“ನನ್ನನ್ನು ಹಿಂಬಾಲಿಸಿರಿ”
1. ಮುಂಬರುವ ಸಭಾ ಬೈಬಲ್ ಅಧ್ಯಯನವು ನಮಗೆ ಯಾವ ಅವಕಾಶ ಕೊಡಲಿದೆ?
1 ಯೇಸುವಿನ ಭೂಜೀವನದ ಕುರಿತ ನಾಲ್ಕು ಸುವಾರ್ತಾ ವೃತ್ತಾಂತಗಳು ದೇವಕುಮಾರನ ಬಗ್ಗೆ ಸವಿವರ ವರ್ಣನೆಯನ್ನು ಕೊಡುತ್ತವೆ. ಕ್ರೈಸ್ತರಾದ ನಾವು ಯೇಸುವಿನ ‘ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸಬೇಕು.’ ಆದಕಾರಣ ಏಪ್ರಿಲ್ 18ರ ವಾರದಲ್ಲಿ ಆರಂಭವಾಗಲಿರುವ “ನನ್ನನ್ನು ಹಿಂಬಾಲಿಸಿರಿ” ಪುಸ್ತಕದ ಸಭಾ ಬೈಬಲ್ ಅಧ್ಯಯನಕ್ಕೆ ಚೆನ್ನಾಗಿ ತಯಾರಿಸಬೇಕು ಮತ್ತು ಏಕಾಗ್ರತೆಯಿಂದ ಕಿವಿಗೊಡಬೇಕು. (1 ಪೇತ್ರ 2:21; ಮಾರ್ಕ 10:21) ನಮ್ಮನ್ನು ಶುಶ್ರೂಷೆಗಾಗಿ ಹುರಿದುಂಬಿಸುವಂಥ ಯೇಸುವಿನ ಜೀವನದ ಅಂಶಗಳೆಡೆಗೆ ನಾವು ವಿಶೇಷ ಗಮನ ಕೊಡಬಹುದು.
2. ಎಲ್ಲವನ್ನೂ ಸಹಿಸಿಕೊಳ್ಳುವುದರಲ್ಲಿ ಯೇಸುವಿಟ್ಟ ಮಾದರಿಯಿಂದ ನಾವೇನು ಕಲಿಯಬಲ್ಲೆವು?
2 ಯೇಸುವಿಟ್ಟ ಮಾದರಿ: ಮನೆಮನೆ ಸೇವೆಯಲ್ಲಿ ಯಾರಾದರೂ ನಿಮಗೆ ನಕಾರಾತ್ಮಕ ಪ್ರತಿಕ್ರಿಯೆ ತೋರಿಸಿದ್ದಾರೊ? ಇಂಥ ಪ್ರತಿಕ್ರಿಯೆಗಳು, ಜನರು “ನನ್ನನ್ನು ಹಿಂಸೆಪಡಿಸಿರುವಲ್ಲಿ ನಿಮ್ಮನ್ನೂ ಹಿಂಸೆಪಡಿಸುವರು” ಎಂಬ ಯೇಸುವಿನ ಮಾತುಗಳನ್ನು ನೆನಪಿಗೆ ತರುತ್ತವೆ. (ಯೋಹಾ. 15:20) ಎಲ್ಲ ನಕಾರಾತ್ಮಕ ಉತ್ತರಗಳನ್ನು ಹಿಂಸೆ ಎಂದು ಹೇಳಲಾಗದಿದ್ದರೂ ಅದನ್ನು ಸಹಿಸಿಕೊಳ್ಳಬೇಕಾಗುತ್ತದೆ. ಯೇಸು ತನಗೆದುರಾದ ಯಾವುದೇ ರೀತಿಯ ಕಷ್ಟಪರೀಕ್ಷೆಗಳನ್ನು ‘ತನ್ನ ಮುಂದಿದ್ದ ಆನಂದದಿಂದಾಗಿ’ ಸಹಿಸಿಕೊಳ್ಳಶಕ್ತನಾದನು. ಅಂತೆಯೇ ನಾವು ಕೂಡ ಯೆಹೋವನ ಮೆಚ್ಚುಗೆಯನ್ನು ಪಡೆಯುವುದರ ಮತ್ತು ನಮ್ಮ ನಂಬಿಗಸ್ತಿಕೆಗಾಗಿ ಆತನು ಕೊಡುವ ಬಹುಮಾನದ ಮೇಲೆ ಮನಸ್ಸಿಡಬಹುದು. ಇದು ನಮಗೆ “ಬಳಲಿದವರಾಗದಂತೆ ಮತ್ತು ನಿರುತ್ಸಾಹಗೊಳ್ಳದಂತೆ” ಸಾಧ್ಯಮಾಡುವುದು. (ಇಬ್ರಿ. 12:2, 3; ಜ್ಞಾನೋ. 27:11) ಶುಶ್ರೂಷೆಯಲ್ಲಿ ನಾವು ಹೀಗೆ ಪಟ್ಟುಬಿಡದೆ ಮುಂದುವರಿಯುವಾಗ ಕ್ರಿಸ್ತ ಯೇಸುವಿನ ಬೆಂಬಲವೂ ನಮಗಿರುತ್ತದೆ.—ಮತ್ತಾ. 28:20.
3. ಶುಶ್ರೂಷೆಯ ವಿಷಯದಲ್ಲಿ ನಾವು ಯೇಸುವನ್ನು ಹೇಗೆ ಅನುಕರಿಸಬಲ್ಲೆವು?
3 “ನಾನು ಇದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದೇನೆ”: ಯೇಸುವಿನ ಜೀವನದಲ್ಲಿ ರಾಜ್ಯ-ಸಾರುವಿಕೆಯ ಕೆಲಸಕ್ಕೆ ಪ್ರಥಮ ಸ್ಥಾನವಿತ್ತು. (ಲೂಕ 4:43) ಯೇಸು ತನ್ನ ಶಕ್ತಿ, ಸಮಯವನ್ನು ಉದಾರವಾಗಿ ಕೊಟ್ಟನು. ರಾಜ್ಯದ ಕುರಿತಾಗಿ ತಿಳಿಸುವುದು ಬಹಳ ತುರ್ತಿನದ್ದಾಗಿ ಪರಿಗಣಿಸಿ, ಅದನ್ನು ತಿಳಿಸಲು ಸದಾ ಸಂದರ್ಭಗಳನ್ನು ಹುಡುಕುತ್ತಿದ್ದನು. ನಾವಾತನ ಹಿಂಬಾಲಕರಾದ ಕಾರಣ ಆತನ ಹೆಜ್ಜೆಜಾಡನ್ನು ಹೇಗೆ ಹಿಂಬಾಲಿಸುವೆವು? ದಿನನಿತ್ಯದ ಕೆಲಸಕಾರ್ಯಗಳಲ್ಲಿ ನಾವು ಅನೇಕ ಜನರನ್ನು ಭೇಟಿಯಾಗುತ್ತಿರಬಹುದು. ನಾವು ಅವರಿಗೂ ಸಾಧ್ಯವಾದಷ್ಟು ಹೆಚ್ಚು ಜನರಿಗೂ ಸುವಾರ್ತೆಯನ್ನು ತಿಳಿಸುವಂತೆ ಕ್ರಿಸ್ತನಿಗಿರುವ ಪ್ರೀತಿಯು ನಮ್ಮನ್ನು ಪ್ರೇರಿಸಲಿ!—2 ಕೊರಿಂ. 5:14.
4. ನಮ್ಮ ಶುಶ್ರೂಷೆಯ ಗುಣಮಟ್ಟವನ್ನು ಹೇಗೆಲ್ಲ ಹೆಚ್ಚಿಸಬಲ್ಲೆವು?
4 ಈ “ರೀತಿಯಲ್ಲಿ ಯಾವ ಮನುಷ್ಯನೂ ಎಂದೂ ಮಾತಾಡಿದ್ದಿಲ್ಲ”: ಯೇಸು ಬೋಧಿಸುತ್ತಿದ್ದ ರೀತಿಯಿಂದ ಜನರೆಲ್ಲರೂ ಅತ್ಯಾಶ್ಚರ್ಯಪಡುತ್ತಿದ್ದರು. (ಯೋಹಾ. 7:46; ಮತ್ತಾ. 7:28, 29) ಬೇರೆ ಬೋಧಕರಿಗೂ ಯೇಸುವಿಗೂ ಇದ್ದ ವ್ಯತ್ಯಾಸವೇನಾಗಿತ್ತು? ಯೇಸು ತಾನು ತಿಳಿಸುತ್ತಿದ್ದ ಸತ್ಯಗಳನ್ನು ಪ್ರೀತಿಸಿದನು, ಅವುಗಳನ್ನು ಕೇಳುತ್ತಿದ್ದ ಜನರನ್ನೂ ಪ್ರೀತಿಸಿದನು, ಅಷ್ಟೇ ಅಲ್ಲ ವಿಭಿನ್ನ ಬೋಧನಾ ವಿಧಾನಗಳನ್ನು ಬಳಸಿದನು. ಈ ಮಹಾ ಬೋಧಕನನ್ನು ಅನುಕರಿಸುವ ಮೂಲಕ ನಮ್ಮ ಶುಶ್ರೂಷೆಯ ಗುಣಮಟ್ಟವನ್ನು ಹೆಚ್ಚಿಸಬಲ್ಲೆವು.—ಲೂಕ 6:40.
5. “ನನ್ನನ್ನು ಹಿಂಬಾಲಿಸಿರಿ” ಪುಸ್ತಕವನ್ನು ಅಧ್ಯಯನ ಮಾಡುವಾಗ ನಮ್ಮ ಗುರಿ ಏನಾಗಿರಬೇಕು?
5 ಯೇಸುವಿನ ಜೀವನದಿಂದ ನಮಗೆ ಸಿಗುವ ರತ್ನಗಳಂಥ ಅಮೂಲ್ಯ ವಿಷಯಗಳಲ್ಲಿ ಇವು ಕೆಲವು. ಇನ್ನೂ ಹೆಚ್ಚಿನ ರತ್ನಗಳು ನಿಮಗೆಲ್ಲಿ ಸಿಗುವವು? ಸಭಾ ಬೈಬಲ್ ಅಧ್ಯಯನದಲ್ಲಿ. ಅಲ್ಲಿ ಯೇಸುವಿನ ಜೀವನದ ಬಗ್ಗೆ ಕಲಿಯುತ್ತಾ ಹೋದಂತೆ ಆತನ ನಡೆನುಡಿಯನ್ನು ಅನುಕರಿಸುವ ಮೂಲಕ ‘ಕ್ರಿಸ್ತನ ಪ್ರೀತಿಯನ್ನು ತಿಳಿದುಕೊಳ್ಳುವುದನ್ನು’ ನಿಮ್ಮ ಗುರಿಯನ್ನಾಗಿ ಮಾಡಿ.—ಎಫೆ. 3:19.