ತಮ್ಮ ಸೃಷ್ಟಿಕರ್ತನನ್ನು ಸ್ಮರಿಸಿಕೊಳ್ಳುವ ಯೌವನಸ್ಥರು
“ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು.”—ಪ್ರಸಂಗಿ 12:1.
1. ನಮ್ಮ ಸೃಷ್ಟಿಕರ್ತನು ಅವನಿಗೆ ವಾಸ್ತವವಾಗಿದ್ದಾನೆಂದು 11 ವರ್ಷ ಪ್ರಾಯದ ಒಬ್ಬ ಹುಡುಗನ ಯಾವ ಅಭಿವ್ಯಕ್ತಿಗಳು ಪ್ರಕಟಿಸುತ್ತವೆ?
ತಾವು ಯಾರನ್ನು ಮೆಚ್ಚಿ, ಸಂತೋಷಪಡಿಸಬಯಸುತ್ತಾರೊ, ಆ ಯೆಹೋವ ದೇವರನ್ನು ಒಬ್ಬ ವಾಸ್ತವವಾದ ವ್ಯಕ್ತಿಯೋಪಾದಿ ಅವರು ವೀಕ್ಷಿಸುತ್ತಾರೆಂದು ತೋರಿಸುವ ವಿಧದಲ್ಲಿ ಯುವ ಜನರು ಮಾತಾಡಿ, ಕ್ರಿಯೆಗೈಯುವಾಗ ಅದು ಎಷ್ಟು ಉತ್ತಮವಾಗಿದೆ! 11 ವರ್ಷ ಪ್ರಾಯದ ಒಬ್ಬ ಹುಡುಗನು ಹೇಳಿದ್ದು: “ನಾನು ಒಬ್ಬಂಟಿಗನಾಗಿದ್ದು, ಕಿಟಕಿಯ ಆಚೆ ನೋಡುವಾಗ, ಯೆಹೋವನ ಸೃಷ್ಟಿಗಳು ಎಷ್ಟು ಅದ್ಭುತವಾಗಿವೆ ಎಂಬುದನ್ನು ನಾನು ನೋಡುತ್ತೇನೆ. ಅನಂತರ ಭವಿಷ್ಯತ್ತಿನಲ್ಲಿ ಪ್ರಮೋದವನವು ಎಷ್ಟು ಸುಂದರವಾಗಿರುವುದೆಂದು ಮತ್ತು ಆಗ ನಾನು ಪ್ರಾಣಿಗಳನ್ನು ಹೇಗೆ ಮುಟ್ಟಸಾಧ್ಯವಿರುವುದೆಂಬುದನ್ನು ನಾನು ಕಲ್ಪಿಸಿಕೊಳ್ಳುತ್ತೇನೆ.” (ಯೆಶಾಯ 11:6-9) ಅವನು ಕೂಡಿಸಿದ್ದು: “ನಾನು ಒಬ್ಬಂಟಿಗನಾಗಿರುವಾಗ, ಯೆಹೋವನಿಗೆ ಪ್ರಾರ್ಥಿಸುತ್ತೇನೆ. ಎಲ್ಲ ಸಮಯ ಆತನೊಂದಿಗೆ ಮಾತಾಡುವುದಕ್ಕಾಗಿ ಆತನಿಗೆ ನನ್ನ ಮೇಲೆ ಸಿಟ್ಟು ಬರುವುದಿಲ್ಲವೆಂದು ನನಗೆ ತಿಳಿದಿದೆ. ಆತನು ಯಾವಾಗಲೂ ನನ್ನನ್ನು ಗಮನಿಸುತ್ತಿರುತ್ತಾನೆಂದು ನನಗೆ ಗೊತ್ತು.” ನಮ್ಮ ಸೃಷ್ಟಿಕರ್ತನು ಈ ಹುಡುಗನಿಗೆ ಎಷ್ಟು ವಾಸ್ತವವಾಗಿದ್ದಾನೊ ನಿಮಗೂ ಅಷ್ಟೇ ವಾಸ್ತವವಾಗಿದ್ದಾನೊ?
ನಿಮಗೆ ದೇವರು ಎಷ್ಟು ವಾಸ್ತವವಾಗಿದ್ದಾನೆ?
2. (ಎ) ನಿಮ್ಮ ಸೃಷ್ಟಿಕರ್ತನು ನಿಮಗೆ ಹೇಗೆ ವಾಸ್ತವವಾಗಿ ಪರಿಣಮಿಸಬಲ್ಲನು? (ಬಿ) ದೇವರು ಒಬ್ಬ ವಾಸ್ತವವಾದ ವ್ಯಕ್ತಿಯೆಂಬುದನ್ನು ತಮ್ಮ ಮಕ್ಕಳು ಗಣ್ಯಮಾಡುವಂತೆ ಸಹಾಯಮಾಡುವುದರಲ್ಲಿ ಹೆತ್ತವರಿಗೆ ಯಾವ ಪಾತ್ರವಿರಬಲ್ಲದು?
2 ಯೆಹೋವನು ಮತ್ತು ಆತನ ವಾಗ್ದಾನಗಳು ನಿಮಗೆ ವಾಸ್ತವವಾಗಿರಬೇಕಾದರೆ, ನೀವು ಪ್ರಥಮವಾಗಿ ಆತನ ಕುರಿತು ಮತ್ತು ಬೈಬಲು ವರ್ಣಿಸುವಂತಹ ಆ ನೀತಿಯ ಹೊಸ ಲೋಕದಲ್ಲಿ ನಿಮಗೆ ಆತನು ನೀಡುವ ಅದ್ಭುತಕರವಾದ ಭವಿಷ್ಯತ್ತಿನ ಕುರಿತು ಕಲಿಯಬೇಕು. (ಪ್ರಕಟನೆ 21:3, 4) ಈ ವಿಷಯಗಳ ಕುರಿತು ನಿಮ್ಮ ಹೆತ್ತವರು ನಿಮಗೆ ಕಲಿಸಿರುವಲ್ಲಿ, ಕೃತಜ್ಞರಾಗಿರಲು ನಿಮಗೆ ಕಾರಣವಿದೆ, ಏಕೆಂದರೆ ಇದು, “ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು,” ಎಂಬ ಪ್ರೇರಿತ ಆಜ್ಞೆಗೆ ಲಕ್ಷ್ಯಕೊಡುವಂತೆ ನಿಮ್ಮನ್ನು ಶಕ್ತರನ್ನಾಗಿಮಾಡುತ್ತದೆ. (ಓರೆಅಕ್ಷರಗಳು ನಮ್ಮವು.) (ಪ್ರಸಂಗಿ 12:1) ತನ್ನ ಹೆತ್ತವರು ನೀಡಿದ ಆರಂಭದ ತರಬೇತಿಯ ಕುರಿತು ಒಬ್ಬಾಕೆ ಯುವತಿಯು ಹೇಳಿದ್ದು: “ಜೀವಿತದಲ್ಲಿನ ಪ್ರತಿಯೊಂದು ವಿಷಯವು ಯೆಹೋವನನ್ನು ಒಳಗೊಂಡಿತು. ನನ್ನ ಸೃಷ್ಟಿಕರ್ತನನ್ನು ನಾನು ಸ್ಮರಿಸಿಕೊಳ್ಳುವುದಕ್ಕೆ ಇದು ಕೀಲಿ ಕೈಯಾಗಿತ್ತು.” ಮತ್ತೊಬ್ಬ ಯುವ ಸ್ತ್ರೀಯು ಗಮನಿಸಿದ್ದು: “ಯೆಹೋವನು ಒಬ್ಬ ವಾಸ್ತವವಾದ ವ್ಯಕ್ತಿಯೆಂದು ನನಗೆ ಕಲಿಸಿದುದಕ್ಕಾಗಿ ನಾನು ನನ್ನ ಹೆತ್ತವರಿಗೆ ಚಿರಋಣಿ. ಆತನನ್ನು ಹೇಗೆ ಪ್ರೀತಿಸುವುದೆಂದು ಅವರು ತೋರಿಸಿದರು ಮತ್ತು ಆತನನ್ನು ಪೂರ್ಣ ಸಮಯ ಸೇವಿಸುವುದರ ಆನಂದದ ಕುರಿತು ನನಗೆ ಹೇಳಿದರು.”
3, 4. ಯೆಹೋವನ ಕುರಿತು ಒಬ್ಬ ವಾಸ್ತವವಾದ ವ್ಯಕ್ತಿಯೋಪಾದಿ ಯೋಚಿಸುವಂತೆ ನಿಮಗೆ ಯಾವುದು ಸಹಾಯಮಾಡಬಲ್ಲದು?
3 ಆದರೂ, ಯಾರು ತಮ್ಮ ವಿಷಯದಲ್ಲಿ ಆಸಕ್ತನಾಗಿದ್ದಾನೊ, ಅಂತಹ ಒಬ್ಬ ವಾಸ್ತವವಾದ ವ್ಯಕ್ತಿಯೋಪಾದಿ ದೇವರ ಕುರಿತು ಭಾವಿಸಿಕೊಳ್ಳುವುದನ್ನು ಅನೇಕರು ಕಷ್ಟಕರವಾಗಿ ಕಂಡುಕೊಳ್ಳುತ್ತಾರೆ. ನಿಮಗೆ ಹಾಗೆ ಅನಿಸುತ್ತದೊ? ಯುವಕನೊಬ್ಬನು ದ ವಾಚ್ಟವರ್ ಪತ್ರಿಕೆಯಲ್ಲಿ ಕಂಡುಬಂದ ಈ ಮುಂದಿನ ಹೇಳಿಕೆಯಿಂದ, ದೇವರ ಕುರಿತು ಒಂದು ವೈಯಕ್ತಿಕವಾದ ವಿಧದಲ್ಲಿ ಯೋಚಿಸುವಂತೆ ಸಹಾಯಮಾಡಲ್ಪಟ್ಟನು: “ಯೆಹೋವ ದೇವರ ಗಾತ್ರದ ಕುರಿತು ನಮಗೆ ಗೊತ್ತಿಲ್ಲ.” ನಿಶ್ಚಯವಾಗಿಯೂ, ಆ ವಾಚ್ಟವರ್ ಪತ್ರಿಕೆಯ ಮುಂದಿನ ವಾಕ್ಯವು ಹೇಳಿದಂತೆ, ದೇವರ ಹಿರಿಮೆಯು ಆತನ ಗಾತ್ರ ಅಥವಾ ರೂಪದ ಮೇಲೆ ಅವಲಂಬಿಸಿರುವುದಿಲ್ಲ: “ಆತನ ನಿಜವಾದ ದೊಡ್ಡತನವು, ಆತನು ಯಾವ ರೀತಿಯ ದೇವರಾಗಿದ್ದಾನೊ ಅದರ ಮೇಲೆ ಅವಲಂಬಿಸಿದೆ,” ಖಂಡಿತವಾಗಿಯೂ, ಒಬ್ಬ ನಂಬಿಗಸ್ತ, ಸಹಾನುಭೂತಿಯುಳ್ಳ, ಪ್ರೀತಿಪರ, ಮತ್ತು ಕ್ಷಮಿಸುವಂತಹ ದೇವರು.a (ವಿಮೋಚನಕಾಂಡ 34:6; ಧರ್ಮೋಪದೇಶಕಾಂಡ 32:4; ಕೀರ್ತನೆ 86:5; ಯಾಕೋಬ 5:11) ನೀವು ಯೆಹೋವನನ್ನು ಅಂತಹ ಒಬ್ಬ ವ್ಯಕ್ತಿಯಾಗಿ, ನೀವು ಯಾರೊಂದಿಗೆ ಒಂದು ಅಮೂಲ್ಯವಾದ ಸಂಬಂಧವನ್ನಿಟ್ಟುಕೊಳ್ಳಬಲ್ಲಿರೊ ಅಂತಹ ಒಬ್ಬ ಭರವಸಯೋಗ್ಯ ಮಿತ್ರನೋಪಾದಿ ವೀಕ್ಷಿಸತೊಡಗಿದ್ದೀರೊ?—ಯೆಶಾಯ 41:8; ಯಾಕೋಬ 2:23.
4 ದೇವರೊಂದಿಗೆ ಒಂದು ವೈಯಕ್ತಿಕ ಸಂಬಂಧವನ್ನು ಅನುಭವಿಸುವಂತೆ ಯೇಸು ತನ್ನ ಆರಂಭದ ಹಿಂಬಾಲಕರಿಗೆ ಸಹಾಯಮಾಡಿದನು. ಹೀಗೆ, ಸ್ವರ್ಗೀಯ ಜೀವಿತಕ್ಕೆ ತನ್ನ ನಿರೀಕ್ಷಿತ ಪುನರುತ್ಥಾನದ ಕುರಿತು ಅಪೊಸ್ತಲ ಯೋಹಾನನು ಬರೆದಾಗ, ಯೋಹಾನನು ಗಮನಿಸಿದ್ದು: “ನಾವು [ದೇವರ] ಹಾಗಿರುವೆವೆಂದು ಬಲ್ಲೆವು; ಯಾಕಂದರೆ ಆತನಿರುವ ಪ್ರಕಾರವೇ ಆತನನ್ನು ನೋಡುವೆವು.” (1 ಯೋಹಾನ 3:2; 1 ಕೊರಿಂಥ 15:44) ಇಂದು ಯೌವನಸ್ಥರು, ದೇವರನ್ನು ಒಬ್ಬ ವಾಸ್ತವವಾದ ವ್ಯಕ್ತಿಯೋಪಾದಿ, ತಾವು ವೈಯಕ್ತಿಕವಾಗಿ ನೋಡಸಾಧ್ಯವಿಲ್ಲದಿದ್ದರೂ ಚಿರಪರಿಚಿತರಾಗಸಾಧ್ಯವಿರುವ ಒಬ್ಬ ವ್ಯಕ್ತಿಯೋಪಾದಿ ವೀಕ್ಷಿಸುವಂತೆಯೂ ಸಹಾಯಮಾಡಲ್ಪಡಬಲ್ಲರು. ಯುವ ಪುರುಷನೊಬ್ಬನು ಗಮನಿಸಿದ್ದು: “‘ಯೆಹೋವನು ಏನು ಹೇಳಾನು? ನಿನ್ನ ಸ್ವಂತ ಮಾತುಗಳಲ್ಲಿ ನೀನು ಅದನ್ನು ಹೇಗೆ ವಿವರಿಸುವಿ? ಅದು ಏನನ್ನು ಅರ್ಥೈಸುತ್ತದೆ?’ ಎಂಬಂತಹ ಅನೇಕ ಪ್ರಶ್ನೆಗಳನ್ನು ಕೇಳುವ ಮೂಲಕ ಯೆಹೋವನನ್ನು ನಾನು ಸ್ಮರಿಸಿಕೊಳ್ಳುವಂತೆ ನನ್ನ ಹೆತ್ತವರು ನನಗೆ ಸಹಾಯಮಾಡಿದರು.” ಇಂತಹ ಪ್ರಶ್ನೆಗಳು, ದೇವರೊಂದಿಗಿನ ನಮ್ಮ ವೈಯಕ್ತಿಕ ಸಂಬಂಧದ ಕುರಿತು ನಾವು ಯೋಚಿಸುವಂತೆ ಮಾಡುವುದಿಲ್ಲವೊ?
ಸ್ಮರಿಸಿಕೊಳ್ಳುವುದರ ಅರ್ಥ
5. ವ್ಯಕ್ತಿಯೊಬ್ಬನನ್ನು ಸ್ಮರಿಸಿಕೊಳ್ಳುವುದು ಅವನ ಹೆಸರನ್ನು ಜ್ಞಾಪಿಸಿಕೊಳ್ಳುವುದಕ್ಕಿಂತಲೂ ಹೆಚ್ಚಿನದ್ದನ್ನು ಒಳಗೊಳ್ಳುತ್ತದೆಂದು ಯಾವ ಬೈಬಲ್ ಉದಾಹರಣೆಗಳು ತೋರಿಸುತ್ತವೆ?
5 “ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು” ಎಂಬ ಆಜ್ಞೆಗೆ ಲಕ್ಷ್ಯಕೊಡುವುದು, ಯೆಹೋವನ ಕುರಿತು ಕೇವಲ ಯೋಚಿಸುವುದಕ್ಕಿಂತಲೂ ಹೆಚ್ಚಿನದ್ದನ್ನು ಅರ್ಥೈಸುತ್ತದೆ. ಅದು ಕ್ರಿಯೆಯನ್ನು, ಆತನಿಗೆ ಮೆಚ್ಚಿಕೆಯಾಗುವಂತಹದ್ದನ್ನು ಮಾಡುವುದನ್ನು ಒಳಗೊಳ್ಳುತ್ತದೆ. ಪಾತಕಿಯು, “ನೀನು ನಿನ್ನ ರಾಜ್ಯವನ್ನು ಪಡೆದವನಾಗಿ ಬರುವಾಗ ನನ್ನನ್ನು ನೆನಸಿಕೋ [“ಸ್ಮರಿಸಿಕೊ,” NW]” ಎಂಬುದಾಗಿ ಯೇಸುವನ್ನು ಬೇಡಿಕೊಂಡಾಗ, ತನ್ನ ಹೆಸರನ್ನು ಜ್ಞಾಪಿಸಿಕೊಳ್ಳುವುದಕ್ಕಿಂತಲೂ ಹೆಚ್ಚಿನದ್ದನ್ನು ಯೇಸು ಮಾಡುವಂತೆ ಅವನು ಬಯಸಿದನು. ಯೇಸು ಕ್ರಿಯೆಗೈಯುವಂತೆ, ಅವನನ್ನು ಪುನರುತ್ಥಾನಗೊಳಿಸುವಂತೆ ಅವನು ಬಯಸಿದನು. (ಓರೆಅಕ್ಷರಗಳು ನಮ್ಮವು.) (ಲೂಕ 23:42) ತದ್ರೀತಿಯಲ್ಲಿ, ಸೆರೆಮನೆಯಲ್ಲಿ ಹಾಕಲ್ಪಟ್ಟ ಯೋಸೇಫನು, ಫರೋಹನ ಮುಂದೆ ತನ್ನ ಕುರಿತು ಸ್ಮರಿಸಿಕೊಳ್ಳುವಂತೆ ಫರೋಹನ ಪಾನದಾಯಕನನ್ನು ಕೇಳಿಕೊಂಡಾಗ, ತನ್ನ ಪರವಾಗಿ ಯಾವುದೊ ಕ್ರಿಯೆಯನ್ನು ನಿರೀಕ್ಷಿಸಿದನು. ಮತ್ತು ಯೋಬನು ದೇವರಲ್ಲಿ “ನನ್ನನ್ನು ಜ್ಞಾಪಿಸಿಕೊ,” ಎಂಬುದಾಗಿ ಬಿನ್ನಹ ಮಾಡಿದಾಗ, ಭವಿಷ್ಯತ್ತಿನ ಯಾವುದೊ ಸಮಯದಲ್ಲಿ ದೇವರು ಅವನನ್ನು ಪುನರುತ್ಥಾನಗೊಳಿಸಲು ಕ್ರಿಯೆಗೈಯಬೇಕೆಂದು ಯೋಬನು ವಿನಂತಿಸಿಕೊಳ್ಳುತ್ತಿದ್ದನು. (ಓರೆಅಕ್ಷರಗಳು ನಮ್ಮವು.)—ಯೋಬ 14:13; ಆದಿಕಾಂಡ 40:14, 23.
6. “ಸ್ಮರಿಸು” ಎಂಬ ಪದಕ್ಕಾಗಿರುವ ಹೀಬ್ರು ಪದವು, ಸ್ಮರಿಸಲ್ಪಟ್ಟ ವಸ್ತು ಅಥವಾ ವ್ಯಕ್ತಿಗಾಗಿ ಮಮತೆಯನ್ನು ಹೇಗೆ ಅರ್ಥೈಸುತ್ತದೆ?
6 “ಸ್ಮರಿಸು” ಎಂಬುದಾಗಿ ಭಾಷಾಂತರಿಸಲ್ಪಟ್ಟ ಹೀಬ್ರು ಪದವು ಅನೇಕ ವೇಳೆ, “ಮನಸ್ಸಿನ ಮಮತೆಯನ್ನು ಮತ್ತು ಸ್ಮರಣೆಯನ್ನು ಜೊತೆಗೂಡುವ ಕ್ರಿಯೆಯನ್ನು” ಸೂಚಿಸುತ್ತದೆಂದು ಒಂದು ಪ್ರಮಾಣಗ್ರಂಥವು ಹೇಳುತ್ತದೆ. “ಸ್ಮರಿಸು” ಎಂಬ ಪದದಲ್ಲಿರುವ “ಮಮತೆ”ಯ ಸೇರುವಿಕೆಯನ್ನು, ಅರಣ್ಯದಲ್ಲಿನ “ಇತರ ಜನರ” ಉದ್ಗಾರದಲ್ಲಿ ನೋಡಸಾಧ್ಯವಿದೆ: “ಐಗುಪ್ತದೇಶದಲ್ಲಿ ನಾವು . . . ತಿನ್ನುತ್ತಿದ್ದ ಮೀನು . . . ನೆನಪಿಗೆ ಬರುತ್ತವಲ್ಲಾ.” (ಓರೆಅಕ್ಷರಗಳು ನಮ್ಮವು.) ದೇವರಿಂದ ಶುಭಕರವಾಗಿ ಸ್ಮರಿಸಿಕೊಳ್ಳಲ್ಪಡುವಂತೆ ಯೋಬನು ಬಿನ್ನಹ ಮಾಡಿದಂತೆಯೇ, ಹಿಜ್ಕೀಯ, ನೆಹೆಮೀಯ, ದಾವೀದ, ಮತ್ತು ಒಬ್ಬ ಅನಾಮಧೇಯ ಕೀರ್ತನೆಗಾರನೂ, ತಮ್ಮ ನಂಬಿಗಸ್ತಿಕೆಯ ಅಂಗೀಕಾರದಲ್ಲಿ ಯೆಹೋವನ ಮೂಲಕ ಮಮತೆಯಿಂದ ಸ್ಮರಿಸಲ್ಪಡಲು ಬೇಡಿಕೊಂಡರು.—ಅರಣ್ಯಕಾಂಡ 11:4, 5; 2 ಅರಸುಗಳು 20:3; ನೆಹೆಮೀಯ 5:19; 13:31; ಕೀರ್ತನೆ 25:7; 106:4.
7. ನಾವು ದೇವರನ್ನು ಮಮತೆಯಿಂದ ಸ್ಮರಿಸಿಕೊಳ್ಳುವುದಾದರೆ, ಇದು ನಮ್ಮ ನಡತೆಯನ್ನು ಹೇಗೆ ಪ್ರಭಾವಿಸುವುದು?
7 ಹೀಗೆ, ‘ನಾವು ಮಮತೆಯಿಂದ ನಮ್ಮ ಸೃಷ್ಟಿಕರ್ತನನ್ನು ಸ್ಮರಿಸಿ, ಆತನಿಗೆ ನೋವು ಅಥವಾ ವೇದನೆಯನ್ನುಂಟುಮಾಡುವ ಯಾವುದೇ ವಿಷಯವನ್ನು ಮಾಡುವುದನ್ನು ತ್ಯಜಿಸುತ್ತೇವೊ?’ ಎಂದು ಕೇಳಿಕೊಳ್ಳಸಾಧ್ಯವಿದೆ. ಯುವತಿಯೊಬ್ಬಳು ಗಮನಿಸಿದ್ದು: “ಯೆಹೋವನಿಗೆ ಅನಿಸಿಕೆಗಳಿವೆಯೆಂದು ನಾನು ಗುರುತಿಸುವಂತೆ ತಾಯಿಯು ಸಹಾಯಮಾಡಿದಳು, ಮತ್ತು ಚಿಕ್ಕ ಪ್ರಾಯದಲ್ಲೇ, ನನ್ನ ಕ್ರಿಯೆಗಳು ಆತನ ಮೇಲೆ ಪ್ರಭಾವ ಬೀರಿದವೆಂಬ ಅರಿವು ನನಗಿತ್ತು.” (ಕೀರ್ತನೆ 78:40-42) ಮತ್ತೊಬ್ಬಳು ವಿವರಿಸಿದ್ದು: “ಸೈತಾನನು ಯೆಹೋವನಿಗೆ ಒಡ್ಡಿದ ಸವಾಲನ್ನು ಉತ್ತರಿಸುವುದರಲ್ಲಿ ನನ್ನ ಕ್ರಿಯೆಗಳು ಸಹಾಯಮಾಡಲಿದ್ದವು ಇಲ್ಲವೆ ತಡೆಯಲಿದ್ದವು ಎಂದು ನನಗೆ ತಿಳಿದಿತ್ತು. ಯೆಹೋವನ ಹೃದಯವನ್ನು ಉಲ್ಲಾಸಗೊಳಿಸಲು ನಾನು ಬಯಸಿದೆ, ಹೀಗೆ ಅದು ನನಗೆ ಸಹಾಯಮಾಡಿತು ಮತ್ತು ಇಂದು ನನಗೆ ಸಹಾಯಮಾಡುವುದನ್ನು ಮುಂದುವರಿಸುತ್ತದೆ.”—ಜ್ಞಾನೋಕ್ತಿ 27:11.
8. (ಎ) ನಾವು ಯೆಹೋವನನ್ನು ಮಮತೆಯಿಂದ ಸ್ಮರಿಸಿಕೊಳ್ಳುತ್ತೇವೆಂಬುದನ್ನು ಯಾವ ಬೆನ್ನಟ್ಟುವಿಕೆಯು ಸೂಚಿಸುವುದು? (ಬಿ) ಯಾವ ಪ್ರಶ್ನೆಗಳನ್ನು ಯೌವನಸ್ಥರು ವಿವೇಕಯುತವಾಗಿ ಪರಿಗಣಿಸುವರು?
8 ಸರ್ವಸಮ್ಮತವಾಗಿರುವಂತೆ, ಈ ದುಷ್ಟ ಲೋಕದಲ್ಲಿ, ಯೆಹೋವನನ್ನು ಸಂತೋಷಪಡಿಸುವ ಚಟುವಟಿಕೆಯಲ್ಲಿ ಪೂರ್ಣವಾಗಿ ಭಾಗವಹಿಸುವ ಮೂಲಕ ಆತನನ್ನು ಸ್ಮರಿಸಿಕೊಳ್ಳುವುದು ಯಾವಾಗಲೂ ಸುಲಭವಾಗಿರುವುದಿಲ್ಲ. ಆದರೂ ಒಬ್ಬ ಪಯನೀಯರ್ ಶುಶ್ರೂಷಕನಂತೆ ಕ್ರೈಸ್ತ ಸೇವೆಯನ್ನು ಪೂರ್ಣ ಸಮಯ ಬೆನ್ನಟ್ಟುವ ಮೂಲಕ ನೀವು ಪ್ರಥಮ ಶತಮಾನದ ಯುವ ತಿಮೊಥೆಯನನ್ನು—ಇಂದು, ದೇವಭಯವುಳ್ಳ ಸಾವಿರಾರು ಯೌವನಸ್ಥರನ್ನು ಸೇರಿಸಿ—ಅನುಕರಿಸಸಾಧ್ಯವಿರುವಲ್ಲಿ, ಅದು ಎಷ್ಟು ಉತ್ತಮವಾಗಿರುವುದು! (ಅ. ಕೃತ್ಯಗಳು 16:1-3; 1 ಥೆಸಲೊನೀಕ 3:2) ಹಾಗಿದ್ದರೂ, ಪಯನೀಯರ್ ಶುಶ್ರೂಷೆಯಲ್ಲಿ ನಿಮ್ಮನ್ನು ಪೋಷಿಸಿಕೊಳ್ಳಲು ನೀವು ಶಕ್ತರಾಗಿರುವಿರೊ? ಎಂಬುದಾಗಿ ಕೇಳಿಕೊಳ್ಳಬಹುದಾಗಿದೆ. ಮತ್ತು ನೀವು ವಿವಾಹವಾದಲ್ಲಿ, ನಿಮ್ಮ ಕುಟುಂಬದಲ್ಲಿರುವವರಿಗಾಗಿ ಒದಗಿಸಲು ನಿಮ್ಮಲ್ಲಿ ಕೌಶಲಗಳಿರುವವೊ? (1 ತಿಮೊಥೆಯ 5:8) ಇವು ಪ್ರಾಮುಖ್ಯ ಪ್ರಶ್ನೆಗಳಾಗಿವೆ, ಮತ್ತು ಅವುಗಳಿಗೆ ನೀವು ಗಂಭೀರವಾದ ಧ್ಯಾನವನ್ನು ನೀಡುವುದು ಆವಶ್ಯಕ.
ಒಂದು ಉದ್ದೇಶವುಳ್ಳ ಶಿಕ್ಷಣ
9. ಐಹಿಕ ಶಿಕ್ಷಣದ ಕುರಿತು ಯಾವ ನಿರ್ಣಯವು ಯೌವನಸ್ಥರ ಎದುರಿನಲ್ಲಿದೆ?
9 ಮಾನವ ಸಮಾಜವು ಹೆಚ್ಚು ಜಟಿಲವಾದಂತೆ, ನಿಮ್ಮನ್ನು ಪಯನೀಯರ್ ಕೆಲಸದಲ್ಲಿ ಪೋಷಿಸಿಕೊಳ್ಳಲಿಕ್ಕಾಗಿ ಯಥೋಚಿತ ಉದ್ಯೋಗವನ್ನು ಪಡೆದುಕೊಳ್ಳಲು, ಹೆಚ್ಚಿನ ಮಟ್ಟದ ಶಾಲಾ ಶಿಕ್ಷಣವು ಬೇಕಾಗಿರಬಹುದು. ವಿಶ್ವವಿದ್ಯಾನಿಲಯದ ಶಿಕ್ಷಣವೂ ಇದ್ದ ಕೆಲವರು, ಇಂದು ಧಣಿಗಳಿಂದ ಮಹತ್ವದ್ದೆಂದೆಣಿಸಲ್ಪಡುವ ಹೊಸ ಕೌಶಲಗಳನ್ನು ಪಡೆದುಕೊಳ್ಳಲು ಪುನಃ ಶಿಕ್ಷಣವನ್ನು ಪಡೆಯಬೇಕಾಗಿತ್ತೆಂಬುದನ್ನು ನೀವು ಗಮನಿಸಿದ್ದಿರಬಹುದು. ಆದುದರಿಂದ ದೇವರನ್ನು ಸಂತೋಷಪಡಿಸಲು ಬಯಸುವ ಯುವ ಮಕ್ಕಳಾದ ನೀವು, ಇನ್ನೆಷ್ಟು ಶಾಲಾ ಶಿಕ್ಷಣವನ್ನು ಬೆನ್ನಟ್ಟುವಿರಿ? “ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು,” ಎಂಬ ಪ್ರೇರಿತ ಆಜ್ಞೆಯನ್ನು ಮನಸ್ಸಿನಲ್ಲಿಡುತ್ತಾ, ನಿರ್ಣಯವು ಯೋಗ್ಯವಾಗಿ ಮಾಡಲ್ಪಡಬೇಕು.
10. ನಾವು ಪಡೆಯಬಲ್ಲ ಅತ್ಯುತ್ತಮ ಶಿಕ್ಷಣವು ಯಾವುದು?
10 ನೀವು ನಿಶ್ಚಯವಾಗಿಯೂ, ಅತ್ಯುತ್ತಮ ಶಿಕ್ಷಣ—ದೇವರ ವಾಕ್ಯದ ಜಾಗರೂಕ ಅಧ್ಯಯನದಿಂದ ಗ್ರಹಿಸಲ್ಪಟ್ಟ ಶಿಕ್ಷಣ—ವೆಂದು ಅನೇಕ ಐಹಿಕ ಅಧಿಕಾರಿಗಳೂ ಪರಿಗಣಿಸುವಂತಹ ಶಿಕ್ಷಣವನ್ನು ಬೆನ್ನಟ್ಟಬಯಸುವಿರಿ. ಜರ್ಮನ್ ಬರಹಗಾರ ಯೊಹಾನ್ ವೊಲ್ಫ್ಗಾಂಗ್ ವಾನ್ ಗಟ ಗಮನಿಸಿದ್ದು: “[ಒಂದು ಜನಾಂಗ]ದ ಬೌದ್ಧಿಕ ಪ್ರಗತಿಯು ಹೆಚ್ಚಾದಷ್ಟು, ಬೈಬಲನ್ನು ಶಿಕ್ಷಣದ ಅಸ್ತಿವಾರದಂತೆ ಹಾಗೂ ಸಾಧನದಂತೆ ಬಳಸಲು ಹೆಚ್ಚು ಪೂರ್ಣವಾಗಿ ಸಾಧ್ಯವಾಗುವುದು.” ಹೌದು, ಬೈಬಲಿನ ಅಧ್ಯಯನವು ಬೇರೆ ಯಾವುದೇ ಶಿಕ್ಷಣಕ್ಕಿಂತಲೂ ನಿಮ್ಮನ್ನು ಜೀವಿತಕ್ಕಾಗಿ ಹೆಚ್ಚು ಉತ್ತಮವಾಗಿ ಸಜ್ಜುಗೊಳಿಸುವುದು!—ಜ್ಞಾನೋಕ್ತಿ 2:6-17; 2 ತಿಮೊಥೆಯ 3:14-17.
11. (ಎ) ನಾವು ಮಾಡಸಾಧ್ಯವಿರುವ ಅತಿ ಪ್ರಾಮುಖ್ಯವಾದ ಕೆಲಸವು ಯಾವುದು? (ಬಿ) ಒಂದಿಷ್ಟು ಪ್ರಮಾಣದ ಶಿಕ್ಷಣವನ್ನು ಪಡೆದುಕೊಳ್ಳಲು ಯುವತಿಯೊಬ್ಬಳು ಆರಿಸಿಕೊಂಡದ್ದೇಕೆ?
11 ದೇವರ ಜ್ಞಾನವು ಜೀವದಾಯಕವಾಗಿರುವುದರಿಂದ, ಇಂದು ನೀವು ಮಾಡಸಾಧ್ಯವಿರುವ ಅತಿ ಪ್ರಾಮುಖ್ಯವಾದ ಕೆಲಸವು, ಆ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳುವುದಾಗಿದೆ. (ಜ್ಞಾನೋಕ್ತಿ 3:13-18; ಯೋಹಾನ 4:34; 17:3) ಆದರೆ, ಇದನ್ನು ಪರಿಣಾಮಕಾರಿಯಾಗಿ ಮಾಡಲು, ನೀವು ಮೂಲಭೂತ ವಿಧಗಳಲ್ಲಿ ಶಿಕ್ಷಣಪಡೆಯುವ ಅಗತ್ಯವಿದೆ. ನೀವು ಸ್ಪಷ್ಟವಾಗಿ ಯೋಚಿಸಲು, ತರ್ಕಬದ್ಧವಾಗಿ ಮಾತಾಡಲು, ಮತ್ತು ಚೆನ್ನಾಗಿ ಓದಲು ಮತ್ತು ಬರೆಯಲು ಶಕ್ತರಾಗಿರುವ ಅಗತ್ಯವಿದೆ, ಇವು ಶಾಲೆಯಲ್ಲಿ ಕಲಿಸಲ್ಪಡುವ ಕೌಶಲಗಳಾಗಿವೆ. ಆದುದರಿಂದ, ವ್ಯಾಸಂಗದ ಪದವಿಗಳೊಂದಿಗೆ ಪ್ರೌಢ ಶಾಲೆಯಿಂದ ಪದವಿಪಡೆದ, ಅಮೆರಿಕದ ಫ್ಲಾರಿಡದಲ್ಲಿರುವ ಟ್ರೇಸಿಯೆಂಬ ಯುವತಿಯಂತೆ, ನಿಮ್ಮ ಶಾಲಾ ಕೋರ್ಸ್ಗಳನ್ನು ಗಂಭೀರವಾಗಿ ತೆಗೆದುಕೊಳ್ಳಿರಿ. ಆಕೆ ತನ್ನ ನಿರೀಕ್ಷೆಯನ್ನು ವ್ಯಕ್ತಪಡಿಸಿದಳು: “ನನ್ನ ದೇವರಾದ ಯೆಹೋವನ ಪೂರ್ಣ ಸಮಯದ ಸೇವಕಿಯಾಗಿರುವುದು ಯಾವಾಗಲೂ ನನ್ನ ಗುರಿಯಾಗಿದೆ, ಮತ್ತು ಈ ಗುರಿಯನ್ನು ಸಾಧಿಸಲು ನನ್ನ ಶಿಕ್ಷಣವು ನನಗೆ ಸಹಾಯಮಾಡುವುದೆಂದು ನಾನು ನಿರೀಕ್ಷಿಸುತ್ತೇನೆ.”
12. ಹೆಚ್ಚಿನ ಐಹಿಕ ಶಿಕ್ಷಣವು ಆರಿಸಿಕೊಳ್ಳಲ್ಪಟ್ಟಲ್ಲಿ, ಯಾವ ಉದ್ದೇಶವನ್ನು ನೆರವೇರಿಸಲು ಅದು ಸಹಾಯಮಾಡಬಹುದು?
12 ನೀವು ಶಾಲೆಗೆ ಏಕೆ ಹೋಗುತ್ತೀರೆಂಬುದರ ಕುರಿತು ನೀವು ಯೋಚಿಸಿದ್ದೀರೊ? ಅದು ಪ್ರಧಾನವಾಗಿ ನಿಮ್ಮನ್ನು ಯೆಹೋವನ ಒಬ್ಬ ಪರಿಣಾಮಕಾರಿ ಶುಶ್ರೂಷಕನಾಗಿ ಸಜ್ಜುಗೊಳಿಸಲಿಕ್ಕಾಗಿಯೊ? ಹಾಗಿರುವಲ್ಲಿ, ಈ ಉದ್ದೇಶವನ್ನು ನಿಮ್ಮ ಶಿಕ್ಷಣವು ಎಷ್ಟು ಉತ್ತಮವಾಗಿ ಪೂರೈಸುತ್ತದೆ ಎಂಬ ವಿಷಯಕ್ಕೆ ನೀವು ಗಂಭೀರವಾದ ಪರಿಗಣನೆಯನ್ನು ಕೊಡಬಯಸುವಿರಿ. ನಿಮ್ಮ ಹೆತ್ತವರೊಂದಿಗಿನ ಸಮಾಲೋಚನೆಯ ನಂತರ, ಕಾನೂನಿನಿಂದ ಕೇಳಿಕೊಳ್ಳಲ್ಪಡುವ ಕನಿಷ್ಠ ಮಟ್ಟದ ಶಿಕ್ಷಣಕ್ಕಿಂತಲೂ ಹೆಚ್ಚಿನ ಶಾಲಾ ಶಿಕ್ಷಣವನ್ನು ನೀವು ಬೆನ್ನಟ್ಟಬೇಕೆಂದು ನಿರ್ಧರಿಸಲ್ಪಡಬಹುದು. ಇಂತಹ ಹೆಚ್ಚಿನ ಶಿಕ್ಷಣವು ನಿಮ್ಮನ್ನು ಪೋಷಿಸಿಕೊಳ್ಳಲಿಕ್ಕಾಗಿ ಉದ್ಯೋಗವನ್ನು ಪಡೆದುಕೊಳ್ಳಲು ನಿಮಗೆ ಸಹಾಯಮಾಡಿ, ರಾಜ್ಯದ ಚಟುವಟಿಕೆಯಲ್ಲಿ ಪೂರ್ಣವಾಗಿ ಭಾಗವಹಿಸಲು ನಿಮ್ಮಲ್ಲಿ ಸಮಯ ಹಾಗೂ ಶಕ್ತಿ ಇನ್ನೂ ಉಳಿದಿರುವಂತೆ ಬಿಡಬಹುದು.—ಮತ್ತಾಯ 6:33.
13. ಪೂರಕವಾದ ಶಿಕ್ಷಣವನ್ನು ಬೆನ್ನಟ್ಟಿದ ಇಬ್ಬರು ರಷ್ಯನ್ ಕ್ರೈಸ್ತರು, ಜೀವಿತದಲ್ಲಿನ ತಮ್ಮ ಉದ್ದೇಶವನ್ನು ಹೇಗೆ ಪ್ರದರ್ಶಿಸಿದ್ದಾರೆ?
13 ಪೂರಕವಾದ ಶಿಕ್ಷಣವನ್ನು ಬೆನ್ನಟ್ಟುವ ಕೆಲವರು, ತಾವು ಇನ್ನೂ ಶಾಲಾ ಶಿಕ್ಷಣವನ್ನು ಪಡೆಯುತ್ತಿರುವಾಗಲೇ ಪೂರ್ಣ ಸಮಯದ ಶುಶ್ರೂಷೆಯಲ್ಲಿ ತೊಡಗುತ್ತಾರೆ. ರಷ್ಯದ ಮಾಸ್ಕೋದಲ್ಲಿರುವ ಇಬ್ಬರು ಹದಿವಯಸ್ಕ ಹುಡುಗಿಯರಾದ ನಾಡ್ಯ ಮತ್ತು ಮರೀನರನ್ನು ಪರಿಗಣಿಸಿರಿ. ಇಬ್ಬರೂ ಎಪ್ರಿಲ್ 1994ರಲ್ಲಿ ದೀಕ್ಷಾಸ್ನಾನಪಡೆದು, ಆಕ್ಸಿಲಿಯರಿ ಪಯನೀಯರ್ ಶುಶ್ರೂಷಕರಂತೆ ಸೇವೆಮಾಡಲು ತೊಡಗಿದರು. ಇದಾದ ಸ್ವಲ್ಪದರಲ್ಲಿಯೇ ಅವರು ಪ್ರೌಢ ಶಾಲೆಯಿಂದ ಪದವಿಪ್ರಾಪ್ತರಾಗಿ, ಎರಡು ವರ್ಷದ ಕರಣಿಕಶಾಸ್ತ್ರದ (ಅಕೌಂಟಿಂಗ್) ಕಾರ್ಯಕ್ರಮದಲ್ಲಿ ತಮ್ಮ ಹೆಸರನ್ನು ನಮೂದಿಸಿಕೊಂಡರು. ಮೇ 1995ರಲ್ಲಿ ಅವರು ಕ್ರಮದ ಪಯನೀಯರ್ ಸೇವೆಯನ್ನು ಆರಂಭಿಸಿದರೂ, ತಮ್ಮ ಕರಣಿಕಶಾಸ್ತ್ರದ ತರಗತಿಗಳಲ್ಲಿ ಎ ದರ್ಜೆಯನ್ನು ಕಾಪಾಡಿಕೊಂಡರು. ಅಲ್ಲದೆ, ಇನ್ನೂ ಶಾಲೆಗೆ ಹೋಗುತ್ತಿರುವಾಗಲೇ, ತಮ್ಮಿಬ್ಬರ ನಡುವೆ ಪ್ರತಿ ವಾರ ಸರಾಸರಿ 14 ಬೈಬಲಭ್ಯಾಸಗಳನ್ನು ನಡೆಸಲು ಅವರು ಶಕ್ತರಾಗಿದ್ದರು. ಕರಣಿಕಶಾಸ್ತ್ರದ ವಿಷಯದಲ್ಲಿನ ತಮ್ಮ ಶಿಕ್ಷಣವು ಯಥೋಚಿತವಾದ ಉದ್ಯೋಗವನ್ನು ಕಂಡುಕೊಳ್ಳುವಂತೆ ತಮ್ಮನ್ನು ಶಕ್ತರನ್ನಾಗಿ ಮಾಡುವುದೆಂದು ಆ ಹುಡುಗಿಯರು ನಿರೀಕ್ಷಿಸುತ್ತಾರೆ, ಇದರಿಂದ ಪೂರ್ಣ ಸಮಯದ ಶುಶ್ರೂಷೆಯಲ್ಲಿ ತಮ್ಮನ್ನು ಅವರು ಪೋಷಿಸಿಕೊಳ್ಳಬಲ್ಲರು.
14. ನಾವು ಆರಿಸಿಕೊಳ್ಳುವಂತಹ ಐಹಿಕ ಶಿಕ್ಷಣದ ಪ್ರಮಾಣವು ಏನೇ ಆಗಿರಲಿ, ನಮ್ಮ ಜೀವಿತಗಳಲ್ಲಿನ ಅತಿ ಪ್ರಾಮುಖ್ಯವಾದ ವಿಷಯವು ಏನಾಗಿರಬೇಕು?
14 ಕಾನೂನಿನಿಂದ ಕೇಳಿಕೊಳ್ಳಲ್ಪಡುವ ಐಹಿಕ ಶಿಕ್ಷಣಕ್ಕಿಂತ ಹೆಚ್ಚಿನ ಶಿಕ್ಷಣವನ್ನು ನೀವು ಬೆನ್ನಟ್ಟುವುದಾದರೆ, ಹಾಗೆ ಮಾಡುವುದಕ್ಕಾಗಿರುವ ನಿಮ್ಮ ಕಾರಣವನ್ನು ವಿವೇಕಯುತವಾಗಿ ಪರೀಕ್ಷಿಸಿರಿ. ಅದು ನಿಮಗಾಗಿ ಒಂದು ಹೆಸರನ್ನು ಮಾಡಿಕೊಂಡು, ಪ್ರಾಪಂಚಿಕ ಸ್ವತ್ತುಗಳನ್ನು ಪಡೆದುಕೊಳ್ಳಲಿಕ್ಕಾಗಿದೆಯೊ? (ಯೆರೆಮೀಯ 45:5; 1 ತಿಮೊಥೆಯ 6:17) ಅಥವಾ ಯೆಹೋವನ ಸೇವೆಯಲ್ಲಿ ಹೆಚ್ಚು ಪೂರ್ಣವಾಗಿ ಭಾಗವಹಿಸಲು ಪೂರಕವಾದ ಶಿಕ್ಷಣವನ್ನು ಉಪಯೋಗಿಸುವುದು ನಿಮ್ಮ ಗುರಿಯಾಗಿದೆಯೊ? ಹೆಚ್ಚಿನ ಶಿಕ್ಷಣವನ್ನು ಬೆನ್ನಟ್ಟಲು ಆರಿಸಿಕೊಂಡ ಒಬ್ಬ ಯುವತಿ ಲಿಡಿಯಾ, ಹೀಗೆ ವಿವರಿಸುತ್ತಾ ಆತ್ಮಿಕ ವಿಷಯಗಳ ಕುರಿತು ಒಂದು ಉತ್ತಮವಾದ ಏಕಾಗ್ರತೆಯನ್ನು ವ್ಯಕ್ತಪಡಿಸಿದಳು: “ಇತರರು ಉನ್ನತ ಶಿಕ್ಷಣವನ್ನು ಬೆನ್ನಟ್ಟಿ, ಪ್ರಾಪಂಚಿಕತೆಯು ಮಧ್ಯೆ ಪ್ರವೇಶಿಸುವಂತೆ ಬಿಟ್ಟು, ದೇವರನ್ನು ಮರೆತಿದ್ದಾರೆ. ವೈಯಕ್ತಿಕವಾಗಿ ದೇವರೊಂದಿಗಿನ ನನ್ನ ಸಂಬಂಧವು ನನಗೆ ಅತಿ ಪ್ರಾಮುಖ್ಯವಾದ ವಿಷಯವಾಗಿದೆ.” ನಮ್ಮೆಲ್ಲರಿಗೂ ಎಂತಹ ಒಂದು ಪ್ರಶಂಸನೀಯ ಮನೋಭಾವ!
15. ಪ್ರಥಮ ಶತಮಾನದ ಕ್ರೈಸ್ತರಲ್ಲಿ, ಯಾವ ಶೈಕ್ಷಣಿಕ ಹಿನ್ನೆಲೆಗಳ ವೈವಿಧ್ಯವಿತ್ತು?
15 ಅರ್ಥಗರ್ಭಿತವಾಗಿ, ಪ್ರಥಮ ಶತಮಾನದ ಕ್ರೈಸ್ತರಲ್ಲಿ ಶೈಕ್ಷಣಿಕ ಹಿನ್ನೆಲೆಗಳ ವ್ಯಾಪಕವಾದ ವೈವಿಧ್ಯವಿತ್ತು. ಉದಾಹರಣೆಗೆ ಅಪೊಸ್ತಲರಾದ ಪೇತ್ರ ಮತ್ತು ಯೋಹಾನರು, ರಬ್ಬಿ ಸಂಬಂಧಿತ ಶಾಲೆಗಳಲ್ಲಿ ತರಬೇತಿ ಪಡೆಯದಿದ್ದ ಕಾರಣ, ಅವರು “ಶಾಸ್ತ್ರಾಭ್ಯಾಸಮಾಡದ ಸಾಧಾರಣರೆಂದು” ಪರಿಗಣಿಸಲ್ಪಟ್ಟರು. (ಅ. ಕೃತ್ಯಗಳು 4:13) ಆದರೆ ಇನ್ನೊಂದು ಕಡೆಯಲ್ಲಿ ಅಪೊಸ್ತಲ ಪೌಲನು, ಯಾವುದನ್ನು ಇಂದಿನ ವಿಶ್ವವಿದ್ಯಾನಿಲಯದ ಶಿಕ್ಷಣಕ್ಕೆ ಹೋಲಿಸಸಾಧ್ಯವೊ ಅಂತಹ ಶಿಕ್ಷಣವನ್ನು ಪಡೆದನು. ಆದರೂ, ತನಗೇ ಗಮನವನ್ನು ತಂದುಕೊಳ್ಳಲು ಪೌಲನು ಆ ಶಿಕ್ಷಣವನ್ನು ಬಳಸಿಕೊಳ್ಳಲಿಲ್ಲ; ಬದಲಿಗೆ, ಜೀವನದ ವಿಭಿನ್ನ ರೀತಿಯ ಜನರಿಗೆ ಅವನು ಸಾರಿದಾಗ ಅದೊಂದು ಅನುಕೂಲತೆಯಾಗಿತ್ತು. (ಅ. ಕೃತ್ಯಗಳು 22:3; 1 ಕೊರಿಂಥ 9:19-23; ಫಿಲಿಪ್ಪಿ 1:7) ತದ್ರೀತಿಯಲ್ಲಿ ‘ಉಪರಾಜನಾದ ಹೆರೋದನೊಂದಿಗೆ ಶಿಕ್ಷಣ ಪಡೆದಿದ್ದ’ ಮೆನಹೇನನು, ಅಂತಿಯೋಕ್ಯ ಸಭೆಯಲ್ಲಿ ನಾಯಕತ್ವವನ್ನು ವಹಿಸಿದವರಲ್ಲಿ ಒಬ್ಬನಾಗಿದ್ದನು.—ಅ. ಕೃತ್ಯಗಳು 13:1.
ನಿಮ್ಮ ಹಣಕಾಸನ್ನು ವಿವೇಕಯುತವಾಗಿ ನಿರ್ವಹಿಸಬೇಕೇಕೆ?
16. (ಎ) ನಾವು ಸಾಲದಲ್ಲಿ ಸಿಕ್ಕಿಕೊಂಡಿರುವುದಾದರೆ, ನಮ್ಮ ಸೃಷ್ಟಿಕರ್ತನನ್ನು ಸ್ಮರಿಸಿಕೊಳ್ಳುವುದು ಏಕೆ ಹೆಚ್ಚು ಕಷ್ಟಕರವಾಗಿರಬಹುದು? (ಬಿ) ನಾವು ಖರ್ಚುಮಾಡುವ ಮೊದಲು ಯೋಚಿಸುವುದರ ಪ್ರಮುಖತೆಯನ್ನು ಯೇಸುವಿನ ದೃಷ್ಟಾಂತಗಳಲ್ಲೊಂದು ಹೇಗೆ ಪ್ರಕಟಿಸುತ್ತದೆ?
16 ನಿಮ್ಮ ಹಣಕಾಸನ್ನು ವಿವೇಕಯುತವಾಗಿ ನಿರ್ವಹಿಸಲು ನೀವು ತಪ್ಪಿಹೋಗುವುದಾದರೆ, ಆತನನ್ನು ಸಂತೋಷಪಡಿಸುವ ವಿಷಯವನ್ನು ಮಾಡುವ ಮೂಲಕ ನಿಮ್ಮ ಸೃಷ್ಟಿಕರ್ತನನ್ನು ಸ್ಮರಿಸಿಕೊಳ್ಳುವುದು ಕಷ್ಟಕರವಾಗಿರಬಹುದು. ಏಕೆಂದರೆ ನೀವು ಸಾಲದಲ್ಲಿ ಸಿಕ್ಕಿಕೊಳ್ಳುವುದಾದರೆ, ನಿಮಗೆ ಮತ್ತೊಬ್ಬ ಯಜಮಾನನಿರುವನೆಂದು ಹೇಳಸಾಧ್ಯವಿದೆ. ಬೈಬಲು ವಿವರಿಸುವುದು: “ಸಾಲಗಾರನು ಸಾಲಕೊಟ್ಟವನಿಗೆ ಸೇವಕ.” (ಜ್ಞಾನೋಕ್ತಿ 22:7) ನಾವು ಖರ್ಚುಮಾಡುವ ಮೊದಲು ಯೋಚಿಸುವುದರ ಪ್ರಮುಖತೆಯನ್ನು ಯೇಸುವಿನ ದೃಷ್ಟಾಂತಗಳಲ್ಲೊಂದು ಎತ್ತಿತೋರಿಸುತ್ತದೆ. ಯೇಸು ಹೇಳಿದ್ದು, “ನಿಮ್ಮಲ್ಲಿ ಯಾವನಾದರೂ ಒಂದು ಬುರುಜನ್ನು ಕಟ್ಟಿಸಬೇಕೆಂದು ಯೋಚಿಸಿದರೆ ಅವನು ಮೊದಲು ಕೂತುಕೊಂಡು—ಅದಕ್ಕೆ ಎಷ್ಟು ಖರ್ಚು ಹಿಡಿದೀತು, ಅದನ್ನು ತೀರಿಸುವದಕ್ಕೆ ಸಾಕಾಗುವಷ್ಟು ಹಣ ನನ್ನಲ್ಲಿ ಉಂಟೋ ಎಂದು ಲೆಕ್ಕಮಾಡುವದಿಲ್ಲವೇ? ಹೀಗೆ ಲೆಕ್ಕಮಾಡದೆ ಅದಕ್ಕೆ ಅಸ್ತಿವಾರಹಾಕಿದ ಮೇಲೆ ಆ ಕೆಲಸವನ್ನು ಪೂರೈಸಲಾರದೆ ಹೋದರೆ ನೋಡುವವರೆಲ್ಲರು . . . ಹಾಸ್ಯಮಾಡಾರು.”—ಲೂಕ 14:28-30.
17. ಒಬ್ಬನ ಖರ್ಚುಮಾಡುವಿಕೆಯನ್ನು ನಿಯಂತ್ರಿಸುವುದು ಅನೇಕ ವೇಳೆ ಕಷ್ಟಕರವಾಗಿದೆ ಏಕೆ?
17 ಆದುದರಿಂದ, ವಿವೇಕಯುತವಾಗಿ ನೀವು “ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಋಣವೇ ಹೊರತು ಬೇರೆ ಯಾವ ಸಾಲವೂ ನಿಮಗೆ ಇರಬಾರದು” ಎಂಬ ಶಾಸ್ತ್ರೀಯ ತತ್ವಕ್ಕನುಗುಣವಾಗಿ ಜೀವಿಸಲು ಪ್ರಯತ್ನಿಸುವಿರಿ. (ರೋಮಾಪುರ 13:8) ಆದರೆ ವಿಶೇಷವಾಗಿ, ನಿಮಗೆ ನಿಜವಾಗಿಯೂ ಅಗತ್ಯವೆಂದು ಜಾಹೀರಾತುದಾರರು ಪ್ರತಿಪಾದಿಸುವ ಹೊಸ ಉತ್ಪಾದನೆಗಳ ಸತತವಾದ ಸರಬರಾಯಿಯಿಂದ ಎದುರಿಸಲ್ಪಟ್ಟಾಗ, ಇದನ್ನು ಮಾಡುವುದು ಕಷ್ಟಕರ. ವಿವೇಚನೆಯನ್ನು ಪ್ರಯೋಗಿಸುವಂತೆ ತನ್ನ ಮಕ್ಕಳಿಗೆ ಸಹಾಯಮಾಡಲು ಪ್ರಯತ್ನಿಸಿದ ಒಬ್ಬ ಹೆತ್ತವನು ಗಮನಿಸಿದ್ದು: “ಆವಶ್ಯಕತೆ ಏನು ಮತ್ತು ಅಪೇಕ್ಷೆ ಏನು ಎಂಬುದನ್ನು ಚರ್ಚಿಸುತ್ತಾ ನಾವು ಬಹಳಷ್ಟು ಸಮಯವನ್ನು ವ್ಯಯಿಸಿದ್ದೇವೆ.” ಹಣಕಾಸನ್ನು ಹೊಣೆಗಾರಿಕೆಯಿಂದ ನಿರ್ವಹಿಸುವುದು ಹೇಗೆಂಬ ವಿಷಯದಲ್ಲಿ ಬಹಳ ಕಡಿಮೆ ಉಪದೇಶವನ್ನು ನೀಡುತ್ತಾ, ಇಂತಹ ವಿಷಯಗಳನ್ನು ಕಲಿಸಲು ಶಾಲೆಗಳು ಸಾಮಾನ್ಯವಾಗಿ ತಪ್ಪಿಹೋಗಿವೆ. “ನಾವು ಪ್ರೌಢ ಶಾಲೆಯಿಂದ ಹಣ ಉಳಿತಾಯಮಾಡುವುದಕ್ಕಿಂತ ಒಂದು ಸಮದ್ವಿಬಾಹುಗಳುಳ್ಳ ತ್ರಿಕೋನದ ಕುರಿತು ಹೆಚ್ಚನ್ನು ತಿಳಿದವರಾಗಿ ಪದವಿಪಡೆಯುತ್ತೇವೆ,” ಎಂಬುದಾಗಿ ಒಬ್ಬ ಸಮಾಜ ಸೇವಕನು ಗಮನಿಸಿದನು. ಹಾಗಾದರೆ, ವಿವೇಕಯುತವಾಗಿ ಖರ್ಚುಮಾಡುವಂತೆ ನಿಮಗೆ ಯಾವುದು ಸಹಾಯಮಾಡಬಲ್ಲದು?
18. ಹಣಕಾಸಿನ ವಿವೇಕಯುತ ನಿರ್ವಹಣೆಗೆ ಕೀಲಿ ಕೈಯು ಏನಾಗಿದೆ, ಮತ್ತು ಏಕೆ?
18 “ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು,” ಎಂಬ ಪ್ರಬೋಧೆಗೆ ಲಕ್ಷ್ಯಕೊಡುವುದು, ನಿಮ್ಮ ಹಣಕಾಸಿನ ವಿವೇಕಯುತ ನಿರ್ವಹಣೆಗೆ ಒಂದು ಕೀಲಿ ಕೈಯಾಗಿದೆ. ಇದು ಏಕೆಂದರೆ, ನೀವು ಆ ಆಜ್ಞೆಗೆ ವಿಧೇಯರಾಗುವಾಗ, ನಿಮ್ಮ ಆದ್ಯತೆಯು ಯೆಹೋವನನ್ನು ಸಂತೋಷಪಡಿಸುವುದಾಗಿದೆ, ಮತ್ತು ಆತನಿಗಾಗಿರುವ ನಿಮ್ಮ ಮಮತೆಯು ನೀವು ನಿಮ್ಮ ಹಣವನ್ನು ಖರ್ಚುಮಾಡುವ ವಿಧವನ್ನು ಪ್ರಭಾವಿಸುತ್ತದೆ. ಅದಕ್ಕನುಸಾರವಾಗಿ, ದೇವರಿಗೆ ಪೂರ್ಣಪ್ರಾಣದ ಭಕ್ತಿಯನ್ನು ಕೊಡುವುದರೊಂದಿಗೆ ವೈಯಕ್ತಿಕ ಅಪೇಕ್ಷೆಗಳು ಅಡ್ಡಬರುವಂತೆ ಅನುಮತಿಸಲು ನೀವು ಪ್ರಯತ್ನಿಸುವುದಿಲ್ಲ. (ಮತ್ತಾಯ 16:24-26) ನಿಮ್ಮ ಕಣ್ಣನ್ನು “ಸರಳ”ವಾಗಿಡಲು (NW) ನೀವು ಪ್ರಯಾಸಪಡುವಿರಿ, ಅಂದರೆ, ದೇವರ ರಾಜ್ಯ ಮತ್ತು ಆತನ ಚಿತ್ತವನ್ನು ಮಾಡುವುದರ ಮೇಲೆ ಸ್ಪಷ್ಟವಾಗಿ ಕೇಂದ್ರೀಕರಿಸುವಿರಿ. (ಮತ್ತಾಯ 6:22-24) ಹೀಗೆ ನೀವು “ನಿನ್ನ ಆದಾಯದಿಂದಲೂ . . . ಯೆಹೋವನನ್ನು ಸನ್ಮಾನಿಸು” ಎಂಬ ದೈವಿಕ ಬುದ್ಧಿವಾದವನ್ನು ಒಂದು ಆನಂದಭರಿತ ಸುಯೋಗವಾಗಿ ವೀಕ್ಷಿಸುವಿರಿ.—ಜ್ಞಾನೋಕ್ತಿ 3:9.
ಅನುಕರಣಾರ್ಹರಾದ ಯೌವನಸ್ಥರು
19. ಗತಕಾಲದಲ್ಲಿ ಯೌವನಸ್ಥರು ತಮ್ಮ ಸೃಷ್ಟಿಕರ್ತನನ್ನು ಹೇಗೆ ಸ್ಮರಿಸಿದ್ದಾರೆ?
19 ಸಂತೋಷಕರವಾಗಿ ಗತಕಾಲದ ಮತ್ತು ಪ್ರಚಲಿತ ಸಮಯದ ಅನೇಕ ಯೌವನಸ್ಥರು, ತಮ್ಮ ಸೃಷ್ಟಿಕರ್ತನನ್ನು ಸ್ಮರಿಸಿಕೊಂಡಿದ್ದಾರೆ. ಚಿಕ್ಕ ಸಮುವೇಲನು, ತಾನು ಯಾರೊಂದಿಗೆ ಸೇವೆಸಲ್ಲಿಸಿದನೊ ಆ ಜನರ ಅನೈತಿಕ ಪ್ರಭಾವದ ಹೊರತೂ, ಸಾಕ್ಷಿಗುಡಾರದ ಸೇವೆಯಲ್ಲಿ ಸ್ಥಿರಚಿತ್ತನಾಗಿ ಉಳಿದನು. (1 ಸಮುವೇಲ 2:12-26) ಒಬ್ಬ ಆಕರ್ಷಕ ಮೋಹಿನಿಯಾದ ಪೋಟೀಫರನ ಹೆಂಡತಿಗೆ, ಯುವ ಯೋಸೇಫನನ್ನು ಹಾದರವನ್ನು ಮಾಡುವಂತೆ ಸೆಳೆಯಸಾಧ್ಯವಾಗಲಿಲ್ಲ. (ಆದಿಕಾಂಡ 39:1-12) ಯೆರೆಮೀಯನು “ಬಾಲಕ”ನಾಗಿದ್ದರೂ, ತೀವ್ರವಾದ ವಿರೋಧದ ಎದುರಿನಲ್ಲಿ ಧೈರ್ಯದಿಂದ ಸಾರಿದನು. (ಯೆರೆಮೀಯ 1:6-8) ಒಬ್ಬ ಶಕ್ತಿಶಾಲಿ ಸಿರಿಯನ್ ಸೇನಾಪತಿಗೆ, ಇಸ್ರಾಯೇಲಿನಲ್ಲಿ ಸಹಾಯ ಕೋರುವಂತೆ ಒಬ್ಬ ಚಿಕ್ಕ ಇಸ್ರಾಯೇಲ್ಯ ಹುಡುಗಿಯು ಭಯರಹಿತವಾಗಿ ನಿರ್ದೇಶನ ನೀಡಿದಳು. ಅಲ್ಲಿ ಅವನು ಯೆಹೋವನ ಕುರಿತು ಕಲಿಯಸಾಧ್ಯವಿತ್ತು. (2 ಅರಸುಗಳು 5:1-4) ಯುವ ದಾನಿಯೇಲನು ಮತ್ತು ಅವನ ಸಂಗಾತಿಗಳು ದೇವರ ಆಹಾರಪಥ್ಯದ ನಿಯಮಗಳ ಕುರಿತಾಗಿ ಪರೀಕ್ಷಿಸಲ್ಪಟ್ಟಾಗ ತಮ್ಮ ನಂಬಿಕೆಯನ್ನು ಕಾಪಾಡಿಕೊಂಡರು. ಮತ್ತು ಯುವಕರಾದ ಶದ್ರಕ್, ಮೇಶಕ್, ಮತ್ತು ಅಬೇದ್ನೆಗೋ, ಒಂದು ಪ್ರತಿಮೆಯ ಮುಂದೆ ತಲೆಬಾಗುವ ಮೂಲಕ ದೇವರಿಗಾಗಿರುವ ತಮ್ಮ ನಿಷ್ಠೆಯನ್ನು ರಾಜಿಮಾಡಿಕೊಳ್ಳುವ ಬದಲಿಗೆ, ಉರಿಯುವ ಆವಿಗೆಯೊಳಗೆ ಎಸೆಯಲ್ಪಡುವುದನ್ನು ಆರಿಸಿಕೊಂಡರು.—ದಾನಿಯೇಲ 1:8, 17; 3:16-18; ವಿಮೋಚನಕಾಂಡ 20:5.
20. ಇಂದು ಅನೇಕ ಯೌವನಸ್ಥರು ತಮ್ಮ ಸೃಷ್ಟಿಕರ್ತನನ್ನು ಹೇಗೆ ಸ್ಮರಿಸಿದ್ದಾರೆ?
20 ಇಂದು, ಅಮೆರಿಕದ ನ್ಯೂ ಯಾರ್ಕ್ ಸ್ಟೇಟ್ನಲ್ಲಿರುವ ಯೆಹೋವನ ಸಾಕ್ಷಿಗಳ ಜಾಗತಿಕ ಮುಖ್ಯಕಾರ್ಯಾಲಯದಲ್ಲಿ, 19ರಿಂದ 25 ವರ್ಷ ವಯಸ್ಸಿನ 2,000ಕ್ಕಿಂತಲೂ ಹೆಚ್ಚಿನ ಯೌವನಸ್ಥರು ಸೇವೆಸಲ್ಲಿಸುತ್ತಾರೆ. ಅವರು, ಲೋಕವ್ಯಾಪಕವಾಗಿ ತಮ್ಮ ಸೃಷ್ಟಿಕರ್ತನನ್ನು ಸ್ಮರಿಸಿಕೊಳ್ಳುತ್ತಿರುವ ಹತ್ತಾರು ಸಾವಿರ ಯುವ ಜನರ ಕೇವಲ ಒಂದು ಸಣ್ಣ ಭಾಗವಾಗಿದ್ದಾರೆ. ಗತಕಾಲದ ಯೋಸೇಫನಂತೆ, ಅವರು ತಮ್ಮ ನೈತಿಕ ಶುದ್ಧತೆಯನ್ನು ರಾಜಿಮಾಡಿಕೊಳ್ಳಲು ನಿರಾಕರಿಸಿದ್ದಾರೆ. ಅವರು ಯಾರನ್ನು ಸೇವಿಸುವರೆಂದು ಆರಿಸಿಕೊಳ್ಳುವಂತೆ ಒತ್ತಾಯಿಸಲ್ಪಟ್ಟಾಗ, ಅನೇಕರು ಮನುಷ್ಯರಿಗೆ ವಿಧೇಯರಾಗುವುದಕ್ಕಿಂತ ದೇವರಿಗೆ ವಿಧೇಯರಾಗಿದ್ದಾರೆ. (ಅ. ಕೃತ್ಯಗಳು 5:29) ಪೋಲೆಂಡ್ನಲ್ಲಿ 1946ರಲ್ಲಿ, 15 ವರ್ಷ ಪ್ರಾಯದ ಹೆನ್ರಿಕಾ ಸೂರ್, ಧಾರ್ಮಿಕ ಮೂರ್ತಿಪೂಜೆಯ ಒಂದು ಕ್ರಿಯೆಯನ್ನು ಮಾಡಲು ನಿರಾಕರಿಸಿದಾಗ, ಹಿಂಸಿಸಲ್ಪಟ್ಟಳು. “ನೀನು ಮನಸ್ಸಿನಲ್ಲಿ ಏನು ಬೇಕಾದರೂ ಯೋಚಿಸಿಕೊ, ಆದರೆ ಶಿಲುಬೆಯ ಕ್ಯಾಥೊಲಿಕ್ ಸಂಕೇತವನ್ನು ಮಾತ್ರ ಮಾಡು,” ಎಂಬುದಾಗಿ ಆಕೆಯ ಹಿಂಸಕರಲ್ಲಿ ಒಬ್ಬನು ಸೂಚಿಸಿದನು. ಆಕೆ ನಿರಾಕರಿಸಿದ ಕಾರಣ, ಆಕೆ ಕಾಡಿನೊಳಗೆ ಎಳೆದೊಯ್ಯಲ್ಪಟ್ಟು, ಗುಂಡಿಕ್ಕಿ ಕೊಲ್ಲಲ್ಪಟ್ಟಳು. ಅನಂತ ಜೀವನದ ಆಕೆಯ ನಿಶ್ಚಿತವಾದ ನಿರೀಕ್ಷೆಯು ಶಿಥಿಲವಾಗದೆ ಇತ್ತು!b
21. ಯಾವ ಆಮಂತ್ರಣವನ್ನು ಸ್ವೀಕರಿಸುವುದು ವಿವೇಕಯುತವಾಗಿರುವುದು, ಯಾವ ಪರಿಣಾಮದೊಂದಿಗೆ?
21 ಶತಮಾನಗಳ ಉದ್ದಕ್ಕೂ ಆತನನ್ನು ಸ್ಮರಿಸಿರುವ ಯುವ ಜನರಿಂದ ಯೆಹೋವನ ಹೃದಯವು ಹೇಗೆ ಉಲ್ಲಾಸಗೊಂಡಿರಬೇಕು! “ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು,” ಎಂಬ ಆತನ ಆಮಂತ್ರಣಕ್ಕೆ ನೀವು ಪ್ರತಿಕ್ರಿಯಿಸುವಿರೊ? ನಿಜವಾಗಿಯೂ ಆತನು ನಿಮ್ಮ ಸ್ಮರಣೆಗೆ ಯೋಗ್ಯನಾಗಿದ್ದಾನೆ! ಆತನು ನಿಮಗಾಗಿ ಮಾಡಿರುವ ಮತ್ತು ಇನ್ನೂ ಮಾಡಲಿರುವ ಎಲ್ಲ ವಿಷಯಗಳ ಕುರಿತು ಪ್ರತಿದಿನ ಯೋಚಿಸಿರಿ, ಮತ್ತು ಆತನ ಆಮಂತ್ರಣವನ್ನು ಸ್ವೀಕರಿಸಿರಿ: “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರ ಕೊಡಲಾಗುವದು.”—ಜ್ಞಾನೋಕ್ತಿ 27:11.
[ಅಧ್ಯಯನ ಪ್ರಶ್ನೆಗಳು]
b ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಅವರಿಂದ ಪ್ರಕಾಶಿತ, 1994 ಯಿಯರ್ಬುಕ್ ಆಫ್ ಜೆಹೋವಾಸ್ ವಿಟ್ನೆಸೆಸ್, ಪುಟಗಳು 217-18ನ್ನು ನೋಡಿ.
ನಿಮಗೆ ಜ್ಞಾಪಕವಿದೆಯೆ?
◻ ದೇವರನ್ನು ಒಬ್ಬ ವಾಸ್ತವವಾದ ವ್ಯಕ್ತಿಯಂತೆ ವೀಕ್ಷಿಸಲು ಯೌವನಸ್ಥರಿಗೆ ಹೇಗೆ ಸಹಾಯಮಾಡಸಾಧ್ಯವಿದೆ?
◻ ನಿಮ್ಮ ಸೃಷ್ಟಿಕರ್ತನನ್ನು ಸ್ಮರಿಸಿಕೊಳ್ಳುವುದು ಏನನ್ನು ಅರ್ಥೈಸುತ್ತದೆ?
◻ ನಮ್ಮ ಶಿಕ್ಷಣವು ಯಾವ ಉದ್ದೇಶವನ್ನು ಪೂರೈಸಬೇಕು?
◻ ನಮ್ಮ ಹಣಕಾಸನ್ನು ವಿವೇಕಯುತವಾಗಿ ನಿರ್ವಹಿಸುವುದು ಆವಶ್ಯಕವೇಕೆ?
◻ ಯಾವ ಯೌವನಸ್ಥರು ನಿಮ್ಮ ಅನುಕರಣೆಗೆ ಅರ್ಹರಾಗಿದ್ದಾರೆ?
[ಪುಟ 17 ರಲ್ಲಿರುವ ಚಿತ್ರ]
ನೀವು ಶಾಲೆಗೆ ಏಕೆ ಹೋಗುತ್ತೀರೆಂಬುದರ ಕುರಿತು ನೀವು ಯೋಚಿಸಿದ್ದೀರೊ?
[ಪುಟ 18 ರಲ್ಲಿರುವ ಚಿತ್ರ]
ಹಣಕಾಸನ್ನು ವಿವೇಕಯುತವಾಗಿ ನಿರ್ವಹಿಸಲು ನೀವು ಕಲಿಯುತ್ತಿದ್ದೀರೊ?