ಭರವಸೆಯು ಪುನಸ್ಸ್ಥಾಪಿಸಲ್ಪಡಸಾಧ್ಯವಿದೆ!
ಈಗಿನ ಭರವಸೆಯ ವಿಷಮಸ್ಥಿತಿಯು, “ಕಡೇ ದಿವಸಗಳ” ಒಂದು ಚಿಹ್ನೆಯಾಗಿರುವುದಾದರೂ, ಭರವಸೆಯ ಕೊರತೆಯು ಸಾವಿರಾರು ವರ್ಷಗಳ ಹಿಂದೆ ಸಹ ವ್ಯಕ್ತವಾಯಿತು. ( 2 ತಿಮೊಥೆಯ 3:1) ಅದು ಯಾವ ಸ್ಥಳದಲ್ಲಿ ಆರಂಭವಾಗುವ ಸಾಧ್ಯತೆ ಇರಲಿಲ್ಲವೋ, ಆ ಒಂದು ಪ್ರಮೋದವನದಲ್ಲಿ ಉಗಮಿಸಿತು. ಆ ಸ್ಥಳದ ಬಗ್ಗೆ ಬೈಬಲು ಹೇಳುವುದು: “ಯೆಹೋವದೇವರು ಮೂಡಣ ದಿಕ್ಕಿನಲ್ಲಿರುವ ಏದೆನ್ ಸೀಮೆಯಲ್ಲಿ ಒಂದು ಉದ್ಯಾನವನವನ್ನು ಮಾಡಿ ತಾನು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇರಿಸಿದನು. ಮತ್ತು ಯೆಹೋವದೇವರು ನೋಟಕ್ಕೆ ರಮ್ಯವಾಗಿಯೂ ಊಟಕ್ಕೆ ಅನುಕೂಲವಾಗಿಯೂ ಇರುವ ಎಲ್ಲಾ ತರದ ಮರಗಳನ್ನು ಆ ಭೂಮಿಯಲ್ಲಿ ಬೆಳೆಯಮಾಡಿದನು. ಅದಲ್ಲದೆ ಆ ವನಮಧ್ಯದಲ್ಲಿ ಜೀವದಾಯಕವೃಕ್ಷವನ್ನೂ ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ವೃಕ್ಷವನ್ನೂ ಬೆಳೆಯಿಸಿದನು.”—ಆದಿಕಾಂಡ 2:8, 9.
ಅದರ ಮುಂದಿನ ವಚನಗಳು, ಆಧುನಿಕ ದಿನದ ಗಂಭೀರ ಪರಿಸ್ಥಿತಿಗೆ ಹೇಗೆ ಸಂಬಂಧಿಸುತ್ತವೆಂಬುದರ ಮೇಲೆ ಬೆಳಕು ಚೆಲ್ಲುತ್ತವೆ. ನಾವು ಹೀಗೆ ಓದುತ್ತೇವೆ: “ಇದಲ್ಲದೆ ಯೆಹೋವದೇವರು ಆ ಮನುಷ್ಯನಿಗೆ—ನೀನು ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಬಹುದು; ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದ ದಿನ ಸತ್ತೇ ಹೋಗುವಿ ಎಂದು ವಿಧಿಸಿದನು.” (ಆದಿಕಾಂಡ 2:16, 17) ಯೆಹೋವನು ಏನು ಹೇಳಿದನೋ ಅದನ್ನು ಸಂದೇಹಿಸಲು ಆದಾಮನಿಗೆ ಯಾವುದಾದರೂ ಕಾರಣವಿತ್ತೋ?
ನಾವು ಮುಂದೆ ಓದುವುದು: “ಯೆಹೋವದೇವರು ಉಂಟುಮಾಡಿದ ಎಲ್ಲಾ ಭೂಜಂತುಗಳಲ್ಲಿ ಸರ್ಪವು ಯುಕ್ತಿಯುಳ್ಳದ್ದಾಗಿತ್ತು. ಅದು ಸ್ತ್ರೀಯ ಬಳಿಗೆ ಬಂದು—ಏನವ್ವಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದೆಂದು ದೇವರು ಅಪ್ಪಣೆಕೊಟ್ಟಿರುವದು ನಿಜವೋ ಎಂದು ಕೇಳಲು ಸ್ತ್ರೀಯು—ತೋಟದಲ್ಲಿರುವ ಮರಗಳ ಹಣ್ಣುಗಳನ್ನು ನಾವು ತಿನ್ನಬಹುದು; ಆದರೆ ತೋಟದ ಮಧ್ಯದಲ್ಲಿರುವ ಈ ಮರದ ಫಲದ ವಿಷಯವಾಗಿ—ಇದನ್ನು ತಿನ್ನಲೂ ಕೂಡದು, ಮುಟ್ಟಲೂ ಕೂಡದು; ತಿಂದರೆ ಸಾಯುವಿರಿ ಎಂದು ದೇವರು ಹೇಳಿದ್ದಾನೆ ಅಂದಳು. ಆಗ ಸರ್ಪವು ಸ್ತ್ರೀಗೆ—ನೀವು ಹೇಗೂ ಸಾಯುವದಿಲ್ಲ; ನೀವು ಇದರ ಹಣ್ಣನ್ನು ತಿಂದಾಗಲೇ ನಿಮ್ಮ ಕಣ್ಣುಗಳು ತೆರೆಯುವವು; ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ; ಇದು ದೇವರಿಗೆ ಚೆನ್ನಾಗಿ ಗೊತ್ತುಂಟು ಅಂದಿತು. ಆಗ ಸ್ತ್ರೀಯು—ಆ ಮರದ ಹಣ್ಣು ತಿನ್ನುವದಕ್ಕೆ ಉತ್ತಮವಾಗಿಯೂ ನೋಡುವದಕ್ಕೆ ರಮ್ಯವಾಗಿಯೂ ಜ್ಞಾನೋದಯಕ್ಕೆ ಅಪೇಕ್ಷಿಸತಕ್ಕದ್ದಾಗಿಯೂ ಇದೆ ಎಂದು ತಿಳಿದು ಅದನ್ನು ತೆಗೆದುಕೊಂಡು ತಿಂದಳು. ಸಂಗಡ ಇದ್ದ ಗಂಡನಿಗೂ ಕೊಡಲು ಅವನೂ ತಿಂದನು.”—ಆದಿಕಾಂಡ 3:1-6.
ದೇವರ ಸ್ಫುಟವಾದ ಎಚ್ಚರಿಕೆಯನ್ನು ಅಲಕ್ಷಿಸಿ, ಆದಾಮಹವ್ವರು ಯೆಹೋವನಲ್ಲಿ ಭರವಸೆಯ ಕೊರತೆಯನ್ನು ತೋರಿಸಿದರು. ಅವರು ಅಕ್ಷರಾರ್ಥ ಸರ್ಪದ ಮುಖಾಂತರ ಹವ್ವಳೊಡನೆ ಮಾತಾಡಿದ, ದೇವರ ವಿರೋಧಿಯಾದ ಆ ಸೈತಾನನ ಸ್ವಭಾವವನ್ನೇ ತೋರಿಸಿದರು. ಸೈತಾನನು ಯೆಹೋವನ ಆಳ್ವಿಕೆಯಲ್ಲಿ ಭರವಸೆಯ ಕೊರತೆಯನ್ನು ತೋರಿಸಿದನು. ಈ ಕಾರಣದಿಂದಾಗಿ ಮತ್ತು ಗರ್ವದ ಹಾಗೂ ಮಹತ್ವಾಕಾಂಕ್ಷಿ ಹೃದಯದಿಂದಾಗಿ, ಅವನು ದೇವರ ವಿರುದ್ಧವಾಗಿ ದಂಗೆಯೆದ್ದು, ಮಾನವರು ಸಹ ಹೀಗೆಯೆ ಮಾಡುವಂತೆ ದಾರಿತಪ್ಪಿಸಿದನು. ದೇವರು ನಂಬಿಕೆಗೆ ಅರ್ಹನಲ್ಲ ಎಂದು ನೆನಸುವಂತೆ ಅವನು ಅವರನ್ನು ಪ್ರಭಾವಿಸಿದನು.
ಫಲಿತಾಂಶ? ತಿರುಚಲ್ಪಟ್ಟ ಸಂಬಂಧಗಳು
ಇತರರನ್ನು ನಂಬದೇ ಇರುವವರಿಗೆ ಸ್ನೇಹವನ್ನು ಕಾಪಾಡಿಕೊಳ್ಳಲು ಕಷ್ಟಕರವಾಗಿರುವುದನ್ನು ನೀವು ಗಮನಿಸಿರಬಹುದು. ಸಾ.ಶ.ಪೂ. ಪ್ರಥಮ ಶತಮಾನದ ಲ್ಯಾಟಿನ್ ಲೇಖಕನಾದ ಪೂಬ್ಲೀಯಸ್ ಸ್ಯೂರಸ್ ಬರೆದುದು: “ಭರವಸೆಯು ಸ್ನೇಹದ ಏಕಮಾತ್ರ ಬಂಧವಾಗಿದೆ.” ಆದಾಮಹವ್ವರು ದಂಗೆಯೇಳುವ ಮೂಲಕ, ದೇವರಲ್ಲಿ ನಂಬಿಕೆಯ ಕೊರತೆಯನ್ನು ತೋರಿಸಿದರು. ಆದುದರಿಂದ, ದೇವರಿಗೂ ಅವರ ಮೇಲೆ ನಂಬಿಕೆಯನ್ನಿಡಲಿಕ್ಕೆ ಯಾವುದೇ ಕಾರಣವಿರಲಿಲ್ಲ ನಿಶ್ಚಯ. ನಂಬಿಕೆ ಅಥವಾ ಭರವಸೆಯಲ್ಲಿ ತಪ್ಪಿಹೋದ ಕಾರಣ, ಪ್ರಥಮ ಮಾನವರು ದೇವರ ಸ್ನೇಹವನ್ನು ಕಳೆದುಕೊಂಡರು. ಅವರ ದಂಗೆಗಾಗಿ ಯೆಹೋವನು ಅವರನ್ನು ಖಂಡಿಸಿದ ಮೇಲೆ, ಮತ್ತೇ ಅವರೊಂದಿಗೆ ಆತನು ಮಾತಾಡಿದ ಯಾವುದೇ ಸೂಚನೆಯು ಇಲ್ಲ.
ಆದಾಮಹವ್ವರ ನಡುವಿನ ಸಂಬಂಧವೂ ಸಹ ಸಂಕಷ್ಟಕ್ಕೀಡಾಯಿತು. “ನೀನು ಗರ್ಭಿಣಿಯಾಗಿರುವ ಕಾಲದಲ್ಲಿ ಬಹು ಸಂಕಟಪಡಬೇಕೆಂದು ನಾನು ನೇಮಿಸಿದ್ದೇನೆ; ಕಷ್ಟದಿಂದಲೇ ಮಕ್ಕಳನ್ನು ಹೆರುವಿ; ಗಂಡನ ಮೇಲೆ ನಿನಗೆ ಆಶೆಯಿರುವದು; ಅವನು ನಿನಗೆ ಒಡೆಯನಾಗುವನು” ಎಂದು ಯೆಹೋವನು ಹವ್ವಳಿಗೆ ಎಚ್ಚರಿಸಿದನು. (ಆದಿಕಾಂಡ 3:16, ಓರೆ ಅಕ್ಷರಗಳು ನಮ್ಮವು.) ದ ಜೆರೂಸಲೇಮ್ ಬೈಬಲ್ ಹೇಳುವುದು: “ಅವನು ನಿನ್ನ ಮೇಲೆ ಹಕ್ಕುಚಲಾಯಿಸುವನು.” ದೇವರು ಬಯಸಿದಂತೆ, ಆದಾಮನು ತನ್ನ ಪತ್ನಿಯ ಮೇಲೆ ಪ್ರೀತಿಪರ ತಲೆತನವನ್ನು ತೋರಿಸುವ ಬದಲು, ಅವಳ ಮೇಲೆ ಹಕ್ಕುಚಲಾಯಿಸುತ್ತಾ, ಅವನು ಆಗ ಅವಳ ಒಡೆಯನಾದನು.
ಅವರು ಪಾಪಮಾಡಿದ ಬಳಿಕ, ಆದಾಮನು ತಪ್ಪನ್ನು ತನ್ನ ಪತ್ನಿಯ ಮೇಲೆ ಹೊರಿಸಲು ಪ್ರಯತ್ನಿಸಿದನು. ಅವನ ಅಭಿಪ್ರಾಯದಲ್ಲಿ, ಅವರು ಪರಿಪೂರ್ಣ ಉದ್ಯಾನವನದಿಂದ ಬಂಜರು ಭೂಮಿಯೊಳಗೆ ಹೊರಹಾಕಲ್ಪಟ್ಟು, ಮಣ್ಣಿಗೆ ಸೇರುವ ಮುನ್ನ, ಅಪರಿಪೂರ್ಣ ಪರಿಸ್ಥಿತಿಗಳ ಕೆಳಗೆ ದಾಸರಾಗಿರುವಂತೆ ದಂಡಿಸಲ್ಪಟ್ಟದ್ದು ಅವಳು ಮಾಡಿದ ಕಾರ್ಯದಿಂದಾಗಿಯೇ. (ಆದಿಕಾಂಡ 3:17-19) ಇದು ಇಬ್ಬರ ನಡುವಿನ ಘರ್ಷಣೆಯ ಒಂದು ಮೂಲವಾಗಿದ್ದುದನ್ನು ನಾವು ಚೆನ್ನಾಗಿ ಊಹಿಸಿಕೊಳ್ಳಬಲ್ಲೆವು. ಆದಾಮನು ತಾನು ಇನ್ನು ಮುಂದೆ ಹವ್ವಳ ಮಾತನ್ನು ಎಂದಿಗೂ ಕೇಳಿಸಿಕೊಳ್ಳುವುದಿಲ್ಲವೆಂದು ಜೋರುಮಾಡಿದ್ದಿರಬಹುದು. ಇದರ ಕಾರಣವಾಗಿ, ಅವನು ಅವಳಿಗೆ ಹೀಗೆ ಹೇಳುವ ಮೂಲಕ ಸಮರ್ಥಿಸಿಕೊಂಡಿದ್ದಿರಬಹುದು, ‘ಇವತ್ತಿನಿಂದ ನಾನೇ ಯಜಮಾನ!’ ಮತ್ತೊಂದು ಕಡೆಯಲ್ಲಿ ಹವ್ವಳು, ಆದಾಮನು ಕುಟುಂಬದ ತಲೆತನದ ಪಾತ್ರವನ್ನು ನಿರ್ವಹಿಸಲು ತಪ್ಪಿಹೋದದ್ದನ್ನು ನೋಡಿ, ಅವನ ಮೇಲಿನ ಭರವಸೆಯನ್ನು ಕಳೆದುಕೊಂಡಿದ್ದಿರಬಹುದು. ಏನೇ ಆಗಲಿ, ದೇವರಲ್ಲಿ ಭರವಸೆಯನ್ನಿಡದೇ ಹೋಗುವುದರ ಮೂಲಕ, ಮಾನವರು ಆತನೊಂದಿಗೆ ತಮ್ಮ ಸ್ನೇಹವನ್ನು ಕಳೆದುಕೊಂಡರು ಮತ್ತು ಪರಸ್ಪರ ಸಂಬಂಧವನ್ನು ಹಾನಿಪಡಿಸಿಕೊಂಡರು.
ನಾವು ಯಾರನ್ನು ನಂಬಸಾಧ್ಯವಿದೆ?
ಆದಾಮಹವ್ವರ ಉದಾಹರಣೆಯು ಚಿತ್ರಿಸುವಂತೆ, ನಮ್ಮ ಭರವಸೆಗೆ ಎಲ್ಲರೂ ಯೋಗ್ಯರಲ್ಲ. ನಮ್ಮ ಭರವಸೆಗೆ ಯಾರು ಯೋಗ್ಯರು ಮತ್ತು ಯಾರು ಯೋಗ್ಯರಲ್ಲ ಎಂಬುದನ್ನು ನಾವು ಹೇಗೆ ತಿಳಿದುಕೊಳ್ಳಬಲ್ಲೆವು?
ಕೀರ್ತನೆ 146:3 ನಮಗೆ ಬುದ್ಧಿವಾದ ಹೇಳುವುದು: “ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನವನನ್ನು ನೆಚ್ಚಬೇಡಿರಿ, ಅವನು ಸಹಾಯ ಮಾಡ ಶಕ್ತನಲ್ಲ.” ಮತ್ತು ಯೆರೆಮೀಯ 17:5-7ರಲ್ಲಿ ನಾವು ಓದುವುದು: “ಮಾನವಮಾತ್ರದವರಲ್ಲಿ ಭರವಸವಿಟ್ಟು ನರಜನ್ಮದವರನ್ನು ತನ್ನ ಭುಜಬಲವೆಂದು ತಿಳಿದು ಯೆಹೋವನನ್ನು ತೊರೆಯುವ ಮನಸ್ಸುಳ್ಳವನು ಶಾಪಗ್ರಸ್ತನು.” ಮತ್ತೊಂದು ಕಡೆಯಲ್ಲಿಯಾದರೋ, “ಯಾವನು ಯೆಹೋವನಲ್ಲಿ ನಂಬಿಕೆಯಿಟ್ಟಿದ್ದಾನೋ ಯಾವನಿಗೆ ಯೆಹೋವನು ಭರವಸವಾಗಿದ್ದಾನೋ ಅವನು ಧನ್ಯನು.”
ಮಾನವರ ಮೇಲೆ ಭರವಸೆಯನ್ನಿಡುವುದು ಯಾವಾಗಲೂ ತಪ್ಪಾಗಿರುವುದಿಲ್ಲ ನಿಜ. ದೇವರಲ್ಲಿನ ಭರವಸೆಯು ಎಂದೂ ಅನುಚಿತವಾಗದು ಎಂದೇ ಆ ವಚನಗಳು ಹೇಳುತ್ತವೆಯಾದರೂ, ಅಪರಿಪೂರ್ಣ ಮಾನವರಲ್ಲಿ ಭರವಸೆಯನ್ನಿಡುವುದು ಕೆಲವೊಮ್ಮೆ ವಿನಾಶಕ್ಕೆ ನಡೆಸಬಲ್ಲದು. ಉದಾಹರಣೆಗೆ, ದೇವರು ಮಾತ್ರವೇ ಮಾಡಸಾಧ್ಯವಿರುವುದನ್ನು—ರಕ್ಷಣೆಯನ್ನು ಒದಗಿಸಿ, ಸಂಪೂರ್ಣ ಶಾಂತಿ ಮತ್ತು ಭದ್ರತೆಯನ್ನು ತರುವುದನ್ನು—ಪಡೆದುಕೊಳ್ಳಲು, ಮಾನವರನ್ನು ನೆಚ್ಚುವ ಜನರು ನಿರಾಶೆಗೆ ತೆರಳುತ್ತಾರೆ.—ಕೀರ್ತನೆ 46:9; 1 ಥೆಸಲೊನೀಕ 5:3.
ನಿಜವಾಗಿಯೂ, ಮಾನವರು ಮತ್ತು ಮಾನವ ಸಂಘಗಳು, ದೇವರ ಉದ್ದೇಶದೊಂದಿಗೆ ಸಾಮರಸ್ಯದಲ್ಲಿ ಕಾರ್ಯನಡಿಸುವಷ್ಟರ ಮತ್ತು ದೇವರ ಮೂಲತತ್ತ್ವಗಳನ್ನು ತೋರಿಸುವಷ್ಟರ ಮಟ್ಟಿಗೆ ಮಾತ್ರವೇ ಭರವಸೆಗೆ ಯೋಗ್ಯವಾಗಿರುತ್ತವೆ. ಹೀಗೆ, ನಮ್ಮಲ್ಲಿ ಭರವಸೆಯನ್ನಿಡಲು ಇತರರನ್ನು ಪ್ರೇರೇಪಿಸಬೇಕಾದರೆ, ನಾವು ಪ್ರಾಮಾಣಿಕರೂ ಭರವಸಾರ್ಹರೂ ಆಗಿದ್ದು, ಸತ್ಯವನ್ನೇ ಆಡಬೇಕು. (ಜ್ಞಾನೋಕ್ತಿ 12:19; ಎಫೆಸ 4:25; ಇಬ್ರಿಯ 13:18) ಬೈಬಲ್ ಮೂಲತತ್ತ್ವಗಳೊಂದಿಗೆ ಹೊಂದಿಕೊಂಡು, ನಮ್ಮನ್ನು ನಾವು ನಡೆಸಿಕೊಳ್ಳುವಲ್ಲಿ ಮಾತ್ರ, ಇತರರು ನಮ್ಮಲ್ಲಿಡುವ ಭರವಸೆಯು ಸಮರ್ಥಿಸಲ್ಪಡುವುದು ಮತ್ತು ಪರಸ್ಪರ ಶಕ್ತಿ ಹಾಗೂ ಪ್ರೋತ್ಸಾಹನೆಯ ಒಂದು ಮೂಲವಾಗುವುದು.
ಭರವಸೆಯನ್ನು ಪುನಸ್ಸ್ಥಾಪಿಸುವುದು
ದೇವರಲ್ಲಿ ಭರವಸೆಯನ್ನಿಡಲು ಮತ್ತು ಇತರರು ಸಹ ತದ್ರೀತಿಯಲ್ಲಿ ಭರವಸೆಯಿಡುವಂತೆ ಉತ್ತೇಜಿಸಲು, ಯೆಹೋವನ ಸಾಕ್ಷಿಗಳ ಬಳಿ ಒಂದು ಬಲವಾದ ಆಧಾರವಿದೆ. ಯೆಹೋವನು ನಂಬಿಗಸ್ತನೂ ನಿಷ್ಠಾವಂತನೂ ಆಗಿದ್ದಾನೆ. ಆತನು ಏನನ್ನು ಹೇಳಿದ್ದಾನೋ ಅದನ್ನು ಮಾಡುವಾತನಾಗಿರುವ ಯೆಹೋವನ ಮೇಲೆ ಒಬ್ಬನು ಯಾವಾಗಲೂ ಆತುಕೊಳ್ಳಸಾಧ್ಯವಿದೆ, ಏಕೆಂದರೆ “ದೇವರು ಸುಳ್ಳಾಡಶಕ್ತನಲ್ಲ.” ಪ್ರೀತಿಯ ದೇವರಲ್ಲಿ ಇಟ್ಟಿರುವ ಭರವಸೆಯು ಎಂದೂ ನಿರಾಶೆಗೆ ನಡಿಸದು.—ಇಬ್ರಿಯ 6:19, NW; ಕೀರ್ತನೆ 94:14; ಯೆಶಾಯ 46:9-11; 1 ಯೋಹಾನ 4:8.
ಯೆಹೋವನಲ್ಲಿ ಭರವಸೆಯನ್ನಿಡುವುದರಲ್ಲಿ ಐಕ್ಯರಾದ ಮತ್ತು ಆತನ ಮೂಲತತ್ತ್ವಗಳಿಗನುಸಾರ ಜೀವಿಸುವ ಜನರು, ಪರಸ್ಪರರಲ್ಲಿ ಭರವಸೆಯನ್ನಿಡುವುದಕ್ಕೆ ಬಲವಾಗಿ ಪ್ರಚೋದಿಸಲ್ಪಡುತ್ತಾರೆ. ಭರವಸೆಯಿಲ್ಲದಿರುವ ಪರಿಸ್ಥಿತಿಯಲ್ಲಿ ನರಳುತ್ತಿರುವ ಲೋಕದಲ್ಲಿ, ಭರವಸಾರ್ಹ ಜನರನ್ನು ಕಂಡುಕೊಳ್ಳುವುದು ಎಂಥ ಒಂದು ಆನಂದಮಯವಾದ ವಿಷಯ! ಬೇರೆಯವರು ಏನು ಹೇಳುತ್ತಾರೋ ಅಥವಾ ಮಾಡುತ್ತಾರೋ ಅದನ್ನು ಸಂಪೂರ್ಣವಾಗಿ ನಂಬಸಾಧ್ಯವಿರುತ್ತಿದ್ದಲ್ಲಿ, ಲೋಕವು ಎಷ್ಟು ಭಿನ್ನವಾಗಿರುವುದು ಎಂಬುದನ್ನು ಕಲ್ಪಿಸಿಕೊಳ್ಳಿರಿ! ದೇವರು ವಾಗ್ದಾನಿಸಿರುವ ಬರಲಿರುವಂಥ ಹೊಸ ಲೋಕದಲ್ಲಿ ಇದು ಸತ್ಯವಾಗಿರುವುದು. ಅಲ್ಲಿ ಇನ್ನೆಂದೂ ಭರವಸೆಯ ಕೊರತೆಯಿರದು!
ಆ ಪರಿಸ್ಥಿತಿಯಲ್ಲಿ ನೀವು ಜೀವಿಸಲು ಬಯಸುವಿರೋ? ಹಾಗಿರುವಲ್ಲಿ, ಜೀವಿತಕ್ಕಾಗಿ ದೇವರ ಆವಶ್ಯಕತೆಗಳ ಕುರಿತಾಗಿ ಇನ್ನೂ ಹೆಚ್ಚನ್ನು ಕಲಿತುಕೊಳ್ಳುವ ಮೂಲಕ, ಆತನಲ್ಲಿ ಮತ್ತು ಆತನ ವಾಗ್ದಾನದಲ್ಲಿ ನಿಮ್ಮ ಭರವಸೆಯನ್ನು ಈಗ ಬಲಪಡಿಸಿಕೊಳ್ಳುವಂತೆ ನಿಮ್ಮನ್ನು ಯೆಹೋವನ ಸಾಕ್ಷಿಗಳು ಆಮಂತ್ರಿಸುತ್ತಾರೆ. ಬೈಬಲಿನ ಒಂದು ಅಧ್ಯಯನವು, ದೇವರಿದ್ದಾನೆ, ಮನುಕುಲದ ಕ್ಷೇಮಾಭಿವೃದ್ಧಿಯಲ್ಲಿ ಆಸಕ್ತನಾಗಿದ್ದಾನೆ ಮತ್ತು ಬೇಗನೆ ತನ್ನ ರಾಜ್ಯದ ಮೂಲಕ ಲೋಕದ ಸಮಸ್ಯೆಗಳನ್ನು ಸರಿಪಡಿಸಲು ಕಾರ್ಯನಡಿಸುವನು ಎಂಬ ರುಜುವಾತನ್ನು ಕೊಡುತ್ತದೆ. ಲಕ್ಷಾಂತರ ಜನರು ದೇವರಲ್ಲಿ ಮತ್ತು ಆತನ ವಾಕ್ಯವಾದ ಬೈಬಲಿನಲ್ಲಿ ಭರವಸೆಯನ್ನಿಡಲು ಕಲಿತುಕೊಂಡಿದ್ದಾರೆ. ಯೆಹೋವನ ಸಾಕ್ಷಿಗಳು ಉಚಿತವಾಗಿ ಬೈಬಲ್ ಅಧ್ಯಯನದ ಕೋರ್ಸಿನ ಸಾರ್ವಜನಿಕ ಸೇವೆಯನ್ನು ಸಂತೋಷವಾಗಿ ನಿಮಗೆ ನೀಡುವರು. ಅಥವಾ ಹೆಚ್ಚಿನ ಮಾಹಿತಿಗಾಗಿ ಈ ಪತ್ರಿಕೆಯ ಪ್ರಕಾಶಕರಿಗೆ ಪತ್ರ ಬರೆಯಿರಿ.
[Blurb on page 5]
ದೇವರಲ್ಲಿನ ಭರವಸೆಯ ಕೊರತೆಯು ಹಾನಿಗೊಂಡ ಮಾನವ ಸಂಬಂಧಗಳಿಗೆ ನಡೆಸುತ್ತದೆ
[ಪುಟ 7 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಮಾನವರು ದೇವರ ಮೂಲತತ್ತ್ವಗಳೊಂದಿಗೆ ಸಾಮರಸ್ಯದಲ್ಲಿ ಕಾರ್ಯನಡಿಸುವಷ್ಟರ ಮಟ್ಟಿಗೆ ಮಾತ್ರವೇ ಭರವಸೆಗೆ ಯೋಗ್ಯರಾಗಿರುತ್ತಾರೆ