ನಾನು ರೊಮೇನಿಯದಲ್ಲಿ ಬೈಬಲ್ ಸತ್ಯವನ್ನು ಕಲಿತೆ
ಗೋಲ್ಡಿ ರೋಮೋಶೀಅನ್ರು ಹೇಳಿದಂತೆ
ಇಸವಿ 1970ರಲ್ಲಿ, ರೊಮೇನಿಯದಲ್ಲಿರುವ ಕುಟುಂಬ ಸದಸ್ಯರನ್ನು ನಾನು ಭೇಟಿಮಾಡಿದೆ. ಇದು ಸುಮಾರು 50 ವರ್ಷಗಳಲ್ಲೇ ಮಾಡಿದ ಮೊದಲ ಭೇಟಿಯಾಗಿತ್ತು. ಜನರು ಪೀಡನಾತ್ಮಕವಾದ ಕಮ್ಯೂನಿಸ್ಟ್ ಆಳಿಕೆಯ ಕೆಳಗೆ ಜೀವಿಸುತ್ತಿದ್ದರು. ಮತ್ತು ನಾನು ಏನು ಹೇಳುತ್ತೇನೋ ಅದರ ಕುರಿತು ಜಾಗರೂಕಳಾಗಿರುವಂತೆ ನನಗೆ ಸತತವಾಗಿ ಎಚ್ಚರಿಕೆಯು ಕೊಡಲ್ಪಟ್ಟಿತು. ಬಳಿಕ, ನಮ್ಮ ಸ್ವಗ್ರಾಮದಲ್ಲಿರುವ ಸರಕಾರಿ ಕಛೇರಿಯಲ್ಲಿ ನಿಂತಿದ್ದಾಗ, ಅಲ್ಲಿನ ಅಧಿಕಾರಿಯು ನನ್ನನ್ನು ಆ ಕೂಡಲೆ ದೇಶವನ್ನು ಬಿಟ್ಟುಹೋಗುವಂತೆ ಪ್ರಚೋದಿಸಿದನು. ಅದಕ್ಕೆ ಕಾರಣವೇನೆಂದು ವಿವರಿಸುವುದಕ್ಕೆ ಮೊದಲು, ನಾನು ರೊಮೇನಿಯದಲ್ಲಿ ಬೈಬಲ್ ಸತ್ಯವನ್ನು ಕಲಿತ ವಿಧವನ್ನು ತಿಳಿಸುವೆ.
ನಾನು 1903ರ ಮಾರ್ಚ್ 3ರಂದು, ವಾಯವ್ಯ ರೊಮೇನಿಯದಲ್ಲಿ, ಸಾಲಾವ್ ಪಟ್ಟಣದ ಬಳಿಯಿರುವ ಆರ್ಟೆಲೆಕ್ನ ಹಳ್ಳಿಯಲ್ಲಿ ಜನಿಸಿದೆ. ನಾವು ಸುಂದರವಾದ ಪರಿಸರಗಳಲ್ಲಿ ವಾಸಿಸಿದೆವು. ನೀರೂ ಗಾಳಿಯೂ ಶುದ್ಧವಾಗಿತ್ತು. ನಮ್ಮ ಸ್ವಂತ ಆಹಾರವನ್ನು ನಾವೇ ಬೆಳೆಸಿದೆವು; ಇದರಿಂದ ಭೌತಿಕವಾಗಿ ನಮಗೆ ಯಾವ ಕೊರತೆಯೂ ಇರಲಿಲ್ಲ. ನನ್ನ ಆರಂಭದ ವರ್ಷಗಳಲ್ಲಿ, ದೇಶವು ಶಾಂತಿಯಿಂದಿತ್ತು.
ಜನರು ತುಂಬ ಧಾರ್ಮಿಕ ಮನೋಭಾವದವರಾಗಿದ್ದರು. ವಾಸ್ತವದಲ್ಲಿ ನಮ್ಮ ಕುಟುಂಬವೇ ಮೂರು ವಿಭಿನ್ನ ಧರ್ಮಗಳಿಗೆ ಸೇರಿತ್ತು. ನನ್ನ ಅಜ್ಜಿಯರಲ್ಲಿ ಒಬ್ಬರು ಆರ್ತೊಡಾಕ್ಸ್ ಕ್ಯಾಥೊಲಿಕ್, ಇನ್ನೊಬ್ಬರು ಆ್ಯಡ್ವೆಂಟಿಸ್ಟ್ ಪಂಥದವರಾಗಿದ್ದರು, ಮತ್ತು ನನ್ನ ಹೆತ್ತವರು ಬ್ಯಾಪ್ಟಿಸ್ಟ್ ಪಂಥದವರಾಗಿದ್ದರು. ಅವರ ಧರ್ಮಗಳಲ್ಲಿ ಯಾವ ಧರ್ಮದೊಂದಿಗೂ ನಾನು ಸಮ್ಮತಿಸದಿದ್ದ ಕಾರಣದಿಂದ, ನಾನು ಒಬ್ಬ ನಾಸ್ತಿಕಳಾಗುವೆನೆಂದು ನನ್ನ ಕುಟುಂಬವು ಹೇಳಿತು. ‘ಒಬ್ಬನೇ ದೇವರಿರುವುದಾದರೆ, ಒಂದೇ ಧರ್ಮವು ಇರಬೇಕು—ಒಂದು ಕುಟುಂಬದಲ್ಲಿ ಮೂರು ಧರ್ಮಗಳಲ್ಲ’ ಎಂದು ನಾನು ಆಲೋಚಿಸಿದೆ.
ಧರ್ಮದಲ್ಲಿ ನಾನು ನೋಡಿದ ವಿಷಯಗಳು, ನನಗೆ ಬೇಸರಹುಟ್ಟಿಸಿದವು. ಉದಾಹರಣೆಗಾಗಿ, ಚರ್ಚಿಗೆ ಸಲ್ಲತಕ್ಕದ್ದನ್ನು ವಸೂಲಿಮಾಡಲಿಕ್ಕಾಗಿ ಪಾದ್ರಿಯು ಮನೆಗಳಿಗೆ ಭೇಟಿನೀಡಿದನು. ಕೊಡಲಿಕ್ಕೆ ಜನರಲ್ಲಿ ಹಣವಿಲ್ಲದಿದ್ದಾಗ, ಅದಕ್ಕೆ ಬದಲಿಯಾಗಿ ಅವನು ಅವರಲ್ಲಿದ್ದ ಒಳ್ಳೆಯ ಉಣ್ಣೆಯ ಕಂಬಳಿಗಳನ್ನು ತೆಗೆದುಕೊಂಡುಹೋದನು. ಕ್ಯಾಥೊಲಿಕ್ ಚರ್ಚಿನಲ್ಲಿ, ಅಜ್ಜಿಯು ಪ್ರಾರ್ಥಿಸಲಿಕ್ಕಾಗಿ ಮೇರಿಯ ಚಿತ್ರದ ಮುಂದೆ ಮೊಣಕಾಲೂರುವುದನ್ನು ನಾನು ನೋಡಿದೆ. ‘ಒಂದು ಚಿತ್ರಕ್ಕೇಕೆ ಪ್ರಾರ್ಥಿಸಬೇಕು?’ ಎಂದು ನಾನು ಆಲೋಚಿಸಿದೆ.
ಕ್ಷೋಭೆಯ ಸಮಯಗಳು
ಸಾಲ ಪಾವತಿಮಾಡಲು ಹಣವನ್ನು ಸಂಪಾದಿಸಲಿಕ್ಕಾಗಿ, 1912ರಲ್ಲಿ ತಂದೆಯವರು ಅಮೆರಿಕಕ್ಕೆ ಹೋದರು. ಸ್ವಲ್ಪ ಸಮಯದಲ್ಲಿಯೇ ಯುದ್ಧವು ತಲೆದೋರಿತು. ಮತ್ತು ನಮ್ಮ ಹಳ್ಳಿಯ ಪುರುಷರು ಸೈನಿಕರಾದರು—ಸ್ತ್ರೀಯರು, ಮಕ್ಕಳು ಹಾಗೂ ವೃದ್ಧಪುರುಷರು ಮಾತ್ರವೇ ಉಳಿದರು. ಸ್ವಲ್ಪ ಕಾಲದ ವರೆಗೆ ನಮ್ಮ ಹಳ್ಳಿಯು ಹಂಗೇರಿಯನರ ಆಳಿಕೆಗೆ ಒಳಗಾಯಿತಾದರೂ, ತದನಂತರ ರೊಮೇನಿಯದ ಸೈನಿಕರು ಹಿಂದಿರುಗಿ, ಹಳ್ಳಿಯನ್ನು ಪುನಃ ವಶಪಡಿಸಿಕೊಂಡರು. ಆ ಕೂಡಲೆ ಅಲ್ಲಿಂದ ಹೊರಡುವಂತೆ ಅವರು ನಮಗೆ ಆಜ್ಞೆಯನ್ನಿತ್ತರು. ಆದರೆ, ಸಾಮಾನು ಸರಂಜಾಮುಗಳನ್ನು ಹಾಗೂ ಚಿಕ್ಕ ಮಕ್ಕಳನ್ನು ಎತ್ತಿನ ಗಾಡಿಗೆ ಹತ್ತಿಸುವ ತರಾತುರಿ ಹಾಗೂ ಗಲಿಬಿಲಿಯಲ್ಲಿ, ನನ್ನನ್ನು ಹಿಂದೆಬಿಟ್ಟುಹೋದರು. ಐದು ಮಕ್ಕಳಲ್ಲಿ ನಾನೇ ಹಿರಿಯವಳಾಗಿದ್ದೆ ನೋಡಿ.
ನಾನು ಪಕ್ಕದ ಮನೆಯವನ ಬಳಿಗೆ ಓಡಿದೆ—ಆ ವೃದ್ಧನು ಹಿಂದೆ ಉಳಿದಿದ್ದನು. ಅವನು ಹೇಳಿದ್ದು: “ಮನೆಗೆ ಹೋಗು. ಬಾಗಿಲುಗಳಿಗೆ ಬೀಗ ಹಾಕಿಕೊ, ಮತ್ತು ಯಾರನ್ನೂ ಒಳಗೆ ಬಿಡಬೇಡ.” ಆ ಕೂಡಲೆ ನಾನು ಆ ಮಾತುಗಳನ್ನು ಪಾಲಿಸಿದೆ. ಮನೆಯನ್ನು ಬಿಟ್ಟುಹೋಗುವ ತರಾತುರಿಯಲ್ಲಿ, ಬಿಟ್ಟುಹೋಗಿದ್ದಂತಹ ಸ್ವಲ್ಪ ಚಿಕನ್ ಸೂಪ್ ಹಾಗೂ ಮಸಾಲೆ ತುಂಬಿದ ಕೋಸನ್ನು ನಾನು ತಿಂದಾದ ಬಳಿಕ, ನನ್ನ ಹಾಸಿಗೆಯ ಬಳಿ ಮೊಣಕಾಲೂರಿ ಪ್ರಾರ್ಥಿಸಿದೆ. ಸ್ವಲ್ಪ ಸಮಯದಲ್ಲೇ ನಾನು ಗಾಢವಾಗಿ ನಿದ್ರಿಸಿಬಿಟ್ಟೆ.
ನಾನು ನನ್ನ ಕಣ್ಣುಗಳನ್ನು ತೆರೆದಾಗ, ಹಗಲುಬೆಳಕಿತ್ತು. “ಓ ದೇವರೇ ನಿನಗೆ ಉಪಕಾರ! ನಾನು ಬದುಕಿದ್ದೇನೆ!” ಎಂದು ನಾನು ಹೇಳಿದೆ. ಮನೆಯ ಗೋಡೆಗಳೆಲ್ಲಾ ಸಿಡಿಗುಂಡಿನ ತೂತುಗಳಿಂದ ತುಂಬಿಹೋಗಿದ್ದವು; ಏಕೆಂದರೆ ಇಡೀ ರಾತ್ರಿ ಗುಂಡುಹಾರಿಸುವಿಕೆಯು ಮುಂದುವರಿದಿತ್ತು. ಮುಂದಿನ ಹಳ್ಳಿಯಲ್ಲಿ, ನಾನು ಅವರೊಂದಿಗೆ ಇರಲಿಲ್ಲವೆಂಬುದು ತಾಯಿಗೆ ಗೊತ್ತಾದಾಗ, ಅವರು ಯುವ ಸುರ್ಸ್ ರೋಮೋಶೀಅನ್ನನ್ನು ಕಳುಹಿಸಿದರು. ಅವನು ನನ್ನನ್ನು ಕಂಡುಹಿಡಿದು, ನನ್ನ ಕುಟುಂಬದೊಂದಿಗೆ ನನ್ನನ್ನು ಪುನರೈಕ್ಯಗೊಳಿಸಿದನು. ಬೇಗನೆ ನಾವು ನಮ್ಮ ಸ್ವಗ್ರಾಮಕ್ಕೆ ಹಿಂದಿರುಗಿ, ಅಲ್ಲಿ ಜೀವಿಸುವುದನ್ನು ಮುಂದುವರಿಸಸಾಧ್ಯವಾಯಿತು.
ಬೈಬಲ್ ಸತ್ಯಕ್ಕಾಗಿರುವ ನನ್ನ ಬಯಕೆ
ನಾನು ಒಬ್ಬ ಬ್ಯಾಪ್ಟಿಸ್ಟ್ ಆಗಿ ದೀಕ್ಷಾಸ್ನಾನಿತಳಾಗಬೇಕೆಂದು ನನ್ನ ತಾಯಿ ಬಯಸಿದರು. ಆದರೆ ನಾನು ಹಾಗೆ ಮಾಡಲು ಬಯಸಲಿಲ್ಲ, ಏಕೆಂದರೆ ಪ್ರೀತಿಪೂರ್ಣನಾದ ದೇವರೊಬ್ಬನು, ಜನರನ್ನು ಸದಾಕಾಲ ನರಕದಲ್ಲಿ ಸುಡುವನೆಂಬುದನ್ನು ನಾನು ನಂಬಲಾರದವಳಾಗಿದ್ದೆ. ವಿವರಿಸಲು ಪ್ರಯತ್ನಿಸುತ್ತಾ ತಾಯಿ ಹೇಳಿದ್ದು: “ಒಳ್ಳೇದು, ಜನರು ಕೆಟ್ಟವರಾಗಿರುವಲ್ಲಿ ಮಾತ್ರ ದೇವರು ಹಾಗೆ ಮಾಡುತ್ತಾನೆ.” ಆದರೆ ನಾನು ಪ್ರತ್ಯುತ್ತರಿಸಿದ್ದು: “ಅವರು ಕೆಟ್ಟವರಾಗಿರುವಲ್ಲಿ, ಅವರನ್ನು ಕೊಂದುಬಿಡಿರಿ, ಅವರನ್ನು ಪೀಡಿಸಬೇಡಿರಿ. ನಾನು ಒಂದು ನಾಯನ್ನಾಗಲಿ ಬೆಕ್ಕನ್ನಾಗಲಿ ಪೀಡಿಸಲಾರೆ.”
ನಾನು 14 ವರ್ಷ ಪ್ರಾಯದವಳಾಗಿದ್ದಾಗ, ಒಂದು ಸುಂದರವಾದ ವಸಂತಕಾಲದ ದಿನದಂದು, ನಾನು ಹಸುಗಳನ್ನು ಮೇವಿಗಾಗಿ ಹೊಡೆದುಕೊಂಡು ಹೋಗುವಂತೆ ತಾಯಿ ಹೇಳಿದ್ದನ್ನು ಜ್ಞಾಪಿಸಿಕೊಳ್ಳುತ್ತೇನೆ. ಅರಣ್ಯಮಯವಾದ ಹಿನ್ನೆಲೆಯಿರುವ ಒಂದು ನದಿಯ ಪಕ್ಕದಲ್ಲಿದ್ದ ಹುಲ್ಲಿನ ಮೇಲೆ ನಾನು ಮಲಗಿಕೊಂಡಿದ್ದಾಗ, ಆಕಾಶದ ಕಡೆಗೆ ನೋಡಿ ನಾನು ಹೇಳಿದ್ದು: “ದೇವರೇ, ನೀನು ಅಲ್ಲಿದ್ದೀ ಎಂದು ನನಗೆ ಗೊತ್ತು; ಆದರೆ ನನಗೆ ಈ ಧರ್ಮಗಳಲ್ಲಿ ಒಂದು ಧರ್ಮವೂ ಇಷ್ಟವಿಲ್ಲ. ನಿನಗೆ ಒಂದು ಒಳ್ಳೆಯ ಧರ್ಮವು ಇರಲೇಬೇಕು.”
ದೇವರು ನನ್ನ ಪ್ರಾರ್ಥನೆಯನ್ನು ಕೇಳಿಸಿಕೊಂಡನೆಂದು ನಾನು ನಿಜವಾಗಿಯೂ ನಂಬುತ್ತೇನೆ. ಏಕೆಂದರೆ 1917ರ ಅದೇ ಬೇಸಗೆಕಾಲದಲ್ಲಿ, ಇಬ್ಬರು ಬೈಬಲ್ ವಿದ್ಯಾರ್ಥಿಗಳು (ಆಗ ಯೆಹೋವನ ಸಾಕ್ಷಿಗಳು ಹಾಗೆ ಕರೆಯಲ್ಪಡುತ್ತಿದ್ದರು) ನಮ್ಮ ಹಳ್ಳಿಗೆ ಬಂದರು. ಅವರು ಕಾಲ್ಪೋರ್ಟರ್ಗಳು, ಅಥವಾ ಪೂರ್ಣ ಸಮಯದ ಶುಶ್ರೂಷಕರಾಗಿದ್ದರು. ಮತ್ತು ಬ್ಯಾಪ್ಟಿಸ್ಟ್ ಚರ್ಚಿನಲ್ಲಿ ಒಂದು ವಿಧ್ಯುಕ್ತವಾದ ಸಂಸ್ಕಾರವು ನಡೆಸಲ್ಪಡುತ್ತಿದ್ದಾಗ, ಅವರು ಅಲ್ಲಿಗೆ ಬಂದರು.
ಬೈಬಲ್ ಸತ್ಯವು ರೊಮೇನಿಯದಲ್ಲಿ ಹಬ್ಬುತ್ತದೆ
ಕೆಲವಾರು ವರ್ಷಗಳ ಹಿಂದೆ, 1911ರಲ್ಲಿ, ಅಮೆರಿಕದಲ್ಲಿ ಬೈಬಲ್ ವಿದ್ಯಾರ್ಥಿಗಳಾಗಿ ಪರಿಣಮಿಸಿದ್ದ ಕಾರ್ಲ್ ಸಾಬೋ ಮತ್ತು ಯೋಸಿಫ್ ಕಿಸ್, ಬೈಬಲ್ ಸತ್ಯವನ್ನು ಪರಿಚಯಿಸಲಿಕ್ಕಾಗಿ ರೊಮೇನಿಯಕ್ಕೆ ಹಿಂದಿರುಗಿದರು. ಅವರು, ನಮ್ಮ ಹಳ್ಳಿಯಿಂದ 160ಕ್ಕಿಂತಲೂ ಕಡಿಮೆ ಕಿಲೊಮೀಟರುಗಳಷ್ಟು ಆಗ್ನೇಯ ಭಾಗದಲ್ಲಿದ್ದ ಟೀಅರ್ಗು-ಮೂರೆಶ್ನಲ್ಲಿ ನೆಲೆಸಿದರು. ಕೆಲವೇ ವರ್ಷಗಳೊಳಗೆ, ಅಕ್ಷರಶಃ ನೂರಾರು ಮಂದಿ ರಾಜ್ಯ ಸಂದೇಶಕ್ಕೆ ಪ್ರತಿಕ್ರಿಯಿಸಿ, ಕ್ರೈಸ್ತ ಶುಶ್ರೂಷೆಯನ್ನು ಕೈಕೊಂಡರು.—ಮತ್ತಾಯ 24:14.
ಒಳ್ಳೇದು, ಆ ಇಬ್ಬರು ಬೈಬಲ್ ವಿದ್ಯಾರ್ಥಿಗಳು, ಆರ್ಟೆಲೆಕ್ನ ನಮ್ಮ ಹಳ್ಳಿಯಲ್ಲಿರುವ ಬ್ಯಾಪ್ಟಿಸ್ಟ್ ಚರ್ಚಿಗೆ ಬಂದಾಗ, ಕೇವಲ 18 ವರ್ಷ ಪ್ರಾಯದವನಾಗಿದ್ದ ಸುರ್ಸ್ ರೋಮೋಶೀಅನ್, ವಿಧ್ಯುಕ್ತ ಸಂಸ್ಕಾರವನ್ನು ನಡೆಸುತ್ತಿದ್ದನು; ಮತ್ತು ರೋಮಾಪುರ 12:1ರ ಅರ್ಥವನ್ನು ವಿವರಿಸಲು ಪ್ರಯತ್ನಿಸುತ್ತಿದ್ದನು. ಕೊನೆಗೆ, ಯುವ ಕಾಲ್ಪೋರ್ಟರ್ಗಳಲ್ಲಿ ಒಬ್ಬನು ಎದ್ದುನಿಂತು ಹೇಳಿದ್ದು: “ಸಹೋದರರೇ, ಸ್ನೇಹಿತರೇ, ಇಲ್ಲಿ ಅಪೊಸ್ತಲ ಪೌಲನು ನಮಗೆ ಏನನ್ನು ಹೇಳಲು ಪ್ರಯತ್ನಿಸುತ್ತಿದ್ದಾನೆ?”
ನಾನು ಅದನ್ನು ಕೇಳಿಸಿಕೊಂಡಾಗ, ಎಷ್ಟು ಭಾವೋದ್ರೇಕಗೊಂಡಿದ್ದೆ! ‘ಬೈಬಲನ್ನು ವಿವರಿಸುವ ವಿಧವು ಈ ಪುರುಷರಿಗೆ ತಿಳಿದಿರಲೇಬೇಕು’ ಎಂದು ನಾನು ಯೋಚಿಸಿದೆ. ಆದರೆ ಅಲ್ಲಿ ಉಪಸ್ಥಿತರಿದ್ದ ಅಧಿಕಾಂಶ ಮಂದಿ ಕೂಗಿಹೇಳಿದ್ದು: “ಸುಳ್ಳು ಪ್ರವಾದಿಗಳು! ನೀವು ಯಾರು ಎಂಬುದು ನಮಗೆ ಗೊತ್ತಿದೆ!” ಅದರ ಹಿಂದೆಯೇ ಗಲಭೆಯುಂಟಾಯಿತು. ಆದರೆ ಆಗಲೇ ಸುರ್ಸ್ನ ತಂದೆ ಎದ್ದುನಿಂತು ಹೇಳಿದ್ದು: “ನೀವೆಲ್ಲರೂ ಬಾಯಿಮುಚ್ಚಿ! ಇದು ಯಾವ ರೀತಿಯ ಆತ್ಮ—ಅಮಲೇರಿರುವುದರಿಂದ ಬರುವಂತಹ ರೀತಿಯ ಆತ್ಮವೊ? ಈ ಪುರುಷರು ನಮಗೆ ಏನನ್ನಾದರೂ ಹೇಳಲಿಕ್ಕಿರುವುದಾದರೆ, ಮತ್ತು ನೀವು ಅದಕ್ಕೆ ಕಿವಿಗೊಡಲು ಬಯಸದಿರುವುದಾದರೆ, ನಾನು ಅವರನ್ನು ನನ್ನ ಮನೆಗೆ ಆಮಂತ್ರಿಸುತ್ತೇನೆ. ಬರಲು ಬಯಸುವ ಯಾರಿಗಾದರೂ ಸ್ವಾಗತವಿದೆ.”
ಭಾವೋದ್ರೇಕಗೊಂಡವಳಾಗಿ, ನಾನು ಮನೆಗೆ ಓಡಿಹೋಗಿ, ಅಲ್ಲಿ ಸಂಭವಿಸಿದ್ದ ವಿಷಯವನ್ನು ತಾಯಿಗೆ ತಿಳಿಸಿದೆ. ರೋಮೋಶೀಅನ್ನ ಮನೆಗೆ ಹೋಗುವ ಆಮಂತ್ರಣವನ್ನು ಸ್ವೀಕರಿಸಿದವರಲ್ಲಿ ನಾನೂ ಒಬ್ಬಳಾಗಿದ್ದೆ. ಆ ಸಂಜೆ, ಉರಿಯುತ್ತಿರುವ ನರಕವಿಲ್ಲ ಎಂಬುದನ್ನು ಬೈಬಲಿನಿಂದ ಕಲಿಯಲು ಹಾಗೂ ನನ್ನ ಸ್ವಂತ ರೊಮೇನಿಯನ್ ಬೈಬಲಿನಲ್ಲಿ ಯೆಹೋವ ಎಂಬ ದೇವರ ಹೆಸರನ್ನು ನೋಡಲು ನಾನೆಷ್ಟು ರೋಮಾಂಚನಗೊಂಡಿದ್ದೆ! ಪ್ರತಿ ಆದಿತ್ಯವಾರ ನಮಗೆ ಕಲಿಸಲಿಕ್ಕಾಗಿ, ಒಬ್ಬ ಬೈಬಲ್ ವಿದ್ಯಾರ್ಥಿಯು ರೋಮೋಶೀಅನ್ನ ಮನೆಗೆ ಭೇಟಿನೀಡುವಂತೆ ಆ ಕಾಲ್ಪೋರ್ಟರ್ಗಳು ಏರ್ಪಡಿಸಿದರು. ಮುಂದಿನ ಬೇಸಗೆಯಲ್ಲಿ, 15 ವರ್ಷ ಪ್ರಾಯದಲ್ಲಿ, ನಾನು ಯೆಹೋವನಿಗೆ ನನ್ನ ಸಮರ್ಪಣೆಯ ಸಂಕೇತವಾಗಿ ದೀಕ್ಷಾಸ್ನಾನ ಮಾಡಿಸಿಕೊಂಡೆ.
ಸಕಾಲದಲ್ಲಿ, ಕಾರ್ಯತಃ ಇಡೀ ಪ್ರೋಡನ್ ಕುಟುಂಬವೂ ರೋಮೋಶೀಅನ್ ಕುಟುಂಬವೂ, ಬೈಬಲ್ ಸತ್ಯವನ್ನು ಅಂಗೀಕರಿಸಿ, ತಮ್ಮ ಜೀವಿತಗಳನ್ನು ಯೆಹೋವನಿಗೆ ಸಮರ್ಪಿಸಿತು. ನಮ್ಮ ಹಳ್ಳಿಯ ಇನ್ನೂ ಅನೇಕರು ತಮ್ಮ ಜೀವಿತಗಳನ್ನು ಸಮರ್ಪಿಸಿಕೊಂಡರು. ಈ ಹಿಂದೆ ಯಾರ ಮನೆಯು ಬ್ಯಾಪ್ಟಿಸ್ಟ್ ಚರ್ಚಾಗಿ ಉಪಯೋಗಿಸಲ್ಪಟ್ಟಿತ್ತೋ ಆ ವಿವಾಹಿತ ದಂಪತಿಗಳೂ ಇದರಲ್ಲಿ ಸೇರಿದ್ದರು. ತದನಂತರ ಅವರು ಅದನ್ನು, ಅಭ್ಯಾಸಕ್ಕಾಗಿ ಬೈಬಲ್ ವಿದ್ಯಾರ್ಥಿಗಳು ಭೇಟಿಮಾಡುವಂತಹ ಒಂದು ಸ್ಥಳವಾಗಿ ಮಾರ್ಪಡಿಸಿದರು. ಆಸುಪಾಸಿನ ಹಳ್ಳಿಗಳಲ್ಲಿ ಶಾಸ್ತ್ರೀಯ ಸತ್ಯವು ತೀವ್ರಗತಿಯಿಂದ ಹಬ್ಬಿತು, ಮತ್ತು 1920ರಷ್ಟಕ್ಕೆ ರೊಮೇನಿಯದಲ್ಲಿ ಸುಮಾರು 1,800 ರಾಜ್ಯ ಪ್ರಚಾರಕರಿದ್ದರು!
ಅಮೆರಿಕಕ್ಕೆ
ನಾವು ಕಲಿತಿದ್ದ ವಿಷಯಗಳನ್ನು ನನ್ನ ತಂದೆಯೊಂದಿಗೆ—ಪೇಟರ್ ಪ್ರೋಡನ್—ಹಂಚಿಕೊಳ್ಳಲು ನಾವು ಆತುರರಾಗಿದ್ದೆವು. ಆದರೆ, ಆಶ್ಚರ್ಯಕರವಾಗಿ, ನಾವು ಅವರಿಗೆ ಪತ್ರ ಬರೆಯುವುದಕ್ಕೆ ಮುಂಚೆ, ತಾನು ಯೆಹೋವನ ದೀಕ್ಷಾಸ್ನಾನಿತ ಸೇವಕನಾಗಿದ್ದೇನೆಂದು ಅವರು ನಮಗೆ ಬರೆದ ಒಂದು ಪತ್ರವು ಬಂದು ತಲಪಿತು. ಅವರು ಆ್ಯಕ್ರನ್, ಒಹಾಯೊದಲ್ಲಿನ ಬೈಬಲ್ ವಿದ್ಯಾರ್ಥಿಗಳೊಂದಿಗೆ ಅಭ್ಯಾಸಿಸಿದ್ದರು, ಮತ್ತು ಅಮೆರಿಕದಲ್ಲಿ ನಾವೆಲ್ಲರೂ ಅವರೊಂದಿಗೆ ಜೊತೆಗೂಡುವುದನ್ನು ಅವರು ಬಯಸಿದರು. ಆದಾಗ್ಯೂ, ರೊಮೇನಿಯವನ್ನು ಬಿಟ್ಟುಬರಲು ತಾಯಿಯವರು ನಿರಾಕರಿಸಿದರು. ಆದುದರಿಂದ, 1921ರಲ್ಲಿ, ತಂದೆ ನನಗೆ ಕಳುಹಿಸಿದ್ದ ಹಣವನ್ನು ಉಪಯೋಗಿಸಿಕೊಂಡು, ನಾನು ಆ್ಯಕ್ರನ್ನಲ್ಲಿ ಅವರೊಂದಿಗೆ ಜೊತೆಗೂಡಿದೆ. ಈಗಾಗಲೇ ಒಂದು ವರ್ಷಕ್ಕೆ ಮೊದಲು ಸುರ್ಸ್ ರೋಮೋಶೀಅನ್ನೂ ಅವನ ಅಣ್ಣನೂ ಅಮೆರಿಕಕ್ಕೆ ವಲಸೆಹೋಗಿದ್ದರು.
ನಾನು ನ್ಯೂ ಯಾರ್ಕಿನ ಎಲಿಸ್ ಐಲೆಂಡ್ಗೆ ಹಡಗಿನಲ್ಲಿ ಆಗಮಿಸಿದಾಗ, ವಲಸೆಗಾರರ ಅಧಿಕಾರಿಗೆ, ಔರೇಲ್ಯ ಎಂಬ ನನ್ನ ಹೆಸರನ್ನು ಇಂಗ್ಲಿಷ್ ಭಾಷೆಗೆ ಹೇಗೆ ಭಾಷಾಂತರಿಸಬೇಕೆಂಬುದು ತಿಳಿದಿರಲಿಲ್ಲ. ಆದುದರಿಂದ ಅವನು ಹೇಳಿದ್ದು: “ನಿನ್ನ ಹೆಸರು ಗೋಲ್ಡಿ ಎಂದಿರಲಿ.” ಅಂದಿನಿಂದ ನನ್ನ ಹೆಸರು ಅದೇ ಆಗಿದೆ. ತದನಂತರ ಸ್ವಲ್ಪದರಲ್ಲಿಯೇ, 1921ರ ಮೇ 1ರಂದು, ಸುರ್ಸ್ ರೋಮೋಶೀಅನ್ ಮತ್ತು ನಾನು ವಿವಾಹಿತರಾದೆವು. ಸುಮಾರು ಒಂದು ವರ್ಷದ ನಂತರ, ತಂದೆ ರೊಮೇನಿಯಕ್ಕೆ ಹಿಂದಿರುಗಿದರು ಮತ್ತು 1925ರಲ್ಲಿ, ನನ್ನ ತಂಗಿಯಾದ ಮೇರಿಯನ್ನು ಆ್ಯಕ್ರನ್ಗೆ ಕರೆದುಕೊಂಡುಬಂದರು. ಬಳಿಕ ತಾಯಿಯೊಂದಿಗೆ ಹಾಗೂ ಕುಟುಂಬದ ಉಳಿದವರೊಂದಿಗೆ ಇರಲಿಕ್ಕಾಗಿ, ತಂದೆಯವರು ರೊಮೇನಿಯಕ್ಕೆ ಹಿಂದಿರುಗಿದರು.
ಅಮೆರಿಕದಲ್ಲಿ ನಮ್ಮ ಆರಂಭದ ಶುಶ್ರೂಷೆ
ಸುರ್ಸ್ ಯೆಹೋವನ ತುಂಬಾ ನಿಷ್ಠಾವಂತರಾದ, ಅಚಲ ಶ್ರದ್ಧೆಯುಳ್ಳ ಸೇವಕರಾಗಿದ್ದರು. 1922 ಮತ್ತು 1932ರ ನಡುವೆ, ನಾವು ಮುದ್ದಾದ ನಾಲ್ಕು ಮಂದಿ ಪುತ್ರಿಯ—ಎಸ್ಟರ್, ಆ್ಯನ್, ಗೋಲ್ಡಿ ಎಲೀಸಬೆತ್, ಮತ್ತು ಐರೀನ್—ರನ್ನು ಪಡೆಯುವ ಮೂಲಕ ಆಶೀರ್ವದಿಸಲ್ಪಟ್ಟೆವು. ಆ್ಯಕ್ರನ್ನಲ್ಲಿ ಒಂದು ರೊಮೇನಿಯನ್ ಸಭೆಯು ಆರಂಭಿಸಲ್ಪಟ್ಟಿತ್ತು, ಮತ್ತು ಆರಂಭದಲ್ಲಿ ಕೂಟಗಳು ನಮ್ಮ ಮನೆಯಲ್ಲಿ ನಡೆಸಲ್ಪಡುತ್ತಿದ್ದವು. ಕ್ರಮೇಣವಾಗಿ, ಪ್ರತಿ ಆರು ತಿಂಗಳುಗಳಿಗೊಮ್ಮೆ, ನ್ಯೂ ಯಾರ್ಕ್ನ ಬ್ರೂಕ್ಲಿನ್ನಲ್ಲಿರುವ ಬೈಬಲ್ ವಿದ್ಯಾರ್ಥಿಗಳ ಮುಖ್ಯ ಕಾರ್ಯಾಲಯದಿಂದ ಒಬ್ಬ ಪ್ರತಿನಿಧಿಯು ನಮ್ಮ ಸಭೆಯನ್ನು ಸಂದರ್ಶಿಸಿ, ನಮ್ಮೊಂದಿಗೆ ಉಳಿದುಕೊಂಡರು.
ಅನೇಕ ಆದಿತ್ಯವಾರಗಳಂದು ನಾವು ಇಡೀ ದಿನವನ್ನು ಸಾರುವ ಕೆಲಸಕ್ಕಾಗಿ ಮೀಸಲಾಗಿಟ್ಟೆವು. ನಾವು ನಮ್ಮ ಪುಸ್ತಕದ ಬ್ಯಾಗುಗಳನ್ನು, ಊಟವನ್ನು ಪ್ಯಾಕ್ಮಾಡಿಕೊಂಡು, ಹುಡುಗಿಯರನ್ನು ನಮ್ಮ ಮಾಡೆಲ್ ಟಿ ಫೋರ್ಡ್ ವಾಹನದಲ್ಲಿ ಕರೆದೊಯ್ದು, ಆ ದಿನವನ್ನು ಗ್ರಾಮೀಣ ಕ್ಷೇತ್ರದಲ್ಲಿ ಸಾರುತ್ತಾ ಕಳೆದೆವು. ತದನಂತರ ಸಂಜೆ ನಾವು ಕಾವಲಿನಬುರುಜು ಅಭ್ಯಾಸಕ್ಕೆ ಹಾಜರಾದೆವು. ನಮ್ಮ ಹುಡುಗಿಯರು ಸಾರುವ ಕೆಲಸವನ್ನು ಪ್ರೀತಿಸಲಾರಂಭಿಸಿದರು. 1931ರಲ್ಲಿ ಬೈಬಲ್ ವಿದ್ಯಾರ್ಥಿಗಳು, ಯೆಹೋವನ ಸಾಕ್ಷಿಗಳೆಂಬ ತಮ್ಮ ವೈಶಿಷ್ಟ್ಯಸೂಚಕ ಹೆಸರನ್ನು ಸ್ವೀಕರಿಸಿದಾಗ, ಕಾಲಂಬಸ್, ಒಹಾಯೋದಲ್ಲಿ ನಾನು ಉಪಸ್ಥಿತಳಿದ್ದೆ.
ನನಗೆ ಅಗತ್ಯವಿದ್ದ ತಿದ್ದುಪಾಟು
ಕೆಲವಾರು ವರ್ಷಗಳ ನಂತರ, ಆಗ ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಅಧ್ಯಕ್ಷರಾಗಿದ್ದ ಜೋಸೆಫ್ ಎಫ್. ರಥರ್ಫರ್ಡರೊಂದಿಗೆ ನಾನು ಕೋಪಿಸಿಕೊಂಡೆ. ಒಬ್ಬ ಹೊಸ ಸಾಕ್ಷಿಯು, ಸಹೋದರ ರಥರ್ಫರ್ಡರು ತನ್ನ ಸಮಸ್ಯೆಗೆ ಕಿವಿಗೊಡದೆ, ತನ್ನೊಂದಿಗೆ ಅನ್ಯಾಯದಿಂದ ವ್ಯವಹರಿಸಿದ್ದರೆಂದು ಭಾವಿಸಿದನು. ಸಹೋದರ ರಥರ್ಫರ್ಡರದೇ ತಪ್ಪೆಂದು ನಾನು ಭಾವಿಸಿದೆ. ಒಳ್ಳೇದು, ಒಂದು ಆದಿತ್ಯವಾರ ನನ್ನ ತಂಗಿ ಮೇರಿ ಹಾಗೂ ಅವಳ ಗಂಡ ಡ್ಯಾನ್ ಪೆಸ್ಟ್ರೂಈ, ನಮ್ಮನ್ನು ಭೇಟಿಮಾಡಲು ಬಂದರು. ಮಧ್ಯಾಹ್ನದೂಟದ ಬಳಿಕ ಡ್ಯಾನ್ ಹೇಳಿದ್ದು: “ಕೂಟಕ್ಕೆ ಹೋಗಲು ಸಿದ್ಧರಾಗೋಣ.”
“ನಾವು ಇನ್ನುಮುಂದೆ ಕೂಟಗಳಿಗೆ ಹೋಗುವುದಿಲ್ಲ” ಎಂದು ನಾನು ಹೇಳಿದೆ. “ನಮಗೆ ಸಹೋದರ ರಥರ್ಫರ್ಡರ ಮೇಲೆ ತುಂಬ ಕೋಪವಿದೆ.”
ಡ್ಯಾನ್ ತನ್ನ ಕೈಗಳನ್ನು ಹಿಂದಕ್ಕೆ ಕಟ್ಟಿ, ನಿಧಾನವಾಗಿ ಹಿಂದಕ್ಕೂ ಮುಂದಕ್ಕೂ ಹೆಜ್ಜೆಹಾಕುತ್ತಾ ತದನಂತರ ಹೇಳಿದ್ದು: “ನೀನು ದೀಕ್ಷಾಸ್ನಾನ ಪಡೆದುಕೊಂಡಾಗ ನಿನಗೆ ಸಹೋದರ ರಥರ್ಫರ್ಡರ ಪರಿಚಯವಿತ್ತೊ?”
“ಖಂಡಿತವಾಗಿಯೂ ಇಲ್ಲ” ಎಂದು ನಾನು ಉತ್ತರಿಸಿದೆ. “ನಾನು ರೊಮೇನಿಯದಲ್ಲಿ ದೀಕ್ಷಾಸ್ನಾನ ಪಡೆದುಕೊಂಡೆನೆಂಬುದು ನಿನಗೆ ಗೊತ್ತು.”
“ನೀನು ದೀಕ್ಷಾಸ್ನಾನ ಪಡೆದುಕೊಂಡದ್ದೇಕೆ?” ಎಂದು ಅವರು ನನ್ನನ್ನು ಕೇಳಿದರು.
“ಏಕೆಂದರೆ ಯೆಹೋವನು ಸತ್ಯ ದೇವರಾಗಿದ್ದಾನೆ ಎಂಬುದನ್ನು ನಾನು ಕಲಿತುಕೊಂಡೆ ಮತ್ತು ಆತನ ಸೇವೆಮಾಡಲಿಕ್ಕಾಗಿ ನಾನು ನನ್ನ ಜೀವಿತವನ್ನು ಸಮರ್ಪಿಸಿಕೊಳ್ಳಲು ಬಯಸಿದೆ” ಎಂದು ನಾನು ಉತ್ತರಿಸಿದೆ.
“ಅದನ್ನು ಎಂದಿಗೂ ಮರೆಯಬೇಡ!” ಎಂದು ಅವರು ಉತ್ತರಿಸಿದರು. “ಸಹೋದರ ರಥರ್ಫರ್ಡ್ ಸತ್ಯವನ್ನು ಬಿಟ್ಟುಹೋಗುವುದಾದರೆ ನೀನು ಕೂಡ ಸತ್ಯವನ್ನು ಬಿಟ್ಟುಹೋಗುವಿಯೊ?”
“ಎಂದಿಗೂ ಇಲ್ಲ!” ಎಂದು ನಾನು ಹೇಳಿದೆ. ಆಗ ನನಗೆ ಜ್ಞಾನೋದಯವಾಯಿತು. ಮತ್ತು ನಾನು ಹೇಳಿದ್ದು: “ಎಲ್ಲರೂ ಕೂಟಕ್ಕೆ ಸಿದ್ಧರಾಗಿ.” ಅಂದಿನಿಂದ ನಾವು ಕೂಟಕ್ಕೆ ಹಾಜರಾಗುವುದನ್ನು ನಿಲ್ಲಿಸಿಲ್ಲ. ನನ್ನ ಭಾವನ ಪ್ರೀತಿಪೂರ್ಣ ತಿದ್ದುಪಾಟಿಗಾಗಿ ನಾನು ಯೆಹೋವನಿಗೆ ಎಷ್ಟು ಆಭಾರಿಯಾಗಿದ್ದೆ!
ಆರ್ಥಿಕ ಕುಸಿತದ ಸಮಯವನ್ನು ನಿಭಾಯಿಸುವುದು
1930ಗಳ ಆರ್ಥಿಕ ಕುಸಿತದ ಸಮಯವು ತುಂಬ ಕಷ್ಟಕರ ಅವಧಿಯಾಗಿತ್ತು. ಒಂದು ದಿನ ಸುರ್ಸ್ ಕೆಲಸದಿಂದ ಬಹಳ ಖಿನ್ನರಾಗಿ ಮನೆಗೆ ಬಂದರು. ರಬ್ಬರ್ ಕಾರ್ಖಾನೆಯಲ್ಲಿನ ತನ್ನ ಉದ್ಯೋಗದಿಂದ ತಾನು ತೆಗೆದುಹಾಕಲ್ಪಟ್ಟಿದ್ದೇನೆಂದು ಅವರು ನನಗೆ ಹೇಳಿದರು. “ಯೋಚಿಸಬೇಡಿ, ಸ್ವರ್ಗದಲ್ಲಿ ನಮಗೆ ಒಬ್ಬ ಐಶ್ವರ್ಯವಂತನಾದ ತಂದೆಯಿದ್ದಾನೆ, ಮತ್ತು ಆತನು ನಮ್ಮ ಕೈಬಿಡುವುದಿಲ್ಲ” ಎಂದು ನಾನು ಹೇಳಿದೆ.
ಅದೇ ದಿನ ಅಣಬೆಗಳ ಒಂದು ದೊಡ್ಡ ಬುಟ್ಟಿಯನ್ನು ಹೊತ್ತುತರುತ್ತಿದ್ದ ಸ್ನೇಹಿತನೊಬ್ಬನನ್ನು ಸುರ್ಸ್ ಸಂಧಿಸಿದರು. ತನ್ನ ಸ್ನೇಹಿತನು ಅವುಗಳನ್ನು ಎಲ್ಲಿಂದ ಆರಿಸಿತಂದಿದ್ದನೆಂಬುದನ್ನು ಸುರ್ಸ್ ತಿಳಿದುಕೊಂಡಾಗ, ಅವರು ಒಂದು ಕೊಳಗ ಅಣಬೆಗಳೊಂದಿಗೆ ಮನೆಗೆ ಬಂದರು. ಅನಂತರ ಅವರು ನಮ್ಮಲ್ಲಿದ್ದ ಕೊನೆಯ ಮೂರು ಡಾಲರುಗಳನ್ನು, ಚಿಕ್ಕ ಬುಟ್ಟಿಗಳನ್ನು ಖರೀದಿಸಲು ಖರ್ಚುಮಾಡಿದರು. “ಹಾಲಿನ ಅಗತ್ಯವಿರುವ ಚಿಕ್ಕ ಹುಡುಗಿಯರು ನಮಗಿರುವಾಗ, ನೀವು ಆ ರೀತಿ ಹಣವನ್ನು ಹೇಗೆ ಉಪಯೋಗಿಸಸಾಧ್ಯವಿದೆ?” ಎಂದು ನಾನು ಕೇಳಿದೆ.
“ಯೋಚಿಸಬೇಡ, ನಾನು ಹೇಳಿದ ಹಾಗೆ ಮಾಡು ಅಷ್ಟೇ” ಎಂದು ಅವರು ಉತ್ತರಿಸಿದರು. ಮುಂದಿನ ಕೆಲವು ವಾರಗಳ ವರೆಗೆ, ನಮ್ಮ ಮನೆಯಲ್ಲಿ, ಅಣಬೆಗಳನ್ನು ಸ್ವಚ್ಛಗೊಳಿಸಿ, ಪ್ಯಾಕ್ಮಾಡುವ ಒಂದು ಚಿಕ್ಕ ಕಾರ್ಖಾನೆಯಿತ್ತು. ನಾವು ಅವುಗಳನ್ನು ಹೆಚ್ಚು ದೊಡ್ಡ ರೆಸ್ಟೊರಂಟ್ಗಳಿಗೆ ಮಾರಿ, ದಿನವೊಂದಕ್ಕೆ 30ರಿಂದ 40 ಡಾಲರುಗಳಷ್ಟು ಲಾಭವನ್ನು ಗಳಿಸಿದೆವು. ಆಗ ಇದು ನಮಗೆ ಬಹಳ ಮೊತ್ತದ ಹಣವಾಗಿತ್ತು. ನಮಗೆ ತನ್ನ ಹುಲ್ಲುಗಾವಲಿನಿಂದ ಅಣಬೆಗಳನ್ನು ಆರಿಸಿಕೊಳ್ಳುವಂತೆ ಅನುಮತಿ ಕೊಟ್ಟ ರೈತನು, ತಾನು 25 ವರ್ಷಗಳಿಂದ ಅಲ್ಲಿ ಜೀವಿಸಿದ್ದೆನಾದರೂ, ಅಷ್ಟೊಂದು ಅಣಬೆಗಳನ್ನು ಎಂದೂ ನೋಡಿರಲಿಲ್ಲವೆಂದು ಹೇಳಿದನು. ಬೇಗನೆ ರಬ್ಬರ್ ಕಾರ್ಖಾನೆಯು ಸುರ್ಸ್ನನ್ನು ಪುನಃ ಕೆಲಸಕ್ಕೆ ಸೇರಿಕೊಳ್ಳುವಂತೆ ಕರೆನೀಡಿತು.
ನಮ್ಮ ನಂಬಿಕೆಯನ್ನು ಕಾಪಾಡಿಕೊಳ್ಳುವುದು
1943ರಲ್ಲಿ ನಾವು, ಕ್ಯಾಲಿಫಾರ್ನಿಯದ ಲಾಸ್ ಆ್ಯಂಜಲೀಸ್ಗೆ ಸ್ಥಳಾಂತರಿಸಿದೆವು. ಮತ್ತು ನಾಲ್ಕು ವರ್ಷಗಳ ಬಳಿಕ ನಾವು ಎಲ್ಸನೋರ್ನಲ್ಲಿ ನೆಲೆಸಿದೆವು. ಅಲ್ಲಿ ನಾವು ಒಂದು ಕಿರಾಣಿ ಅಂಗಡಿಯನ್ನು ತೆರೆದೆವು, ಮತ್ತು ನಮ್ಮ ಇಡೀ ಕುಟುಂಬವು ಅದರಲ್ಲಿ ಸರದಿ ಪ್ರಕಾರ ಕೆಲಸ ಮಾಡಿತು. ಆ ಸಮಯದಲ್ಲಿ, ಎಲ್ಸನೋರ್ ಸುಮಾರು 2,000 ಜನರಿಂದ ಕೂಡಿದ ಒಂದು ಚಿಕ್ಕ ಪಟ್ಟಣವಾಗಿತ್ತು; ಮತ್ತು ನಮ್ಮ ಕ್ರೈಸ್ತ ಕೂಟಗಳಿಗಾಗಿ ನಾವು ಇನ್ನೊಂದು ಪಟ್ಟಣಕ್ಕೆ ಹೋಗಲು, 30 ಕಿಲೊಮೀಟರುಗಳಷ್ಟು ದೂರ ಪ್ರಯಾಣಿಸಬೇಕಿತ್ತು. 1950ರಲ್ಲಿ ಎಲ್ಸನೋರ್ನಲ್ಲಿಯೇ ಒಂದು ಚಿಕ್ಕ ಸಭೆಯು ರಚಿಸಲ್ಪಟ್ಟದ್ದನ್ನು ನೋಡಲು ನಾನೆಷ್ಟು ಸಂತೋಷಿತಳಾಗಿದ್ದೆ! ಈಗ ಅದೇ ಕ್ಷೇತ್ರದಲ್ಲಿ 13 ಸಭೆಗಳಿವೆ.
1950ರಲ್ಲಿ, ನಮ್ಮ ಪುತ್ರಿಯಾದ ಗೋಲ್ಡಿ ಎಲೀಸಬೆತ್ (ಈಗ ಅವಳು ಹೆಚ್ಚಿನ ಜನರಿಗೆ ಬೆತ್ ಎಂಬ ಹೆಸರಿನಿಂದಲೇ ಪ್ರಸಿದ್ಧ), ನ್ಯೂ ಯಾರ್ಕಿನ ಸೌತ್ ಲ್ಯಾನ್ಸಿಂಗ್ನಲ್ಲಿ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನಿಂದ ಪದವಿಪಡೆದುಕೊಂಡು, ವೆನಸ್ವೇಲಕ್ಕೆ ಮಿಷನೆರಿಯಾಗಿ ನೇಮಿಸಲ್ಪಟ್ಟಳು. 1955ರಲ್ಲಿ ತನ್ನ ಗಂಡನು ಸರ್ಕಿಟ್ ಕೆಲಸದಲ್ಲಿ ಒಬ್ಬ ಸಂಚರಣ ಶುಶ್ರೂಷಕನೋಪಾದಿ ಸೇವೆಮಾಡಲು ಆಮಂತ್ರಿಸಲ್ಪಟ್ಟದ್ದಕ್ಕಾಗಿ, ನಮ್ಮ ಕಿರಿಯ ಮಗಳಾದ ಐರೀನಳು ಸಂತೋಷಗೊಂಡಿದ್ದಳು. ತದನಂತರ 1961ರಲ್ಲಿ, ಅವರಿಬ್ಬರೂ ಸೌತ್ ಲ್ಯಾನ್ಸಿಂಗ್ನಲ್ಲಿ ರಾಜ್ಯ ಶುಶ್ರೂಷಾ ಶಾಲೆಗೆ ಹಾಜರಾದ ಬಳಿಕ, ಥಾಯ್ಲೆಂಡ್ಗೆ ಕಳುಹಿಸಲ್ಪಟ್ಟರು. ಕೆಲವೊಮ್ಮೆ ನನಗೆ ನನ್ನ ಪುತ್ರಿಯರು ನನ್ನ ಬಳಿಯಿಲ್ಲದ ಕೊರತೆ ಎಷ್ಟರ ಮಟ್ಟಿಗಾಯಿತೆಂದರೆ, ನಾನು ಅಳುತ್ತಿದ್ದೆ. ಆದರೆ ತದನಂತರ ನಾನು ಆಲೋಚಿಸಿದೆ, ‘ಅವರು ಅದನ್ನೇ ಮಾಡುವಂತೆ ನಾನು ಬಯಸಿದೆನಲ್ಲವೇ.’ ಆದುದರಿಂದ ನಾನು ಆ ಕೂಡಲೆ ನನ್ನ ಪುಸ್ತಕದ ಬ್ಯಾಗನ್ನು ತೆಗೆದುಕೊಂಡು, ಸಾರುವ ಕೆಲಸದಲ್ಲಿ ತೊಡಗುತ್ತಿದ್ದೆ. ನಾನು ಯಾವಾಗಲೂ ಸಂತೋಷದಿಂದ ಮನೆಗೆ ಹಿಂದಿರುಗಿದೆ.
1966ರಲ್ಲಿ ನನ್ನ ಪ್ರೀತಿಯ ಗಂಡನಾದ ಸುರ್ಸ್ಗೆ ಮಿದುಳುಲಕ್ವ ಹೊಡೆಯಿತು. ಆರೋಗ್ಯ ಸಮಸ್ಯೆಗಳ ಕಾರಣಕ್ಕಾಗಿ ವೆನಸ್ವೇಲದಿಂದ ಹಿಂದಿರುಗಿದ್ದ ಬೆತ್, ಅವರ ಶುಶ್ರೂಷೆ ಮಾಡಲಿಕ್ಕಾಗಿ ಸಹಾಯ ಮಾಡಿದಳು. ಮುಂದಿನ ವರ್ಷ ಸುರ್ಸ್ ಮೃತಪಟ್ಟರು. ಅವರು ಯೆಹೋವನಿಗೆ ನಂಬಿಗಸ್ತರಾಗಿ ಉಳಿದಿದ್ದು, ತಮ್ಮ ಸ್ವರ್ಗೀಯ ಬಹುಮಾನವನ್ನು ಪಡೆದುಕೊಂಡಿದ್ದರೆಂಬ ವಾಸ್ತವಾಂಶದಿಂದ ನಾನು ಸಾಂತ್ವನಗೊಂಡೆ. ತದನಂತರ ಬೆತ್, ಎಲ್ಲಿ ರಾಜ್ಯ ಪ್ರಚಾರಕರ ಅಗತ್ಯವು ಹೆಚ್ಚಾಗಿತ್ತೋ ಆ ಸ್ಪೆಯ್ನ್ನಲ್ಲಿ ಸೇವೆಮಾಡಲಿಕ್ಕಾಗಿ ಹೋದಳು. ನನ್ನ ಹಿರಿಯ ಮಗಳಾದ ಎಸ್ಟರ್, ಕ್ಯಾನ್ಸರ್ನಿಂದ ಅಸ್ವಸ್ಥಳಾಗಿ, 1977ರಲ್ಲಿ ಮೃತಪಟ್ಟಳು. ಮತ್ತು 1984ರಲ್ಲಿ ಆ್ಯನ್ ಲುಕೇಮಿಯದಿಂದ ಮೃತಪಟ್ಟಳು. ಪ್ರತಿಯೊಬ್ಬರೂ ತಮ್ಮ ಜೀವಮಾನದುದ್ದಕ್ಕೂ ಯೆಹೋವನ ನಂಬಿಗಸ್ತ ಸೇವಕರಾಗಿದ್ದರು.
ಆ್ಯನ್ಳ ಮರಣದ ಸಮಯದಷ್ಟಕ್ಕೆ, ಬೆತ್ ಹಾಗೂ ಐರೀನರು ತಮ್ಮ ವಿದೇಶೀ ಸಾರುವ ನೇಮಕಗಳಿಂದ ಹಿಂದಿರುಗಿದ್ದರು. ತಮ್ಮ ಅಕ್ಕಂದಿರ ಶುಶ್ರೂಷೆ ಮಾಡುವುದರಲ್ಲಿ ಅವರು ಸಹಾಯ ಮಾಡಿದ್ದರು, ಮತ್ತು ನಾವೆಲ್ಲರೂ ಬಹಳ ದುಃಖಿಸಿದೆವು. ಸ್ವಲ್ಪ ಕಾಲ ಕಳೆದ ಬಳಿಕ, ನಾನು ನನ್ನ ಹುಡುಗಿಯರಿಗೆ ಹೇಳಿದ್ದು: “ಇಷ್ಟು ಸಾಕು! ನಾವು ಅಮೂಲ್ಯವಾದ ಬೈಬಲ್ ವಾಗ್ದಾನಗಳಿಂದ ಇತರರಿಗೆ ಸಾಂತ್ವನ ನೀಡಿದ್ದೇವೆ. ಈಗ ನಾವು ನಮ್ಮನ್ನು ಸಾಂತ್ವನಗೊಳಿಸಲ್ಪಡಲು ನೀಡಿಕೊಳ್ಳಬೇಕು. ಯೆಹೋವನನ್ನು ಸೇವಿಸುವುದರಲ್ಲಿರುವ ಆನಂದವನ್ನು ನಮ್ಮಿಂದ ಕಸಿದುಕೊಳ್ಳಲು ಸೈತಾನನು ಬಯಸುತ್ತಾನೆ, ಆದರೆ ಅವನು ನಮ್ಮಿಂದ ಆನಂದವನ್ನು ಕಸಿದುಕೊಳ್ಳುವಂತೆ ನಾವು ಬಿಡಸಾಧ್ಯವಿಲ್ಲ.”
ರೊಮೇನಿಯದಲ್ಲಿ ನಮ್ಮ ನಂಬಿಗಸ್ತ ಕುಟುಂಬ
1970ರಲ್ಲಿ, ನನ್ನ ತಂಗಿ ಮೇರಿ ಹಾಗೂ ನಾನು, ರೊಮೇನಿಯದಲ್ಲಿರುವ ನಮ್ಮ ಕುಟುಂಬವನ್ನು ಸಂದರ್ಶಿಸಲಿಕ್ಕಾಗಿ ಆ ಸ್ಮರಣಾರ್ಥಕ ಪ್ರಯಾಣವನ್ನು ಕೈಕೊಂಡೆವು. ನಮ್ಮ ಸಹೋದರಿಯರಲ್ಲಿ ಒಬ್ಬಳು ಮೃತಪಟ್ಟಿದ್ದಳು, ಆದರೆ ನಮ್ಮ ತಮ್ಮನಾದ ಜಾನ್ ಹಾಗೂ ನಮ್ಮ ತಂಗಿಯಾದ ಲಾಡೋವೀಕಾಳನ್ನು ಭೇಟಿಮಾಡಲು ನಾವು ಶಕ್ತರಾದೆವು. ಅವರು ಈಗಲೂ ಆರ್ಟೆಲೆಕ್ನ ಹಳ್ಳಿಯಲ್ಲಿ ವಾಸಿಸುತ್ತಾರೆ. ನಮ್ಮ ಭೇಟಿಯ ಸಮಯದಷ್ಟಕ್ಕೆ, ತಂದೆತಾಯಿಗಳು ಮೃತಪಟ್ಟಿದ್ದರು; ಅವರು ಯೆಹೋವನಿಗೆ ನಂಬಿಗಸ್ತರಾಗಿ ಉಳಿದಿದ್ದರು. ತಂದೆಯವರು ಸಭೆಯ ಆಧಾರಸ್ತಂಭವಾಗಿದ್ದರೆಂದು ಅನೇಕರು ನಮಗೆ ಹೇಳಿದರು. ರೊಮೇನಿಯದಲ್ಲಿರುವ ಅವರ ಮರಿಮಕ್ಕಳಲ್ಲೂ ಕೆಲವರು ಈಗ ಸಾಕ್ಷಿಗಳಾಗಿದ್ದಾರೆ. ನನ್ನ ಗಂಡನ ಕಡೆಯ ಕುಟುಂಬದಲ್ಲಿ, ಬೈಬಲ್ ಸತ್ಯದಲ್ಲಿ ಸ್ಥಿರಚಿತ್ತರಾಗಿ ಉಳಿದಿದ್ದ ಅನೇಕ ಸಂಬಂಧಿಕರನ್ನು ಸಹ ನಾವು ಭೇಟಿಮಾಡಿದೆವು.
1970ರಲ್ಲಿ, ರೊಮೇನಿಯವು ನಿಕೊಲೈ ಚೌಶೆಸ್ಕೂನ ಕ್ರೂರ ಕಮ್ಯೂನಿಸ್ಟ್ ಆಳಿಕೆಯ ಕೆಳಗಿತ್ತು, ಮತ್ತು ಯೆಹೋವನ ಸಾಕ್ಷಿಗಳು ಭಯಂಕರವಾಗಿ ಹಿಂಸಿಸಲ್ಪಟ್ಟರು. ನನ್ನ ಸಹೋದರನಾದ ಜಾನ್ನ ಮಗನಾದ ಪ್ಲೋರೆ, ಹಾಗೂ ನನ್ನ ಇತರ ಸಂಬಂಧಿಕರು, ಕೂಟಶಿಬಿರಗಳಲ್ಲಿ ಅನೇಕ ವರ್ಷಗಳನ್ನು ಕಳೆದರು; ಅದು ಅವರ ಕ್ರೈಸ್ತ ನಂಬಿಕೆಯ ಕಾರಣದಿಂದಲೇ ಆಗಿತ್ತು, ಮತ್ತು ನನ್ನ ಗಂಡನ ಅಣ್ಣನ ಮಗನಾದ ಗಾಬಾರ್ ರೋಮೋಶೀಅನ್ ಸಹ ಅದನ್ನು ಅನುಭವಿಸಿದನು. ನ್ಯೂ ಯಾರ್ಕ್ನಲ್ಲಿರುವ ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯಕ್ಕೆ ಕಾಗದಪತ್ರಗಳನ್ನು ಮುಟ್ಟಿಸುವ ಕೆಲಸವು ನಮಗೆ ಕೊಡಲ್ಪಟ್ಟಿದ್ದಾಗ, ನಾವು ದೇಶದಿಂದ ಸುರಕ್ಷಿತವಾಗಿ ಹೊರಗೆಹೋಗಿದ್ದೇವೆ ಎಂಬುದನ್ನು ತಾವು ಕೇಳಿಸಿಕೊಳ್ಳುವ ವರೆಗೆ, ತಾವು ಕಾತುರರೂ ಚಿಂತಿತರೂ ಆಗಿರುವೆವೆಂದು ರೊಮೇನಿಯದ ಸಹೋದರರು ಹೇಳಿದುದರಲ್ಲಿ ಆಶ್ಚರ್ಯವೇನಿರಲಿಲ್ಲ!
ನಮ್ಮ ವೀಸಾಗಳು ಮುಗಿದುಹೋಗಿದ್ದವು ಎಂಬುದನ್ನು ನಾವು ಗ್ರಹಿಸಿದಾಗ, ನಾವು ಆರ್ಟೆಲೆಕ್ನಲ್ಲಿರುವ ಸರಕಾರಿ ಕಛೇರಿಗೆ ಹೋದೆವು. ಅದು ಶುಕ್ರವಾರ ಮಧ್ಯಾಹ್ನವಾಗಿತ್ತು, ಮತ್ತು ಒಬ್ಬನೇ ಒಬ್ಬ ಅಧಿಕಾರಿಯು ಕೆಲಸದ ಮೇಲಿದ್ದನು. ನಾವು ಯಾರನ್ನು ಭೇಟಿಮಾಡುತ್ತಿದ್ದೆವು ಹಾಗೂ ನಮ್ಮ ಸೋದರಳಿಯನು ಕೂಟಶಿಬಿರದಲ್ಲಿದ್ದನು ಎಂಬುದನ್ನು ತಿಳಿದುಕೊಂಡು, ಅವನು ಹೇಳಿದ್ದು: “ಸ್ತ್ರೀಯರೇ, ಇಲ್ಲಿಂದ ಹೊರಟುಹೋಗಿ!”
“ಆದರೆ ಈ ದಿನ ಇಲ್ಲಿಂದ ಹೊರಡುವ ಟ್ರೈನ್ ಇಲ್ಲ” ಎಂದು ನನ್ನ ತಂಗಿ ಉತ್ತರಿಸಿದಳು.
“ಪರವಾಗಿಲ್ಲ” ಎಂದು ಅವನು ಅವಸರದಿಂದ ಹೇಳಿದನು. “ಬಸ್ಸಿನಲ್ಲಿಯಾದರೂ ಹೋಗಿ, ಟ್ರೈನಿನಲ್ಲಿಯಾದರೂ ಹೋಗಿ, ಟ್ಯಾಕ್ಸಿಯಲ್ಲಿಯಾದರೂ ಹೋಗಿ, ನಡೆದುಕೊಂಡಾದರೂ ಹೋಗಿ. ನಿಮ್ಮಿಂದಾದಷ್ಟು ಬೇಗನೆ ಇಲ್ಲಿಂದ ಹೊರಟುಹೋಗಿ!”
ನಾವು ಅಲ್ಲಿಂದ ಹೊರಡಲು ಆರಂಭಿಸಿದಾಗ, ನಮ್ಮನ್ನು ಪುನಃ ಹಿಂದಕ್ಕೆ ಕರೆದು, ಅನಿಗದಿತವಾದ ಮಿಲಿಟರಿ ಟ್ರೈನೊಂದು ಸಂಜೆ 6:00 ಗಂಟೆಗೆ ಬರುತ್ತದೆ ಎಂದು ತಿಳಿಸಲಾಯಿತು. ಅದು ಎಷ್ಟು ದೈವಾನುಗ್ರಹವಾಗಿ ಪರಿಣಮಿಸಿತು! ನಿಗದಿತವಾಗಿ ಬರುವ ಟ್ರೈನೊಂದರಲ್ಲಿ, ನಮ್ಮ ಕಾಗದಪತ್ರಗಳನ್ನು ಆಗಿಂದಾಗ್ಗೆ ಪರಿಶೀಲಿಸುವ ಸಾಧ್ಯತೆಯಿತ್ತು. ಆದರೆ ಈ ಟ್ರೈನು ಮಿಲಿಟರಿ ಸಿಬ್ಬಂದಿಯನ್ನು ಸಾಗಿಸುತ್ತಿದ್ದುದರಿಂದಲೂ ಅದರಲ್ಲಿ ಹತ್ತಿದ ಇಬ್ಬರೇ ಅಯೋಧರು ನಾವಾಗಿದ್ದುದರಿಂದಲೂ, ಯಾರೊಬ್ಬರೂ ನಮ್ಮ ಪಾಸ್ಪೋರ್ಟ್ಗಳನ್ನು ನೋಡಲಿಕ್ಕಾಗಿ ಕೇಳಲಿಲ್ಲ. ನಾವು ಕೆಲವು ಅಧಿಕಾರಿಗಳ ಅಜ್ಜಿಯರಾಗಿದ್ದೆವೆಂದು ಅವರು ಊಹಿಸಿದ್ದಿರಲೂಬಹುದು.
ಮರುದಿನ ಬೆಳಗ್ಗೆ ನಾವು ಟೀಮಿಶವಾರಕ್ಕೆ ಬಂದು ಮುಟ್ಟಿದೆವು, ಮತ್ತು ಒಬ್ಬ ಸಂಬಂಧಿಕನ ಸ್ನೇಹಿತನೊಬ್ಬನ ಸಹಾಯದಿಂದ, ನಾವು ನಮ್ಮ ವೀಸಾಗಳನ್ನು ಪಡೆದುಕೊಳ್ಳಲು ಶಕ್ತರಾದೆವು. ಮಾರನೆಯ ದಿನ ನಾವು ದೇಶವನ್ನು ಬಿಟ್ಟುಹೋಗಿದ್ದೆವು. ರೊಮೇನಿಯದಲ್ಲಿರುವ ನಮ್ಮ ನಿಷ್ಠಾವಂತ ಕ್ರೈಸ್ತ ಸಹೋದರ ಸಹೋದರಿಯರ ಅಚ್ಚುಮೆಚ್ಚಿನ, ಅವಿಸ್ಮರಣೀಯ ಸವಿನೆನಪುಗಳನ್ನು ನಾವು ನಮ್ಮೊಂದಿಗೆ ತಂದಿದ್ದೆವು.
ನಾವು ರೊಮೇನಿಯಕ್ಕೆ ಭೇಟಿನೀಡಿದ ನಂತರದ ವರ್ಷಗಳಲ್ಲಿ, ಕಬ್ಬಿಣದ ಪರದೆಯ ಹಿಂದಿನಿಂದ ನಡೆಸಲ್ಪಡುವ ಸಾರುವ ಚಟುವಟಿಕೆಯ ಕುರಿತಾಗಿ ನಮಗೆ ಸ್ವಲ್ಪ ವಿವರಗಳು ಕೇಳಿಬಂದವು. ಆದರೂ, ಯಾವುದೇ ಸನ್ನಿವೇಶವು ಬಂದರೂ, ನಮ್ಮ ಕ್ರೈಸ್ತ ಸಹೋದರ ಸಹೋದರಿಯರು, ದೇವರಿಗೆ ನಿಷ್ಠಾವಂತರಾಗಿ ಉಳಿಯುವರೆಂಬ ದೃಢವಿಶ್ವಾಸ ನಮಗಿತ್ತು. ಮತ್ತು ಖಂಡಿತವಾಗಿಯೂ ಅವರು ನಿಷ್ಠಾವಂತರಾಗಿ ಉಳಿದಿದ್ದಾರೆ! 1990ರ ಎಪ್ರಿಲ್ ತಿಂಗಳಿನಲ್ಲಿ, ರೊಮೇನಿಯದಲ್ಲಿನ ಯೆಹೋವನ ಸಾಕ್ಷಿಗಳು, ಒಂದು ಧಾರ್ಮಿಕ ಸಂಸ್ಥೆಯೋಪಾದಿ ಶಾಸನಬದ್ಧವಾಗಿ ಅಂಗೀಕರಿಸಲ್ಪಟ್ಟರೆಂಬುದನ್ನು ತಿಳಿಯುವುದು ಎಷ್ಟು ಸಂತೋಷದಾಯಕವಾಗಿತ್ತು! ಮುಂದಿನ ಬೇಸಗೆಕಾಲದಲ್ಲಿ, ರೊಮೇನಿಯದಲ್ಲಿ ನಡೆಸಲ್ಪಟ್ಟ ಅಧಿವೇಶನಗಳ ಕುರಿತಾದ ವರದಿಗಳನ್ನು ಕೇಳಿ ನಾವು ಹರ್ಷಗೊಂಡೆವು. ಅಷ್ಟೇಕೆ, ಎಂಟು ನಗರಗಳಲ್ಲಿ 34,000ಕ್ಕಿಂತಲೂ ಹೆಚ್ಚು ಮಂದಿ ಹಾಜರಾದರು, ಮತ್ತು 2,260 ಮಂದಿ ದೀಕ್ಷಾಸ್ನಾನವನ್ನು ಪಡೆದುಕೊಂಡರು! ಈಗ ರೊಮೇನಿಯದಲ್ಲಿನ ಸಾರುವ ಕೆಲಸದಲ್ಲಿ 35,000ಕ್ಕಿಂತಲೂ ಹೆಚ್ಚು ಮಂದಿ ಪಾಲ್ಗೊಳ್ಳುತ್ತಿದ್ದಾರೆ, ಮತ್ತು ಕಳೆದ ವರ್ಷ ಕ್ರಿಸ್ತನ ಮರಣದ ಜ್ಞಾಪಕಕ್ಕೆ, 86,034 ಮಂದಿ ಹಾಜರಾದರು.
ಸತ್ಯವು ನನಗೆ ಇನ್ನೂ ಅಮೂಲ್ಯವಾಗಿದೆ
ಕೆಲವು ವರ್ಷಗಳ ವರೆಗೆ, ಜ್ಞಾಪಕದಲ್ಲಿನ ಕುರುಹುಗಳಲ್ಲಿ ಭಾಗಿಯಾಗುವುದನ್ನು ನಾನು ನಿಲ್ಲಿಸಿದೆ. ಬಹಳ ಅರ್ಹರಾಗಿದ್ದರೂ ಕುರುಹುಗಳಲ್ಲಿ ಭಾಗಿಯಾಗದ ಸಹೋದರರನ್ನು ನಾನು ಗಮನಿಸಿ, ಹೀಗೆ ತರ್ಕಿಸಿದೆ: ‘ಇತರರು ಇಷ್ಟು ನಿರರ್ಗಳ ಭಾಷಣಕರ್ತರಾಗಿರುವಾಗ, ಸ್ವರ್ಗದಲ್ಲಿ ತನ್ನ ಮಗನೊಂದಿಗೆ ಸಹಬಾಧ್ಯಸ್ಥಳಾಗುವ ಸುಯೋಗವನ್ನು ಯೆಹೋವನು ನನಗೇಕೆ ದಯಪಾಲಿಸುತ್ತಾನೆ?’ ಆದರೆ ನಾನು ಭಾಗಿಯಾಗದಿದ್ದಾಗ, ನನಗೆ ಬಹಳ ಶಾಂತಿಭಂಗವಾದ ಅನಿಸಿಕೆಯಾಯಿತು. ಅದು ನಾನು ಏನನ್ನೋ ತಿರಸ್ಕರಿಸುತ್ತಿರುವಂತಿತ್ತು. ತುಂಬ ಅಭ್ಯಾಸಮಾಡಿ, ಪ್ರಾರ್ಥನಾಪೂರ್ವಕವಾದ ಬಿನ್ನಹವನ್ನು ಮಾಡಿದ ಬಳಿಕ, ನಾನು ಪುನಃ ಭಾಗಿಯಾಗಲು ಆರಂಭಿಸಿದೆ. ನನ್ನ ಶಾಂತಿ ಹಾಗೂ ಸಂತೋಷಗಳು ಮತ್ತೆ ಮರಳಿವೆ, ಮತ್ತು ಅವುಗಳು ಎಂದಿಗೂ ನನ್ನ ಕೈಬಿಟ್ಟಿಲ್ಲ.
ಈಗ ನನಗೆ ಓದಲು ಕಾಣಿಸುವುದಿಲ್ಲವಾದರೂ, ಪ್ರತಿ ದಿನ ನಾನು ಬೈಬಲ್ ಹಾಗೂ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಆಡಿಯೋ ಟೇಪ್ಗಳನ್ನು ಆಲಿಸುತ್ತೇನೆ. ನಾನು ಇನ್ನೂ ಸಾರುವ ಕೆಲಸದಲ್ಲಿ ಪಾಲ್ಗೊಳ್ಳುತ್ತೇನೆ. ಸಾಮಾನ್ಯವಾಗಿ ಪ್ರತಿ ತಿಂಗಳು ನಾನು 60ರಿಂದ 100 ಪತ್ರಿಕೆಗಳನ್ನು ನೀಡುತ್ತೇನೆ; ಆದರೆ ಕಳೆದ ಎಪ್ರಿಲ್ ತಿಂಗಳಿನಲ್ಲಿ ನಮಗೆ ಎಚ್ಚರ! ಪತ್ರಿಕೆಯ ವಿಶೇಷ ಕಾರ್ಯಾಚರಣೆಯಿದ್ದಾಗ, ನಾನು 323 ಪತ್ರಿಕೆಗಳನ್ನು ನೀಡಿದೆ. ನನ್ನ ಪುತ್ರಿಯರ ಸಹಾಯದಿಂದ, ನಾನು ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿನ ಭಾಗಗಳನ್ನೂ ಮಾಡಲೂ ಶಕ್ತಳಾಗಿದ್ದೇನೆ. ನಾನು ಇತರರಿಗೆ ಪ್ರೋತ್ಸಾಹ ನೀಡುತ್ತಾ ಮುಂದುವರಿಯಲು ಸಾಧ್ಯವಾಗಿರುವುದಕ್ಕಾಗಿ ನಾನು ಸಂತೋಷಿಸುತ್ತೇನೆ. ರಾಜ್ಯ ಸಭಾಗೃಹದಲ್ಲಿ ಬಹುಮಟ್ಟಿಗೆ ಪ್ರತಿಯೊಬ್ಬರೂ ನನ್ನನ್ನು ಅಜ್ಜಿ ಎಂದು ಕರೆಯುತ್ತಾರೆ.
ಯೆಹೋವನಿಗೆ ಸಲ್ಲಿಸಿದ ಸುಮಾರು 79 ವರ್ಷಗಳ ಸಮರ್ಪಿತ ಸೇವೆಯ ಕಡೆಗೆ ಹಿನ್ನೋಟ ಬೀರುವಾಗ, ಯೆಹೋವನು ತನ್ನ ಅಮೂಲ್ಯ ಸತ್ಯವನ್ನು ತಿಳಿದುಕೊಳ್ಳುವಂತೆ ಹಾಗೂ ತನ್ನ ಸೇವೆಯಲ್ಲಿ ನನ್ನ ಜೀವಿತವನ್ನು ಉಪಯೋಗಿಸುವಂತೆ ಅನುಮತಿಸಿರುವುದಕ್ಕಾಗಿ ನಾನು ಪ್ರತಿ ದಿನ ಆತನಿಗೆ ಉಪಕಾರ ಸಲ್ಲಿಸುತ್ತೇನೆ. ಈ ಕಡೆಯ ದಿವಸಗಳಲ್ಲಿ ದೇವರ ಕುರಿಸದೃಶ ಜನರ ಒಟ್ಟುಗೂಡಿಸುವಿಕೆಯನ್ನು ಮುಂತಿಳಿಸಿದ ಅದ್ಭುತಕರ ಬೈಬಲ್ ವಾಗ್ದಾನಗಳ ನೆರವೇರಿಕೆಯನ್ನು ನೋಡಲು ನಾನು ಜೀವಿಸಿರುವುದಕ್ಕೆ ನಾನು ಎಷ್ಟೋ ಕೃತಜ್ಞಳು.—ಯೆಶಾಯ 60:22; ಜೆಕರ್ಯ 8:23.
[ಪುಟ 23 ರಲ್ಲಿರುವ ಚಿತ್ರ]
ನಿಂತಿರುವವರು, ನನ್ನ ತಂಗಿ ಮೇರಿ ಮತ್ತು ತಂದೆ, ಹಾಗೂ ನಾನು, ಸುರ್ಸ್, ಮತ್ತು ನಮ್ಮ ಪುತ್ರಿಯರಾದ ಎಸ್ಟರ್ ಹಾಗೂ ಆ್ಯನ್
[ಪುಟ 24 ರಲ್ಲಿರುವ ಚಿತ್ರ]
ನನ್ನ ಪುತ್ರಿಯರಾದ ಬೆತ್ ಮತ್ತು ಐರೀನ್ ಮತ್ತು ಐರೀನಳ ಗಂಡ ಹಾಗೂ ಅವರ ಇಬ್ಬರು ಪುತ್ರರೊಂದಿಗೆ—ಇವರೆಲ್ಲರೂ ನಂಬಿಗಸ್ತಿಕೆಯಿಂದ ಯೆಹೋವನ ಸೇವೆಮಾಡುತ್ತಿದ್ದಾರೆ