ಅಪಾಯವೆಂಬ ಕರಾಳತೆಯಲ್ಲಿ ಜೀವಿಸುವುದು
“ಅಪಾಯವಿಲ್ಲದ ಒಂದೇ ಒಂದು ದಿನವೂ ಇಲ್ಲ. ನಿದ್ರೆಮಾಡುವಾಗಲೂ ಅಪಾಯವು ತಪ್ಪಿದ್ದಲ್ಲ. ಇದು ನಿಮ್ಮ ಜೀವನದ ಅಂತ್ಯವೇ ಆಗಸಾಧ್ಯವಿದೆ.”—ಡಿಸ್ಕವರ್ ಪತ್ರಿಕೆ.
ಜೀವನ ಅನ್ನುವುದು ಒಂದು ರೀತಿಯಲ್ಲಿ, ಸಿಡಿಗುಂಡು ಪ್ರದೇಶದಲ್ಲಿ ನಡೆಯುವಂತಿರುವುದು. ಒಂದಿನಿತೂ ಎಚ್ಚರಿಕೆಯನ್ನು ಕೊಡದೇ, ವಿಪತ್ತು ನಮ್ಮ ಮೇಲೆ ಎರಗಬಹುದು ಇಲ್ಲವೆ ಮೃತ್ಯು ತನ್ನ ತೋಳತೆಕ್ಕೆಗೆ ನಮ್ಮನ್ನು ಸೇರಿಸಿಕೊಳ್ಳಬಹುದು. ಅಪಾಯವು ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತದೆ. ಅವು ಟ್ರ್ಯಾಫಿಕ್ ಆ್ಯಕ್ಸಿಡೆಂಟ್ಗಳು, ಆಂತರಿಕ ಯುದ್ಧಗಳು, ಬರಗಾಲ, ಏಡ್ಸ್, ಕ್ಯಾನ್ಸರ್, ಹೃದ್ರೋಗಗಳು ಇತ್ಯಾದಿ ಆಗಿರಬಹುದು. ಉದಾಹರಣೆಗೆ, ಆಫ್ರಿಕದ ಉಪಸಹಾರಾದಲ್ಲಿ ಏಡ್ಸ್ ಅನ್ನುವುದು ಮಹಾಹಂತಕನಂತಿದೆ. ಇತ್ತೀಚಿನ ವರ್ಷದಲ್ಲಿ, ಇದು ಸುಮಾರು “22 ಲಕ್ಷ ಜನರ ಜೀವವನ್ನು ನುಂಗಿದೆ. ಇದು ಆಫ್ರಿಕದಲ್ಲಿ ನಡೆದಿರುವ ಆಂತರಿಕ ಯುದ್ಧಗಳಲ್ಲಿ ಮಡಿದವರ ಸಂಖ್ಯೆಗಿಂತಲೂ 10 ಪಟ್ಟು ಹೆಚ್ಚು” ಎಂದು ಯು.ಎಸ್.ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್ ಹೇಳುತ್ತದೆ.
ಅದೇ ಸಮಯದಲ್ಲಿ, ಈ ಲೋಕವು ದೀರ್ಘಕಾಲ ಜೀವಿಸಲಿಕ್ಕಾಗಿ ಹಾಗೂ ರೋಗರುಜಿನ, ದೌರ್ಬಲ್ಯಗಳ ಅಪಾಯವನ್ನು ಕಡಿಮೆಮಾಡಲಿಕ್ಕಾಗಿ ಕೋಟಿಗಟ್ಟಲೆ ರೂಪಾಯಿಗಳನ್ನು ನೀರಿನಂತೆ ಸುರಿಯುತ್ತಿದೆ. ಒಳ್ಳೆಯ ಆಹಾರವನ್ನು ಸೇವಿಸಬೇಕು, ಹಿತಮಿತವಾಗಿ ಆ್ಯಲ್ಕೋಹಾಲ್ ಅನ್ನು ಕುಡಿಯಬೇಕು. ಇದರ ಜೊತೆಗೆ ವ್ಯಾಯಾಮ ಮಾಡಬೇಕು ಎಂಬ ಐಡಿಯಾಗಳು ಒಂದಷ್ಟರ ಮಟ್ಟಿಗೆ ಪ್ರಯೋಜನವನ್ನು ತರಬಹುದು ನಿಜ. ಆದರೆ, ಜೀವನದ ಬಹುಮುಖ್ಯವಾದ ಪ್ರತಿಯೊಂದು ಕ್ಷೇತ್ರದಲ್ಲೂ ಸಹಾಯಮಾಡುವಂತಹ ಒಂದು ಭರವಸಾರ್ಹ ಮೂಲವು ಇದೆ. ಇದು ಹೆಚ್ಚೆಚ್ಚು ಸುರಕ್ಷಿತ ಜೀವನವನ್ನು ಅನುಭವಿಸುವಂತೆ ಸಹಾಯಮಾಡುತ್ತದೆ. ಅದು ಬೈಬಲ್ ತಾನೇ ಆಗಿದೆ. ನಮ್ಮ ಆರೋಗ್ಯ, ಸುಕ್ಷೇಮವನ್ನು ಬಾಧಿಸುವಂತಹ ಅನೇಕಾನೇಕ ವಿಷಯಗಳಿಗೆ ಅದು ಮಾರ್ಗದರ್ಶನವನ್ನು ನೀಡುತ್ತದೆ. ಪ್ರತಿಯೊಂದು ಸಮಸ್ಯೆಯನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಬೈಬಲು
ಸವಿವರವಾಗಿ ತಿಳಿಸುವುದಿಲ್ಲವಾದರೂ, ಅತ್ಯುತ್ಕೃಷ್ಟವಾದ ತತ್ವಗಳನ್ನು ನಮಗೆ ನೀಡುತ್ತದೆ. ಇದು ಆಹಾರವನ್ನು ಸೇವಿಸುವುದು, ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳುವುದು, ಮಾನಸಿಕ ಮನೋಭಾವ, ಸೆಕ್ಸ್, ಆ್ಯಲ್ಕೋಹಾಲ್, ಹೊಗೆಸೊಪ್ಪು ಹಾಗೂ ಮನೋರಂಜನೆಗಾಗಿ ತೆಗೆದುಕೊಳ್ಳುವಂತಹ ಅಮಲೌಷಧಗಳೇ ಮುಂತಾದವುಗಳ ಕುರಿತಾಗಿ ಸರಿಯಾದ ಮಾರ್ಗದರ್ಶನವನ್ನು ನೀಡುತ್ತದೆ.
ಅಷ್ಟುಮಾತ್ರವಲ್ಲ, ಅನೇಕರ ಜೀವನದಲ್ಲಿ ಹಣಕಾಸಿನ ಬಿಕ್ಕಟ್ಟುಗಳು ಬಹಳ ದೊಡ್ಡ ಹೊರೆಯಾಗಿವೆ. ಇಲ್ಲಿ ಸಹ ಬೈಬಲು ನಮ್ಮ ಸಹಾಯಕ್ಕೆ ಬರುತ್ತದೆ. ಇದು ಹಣದ ಬಗ್ಗೆ ಒಂದು ವಿವೇಕಯುತ ನೋಟವನ್ನು ಇಟ್ಟುಕೊಳ್ಳಬೇಕೆಂದೋ ಹಣವನ್ನು ಹೇಗೆ ಖರ್ಚುಮಾಡಬೇಕೆಂದೋ ಹೇಳುವುದು ಮಾತ್ರವಲ್ಲ, ಒಬ್ಬ ಒಳ್ಳೆಯ ನೌಕರ ಅಥವಾ ಒಡೆಯನಾಗಿ ಹೇಗೆ ಕೆಲಸಮಾಡಸಾಧ್ಯವಿದೆ ಎಂಬುದನ್ನು ಸಹ ತಿಳಿಸುತ್ತದೆ. ಒಂದೇ ಮಾತಿನಲ್ಲಿ ಸರಳವಾಗಿ ಹೇಳುವುದಾದರೆ, ಬೈಬಲು ಒಂದು ಒಳ್ಳೆಯ ಮಾರ್ಗದರ್ಶಕವಾಗಿದೆ. ಇದು ಕೇವಲ ಆರ್ಥಿಕ ಭದ್ರತೆ ಹಾಗೂ ಶಾರೀರಿಕ ಹಿತಕ್ಕಾಗಿ ಮಾತ್ರವಲ್ಲ, ಸ್ವತಃ ನಮ್ಮ ಜೀವನಕ್ಕಾಗಿಯೇ ಮಾರ್ಗದರ್ಶಕವಾಗಿದೆ. ಇಂದು ಬೈಬಲು ಎಷ್ಟು ಪ್ರಾಯೋಗಿಕವಾಗಿದೆ ಎಂಬುದನ್ನು ನೋಡಲು ನೀವು ಇಷ್ಟಪಡುತ್ತೀರೋ? ಹಾಗಾದರೆ ದಯವಿಟ್ಟು ಓದುವುದನ್ನು ಮುಂದುವರಿಸಿರಿ.