ಪ್ರೀತಿಯ ಅತ್ಯುತ್ಕೃಷ್ಟ ಮಾದರಿಯನ್ನು ಕಲಿತುಕೊಳ್ಳುವುದು
ಕಾಸೊವೊ, ಲೆಬನನ್, ಮತ್ತು ಐರ್ಲೆಂಡ್. ಇತ್ತೀಚಿನ ವರ್ಷಗಳಲ್ಲಿ ಈ ಹೆಸರುಗಳು ವಾರ್ತಾಪತ್ರಿಕೆಗಳಲ್ಲಿ ಆಗಿಂದಾಗ್ಗೆ ಕಂಡುಬಂದಿವೆ. ಇವು ರಕ್ತಪಾತ, ಬಾಂಬ್ ದಾಳಿಗಳು ಮತ್ತು ಕಗ್ಗೊಲೆಗಳ ದೃಶ್ಯಗಳನ್ನು ಜನರ ಮನಸ್ಸುಗಳಲ್ಲಿ ಮೂಡಿಸುತ್ತವೆ. ಧಾರ್ಮಿಕ, ಜಾತಿಸಂಬಂಧಿತ, ಕುಲಸಂಬಂಧಿತ, ಅಥವಾ ಇನ್ನಿತರ ವೈಷಮ್ಯಗಳ ಕಾರಣದಿಂದ ಹಿಂಸಾತ್ಮಕ ಹೋರಾಟಗಳು ನಡೆಯುತ್ತಿರುವುದು ಹೊಸದೇನಲ್ಲ ಎಂಬುದು ನಿಶ್ಚಯ. ವಾಸ್ತವದಲ್ಲಿ, ಇತಿಹಾಸದ ಪುಟಗಳನ್ನು ತಿರುವಿದರೆ ಇವೇ ಸಂಗತಿಗಳು ಕಾಣಸಿಗುತ್ತವೆ, ಮತ್ತು ಈ ಹೋರಾಟಗಳು ಮಾನವಕುಲದ ಮೇಲೆ ಅಸಂಖ್ಯಾತ ಕಷ್ಟಾನುಭವಗಳನ್ನು ತಂದೊಡ್ಡಿವೆ.
ಇತಿಹಾಸದಾದ್ಯಂತ ಯುದ್ಧಗಳು ನಡೆದಿವೆ ಎಂಬುದನ್ನು ತಿಳಿದಿರುವ ಅನೇಕ ಜನರು, ನಿಜವಾಗಿಯೂ ಯುದ್ಧಗಳು ಅನಿವಾರ್ಯವಾಗಿವೆ ಮತ್ತು ಜನರು ಪರಸ್ಪರ ದ್ವೇಷಿಸುವುದು ಸರ್ವಸಾಮಾನ್ಯ ಸಂಗತಿಯಾಗಿದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಆದರೂ, ಇಂತಹ ದೃಷ್ಟಿಕೋನಗಳು, ದೇವರ ವಾಕ್ಯವಾದ ಬೈಬಲಿನ ಬೋಧನೆಗಳಿಗೆ ಸಂಪೂರ್ಣವಾಗಿ ಪ್ರತಿಕೂಲವಾಗಿವೆ. ಶಾಸ್ತ್ರವಚನಗಳು ಸ್ಪಷ್ಟವಾಗಿ ಹೀಗೆ ವಿವರಿಸುತ್ತವೆ: “ಪ್ರೀತಿಯಿಲ್ಲದವನು ದೇವರನ್ನು ಬಲ್ಲವನಲ್ಲ; ಯಾಕಂದರೆ ದೇವರು ಪ್ರೀತಿಸ್ವರೂಪಿಯು.” (1 ಯೋಹಾನ 4:8) ಮಾನವರು ಪರಸ್ಪರ ಪ್ರೀತಿಸುವಂತೆ ಸೃಷ್ಟಿಕರ್ತನು ಬಯಸುತ್ತಾನೆ ಎಂಬುದು ಸ್ಪಷ್ಟ.
ಮನುಷ್ಯನು ದೇವರ ಸ್ವರೂಪದಲ್ಲಿ ಉಂಟುಮಾಡಲ್ಪಟ್ಟನು ಎಂದು ಸಹ ಬೈಬಲು ತಿಳಿಸುತ್ತದೆ. (ಆದಿಕಾಂಡ 1:26, 27) ದೇವರ ಗುಣಗಳನ್ನು ಪ್ರತಿಫಲಿಸುವಂತಹ ಸಾಮರ್ಥ್ಯವು ಮಾನವಕುಲಕ್ಕೆ ಕೊಡಲ್ಪಟ್ಟಿದೆ ಮತ್ತು ಆ ಗುಣಗಳಲ್ಲಿ ಅತಿ ಪ್ರಾಮುಖ್ಯವಾದದ್ದು ಪ್ರೀತಿಯಾಗಿದೆ ಎಂಬುದೇ ಇದರ ಅರ್ಥ. ವಿಷಯವು ಹೀಗಿರುವಾಗ, ಇತಿಹಾಸದಾದ್ಯಂತ ಮಾನವರು ಒಬ್ಬರು ಇನ್ನೊಬ್ಬರಿಗೆ ಪ್ರೀತಿಯನ್ನು ತೋರಿಸುವುದರಲ್ಲಿ ಏಕೆ ಇಷ್ಟೊಂದು ಕೀಳ್ಮಟ್ಟಕ್ಕೆ ಇಳಿದಿದ್ದಾರೆ? ಇದಕ್ಕೆ ಸಹ ಬೈಬಲು ಒಳನೋಟವನ್ನು ಒದಗಿಸುತ್ತದೆ. ಮೊದಲ ಮಾನವ ದಂಪತಿಗಳಾದ ಆದಾಮಹವ್ವರು ದೇವರ ವಿರುದ್ಧ ದಂಗೆಯೆದ್ದು, ಪಾಪವನ್ನು ಮಾಡಿದ್ದೇ ಇದಕ್ಕೆ ಕಾರಣವಾಗಿದೆ. ಇದರ ಫಲಿತಾಂಶವಾಗಿ, ಅವರ ಸಂತತಿಯವರೆಲ್ಲರೂ ಪಾಪ ಮತ್ತು ಅಪರಿಪೂರ್ಣತೆಯನ್ನು ಬಾಧ್ಯತೆಯಾಗಿ ಪಡೆದರು. ರೋಮಾಪುರ 3:23 ಹೀಗೆ ವಿವರಿಸುತ್ತದೆ: “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ.” ನಾವು ಬಾಧ್ಯತೆಯಾಗಿ ಪಡೆದಿರುವ ಪಾಪ ಮತ್ತು ಅಪರಿಪೂರ್ಣತೆಯು, ನಮಗೆ ದೇವರಿಂದ ಕೊಡಲ್ಪಟ್ಟಿರುವ ಪ್ರೀತಿಸುವ ಸಾಮರ್ಥ್ಯವನ್ನು ಹಾಳುಮಾಡಿಬಿಟ್ಟಿದೆ. ಜನರು ಪರಸ್ಪರ ಪ್ರೀತಿಸುವ ಸಾಮರ್ಥ್ಯವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ ಎಂಬುದು ಇದರ ಅರ್ಥವೊ? ನಾವು ನಮ್ಮ ಜೊತೆಮಾನವರೊಂದಿಗೆ ಪುನಃ ಎಂದಾದರೂ ಶಾಂತಿಭರಿತವಾದ, ಪ್ರೀತಿಯ ಸಂಬಂಧದಲ್ಲಿ ಆನಂದಿಸುವೆವು ಎಂಬುದಕ್ಕೆ ಯಾವ ನಿರೀಕ್ಷೆಯಿದೆ?
ನಾವು ದೇವರನ್ನು ಪ್ರೀತಿಸಲು ಕಲಿತುಕೊಳ್ಳಬೇಕು
ಮಾನವರು ಅಪರಿಪೂರ್ಣರಾಗಿರುವುದಾದರೂ, ಮಾನವಕುಲವು ಪ್ರೀತಿಯನ್ನು ತೋರಿಸಲು ಸಮರ್ಥವಾಗಿದೆ ಎಂಬುದು ಯೆಹೋವ ದೇವರಿಗೆ ತಿಳಿದಿದೆ. ಆದುದರಿಂದಲೇ, ತನ್ನನ್ನು ಸಂತೋಷಪಡಿಸಲು ಬಯಸುವವರು ತಮ್ಮ ಕೈಲಾಗುವಷ್ಟರ ಮಟ್ಟಿಗೆ ಪ್ರೀತಿಯನ್ನು ತೋರಿಸುವಂತೆ ಆತನು ಅಪೇಕ್ಷಿಸುತ್ತಾನೆ. ಇಸ್ರಾಯೇಲ್ಯರಿಗೆ ಕೊಡಲ್ಪಟ್ಟ ಧರ್ಮಶಾಸ್ತ್ರದಲ್ಲಿ ಯಾವುದು ಅತಿ ದೊಡ್ಡ ಆಜ್ಞೆಯಾಗಿತ್ತು ಎಂದು ದೇವಕುಮಾರನಾದ ಯೇಸು ಕ್ರಿಸ್ತನಿಗೆ ಕೇಳಲ್ಪಟ್ಟಾಗ, ಅವನಿಂದ ಈ ಆವಶ್ಯಕತೆಯು ಸ್ಪಷ್ಟಪಡಿಸಲ್ಪಟ್ಟಿತು. ಅವನು ಹೇಳಿದ್ದು: “ನಿನ್ನ ದೇವರಾಗಿರುವ ಕರ್ತನನ್ನು [“ಯೆಹೋವನನ್ನು,” NW] ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಬುದ್ಧಿಯಿಂದಲೂ ಪ್ರೀತಿಸಬೇಕು ಎಂಬ ಆಜ್ಞೆಯೇ ಮುಖ್ಯವಾದದ್ದು ಮತ್ತು ಮೊದಲನೆಯದು.” ತದನಂತರ ಅವನು ಕೂಡಿಸಿ ಹೇಳಿದ್ದು: “ಇದಕ್ಕೆ ಸಮಾನವಾದ ಎರಡನೆಯ ಆಜ್ಞೆ ಒಂದು ಉಂಟು, ಅದು ಯಾವದಂದರೆ—ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂಬದೇ. ಈ ಎರಡು ಆಜ್ಞೆಗಳು ಎಲ್ಲಾ ಧರ್ಮಶಾಸ್ತ್ರಕ್ಕೂ ಪ್ರವಾದನಗ್ರಂಥಕ್ಕೂ ಆಧಾರವಾಗಿವೆ.”—ಮತ್ತಾಯ 22:37-40.
ಆದರೂ, ತಾವು ಯಾರನ್ನು ನೋಡಸಾಧ್ಯವಿಲ್ಲವೋ ಅವರನ್ನು ಪ್ರೀತಿಸುವುದು ತುಂಬ ಕಷ್ಟ ಎಂದು ಅನೇಕ ಜನರು ಭಾವಿಸುತ್ತಾರೆ, ಮತ್ತು ಮಾನವರಾದ ನಾವು ಯೆಹೋವ ದೇವರನ್ನು ನೋಡಸಾಧ್ಯವಿಲ್ಲ, ಏಕೆಂದರೆ ಆತನು ಆತ್ಮಸ್ವರೂಪಿಯಾಗಿದ್ದಾನೆ. (ಯೋಹಾನ 4:24) ಹಾಗಿದ್ದರೂ, ನಮ್ಮ ಪ್ರಯೋಜನಕ್ಕೋಸ್ಕರ ಆತನು ಸೃಷ್ಟಿಸಿರುವ ಅನೇಕ ಒಳ್ಳೇ ವಸ್ತುಗಳ ಮೇಲೆ ನಾವು ಅವಲಂಬಿಸಿರುವುದರಿಂದ, ದೇವರು ಏನು ಮಾಡುತ್ತಾನೋ ಅದು ಪ್ರತಿದಿನವೂ ನಮ್ಮ ಮೇಲೆ ಪ್ರಭಾವ ಬೀರುತ್ತದೆ. ಅಪೊಸ್ತಲ ಪೌಲನು ಸಹ ಈ ಸಂಗತಿಯ ಕುರಿತು ಸೂಚಿಸಿ ಮಾತಾಡಿದನು. ಅವನು ಹೇಳಿದ್ದು: “ಆತನು [ದೇವರು] ತನ್ನ ವಿಷಯದಲ್ಲಿ ಸಾಕ್ಷಿಕೊಡದೆ ಇರಲಿಲ್ಲ; ನಿಮಗೆ ಆಕಾಶದಿಂದ ಮಳೆಯನ್ನೂ ಸುಗ್ಗೀಕಾಲಗಳನ್ನೂ ದಯಪಾಲಿಸಿ ಆಹಾರಕೊಟ್ಟು ನಿಮ್ಮ ಮನಸ್ಸುಗಳನ್ನು ಆನಂದದಿಂದ ತುಂಬಿಸಿ ಉಪಕಾರಮಾಡುತ್ತಾ ಬಂದವನು ಆತನೇ.”—ಅ. ಕೃತ್ಯಗಳು 14:17.
ಒಂದಲ್ಲ ಒಂದು ವಿಧದಲ್ಲಿ ಪ್ರತಿಯೊಬ್ಬರೂ ಸೃಷ್ಟಿಕರ್ತನ ಒದಗಿಸುವಿಕೆಗಳಿಂದ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಾರಾದರೂ, ತುಲನಾತ್ಮಕವಾಗಿ ಕೆಲವೇ ಮಂದಿ ಆತನಿಗೆ ಕೃತಜ್ಞರಾಗಿದ್ದಾರೆ ಮತ್ತು ಆತನಿಗೆ ಉಪಕಾರವನ್ನು ಸಲ್ಲಿಸುವಂತೆ ಪ್ರಚೋದಿಸಲ್ಪಟ್ಟಿದ್ದಾರೆ. ಹೀಗೆ, ದೇವರು ನಮಗೋಸ್ಕರ ಮಾಡಿರುವ ಎಲ್ಲ ಒಳ್ಳೇ ಸಂಗತಿಗಳನ್ನು ನಾವು ಪುನರಾಲೋಚಿಸಬೇಕು ಮತ್ತು ಆತನು ಮಾಡುವ ಸಕಲ ಕಾರ್ಯಗಳಲ್ಲಿ ಕಂಡುಬರುವ ಆತನ ಅದ್ಭುತ ಗುಣಗಳನ್ನು ಮನಸ್ಸಿನಲ್ಲಿ ಮನನಮಾಡಬೇಕು. ಹೀಗೆ ಮಾಡುವ ಮೂಲಕ, ನಮ್ಮ ಮಹಾನ್ ಸೃಷ್ಟಿಕರ್ತನ ಭಯಭಕ್ತಿಪ್ರೇರಕವಾದ ವಿವೇಕ ಮತ್ತು ಶಕ್ತಿಯನ್ನು ಅರಿತುಕೊಳ್ಳಲು ನಾವು ಶಕ್ತರಾಗುವೆವು. (ಯೆಶಾಯ 45:18) ಎಲ್ಲಕ್ಕಿಂತಲೂ ಮಿಗಿಲಾಗಿ, ಆತನು ಎಂತಹ ರೀತಿಯ ದೇವರಾಗಿದ್ದಾನೆ, ಆತನು ನಮಗೆ ಕೇವಲ ಜೀವದ ವರದಾನವನ್ನು ನೀಡಲಿಲ್ಲ, ಬದಲಾಗಿ ಜೀವಿಸುವುದರಲ್ಲಿ ಒಳಗೂಡಿರುವ ಅನೇಕ ಸುಖಾನುಭೋಗಗಳಲ್ಲಿ ನಾವು ಆನಂದಿಸುವಂತೆಯೂ ಮಾಡಿದ್ದಾನೆ ಎಂಬುದನ್ನು ಅವಲೋಕಿಸಲು ಇದು ಸಹಾಯ ಮಾಡತಕ್ಕದ್ದು.
ಉದಾಹರಣೆಗೆ, ದೇವರು ಭೂಮಿಯ ಮೇಲೆ ಸೃಷ್ಟಿಸಿದ ಬಗೆಬಗೆಯ ಹೂವುಗಳ ಕುರಿತು ಸ್ವಲ್ಪ ಯೋಚಿಸಿರಿ. ಇವುಗಳ ಕಣ್ಮನ ಸೆಳೆಯುವ ಸೊಬಗನ್ನು ನೋಡಿ, ಅವುಗಳಿಂದ ಮಹದಾನಂದವನ್ನು ಪಡೆದುಕೊಳ್ಳುವ ಸಾಮರ್ಥ್ಯವನ್ನು ಆತನು ನಮಗೆ ಕೊಟ್ಟಿರುವುದು ಎಷ್ಟು ಅದ್ಭುತಕರವಾಗಿದೆ! ತದ್ರೀತಿಯಲ್ಲಿ, ನಮ್ಮ ಜೀವನಾಧಾರಕ್ಕಾಗಿ ಎಲ್ಲ ರೀತಿಯ ಪೋಷಕ ಆಹಾರಗಳನ್ನು ದೇವರು ಒದಗಿಸಿದ್ದಾನೆ. ಆಹಾರವನ್ನು ಸೇವಿಸುವುದರಲ್ಲಿಯೂ ನಾವು ಆನಂದವನ್ನು ಅನುಭವಿಸಸಾಧ್ಯವಾಗುವಂತೆ, ಆತನು ನಮ್ಮನ್ನು ರುಚಿನೋಡುವ ಸಾಮರ್ಥ್ಯದೊಂದಿಗೆ ಸೃಷ್ಟಿಸಿದ್ದನ್ನು ಅವಲೋಕಿಸುವಾಗ, ಆತನೆಷ್ಟು ವಿಚಾರಪರನಾಗಿದ್ದಾನೆ! ದೇವರು ನಿಜವಾಗಿಯೂ ನಮ್ಮನ್ನು ಪ್ರೀತಿಸುತ್ತಾನೆ ಮತ್ತು ಆತನು ನಮ್ಮ ಒಳಿತನ್ನು ಬಯಸುತ್ತಾನೆ ಎಂಬುದಕ್ಕೆ ಇವು ಸ್ಪಷ್ಟವಾದ ಪುರಾವೆಗಳಾಗಿಲ್ಲವೊ?—ಕೀರ್ತನೆ 145:16, 17; ಯೆಶಾಯ 42:5, 8.
ಸೃಷ್ಟಿಕರ್ತನು ತನ್ನ ಬಗ್ಗೆ ನಮಗೆ “ಪ್ರಕೃತಿಯ ಪುಸ್ತಕ”ದ ಮೂಲಕ ತಿಳಿಯಪಡಿಸಿರುವುದಲ್ಲದೆ, ತಾನು ಯಾವ ರೀತಿಯ ದೇವರಾಗಿದ್ದೇನೆ ಎಂಬುದನ್ನು ತನ್ನ ವಾಕ್ಯವಾದ ಬೈಬಲಿನ ಮೂಲಕ ಸಹ ನಮಗೆ ತೋರಿಸುತ್ತಾನೆ. ಏಕೆಂದರೆ, ಗತ ಸಮಯಗಳಲ್ಲಿ ಯೆಹೋವ ದೇವರು ಮಾಡಿರುವ ಅನೇಕ ಪ್ರೀತಿಪರ ಸಂಗತಿಗಳು ಮತ್ತು ಸಮೀಪ ಭವಿಷ್ಯತ್ತಿನಲ್ಲಿ ಮಾನವಕುಲದ ಮೇಲೆ ಬರಮಾಡುವೆನೆಂದು ಆತನು ವಾಗ್ದಾನಿಸಿರುವ ಅನೇಕಾನೇಕ ಆಶೀರ್ವಾದಗಳು ಬೈಬಲಿನಲ್ಲಿ ದಾಖಲಿಸಲ್ಪಟ್ಟಿವೆ. (ಆದಿಕಾಂಡ 22:17, 18; ವಿಮೋಚನಕಾಂಡ 3:17; ಕೀರ್ತನೆ 72:6-16; ಪ್ರಕಟನೆ 21:4, 5) ಎಲ್ಲಕ್ಕಿಂತಲೂ ಹೆಚ್ಚಾಗಿ, ಮಾನವಕುಲದ ಕಡೆಗೆ ತೋರಿಸಲ್ಪಟ್ಟ ದೇವರ ಪ್ರೀತಿಯ ಅತಿ ದೊಡ್ಡ ಅಭಿವ್ಯಕ್ತಿಯನ್ನು ಬೈಬಲು ನಮಗೆ ಪ್ರಕಟಪಡಿಸುತ್ತದೆ. ಅದೇನೆಂದರೆ, ನಾವು ಪಾಪ ಮತ್ತು ಮರಣದ ದಾಸತ್ವದಿಂದ ಬಿಡುಗಡೆಹೊಂದಸಾಧ್ಯವಾಗುವಂತೆ ತನ್ನ ಏಕಜಾತ ಪುತ್ರನನ್ನು ನಮ್ಮ ವಿಮೋಚಕನಾಗಿ ಕಳುಹಿಸಿಕೊಟ್ಟದ್ದೇ. (ರೋಮಾಪುರ 5:8) ನಮ್ಮ ಪ್ರೀತಿಯ ಸೃಷ್ಟಿಕರ್ತನ ಕುರಿತು ನಾವು ಹೆಚ್ಚೆಚ್ಚು ವಿಷಯಗಳನ್ನು ಕಲಿತುಕೊಂಡಂತೆ, ನಾವು ನಮ್ಮ ಹೃದಯದಾಳದಿಂದ ಆತನನ್ನು ಪ್ರೀತಿಸುವಂತೆ ಪ್ರಚೋದಿಸಲ್ಪಡುತ್ತೇವೆ.
ನಮ್ಮ ಜೊತೆಮಾನವರನ್ನು ಪ್ರೀತಿಸಲು ಕಲಿತುಕೊಳ್ಳುವುದು
ಯೇಸು ಸೂಚಿಸಿದಂತೆ, ನಾವು ದೇವರನ್ನು ನಮ್ಮ ಪೂರ್ಣ ಹೃದಯ, ಪೂರ್ಣ ಪ್ರಾಣ, ಮತ್ತು ಪೂರ್ಣ ಬುದ್ಧಿಯಿಂದ ಪ್ರೀತಿಸುವುದರೊಂದಿಗೆ, ನಮ್ಮಂತೆಯೇ ನಮ್ಮ ನೆರೆಯವರನ್ನು ನಾವು ಪ್ರೀತಿಸಬೇಕು. ವಾಸ್ತವದಲ್ಲಿ, ದೇವರ ಮೇಲಣ ಪ್ರೀತಿಯು, ನಾವು ಸಹ ಜೊತೆಮಾನವರನ್ನು ಪ್ರೀತಿಸುವಂತಹ ಹಂಗಿಗೆ ನಮ್ಮನ್ನು ಒಳಪಡಿಸುತ್ತದೆ. ಅಪೊಸ್ತಲ ಯೋಹಾನನು ವಿವರಿಸಿದ್ದು: “ಪ್ರಿಯರೇ, ದೇವರು ನಮ್ಮನ್ನು ಹೀಗೆ ಪ್ರೀತಿಸಿದ ಮೇಲೆ ನಾವು ಒಬ್ಬರನ್ನೊಬ್ಬರು ಪ್ರೀತಿಸುವ ಹಂಗಿನಲ್ಲಿದ್ದೇವೆ.” ಅವನು ಇನ್ನೂ ಒತ್ತಿಹೇಳಿದ್ದು: “ಒಬ್ಬನು ತಾನು ದೇವರನ್ನು ಪ್ರೀತಿಸುತ್ತೇನೆಂದು ಹೇಳಿ ತನ್ನ ಸಹೋದರನನ್ನು ದ್ವೇಷಿಸಿದರೆ ಅವನು ಸುಳ್ಳುಗಾರನಾಗಿದ್ದಾನೆ. ತಾನು ಕಂಡಿರುವ ತನ್ನ ಸಹೋದರನನ್ನು ಪ್ರೀತಿಸದವನು ತಾನು ಕಾಣದಿರುವ ದೇವರನ್ನು ಪ್ರೀತಿಸಲಾರನು. ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನೂ ಪ್ರೀತಿಸಬೇಕೆಂಬ ಆಜ್ಞೆಯನ್ನು ನಾವು ಆತನಿಂದ ಹೊಂದಿದ್ದೇವೆ.”—1 ಯೋಹಾನ 4:11, 20, 21.
ಬೈಬಲು ಮುಂತಿಳಿಸಿದಂತೆಯೇ, ಅಧಿಕಾಂಶ ಜನರು “ಸ್ವಾರ್ಥಚಿಂತಕ”ರಾಗಿದ್ದು, ನಾನು ಮೊದಲು ಎಂಬ ಮನೋಭಾವವನ್ನು ತೋರಿಸುವಂತಹ ಒಂದು ಲೋಕದಲ್ಲಿ ನಾವಿಂದು ಜೀವಿಸುತ್ತಿದ್ದೇವೆ. (2 ತಿಮೊಥೆಯ 3:2) ಆದುದರಿಂದ, ನಾವು ಪ್ರೀತಿಯ ಅತ್ಯುತ್ಕೃಷ್ಟ ಮಾದರಿಯನ್ನು ಕಲಿತುಕೊಳ್ಳಲು ಬಯಸುವಲ್ಲಿ, ಜನರ ಸ್ವಾರ್ಥಪರ ಮಾರ್ಗಗಳನ್ನು ಅನುಸರಿಸುವುದಕ್ಕೆ ಬದಲಾಗಿ, ನಮ್ಮ ಮನಸ್ಸನ್ನು ಸ್ಥಿರಪಡಿಸಿಕೊಂಡು, ನಮ್ಮ ಪ್ರೀತಿಯ ಸೃಷ್ಟಿಕರ್ತನನ್ನು ಅನುಕರಿಸಲು ಗಂಭೀರವಾದ ಪ್ರಯತ್ನಗಳನ್ನು ಮಾಡಬೇಕಾಗಿದೆ. (ರೋಮಾಪುರ 12:2; ಎಫೆಸ 5:1) ದೇವರು “ಉಪಕಾರನೆನಸದವರಿಗೂ ಕೆಟ್ಟವರಿಗೂ ಉಪಕಾರಿಯಾಗಿದ್ದಾನೆ” ಮತ್ತು “ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಮೂಡುವಂತೆ ಮಾಡುತ್ತಾನೆ; ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆಸುರಿಸುತ್ತಾನೆ.” ನಮ್ಮ ಸ್ವರ್ಗೀಯ ತಂದೆಯ ಇಂತಹ ಒಂದು ಅತ್ಯುತ್ತಮ ಮಾದರಿಯು ನಮ್ಮ ಮುಂದಿರುವಾಗ, ನಾವು ಸಹ ಎಲ್ಲರಿಗೂ ದಯೆತೋರಿಸಲು ಮತ್ತು ಸಹಾಯ ಮಾಡಲು ನಮ್ಮಿಂದಾದಷ್ಟು ಪ್ರಯತ್ನವನ್ನು ಮಾಡಬೇಕು. ಹೀಗೆ ಮಾಡುವ ಮೂಲಕ, ‘ಪರಲೋಕದಲ್ಲಿರುವ ನಮ್ಮ ಪ್ರೀತಿಯ ತಂದೆಯ ಮಕ್ಕಳು’ ನಾವಾಗಿದ್ದೇವೆ ಎಂಬುದನ್ನು ನಾವು ರುಜುಪಡಿಸಸಾಧ್ಯವಿದೆ.—ಲೂಕ 6:35; ಮತ್ತಾಯ 5:45.
ಕೆಲವೊಮ್ಮೆ ಇಂತಹ ಪ್ರೀತಿಯ ಕೃತ್ಯಗಳು, ಜನರು ಸತ್ಯ ದೇವರ ಆರಾಧಕರಾಗಿ ಪರಿಣಮಿಸುವಂತೆ ಸಹಾಯ ಮಾಡುವುದರಲ್ಲಿ ಫಲಿಸಿವೆ. ಕೆಲವು ವರ್ಷಗಳ ಹಿಂದೆ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿರುವ ಗೃಹಿಣಿಯೊಬ್ಬಳು, ತನ್ನ ನೆರೆಮನೆಯ ಸ್ತ್ರೀಗೆ ಬೈಬಲ್ ಸಂದೇಶವನ್ನು ತಿಳಿಸಲು ಪ್ರಯತ್ನಿಸಿದಳು. ಆದರೆ ಆ ಸ್ತ್ರೀಯು ಬೈಬಲ್ ಸಂದೇಶಕ್ಕೆ ಕಿವಿಗೊಡಲು ಖಡಾಖಂಡಿತವಾಗಿ ನಿರಾಕರಿಸಿಬಿಟ್ಟಳು. ಆದರೂ, ತೋರಿಸಲ್ಪಟ್ಟ ಪ್ರತಿಕ್ರಿಯೆಯಿಂದ ಅವಳು ನಿರುತ್ಸಾಹಗೊಳ್ಳಲಿಲ್ಲ. ಅದಕ್ಕೆ ಬದಲಾಗಿ, ಈ ಸಾಕ್ಷಿಯು ತನ್ನ ನೆರೆಯವಳಿಗೆ ದಯೆಯನ್ನು ತೋರಿಸಿದಳು ಮತ್ತು ಅವಳಿಗೆ ಸಹಾಯ ಮಾಡಲು ಪ್ರಯತ್ನಿಸಿದಳು. ಒಮ್ಮೆ ಆ ಸ್ತ್ರೀಯು ಮನೆಬದಲಾಯಿಸುತ್ತಿದ್ದಾಗಲೂ ಸಾಕ್ಷಿಯು ಅವಳಿಗೆ ಸಹಾಯ ಮಾಡಿದಳು. ಇನ್ನೊಂದು ಸಲ, ಈ ಸ್ತ್ರೀಯು ತನ್ನ ಸಂಬಂಧಿಕರನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದಾಗ, ಅವಳಿಗೆ ಜೊತೆಯಾಗಿ ಯಾರಾದರೊಬ್ಬರು ಹೋಗುವಂತೆ ಏರ್ಪಡಿಸಿದಳು. ಆ ಸ್ತ್ರೀಯ ಪತಿಯು ಅವಳಿಗೆ ಚಿತ್ರಹಿಂಸೆಯನ್ನು ಕೊಡುತ್ತಿದ್ದರೂ, ಅವಳು ಬೈಬಲ್ ಅಭ್ಯಾಸವನ್ನು ಮಾಡಲು ಒಪ್ಪಿಕೊಂಡಳು ಮತ್ತು ಕಾಲಕ್ರಮೇಣ ಒಬ್ಬ ಹುರುಪಿನ ಕ್ರೈಸ್ತ ಸಾಕ್ಷಿಯಾದಳು. ಹೌದು, ಅಂತಹ ಪ್ರೀತಿಯ ಅಭಿವ್ಯಕ್ತಿಗಳು, ನಿತ್ಯವಾದ ಆಶೀರ್ವಾದಗಳಿಗೆ ತಳಪಾಯವನ್ನು ಹಾಕಿದ್ದವು.
ಈ ವಿಷಯದಲ್ಲಿ ನಾವು ಪ್ರಾಮಾಣಿಕರಾಗಿರುವಲ್ಲಿ, ನಮ್ಮಲ್ಲಿ ಬಹಳಷ್ಟು ಪ್ರಶಂಸಾರ್ಹ ಗುಣಗಳಿರುವುದರಿಂದ ಮಾತ್ರ ದೇವರು ನಮ್ಮನ್ನು ಪ್ರೀತಿಸುತ್ತಾನೆಂದು ಇದರ ಅರ್ಥವಲ್ಲ ಎಂಬ ಸಂಗತಿಯನ್ನು ನಾವು ಒಪ್ಪಿಕೊಳ್ಳುವೆವು. ಅದಕ್ಕೆ ಬದಲಾಗಿ, ನಮ್ಮಲ್ಲಿ ಅನೇಕ ಕುಂದುಕೊರತೆಗಳು ಮತ್ತು ಲೋಪದೋಷಗಳು ಇರುವುದಾದರೂ ಆತನು ನಮ್ಮನ್ನು ಪ್ರೀತಿಸುತ್ತಾನೆ. ದೇವರೇ ಹಾಗೆ ಮಾಡುವಾಗ, ನಮ್ಮ ಜೊತೆಮಾನವರಲ್ಲಿ ಅನೇಕ ಕುಂದುಕೊರತೆಗಳು ಇರುವುದಾದರೂ ನಾವು ಅವರನ್ನು ಪ್ರೀತಿಸಲು ಕಲಿತುಕೊಳ್ಳಬೇಕು. ಬೇರೆಯವರ ತಪ್ಪುಗಳನ್ನು ನೋಡುವುದಕ್ಕೆ ಬದಲಾಗಿ, ಅವರಲ್ಲಿರುವ ಒಳ್ಳೆಯ ಗುಣಗಳನ್ನು ಅರಿತುಕೊಂಡು, ಅವುಗಳನ್ನು ಗಣ್ಯಮಾಡುವಂತೆ ನಾವು ನಮ್ಮನ್ನು ತರಬೇತುಗೊಳಿಸಿಕೊಳ್ಳುವಲ್ಲಿ, ನಾವು ಅವರ ಕಡೆಗೆ ಪ್ರೀತಿಯನ್ನು ತೋರಿಸುವ ಪ್ರಚೋದನೆಗೆ ಒಳಗಾಗುವುದು ಹೆಚ್ಚು ಸುಲಭ. ಆಗ ಅವರ ಕಡೆಗಿನ ನಮ್ಮ ಅನಿಸಿಕೆಯು ಮೂಲತತ್ವಗಳಿಂದ ನಿಯಂತ್ರಿಸಲ್ಪಡುವ ಪ್ರೀತಿಯನ್ನೂ ಮೀರಬಹುದು ಮತ್ತು ಆಪ್ತ ಮಿತ್ರರ ನಡುವೆ ಇರುವಂತಹ ಆದರಣೀಯ ಮಮತೆ ಹಾಗೂ ಅಕ್ಕರೆಯು ಇದರಲ್ಲಿ ಒಳಗೂಡಬಹುದು.
ನಿಮ್ಮ ಪ್ರೀತಿಯು ಬೆಳೆಯುವಂತೆ ಮಾಡುವುದು
ಪ್ರೀತಿ ಮತ್ತು ಸ್ನೇಹವನ್ನು ಪೋಷಿಸಬೇಕು ಮತ್ತು ಬೆಳೆಸಬೇಕು. ಹೀಗೆ ಮಾಡಲು ಯಥಾರ್ಥಭಾವ ಮತ್ತು ಪ್ರಾಮಾಣಿಕತೆಗಳು ಅತ್ಯಗತ್ಯ ಅಂಶಗಳಾಗಿವೆ. ಕೆಲವರು, ತಾವು ಯಾರೊಂದಿಗೆ ಸ್ನೇಹಮಾಡಲು ಬಯಸುತ್ತಾರೋ ಅವರಿಗೆ ಒಂದು ಒಳ್ಳೆಯ ಅಭಿಪ್ರಾಯವನ್ನು ಕೊಡಲಿಕ್ಕಾಗಿ, ತಮ್ಮ ತಪ್ಪುಗಳನ್ನು ಮರೆಮಾಚಲು ಪ್ರಯತ್ನಿಸುತ್ತಾರೆ. ಆದರೂ, ಕೆಲವೊಮ್ಮೆ ಇದು ತದ್ವಿರುದ್ಧವಾದ ಪರಿಣಾಮವನ್ನು ಉಂಟುಮಾಡುತ್ತದೆ, ಏಕೆಂದರೆ ಸಮಯಾನಂತರ ಕೆಲವು ಸ್ನೇಹಿತರು ನಿಜ ಸಂಗತಿಗಳನ್ನು ಕಂಡುಕೊಳ್ಳುತ್ತಾರೆ ಮತ್ತು ಇಂತಹ ಅಪ್ರಾಮಾಣಿಕತೆಯನ್ನು ನೋಡಿ ತಮ್ಮ ಗೆಳೆತನವನ್ನು ನಿಲ್ಲಿಸಿಬಿಡುತ್ತಾರೆ. ಆದುದರಿಂದ, ನಮ್ಮಲ್ಲಿ ಕುಂದುಕೊರತೆಗಳಿದ್ದು, ಅವುಗಳನ್ನು ಸರಿಪಡಿಸಲು ನಾವು ಹೆಣಗಾಡುತ್ತಿರುವಾಗಲೂ, ಇತರರ ಮುಂದೆ ನಮ್ಮ ನಿಜ ವ್ಯಕ್ತಿತ್ವವನ್ನು ತೋರಿಸಿಕೊಳ್ಳಲು ಭಯಪಡಬಾರದು. ಇದು ಅವರೊಂದಿಗೆ ಸ್ನೇಹವನ್ನು ಆರಂಭಿಸಲು ಸಹಾಯ ಮಾಡಬಹುದು.
ದೃಷ್ಟಾಂತಕ್ಕಾಗಿ, ಪೂರ್ವದೇಶದಲ್ಲಿದ್ದ ಒಂದು ಸಭೆಯ ವೃದ್ಧ ಸಾಕ್ಷಿಯೊಬ್ಬಳಿಗೆ ಹೆಚ್ಚು ಓದುಬರಹವಿರಲಿಲ್ಲ. ಆದರೂ, ಈ ಸಂಗತಿಯನ್ನು ಇತರರಿಂದ ಮರೆಮಾಚಲು ಅವಳು ಎಂದೂ ಪ್ರಯತ್ನಿಸುತ್ತಿರಲಿಲ್ಲ. ಉದಾಹರಣೆಗೆ, ಅನ್ಯಜನಾಂಗಗಳ ಕಾಲಗಳು 1914ರಲ್ಲಿ ಅಂತ್ಯಗೊಂಡವು ಎಂಬುದನ್ನು ಬೈಬಲ್ ಪ್ರವಾದನೆಗಳು ಹಾಗೂ ಇತಿಹಾಸದಿಂದ ಹೇಗೆ ರುಜುಪಡಿಸುವುದು ಎಂಬುದನ್ನು ಇತರರಿಗೆ ತೋರಿಸಲು ನಾನು ಅಶಕ್ತಳು ಎಂದು ಅವಳು ಮುಚ್ಚುಮರೆಯಿಲ್ಲದೆ ಒಪ್ಪಿಕೊಳ್ಳುತ್ತಾಳೆ.a ಆದರೂ, ಶುಶ್ರೂಷೆಗಾಗಿರುವ ಹುರುಪಿನಲ್ಲಿ ಹಾಗೂ ಸಹೋದರರಿಗಾಗಿರುವ ಪ್ರೀತಿ ಹಾಗೂ ಉದಾರತೆಯಲ್ಲಿ ಅವಳು ಎಷ್ಟು ಅತ್ಯುತ್ತಮವಾದ ಮಾದರಿಯನ್ನಿಡುತ್ತಾಳೆಂದರೆ, ಸಭೆಯ ಅಮೂಲ್ಯ ರತ್ನ ಎಂದು ಅವಳನ್ನು ಬಹಳ ಅಕ್ಕರೆಯಿಂದ ಸಂಬೋಧಿಸಲಾಗುತ್ತದೆ.
ಕೆಲವು ಸಂಸ್ಕೃತಿಗಳಲ್ಲಿ, ಬಹಿರಂಗವಾಗಿ ಪ್ರೀತಿಯನ್ನು ತೋರಿಸಿದರೆ ಜನರು ಮುಖವನ್ನು ಸಿಂಡರಿಸುತ್ತಾರೆ; ಇತರರೊಂದಿಗಿನ ತಮ್ಮ ವ್ಯವಹಾರಗಳಲ್ಲಿ ಸಭ್ಯವಾದ ಶಿಷ್ಟಾಚಾರವನ್ನು ತೋರಿಸುವಂತೆ ಜನರಿಗೆ ಕಲಿಸಲಾಗಿರುತ್ತದೆ. ವಿನಯಶೀಲರಾಗಿರುವುದು ಮತ್ತು ಇತರರಿಗೆ ಪರಿಗಣನೆ ತೋರಿಸುವುದು ಯಾವಾಗಲೂ ಒಳ್ಳೇದಾಗಿರುವುದಾದರೂ, ನಮ್ಮ ಸಭ್ಯ ವರ್ತನೆಯು, ಬೇರೆಯವರ ಬಗ್ಗೆ ನಮಗಿರುವ ಅನಿಸಿಕೆಗಳನ್ನು ವ್ಯಕ್ತಪಡಿಸುವುದರಿಂದ ನಮ್ಮನ್ನು ಅದುಮಿಬಿಡುವಂತೆ ಅನುಮತಿಸಬಾರದು. ತಾನಾದುಕೊಂಡಿದ್ದ ಪುರಾತನ ಇಸ್ರಾಯೇಲ್ ಜನಾಂಗದ ಬಗ್ಗೆ ತನಗಿದ್ದ ಪ್ರೀತಿಯನ್ನು ತೋರಿಸಿಕೊಳ್ಳಲು ಯೆಹೋವನು ಎಂದೂ ನಾಚಿಕೆಪಟ್ಟುಕೊಳ್ಳಲಿಲ್ಲ. ಆತನು ಅವರಿಗೆ ಹೇಳಿದ್ದು: “ನಾನು ನಿನ್ನನ್ನು ಪ್ರೀತಿಸಿರುವದು ಶಾಶ್ವತ ಪ್ರೇಮದಿಂದಲೇ.” (ಯೆರೆಮೀಯ 31:3) ತದ್ರೀತಿಯಲ್ಲಿ, ಥೆಸಲೊನೀಕದಲ್ಲಿದ್ದ ತನ್ನ ಜೊತೆವಿಶ್ವಾಸಿಗಳಿಗೆ ಅಪೊಸ್ತಲ ಪೌಲನು ಹೇಳಿದ್ದು: “ನೀವು ನಮಗೆ ಅತಿ ಪ್ರಿಯರಾದ ಕಾರಣ ನಾವು ನಿಮ್ಮಲ್ಲಿ ಮಮತೆಯುಳ್ಳವರಾಗಿ ದೇವರ ಸುವಾರ್ತೆಯನ್ನು ಹೇಳುವದಕ್ಕೆ ಮಾತ್ರವಲ್ಲದೆ ನಿಮಗೋಸ್ಕರ ಪ್ರಾಣವನ್ನೇ ಕೊಡುವದಕ್ಕೆ ಸಂತೋಷಿಸುವವರಾದೆವು.” (1 ಥೆಸಲೊನೀಕ 2:8) ಆದುದರಿಂದ, ಜೊತೆಮಾನವರ ಕಡೆಗೆ ನಿಜವಾದ ಮಮತೆಯನ್ನು ಬೆಳೆಸಿಕೊಳ್ಳಲು ನಾವು ಪ್ರಯತ್ನಿಸುವಾಗ, ನಮ್ಮ ಅನಿಸಿಕೆಗಳನ್ನು ಮನಸ್ಸಿನಲ್ಲೇ ಇಟ್ಟುಕೊಳ್ಳುವ ಬದಲಿಗೆ, ಅದನ್ನು ಸ್ವಾಭಾವಿಕವಾಗಿ ವ್ಯಕ್ತಪಡಿಸುವುದು ಬೈಬಲಿನ ಬೋಧನೆಗೆ ಹೊಂದಿಕೆಯಲ್ಲಿದೆ.
ಸತತ ಪ್ರಯತ್ನದ ಅಗತ್ಯವಿದೆ
ಇತರರ ಕಡೆಗೆ ಪ್ರೀತಿಯ ಅನಿಸಿಕೆಯುಂಟಾಗುವುದು ಹಾಗೂ ಅದನ್ನು ವ್ಯಕ್ತಪಡಿಸುವುದು, ನಿರಂತರ ಪ್ರಕ್ರಿಯೆಯಾಗಿದೆ. ಹೀಗೆ ಮಾಡಲು ಅತ್ಯಧಿಕ ಪ್ರಯತ್ನದ ಅಗತ್ಯ ನಮಗಿದೆ. ಏಕೆಂದರೆ, ನಮ್ಮ ಸ್ವಂತ ಅಪರಿಪೂರ್ಣತೆಗಳನ್ನು ಜಯಿಸಲು ಹಾಗೂ ಈ ಪ್ರೀತಿರಹಿತ ಲೋಕದ ಬಲವಾದ ಪ್ರಭಾವವನ್ನು ಪ್ರತಿರೋಧಿಸಲು ನಾವು ತುಂಬ ಕಷ್ಟಪಡಬೇಕಾಗಿದೆ. ಆದರೂ, ಇದರಿಂದ ದೊರಕುವ ಸಮೃದ್ಧ ಪ್ರತಿಫಲಗಳು ನಿಜವಾಗಿಯೂ ಪ್ರಯತ್ನಕ್ಕೆ ಅರ್ಹವಾಗಿವೆ.—ಮತ್ತಾಯ 24:12.
ಈ ಅಪರಿಪೂರ್ಣ ಲೋಕದಲ್ಲಿಯೂ, ನಮ್ಮ ಜೊತೆಮಾನವರೊಂದಿಗೆ ಹೆಚ್ಚು ಉತ್ತಮ ಸಂಬಂಧಗಳಲ್ಲಿ ನಾವು ಆನಂದಿಸಬಲ್ಲೆವು. ಇದರ ಫಲಿತಾಂಶವಾಗಿ, ನಮಗೆ ಹಾಗೂ ಇತರರಿಗೆ ಸಂತೋಷ, ಸಮಾಧಾನ, ಮತ್ತು ಸಂತೃಪ್ತಿಯು ಸಿಗುತ್ತದೆ. ಇಂತಹ ಪ್ರಯತ್ನವನ್ನು ಮಾಡುವ ಮೂಲಕ, ದೇವರ ನೂತನ ಲೋಕದಲ್ಲಿ ಸದಾಕಾಲ ಜೀವಿಸುವ ಅದ್ಭುತಕರ ನಿರೀಕ್ಷೆಗೆ ನಾವು ಅರ್ಹರು ಎಂಬುದನ್ನು ನಾವು ರುಜುಪಡಿಸಸಾಧ್ಯವಿದೆ. ಎಲ್ಲಕ್ಕಿಂತಲೂ ಮಿಗಿಲಾಗಿ, ಪ್ರೀತಿಯ ಅತ್ಯುತ್ಕೃಷ್ಟ ಮಾದರಿಯನ್ನು ಅನುಸರಿಸುವ ಮೂಲಕ, ಈಗ ಮತ್ತು ಸದಾಕಾಲಕ್ಕೂ ನಮ್ಮ ಪ್ರೀತಿಯ ಸೃಷ್ಟಿಕರ್ತನ ಅಂಗೀಕಾರವನ್ನು ಹಾಗೂ ಆಶೀರ್ವಾದಗಳನ್ನು ನಾವು ಪಡೆದುಕೊಳ್ಳಬಹುದು!
[ಅಧ್ಯಯನ ಪ್ರಶ್ನೆಗಳು]
a ಹೆಚ್ಚಿನ ವಿವರಗಳಿಗಾಗಿ, ಶಾಸ್ತ್ರಗಳ ಒಳನೋಟ (ಇಂಗ್ಲಿಷ್)ದ 1ನೆಯ ಸಂಪುಟದಲ್ಲಿರುವ 132-5ನೆಯ ಪುಟಗಳನ್ನು ನೋಡಿರಿ.
[ಪುಟ 10 ರಲ್ಲಿರುವ ಚಿತ್ರಗಳು]
ಕ್ರೈಸ್ತ ಪ್ರೀತಿಯನ್ನು ದಯಾಪರ ಕೃತ್ಯಗಳ ಮೂಲಕ ವ್ಯಕ್ತಪಡಿಸಸಾಧ್ಯವಿದೆ
[ಪುಟ 8 ರಲ್ಲಿರುವ ಚಿತ್ರ ಕೃಪೆ]
UN PHOTO 186226/M. Grafman