ಯೇಸುವಿನ ಬರೋಣವೊ ಯೇಸುವಿನ ಸಾನ್ನಿಧ್ಯವೊ—ಯಾವುದು?
“ನಿನ್ನ ಸಾನ್ನಿಧ್ಯದ ಮತ್ತು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಸೂಚನೆಯು ಏನಾಗಿರುವುದು?”—ಮತ್ತಾಯ 24:3, NW.
1. ಯೇಸುವಿನ ಶುಶ್ರೂಷೆಯಲ್ಲಿ ಪ್ರಶ್ನೆಗಳಿಗೆ ಯಾವ ಪಾತ್ರವಿತ್ತು?
ಯೇಸು ಪ್ರಶ್ನೆಗಳನ್ನು ಕೌಶಲದಿಂದ ಉಪಯೋಗಿಸಿದ್ದು, ಅವನ ಕೇಳುಗರನ್ನು ಆಲೋಚಿಸುವಂತೆ, ಅವರು ಹೊಸ ಪರಿದೃಶ್ಯದಲ್ಲಿ ವಿಷಯಗಳನ್ನು ಪರಿಗಣಿಸುವಂತೆಯೂ ಮಾಡಿತು. (ಮಾರ್ಕ 12:35-37; ಲೂಕ 6:9; 9:20; 20:3, 4) ಅವನು ಪ್ರಶ್ನೆಗಳನ್ನು ಉತ್ತರಿಸಿದನೆಂಬುದಕ್ಕೂ ನಾವು ಆಭಾರಿಗಳಾಗಿರಬಲ್ಲೆವು. ನಮಗೆ ಅನ್ಯಥಾ ಅರಿಯದೆ ಇರುತ್ತಿದ್ದ ಅಥವಾ ಅರ್ಥ ಗ್ರಹಿಸಲಾಗದಿರುತ್ತಿದ್ದ ಸತ್ಯಗಳ ಮೇಲೆ ಅವನ ಉತ್ತರಗಳು ಬೆಳಕು ಬೀರುತ್ತವೆ.—ಮಾರ್ಕ 7:17-23; 9:11-13; 10:10-12; 12:18-27.
2. ನಾವೀಗ ಯಾವ ಪ್ರಶ್ನೆಗೆ ನಮ್ಮ ಗಮನವನ್ನು ಕೊಡಬೇಕು?
2 ಮತ್ತಾಯ 24:3ರಲ್ಲಿ, ನಾವು ಯೇಸುವು ಎಂದೂ ಉತ್ತರಿಸಿದ್ದ ಪ್ರಶ್ನೆಗಳಲ್ಲಿ ಅತಿ ಪ್ರಾಮುಖ್ಯವಾದೊಂದನ್ನು ಕಂಡುಕೊಳ್ಳುತ್ತೇವೆ. ಅವನ ಭೂಜೀವಿತದ ಅಂತ್ಯವು ಸಮೀಪಿಸುತ್ತಿದ್ದುದರೊಂದಿಗೆ, ಯೇಸು ಆಗತಾನೇ, ಯೆಹೂದಿ ವ್ಯವಸ್ಥೆಯ ಅಂತ್ಯವನ್ನು ಗುರುತಿಸುತ್ತ, ಯೆರೂಸಲೇಮಿನ ದೇವಾಲಯವು ನಾಶಗೊಳ್ಳುವುದೆಂದು ಎಚ್ಚರಿಸಿದ್ದನು. ಮತ್ತಾಯನ ವೃತ್ತಾಂತವು ಕೂಡಿಸುವುದು: “ಅವನು ಆಲಿವ್ಸ್ ಗುಡ್ಡದ ಮೇಲೆ ಕುಳಿತುಕೊಂಡಿದ್ದಾಗ, ಶಿಷ್ಯರು ಅವನನ್ನು ಖಾಸಗಿಯಾಗಿ ಸಮೀಪಿಸುತ್ತ ಕೇಳಿದ್ದು: ‘ನಮಗೆ ಹೇಳು, ಈ ಸಂಗತಿಗಳು ಯಾವಾಗ ಸಂಭವಿಸುವುವು, ಮತ್ತು ನಿನ್ನ ಸಾನ್ನಿಧ್ಯದ [“ಬರೋಣ,” ಕಿಂಗ್ ಜೇಮ್ಸ್ ವರ್ಷನ್] ಮತ್ತು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಸೂಚನೆಯು ಏನಾಗಿರುವುದು?’”—ಮತ್ತಾಯ 24:3, NW.
3, 4. ಮತ್ತಾಯ 24:3ರಲ್ಲಿ ಒಂದು ಮುಖ್ಯ ಪದವನ್ನು ಬೈಬಲುಗಳು ಭಾಷಾಂತರಿಸಿರುವ ವಿಧದಲ್ಲಿ ಯಾವ ಗಮನಾರ್ಹವಾದ ವ್ಯತ್ಯಾಸವಿದೆ?
3 ಕೋಟ್ಯಂತರ ಮಂದಿ ಬೈಬಲ್ ಓದುಗರು, ‘ಶಿಷ್ಯರು ಆ ಪ್ರಶ್ನೆಯನ್ನು ಏಕೆ ಕೇಳಿದರು, ಮತ್ತು ಯೇಸುವಿನ ಉತ್ತರವು ನನ್ನ ಮೇಲೆ ಹೇಗೆ ಪರಿಣಾಮ ಬೀರಬೇಕು?’ ಎಂದು ಕುತೂಹಲಪಟ್ಟಿದ್ದಾರೆ. ತನ್ನ ಉತ್ತರದಲ್ಲಿ ಯೇಸುವು, ಬೇಸಗೆಯು “ಹತ್ತರ”ವೆಂದು ತೋರಿಸುವ ಎಲೆಗಳ ಕಂಡುಬರುವಿಕೆಯ ಕುರಿತು ಮಾತಾಡಿದನು. (ಮತ್ತಾಯ 24:32, 33) ಆದಕಾರಣ, ಅಪೊಸ್ತಲರು ಯೇಸುವಿನ “ಬರೋಣ”ದ ಕುರಿತು, ಅವನ ಹಿಂದಿರುಗುವಿಕೆಯು ಸನ್ನಿಹಿತವೆಂಬುದನ್ನು ರುಜುಪಡಿಸುವ ಸೂಚನೆಯ ಕುರಿತು ಕೇಳುತ್ತಿದ್ದರೆಂದು ಅನೇಕ ಚರ್ಚುಗಳು ಕಲಿಸುತ್ತವೆ. ಆ “ಬರೋಣವು” ಅವನು ಕ್ರೈಸ್ತರನ್ನು ಸ್ವರ್ಗಕ್ಕೆ ಕೊಂಡೊಯ್ಯುವ ಮತ್ತು ಬಳಿಕ ಲೋಕದ ಅಂತ್ಯವನ್ನು ತರುವ ಹಂತವಾಗಿದೆಯೆಂದು ಅವರು ನಂಬುತ್ತಾರೆ. ಇದು ಸರಿಯೆಂದು ನೀವು ನಂಬುತ್ತೀರೊ?
4 “ಬರೋಣ”ವೆಂದು ಭಾಷಾಂತರಿಸುವ ಬದಲು, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್ ಸೇರಿ, ಕೆಲವು ಬೈಬಲ್ ಭಾಷಾಂತರಗಳು, “ಸಾನ್ನಿಧ್ಯ” ಎಂಬ ಪದವನ್ನು ಬಳಸುತ್ತವೆ. ಹಾಗಾದರೆ, ಶಿಷ್ಯರು ಏನನ್ನು ಕೇಳಿದರೊ ಅದು ಮತ್ತು ಯೇಸುವು ಉತ್ತರವಾಗಿ ಏನು ಹೇಳಿದನೋ ಅದು, ಚರ್ಚುಗಳಲ್ಲಿ ಕಲಿಸಲಾಗುವುದಕ್ಕಿಂತ ಭಿನ್ನವಾಗಿರಸಾಧ್ಯವಿದೆಯೆ? ನಿಜವಾಗಿ ಕೇಳಲ್ಪಟ್ಟದ್ದಾದರೂ ಏನು? ಮತ್ತು ಯೇಸು ಯಾವ ಉತ್ತರವನ್ನು ಕೊಟ್ಟನು?
ಅವರು ಏನನ್ನು ಕೇಳುತ್ತಿದ್ದರು?
5, 6. ಮತ್ತಾಯ 24:3ರಲ್ಲಿ ನಾವು ಓದುವ ಪ್ರಶ್ನೆಯನ್ನು ಅಪೊಸ್ತಲರು ಕೇಳಿದಾಗ ಅವರ ಯೋಚನೆಯ ಕುರಿತು ನಾವು ಏನು ತೀರ್ಮಾನಿಸಬಲ್ಲೆವು?
5 ಯೇಸು ದೇವಾಲಯದ ಕುರಿತು ಏನು ಹೇಳಿದನೋ ಅದರ ವೀಕ್ಷಣದಲ್ಲಿ, ‘ಅವನ ಸಾನ್ನಿಧ್ಯ [ಅಥವಾ, “ಬರೋಣ”] ಮತ್ತು ವಿಷಯಗಳ ವ್ಯವಸ್ಥೆಯ [ಪದಶಃ, “ಯುಗ”] ಸಮಾಪ್ತಿಯ ಒಂದು ಸೂಚನೆ’ಗಾಗಿ ಕೇಳಿದಾಗ ಶಿಷ್ಯರು ಯೆಹೂದಿ ವ್ಯವಸ್ಥೆಯ ಕುರಿತು ಯೋಚಿಸುತ್ತಿದ್ದದ್ದು ಸಂಭವನೀಯ.—ಹೋಲಿಸಿ “ವರ್ಲ್ಡ್” 1 ಕೊರಿಂಥ 10:11 ಮತ್ತು ಗಲಾತ್ಯ 1:4ರಲ್ಲಿ, KJ.
6 ಈ ಹಂತದಲ್ಲಿ ಅಪೊಸ್ತಲರಿಗೆ ಯೇಸುವಿನ ಬೋಧನೆಗಳ ಪರಿಮಿತವಾದ ಗ್ರಹಿಕೆಯು ಮಾತ್ರ ಇತ್ತು. ಅವರು ಆ ಮೊದಲು, “ದೇವರ ರಾಜ್ಯವು ಕೂಡಲೆ ಪ್ರತ್ಯಕ್ಷವಾಗುವ ಹಾಗಿದೆ,” ಎಂದು ಭಾವಿಸಿದ್ದರು. (ಲೂಕ 19:11; ಮತ್ತಾಯ 16:21-23; ಮಾರ್ಕ 10:35-40) ಮತ್ತು ಆಲಿವ್ಸ್ ಗುಡ್ಡದ ಮೇಲಿನ ಆ ಚರ್ಚೆಯ ಬಳಿಕವೂ, ಆದರೆ ಪವಿತ್ರಾತ್ಮದಿಂದ ಅಭಿಷಿಕ್ತರಾಗುವ ಮೊದಲು, ಯೇಸುವು ಆಗ ಇಸ್ರಾಯೇಲಿನಲ್ಲಿ ರಾಜ್ಯವನ್ನು ಪುನಸ್ಸ್ಥಾಪಿಸಲಿದ್ದಾನೊ ಎಂದು ಅವರು ಅವನನ್ನು ಕೇಳಿದರು.—ಅ. ಕೃತ್ಯಗಳು 1:6.
7. ಯೇಸುವಿನ ಭಾವೀ ಪಾತ್ರದ ಕುರಿತು ಅಪೊಸ್ತಲರು ಅವನೊಡನೆ ಏಕೆ ಕೇಳಲಿದ್ದರು?
7 ಆದರೂ ಅವನು ಹೋಗಿಬಿಡುವನೆಂದು ಅವರಿಗೆ ಗೊತ್ತಿತ್ತು, ಏಕೆಂದರೆ, “ಇನ್ನು ಸ್ವಲ್ಪ ಕಾಲವೇ ಬೆಳಕು ನಿಮ್ಮಲ್ಲಿ ಇರುತ್ತದೆ; ಕತ್ತಲೆಯು ನಿಮ್ಮನ್ನು ಮುಸುಕಿಕೊಳ್ಳದಂತೆ ಬೆಳಕು ನಿಮಗೆ ಇರುವಾಗಲೇ ಸಂಚಾರಮಾಡಿರಿ,” ಎಂದು ಅವನು ಇತ್ತೀಚೆಗೆ ಹೇಳಿದ್ದನು. (ಯೋಹಾನ 12:35; ಲೂಕ 19:12-27) ಆದಕಾರಣ, ‘ಯೇಸುವು ಬಿಟ್ಟುಹೋಗುವುದಾದರೆ, ಅವನ ಹಿಂದಿರುಗುವಿಕೆಯನ್ನು ನಾವು ಹೇಗೆ ಗುರುತಿಸುವೆವು?’ ಎಂದು ಅವರು ಕುತೂಹಲಪಟ್ಟಿದ್ದಿರಬಹುದು. ಅವನು ಮೆಸ್ಸೀಯನಾಗಿ ತೋರಿಬಂದಾಗ, ಅಧಿಕಾಂಶ ಮಂದಿ ಅವನನ್ನು ಗುರುತಿಸಲಿಲ್ಲ. ಮತ್ತು ಒಂದು ವರ್ಷಕ್ಕೂ ಹೆಚ್ಚು ಸಮಯಾನಂತರ, ಮೆಸ್ಸೀಯನು ಮಾಡಲಿಕ್ಕಿದ್ದುದೆಲ್ಲವನ್ನೂ ಅವನು ಪೂರೈಸುವನೊ ಎಂಬ ಪ್ರಶ್ನೆಗಳು ಏಳುತ್ತ ಇದ್ದವು. (ಮತ್ತಾಯ 11:2, 3) ಹೀಗೆ ಭವಿಷ್ಯತ್ತಿನ ಕುರಿತು ವಿಚಾರಿಸಲು ಅಪೊಸ್ತಲರಿಗೆ ಕಾರಣವಿತ್ತು. ಆದರೆ, ಪುನಃ, ಅವನು ಬೇಗನೆ ಬರಲಿದ್ದುದಕ್ಕೆ ಅವರು ಸೂಚನೆಯನ್ನು ಕೇಳುತ್ತಿದ್ದರೊ ಇಲ್ಲವೆ ಯಾವುದಾದರೂ ಭಿನ್ನವಾದ ಸೂಚನೆಗಾಗಿಯೊ?
8. ಅಪೊಸ್ತಲರು ಯೇಸುವಿನೊಂದಿಗೆ ಯಾವ ಭಾಷೆಯನ್ನಾಡುತ್ತಿದ್ದುದು ಸಂಭವನೀಯ?
8 ಆ ಆಲಿವ್ಸ್ ಗುಡ್ಡದಲ್ಲಿ ನಡೆಯುತ್ತಿದ್ದ ಸಂಭಾಷಣೆಗೆ ಕಿವಿಗೊಡುತ್ತಿದ್ದ ಒಂದು ಪಕ್ಷಿ ನೀವಾಗಿದ್ದಿರಿ ಎಂದು ಭಾವಿಸಿಕೊಳ್ಳಿರಿ. (ಹೋಲಿಸಿ ಪ್ರಸಂಗಿ 10:20.) ಯೇಸುವೂ ಅವನ ಅಪೊಸ್ತಲರೂ ಹೀಬ್ರುವಿನಲ್ಲಿ ಮಾತಾಡುತ್ತಿರುವುದನ್ನು ನೀವು ಕೇಳಿಸಿಕೊಂಡಿದ್ದಿರಬಹುದು. (ಮಾರ್ಕ 14:70; ಯೋಹಾನ 5:2; 19:17, 20; ಅ. ಕೃತ್ಯಗಳು 21:40) ಆದರೂ, ಅವರಿಗೆ ಗ್ರೀಕ್ ಭಾಷೆಯೂ ತಿಳಿದಿದ್ದದ್ದು ಸಂಭವನೀಯ.
ಮತ್ತಾಯನು ಬರೆದ ವಿಷಯ—ಗ್ರೀಕ್ನಲ್ಲಿ
9. ಮತ್ತಾಯ ಪುಸ್ತಕದ ಹೆಚ್ಚಿನ ಆಧುನಿಕ ಭಾಷಾಂತರಗಳು ಯಾವುದರ ಮೇಲೆ ಆಧರಿತವಾಗಿವೆ?
9 ಸಾ.ಶ. ಎರಡನೆಯ ಶತಮಾನದಷ್ಟು ಹಿಂದಿನ ಮೂಲ ದಾಖಲೆಗಳು, ಮತ್ತಾಯನು ತನ್ನ ಸುವಾರ್ತೆಯನ್ನು ಪ್ರಥಮವಾಗಿ ಹೀಬ್ರುವಿನಲ್ಲಿ ಬರೆದನೆಂದು ಸೂಚಿಸುತ್ತವೆ. ಅವನು ತರುವಾಯ ಅದನ್ನು ಗ್ರೀಕ್ನಲ್ಲಿ ಬರೆದನೆಂಬುದು ಸ್ಪಷ್ಟ. ಅನೇಕ ಗ್ರೀಕ್ ಮೂಲಪ್ರತಿಗಳು ನಮ್ಮ ಸಮಯದ ತನಕ ಪಾರಾಗಿದ್ದು, ಅವನ ಸುವಾರ್ತೆಯು ಇಂದಿನ ಭಾಷೆಗಳಿಗೆ ತರ್ಜುಮೆಯಾಗಲು ಆಧಾರವನ್ನು ಒದಗಿಸಿವೆ. ಆಲಿವ್ಸ್ ಗುಡ್ಡದ ಮೇಲಿನ ಆ ಸಂಭಾಷಣೆಯ ಕುರಿತು ಮತ್ತಾಯನು ಗ್ರೀಕ್ನಲ್ಲಿ ಏನು ಬರೆದನು? ಶಿಷ್ಯರು ಯಾವುದರ ಕುರಿತು ಕೇಳಿದರೊ ಮತ್ತು ಯೇಸು ಯಾವುದನ್ನು ವಿವರಿಸಿದನೊ ಆ “ಬರೋಣ” ಅಥವಾ “ಸಾನ್ನಿಧ್ಯ”ದ ಬಗೆಗೆ ಅವನು ಏನು ಬರೆದನು?
10. (ಎ) ಮತ್ತಾಯನು “ಬರು” ಎಂಬುದಕ್ಕೆ ಅನೇಕ ವೇಳೆ ಯಾವ ಗ್ರೀಕ್ ಪದವನ್ನು ಉಪಯೋಗಿಸಿದನು, ಮತ್ತು ಅದಕ್ಕೆ ಯಾವ ಅರ್ಥಗಳಿರಸಾಧ್ಯವಿದೆ? (ಬಿ) ಇನ್ನಾವ ಗ್ರೀಕ್ ಪದವು ಆಸಕ್ತಿಯದ್ದಾಗಿದೆ?
10 ಮತ್ತಾಯನ ಆದಿಯ 23 ಅಧ್ಯಾಯಗಳಲ್ಲಿ, “ಬರು” ಎಂಬುದರ ಸಾಮಾನ್ಯ ಗ್ರೀಕ್ ಕ್ರಿಯಾಪದವಾದ ಎರ್ಖೊಮಾಯ್ ಎಂಬುದನ್ನು ನಾವು 80ಕ್ಕೂ ಹೆಚ್ಚು ಬಾರಿ ಕಂಡುಕೊಳ್ಳುತ್ತೇವೆ. ಅದು ಅನೇಕ ವೇಳೆ, ಯೋಹಾನ 1:47ರಲ್ಲಿ, “ಯೇಸು ತನ್ನ ಕಡೆಗೆ ಬರುವ ನತಾನಯೇಲನನ್ನು” (ಓರೆಅಕ್ಷರಗಳು ನಮ್ಮವು.) ಕಂಡನು ಎಂಬಲ್ಲಿರುವಂತೆ, ಸಮೀಪಿಸುತ್ತಿರುವ ಅಥವಾ ಹತ್ತಿರ ಬರುವ ಅಭಿಪ್ರಾಯವನ್ನು ಕೊಡುತ್ತದೆ. ಪ್ರಯೋಗದ ಮೇಲೆ ಹೊಂದಿಕೊಂಡು, ಕ್ರಿಯಾಪದವಾದ ಎರ್ಖೊಮಾಯ್, “ಆಗಮಿಸು,” “ಹೋಗು,” “ಆರಂಭಿಸು,” “ತಲುಪು,” ಅಥವಾ “ಪ್ರಯಾಣದಲ್ಲಿರು” ಎಂಬ ಅರ್ಥವನ್ನು ಕೊಡಬಲ್ಲದು. (ಮತ್ತಾಯ 2:8, 11; 8:28; ಯೋಹಾನ 4:25, 27, 45; 20:4, 8; ಅ. ಕೃತ್ಯಗಳು 8:40; 13:51) ಆದರೆ ಮತ್ತಾಯ 24:3, 27, 37, 39ರಲ್ಲಿ, ಮತ್ತಾಯನು ಒಂದು ಭಿನ್ನವಾದ ಪದವನ್ನು, ಸುವಾರ್ತೆಗಳಲ್ಲಿ ಬೇರೆಲ್ಲಿಯೂ ಕಂಡುಬರದಿರುವ ಒಂದು ನಾಮಪದವಾದ ಪ್ಯಾರೂಸೀಯವನ್ನು ಉಪಯೋಗಿಸಿದನು. ದೇವರು ಬೈಬಲಿನ ಬರವಣಿಗೆಯನ್ನು ಪ್ರೇರಿಸಿದುದರಿಂದ, ಮತ್ತಾಯನು ತನ್ನ ಸುವಾರ್ತೆಯನ್ನು ಗ್ರೀಕ್ ಭಾಷೆಯಲ್ಲಿ ಬರೆಯುತ್ತಿದ್ದಾಗ ಈ ವಚನಗಳಲ್ಲಿ ಈ ಗ್ರೀಕ್ ಪದವನ್ನು ಆರಿಸುವಂತೆ ದೇವರು ಪ್ರಚೋದಿಸಿದ್ದೇಕೆ? ಅದರ ಅರ್ಥವೇನು, ಮತ್ತು ನಾವು ಅದನ್ನು ಏಕೆ ತಿಳಿದುಕೊಳ್ಳಲು ಬಯಸಬೇಕು?
11. (ಎ) ಪ್ಯಾರೂಸೀಯದ ಅರ್ಥವೇನು? (ಬಿ) ಜೋಸೀಫಸನ ಬರವಣಿಗೆಯ ದೃಷ್ಟಾಂತಗಳು, ಪ್ಯಾರೂಸೀಯದ ನಮ್ಮ ತಿಳಿವಳಿಕೆಯನ್ನು ಹೇಗೆ ಸ್ಥಿರಪಡಿಸುತ್ತವೆ? (ಪಾದಟಿಪ್ಪಣಿ ನೋಡಿ.)
11 ತೀಕ್ಷ್ಣಾರ್ಥದಲ್ಲಿ, ಪ್ಯಾರೂಸೀಯ ಅಂದರೆ “ಸಾನ್ನಿಧ್ಯ.” ವೈನ್ಸ್ ಎಕ್ಸ್ಪೊಸಿಟರಿ ಡಿಕ್ಷನೆರಿ ಆಫ್ ನ್ಯೂ ಟೆಸ್ಟಮೆಂಟ್ ವರ್ಡ್ಸ್ ಹೇಳುವುದು: “ಪ್ಯಾರೂಸೀಯ, . . . ಪ[ದಶಃ] ಒಂದು ಸಾನ್ನಿಧ್ಯ, ಪ್ಯಾರ, ಒಂದಿಗೆ, ಮತ್ತು ಊಸೀಯ, ಅಸ್ತಿತ್ವ (ಈಮಿ, ಮುಂದಿನದು, ಇದರಿಂದ), ಆಗಮನ ಮತ್ತು ತತ್ಪರಿಣಾಮವಾದ ಸಾನ್ನಿಧ್ಯ, ಇವೆರಡನ್ನೂ ತೋರಿಸುತ್ತದೆ. ಉದಾಹರಣೆಗೆ, ಒಂದು ಪ್ಯಾಪೈರಸ್ ಪತ್ರದಲ್ಲಿ ಒಬ್ಬ ಮಹಿಳೆಯು, ತನ್ನ ಆಸ್ತಿಗೆ ಸಂಬಂಧಿಸಿದ ವಿಷಯಗಳನ್ನು ನೋಡಿಕೊಳ್ಳಲು ಒಂದು ಸ್ಥಳದಲ್ಲಿ ತನ್ನ ಪ್ಯಾರೂಸೀಯದ ಅಗತ್ಯದ ಕುರಿತು ಮಾತಾಡುತ್ತಾಳೆ.” ಇತರ ನಿಘಂಟುಗಳು, ಪ್ಯಾರೂಸೀಯವು ‘ಒಬ್ಬ ಪ್ರಭುವಿನ ಭೇಟಿ’ಯನ್ನು ಸೂಚಿಸುತ್ತದೆಂದು ವಿವರಿಸುತ್ತವೆ. ಆದಕಾರಣ, ಅದು ಆಗಮನದ ಕ್ಷಣವನ್ನು ಮಾತ್ರವಲ್ಲ, ಆಗಮನದಿಂದ ಹಿಡಿದು ಮುಂದಕ್ಕೆ ವ್ಯಾಪಿಸುವ ಒಂದು ಸಾನ್ನಿಧ್ಯವಾಗಿದೆ. ಆಸಕ್ತಿಕರವಾಗಿ, ಅಪೊಸ್ತಲರ ಸಮಕಾಲೀನನಾಗಿದ್ದ, ಯೆಹೂದಿ ಇತಿಹಾಸಕಾರನಾದ ಜೋಸೀಫಸನು ಪ್ಯಾರೂಸೀಯವನ್ನು ಬಳಸಿದ್ದು ಹಾಗೆಯೇ.a
12. ಸ್ವತಃ ಬೈಬಲು ಪ್ಯಾರೂಸೀಯದ ಅರ್ಥವನ್ನು ದೃಢಪಡಿಸಲು ನಮಗೆ ಹೇಗೆ ಸಹಾಯಮಾಡುತ್ತದೆ?
12 “ಸಾನ್ನಿಧ್ಯ”ದ ಅರ್ಥವು ಪುರಾತನ ಸಾಹಿತ್ಯದಿಂದ ಸ್ಪಷ್ಟವಾಗುತ್ತದಾದರೂ, ದೇವರ ವಾಕ್ಯವು ಪ್ಯಾರೂಸೀಯವನ್ನು ಹೇಗೆ ಉಪಯೋಗಿಸುತ್ತದೆಂಬುದರಲ್ಲಿ ಕ್ರೈಸ್ತರು ವಿಶೇಷವಾಗಿ ಅಭಿರುಚಿಯುಳ್ಳವರಾಗಿದ್ದಾರೆ. ಉತ್ತರವು ಅದೇ—ಸಾನ್ನಿಧ್ಯ. ಅದನ್ನು ನಾವು ಪೌಲನ ಪತ್ರಿಕೆಗಳಲ್ಲಿನ ದೃಷ್ಟಾಂತಗಳಿಂದ ನೋಡುತ್ತೇವೆ. ಉದಾಹರಣೆಗೆ, ಅವನು ಫಿಲಿಪ್ಪಿಯವರಿಗೆ ಬರೆದುದು: “ನೀವು ನನ್ನ ಮಾತನ್ನು ಯಾವಾಗಲೂ ಕೇಳಿದಂತೆ ಈಗಲೂ ಕೇಳಿರಿ. ನಾನು ನಿಮ್ಮಲ್ಲಿರುವಾಗ [“ಸಾನ್ನಿಧ್ಯ,” NW] ಮಾತ್ರವಲ್ಲದೆ ನಾನಿಲ್ಲದಿರುವಾಗಲೂ [“ಅನುಪಸ್ಥಿತಿ,” NW] ಬಹು ಹೆಚ್ಚಾಗಿ ಮನೋಭೀತಿಯಿಂದ ನಡುಗುವವರಾಗಿ ನಿಮ್ಮ ನಿಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳಿರಿ.” “[ಅವನು] ತಿರಿಗಿ [ಅವರಲ್ಲಿಗೆ] ಬರುವದರಿಂದ [ಪ್ಯಾರೂಸೀಯ]” ಅವರು ಉತ್ಸಾಹಪಡುವಂತೆ ತಾನು ಅವರೊಂದಿಗೆ ಇರುತ್ತೇನೆಂಬ ವಿಷಯವನ್ನೂ ಅವನು ಮಾತಾಡಿದನು. (ಫಿಲಿಪ್ಪಿ 1:25, 26; 2:12) ಬೇರೆ ಭಾಷಾಂತರಗಳು ಓದುವುದು, “ನಾನು ಪುನಃ ನಿಮ್ಮೊಂದಿಗೆ ಇರುವುದು” (ವೇಮತ್; ನ್ಯೂ ಇಂಟರ್ನ್ಯಾಷನಲ್ ವರ್ಷನ್); “ನಾನು ಪುನಃ ನಿಮ್ಮೊಂದಿಗಿರುವಾಗ” (ಜೆರೂಸಲೆಮ್ ಬೈಬಲ್; ನ್ಯೂ ಇಂಗ್ಲಿಷ್ ಬೈಬಲ್); ಮತ್ತು “ನಾನು ಇನ್ನೊಮ್ಮೆ ನಿಮ್ಮ ಮಧ್ಯೆ ಇರುವಾಗ.” (ಟ್ವೆಂಟಿಯೆತ್ ಸೆಂಚುರಿ ನ್ಯೂ ಟೆಸ್ಟಮೆಂಟ್) 2 ಕೊರಿಂಥ 10:10, 11ರಲ್ಲಿ ಪೌಲನು, “ಸಾಕ್ಷಾತ್ತಾಗಿ ಬಂದರೆ” [“ತನ್ನ ಸ್ವಂತ ಸಾನ್ನಿಧ್ಯ,” NW] ಎಂಬುದನ್ನು “ದೂರದಲ್ಲಿರುವಾಗ” [“ಅನುಪಸ್ಥಿತಿ,” NW] ಎಂದು ಹೇಳಿ ವ್ಯತ್ಯಾಸವನ್ನು ತೋರಿಸಿದನು. ಈ ದೃಷ್ಟಾಂತಗಳಲ್ಲಿ ಅವನು ತನ್ನ ಸಮೀಪಿಸುವಿಕೆ ಅಥವಾ ಆಗಮನದ ಕುರಿತು ಮಾತಾಡುತ್ತಿರಲಿಲ್ಲವೆಂಬುದು ಸ್ಪಷ್ಟ; ಅವನು ಪ್ಯಾರೂಸೀಯವನ್ನು ತಾನು ಸನ್ನಿಧನಾಗುವ ಅರ್ಥದಲ್ಲಿ ಬಳಸಿದನು.b (ಹೋಲಿಸಿ 1 ಕೊರಿಂಥ 16:17.) ಆದರೆ ಯೇಸುವಿನ ಪ್ಯಾರೂಸೀಯಕ್ಕಿರುವ ಉಲ್ಲೇಖಗಳ ವಿಷಯವೇನು? ಅವು ಅವನ “ಬರೋಣ”ದ ಅರ್ಥದಲ್ಲಿವೆಯೊ ಅಥವಾ ಒಂದು ವಿಸ್ತೃತವಾದ ಸಾನ್ನಿಧ್ಯವನ್ನು ಅವು ಸೂಚಿಸುತ್ತವೆಯೊ?
13, 14. (ಎ) ಒಂದು ಪ್ಯಾರೂಸೀಯ ಸಮಯವನ್ನು ಆವರಿಸುತ್ತದೆಂದು ನಾವೇಕೆ ತೀರ್ಮಾನಿಸಬೇಕು? (ಬಿ) ಯೇಸುವಿನ ಪ್ಯಾರೂಸೀಯದ ವ್ಯಾಪ್ತಿಯ ಕುರಿತು ಏನನ್ನು ಹೇಳಲೇಬೇಕು?
13 ಪೌಲನ ದಿನಗಳಲ್ಲಿನ ಆತ್ಮಾಭಿಷಿಕ್ತ ಕ್ರೈಸ್ತರಿಗೆ ಯೇಸುವಿನ ಪ್ಯಾರೂಸೀಯದಲ್ಲಿ ಆಸಕ್ತಿಯಿತ್ತು. ಆದರೆ ಪೌಲನು, “ಬುದ್ಧಿಗೆಟ್ಟು ಚಂಚಲರು” ಆಗದಂತೆ ಅವರನ್ನು ಎಚ್ಚರಿಸಿದನು. ಪ್ರಥಮವಾಗಿ, ಯಾವುದು ಕ್ರೈಸ್ತಪ್ರಪಂಚದ ಪುರೋಹಿತವರ್ಗವಾಗಿ ಪರಿಣಮಿಸಿದೆಯೊ ಆ “ಅಧರ್ಮಸ್ವರೂಪನು” ತೋರಿಬರಬೇಕು. “ಆ ಅಧರ್ಮಸ್ವರೂಪನ ಪ್ರತ್ಯಕ್ಷತೆಯು [“ಸಾನ್ನಿಧ್ಯ,” NW] ಸೈತಾನನ ಮಾಟಕ್ಕನುಗುಣವಾಗಿರುವದು. ಅದು ಮೋಸಗೊಳಿಸುವ ಸಕಲವಿಧವಾದ ಮಹತ್ಕಾರ್ಯ”ಗಳಿಂದ ಕೂಡಿರುವುದು ಎಂದು ಪೌಲನು ಬರೆದನು. (2 ಥೆಸಲೊನೀಕ 2:2, 3, 9) ಸ್ಪಷ್ಟವಾಗುವುದೇನಂದರೆ, “ಆ ಅಧರ್ಮಸ್ವರೂಪನ” ಪ್ಯಾರೂಸೀಯ, ಅಥವಾ ಸಾನ್ನಿಧ್ಯವು ಕ್ಷಣಿಕವಾದೊಂದು ಆಗಮನವಲ್ಲ; ಅದು ಸಮಯವನ್ನು ವ್ಯಾಪಿಸುವುದು ಮತ್ತು ಆ ಸಮಯದಲ್ಲಿ ಮೋಸಗೊಳಿಸುವ ಮಹತ್ಕಾರ್ಯಗಳು ಮಾಡಲ್ಪಡುವುವು. ಇದು ಗಮನಾರ್ಹವೇಕೆ?
14 ಅದಕ್ಕೆ ನೇರ ಮೊದಲಿನ ವಚನವನ್ನು ಪರಿಗಣಿಸಿರಿ. “ಆ ಅಧರ್ಮಸ್ವರೂಪನು ಕಾಣಬರುವನು; ಅವನನ್ನು ಯೇಸು ಕರ್ತನು ತನ್ನ ಬಾಯ ಉಸುರಿನಿಂದ ಕೊಲ್ಲುವನು, ತನ್ನ ಪ್ರತ್ಯಕ್ಷತೆಯ [“ಸಾನ್ನಿಧ್ಯದ,” NW] ಪ್ರಕಾಶದಿಂದ ಸಂಹರಿಸುವನು.” “ಅಧರ್ಮಸ್ವರೂಪನ” ಸಾನ್ನಿಧ್ಯವು ಹೇಗೆ ಒಂದು ಸಮಯಾವಧಿಯನ್ನು ವ್ಯಾಪಿಸುವುದೊ ಹಾಗೆಯೇ ಯೇಸುವಿನ ಸಾನ್ನಿಧ್ಯವು ಸ್ವಲ್ಪ ಸಮಯವನ್ನು ವ್ಯಾಪಿಸಿ, ಆ ನಿಯಮರಹಿತ “ನಾಶನದ ಪುತ್ರನ” (NW) ನಾಶನದಲ್ಲಿ ಪರಾಕಾಷ್ಠೆಗೇರುವುದು.—2 ಥೆಸಲೊನೀಕ 2:8.
ಹೀಬ್ರು-ಭಾಷಾ ವಿಷಯಾಂಶಗಳು
15, 16. (ಎ) ಮತ್ತಾಯ ಪುಸ್ತಕದ ಅನೇಕ ಹೀಬ್ರು ಭಾಷಾಂತರಗಳಲ್ಲಿ ಯಾವ ಪ್ರತ್ಯೇಕ ಪದವನ್ನು ಉಪಯೋಗಿಸಲಾಗಿದೆ? (ಬಿ) ಶಾಸ್ತ್ರಗಳಲ್ಲಿ ಬಾಹ್ ಹೇಗೆ ಉಪಯೋಗಿಸಲ್ಪಟ್ಟಿದೆ?
15 ಗಮನಿಸಿರುವಂತೆ, ಮತ್ತಾಯನು ತನ್ನ ಸುವಾರ್ತೆಯನ್ನು ಪ್ರಥಮವಾಗಿ ಹೀಬ್ರು ಭಾಷೆಯಲ್ಲಿ ಬರೆದನೆಂಬುದು ಸ್ಪಷ್ಟ. ಹಾಗಾದರೆ, ಅವನು ಮತ್ತಾಯ 24:3, 27, 37, 39ರಲ್ಲಿ ಯಾವ ಹೀಬ್ರು ಪದವನ್ನು ಬಳಸಿದನು? ಆಧುನಿಕ ಹೀಬ್ರುವಿಗೆ ಭಾಷಾಂತರಿಸಲ್ಪಟ್ಟಿರುವ ಮತ್ತಾಯ ಪಾಠಾಂತರಗಳಲ್ಲಿ, ಅಪೊಸ್ತಲರ ಪ್ರಶ್ನೆ ಮತ್ತು ಯೇಸುವಿನ ಉತ್ತರ—ಇವೆರಡಲ್ಲಿಯೂ ಬಾಹ್ ಎಂಬ ಕ್ರಿಯಾಪದದ ಒಂದು ರೂಪವಿದೆ. ಇದು, ಈ ಕೆಳಗಿನಂತಹ ಓದುವಿಕೆಗಳಿಗೆ ನಡೆಸಬಹುದು: “ನಿನ್ನ [ಬಾಹ್] ಮತ್ತು ವಿಷಯಗಳ ವ್ಯವಸ್ಥೆಯ ಸಮಾಪ್ತಿಗೆ ಸೂಚನೆಯು ಏನಾಗಿರುವುದು?” (NW) ಮತ್ತು, “ನೋಹನ ದಿನಗಳು ಇದ್ದಂತೆಯೇ ಮನುಷ್ಯಕುಮಾರನ [ಬಾಹ್] ಇರುವುದು” (NW). ಬಾಹ್ ಎಂಬುದರ ಅರ್ಥವೇನು?
16 ವಿವಿಧ ಅರ್ಥಗಳಿರುವುದಾದರೂ, ಹೀಬ್ರು ಕ್ರಿಯಾಪದವಾದ ಬಾಹ್ ಎಂಬುದರ ಮೂಲಭೂತ ಅರ್ಥವು “ಬರು” ಎಂದಾಗಿದೆ. ಥಿಯೊಲಾಜಿಕಲ್ ಡಿಕ್ಷನೆರಿ ಆಫ್ ದಿ ಓಲ್ಡ್ ಟೆಸ್ಟಮೆಂಟ್ ಹೇಳುವುದು: ‘2,532 ಬಾರಿ ಸಂಭವಿಸುವ ಬಾಹ್, ಹೀಬ್ರು ಶಾಸ್ತ್ರಗಳಲ್ಲಿ ಅತಿ ಬಹುಸಂಖ್ಯೆಯಲ್ಲಿ ಉಪಯೋಗಿಸಲ್ಪಟ್ಟಿರುವ ಕ್ರಿಯಾಪದಗಳಲ್ಲಿ ಒಂದಾಗಿದ್ದು, ಚಲನೆಯನ್ನು ವ್ಯಕ್ತಪಡಿಸುವ ಕ್ರಿಯಾಪದಗಳಲ್ಲಿ ಅಗ್ರಸ್ಥಾನದಲ್ಲಿದೆ.’ (ಆದಿಕಾಂಡ 7:1, 13; ವಿಮೋಚನಕಾಂಡ 12:25; 28:35; 2 ಸಮುವೇಲ 19:30; 2 ಅರಸುಗಳು 10:21; ಕೀರ್ತನೆ 65:2; ಯೆಶಾಯ 1:23; ಯೆಹೆಜ್ಕೇಲ 11:16; ದಾನಿಯೇಲ 9:13; ಆಮೋಸ 8:11) ಯೇಸು ಮತ್ತು ಅಪೊಸ್ತಲರು ಅಷ್ಟು ವ್ಯಾಪಕವಾದ ಅರ್ಥಗಳುಳ್ಳ ಒಂದು ಪದವನ್ನು ಉಪಯೋಗಿಸಿದ್ದರೆ, ಆ ಅರ್ಥವು ಚರ್ಚಾಸ್ಪದವಾಗಬಹುದಾಗಿತ್ತು. ಆದರೆ ಅವರು ಹಾಗೆ ಉಪಯೋಗಿಸಿದರೊ?
17. (ಎ) ಮತ್ತಾಯ ಪುಸ್ತಕದ ಆಧುನಿಕ ಹೀಬ್ರು ಭಾಷಾಂತರಗಳು, ಯೇಸು ಮತ್ತು ಅಪೊಸ್ತಲರು ಹೇಳಿದ್ದನ್ನು ಸೂಚಿಸಬೇಕೆಂದಿಲ್ಲವೇಕೆ? (ಬಿ) ಯೇಸು ಮತ್ತು ಅಪೊಸ್ತಲರು ಯಾವ ಪದವನ್ನು ಉಪಯೋಗಿಸಿದ್ದಿರಬಹುದೆಂಬುದರ ಸುಳಿವನ್ನು ನಾವು ಇನ್ನೆಲ್ಲಿ ಕಂಡುಕೊಳ್ಳಬಹುದು, ಮತ್ತು ಇನ್ನಾವ ಕಾರಣಕ್ಕಾಗಿ ಈ ಮೂಲವು ನಮಗೆ ಆಸಕ್ತಿಯದ್ದಾಗಿದೆ? (ಪಾದಟಿಪ್ಪಣಿ ನೋಡಿ.)
17 ಆಧುನಿಕ ಹೀಬ್ರು ಪಾಠಾಂತರಗಳು, ಮತ್ತಾಯನು ಹೀಬ್ರುವಿನಲ್ಲಿ ಬರೆದದ್ದನ್ನು ನಿಷ್ಕೃಷ್ಟವಾಗಿ ತೋರಿಸದೆ ಇರಬಹುದಾದ ಭಾಷಾಂತರಗಳು ಎಂಬುದನ್ನು ಮನಸ್ಸಿನಲ್ಲಿಡಿರಿ. ಯೇಸುವು ಬಾಹ್ಗಿಂತ ಪ್ರತ್ಯೇಕವಾದ, ಪ್ಯಾರೂಸೀಯದ ಅರ್ಥಕ್ಕೆ ಹೊಂದಿಕೆಯಾದ ಒಂದು ಪದವನ್ನು ಉಪಯೋಗಿಸಿದ್ದಿರಸಾಧ್ಯವಿರುವುದೂ ವಾಸ್ತವಾಂಶ. ನಾವಿದನ್ನು ಪ್ರೊಫೆಸರ್ ಜಾರ್ಜ್ ಹಾವರ್ಡ್ ಅವರ 1995ರ ಪುಸ್ತಕವಾದ ಹೀಬ್ರು ಗಾಸ್ಪೆಲ್ ಆಫ್ ಮ್ಯಾಥ್ಯೂನಲ್ಲಿ ನೋಡುತ್ತೇವೆ. ಆ ಪುಸ್ತಕವು ಯೆಹೂದಿ ವೈದ್ಯ ಶೆಮ್-ಟಾಬ್ ಬೆನ್ ಐಸಕ್ ಇಬ್ನ್ ಶಾಪ್ರುಟ್ ಎಂಬವನು ಕ್ರೈಸ್ತತ್ವದ ವಿರುದ್ಧ ಬರೆದ 14ನೆಯ ಶತಮಾನದ ವಾದಕಥೆಯ ಮೇಲೆ ಕೇಂದ್ರೀಕರಿಸಿತು. ಆ ದಾಖಲೆಯು ಮತ್ತಾಯನ ಸುವಾರ್ತೆಯ ಒಂದು ಹೀಬ್ರು ಮೂಲಗ್ರಂಥವನ್ನು ಪ್ರಕಟಿಸಿತು. ಶೆಮ್-ಟಾಬ್ನ ಸಮಯದಲ್ಲಿ ಲ್ಯಾಟಿನ್ ಅಥವಾ ಗ್ರೀಕ್ನಿಂದ ಭಾಷಾಂತರಿಸಲ್ಪಡುವ ಬದಲು, ಮತ್ತಾಯನ ಈ ಮೂಲಗ್ರಂಥವು ಬಹು ಹಳೆಯದಾಗಿತ್ತು ಮತ್ತು ಆದಿಯಲ್ಲಿ ಹೀಬ್ರುವಿನಲ್ಲಿ ರಚಿಸಲ್ಪಟ್ಟಿತ್ತೆಂಬುದಕ್ಕೆ ಪುರಾವೆಯಿದೆ.c ಇದು ಹೀಗೆ ನಮ್ಮನ್ನು ಆಲಿವ್ಸ್ ಗುಡ್ಡದಲ್ಲಿ ಹೇಳಲ್ಪಟ್ಟ ವಿಷಯಕ್ಕೆ ಹೆಚ್ಚು ನಿಕಟವಾಗುವಂತೆ ಮಾಡಬಹುದು.
18. ಯಾವ ಆಸಕ್ತಿಕರವಾದ ಹೀಬ್ರು ಪದವನ್ನು ಶೆಮ್-ಟಾಬ್ ಉಪಯೋಗಿಸುತ್ತಾನೆ, ಮತ್ತು ಅದರ ಅರ್ಥವೇನು?
18 ಮತ್ತಾಯ 24:3, 27, 39ರಲ್ಲಿ ಶೆಮ್-ಟಾಬ್ನ ಮತ್ತಾಯ ಮೂಲಗ್ರಂಥವು ಬಾಹ್ ಕ್ರಿಯಾಪದವನ್ನು ಉಪಯೋಗಿಸುವುದಿಲ್ಲ. ಬದಲಾಗಿ, ಅದು ಬಿಆ ಎಂಬ ಸಂಬಂಧಿತ ನಾಮಪದವನ್ನು ಉಪಯೋಗಿಸುತ್ತದೆ. ಆ ನಾಮಪದವು ಹೀಬ್ರು ಶಾಸ್ತ್ರಗಳಲ್ಲಿ ಯೆಹೆಜ್ಕೇಲ 8:5ರಲ್ಲಿ ಮಾತ್ರ ತೋರಿಬಂದು, ಅಲ್ಲಿ ಅದರ ಅರ್ಥವು “ಬಾಗಿಲು” ಆಗಿದೆ. ಬರುವ ಕ್ರಿಯೆಯನ್ನು ವ್ಯಕ್ತಪಡಿಸುವ ಬದಲು ಅಲ್ಲಿ ಬಿಆ ಒಂದು ಕಟ್ಟಡದ ಪ್ರಾರಂಭವನ್ನು ಸೂಚಿಸುತ್ತದೆ. ನೀವು ಬಾಗಿಲಲ್ಲಿ ಅಥವಾ ಹೊಸ್ತಿಲಲ್ಲಿ ಇರುವಾಗ ಕಟ್ಟಡದಲ್ಲಿ ಇರುತ್ತೀರಿ. ಅಲ್ಲದೆ, ಮೃತ ಸಮುದ್ರ ಸುರುಳಿಗಳ ಮಧ್ಯೆ ಇದ್ದ ಬೈಬಲೇತರ ಧಾರ್ಮಿಕ ದಾಖಲೆಗಳು ಯಾಜಕೀಯ ಹುದ್ದೆಗಳ ಆಗಮನ ಮತ್ತು ಆರಂಭವಾಗುವಿಕೆಯ ಕುರಿತು ಅನೇಕ ವೇಳೆ ಬಿಆವನ್ನು ಬಳಸುತ್ತವೆ. (ನೋಡಿ 1 ಪೂರ್ವಕಾಲವೃತ್ತಾಂತ 24:3-19; ಲೂಕ 1:5, 8, 23.) ಮತ್ತು ಹಳೆಯ ಸಿರಿಯನ್ (ಅಥವಾ, ಆ್ಯರಮೇಯಿಕ್) ಪೆಶಿಟದ 1986ರ ಒಂದು ಭಾಷಾಂತರವು ಮತ್ತಾಯ 24:3, 27, 37, 39ರಲ್ಲಿ ಬಿಆವನ್ನು ಉಪಯೋಗಿಸುತ್ತದೆ. ಹೀಗೆ ಪುರಾತನ ಕಾಲಗಳಲ್ಲಿ ಬಿಆ ಎಂಬ ನಾಮಪದಕ್ಕೆ ಬೈಬಲಿನಲ್ಲಿ ಬಳಸಿರುವ ಬಾಹ್ ಕ್ರಿಯಾಪದಕ್ಕಿಂತ ತುಸು ವ್ಯತ್ಯಾಸವಾಗಿರುವ ಅರ್ಥವಿದ್ದಿರಬಹುದೆಂಬುದಕ್ಕೆ ಸಾಕ್ಷ್ಯವಿದೆ. ಇದು ಏಕೆ ಆಸಕ್ತಿಯ ವಿಷಯವಾಗಿದೆ?
19. ಯೇಸು ಮತ್ತು ಅಪೊಸ್ತಲರು ಬಿಆವನ್ನು ಉಪಯೋಗಿಸಿದ್ದರೆ, ನಾವೇನೆಂದು ತೀರ್ಮಾನಿಸಬಹುದು?
19 ತಮ್ಮ ಪ್ರಶ್ನೆಯಲ್ಲಿ ಅಪೊಸ್ತಲರು ಮತ್ತು ತನ್ನ ಉತ್ತರದಲ್ಲಿ ಯೇಸು ಈ ಬಿಆ ಎಂಬ ನಾಮಪದವನ್ನು ಉಪಯೋಗಿಸಿದ್ದಿರಬಹುದು. ಅಪೊಸ್ತಲರ ಮನಸ್ಸಿನಲ್ಲಿ ಕೇವಲ ಯೇಸುವಿನ ಭಾವೀ ಆಗಮನದ ವಿಚಾರವು ಇದ್ದಿದ್ದರೂ, ಕ್ರಿಸ್ತನು ಬಿಆವನ್ನು ಅವರು ಯೋಚಿಸುತ್ತಿದ್ದುದಕ್ಕಿಂತ ಹೆಚ್ಚಿನದ್ದನ್ನು ಅನುಮತಿಸಲು ಉಪಯೋಗಿಸಿದ್ದಿರಬಹುದು. ಯೇಸು ಒಂದು ಹೊಸ ಅಧಿಕಾರವನ್ನು ಪ್ರಾರಂಭಿಸಲಿಕ್ಕಾಗಿ ತನ್ನ ಆಗಮನವನ್ನು ಸೂಚಿಸುತ್ತಿದ್ದಿರಸಾಧ್ಯವಿತ್ತು; ಅವನ ಆಗಮನವು ಅವನ ಹೊಸ ಪಾತ್ರದ ಆರಂಭವಾಗಿರುವುದು. ಇದು, ಮತ್ತಾಯನು ತರುವಾಯ ಉಪಯೋಗಿಸಿದ ಪ್ಯಾರೂಸೀಯದ ಅರ್ಥಕ್ಕೆ ಸಮಾನವಾಗಿರುವುದು. ಅರ್ಥಭರಿತವಾಗಿಯೇ, ಬಿಆದ ಇಂತಹ ಉಪಯೋಗವು, ಯೇಸು ಕೊಟ್ಟ ಸಂಘಟಿತ “ಸೂಚನೆಯು” ತಾನು ಸನ್ನಿಧನಾಗಿದ್ದನು ಎಂಬುದನ್ನು ಜ್ಞಾಪಕಕ್ಕೆ ತಂದುಕೊಳ್ಳಲಿಕ್ಕಾಗಿಯೇ ಎಂಬುದಾಗಿ ಯೆಹೋವನ ಸಾಕ್ಷಿಗಳು ದೀರ್ಘಕಾಲದಿಂದ ಕಲಿಸಿರುವ ವಿಷಯವನ್ನು ಬೆಂಬಲಿಸಬೇಕಾಗುವುದು.
ಅವನ ಸಾನ್ನಿಧ್ಯದ ಪರಾಕಾಷ್ಠೆಯನ್ನು ಕಾಯುತ್ತಿರುವುದು
20, 21. ನೋಹನ ದಿನಗಳ ಕುರಿತ ಯೇಸುವಿನ ಹೇಳಿಕೆಯಿಂದ ನಾವೇನು ಕಲಿಯಬಲ್ಲೆವು?
20 ಯೇಸುವಿನ ಸಾನ್ನಿಧ್ಯದ ಕುರಿತ ನಮ್ಮ ಅಧ್ಯಯನವು ನಮ್ಮ ಜೀವನ ಮತ್ತು ನಿರೀಕ್ಷೆಗಳನ್ನು ನೇರವಾಗಿ ಪ್ರಭಾವಿಸಬೇಕು. ತನ್ನ ಹಿಂಬಾಲಕರು ಎಚ್ಚರಿಕೆಯಿಂದಿರುವಂತೆ ಯೇಸು ಅವರನ್ನು ಪ್ರೋತ್ಸಾಹಿಸಿದನು. ತನ್ನ ಸಾನ್ನಿಧ್ಯವು—ಹೆಚ್ಚಿನವರು ಗಮನವನ್ನೇ ಕೊಡದಿದ್ದರೂ—ಗುರುತಿಸಲ್ಪಡಸಾಧ್ಯವಾಗುವಂತೆ ಅವನು ಒಂದು ಸೂಚನೆಯನ್ನು ಒದಗಿಸಿದನು: “ನೋಹನ ದಿವಸಗಳು ಹೇಗಿದ್ದವೋ ಹಾಗೆಯೇ ಮನುಷ್ಯಕುಮಾರನ ಪ್ರತ್ಯಕ್ಷತೆ [“ಸಾನ್ನಿಧ್ಯ,” NW]ಯೂ ಇರುವದು. ಹೇಗಂದರೆ ಜಲಪ್ರಳಯಕ್ಕೆ ಮುಂಚಿನ ದಿನಗಳಲ್ಲಿ ನೋಹನು ನಾವೆಯಲ್ಲಿ ಸೇರಿದ ದಿನದ ತನಕ ಜನರು ಉಣ್ಣುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಮಾಡಿಕೊಡುತ್ತಾ ಇದ್ದು ಪ್ರಳಯದ ನೀರು ಬಂದು ಎಲ್ಲರನ್ನು ಬಡುಕೊಂಡುಹೋಗುವ ತನಕ ಏನೂ ತಿಳಿಯದೆ ಇದ್ದರಲ್ಲಾ. ಅದರಂತೆ ಮನುಷ್ಯಕುಮಾರನು ಪ್ರತ್ಯಕ್ಷನಾಗುವ ಕಾಲದಲ್ಲಿಯೂ ಇರುವದು.”—ಮತ್ತಾಯ 24:37-39.
21 ನೋಹನ ದಿನಗಳಲ್ಲಿ, ಆ ಸಂತತಿಯಲ್ಲಿದ್ದ ಹೆಚ್ಚಿನ ಜನರು ತಮ್ಮ ವಾಡಿಕೆಯ ಕಾರ್ಯಾದಿಗಳನ್ನೇ ನಡೆಸುತ್ತ ಮುಂದುವರಿದರು. “ಮನುಷ್ಯಕುಮಾರನ ಸಾನ್ನಿಧ್ಯ”ದಲ್ಲಿಯೂ ಹಾಗೆಯೇ ಇರುವುದೆಂದು ಯೇಸು ಮುಂತಿಳಿಸಿದನು. ನೋಹನ ಸುತ್ತಮುತ್ತಲಿದ್ದ ಜನರು ಏನೂ ಸಂಭವಿಸದೆಂದು ಎಣಿಸಿದ್ದಿರಬಹುದು. ನಿಮಗಾದರೋ, ಭಿನ್ನವಾಗಿರುವುದು ತಿಳಿದಿದೆ. ಸ್ವಲ್ಪ ಸಮಯವನ್ನು ಆವರಿಸಿದ್ದ ಆ ದಿನಗಳು, ಪರಾಕಾಷ್ಠೆಯೊಂದಕ್ಕೆ ನಡೆಸಿದಾಗ, “ಪ್ರಳಯದ ನೀರು ಬಂದು ಎಲ್ಲರನ್ನು ಬಡುಕೊಂಡು” ಹೋಯಿತು. ಲೂಕನು ಸಮಾನ ರೀತಿಯ, ಯಾವುದರಲ್ಲಿ ಯೇಸು “ನೋಹನ ದಿವಸ”ಗಳನ್ನು “ಮನುಷ್ಯಕುಮಾರನ ದಿವಸ”ಗಳಿಗೆ ಹೋಲಿಸಿದನೋ ಆ ವೃತ್ತಾಂತವನ್ನು ನೀಡುತ್ತಾನೆ. ಯೇಸು ಬುದ್ಧಿಹೇಳಿದ್ದು: “ಮನುಷ್ಯಕುಮಾರನು ಪ್ರತ್ಯಕ್ಷವಾಗುವ ದಿವಸದಲ್ಲಿ ಅದೇ ರೀತಿಯಾಗಿ ಇರುವದು.”—ಲೂಕ 17:26-30.
22. ಮತ್ತಾಯ 24ನೆಯ ಅಧ್ಯಾಯದಲ್ಲಿನ ಯೇಸುವಿನ ಪ್ರವಾದನೆಯಲ್ಲಿ ನಾವೇಕೆ ವಿಶೇಷವಾಗಿ ಆಸಕ್ತರಾಗಿರಬೇಕು?
22 ಇದೆಲ್ಲ ನಮಗೆ ವಿಶೇಷಾರ್ಥವನ್ನು ತೆಗೆದುಕೊಳ್ಳುತ್ತದೆ, ಏಕೆಂದರೆ ಯೇಸು ಮುಂತಿಳಿಸಿದ ಸಂಭವಗಳನ್ನು—ಯುದ್ಧಗಳು, ಭೂಕಂಪಗಳು, ವ್ಯಾಧಿಗಳು, ಆಹಾರದ ಕೊರತೆಗಳು ಮತ್ತು ತನ್ನ ಶಿಷ್ಯರಿಗಾಗುವ ಹಿಂಸೆ—ಗುರುತಿಸುವ ಸಮಯದಲ್ಲಿ ನಾವು ಜೀವಿಸುತ್ತಿದ್ದೇವೆ. (ಮತ್ತಾಯ 24:7-9; ಲೂಕ 21:10-12) ಇಂಥ ಪರಿಸ್ಥಿತಿಗಳು—ಹೆಚ್ಚಿನ ಜನರು ಇವನ್ನು ಇತಿಹಾಸದ ಸಾಮಾನ್ಯ ಭಾಗಗಳೆಂಬಂತೆ ನೋಡುವುದಾದರೂ—ಆ ಇತಿಹಾಸ ಬದಲಾಯಿಸಿದ, ಗಮನಾರ್ಹವಾಗಿ Iನೆಯ ಲೋಕಯುದ್ಧವೆಂದು ಹೆಸರಿಸಲಾಗಿರುವ ಹೋರಾಟದಿಂದೀಚೆಗೆ ಕಂಡುಬಂದಿವೆ. ನಿಜ ಕ್ರೈಸ್ತರಾದರೊ ಈ ಪ್ರಮುಖ ಸಂಭವಗಳನ್ನು, ಎಚ್ಚರವಿರುವ ಜನರು ಅಂಜೂರದ ಮರವು ಎಲೆ ಬಿಡುವುದರಿಂದ ಬೇಸಗೆಯು ಹತ್ತಿರವಿದೆಯೆಂದು ಅರ್ಥಮಾಡಿಕೊಳ್ಳುವ ಹಾಗೆಯೇ ಅರ್ಥೈಸಿಕೊಳ್ಳುತ್ತಾರೆ. ಯೇಸು ಬುದ್ಧಿಹೇಳಿದ್ದು: “ಹಾಗೆಯೇ ನೀವು ಸಹ ಇವುಗಳಾಗುವದನ್ನು ನೋಡುವಾಗ ದೇವರ ರಾಜ್ಯವು ಹತ್ತಿರವದೆ ಎಂದು ತಿಳುಕೊಳ್ಳಿರಿ.”—ಲೂಕ 21:31.
23. ಮತ್ತಾಯ 24ನೆಯ ಅಧ್ಯಾಯದಲ್ಲಿನ ಯೇಸುವಿನ ಮಾತುಗಳು ಯಾರಿಗೆ ವಿಶೇಷ ಅರ್ಥವುಳ್ಳವುಗಳಾಗಿವೆ, ಮತ್ತು ಏಕೆ?
23 ಆಲಿವ್ಸ್ ಗುಡ್ಡದ ಮೇಲೆ ಕೊಟ್ಟ ತನ್ನ ಉತ್ತರದಲ್ಲಿ ಹೆಚ್ಚಿನದನ್ನು ಯೇಸು ತನ್ನ ಶಿಷ್ಯರ ಕಡೆಗೆ ನಿರ್ದೇಶಿಸಿದನು. ಅಂತ್ಯವು ಬರುವ ಮೊದಲಾಗಿ ಭೂಮಿಯಲ್ಲೆಲ್ಲ ಸುವಾರ್ತೆ ಸಾರುವ ಜೀವರಕ್ಷಕ ಕಾರ್ಯದಲ್ಲಿ ಭಾಗವಹಿಸುವವರು ಅವರಾಗಿದ್ದರು. “ಹಾಳುಮಾಡುವ ಅಸಹ್ಯವಸ್ತುವು ಪವಿತ್ರಸ್ಥಾನದಲ್ಲಿ ನಿಂತು” ಇರುವುದನ್ನು ಗ್ರಹಿಸಸಾಧ್ಯವಿದ್ದವರು ಅವರಾಗಿದ್ದರು. ಮಹಾ ಸಂಕಟದ ಮೊದಲು ‘ಓಡಿಹೋಗುವ’ ಮೂಲಕ ಪ್ರತಿಕ್ರಿಯಿಸುವವರು ಅವರಾಗಿದ್ದರು. ಮತ್ತು, “ಆ ದಿನಗಳು ಮೊಟಕುಗೊಳಿಸಲ್ಪಡದಿದ್ದರೆ ಯಾವ ನರಜೀವಿಗಳೂ ರಕ್ಷಿಸಲ್ಪಡರು; ಆದರೆ ಆಯ್ದುಕೊಳ್ಳಲ್ಪಟ್ಟವರ ಕಾರಣದಿಂದ ಆ ದಿನಗಳು ಮೊಟಕುಗೊಳಿಸಲ್ಪಡುವುವು,” ಎಂಬ ಕೂಡಿಸಲ್ಪಟ್ಟ ಮಾತುಗಳಿಂದ ಪ್ರತ್ಯೇಕವಾಗಿ ಪ್ರಭಾವಿತರಾಗುವವರು ಅವರಾಗಿದ್ದರು. (ಮತ್ತಾಯ 24:9, 14-22, NW) ಆದರೆ ಆ ಗಂಭೀರ ಮಾತುಗಳ ಅರ್ಥವೇನು, ಮತ್ತು ನಮಗೆ ವರ್ಧಿಸಿದ ಸಂತೋಷ, ಭರವಸೆ ಮತ್ತು ಹುರುಪು ಈಗ ಇರುವಂತೆ ಅವು ಆಧಾರವನ್ನು ಒದಗಿಸುತ್ತವೆಂದು ಏಕೆ ಹೇಳಸಾಧ್ಯವಿದೆ? ಮತ್ತಾಯ 24:22ರ ಈ ಕೆಳಗಿನ ಅಧ್ಯಯನವು ಉತ್ತರಗಳನ್ನು ಒದಗಿಸುವುದು.
[ಅಧ್ಯಯನ ಪ್ರಶ್ನೆಗಳು]
a ಜೋಸೀಫಸನಿಂದ ಉದಾಹರಣೆಗಳು: ಸೀನಾಯಿ ಬೆಟ್ಟದಲ್ಲಿ, ಮಿಂಚು ಗುಡುಗುಗಳು, “ದೇವರ ಸನ್ನಿಧಾನವು [ಪ್ಯಾರೂಸೀಯ] ಅಲ್ಲಿತ್ತು ಎಂದು ಪ್ರಕಟಿಸಿತು.” ಸಾಕ್ಷಿಗುಡಾರದಲ್ಲಿನ ಅದ್ಭುತಕರವಾದ ಪ್ರದರ್ಶನವು, “ದೇವರ ಸಾನ್ನಿಧ್ಯ [ಪ್ಯಾರೂಸೀಯ]ವನ್ನು ತೋರಿಸಿತು.” ಸುತ್ತುತ್ತಿದ್ದ ರಥಗಳನ್ನು ಎಲೀಷನ ಸೇವಕನಿಗೆ ತೋರಿಸುವ ಮೂಲಕ, ದೇವರು “ತನ್ನ ಸೇವಕನಿಗೆ ತನ್ನ ಶಕ್ತಿಯನ್ನೂ ಸಾನ್ನಿಧ್ಯ [ಪ್ಯಾರೂಸೀಯ]ವನ್ನೂ ಪ್ರದರ್ಶಿಸಿದನು.” ರೋಮನ್ ಅಧಿಕಾರಿ ಪೆಟ್ರೋನಿಯಸ್ ಯೆಹೂದ್ಯರನ್ನು ಸಮಾಧಾನಪಡಿಸಲು ಪ್ರಯತ್ನಿಸಿದಾಗ, ಮಳೆಯನ್ನು ಕಳುಹಿಸುವ ಮೂಲಕ ‘ದೇವರು ಪೆಟ್ರೋನಿಯಸ್ಗೆ ತನ್ನ ಸಾನ್ನಿಧ್ಯ [ಪ್ಯಾರೂಸೀಯ]ವನ್ನು ತೋರಿಸಿದನು’ ಎಂದು ಜೋಸೀಫಸನು ವಾದಿಸಿದನು. ಜೋಸೀಫಸನು ಪ್ಯಾರೂಸೀಯವನ್ನು ಬರಿಯ ಸಮೀಪಿಸುವಿಕೆ ಅಥವಾ ಕ್ಷಣಿಕವಾದ ಆಗಮನಕ್ಕೆ ಅನ್ವಯಿಸಲಿಲ್ಲ. ಅದು ಮುಂದುವರಿದ, ಅದೃಶ್ಯವೂ ಆದ ಸಾನ್ನಿಧ್ಯವನ್ನು ಅರ್ಥೈಸಿತು. (ವಿಮೋಚನಕಾಂಡ 20:18-21; 25:22; ಯಾಜಕಕಾಂಡ 16:2; 2 ಅರಸುಗಳು 6:15-17)—ಹೋಲಿಸಿ ಆ್ಯಂಟಿಕ್ವಿಟೀಸ್ ಆಫ್ ದ ಜ್ಯೂಸ್, ಪುಸ್ತಕ 3, ಅಧ್ಯಾಯ 5, ಪ್ಯಾರಗ್ರಾಫ್ 2 [80]; ಅಧ್ಯಾಯ 8, ಪ್ಯಾರಗ್ರಾಫ್ 5 [202]; ಪುಸ್ತಕ 9, ಅಧ್ಯಾಯ 4, ಪ್ಯಾರಗ್ರಾಫ್ 3 [55]; ಪುಸ್ತಕ 18, ಅಧ್ಯಾಯ 8, ಪ್ಯಾರಗ್ರಾಫ್ 6 [284].
b ಎ ಕ್ರಿಟಿಕಲ್ ಲೆಕ್ಸಿಕನ್ ಆ್ಯಂಡ್ ಕನ್ಕಾರ್ಡೆನ್ಸ್ ಟು ದಿ ಇಂಗ್ಲಿಷ್ ಆ್ಯಂಡ್ ಗ್ರೀಕ್ ನ್ಯೂ ಟೆಸ್ಟಮೆಂಟ್ನಲ್ಲಿ ಇ. ಡಬ್ಲ್ಯೂ. ಬುಲಿಂಗರ್, ಪ್ಯಾರೂಸೀಯ ಅಂದರೆ, ‘ಅಸ್ತಿತ್ವದಲ್ಲಿರುವುದು ಅಥವಾ ಸನ್ನಿಧನಾಗುವುದು, ಆ ಕಾರಣದಿಂದ, ಸಾನ್ನಿಧ್ಯ, ಆಗಮನ; ಬರೋಣದ ಬಳಿಕ ಮುಂದಕ್ಕೆ ಕಾಯಂ ವಾಸಸ್ಥಾನದ ಅಭಿಪ್ರಾಯವು ಸೇರಿರುವ ಒಂದು ಬರೋಣ’ ಎಂದು ನಿರ್ದೇಶಿಸುತ್ತಾರೆ.
c ಅದರಲ್ಲಿ “ಹೆಸರು” ಎಂಬ ಹೀಬ್ರು ಅಭಿವ್ಯಕ್ತಿಯು, ವಿವರವಾಗಿಯೊ ಸಂಕ್ಷೇಪವಾಗಿಯೊ 19 ಬಾರಿ ಸೇರಿರುವುದು ಒಂದು ಪುರಾವೆ. ಪ್ರೊಫೆಸರ್ ಹಾವರ್ಡ್ ಬರೆಯುವುದು: “ಕ್ರೈಸ್ತ ದಾಖಲೆಯೊಂದರಲ್ಲಿ ಯೆಹೂದಿ ತರ್ಕವಾದಿಯಿಂದ ಉಲ್ಲೇಖಿಸಲ್ಪಟ್ಟ ದೈವಿಕ ನಾಮವನ್ನು ಓದುವುದು ಗಮನಾರ್ಹ. ಇದು ಗ್ರೀಕ್ ಅಥವಾ ಲ್ಯಾಟಿನ್ ಕ್ರೈಸ್ತ ದಾಖಲೆಯ ಹೀಬ್ರು ಭಾಷಾಂತರವಾಗಿರುತ್ತಿದ್ದರೆ, ಮೂಲಗ್ರಂಥದಲ್ಲಿ ಆ್ಯಡೊನೊಯಿ [ಕರ್ತ] ಎಂಬುದನ್ನು,—ವರ್ಣನಾತೀತವಾದ ದೈವಿಕ ನಾಮಕ್ಕಾಗಿರುವ ವೈಏಚ್ಡಬ್ಲ್ಯೂಏಚ್ [YHWH] ಸಂಕೇತಾಕ್ಷರಗಳನ್ನಲ್ಲ—ಕಂಡುಕೊಳ್ಳಲು ಒಬ್ಬನು ನಿರೀಕ್ಷಿಸುತ್ತಿದ್ದನು. . . . ಆ ವರ್ಣನಾತೀತವಾದ ನಾಮವನ್ನು ಅವನು ಕೂಡಿಸಿದ್ದು ವಿವರಿಸಲಾಗದ್ದಾಗಿದೆ. ಮೂಲಗ್ರಂಥದೊಳಗೆ ಆಗಲೇ ದೈವಿಕ ನಾಮವಿದ್ದ ಮತ್ತಾಯ ಮೂಲಗ್ರಂಥವನ್ನು ಶೆಮ್-ಟಾಬ್ ಪಡೆದನೆಂದೂ, ಅದನ್ನು ತೆಗೆದು ಬಿಡುವುದರಿಂದ ದೋಷಿಯಾಗುವ ಅಪಾಯದ ಬದಲು ಅವನು ಪ್ರಾಯಶಃ ಅದನ್ನು ಉಳಿಸಿದನೆಂಬುದನ್ನೂ ಪುರಾವೆಯು ಬಲವಾಗಿ ಸೂಚಿಸುತ್ತದೆ.” ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್—ವಿದ್ ರೆಫರೆನ್ಸಸ್ ಬೈಬಲು, ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳಲ್ಲಿ ದೈವಿಕ ನಾಮವನ್ನು ಉಪಯೋಗಿಸುವುದಕ್ಕೆ ಆಧಾರದೋಪಾದಿ, ಶೆಮ್-ಟಾಬ್ನ ಮತ್ತಾಯ (J2) ಪುಸ್ತಕವನ್ನು ಉಪಯೋಗಿಸುತ್ತದೆ.
ನೀವು ಹೇಗೆ ಉತ್ತರಿಸುವಿರಿ?
▫ ಬೈಬಲುಗಳು ಮತ್ತಾಯ 24:3ನ್ನು ಹೇಗೆ ಭಾಷಾಂತರಿಸುತ್ತವೆಯೆಂಬುದರಲ್ಲಿ ವ್ಯತ್ಯಾಸವನ್ನು ನೋಡುವುದು ಏಕೆ ಪ್ರಾಮುಖ್ಯ?
▫ ಪ್ಯಾರೂಸೀಯದ ಅರ್ಥವೇನು, ಮತ್ತು ಇದು ಏಕೆ ಆಸಕ್ತಿಯದ್ದಾಗಿದೆ?
▫ ಮತ್ತಾಯ 24:3ರಲ್ಲಿ ಗ್ರೀಕ್ ಮತ್ತು ಹೀಬ್ರುವಿನಲ್ಲಿ ಯಾವ ಶಕ್ಯತೆಯ ಸಮಾನಾಂತರಗಳಿರಬಹುದು?
▫ ಮತ್ತಾಯ 24ನೆಯ ಅಧ್ಯಾಯವನ್ನು ಅರ್ಥಮಾಡಿಕೊಳ್ಳುವುದರಲ್ಲಿ ಸಮಯದ ಕುರಿತ ಯಾವ ಅಂಶವನ್ನು ನಾವು ತಿಳಿಯುವುದು ಅವಶ್ಯ?
[ಪುಟ 10 ರಲ್ಲಿರುವ ಚಿತ್ರ]
ಯೆರೂಸಲೇಮಿನ ಮೇಲ್ನೋಟವನ್ನು ನೀಡುವ ಆಲಿವ್ಸ್ ಗುಡ್ಡ