ಜೀವಿಸುತ್ತಿರುವುದು ಇಂದಿಗಾಗಿಯೊ ಅನಂತವಾದ ಭವಿಷ್ಯತ್ತಿಗಾಗಿಯೊ?
“ನಾವು ಈ ನಿರೀಕ್ಷೆಯಲ್ಲಿ ರಕ್ಷಿಸಲ್ಪಟ್ಟೆವು.”—ರೋಮಾಪುರ 8:24, NW.
1. ಎಪಿಕ್ಯುರಸನ ಅನುಯಾಯಿಗಳು ಏನನ್ನು ಕಲಿಸಿದರು, ಮತ್ತು ಆ ರೀತಿಯ ತತ್ತ್ವಜ್ಞಾನವು ಕೆಲವು ಮಂದಿ ಕ್ರೈಸ್ತರನ್ನು ಹೇಗೆ ಬಾಧಿಸಿತು?
ಅಪೊಸ್ತಲ ಪೌಲನು ಕೊರಿಂಥದಲ್ಲಿ ಜೀವಿಸುತ್ತಿದ್ದ ಕ್ರೈಸ್ತರಿಗೆ, “ನಿಮ್ಮೊಳಗೆ ಕೆಲವರು—ಸತ್ತವರಿಗೆ ಪುನರುತ್ಥಾನವೇ ಇಲ್ಲವೆಂದು ಹೇಳುವದು ಹೇಗೆ?” ಎಂದು ಬರೆದನು. (1 ಕೊರಿಂಥ 15:12) ಒಂದನೆಯ ಶತಮಾನದ ಕ್ರೈಸ್ತರ ಮಧ್ಯೆ ಗ್ರೀಕ್ ಜ್ಞಾನಿ ಎಪಿಕ್ಯುರಸನ ಮಾರಕ ತತ್ತ್ವಜ್ಞಾನ ಅತಿಕ್ರಮಿಸಿತ್ತು ಎಂಬುದು ವ್ಯಕ್ತವಾಗುತ್ತದೆ. ಆದಕಾರಣವೇ ಪೌಲನು, “ತಿನ್ನೋಣ, ಕುಡಿಯೋಣ, ನಾಳೆ ಹೇಗೂ ಸಾಯುತ್ತೇವಲ್ಲಾ” ಎಂಬ ಎಪಿಕ್ಯುರಿಯನ್ ಬೋಧನೆಗೆ ಗಮನ ಸೆಳೆದನು. (1 ಕೊರಿಂಥ 15:32) ಮರಣದ ತರುವಾಯ ಜೀವದ ಯಾವ ನಿರೀಕ್ಷೆಯನ್ನೂ ಧಿಕ್ಕರಿಸುತ್ತ, ಆ ತತ್ತ್ವಜ್ಞಾನಿಯ ಅನುಯಾಯಿಗಳು, ಶಾರೀರಿಕ ಸುಖಾನುಭವವು ಜೀವನದಲ್ಲಿದ್ದ ಏಕಮಾತ್ರ ಅಥವಾ ಮುಖ್ಯ ಒಳಿತೆಂದು ನಂಬಿದರು. (ಅ. ಕೃತ್ಯಗಳು 17:18, 32) ಎಪಿಕ್ಯುರಿಯನ್ ತತ್ತ್ವಜ್ಞಾನವು ಸ್ವವಿಚಾರಾಸಕ್ತವೂ, ಸಿನಿಕ ಭಾವದ್ದೂ ಮತ್ತು ಅಂತಿಮವಾಗಿ ನೀತಿಭ್ರಷ್ಟ ಮಾಡುವಂತಹದ್ದೂ ಆಗಿತ್ತು.
2. (ಎ) ಪುನರುತ್ಥಾನದ ಅಲ್ಲಗಳೆಯುವಿಕೆ ಅಷ್ಟು ಅಪಾಯಕರವಾಗಿತ್ತೇಕೆ? (ಬಿ) ಪೌಲನು ಕೊರಿಂಥದ ಕ್ರೈಸ್ತರ ನಂಬಿಕೆಯನ್ನು ಹೇಗೆ ಬಲಪಡಿಸಿದನು?
2 ಪುನರುತ್ಥಾನದ ಈ ಅಲ್ಲಗಳೆಯೋಣಕ್ಕೆ ಗಾಢವಾದ ಸೂಚ್ಯಾರ್ಥಗಳಿದ್ದವು. ಪೌಲನು ತರ್ಕಿಸಿದ್ದು: “ಸತ್ತವರಿಗೆ ಪುನರುತ್ಥಾನವಿಲ್ಲವೆಂಬದು ನಿಜವಾಗಿದ್ದರೆ ಕ್ರಿಸ್ತನಾದರೂ ಎದ್ದುಬರಲಿಲ್ಲ; ಕ್ರಿಸ್ತನು ಎದ್ದು ಬರಲಿಲ್ಲವಾದರೆ ನಮ್ಮ ಪ್ರಸಂಗವು ಹುರುಳಿಲ್ಲದ್ದು, ಮತ್ತು ನಿಮ್ಮ ನಂಬಿಕೆಯೂ ಹುರುಳಿಲ್ಲದ್ದು. . . . ಈ ಜೀವಮಾನಕಾಲದ ಪೂರ್ತಿಗೆ ನಾವು ಕ್ರಿಸ್ತನಲ್ಲಿ ನಿರೀಕ್ಷೆಯಿಟ್ಟುಕೊಂಡದ್ದೇ ಹೊರತು ಮತ್ತೇನೂ ಇಲ್ಲದಿದ್ದರೆ ಎಲ್ಲಾ ಮನುಷ್ಯರಲ್ಲಿಯೂ ನಿರ್ಭಾಗ್ಯರೇ ಸರಿ.” (1 ಕೊರಿಂಥ 15:13-19) ಹೌದು, ಅನಂತವಾದ ಭವಿಷ್ಯತ್ತಿನ ನಿರೀಕ್ಷೆಯಿಲ್ಲದೆ, ಕ್ರೈಸ್ತತ್ವವು “ಹುರುಳಿಲ್ಲದ್ದು” ಆಗಿರುವುದು. ಅದು ಉದ್ದೇಶರಹಿತವಾದದ್ದಾಗಿರುವುದು. ಹಾಗಾದರೆ, ಈ ವಿಧರ್ಮಿ ಯೋಚನೆಯ ಪ್ರಭಾವದ ಕೆಳಗೆ ಕೊರಿಂಥ ಸಭೆಯು ಸಮಸ್ಯೆಗಳಿಗೆ ಹದವಾದ ಸ್ಥಳವಾಗಿ ಪರಿಣಮಿಸಿದ್ದು ಆಶ್ಚರ್ಯವಲ್ಲ. (1 ಕೊರಿಂಥ 1:11; 5:1; 6:1; 11:20-22) ಆದಕಾರಣ ಪೌಲನು, ಪುನರುತ್ಥಾನದಲ್ಲಿ ಅವರ ನಂಬಿಕೆಯನ್ನು ಬಲಪಡಿಸುವ ಗುರಿಯನ್ನಿಟ್ಟುಕೊಂಡನು. ಬಲವಾದ ತರ್ಕ, ಶಾಸ್ತ್ರೀಯ ಉದ್ಧೃತ ಭಾಗಗಳು ಮತ್ತು ಉಪಮೆಗಳನ್ನು ಉಪಯೋಗಿಸುತ್ತ ಅವನು, ಪುನರುತ್ಥಾನದ ನಿರೀಕ್ಷೆಯು ಕಲ್ಪನಾ ಕಥೆಯಲ್ಲವೆಂದೂ ನಿಶ್ಚಯವಾಗಿಯೂ ನೆರವೇರುವ ವಾಸ್ತವಿಕತೆಯೆಂದು ಯಾವ ಸಂದೇಹವೂ ಇಲ್ಲದ ಹಾಗೆ ರುಜುಪಡಿಸಿದನು. ಈ ಆಧಾರದ ಮೇರೆಗೆ, ಅವನು ತನ್ನ ಜೊತೆವಿಶ್ವಾಸಿಗಳಿಗೆ, “ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ. ನೀವು ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವದಿಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರಿ” ಎಂಬುದಾಗಿ ಪ್ರೇರಿಸಸಾಧ್ಯವಿತ್ತು.—1 ಕೊರಿಂಥ 15:20-58.
“ಎಚ್ಚರವಾಗಿರ್ರಿ”
3, 4. (ಎ) ಪೇತ್ರನಿಗನುಸಾರ, ಕಡೇ ದಿವಸಗಳಲ್ಲಿ ಯಾವ ಅಪಾಯಕಾರಿ ಮನೋಭಾವವು ಕೆಲವರನ್ನು ಆವರಿಸುವುದು? (ಬಿ) ನಾವು ಯಾವುದರ ಕುರಿತು ನಮಗೆ ಜ್ಞಾಪಕ ಹುಟ್ಟಿಸುತ್ತ ಇರಬೇಕು?
3 ಇಂದು, ಅನೇಕರಲ್ಲಿ ಅಶುಭ ಪ್ರತೀಕ್ಷೆಯ, ಇಂದಿಗಾಗಿ ಜೀವಿಸುವ ಮನೋಭಾವವಿದೆ. (ಎಫೆಸ 2:2) ಅದು ಅಪೊಸ್ತಲ ಪೇತ್ರನು ಮುಂತಿಳಿಸಿದಂತಿದೆ. “ಕುಚೋದ್ಯಗಾರರು ಬಂದು ಕುಚೋದ್ಯ ಮಾಡುತ್ತಾ—ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು? ನಮ್ಮ ಪಿತೃಗಳು ನಿದ್ರೆಹೊಂದಿದ ದಿನ ಮೊದಲುಗೊಂಡು ಸಮಸ್ತವೂ ಲೋಕಾದಿಯಿಂದಿದ್ದ ಹಾಗೆಯೇ ಇರುತ್ತದಲ್ಲಾ” ಎಂದು ಹೇಳುವವರ ಕುರಿತು ಅವನು ಮಾತಾಡಿದನು. (2 ಪೇತ್ರ 3:3, 4) ಸತ್ಯಾರಾಧಕರು ಇಂತಹ ದೃಷ್ಟಿಕೋನಕ್ಕೆ ಬಲಿಬೀಳುವಲ್ಲಿ, ಅವರು “ಆಲಸ್ಯಗಾರರೂ ನಿಷ್ಫಲರೂ” ಆಗಬಹುದು. (2 ಪೇತ್ರ 1:8) ಸಂತೋಷಕರವಾಗಿ, ಇಂದು ದೇವಜನರಲ್ಲಿ ಹೆಚ್ಚಿನವರ ಸಂಬಂಧದಲ್ಲಿ ಇದು ಸತ್ಯವಲ್ಲ.
4 ಈಗಿನ ದುಷ್ಟ ವ್ಯವಸ್ಥೆಯ ಬರಲಿರುವ ಅಂತ್ಯದಲ್ಲಿ ಆಸಕ್ತಿ ತೋರಿಸುವುದು ತಪ್ಪಲ್ಲ. ಯೇಸುವಿನ ಸ್ವಂತ ಅಪೊಸ್ತಲರೇ ತೋರಿಸಿದ ಆಸಕ್ತಿಯನ್ನು ಜ್ಞಾಪಿಸಿಕೊಳ್ಳಿ: “ಸ್ವಾಮೀ, ನೀನು ಇದೇ ಕಾಲದಲ್ಲಿ ಇಸ್ರಾಯೇಲ್ ಜನರಿಗೆ ರಾಜ್ಯವನ್ನು ತಿರುಗಿ ಸ್ಥಾಪಿಸಿ ಕೊಡುವಿಯೋ?” ಯೇಸು ಉತ್ತರಿಸಿದ್ದು: “ತಂದೆಯು ಸ್ವಂತ ಅಧಿಕಾರದಲ್ಲಿಟ್ಟುಕೊಂಡಿರುವ ಕಾಲಗಳನ್ನೂ ಸಮಯಗಳನ್ನೂ ತಿಳುಕೊಳ್ಳುವದು ನಿಮ್ಮ ಕೆಲಸವಲ್ಲ.” (ಅ. ಕೃತ್ಯಗಳು 1:6, 7) ಈ ಮಾತುಗಳಲ್ಲಿ, ಅವನು ಎಣ್ಣೆಯ ಮರಗಳ ಗುಡ್ಡದ ಮೇಲೆ ಹೇಳಿದ್ದ, “ನಿಮ್ಮ ಕರ್ತನು ಬರುವ ದಿನವು ನಿಮಗೆ ಗೊತ್ತಿಲ್ಲ . . . ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ” ಎಂಬ ಮೂಲ ಸಂದೇಶವು ಅಡಗಿದೆ. (ಮತ್ತಾಯ 24:42, 44) ಆ ಸಲಹೆಯ ಕುರಿತು ನಾವು ಸ್ವತಃ ಜ್ಞಾಪಕ ಹುಟ್ಟಿಸಿಕೊಳ್ಳುತ್ತಿರಬೇಕು! ಕೆಲವರು, ‘ನಾನು ತುಸು ನಿಧಾನಿಸುತ್ತ, ವಿಷಯಗಳನ್ನು ನಿರಾಸಕ್ತಿಯಿಂದ ತೆಗೆದುಕೊಳ್ಳಬೇಕು’ ಎಂಬ ಮನೋಭಾವದಿಂದ ಪ್ರೇರಿಸಲ್ಪಡಬಹುದು. ಆದರೆ ಅದೆಷ್ಟು ದೊಡ್ಡ ದೋಷವಾಗಿರುವುದು! “ಗುಡುಗಿನ ಮರಿಗಳು” ಆದ ಯಾಕೋಬ ಮತ್ತು ಯೋಹಾನರನ್ನು ಪರಿಗಣಿಸಿರಿ.—ಮಾರ್ಕ 3:17.
5, 6. ಯಾಕೋಬ ಮತ್ತು ಯೋಹಾನರ ಉದಾಹರಣೆಗಳಿಂದ ನಾವು ಯಾವ ಪಾಠಗಳನ್ನು ತೆಗೆದುಕೊಳ್ಳಬಲ್ಲೆವು?
5 ಯಾಕೋಬನು ವಿಪರೀತ ಹುರುಪಿನ ಅಪೊಸ್ತಲನಾಗಿದ್ದನೆಂಬುದು ನಮಗೆ ಗೊತ್ತು. (ಲೂಕ 9:51-55) ಕ್ರೈಸ್ತ ಸಭೆ ಸ್ಥಾಪಿಸಲ್ಪಟ್ಟ ಮೇಲೆ, ಅವನು ಸಕ್ರಿಯವಾದ ಪಾತ್ರವನ್ನು ವಹಿಸಿದ್ದಿರಬೇಕು. ಆದರೆ ಅವನು ಸಾಪೇಕ್ಷವಾಗಿ ಕಡಮೆ ವಯಸ್ಸಿನವನಾಗಿದ್ದಾಗಲೇ, Iನೆಯ ಹೆರೋದ ಅಗ್ರಿಪ್ಪನು ಅವನನ್ನು ಕೊಲ್ಲಿಸಿದನು. (ಅ. ಕೃತ್ಯಗಳು 12:1-3) ತನ್ನ ಜೀವವು ಅನಿರೀಕ್ಷಿತವಾಗಿ ಅಂತ್ಯಗೊಳ್ಳುತ್ತಿದೆಯೆಂದು ಕಂಡ ಯಾಕೋಬನು, ತಾನು ಅಷ್ಟು ಹುರುಪಿನವನಾಗಿದ್ದುದಕ್ಕಾಗಿ, ಶುಶ್ರೂಷೆಯಲ್ಲಿ ಪ್ರಯಾಸಪಟ್ಟದ್ದಕ್ಕಾಗಿ ದುಃಖಿತನಾದನೆಂದು ನಾವು ನೆನಸುತ್ತೇವೊ? ಅಸಂಭವ! ತನ್ನ ಸಾಪೇಕ್ಷವಾಗಿ ಅಲ್ಪಕಾಲದ ಜೀವಿತದ ಅತ್ಯುತ್ತಮ ವರ್ಷಗಳನ್ನು ಯೆಹೋವನ ಸೇವೆಯಲ್ಲಿ ವ್ಯಯಿಸಿದುದಕ್ಕೆ ಅವನು ಹರ್ಷಿತನಾಗಿದ್ದನೆಂಬುದು ನಿಶ್ಚಯ. ಈಗ, ನಮ್ಮ ಜೀವವು ಅನಿರೀಕ್ಷಿತವಾಗಿ ಅಂತ್ಯಗೊಳ್ಳುತ್ತದೆಯೊ ಇಲ್ಲವೊ ಎಂಬುದು ನಮ್ಮಲ್ಲಿ ಯಾವನಿಗೂ ತಿಳಿದಿರಸಾಧ್ಯವಿಲ್ಲ. (ಪ್ರಸಂಗಿ 9:11; ಹೋಲಿಸಿ ಲೂಕ 12:20, 21.) ಆದಕಾರಣ, ಯೆಹೋವನ ಸೇವೆಯಲ್ಲಿ ನಮಗಿರುವ ಹುರುಪು ಮತ್ತು ಚಟುವಟಿಕೆಯನ್ನು ಉನ್ನತ ಮಟ್ಟದಲ್ಲಿಟ್ಟುಕೊಳ್ಳುವುದು ನಿಶ್ಚಯವಾಗಿಯೂ ವಿವೇಕಪ್ರದ. ಆ ವಿಧದಲ್ಲಿ ನಾವು ಆತನೊಂದಿಗೆ ಒಳ್ಳೆಯ ಹೆಸರನ್ನು ಕಾಪಾಡಿಕೊಂಡು, ನಮ್ಮ ಅನಂತ ಭವಿಷ್ಯತ್ತಿನ ನೋಟವುಳ್ಳವರಾಗಿ ಜೀವಿಸುತ್ತಿರುವೆವು.—ಪ್ರಸಂಗಿ 7:1.
6 ಯೇಸು, “ಎಚ್ಚರವಾಗಿರ್ರಿ” ಎಂದು ತೀವ್ರತೆಯಿಂದ ಪ್ರೋತ್ಸಾಹಿಸಿದಾಗ ಅಲ್ಲಿ ಉಪಸ್ಥಿತನಿದ್ದ ಅಪೊಸ್ತಲ ಯೋಹಾನನನ್ನೊಳಗೊಂಡ ಒಂದು ಸಂಬದ್ಧ ಪಾಠವಿದೆ. (ಮತ್ತಾಯ 25:13; ಮಾರ್ಕ 13:37; ಲೂಕ 21:34-36) ಯೋಹಾನನು ಅದನ್ನು ಹೃದಯಕ್ಕೆ ತೆಗೆದುಕೊಂಡು, ಅನೇಕ ದಶಕಗಳ ವರೆಗೆ ಉತ್ಸುಕತೆಯಿಂದ ಸೇವೆಮಾಡಿದನು. ವಾಸ್ತವವಾಗಿ, ಬೇರೆಲ್ಲ ಅಪೊಸ್ತಲರು ಸತ್ತಾಗ ಅವನು ಇನ್ನೂ ಬದುಕಿದ್ದನೆಂದು ಕಂಡುಬರುತ್ತದೆ. ಯೋಹಾನನು ತೀರ ವೃದ್ಧನಾಗಿದ್ದು, ತನ್ನ ನಂಬಿಗಸ್ತ ಚಟುವಟಿಕೆಯ ದಶಕಗಳನ್ನು ನೆನಪಿಗೆ ತಂದುಕೊಂಡಾಗ, ಅವನು ಅದನ್ನು ದೋಷವೆಂಬಂತೆ, ತಪ್ಪಾಗಿ ಮಾರ್ಗದರ್ಶಿಸಲ್ಪಟ್ಟಂತೆ ಅಥವಾ ಅಸಮತೆಯದ್ದೆಂಬಂತೆ ವೀಕ್ಷಿಸಿದನೊ? ನಿಶ್ಚಯವಾಗಿಯೂ ಇಲ್ಲ! ಅವನು ಇನ್ನೂ ಭವಿಷ್ಯತ್ತಿಗಾಗಿ ಆತುರದಿಂದ ನೋಡುತ್ತಿದ್ದನು. ಪುನರುತ್ಥಿತನಾದ ಯೇಸು, “ನಿಜವಾಗಿ ಬೇಗ ಬರುತ್ತೇನೆ,” ಎಂದು ಹೇಳಿದಾಗ, ಯೋಹಾನನು ಕೂಡಲೇ, “ಹಾಗೆಯೇ ಆಗಲಿ; ಕರ್ತನಾದ ಯೇಸುವೇ, ಬಾ” ಎಂದು ಉತ್ತರಕೊಟ್ಟನು. (ಪ್ರಕಟನೆ 22:20) ಖಂಡಿತವಾಗಿಯೂ ಯೋಹಾನನು, ನಿಧಾನವೂ ಶಾಂತವೂ ಆದ ‘ಮಾಮೂಲು ಜೀವನ’ವನ್ನು ಹಾರೈಸುತ್ತ ಪ್ರಸ್ತುತಕ್ಕಾಗಿ ಜೀವಿಸುತ್ತಿರಲಿಲ್ಲ. ಕರ್ತನು ಯಾವಾಗಲಾದರೂ ಬರಲಿ, ಅವನು ತನ್ನ ಸಂಪೂರ್ಣ ಜೀವ ಮತ್ತು ಶಕ್ತಿಯಿಂದ ಸೇವೆಮಾಡುತ್ತ ಇರಲು ದೃಢಮನಸ್ಸು ಮಾಡಿದ್ದನು. ನಮ್ಮ ವಿಷಯದಲ್ಲೇನು?
ನಿತ್ಯಜೀವದಲ್ಲಿ ನಂಬಿಕೆಗೆ ಆಧಾರಗಳು
7. (ಎ) ನಿತ್ಯಜೀವದ ನಿರೀಕ್ಷೆಯು ಹೇಗೆ “ಅನಾದಿ ಕಾಲದಲ್ಲಿ ವಾಗ್ದಾನ” ಮಾಡಲ್ಪಟ್ಟಿತ್ತು? (ಬಿ) ಯೇಸು ನಿತ್ಯಜೀವದ ನಿರೀಕ್ಷೆಯ ಮೇಲೆ ಹೇಗೆ ಪ್ರಕಾಶವನ್ನು ಬೀರಿದನು?
7 ನಿತ್ಯಜೀವದ ನಿರೀಕ್ಷೆಯು ಮನುಷ್ಯನಿರ್ಮಿತ ಸ್ವಪ್ನವಾಗಲಿ ಮಾನಸಿಕ ಚಿತ್ರವಾಗಲಿ ಅಲ್ಲವೆಂಬ ಭರವಸೆಯಿರಲಿ. ತೀತ 1:2 ಹೇಳುವಂತೆ, ನಮ್ಮ ದೈವಿಕ ಭಕ್ತಿಗೆ “ನಿತ್ಯಜೀವದ ನಿರೀಕ್ಷೆಯೇ ಆಧಾರವಾಗಿದೆ.” ಅದನ್ನು “ಸುಳ್ಳಾಡದ ದೇವರು ಅನಾದಿಕಾಲದಲ್ಲಿ ವಾಗ್ದಾನ” ಮಾಡಿದನು. ಸಕಲ ವಿಧೇಯ ಮಾನವರು ಸದಾಕಾಲ ಜೀವಿಸುವುದು ದೇವರ ಮೂಲ ಉದ್ದೇಶವಾಗಿತ್ತು. (ಆದಿಕಾಂಡ 1:28) ಆ ಉದ್ದೇಶವನ್ನು ಯಾವುದೂ, ಆದಾಮಹವ್ವರ ದಂಗೆಯೂ ಭಂಗಗೊಳಿಸಸಾಧ್ಯವಿಲ್ಲ. ಆದಿಕಾಂಡ 3:15ರಲ್ಲಿ ದಾಖಲಿಸಿರುವಂತೆ, ಮಾನವಕುಲಕ್ಕೆ ಮಾಡಿದ ಸಕಲ ಹಾನಿಯನ್ನು ರದ್ದುಗೊಳಿಸುವಂತೆ ದೇವರು ಆ ಕೂಡಲೇ ಒಂದು “ಸಂತಾನ”ವನ್ನು ವಾಗ್ದಾನಿಸಿದನು. ಆ “ಸಂತಾನ” ಅಥವಾ ಮೆಸ್ಸೀಯನಾದ ಯೇಸು ಬಂದಾಗ, ಅವನು ನಿತ್ಯಜೀವದ ನಿರೀಕ್ಷೆಯನ್ನು ತನ್ನ ಮೂಲ ಬೋಧನೆಗಳಲ್ಲಿ ಒಂದಾಗಿ ಮಾಡಿದನು. (ಯೋಹಾನ 3:16; 6:47, 51; 10:28; 17:3) ತನ್ನ ಪರಿಪೂರ್ಣ ಜೀವವನ್ನು ಪ್ರಾಯಶ್ಚಿತ್ತವಾಗಿ ಅರ್ಪಿಸುವ ಮೂಲಕ, ಕ್ರಿಸ್ತನು ಮಾನವಕುಲಕ್ಕೆ ನಿತ್ಯಜೀವವನ್ನು ನೀಡಲು ಶಾಸನಬದ್ಧ ಹಕ್ಕನ್ನು ಸಂಪಾದಿಸಿದನು. (ಮತ್ತಾಯ 20:28) ಅವನ ಶಿಷ್ಯರಲ್ಲಿ ಕೆಲವರು, ಒಟ್ಟು 1,44,000 ಮಂದಿ, ಸ್ವರ್ಗದಲ್ಲಿ ಸದಾಕಾಲ ಬದುಕುವರು. (ಪ್ರಕಟನೆ 14:1-4) ಹೀಗೆ, ಒಮ್ಮೆ ಮರ್ತ್ಯರಾಗಿದ್ದ ಕೆಲವು ಮಾನವರು “ಅಮರತ್ವವನ್ನು ಧರಿಸಿ”ಕೊಳ್ಳುವರು.—1 ಕೊರಿಂಥ 15:53.
8. (ಎ) “ಅಮರತ್ವ” ಎಂದರೇನು, ಮತ್ತು ಯೆಹೋವನು ಅದನ್ನು 1,44,000 ಮಂದಿಗೆ ಕೊಡುವುದೇಕೆ? (ಬಿ) ಯೇಸು “ಬೇರೆ ಕುರಿ”ಗಳಿಗೆ ಯಾವ ನಿರೀಕ್ಷೆಯನ್ನು ಎತ್ತಿಹಿಡಿದನು?
8 “ಅಮರತ್ವ”ಕ್ಕೆ ಕೇವಲ ಎಂದಿಗೂ ಸಾಯದಿರುವುದಕ್ಕಿಂತ ಹೆಚ್ಚಿನ ಅರ್ಥವಿದೆ. ಅದರಲ್ಲಿ “ನಿರ್ಲಯವಾದ ಜೀವದ ಶಕ್ತಿ” ಸೇರಿದೆ. (ಇಬ್ರಿಯ 7:16; ಹೋಲಿಸಿ ಪ್ರಕಟನೆ 20:6.) ಇಂತಹ ವಿಶಿಷ್ಟವಾದ ಕೊಡುಗೆಯನ್ನು ಕೊಡುವುದರಿಂದ ದೇವರು ಸಾಧಿಸುವುದಾದರೂ ಏನನ್ನು? ದೇವರ ಸೃಷ್ಟಿಜೀವಿಗಳಲ್ಲಿ ಯಾರ ಮೇಲೂ ಭರವಸೆಯಿಡಸಾಧ್ಯವಿಲ್ಲವೆಂಬ ಸೈತಾನನ ಪಂಥಾಹ್ವಾನವನ್ನು ನೆನಪಿಸಿಕೊಳ್ಳಿ. (ಯೋಬ 1:9-11; 2:4, 5) ಈ 1,44,000 ಮಂದಿಗೆ ಅಮರತ್ವವನ್ನು ಕೊಡುವ ಮೂಲಕ ದೇವರು, ಸೈತಾನನ ಪಂಥಾಹ್ವಾನಕ್ಕೆ ಅಷ್ಟು ಗಮನಾರ್ಹವಾಗಿ ಉತ್ತರ ಕೊಟ್ಟಿರುವ ಈ ಗುಂಪಿನ ಮೇಲೆ ತನ್ನ ಸಂಪೂರ್ಣ ಭರವಸೆಯನ್ನು ಸೂಚಿಸುತ್ತಾನೆ. ಆದರೆ ಮಾನವಕುಲದಲ್ಲಿ ಉಳಿದವರ ವಿಷಯವೇನು? ರಾಜ್ಯ ಬಾಧ್ಯಸ್ಥರ ಈ “ಚಿಕ್ಕ ಹಿಂಡಿ”ನ ಆರಂಭದ ಸದಸ್ಯರಿಗೆ, ಅವರು “ಸಿಂಹಾಸನಗಳ ಮೇಲೆ ಕೂತುಕೊಂಡು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸು”ವರು ಎಂದು ಯೇಸು ಹೇಳಿದನು. (ಲೂಕ 12:32; 22:30) ಇತರರು ಅವನ ರಾಜ್ಯದ ಪ್ರಜೆಗಳಾಗಿ ಭೂಮಿಯ ಮೇಲೆ ನಿತ್ಯಜೀವವನ್ನು ಪಡೆಯುವರೆಂಬುದನ್ನು ಇದು ಸೂಚಿಸುತ್ತದೆ. ಈ “ಬೇರೆ ಕುರಿ”ಗಳಿಗೆ ಅಮರತ್ವವು ಕೊಡಲ್ಪಡುವುದಿಲ್ಲವಾದರೂ, ಅವರು “ನಿತ್ಯಜೀವ”ವನ್ನು ನಿಶ್ಚಯವಾಗಿಯೂ ಪಡೆಯುತ್ತಾರೆ. (ಯೋಹಾನ 10:16; ಮತ್ತಾಯ 25:46) ಹೀಗೆ, ನಿತ್ಯಜೀವವು ಸಕಲ ಕ್ರೈಸ್ತರ ನಿರೀಕ್ಷೆಯಾಗಿದೆ. ಇದು ಮನಶ್ಚಿತ್ರವಲ್ಲ, ಬದಲಿಗೆ “ಸುಳ್ಳಾಡದ ದೇವರು” ಶಾಸ್ತ್ರಾಧಾರಿತವಾಗಿ ವಾಗ್ದಾನಮಾಡಿ, ಯೇಸುವಿನ ಅಮೂಲ್ಯ ರಕ್ತದಿಂದ ಬೆಲೆತೆತ್ತ ಒಂದು ಸಂಗತಿಯಾಗಿದೆ.—ತೀತ 1:2.
ದೂರದ ಭವಿಷ್ಯತ್ತಿನಲ್ಲೊ?
9, 10. ನಾವು ಅಂತ್ಯದ ಸಮೀಪದಲ್ಲಿದ್ದೇವೆಂಬುದಕ್ಕೆ ಯಾವ ಸ್ಪಷ್ಟವಾದ ಸೂಚನೆಗಳಿವೆ?
9 “ನಿಭಾಯಿಸಲು ಕಷ್ಟಕರವಾಗಿರುವ ಕಠಿನ ಕಾಲಗಳು” (NW), ನಾವು ನಿರ್ವಿವಾದವಾಗಿ “ಕಡೇ ದಿವಸಗಳಲ್ಲಿ” ಬಂದು ಮುಟ್ಟಿದ್ದೇವೆಂಬುದನ್ನು ಸೂಚಿಸುತ್ತವೆಂದು ಅಪೊಸ್ತಲ ಪೌಲನು ಮುಂತಿಳಿಸಿದನು. ನಮ್ಮ ಸುತ್ತಲಿರುವ ಮಾನವ ಸಮಾಜವು, ಪ್ರೀತಿರಾಹಿತ್ಯ, ದುರಾಶೆ, ಆತ್ಮತೃಪ್ತಿ ಮತ್ತು ದೇವಭಕ್ತಿಯಿಲ್ಲದಿರುವಿಕೆಯ ಸ್ಥಿತಿಗೆ ಕುಸಿದು ಬೀಳುವಾಗ, ಈ ದುಷ್ಟ ಲೋಕ ವ್ಯವಸ್ಥೆಯ ಮೇಲೆ ತನ್ನ ತೀರ್ಪುಗಳನ್ನು ಜಾರಿಗೊಳಿಸುವ ಯೆಹೋವನ ದಿನವು ಬೇಗನೆ ಸಮೀಪಿಸುತ್ತಿದೆಯೆಂದು ನಾವು ಗ್ರಹಿಸುವುದಿಲ್ಲವೊ? ಹಿಂಸಾಚಾರ ಮತ್ತು ದ್ವೇಷವು ವರ್ಧಿಸುವಾಗ, “ದುಷ್ಟರೂ ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ ಹೆಚ್ಚಾದ ಕೆಟ್ಟತನಕ್ಕೆ ಹೋಗುವರು” ಎಂಬ ಪೌಲನ ಮುಂದಿನ ಮಾತುಗಳ ನೆರವೇರಿಕೆಯನ್ನು ನಾವು ನಮ್ಮ ಸುತ್ತಲೂ ನೋಡುವುದಿಲ್ಲವೊ? (2 ತಿಮೊಥೆಯ 3:1-5, 13) ಕೆಲವರು ಆಶಾವಾದಿಗಳಾಗಿರುತ್ತ, “ಸಮಾಧಾನವಾಗಿಯೂ ನಿರ್ಭಯವಾಗಿಯೂ ಇರುತ್ತೇವೆ” ಎಂಬ ಕೂಗುಗಳನ್ನು ಎತ್ತಬಹುದಾದರೂ, ಶಾಂತಿಯ ಸಕಲ ಪ್ರತೀಕ್ಷೆಗಳು, “ನಾಶನವು ಗರ್ಭಿಣಿಗೆ ಪ್ರಸವವೇದನೆ ಬರುವ ಪ್ರಕಾರ ಫಕ್ಕನೆ” ಬರುವಾಗ ಹಬೆಯಾಗಿ ಹೋಗುವುವು. “ಅವರು ಹೇಗೂ ತಪ್ಪಿಸಿಕೊಳ್ಳಲಾರರು.” ನಮ್ಮ ಕಾಲಗಳ ಅರ್ಥದ ಸಂಬಂಧದಲ್ಲಿ ನಾವು ಕತ್ತಲೆಯಲ್ಲಿ ಇಡಲ್ಪಟ್ಟಿರುವುದಿಲ್ಲ. ಆದಕಾರಣ, “ನಾವು ಇತರರಂತೆ ನಿದ್ದೆಮಾಡದೆ ಎಚ್ಚರವಾಗಿರೋಣ.”—1 ಥೆಸಲೊನೀಕ 5:1-6.
10 ಅಲ್ಲದೆ, ಕಡೇ ದಿವಸಗಳು ‘ಸ್ವಲ್ಪ ಕಾಲ’ ಎಂಬುದನ್ನು ಬೈಬಲು ಸೂಚಿಸುತ್ತದೆ. (ಪ್ರಕಟನೆ 12:12; ಹೋಲಿಸಿ 17:10.) ಆ ‘ಸ್ವಲ್ಪ ಕಾಲ’ದಲ್ಲಿ ಹೆಚ್ಚಿನದ್ದು ದಾಟಿಹೋಗಿರುವುದು ವ್ಯಕ್ತ. ಉದಾಹರಣೆಗೆ, ದಾನಿಯೇಲನ ಪ್ರವಾದನೆಯು, ಈ ಶತಮಾನದ ವರೆಗೂ ವ್ಯಾಪಿಸಿರುವ, “ಉತ್ತರ ರಾಜ” ಮತ್ತು “ದಕ್ಷಿಣ ರಾಜ” ಇವರ ಮಧ್ಯೆ ನಡೆಯುವ ಹೋರಾಟವನ್ನು ನಿಷ್ಕೃಷ್ಟವಾಗಿ ವರ್ಣಿಸುತ್ತದೆ. (ದಾನಿಯೇಲ 11:5, 6) ಇನ್ನು ನೆರವೇರಲು ಬಾಕಿ ಇರುವುದು, ದಾನಿಯೇಲ 11:44, 45ರಲ್ಲಿ ವರ್ಣಿಸಿರುವ “ಉತ್ತರರಾಜನ” ಕೊನೆಯ ಆಕ್ರಮಣವೇ.—ಈ ಪ್ರವಾದನೆಯ ಚರ್ಚೆಗಾಗಿ ಜುಲೈ 1, 1987ರ ದ ವಾಚ್ಟವರ್ ಮತ್ತು ನವೆಂಬರ್ 1, 1993ರ ಕಾವಲಿನಬುರುಜು ನೋಡಿ.
11. (ಎ) ಮತ್ತಾಯ 24:14 ಎಷ್ಟರ ಮಟ್ಟಿಗೆ ನೆರವೇರಿದೆ? (ಬಿ) ಮತ್ತಾಯ 10:23ರಲ್ಲಿ ದಾಖಲಿಸಿರುವ ಮಾತುಗಳು ಏನನ್ನು ಸೂಚಿಸುತ್ತವೆ?
11 “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು,” ಎಂಬ ಯೇಸುವಿನ ಕಾಲಜ್ಞಾನವೂ ಇದೆ. (ಮತ್ತಾಯ 24:14) ಇಂದು, ಯೆಹೋವನ ಸಾಕ್ಷಿಗಳು ತಮ್ಮ ಕೆಲಸವನ್ನು 233 ದೇಶಗಳು, ದ್ವೀಪ ಸಮುದಾಯಗಳು ಮತ್ತು ಟೆರಿಟೊರಿಗಳಲ್ಲಿ ನಡೆಸುತ್ತಾರೆ. ನಿಜ, ತಲಪದಿರುವ ಪ್ರದೇಶಗಳು ಇನ್ನೂ ಇವೆಯಾದರೂ, ಪ್ರಾಯಶಃ ಯೆಹೋವನ ತಕ್ಕ ಸಮಯದಲ್ಲಿ ಅವಕಾಶದ ಬಾಗಿಲು ತೆರೆಯುವುದು. (1 ಕೊರಿಂಥ 16:9) ಆದರೂ, ಮತ್ತಾಯ 10:23ರಲ್ಲಿ ದಾಖಲಿಸಿರುವ, “ಮನುಷ್ಯಕುಮಾರನು ಬರುವಷ್ಟರಲ್ಲಿ ನೀವು ಇಸ್ರಾಯೇಲ್ ಜನರ ಊರುಗಳ ಸಂಚಾರವನ್ನು ತೀರಿಸಿರುವದಿಲ್ಲ”ವೆಂಬ ಯೇಸುವಿನ ಮಾತುಗಳು ಸಮಚಿತ್ತಕ್ಕೆ ತರುವಂತಹವುಗಳು. ಸುವಾರ್ತೆಯು ಭೂಮಿಯಲ್ಲೆಲ್ಲ ಪ್ರಕಟಿಸಲ್ಪಡುವುದು ನಿಶ್ಚಯವಾದರೂ, ಯೇಸು ವಧಕಾರನಾಗಿ “ಬರುವಷ್ಟರಲ್ಲಿ” ನಾವೇ ಖುದ್ದಾಗಿ ರಾಜ್ಯದ ಸುವಾರ್ತೆಯೊಂದಿಗೆ ಭೂಮಿಯ ಎಲ್ಲ ಭಾಗಗಳನ್ನು ತಲಪುವುದಿಲ್ಲ.
12. (ಎ) ಪ್ರಕಟನೆ 7:3ರಲ್ಲಿ ಯಾವ ‘ಮುದ್ರೆಯೊತ್ತುವಿಕೆ’ಯು ಸೂಚಿಸಲ್ಪಟ್ಟಿದೆ? (ಬಿ) ಭೂಮಿಯ ಮೇಲೆ ಅಭಿಷಿಕ್ತರ ಸಂಖ್ಯೆಯು ಕಡಿಮೆಯಾಗಿರುವುದರ ವೈಶಿಷ್ಟ್ಯವೇನು?
12 ಪ್ರಕಟನೆ 7:1, 3ರಲ್ಲಿ, ನಾಶನದ “ನಾಲ್ಕು ಗಾಳಿಗಳು” “ನಮ್ಮ ದೇವರ ದಾಸರ ಹಣೆಗಳ ಮೇಲೆ ಮುದ್ರೆಯೊತ್ತಿ ಆಗುವ ತನಕ” ತಡೆದು ಹಿಡಿಯಲ್ಪಟ್ಟಿರುವುದನ್ನು ಹೇಳುವ ವಚನವನ್ನು ಪರಿಗಣಿಸಿರಿ. ಇದು ಆರಂಭದಲ್ಲಿ—1,44,000 ಮಂದಿಗಳವರು ಸ್ವರ್ಗೀಯ ಕರೆಯನ್ನು ಪಡೆಯುವಾಗ—ನಡೆಯುವ ಮುದ್ರೆಯೊತ್ತುವಿಕೆಯನ್ನು ಸೂಚಿಸುವುದಿಲ್ಲ. (ಎಫೆಸ 1:13) ಇದು ಅಂತಿಮ ಮುದ್ರೆಯೊತ್ತುವಿಕೆಯನ್ನು, ಪರೀಕ್ಷಿತರೂ ನಂಬಿಗಸ್ತರೂ ಆದ “ನಮ್ಮ ದೇವರ ದಾಸರು” ಆಗಿ ಮಾರ್ಪಡಿಸಲಾಗದ ರೀತಿಯಲ್ಲಿ ಅವರು ಗುರುತಿಸಲ್ಪಡುವುದನ್ನು ಸೂಚಿಸುತ್ತದೆ. ಭೂಮಿಯ ಮೇಲೆ ಬದುಕಿ ಉಳಿದಿರುವ ದೇವರ ನಿಜವಾದ ಅಭಿಷಿಕ್ತ ಪುತ್ರರ ಸಂಖ್ಯೆ ತುಂಬ ಕಡಿಮೆಯಾಗಿದೆ. ಇದಲ್ಲದೆ, ಮಹಾ ಸಂಕಟದ ಆರಂಭದ ಹಂತವು “ಆದುಕೊಂಡವರಿಗೋಸ್ಕರ” “ಕಡಿಮೆ” ಮಾಡಲ್ಪಡುವುದೆಂದು ಬೈಬಲು ಸ್ಪಷ್ಟವಾಗಿ ತಿಳಿಸುತ್ತದೆ. (ಮತ್ತಾಯ 24:21, 22) ಅಭಿಷಿಕ್ತರೆಂದು ಹೇಳಿಕೊಳ್ಳುವವರಲ್ಲಿ ಹೆಚ್ಚಿನವರು ತೀರ ವೃದ್ಧರು. ಹಾಗಾದರೆ, ಅಂತ್ಯವು ನಿಕಟವಿದೆಯೆಂಬುದನ್ನು ಇದು ಸೂಚಿಸುವುದಿಲ್ಲವೆ?
ನಂಬಿಗಸ್ತ ಕಾವಲುಗಾರ
13, 14. ಕಾವಲುಗಾರ ವರ್ಗದ ಜವಾಬ್ದಾರಿಯೇನು?
13 ಈಮಧ್ಯೆ, ‘ನಂಬಿಗಸ್ತ ಆಳು’ವಿನಿಂದ ಕೊಡಲ್ಪಡುವ ನಿರ್ದೇಶನಕ್ಕೆ ನಾವು ಕಿವಿಗೊಡುವುದು ಒಳ್ಳೆಯದು. (ಮತ್ತಾಯ 24:45) ಒಂದು ನೂರಕ್ಕೂ ಹೆಚ್ಚು ವರ್ಷಗಳಿಂದ, ಈ ಆಧುನಿಕ ದಿನಗಳ “ಆಳು” “ಕಾವಲುಗಾರ”ನಾಗಿ ನಂಬಿಗಸ್ತಿಕೆಯಿಂದ ಸೇವೆಮಾಡಿದ್ದಾನೆ. (ಯೆಹೆಜ್ಕೇಲ 3:17-21) ಜನವರಿ 1, 1984ರ ದ ವಾಚ್ಟವರ್ ಪತ್ರಿಕೆಯು ವಿವರಿಸಿದ್ದು: “ಈ ಕಾವಲುಗಾರನು, ಬೈಬಲ್ ಪ್ರವಾದನೆಯ ನೆರವೇರಿಕೆಯಲ್ಲಿ ಭೂಮಿಯ ಮೇಲೆ ಘಟನೆಗಳು ಹೇಗೆ ವಿಕಾಸಗೊಳ್ಳುತ್ತಿವೆಯೆಂದು ಅವಲೋಕಿಸಿ, ಆಸನ್ನವಾಗಿರುವ, ‘ಲೋಕಾದಿಯಿಂದ ಸಂಭವಿಸಿದ್ದಿರದಂತಹ ಮಹಾಸಂಕಟ’ದ ಕುರಿತ ಎಚ್ಚರಿಕೆಯನ್ನು ಕೊಟ್ಟು, ‘ಶುಭದ ಸುವಾರ್ತೆಯನ್ನು’ ಪ್ರಕಟಿಸುತ್ತಾನೆ.”—ಮತ್ತಾಯ 24:21; ಯೆಶಾಯ 52:7.
14 ನೆನಪಿರಲಿ: “ಕಂಡದ್ದನ್ನು ತಿಳಿಸು”ವುದು ಕಾವಲುಗಾರನ ಕೆಲಸ. (ಯೆಶಾಯ 21:6-8) ಬೈಬಲ್ ಸಮಯಗಳಲ್ಲಿ, ಸಂಭಾವ್ಯ ಬೆದರಿಕೆಯು ಸ್ಪಷ್ಟವಾಗಿ ಗುರುತಿಸಲು ಅತಿ ದೂರದಲ್ಲಿರುವುದಾದರೂ, ಕಾವಲುಗಾರನು ಎಚ್ಚರಿಕೆ ಧ್ವನಿಸುತ್ತಿದ್ದನು. (2 ಅರಸುಗಳು 9:17, 18) ಆಗ ತಪ್ಪಾದ ಅಪಾಯಸೂಚನೆಗಳು ಖಂಡಿತವಾಗಿಯೂ ಸಂಭವಿಸಿದವು. ಆದರೆ ಒಬ್ಬ ಒಳ್ಳೆಯ ಕಾವಲುಗಾರನು ನಾಚಿಕೆಗೊಳಗಾಗುವ ಭಯದಿಂದ, ಎಚ್ಚರಿಕೆ ಕೊಡುವುದನ್ನು ತಡೆದು ಹಿಡಿಯುವುದಿಲ್ಲ. ನಿಮ್ಮ ಮನೆಗೆ ಬೆಂಕಿ ಹಿಡಿದಿರುವಲ್ಲಿ, ಅದು ಸುಳ್ಳು ಅಪಾಯಸೂಚನೆಯಾಗಿರಬಹುದೆಂದು ಎಣಿಸುತ್ತ, ಅಗ್ನಿಶಾಮಕ ದಳದವರು ಬರದಿರುವಲ್ಲಿ ನಿಮಗೆ ಹೇಗನಿಸೀತು? ಇಲ್ಲ, ಇಂತಹ ಜನರು ಯಾವುದೇ ಅಪಾಯಸೂಚನೆಗೆ ಒಡನೆ ಪ್ರತಿಕ್ರಿಯಿಸುವರೆಂದು ನಾವು ನಿರೀಕ್ಷಿಸುತ್ತೇವೆ! ಅದೇ ರೀತಿ, ಪರಿಸ್ಥಿತಿಗಳು ಎಚ್ಚರಿಕೆ ಕೊಡುವುದನ್ನು ಸಮರ್ಥಿಸುತ್ತವೆಂದು ತೋರಿಬಂದಾಗ, ಕಾವಲುಗಾರ ವರ್ಗವು ಅದನ್ನು ತಿಳಿಯಪಡಿಸಿದೆ.
15, 16. (ಎ) ಪ್ರವಾದನೆಯ ಅರ್ಥಮಾಡಿಕೊಳ್ಳುವಿಕೆಯಲ್ಲಿ ಹೊಂದಾಣಿಕೆಗಳನ್ನು ಮಾಡುವುದೇಕೆ? (ಬಿ) ಕೆಲವು ಪ್ರವಾದನೆಗಳನ್ನು ತಪ್ಪಾಗಿ ಅರ್ಥಮಾಡಿಕೊಂಡ ದೇವರ ನಂಬಿಗಸ್ತ ಸೇವಕರಿಂದ ನಾವೇನನ್ನು ಕಲಿಯಬಲ್ಲೆವು?
15 ಆದರೆ ಸಂಭವಗಳು ವಿಕಾಸಗೊಂಡಂತೆ, ಪ್ರವಾದನೆಯ ಕುರಿತಾದ ನಮ್ಮ ತಿಳಿವಳಿಕೆಯು ಹೆಚ್ಚು ಸ್ಪಷ್ಟವಾಗಿದೆ. ದೈವಿಕ ಪ್ರವಾದನೆಗಳು ನೆರವೇರುವ ಮೊದಲು ಅವುಗಳನ್ನು ಪೂರ್ಣವಾಗಿ ಅರ್ಥಮಾಡಿಕೊಂಡಿರುವ ಸಂದರ್ಭಗಳು, ಒಂದು ವೇಳೆ ಇದ್ದರೆ, ಅವು ವಿರಳವೆಂಬುದನ್ನು ಚರಿತ್ರೆ ತೋರಿಸುತ್ತದೆ. ಅಬ್ರಾಮನ ಸಂತಾನವು “ಅನ್ಯದೇಶದಲ್ಲಿ” ನಿಷ್ಕೃಷ್ಟವಾಗಿ ಎಷ್ಟು ಕಾಲ—400 ವರುಷಗಳು—ಇರುವುದೆಂದು ದೇವರು ಅವನಿಗೆ ತಿಳಿಸಿದನು. (ಆದಿಕಾಂಡ 15:13) ಆದರೆ ಮೋಶೆಯು ತನ್ನನ್ನು ವಿಮೋಚಕನಾಗಿ ಅದಕ್ಕಿಂತ ಮೊದಲೇ ನೀಡಿಕೊಂಡನು.—ಅ. ಕೃತ್ಯಗಳು 7:23-30.
16 ಮೆಸ್ಸೀಯ ಸಂಬದ್ಧ ಪ್ರವಾದನೆಗಳನ್ನೂ ಪರಿಗಣಿಸಿರಿ. ಹಿನ್ನೋಟದಲ್ಲಿ, ಮೆಸ್ಸೀಯನ ಮರಣ, ಪುನರುತ್ಥಾನಗಳು ಮುಂತಿಳಿಸಲ್ಪಟ್ಟಿದ್ದವೆಂಬುದು ಸ್ಫಟಿಕದಷ್ಟು ಸ್ಪಷ್ಟವೆಂದು ಕಂಡುಬರುತ್ತವೆ. (ಯೆಶಾಯ 53:8-10) ಆದರೂ, ಯೇಸುವಿನ ಸ್ವಂತ ಶಿಷ್ಯರು ಈ ನಿಜತ್ವವನ್ನು ಗ್ರಹಿಸಲು ತಪ್ಪಿದರು. (ಮತ್ತಾಯ 16:21-23) ದಾನಿಯೇಲ 7:13, 14, ಕ್ರಿಸ್ತನ ಭಾವೀ ಪಾರೂಸೀಅ ಅಥವಾ “ಸಾನ್ನಿಧ್ಯ”ದ ಸಮಯದಲ್ಲಿ ನೆರವೇರುವುದೆಂಬುದನ್ನು ಅವರು ಗ್ರಹಿಸಲಿಲ್ಲ. (ಮತ್ತಾಯ 24:3) ಹೀಗೆ, ಅವರು ಯೇಸುವಿನೊಂದಿಗೆ, “ಸ್ವಾಮೀ, ನೀನು ಇದೇ ಕಾಲದಲ್ಲಿ ಇಸ್ರಾಯೇಲ್ ಜನರಿಗೆ ರಾಜ್ಯವನ್ನು ತಿರಿಗಿ ಸ್ಥಾಪಿಸಿಕೊಡುವಿಯೋ?” ಎಂದು ಕೇಳಿದಾಗ, ಅವರು ಕಾಲಗಣನೆಯಲ್ಲಿ ಸುಮಾರು 2,000 ವರ್ಷಗಳಷ್ಟು ತಪ್ಪಿಹೋಗಿದ್ದರು. (ಅ. ಕೃತ್ಯಗಳು 1:6) ಕ್ರೈಸ್ತ ಸಭೆಯು ಉತ್ತಮವಾಗಿ ಸ್ಥಾಪನೆಗೊಂಡಾದ ಮೇಲೆಯೂ, ತಪ್ಪು ವಿಚಾರಗಳೂ ಸುಳ್ಳು ನಿರೀಕ್ಷೆಗಳೂ ಏಳುತ್ತಾ ಇದ್ದವು. (2 ಥೆಸಲೊನೀಕ 2:1, 2) ಕೆಲವರಿಗೆ ಆಗಾಗ್ಗೆ ತಪ್ಪಾದ ದೃಷ್ಟಿಕೋನಗಳಿದ್ದರೂ, ಆ ಒಂದನೆಯ ಶತಮಾನದ ವಿಶ್ವಾಸಿಗಳ ಕೆಲಸವನ್ನು ಯೆಹೋವನು ನಿರ್ವಿವಾದವಾಗಿ ಆಶೀರ್ವದಿಸಿದನು!
17. ಶಾಸ್ತ್ರದ ನಮ್ಮ ತಿಳಿವಳಿಕೆಯಲ್ಲಿ ಮಾಡಲ್ಪಡುವ ಹೊಂದಿಸಿಕೊಳ್ಳುವಿಕೆಗಳ ಕುರಿತು ಯಾವ ವೀಕ್ಷಣ ನಮ್ಮದಾಗಿರಬೇಕು?
17 ಇಂದಿನ ಕಾವಲುಗಾರ ವರ್ಗಕ್ಕೂ ಹಾಗೆಯೇ ಆಗಿಂದಾಗ್ಗೆ ತನ್ನ ಅಭಿಪ್ರಾಯಗಳನ್ನು ಸ್ಪಷ್ಟಗೊಳಿಸುವ ಅವಶ್ಯವಿತ್ತು. ಆದರೆ ಯೆಹೋವನು ‘ನಂಬಿಗಸ್ತ ಆಳ’ನ್ನು ಆಶೀರ್ವದಿಸಿದ್ದಾನೆಂಬ ವಿಷಯದಲ್ಲಿ ಯಾವನಿಗಾದರೂ ಸಂಶಯಿಸಲು ಸಾಧ್ಯವಿದೆಯೊ? ಅಲ್ಲದೆ, ಪೂರ್ವಾಪರಗಳ ನೋಟದಲ್ಲಿ, ಸಂಭವಿಸಿರುವ ಹೆಚ್ಚಿನ ಹೊಂದಿಸಿಕೊಳ್ಳುವಿಕೆಗಳು ಸಾಪೇಕ್ಷವಾಗಿ ಸಣ್ಣದಾಗಿರುವುದಿಲ್ಲವೊ? ಬೈಬಲಿನ ನಮ್ಮ ಮೂಲ ತಿಳಿವಳಿಕೆಯು ಬದಲಾವಣೆ ಹೊಂದಿರುವುದಿಲ್ಲ. ನಾವು ಕೊನೆಯ ದಿವಸಗಳಲ್ಲಿ ಜೀವಿಸುತ್ತಿದ್ದೇವೆಂಬ ನಮ್ಮ ನಿಶ್ಚಿತಾಭಿಪ್ರಾಯವು ಈಗ ಎಂದಿಗಿಂತಲೂ ಹೆಚ್ಚು ಬಲವಾಗಿರುತ್ತದೆ!
ಅನಂತ ಭವಿಷ್ಯತ್ತಿಗಾಗಿ ಜೀವಿಸುತ್ತಿರುವುದು
18. ನಾವು ಇಂದಿಗಾಗಿ ಮಾತ್ರ ಜೀವಿಸುವುದನ್ನು ಏಕೆ ತಪ್ಪಿಸಬೇಕು?
18 ‘ತಿಂದು, ಕುಡಿಯೋಣ, ನಾಳೆ ಸಾಯುತ್ತೇವಷ್ಟೆ’ ಎಂದು ಲೋಕವು ಹೇಳಬಹುದಾದರೂ ಇದು ನಮ್ಮ ಮನೋಭಾವವಾಗಿರಬಾರದು. ಅನಂತವಾದ ಭವಿಷ್ಯತ್ತಿಗಾಗಿ ಶ್ರಮಿಸಸಾಧ್ಯವಿರುವಾಗ, ಈಗ ಜೀವನದಲ್ಲಿ ಪಡೆಯಸಾಧ್ಯವಿರುವ ಸುಖಾನುಭವಗಳಿಗಾಗಿ ವ್ಯರ್ಥವಾಗಿ ಏಕೆ ಪ್ರಯಾಸಪಡಬೇಕು? ಸ್ವರ್ಗದಲ್ಲಿ ಅಮರ ಜೀವನದ ಅಥವಾ ಭೂಮಿಯ ಮೇಲಿನ ನಿತ್ಯಜೀವನದ ಆ ನಿರೀಕ್ಷೆಯು ಸ್ವಪ್ನವಲ್ಲ, ಮನಶ್ಚಿತ್ರವಲ್ಲ. ಅದು “ಸುಳ್ಳಾಡದ” ದೇವರು ವಾಗ್ದಾನಿಸಿರುವ ವಾಸ್ತವ್ಯವಾಗಿದೆ. (ತೀತ 1:2) ನಮ್ಮ ನಿರೀಕ್ಷೆಯ ಕೈಗೂಡುವಿಕೆ ನಿಕಟವೆಂಬುದಕ್ಕಿರುವ ಸಾಕ್ಷ್ಯವು ಮಿತಿಮೀರುವಷ್ಟಿದೆ! “ಉಳಿದ ಸಮಯವು ತೀರ ಸ್ವಲ್ಪವಾಗಿದೆ.”—1 ಕೊರಿಂಥ 7:29, NW.
19, 20. (ಎ) ನಾವು ರಾಜ್ಯಕ್ಕೋಸ್ಕರ ಮಾಡಿರುವ ತ್ಯಾಗಗಳನ್ನು ಯೆಹೋವನು ಹೇಗೆ ವೀಕ್ಷಿಸುತ್ತಾನೆ? (ಬಿ) ನಾವು ನಿತ್ಯತೆಯ ವೀಕ್ಷಣವುಳ್ಳವರಾಗಿ ಏಕೆ ಜೀವಿಸಬೇಕು?
19 ನಿಜ, ಈ ವ್ಯವಸ್ಥೆಯು ಈಗಾಗಲೇ ಅನೇಕರ ಎಣಿಕೆಗಿಂತ ಹೆಚ್ಚು ಕಾಲ ಬಾಳಿದೆ. ಇದು ತಮಗೆ ಈ ಮೊದಲೇ ತಿಳಿದಿರುತ್ತಿದ್ದರೆ, ತಾವು ಕೆಲವು ತ್ಯಾಗಗಳನ್ನು ಮಾಡುತ್ತಿದ್ದಿರಲಿಲ್ಲವೆಂದು ಕೆಲವರಿಗೆ ಈಗ ಅನಿಸಬಹುದು. ಆದರೆ ಹಾಗೆ ಮಾಡಿರುವುದಕ್ಕಾಗಿ ಒಬ್ಬನು ವಿಷಾದಿಸಬಾರದು. ಎಷ್ಟೆಂದರೂ, ತ್ಯಾಗಗಳನ್ನು ಮಾಡುವುದು ಒಬ್ಬ ಕ್ರೈಸ್ತನಾಗಿರುವುದರ ಒಂದು ಮೂಲ ಭಾಗವಾಗಿದೆ. ಕ್ರೈಸ್ತರು ‘ತಮ್ಮನ್ನು ನಿರಾಕರಿಸಿ’ಕೊಳ್ಳುತ್ತಾರೆ. (ಮತ್ತಾಯ 16:24) ದೇವರನ್ನು ಮೆಚ್ಚಿಸುವ ನಮ್ಮ ಪ್ರಯತ್ನಗಳು ನಿರರ್ಥಕವಾಗಿವೆಯೆಂದು ನಾವೆಣಿಸಲೇಬಾರದು. ಯೇಸು ವಚನಕೊಟ್ಟದ್ದು: “ಯಾವನು ನನ್ನ ನಿಮಿತ್ತವೂ ಸುವಾರ್ತೆಯ ನಿಮಿತ್ತವೂ ಮನೆಯನ್ನಾಗಲಿ ಅಣ್ಣತಮ್ಮಂದಿರನ್ನಾಗಲಿ ಅಕ್ಕತಂಗಿಯರನ್ನಾಗಲಿ ತಾಯಿಯನ್ನಾಗಲಿ ತಂದೆಯನ್ನಾಗಲಿ ಮಕ್ಕಳನ್ನಾಗಲಿ ಭೂಮಿಯನ್ನಾಗಲಿ ಬಿಟ್ಟು ಬಿಟ್ಟಿರುವನೋ ಅವನಿಗೆ . . . ನೂರರಷ್ಟು ಸಿಕ್ಕೇ ಸಿಕ್ಕುತ್ತವೆ; ಮತ್ತು ಮುಂದಣ ಲೋಕದಲ್ಲಿ ನಿತ್ಯಜೀವವು ದೊರೆಯುವದು.” (ಮಾರ್ಕ 10:29, 30) ಇಂದಿನಿಂದ ಒಂದು ಸಾವಿರ ವರುಷಗಳಲ್ಲಿ, ನಿಮ್ಮ ಕೆಲಸ, ಮನೆ ಅಥವಾ ಬ್ಯಾಂಕ್ ಅಕೌಂಟ್ಗಳು ಎಷ್ಟು ವೈಶಿಷ್ಟ್ಯವುಳ್ಳವುಗಳಾಗಿ ಕಂಡುಬಂದಾವು? ಆದರೂ, ನೀವು ಯೆಹೋವನಿಗಾಗಿ ಮಾಡಿರುವ ತ್ಯಾಗಗಳು ಇಂದಿನಿಂದ ಹತ್ತುಲಕ್ಷ ವರ್ಷಗಳಲ್ಲಿ, ಹೌದು, ನೂರುಕೋಟಿ ವರ್ಷಗಳಲ್ಲಿಯೂ ಅರ್ಥವತ್ತಾಗಿರುವುವು! “ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.”—ಇಬ್ರಿಯ 6:10.
20 ಆದಕಾರಣ, ನಾವು ನಿತ್ಯತೆಯ ದೃಷ್ಟಿಯಿಂದ, ನಮ್ಮ ಕಣ್ಣುಗಳನ್ನು, “ಕಾಣುವ ವಸ್ತುಗಳ ಮೇಲಲ್ಲ, ಕಾಣದಿರುವ ವಸ್ತುಗಳ ಮೇಲೆ” ಇಡೋಣ. “ಏಕೆಂದರೆ ಕಾಣುವ ವಸ್ತುಗಳು ತಾತ್ಕಾಲಿಕ, ಕಾಣದ ವಸ್ತುಗಳೊ ಅನಂತ.” (2 ಕೊರಿಂಥ 4:18, NW) ಪ್ರವಾದಿ ಹಬಕ್ಕೂಕನು ಬರೆದುದು: “ಅದು [ದರ್ಶನ] ಕ್ಲುಪ್ತಕಾಲದಲ್ಲಿ ನೆರವೇರತಕ್ಕದ್ದು, ಆದರೆ ಪರಿಣಾಮಕ್ಕೆ ತ್ವರೆಪಡುತ್ತದೆ, ಮೋಸಮಾಡದು; ತಡವಾದರೂ ಅದಕ್ಕೆ ಕಾದಿರು; ಅದು ಬಂದೇ ಬರುವದು, ತಾಮಸವಾಗದು.” (ಹಬಕ್ಕೂಕ 2:3) ಅಂತ್ಯಕ್ಕಾಗಿ ‘ಕಾದಿರುವುದು’ ನಮ್ಮ ವೈಯಕ್ತಿಕ ಮತ್ತು ಕೌಟುಂಬಿಕ ಜವಾಬ್ದಾರಿಗಳನ್ನು ನಿರ್ವಹಿಸುವ ವಿಧದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ನಮ್ಮ ಮುಂದಿನ ಲೇಖನವು ಈ ವಾದಾಂಶಗಳನ್ನು ಸಂಬೋಧಿಸುವುದು.
ಪುನರ್ವಿಮರ್ಶೆಗಾಗಿ ಮುಖ್ಯಾಂಶಗಳು
◻ ಈ ವಿಷಯಗಳ ವ್ಯವಸ್ಥೆಯ ಅಂತ್ಯದ ತೋರಿಕೆಯ ತಡವಾಗುವಿಕೆಯು ಇಂದು ಕೆಲವರನ್ನು ಹೇಗೆ ಬಾಧಿಸಿದೆ?
◻ ನಿತ್ಯಜೀವದ ನಮ್ಮ ನಿರೀಕ್ಷೆಗೆ ಆಧಾರವೇನು?
◻ ರಾಜ್ಯಾಭಿರುಚಿಗಳಿಗಾಗಿ ನಾವು ಮಾಡಿರುವ ತ್ಯಾಗಗಳನ್ನು ನಾವು ಹೇಗೆ ವೀಕ್ಷಿಸಬೇಕು?
[ಪುಟ 15 ರಲ್ಲಿರುವ ಚಿತ್ರ]
ಅಂತ್ಯವು ಬರುವ ಮೊದಲು, ಭೌಗೋಲಿಕವಾಗಿ ಸಾರುವ ಕೆಲಸವು ಮುಗಿಸಲ್ಪಡಬೇಕು