ಪೀಡಿತರಿಗೆ ಸಾಂತ್ವನ
ನೀವು ನಿಮ್ಮ ಜೀವಮಾನವಿಡೀ ಶಿರೋನಾಮಗಳಲ್ಲಿ ಕೆಲವು ಪದಗಳು ಪದೇ ಪದೇ ಪುನರಾವೃತ್ತಿಸುವುದನ್ನು ಗಮನಿಸಿದ್ದೀರೊ? ಯುದ್ಧ, ಪಾತಕ, ವಿಪತ್ತು, ಹಸಿವು ಮತ್ತು ಬಾಧೆ—ಇಂತಹ ಪದಗಳನ್ನು ಓದಿ ಓದಿ ನೀವು ದಣಿದಿದ್ದೀರೊ? ಆದರೆ ಒಂದು ಪದವು ಆ ವಾರ್ತಾವರದಿಗಳಲ್ಲಿ ಗಮನಾರ್ಹವಾಗಿ ಕಂಡುಬರುವುದಿಲ್ಲ. ಆದರೂ, ಆ ಪದವು ಮಾನವಕುಲಕ್ಕೆ ಮಹತ್ತಾಗಿ ಅವಶ್ಯವಿರುವುದನ್ನು ಪ್ರತಿನಿಧಿಸುವ ಒಂದು ಪದವಾಗಿದೆ. ಆ ಪದವು “ಸಾಂತ್ವನ.”
“ಸಾಂತ್ವನಗೊಳಿಸು” ಅಂದರೆ “ಬಲವನ್ನೂ ನಿರೀಕ್ಷೆಯನ್ನೂ ಕೊಡುವುದು” ಮತ್ತು “ಯಾರಾದರೊಬ್ಬನ ಶೋಕ ಮತ್ತು ತೊಂದರೆಯನ್ನು ಶಮನಗೊಳಿಸು”ವುದಾಗಿದೆ. ಈ ಲೋಕವು 20ನೆಯ ಶತಮಾನದಲ್ಲಿ ಅನುಭವಿಸಿರುವ ಎಲ್ಲ ಸಂಕ್ಷೋಭೆಗಳ ಕಾರಣ, ನಿರೀಕ್ಷೆ ಮತ್ತು ಶೋಕಶಮನಗಳು ತೀವ್ರವಾಗಿ ಬೇಕಾಗಿವೆ. ನಿಜ, ನಮ್ಮಲ್ಲಿ ಕೆಲವರು, ನಮ್ಮ ಪೂರ್ವಜರು ಎಂದಿಗೂ ಭಾವಿಸಸಾಧ್ಯವಿದ್ದಿರದಷ್ಟು ದೈಹಿಕ ಸುಖಸಾಧನಾನುಕೂಲಗಳನ್ನು ಇಂದು ಅನುಭವಿಸುತ್ತೇವೆ. ಇದು ಹೆಚ್ಚಾಗಿ ವೈಜ್ಞಾನಿಕ ಪ್ರಗತಿಯ ಫಲವಾಗಿ. ಆದರೆ ವಿಜ್ಞಾನ ಮತ್ತು ಯಂತ್ರಕಲಾ ಶಾಸ್ತ್ರವು, ಮಾನವಕುಲದ ಬಾಧೆಗಳ ಸಕಲ ಕಾರಣಗಳನ್ನು ನಿವಾರಿಸುವ ಅರ್ಥದಲ್ಲಿ ನಮ್ಮನ್ನು ಸಾಂತ್ವನಗೊಳಿಸಿರುವುದಿಲ್ಲ. ಈ ಕಾರಣಗಳಾವುವು?
ಅನೇಕ ಶತಮಾನಗಳ ಹಿಂದೆ ವಿವೇಕಿ ಸೊಲೊಮೋನನು, “ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿ”ಯನ್ನು ಉಂಟುಮಾಡಿದ್ದಾನೆಂದು ಹೇಳಿದಾಗ, ಬಾಧೆಯ ಒಂದು ಮೂಲಕಾರಣದ ಕುರಿತು ಮಾತಾಡಿದನು. (ಪ್ರಸಂಗಿ 8:9) ವಿಜ್ಞಾನ ಮತ್ತು ಯಂತ್ರಕಲಾಶಾಸ್ತ್ರಕ್ಕೆ, ತನ್ನ ಜೊತೆಮಾನವನ ಮೇಲೆ ಅಧಿಕಾರ ನಡೆಸಬಯಸುವ ಮಾನವ ಪ್ರವೃತ್ತಿಯನ್ನು ಬದಲಾಯಿಸಸಾಧ್ಯವಾಗಿರುವುದಿಲ್ಲ. ಈ 20ನೆಯ ಶತಮಾನದಲ್ಲಿ ಇದು, ದೇಶಗಳೊಳಗೆ ಪೀಡಿಸುವ ಸರ್ವಾಧಿಕಾರಗಳಿಗೂ, ದೇಶಗಳ ಮಧ್ಯೆ ಘೋರವಾದ ಯುದ್ಧಗಳಿಗೂ ನಡೆಸಿದೆ.
ಯುದ್ಧದ ಫಲವಾಗಿ, 1914ರಿಂದ ಹತ್ತು ಕೋಟಿಗಳಿಗೂ ಮಿಕ್ಕಿದ ಜನರು ಕೊಲ್ಲಲ್ಪಟ್ಟಿದ್ದಾರೆ. ಈ ಸಂಖ್ಯೆಯು ಪ್ರತಿನಿಧಿಸುವ ಮಾನವ ಸಂಕಟದ ಕುರಿತು ಯೋಚಿಸಿರಿ—ಸಾಂತ್ವನದ ಅಗತ್ಯವಿರುವ, ಶೋಕಿಸುತ್ತಿರುವ ಕೋಟ್ಯಂತರ ಕುಟುಂಬಗಳು. ಮತ್ತು ಯುದ್ಧಗಳು, ಹಿಂಸಾತ್ಮಕ ಮರಣಗಳಲ್ಲದೆ ಇತರ ರೀತಿಯ ಬಾಧೆಗಳಿಗೆ ನಡೆಸುತ್ತವೆ. ಎರಡನೆಯ ಲೋಕ ಯುದ್ಧದ ಅಂತ್ಯದಲ್ಲಿ, ಯೂರೋಪಿನಲ್ಲಿ 1.2 ಕೋಟಿಗಳಿಗಿಂತಲೂ ಹೆಚ್ಚು ಮಂದಿ ನಿರಾಶ್ರಿತರಿದ್ದರು. ಹೆಚ್ಚು ಇತ್ತೀಚಿನ ವರುಷಗಳಲ್ಲಿ, 15 ಲಕ್ಷಗಳಿಗೂ ಹೆಚ್ಚಿನ ಜನರು ಆಗ್ನೇಯ ಏಷಿಯದಲ್ಲಿನ ಯುದ್ಧ ವಲಯಗಳನ್ನು ಬಿಟ್ಟು ಪಲಾಯನಗೈದರು. ಬಾಲ್ಕನ್ ಪ್ರದೇಶದಲ್ಲಿ ನಡೆದ ಯುದ್ಧವು, 20 ಲಕ್ಷಗಳಿಗೂ ಹೆಚ್ಚಿನ ಜನರು ತಮ್ಮ ಮನೆಗಳನ್ನು ಬಿಟ್ಟು—ಅನೇಕ ಸಂದರ್ಭಗಳಲ್ಲಿ “ಕುಲಸಂಬಂಧವಾದ ಶುದ್ಧಗೊಳಿಸುವಿಕೆ”ಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ—ಓಡಿಹೋಗುವಂತೆ ನಿರ್ಬಂಧಿಸಿದೆ.
ನಿರಾಶ್ರಿತರಿಗೆ, ವಿಶೇಷವಾಗಿ ತಮ್ಮ ಮನೆಗಳಿಂದ ತಾವು ಹೊತ್ತುಕೊಂಡು ಹೋಗಲು ಸಾಧ್ಯವಾಗುವಷ್ಟು ಸ್ವತ್ತುಗಳನ್ನು ಮಾತ್ರ ಒಯ್ಯುವಂತೆ ನಿರ್ಬಂಧಿಸಲ್ಪಟ್ಟು, ತಾವು ಎಲ್ಲಿಗೆ ಹೋಗಬೇಕು ಮತ್ತು ತಮಗೆ ಮತ್ತು ತಮ್ಮ ಕುಟುಂಬಗಳಿಗೆ ಮುಂದೇನು ಕಾದಿದೆ ಎಂದು ತಿಳಿಯದಿರುವವರಿಗೆ ನಿಶ್ಚಯವಾಗಿಯೂ ಸಾಂತ್ವನವು ಅಗತ್ಯ. ಇಂತಹ ಜನರು ಪೀಡನೆಯ ಅತ್ಯಂತ ಮರುಕಗೂಡಿದ ಬಲಿಪಶುಗಳ ನಡುವೆ ಇದ್ದಾರೆ; ಅವರಿಗೆ ಸಾಂತ್ವನದ ಅಗತ್ಯವಿದೆ.
ಭೂಮಿಯ ಹೆಚ್ಚು ಶಾಂತಿಭರಿತ ಭಾಗಗಳಲ್ಲಿ, ಕೋಟ್ಯಂತರ ಮಂದಿ ಲೋಕದ ಆರ್ಥಿಕ ವ್ಯವಸ್ಥೆಗೆ ಕಾರ್ಯತಃ ಗುಲಾಮರಾಗಿ ಜೀವಿಸುತ್ತಾರೆ. ನಿಜ, ಕೆಲವರಿಗೆ ಪ್ರಾಪಂಚಿಕ ವಸ್ತುಗಳ ಸಮೃದ್ಧಿಯೇನೋ ಇದೆ. ಆದರೆ ಬಹುಸಂಖ್ಯಾಕರು ಜೀವನೋಪಾಯದ ದೈನಂದಿನ ಹೋರಾಟವನ್ನು ಎದುರಿಸುತ್ತಾರೆ. ಅನೇಕರು ಯೋಗ್ಯ ವಸತಿಯನ್ನು ಹುಡುಕುತ್ತಿದ್ದಾರೆ. ಹೆಚ್ಚುತ್ತಿರುವ ಸಂಖ್ಯೆಗಳಲ್ಲಿ ಜನರು ನಿರುದ್ಯೋಗಿಗಳಾಗಿದ್ದಾರೆ. ಆಫ್ರಿಕದ ಒಂದು ವಾರ್ತಾಪತ್ರ ಮುಂತಿಳಿಸುವುದು: “ಇಸವಿ 2020ರೊಳಗೆ ಲೋಕವು, 130 ಕೋಟಿಗಳಿಗೂ ಮೀರುವಷ್ಟು ಹೆಚ್ಚು ಜನರು ಉದ್ಯೋಗಗಳನ್ನು ಹುಡುಕುವುದರೊಂದಿಗೆ, ಅಭೂತಪೂರ್ವ ಉದ್ಯೋಗ ಬಿಕ್ಕಟ್ಟಿಗೆ ಮುಂದುವರಿಯುತ್ತಿದೆ.” ನಿಶ್ಚಯವಾಗಿ ಆರ್ಥಿಕವಾಗಿ ಪೀಡಿತರಾಗಿರುವ ಜನರಿಗೆ “ಬಲವೂ ನಿರೀಕ್ಷೆಯೂ”—ಅಂದರೆ ಸಾಂತ್ವನ—ಅಗತ್ಯ.
ನಿರಾಶಾಕರ ಪರಿಸ್ಥಿತಿಗಳಿಗೆ ಪ್ರತಿವರ್ತನೆ ತೋರಿಸುತ್ತ, ಕೆಲವರು ಪಾತಕಿಗಳಾಗಿ ಪರಿಣಮಿಸುತ್ತಾರೆ. ಆದರೆ ಇದು ಅವರ ಬಲಿಪಶುಗಳಿಗೆ ಕಷ್ಟವನ್ನುಂಟುಮಾಡುತ್ತದೆ ಅಷ್ಟೆ, ಮತ್ತು ಪಾತಕದ ಉನ್ನತ ಪ್ರಮಾಣಗಳು ಪೀಡನೆಯ ಪ್ರಜ್ಞೆಗೆ ಕೂಡಿಸುತ್ತವೆ. ದಕ್ಷಿಣ ಆಫ್ರಿಕದ ಜೊಹ್ಯಾನೆಸ್‌ಬರ್ಗ್‌ನ ದ ಸ್ಟಾರ್ ವಾರ್ತಾಪತ್ರದಲ್ಲಿ, ಇತ್ತೀಚೆಗೆ ಒಂದು ಶಿರೋನಾಮವು ಹೇಳಿದ್ದು: “‘ಲೋಕದ ಅತ್ಯಂತ ಕೊಲೆಗಡುಕ ದೇಶ’ದ ಜೀವನದಲ್ಲಿ ಒಂದು ದಿನ.” ಜೊಹ್ಯಾನೆಸ್‌ಬರ್ಗ್‌ನ ಒಳಗಣ ಮತ್ತು ಸುತ್ತಲಿನ ಒಂದು ಪ್ರತಿನಿಧಿರೂಪದ ದಿನವನ್ನು ಆ ಲೇಖನವು ವರ್ಣಿಸಿತು. ಆ ಒಂದೇ ದಿನದಲ್ಲಿ ನಾಲ್ಕು ಜನರನ್ನು ಕೊಲೆಮಾಡಲಾಗಿತ್ತು ಮತ್ತು ಎಂಟು ಮಂದಿಯ ಮೋಟಾರು ವಾಹನಗಳನ್ನು ಅಪಹರಣ ಮಾಡಲಾಗಿತ್ತು. ಒಂದು ಮಧ್ಯಮ ವರ್ಗದ ಉಪನಗರದಲ್ಲಿ ಹದಿನೇಳು ಕಳ್ಳತನಗಳು ವರದಿಯಾದವು. ಇದಕ್ಕೆ ಕೂಡಿಸಿ, ಅನೇಕ ಸಶಸ್ತ್ರ ದರೋಡೆಗಳು ನಡೆದವು. ವಾರ್ತಾಪತ್ರಕ್ಕನುಸಾರ, ಪೋಲೀಸರು ಇದನ್ನು “ಸಾಪೇಕ್ಷವಾಗಿ ನೆಮ್ಮದಿಯ” ಒಂದು ದಿನವೆಂದು ವರ್ಣಿಸಿದರು. ಕೊಲೆಗೆ ಆಹುತಿಯಾದವರ ಸಂಬಂಧಿಕರು ಮತ್ತು ಮನೆಯಲ್ಲಿ ಕಳ್ಳತನಕ್ಕೆ ಮತ್ತು ಕಾರ್ ಅಪಹರಣಕ್ಕೆ ಒಳಗಾದವರು, ತೀವ್ರವಾದ ಪೀಡನೆಗೊಳಗಾಗುತ್ತಾರೆಂಬುದು ಗ್ರಾಹ್ಯ. ಅವರಿಗೆ ಆಶ್ವಾಸನೆಯೂ ನಿರೀಕ್ಷೆಯೂ—ಅಂದರೆ ಸಾಂತ್ವನ—ಅಗತ್ಯ.
ಕೆಲವು ದೇಶಗಳಲ್ಲಿ, ಕೆಲವು ಮಂದಿ ಹೆತ್ತವರು ತಮ್ಮ ಮಕ್ಕಳನ್ನು ವೇಶ್ಯಾವಾಟಿಕೆಗೆ ಮಾರುತ್ತಾರೆ. “ಕಾಮ ಪ್ರವಾಸಗಳಿ”ಗಾಗಿ ಪ್ರವಾಸಿಗಳು ಪ್ರವಹಿಸುವ ಏಷಿಯದ ಒಂದು ದೇಶದಲ್ಲಿ 20 ಲಕ್ಷ ವೇಶ್ಯೆಯರಿದ್ದಾರೆಂದು ವರದಿಯಾಗಿದೆ. ಇವರಲ್ಲಿ ಅನೇಕರು ಖರೀದಿಸಲ್ಪಟ್ಟವರು ಅಥವಾ ಮಕ್ಕಳಾಗಿದ್ದಾಗ ಬಲಾತ್ಕಾರಾಪಹರಣಕ್ಕೊಳಗಾದವರು. ಈ ಮರುಕ ಹುಟ್ಟಿಸುವ ಆಹುತಿಗಳಿಗಿಂತ ಹೆಚ್ಚು ಪೀಡನೆಗೊಳಗಾಗಿರುವ ಯಾವ ವ್ಯಕ್ತಿಗಳಾದರೂ ಇದ್ದಾರೊ? ಈ ತುಚ್ಛ ವ್ಯಾಪಾರವನ್ನು ಚರ್ಚಿಸುತ್ತ, ಟೈಮ್ ಪತ್ರಿಕೆಯು 1991ರ ಆಗ್ನೇಯ ಏಷಿಯದ ಮಹಿಳಾ ಸಂಘಗಳ ಪರಿಷತ್ತಿನ ಕುರಿತು ವರದಿಮಾಡಿತು. ಅಲ್ಲಿ, “ಮಧ್ಯ 1970ಗಳಿಂದ ಲೋಕವ್ಯಾಪಕವಾಗಿ ಮೂರು ಕೋಟಿ ಸ್ತ್ರೀಯರು ಮಾರಲ್ಪಟ್ಟಿದ್ದರು” ಎಂದು ಅಂದಾಜಿಸಲಾಯಿತು.
ಮಕ್ಕಳನ್ನು ಬಲಿಪಶುಗಳಾಗಿಸಲು ಅವರನ್ನು ವೇಶ್ಯಾವಾಟಿಕೆಗೆ ಮಾರಬೇಕೆಂದಿಲ್ಲವೆಂಬುದು ನಿಶ್ಚಯ. ಹೆಚ್ಚುತ್ತಿರುವ ಸಂಖ್ಯೆಯಲ್ಲಿ ಮಕ್ಕಳು ಅವರ ಸ್ವಂತ ಮನೆಗಳಲ್ಲಿ ಹೆತ್ತವರಿಂದ ಅಥವಾ ಸಂಬಂಧಿಗಳಿಂದ ಶಾರೀರಿಕವಾಗಿ ಅಪಪ್ರಯೋಗಿಸಲ್ಪಡುತ್ತಾರೆ ಅಥವಾ ಬಲಾತ್ಕಾರ ಸಂಭೋಗಕ್ಕೊಳಗಾಗುತ್ತಾರೆ ಕೂಡ. ಇಂತಹ ಮಕ್ಕಳು ಭಾವನಾತ್ಮಕ ಕಲೆಗಳನ್ನು ದೀರ್ಘಕಾಲ ಹೊತ್ತುಕೊಳ್ಳಬಹುದು. ಪೀಡನೆಯ ದುರಂತಮಯ ಆಹುತಿಗಳಾದ ಇವರಿಗೆ ಸಾಂತ್ವನವು ಅಗತ್ಯವೆಂಬುದು ನಿಶ್ಚಯ.
ಪೀಡನೆಯ ಒಬ್ಬ ಹಳೆಯ ವಿದ್ಯಾರ್ಥಿ
ಮಾನವ ಪೀಡನೆಯ ವೈಶಾಲ್ಯವನ್ನು ಕಂಡು ರಾಜ ಸೊಲೊಮೋನನು ಗಾಬರಿಗೊಂಡನು. ಅವನು ಬರೆದುದು: “ಆ ಮೇಲೆ ತಿರಿಗಿ ದೃಷ್ಟಿಸಿ ಲೋಕದಲ್ಲಿನ ಹಿಂಸೆಗಳನ್ನೆಲ್ಲಾ ನೋಡಿದೆನು; ಆಹಾ, ಹಿಂಸೆಗೊಂಡವರ ಕಣ್ಣೀರು ಏನೆಂದು ಹೇಳಲಿ! ಸಂತಯಿಸುವವರು ಯಾರೂ ಇರಲಿಲ್ಲ; ಹಿಂಸಕರಿಗೆ ಬಹು ಬಲ; ಸಂತಯಿಸುವವರೋ ಒಬ್ಬರೂ ಇರಲಿಲ್ಲ.”—ಪ್ರಸಂಗಿ 4:1.
ಪೀಡಿತರಿಗೆ ಒಬ್ಬ ದುಃಖಶಾಮಕನ ತೀವ್ರಾಗತ್ಯವು ಇತ್ತೆಂದು ಆ ವಿವೇಕಿ ರಾಜನು 3,000 ವರುಷಗಳ ಮೊದಲೇ ಗ್ರಹಿಸಿದ್ದರೆ, ಅವನು ಇಂದು ಏನು ಹೇಳುತ್ತಿದ್ದನು? ಆದರೂ, ಯಾವ ಅಪೂರ್ಣ ಮಾನವನೂ—ತಾನೂ ಸೇರಿ—ಮಾನವಕುಲಕ್ಕೆ ಆವಶ್ಯಕವಾದ ಸಾಂತ್ವನವನ್ನು ಒದಗಿಸಲಾರನೆಂದು ಸೊಲೊಮೋನನು ತಿಳಿದಿದ್ದನು. ಪೀಡಕರ ಬಲವನ್ನು ಮುರಿಯಲು ಹೆಚ್ಚು ಮಹಾನ್ ವ್ಯಕ್ತಿಯೊಬ್ಬನ ಅಗತ್ಯವಿತ್ತು. ಅಂತಹ ವ್ಯಕ್ತಿಯೊಬ್ಬನು ಇದ್ದಾನೊ?
ಬೈಬಲಿನಲ್ಲಿ, 72ನೆಯ ಕೀರ್ತನೆಯು ಸಕಲ ಜನರ ಮಹಾನ್ ಸಾಂತ್ವನಕಾರನೊಬ್ಬನ ಕುರಿತು ಹೇಳುತ್ತದೆ. ಆ ಕೀರ್ತನೆಯು ಸೊಲೊಮೋನನ ತಂದೆಯಾಗಿದ್ದ ರಾಜ ದಾವೀದನಿಂದ ಬರೆಯಲ್ಪಟ್ಟಿತು. ಅದರ ಮೇಲ್ಬರಹವು ಓದುವುದು: “ಸೊಲೊಮೋನನ ಕೀರ್ತನೆ.” ಅದನ್ನು ವೃದ್ಧ ರಾಜ ದಾವೀದನು ತನ್ನ ಸಿಂಹಾಸನಕ್ಕೆ ಬಾಧ್ಯಸ್ಥನಾಗಲಿದ್ದ ವ್ಯಕ್ತಿಯ ಕುರಿತು ಬರೆದನೆಂಬುದು ವ್ಯಕ್ತ. ಕೀರ್ತನೆಗನುಸಾರ, ಈ ವ್ಯಕ್ತಿಯು, ಪೀಡನೆಯಿಂದ ಖಾಯಂ ಉಪಶಮನವನ್ನು ತರಲಿದ್ದನು. “ಅವನ ದಿವಸಗಳಲ್ಲಿ ನೀತಿಯು ವೃದ್ಧಿಯಾಗಲಿ; ಚಂದ್ರನಿರುವ ವರೆಗೂ ಪರಿಪೂರ್ಣ ಸೌಭಾಗ್ಯವಿರಲಿ. ಅವನು ಸಮುದ್ರದಿಂದ ಸಮುದ್ರದ ವರೆಗೂ . . . ಭೂಮಿಯ ಕಟ್ಟಕಡೆಯ ವರೆಗೂ ಆಳಲಿ.”—ಕೀರ್ತನೆ 72:7, 8.
ದಾವೀದನು ಈ ಮಾತುಗಳನ್ನು ಬರೆದಾಗ, ಅವನು ತನ್ನ ಮಗನಾದ ಸೊಲೊಮೋನನ ಕುರಿತು ಯೋಚಿಸುತ್ತಿದ್ದುದು ಸಂಭವನೀಯ. ಆದರೆ ಕೀರ್ತನೆಯಲ್ಲಿ ವರ್ಣಿಸಿರುವ ರೀತಿಯಲ್ಲಿ ಮಾನವಕುಲದ ಸೇವೆಮಾಡುವುದು ತನ್ನ ಶಕ್ತಿಗೆ ಮೀರಿದ್ದೆಂಬುದನ್ನು ಸೊಲೊಮೋನನು ಗ್ರಹಿಸಿದನು. ಅವನು ಕೀರ್ತನೆಯ ಮಾತುಗಳನ್ನು ಒಂದು ಲಘು ರೀತಿಯಲ್ಲಿ ಮಾತ್ರ, ಇಸ್ರಾಯೇಲ್ ಜನಾಂಗದ ಪರವಾಗಿ—ಇಡೀ ಭೂಮಿಯ ಪ್ರಯೋಜನಾರ್ಥವಾಗಿ ಅಲ್ಲ—ನೆರವೇರಿಸಸಾಧ್ಯವಿತ್ತು. ಸುವ್ಯಕ್ತವಾಗಿಯೇ, ಈ ಪ್ರೇರಿತವಾದ ಪ್ರವಾದನಾರೂಪದ ಕೀರ್ತನೆಯು, ಸೊಲೊಮೋನನಿಗಿಂತ ಎಷ್ಟೋ ಹೆಚ್ಚು ಮಹತ್ತಾದವನೊಬ್ಬನಿಗೆ ಕೈತೋರಿಸಿತು. ಅವನು ಯಾರಾಗಿದ್ದನು? ಅದು ಯೇಸು ಕ್ರಿಸ್ತನು ಮಾತ್ರವೇ ಆಗಿರಸಾಧ್ಯವಿದೆ.
ದೇವದೂತನೊಬ್ಬನು ಯೇಸುವಿನ ಜನನವನ್ನು ಪ್ರಕಟಿಸಿದಾಗ, “ಇದಲ್ಲದೆ ದೇವರಾಗಿರುವ ಕರ್ತನು [“ಯೆಹೋವ ದೇವರು,” NW] ಆತನ ಮೂಲಪಿತನಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡುವನು,” ಎಂದು ಹೇಳಿದನು. (ಲೂಕ 1:32) ಇದಲ್ಲದೆ, ಯೇಸು ತನ್ನನ್ನು, “ಸೊಲೊಮೋನನಿಗಿಂತ ಹೆಚ್ಚಿನವನು” ಎಂದು ಸೂಚಿಸಿ ಹೇಳಿದನು. (ಲೂಕ 11:31) ದೇವರ ಬಲಗಡೆಗೆ ಯೇಸುವಿನ ಪುನರುತ್ಥಾನವಾದಂದಿನಿಂದ ಅವನು ಸ್ವರ್ಗದಲ್ಲಿ, ಎಲ್ಲಿಂದ ಕೀರ್ತನೆ 72ರ ಮಾತುಗಳನ್ನು ಅವನು ನೆರವೇರಿಸಶಕ್ತನೊ ಆ ಯೋಗ್ಯಸ್ಥಾನದಲ್ಲಿ ಇದ್ದಾನೆ. ಇದಲ್ಲದೆ, ಮಾನವ ಪೀಡಕರ ನೊಗವನ್ನು ಮುರಿಯಲು ಅವನು ದೇವರಿಂದ ಶಕ್ತಿಯನ್ನೂ ಅಧಿಕಾರವನ್ನೂ ಪಡೆದಿದ್ದಾನೆ. (ಕೀರ್ತನೆ 2:7-9; ದಾನಿಯೇಲ 2:44) ಹೀಗೆ, ಕೀರ್ತನೆ 72ರ ಮಾತುಗಳನ್ನು ನೆರವೇರಿಸುವವನು ಯೇಸುವೇ.
ಪೀಡನೆ ಬೇಗನೆ ಅಂತ್ಯವಾಗಲಿದೆ
ಇದರ ಅರ್ಥವೇನು? ಸಕಲ ರೂಪಗಳ ಮಾನವ ಪೀಡನೆಯಿಂದ ವಿಮುಕ್ತಿಯು ಬೇಗನೆ ವಾಸ್ತವತೆಯಾಗುವುದು ಎಂಬುದನ್ನು ಇದು ಅರ್ಥೈಸುತ್ತದೆ. ಈ 20ನೆಯ ಶತಮಾನಾವಧಿಯಲ್ಲಿ ಪ್ರೇಕ್ಷಿಸಿರುವ ಅಭೂತಪೂರ್ವವಾದ ಕಷ್ಟಾನುಭವ ಮತ್ತು ಪೀಡನೆಯು, “ವಿಷಯಗಳ ವ್ಯವಸ್ಥೆಯ ಸಮಾಪ್ತಿ”ಯನ್ನು ಗುರುತಿಸುವ ಸೂಚನೆಯ ಭಾಗವೆಂದು ಯೇಸುವಿನಿಂದ ಮುಂತಿಳಿಸಲ್ಪಟ್ಟಿತು. (ಮತ್ತಾಯ 24:3, NW) ಬೇರೆ ವಿಷಯಗಳ ಮಧ್ಯೆ ಅವನು, “ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು,’’ ಎಂದು ಮುಂತಿಳಿಸಿದನು. (ಮತ್ತಾಯ 24:7) ಪ್ರವಾದನೆಯ ಆ ಅಂಶದ ನೆರವೇರಿಕೆಯು, 1914ರಲ್ಲಿ ಪ್ರಥಮ ಲೋಕ ಯುದ್ಧವು ಆರಂಭಗೊಂಡ ಸಮಯದ ಸುಮಾರಿಗೆ ಪ್ರಾರಂಭಿಸಿತು. “ಅಧರ್ಮವು ಹೆಚ್ಚಾಗುವದರಿಂದ ಬಹು ಜನರ ಪ್ರೀತಿಯು ತಣ್ಣಗಾಗಿಹೋಗುವದು,” ಎಂದು ಯೇಸು ಕೂಡಿಸಿದನು. (ಮತ್ತಾಯ 24:12) ನಿಯಮರಾಹಿತ್ಯ ಮತ್ತು ಪ್ರೀತಿರಾಹಿತ್ಯಗಳು, ದುಷ್ಟ ಮತ್ತು ಪೀಡನೆಯ ಸಂತತಿಯೊಂದನ್ನು ಉತ್ಪನ್ನ ಮಾಡಿವೆ. ಆದಕಾರಣ, ಭೂಮಿಯ ಹೊಸ ಅರಸನಾಗಿ ಯೇಸು ಕ್ರಿಸ್ತನು ಹಸ್ತಕ್ಷೇಪಮಾಡುವ ಸಮಯವು ಹತ್ತಿರವಿರಲೇಬೇಕು. (ಮತ್ತಾಯ 24:32-34) ಯೇಸು ಕ್ರಿಸ್ತನಲ್ಲಿ ನಂಬಿಕೆಯಿರುವ ಮತ್ತು ದೈವಿಕವಾಗಿ ನಿಯಮಿತನಾದ ಮಾನವಕುಲದ ಸಾಂತ್ವನಕಾರನಂತೆ ಅವನ ಕಡೆಗೆ ನೋಡುವ ಪೀಡಿತ ಜನರಿಗೆ ಅದು ಯಾವ ಅರ್ಥದಲ್ಲಿರುವುದು?
ಆ ಪ್ರಶ್ನೆಗೆ ಉತ್ತರಕ್ಕಾಗಿ, ಕ್ರಿಸ್ತ ಯೇಸುವಿನಲ್ಲಿ ನೆರವೇರಿದ ಕೀರ್ತನೆ 72ರ ಕೆಲವು ಹೆಚ್ಚಿನ ಮಾತುಗಳನ್ನು ನಾವು ಓದೋಣ: “ಅವನು ಮೊರೆಯಿಡುವ ಬಡವರನ್ನೂ ದಿಕ್ಕಿಲ್ಲದೆ ಕುಗ್ಗಿದವರನ್ನೂ ಉದ್ಧರಿಸುವನು. ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು. ಕುಯುಕ್ತಿಬಲಾತ್ಕಾರಗಳಿಗೆ ತಪ್ಪಿಸಿ ಅವರನ್ನು ಕಾಯುವನು; ಅವರ ಜೀವವು ಅವನ ದೃಷ್ಟಿಯಲ್ಲಿ ಅಮೂಲ್ಯವಾಗಿರುವದು.” (ಕೀರ್ತನೆ 72:12-14) ಹೀಗೆ ದೇವರ ನಿಯಮಿತ ರಾಜನಾದ ಯೇಸು ಕ್ರಿಸ್ತನು, ಪೀಡನೆಯ ಕಾರಣದಿಂದ ಯಾವನೂ ಬಾಧೆಪಡದೆ ಇರುವಂತೆ ನೋಡಿಕೊಳ್ಳುವನು. ಎಲ್ಲ ವಿಧಗಳ ಅನ್ಯಾಯಗಳಿಗೆ ಅಂತ್ಯ ತರುವ ಶಕ್ತಿ ಅವನಲ್ಲಿದೆ.
‘ಅದು ವಿಸ್ಮಯಕರವಾಗಿ ಅನಿಸುವುದೇನೋ ನಿಜ, ಆದರೆ ಈಗಿನ ಕುರಿತೇನು? ಈಗ ತಾನೇ ಬಾಧೆಪಡುತ್ತಿರುವವರಿಗಾಗಿ ಯಾವ ಸಾಂತ್ವನವಿದೆ?’ ಎಂದು ಯಾವನಾದರೂ ಹೇಳಿಯಾನು. ವಾಸ್ತವವೇನಂದರೆ, ಪೀಡಿತರಿಗೆ ಸಾಂತ್ವನವು ನಿಶ್ಚಯವಾಗಿಯೂ ಇದೆ. ಈ ಪತ್ರಿಕೆಯಲ್ಲಿರುವ ಮುಂದಿನ ಎರಡು ಲೇಖನಗಳು, ಲಕ್ಷಾಂತರ ಮಂದಿ, ಸತ್ಯ ದೇವರಾದ ಯೆಹೋವನೊಂದಿಗೆ ಮತ್ತು ಆತನ ಪ್ರಿಯ ಪುತ್ರನಾದ ಯೇಸು ಕ್ರಿಸ್ತನೊಂದಿಗೆ ಒಂದು ನಿಕಟ ಸಂಬಂಧವನ್ನು ಬೆಳೆಸಿಕೊಳ್ಳುವ ಮೂಲಕ ಈಗಾಗಲೇ ಸಾಂತ್ವನವನ್ನು ಅನುಭವಿಸುತ್ತಿದ್ದಾರೆಂದು ತೋರಿಸುವುವು. ಇಂತಹ ಸಂಬಂಧವು ಈ ಪೀಡನೆಯ ಸಮಯಗಳಲ್ಲಿ ನಮ್ಮನ್ನು ಸಾಂತ್ವನಗೊಳಿಸಿ, ಒಬ್ಬ ವ್ಯಕ್ತಿಯನ್ನು ಪೀಡನೆಮುಕ್ತವಾಗಿರುವ ನಿತ್ಯಜೀವಕ್ಕೆ ನಡೆಸಬಲ್ಲದು. ಯೇಸು ಪ್ರಾರ್ಥನೆಯಲ್ಲಿ ದೇವರಿಗೆ ಹೇಳಿದ್ದು: “ಒಬ್ಬನೇ ಸತ್ಯದೇವರಾದ ನಿನ್ನ ಮತ್ತು ನೀನು ಕಳುಹಿಸಿಕೊಟ್ಟ ಯೇಸುಕ್ರಿಸ್ತನ ಜ್ಞಾನವನ್ನು ಅವರು ಪಡೆದುಕೊಳ್ಳುವುದು—ಇದೇ ನಿತ್ಯಜೀವವು.”—ಯೋಹಾನ 17:3, NW.
[ಪುಟ 4,5 ರಲ್ಲಿರುವಚಿತ್ರ]
ದೇವರ ನೂತನ ಲೋಕದಲ್ಲಿ ಯಾವ ಮಾನವನೂ ಇನ್ನೊಬ್ಬನನ್ನು ಪೀಡಿಸನು