ದಾರ್ಯಾವೆಷ—ಒಬ್ಬ ನ್ಯಾಯವಂತ ಅರಸ
ಒಬ್ಬ ಪ್ರಸಿದ್ಧ ಅರಸನು, ತಾನು ಮಾಡಿದ ನಿರ್ಮಾಣ ಕಾರ್ಯಯೋಜನೆಗಳ ಕುರಿತು ಒಮ್ಮೆ ಕೊಚ್ಚಿಕೊಂಡದ್ದು: “ಬಾಬೆಲಿನ ಆವರಣದ ಸುತ್ತಲೂ, ಪೂರ್ವದ ದಿಕ್ಕಿನಲ್ಲಿ ನಾನು ಒಂದು ಬಲವಾದ ಗೋಡೆಯನ್ನು ಕಟ್ಟಿದ್ದೇನೆ. ನಾನೊಂದು ಕಂದಕವನ್ನು ಅಗೆದಿದ್ದೇನೆ . . . ಕಲ್ಲರಗು ಮತ್ತು ಇಟ್ಟಿಗೆಯಿಂದ ಪರ್ವತದಂತಹ ಅಚಲ ಬಲಿಷ್ಠವಾದ ಗೋಡೆಯೊಂದನ್ನು ಕಟ್ಟಿದೆ.” ಹೌದು, ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು, ಒಂದು ಬೃಹತ್ ನಿರ್ಮಾಣ ಕಾರ್ಯಯೋಜನೆಯಲ್ಲಿ ಒಳಗೂಡಿದ್ದನು. ತನ್ನ ಸಾಮ್ರಾಜ್ಯದ ರಾಜಧಾನಿ ನಗರವನ್ನು ಭದ್ರಗೊಳಿಸಲು ತುಂಬ ಪ್ರಯಾಸಪಟ್ಟನು. ಆದರೆ ಬಾಬೆಲ್ ನಗರವು ಅವನು ಎಣಿಸಿದಷ್ಟು ಅಭೇದ್ಯವಾಗಿ ಪರಿಣಮಿಸಲಿಲ್ಲ.
ಇದು ಸಾ.ಶ.ಪೂ. 539ರ ಅಕ್ಟೋಬರ್ 5ರಂದು ರುಜುವಾಯಿತು. ಮೇದ್ಯ ಸೈನ್ಯದೊಂದಿಗೆ, ಪಾರಸೀಯ ಅರಸನಾದ IIನೆಯ ಕೋರೆಷನು, ಆ ದಿನದಂದು ಬಾಬೆಲನ್ನು ಜಯಿಸಿ ಅದರ ಕಸ್ದೀಯ ಅರಸನಾದ ಬೇಲ್ಶಚ್ಚರನನ್ನು ಹತಿಸಿದನು. ಆಗತಾನೇ ಜಯಿಸಲ್ಪಟ್ಟಿದ್ದ ಈ ನಗರದ ಪ್ರಥಮ ಅರಸನು ಈಗ ಯಾರಾಗುವನು? ಈ ನಗರದ ಪತನವಾದಾಗ ಅಲ್ಲಿದ್ದ ದೇವರ ಪ್ರವಾದಿಯಾದ ದಾನಿಯೇಲನು ಬರೆದುದು: “ಮೇದ್ಯಯನಾದ ದಾರ್ಯಾವೆಷನು ರಾಜ್ಯವನ್ನು ತೆಗೆದುಕೊಂಡನು. ಅವನ ವಯಸ್ಸು ಹೆಚ್ಚುಕಡಿಮೆ ಅರುವತ್ತೆರಡು.”—ದಾನಿಯೇಲ 5:30, 31.
ದಾರ್ಯಾವೆಷನು ಯಾರಾಗಿದ್ದನು? ಅವನು ಯಾವ ರೀತಿಯ ಅರಸನಾಗಿದ್ದನು? ಬಾಬೆಲಿನಲ್ಲಿ 70ಕ್ಕಿಂತಲೂ ಹೆಚ್ಚು ವರ್ಷಗಳ ವರೆಗೆ ಪರದೇಶವಾಸದಲ್ಲಿದ್ದ ಪ್ರವಾದಿ ದಾನಿಯೇಲನೊಂದಿಗೆ ಅವನು ಹೇಗೆ ವರ್ತಿಸಿದನು?
ಅಪೂರ್ಣ ಚರಿತ್ರೆಯುಳ್ಳ ಒಬ್ಬ ಅರಸ
ಮೇದ್ಯನಾದ ದಾರ್ಯಾವೆಷನ ಕುರಿತು ಇರುವ ಚಾರಿತ್ರಿಕ ಮಾಹಿತಿಯು ತುಂಬ ಕಡಿಮೆ. ಮೇದ್ಯರು ಕಾರ್ಯತಃ ಯಾವುದೇ ಲಿಖಿತ ದಾಖಲೆಗಳನ್ನು ಬರೆದಿಡಲಿಲ್ಲ. ಅಲ್ಲದೆ, ಮಧ್ಯಪೂರ್ವದಲ್ಲಿ ಅಗೆದುತೆಗೆಯಲ್ಪಟ್ಟ ಸಾವಿರಾರು ಬೆಣೆಲಿಪಿ ಫಲಕಗಳು, ಮಧ್ಯದಲ್ಲಿ ಕೆಲವೊಂದು ವಿವರಗಳನ್ನು ಬಿಟ್ಟುಬಿಡುತ್ತಾ, ಒಂದು ಅಸಂಪೂರ್ಣ ಚರಿತ್ರೆಯನ್ನು ಒದಗಿಸುತ್ತವೆ. ಇಂದಿನ ವರೆಗೂ ಊಳಿದಿರುವ ಇತರ ಪ್ರಾಚೀನಕಾಲದ ಐಹಿಕ ಬರಹಗಳ ಸಂಖ್ಯೆ ಕಡಿಮೆಯಾಗಿದ್ದು, ದಾರ್ಯಾವೆಷನನ್ನು ಒಳಗೊಂಡಿರುವ ಘಟನೆಗಳು ನಡೆದ ನಂತರ, ಸುಮಾರು ಒಂದು ಶತಮಾನ ಅಥವಾ ಅದಕ್ಕಿಂತಲೂ ಹೆಚ್ಚು ಸಮಯದ ನಂತರ ಬರೆಯಲ್ಪಟ್ಟವುಗಳಾಗಿವೆ.
ಹಾಗಿದ್ದರೂ, ಮೇದ್ಯ ರಾಜಧಾನಿಯಾದ ಎಕ್‌ಬಾಟಾನಾವನ್ನು ಆಕ್ರಮಿಸಿದ ನಂತರ, ಪಾರಸೀಯ ಅರಸನಾದ IIನೆಯ ಕೋರೆಷನು, ಮೇದ್ಯರ ನಿಷ್ಠೆಯನ್ನು ಗಳಿಸಲು ಶಕ್ತನಾಗಿದ್ದನೆಂದು ರುಜುವಾತು ಸೂಚಿಸುತ್ತದೆ. ತದನಂತರ, ಮೇದ್ಯರು ಮತ್ತು ಪಾರಸೀಯರು ಅವನ ನಾಯಕತ್ವದ ಕೆಳಗೆ ಐಕ್ಯರಾಗಿ ಹೋರಾಡಿದರು. ಅವರ ಸಂಬಂಧದ ಕುರಿತಾಗಿ, ಲೇಖಕನಾದ ರಾಬರ್ಟ್ ಕಾಲಿನ್ಸ್, ಮೇದ್ಯರು ಮತ್ತು ಪಾರಸೀಯರು (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ ಬರೆದುದು: “ಶಾಂತಿಯ ಸಮಯದಲ್ಲಿ ಮೇದ್ಯರು, ಪಾರಸೀಯರಿಗೆ ಸಮಾನವಾದ ಸ್ಥಾನಗಳಲ್ಲಿರುತ್ತಿದ್ದರು. ಅವರನ್ನು ಆಗಾಗ್ಗೆ ಪೌರ ಸರಕಾರದಲ್ಲಿ ಉಚ್ಚ ಸ್ಥಾನಗಳಿಗೆ ನೇಮಿಸಲಾಗುತ್ತಿತ್ತು ಮತ್ತು ಪಾರಸೀಯ ಸೇನೆಯಲ್ಲಿ ಮುಂದಾಳತ್ವವಹಿಸುವ ಸ್ಥಾನಗಳನ್ನು ಕೊಡಲಾಗುತ್ತಿತ್ತು. ವಿಜಯಿಗಳು ಮತ್ತು ಸೋತವರ ನಡುವೆ ಯಾವುದೇ ಭೇದ ಮಾಡದೆ, ವಿದೇಶೀಯರು ಅವರನ್ನು ಮೇದ್ಯ ಪಾರಸಿಯರು ಎಂದು ಸೂಚಿಸಿ ಮಾತಾಡುತ್ತಿದ್ದರು.” ಹೀಗೆ, ಮೇದ್ಯವು ಪಾರಸೀಯರೊಂದಿಗೆ ಬೆರೆತು, ಮೇದ್ಯ-ಪಾರಸೀಯ ಸಾಮ್ರಾಜ್ಯವನ್ನು ರಚಿಸಿತು.—ದಾನಿಯೇಲ 5:28; 8:3, 4, 20.
ಬಾಬೆಲಿನ ಪತನದಲ್ಲಿ ಮೇದ್ಯರು ನಿಶ್ಚಯವಾಗಿಯೂ ಒಂದು ಪ್ರಮುಖ ಪಾತ್ರವನ್ನು ವಹಿಸಿದರು. ಆ ಸಮಯದಲ್ಲಿ ಬಾಬೆಲನ್ನು ಒಳಗೂಡಿದ್ದ ಮೇದ್ಯ ಪಾರಸೀಯ ಸಾಮ್ರಾಜ್ಯದ ಪ್ರಥಮ ಅರಸನು, “ಅಹಷ್ವೇರೋಷನ ಮಗನೂ ಮೇದ್ಯಯ ವಂಶದವನೂ . . . ಆದ ದಾರ್ಯಾವೆಷ”ನಾಗಿದ್ದನೆಂದು ಶಾಸ್ತ್ರವಚನಗಳು ತಿಳಿಸುತ್ತವೆ. (ದಾನಿಯೇಲ 9:1) ಅವನ ರಾಜ್ಯಾಧಿಕಾರದಲ್ಲಿ, “ಮೇದ್ಯಯರ ಮತ್ತು ಪಾರಸಿಯರ ಎಂದಿಗೂ ರದ್ದಾಗದ ಧರ್ಮವಿಧಿಗಳ ಪ್ರಕಾರ” ನಿಯಮಗಳನ್ನು ರಚಿಸುವ ಅಧಿಕಾರ ಒಳಗೂಡಿತ್ತು. (ದಾನಿಯೇಲ 6:8) ದಾರ್ಯಾವೆಷನ ಕುರಿತಾಗಿ ಬೈಬಲ್ ನೀಡುವ ಮಾಹಿತಿಯು, ಅವನ ವ್ಯಕ್ತಿತ್ವದ ಒಂದು ನಸುನೋಟವನ್ನೂ ಕೊಡುತ್ತದೆ. ಅಷ್ಟು ಮಾತ್ರವಲ್ಲದೆ, ಅವನ ಕುರಿತಾದ ಐಹಿಕ ಮಾಹಿತಿಯು ಇಲ್ಲದಿರುವುದಕ್ಕೆ ಯುಕ್ತವಾದ ಕಾರಣವನ್ನೂ ಅದು ಕೊಡುತ್ತದೆ.
ದಾನಿಯೇಲನಿಗೆ ಅನುಗ್ರಹ ತೋರಿಸಲಾಗುತ್ತದೆ
ಬಾಬೆಲಿನಲ್ಲಿ ಅಧಿಕಾರವನ್ನು ಪಡೆದ ಕೂಡಲೇ, ದಾರ್ಯಾವೆಷನು, “ರಾಜ್ಯದ ಆಯಾ ಭಾಗಗಳ ಮೇಲೆ ನೂರಿಪ್ಪತ್ತು ಮಂದಿ ದೇಶಾಧಿಪತಿಗಳನ್ನೂ . . . ಮೂವರು ಮುಖ್ಯಾಧಿಕಾರಿಗಳನ್ನೂ” ನೇಮಿಸಿದನು. “ಆ ಮುಖ್ಯಾಧಿಕಾರಿಗಳಲ್ಲಿ ದಾನಿಯೇಲನು ಒಬ್ಬನು.” (ದಾನಿಯೇಲ 6:1, 2) ಆದರೆ ದಾನಿಯೇಲನಿಗೆ ದೊರಕಿದ ಉಚ್ಚ ಪದವಿಯನ್ನು ನೋಡಿ, ಇತರ ಅಧಿಕಾರಿಗಳಿಗೆ ಸಹಿಸಲಾಗಲಿಲ್ಲ. ನಿಸ್ಸಂದೇಹವಾಗಿ ಅವನ ನಿಷ್ಠೆಯು ಭ್ರಷ್ಟಾಚಾರವನ್ನು ತಡೆದುಹಿಡಿದು, ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದಿರಬಹುದು. ಅರಸನು, ದಾನಿಯೇಲನಿಗೆ ಅನುಗ್ರಹ ತೋರಿಸಿ, ಅವನನ್ನು ಪ್ರಧಾನ ಮಂತ್ರಿಯಾಗಿ ಮಾಡುವುದರ ಕುರಿತು ಆಲೋಚಿಸುತ್ತಿದ್ದದರಿಂದ, ಈ ಮುಖ್ಯಾಧಿಕಾರಿಗಳು ಅಸೂಯೆಪಟ್ಟಿದ್ದಿರಲೂಬಹುದು.
ಈ ಸಮಸ್ಯೆಯನ್ನು ಕೊನೆಗೊಳಿಸಲು, ಇಬ್ಬರು ಅಧಿಕಾರಿಗಳು ಮತ್ತು ದೇಶಾಧಿಪತಿಗಳು, ಕಾನೂನನ್ನೇ ಉಪಯೋಗಿಸುತ್ತಾ ಒಂದು ಪಾಶವನ್ನು ರಚಿಸಿದರು. ಅವರು ಅರಸನ ಬಳಿ ಹೋಗಿ, ದಾರ್ಯಾವೆಷನಿಗಲ್ಲದೆ “ಯಾವ ದೇವರಿಗಾಗಲಿ ಮನುಷ್ಯನಿಗಾಗಲಿ ವಿಜ್ಞಾಪನೆ ಮಾಡಿ”ಕೊಳ್ಳುವುದನ್ನು 30 ದಿನಗಳ ತನಕ ನಿಷೇಧಿಸುವ ಒಂದು ಕಟ್ಟಳೆಗೆ ತನ್ನ ಒಪ್ಪಿಗೆಯನ್ನು ಕೊಡುವಂತೆ ಕೇಳಿಕೊಂಡರು. ಈ ಕಟ್ಟಳೆಯನ್ನು ಉಲ್ಲಂಘಿಸುವ ಯಾವನೇ ವ್ಯಕ್ತಿಯು ಸಿಂಹದ ಗವಿಯೊಳಗೆ ಎಸೆಯಲ್ಪಡಬೇಕೆಂದು ಅವರು ಸಲಹೆಯಿತ್ತರು. ಅಂತಹ ಒಂದು ಕಟ್ಟಳೆಯಿಂದ, ಉಚ್ಚ ಪದವಿಯಲ್ಲಿರುವ ಎಲ್ಲ ಸರಕಾರಿ ಅಧಿಕಾರಿಗಳು ಸಂತೋಷಪಡುವರು ಎಂದು ದಾರ್ಯಾವೆಷನು ನಂಬುವಂತೆ ಮಾಡಲಾಯಿತು ಮತ್ತು ಇದು ಆ ಅಧಿಕಾರಿಗಳಿಗೆ, ಅರಸನೆಡೆಗೆ ತಮಗಿರುವ ನಿಷ್ಠೆಯನ್ನು ತೋರಿಸಲು ಒಂದು ಸದಾವಕಾಶವಾಗಿರುವಂತೆ ತೋರಿತು.—ದಾನಿಯೇಲ 6:1-3, 6-8.
ದಾರ್ಯಾವೆಷನು ಆ ಕಟ್ಟಳೆಗೆ ಒಪ್ಪಿಗೆಯನ್ನು ಕೊಟ್ಟ ಕೂಡಲೇ, ಅದರ ಪರಿಣಾಮಗಳನ್ನು ನೋಡಲಾರಂಭಿಸಿದನು. ದಾನಿಯೇಲನು ಯೆಹೋವ ದೇವರಿಗೆ ಪ್ರಾರ್ಥಿಸುವುದನ್ನು ಬಿಡದೆ ಮುಂದುವರಿಸಿದರಿಂದ, ಅವನು ಆ ಕಟ್ಟಳೆಯನ್ನು ಉಲ್ಲಂಘಿಸುವವರಲ್ಲಿ ಪ್ರಥಮನಾದನು. (ಅ. ಕೃತ್ಯಗಳು 5:29ನ್ನು ಹೋಲಿಸಿರಿ.) ಆ ಬದಲಿಸಲಾಗದ ಕಟ್ಟಳೆಯಿಂದ ದಾನಿಯೇಲನನ್ನು ಉಪಾಯವಾಗಿ ತಪ್ಪಿಸಲು ಅರಸನು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದರೂ, ನಂಬಿಗಸ್ತ ದಾನಿಯೇಲನನ್ನು ಕೊನೆಯಲ್ಲಿ ಸಿಂಹಗಳ ಗವಿಯೊಳಗೆ ಎಸೆಯಲಾಯಿತು. ದಾನಿಯೇಲನ ದೇವರು, ಅವನನ್ನು ರಕ್ಷಿಸಲು ಸಮರ್ಥನಾಗಿದ್ದನೆಂಬ ಭರವಸೆಯ ಮಾತುಗಳನ್ನು ದಾರ್ಯಾವೆಷನು ನುಡಿದನು.—ದಾನಿಯೇಲ 6:9-17.
ಉಪವಾಸಮಾಡುತ್ತಾ, ನಿದ್ರೆಯಿಲ್ಲದೆ ರಾತ್ರಿಯನ್ನು ಕಳೆದ ಬಳಿಕ, ದಾರ್ಯಾವೆಷನು ಸಿಂಹಗಳ ಗವಿಯ ಬಳಿ ಓಡಿದನು. ದಾನಿಯೇಲನಿಗೆ ಯಾವುದೇ ಹಾನಿಯಾಗದೆ, ಅವನು ಜೀವಂತನಾಗಿದ್ದುದನ್ನು ನೋಡಿ ಅವನಿಗೆಷ್ಟು ಸಂತೋಷವಾಗಿದ್ದಿರಬೇಕು ಎಂಬುದನ್ನು ಊಹಿಸಿಕೊಳ್ಳಿರಿ! ಪ್ರತೀಕಾರದ ತೀರ್ಪಾಗಿ, ಅರಸನು ತಡಮಾಡದೆ, ದಾನಿಯೇಲನ ಮೇಲೆ ಆರೋಪ ಹೊರಿಸಿದವರನ್ನು ಮತ್ತು ಅವರ ಕುಟುಂಬಗಳನ್ನು ಸಿಂಹಗಳ ಗವಿಯೊಳಗೆ ಎಸೆದನು. ‘ತನ್ನ ರಾಜ್ಯದವರೆಲ್ಲರೂ ದಾನಿಯೇಲನ ದೇವರಿಗೆ ಭಯಭಕ್ತಿಯಿಂದ ನಡೆದುಕೊಳ್ಳಬೇಕೆಂಬ’ ಆಜ್ಞೆಯನ್ನೂ ಅವನು ಹೊರಡಿಸಿದನು.—ದಾನಿಯೇಲ 6:18-27.
ಸ್ಪಷ್ಟವಾಗಿ, ದಾರ್ಯಾವೆಷನು ದಾನಿಯೇಲನ ದೇವರನ್ನು ಮತ್ತು ಅವನ ಧರ್ಮವನ್ನು ಗೌರವಿಸಿದನು. ಮತ್ತು ದಾನಿಯೇಲನಿಗೆ ನ್ಯಾಯವನ್ನು ದೊರಕಿಸಿಕೊಡಲು ಅವನು ಹಾತೊರೆಯುತ್ತಿದ್ದನು. ಆದರೂ, ದಾನಿಯೇಲನ ಮೇಲೆ ಅರೋಪ ಹೊರಿಸಿದವರಿಗೆ ಶಿಕ್ಷೆಯನ್ನು ವಿಧಿಸಿದ್ದರಿಂದ, ಇತರ ಅಧಿಕಾರಿಗಳು ಅವನನ್ನು ದ್ವೇಷಿಸಲು ಆರಂಭಿಸಿದ್ದಿರಬಹುದು. ಅಲ್ಲದೆ, ರಾಜ್ಯದಲ್ಲಿರುವವರೆಲ್ಲರೂ, ‘ದಾನಿಯೇಲನ ದೇವರಿಗೆ ಭಯಭಕ್ತಿಯಿಂದ ನಡೆದುಕೊಳ್ಳಬೇಕೆಂಬ’ ದಾರ್ಯಾವೆಷನ ಘೋಷಣೆಯು, ಬಾಬೆಲಿನ ಪ್ರಬಲವಾದ ಪುರೋಹಿತ ವರ್ಗದವರಿಗೆ ತೀವ್ರ ಅಸಮಾಧಾನವನ್ನು ಉಂಟುಮಾಡಿದ್ದಿರಬಹುದು. ಲಿಪಿಗಾರರು ಈ ಅಂಶಗಳಿಂದ ಖಂಡಿತವಾಗಿಯೂ ಪ್ರಭಾವಿಸಲ್ಪಟ್ಟಿದ್ದಿರಲಾಗಿ, ದಾರ್ಯಾವೆಷನ ಕುರಿತಾದ ಮಾಹಿತಿಯನ್ನು ಅಳಿಸಿಹಾಕಲಿಕ್ಕೋಸ್ಕರ ಐಹಿಕ ದಾಖಲೆಗಳಲ್ಲಿ ಬದಲಾವಣೆಗಳು ಮಾಡಲ್ಪಟ್ಟಿರುವುದು ಆಶ್ಚರ್ಯಕರವಾದ ಸಂಗತಿಯಲ್ಲ. ಆದರೂ, ದಾನಿಯೇಲನ ಪುಸ್ತಕದಲ್ಲಿನ ಈ ಸಂಕ್ಷಿಪ್ತ ವೃತ್ತಾಂತವು, ದಾರ್ಯಾವೆಷನು ನಿಷ್ಪಕ್ಷಪಾತಿ ಮತ್ತು ನ್ಯಾಯವಂತನಾದ ಅರಸನಾಗಿದ್ದನೆಂಬ ಚಿತ್ರಣವನ್ನು ಕೊಡುತ್ತದೆ.