ಬೈಬಲಧ್ಯಯನ ಸಾದರಪಡಿಸಲಿಕ್ಕಾಗಿ ಒಂದು ವಿಶೇಷದಿನ
1 ಜನವರಿಯಿಂದ ಆರಂಭಿಸಿ ಪ್ರತಿ ಸಭೆಯು ಬೈಬಲಧ್ಯಯನ ಸಾದರಪಡಿಸುವುದರ ಮೇಲೆ ವಿಶೇಷ ಗಮನವನ್ನು ಕೇಂದ್ರೀಕರಿಸಲಿಕ್ಕಾಗಿ ಪ್ರತಿತಿಂಗಳ ಒಂದು ವಾರಾಂತ್ಯವನ್ನು ನೇಮಿಸುವುದು. ಇದನ್ನು ಪ್ರಾಯಶಃ ತಿಂಗಳ ಮೊದಲನೆಯ ವಾರಾಂತ್ಯದಲ್ಲಿ, ಸ್ಥಳಿಕವಾಗಿ ಯಾವುದು ಅನುಕೂಲಕರವೋ ಅದಕ್ಕನುಸಾರ ಶನಿವಾರದಂದು ಇಲ್ಲವೆ ಭಾನುವಾರದಂದು ಏರ್ಪಡಿಸಬಹುದು. ಒಂದುವೇಳೆ ಆ ದಿನದಲ್ಲಿ ಮನೆಯವರು ಬೈಬಲಧ್ಯಯನವನ್ನು ಸ್ವೀಕರಿಸದಿದ್ದಲ್ಲಿ ಪ್ರಚಾರಕರು ಅವರಿಗೆ ಬೈಬಲ್ ಬೋಧಿಸುತ್ತದೆ ಪುಸ್ತಕವನ್ನೊ ಹೊಸಪತ್ರಿಕೆಗಳನ್ನೊ ನೀಡಸಾಧ್ಯವಿದೆ. ಎಲ್ಲಾ ಹಿರಿಯರು ಮತ್ತು ಶುಶ್ರೂಷಾ ಸೇವಕರು ಈ ಚಟುವಟಿಕೆಯಲ್ಲಿ ಪೂರ್ಣವಾಗಿ ಪಾಲ್ಗೊಳ್ಳಬೇಕು ಮತ್ತು ಬೈಬಲಧ್ಯಯನಗಳನ್ನು ಪ್ರಾರಂಭಿಸುವಂತೆ ಪ್ರಚಾರಕರಿಗೆ ಸಹಾಯಮಾಡಲು ಏರ್ಪಾಡಿಸಬೇಕು.
2 ಯಾವ ವಾರಾಂತ್ಯದ ದಿನವನ್ನು ಬೈಬಲಧ್ಯಯನ ಸಾದರಪಡಿಸುವಿಕೆಗೆ ಬದಿಗಿಡಬೇಕೆಂದು ಸಭಾ ಸೇವಾ ಕಮಿಟಿಯು ನಿರ್ಧರಿಸಬೇಕು. ಮನೆಮನೆಯ ಸೇವೆಯಲ್ಲಿ ಮತ್ತು ಹಿಂದೆ ಆಸಕ್ತಿ ತೋರಿಸಿದವರನ್ನು ಭೇಟಿಯಾಗುವಾಗ ಬೈಬಲ್ ಅಧ್ಯಯನ ಆರಂಭಿಸಲಿಕ್ಕಾಗಿ ತಯಾರಿಯನ್ನೂ ವಿಶೇಷ ಪ್ರಯತ್ನವನ್ನೂ ಮಾಡುವಂತೆ ಪ್ರಚಾರಕರಿಗೆ ಆಗಿಂದಾಗ್ಗೆ ನೆನಪು ಹುಟ್ಟಿಸುತ್ತಿರಬೇಕು.
3 ತಯಾರಿಸುವ ವಿಧ: ಬೈಬಲ್ ಅಧ್ಯಯನಗಳನ್ನು ಆರಂಭಿಸಲು ಸಲಹೆಗಳಿಗಾಗಿ ಜನವರಿ 2006ರ ನಮ್ಮ ರಾಜ್ಯದ ಸೇವೆ ಪುರವಣಿ ಮತ್ತು ಬೈಬಲ್ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಪುಸ್ತಿಕೆಯ ಪುಟ 4 ಮತ್ತು 5 ನೋಡಿರಿ. ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ? ಎಂಬಂಥ ಟ್ರ್ಯಾಕ್ಟ್ಗಳನ್ನೂ ಉಪಯೋಗಿಸಬಹುದು. ಪತ್ರಿಕೆಗಳನ್ನು ಸ್ವೀಕರಿಸಿದ ಜನರನ್ನು ಭೇಟಿಮಾಡುವಾಗ ಬೈಬಲಧ್ಯಯನಗಳನ್ನು ಆರಂಭಿಸಲಿಕ್ಕಾಗಿ ಆಗಸ್ಟ್ 2007ರ ನಮ್ಮ ರಾಜ್ಯದ ಸೇವೆ ಪುಟ 3ರಲ್ಲೂ ಸಲಹೆಗಳಿವೆ. ಹಿರಿಯರು ಮತ್ತು ಶುಶ್ರೂಷಾ ಸೇವಕರು ಕ್ಷೇತ್ರಸೇವೆಗಾಗಿ 10-15 ನಿಮಿಷಗಳ ಸಂಕ್ಷಿಪ್ತ ಕೂಟವನ್ನು ಏರ್ಪಡಿಸಿ, ಬೈಬಲ್ ಅಧ್ಯಯನವನ್ನು ಪ್ರಾರಂಭಿಸಲು ಒಂದೆರಡು ಪ್ರಾಯೋಗಿಕ ಸಲಹೆಗಳ ಚರ್ಚೆಯನ್ನು ಅಥವಾ ಪ್ರತ್ಯಕ್ಷಾಭಿನಯಗಳನ್ನು ಮಾಡಬೇಕು. ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸುವಾಗ, ಜಾಣ್ಮೆ ಮತ್ತು ವಿವೇಚನೆ ಉಪಯೋಗಿಸುವ ವಿಷಯದಲ್ಲಿ ನಮ್ಮ ರಾಜ್ಯದ ಸೇವೆಯ ಇತ್ತೀಚಿನ ಸಂಚಿಕೆಗಳಲ್ಲಿ ಒದಗಿಸಲಾದ ಸಲಹೆಸೂಚನೆಗಳನ್ನು ನೆನಪಿನಲ್ಲಿಡಬೇಕು.
4 ಪ್ರತಿಯೊಬ್ಬರೂ ಬೈಬಲ್ ಅಧ್ಯಯನವನ್ನು ಸ್ವೀಕರಿಸುವರೆಂದಾಗಲಿ ಕೆಲವು ಸಮಯದ ತನಕ ಅಧ್ಯಯನವನ್ನು ಮುಂದುವರಿಸುವರೆಂದಾಗಲಿ ಹೇಳಸಾಧ್ಯವಿಲ್ಲ. ಆದರೂ ಇದು ನಮ್ಮನ್ನು ಅಧ್ಯಯನ ಸಾದರಪಡಿಸುವಿಕೆಯಿಂದ ತಡೆಯಬಾರದು. ಯಾಕೆಂದರೆ ಕುರಿಗಳಂತಿರುವ ಜನರನ್ನು ತನ್ನ ಸಂಘಟನೆಗೆ ಎಳೆಯುವಾತನು ಯೆಹೋವನೇ ಆಗಿದ್ದಾನೆ. (ಯೋಹಾ. 6:44) ನಮ್ಮ ಜವಾಬ್ದಾರಿಯು ಸತ್ಯದ ಬೀಜಗಳನ್ನು ಬಿತ್ತುವುದು ಮಾತ್ರವೇ ಅಲ್ಲ, ಬೇರುಬಿಟ್ಟಿರುವ ಆ ಬೀಜಗಳಿಗೆ ನೀರು ಹೊಯ್ದು ಬೆಳೆಸುವುದೂ ಆಗಿದೆ. ಅದರಲ್ಲಿ ಸುಹೃದಯದ ಜನರೊಂದಿಗೆ ಬೈಬಲನ್ನು ಅಧ್ಯಯನ ಮಾಡುವುದೂ ಸೇರಿದೆ. ಹಾಗೆ ಮಾಡುವ ಮೂಲಕ ನಾವು ದೇವರ ಜೊತೆಕೆಲಸದವರಾಗಿರುವ ಸುಯೋಗದಲ್ಲಿ ಪಾಲ್ಗೊಳ್ಳುತ್ತೇವೆ.—1 ಕೊರಿಂ. 3:9.