ಬಿಡುಗಡೆಯು ಹತ್ತಿರವಾದಂತೆ ಧೈರ್ಯ ತಂದುಕೊಳ್ಳಿರಿ
“ನಿನ್ನನ್ನುದ್ಧರಿಸಲು [“ಬಿಡುಗಡೆಗೊಳಿಸಲು,” NW] ನಾನೇ ನಿನ್ನೊಂದಿಗಿರುವೆನು, ಇದು ಯೆಹೋವನಾದ ನನ್ನ ಮಾತು.”—ಯೆರೆಮೀಯ 1:19.
1, 2. ಮಾನವ ಕುಟುಂಬಕ್ಕೆ ಬಿಡುಗಡೆಯ ಅಗತ್ಯ ಏಕೆ ಇದೆ?
ಬಿಡುಗಡೆ! ಎಂತಹ ಸಾಂತ್ವನದಾಯಕ ಪದ! ಬಿಡುಗಡೆಗೊಳಿಸಲ್ಪಡುವುದು, ಒಂದು ಅನುಕೂಲವಲ್ಲದ, ಅಸಂತೋಷಕರ ಸನ್ನಿವೇಶದಿಂದ ಮುಕ್ತಗೊಳಿಸುವುದನ್ನು ಅರ್ಥೈಸುತ್ತದೆ. ಇದು, ಹೆಚ್ಚು ಉತ್ತಮವಾದ, ಹೆಚ್ಚು ಸಂತೋಷಕರವಾದ ಪರಿಸ್ಥಿತಿಯೊಳಗೆ ತರಲ್ಪಡುವ ಒಂದು ವಿಚಾರವನ್ನು ಒಳಗೊಳ್ಳುತ್ತದೆ.
2 ಈ ಸಮಯದಲ್ಲಿ ಮಾನವ ಕುಟುಂಬಕ್ಕೆ ಇಂತಹ ಬಿಡುಗಡೆಯ ಅಗತ್ಯ ಎಷ್ಟೊಂದಿದೆ! ಎಲ್ಲೆಡೆಯೂ ಇರುವ ಜನರು ಕಷ್ಟಕರವಾದ ಆರ್ಥಿಕ, ಸಾಮಾಜಿಕ, ಭೌತಿಕ, ಮಾನಸಿಕ, ಹಾಗೂ ಭಾವಾತ್ಮಕ ಸಮಸ್ಯೆಗಳಿಂದ ಪೀಡಿಸಲ್ಪಟ್ಟಿದ್ದಾರೆ ಹಾಗೂ ನಿರುತ್ಸಾಹಗೊಳಿಸಲ್ಪಟ್ಟಿದ್ದಾರೆ. ಲೋಕವು ಸಾಗುತ್ತಿರುವ ವಿಧದಿಂದ ಬಹಳಷ್ಟು ಜನರು ಅತೃಪ್ತರೂ ನಿರುತ್ಸಾಹಿತರೂ ಆಗಿದ್ದು, ಉತ್ತಮಸ್ಥಿತಿಗೆ ನಡೆಸುವ ಒಂದು ಬದಲಾವಣೆಯನ್ನು ಬಯಸುತ್ತಾರೆ.—ಯೆಶಾಯ 60:2; ಮತ್ತಾಯ 9:36.
“ನಿಭಾಯಿಸಲು ಕಠಿನವಾದ ಸಮಯಗಳು”
3, 4. ಬಿಡುಗಡೆಗಾಗಿ ಅತಿ ಹೆಚ್ಚಿನ ಅಗತ್ಯವು ಈಗ ಇರುವುದು ಏಕೆ?
3 ಬೇರೆ ಯಾವುದೇ ಶತಮಾನಕ್ಕಿಂತಲೂ ಈ 20ನೆಯ ಶತಮಾನವು ಹೆಚ್ಚಿನ ಕಷ್ಟಾನುಭವವನ್ನು ಅನುಭವಿಸಿರುವುದರಿಂದ, ಹಿಂದೆಂದಿಗಿಂತಲೂ ಈಗ ಬಿಡುಗಡೆಯ ಹೆಚ್ಚಿನ ಅಗತ್ಯವಿದೆ. ಇಂದು, ಒಂದು ನೂರು ಕೋಟಿಗಿಂತಲೂ ಹೆಚ್ಚಿನ ಜನರು ಕಡುಬಡತನದಲ್ಲಿ ಜೀವಿಸುತ್ತಾರೆ ಮತ್ತು ಆ ಸಂಖ್ಯೆಯು ಪ್ರತಿ ವರ್ಷ ಸುಮಾರು 2 ಕೋಟಿ 50 ಲಕ್ಷದಿಂದ ವೃದ್ಧಿಯಾಗುತ್ತದೆ. ಪ್ರತಿ ವರ್ಷ ಸುಮಾರು 1 ಕೋಟಿ 30 ಲಕ್ಷ ಮಕ್ಕಳು ನ್ಯೂನ ಪೋಷಣೆ ಇಲ್ಲವೆ ಇತರ ಬಡತನ ಸಂಬಂಧಿತ ಕಾರಣಗಳಿಂದ ಸಾಯುತ್ತಾರೆ—ದಿನಕ್ಕೆ 35,000ಕ್ಕಿಂತಲೂ ಹೆಚ್ಚು ಮಕ್ಕಳು! ಮತ್ತು ಲಕ್ಷಾಂತರ ವೃದ್ಧ ಜನರು ಹಲವಾರು ರೋಗಗಳಿಂದ ಅಕಾಲಿಕವಾಗಿ ಸಾಯುತ್ತಾರೆ.—ಲೂಕ 21:11; ಪ್ರಕಟನೆ 6:8.
4 ಯುದ್ಧಗಳು ಮತ್ತು ಪೌರ ಕಲಹಗಳು ಹೇಳಲಾಗದ ಕಷ್ಟಾನುಭವವನ್ನು ಉಂಟುಮಾಡಿವೆ. ಸರಕಾರದಿಂದಾದ ಮರಣ (ಇಂಗ್ಲಿಷ್) ಎಂಬ ಪುಸ್ತಕವು ಹೇಳುವುದೇನೆಂದರೆ, ಯುದ್ಧಗಳು, ಕುಲಸಂಬಂಧಿತ ಹಾಗೂ ಧಾರ್ಮಿಕ ಕಲಹ, ಮತ್ತು ಸರಕಾರಗಳಿಂದ ತಮ್ಮ ಸ್ವಂತ ಪ್ರಜೆಗಳ ಸಾಮೂಹಿಕ ಕೊಲೆಯು, “ಈ ಶತಮಾನದಲ್ಲಿ 20 ಕೋಟಿ 30 ಲಕ್ಷಕ್ಕಿಂತಲೂ ಹೆಚ್ಚಿನ ಜನರನ್ನು ಕೊಂದಿವೆ.” ಅದು ಇನ್ನೂ ಕೂಡಿಸಿ ಹೇಳುವುದು: “ಕೊಲ್ಲಲ್ಪಟ್ಟ ಜನರ ವಾಸ್ತವವಾದ ಸಂಖ್ಯೆಯು ಸುಮಾರು 36 ಕೋಟಿ ಇರಬಹುದು. ಅದು, ಆಧುನಿಕ ಉಗ್ರ ಮಾರಕವ್ಯಾಧಿ (ಪ್ಲೇಗ್)ಯಿಂದ ನಮ್ಮ ಜಾತಿಯು ಧ್ವಂಸಗೊಳಿಸಲ್ಪಟ್ಟಿದೆಯೋ ಎಂಬಂತಿದೆ. ಮತ್ತು ಖಂಡಿತವಾಗಿಯೂ ಅದು ಧ್ವಂಸಗೊಳಿಸಲ್ಪಟ್ಟಿದೆ, ಕೀಟಾಣುಗಳಿಂದಲ್ಲ, ಬದಲಾಗಿ ಅಧಿಕಾರದ ಮಾರಕವ್ಯಾಧಿಯಿಂದ.” ಬರಹಗಾರ ರಿಚರ್ಡ್ ಹಾರ್ವೂಡ್ ಗಮನಿಸಿದ್ದು: “ಹೋಲಿಕೆಯಲ್ಲಿ ಗತ ಶತಮಾನಗಳ ಬರ್ಬರ ಯುದ್ಧಗಳು ಓಣಿ ಜಗಳಗಳಾಗಿದ್ದವು.”—ಮತ್ತಾಯ 24:6, 7; ಪ್ರಕಟನೆ 6:4.
5, 6. ನಮ್ಮ ಸಮಯವನ್ನು ಇಷ್ಟು ಸಂಕಟಕರವಾಗಿ ಯಾವುದು ಮಾಡುತ್ತದೆ?
5 ಇತ್ತೀಚಿನ ವರ್ಷಗಳ ಸಂಕಟಕರ ಪರಿಸ್ಥಿತಿಗಳಿಗೆ, ಹಿಂಸಾತ್ಮಕ ಅಪರಾಧ, ಅನೈತಿಕತೆ, ಮತ್ತು ಕುಟುಂಬದ ಕುಸಿತದಲ್ಲಿನ ಮಹತ್ತರವಾದ ವೃದ್ಧಿಯು ಹೆಚ್ಚನ್ನು ಕೂಡಿಸುತ್ತದೆ. ಅಮೆರಿಕದ ಮಾಜಿ ಶಿಕ್ಷಣ ಸೆಕ್ರಿಟರಿ ವಿಲಿಯಮ್ ಬೆನೆಟ್ ಗಮನಿಸಿದ್ದೇನೆಂದರೆ, ಅಮೆರಿಕದ ಜನಸಂಖ್ಯೆಯು 30 ವರ್ಷಗಳಲ್ಲಿ 41 ಪ್ರತಿಶತದಿಂದ ಹೆಚ್ಚಾಯಿತಾದರೂ, ಹಿಂಸಾತ್ಮಕ ಅಪರಾಧವು 560 ಪ್ರತಿಶತ, ಜಾರಜ ಜನನಗಳು 400 ಪ್ರತಿಶತ, ವಿವಾಹ ವಿಚ್ಛೇದನಗಳು 300 ಪ್ರತಿಶತ, ಮತ್ತು ಹದಿವಯಸ್ಕ ಆತ್ಮಹತ್ಯೆಯ ಪ್ರಮಾಣವು 200 ಪ್ರತಿಶತದಿಂದ ಹೆಚ್ಚಾದವು. ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಜಾನ್ ಡೀಯೂಲ್ಯೋ ಜೂನಿಯರ್, “ಕೊಲೆ, ಆಕ್ರಮಣ, ಬಲಾತ್ಕಾರಸಂಭೋಗ, ಕಳವು, ಕನ್ನಹಾಕುವಿಕೆ ಮತ್ತು ಗಂಭೀರವಾದ ಸಾಮುದಾಯಿಕ ಕಲಹಗಳನ್ನು ಸೃಷ್ಟಿಸುವ” ಯುವ “ಸೂಪರ್ ಪರಭಕ್ಷಕರ” ಬೆಳೆಯುತ್ತಿರುವ ಪಂಕ್ತಿಗಳ ಕುರಿತು ಎಚ್ಚರಿಸಿದರು. “ಅವರು ದಸ್ತಗಿರಿಯ ಕಳಂಕ, ಬಂಧನದ ವೇದನೆಗಳು ಇಲ್ಲವೆ ಮನಸ್ಸಾಕ್ಷಿಯ ಚುಚ್ಚು ನೋವುಗಳಿಗೆ ಹೆದರುವುದಿಲ್ಲ.” ಅಮೆರಿಕದಲ್ಲಿ, ನರಹತ್ಯೆಯು ಈಗ 15ರಿಂದ 19 ವರ್ಷ ಪ್ರಾಯದ ಹದಿವಯಸ್ಕರಲ್ಲಿ, ಮರಣದ ಎರಡನೆಯ ಮುಖ್ಯ ಕಾರಣವಾಗಿದೆ. ಮತ್ತು ನಾಲ್ಕಕ್ಕಿಂತ ಕಡಿಮೆ ಪ್ರಾಯದ ಮಕ್ಕಳಲ್ಲಿ ಅನೇಕರು, ರೋಗಕ್ಕಿಂತಲೂ ಅಪಪ್ರಯೋಗದಿಂದ ಸಾಯುತ್ತಾರೆ.
6 ಇಂತಹ ಅಪರಾಧ ಹಾಗೂ ಹಿಂಸಾಚಾರವು ಒಂದು ರಾಷ್ಟ್ರಕ್ಕೆ ಸೀಮಿತವಾಗಿರುವುದಿಲ್ಲ. ಹೆಚ್ಚಿನ ದೇಶಗಳು ತದ್ರೀತಿಯ ಪ್ರವೃತ್ತಿಗಳನ್ನು ವರದಿಸುತ್ತವೆ. ಇದಕ್ಕೆ, ಲಕ್ಷಾಂತರ ಜನರನ್ನು ಭ್ರಷ್ಟಗೊಳಿಸುವ ಕಾನೂನುಬಾಹಿರ ಅಮಲೌಷಧ ಸೇವನೆಯ ಅಭಿವೃದ್ಧಿಯು ನೆರವು ನೀಡುತ್ತಿದೆ. ಆಸ್ಟ್ರೇಲಿಯದ ಸಿಡ್ನಿ ಮಾರ್ನಿಂಗ್ ಹೆರಲ್ಡ್ ಹೇಳಿದ್ದು: “ಅಂತಾರಾಷ್ಟ್ರೀಯ ಅಮಲೌಷಧ ವ್ಯಾಪಾರವು, ಶಸ್ತ್ರಾಸ್ತ್ರಗಳ ವ್ಯಾಪಾರದ ನಂತರ, ಲೋಕದ ಅತ್ಯಂತ ಲಾಭಕರ ಉದ್ಯಮಗಳಲ್ಲಿ ಎರಡನೆಯದ್ದಾಗಿದೆ.” ನೆರವು ನೀಡುತ್ತಿರುವ ಮತ್ತೊಂದು ಅಂಶವು, ಟೆಲಿವಿಷನ್ ಅನ್ನು ಈಗ ತುಂಬಿರುವ ಹಿಂಸಾಚಾರ ಹಾಗೂ ಅನೈತಿಕತೆಯಾಗಿದೆ. ಅನೇಕ ದೇಶಗಳಲ್ಲಿ, ಒಂದು ಮಗುವು ತನ್ನ 18ರ ಪ್ರಾಯವನ್ನು ತಲಪುವಷ್ಟರಲ್ಲಿ, ಟಿವಿಯಲ್ಲಿ ಸಾವಿರಾರು ಹಿಂಸಾತ್ಮಕ ಕೃತ್ಯಗಳನ್ನು ಹಾಗೂ ಅಗಣಿತ ಅನೈತಿಕ ಕೃತ್ಯಗಳನ್ನು ನೋಡಿರುತ್ತದೆ. ಅದು ಒಂದು ಪ್ರಾಮುಖ್ಯವಾದ ಭ್ರಷ್ಟಗೊಳಿಸುವ ಪ್ರಭಾವವಾಗಿದೆ, ಏಕೆಂದರೆ ನಮ್ಮ ವ್ಯಕ್ತಿತ್ವವು, ನಾವು ನಮ್ಮ ಮನಸ್ಸುಗಳನ್ನು ಕ್ರಮವಾಗಿ ಉಣಿಸುವ ವಿಷಯಗಳಿಂದ ರೂಪುಗೊಳ್ಳುತ್ತದೆ.—ರೋಮಾಪುರ 12:2; ಎಫೆಸ 5:3, 4.
7. ಬೈಬಲ್ ಪ್ರವಾದನೆಯು ಪ್ರಸ್ತುತ ಕೆಟ್ಟ ಪರಿಸ್ಥಿತಿಗಳನ್ನು ಹೇಗೆ ಮುಂತಿಳಿಸಿತು?
7 ನಮ್ಮ ಶತಮಾನದಲ್ಲಿ ಘಟನೆಗಳ ಈ ಘೋರ ಪ್ರವೃತ್ತಿಯನ್ನು ಬೈಬಲ್ ಪ್ರವಾದನೆಯು ನಿಷ್ಕೃಷ್ಟವಾಗಿ ಮುಂತಿಳಿಸಿತು. ಭೌಗೋಲಿಕ ಯುದ್ಧಗಳು, ಸಾಂಕ್ರಾಮಿಕ ರೋಗಗಳು, ಆಹಾರದ ಅಭಾವಗಳು, ಮತ್ತು ಹೆಚ್ಚುತ್ತಿರುವ ನಿಯಮರಾಹಿತ್ಯವು ಇರುವುದೆಂದು ಅದು ತಿಳಿಸಿತು. (ಮತ್ತಾಯ 24:7-12; ಲೂಕ 21:10, 11) ಮತ್ತು 2 ತಿಮೊಥೆಯ 3:1-5ರಲ್ಲಿ ದಾಖಲಿಸಲ್ಪಟ್ಟ ಪ್ರವಾದನೆಯನ್ನು ನಾವು ಪರಿಗಣಿಸುವಾಗ, ಅದು ದೈನಿಕ ವಾರ್ತಾ ವರದಿಗಳನ್ನು ಆಲಿಸುತ್ತಿರುವಂತಿದೆ. ಅದು ನಮ್ಮ ಶಕವನ್ನು “ಕಡೇ ದಿವಸ”ಗಳೆಂದು ಗುರುತಿಸುತ್ತದೆ ಮತ್ತು ಜನರನ್ನು, ‘ಸ್ವಾರ್ಥಚಿಂತಕರೂ, ಹಣದಾಸೆಯವರೂ, ತಂದೆತಾಯಿಗಳಿಗೆ ಅವಿಧೇಯರೂ, ದೇವಭಯವಿಲ್ಲದವರೂ, ಮಮತೆಯಿಲ್ಲದವರೂ, ದಮೆಯಿಲ್ಲದವರೂ, ಉಗ್ರತೆಯುಳ್ಳವರೂ, ಉಬ್ಬಿಕೊಂಡವರೂ, ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವ’ರಾಗಿ ವರ್ಣಿಸುತ್ತದೆ. ಲೋಕದ ಪರಿಸ್ಥಿತಿಯು ಇಂದು ನಿಖರವಾಗಿ ಹಾಗೆಯೇ ಇದೆ. ವಿಲಿಯಮ್ ಬೆನೆಟ್ ಒಪ್ಪಿಕೊಂಡಂತೆ: “ನಾಗರಿಕತೆಯು ಕೊಳೆತುಹೋಗಿದೆ ಎಂಬುದಕ್ಕೆ . . . ಅನೇಕ ಸೂಚನೆಗಳಿವೆ.” ನಾಗರಿಕತೆಯು ಪ್ರಥಮ ಜಾಗತಿಕ ಯುದ್ಧದೊಂದಿಗೆ ಅಂತ್ಯಗೊಂಡಿತೆಂದೂ ಹೇಳಲಾಗಿದೆ.
8. ದೇವರು ನೋಹನ ದಿನದಲ್ಲಿ ಜಲಪ್ರಳಯವನ್ನು ಬರಮಾಡಿದ್ದು ಏಕೆ, ಮತ್ತು ಇದು ನಮ್ಮ ದಿನಕ್ಕೆ ಹೇಗೆ ಸಂಬಂಧಿಸುತ್ತದೆ?
8 ಇಂದು ಸನ್ನಿವೇಶವು, ನೋಹನ ದಿನದ ಜಲಪ್ರಳಯಕ್ಕೆ ಮುಂಚೆ ಇದ್ದ ಸನ್ನಿವೇಶಕ್ಕಿಂತ ಹೆಚ್ಚು ಕೆಟ್ಟದ್ದಾಗಿದೆ. ಆ ಸಮಯದಲ್ಲಿ “ಭೂಮಿಯು ಹಿಂಸಾಚಾರದಿಂದ ತುಂಬಿತ್ತು.” (NW) ಆ ಸಮಯದಲ್ಲಿ ಸರ್ವಸಾಮಾನ್ಯವಾಗಿ ಜನರು, ತಮ್ಮ ಕೆಟ್ಟ ಮಾರ್ಗಗಳ ವಿಷಯವಾಗಿ ಪಶ್ಚಾತ್ತಾಪಪಡಲು ನಿರಾಕರಿಸಿದರು. ಆದುದರಿಂದ ದೇವರು ಹೇಳಿದ್ದು: “ಭೂಲೋಕವು ಅವರ ಅನ್ಯಾಯದಿಂದ ತುಂಬಿ ಅದೆ; ನಾನು ಅವರನ್ನೂ ಭೂಮಿಯ ಮೇಲಿರುವದೆಲ್ಲವನ್ನೂ ಅಳಿಸಿಬಿಡುತ್ತೇನೆ.” ಜಲಪ್ರಳಯವು ಆ ಹಿಂಸಾತ್ಮಕ ಲೋಕವನ್ನು ಕೊನೆಗೊಳಿಸಿತು.—ಆದಿಕಾಂಡ 6:11, 13; 7:17-24.
ಮಾನವರಿಂದ ಬಿಡುಗಡೆಯ ಸಾಧ್ಯತೆ ಇಲ್ಲ
9, 10. ಬಿಡುಗಡೆಯನ್ನು ಒದಗಿಸುವಂತೆ ನಾವು ಮಾನವರ ಕಡೆಗೆ ಏಕೆ ನೋಡಬಾರದು?
9 ಮಾನವ ಪ್ರಯತ್ನಗಳು ನಮ್ಮನ್ನು ಈ ಕೆಟ್ಟ ಪರಿಸ್ಥಿತಿಗಳಿಂದ ಬಿಡಿಸಬಲ್ಲವೊ? ದೇವರ ವಾಕ್ಯವು ಉತ್ತರಿಸುವುದು: “ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನವನನ್ನು ನೆಚ್ಚಬೇಡಿರಿ, ಅವನು ಸಹಾಯ ಮಾಡ ಶಕ್ತನಲ್ಲ.” “ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು.” (ಕೀರ್ತನೆ 146:3; ಯೆರೆಮೀಯ 10:23) ಸಾವಿರಾರು ವರ್ಷಗಳ ಇತಿಹಾಸವು, ಆ ಸತ್ಯಗಳನ್ನು ನಿಜವೆಂದು ದೃಢಪಡಿಸಿದೆ. ಊಹಿಸಸಾಧ್ಯವಿರುವ ಪ್ರತಿಯೊಂದು ರಾಜಕೀಯ, ಆರ್ಥಿಕ, ಹಾಗೂ ಸಾಮಾಜಿಕ ವ್ಯವಸ್ಥೆಯನ್ನು ಮಾನವರು ಪ್ರಯತ್ನಿಸಿದ್ದಾರೆ, ಆದರೆ ಪರಿಸ್ಥಿತಿಗಳು ಮತ್ತಷ್ಟು ಕೆಡುತ್ತಿವೆ. ಒಂದು ಮಾನವ ಪರಿಹಾರವು ಇರುತ್ತಿದ್ದಲ್ಲಿ, ಅದು ಇಷ್ಟರೊಳಗೆ ವ್ಯಕ್ತವಾಗಿರುತ್ತಿತ್ತು. ಬದಲಿಗೆ, ವಾಸ್ತವಿಕತೆಯೇನೆಂದರೆ, “ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟು”ಮಾಡಿದ್ದಾನೆ.—ಪ್ರಸಂಗಿ 8:9; ಜ್ಞಾನೋಕ್ತಿ 29:2; ಯೆರೆಮೀಯ 17:5, 6.
10 ಕೆಲವು ವರ್ಷಗಳ ಹಿಂದೆ, ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ, ಸ್ಬೀಗ್ನ್ಯೆವ್ ಬ್ರೇಸಿನ್ಸ್ಕಿ ಹೇಳಿದ್ದು: “ಭೌಗೋಲಿಕ ಪ್ರವೃತ್ತಿಗಳ ಯಾವುದೇ ನಿಷ್ಪಕ್ಷಪಾತ ವಿಶ್ಲೇಷಣೆಯ ಅನಿವಾರ್ಯ ತೀರ್ಮಾನವು ಏನೆಂದರೆ, ಸಾಮಾಜಿಕ ಸಂಕ್ಷೋಭೆ, ರಾಜಕೀಯ ಅಶಾಂತಿ, ಆರ್ಥಿಕ ಬಿಕ್ಕಟ್ಟು, ಮತ್ತು ಅಂತಾರಾಷ್ಟ್ರೀಯ ಘರ್ಷಣೆಯು ಹೆಚ್ಚು ವ್ಯಾಪಕವಾಗುವುದು ಸಂಭವನೀಯ.” ಅವರು ಕೂಡಿಸಿದ್ದು: “ಮಾನವ ಕುಲವು ಎದುರಿಸುತ್ತಿರುವ ಬೆದರಿಕೆ, ಭೌಗೋಲಿಕ ಅರಾಜಕತೆ [ಆಗಿದೆ].” ಲೋಕ ಪರಿಸ್ಥಿತಿಗಳ ಆ ಅಂದಾಜು, ಇಂದು ಕೂಡ ಹೆಚ್ಚು ಸಮಂಜಸವಾಗಿದೆ. ವೃದ್ಧಿಗೊಂಡ ಹಿಂಸಾಚಾರದ ಈ ಶಕದ ಕುರಿತು ಹೇಳಿಕೆಯನ್ನೀಡುತ್ತಾ, ನ್ಯೂ ಹೇವನ್, ಕನೆಕ್ಟಿಕಟ್ನ ರಿಜಿಸ್ಟರ್ ಪತ್ರಿಕೆಯ ಸಂಪಾದಕೀಯವು ಪ್ರಕಟಿಸಿದ್ದು: “ಸನ್ನಿವೇಶವು, ತಡೆಯಲು ಸಾಧ್ಯವಾಗದ ರೀತಿಯಲ್ಲಿ ಹತೋಟಿಮೀರಿಹೋಗಿದೆ.” ಇಲ್ಲ, ಈ ಲೋಕದ ಅಧಃಪತನಕ್ಕೆ ಒಂದು ತಡೆಯಿರದು, ಏಕೆಂದರೆ ಈ “ಕಡೇ ದಿವಸಗಳ” ಕುರಿತಾದ ಆ ಪ್ರವಾದನೆಯು ಮತ್ತೂ ಹೇಳಿದ್ದು: “ದುಷ್ಟರೂ ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ ಹೆಚ್ಚಾದ ಕೆಟ್ಟತನಕ್ಕೆ ಹೋಗುವರು.”—2 ತಿಮೊಥೆಯ 3:13.
11. ಕೆಡುತ್ತಿರುವ ಪರಿಸ್ಥಿತಿಗಳು ಮಾನವ ಪ್ರಯತ್ನಗಳಿಂದ ಏಕೆ ವಿಪರ್ಯಸ್ತಗೊಳಿಸಲ್ಪಡವು?
11 ಮಾನವರು ಈ ಪ್ರವೃತ್ತಿಗಳನ್ನು ವಿಪರ್ಯಸ್ತಗೊಳಿಸಸಾಧ್ಯವಿಲ್ಲ, ಏಕೆಂದರೆ ಸೈತಾನನು “ಈ ಪ್ರಪಂಚದ ದೇವರು” ಆಗಿದ್ದಾನೆ. (2 ಕೊರಿಂಥ 4:4) ಹೌದು, “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ.” (1 ಯೋಹಾನ 5:19; ಯೋಹಾನ 14:30ನ್ನು ಸಹ ನೋಡಿರಿ.) ಸೂಕ್ತವಾಗಿಯೇ ಬೈಬಲು ನಮ್ಮ ದಿನದ ಕುರಿತು ಹೇಳುವುದು: “ಭೂಮಿಯೇ, ಸಮುದ್ರವೇ, ನಿಮ್ಮ ದುರ್ಗತಿಯನ್ನು ಏನು ಹೇಳಲಿ; ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದುಬಂದಿದ್ದಾನೆ.” (ಪ್ರಕಟನೆ 12:12) ಸೈತಾನನಿಗೆ, ತನ್ನ ಆಳಿಕೆ ಹಾಗೂ ತನ್ನ ಲೋಕವು ಬೇಗನೆ ಅಂತ್ಯಗೊಳ್ಳಲಿದೆ ಎಂಬುದಾಗಿ ಗೊತ್ತಿದೆ, ಆದುದರಿಂದ ಅವನು “ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.”—1 ಪೇತ್ರ 5:8.
ಬಿಡುಗಡೆಯು ಹತ್ತಿರ—ಯಾರಿಗಾಗಿ?
12. ಯಾರಿಗಾಗಿ ಬಿಡುಗಡೆಯು ಸಮೀಪಿಸುತ್ತಿದೆ?
12 ಭೂಮಿಯ ಮೇಲೆ ಹೆಚ್ಚಾಗುತ್ತಿರುವ ಕಷ್ಟಕರ ಪರಿಸ್ಥಿತಿಗಳು, ಒಂದು ಮಹಾ ಬದಲಾವಣೆ—ಖಂಡಿತವಾಗಿಯೂ ಒಂದು ಮಹತ್ತರವಾದ ಬಿಡುಗಡೆ—ಯು ಬಹಳ ಸಮೀಪವಿದೆ ಎಂಬುದಕ್ಕೆ ಗಮನಾರ್ಹ ಪ್ರಮಾಣವಾಗಿವೆ! ಯಾರಿಗಾಗಿ? ಎಚ್ಚರಿಕೆಯ ಸೂಚನೆಗಳಿಗೆ ಗಮನವನ್ನು ಕೊಡುವ ಹಾಗೂ ಸೂಕ್ತವಾದ ಕ್ರಿಯೆಯನ್ನು ಗೈಯುವ ಜನರಿಗಾಗಿ ಬಿಡುಗಡೆಯು ಹತ್ತಿರವಾಗುತ್ತಿದೆ. ಒಂದನೆಯ ಯೋಹಾನ 2:17, ಏನು ಮಾಡಲ್ಪಡಬೇಕೆಂಬುದನ್ನು ತೋರಿಸುತ್ತದೆ: “ಲೋಕವೂ [ಸೈತಾನನ ವಿಷಯಗಳ ವ್ಯವಸ್ಥೆ] ಅದರ ಆಶೆಯೂ ಗತಿಸಿಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.” (ಓರೆಅಕ್ಷರಗಳು ನಮ್ಮವು.)—2 ಪೇತ್ರ 3:10-13ನ್ನು ಸಹ ನೋಡಿರಿ.
13, 14. ಎಚ್ಚರವಾಗಿರುವ ಅಗತ್ಯವನ್ನು ಯೇಸು ಹೇಗೆ ಒತ್ತಿಹೇಳಿದನು?
13 ಇಂದಿನ ಭ್ರಷ್ಟ ಸಮಾಜವು, ‘ಲೋಕ ಹುಟ್ಟಿದ್ದು ಮೊದಲುಗೊಂಡು ಇಂದಿನವರೆಗೂ ಆಗದಿದ್ದ; ಇನ್ನು ಮೇಲೆಯೂ ಆಗದಿರುವ’ ತೊಂದರೆಯ ಒಂದು ಸಮಯದಲ್ಲಿ ಬೇಗನೆ ನಿರ್ಮೂಲವಾಗಲಿದೆ ಎಂದು ಯೇಸು ಮುಂತಿಳಿಸಿದನು. (ಮತ್ತಾಯ 24:21) ಆದುದರಿಂದಲೇ ಅವನು ಎಚ್ಚರಿಸಿದ್ದು: “ನಿಮ್ಮ ವಿಷಯದಲ್ಲಿ ಜಾಗರೂಕರಾಗಿರ್ರಿ. ಅತಿಭೋಜನದ ಮದಡಿನಿಂದಲೂ ಅಮಲಿನಿಂದಲೂ ಪ್ರಪಂಚದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿವಸವು ನಿಮ್ಮ ಮೇಲೆ ಉರ್ಲಿನಂತೆ ಫಕ್ಕನೆ ಬಂದೀತು. ಆ ದಿವಸವು ಭೂನಿವಾಸಿಗಳೆಲ್ಲರ ಮೇಲೆ ಬರುವದು. ಆದರೆ ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವದಕ್ಕೂ ನೀವು ಪೂರ್ಣ ಶಕ್ತರಾಗುವಂತೆ ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆಮಾಡಿಕೊಳ್ಳುತ್ತಾ ಎಚ್ಚರವಾಗಿರ್ರಿ.”—ಲೂಕ 21:34-36.
14 “ಜಾಗರೂಕರಾಗಿ” ಹಾಗೂ “ಎಚ್ಚರವಾಗಿ” ಇರುವವರು, ದೇವರ ಚಿತ್ತವು ಏನೆಂದು ಕಂಡುಹಿಡಿದು, ಅದನ್ನು ಮಾಡುವರು. (ಜ್ಞಾನೋಕ್ತಿ 2:1-5; ರೋಮಾಪುರ 12:2) ಸೈತಾನನ ವ್ಯವಸ್ಥೆಯ ಮೇಲೆ ಬೇಗನೆ ಬರಲಿರುವ ನಾಶನವನ್ನು “ತಪ್ಪಿಸಿಕೊಳ್ಳು”ವುದರಲ್ಲಿ ಸಫಲರಾಗಿರುವವರು ಇವರೇ. ಮತ್ತು ತಾವು ಬಿಡುಗಡೆ ಹೊಂದುವೆವೆಂಬ ಪೂರ್ಣ ಭರವಸೆ ಅವರಿಗಿರಬಲ್ಲದು.—ಕೀರ್ತನೆ 34:15; ಜ್ಞಾನೋಕ್ತಿ 10:28-30.
ಪ್ರಧಾನ ವಿಮೋಚಕನು
15, 16. ಪ್ರಧಾನ ವಿಮೋಚಕನು ಯಾರು, ಮತ್ತು ಆತನ ತೀರ್ಪುಗಳು ನೀತಿಯುಳ್ಳವುಗಳಾಗಿರುವವೆಂದು ನಾವು ಏಕೆ ನಿಶ್ಚಿತರಾಗಿದ್ದೇವೆ?
15 ದೇವರ ಸೇವಕರು ಬಿಡುಗಡೆಗೊಳಿಸಲ್ಪಡಬೇಕಾದರೆ, ಸೈತಾನನು ಮತ್ತು ಅವನ ಇಡೀ ಲೋಕವ್ಯಾಪಕ ವಿಷಯಗಳ ವ್ಯವಸ್ಥೆಯು ತೆಗೆದುಹಾಕಲ್ಪಡಬೇಕು. ಇದಕ್ಕೆ ಮಾನವರಿಗಿಂತ ಎಷ್ಟೊ ಹೆಚ್ಚು ಶಕ್ತಿಶಾಲಿಯಾದ ಬಿಡುಗಡೆಯ ಒಂದು ಮೂಲವು ಅವಶ್ಯ. ಆ ಮೂಲವು ಶ್ರೇಷ್ಠ ಪರಮಾಧಿಕಾರಿ, ಈ ಭಯಾಶ್ಚರ್ಯ ವಿಶ್ವದ ಸರ್ವಶಕ್ತ ಸೃಷ್ಟಿಕರ್ತನಾದ ಯೆಹೋವ ದೇವರೇ. ಆತನು ಪ್ರಧಾನ ವಿಮೋಚಕನು: “ನಾನೇ, ನಾನೇ ಯೆಹೋವನು; ನಾನು ಹೊರತು ಯಾವ ರಕ್ಷಕನೂ ಇಲ್ಲ.”—ಯೆಶಾಯ 43:11; ಜ್ಞಾನೋಕ್ತಿ 18:10.
16 ಯೆಹೋವನಲ್ಲಿ ಶಕ್ತಿ, ವಿವೇಕ, ನ್ಯಾಯ, ಮತ್ತು ಪ್ರೀತಿಯ ಅಧಿಕತಮ ಮಟ್ಟವಿದೆ. (ಕೀರ್ತನೆ 147:5; ಜ್ಞಾನೋಕ್ತಿ 2:6; ಯೆಶಾಯ 61:8; 1 ಯೋಹಾನ 4:8) ಆದುದರಿಂದ ಆತನು ತನ್ನ ತೀರ್ಪುಗಳನ್ನು ಕಾರ್ಯರೂಪಕ್ಕೆ ತರುವಾಗ, ಆತನ ಕೃತ್ಯಗಳು ನೀತಿಯುಳ್ಳವುಗಳಾಗಿರುವವು ಎಂಬುದರ ಕುರಿತು ನಾವು ನಿಶ್ಚಿತರಾಗಿರಬಲ್ಲೆವು. ಅಬ್ರಹಾಮನು ಕೇಳಿದ್ದು: “ಸರ್ವಲೋಕಕ್ಕೆ ನ್ಯಾಯತೀರಿಸುವವನು ನ್ಯಾಯವನ್ನೇ ನಡಿಸುವನಲ್ಲವೇ”? (ಆದಿಕಾಂಡ 18:24-33) ಪೌಲನು ಘೋಷಿಸಿದ್ದು: “ದೇವರಲ್ಲಿ ಅನ್ಯಾಯ ಉಂಟೋ? ಎಂದಿಗೂ ಇಲ್ಲ.” (ರೋಮಾಪುರ 9:14) ಯೋಹಾನನು ಬರೆದುದು: “ದೇವರಾದ ಕರ್ತ [“ಯೆಹೋವ,” NW]ನೇ, ಸರ್ವಶಕ್ತನೇ, ನಿನ್ನ ನ್ಯಾಯತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ.”—ಪ್ರಕಟನೆ 16:7.
17. ಗತಸಮಯದಲ್ಲಿನ ಯೆಹೋವನ ಸೇವಕರು ಆತನ ವಾಗ್ದಾನಗಳಲ್ಲಿ ಭರವಸೆಯನ್ನು ಹೇಗೆ ವ್ಯಕ್ತಪಡಿಸಿದ್ದಾರೆ?
17 ಯೆಹೋವನು ಬಿಡುಗಡೆಯನ್ನು ವಾಗ್ದಾನಿಸುವಾಗ, ಆತನು ತಪ್ಪದೆ ಅದನ್ನು ಪೂರೈಸುವನು. ಯೆಹೋಶುವನು ಹೇಳಿದ್ದು: “ಆತನು . . . ಮಾಡಿದ ಅತಿಶ್ರೇಷ್ಠ ವಾಗ್ದಾನಗಳಲ್ಲಿ ಒಂದೂ ತಪ್ಪಿಹೋಗಲಿಲ್ಲ.” (ಯೆಹೋಶುವ 21:45) ಸೊಲೊಮೋನನು ಹೇಳಿದ್ದು: “ಆತನು . . . ಮಾಡಿದ ಅತಿಶ್ರೇಷ್ಠ ವಾಗ್ದಾನಗಳಲ್ಲಿ ಒಂದೂ ತಪ್ಪಿಹೋಗಲಿಲ್ಲ.” (1 ಅರಸುಗಳು 8:56) ಅಬ್ರಹಾಮನು, “ದೇವರು ಮಾಡಿದ ವಾಗ್ದಾನದ ವಿಷಯದಲ್ಲಿ . . . ಅಪನಂಬಿಕೆಯಿಂದ ಚಂಚಲಚಿತ್ತನಾಗಲಿಲ್ಲ. . . . ಆತನು ತನ್ನ ವಾಗ್ದಾನವನ್ನು ನೆರವೇರಿಸುವದಕ್ಕೆ ಸಮರ್ಥನೆಂದು ಪೂರಾ ಭರವಸವಿಟ್ಟು ದೃಢ ನಂಬಿಕೆಯುಳ್ಳವನಾದನು,” ಎಂದು ಅಪೊಸ್ತಲ ಪೌಲನು ಗಮನಿಸಿದನು. ಅಂತೆಯೇ ಸಾರಳು “ವಾಗ್ದಾನಮಾಡಿದಾತನನ್ನು [ದೇವರನ್ನು] ನಂಬತಕ್ಕವನೆಂದೆಣಿಸಿ”ದಳು.—ರೋಮಾಪುರ 4:20, 21; ಇಬ್ರಿಯ 11:11.
18. ಇಂದು ಯೆಹೋವನ ಸೇವಕರು, ತಾವು ಬಿಡುಗಡೆಗೊಳಿಸಲ್ಪಡುವೆವೆಂದು ಏಕೆ ಭರವಸೆಯಿಂದಿರಬಲ್ಲರು?
18 ಮಾನವರಿಗೆ ಅಸದೃಶವಾಗಿ, ಯೆಹೋವನು ಸಂಪೂರ್ಣವಾಗಿ ಭರವಸಾರ್ಹನು, ತನ್ನ ಮಾತಿಗೆ ಪ್ರಾಮಾಣಿಕನು. “ಸೇನಾಧೀಶ್ವರನಾದ ಯೆಹೋವನು ಆಣೆಯಿಟ್ಟು ಹೇಳುವದೇನಂದರೆ—ನಾನು ಸಂಕಲ್ಪಿಸಿದ್ದೇ ನೆರವೇರುವದು, ಉದ್ದೇಶಿಸಿದ್ದೇ ನಿಲ್ಲುವದು, ಖಂಡಿತ.” (ಯೆಶಾಯ 14:24) ಆದುದರಿಂದ “ಕರ್ತನು [“ಯೆಹೋವನು,” NW] ಭಕ್ತರನ್ನು ಕಷ್ಟಗಳೊಳಗಿಂದ ತಪ್ಪಿಸುವದಕ್ಕೂ ದುರ್ಮಾರ್ಗಿಗಳನ್ನು ನ್ಯಾಯತೀರ್ಪಿನ ದಿನದ ತನಕ ಶಿಕ್ಷಾನುಭವದಲ್ಲಿ ಇಡುವದಕ್ಕೂ ಬಲ್ಲವನಾಗಿದ್ದಾನೆ” ಎಂಬುದಾಗಿ ಬೈಬಲ್ ಹೇಳುವಾಗ, ಇದು ಸಂಭವಿಸುವುದು ಎಂಬ ವಿಷಯದಲ್ಲಿ ನಮಗೆ ಪೂರ್ಣ ಭರವಸೆಯಿರಸಾಧ್ಯವಿದೆ. (2 ಪೇತ್ರ 2:9) ಶಕ್ತಿಶಾಲಿ ವೈರಿಗಳ ಮೂಲಕ ನಾಶಗೊಳಿಸಲ್ಪಡುವ ಬೆದರಿಕೆ ಇರುವಾಗಲೂ, ಯೆಹೋವನ ಸೇವಕರು, ತನ್ನ ಪ್ರವಾದಿಗಳಲ್ಲಿ ಒಬ್ಬನಿಗೆ ಆತನು ಮಾಡಿದ ವಾಗ್ದಾನದಲ್ಲಿ ಪ್ರತಿಬಿಂಬಿತವಾದ ಆತನ ಅನಿಸಿಕೆಯಿಂದಲೇ ಧೈರ್ಯ ತಂದುಕೊಳ್ಳುತ್ತಾರೆ: “ಅವರು ನಿನಗೆ ವಿರುದ್ಧವಾಗಿ ಯುದ್ಧಮಾಡುವರು, ಆದರೆ ನಿನ್ನನ್ನು ಸೋಲಿಸಲಾಗುವದಿಲ್ಲ; ನಿನ್ನನ್ನುದ್ಧರಿಸಲು [“ಬಿಡುಗಡೆಗೊಳಿಸಲು,” NW] ನಾನೇ ನಿನ್ನೊಂದಿಗಿರುವೆನು, ಇದು ಯೆಹೋವನಾದ ನನ್ನ ಮಾತು.”—ಯೆರೆಮೀಯ 1:19; ಕೀರ್ತನೆ 33:18, 19; ತೀತ 1:2.
ಗತಸಮಯದಲ್ಲಿನ ಬಿಡುಗಡೆಗಳು
19. ಯೆಹೋವನು ಲೋಟನನ್ನು ಹೇಗೆ ಬಿಡುಗಡೆಗೊಳಿಸಿದನು, ನಮ್ಮ ಸಮಯಕ್ಕಾಗಿ ಯಾವ ಸಮಾಂತರದೊಂದಿಗೆ?
19 ಯೆಹೋವನ ಮುಂಚಿನ ಪಾರುಮಾಡುವ ಕೃತ್ಯಗಳಲ್ಲಿ ಕೆಲವನ್ನು ಜ್ಞಾಪಿಸಿಕೊಳ್ಳುವ ಮೂಲಕ ನಾವು ಮಹತ್ತರವಾಗಿ ಉತ್ತೇಜಿಸಲ್ಪಡಬಲ್ಲೆವು. ದೃಷ್ಟಾಂತಕ್ಕಾಗಿ, ಲೋಟನು ಸೊದೋಮ್ ಗೊಮೋರ ಪಟ್ಟಣಗಳ ದುಷ್ಟತನದಿಂದ “ಬಹಳವಾಗಿ ಕರಕರೆಗೊಂಡನು.” ಆದರೆ ಯೆಹೋವನು ಆ ಪಟ್ಟಣಗಳ ವಿರುದ್ಧವಿದ್ದ “ದೊಡ್ಡ ಮೊರೆ”ಗೆ ಗಮನಸಲ್ಲಿಸಿದನು. ಸೂಕ್ತವಾದ ಸಮಯದಲ್ಲಿ, ಆ ಕ್ಷೇತ್ರದಿಂದ ಕೂಡಲೇ ಹೊರಬರುವಂತೆ ಲೋಟ ಮತ್ತು ಅವನ ಕುಟುಂಬವನ್ನು ಪ್ರೇರೇಪಿಸಲು ಆತನು ಸಂದೇಶವಾಹಕರನ್ನು ಕಳುಹಿಸಿದನು. ಪರಿಣಾಮವೇನು? ಯೆಹೋವನು “ಸೊದೋಮಗೊಮೋರ ಪಟ್ಟಣಗಳನ್ನು ಸುಟ್ಟು ಬೂದಿಮಾಡಿ . . . ಲೋಟನನ್ನು ತಪ್ಪಿಸಿದನು.” (2 ಪೇತ್ರ 2:6-8; ಆದಿಕಾಂಡ 18:20, 21) ಇಂದು ಸಹ, ಈ ಲೋಕದ ಘೋರ ದುಷ್ಟತನದ ಸಂಬಂಧದಲ್ಲಿರುವ ದೂರಿನ ಮೊರೆಯನ್ನು ಯೆಹೋವನು ಗಮನಿಸುತ್ತಾನೆ. ತಾನು ಬಯಸುವಷ್ಟು ಮಟ್ಟಕ್ಕೆ ಆತನ ಆಧುನಿಕ ದಿನದ ಸಂದೇಶವಾಹಕರು ತಮ್ಮ ಜರೂರಿಯ ಸಾಕ್ಷಿ ಕಾರ್ಯವನ್ನು ಪೂರ್ತಿಗೊಳಿಸಿದಾಗ, ಆತನು ಈ ಲೋಕದ ವಿರುದ್ಧ ಕ್ರಿಯೆಗೈಯುವನು ಮತ್ತು ಲೋಟನನ್ನು ಬಿಡುಗಡೆಗೊಳಿಸಿದಂತೆಯೇ ತನ್ನ ಸೇವಕರನ್ನು ಆತನು ಬಿಡುಗಡೆಗೊಳಿಸುವನು.—ಮತ್ತಾಯ 24:14.
20. ಐಗುಪ್ತದಿಂದ ಪ್ರಾಚೀನ ಇಸ್ರಾಯೇಲನ್ನು ಯೆಹೋವನು ಬಿಡುಗಡೆಗೊಳಿಸಿದ ವಿಷಯವನ್ನು ವರ್ಣಿಸಿರಿ.
20 ಪ್ರಾಚೀನ ಐಗುಪ್ತದಲ್ಲಿ ಲಕ್ಷಾಂತರ ದೇವರ ಜನರು ದಾಸತ್ವಕ್ಕೊಳಗಾಗಿದ್ದರು. ಯೆಹೋವನು ಅವರ ಕುರಿತು ಹೇಳಿದ್ದು: “ಅವರು ಇಟ್ಟ ಮೊರೆಯು ನನಗೆ ಕೇಳಿಸಿತು; ಅವರ ದುಃಖವನ್ನೆಲ್ಲಾ ನಾನು ಬಲ್ಲೆನು. ಆದಕಾರಣ ಅವರನ್ನು . . . ತಪ್ಪಿಸುವದಕ್ಕೂ [“ಬಿಡುಗಡೆಗೊಳಿಸಲು,” NW] . . . ಇಳಿದುಬಂದಿದ್ದೇನೆ.” (ವಿಮೋಚನಕಾಂಡ 3:7, 8) ಆದರೂ, ದೇವರ ಜನರನ್ನು ಹೋಗಗೊಡಿಸಿದ ನಂತರ, ಫರೋಹನು ತನ್ನ ಮನಸ್ಸನ್ನು ಬದಲಾಯಿಸಿ, ತನ್ನ ಬಲಿಷ್ಠ ಸೇನೆಯೊಂದಿಗೆ ಅವರನ್ನು ಬೆನ್ನಟ್ಟಿದನು. ಇಸ್ರಾಯೇಲ್ಯರು ಕೆಂಪು ಸಮುದ್ರದಲ್ಲಿ ಸಿಲುಕಿಕೊಂಡಂತೆ ತೋರಿದರು. ಆದರೆ ಮೋಶೆಯು ಹೇಳಿದ್ದು: “ಅಂಜಬೇಡಿರಿ; ಸುಮ್ಮನೆ ನಿಂತುಕೊಂಡಿದ್ದು ಯೆಹೋವನು ಈ ಹೊತ್ತು ನಿಮ್ಮನ್ನು ರಕ್ಷಿಸುವ ರೀತಿಯನ್ನು ನೋಡಿರಿ.” (ವಿಮೋಚನಕಾಂಡ 14:8-14) ಯೆಹೋವನು ಕೆಂಪು ಸಮುದ್ರವನ್ನು ವಿಭಾಗಿಸಿದನು ಮತ್ತು ಇಸ್ರಾಯೇಲ್ಯರು ಪಾರಾದರು. ಫರೋಹನ ಸೇನೆಗಳು ಅವರ ಮೇಲೆ ರಭಸದಿಂದ ದಾಳಿಮಾಡಿದರು, ಆದರೆ ಯೆಹೋವನು ತನ್ನ ಶಕ್ತಿಯನ್ನು ಉಪಯೋಗಿಸಿದ ಕಾರಣ, “ಸಾಗರವು ಅವರನ್ನು ಮುಚ್ಚಿಬಿಟ್ಟಿತು; ಕಲ್ಲಿನಂತೆ ಧಡಲ್ಲೆಂದು ಸಮುದ್ರದ ತಳವನ್ನು ಸೇರಿದರು.” ಅನಂತರ, ಮೋಶೆಯು ಯೆಹೋವನಿಗೆ ಹಾಡಿದ ಗೀತೆಯಲ್ಲಿ ಅತ್ಯಾನಂದಪಟ್ಟನು: “ಪರಿಶುದ್ಧತ್ವದಿಂದ ಸರ್ವೋತ್ತಮನೂ ಪ್ರಖ್ಯಾತಕೃತ್ಯಗಳನ್ನು ಮಾಡಿರುವದರಿಂದ ಭಯಂಕರನೂ ಅದ್ಭುತಗಳನ್ನು ನಡಿಸುವವನೂ ಆಗಿರುವ ನಿನಗೆ ಸಮಾನನು ಎಲ್ಲಿ?”—ವಿಮೋಚನಕಾಂಡ 15:4-12, 19.
21. ಅಮ್ಮೋನ್, ಮೋವಾಬ್, ಮತ್ತು ಸೇಯೀರ್ ರಾಷ್ಟ್ರಗಳಿಂದ ಯೆಹೋವನ ಜನರು ಹೇಗೆ ರಕ್ಷಿಸಲ್ಪಟ್ಟರು?
21 ಮತ್ತೊಂದು ಸಂದರ್ಭದಲ್ಲಿ, ವೈರಿ ರಾಷ್ಟ್ರಗಳಾದ ಅಮ್ಮೋನ್, ಮೋವಾಬ್, ಮತ್ತು ಸೇಯೀರ್ (ಎದೋಮ್) ಯೆಹೋವನ ಜನರನ್ನು ನಾಶಗೊಳಿಸುವ ಬೆದರಿಕೆಯನ್ನೊಡ್ಡಿದವು. ಯೆಹೋವನು ಹೇಳಿದ್ದು: “ಈ ಮಹಾ [ವೈರಿ] ಸಮೂಹದ ನಿಮಿತ್ತವಾಗಿ ಕಳವಳಗೊಳ್ಳಬೇಡಿರಿ, ಹೆದರಬೇಡಿರಿ. ಯುದ್ಧವು ನಿಮ್ಮದಲ್ಲ, ದೇವರದೇ. . . . ನೀವು ಯುದ್ಧಮಾಡುವದು ಅವಶ್ಯವಿಲ್ಲ. . . . ಸುಮ್ಮನೆ ನಿಂತುಕೊಂಡು ಯೆಹೋವನು ನಿಮಗೋಸ್ಕರ ನಡಿಸುವ ರಕ್ಷಣಾಕಾರ್ಯವನ್ನು ನೋಡಿರಿ.” ವೈರಿಯ ಪಂಕ್ತಿಗಳಲ್ಲಿ ಗಲಿಬಿಲಿಯನ್ನು ಉಂಟುಮಾಡುವ ಮೂಲಕ—ಈ ಕಾರಣ ಅವರು ಒಬ್ಬರನ್ನೊಬ್ಬರು ಹತಿಸಿದರು—ಯೆಹೋವನು ತನ್ನ ಜನರನ್ನು ಬಿಡುಗಡೆಗೊಳಿಸಿದನು.—2 ಪೂರ್ವಕಾಲವೃತ್ತಾಂತ 20:15-23.
22. ಅಶ್ಶೂರದಿಂದ ಯಾವ ಅದ್ಭುತಕರ ಬಿಡುಗಡೆಯನ್ನು ಯೆಹೋವನು ಇಸ್ರಾಯೇಲಿಗೆ ಒದಗಿಸಿದನು?
22 ಅಶ್ಶೂರ ಲೋಕ ಶಕ್ತಿಯು ಯೆರೂಸಲೇಮಿನ ವಿರುದ್ಧ ದಾಳಿಮಾಡಿದಾಗ, ಅರಸನಾದ ಸನ್ಹೇರೀಬನು ಗೋಡೆಯ ಮೇಲಿದ್ದ ಜನರಿಗೆ ಹೀಗೆ ಹೇಳುತ್ತಾ, ಯೆಹೋವನನ್ನು ಹಂಗಿಸಿದನು: “ಯಾವ ಜನಾಂಗದ [ನಾನು ಜಯಿಸಿರುವ] ದೇವತೆಯಾದರೂ ತನ್ನ ದೇಶವನ್ನು ನನ್ನ ಕೈಯಿಂದ ಬಿಡಿಸಲಾರದೆ ಹೋದ ಮೇಲೆ ಯೆಹೋವನು ಯೆರೂಸಲೇಮನ್ನು ನನ್ನ ಕೈಗೆ ತಪ್ಪಿಸಿ ಕಾಪಾಡುವನೋ”? ದೇವರ ಸೇವಕರಿಗೆ ಅವನು ಹೇಳಿದ್ದು: “ಹಿಜ್ಕೀಯನು ನಿಮಗೆ—ಯೆಹೋವನನ್ನು ನಂಬಿರಿ; ಆತನು ನಮ್ಮನ್ನು ಹೇಗೂ ರಕ್ಷಿಸುವನು . . . ಎಂಬದಾಗಿ ಹೇಳಿದರೆ ಅವನಿಗೆ ಕಿವಿಗೊಡಬೇಡಿರಿ.” ಆಗ “ಯೆಹೋವನೇ, ನಮ್ಮ ದೇವರೇ, ನೀನೇ ಅದ್ವಿತೀಯನಾದ ಯೆಹೋವನೆಂಬದನ್ನು ಭೂರಾಜ್ಯಗಳೆಲ್ಲವೂ ತಿಳಿದುಕೊಳ್ಳುವಂತೆ,” ಹಿಜ್ಕೀಯನು ಬಿಡುಗಡೆಗಾಗಿ ಉದ್ರಿಕ್ತನಾಗಿ ಪ್ರಾರ್ಥಿಸಿದನು. ಯೆಹೋವನು 1,85,000 ಅಶ್ಶೂರದ ಸೈನಿಕರನ್ನು ಕೊಂದುಹಾಕಿದನು, ಮತ್ತು ದೇವರ ಸೇವಕರು ಬಿಡುಗಡೆಗೊಳಿಸಲ್ಪಟ್ಟರು. ನಂತರ, ಸನ್ಹೇರೀಬನು ತನ್ನ ಸುಳ್ಳು ದೇವತೆಯನ್ನು ಆರಾಧಿಸುತ್ತಿದ್ದಂತೆ, ಅವನ ಪುತ್ರರು ಅವನನ್ನು ಕೊಂದುಹಾಕಿದರು.—ಯೆಶಾಯ, ಅಧ್ಯಾಯಗಳು 36 ಮತ್ತು 37.
23. ಇಂದು ಬಿಡುಗಡೆಯ ಕುರಿತು ಯಾವ ಪ್ರಶ್ನೆಗಳಿಗೆ ಉತ್ತರಗಳು ಬೇಕಾಗಿವೆ?
23 ಯೆಹೋವನು ಗತಸಮಯದಲ್ಲಿ ತನ್ನ ಜನರನ್ನು ಹೇಗೆ ಅದ್ಭುತಕರವಾಗಿ ಬಿಡುಗಡೆ ಮಾಡಿದ್ದಾನೆಂಬುದನ್ನು ನೋಡುವಾಗ, ನಾವು ನಿಶ್ಚಯವಾಗಿಯೂ ಧೈರ್ಯ ತಂದುಕೊಳ್ಳಸಾಧ್ಯವಿದೆ. ಇಂದಿನ ಕುರಿತೇನು? ಆತನ ಅದ್ಭುತಕರವಾದ ಬಿಡುಗಡೆಯನ್ನು ಕೇಳಿಕೊಳ್ಳುವ ಯಾವ ಅಪಾಯಕರ ಸನ್ನಿವೇಶದೊಳಗೆ ಆತನ ನಂಬಿಗಸ್ತ ಸೇವಕರು ಬೇಗನೆ ಬರುವರು? ಅವರ ಬಿಡುಗಡೆಯನ್ನು ತರಲು ಆತನು ಈ ಸಮಯದ ತನಕ ಏಕೆ ಕಾದಿದ್ದಾನೆ? “ಆದರೆ ಇವು ಸಂಭವಿಸುವದಕ್ಕೆ ತೊಡಗುವಾಗ ಮೇಲಕ್ಕೆ ನೋಡಿರಿ, ನಿಮ್ಮ ತಲೆ ಎತ್ತಿರಿ; ನಿಮ್ಮ ಬಿಡುಗಡೆಯು ಸಮೀಪವಾಗಿದೆ” ಎಂಬ ಯೇಸುವಿನ ಮಾತುಗಳ ಯಾವ ನೆರವೇರಿಕೆ ಇರುವುದು? (ಲೂಕ 21:28) ಮತ್ತು ಈಗಾಗಲೇ ಸತ್ತಿರುವ ದೇವರ ಸೇವಕರಿಗೆ ಬಿಡುಗಡೆಯು ಹೇಗೆ ಬರುವುದು? ಮುಂದಿನ ಲೇಖನವು ಈ ಪ್ರಶ್ನೆಗಳನ್ನು ಪರಿಶೀಲಿಸುವುದು.
ಪುನರ್ವಿಮರ್ಶಾ ಪ್ರಶ್ನೆಗಳು
◻ ಬಿಡುಗಡೆಗಾಗಿ ಒಂದು ಮಹಾ ಅಗತ್ಯವಿದೆ ಏಕೆ?
◻ ಬಿಡುಗಡೆಗಾಗಿ ನಾವು ಮಾನವರ ಕಡೆಗೆ ಏಕೆ ನೋಡಬಾರದು?
◻ ಯಾರಿಗಾಗಿ ಬಿಡುಗಡೆಯು ಹತ್ತಿರವಾಗಿದೆ?
◻ ಯೆಹೋವನ ಬಿಡುಗಡೆಯಲ್ಲಿ ನಾವು ಏಕೆ ಭರವಸೆಯಿಂದಿರಬಲ್ಲೆವು?
◻ ಗತಸಮಯದ ಬಿಡುಗಡೆಗಳ ಯಾವ ಉದಾಹರಣೆಗಳು ಉತ್ತೇಜನದಾಯಕವಾಗಿವೆ?
[ಪುಟ 10 ರಲ್ಲಿರುವ ಚಿತ್ರ]
ಯೆಹೋವನಲ್ಲಿ ಪೂರ್ಣ ಭರವಸೆಯನ್ನು ಇಟ್ಟವರಲ್ಲಿ ಅಬ್ರಹಾಮನು ಒಬ್ಬನಾಗಿದ್ದನು