ಅವರದನ್ನು ಏಕೆ ಮಾಡುತ್ತಾರೆ?
ಪ್ರತಿ ವರ್ಷ ಲೋಕದ ಸುತ್ತಲೂ ಯೆಹೋವನ ಸಾಕ್ಷಿಗಳು ಸಾವಿರಗಟ್ಟಲೆಯ ಸಂಖ್ಯೆಯಲ್ಲಿ ಅಧಿವೇಶನಗಳಲ್ಲಿ ಒಟ್ಟುಗೂಡುತ್ತಾರೆ. ಅಲ್ಲಿ ಅವರು ಸಾಹಚರ್ಯದಲ್ಲಿ ಆನಂದಿಸುತ್ತಾರೆ ಮತ್ತು ಬೈಬಲ್ ಉಪದೇಶದ ಒಂದು ಅತ್ಯುತ್ಕೃಷ್ಟ ಕಾರ್ಯಕ್ರಮವನ್ನು ಕೇಳಿಸಿಕೊಳ್ಳುತ್ತಾರೆ. ಈ ಅಧಿವೇಶನಗಳಿಗೆ ಹಾಜರಾಗಲು ಕೆಲವರು ತುಂಬ ಪ್ರಯಾಸಪಡುತ್ತಾರೆ. ಉದಾಹರಣೆಗಾಗಿ, ಕಳೆದ ವರ್ಷ ಮಲಾವಿಯಲ್ಲಿ, ತಮ್ಮ 60ಗಳ ನಡುವಯಸ್ಸಿನಲ್ಲಿದ್ದ ಒಂದು ದಂಪತಿಗಳು, ತಮ್ಮ ಮಗ ಮತ್ತು ಅವನ ಹೆಂಡತಿ ಹಾಗೂ ಮಗುವಿನೊಂದಿಗೆ ಒಂದು ಅಧಿವೇಶನಕ್ಕೆ ಹಾಜರಾಗಲು ಸೈಕಲಿನ ಮೂಲಕ 80 ಕಿಲೊಮೀಟರ್ಗಳಷ್ಟು ದೂರ ಪ್ರಯಾಣಿಸಿದರು. ಅವರು ತಮ್ಮ ಹಳ್ಳಿಯಿಂದ ಬೆಳಗ್ಗೆ ಆರು ಗಂಟೆಗೆ ಹೊರಟು, ಅಧಿವೇಶನದ ಸ್ಥಳದಲ್ಲಿ 15 ತಾಸುಗಳ ಬಳಿಕ ತಲಪಿದರು.
ಮೊಸಾಂಬೀಕ್ನಲ್ಲಿ, ಒಂದು ಗುಂಪು ಒಂದು ಅಧಿವೇಶನಕ್ಕೆ ಹಾಜರಾಗಲು ಮೂರು ದಿನಗಳ ವರೆಗೆ ಸೈಕಲಿನಲ್ಲಿ ಪ್ರಯಾಣಿಸಿತು. ಒಂದು ರಾತ್ರಿ ಅವರು ಬಯಲಿನಲ್ಲಿ ಬೀಡುಬಿಟ್ಟಾಗ, ಹತ್ತಿರದಲ್ಲೇ ಸಿಂಹಗಳು ಘರ್ಜಿಸುವುದನ್ನು ಅವರು ಕೇಳಿಸಿಕೊಂಡರು. ಆ ಪ್ರಾಣಿಗಳ ದಿಕ್ಕಿನಲ್ಲಿ ಅವರು ಕಟ್ಟಿಗೆಯನ್ನು ಬಿಸಾಡಿದರೂ, ಆ ಸಿಂಹಗಳು ಮುಂಜಾನೆಯ ವರೆಗೂ ಅಲ್ಲಿಯೇ ಇದ್ದವು. ಅದೇ ಅಧಿವೇಶನಕ್ಕೆ ಪ್ರಯಾಣಿಸುತ್ತಿದ್ದ ಇನ್ನೊಬ್ಬ ಸಾಕ್ಷಿಯ ಎದುರಿಗೇ, ರಸ್ತೆಯಲ್ಲಿ ಒಂದು ಸಿಂಹವು ಬಂತು. ಸಿಂಹವು ಹೊರಟುಹೋಗುವ ವರೆಗೆ ಅವನು ಚಲಿಸದೆ ಸುಮ್ಮನೆ ನಿಂತುಬಿಟ್ಟನು. ಅಧಿವೇಶನದಲ್ಲಿ ಈ ಸಾಕ್ಷಿಗಳು ತಾವು ಹೇಗೆ ‘ಸಿಂಹಗಳ ಬಾಯಿಯಿಂದ ತಪ್ಪಿಸ’ಲ್ಪಟ್ಟೆವು ಎಂಬುದನ್ನು ಹರ್ಷಚಿತ್ತದಿಂದ ಹೇಳಿದರು.—2 ತಿಮೊಥೆಯ 4:17.
ಯೆಹೋವನ ಸಾಕ್ಷಿಗಳಲ್ಲಿ ಅನೇಕರು ಅಧಿವೇಶನಗಳಿಗೆ ಅಥವಾ ಆರಾಧನೆಗಾಗಿರುವ ಸಾಪ್ತಾಹಿಕ ಸಭಾ ಕೂಟಗಳಿಗೂ ಹಾಜರಾಗಲಿಕ್ಕಾಗಿ ತುಂಬ ಪ್ರಯಾಸಪಡುತ್ತಾರೆ. ಯಾಕೆ? ಮುಂದಿನ ಲೇಖನಗಳು, ಒಟ್ಟುಗೂಡಿ ಬರುವುದು ಯಾಕೆ ಇಷ್ಟೊಂದು ಪ್ರಾಮುಖ್ಯವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯಮಾಡುವವು.