ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w98 9/15 ಪು. 4-7
  • ಎಚ್ಚರಗೊಳ್ಳಲು ಇದೇ ಸಮಯ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಎಚ್ಚರಗೊಳ್ಳಲು ಇದೇ ಸಮಯ!
  • ಕಾವಲಿನಬುರುಜು—1998
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಎಲ್ಲವೂ ಇದ್ದಂತೆಯೇ ಇದೆಯೇ?
  • ಎಚ್ಚರವಾಗಿ ಉಳಿಯಲು ನಿಜವಾದ ಅಗತ್ಯವಿದೆ
  • ಲೋಕದ ಅಂತ್ಯ ಹತ್ತಿರವಿದೆಯಾ?
    ಬೈಬಲ್‌ ನಮಗೆ ಏನು ಕಲಿಸುತ್ತದೆ?
  • ನಾವು “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೊ?
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • “ಎಚ್ಚರವಾಗಿರಿ”!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ನೀವು ಯೆಹೋವನ ದಿನಕ್ಕಾಗಿ ಸಿದ್ಧರಾಗಿದ್ದೀರೊ?
    ಕಾವಲಿನಬುರುಜು—1997
ಇನ್ನಷ್ಟು
ಕಾವಲಿನಬುರುಜು—1998
w98 9/15 ಪು. 4-7

ಎಚ್ಚರಗೊಳ್ಳಲು ಇದೇ ಸಮಯ!

“ನಾವು ಜೀವಿಸುತ್ತಿರುವ ಯುಗದ ಕುರಿತು ತಪ್ಪು ಲೆಕ್ಕಹಾಕದಿರೋಣ; ಈಗಾಗಲೇ ನಾವು ನಮ್ಮ ನಿದ್ರೆಯಿಂದ ಎಚ್ಚರಗೊಳ್ಳಬೇಕಾಗಿದೆ.” (ರೋಮಾಪುರ 13:11, Knox) ಸಾ.ಶ. 70ರಲ್ಲಿ, ಯೆಹೂದಿ ವಿಷಯಗಳ ವ್ಯವಸ್ಥೆಯ ದುರಂತಮಯ ಅಂತ್ಯದ ಸುಮಾರು 14 ವರ್ಷಗಳಿಗೆ ಮೊದಲು, ರೋಮ್‌ನಲ್ಲಿದ್ದ ಕ್ರೈಸ್ತರಿಗೆ ಅಪೊಸ್ತಲ ಪೌಲನು ಈ ಮಾತುಗಳನ್ನು ಬರೆದನು. ಯೆಹೂದಿ ಕ್ರೈಸ್ತರು ಆತ್ಮಿಕವಾಗಿ ಎಚ್ಚರವಾಗಿದ್ದ ಕಾರಣ, ಆ ನಿರ್ಣಾಯಕ ಸಮಯದಲ್ಲಿ ಅವರು ಯೆರೂಸಲೇಮಿನಲ್ಲಿ ಇರಲಿಲ್ಲ, ಆದುದರಿಂದ ಅವರು ಮರಣ ಅಥವಾ ಗುಲಾಮಗಿರಿಯಿಂದ ಪಾರಾದರು. ಆದರೆ ತಾವು ಪಟ್ಟಣವನ್ನು ಬಿಟ್ಟುಹೋಗಬೇಕು ಮತ್ತು ಪುನಃ ಅದನ್ನು ಪ್ರವೇಶಿಸಬಾರದು ಎಂಬುದು ಅವರಿಗೆ ಹೇಗೆ ತಿಳಿದಿತ್ತು?

ವೈರಿಗಳು ಯೆರೂಸಲೇಮಿಗೆ ಮುತ್ತಿಗೆ ಹಾಕುವರು ಮತ್ತು ಅದರ ನಿವಾಸಿಗಳು ನಿರ್ಮೂಲಮಾಡಲ್ಪಡುವರು ಎಂದು ಯೇಸು ಕ್ರಿಸ್ತನು ಎಚ್ಚರಿಕೆ ನೀಡಿದ್ದನು. (ಲೂಕ 19:43, 44) ತದನಂತರ, ಗ್ರಹಿಸಲು ತೀರ ಸುಲಭವಾಗಿದ್ದ ವಿವಿಧ ವೈಶಿಷ್ಟ್ಯಗಳುಳ್ಳ ಸೂಚನೆಗಳನ್ನು ಯೇಸು ತನ್ನ ನಂಬಿಗಸ್ತ ಹಿಂಬಾಲಕರಿಗೆ ಕೊಟ್ಟನು. (ಲೂಕ 21:7-24) ಯೆರೂಸಲೇಮಿನಲ್ಲಿ ವಾಸಿಸುತ್ತಿದ್ದ ಕ್ರೈಸ್ತರಿಗೆ, ನಗರವನ್ನು ಬಿಟ್ಟುಹೋಗುವುದು, ಮನೆಗಳನ್ನು ಹಾಗೂ ಉದ್ಯೋಗಗಳನ್ನು ತೊರೆಯುವುದನ್ನು ಅರ್ಥೈಸಿತು. ಆದರೂ, ಅವರ ಜಾಗರೂಕ ಮನೋಭಾವ ಹಾಗೂ ಪಲಾಯನಗಳು ಅವರ ಜೀವಗಳನ್ನು ಸಂರಕ್ಷಿಸಿದವು.

ಯೇಸು ಯೆರೂಸಲೇಮಿನ ನಾಶನದ ಕುರಿತು ಮುಂತಿಳಿಸಿದಾಗ, ಅವನ ಶಿಷ್ಯರು ಕೇಳಿದ್ದು: “ಅದು ಯಾವಾಗ ಆಗುವದು? ನೀನು ಪ್ರತ್ಯಕ್ಷನಾಗುವದಕ್ಕೂ [“ಸಾನ್ನಿಧ್ಯಕ್ಕೂ,” NW] ಯುಗದ ಸಮಾಪ್ತಿಗೂ [“ವಿಷಯಗಳ ವ್ಯವಸ್ಥೆಯ ಅಂತ್ಯಕ್ಕೂ,” NW] ಸೂಚನೆಯೇನು?” (ಮತ್ತಾಯ 24:3) ಅದಕ್ಕೆ ಕೊಟ್ಟ ಉತ್ತರದಲ್ಲಿ, ಯೇಸು ತನ್ನ ಭವಿಷ್ಯತ್ತಿನ ಸಾನ್ನಿಧ್ಯವನ್ನು, ನೋಹನ ದಿನದ ಭೌಗೋಲಿಕ ಪ್ರಳಯಕ್ಕೆ ನಡೆಸಿದ ಕಾಲಾವಧಿಯೊಂದಿಗೆ ಹೋಲಿಸಿದನು. ಜಲಪ್ರಳಯವು ದುಷ್ಟರೆಲ್ಲರನ್ನು ಬಡುಕೊಂಡು ಹೋಯಿತು ಎಂದು ಯೇಸು ಸೂಚಿಸಿದನು. (ಮತ್ತಾಯ 24:21, 37-39) ಹೀಗೆ, ಪುನಃ ದೇವರು ಮಾನವ ವ್ಯವಹಾರಗಳಲ್ಲಿ ಕೈಹಾಕುವನೆಂದು ಅವನು ಹೇಳಿದನು. ಎಷ್ಟರ ಮಟ್ಟಿಗೆ ಆತನು ಇದರಲ್ಲಿ ಒಳಗೂಡುವನು? ಇಡೀ ದುಷ್ಟ ಲೋಕವನ್ನು ಅಥವಾ ವಿಷಯಗಳ ವ್ಯವಸ್ಥೆಯನ್ನು ನಿರ್ಮೂಲಮಾಡುವಷ್ಟರ ಮಟ್ಟಿಗೆ! (2 ಪೇತ್ರ 3:5, 6ನ್ನು ಹೋಲಿಸಿರಿ.) ಅದು ನಮ್ಮ ಸಮಯದಲ್ಲಿಯೂ ಸಂಭವಿಸಬಲ್ಲದೊ?

ಎಲ್ಲವೂ ಇದ್ದಂತೆಯೇ ಇದೆಯೇ?

ಪ್ರಥಮ ಶತಮಾನದ ಯೆಹೂದ್ಯರಲ್ಲಿ, ತಮ್ಮ ಪವಿತ್ರ ನಗರವಾದ ಯೆರೂಸಲೇಮ್‌ ನಾಶಗೊಳಿಸಲ್ಪಡುವುದೆಂದು ಊಹಿಸಿದವರು ಕೇವಲ ಕೆಲವೇ ಜನರಾಗಿದ್ದರು. ಒಂದು ಜ್ವಾಲಾಮುಖಿಯ ಸಮೀಪದಲ್ಲೇ ವಾಸಿಸುತ್ತಿದ್ದರೂ, ಅಂತಹ ಒಂದು ಸ್ಫೋಟವನ್ನು ನೋಡಿರದ ಜನರ ನಡುವೆ, ಕೆಲವೊಮ್ಮೆ ತದ್ರೀತಿಯ ಅಪನಂಬಿಕೆ ಇರುತ್ತದೆ. ಎಚ್ಚರಿಕೆಗಳು ಕೊಡಲ್ಪಡುವಾಗ, “ನನ್ನ ಜೀವಮಾನಕಾಲದಲ್ಲಿ ಅದು ನಡೆಯುವುದಿಲ್ಲ” ಎಂಬುದು ಒಂದು ಸಾಮಾನ್ಯವಾದ ಪ್ರತಿಕ್ರಿಯೆಯಾಗಿದೆ. “ಸರ್ವಸಮಾನ್ಯವಾಗಿ ಜ್ವಾಲಾಮುಖಿಗಳು ಎರಡು ಅಥವಾ ಮೂರು ಶತಮಾನಗಳಿಗೊಮ್ಮೆ ಸ್ಫೋಟಿಸುತ್ತವೆ” ಎಂದು ಜ್ವಾಲಾಮುಖಿಶಾಸ್ತ್ರಜ್ಞರಾದ ಲಿಯೋನಲ್‌ ವಿಲ್ಸನ್‌ ವಿವರಿಸುತ್ತಾರೆ. “ಜ್ವಾಲಾಮುಖಿಯ ಸ್ಫೋಟದ ಕಾರಣದಿಂದ ನಿಮ್ಮ ಹೆತ್ತವರು ಸ್ಥಳವನ್ನು ಬದಲಾಯಿಸಬೇಕಾಗಿದ್ದಲ್ಲಿ, ನೀವು ಚಿಂತಿಸಬೇಕಾಗಿತ್ತು. ಆದರೆ ಅದು ನಿಮ್ಮ ಅಜ್ಜಅಜ್ಜಿಯರಿಗೆ ಸಂಭವಿಸಿರುವುದಾದರೆ, ಅದೊಂದು ಐತಿಹ್ಯ ಅಷ್ಟೆ.”

ನಿಷ್ಕೃಷ್ಟವಾದ ಮಾಹಿತಿಯು, ಅಪಾಯದ ಸೂಚನೆಗಳನ್ನು ಗ್ರಹಿಸಲು ಹಾಗೂ ಅವುಗಳನ್ನು ಗಂಭೀರವಾಗಿ ಪರಿಗಣಿಸಲು ನಮ್ಮನ್ನು ಶಕ್ತರನ್ನಾಗಿ ಮಾಡಸಾಧ್ಯವಿದೆ. ಮೌಂಟ್‌ ಪೆಲಿಯಿಂದ ಪಲಾಯನಗೈದಿದ್ದವರಲ್ಲಿ ಒಬ್ಬನಿಗೆ, ಜ್ವಾಲಾಮುಖಿಗಳ ಪರಿಚಯವಿತ್ತು ಮತ್ತು ಅಪಾಯದ ಸೂಚನೆಗಳನ್ನು ಅವನು ಅರ್ಥಮಾಡಿಕೊಂಡನು. ಮೌಂಟ್‌ ಪಿನಟೂಬೊ ಜ್ವಾಲಾಮುಖಿಯು ಸ್ಫೋಟಿಸುವುದಕ್ಕೆ ಸ್ವಲ್ಪ ಮೊದಲು, ಅಂತಹ ಸೂಚನೆಗಳನ್ನು ಸರಿಯಾಗಿ ತಿಳಿಸಲಾಗಿತ್ತು. ಆ ಪರ್ವತದ ಒಳಗೆ ನಿರ್ಮಿತವಾಗುತ್ತಿದ್ದ ಅಗೋಚರ ಶಕ್ತಿಗಳ ಕುರಿತು ಮುನ್ಸೂಚನೆಯನ್ನು ಕೊಡುತ್ತಿದ್ದ ಜ್ವಾಲಾಮುಖಿಶಾಸ್ತ್ರಜ್ಞನು, ಸ್ಥಳಿಕ ಜನರು ಆ ಕ್ಷೇತ್ರವನ್ನು ಬಿಟ್ಟುಹೋಗುವಂತೆ ಅವರಿಗೆ ಮನದಟ್ಟುಮಾಡಿದನು.

ಕೆಲವರು ಯಾವಾಗಲೂ ಅಪಾಯ ಸೂಚನೆಗಳನ್ನು ಅಲಕ್ಷಿಸುತ್ತಾರೆ ಮತ್ತು ಏನೂ ಆಗುವುದಿಲ್ಲ ಎಂದು ಪ್ರತಿಪಾದಿಸುತ್ತಾರೆ. ನಿರ್ಣಾಯಕ ರೀತಿಯಲ್ಲಿ ಕ್ರಿಯೆಗೈಯುವವರಿಗೆ ಅವರು ಅಪಹಾಸ್ಯವನ್ನೂ ಮಾಡಬಹುದು. ನಮ್ಮ ದಿನದಲ್ಲಿಯೂ ಅಂತಹ ಒಂದು ದೃಷ್ಟಿಕೋನವು ಸರ್ವಸಾಮಾನ್ಯವಾಗಿರುವುದು ಎಂದು ಅಪೊಸ್ತಲ ಪೇತ್ರನು ಮುಂತಿಳಿಸಿದನು. “ಕಡೇ ದಿವಸಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು ಕುಚೋದ್ಯ ಮಾಡುತ್ತಾ—ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು? ನಮ್ಮ ಪಿತೃಗಳು ನಿದ್ರೆಹೊಂದಿದ ದಿನ ಮೊದಲುಗೊಂಡು ಸಮಸ್ತವೂ ಲೋಕಾದಿಯಿಂದಿದ್ದ ಹಾಗೆಯೇ ಇರುತ್ತದಲ್ಲಾ ಎಂದು ಹೇಳುವರೆಂಬದಾಗಿ ನೀವು ಮೊದಲು ತಿಳುಕೊಳ್ಳಬೇಕು” ಎಂದು ಅವನು ಹೇಳಿದನು.—2 ಪೇತ್ರ 3:3, 4.

ನಾವು “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೆ ಎಂಬುದನ್ನು ನೀವು ನಂಬುತ್ತೀರೊ? ದ ಕೊಲಂಬಿಯ ಹಿಸ್ಟರಿ ಆಫ್‌ ದ ವರ್ಲ್ಡ್‌ನಲ್ಲಿ, ಜಾನ್‌ ಎ. ಗಾರಟೀ ಮತ್ತು ಪೀಟರ್‌ ಗೇ ಕೇಳುವುದು: “ನಾವು ನಮ್ಮ ನಾಗರಿಕತೆಯ ವಿನಾಶವನ್ನು ನೋಡುತ್ತಿದ್ದೇವೊ?” ಈ ಇತಿಹಾಸಕಾರರು ಸರಕಾರದ ಸಮಸ್ಯೆಗಳನ್ನು—ಭೂವ್ಯಾಪಕವಾಗಿ ದುಷ್ಕೃತ್ಯ ಹಾಗೂ ಪೌರ ಅವಿಧೇಯತೆ, ಕುಟುಂಬ ಜೀವನದ ಕುಸಿತ, ಸಮಾಜದ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ವಿಜ್ಞಾನ ಹಾಗೂ ತಾಂತ್ರಿಕತೆಯ ಸೋಲುಗಳು, ಅಧಿಕಾರದ ಬಿಕ್ಕಟ್ಟು, ಮತ್ತು ಲೋಕವ್ಯಾಪಕವಾಗಿ ನೈತಿಕ ಹಾಗೂ ಧಾರ್ಮಿಕ ಅವನತಿ—ವಿಶ್ಲೇಷಿಸುತ್ತಾರೆ. ಅವರು ಮುಕ್ತಾಯಗೊಳಿಸಿದ್ದು: “ಇವು ನಿಶ್ಚಿತವಾದ ಅಂತ್ಯದ ಸೂಚನೆಗಳಲ್ಲವಾದರೆ, ಅವು ಅಂತ್ಯದ ಸೂಚನೆಗಳಂತೆ ತೋರುತ್ತವೆ ಎಂಬುದು ನಿಶ್ಚಯ.”

“ಅಂತ್ಯವು” ಸನ್ನಿಹಿತವಾಗಿದೆ ಎಂಬುದನ್ನು ನಂಬಲು ನಮಗೆ ಸಕಾರಣಗಳಿವೆ. ಭೂಗೋಲವೇ ಅಂತ್ಯಗೊಳ್ಳುತ್ತದೆ ಎಂದು ನಾವು ಹೆದರುವ ಅಗತ್ಯವಿಲ್ಲ, ಏಕೆಂದರೆ ದೇವರು “ಭೂಮಿಯು ಯುಗಯುಗಾಂತರಕ್ಕೂ ಕದಲದ ಹಾಗೆ ಅದನ್ನು ದೃಢವಾದ ಅಸ್ತಿವಾರದ ಮೇಲೆ ಸ್ಥಾಪಿ”ಸಿದ್ದಾನೆ ಎಂದು ಬೈಬಲು ಹೇಳುತ್ತದೆ. (ಕೀರ್ತನೆ 104:5) ಆದರೆ, ಮಾನವಕುಲಕ್ಕೆ ಇಷ್ಟೊಂದು ಸಂಕಟವನ್ನು ಉಂಟುಮಾಡಿರುವ ಈ ದುಷ್ಟ ವಿಷಯಗಳ ವ್ಯವಸ್ಥೆಗೆ ಅತಿ ಬೇಗನೆ ಅಂತ್ಯವು ಬರುವಂತೆ ನಾವು ನಿರೀಕ್ಷಿಸತಕ್ಕದ್ದು. ಏಕೆ? ಏಕೆಂದರೆ, ಯೇಸು ಕ್ರಿಸ್ತನಿಂದ ತಿಳಿಸಲ್ಪಟ್ಟಂತೆ, ಈ ವ್ಯವಸ್ಥೆಯ ಕಡೆಯ ದಿನವನ್ನು ಗುರುತಿಸುವ ಅನೇಕ ಸುವ್ಯಕ್ತ ವೈಶಿಷ್ಟ್ಯಗಳನ್ನು ನಾವು ನೋಡಸಾಧ್ಯವಿದೆ. (“ಕಡೆಯ ದಿವಸಗಳ ಕೆಲವು ವೈಶಿಷ್ಟ್ಯಗಳು” ಎಂಬ ರೇಖಾಚೌಕವನ್ನು ನೋಡಿ.) ಯೇಸುವಿನ ಮಾತುಗಳನ್ನು ಲೋಕದ ಘಟನೆಗಳೊಂದಿಗೆ ಏಕೆ ಹೋಲಿಸಿ ನೋಡಬಾರದು? ಹಾಗೆ ಮಾಡುವುದು, ನಿಮಗಾಗಿ ಮತ್ತು ನಿಮ್ಮ ಕುಟುಂಬಕ್ಕಾಗಿ ವಿವೇಕಯುತವಾದ ನಿರ್ಣಯಗಳನ್ನು ಮಾಡಲು ನಿಮಗೆ ಸಹಾಯಮಾಡಬಹುದು. ಆದರೆ ಈಗಲೇ ಏಕೆ ಕ್ರಿಯೆಗೈಯಬೇಕು?

ಎಚ್ಚರವಾಗಿ ಉಳಿಯಲು ನಿಜವಾದ ಅಗತ್ಯವಿದೆ

ಒಂದು ಜ್ವಾಲಾಮುಖಿಯ ಸ್ಫೋಟನವು ಸನ್ನಿಹಿತವಾಗಿರುವ ಸಮಯವು ವಿಜ್ಞಾನಿಗಳಿಗೆ ತಿಳಿದಿರಬಹುದಾದರೂ, ಅದು ಯಾವಾಗ ಸಂಭವಿಸುತ್ತದೆ ಎಂಬುದನ್ನು ಅವರು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ತದ್ರೀತಿಯಲ್ಲಿ, ಈ ವಿಷಯಗಳ ವ್ಯವಸ್ಥೆಯ ಅಂತ್ಯದ ಕುರಿತು ಯೇಸು ಹೇಳಿದ್ದು: “ಆ ದಿನದ ವಿಷಯವೂ ಆ ಗಳಿಗೆಯ ವಿಷಯವೂ ನನ್ನ ತಂದೆಯೊಬ್ಬನಿಗೆ ತಿಳಿಯುವದೇ ಹೊರತು ಮತ್ತಾರಿಗೂ ತಿಳಿಯದು; ಪರಲೋಕದಲ್ಲಿರುವ ದೂತರಿಗೂ ತಿಳಿಯದು, ಮಗನಿಗೂ ತಿಳಿಯದು.” (ಮತ್ತಾಯ 24:36) ಈ ಸದ್ಯದ ವಿಷಯಗಳ ವ್ಯವಸ್ಥೆಯು ನಿರ್ದಿಷ್ಟವಾಗಿ ಯಾವಾಗ ಅಂತ್ಯಗೊಳ್ಳುತ್ತದೆ ಎಂಬುದು ನಮಗೆ ಗೊತ್ತಿಲ್ಲವಾದ ಕಾರಣ, ಯೇಸು ಈ ಎಚ್ಚರಿಕೆಯನ್ನು ನಮಗೆ ಕೊಟ್ಟನು: “ಕಳ್ಳನು ಬರುವ ಜಾವ ಮನೆಯ ಯಜಮಾನನಿಗೆ ತಿಳಿದಿದ್ದರೆ ಅವನು ಎಚ್ಚರವಾಗಿದ್ದು ತನ್ನ ಮನೆಗೆ ಕನ್ನಹಾಕಗೊಡಿಸುತ್ತಿರಲಿಲ್ಲವೆಂದು ತಿಳುಕೊಳ್ಳಿರಿ. ಆದಕಾರಣ ನೀವು ಸಹ ಸಿದ್ಧವಾಗಿರ್ರಿ; ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು [ಯೇಸು] ಬರುತ್ತಾನೆ.”—ಮತ್ತಾಯ 24:43, 44.

ಈ ಲೋಕದಲ್ಲಿರುವ ವ್ಯವಸ್ಥೆಗೆ, ದುರಂತಮಯ ಅಂತ್ಯವು ಅನಿರೀಕ್ಷಿತವಾಗಿ ಬಂದೆರಗುವುದು ಎಂದು ಯೇಸುವಿನ ಮಾತುಗಳು ತೋರಿಸುತ್ತವೆ. ನಾವು ಅವನ ಹಿಂಬಾಲಕರಾಗಿರುವುದಾದರೂ, ನಾವು ‘ಸಿದ್ಧರಾಗಿರುವ’ ಅಗತ್ಯವಿದೆ. ನಮ್ಮ ಸನ್ನಿವೇಶವು, ಕಳ್ಳನ ಬರುವಿಕೆಗೆ ಆಶ್ಚರ್ಯಚಕಿತನಾಗುವ, ಹಾಗೂ ಅದಕ್ಕೆ ಸಿದ್ಧನಾಗಿರದ ಒಬ್ಬ ಮನೆಯ ಯಜಮಾನನಂತಿದೆ. ಏಕೆಂದರೆ ಒಬ್ಬ ಕಳ್ಳನು ಯಾವಾಗ ಮನೆಗೆ ಕನ್ನಹಾಕುತ್ತಾನೆಂಬುದು ಅವನಿಗೆ ಗೊತ್ತಿರುವುದಿಲ್ಲ.

ಅದೇ ರೀತಿಯಲ್ಲಿ, ಅಪೊಸ್ತಲ ಪೌಲನು ಥೆಸಲೊನೀಕದಲ್ಲಿರುವ ಕ್ರೈಸ್ತರಿಗೆ ಹೇಳಿದ್ದು: “ರಾತ್ರಿಕಾಲದಲ್ಲಿ ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ [ಯೆಹೋವನ] ದಿನವು ಬರುವದೆಂದು ನೀವೇ ಚೆನ್ನಾಗಿ ತಿಳಿದಿದ್ದೀರಲ್ಲಾ. ಆದರೆ ಸಹೋದರರೇ, ಆ ದಿನವು ಕಳ್ಳನಂತೆ ನಿಮ್ಮ ಮೇಲೆ ಬರತಕ್ಕದ್ದಲ್ಲ; ನೀವು ಕತ್ತಲೆಯಲ್ಲಿರುವವರಲ್ಲ.” ಪೌಲನು ಇನ್ನೂ ಉತ್ತೇಜಿಸಿದ್ದು: “ನಾವು ಇತರರಂತೆ ನಿದ್ದೆಮಾಡದೆ ಎಚ್ಚರವಾಗಿರೋಣ, ಸ್ವಸ್ಥಚಿತ್ತರಾಗಿರೋಣ.” (1 ಥೆಸಲೊನೀಕ 5:2, 4, 6) ‘ಎಚ್ಚರವಾಗಿದ್ದು, ಸ್ವಸ್ಥಚಿತ್ತರಾಗಿರುವುದು’ ಎಂಬುದರ ಅರ್ಥವೇನು?

ಯೆರೂಸಲೇಮಿನಿಂದ ಪ್ರಥಮ ಶತಮಾನದ ಕ್ರೈಸ್ತರ ಪಲಾಯನಕ್ಕೆ ಅಸದೃಶವಾಗಿ, ರಕ್ಷಣೆಗಾಗಿರುವ ನಮ್ಮ ಪಲಾಯನವು ಒಂದು ನಿರ್ದಿಷ್ಟ ಪಟ್ಟಣವನ್ನು ಬಿಟ್ಟುಹೋಗುವುದನ್ನು ಒಳಗೂಡುವುದಿಲ್ಲ. ರೋಮ್‌ನಲ್ಲಿರುವ ತನ್ನ ಜೊತೆವಿಶ್ವಾಸಿಗಳಿಗೆ ಎಚ್ಚರಗೊಳ್ಳುವಂತೆ ಬುದ್ಧಿವಾದ ಹೇಳಿದ ಬಳಿಕ, “ಕತ್ತಲೆಗೆ ಅನುಗುಣವಾದ ಕೃತ್ಯಗಳನ್ನು ಬಿಟ್ಟು”ಬಿಡುವಂತೆ ಹಾಗೂ “ಕರ್ತನಾದ ಯೇಸು ಕ್ರಿಸ್ತನನ್ನು ಧರಿಸಿಕೊಳ್ಳು”ವಂತೆ ಪೌಲನು ಅವರನ್ನು ಉತ್ತೇಜಿಸಿದನು. (ರೋಮಾಪುರ 13:12, 14) ಯೇಸುವಿನ ಹೆಜ್ಜೆಯನ್ನು ನಿಕಟವಾಗಿ ಹಿಂಬಾಲಿಸುವ ಮೂಲಕ, ನಮ್ಮ ಕಾಲಗಳ ಸ್ಥಿತಿಗತಿಗೆ ನಾವು ಎಚ್ಚರವಾಗಿದ್ದೇವೆ, ಹಾಗೂ ಈ ಆತ್ಮಿಕ ಎಚ್ಚತ್ತುಕೊಳ್ಳುವಿಕೆಯು, ಈ ದುಷ್ಟ ವಿಷಯಗಳ ವ್ಯವಸ್ಥೆಯು ಅಂತ್ಯಗೊಳ್ಳುವಾಗ, ನಾವು ದೈವಿಕ ಸಂರಕ್ಷಣೆಯನ್ನು ಪಡೆದುಕೊಳ್ಳುವಂತೆ ಮಾಡುತ್ತದೆ ಎಂಬುದನ್ನು, ನಮ್ಮ ಕ್ರಿಯೆಗಳಿಂದ ನಾವು ರುಜುಪಡಿಸುವೆವು.—1 ಪೇತ್ರ 2:21.

ಯೇಸು ಕ್ರಿಸ್ತನನ್ನು ಅನುಸರಿಸುವವರು, ಅರ್ಥಭರಿತ ಹಾಗೂ ಸಂತೃಪ್ತಿಕರವಾದ ಜೀವಿತಗಳನ್ನು ನಡೆಸುತ್ತಾರೆ. ಕ್ರೈಸ್ತ ಶಿಷ್ಯತ್ವದ ನೊಗವು ಹಗುರವಾದದ್ದೂ ಚೈತನ್ಯದಾಯಕವಾದದ್ದೂ ಆಗಿದೆ ಎಂಬುದನ್ನು ಲಕ್ಷಾಂತರ ಮಂದಿ ಯೆಹೋವನ ಸಾಕ್ಷಿಗಳು ಕಂಡುಕೊಂಡಿದ್ದಾರೆ. (ಮತ್ತಾಯ 11:29, 30, NW ಪಾದಟಿಪ್ಪಣಿ) ಒಬ್ಬ ಶಿಷ್ಯನಾಗಲು ತೆಗೆದುಕೊಳ್ಳಬೇಕಾದ ಪ್ರಥಮ ಹೆಜ್ಜೆಯು, ‘ದೇವರ ಹಾಗೂ ಆತನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನ ಜ್ಞಾನವನ್ನು ಪಡೆದುಕೊಳ್ಳುವುದೇ’ ಆಗಿದೆ. (ಯೋಹಾನ 17:3) “ಸತ್ಯದ ಜ್ಞಾನ”ವನ್ನು ಪಡೆದುಕೊಳ್ಳುವಂತೆ ಜನರಿಗೆ ಸಹಾಯಮಾಡಲಿಕ್ಕಾಗಿ, ಪ್ರತಿ ವಾರ ಸಾಕ್ಷಿಗಳು ಲಕ್ಷಾಂತರ ಮನೆಗಳನ್ನು ಸಂದರ್ಶಿಸುತ್ತಾರೆ. (1 ತಿಮೊಥೆಯ 2:4) ನಿಮ್ಮ ಮನೆಯಲ್ಲಿಯೇ ನಿಮ್ಮೊಂದಿಗೆ ಉಚಿತ ಬೈಬಲ್‌ ಅಭ್ಯಾಸಗಳನ್ನು ನಡಿಸಲು ಅವರು ಸಂತೋಷಿಸುತ್ತಾರೆ. ಮತ್ತು ನೀವು ದೇವರ ವಾಕ್ಯದ ಜ್ಞಾನದಲ್ಲಿ ಬೆಳೆದಂತೆ, ನಮ್ಮ ದಿನಗಳು ಭಿನ್ನವಾಗಿವೆ ಎಂಬ ವಿಷಯವನ್ನು ನೀವೂ ಮನಗಾಣುವಿರಿ. ಖಂಡಿತವಾಗಿಯೂ, ನಿದ್ರೆಯಿಂದ ಎಚ್ಚರಗೊಳ್ಳಿರಿ!

[Box/Pictures on page 7]

ಕಡೆಯ ದಿವಸಗಳ ಕೆಲವು ವೈಶಿಷ್ಟ್ಯಗಳು

‘ಜನಕ್ಕೆ ವಿರೋಧವಾಗಿ ಜನವು ಏಳುವವು’; ‘ಭೂಮಿಯಿಂದ ಸಮಾಧಾನವು ತೆಗೆದುಹಾಕಲ್ಪಡುವುದು.’ (ಮತ್ತಾಯ 24:7; ಪ್ರಕಟನೆ 6:4)

ಈ ಶತಮಾನದ ಎರಡು ಲೋಕ ಯುದ್ಧಗಳು, ಅದರೊಂದಿಗೆ ಇನ್ನಿತರ ಅಸಂಖ್ಯಾತ ಹೋರಾಟಗಳು, ಭೂಮಿಯಿಂದ ಸಮಾಧಾನವನ್ನು ತೆಗೆದುಹಾಕಿವೆ. “ಮೊದಲನೆಯ ಹಾಗೂ ಎರಡನೆಯ ಲೋಕ ಯುದ್ಧಗಳು, ಈ ಹಿಂದೆ ನಡೆದ ಎಲ್ಲ ಯುದ್ಧಗಳಿಗಿಂತ ಭಿನ್ನವಾಗಿ ಪರಿಣಮಿಸಿದವು” ಎಂದು ಇತಿಹಾಸಕಾರನಾದ ಜಾನ್‌ ಕೀಗನ್‌ ಬರೆಯುತ್ತಾನೆ. “ಅದರ ಪ್ರಮಾಣ, ತೀವ್ರತೆ, ವ್ಯಾಪಕತೆ, ಮತ್ತು ಭೌತಿಕ ನಷ್ಟ ಹಾಗೂ ಮಾನವ ನಷ್ಟವು ಅಪಾರವಾಗಿತ್ತು. . . . ಈ ಹಿಂದೆ ನಡೆದ ಯಾವುದೇ ಯುದ್ಧಕ್ಕಿಂತಲೂ ವ್ಯಾಪಕವಾಗಿ ಈ ಲೋಕ ಯುದ್ಧಗಳು ಅತ್ಯಧಿಕ ಜನರನ್ನು ಕೊಂದವು, ಭಾರಿ ಸಂಪತ್ತನ್ನು ಹಾಳುಮಾಡಿದವು ಮತ್ತು ಹೆಚ್ಚೆಚ್ಚು ಕಷ್ಟಾನುಭವಗಳನ್ನು ತಂದೊಡ್ಡಿದವು.” ಈ ಯುದ್ಧಗಳು, ಸೈನಿಕರಿಗಿಂತಲೂ ಹೆಚ್ಚಾಗಿ ಈಗ ಸ್ತ್ರೀಯರನ್ನು ಹಾಗೂ ಮಕ್ಕಳನ್ನು ಬಾಧಿಸುತ್ತಿವೆ. ಕಳೆದ ಹತ್ತು ವರ್ಷಗಳಲ್ಲಿ, ಇಪ್ಪತ್ತು ಲಕ್ಷ ಮಕ್ಕಳು ಯುದ್ಧಗಳಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂದು ವಿಶ್ವ ಸಂಸ್ಥೆಯ ಮಕ್ಕಳ ನಿಧಿಯು ಅಂದಾಜುಮಾಡುತ್ತದೆ.

“ಆಹಾರದ ಅಭಾವಗಳು” (ಮತ್ತಾಯ 24:7, NW; ಪ್ರಕಟನೆ 6:5, 6, 8)

1996ರಲ್ಲಿ ಗೋಧಿ ಹಾಗೂ ಜೋಳದ ಬೆಲೆಗಳು ಅತಿಯಾಗಿ ಏರಿದವು. ಕಾರಣವೇನು? ಈ ಏಕದಳ ಧಾನ್ಯಗಳ ಸಂಗ್ರಹ ಪ್ರಮಾಣವು, ಕೇವಲ 50 ದಿನದ ಸಂಗ್ರಹಕ್ಕೆ ಇಳಿದಿತ್ತು—ದಾಖಲೆಯಾಗಿರುವ ಅತಿ ಚಿಕ್ಕ ಸಂಖ್ಯೆ. ಮೂಲಭೂತ ಆಹಾರ ಪದಾರ್ಥಗಳ ಏರುತ್ತಿರುವ ಬೆಲೆಯು, ಲೋಕದ ಅತ್ಯಂತ ಬಡವರಲ್ಲಿ ಕೋಟಿಗಟ್ಟಲೆ ಮಂದಿ ಹಸಿವೆಯಿಂದಲೇ ಮಲಗುತ್ತಾರೆ; ಅವರಲ್ಲಿ ಹೆಚ್ಚಿನವರು ಮಕ್ಕಳಾಗಿದ್ದಾರೆ ಎಂಬುದನ್ನು ಸೂಚಿಸಿತು.

“ಒಂದರ ನಂತರ ಇನ್ನೊಂದು ಸ್ಥಳದಲ್ಲಿ ಭೂಕಂಪಗಳು” (ಮತ್ತಾಯ 24:7, NW)

ಕಳೆದ 2,500 ವರ್ಷಗಳಲ್ಲಿ, ಕೇವಲ ಒಂಬತ್ತು ಭೂಕಂಪಗಳು ಸಂಭವಿಸಿದ್ದು, ಪ್ರತಿಯೊಂದು ಭೂಕಂಪವು 1,00,000ಕ್ಕಿಂತಲೂ ಹೆಚ್ಚು ಜನರನ್ನು ಕೊಂದುಹಾಕಿದೆ. ಈ ಭೂಕಂಪಗಳಲ್ಲಿ ನಾಲ್ಕು ಭೂಕಂಪಗಳು, 1914ರಂದಿನಿಂದ ಸಂಭವಿಸಿವೆ.

‘ಅಧರ್ಮವು ಹೆಚ್ಚಾಗುತ್ತಿದೆ’ (ಮತ್ತಾಯ 24:12)

20ನೆಯ ಶತಮಾನವು ಕೊನೆಗೊಳ್ಳುತ್ತಿರುವಾಗ, ಅಧರ್ಮ, ಅಥವಾ ನಿಯಮೋಲ್ಲಂಘನೆಯು ತುಂಬ ವ್ಯಾಪಕವಾಗಿ ಪರಿಣಮಿಸಿದೆ. ನಾಗರಿಕರ ಮೇಲೆ ಭಯೋತ್ಪಾದಕರ ಆಕ್ರಮಣಗಳು, ನಿರ್ದಯಿ ಮಕ್ಕಳ ಕೊಲೆಗಡುಕರು, ಹಾಗೂ ಸಾಮೂಹಿಕ ಕೊಲೆಗಳು, ಈ ಹಿಂಸಾತ್ಮಕ ಕಡೆಯ ದಿವಸಗಳ ಭೀಕರ ಸಂಗತಿಗಳಲ್ಲಿ ಕೆಲವಾಗಿವೆ.

‘ಅಲ್ಲಲ್ಲಿ ಉಪದ್ರವಗಳೂ ಬರುವವು’ (ಲೂಕ 21:11)

1990ಗಳಲ್ಲಿ, ಬಹುಶಃ 3 ಕೋಟಿ ಜನರು ಕ್ಷಯ ರೋಗದಿಂದ ಸತ್ತಿದ್ದಾರೆ. ಈ ರೋಗವನ್ನು ಹರಡಿಸುವ ಬ್ಯಾಕ್ಟೀರಿಯವು, ಹೆಚ್ಚೆಚ್ಚು ಔಷಧ ಪ್ರತಿರೋಧಿಯಾಗುತ್ತಿದೆ. ಇನ್ನೊಂದು ಮಾರಕ ರೋಗವಾದ ಮಲೇರಿಯವು, ಪ್ರತಿ ವರ್ಷ 30 ಕೋಟಿಯಿಂದ 50 ಕೋಟಿಯಷ್ಟು ಜನರನ್ನು ಬಾಧಿಸಿ, ಅಂದಾಜಿಗನುಸಾರವಾಗಿ 20 ಲಕ್ಷ ಮಂದಿಯನ್ನು ಕೊಲ್ಲುತ್ತದೆ. ಈ ದಶಕದ ಅಂತ್ಯದಷ್ಟಕ್ಕೆ, ಏಡ್ಸ್‌ ರೋಗವು ವರ್ಷವೊಂದಕ್ಕೆ 18 ಲಕ್ಷ ಮರಣಗಳಿಗೆ ಕಾರಣವಾಗಿದೆ ಎಂದು ನಿರೀಕ್ಷಿಸಲಾಗಿದೆ. “ಇಂದು ಮಾನವ ಜಗತ್ತು ಸಾಂಕ್ರಾಮಿಕ ರೋಗಗಳನ್ನು ಅನುಭವಿಸುತ್ತಿದೆ” ಎಂದು ಸ್ಟೇಟ್‌ ಆಫ್‌ ದ ವರ್ಲ್ಡ್‌ 1996 ತಿಳಿಯಪಡಿಸುತ್ತದೆ.

“ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು.” (ಮತ್ತಾಯ 24:14)

1997ರಲ್ಲಿ, ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ಯೆಹೋವನ ಸಾಕ್ಷಿಗಳು 100 ಕೋಟಿಗಿಂತಲೂ ಹೆಚ್ಚು ತಾಸುಗಳನ್ನು ವ್ಯಯಿಸಿದ್ದಾರೆ. ಐವತ್ತು ಲಕ್ಷಕ್ಕಿಂತಲೂ ಹೆಚ್ಚು ಮಂದಿ ಸಾಕ್ಷಿಗಳು, 232 ದೇಶಗಳಲ್ಲಿರುವ ಜನರಿಗೆ ಕ್ರಮವಾಗಿ ಈ ಸಂದೇಶಗಳನ್ನು ಕೊಂಡೊಯ್ಯುತ್ತಾರೆ.

[Credit Lines]

FAO photo/B. Imevbore

U.S. Coast Guard photo

[ಪುಟ 4,5 ರಲ್ಲಿರುವಚಿತ್ರ]

ಕ್ರೈಸ್ತರು ಯೆರೂಸಲೇಮಿನಿಂದ ಪಲಾಯನಗೈದರು, ಯಾಕೆಂದರೆ ಅವರು ಆತ್ಮಿಕವಾಗಿ ಎಚ್ಚರವಾಗಿದ್ದರು

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ