ಸ್ವಾತಂತ್ರ್ಯದಲ್ಲಿ ಕ್ರೈಸ್ತ ಸಮರ್ಪಣೆಗೆ ಅನುಗುಣವಾಗಿ ಜೀವಿಸುವುದು
“ಯೆಹೋವನ ಆತ್ಮವು ಎಲ್ಲಿದೆಯೊ ಅಲ್ಲಿ ಸ್ವಾತಂತ್ರ್ಯವಿದೆ.”—2 ಕೊರಿಂಥ 3:17, NW.
1. ಯೆಹೋವನ ಸಾಕ್ಷಿಗಳು ಯಾರಿಗೆ ಸಮರ್ಪಿತರಾಗಿದ್ದಾರೆ, ಮತ್ತು ಅವರು ಶಾಸನಬದ್ಧ ನಿಯೋಗಗಳನ್ನು ಏಕೆ ಉಪಯೋಗಿಸುತ್ತಾರೆ?
ಯೆಹೋವನ ಸಾಕ್ಷಿಗಳು ತಮ್ಮ ಧರ್ಮವು ಸದಾಕಾಲ ಬಾಳುವುದೆಂದು ನಂಬುತ್ತಾರೆ. ಆದುದರಿಂದ ಅವರು ದೇವರನ್ನು ಎಲ್ಲ ನಿತ್ಯತೆಗೂ “ಆತ್ಮ ಮತ್ತು ಸತ್ಯದಿಂದ” (NW) ಸೇವಿಸುವುದನ್ನು ಎದುರುನೋಡುತ್ತಾರೆ. (ಯೋಹಾನ 4:23, 24) ಸ್ವತಂತ್ರ ನೈತಿಕ ನಿಯೋಗಿಗಳಂತೆ, ಈ ಕ್ರೈಸ್ತರು ಯೆಹೋವ ದೇವರಿಗೆ ಒಂದು ಅನಿರ್ಬಂಧಿತ ಸಮರ್ಪಣೆಯನ್ನು ಮಾಡಿದ್ದಾರೆ ಮತ್ತು ಅದಕ್ಕನುಗುಣವಾಗಿ ಜೀವಿಸಲು ದೃಢನಿಶ್ಚಯವನ್ನು ಮಾಡಿದ್ದಾರೆ. ಆದಕಾರಣ, ಅವರು ದೇವರ ವಾಕ್ಯದ ಮೇಲೆ ಮತ್ತು ಆತನ ಪವಿತ್ರಾತ್ಮದ ಮೇಲೆ ಆತುಕೊಳ್ಳುತ್ತಾರೆ. ದೇವದತ್ತ ಸ್ವಾತಂತ್ರ್ಯದಲ್ಲಿ ಅವರು ತಮ್ಮ ಕ್ರೈಸ್ತ ಸಮರ್ಪಣೆಯ ಮಾರ್ಗಕ್ರಮವನ್ನು ಪೂರ್ಣಹೃದಯದಿಂದ ಬೆನ್ನಟ್ಟಿದಂತೆ, ಸಾಕ್ಷಿಗಳು ಸರಕಾರಿ “ಮೇಲಧಿಕಾರಿಗಳ” (NW) ಪಾತ್ರಕ್ಕೆ ಸಲ್ಲತಕ್ಕ ಗೌರವವನ್ನು ತೋರಿಸಿ, ನ್ಯಾಯಬದ್ಧ ಸಾಧನಗಳು ಮತ್ತು ಒದಗಿಸುವಿಕೆಗಳ ಯೋಗ್ಯ ಉಪಯೋಗವನ್ನು ಮಾಡಿಕೊಳ್ಳುತ್ತಾರೆ. (ರೋಮಾಪುರ 13:1; ಯಾಕೋಬ 1:25) ದೃಷ್ಟಾಂತಕ್ಕೆ, ಜೊತೆ ಮಾನವರನ್ನು ವಿಶೇಷವಾಗಿ ಆತ್ಮಿಕ ವಿಧಗಳಲ್ಲಿ ಸಹಾಯಮಾಡುವ ತಮ್ಮ ಕೆಲಸವನ್ನು ಸಾಧಿಸಲಿಕ್ಕಾಗಿ ಅವರನ್ನು ಶಕ್ತರನ್ನಾಗಿ ಮಾಡಲು, ಸಾಕ್ಷಿಗಳು ವಾಚ್ ಟವರ್ ಸೊಸೈಟಿಯನ್ನು—ಹಲವಾರು ದೇಶಗಳಲ್ಲಿರುವ ಸೊಸೈಟಿಗಳಲ್ಲಿ ಒಂದನ್ನು—ಶಾಸನಬದ್ಧ ಸಾಧನವಾಗಿ ಉಪಯೋಗಿಸುತ್ತಾರೆ. ಆದರೆ ಸಾಕ್ಷಿಗಳು ಯಾವುದೇ ಶಾಸನಬದ್ಧ ನಿಯೋಗಕ್ಕಲ್ಲ ಬದಲಾಗಿ ದೇವರಿಗೆ ಸಮರ್ಪಿತರಾಗಿದ್ದಾರೆ, ಮತ್ತು ಯೆಹೋವನಿಗಾಗಿರುವ ಅವರ ಸಮರ್ಪಣೆಯು ಸದಾಕಾಲಕ್ಕೂ ಬಾಳುವುದು.
2. ವಾಚ್ ಟವರ್ ಸೊಸೈಟಿ ಮತ್ತು ತದ್ರೀತಿಯ ಶಾಸನಬದ್ಧ ನಿಯೋಗಗಳನ್ನು ಯೆಹೋವನ ಸಾಕ್ಷಿಗಳು ಬಹಳವಾಗಿ ಗಣ್ಯಮಾಡುವುದು ಏಕೆ?
2 ದೇವರಿಗೆ ಸಮರ್ಪಿತರಾದ ಸೇವಕರಂತೆ, ‘ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿ, ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ಅವರಿಗೆ ಉಪದೇಶ’ ನೀಡಬೇಕೆಂಬ ಯೇಸುವಿನ ಸೂಚನೆಗಳನ್ನು ಅನುಸರಿಸುವ ಹಂಗು ಯೆಹೋವನ ಸಾಕ್ಷಿಗಳಿಗಿದೆ. (ಮತ್ತಾಯ 28:19, 20) ಈ ಕೆಲಸವು ವಿಷಯಗಳ ವ್ಯವಸ್ಥೆಯ ಅಂತ್ಯದ ವರೆಗೂ ಮುಂದುವರಿಯುವುದು, ಏಕೆಂದರೆ ಯೇಸು ಹೀಗೂ ಹೇಳಿದನು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” (ಮತ್ತಾಯ 24:3, 14) ಪ್ರತಿ ವರ್ಷ, ವಾಚ್ ಟವರ್ ಸೊಸೈಟಿಯ ಮುದ್ರಣಾಲಯಗಳು ಮತ್ತು ತದ್ರೀತಿಯ ಶಾಸನಬದ್ಧ ಮಂಡಲಿಗಳು, ಯೆಹೋವನ ಸಾಕ್ಷಿಗಳಿಗೆ ತಮ್ಮ ಲೋಕವ್ಯಾಪಕ ಸಾರುವ ಚಟುವಟಿಕೆಯಲ್ಲಿ ಉಪಯೋಗಿಸುವಂತೆ ಕೋಟಿಗಟ್ಟಲೆ ಬೈಬಲುಗಳು, ಪುಸ್ತಕಗಳು, ಬ್ರೋಷರುಗಳು, ಮತ್ತು ಪತ್ರಿಕೆಗಳನ್ನು ಸರಬರಾಯಿಮಾಡುತ್ತವೆ. ಹೀಗಿರುವುದರಿಂದ, ದೇವರಿಗೆ ಮಾಡಿದ ಸಮರ್ಪಣೆಗೆ ಅನುಗುಣವಾಗಿ ಆತನ ಸಮರ್ಪಿತ ಸೇವಕರು ಜೀವಿಸುವಂತೆ ಸಹಾಯಮಾಡುವುದರಲ್ಲಿ ಈ ಶಾಸನಬದ್ಧ ಸಂಸ್ಥೆಗಳು ಅಮೂಲ್ಯವಾಗಿವೆ.
3. “ಸೊಸೈಟಿ” ಎಂಬ ಪದವನ್ನು ಯೆಹೋವನ ಸಾಕ್ಷಿಗಳು ಸಾಮಾನ್ಯವಾಗಿ ಯಾವ ಅರ್ಥದಲ್ಲಿ ಬಳಸುತ್ತಾರೆ?
3 ಸಾಕ್ಷಿಗಳು ವಾಚ್ ಟವರ್ ಸೊಸೈಟಿ—ಅಥವಾ ಹೆಚ್ಚಿನ ಬಾರಿ ಕೇವಲ “ಸೊಸೈಟಿ”—ಯ ಕುರಿತು ಮಾತಾಡುವ ರೀತಿಯು, ಅವರು ಅದನ್ನು ಒಂದು ಶಾಸನಬದ್ಧ ಸಾಧನಕ್ಕಿಂತಲೂ ಹೆಚ್ಚಾಗಿ ವೀಕ್ಷಿಸುವಂತೆ ತೋರುತ್ತದೆಂದು ಯಾರಾದರೊಬ್ಬರು ವಾದಿಸಬಹುದು. ಆರಾಧನೆಯ ವಿಷಯಗಳಲ್ಲಿ ಅವರು ಅದನ್ನು ಅಂತಿಮ ಅಧಿಕಾರಿಯಾಗಿ ಪರಿಗಣಿಸುವುದಿಲ್ಲವೊ? ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು (ಇಂಗ್ಲಿಷ್) ಪುಸ್ತಕವು ಈ ವಿಷಯವನ್ನು ಹೀಗೆ ವಿವರಿಸುವ ಮೂಲಕ ಸ್ಪಷ್ಟಪಡಿಸುತ್ತದೆ: “ದ ವಾಚ್ಟವರ್ [ಜೂನ್ 1, 1938] ಪತ್ರಿಕೆಯು ‘ಸೊಸೈಟಿ’ಯ ಕುರಿತು ಮಾತಾಡಿದಾಗ, ಅದು ಕೇವಲ ಒಂದು ಶಾಸನಬದ್ಧ ಸಾಧನವನ್ನಲ್ಲ, ಬದಲಿಗೆ ಆ ಶಾಸನಬದ್ಧ ಸಂಸ್ಥೆಯನ್ನು ರಚಿಸಿ, ಅದನ್ನುಪಯೋಗಿಸಿದ ಅಭಿಷಿಕ್ತ ಕ್ರೈಸ್ತರ ಮಂಡಲಿಯನ್ನು ಅರ್ಥೈಸಿತು.”a ಹೀಗೆ ಆ ಅಭಿವ್ಯಕ್ತಿಯು, ‘ನಂಬಿಗಸ್ತನೂ ವಿವೇಕಿಯೂ ಆದ ಆಳ’ನ್ನು ಸೂಚಿಸಿತು. (ಮತ್ತಾಯ 24:45) ಸಾಕ್ಷಿಗಳು “ಸೊಸೈಟಿ” ಎಂಬ ಪದವನ್ನು ಸಾಮಾನ್ಯವಾಗಿ ಈ ಅರ್ಥದಲ್ಲೇ ಉಪಯೋಗಿಸಿದರು.
4. (ಎ) ತಪ್ಪು ತಿಳುವಳಿಕೆಗಳನ್ನು ದೂರವಿರಿಸಲಿಕ್ಕಾಗಿ ಅನೇಕ ಸಾಕ್ಷಿಗಳು ತಮ್ಮನ್ನು ಹೇಗೆ ವ್ಯಕ್ತಪಡಿಸಿಕೊಳ್ಳುತ್ತಾರೆ? (ಬಿ) ಪದಪ್ರಯೋಗದ ಸಂಬಂಧದಲ್ಲಿ ನಾವು ಏಕೆ ಸಮತೆಯುಳ್ಳವರಾಗಿರಬೇಕು?
4 ತಪ್ಪು ತಿಳುವಳಿಕೆಗಳನ್ನು ದೂರವಿರಿಸಲಿಕ್ಕಾಗಿ, ತಾವು ಸಾಕ್ಷ್ಯೇತರರ ಮುಂದೆ ಹೇಗೆ ಮಾತಾಡುತ್ತೇವೆಂಬ ವಿಷಯದಲ್ಲಿ ಯೆಹೋವನ ಸಾಕ್ಷಿಗಳು ಜಾಗರೂಕರಾಗಿರಲು ಪ್ರಯತ್ನಿಸುತ್ತಾರೆ. “ಸೊಸೈಟಿಯು ಹೀಗೆ ಕಲಿಸುತ್ತದೆ” ಇಲ್ಲವೆ “ಯೆಹೋವನ ಸಾಕ್ಷಿಗಳು ಹೀಗೆ ನಂಬುತ್ತಾರೆ” ಎಂದು ಹೇಳುವ ಬದಲು, ಅನೇಕ ಸಾಕ್ಷಿಗಳು “ಬೈಬಲು ಹೀಗೆ ಹೇಳುತ್ತದೆ” ಇಲ್ಲವೆ, “ಬೈಬಲು ಹೀಗೆ ಕಲಿಸುವುದಾಗಿ ನಾನು ತಿಳಿದುಕೊಳ್ಳುತ್ತೇನೆ” ಎಂಬಂತಹ ಅಭಿವ್ಯಕ್ತಿಗಳನ್ನು ಬಳಸಲು ಇಷ್ಟಪಡುತ್ತಾರೆ. ಈ ರೀತಿಯಲ್ಲಿ ಅವರು, ಬೈಬಲ್ ಬೋಧನೆಗಳನ್ನು ಸ್ವೀಕರಿಸುವುದರಲ್ಲಿ ಪ್ರತಿಯೊಬ್ಬ ಸಾಕ್ಷಿಯು ಮಾಡಿರುವ ವೈಯಕ್ತಿಕ ನಿರ್ಣಯವನ್ನು ಒತ್ತಿಹೇಳುತ್ತಾರೆ ಮತ್ತು ಸಾಕ್ಷಿಗಳು ಯಾವುದೊ ಧಾರ್ಮಿಕ ಪಂಗಡದ ವಿಧಿಗಳಿಗೆ ಹೇಗೊ ಕಟ್ಟುಬಿದ್ದಿರುತ್ತಾರೆಂಬ ಸುಳ್ಳು ಅಭಿಪ್ರಾಯವನ್ನು ಕೊಡುವುದರಿಂದಲೂ ದೂರವಿರುತ್ತಾರೆ. ನಿಶ್ಚಯವಾಗಿಯೂ, ಪದಪ್ರಯೋಗದ ವಿಷಯದಲ್ಲಿನ ಸೂಚನೆಗಳು ಎಂದಿಗೂ ವಾಗ್ವಾದದ ವಿಷಯವಾಗಬಾರದು. ಎಷ್ಟೆಂದರೂ, ತಪ್ಪು ತಿಳುವಳಿಕೆಗಳನ್ನು ತಡೆಯುವ ಮಟ್ಟಿಗೆ ಮಾತ್ರ ಪದಪ್ರಯೋಗವು ಪ್ರಾಮುಖ್ಯವಾಗಿದೆ. ಕ್ರೈಸ್ತ ಸಮತೆಯ ಆವಶ್ಯಕತೆಯಿದೆ. “ಪದಗಳ ಸಂಬಂಧದಲ್ಲಿ ಜಗಳವಾಡಬಾರದೆಂದು” (NW) ಬೈಬಲು ನಮಗೆ ಬುದ್ಧಿವಾದವನ್ನೀಯುತ್ತದೆ. (2 ತಿಮೊಥೆಯ 2:14, 15) ಶಾಸ್ತ್ರಗಳು ಈ ತತ್ವವನ್ನೂ ತಿಳಿಯಪಡಿಸುತ್ತವೆ: “ನೀವೂ ತಿಳಿಯಬಹುದಾದ ಭಾಷೆಯನ್ನೂ ಬಾಯಿಂದ ಆಡದೆಹೋದರೆ ನಿಮ್ಮ ಮಾತಿನ ಅರ್ಥವನ್ನು ಹೇಗೆ ತಿಳಿಯುವದು?”—1 ಕೊರಿಂಥ 14:9.
ನಿಯಮಗಳಿಗಾಗಿರುವ ಅಗತ್ಯವನ್ನು ದೇವರ ಆತ್ಮವು ಕಡಮೆಗೊಳಿಸುತ್ತದೆ
5. 1 ಕೊರಿಂಥ 10:23ನ್ನು ಹೇಗೆ ಅರ್ಥಮಾಡಿಕೊಳ್ಳಬೇಕು?
5 “ಎಲ್ಲಾ ಕಾರ್ಯಗಳನ್ನು ಮಾಡುವದಕ್ಕೆ ಸ್ವಾತಂತ್ರ್ಯವುಂಟು [“ನ್ಯಾಯಸಮ್ಮತ,” NW], ಆದರೆ ಎಲ್ಲವೂ ವಿಹಿತವಾಗಿರುವದಿಲ್ಲ”ವೆಂದು ಅಪೊಸ್ತಲ ಪೌಲನು ಗಮನಿಸಿದನು. ಅವನು ಕೂಡಿಸಿ ಹೇಳಿದ್ದು: “ಎಲ್ಲಾ ಕಾರ್ಯಗಳನ್ನು ಮಾಡುವದಕ್ಕೆ ಸ್ವಾತಂತ್ರ್ಯವುಂಟು [“ನ್ಯಾಯಸಮ್ಮತ,” NW], ಆದರೆ ಎಲ್ಲವೂ ಭಕ್ತಿಯನ್ನು ಬೆಳಿಸುವದಿಲ್ಲ.” (1 ಕೊರಿಂಥ 10:23) ದೇವರ ವಾಕ್ಯವು ಸ್ಪಷ್ಟವಾಗಿ ಖಂಡಿಸುವ ವಿಷಯಗಳನ್ನು ಮಾಡುವುದು ನ್ಯಾಯಸಮ್ಮತವೆಂಬುದನ್ನು ಪೌಲನು ನಿಶ್ಚಯವಾಗಿಯೂ ಅರ್ಥೈಸಲಿಲ್ಲ. ಪ್ರಾಚೀನ ಇಸ್ರಾಯೇಲಿಗೆ ಕೊಡಲ್ಪಟ್ಟ ಸುಮಾರು 600 ನಿಯಮಗಳಿಗೆ ಹೋಲಿಸುವಾಗ, ಕ್ರೈಸ್ತ ಜೀವಿತವನ್ನು ಕ್ರಮಪಡಿಸುವ ಸುಸ್ಪಷ್ಟವಾದ ಆಜ್ಞೆಗಳು ಕೆಲವೇ ಆಗಿವೆ. ಆದಕಾರಣ, ಅನೇಕ ವಿಷಯಗಳು ವೈಯಕ್ತಿಕ ಮನಸ್ಸಾಕ್ಷಿಗೆ ಬಿಡಲ್ಪಟ್ಟಿವೆ. ಯೆಹೋವನಿಗೆ ಸಮರ್ಪಣೆಯನ್ನು ಮಾಡಿಕೊಂಡಿರುವ ಒಬ್ಬ ವ್ಯಕ್ತಿಯು, ದೇವರ ಆತ್ಮದ ಮಾರ್ಗದರ್ಶನದಿಂದ ಫಲಿಸುವ ಸ್ವಾತಂತ್ರ್ಯವನ್ನು ಅನುಭವಿಸುತ್ತಾನೆ. ಸತ್ಯವನ್ನು ತನ್ನದಾಗಿ ಮಾಡಿಕೊಂಡಿರುವುದರಿಂದ, ಕ್ರೈಸ್ತನೊಬ್ಬನು ತನ್ನ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಯನ್ನು ಅನುಸರಿಸುತ್ತಾನೆ ಮತ್ತು ಪವಿತ್ರಾತ್ಮದ ಮೂಲಕ ದೇವರ ನಿರ್ದೇಶನದ ಮೇಲೆ ಆತುಕೊಳ್ಳುತ್ತಾನೆ. ಇದು, ತನಗಾಗಿಯೂ ಇತರರಿಗಾಗಿಯೂ ಯಾವುದು “ಭಕ್ತಿಯನ್ನು ಬೆಳಿಸು”ವುದು ಮತ್ತು “ವಿಹಿತವಾಗಿರು”ವುದು ಎಂಬುದನ್ನು ನಿರ್ಧರಿಸಲು ಆ ಸಮರ್ಪಿತ ಕ್ರೈಸ್ತನಿಗೆ ಸಹಾಯಮಾಡುತ್ತದೆ. ತಾನು ಮಾಡುವ ನಿರ್ಣಯಗಳು, ತಾನು ಯಾರಿಗೆ ಸಮರ್ಪಿತನಾಗಿದ್ದೇನೊ ಆ ದೇವರೊಂದಿಗಿನ ತನ್ನ ವೈಯಕ್ತಿಕ ಸಂಬಂಧವನ್ನು ಬಾಧಿಸುತ್ತವೆ ಎಂಬುದನ್ನು ಅವನು ಗ್ರಹಿಸುತ್ತಾನೆ.
6. ನಾವು ಸತ್ಯವನ್ನು ನಮ್ಮದಾಗಿ ಮಾಡಿಕೊಂಡಿದ್ದೇವೆ ಎಂಬುದನ್ನು ಕ್ರೈಸ್ತ ಕೂಟಗಳಲ್ಲಿ ಹೇಗೆ ಪ್ರದರ್ಶಿಸಸಾಧ್ಯವಿದೆ?
6 ಕ್ರೈಸ್ತ ಕೂಟಗಳಲ್ಲಿ ಹೇಳಿಕೆಗಳನ್ನು ನೀಡುವ ಮೂಲಕ ಸಾಕ್ಷಿಯೊಬ್ಬನು ಸತ್ಯವನ್ನು ತನ್ನದಾಗಿ ಮಾಡಿಕೊಂಡಿದ್ದಾನೆಂಬುದನ್ನು ಪ್ರದರ್ಶಿಸುತ್ತಾನೆ. ಮೊದಲಿಗೆ, ಅಭ್ಯಾಸಿಸಲ್ಪಡುತ್ತಿರುವ ಪ್ರಕಾಶನದಲ್ಲಿ ಹೇಳಲ್ಪಟ್ಟ ವಿಷಯಗಳನ್ನು ಅವನು ಪಠಿಸಬಹುದು. ಆದರೆ, ಸಕಾಲದಲ್ಲಿ, ಬೈಬಲ್ ಬೋಧನೆಗಳನ್ನು ತನ್ನ ಸ್ವಂತ ಮಾತುಗಳಲ್ಲಿ ವ್ಯಕ್ತಪಡಿಸುವ ಹಂತಕ್ಕೆ ಅವನು ಪ್ರಗತಿಮಾಡುವನು. ಹೀಗೆ, ಇತರರು ಹೇಳಿರುವುದನ್ನು ಕೇವಲ ಪುನರಾವೃತ್ತಿಸದೆ, ತನ್ನ ಆಲೋಚನಾ ಸಾಮರ್ಥ್ಯವನ್ನು ವಿಕಸಿಸಿಕೊಳ್ಳುತ್ತಿರುವುದರ ಪ್ರಮಾಣವನ್ನು ಅವನು ಕೊಡುತ್ತಾನೆ. ತನ್ನ ಸ್ವಂತ ಮಾತುಗಳಲ್ಲಿ ವಿಚಾರಗಳನ್ನು ಜೋಡಿಸುವುದು ಮತ್ತು ಹೃತ್ಪೂರ್ವಕವಾದ ವಿಧದಲ್ಲಿ ಸತ್ಯದ ಯಥಾರ್ಥವಾದ ಮಾತುಗಳನ್ನು ವ್ಯಕ್ತಪಡಿಸುವುದು, ಅವನಿಗೆ ಹರ್ಷವನ್ನು ತಂದು, ಆ ವಿಷಯವು ಅವನಿಗೆ ಮನದಟ್ಟಾಗಿದೆ ಎಂಬುದನ್ನು ತೋರಿಸುವುದು.—ಪ್ರಸಂಗಿ 12:10; ಹೋಲಿಸಿ ರೋಮಾಪುರ 14:5ಬಿ.
7. ಯೆಹೋವನ ಸೇವಕರಿಂದ ಯಾವ ನಿರ್ಣಯಗಳು ಸ್ವತಂತ್ರವಾಗಿ ಮಾಡಲ್ಪಟ್ಟಿವೆ?
7 ಯೆಹೋವನ ಸಾಕ್ಷಿಗಳು ದೇವರಿಗಾಗಿ ಮತ್ತು ತಮ್ಮ ಜೊತೆ ಮಾನವರಿಗಾಗಿರುವ ಪ್ರೀತಿಯಿಂದ ಪ್ರಚೋದಿಸಲ್ಪಟ್ಟಿರುತ್ತಾರೆ. (ಮತ್ತಾಯ 22:36-40) ಸಹೋದರರ ಲೋಕವ್ಯಾಪಕ ಒಕ್ಕೂಟದೋಪಾದಿ ಅವರು ಕ್ರಿಸ್ತಸದೃಶ ಪ್ರೀತಿಯ ಬಂಧದಲ್ಲಿ ಒಟ್ಟಿಗೆ ಸೇರಿಸಲ್ಪಟ್ಟಿರುವುದು ನಿಜ. (ಕೊಲೊಸ್ಸೆ 3:14; 1 ಪೇತ್ರ 5:9) ಆದರೆ ಒಬ್ಬ ಸ್ವತಂತ್ರ ನೈತಿಕ ನಿಯೋಗಿಯಂತೆ, ಅವರಲ್ಲಿ ಪ್ರತಿಯೊಬ್ಬನು, ದೇವರ ರಾಜ್ಯದ ಸುವಾರ್ತೆಯನ್ನು ಪ್ರಕಟಿಸಲು, ರಾಜಕೀಯವಾಗಿ ತಟಸ್ಥರಾಗಿ ಉಳಿಯಲು, ರಕ್ತವನ್ನು ವಿಸರ್ಜಿಸಲು, ಕೆಲವು ಪ್ರಕಾರದ ಮನೋರಂಜನೆಯಿಂದ ದೂರವಿರಲು, ಮತ್ತು ಬೈಬಲ್ ಮಟ್ಟಗಳಿಗನುಸಾರ ಜೀವಿಸಲು ವೈಯಕ್ತಿಕವಾಗಿ ನಿರ್ಧರಿಸಿದ್ದಾರೆ. ಈ ನಿರ್ಣಯಗಳು ಅವರ ಮೇಲೆ ಒತ್ತಾಯದಿಂದ ಹೇರಲ್ಪಟ್ಟಿರುವುದಿಲ್ಲ. ಈ ನಿರ್ಣಯಗಳು, ಭಾವಿ ಸಾಕ್ಷಿಗಳು ಕ್ರೈಸ್ತ ಸಮರ್ಪಣೆಯ ಹೆಜ್ಜೆಯನ್ನು ತೆಗೆದುಕೊಳ್ಳುವ ಮುಂಚೆ ಅವರಿಂದ ಸ್ವಯಂಪ್ರೇರಿತವಾಗಿ ಆರಿಸಿಕೊಳ್ಳಲ್ಪಟ್ಟ ಜೀವನ ರೀತಿಯ ಒಂದು ಭಾಗವಾಗಿವೆ.
ಆಡಳಿತ ಮಂಡಲಿಗೆ ಉತ್ತರವಾದಿಗಳೊ?
8. ಯಾವ ಪ್ರಶ್ನೆಯನ್ನು ಸ್ಪಷ್ಟೀಕರಿಸಬೇಕಾಗಿದೆ?
8 ನಿಜ ಕ್ರೈಸ್ತರು ದೇವರನ್ನು ಒತ್ತಾಯದಿಂದಾಗಿ ಸೇವಿಸುವುದಿಲ್ಲವೆಂದು ಬೈಬಲು ಸ್ಪಷ್ಟವಾಗಿ ತೋರಿಸುತ್ತದೆ. ಅದು ಹೇಳುವುದು: “ಯೆಹೋವನು ಆತ್ಮನಾಗಿದ್ದಾನೆ, ಮತ್ತು ಯೆಹೋವನ ಆತ್ಮವು ಎಲ್ಲಿರುತ್ತದೊ ಅಲ್ಲಿ ಸ್ವಾತಂತ್ರ್ಯವಿದೆ.” (2 ಕೊರಿಂಥ 3:17, NW) ಆದರೆ ಈ ವಾಸ್ತವಾಂಶವು, ತನ್ನ ಆಡಳಿತ ಮಂಡಲಿಯೊಂದಿಗೆ “ನಂಬಿಗಸ್ತನೂ ವಿವೇಕಿಯೂ ಆದ ಆಳು” ವರ್ಗದ ವಿಚಾರದೊಂದಿಗೆ ಹೇಗೆ ಸರಿಹೊಂದಿಸಲ್ಪಡಸಾಧ್ಯವಿದೆ?—ಮತ್ತಾಯ 24:45-47.
9, 10. (ಎ) ತಲೆತನದ ತತ್ವವು ಕ್ರೈಸ್ತ ಸಭೆಯಲ್ಲಿ ಹೇಗೆ ಅನ್ವಯವಾಗುತ್ತದೆ? (ಬಿ) ತಲೆತನ ತತ್ವದ ಅನುಸರಣೆಯು ಪ್ರಥಮ ಶತಮಾನದ ಕ್ರೈಸ್ತ ಸಭೆಯಲ್ಲಿ ಏನನ್ನು ಅವಶ್ಯಪಡಿಸಿತು?
9 ಈ ಪ್ರಶ್ನೆಯನ್ನು ಉತ್ತರಿಸಲು, ತಲೆತನದ ಶಾಸ್ತ್ರೀಯ ತತ್ವವನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕು. (1 ಕೊರಿಂಥ 11:3) ಎಫೆಸ 5:21-24ರಲ್ಲಿ, ಕ್ರಿಸ್ತನು “ಸಭೆಗೆ ತಲೆಯಾಗಿ” ಗುರುತಿಸಲ್ಪಟ್ಟಿದ್ದಾನೆ; ಆ ಸಭೆಯು ಅವನಿಗೆ “ಅಧೀನವಾಗಿದೆ.” ನಂಬಿಗಸ್ತನೂ ವಿವೇಕಿಯೂ ಆದ ಆಳು, ಯೇಸುವಿನ ಆತ್ಮಿಕ ಸಹೋದರರಿಂದ ರಚಿತವಾಗಿದೆ ಎಂಬುದನ್ನು ಯೆಹೋವನ ಸಾಕ್ಷಿಗಳು ತಿಳಿದುಕೊಂಡಿರುತ್ತಾರೆ. (ಇಬ್ರಿಯ 2:10-13) ಈ ನಂಬಿಗಸ್ತ ಆಳು ವರ್ಗವು, ದೇವರ ಜನರಿಗೆ “ಹೊತ್ತುಹೊತ್ತಿಗೆ” ಆತ್ಮಿಕ “ಆಹಾರ”ವನ್ನು ಒದಗಿಸಲು ನೇಮಿಸಲ್ಪಟ್ಟಿದೆ. ಈ ಅಂತ್ಯದ ಸಮಯದಲ್ಲಿ, ಕ್ರಿಸ್ತನು ಈ ಆಳನ್ನು “ತನ್ನೆಲ್ಲ ಸ್ವತ್ತುಗಳ ಮೇಲೆ” (NW) ನೇಮಿಸಿದ್ದಾನೆ. ಆದುದರಿಂದ, ಕ್ರೈಸ್ತನೆಂದು ಹೇಳಿಕೊಳ್ಳುವ ಪ್ರತಿಯೊಬ್ಬನಿಂದ ಅದರ ಸ್ಥಾನವು ಗೌರವಕ್ಕೆ ಅರ್ಹವಾಗಿದೆ.
10 ತಲೆತನದ ಉದ್ದೇಶವು ಐಕ್ಯವನ್ನು ಕಾಪಾಡಿ, “ಎಲ್ಲವೂ ಮರ್ಯಾದೆಯಿಂದಲೂ ಕ್ರಮದಿಂದಲೂ ನಡೆ”ಯುವುದನ್ನು ಖಚಿತಪಡಿಸಿಕೊಳ್ಳುವುದಾಗಿದೆ. (1 ಕೊರಿಂಥ 14:40) ಪ್ರಥಮ ಶತಮಾನದಲ್ಲಿ ಇದನ್ನು ಸಾಧಿಸಲು, ನಂಬಿಗಸ್ತನೂ ವಿವೇಕಿಯೂ ಆದ ಆಳು ವರ್ಗದಿಂದ ಅನೇಕ ಅಭಿಷಿಕ್ತ ಕ್ರೈಸ್ತರು ಇಡೀ ಗುಂಪನ್ನು ಪ್ರತಿನಿಧಿಸಲು ಆರಿಸಲ್ಪಟ್ಟರು. ತದನಂತರದ ಘಟನೆಗಳು ರುಜುಮಾಡಿದಂತೆ, ಈ ಪ್ರಥಮ ಶತಮಾನದ ಆಡಳಿತ ಮಂಡಲಿಯಿಂದ ಪ್ರಯೋಗಿಸಲ್ಪಟ್ಟ ಮೇಲ್ವಿಚಾರಣೆಯು ಯೆಹೋವನ ಸಮ್ಮತಿ ಹಾಗೂ ಆಶೀರ್ವಾದವನ್ನು ಪಡೆದಿತ್ತು. ಪ್ರಥಮ ಶತಮಾನದ ಕ್ರೈಸ್ತರು ಸಂತೋಷದಿಂದ ಆ ಏರ್ಪಾಡನ್ನು ಸ್ವೀಕರಿಸಿದರು. ಹೌದು, ಅದರಿಂದ ಉಂಟಾದ ಉತ್ತಮ ಫಲಿತಾಂಶಗಳಿಗಾಗಿ ಅವರು ಕೃತಜ್ಞರಾಗಿದ್ದರು.—ಅ. ಕೃತ್ಯಗಳು 15:1-32.
11. ಪ್ರಚಲಿತ ದಿನದ ಆಡಳಿತ ಮಂಡಲಿಯನ್ನು ಹೇಗೆ ವೀಕ್ಷಿಸಬೇಕು?
11 ಅಂತಹ ಒಂದು ಏರ್ಪಾಡಿನ ಮಹತ್ವವು ಇನ್ನೂ ಅಸ್ತಿತ್ವದಲ್ಲಿದೆ. ಸದ್ಯದಲ್ಲಿ, ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯಲ್ಲಿ ಹತ್ತು ಮಂದಿ ಅಭಿಷಿಕ್ತ ಕ್ರೈಸ್ತರಿದ್ದಾರೆ. ಅವರೆಲ್ಲರೂ ಅನೇಕ ದಶಕಗಳ ಕ್ರೈಸ್ತ ಅನುಭವವನ್ನು ಪಡೆದವರಾಗಿರುತ್ತಾರೆ. ಪ್ರಥಮ ಶತಮಾನದ ಆಡಳಿತ ಮಂಡಲಿಯು ಮಾಡಿದಂತೆಯೇ, ಯೆಹೋವನ ಸಾಕ್ಷಿಗಳಿಗೆ ಅವರು ಆತ್ಮಿಕ ನಿರ್ದೇಶನವನ್ನು ನೀಡುತ್ತಾರೆ. (ಅ. ಕೃತ್ಯಗಳು 16:4) ಆದಿ ಕ್ರೈಸ್ತರಂತೆ ಸಾಕ್ಷಿಗಳು, ಆರಾಧನೆಯ ವಿಷಯಗಳಲ್ಲಿ ಬೈಬಲಾಧಾರಿತ ನಿರ್ದೇಶನ ಹಾಗೂ ಮಾರ್ಗದರ್ಶನಕ್ಕಾಗಿ ಆಡಳಿತ ಮಂಡಲಿಯ ಪ್ರೌಢ ಸಹೋದರರ ಕಡೆಗೆ ಸಂತೋಷದಿಂದ ನೋಡುತ್ತಾರೆ. ತಮ್ಮ ಜೊತೆ ಕ್ರೈಸ್ತರಂತೆಯೇ ಆಡಳಿತ ಮಂಡಲಿಯ ಸದಸ್ಯರು ಯೆಹೋವನ ಮತ್ತು ಕ್ರಿಸ್ತನ ದಾಸರಾಗಿರುವುದಾದರೂ, ಬೈಬಲು ನಮಗೆ ಉಪದೇಶ ನೀಡುವುದು: “ನಿಮ್ಮ ಸಭಾನಾಯಕರ ಮಾತನ್ನು ಕೇಳಿರಿ, ಅವರಿಗೆ ಅಧೀನರಾಗಿರಿ. ಅವರು ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ವ್ಯಸನಪಡದೆ ಸಂತೋಷದಿಂದ ಇದನ್ನು ಮಾಡುವಂತೆ ನೋಡಿರಿ; ಅವರು ವ್ಯಸನದಿಂದಿರುವದು ನಿಮಗೆ ಪ್ರಯೋಜನಕರವಾದದ್ದಲ್ಲ.”—ಇಬ್ರಿಯ 13:17.
12. ವ್ಯಕ್ತಿಗತವಾಗಿ ಪ್ರತಿಯೊಬ್ಬ ಕ್ರೈಸ್ತನು ಯಾರಿಗೆ ಲೆಕ್ಕವನ್ನು ಒಪ್ಪಿಸಬೇಕು?
12 ಶಾಸ್ತ್ರಗಳು ಆಡಳಿತ ಮಂಡಲಿಗೆ ಕೊಟ್ಟಿರುವ ಮೇಲ್ವಿಚಾರಣೆಯ ಸ್ಥಾನವು, ಯೆಹೋವನ ಸಾಕ್ಷಿಗಳಲ್ಲಿ ಪ್ರತಿಯೊಬ್ಬನು ತನ್ನ ಕಾರ್ಯಗಳ ಲೆಕ್ಕವನ್ನು ಅದಕ್ಕೆ ಒಪ್ಪಿಸಬೇಕೆಂಬುದನ್ನು ಅರ್ಥೈಸುತ್ತದೊ? ಪೌಲನು ರೋಮ್ನಲ್ಲಿದ್ದ ಕ್ರೈಸ್ತರಿಗೆ ಬರೆದ ಮಾತುಗಳಿಗನುಸಾರ, ಇಲ್ಲ. ಅವನು ಬರೆದುದು: “ನಿನ್ನ ಸಹೋದರನ ವಿಷಯವಾಗಿ ನೀನು ತೀರ್ಪುಮಾಡುವದೇನು? . . . ನಿನ್ನ ಸಹೋದರನನ್ನು ನೀನು ಹೀನೈಸುವದೇನು? ನಾವೆಲ್ಲರೂ ದೇವರ ನ್ಯಾಯಾಸನದ ಮುಂದೆ ನಿಲ್ಲಬೇಕಲ್ಲಾ. . . . ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ ದೇವರ ಮುಂದೆ ಉತ್ತರಕೊಡಬೇಕು.”—ರೋಮಾಪುರ 14:10-12.
13. ಯೆಹೋವನ ಸಾಕ್ಷಿಗಳು ತಮ್ಮ ಸಾರುವ ಚಟುವಟಿಕೆಯನ್ನು ವರದಿಸುವುದೇಕೆ?
13 ಆದರೂ, ವ್ಯಕ್ತಿಗತವಾಗಿ ಸಾಕ್ಷಿಗಳು ತಮ್ಮ ಸಾರುವ ಚಟುವಟಿಕೆಯನ್ನು ವರದಿಸಬೇಕೆಂದು ನಿರೀಕ್ಷಿಸಲ್ಪಟ್ಟಿರುವ ಸಂಗತಿಯು ನಿಜವಲ್ಲವೊ? ಹೌದು, ಆದರೆ ಇದರ ಉದ್ದೇಶವು ಒಂದು ಸಾಕ್ಷಿ ಕೈಪಿಡಿಯಲ್ಲಿ ಸ್ಪಷ್ಟವಾಗಿ ವಿವರಿಸಲ್ಪಟ್ಟಿದೆ. ಅದು ಹೇಳುವುದು: “ಯೇಸು ಕ್ರಿಸ್ತನ ಆದಿ ಹಿಂಬಾಲಕರು ಸಾರುವ ಕೆಲಸದ ಪ್ರಗತಿಯ ವರದಿಗಳಲ್ಲಿ ಆಸಕ್ತಿ ವಹಿಸಿದರು. (ಮಾರ್ಕ 6:30) ಕೆಲಸವು ಅಭಿವೃದ್ಧಿ ಹೊಂದಿದಾಗ, ಸಂಖ್ಯಾ ವರದಿಗಳು ಮತ್ತು ಸುವಾರ್ತೆ ಸಾರುವುದರಲ್ಲಿ ಭಾಗವಿದ್ದವರ ಎದ್ದು ಕಾಣುವ ಅನುಭವಗಳು ಸಂಗ್ರಹಿಸಲ್ಪಟ್ಟವು. . . . (ಅ. ಕೃತ್ಯಗಳು 2:5-11, 41, 47; 6:7; 1:15; 4:4) . . . ಸಾಧಿಸಲ್ಪಟ್ಟಿರುವ ಕೆಲಸದ ವರದಿಯನ್ನು ಕೇಳುವುದು ಆ ನಂಬಿಗಸ್ತ ಕ್ರೈಸ್ತ ಕೆಲಸಗಾರರಿಗೆ ಎಷ್ಟು ಪ್ರೋತ್ಸಾಹಕವಾಗಿತ್ತು! . . . ಇದೇ ರೀತಿ, ಯೆಹೋವನ ಆಧುನಿಕ ದಿನದ ಸಂಸ್ಥೆಯು, ಮತ್ತಾಯ 24:14ರ ನೆರವೇರಿಕೆಯಲ್ಲಿ ಮಾಡಲ್ಪಡುತ್ತಿರುವ ಕೆಲಸದ ನಿಷ್ಕೃಷ್ಟ ದಾಖಲೆಯನ್ನಿಡಲು ಪ್ರಯತ್ನಿಸುತ್ತದೆ.”
14, 15. (ಎ) 2 ಕೊರಿಂಥ 1:24 ಆಡಳಿತ ಮಂಡಲಿಗೆ ಹೇಗೆ ಅನ್ವಯವಾಗುತ್ತದೆ? (ಬಿ) ಯಾವ ವಾಸ್ತವಾಂಶವನ್ನು ಗ್ರಹಿಸುತ್ತಾ, ಯಾವ ಆಧಾರದ ಮೇಲೆ ವ್ಯಕ್ತಿಗತ ಕ್ರೈಸ್ತರು ವೈಯಕ್ತಿಕ ನಿರ್ಣಯಗಳನ್ನು ಮಾಡಬೇಕು?
14 ಆಡಳಿತ ಮಂಡಲಿಯು ಒಂದು ಪ್ರೀತಿಪರ ಏರ್ಪಾಡೂ ಅನುಕರಣಾರ್ಹವಾದ ನಂಬಿಕೆಯ ಮಾದರಿಯೂ ಆಗಿದೆ. (ಫಿಲಿಪ್ಪಿ 3:17; ಇಬ್ರಿಯ 13:7) ಒಬ್ಬ ಮಾದರಿಯಂತೆ ಕ್ರಿಸ್ತನಿಗೆ ಅಂಟಿಕೊಂಡು, ಅವನನ್ನು ಅನುಸರಿಸುವ ಮೂಲಕ, ಅವರು ಪೌಲನ ಮಾತುಗಳನ್ನೂ ಪ್ರತಿಧ್ವನಿಸಬಲ್ಲರು: “ನಾವು ನಂಬಿಕೆಯ ವಿಷಯದಲ್ಲಿಯೂ ನಿಮ್ಮ ಮೇಲೆ ದೊರೆತನಮಾಡುವವರೆಂದು ನನ್ನ ತಾತ್ಪರ್ಯವಲ್ಲ; ನಿಮ್ಮ ಸಂತೋಷಕ್ಕೆ ನಾವು ಸಹಾಯಕರಾಗಿದ್ದೇವೆ; ನಂಬಿಕೆಯ ವಿಷಯದಲ್ಲಿ ದೃಢನಿಂತಿದ್ದೀರಿ.” (2 ಕೊರಿಂಥ 1:24) ಪ್ರವೃತ್ತಿಗಳನ್ನು ಗಮನಿಸುವ ಮೂಲಕ, ಆಡಳಿತ ಮಂಡಲಿಯು, ಬೈಬಲ್ ಸಲಹೆಗೆ ಕಿವಿಗೊಡುವುದರ ಪ್ರಯೋಜನಗಳಿಗೆ ಗಮನವನ್ನು ಸೆಳೆಯುತ್ತದೆ, ಬೈಬಲ್ ನಿಯಮಗಳು ಮತ್ತು ತತ್ವಗಳನ್ನು ಅನ್ವಯಿಸುವುದರ ಕುರಿತು ಸೂಚನೆಗಳನ್ನು ನೀಡುತ್ತದೆ, ಅಡಗಿಕೊಂಡಿರುವ ಅಪಾಯಗಳ ಕುರಿತು ಎಚ್ಚರಿಸುತ್ತದೆ, ಮತ್ತು ‘ಜೊತೆ ಕೆಲಸಗಾರರಿಗೆ’ ಬೇಕಾದ ಉತ್ತೇಜನವನ್ನು ಒದಗಿಸುತ್ತದೆ. ಹೀಗೆ ಅದು ಕ್ರೈಸ್ತ ಮನೆವಾರ್ತೆಯವನೋಪಾದಿ ತನ್ನ ಕೆಲಸವನ್ನು ಪೂರೈಸುತ್ತದೆ, ತಮ್ಮ ಆನಂದವನ್ನು ಕಾಪಾಡಿಕೊಳ್ಳುವಂತೆ ಅವರಿಗೆ ಸಹಾಯಮಾಡುತ್ತದೆ, ಮತ್ತು ಅವರು ದೃಢರಾಗಿ ನಿಲ್ಲಸಾಧ್ಯವಾಗುವಂತೆ ನಂಬಿಕೆಯಲ್ಲಿ ಅವರನ್ನು ಕಟ್ಟುತ್ತದೆ.—1 ಕೊರಿಂಥ 4:1, 2; ತೀತ 1:7-9.
15 ಆಡಳಿತ ಮಂಡಲಿಯಿಂದ ನೀಡಲ್ಪಟ್ಟ ಬೈಬಲ್ ಸಲಹೆಯ ಆಧಾರದ ಮೇಲೆ ಸಾಕ್ಷಿಯೊಬ್ಬನು ನಿರ್ಣಯಗಳನ್ನು ಮಾಡುವುದಾದರೆ, ಅವನು ತನ್ನ ಸ್ವಂತ ಇಚ್ಛೆಯಿಂದ ಹಾಗೆ ಮಾಡುತ್ತಾನೆ ಏಕೆಂದರೆ, ಬೈಬಲಿನ ಅವನ ಸ್ವಂತ ಅಧ್ಯಯನವು ಇದೇ ಸರಿಯಾದ ಮಾರ್ಗವೆಂದು ಅವನಿಗೆ ಮನದಟ್ಟುಮಾಡಿದೆ. ಪ್ರತಿಯೊಬ್ಬ ಸಾಕ್ಷಿಯು, ತಾನು ಮಾಡುವ ನಿರ್ಣಯಗಳು, ತಾನು ಸಮರ್ಪಿತನಾಗಿರುವ ದೇವರೊಂದಿಗಿನ ತನ್ನ ವೈಯಕ್ತಿಕ ಸಂಬಂಧವನ್ನು ಬಾಧಿಸುವುವೆಂಬುದನ್ನು ಪೂರ್ಣವಾಗಿ ಗ್ರಹಿಸುತ್ತಾ, ಆಡಳಿತ ಮಂಡಲಿಯಿಂದ ನೀಡಲ್ಪಡುವ ಹಿತಕರ ಶಾಸ್ತ್ರೀಯ ಸಲಹೆಯನ್ನು ಅನ್ವಯಿಸಿಕೊಳ್ಳಲು ದೇವರ ಸ್ವಂತ ವಾಕ್ಯದಿಂದ ಪ್ರಭಾವಿಸಲ್ಪಟ್ಟಿರುತ್ತಾನೆ.—1 ಥೆಸಲೊನೀಕ 2:13.
ವಿದ್ಯಾರ್ಥಿಗಳು ಮತ್ತು ಸೈನಿಕರು
16. ನಡತೆಯ ಕುರಿತಾದ ನಿರ್ಣಯಗಳು ವೈಯಕ್ತಿಕ ವಿಷಯವಾಗಿವೆಯಾದರೂ, ಕೆಲವರು ಬಹಿಷ್ಕರಿಸಲ್ಪಡುವುದೇಕೆ?
16 ಆದರೆ, ನಡತೆಯ ಕುರಿತಾದ ನಿರ್ಣಯಗಳು ಒಂದು ವೈಯಕ್ತಿಕ ವಿಷಯವಾಗಿರುವಲ್ಲಿ, ಯೆಹೋವನ ಸಾಕ್ಷಿಗಳಲ್ಲಿ ಕೆಲವರು ಬಹಿಷ್ಕರಿಸಲ್ಪಡುವುದೇಕೆ? ಪ್ರತ್ಯೇಕವಾದ ಒಂದು ಪಾಪದ ಗೈಯುವಿಕೆಯು ಬಹಿಷ್ಕಾರವನ್ನು ಅಗತ್ಯಪಡಿಸುತ್ತದೆಂದು ಯಾರೊಬ್ಬರೂ ನಿರಂಕುಶವಾಗಿ ತೀರ್ಮಾನಿಸುವುದಿಲ್ಲ. ಬದಲಿಗೆ, ಸಭೆಯ ಸದಸ್ಯನೊಬ್ಬನು, ಒಂದನೆಯ ಕೊರಿಂಥದ 5ನೆಯ ಅಧ್ಯಾಯದಲ್ಲಿ ನಮೂದಿಸಲ್ಪಟ್ಟಂತಹ ಘೋರ ಪಾಪಗಳಲ್ಲಿ ಪಶ್ಚಾತ್ತಾಪಪಡದೆ ತೊಡಗುವಾಗ ಮಾತ್ರ ಈ ಕ್ರಿಯೆಯು ಶಾಸ್ತ್ರೀಯವಾಗಿ ಅಗತ್ಯವಾಗಿದೆ. ಹೀಗೆ, ಕ್ರೈಸ್ತನೊಬ್ಬನು ಹಾದರವನ್ನು ಗೈದುದಕ್ಕಾಗಿ ಬಹಿಷ್ಕರಿಸಲ್ಪಡುವಾಗ, ಆ ವ್ಯಕ್ತಿಯು ಪ್ರೀತಿಪೂರ್ಣ ಕುರುಬರು ನೀಡುವ ಆತ್ಮಿಕ ನೆರವನ್ನು ಸ್ವೀಕರಿಸಿಕೊಳ್ಳಲು ನಿರಾಕರಿಸುವಾಗ ಮಾತ್ರ ಇದು ಸಂಭವಿಸುತ್ತದೆ. ಈ ಕ್ರೈಸ್ತ ರೂಢಿಯನ್ನು ಅನುಸರಿಸುವವರು ಯೆಹೋವನ ಸಾಕ್ಷಿಗಳು ಮಾತ್ರವಲ್ಲ. ದಿ ಎನ್ಸೈಕ್ಲೊಪೀಡಿಯ ಆಫ್ ರಿಲಿಜನ್ ಗಮನಿಸುವುದು: “ಸಾಮಾನ್ಯ ಹಿತಕ್ಷೇಮವನ್ನು ಬೆದರಿಸಬಹುದಾದ, ಅನುವರ್ತಿಸದ ಸದಸ್ಯರ ವಿರುದ್ಧ ತನ್ನನ್ನು ಸಂರಕ್ಷಿಸಿಕೊಳ್ಳುವ ಹಕ್ಕನ್ನು ಪ್ರತಿಯೊಂದು ಸಮುದಾಯವು ಪಡೆದಿರುತ್ತದೆ. ಒಂದು ಧಾರ್ಮಿಕ ಸನ್ನಿವೇಶದಲ್ಲಿ ಈ ಹಕ್ಕು, [ಬಹಿಷ್ಕಾರದ] ದಂಡನೆಯು ದೇವರ ಮುಂದೆ ಒಬ್ಬನ ನಿಲುವನ್ನು ಬಾಧಿಸುತ್ತದೆಂಬ ನಂಬಿಕೆಯಿಂದ ಅನೇಕ ವೇಳೆ ಪುಷ್ಟಿಗೊಳಿಸಲ್ಪಟ್ಟಿದೆ.”
17, 18. ಬಹಿಷ್ಕಾರ ಮಾಡುವುದರ ಔಚಿತ್ಯವನ್ನು ಹೇಗೆ ದೃಷ್ಟಾಂತಿಸಬಹುದು?
17 ಯೆಹೋವನ ಸಾಕ್ಷಿಗಳು ಬೈಬಲಿನ ವಿದ್ಯಾರ್ಥಿಗಳಾಗಿದ್ದಾರೆ. (ಯೆಹೋಶುವ 1:8; ಕೀರ್ತನೆ 1:2; ಅ. ಕೃತ್ಯಗಳು 17:11) ಆಡಳಿತ ಮಂಡಲಿಯ ಮೂಲಕ ಒದಗಿಸಲ್ಪಡುವ ಬೈಬಲ್ ಶಿಕ್ಷಣದ ಕಾರ್ಯಕ್ರಮವು, ಶಿಕ್ಷಣ ವಿಭಾಗದಿಂದ ರೇಖಿಸಲ್ಪಟ್ಟ ಶಾಲಾ ಪಠ್ಯಕ್ರಮಕ್ಕೆ ಹೋಲಿಸಲ್ಪಡಬಹುದು. ಕಲಿಸಲ್ಪಡುವ ವಿಷಯದ ಮೂಲವು ಸ್ವತಃ ಶಿಕ್ಷಣ ವಿಭಾಗವೇ ಆಗಿರದಿದ್ದರೂ, ಪಠ್ಯಕ್ರಮವನ್ನು ನಿಗದಿಪಡಿಸಿ, ಉಪದೇಶದ ವಿಧಾನವನ್ನು ನಿಶ್ಚಯಿಸಿ, ಬೇಕಾದ ನಿರ್ದೇಶನಗಳನ್ನು ಅದೇ ಹೊರಡಿಸುತ್ತದೆ. ಯಾರಾದರೂ ಶಾಲೆಯ ಆವಶ್ಯಕತೆಗಳಿಗನುಗುಣವಾಗಿ ಜೀವಿಸಲು ಎದ್ದುಕಾಣುವಂತಹ ರೀತಿಯಲ್ಲಿ ನಿರಾಕರಿಸುವುದಾದರೆ, ಜೊತೆ ವಿದ್ಯಾರ್ಥಿಗಳಿಗೆ ತೊಂದರೆಗಳನ್ನು ಉಂಟುಮಾಡಿದರೆ, ಇಲ್ಲವೆ ಶಾಲೆಗೆ ಅಪಕೀರ್ತಿಯನ್ನು ತರುವುದಾದರೆ, ಅವನನ್ನು ಹೊರಹಾಕಸಾಧ್ಯವಿದೆ. ಮೊತ್ತದಲ್ಲಿ ವಿದ್ಯಾರ್ಥಿಗಳ ಪ್ರಯೋಜನಕ್ಕಾಗಿ ಕ್ರಿಯೆಗೈಯುವ ಹಕ್ಕು ಶಾಲಾ ಅಧಿಕಾರಿಗಳಿಗಿದೆ.
18 ವಿದ್ಯಾರ್ಥಿಗಳಾಗಿರುವುದರ ಜೊತೆಗೆ, ಯೆಹೋವನ ಸಾಕ್ಷಿಗಳು ಸೈನಿಕರೂ ಹೌದು. ಅವರು ಯೇಸು ಕ್ರಿಸ್ತನ ಸೈನಿಕರಾಗಿದ್ದು, “ಕ್ರಿಸ್ತನಂಬಿಕೆಯುಳ್ಳವರು ಮಾಡತಕ್ಕ ಶ್ರೇಷ್ಠ ಹೋರಾಟವನ್ನು ಮಾಡು”ವಂತೆ ಉಪದೇಶಿಸಲ್ಪಡುತ್ತಾರೆ. (1 ತಿಮೊಥೆಯ 6:12; 2 ತಿಮೊಥೆಯ 2:3) ಮಿಲಿಟರಿಯಲ್ಲಿರುವ ಒಬ್ಬ ಪುರುಷನು, ಒಬ್ಬ ಸೈನಿಕನಿಗೆ ಯೋಗ್ಯವಾಗಿರದ ನಡತೆಗಾಗಿ ಸೈನಿಕ ಸೇವೆಯಿಂದ ಅವಮಾನಕರವಾಗಿ ವಜಾಮಾಡಲ್ಪಡಬಹುದೆಂಬುದು ಸುವಿದಿತವಾದ ಸಂಗತಿಯಾಗಿದೆ. ತದ್ರೀತಿಯಲ್ಲಿ, ಕ್ರೈಸ್ತ ಸೈನಿಕನೊಬ್ಬನಿಗೆ ಅನುಚಿತವಾಗಿರುವ ನಡವಳಿಕೆಯು ದಂಡನೆಗಳನ್ನು ತರಬಹುದು. ಆಯ್ಕೆಯ ಸ್ವಾತಂತ್ರ್ಯವಿರುವ ವ್ಯಕ್ತಿಯೋಪಾದಿ, ಕ್ರೈಸ್ತ ಸೈನಿಕನೊಬ್ಬನು ತಾನು ಬಯಸುವಂತೆ ನಿರ್ಧರಿಸಬಲ್ಲನು, ಆದರೆ ತನ್ನ ನಿರ್ಧಾರದ ಪರಿಣಾಮಗಳನ್ನು ಅವನು ಎದುರಿಸಬೇಕು. ಪೌಲನು ತರ್ಕಿಸುವುದು: “ಯುದ್ಧಕ್ಕೆ ಹೋಗುವ ಸೈನಿಕನು ಲೋಕ ವ್ಯವಹಾರದಲ್ಲಿ ಸಿಕ್ಕಿಕೊಳ್ಳದೆ ತನ್ನನ್ನು ಸೈನ್ಯದಲ್ಲಿ ಸೇರಿಸಿಕೊಂಡವನನ್ನು ಮೆಚ್ಚಿಸುವದಕ್ಕೆ ಪ್ರಯಾಸಪಡುತ್ತಿರುವನಲ್ಲವೇ. ಇದಲ್ಲದೆ ಯಾವನಾದರೂ ರಂಗಸ್ಥಳದಲ್ಲಿ ಎದುರಾಳಿನೊಡನೆ ಹೋರಾಡುವಾಗ ನಿಯಮದ ಪ್ರಕಾರ ಹೋರಾಡದಿದ್ದರೆ ಅವನಿಗೆ ಜಯಮಾಲೆಯು ದೊರಕುವದಿಲ್ಲ.” (2 ತಿಮೊಥೆಯ 2:4, 5) ಪ್ರೌಢ ಕ್ರೈಸ್ತರು—ಆಡಳಿತ ಮಂಡಲಿಯಲ್ಲಿರುವವರನ್ನೂ ಸೇರಿಸಿ—ನಿತ್ಯಜೀವದ ಬಹುಮಾನವನ್ನು ಗಿಟ್ಟಿಸಿಕೊಳ್ಳಸಾಧ್ಯವಾಗುವಂತೆ “ನಿಯಮ”ಕ್ಕನುಗುಣವಾಗಿರುತ್ತಾ, ತಮ್ಮ ನಾಯಕನಾದ ಯೇಸು ಕ್ರಿಸ್ತನ ಅಪ್ಪಣೆಗೆ ಸಂಪೂರ್ಣವಾಗಿ ಅಧೀನರಾಗಿರುತ್ತಾರೆ.—ಯೋಹಾನ 17:3; ಪ್ರಕಟನೆ 2:10.
19. ಕ್ರೈಸ್ತ ಸಮರ್ಪಣೆಯ ವಾಸ್ತವಾಂಶಗಳನ್ನು ಪರೀಕ್ಷಿಸಿದ ತರುವಾಯ, ನಾವು ಯಾವುದರ ಕುರಿತು ನಿಶ್ಚಿತರಾಗಿರಬಲ್ಲೆವು?
19 ಯೆಹೋವನ ಸಾಕ್ಷಿಗಳು ಮನುಷ್ಯರ ದಾಸರಲ್ಲ, ದೇವರ ಸೇವಕರೆಂಬುದನ್ನು ವಾಸ್ತವಾಂಶಗಳು ಸ್ಪಷ್ಟಪಡಿಸುವುದಿಲ್ಲವೊ? ಕ್ರಿಸ್ತನು ಯಾವುದಕ್ಕಾಗಿ ಅವರನ್ನು ಸ್ವತಂತ್ರಗೊಳಿಸಿದನೊ, ಆ ಸ್ವಾತಂತ್ರ್ಯವನ್ನು ಅನುಭವಿಸುವ ಸಮರ್ಪಿತ ಕ್ರೈಸ್ತರೋಪಾದಿ, ದೇವರ ಸಭೆಯಲ್ಲಿ ತಮ್ಮ ಸಹೋದರರೊಂದಿಗೆ ಅವರು ಐಕ್ಯರಾಗಿ ಸೇವಿಸಿದಂತೆ, ದೇವರ ಆತ್ಮ ಹಾಗೂ ಆತನ ವಾಕ್ಯವು ಅವರ ಜೀವಿತಗಳನ್ನು ಆಳುವಂತೆ ಅವರು ಬಿಡುತ್ತಾರೆ. (ಕೀರ್ತನೆ 133:1) ಇದರ ಪ್ರಮಾಣಗಳು ತಮ್ಮ ಬಲದ ಮೂಲದ ಕುರಿತಾಗಿರುವ ಯಾವುದೇ ಅನಿಶ್ಚಿತತೆಯನ್ನೂ ತೊಡೆದುಹಾಕಬೇಕು. ಕೀರ್ತನೆಗಾರನೊಂದಿಗೆ ಅವರು ಹೀಗೆ ಹಾಡಸಾಧ್ಯವಿದೆ: “ಯೆಹೋವನು ನನಗೆ ಬಲವೂ ಗುರಾಣಿಯೂ ಆಗಿದ್ದಾನೆ; ನಾನು ಆತನಲ್ಲಿ ಭರವಸವಿಟ್ಟೆನು, ನನಗೆ ಸಹಾಯವು ಉಂಟಾಯಿತು. ಆದಕಾರಣ ನನ್ನ ಹೃದಯವು ಹರ್ಷಿಸುವದು; ಕೀರ್ತನಾರೂಪವಾಗಿ ಆತನನ್ನು ಸ್ತುತಿಸುವೆನು.”—ಕೀರ್ತನೆ 28:7.
[ಪಾದಟಿಪ್ಪಣಿ]
a 1993ರಲ್ಲಿ ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.
ನೀವು ಹೇಗೆ ಉತ್ತರಿಸುವಿರಿ?
◻ ವಾಚ್ ಟವರ್ ಸೊಸೈಟಿ ಮತ್ತು ತದ್ರೀತಿಯ ಶಾಸನಬದ್ಧ ನಿಯೋಗಗಳು ಯೆಹೋವನ ಸಾಕ್ಷಿಗಳಿಗೆ ಹೇಗೆ ಸಹಾಯ ಮಾಡುತ್ತವೆ?
◻ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಪಾತ್ರದಿಂದ ಕ್ರೈಸ್ತರು ಹೇಗೆ ಪ್ರಯೋಜನ ಪಡೆದುಕೊಳ್ಳುತ್ತಾರೆ?
◻ ಯೆಹೋವನ ಜನರು ತಮ್ಮ ಸಾರುವ ಚಟುವಟಿಕೆಯನ್ನು ಏಕೆ ವರದಿಸುತ್ತಾರೆ?
◻ ಯಾವ ಪರಿಸ್ಥಿತಿಗಳಲ್ಲಿ ಒಬ್ಬ ಸಮರ್ಪಿತ ಕ್ರೈಸ್ತನ ಬಹಿಷ್ಕಾರವು ಸೂಕ್ತವಾದದ್ದಾಗಿದೆ?
[ಪುಟ 19 ರಲ್ಲಿರುವ ಚಿತ್ರ]
ಪ್ರಥಮ ಶತಮಾನದ ಆಡಳಿತ ಮಂಡಲಿಯು ಸೈದ್ಧಾಂತಿಕ ಐಕ್ಯವನ್ನು ಕಾಪಾಡಿತು
[ಪುಟ 23 ರಲ್ಲಿರುವ ಚಿತ್ರ]
ಲೋಕದ ಸುತ್ತಲೂ ಇರುವ ಯೆಹೋವನ ಸಾಕ್ಷಿಗಳು, ಕ್ರಿಸ್ತನು ಅವರನ್ನು ಯಾವುದಕ್ಕಾಗಿ ಸ್ವತಂತ್ರಗೊಳಿಸಿದನೊ ಆ ಸ್ವಾತಂತ್ರ್ಯವನ್ನು ಅನುಭವಿಸುತ್ತಾರೆ