಲ ಮತ್ತು ನಂಬಿಕೆ ತೋರಿಸಬೇಕು. ದೀನತೆ ಇರೋ ವ್ಯಕ್ತಿ ಮಾತ್ರ ಯೆಹೋವನ ಸಹಾಯಕ್ಕಾಗಿ ಬಿಡದೇ ಬೇಡ್ಕೊತಾನೆ. ನಾವು ಯೇಸುವಲ್ಲಿ ಬಲವಾದ ನಂಬಿಕೆನ ತೋರಿಸಬೇಕು ಮತ್ತು ನಮ್ಮನ್ನ ಮಾರ್ಗದರ್ಶಿಸೋಕೆ ಆತನು ಯಾರನ್ನ ಬಳಸ್ತಿದ್ದಾನೋ ಅವ್ರನ್ನೂ ನಂಬಬೇಕು. (ಮತ್ತಾ. 24:45-47) ಯಾರು ಇಂಥ ಗುಣಗಳನ್ನ ತೋರಿಸ್ತಾರೋ ಅವ್ರಿಗೆ ಯೆಹೋವ ಮತ್ತು ಯೇಸು ಸಹಾಯ ಮಾಡ್ತಾರೆ, ಮಾರ್ಗದರ್ಶಿಸ್ತಾರೆ. (ಯಾಕೋಬ 1:5-7 ಹೋಲಿಸಿ.) ಈಗ ಯೆಹೋವ ನಮಗೆ ಹೇಗೆ ಊಟ, ಬಟ್ಟೆ ಮತ್ತು ಇರೋಕೆ ಮನೆ ಕೊಡ್ತಾನೆ ಅಂತ ನೋಡೋಣ. ನಾವು ಈ ವಿಷ್ಯಗಳನ್ನ ಪಡ್ಕೊಳ್ಳೋಕೆ ಅಪೊಸ್ತಲ ಪೇತ್ರ, ಪೌಲ ಮತ್ತು ರಾಜ ದಾವೀದನ ತರ ಏನು ಮಾಡಬೇಕು ಅಂತಾನೂ ತಿಳ್ಕೊಳ್ಳೋಣ.
ಪೇತ್ರನ ತರ ಹಸಿವು ಬೆಳೆಸ್ಕೊಳ್ಳಿ
7. (ಎ) ಪೇತ್ರನಿಗೆ ಯಾವ ನೇಮಕ ಸಿಕ್ತು? (ಬಿ) ಪೇತ್ರ ಏನನ್ನ ಸಹ ಮಾಡಬೇಕಿತ್ತು? (ಇಬ್ರಿಯ 5:14–6:1)
7 ಯೇಸುನೇ ಮೆಸ್ಸೀಯ ಅಂತ ಮೊದ್ಲು ಕಂಡು ಹಿಡಿದವ್ರಲ್ಲಿ ಪೇತ್ರನೂ ಒಬ್ಬ. ‘ಜನ್ರಿಗೆ ಶಾಶ್ವತ ಜೀವ ಕೊಡೋ’ ವಿಷ್ಯಗಳನ್ನ ತಿಳಿಸೋಕೆ ಯೆಹೋವ, ಯೇಸುನ ಬಳಸಿದ್ದಾನೆ ಅಂತ ಅವನಿಗೆ ಗೊತ್ತಿತ್ತು. (ಯೋಹಾ. 6:66-68) ಯೇಸು ಸ್ವರ್ಗಕ್ಕೆ ಹೋಗೋ ಮುಂಚೆ “ನನ್ನ ಚಿಕ್ಕ ಕುರಿಗಳನ್ನ ಮೇಯಿಸು” ಅಂತ ಪೇತ್ರನಿಗೆ ಹೇಳಿದ್ದನು. (ಯೋಹಾ. 21:17) ಕೊಟ್ಟ ಆ ಕೆಲಸವನ್ನ ಪೇತ್ರ ಅಚ್ಚುಕಟ್ಟಾಗಿ ಮಾಡಿದ್ನು ಮತ್ತು ಬೈಬಲಿನಲ್ಲಿ ಎರಡು ಪತ್ರಗಳನ್ನ ಬರೆಯೋಕೆ ಯೆಹೋವ ಅವನನ್ನ ಬಳಸಿದನು. ಆದ್ರೂ ಪೇತ್ರ ತನ್ನ ಆಧ್ಯಾತ್ಮಿಕ ಹಸಿವನ್ನ ನೀಗಿಸೋಕೆ ಪ್ರಯತ್ನ ಮಾಡ್ತಾನೇ ಇರಬೇಕಿತ್ತು. ಉದಾಹರಣೆಗೆ, ಅಪೊಸ್ತಲ ಪೌಲ ಈಗಾಗ್ಲೇ ಬರೆದ ಪತ್ರಗಳನ್ನ ಪೇತ್ರ ಓದಿದ್ದ. ಅವುಗಳಲ್ಲಿ ಇರೋ ವಿಷಯಗಳು ‘ಅರ್ಥ ಮಾಡ್ಕೊಳ್ಳೋಕೆ ಸ್ವಲ್ಪ ಕಷ್ಟ’ ಅಂತ ಪೇತ್ರ ಒಪ್ಕೊಂಡ. (2 ಪೇತ್ರ 3:15, 16) ಆದ್ರೂ ಬಿಟ್ಟು ಬಿಡದೇ ಅವನ್ನ ಓದಿದ. ಈ ‘ಗಟ್ಟಿ ಆಹಾರನ’ ಅರ್ಥ ಮಾಡ್ಕೊಳ್ಳೋಕೆ ಮತ್ತು ಅದನ್ನ ಪಾಲಿಸೋಕೆ ಯೆಹೋವ ಸಹಾಯ ಮಾಡ್ತಾನೆ ಅಂತ ನಂಬಿದ್ದ.—ಇಬ್ರಿಯ 5:14–6:1 ಓದಿ.
8. ಯೆಹೋವನಿಂದ ಹೊಸ ಮಾರ್ಗದರ್ಶನ ಸಿಕ್ಕಾಗ ಪೇತ್ರ ಏನು ಮಾಡಿದ?
8 ಪೇತ್ರನಿಗೆ ಯೆಹೋವನ ಮೇಲೆ ಬಲವಾದ ನಂಬಿಕೆ ಇತ್ತು. ಅದಕ್ಕೇ ಯೆಹೋವನ ಮಾರ್ಗದರ್ಶನ ಪಾಲಿಸಿದನು. ಉದಾಹರಣೆಗೆ, ಯೊಪ್ಪದಲ್ಲಿ ಪೇತ್ರನಿಗೆ ಒಂದು ದರ್ಶನ ಬಂತು. ಅದ್ರಲ್ಲಿ ನಿಯಮ ಪುಸ್ತಕದಲ್ಲಿ ಯಾವ ಪ್ರಾಣಿಗಳು ಅಶುದ್ಧ ಅಂತ ಇತ್ತೋ, ಆ ಪ್ರಾಣಿಗಳನ್ನ ತಿನ್ನೋಕೆ ದೇವದೂತ ಪೇತ್ರನಿಗೆ ಹೇಳಿದ. ಪೇತ್ರ ಒಬ್ಬ ಯೆಹೂದಿ ವ್ಯಕ್ತಿ ಆಗಿದ್ರಿಂದ ಇದನ್ನ ಪಾಲಿಸೋಕೆ ಅವನಿಗೆ ಕಷ್ಟ ಆಯ್ತು. ಅದಕ್ಕೇ ಅವನು “ಬೇಡ ಪ್ರಭು. ನಾನು ತಿನ್ನಲ್ಲ. ನಿಯಮ ಪುಸ್ತಕದ ಪ್ರಕಾರ ಅಶುದ್ಧ ಆಗಿರೋದನ್ನ ಮತ್ತು ಅಪವಿತ್ರ ಆಗಿರೋದನ್ನ ನಾನು ಯಾವತ್ತೂ ತಿಂದಿಲ್ಲ” ಅಂತ ಹೇಳ್ತಾನೆ. ಆಗ ದೇವದೂತ, “ದೇವರು ಶುದ್ಧ ಮಾಡಿರೋದನ್ನ ನೀನು ಅಶುದ್ಧ ಅನ್ನೋದನ್ನ ನಿಲ್ಲಿಸು” ಅಂತ ಹೇಳಿದ. (ಅ. ಕಾ. 10:9-15) ಆಗ ಪೇತ್ರ ತನ್ನ ಯೋಚ್ನೆನ ಬದಲಾಯಿಸಿಕೊಂಡ. ಅದು ನಮಗೆ ಹೇಗೆ ಗೊತ್ತು? ಈ ದರ್ಶನ ಮುಗಿದ ಕೂಡ್ಲೇ ಕೊರ್ನೇಲ್ಯನ ಮೂರು ಸೇವಕರು ಪೇತ್ರನ ಹತ್ರ ಹೋಗಿ ‘ಕೊರ್ನೇಲ್ಯ ಕರಿತಿದ್ದಾನೆ, ನಮ್ಮ ಜೊತೆ ಬಾ’ ಅಂತ ಹೇಳಿದ್ರು. ಒಂದುವೇಳೆ ಪೇತ್ರನಿಗೆ ಈ ದರ್ಶನ ಬಂದಿರ್ಲಿಲ್ಲ ಅಂದಿದ್ರೆ, ಕೊರ್ನೇಲ್ಯನ ಮನೆಗೆ ಅವನು ಹೋಗ್ತಾನೇ ಇರಲಿಲ್ಲ ಅನ್ಸುತ್ತೆ. ಯಾಕಂದ್ರೆ ಕೊರ್ನೇಲ್ಯ ಬೇರೆ ಜನಾಂಗದವನಾಗಿದ್ದ. ಯೆಹೂದ್ಯರು ಅಂಥವ್ರನ್ನ ಅಪವಿತ್ರವಾಗಿ ನೋಡ್ತಿದ್ರು. (ಅ. ಕಾ. 10:28, 29) ಎಲ್ರೂ ತನ್ನನ್ನ ಆರಾಧಿಸಬೇಕು ಅನ್ನೋದು ಹೊಸ ಮಾರ್ಗದರ್ಶನ, ಇದು ಯೆಹೋವನ ಆಸೆ ಅಂತ ಪೇತ್ರ ಆಮೇಲೆ ಅರ್ಥ ಮಾಡಿಕೊಂಡನು. ಅದಕ್ಕೇ ಅವನು ತಕ್ಷಣ ತನ್ನ ಯೋಚನೆ ಬದಲಾಯಿಸಿಕೊಂಡನು. (ಜ್ಞಾನೋ. 4:18) ಪೇತ್ರ ಕೊರ್ನೇಲ್ಯನಿಗೆ ಸಾರಿದನು, ಅವನ ಇಡೀ ಕುಟಂಬ ಯೇಸು ಮೇಲೆ ನಂಬಿಕೆ ಇಟ್ರು, ಪವಿತ್ರಶಕ್ತಿ ಪಡ್ಕೊಂಡು ದೀಕ್ಷಾಸ್ನಾನ ತಗೊಂಡ್ರು.—ಅ. ಕಾ. 10:44-48.
9. ಅರ್ಥ ಮಾಡ್ಕೊಳ್ಳೋಕೆ ಕಷ್ಟ ಆಗಿರೋ ವಿಷ್ಯಗಳನ್ನ ಅಧ್ಯಯನ ಮಾಡಿದ್ರೆ ಯಾವ ಪ್ರಯೋಜನ ಸಿಗುತ್ತೆ?
9 ಪೇತ್ರನ ತರ ನಾವೂ ತಪ್ಪದೇ ಬೈಬಲನ್ನ ಓದಬೇಕು. ಸುಲಭವಾಗಿ ಅರ್ಥ ಆಗೋ ವಿಷ್ಯಗಳನ್ನ ನಾವು ಆಗಾಗ ಓದ್ತಾ ಇರ್ತೀವಿ. ಆದ್ರೆ ಅದ್ರ ಜೊತೆಗೆ ಅರ್ಥ ಮಾಡ್ಕೊಳ್ಳೋಕೆ ಕಷ್ಟವಾದ ವಿಷ್ಯಗಳನ್ನೂ ಅಧ್ಯಯನ ಮಾಡಬೇಕು. ಇಂಥ ವಿಷ್ಯಗಳನ್ನ ಅರ್ಥ ಮಾಡ್ಕೊಳ್ಳೋಕೆ ನಮಗೆ ಕಷ್ಟ ಆಗುತ್ತೆ. ಆದ್ರೂ ಅದಕ್ಕಾಗಿ ನಾವು ಸಮಯ ಮಾಡ್ಕೊಬೇಕು. ಯಾಕೆ? ಒಂದು ಕಾರಣ, ಈ ತರ ಓದಿದ್ರೆ ನಮಗೆ ಯೆಹೋವನ ಮೇಲೆ ಇರೋ ಪ್ರೀತಿ ಮತ್ತು ಗೌರವ ಜಾಸ್ತಿ ಆಗುತ್ತೆ. ಎರಡನೇ ಕಾರಣ, ಯೆಹೋವನ ಸೊಗಸಾದ ಗುಣಗಳ ಬಗ್ಗೆ ಬೇರೆಯವ್ರಿಗೆ ಹೇಳೋಕೆ ನಮ್ಮ ಮನಸ್ಸು ತುಡಿಯುತ್ತೆ. (ರೋಮ. 11:33; ಪ್ರಕ. 4:11) ಪೇತ್ರನಿಂದ ನಾವು ಇನ್ನೊಂದು ಪಾಠನೂ ಕಲಿಬಹುದು. ಬೈಬಲಲ್ಲಿರೋ ವಿಷ್ಯಗಳ ಬಗ್ಗೆ ಏನಾದ್ರೂ ಹೊಸ ತಿಳುವಳಿಕೆ ಬಂದ್ರೆ ಅದನ್ನ ತಕ್ಷಣ ಅರ್ಥ ಮಾಡ್ಕೊಂಡು ಪಾಲಿಸಬೇಕು. ಆಗ ಮಾತ್ರ ನಾವು ಯೆಹೋವನ ಮಾರ್ಗದರ್ಶನ ಪಡೆಯೋಕೆ ಮತ್ತು ಆತನ ಸೇವೆನ ನಿಯತ್ತಾಗಿ ಮಾಡೋಕೆ ಆಗುತ್ತೆ.
ಪೌಲನ ತರ ಹೊಸ ವ್ಯಕ್ತಿತ್ವ ಹಾಕ್ಕೊಳ್ಳಿ
10. ಯೆಹೋವನನ್ನ ನಾವು ಖುಷಿಪಡಿಸಬೇಕು ಅಂದ್ರೆ ಏನು ಮಾಡಬೇಕು? (ಕೊಲೊಸ್ಸೆ 3:8-10)
10 ಯೆಹೋವನನ್ನ ನಾವು ಖುಷಿಪಡಿಸಬೇಕಂದ್ರೆ ಹೊಸ ವ್ಯಕ್ತಿತ್ವ ಅನ್ನೋ ಬಟ್ಟೆ ಹಾಕ್ಕೊಬೇಕು. ಅದ್ರ ಅರ್ಥ ಏನು? ಅಪೊಸ್ತಲ ಪೌಲ “ಹಳೇ ವ್ಯಕ್ತಿತ್ವವನ್ನ” ಅಥವಾ ನಮ್ಮ ಕೆಟ್ಟ ಗುಣಗಳನ್ನ ಬಟ್ಟೆ ತರ ತೆಗೆದು ಹಾಕಿ, ದೇವರು ಕೊಡೋ “ಹೊಸ ವ್ಯಕ್ತಿತ್ವ ಹಾಕ್ಕೊಳ್ಳಿ” ಅಂತ ಹೇಳಿದ್ದಾನೆ. (ಕೊಲೊಸ್ಸೆ 3:8-10 ಓದಿ.) ಹೊಸ ವ್ಯಕ್ತಿತ್ವನ ಹಾಕ್ಕೊಳ್ಳೋದು ಅಷ್ಟು ಸುಲಭ ಅಲ್ಲ. ಅದಕ್ಕೆ ಸಮಯ ಮತ್ತು ಪ್ರಯತ್ನ ಬೇಕು. ಪೌಲ ದೇವರನ್ನ ಖುಷಿ ಪಡಿಸೋಕೆ ಚಿಕ್ಕ ವಯಸ್ಸಿಂದನೇ ತುಂಬ ಪ್ರಯತ್ನ ಹಾಕಿದ್ದ. (ಗಲಾ. 1:14; ಫಿಲಿ. 3:4, 5) ಆದ್ರೆ ದೇವರನ್ನ ಹೇಗೆ ಸರಿಯಾಗಿ ಆರಾಧಿಸೋದು ಅಂತ ಆಗ ಅವನಿಗೆ ಗೊತ್ತಿರಲಿಲ್ಲ. ಯೇಸುವಿನ ಬೋಧನೆಗಳನ್ನ ಅವನು ತಿರಸ್ಕರಿಸಿದ, ಅವನು ಅಹಂಕಾರಿಯಾಗಿದ್ದ. ಅದಕ್ಕೇ ಅವನು ದೇವರಿಗೆ ಇಷ್ಟ ಆಗೋ ರೀತಿಯಲ್ಲಿ ನಡ್ಕೊಳ್ಳಲಿಲ್ಲ. ಹಾಗಾಗಿ ಪೌಲ, ನಾನು “ದುರಹಂಕಾರಿ ಆಗಿದ್ದೆ” ಅಂತ ಒಪ್ಕೊಂಡ.—1 ತಿಮೊ. 1:13.
11. ಪೌಲ ಯಾವ ಬದಲಾವಣೆ ಮಾಡ್ಕೊಬೇಕಿತ್ತು? ವಿವರಿಸಿ.
11 ಕ್ರೈಸ್ತನಾಗೋ ಮುಂಚೆ ಪೌಲ ತುಂಬ ಕೋಪಿಷ್ಟನಾಗಿದ್ದ. ಯೇಸುವಿನ ಶಿಷ್ಯರನ್ನ ನೋಡಿ ಅವನು “ಕೋಪದಿಂದ ಕುದಿತಾ ಇದ್ದ. ಅವ್ರನ್ನ ಸಾಯಿಸಿಬಿಡೋ ಬೆದರಿಕೆ ಹಾಕಿದ” ಅಂತ ಒಂದು ಘಟನೆ ಹೇಳುತ್ತೆ. (ಅ. ಕಾ. 9:1) ಕ್ರೈಸ್ತನಾದ ಮೇಲೆ ಪೌಲ ತನ್ನ ಹಳೇ ವ್ಯಕ್ತಿತ್ವನ ತೆಗೆದು ಹಾಕೋಕೆ ತುಂಬ ಪ್ರಯತ್ನ ಹಾಕಿದ. (ಎಫೆ. 4:22, 31) ಪೌಲ ಮತ್ತು ಬಾರ್ನಬರ ಮಧ್ಯೆ ಮಾತಿಗೆ ಮಾತು ಬೆಳೆದು ಒಂದು “ದೊಡ್ಡ ಜಗಳ” ಆಯ್ತು. (ಅ. ಕಾ. 15:37-39) ಆಗ ಪೌಲ ಅವನ ಮೇಲೆ ಕೋಪ ಮಾಡ್ಕೊಂಡ. ಹೀಗೆ ಯೆಹೋವನಿಗೆ ಇಷ್ಟ ಆಗೋ ರೀತಿಯಲ್ಲಿ ಅವನು ಮತ್ತೆ ನಡ್ಕೊಳ್ಳಲಿಲ್ಲ. ಆದ್ರೂ ಅವನು ‘ತನ್ನ ದೇಹನ ಜಜ್ಜಿ ಜಜ್ಜಿ ದಾಸನ ತರ ಮಾಡ್ಕೊಂಡು’ ಅಪರಿಪೂರ್ಣತೆಯ ವಿರುದ್ಧ ಹೋರಾಡಿದ. ಹೀಗೆ ಅವನು ಯೆಹೋವನಿಗೆ ಇಷ್ಟ ಆಗೋ ರೀತಿಯಲ್ಲಿ ಜೀವಿಸೋಕೆ ಪ್ರಯತ್ನ ಹಾಕಿದ.—1 ಕೊರಿಂ. 9:27.
12. ತನ್ನ ಹಳೇ ವ್ಯಕ್ತಿತ್ವನ ತೆಗೆದು ಹಾಕೋಕೆ ಪೌಲನಿಗೆ ಯಾವುದು ಸಹಾಯ ಮಾಡ್ತು?
12 ಪೌಲನಲ್ಲಿ ದೀನತೆ ಇತ್ತು ಮತ್ತು ಅವನು ಯೆಹೋವನ ಮೇಲೆ ಆತ್ಕೊಂಡ. ಅದಕ್ಕೇ ತನ್ನ ಹಳೇ ವ್ಯಕ್ತಿತ್ವ ತೆಗೆದುಹಾಕಿ ಹೊಸ ವ್ಯಕ್ತಿತ್ವನ ಬಟ್ಟೆ ತರ ಹಾಕ್ಕೊಂಡ. (ಫಿಲಿ. 4:13) ಪೇತ್ರನಂತೆ ಪೌಲ ‘ದೇವರ ಶಕ್ತಿ ಮೇಲೆ ಹೊಂದ್ಕೊಂಡ.’ (1 ಪೇತ್ರ 4:11) ಪೌಲ ಕೆಲವೊಂದು ಸಾರಿ ತಪ್ಪು ಮಾಡಿದ, ಆಗ ಅವನಿಗೆ ಬೇಜಾರಾಯ್ತು. ಆದ್ರೂ ಯೆಹೋವ ತನಗೋಸ್ಕರ ಏನೆಲ್ಲಾ ಮಾಡಿದ್ನೋ, ಅದಕ್ಕೆ ನಾನು ಹೇಗೆಲ್ಲ ಕೃತಜ್ಞತೆ ತೋರಿಸಬೇಕು ಅಂತ ಯೋಚನೆ ಮಾಡಿದ. ಬದಲಾವಣೆ ಮಾಡ್ಕೊಳ್ಳೋಕೆ ಪ್ರಯತ್ನ ಹಾಕಿದ.—ರೋಮ. 7:21-25.
13. ಪೌಲನನ್ನ ನಾವು ಹೇಗೆ ಅನುಕರಿಸಬಹುದು?
13 ನಾವು ಎಷ್ಟೇ ವರ್ಷ ಸತ್ಯದಲ್ಲಿದ್ರೂ ಹಳೇ ವ್ಯಕ್ತಿತ್ವನ ತೆಗೆದು ಹಾಕ್ತಾ ಇರಬೇಕು, ಹೊಸದನ್ನ ಹಾಕ್ಕೊಳ್ತಾ ಇರಬೇಕು. ಆಗ ನಾವು ಪೌಲನ ತರ ಇರೋಕೆ ಆಗುತ್ತೆ. ನಾವೆಲ್ರೂ ತಪ್ಪು ಮಾಡ್ತೀವಿ. ಉದಾಹರಣೆಗೆ, ನಾವು ‘ಕೋಪ ಮಾಡ್ಕೊಬಹುದು ಅಥವಾ ಬೇರೆಯವ್ರ ಮನಸ್ಸನ್ನ ನೋವು ಮಾಡಬಹುದು. ಹಾಗಂತ ಯೆಹೋವನ ಮನಸ್ಸನ್ನ ನಾವು ಖುಷಿ ಪಡಿಸೋಕೆ ಆಗೋದೇ ಇಲ್ಲ’ ಅಂತ ಅಂದ್ಕೊಬಾರದು. ಅದ್ರ ಬದ್ಲಿಗೆ ನಮ್ಮ ಯೋಚನೆ ಮತ್ತು ನಮ್ಮ ನಡತೆನ ಬದಲಾಯಿಸ್ಕೊಳ್ಳೋಕೆ ಪ್ರಯತ್ನ ಮಾಡ್ತಾನೇ ಇರಬೇಕು. (ರೋಮ. 12:1, 2; ಎಫೆ. 4:24) ನಮ್ಮ ಬಟ್ಟೆ ಲೂಸ್ ಇದ್ರೆ ನಮ್ಮ ಅಳತೆಗೆ ತಕ್ಕಂತೆ ಆ ಬಟ್ಟೆನ ಅಡ್ಜಸ್ಟ್ ಮಾಡಿಸ್ತೀವಿ ಅಲ್ವಾ? ಆದ್ರೆ ಹೊಸ ವ್ಯಕ್ತಿತ್ವ ಅನ್ನೋ ಬಟ್ಟೆ ಲೂಸ್ ಇದ್ರೆ, ನಾವು ಅದನ್ನ ಅಡ್ಜಸ್ಟ್ ಮಾಡಬಾರದು, ನಮ್ಮನ್ನ ಅದಕ್ಕೆ ಅಡ್ಜಸ್ಟ್ ಮಾಡ್ಕೊಬೇಕು. ಇದನ್ನ ಹೇಗೆ ಮಾಡೋದು? ಯೆಹೋವನ ಯೋಚನೆ ಏನು ಅಂತ ಗೊತ್ತಾದ ಮೇಲೆ ಅದಕ್ಕೆ ತಕ್ಕಂತೆ ನಮ್ಮ ಯೋಚನೆನ ಹೊಂದಿಸ್ಕೊಬೇಕು.
ದಾವೀದನ ತರ ಯೆಹೋವನ ಆಶ್ರಯ ಪಡೀರಿ
14-15. ಯೆಹೋವ ತನ್ನ ಜನ್ರನ್ನ ಹೇಗೆಲ್ಲಾ ಕಾಪಾಡ್ತಿದ್ದಾನೆ? (ಕೀರ್ತನೆ 27:5) (ಚಿತ್ರ ನೋಡಿ.)
14 ನಾವು ಖುಷಿಯಾಗಿ ಇರೋಕೆ ಯೆಹೋವನು ಕೊಡೋ ಊಟ, ಬಟ್ಟೆ ಮಾತ್ರ ಇದ್ರೆ ಸಾಕಾಗಲ್ಲ. ನಮಗೆ ಆತನು ಕೊಡೋ ಆಶ್ರಯನೂ ಬೇಕು. ಯಾವುದು ಈ ಆಶ್ರಯ? ಇದನ್ನ ಪಡಿಬೇಕಂದ್ರೆ ನಾವೇನು ಮಾಡಬೇಕು ಅಂತ ನೋಡೋಣ.
15 ಕಷ್ಟದ ಸಮಯದಲ್ಲಿ ಯೆಹೋವನು ತನ್ನನ್ನ ಕಾಪಾಡೇ ಕಾಪಾಡ್ತಾನೆ ಅನ್ನೋ ನಂಬಿಕೆ ರಾಜ ದಾವೀದನಿಗಿತ್ತು. (ಕೀರ್ತನೆ 27:5 ಓದಿ.) ನಮಗೆ ಯೆಹೋವನ ಮೇಲಿರೋ ನಂಬಿಕೆನ ಯಾವುದೇ ವ್ಯಕ್ತಿ ಆಗ್ಲಿ, ಯಾವುದೇ ವಿಷ್ಯ ಆಗ್ಲಿ ಸಂಪೂರ್ಣವಾಗಿ ಹಾಳು ಮಾಡೋಕೆ ಆತನು ಯಾವತ್ತೂ ಬಿಟ್ಟು ಕೊಡಲ್ಲ. ಹಾಗಾದ್ರೆ ಇವತ್ತು ತನ್ನ ಜನ್ರನ್ನ ಯೆಹೋವ ಹೇಗೆ ಕಾಪಾಡ್ತಾನೆ? ಆತನ ಜೊತೆ ನಮಗಿರೋ ಸ್ನೇಹನ, ನಾವು ಕೊಡೋ ಆರಾಧನೆನ ನಿಲ್ಲಿಸೋ ತರ ಮಾಡೋಕೆ ಯೆಹೋವ ಬಿಟ್ಟು ಕೊಡಲ್ಲ. (ಕೀರ್ತ. 34:7; ಯೆಶಾ. 54:17) ಸೈತಾನನಿಗೆ, ಅವನ ದೂತರಿಗೆ ಮತ್ತು ನಮ್ಮನ್ನ ವಿರೋಧಿಸೋ ಜನ್ರಿಗೆ ನಮಗಿಂತ ತುಂಬ ಶಕ್ತಿ ಇದೆ. (1 ಕೊರಿಂ. 15:55-57; ಪ್ರಕ. 21:3, 4) ಆದ್ರೆ ಅವ್ರಿಗೆ ಯೆಹೋವನ ಮುಂದೆ ಎಷ್ಟು ಶಕ್ತಿ ಇದೆ ಅಂತ ಯೋಚಿಸಿ. ಆತನ ಮುಂದೆ ಅವ್ರೆಲ್ಲ ಧೂಳಿಗೆ ಸಮ! ಒಂದುವೇಳೆ ಅವರು ನಮ್ಮ ಜೀವ ತೆಗೆದ್ರೂ ಯೆಹೋವ ನಮ್ಮನ್ನ ಮತ್ತೆ ಜೀವಂತ ಎಬ್ಬಿಸ್ತಾನೆ. (ಜ್ಞಾನೋ. 12:25; ಮತ್ತಾ. 6:27-29) ನಮ್ಮೊಳಗಿರೋ ಆತಂಕ, ಚಿಂತೆ ಕೆಲವೊಮ್ಮೆ ಯೆಹೋವನನ್ನ ಆರಾಧನೆ ಮಾಡದಂತೆ ನಮ್ಮನ್ನ ತಡೀತಿರಬಹುದು. ಆಗ್ಲೂ ಯೆಹೋವ ನಮ್ಮನ್ನ ಕಾಪಾಡ್ತಾನೆ. ಆತನು ನಮಗೆ ಒಂದು ದೊಡ್ಡ ಕುಟುಂಬ ಕೊಟ್ಟಿದ್ದಾನೆ, ಅದ್ರಲ್ಲಿ ನಮ್ಮನ್ನ ಪ್ರೀತಿಸೋ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರೆಲ್ಲ ಇದ್ದಾರೆ. (ಯೆಶಾ. 32:1, 2) ಅದ್ರ ಜೊತೆಗೆ ನಮ್ಮ ನಂಬಿಕೆಯನ್ನ ಬಲಪಡಿಸೋ, ಪ್ರೋತ್ಸಾಹಿಸೋ ಹಿರಿಯರನ್ನೂ ಕೊಟ್ಟಿದ್ದಾನೆ. ಅಷ್ಟೇ ಅಲ್ಲ, ಕೂಟಗಳಿಗೆ ಹೋದಾಗ ತಾನು ಕೊಡೋ ರಕ್ಷಣೆ ಪಡೆಯೋಕೆ ಏನು ಮಾಡಬೇಕು ಅಂತ ಆಗಾಗ ನೆನಪಿಸ್ತಾ ಇರ್ತಾನೆ.—ಇಬ್ರಿ. 10:24, 25.
ಒಬ್ಬ ಸಹೋದರಿ ಕೂಟಗಳಿಗೆ ಹಾಜರಾಗಿ ದೇವರ ಮಾರ್ಗದರ್ಶನ ಪಡೀತಿದ್ದಾಳೆ (ಪ್ಯಾರ 14-15 ನೋಡಿ)
16. ಯೆಹೋವ ದಾವೀದನನ್ನ ಹೇಗೆಲ್ಲಾ ಕಾಪಾಡಿದನು?
16 ದಾವೀದ ಯೆಹೋವನ ಮಾತು ಕೇಳಿದಾಗ ಸರಿಯಾದ ನಿರ್ಣಯಗಳನ್ನ ಮಾಡಿದ್ನು. ಅದಕ್ಕೇ ಅವನು ಜೀವನದಲ್ಲಿ ಖುಷಿಯಾಗಿ ಇದ್ದನು. (ಜ್ಞಾನೋಕ್ತಿ 5:1, 2 ಹೋಲಿಸಿ.) ಆದ್ರೆ ಅವನು ತನ್ನ ಮಾತು ಕೇಳದೇ ತಪ್ಪಾದ ನಿರ್ಣಯಗಳನ್ನ ಮಾಡಿದಾಗ ಅದ್ರಿಂದ ಆದ ಕೆಟ್ಟ ಪರಿಣಾಮಗಳಿಂದ ಅವನನ್ನ ಯೆಹೋವ ಕಾಪಾಡಲಿಲ್ಲ. (2 ಸಮು. 12:9, 10) ಕೆಲವೊಂದು ಸಾರಿ ಇವನೇನೂ ತಪ್ಪು ಮಾಡ್ಲಿಲ್ಲ, ಆಗ್ಲೂ ಬೇರೆಯವರು ಇವನಿಗೆ ಮೋಸ ಮಾಡಿದ್ರು, ಕಷ್ಟ ಕೊಟ್ರು. ಆಗೆಲ್ಲ ಅವನು ಪ್ರಾರ್ಥನೆಲಿ ತನ್ನ ದುಃಖನ ಯೆಹೋವನ ಹತ್ರ ಹೇಳ್ಕೊಂಡ. ಆಗ ಯೆಹೋವ ದೇವರು, ‘ನಾನು ನಿನ್ನ ಪ್ರೀತಿಸ್ತೀನಿ, ನಾನು ನಿನಗೆ ಸಹಾಯ ಮಾಡ್ತೀನಿ’ ಅಂತ ಭರವಸೆ ತುಂಬಿದನು. ಆಮೇಲೆ ಅವನಲ್ಲಿದ್ದ ಚಿಂತೆನೆಲ್ಲಾ ತೆಗೆದು ಹಾಕಿದನು.—ಕೀರ್ತ. 23:1-6.
17. ನಾವು ದಾವೀದನನ್ನ ಹೇಗೆ ಅನುಕರಿಸಬಹುದು?
17 ನಾವು ದಾವೀದನ ತರ ಇರಬೇಕು. ನಾವು ಯಾವುದೇ ನಿರ್ಣಯ ಮಾಡೋ ಮುಂಚೆ ಯೆಹೋವನ ಮಾರ್ಗದರ್ಶನ ಏನಂತ ಪ್ರಾರ್ಥನೆಲಿ ಕೇಳಬೇಕು. ಅಕಸ್ಮಾತಾಗಿ ನಮಗೆ ಕಷ್ಟಗಳು ಬಂದ್ರೆ ಏನು ಅರ್ಥ? ಯೆಹೋವ ನಮ್ಮ ಕೈ ಬಿಟ್ಟಿದ್ದಾನೆ ಅಂತ ಅದ್ರ ಅರ್ಥ ಅಲ್ಲ! ನಾವು ತಪ್ಪಾದ ನಿರ್ಧಾರಗಳು ಮಾಡಿದ್ರಿಂದ ಈ ಪರಿಸ್ಥಿತಿ ಬಂದಿದೆ ಅಂತ ತಿಳ್ಕೊಬೇಕು. (ಗಲಾ. 6:7, 8) ಆದ್ರೆ ಕೆಲವೊಮ್ಮೆ ನಾವು ಯೆಹೋವನ ಮಾತು ಕೇಳಿದ್ರೂ ನಮಗೆ ಕಷ್ಟಗಳು ಬರಬಹುದು. ಆಗ ನಮ್ಮ ನೋವನ್ನೆಲ್ಲಾ ಯೆಹೋವನ ಹತ್ರ ಹೇಳ್ಕೊಬೇಕು. ಹೀಗೆ ಮಾಡಿದ್ರೆ ನಮ್ಮ ಹೃದಯನ, ನಮ್ಮ ಯೋಚ್ನೆನ ಕಾಪಾಡ್ತೀನಿ ಅಂತ ಆತನು ನಮಗೆ ಮಾತು ಕೊಟ್ಟಿದ್ದಾನೆ.—ಫಿಲಿ. 4:6, 7.
ಯೆಹೋವನ ಮಾರ್ಗದರ್ಶನ ಪಡ್ಕೊಳ್ತಾನೆ ಇರಿ
18. (ಎ) ನಮಗೆ ಯಾವ ಅಪಾಯ ಇದೆ? (ಬಿ) ಯೆಹೋವನ ಮಾರ್ಗದರ್ಶನ ಬೇಕಂದ್ರೆ ನಾವೇನು ಮಾಡಬೇಕು? (ಚಿತ್ರ ನೋಡಿ.)
18 2026ರ ವರ್ಷವಚನ: “ದೇವರ ಮಾರ್ಗದರ್ಶನ ಬೇಕಂತ ಅರ್ಥ ಮಾಡ್ಕೊಳ್ಳುವವರು ಖುಷಿಯಾಗಿ ಇರ್ತಾರೆ” ಅಂತ. ಬದುಕೋಕೆ ಮೀನಿಗೆ ನೀರು ಎಷ್ಟು ಮುಖ್ಯನೋ ಈ ದಿನಗಳಲ್ಲಿ ನಮಗೆ ದೇವರ ಮಾರ್ಗದರ್ಶನನೂ ಅಷ್ಟೇ ಮುಖ್ಯ. ಆದ್ರೆ ನಮ್ಮ ಸುತ್ತಲೂ ಇರೋ ಜನ ‘ನಮಗೆ ದೇವರು ಬೇಡ, ಆತನ ಮಾರ್ಗದರ್ಶನನೂ ಬೇಡ’ ಅಂತಾರೆ. ಇನ್ನು ಕೆಲವರು ದೇವರನ್ನ ನಂಬ್ತಾರೆ, ಆದ್ರೆ ಆತನನ್ನ ತಮಗೆ ಇಷ್ಟ ಬಂದಂತೆ ಆರಾಧಿಸ್ತಾರೆ. ಬೇರೆ ಕೆಲವರು ಶಿಕ್ಷಣನ, ಜನರು ಹೇಳೋ ಮಾತುಗಳನ್ನ ನಂಬ್ಕೊಂಡು ಜೀವನ ಮಾಡ್ತಿದ್ದಾರೆ. ಇಂಥವ್ರ ಮಧ್ಯೆನೇ ನಾವು ಜೀವನ ಮಾಡ್ತಾ ಇದ್ದೀವಿ. ಹುಷಾರಾಗಿ ಇಲ್ಲ ಅಂದ್ರೆ ನಾವೂ ಇವರ ತರಾನೇ ಆಗಿ ಬಿಡೋ ಅಪಾಯ ಇದೆ. ಹಾಗಾದ್ರೆ ನಾವೇನು ಮಾಡಬೇಕು? ಬೈಬಲನ್ನ ಚೆನ್ನಾಗಿ ಓದಿ ಧ್ಯಾನಿಸಬೇಕು. ಕಲ್ತಿರೋದನ್ನ ಪಾಲಿಸಿ ಒಳ್ಳೊಳ್ಳೆ ಗುಣಗಳನ್ನ ತೋರಿಸಬೇಕು. ಯೆಹೋವನ ಮಾತನ್ನ ಕೇಳಬೇಕು. ಆಗ ಯೆಹೋವ ನಮ್ಮನ್ನ ಕಾಪಾಡೇ ಕಾಪಾಡ್ತಾನೆ.
ನಮಗೆ ಆಧ್ಯಾತ್ಮಿಕ ಊಟ, ಬಟ್ಟೆ ಮತ್ತು ಆಶ್ರಯದ ಅಗತ್ಯ ಇದೆ. ಇದನ್ನ ನಾವು ಪಡ್ಕೊತಾ ಇರಬೇಕು (ಪ್ಯಾರ 18 ನೋಡಿ)a
ಗೀತೆ 162 ಆಧ್ಯಾತ್ಮಿಕ ಆರೋಗ್ಯ ಅಗತ್ಯ
a ಮುಖಪುಟ ಚಿತ್ರದ ವಿವರಣೆ: ಚಿತ್ರದಲ್ಲಿದ್ದ ಅದೇ ಸಹೋದರಿ ದೇವರು ಕೊಡೋ ಊಟನ ಪಡೆಯೋಕೆ ಕಾವಲಿನಬುರುಜು ಅಧ್ಯಯನ ಮಾಡ್ತಿದ್ದಾಳೆ, ಹೊಸ ವ್ಯಕ್ತಿತ್ವದ ಬಟ್ಟೆ ಹಾಕ್ಕೊಂಡು ಬೇರೆಯವ್ರಿಗೆ ದಯೆ ತೋರಿಸ್ತಿದ್ದಾಳೆ ಮತ್ತು ಪ್ರೀತಿ ತೋರಿಸೋ ಹಿರಿಯರ ಹತ್ರ ಸಹಾಯ ಪಡ್ಕೊಳ್ತಿದ್ದಾಳೆ.