Thai Liang Lim/E+ via Getty Images
ಸದಾ ಎಚ್ಚರವಾಗಿರಿ!
ಸೋಶಿಯಲ್ ಮೀಡಿಯಾ ಮತ್ತು ಯುವಜನರ ಬಗ್ಗೆ ಇಡೀ ಪ್ರಪಂಚಕ್ಕಿರೋ ಚಿಂತೆ
2025ರಲ್ಲಿ ಪ್ರಪಂಚದಲ್ಲಿರೋ ಎಷ್ಟೋ ಸರ್ಕಾರದವರು ಸೋಶಿಯಲ್ ಮೀಡಿಯಾ ಯುವಜನರ ಮೇಲೆ ಕೆಟ್ಟ ಪ್ರಭಾವ ಬೀರುತ್ತಿದೆ ಅಂತ ತಮ್ಮ ಚಿಂತೆನ ಹೇಳ್ಕೊಂಡಿದ್ದಾರೆ. ಅದಕ್ಕೆ ಒಂದು ದೇಶ, 16 ವರ್ಷಕ್ಕಿಂತ ಕಮ್ಮಿ ವಯಸ್ಸಿನವರು ಸೋಶಿಯಲ್ ಮೀಡಿಯಾನ ಉಪಯೋಗಿಸಬಾರದು ಅಂತ ನಿರ್ಬಂಧ ಹಾಕಿದೆ. ಬೇರೆ ದೇಶದವರು, ಇದೇ ತರದ ಹೆಜ್ಜೆ ತಗೊಬೇಕು ಅಂತ ಯೋಚ್ನೆ ಮಾಡ್ತಿದ್ದಾರೆ.
ಆಸಕ್ತಿಕರ ವಿಷ್ಯ ಏನಂದ್ರೆ, ಸೋಶಿಯಲ್ ಮೀಡಿಯಾದಿಂದ ತಮಗೆ ಅಪಾಯ ಆಗುತ್ತೆ ಅಂತ ಹದಿವಯಸ್ಕರಿಗೂ ಗೊತ್ತಿದೆ. ಏಪ್ರಿಲ್ 2025ರಲ್ಲಿ ಪ್ಯೂ ರಿಸರ್ಚ್ ಸೆಂಟರ್ನವರು ಅಮೆರಿಕಾದಲ್ಲಿ ನಡೆಸಿದ ಒಂದು ಸಮೀಕ್ಷೆನ ಬಿಡುಗಡೆ ಮಾಡಿದ್ರು. ಆ ಸಮೀಕ್ಷೆಯಲ್ಲಿ ಹೀಗಿತ್ತು: “ಹೆಚ್ಚು-ಕಮ್ಮಿ ಅರ್ಧದಷ್ಟು ಹದಿವಯಸ್ಕರು (48%), [ಸೋಶಿಯಲ್ ಮೀಡಿಯಾ] ಸೈಟ್ಗಳು ತಮ್ಮ ವಯಸ್ಸಿನವ್ರ ಮೇಲೆ ಹೆಚ್ಚಾಗಿ ಕೆಟ್ಟ ಪ್ರಭಾವನೇ ಬೀರುತ್ತಿದೆ ಅಂತ ಹೇಳಿದ್ದಾರೆ.”
ಸೋಶಿಯಲ್ ಮೀಡಿಯಾ ಯುವಜನರ ಮಾನಸಿಕ ಆರೋಗ್ಯನ ಹಾಳು ಮಾಡ್ತಿದೆ ಅಂತ ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಅಮೆರಿಕದ ಜನರಲ್ ಸರ್ಜನ್ ಆಗಿದ್ದ ಡಾ. ವಿವೇಕ್ ಮೂರ್ತಿಯವರು ಹೋದ ವರ್ಷ ಇದ್ರ ಬಗ್ಗೆ, “ಯುವಜನರ ಮಾನಸಿಕ ಆರೋಗ್ಯ ತುಂಬ ಹಾಳಾಗ್ತಿದೆ, ಇದಕ್ಕೆ ಮುಖ್ಯ ಕಾರಣ ಸೋಶಿಯಲ್ ಮೀಡಿಯಾನೇ” ಅಂತ ಹೇಳಿದ್ರು.
ಸೋಶಿಯಲ್ ಮೀಡಿಯಾದಿಂದ ಬರೋ ಅಪಾಯದಿಂದ ಅಪ್ಪ-ಅಮ್ಮ ತಮ್ಮ ಮಕ್ಕಳನ್ನ ಹೇಗೆ ಕಾಪಾಡಬಹುದು? ಇದಕ್ಕೆ ಒಳ್ಳೊಳ್ಳೆ ಸಲಹೆಗಳು ಬೈಬಲಲ್ಲಿದೆ.
ಅಪ್ಪ-ಅಮ್ಮ ಏನು ಮಾಡಬಹುದು?
ಬೈಬಲಲ್ಲಿರೋ ಈ ತತ್ವಗಳನ್ನ ನೋಡಿ.
“ಜಾಣ ಪ್ರತಿ ಹೆಜ್ಜೆಯನ್ನ ಚೆನ್ನಾಗಿ ಯೋಚ್ನೆ ಮಾಡಿ ಇಡ್ತಾನೆ.”—ಜ್ಞಾನೋಕ್ತಿ 14:15.
ಸೋಶಿಯಲ್ ಮೀಡಿಯಾದಿಂದ ಅಪಾಯಗಳು ಇದೆ. ಹಾಗಾಗಿ ಬೇರೆ ಮಕ್ಕಳು ಸೋಶಿಯಲ್ ಮೀಡಿಯಾ ಉಪಯೋಗಿಸ್ತಿದ್ದಾರೆ ಅನ್ನೋ ಒಂದೇ ಕಾರಣಕ್ಕೆ ನಿಮ್ಮ ಮಕ್ಕಳೂ ಉಪಯೋಗಿಸೋಕೆ ಬಿಟ್ಟುಬಿಡಬೇಡಿ. ಸೋಶಿಯಲ್ ಮೀಡಿಯಾ ಉಪಯೋಗಿಸೋಕೆ ನಿಮ್ಮ ಮಕ್ಕಳಿಗೆ ಅನುಮತಿ ಕೊಡೋ ಮುಂಚೆ ಈ ವಿಷ್ಯಗಳ ಬಗ್ಗೆ ಯೋಚ್ನೆ ಮಾಡಿ: ನೀವು ಹೇಳಿದಷ್ಟೇ ಸಮಯ ಸೋಶಿಯಲ್ ಮೀಡಿಯಾನ ಉಪಯೋಗಿಸೋಕೆ, ಒಳ್ಳೇ ಸ್ನೇಹಿತರನ್ನ ಮಾಡ್ಕೊಳ್ಳೋಕೆ ಮತ್ತು ಕೆಟ್ಟ ವಿಷ್ಯಗಳಿಂದ ದೂರ ಇರೋಕೆ ನಿಮ್ಮ ಮಕ್ಕಳು ಕಲ್ತಿದ್ದಾರಾ, ಅಷ್ಟು ಪ್ರೌಢತೆ ಅವ್ರಿಗೆ ಇದ್ಯಾ ಅಂತ ಯೋಚ್ನೆ ಮಾಡಿ.
ಇದ್ರ ಬಗ್ಗೆ ಜಾಸ್ತಿ ತಿಳ್ಕೊಳ್ಳೋಕೆ, “ನನ್ನ ಮಗು ಸೋಶಿಯಲ್ ಮೀಡಿಯಾ ಬಳಸಬೇಕಾ?” ಮತ್ತು “ಸೋಶಿಯಲ್ ಮೀಡಿಯಾವನ್ನ ಸುರಕ್ಷಿತವಾಗಿ ಹೇಗೆ ಬಳಸೋದು ಅಂತ ನಿಮ್ಮ ಹದಿವಯಸ್ಸಿನ ಮಕ್ಕಳಿಗೆ ಕಲಿಸಿ” (ಇಂಗ್ಲಿಷ್) ಅನ್ನೋ ಲೇಖನಗಳನ್ನ ಓದಿ.
“ಮುಖ್ಯವಾದ ವಿಷ್ಯಕ್ಕೆ ಸಮಯ ಕೊಡಿ.”—ಎಫೆಸ 5:16.
ಒಂದುವೇಳೆ ನೀವು ನಿಮ್ಮ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಉಪಯೋಗಿಸೋಕೆ ಅನುಮತಿ ಕೊಡೋದಾದ್ರೆ, ಅದನ್ನ ಹೇಗೆ ಉಪಯೋಗಿಸಬೇಕು ಅನ್ನೋದ್ರ ಬಗ್ಗೆ ನಿಯಮಗಳನ್ನ ಇಡಿ. ನಿಮ್ಮ ಮಗ ಅಥವಾ ಮಗಳು ಸುರಕ್ಷಿತವಾಗಿರೋಕೆ ಈ ನಿಯಮಗಳು ಹೇಗೆ ಸಹಾಯ ಮಾಡುತ್ತೆ ಅಂತ ವಿವರಿಸಿ. ನಿಮ್ಮ ಮಗುವಿನ ವರ್ತನೆ, ನಡವಳಿಕೆಲಿ ಏನಾದ್ರೂ ಬದಲಾವಣೆ ಆಗ್ತಿದೆ ಅಂತ ಗೊತ್ತಾದ್ರೆ ತಕ್ಷಣ ಅದನ್ನ ಗುರುತಿಸಿ. ಆಗ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬಳಸೋದನ್ನ ಕಮ್ಮಿ ಮಾಡೋಕೆ ಹೇಳಬೇಕಾ ಅಥವಾ ಅವರು ಯಾರ ಜೊತೆನಾದ್ರೂ ಸ್ನೇಹ ಬಿಡೋಕೆ ಹೇಳಬೇಕಾ ಅಂತ ನಿಮಗೆ ಗೊತ್ತಾಗುತ್ತೆ.
ಈ ವಿಷ್ಯದಲ್ಲಿ ಇತಿಮಿತಿ ಯಾಕೆ ಮುಖ್ಯ ಅಂತ ನಿಮ್ಮ ಮಕ್ಕಳಿಗೆ ಅರ್ಥಮಾಡಿಸೋಕೆ ಸೋಷಿಯಲ್ ನೆಟ್ವರ್ಕನ್ನು ಜಾಣರಾಗಿ ಬಳಸಿ ಅನ್ನೋ ವಿಡಿಯೋನ ತೋರಿಸಿ.
ಅಪ್ಪ-ಅಮ್ಮಂದಿರು ಇನ್ನೂ ಏನು ಮಾಡಬಹುದು ಅನ್ನೋದಕ್ಕೆ ಬೈಬಲ್ ಆಧಾರಿತ ಸಲಹೆಗಳು ಬೇಕಿದ್ರೆ “ಸೋಷಿಯಲ್ ಮೀಡಿಯಾ ಯುವ ಜನರನ್ನ ಹಾಳುಮಾಡ್ತಿದೆ—ಇದ್ರ ಬಗ್ಗೆ ಬೈಬಲ್ ಏನು ಹೇಳುತ್ತೆ?” ಅನ್ನೋ ಲೇಖನ ನೋಡಿ.
ಇನ್ನೂ ಜಾಸ್ತಿ ತಿಳ್ಕೊಳ್ಳಿ
ನಾವು ‘ಪರಿಸ್ಥಿತಿ ತುಂಬ ಹದಗೆಟ್ಟಿರೋ ಕೊನೇ ದಿನಗಳಲ್ಲಿ’ ಜೀವಿಸ್ತಿದ್ದೀವಿ ಅಂತ ಬೈಬಲ್ ಹೇಳುತ್ತೆ. (2 ತಿಮೊತಿ 3:1-5) ಅದ್ರ ಜೊತೆಗೆ ಈ ಪರಿಸ್ಥಿತಿನ ಚೆನ್ನಾಗಿ ನಿಭಾಯಿಸೋಕೆ ಏನು ಮಾಡಬೇಕು ಅಂತ ಒಳ್ಳೊಳ್ಳೆ ಸಲಹೆಗಳನ್ನೂ ಕೊಡುತ್ತೆ. ಅಪ್ಪ-ಅಮ್ಮಂದಿರಿಗೆ ಮತ್ತು ಮಕ್ಕಳಿಗೆ ಸಹಾಯ ಮಾಡೋ 20ಕ್ಕಿಂತ ಹೆಚ್ಚು ಬೈಬಲ್ ಆಧಾರಿತ ಲೇಖನಗಳ ಬಗ್ಗೆ ತಿಳ್ಕೊಳ್ಳೋಕೆ, “ಹದಿವಯಸ್ಸಿನವರ ಮಾನಸಿಕ ಆರೋಗ್ಯದಲ್ಲಿ ಆಗಿರೋ ಭಯಂಕರ ಬದಲಾವಣೆ—ಇದರ ಬಗ್ಗೆ ಬೈಬಲ್ ಏನು ಹೇಳುತ್ತೆ?” ಅನ್ನೋ ಲೇಖನ ನೋಡಿ.