ನಾವೆಲ್ಲರೂ ದೇವರನ್ನು ಏಕೆ ಸ್ತುತಿಸಬೇಕು?
ಹಲ್ಲೆಲೂಯಾ! ಈ ಶಬ್ದವು ಕ್ರೈಸ್ತಪ್ರಪಂಚದಲ್ಲಿರುವ ಹೆಚ್ಚಿನ ನಂಬಿಗಸ್ತ ಚರ್ಚ್ಹೋಕರಿಗೆ ಸುವಿದಿತವಾಗಿದೆ. ಅವರಲ್ಲಿ ಕೆಲವರು ಈ ಶಬ್ದವನ್ನು ತಮ್ಮ ಆದಿತ್ಯವಾರದ ಕೂಟಗಳಲ್ಲಿ ಗಟ್ಟಿಯಾಗಿ ಉದ್ಘೋಷಿಸುತ್ತಾರೆ. ಆದರೆ ನಿಜವಾಗಿಯೂ ಆ ಶಬ್ದದ ಅರ್ಥವೇನೆಂದು ಎಷ್ಟು ಜನರಿಗೆ ಗೊತ್ತಿದೆ? ವಾಸ್ತವದಲ್ಲಿ, ಅದು “ಯಾಹುವಿಗೆ ಸ್ತೋತ್ರ” ಎಂಬುದಕ್ಕಾಗಿರುವ ಹೀಬ್ರು ಶಬ್ದವಾಗಿದೆ. ಅದು ಸೃಷ್ಟಿಕರ್ತನಿಗೆ ಮಾಡಲ್ಪಡುವ ಒಂದು ಹರ್ಷಭರಿತ, ಪ್ರತಿಧ್ವನಿತ ಜಯಘೋಷವಾಗಿದೆ. ಆತನ ಹೆಸರು ಯೆಹೋವ ಎಂದಾಗಿದೆ.a
“ಹಲ್ಲೆಲೂಯಾ” ಎಂಬ ಶಬ್ದವು, ಬೈಬಲಿನಲ್ಲಿ ಅನೇಕಾವರ್ತಿ ಕಂಡುಬರುತ್ತದೆ. ಏಕೆ? ಏಕೆಂದರೆ, ದೇವರನ್ನು ಸ್ತುತಿಸುವುದಕ್ಕೆ ಬಹಳಷ್ಟು ಕಾರಣಗಳಿವೆ. ಯಾಹು (ಯೆಹೋವ)ವು ವಿಸ್ತಾರವಾದ ವಿಶ್ವದ ಸೃಷ್ಟಿಕರ್ತನೂ ಪೋಷಕನೂ ಆಗಿದ್ದಾನೆ. (ಕೀರ್ತನೆ 147:4, 5; 148:3-6) ಭೂಮಿಯ ಮೇಲೆ ಬದುಕುವುದನ್ನು ಸಾಧ್ಯಮಾಡುವಂತಹ ಜೀವಿಪರಿಸ್ಥಿತಿ ವ್ಯವಸ್ಥೆಯನ್ನು ಪ್ರಥಮವಾಗಿ ಆತನೇ ಉಂಟುಮಾಡಿದನು. (ಕೀರ್ತನೆ 147:8, 9; 148:7-10) ಮತ್ತು ಆತನು ಮಾನವಕುಲದಲ್ಲಿ ವಿಶೇಷವಾದ ಆಸಕ್ತಿಯನ್ನು ವಹಿಸುತ್ತಾನೆ. ನಾವು ಆತನ ಚಿತ್ತವನ್ನು ಮಾಡುವುದಾದರೆ, ಈ ಜೀವಿತದಲ್ಲಿ ಆತನು ನಮ್ಮನ್ನು ಆಶೀರ್ವದಿಸಿ, ಬೆಂಬಲ ನೀಡುತ್ತಾನೆ. ಮತ್ತು ಬರಲಿಕ್ಕಿರುವ ಇನ್ನೂ ಹೆಚ್ಚು ಉತ್ತಮವಾದ ಜೀವಿತದ ನಿಶ್ಚಿತ ನಿರೀಕ್ಷೆಯನ್ನು ನಮಗೆ ನೀಡುತ್ತಾನೆ. (ಕೀರ್ತನೆ 148:11-14) ಈ ಮಾತುಗಳನ್ನು ಪ್ರೇರಿಸಿದವನು ಯಾಹು (ಯೆಹೋವ)ವೇ ಆಗಿದ್ದಾನೆ: “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”—ಕೀರ್ತನೆ 37:29.
ದುದರಿಂದ, “ಹಲ್ಲೆಲೂಯಾ!” “ಜನರೇ, ಯಾಹುವನ್ನು ಸ್ತುತಿಸಿರಿ!” ಎಂಬ ಪ್ರಬೋಧನೆಯು ಎಲ್ಲರಿಗೂ ನಿರ್ದೇಶಿಸಲ್ಪಟ್ಟಿದೆ. (ಕೀರ್ತನೆ 104:35, NW, ಪಾದಟಿಪ್ಪಣಿ) ಆದರೂ, ಪ್ರತಿಯೊಬ್ಬರಿಗೂ ಪ್ರತಿಕ್ರಿಯೆತೋರಿಸುವ ಅನಿಸಿಕೆಯು ಉಂಟಾಗುವುದಿಲ್ಲ ಎಂಬುದು ಅಸಂತೋಷಕರವಾದ ವಿಷಯ. ಇಂದು ಜನರು ಕಷ್ಟಾನುಭವಿಸುತ್ತಿದ್ದಾರೆ. ಅನೇಕರು ಹಸಿದವರೂ, ಅಸ್ವಸ್ಥರೂ, ದಬ್ಬಾಳಿಕೆಗೊಳಗಾದವರೂ ಆಗಿದ್ದಾರೆ. ಅಮಲೌಷಧಗಳ ಅಥವಾ ಮದ್ಯಪಾನದ ದುರುಪಯೋಗ ಅಥವಾ ಅವರ ಅನೈತಿಕತೆ ಅಥವಾ ದಂಗೆಕೋರತನದ ಫಲಿತಾಂಶವಾಗಿ, ಅನೇಕ ಜನರು ತುಂಬ ವ್ಯಥೆಯನ್ನು ಸಹಿಸಿಕೊಳ್ಳುತ್ತಾರೆ. ಅಂತಹ ಜನರು ದೇವರನ್ನು ಏಕೆ ಸ್ತುತಿಸಬೇಕು ಎಂಬುದಕ್ಕೆ ಯಾವುದಾದರೂ ಕಾರಣವಿದೆಯೊ?
‘ಯೆಹೋವನು ಮಾತ್ರವೇ ನನಗೆ ನಿರೀಕ್ಷೆಯನ್ನು ಕೊಡಸಾಧ್ಯವಿತ್ತು’
ಹೌದು, ಕಾರಣವಿದೆ. ತನ್ನ ಕುರಿತಾಗಿ ತಿಳಿದುಕೊಳ್ಳುವಂತೆ, ತನ್ನ ಚಿತ್ತವನ್ನು ಮಾಡಲು ಕಲಿಯುವಂತೆ, ಹಾಗೂ ತನ್ನನ್ನು ಸ್ತುತಿಸಲು ಬಯಸುವಂತೆ ಜನರನ್ನು ಪ್ರಚೋದಿಸುವ ಆಶೀರ್ವಾದಗಳನ್ನು ಅನುಭವಿಸುವಂತೆ, ಯಾವುದೇ ಪ್ರತಿಷೇಧವಿಲ್ಲದೆ ಯೆಹೋವನು ಪ್ರತಿಯೊಬ್ಬರನ್ನೂ ಆಮಂತ್ರಿಸುತ್ತಾನೆ. ಮತ್ತು ಅನೇಕರು ಅದಕ್ಕೆ ಪ್ರತಿಕ್ರಿಯೆತೋರಿಸುತ್ತಾರೆ. ಉದಾಹರಣೆಗೆ, ಗ್ವಾಟೆಮಾಲದ ಆಡ್ರೀಯಾನಾಳನ್ನು ಪರಿಗಣಿಸಿರಿ. ಆಡ್ರೀಯಾನಾ ಏಳು ವರ್ಷದವಳಾಗಿದ್ದಾಗ, ಅವಳ ತಾಯಿ ತೀರಿಕೊಂಡಳು. ತದನಂತರ ಸ್ವಲ್ಪದರಲ್ಲಿಯೇ ಅವಳ ತಂದೆ ಮನೆ ಬಿಟ್ಟು ಹೊರಟುಹೋದನು. ಅವಳು ಹತ್ತು ವರ್ಷದವಳಾಗಿದ್ದಾಗ, ಅವಳು ಜೀವನೋಪಾಯಕ್ಕಾಗಿ ಕೆಲಸಮಾಡಲಾರಂಭಿಸಿದಳು. ಅವಳ ತಾಯಿಯು ಅವಳಿಗೆ, ದೇವರ ಹಾಗೂ ಚರ್ಚಿನ ಸೇವೆಮಾಡುವಂತೆ ಹೇಳಿದ್ದಳು. ಆದುದರಿಂದ ಆಡ್ರೀಯಾನಾ ವಿವಿಧ ಕ್ಯಾಥೊಲಿಕ್ ಗುಂಪುಗಳೊಂದಿಗೆ ಒಡನಾಟಮಾಡಿದಳು. ಆದರೆ ಅವಳು 12 ವರ್ಷದವಳಾಗುವಷ್ಟರಲ್ಲಿ, ಆ ಗುಂಪುಗಳಿಂದ ಆಶಾಭಂಗಗೊಂಡು, ಒಂದು ಸ್ಟ್ರೀಟ್ ಗ್ಯಾಂಗ್ಗೆ ಸೇರಿಕೊಂಡಳು. ಅವಳು ಧೂಮಪಾನಮಾಡಲು, ಅಮಲೌಷಧಗಳನ್ನು ತೆಗೆದುಕೊಳ್ಳಲು, ಮತ್ತು ಕದಿಯಲು ಪ್ರಾರಂಭಿಸಿದಳು. ಅಂತಹ ಎಳೆಯ ಹುಡುಗಿಯೊಬ್ಬಳು ಏಕೆ ದೇವರನ್ನು ಸ್ತುತಿಸಲು ಬಯಸಬೇಕು?
ಆಡ್ರೀಯಾನಾಳ ಅಕ್ಕ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಲು ಆರಂಭಿಸಿದಳು. ಆದರೆ ಆಡ್ರೀಯಾನಾ ಅವಳನ್ನು ಅಪಹಾಸ್ಯಮಾಡಿದಳು. ತದನಂತರ ಅವರ ಅತ್ತೆ ತೀರಿಹೋದಳು. ಅವಳ ಅತ್ತೆಯ ಶವಸಂಸ್ಕಾರದ ಸಮಯದಲ್ಲಿ, ಆಡ್ರೀಯಾನಾ ತೊಂದರೆದಾಯಕ ಪ್ರಶ್ನೆಗಳಿಂದ ಕಾಡಿಸಲ್ಪಟ್ಟಳು. ಅವಳ ಅತ್ತೆ ಎಲ್ಲಿಗೆ ಹೋದಳು? ಅವಳು ಸ್ವರ್ಗದಲ್ಲಿದ್ದಾಳೊ? ಅವಳು ನರಕಾಗ್ನಿಗೆ ಹೋದಳೊ? ಅದು ತುಂಬಾ ಗೊಂದಲಮಯವಾಗಿತ್ತು. ಮತ್ತು ತನ್ನ ಅಕ್ಕ ತನಗೆ ಕಲಿಸಿದ್ದಂತೆ, ಆಡ್ರೀಯಾನಾ ಯೆಹೋವ ಎಂಬ ದೇವರ ಹೆಸರನ್ನು ಉಪಯೋಗಿಸಿ, ಸಹಾಯಕ್ಕಾಗಿ ಪ್ರಾರ್ಥಿಸಲು ಶ್ಮಶಾನದ ಆರಾಧನಾ ಮಂದಿರಕ್ಕೆ ಹೋದಳು.
ಬೇಗನೆ ಅವಳು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸತೊಡಗಿದಳು. ಮತ್ತು ಅವರ ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತಿದ್ದಳು. ಇದು ಅವಳಿಗೆ ಜೀವಿತದ ಕುರಿತು ಸಂಪೂರ್ಣ ಹೊಸತಾದ ಒಂದು ಹೊರನೋಟವನ್ನು ಕೊಟ್ಟಿತು. ಅವಳು ಸ್ಟ್ರೀಟ್ ಗ್ಯಾಂಗ್ಗಳೊಂದಿಗಿನ ತನ್ನ ಎಲ್ಲ ಸಂಬಂಧಗಳನ್ನು ಧೈರ್ಯದಿಂದ ಕಡಿದುಹಾಕಿದಳು. ಈಗ ತನ್ನ 20ರ ಮಧ್ಯಮ ವಯಸ್ಸಿನಲ್ಲಿರುವ ಆಡ್ರೀಯಾನಾ, ಹೀಗೆ ಹೇಳುತ್ತಾಳೆ: “ಯೆಹೋವನಿಗಾಗಿರುವ ಪ್ರೀತಿಯು ಮಾತ್ರವೇ, ಅಂತಹ ಕೆಟ್ಟ ಜೀವಿತ ಮಾರ್ಗವನ್ನು ಬಿಟ್ಟುಬಿಡುವಂತೆ ನನ್ನನ್ನು ಪ್ರಚೋದಿಸಿತು. ಯೆಹೋವನು ಮಾತ್ರವೇ ತನ್ನ ಮಹಾ ಕರುಣೆಯಿಂದ, ನನಗೆ ನಿತ್ಯಜೀವದ ನಿರೀಕ್ಷೆಯನ್ನು ಕೊಡಸಾಧ್ಯವಿತ್ತು.” ಜೀವಿತದಲ್ಲಿನ ತನ್ನ ಕಷ್ಟಕರ ಆರಂಭದ ಹೊರತಾಗಿಯೂ, ಆಡ್ರೀಯಾನಾಳಿಗೆ ದೇವರನ್ನು ಸ್ತುತಿಸಲು ಅತ್ಯುತ್ಕೃಷ್ಟವಾದ ಕಾರಣಗಳಿವೆ.
ಯೂಕ್ರೇನ್ನಿಂದ ಇನ್ನೂ ಹೆಚ್ಚು ಪ್ರತೀಕ್ಷಾರಹಿತವಾದ ಸನ್ನಿವೇಶವೊಂದು ವರದಿಸಲ್ಪಟ್ಟಿದೆ. ಒಬ್ಬ ವ್ಯಕ್ತಿಯು ಮರಣದಂಡನೆಯನ್ನು ಎದುರುನೋಡುತ್ತಾ ಸೆರೆಮನೆಯಲ್ಲಿ ಕುಳಿತಿದ್ದಾನೆ. ಅವನು ಸ್ವಕನಿಕರವುಳ್ಳವನಾಗಿದ್ದಾನೊ? ಖಿನ್ನನಾಗಿದ್ದಾನೊ? ಇಲ್ಲ, ಇದಕ್ಕೆ ತೀರ ವ್ಯತಿರಿಕ್ತವಾಗಿದ್ದಾನೆ. ಇತ್ತೀಚೆಗೆ ಯೆಹೋವನ ಸಾಕ್ಷಿಗಳಿಂದ ಸಂಪರ್ಕಿಸಲ್ಪಟ್ಟವನಾಗಿದ್ದು, ಯೆಹೋವನ ಕುರಿತಾದ ಅಲ್ಪ ಜ್ಞಾನವನ್ನು ಪಡೆದುಕೊಂಡಿದ್ದು, ತನ್ನ ತಾಯಿಯನ್ನು ಸಂಪರ್ಕಿಸುವಂತೆ ಅವನು ಅವರನ್ನು ಕೇಳಿಕೊಂಡನು. ಈಗ ಅವನು ಅವರಿಗೆ ಪತ್ರ ಬರೆಯುತ್ತಿದ್ದಾನೆ. ಏಕೆಂದರೆ ಅವರು ತನ್ನ ಕೋರಿಕೆಯನ್ನು ಪೂರೈಸಿದರೆಂದು ಅವನಿಗೆ ತಿಳಿದುಬಂದಿದೆ. ಅವನು ಹೇಳುವುದು: “ನನ್ನ ತಾಯಿಯನ್ನು ಭೇಟಿಮಾಡಿದುದಕ್ಕಾಗಿ ನಿಮಗೆ ಉಪಕಾರ. ಕಳೆದ ವರ್ಷದಲ್ಲಿ ನಾನು ಕೇಳಿಸಿಕೊಂಡಂತಹ, ಅತ್ಯಂತ ಹರ್ಷಭರಿತ ವಾರ್ತೆ ಇದಾಗಿತ್ತು.”
ಸ್ವತಃ ತನ್ನ ಕುರಿತಾಗಿ ಹಾಗೂ ತಾನು ಸಾಕ್ಷಿ ನೀಡಿದಂತಹ ಸೆರೆಮನೆಯ ಸಹವಾಸಿಗಳ ಕುರಿತಾಗಿ ಮಾತಾಡುತ್ತಾ ಅವನು ಬರೆಯುವುದು: “ಈಗ ನಮಗೆ ದೇವರಲ್ಲಿ ನಂಬಿಕೆಯಿದೆ. ಮತ್ತು ನಾವು ನಮ್ಮ ನಂಬಿಕೆಗನುಸಾರ ಕ್ರಿಯೆಗೈಯಲು ಪ್ರಯತ್ನಿಸುತ್ತಿದ್ದೇವೆ.” ಅವನು ತನ್ನ ಪತ್ರವನ್ನು ಹೀಗೆ ಮುಗಿಸುತ್ತಾನೆ: “ಪ್ರೀತಿ ಎಂದರೇನು ಎಂಬುದನ್ನು ಕಲಿಯಲು ಹಾಗೂ ನಂಬಿಕೆಯನ್ನು ಪಡೆದುಕೊಳ್ಳಲು ಸಹಾಯ ಮಾಡಿದ್ದಕ್ಕಾಗಿ ನಿಮಗೆ ಉಪಕಾರ. ನಾನು ಜೀವಂತವಾಗಿ ಉಳಿದಲ್ಲಿ, ನಾನು ನಿಮಗೂ ಸಹಾಯ ಮಾಡುವೆ. ನೀವು ಅಸ್ತಿತ್ವದಲ್ಲಿರುವುದಕ್ಕೆ ಮತ್ತು ದೇವರನ್ನು ಪ್ರೀತಿಸಲು ಹಾಗೂ ಆತನಲ್ಲಿ ಭರವಸೆಯಿಡಲು ಇತರರಿಗೆ ಸಹಾಯ ಮಾಡುತ್ತಿರುವುದಕ್ಕಾಗಿ ದೇವರಿಗೆ ಉಪಕಾರ.” ಈ ವ್ಯಕ್ತಿಯು ತನ್ನ ಮರಣ ದಂಡನೆ ವಿಷಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಾನೆ. ಆದರೆ ಅವನು ವಧಿಸಲ್ಪಡಲಿ ಅಥವಾ ಅವನು ಸೆರೆಮನೆಯಲ್ಲಿ ಅನೇಕ ವರ್ಷಗಳನ್ನು ಕಳೆಯಲಿ, ದೇವರನ್ನು ಸ್ತುತಿಸಲು ಅವನಿಗೆ ಸ್ಪಷ್ಟವಾದ ಕಾರಣವಿದೆ.
‘ನಾನು ಕುರುಡಿಯಾಗಿರುವುದಾದರೂ, ನೋಡಬಲ್ಲೆ’
ಈಗ, ಅನಿರೀಕ್ಷಿತವಾಗಿ ತನ್ನ ದೃಷ್ಟಿಯನ್ನು ಕಳೆದುಕೊಳ್ಳುವ ಒಬ್ಬ ಹುರುಪಿನ ಹದಿವಯಸ್ಕ ಹುಡುಗಿಯನ್ನು ಪರಿಗಣಿಸಿ. ಅರ್ಜೆಂಟೀನದಲ್ಲಿ ವಾಸಿಸುತ್ತಿರುವ ಗ್ಲೋರಿಯಳಿಗೆ ಇದು ತಾನೇ ಸಂಭವಿಸಿತು. ಗ್ಲೋರಿಯ 19 ವರ್ಷದವಳಾಗಿದ್ದಾಗ, ಅನಿರೀಕ್ಷಿತವಾಗಿ ಅವಳು ಕುರುಡಿಯಾದಳು. ಅವಳು ತನ್ನ ದೃಷ್ಟಿಯನ್ನು ಪುನಃ ಪಡೆದುಕೊಳ್ಳಲೇ ಇಲ್ಲ. 29 ವರ್ಷಪ್ರಾಯದಲ್ಲಿ, ಅವಳು ಒಬ್ಬ ಪುರುಷನ ಉಪಪತ್ನಿಯಾಗಿ, ಬೇಗನೆ ಗರ್ಭಿಣಿಯಾದಳು. ಈಗ ಅವಳಿಗೆ ತನ್ನ ಜೀವಿತಕ್ಕೆ ಅರ್ಥವಿದೆಯೆಂದು ಅನಿಸಿತು. ಆದರೆ ಅವಳು ತನ್ನ ಮಗುವನ್ನು ಕಳೆದುಕೊಂಡಾಗ, ಅವಳು ಪ್ರಶ್ನೆಗಳನ್ನು ಕೇಳಲಾರಂಭಿಸಿದಳು. ‘ಇದು ನನಗೆ ಏಕೆ ಸಂಭವಿಸುತ್ತಿದೆ? ನಾನೇನು ಮಾಡಿದ್ದೇನೆ? ನಿಜವಾಗಿಯೂ ದೇವರು ಅಸ್ತಿತ್ವದಲ್ಲಿದ್ದಾನೊ?’ ಎಂದು ಅವಳು ಕುತೂಹಲಪಟ್ಟಳು.
ಈ ಹಂತದಲ್ಲಿ, ಇಬ್ಬರು ಯೆಹೋವನ ಸಾಕ್ಷಿಗಳು ಅವಳ ಮನೆ ಬಾಗಿಲಿಗೆ ಬಂದರು. ಅವಳು ಬೈಬಲನ್ನು ಅಭ್ಯಾಸಿಸಲು ಆರಂಭಿಸಿದಳು. ಮತ್ತು ಹೊಸ ಲೋಕದಲ್ಲಿ, ಕುರುಡರು ಪುನಃ ನೋಡುವರು ಎಂಬ ಅದರ ವಾಗ್ದಾನದ ಕುರಿತು ತಿಳಿದುಕೊಂಡಳು. (ಯೆಶಾಯ 35:5) ಗ್ಲೋರಿಯಳಿಗೆ ಎಂತಹ ಅದ್ಭುತಕರ ಪ್ರತೀಕ್ಷೆ! ವಿಶೇಷವಾಗಿ ಅವಳ ಗಂಡನು ತಮ್ಮ ವಿವಾಹವನ್ನು ನ್ಯಾಯಸಮ್ಮತವಾಗಿ ಮಾಡಲು ಸಮ್ಮತಿ ನೀಡಿದಾಗ, ಅವಳು ತುಂಬ ಸಂತೋಷಗೊಂಡಳು. ತದನಂತರ ಅವಳ ಗಂಡನು ಅಪಘಾತಕ್ಕೆ ಒಳಗಾಗಿ, ಅಂಗವಿಕಲನಾದನು. ಇದರಿಂದ ಗಾಲಿಕುರ್ಚಿಗೆ ಬಂಧಿತನಾದನು. ಇಂದು ಈ ಕುರುಡ ಸ್ತ್ರೀ, ಜೀವನೋಪಾಯಕ್ಕಾಗಿ ಕಷ್ಟಪಟ್ಟು ಕೆಲಸಮಾಡುತ್ತಾಳೆ. ಇದರ ಜೊತೆಗೆ, ಅವಳು ಮನೆಯಲ್ಲಿ ಎಲ್ಲಾ ಕೆಲಸವನ್ನು ಮಾಡುತ್ತಾಳೆ. ಹಾಗೂ ತನ್ನ ಗಂಡನಿಗೆ ವೈಯಕ್ತಿಕ ಗಮನಕೊಟ್ಟು ನೋಡಿಕೊಳ್ಳುತ್ತಾಳೆ. ಆದರೂ ಗ್ಲೋರಿಯ ಯೆಹೋವನನ್ನು ಸ್ತುತಿಸುತ್ತಾಳೆ! ತನ್ನ ಕ್ರೈಸ್ತ ಸಹೋದರ, ಸಹೋದರಿಯರ ಸಹಾಯದಿಂದ, ಅವಳು ಬ್ರೇಲ್ ಬೈಬಲನ್ನು ಅಭ್ಯಾಸಿಸುತ್ತಾಳೆ. ಮತ್ತು ರಾಜ್ಯ ಸಭಾಗೃಹದಲ್ಲಿನ ಕ್ರೈಸ್ತ ಕೂಟಗಳಿಂದ ಅವಳು ಬಹಳವಾಗಿ ಉತ್ತೇಜಿತಳಾಗಿದ್ದಾಳೆ. ಅವಳನ್ನುವುದು: “ಇದನ್ನು ವಿವರಿಸುವುದು ಬಹಳ ಕಷ್ಟಕರ. ಆದರೆ ನಾನು ಕುರುಡಿಯಾಗಿರುವುದಾದರೂ, ಅದು ನಾನು ನೋಡಶಕ್ತಳೋ ಎಂಬಂತಿದೆ.”
ಕೆಲವೊಮ್ಮೆ ಜನರು ದೇವರನ್ನು ಸ್ತುತಿಸುವಾಗ ಹಿಂಸಿಸಲ್ಪಡುತ್ತಾರೆ. ಕ್ರೊಏಷಿಯದ ಒಬ್ಬ ಸ್ತ್ರೀಯು, ದೇವರ ಕುರಿತಾಗಿ ಕಲಿತಾಗ ಸಂತೋಷಗೊಂಡಳು. ಆದರೆ ಅವಳ ಗಂಡನು ಹೊಸದಾಗಿ ಕಂಡುಕೊಂಡ ಅವಳ ನಂಬಿಕೆಯನ್ನು ವಿರೋಧಿಸಿ, ಅವಳನ್ನು ತೊರೆದುಬಿಟ್ಟು, ಅವರ ಒಂದು ವರ್ಷದ ಮಗಳನ್ನು ತನ್ನೊಂದಿಗೆ ಕರೆದುಕೊಂಡುಹೋದನು. ಬೀದಿಪಾಲಾಗಿ, ಗಂಡ ಮತ್ತು ಕುಟುಂಬದಿಂದ ತೊರೆಯಲ್ಪಟ್ಟು, ಮನೆಯಿಲ್ಲದೆ, ಕೆಲಸವಿಲ್ಲದೆ, ಅಥವಾ ಅವಳ ಮಗುವು ಸಹ ಜೊತೆಗಿಲ್ಲದೆ, ಅವಳು ಆರಂಭದಲ್ಲಿ ಬಹಳ ಮನಗುಂದಿದವಳಾದಳು. ಆದರೆ ಆ ಚಿಕ್ಕ ಮಗುವು ಬೆಳೆಯುವ ತನಕ, ಆ ಮಗಳನ್ನು ಅವಳು ಸ್ವಲ್ಪಮಾತ್ರ ಸಂಪರ್ಕಿಸಸಾಧ್ಯವಿತ್ತಾದರೂ, ದೇವರ ಪ್ರೀತಿಯು ಅವಳನ್ನು ಕಾಪಾಡಿತು. ಈ ಸ್ತ್ರೀಯು “ಅತ್ಯಂತ ಬೆಲೆಬಾಳುವ ಮುತ್ತ”ನ್ನು (NW) ಕಂಡುಕೊಂಡಿದ್ದು, ಅದನ್ನು ಬಿಟ್ಟುಬಿಡಲು ಅವಳು ಬಯಸಲಿಲ್ಲ. (ಮತ್ತಾಯ 13:45, 46) ಈ ಕಷ್ಟಕರ ಸಮಯಗಳಾದ್ಯಂತ ಅವಳು ತನ್ನ ಸಂತೋಷವನ್ನು ಹೇಗೆ ಕಾಪಾಡಿಕೊಂಡಳು? ಅವಳನ್ನುವುದು: “ಸಂತೋಷವು ದೇವರಾತ್ಮದ ಒಂದು ಫಲವಾಗಿದೆ. ಹೊರಗಿನ ಹವಾಮಾನವು ಹೇಗೇ ಇರಲಿ, ಒಂದು ಸಸ್ಯಾಗಾರದಲ್ಲಿ ಸಸ್ಯಗಳು ಬೆಳೆಯಸಾಧ್ಯವಿರುವಂತೆಯೇ, ಈ ಫಲವನ್ನು ಬಾಹ್ಯ ಪರಿಸ್ಥಿತಿಗಳಿಂದ ಸ್ವತಂತ್ರವಾಗಿ ಬೆಳೆಸಸಾಧ್ಯವಿದೆ.”
ಫಿನ್ಲೆಂಡ್ನ, ಆರು ವರ್ಷ ಪ್ರಾಯದ ಮಾರ್ಕಸ್ನಿಗೆ, ಗುಣವಾಗದಂತಹ ಒಂದು ಸ್ನಾಯು ರೋಗವಿದೆಯೆಂದು ರೋಗನಿರ್ಣಯ ಮಾಡಲಾಯಿತು. ಬೇಗನೆ ಅವನು ಒಂದು ಗಾಲಿಕುರ್ಚಿಗೆ ಬಂಧಿತನಾದನು. ಕೆಲವಾರು ವರ್ಷಗಳ ನಂತರ, ಅವನ ತಾಯಿ ಅವನನ್ನು ಒಬ್ಬ ಪೆಂಟೆಕಾಸ್ಟ್ ವ್ಯಕ್ತಿಯ ಬಳಿ ಕರೆದುಕೊಂಡುಹೋದಳು. ಅವನು ಅಸ್ವಸ್ಥ ಜನರನ್ನು ಗುಣಪಡಿಸುವ ಪ್ರತಿಪಾದನೆ ಮಾಡುತ್ತಿದ್ದುದರಿಂದ ವ್ಯಾಪಕವಾದ ಪ್ರಚಾರವನ್ನು ಪಡೆದುಕೊಳ್ಳುತ್ತಿದ್ದನು. ಆದರೆ ಮಾರ್ಕಸ್ ಅದ್ಭುತಕರವಾಗಿ ಗುಣಹೊಂದಲಿಲ್ಲ. ಆದುದರಿಂದ ಮಾರ್ಕಸ್ ದೇವರಲ್ಲಿ ಆಸಕ್ತಿಯನ್ನು ಕಳೆದುಕೊಂಡನು. ಮತ್ತು ವಿಜ್ಞಾನ ಹಾಗೂ ಇನ್ನಿತರ ಐಹಿಕ ಕ್ಷೇತ್ರಗಳಲ್ಲಿ ಅಧ್ಯಯನಗಳನ್ನು ಮಾಡಲಾರಂಭಿಸಿದನು. ತದನಂತರ ಸುಮಾರು ಐದು ವರ್ಷಗಳ ಹಿಂದೆ, ಒಂದು ಗಾಲಿಕುರ್ಚಿಯಲ್ಲಿದ್ದ ಒಬ್ಬ ಸ್ತ್ರೀಯು, ಒಬ್ಬ ಯೌವನಸ್ಥನೊಂದಿಗೆ ಮಾರ್ಕಸ್ ವಾಸಿಸುತ್ತಿದ್ದ ಮನೆಗೆ ಬಂದಳು. ಅವರು ಯೆಹೋವನ ಸಾಕ್ಷಿಗಳಾಗಿದ್ದರು. ಇಷ್ಟರಲ್ಲಿ ಮಾರ್ಕಸ್ ಒಬ್ಬ ನಾಸ್ತಿಕನಾಗಿದ್ದನು. ಆದರೂ ಧರ್ಮದ ಕುರಿತು ಚರ್ಚಿಸುವುದರಲ್ಲಿ ಅವನಿಗೆ ಆಕ್ಷೇಪಣೆಯಿರಲಿಲ್ಲವಾದುದರಿಂದ ಅವನು ಅವರನ್ನು ಒಳಗೆ ಕರೆದನು.
ಅನಂತರ ಒಬ್ಬ ವಿವಾಹಿತ ದಂಪತಿಗಳು ಅವನನ್ನು ಭೇಟಿಮಾಡಿದರು, ಮತ್ತು ಒಂದು ಬೈಬಲ್ ಅಭ್ಯಾಸವು ಆರಂಭವಾಯಿತು. ಕ್ರಮೇಣ, ಬೈಬಲ್ ಸತ್ಯದ ಶಕ್ತಿಯು, ವಿಷಯಗಳ ಕುರಿತಾದ ಮಾರ್ಕಸ್ನ ನೋಟವನ್ನು ಬದಲಾಯಿಸಿತು. ತನ್ನ ದೌರ್ಬಲ್ಯದ ಹೊರತಾಗಿಯೂ, ದೇವರನ್ನು ಸ್ತುತಿಸಲು ತನಗೆ ವಾಸ್ತವವಾದ ಕಾರಣಗಳಿವೆ ಎಂಬುದನ್ನು ಅವನು ಗ್ರಹಿಸಿದನು. ಅವನು ಹೇಳಿದ್ದು: “ನಾನು ತುಂಬ ಸಂತೋಷಿತನಾಗಿದ್ದೇನೆ. ಏಕೆಂದರೆ ಸತ್ಯವನ್ನೂ ಯೆಹೋವನು ಉಪಯೋಗಿಸುತ್ತಿರುವ ಸಂಸ್ಥೆಯನ್ನೂ ನಾನು ಕಂಡುಕೊಂಡಿದ್ದೇನೆ. ಈಗ ನನ್ನ ಜೀವಿತಕ್ಕೆ ಮಾರ್ಗದರ್ಶನೆ ಮತ್ತು ಅರ್ಥವಿದೆ. ಕಳೆದುಹೋದ ಇನ್ನೊಂದು ಕುರಿಯನ್ನು ಕಂಡುಕೊಳ್ಳಲಾಗಿದೆ, ಮತ್ತು ಅದು ಯೆಹೋವನ ಮಂದೆಯನ್ನು ಬಿಟ್ಟುಹೋಗಲು ಬಯಸುವುದಿಲ್ಲ!”—ಮತ್ತಾಯ 10:6ನ್ನು ಹೋಲಿಸಿರಿ.
ಎಲ್ಲರೂ “ಯಾಹುವನ್ನು ಸ್ತುತಿಸಲಿ”
ಮಾನವರ ಪರಿಸ್ಥಿತಿಗಳು ಏನೇ ಆಗಿರಲಿ, ಇಂದು ಅವರಿಗೆ ದೇವರನ್ನು ಸ್ತುತಿಸಲು ಕಾರಣವಿರಬಲ್ಲದು ಎಂಬುದನ್ನು ತೋರಿಸಲು ಒಕ್ಕಣಿಸಸಾಧ್ಯವಿರುವ ಅಸಂಖ್ಯಾತ ಅನುಭವಗಳಲ್ಲಿ ಇವು ಕೆಲವೇ ಆಗಿವೆ. ಅದನ್ನು ಅಪೊಸ್ತಲ ಪೌಲನು ಈ ರೀತಿಯಲ್ಲಿ ವಿವರಿಸಿದನು: “ದೈವಿಕ ಭಕ್ತಿಯಾದರೋ ಎಲ್ಲಾ ರೀತಿಯಲ್ಲಿ ಪ್ರಯೋಜನಕರವಾಗಿದೆ, ಅದು ಈಗಿನ ಜೀವಿತದ ಹಾಗೂ ಬರಲಿರುವ ಜೀವಿತದ ವಾಗ್ದಾನವನ್ನು ನೀಡುತ್ತದೆ.” (1 ತಿಮೊಥೆಯ 4:8, NW) ನಾವು ದೇವರ ಚಿತ್ತವನ್ನು ಮಾಡುವುದಾದರೆ, ಆತನು “ಈಗಿನ ಜೀವಿತದ ವಾಗ್ದಾನ”ವನ್ನು ಪೂರೈಸುವನು. ನಿಶ್ಚಯವಾಗಿಯೂ, ಈ ವಿಷಯಗಳ ವ್ಯವಸ್ಥೆಯಲ್ಲಿ ಆತನು ಬಡವರನ್ನು ಶ್ರೀಮಂತರನ್ನಾಗಿ ಅಥವಾ ಅಸ್ವಸ್ಥರನ್ನು ಆರೋಗ್ಯವಂತರನ್ನಾಗಿ ಮಾಡುವುದಿಲ್ಲ. ಆದರೆ ತನ್ನನ್ನು ಸೇವಿಸುವವರಿಗೆ ಆತನು ತನ್ನ ಆತ್ಮವನ್ನು ಕೊಡುತ್ತಾನೆ. ಆದುದರಿಂದ ಅವರ ಬಾಹ್ಯ ಸನ್ನಿವೇಶಗಳು ಏನೇ ಇರಲಿ, ಅವರು ಆನಂದ ಮತ್ತು ಸಂತುಷ್ಟಿಯನ್ನು ಕಂಡುಕೊಳ್ಳುತ್ತಾರೆ. ಹೌದು, “ಈಗಿನ ಜೀವಿತ”ದಲ್ಲಿಯೂ, ಅಸ್ವಸ್ಥರು, ದಬ್ಬಾಳಿಕೆಗೊಳಗಾದವರು, ಮತ್ತು ಬಡವರಿಗೆ ದೇವರನ್ನು ಸ್ತುತಿಸಲಿಕ್ಕಾಗಿ ಕಾರಣವಿರಬಲ್ಲದು.
ಆದರೆ “ಬರಲಿರುವ” ಜೀವಿತದ ಕುರಿತಾಗಿ ಏನು? ಅಷ್ಟೇಕೆ, ಅದರ ಪರ್ಯಾಲೋಚನೆಯು ತಾನೇ ನಾವು ದೇವರನ್ನು ಅತ್ಯಂತ ಹೆಚ್ಚು ಹುರುಪಿನಿಂದ ಸ್ತುತಿಸುವಂತೆ ಮಾಡಬೇಕು! ಬಡತನವು ಅಜ್ಞಾತವಾಗುವ, “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳ”ದಿರುವ, ಮತ್ತು ದೇವರು ‘ಅವರ ಕಣ್ಣೀರನ್ನೆಲ್ಲಾ ಒರಸಿಬಿಟ್ಟು, ಇನ್ನು ಮರಣವಿರದ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇಲ್ಲದ, ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಗು’ವ ಸಮಯದ ಕುರಿತಾಗಿ ಆಲೋಚಿಸುವುದು, ನಮ್ಮನ್ನು ರೋಮಾಂಚಗೊಳಿಸುತ್ತದೆ. (ಯೆಶಾಯ 33:24; ಪ್ರಕಟನೆ 21:3, 4; ಕೀರ್ತನೆ 72:16) ದೇವರಿಂದ ಕೊಡಲ್ಪಡುವ ಈ ವಾಗ್ದಾನಗಳನ್ನು ನೀವು ಹೇಗೆ ವೀಕ್ಷಿಸುತ್ತೀರಿ?
ಎಲ್ ಸಾಲ್ವಡೋರ್ನ ಒಬ್ಬ ಯೌವನಸ್ಥನು, ಈ ವಿಷಯಗಳಲ್ಲಿ ಕೆಲವನ್ನು ವಿವರಿಸಿದ ಒಂದು ಬೈಬಲ್ ಕಿರುಹೊತ್ತಗೆಯನ್ನು ಪಡೆದುಕೊಂಡನು. ಅದನ್ನು ಅವನಿಗೆ ಕೊಟ್ಟ ಸಾಕ್ಷಿಯ ಬಳಿ ಅವನು ಹೇಳಿದ್ದು, “ತಾಯಿ, ಈ ಕಿರುಹೊತ್ತಗೆಯು ಹೇಳುವಂತಹ ವಿಷಯವು ವಾಸ್ತವಿಕವಾಗುವುದು ತುಂಬ ಕಷ್ಟ.” ಅನೇಕರು ಆ ರೀತಿ ಪ್ರತಿಕ್ರಿಯೆತೋರಿಸುತ್ತಾರೆ. ಆದರೂ, ಇವು ವಿಶ್ವವನ್ನು ಸೃಷ್ಟಿಸಿದಾತನ, ನಮ್ಮ ಭೂಮಿಯ ನೈಸರ್ಗಿಕ ಚಕ್ರಗಳನ್ನು ಕಾರ್ಯರೂಪಕ್ಕೆ ತಂದಾತನ, ಹಾಗೂ ಬಡವರಿಗೂ ಅಸ್ವಸ್ಥರಿಗೂ ಆನಂದವನ್ನು ಕಂಡುಕೊಳ್ಳುವಂತೆ ಸಹಾಯ ಮಾಡುವಾತನ ವಾಗ್ದಾನಗಳಾಗಿವೆ. ಆತನು ಏನನ್ನು ಹೇಳುತ್ತಾನೋ ಅದನ್ನು ನಾವು ನಂಬಬಲ್ಲೆವು. ಮೇಲೆ ಪ್ರಸ್ತಾಪಿಸಲ್ಪಟ್ಟ ಯೌವನಸ್ಥನು, ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಿದನು. ಮತ್ತು ಇದನ್ನು ಸತ್ಯವೆಂಬುದಾಗಿ ಕಂಡುಕೊಂಡನು. ನೀವು ಈಗಾಗಲೇ ಬೈಬಲನ್ನು ಅಭ್ಯಾಸಿಸುತ್ತಿಲ್ಲದಿದ್ದಲ್ಲಿ, ನೀವೂ ಅದನ್ನು ಅಭ್ಯಾಸಿಸುವಂತೆ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಆಗ, ಈ ಪ್ರಸ್ತುತ ವಿಷಯಗಳ ವ್ಯವಸ್ಥೆಯು ಗತಿಸಿಹೋಗಿರುವಾಗ, ಮತ್ತು ಸರ್ವ ಸೃಷ್ಟಿಯೂ “ಹಲ್ಲೆಲೂಯಾ!” “ಜನರೇ, ಯಾಹುವನ್ನು ಸ್ತುತಿಸಿರಿ!” (NW) ಎಂಬ ಕೂಗಿನಲ್ಲಿ ಜೊತೆಗೂಡುವಾಗ, ನೀವು ನೂತನ ಲೋಕದಲ್ಲಿರುವಂತಾಗಲಿ.—ಕೀರ್ತನೆ 112:1; 135:1.
[ಅಧ್ಯಯನ ಪ್ರಶ್ನೆಗಳು]
a ಬೈಬಲಿನಲ್ಲಿ, “ಯೆಹೋವ” ಎಂಬುದು ಕೆಲವೊಮ್ಮೆ “ಯಾಹು” ಎಂಬುದಾಗಿ ಸಂಕ್ಷಿಪ್ತಗೊಳಿಸಲಾಗಿದೆ.
[ಪುಟ 5 ರಲ್ಲಿರುವ ಚಿತ್ರ]
ಸರ್ವ ಸೃಷ್ಟಿಯೂ “ಹಲ್ಲೆಲೂಯಾ!” ಎಂಬ ಕೂಗಿನಲ್ಲಿ ಜೊತೆಗೂಡುವಾಗ, ನೀವು ಅಲ್ಲಿರುವಂತಾಗಲಿ