ಸತ್ಯಾರಾಧನೆಯ ವಿಜಯವು ಸಮೀಪಿಸುತ್ತದೆ
“ಯೆಹೋವನು ಭೂಲೋಕಕ್ಕೆಲ್ಲಾ ರಾಜನಾಗಬೇಕು.”—ಜೆಕರ್ಯ 14:9, NW.
1. Iನೆಯ ಜಾಗತಿಕ ಯುದ್ಧದ ಸಮಯದಲ್ಲಿ ಅಭಿಷಿಕ್ತ ಕ್ರೈಸ್ತರ ಅನುಭವವು ಏನಾಗಿತ್ತು, ಮತ್ತು ಇದು ಹೇಗೆ ಮುಂತಿಳಿಸಲ್ಪಟ್ಟಿತು?
ಪ್ರಥಮ ಜಾಗತಿಕ ಯುದ್ಧದ ಸಮಯದಲ್ಲಿ, ಅಭಿಷಿಕ್ತ ಕ್ರೈಸ್ತರು ಯುದ್ಧಮಾಡುತ್ತಿದ್ದ ರಾಷ್ಟ್ರಗಳಿಂದ ಅನೇಕ ತೊಂದರೆಗಳನ್ನು ಮತ್ತು ಸೆರೆಮನೆವಾಸಗಳನ್ನು ಅನುಭವಿಸಿದರು. ಯೆಹೋವನಿಗೆ ಅವರು ಮಾಡುತ್ತಿದ್ದ ಸ್ತೋತ್ರಯಜ್ಞಗಳು ವಿಪರೀತವಾಗಿ ನಿರ್ಬಂಧಿಸಲ್ಪಟ್ಟವು, ಮತ್ತು ಅವರು ಆತ್ಮಿಕವಾಗಿ ಕೈದಿ ಸ್ಥಿತಿಯೊಳಗೆ ಬಿದ್ದರು. ಇದೆಲ್ಲವು, ಯೆರೂಸಲೇಮಿನ ಮೇಲೆ ಒಂದು ಅಂತಾರಾಷ್ಟ್ರೀಯ ಆಕ್ರಮಣವನ್ನು ವರ್ಣಿಸುವ ಜೆಕರ್ಯ 14:2 ರಲ್ಲಿ ಮುಂತಿಳಿಸಲ್ಪಟ್ಟಿತು. ಈ ಪ್ರವಾದನೆಯ ಪಟ್ಟಣವು, ದೇವರ ಸ್ವರ್ಗೀಯ ರಾಜ್ಯವೂ “ದೇವರ ಮತ್ತು . . . ಕುರಿಯಾದಾತನ ಸಿಂಹಾಸನ”ದ ಸ್ಥಾನವೂ ಆಗಿರುವ “ಪರಲೋಕದ [“ಸ್ವರ್ಗೀಯ,” NW] ಯೆರೂಸಲೇಮ್” ಆಗಿದೆ. (ಇಬ್ರಿಯ 12:22, 28; 13:14; ಪ್ರಕಟನೆ 22:3) ಭೂಮಿಯ ಮೇಲಿರುವ ದೇವರ ಅಭಿಷಿಕ್ತರು ಆ ಪಟ್ಟಣವನ್ನು ಪ್ರತಿನಿಧಿಸಿದರು. ಅವರ ಮಧ್ಯದಲ್ಲಿದ್ದ ನಂಬಿಗಸ್ತರು, “ಆ ಪಟ್ಟಣದಿಂದ” ತಮ್ಮನ್ನು ದೇಶಭ್ರಷ್ಟರಾಗುವಂತೆ ಅನುಮತಿಸಲು ನಿರಾಕರಿಸುತ್ತಾ, ಆಕ್ರಮಣದಿಂದ ಪಾರಾದರು.a
2, 3. (ಎ) ಯೆಹೋವನ ಆರಾಧನೆಯು 1919ರಂದಿನಿಂದ ಹೇಗೆ ವಿಜಯಿಯಾಗಿದೆ? (ಬಿ) 1935ರಂದಿನಿಂದ, ಯಾವ ವಿಕಸನವು ಸಂಭವಿಸಿದೆ?
2 1919ರಲ್ಲಿ ನಂಬಿಗಸ್ತ ಅಭಿಷಿಕ್ತರು ತಮ್ಮ ಕೈದಿ ಪರಿಸ್ಥಿತಿಯಿಂದ ವಿಮುಕ್ತಗೊಳಿಸಲ್ಪಟ್ಟರು, ಮತ್ತು ಅವರು ಕೂಡಲೇ ಯುದ್ಧವನ್ನು ಅನುಸರಿಸಿ ಬಂದ ಶಾಂತಿಯ ಅವಧಿಯ ಲಾಭಪಡೆದರು. ಸ್ವರ್ಗೀಯ ಯೆರೂಸಲೇಮಿನ ರಾಯಭಾರಿಗಳೋಪಾದಿ, ಅವರು ದೇವರ ರಾಜ್ಯದ ಸುವಾರ್ತೆಯನ್ನು ಸಾರಲು ಮತ್ತು 1,44,000 ಜನರಲ್ಲಿನ ಅಂತಿಮ ಸದಸ್ಯರನ್ನು ಒಟ್ಟುಗೂಡಿಸುವುದರಲ್ಲಿ ನೆರವು ನೀಡಲಿಕ್ಕಾಗಿದ್ದ ಮಹಾ ಅವಕಾಶವನ್ನು ಸ್ವಾಧೀನಪಡಿಸಿಕೊಂಡರು. (ಮತ್ತಾಯ 24:14; 2 ಕೊರಿಂಥ 5:20) 1931ರಲ್ಲಿ ಅವರು ಯೆಹೋವನ ಸಾಕ್ಷಿಗಳು ಎಂಬ ತಕ್ಕದಾದ ಶಾಸ್ತ್ರೀಯ ಹೆಸರನ್ನು ಅಂಗೀಕರಿಸಿಕೊಂಡರು.—ಯೆಶಾಯ 43:10, 12.
3 ಆ ಸಮಯದಂದಿನಿಂದ, ದೇವರ ಅಭಿಷಿಕ್ತ ಸಾಕ್ಷಿಗಳು ಎಡೆಬಿಡದೆ ಅಭಿವೃದ್ಧಿಗೊಳ್ಳುತ್ತಾ ಮುಂದುವರಿದಿದ್ದಾರೆ. ಅವರನ್ನು ತನ್ನ ನಾಸಿ ರಾಜಕೀಯ ಹಾಗೂ ಮಿಲಿಟರಿ ಸಂಘಟನೆಯಿಂದ ಸುಮ್ಮನಾಗಿಸಲು ಹಿಟ್ಲರನಿಗೂ ಸಾಧ್ಯವಾಗಲಿಲ್ಲ. ಲೋಕವ್ಯಾಪಕ ಹಿಂಸೆಯ ಹೊರತೂ, ಅವರ ಕೆಲಸವು ಭೂಮಿಯಲ್ಲೆಲ್ಲಾ ಫಲವನ್ನು ಉತ್ಪಾದಿಸಿದೆ. ವಿಶೇಷವಾಗಿ ಇಸವಿ 1935ರಿಂದ, ಅವರು ಪ್ರಕಟನೆಯ ಪುಸ್ತಕದಲ್ಲಿ ಮುಂತಿಳಿಸಲ್ಪಟ್ಟ ಅಂತಾರಾಷ್ಟ್ರೀಯ “ಮಹಾ ಸಮೂಹ”ದಿಂದ ಜೊತೆಸೇರಲ್ಪಟ್ಟಿದ್ದಾರೆ. ಇವರು ಸಹ ಸಮರ್ಪಿತ, ದೀಕ್ಷಾಸ್ನಾನ ಪಡೆದ ಕ್ರೈಸ್ತರಾಗಿದ್ದು, “ಕುರಿಯಾದಾತನ,” ಯೇಸು ಕ್ರಿಸ್ತನ, “ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರಮಾಡಿದ್ದಾರೆ.” (ಪ್ರಕಟನೆ 7:9, 14) ಹಾಗಿದ್ದರೂ, ಅವರು ಸ್ವರ್ಗೀಯ ಜೀವಿತದ ನಿರೀಕ್ಷೆಯಿರುವ ಅಭಿಷಿಕ್ತರಲ್ಲ. ಅವರ ನಿರೀಕ್ಷೆಯು, ಆದಾಮ ಹವ್ವರು ಕಳೆದುಕೊಂಡ, ಅಂದರೆ, ಭೂಪ್ರಮೋದವನದಲ್ಲಿ ಪರಿಪೂರ್ಣ ಮಾನವ ಜೀವಿತವನ್ನು ಬಾಧ್ಯತೆಯಾಗಿ ಪಡೆಯುವುದಾಗಿದೆ. (ಕೀರ್ತನೆ 37:29; ಮತ್ತಾಯ 25:34) ಇಂದು ಮಹಾ ಸಮೂಹದ ಸಂಖ್ಯೆಯು 50 ಲಕ್ಷ ಪ್ರಾಣಗಳಿಗಿಂತಲೂ ಹೆಚ್ಚಾಗಿದೆ. ಯೆಹೋವನ ಸತ್ಯಾರಾಧನೆಯು ವಿಜಯಿಯಾಗುತ್ತಿದೆ, ಆದರೂ ಅದರ ಅಂತಿಮ ವಿಜಯವು ಇನ್ನೂ ಬರಲಿಕ್ಕಿದೆ.
ದೇವರ ಆತ್ಮಿಕ ದೇವಾಲಯದಲ್ಲಿ ಅನ್ಯದೇಶೀಯರು
4, 5. (ಎ) ಮಹಾ ಸಮೂಹವು ಯೆಹೋವನನ್ನು ಎಲ್ಲಿ ಆರಾಧಿಸುತ್ತದೆ? (ಬಿ) ಯಾವ ಸುಯೋಗಗಳಲ್ಲಿ ಅವರು ಆನಂದಿಸುತ್ತಾರೆ, ಮತ್ತು ಯಾವ ಪ್ರವಾದನೆಯ ನೆರವೇರಿಕೆಯಲ್ಲಿ?
4 ಮುಂತಿಳಿಸಲ್ಪಟ್ಟಂತೆ, ಮಹಾ ಸಮೂಹದವರು “[ದೇವರನ್ನು] ಹಗಲಿರುಳು ಆತನ ದೇವಾಲಯದಲ್ಲಿ ಆರಾಧಿಸುತ್ತಿದ್ದಾರೆ.” (ಪ್ರಕಟನೆ 7:15, NW ಪಾದಟಿಪ್ಪಣಿ) ಅವರು ಆತ್ಮಿಕ, ಯಾಜಕೀಯ ಇಸ್ರಾಯೇಲ್ಯರಲ್ಲದ ಕಾರಣ, ಬಹುಶಃ ಯೋಹಾನನು ಅವರನ್ನು ದೇವಾಲಯದಲ್ಲಿ, ಅನ್ಯಜನಾಂಗದವರ ಹೊರಗಿನ ಅಂಗಳದಲ್ಲಿ ನಿಂತಿರುವುದನ್ನು ನೋಡಿದನು. (1 ಪೇತ್ರ 2:5) ಅದರ ಆವರಣಗಳು, ಯಾರು ಆತ್ಮಿಕ ಇಸ್ರಾಯೇಲಿನ ಉಳಿಕೆಯವರೊಂದಿಗೆ ಆತನನ್ನು ಸ್ತುತಿಸುತ್ತಿದ್ದಾರೊ, ಆ ಮಹಾ ಸಮೂಹದವರಿಂದ ತುಂಬಲ್ಪಡುತ್ತಿದ್ದು, ಯೆಹೋವನ ಆತ್ಮಿಕ ದೇವಾಲಯವು ಎಷ್ಟು ಮಹಿಮಾಭರಿತವಾಗಿ ಪರಿಣಮಿಸಿದೆ!
5 ಮಹಾ ಸಮೂಹವು, ಒಳಗಿನ ಯಾಜಕೀಯ ಅಂಗಳದಿಂದ ಚಿತ್ರಿಸಲ್ಪಟ್ಟಂತೆ, ಆತ್ಮಿಕ ಪುತ್ರರ ಸ್ಥಿತಿಯಲ್ಲಿ ದೇವರ ಸೇವೆಮಾಡುವುದಿಲ್ಲ. ಅವರು, ದೇವರ ದತ್ತಕ, ಆತ್ಮಿಕ ಪುತ್ರರಾಗಿರುವ ಉದ್ದೇಶಕ್ಕಾಗಿ ನೀತಿವಂತರೆಂದು ಪ್ರಕಟಿಸಲ್ಪಟ್ಟಿಲ್ಲ. (ರೋಮಾಪುರ 8:1, 15) ಆದರೂ, ಯೇಸುವಿನ ಪ್ರಾಯಶ್ಚಿತ್ತದಲ್ಲಿ ನಂಬಿಕೆಯನ್ನಿಡುವ ಮೂಲಕ, ಯೆಹೋವನ ಸಮ್ಮುಖದಲ್ಲಿ ಅವರಿಗೊಂದು ಶುದ್ಧವಾದ ನಿಲುವಿದೆ. ಅವರು, ಆತನ ಸ್ನೇಹಿತರಾಗಿರುವ ಉದ್ದೇಶದಿಂದ ನೀತವಂತರೆಂದು ಪ್ರಕಟಿಸಲ್ಪಡುತ್ತಾರೆ. (ಹೋಲಿಸಿ ಯಾಕೋಬ 2:21, 23.) ದೇವರ ಆತ್ಮಿಕ ವೇದಿಯ ಮೇಲೆ ಸ್ವೀಕಾರಯೋಗ್ಯ ಯಜ್ಞಗಳನ್ನು ಸಾದರಪಡಿಸಲು ಅವರೂ ಸುಯೋಗ ಪಡೆದವರಾಗಿದ್ದಾರೆ. ಹೀಗೆ, ಈ ಮಹಾ ಸಮೂಹದ ಸಂಬಂಧದಲ್ಲಿ, ಯೆಶಾಯ 56:6, 7 ರ ಪ್ರವಾದನೆಯು ಒಂದು ಮಹಿಮಾಭರಿತವಾದ ನೆರವೇರಿಕೆಯನ್ನು ಅನುಭವಿಸುತ್ತಿದೆ: “ಅನ್ಯದೇಶೀಯರಲ್ಲಿ ಯಾರು ಯೆಹೋವನೆಂಬ ನನ್ನನ್ನು ಅವಲಂಬಿಸಿ ಸೇವಿಸಿ ನನ್ನ ನಾಮವನ್ನು ಪ್ರೀತಿಸಿ . . . ಹಿಡಿಯುತ್ತಾರೋ ಅವರೆಲ್ಲರನ್ನೂ ನಾನು ನನ್ನ ಪವಿತ್ರಪರ್ವತಕ್ಕೆ ಬರಮಾಡಿ ನನ್ನ ಪ್ರಾರ್ಥನಾಲಯದಲ್ಲಿ ಉಲ್ಲಾಸಗೊಳಿಸುವೆನು; ನನ್ನ ಯಜ್ಞವೇದಿಯಲ್ಲಿ ಅವರು ಅರ್ಪಿಸುವ ಸರ್ವಾಂಗಹೋಮಗಳೂ ಯಜ್ಞಗಳೂ ನನಗೆ ಮೆಚ್ಚಿಕೆಯಾಗುವವು; ನನ್ನ ಆಲಯವು ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯವೆನಿಸಿಕೊಳ್ಳುವದು.”
6. (ಎ) ಯಾವ ರೀತಿಯ ಯಜ್ಞಗಳನ್ನು ಅನ್ಯದೇಶೀಯರು ಅರ್ಪಿಸುತ್ತಾರೆ? (ಬಿ) ಯಾಜಕೀಯ ಅಂಗಳದಲ್ಲಿದ್ದ ನೀರಿನ ಗಂಗಾಳವು ಅವರಿಗೆ ಯಾವುದರ ಜ್ಞಾಪಕ ಹುಟ್ಟಿಸುತ್ತದೆ?
6 ಈ ಅನ್ಯದೇಶೀಯರು ಅರ್ಪಿಸುವ ಯಜ್ಞಗಳಲ್ಲಿ, “[ದೇವರ] ನಾಮಕ್ಕೆ ಬಹಿರಂಗ ಪ್ರಕಟನೆಯನ್ನು ಮಾಡುವ [ಚೆನ್ನಾಗಿ ತಯಾರಿಸಲ್ಪಟ್ಟ ಧಾನ್ಯದ ಅರ್ಪಣೆಗಳಂತೆ] ತುಟಿಗಳ ಫಲವು” ಮತ್ತು “ಒಳ್ಳೆಯದರ ಮಾಡುವಿಕೆ ಹಾಗೂ ಇತರರೊಂದಿಗೆ ವಿಷಯಗಳ ಹಂಚಿಕೊಳ್ಳುವಿಕೆ” ಸೇರಿವೆ. (ಇಬ್ರಿಯ 13:15, 16, NW) ತಮ್ಮನ್ನು ತೊಳೆದುಕೊಳ್ಳಲು ಯಾಜಕರು ಉಪಯೋಗಿಸಬೇಕಾಗಿದ್ದ ನೀರಿನ ದೊಡ್ಡ ಗಂಗಾಳವು ಸಹ, ಈ ಅನ್ಯದೇಶೀಯರಿಗೆ ಒಂದು ಪ್ರಾಮುಖ್ಯವಾದ ಮರುಜ್ಞಾಪನವಾಗಿದೆ. ಅವರು ಕೂಡ, ದೇವರ ವಾಕ್ಯವು ಅವರಿಗೆ ಪ್ರಗತಿಪರವಾಗಿ ಹೆಚ್ಚು ಸ್ಪಷ್ಟಗೊಳಿಸಲ್ಪಟ್ಟಂತೆ, ಆತ್ಮಿಕ ಹಾಗೂ ನೈತಿಕ ಶುದ್ಧೀಕರಣಕ್ಕೆ ಅಧೀನರಾಗಬೇಕು.
ಪವಿತ್ರಸ್ಥಾನ ಮತ್ತು ಅದರ ಪೀಠೋಪಕರಣಗಳು
7. (ಎ) ಮಹಾ ಸಮೂಹದವರು ಪರಿಶುದ್ಧ ಯಾಜಕತ್ವದ ಸುಯೋಗಗಳನ್ನು ಹೇಗೆ ವೀಕ್ಷಿಸುತ್ತಾರೆ? (ಬಿ) ಯಾವ ಹೆಚ್ಚಿನ ಸುಯೋಗಗಳನ್ನು ಕೆಲವು ಅನ್ಯದೇಶೀಯರು ಪಡೆದಿದ್ದಾರೆ?
7 ಅನ್ಯದೇಶೀಯರ ಈ ಮಹಾ ಸಮೂಹಕ್ಕೆ, ಪವಿತ್ರಸ್ಥಾನ ಮತ್ತು ಅದರ ಪೀಠೋಪಕರಣಗಳು ಯಾವ ಅರ್ಥವನ್ನಾದರೂ ಪಡೆದಿವೆಯೊ? ಒಳ್ಳೆಯದು, ಅವರು ಪವಿತ್ರಸ್ಥಾನದಿಂದ ಚಿತ್ರಿಸಲ್ಪಟ್ಟ ಸ್ಥಿತಿಯಲ್ಲಿ ಎಂದಿಗೂ ಇರಲಾರರು. ಅವರು ಸ್ವರ್ಗೀಯ ಪೌರತ್ವವಿರುವ ದೇವರ ಆತ್ಮಿಕ ಪುತ್ರರೋಪಾದಿ ಪುನಃ ಜನಿಸಿರುವುದಿಲ್ಲ. ಇದು, ಅವರು ಅಸೂಯೆಪಡುವಂತೆ ಮಾಡುತ್ತದೊ? ಇಲ್ಲ. ಬದಲಿಗೆ, ಅವರು 1,44,000 ಮಂದಿಯಲ್ಲಿ, ಉಳಿಕೆಯವರನ್ನು ಬೆಂಬಲಿಸುವ ತಮ್ಮ ಸುಯೋಗದಲ್ಲಿ ಹರ್ಷಿಸುತ್ತಾರೆ, ಮತ್ತು ಮಾನವಕುಲವನ್ನು ಪರಿಪೂರ್ಣತೆಗೆ ಏರಿಸುವುದರಲ್ಲಿ ಕ್ರಿಸ್ತನೊಂದಿಗೆ ಭಾಗವಹಿಸಲಿರುವ ಈ ಆತ್ಮಿಕ ಪುತ್ರರನ್ನು ಅಂಗೀಕರಿಸುವುದರಲ್ಲಿ, ದೇವರ ಉದ್ದೇಶಕ್ಕೆ ಅವರು ಆಳವಾದ ಗಣ್ಯತೆಯನ್ನು ತೋರಿಸುತ್ತಾರೆ. ಮತ್ತು, ಪ್ರಮೋದವನದಲ್ಲಿ ನಿತ್ಯಜೀವದ ಭೂನಿರೀಕ್ಷೆಯನ್ನು ತಮಗೆ ದಯಪಾಲಿಸುವುದರಲ್ಲಿ ದೇವರ ಮಹಾ ಅಪಾತ್ರ ದಯೆಯನ್ನು ಅನ್ಯದೇಶೀಯರ ಈ ಮಹಾ ಸಮೂಹವು ಆದರಿಸುತ್ತದೆ. ಈ ಅನ್ಯದೇಶೀಯರಲ್ಲಿ ಕೆಲವರಿಗೆ, ಗತಕಾಲದ ದೇವಸ್ಥಾನದಾಸ (ನೆತಿನಿಮ್)ರಂತೆ, ಪರಿಶುದ್ಧ ಯಾಜಕತ್ವಕ್ಕೆ ನೆರವು ನೀಡುವುದರಲ್ಲಿ ಮೇಲ್ವಿಚಾರಣೆಯ ಸುಯೋಗಗಳು ಕೊಡಲ್ಪಟ್ಟಿವೆ.b (ಯೆಶಾಯ 61:5) ಇವರ ಮಧ್ಯದಿಂದ ಯೇಸು “ದೇಶದಲ್ಲೆಲ್ಲಾ ಅಧಿಕಾರಿ [“ಪ್ರಭು,” NW]”ಗಳನ್ನು ನೇಮಿಸುತ್ತಾನೆ.—ಕೀರ್ತನೆ 45:16.
8, 9. ಪವಿತ್ರಸ್ಥಾನದ ಪೀಠೋಪಕರಣಗಳನ್ನು ಪರಿಗಣಿಸುವುದರಿಂದ ಮಹಾ ಸಮೂಹದವರು ಯಾವ ಪ್ರಯೋಜನವನ್ನು ಪಡೆಯುತ್ತಾರೆ?
8 ಅವರು ಸೂಚಿತರೂಪದ ಪವಿತ್ರಸ್ಥಾನವನ್ನು ಎಂದಿಗೂ ಪ್ರವೇಶಿಸಲಿಕ್ಕಿಲ್ಲವಾದರೂ, ಅನ್ಯದೇಶೀಯರ ಮಹಾ ಸಮೂಹವು ಅದರ ಪೀಠೋಪಕರಣಗಳಿಂದ ಬೆಲೆ ಬಾಳುವ ಪಾಠಗಳನ್ನು ಕಲಿಯುತ್ತದೆ. ದೀಪಸ್ತಂಭಕ್ಕೆ ಎಣ್ಣೆಯ ಸತತವಾದ ಸರಬರಾಯಿ ಅಗತ್ಯವಾಗಿದ್ದಂತೆಯೇ, ‘ನಂಬಿಗಸ್ತನೂ ವಿವೇಕಿಯೂ ಆದ ಆಳಿನ’ ಮುಖಾಂತರ ಬರುವ, ದೇವರ ವಾಕ್ಯದಿಂದ ತೆಗೆಯಲ್ಪಟ್ಟ ಪ್ರಗತಿಪರ ಸತ್ಯಗಳನ್ನು ಅವರು ಗ್ರಹಿಸುವಂತೆ ಸಹಾಯ ಮಾಡಲು, ಅನ್ಯದೇಶೀಯರಿಗೆ ಪವಿತ್ರಾತ್ಮವು ಅಗತ್ಯವಾಗಿದೆ. (ಮತ್ತಾಯ 24:45-47) ಇನ್ನೂ ಹೆಚ್ಚಾಗಿ, ಈ ಆಮಂತ್ರಣಕ್ಕೆ ಪ್ರತಿಕ್ರಿಯಿಸುವಂತೆ ದೇವರ ಆತ್ಮವು ಅವರಿಗೆ ಸಹಾಯ ಮಾಡುತ್ತದೆ: “ಆತ್ಮನೂ ಮದಲಗಿತ್ತಿಯೂ—ಬಾ ಅನ್ನುತ್ತಾರೆ. ಕೇಳುವವನು—ಬಾ ಅನ್ನಲಿ. ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ.” (ಪ್ರಕಟನೆ 22:17) ಹೀಗೆ, ದೀಪಸ್ತಂಭವು ಮಹಾ ಸಮೂಹಕ್ಕೆ, ಕ್ರೈಸ್ತರೋಪಾದಿ ಪ್ರಜ್ವಲಿಸುವ ತಮ್ಮ ಹಂಗಿನ ಕುರಿತು ಮತ್ತು ಮನೋಭಾವ, ಆಲೋಚನೆ, ನುಡಿ, ಅಥವಾ ಕ್ರಿಯೆಯಲ್ಲಿ ದೇವರ ಪವಿತ್ರಾತ್ಮವನ್ನು ಕೊರಗಿಸುವ ಯಾವುದೇ ವಿಷಯವನ್ನು ತ್ಯಜಿಸುವುದರ ಕುರಿತು ಒಂದು ಮರುಜ್ಞಾಪನವಾಗಿದೆ.—ಎಫೆಸ 4:30.
9 ಆತ್ಮಿಕವಾಗಿ ಸ್ವಸ್ಥರಾಗಿ ಉಳಿಯಬೇಕಾದರೆ, ಮಹಾ ಸಮೂಹವು ಕ್ರಮವಾಗಿ ಬೈಬಲಿನಿಂದ ಮತ್ತು ‘ನಂಬಿಗಸ್ತನೂ ವಿವೇಕಿಯೂ ಆದ ಆಳಿನ’ ಪ್ರಕಾಶನಗಳಿಂದ ಬರುವ ಆತ್ಮಿಕ ಆಹಾರದಲ್ಲಿ ಪಾಲ್ಗೊಳ್ಳಬೇಕೆಂದು, ನೈವೇದ್ಯವಾದ ರೊಟ್ಟಿಯ ಮೇಜು ಮರುಜ್ಞಾಪಿಸುತ್ತದೆ. (ಮತ್ತಾಯ 4:4) ತಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವಂತೆ ಯೆಹೋವನಿಗೆ ಶ್ರದ್ಧಾಪೂರ್ವಕರಾಗಿ ಪ್ರಾರ್ಥಿಸುವುದರ ಪ್ರಮುಖತೆಯ ಕುರಿತು, ಧೂಪವೇದಿಯು ಅವರಿಗೆ ಜ್ಞಾಪಕಹುಟ್ಟಿಸುತ್ತದೆ. (ಲೂಕ 21:36) ಅವರ ಪ್ರಾರ್ಥನೆಗಳು ಸ್ತುತಿ ಮತ್ತು ಕೃತಜ್ಞತಾ ನಿವೇದನೆಯ ಹೃತ್ಪೂರ್ವಕ ಅಭಿವ್ಯಕ್ತಿಗಳನ್ನು ಒಳಗೊಂಡಿರಬೇಕು. (ಕೀರ್ತನೆ 106:1) ಧೂಪವೇದಿಯು, ದೇವರನ್ನು—ಇತರ—ಕ್ರೈಸ್ತ ಕೂಟಗಳಲ್ಲಿ ರಾಜ್ಯ ಗೀತೆಗಳನ್ನು ಹೃತ್ಪೂರ್ವಕವಾಗಿ ಹಾಡುವಂತಹ ಮತ್ತು “ರಕ್ಷಣೆಗಾಗಿ” ಪರಿಣಾಮಕಾರಿಯಾದ “ಬಹಿರಂಗ ಪ್ರಕಟನೆಯನ್ನು” ಮಾಡಲು ಚೆನ್ನಾಗಿ ತಯಾರಿಸುವಂತಹ—ವಿಧಗಳಲ್ಲಿ ಸ್ತುತಿಸುವ ಅಗತ್ಯದ ಕುರಿತು ಸಹ ಅವರಿಗೆ ಜ್ಞಾಪಕಹುಟ್ಟಿಸುತ್ತದೆ.—ರೋಮಾಪುರ 10:10, NW.
ಸತ್ಯಾರಾಧನೆಯ ಸಂಪೂರ್ಣ ವಿಜಯ
10. (ಎ) ಯಾವ ಮಹಾ ಪ್ರತೀಕ್ಷೆಯನ್ನು ನಾವು ಎದುರುನೋಡಬಲ್ಲೆವು? (ಬಿ) ಯಾವ ವಿಕಸನವು ಮೊದಲು ಸಂಭವಿಸಬೇಕು?
10 ಇಂದು, ಸಕಲ ರಾಷ್ಟ್ರಗಳಿಂದ “ಅನೇಕ ಜನರು” ಯೆಹೋವನ ಆರಾಧನಾಲಯಕ್ಕೆ ಪ್ರವಾಹರೂಪದಲ್ಲಿ ಬರುತ್ತಿದ್ದಾರೆ. (ಯೆಶಾಯ 2:2, 3) ಇದನ್ನು ದೃಢೀಕರಿಸುತ್ತಾ, ಪ್ರಕಟನೆ 15:4 ಹೇಳುವುದು: “ಕರ್ತನೇ, [“ಯೆಹೋವನೇ,” NW] ನಿನ್ನ ನಾಮಕ್ಕೆ ಭಯಪಡದವರೂ ಅದನ್ನು ಘನವಾದದ್ದೆಂದು ಒಪ್ಪಿಕೊಳ್ಳದವರೂ ಯಾರಾದರೂ ಇದ್ದಾರೇ? ನೀನೊಬ್ಬನೇ ಪರಿಶುದ್ಧನು; ನಿನ್ನ ನೀತಿಯುಳ್ಳ ಕೃತ್ಯಗಳು ಪ್ರಕಾಶಕ್ಕೆ ಬಂದದರಿಂದ ಎಲ್ಲಾ ಜನಾಂಗಗಳು ಬಂದು ನಿನ್ನ ಸನ್ನಿಧಾನದಲ್ಲಿ ನಮಸ್ಕಾರ ಮಾಡುವರು.” ಹಿಂಬಾಲಿಸಿ ಬರುವ ವಿಷಯವನ್ನು ಜೆಕರ್ಯ 14ನೆಯ ಅಧ್ಯಾಯವು ವರ್ಣಿಸುತ್ತದೆ. ಹತ್ತಿರದ ಭವಿಷ್ಯತ್ತಿನಲ್ಲಿ, ಭೂಮಿಯಲ್ಲಿರುವ ಹೆಚ್ಚಿನ ಜನರು ಯೆರೂಸಲೇಮಿನ—ಭೂಮಿಯ ಮೇಲಿರುವ ಸ್ವರ್ಗೀಯ ಯೆರೂಸಲೇಮಿನ ಪ್ರತಿನಿಧಿಗಳು—ವಿರುದ್ಧ ಯುದ್ಧವನ್ನು ಮಾಡಲು ಕೊನೆಯ ಬಾರಿ ಒಟ್ಟುಗೂಡಿದಂತೆ, ಅವರ ಕೆಟ್ಟ ಮನೋಭಾವವು ಒಂದು ಪರಮಾವಧಿಯನ್ನು ತಲಪುವುದು. ಆಗ ಯೆಹೋವನು ಕ್ರಿಯೆಗೈಯುವನು. ಯುದ್ಧವೀರ ದೇವರೋಪಾದಿ, ಆತನು ಈ ಆಕ್ರಮಣವನ್ನು ಮಾಡಲು ಧೈರ್ಯ ತೋರಿದ “ಆ ರಾಷ್ಟ್ರಗಳ ವಿರುದ್ಧ ಖಂಡಿತವಾಗಿಯೂ ಹೊರಟುಹೋಗಿ ಯುದ್ಧಮಾಡುವನು.”—ಜೆಕರ್ಯ 14:2, 3, NW.
11, 12. (ಎ) ತನ್ನ ದೇವಾಲಯದಲ್ಲಿನ ಆರಾಧಕರ ಮೇಲೆ ಬರಲಿರುವ ಭೌಗೋಲಿಕ ಆಕ್ರಮಣಕ್ಕೆ ಯೆಹೋವನು ಹೇಗೆ ಪ್ರತಿಕ್ರಿಯಿಸುವನು? (ಬಿ) ದೇವರ ಯುದ್ಧದ ಪರಿಣಾಮವೇನಾಗಿರುವುದು?
11 “ಯೆರೂಸಲೇಮಿನ ಮೇಲೆ ಯುದ್ಧಮಾಡಿದ ಸಕಲ ಜನಾಂಗಗಳಿಗೂ ಯೆಹೋವನು ಈ ವ್ಯಾಧಿಯನ್ನು ತಗಲಿಸುವನು—ಹೆಜ್ಜೆಯ ಮೇಲೆ ನಿಂತ ನಿಂತ ಹಾಗೆಯೇ ಅವರ ಮಾಂಸವು ಕೊಳೆತುಹೋಗುವದು, ಕಣ್ಣು ಗುಣಿಯಲ್ಲೇ ಇಂಗುವದು, ನಾಲಿಗೆಯು ಬಾಯಲ್ಲೇ ಕ್ಷಯಿಸುವದು. ಆ ದಿನದಲ್ಲಿ ಯೆಹೋವನು ಉಂಟುಮಾಡುವ ದೊಡ್ಡ ಗಲಿಬಲಿಯು ಅವರಲ್ಲಿ ಹರಡುವದು; ಒಬ್ಬರ ಕೈಯನ್ನೊಬ್ಬರು ತಡೆಹಿಡಿಯುವರು, ಒಬ್ಬರ ಮೇಲೊಬ್ಬರು ಕೈಯೆತ್ತುವರು.”—ಜೆಕರ್ಯ 14:12, 13.
12 ಈ ಪೀಡೆಯು ಅಕ್ಷರಶಃವೊ ಸಾಂಕೇತಿಕವೊ, ನಾವು ಕಾದು ನೋಡಬೇಕು. ಹಾಗಿದ್ದರೂ, ಒಂದು ವಿಷಯವು ಖಂಡಿತ. ಯೆಹೋವನ ಸೇವಕರ ಮೇಲೆ ತಮ್ಮ ಭೌಗೋಲಿಕ ಆಕ್ರಮಣವನ್ನು ಮಾಡಲು ದೇವರ ವೈರಿಗಳು ಮುಂದುವರಿಯುತ್ತಿರುವಾಗ, ಅವರು ದೇವರ ಸರ್ವಶಕ್ತ ಅಧಿಕಾರದ ಅಸಾಧಾರಣ ಪ್ರದರ್ಶನಗಳಿಂದ ತಡೆಯಲ್ಪಡುವರು. ಅವರ ಬಾಯಿಗಳು ಸುಮ್ಮನಾಗಿಸಲ್ಪಡುವವು. ಅದು, ಅವರ ಉದ್ಧಟತನದ ನಾಲಗೆಗಳು ಕ್ಷಯಿಸಿಹೋಗಿವೆಯೋ ಎಂಬಂತೆ ಇರುವುದು. ಅವರ ಕಣ್ಣುಗಳು ಇಂಗಿಹೋಗಿವೆಯೋ ಎಂಬಂತೆ, ಅವರ ದೃಷ್ಟಿಗೆ ಅವರ ಏಕೀಕೃತ ಗುರಿಯು ಅಸ್ಪಷ್ಟವಾಗುವುದು. ಆಕ್ರಮಣವನ್ನು ಮಾಡುವಂತೆ ಅವರನ್ನು ಹುರಿದುಂಬಿಸಿದ ಅವರ ಶಾರೀರಿಕ ಶಕ್ತಿಗಳು, ಕ್ಷಯಿಸಿಹೋಗುವವು. ಗಲಿಬಿಲಿಯಲ್ಲಿ, ಅವರು ಮಹಾ ಸಂಹಾರದಲ್ಲಿ, ಒಬ್ಬರನ್ನೊಬ್ಬರು ಆಕ್ರಮಿಸುವರು. ಹೀಗೆ ದೇವರ ಆರಾಧನೆಯ ಎಲ್ಲ ಭೂವೈರಿಗಳು ನಿರ್ಮೂಲಗೊಳಿಸಲ್ಪಡುವರು. ಕಟ್ಟಕಡೆಗೆ, ಸಕಲ ರಾಷ್ಟ್ರಗಳೂ ಯೆಹೋವನ ವಿಶ್ವ ಪರಮಾಧಿಕಾರವನ್ನು ಗುರುತಿಸುವಂತೆ ಒತ್ತಾಯಿಸಲ್ಪಟ್ಟಿರುವರು. ಈ ಪ್ರವಾದನೆಯು ನೆರವೇರುವುದು: “ಯೆಹೋವನು ಭೂಲೋಕಕ್ಕೆಲ್ಲಾ ರಾಜನಾಗಬೇಕು.” (ಜೆಕರ್ಯ 14:9) ಇದರ ನಂತರ, ಮಾನವಕುಲಕ್ಕಾಗಿ ಸಿದ್ಧವಾಗಿಟ್ಟಿರುವ ಮಹಾ ಆಶೀರ್ವಾದಗಳೊಂದಿಗೆ ಕ್ರಿಸ್ತನ ಸಾವಿರ ವರ್ಷದ ಆಳಿಕೆಯು ಆರಂಭಿಸಿದಂತೆ, ಸೈತಾನನು ಮತ್ತು ಅವನ ದೆವ್ವಗಳು ಬಂಧಿಸಲ್ಪಡುವರು.—ಪ್ರಕಟನೆ 20:1, 2; 21:3, 4.
ಭೂಪುನರುತ್ಥಾನ
13. “ಸಕಲ ಜನಾಂಗಗಳಲ್ಲಿ ಉಳಿದವರೆಲ್ಲರೂ” ಯಾರಾಗಿದ್ದಾರೆ?
13 ಜೆಕರ್ಯನ ಪ್ರವಾದನೆಯು, 14ನೆಯ ಅಧ್ಯಾಯ, 16ನೆಯ ವಚನದಲ್ಲಿ ಮುಂದುವರಿಯುತ್ತದೆ: “ಅನಂತರ ಯೆರೂಸಲೇಮಿನ ಮೇಲೆ ಬಿದ್ದ ಸಕಲ ಜನಾಂಗಗಳಲ್ಲಿ ಉಳಿದವರೆಲ್ಲರೂ ಸೇನಾಧೀಶ್ವರ ಯೆಹೋವನೆಂಬ ರಾಜಾಧಿರಾಜನನ್ನು ಆರಾಧಿಸುವದಕ್ಕೂ ಪರ್ಣಶಾಲೆಗಳ ಹಬ್ಬವನ್ನು ಆಚರಿಸುವದಕ್ಕೂ ಪ್ರತಿವರುಷವು ಹೊರಟುಬರುವರು.” ಬೈಬಲಿಗನುಸಾರ, ಈ ದುಷ್ಟ ವ್ಯವಸ್ಥೆಯ ಅಂತ್ಯದ ವರೆಗೆ ಜೀವಿಸುವುದನ್ನು ಮುಂದುವರಿಸುವ, ಮತ್ತು ಸತ್ಯಾರಾಧನೆಯ ವೈರಿಗಳೆಂದು ತೀಮಾರ್ನಿಸಲ್ಪಡುವ, ಇಂದು ಜೀವಂತರಾಗಿರುವ ಎಲ್ಲ ಜನರು, “ನಿತ್ಯನಾಶನವೆಂಬ ದಂಡನೆಯನ್ನು” ಅನುಭವಿಸುವರು. (2 ಥೆಸಲೊನೀಕ 1:7-9; ಮತ್ತಾಯ 25:31-33, 46 ನ್ನು ಸಹ ನೋಡಿರಿ.) ಅವರಿಗೊಂದು ಪುನರುತ್ಥಾನವಿರುವುದಿಲ್ಲ. ಹಾಗಾದರೆ, “ಉಳಿದವರು,” ಯಾರು ದೇವರ ಅಂತಿಮ ಯುದ್ಧಕ್ಕೆ ಮುಂಚೆ ಸತ್ತರೊ ಮತ್ತು ಯಾರಿಗೆ ಬೈಬಲಾಧಾರಿತ ಪುನರುತ್ಥಾನದ ನಿರೀಕ್ಷೆಯಿದೆಯೊ ಅಂತಹ ರಾಷ್ಟ್ರಗಳ ಸದಸ್ಯರನ್ನು ಒಳಗೂಡಿರುವುದು ಸಂಭವನೀಯ. ಯೇಸು ವಾಗ್ದಾನಿಸಿದ್ದು: “ಸಮಾಧಿಗಳಲ್ಲಿರುವವರೆಲ್ಲರು ಆತನ ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ. ಒಳ್ಳೇದನ್ನು ಮಾಡಿದವರಿಗೆ ಜೀವಕ್ಕಾಗಿ ಪುನರುತ್ಥಾನವಾಗುವದು; ಕೆಟ್ಟದ್ದನ್ನು ನಡಿಸಿದವರಿಗೆ ತೀರ್ಪಿಗಾಗಿ ಪುನರುತ್ಥಾನವಾಗುವದು.”—ಯೋಹಾನ 5:28, 29.
14. (ಎ) ಅನಂತಕಾಲದ ಜೀವನವನ್ನು ಗಳಿಸಲು ಪುನರುತ್ಥಾನಗೊಂಡವರು ಏನು ಮಾಡಬೇಕು? (ಬಿ) ಯೆಹೋವನಿಗೆ ತಮ್ಮನ್ನು ಸಮರ್ಪಿಸಿಕೊಳ್ಳಲು ಮತ್ತು ಸತ್ಯಾರಾಧನೆಯನ್ನು ಆಚರಿಸಲು ನಿರಾಕರಿಸುವ ಯಾವುದೇ ವ್ಯಕ್ತಿಗೆ ಏನು ಸಂಭವಿಸುವುದು?
14 ಪುನರುತ್ಥಾನಗೊಂಡ ಇವರೆಲ್ಲರು, ತಮ್ಮ ಪುನರುತ್ಥಾನವು ಪ್ರತಿಕೂಲ ನ್ಯಾಯತೀರ್ಪಿನದ್ದಲ್ಲ ಬದಲಿಗೆ ಜೀವದ ಪುನರುತ್ಥಾನವಾಗಿ ಪರಿಣಮಿಸುವ ಸಲುವಾಗಿ ಏನನ್ನಾದರೂ ಮಾಡಬೇಕು. ಅವರು ಯೆಹೋವನ ದೇವಾಲಯದ ಭೂಅಂಗಳಗಳಿಗೆ ಬರಬೇಕು ಮತ್ತು ಯೇಸು ಕ್ರಿಸ್ತನ ಮುಖಾಂತರ ದೇವರಿಗೆ ಸಮರ್ಪಣೆಯಲ್ಲಿ ತಲೆತಗ್ಗಿಸಬೇಕು. ಇದನ್ನು ಮಾಡಲು ನಿರಾಕರಿಸುವ ಯಾವುದೇ ಪುನರುತ್ಥಾನಗೊಂಡ ವ್ಯಕ್ತಿಯು, ಪ್ರಸ್ತುತ ದಿನದ ರಾಷ್ಟ್ರಗಳಿಗೆ ಸಂಭವಿಸುವ ಅದೇ ಪೀಡೆಯನ್ನು ಅನುಭವಿಸುವನು. (ಜೆಕರ್ಯ 14:18) ಪುನರುತ್ಥಾನಗೊಂಡವರಲ್ಲಿ ಎಷ್ಟು ಮಂದಿ, ಪರ್ಣಶಾಲೆಗಳ ಸೂಚಿತರೂಪದ ಉತ್ಸವವನ್ನು ಆಚರಿಸುವುದರಲ್ಲಿ ಮಹಾ ಸಮೂಹದವರನ್ನು ಆನಂದದಿಂದ ಜೊತೆಸೇರುವರೆಂದು ಯಾರಿಗೆ ಗೊತ್ತು? ನಿಸ್ಸಂದೇಹವಾಗಿ, ಅಲ್ಲಿ ಅನೇಕರಿರುವರು, ಮತ್ತು ಫಲಸ್ವರೂಪವಾಗಿ ಯೆಹೋವನ ಮಹಾ ಆತ್ಮಿಕ ದೇವಾಲಯವು ಇನ್ನೂ ಹೆಚ್ಚು ಮಹಿಮಾಭರಿತವಾಗಿ ಪರಿಣಮಿಸುವುದು!
ಪರ್ಣಶಾಲೆಗಳ ಸೂಚಿತರೂಪದ ಉತ್ಸವ
15. (ಎ) ಪರ್ಣಶಾಲೆಗಳ ಪ್ರಾಚೀನ ಇಸ್ರಾಯೇಲ್ಯ ಉತ್ಸವದ ಕೆಲವೊಂದು ಎದ್ದುಕಾಣುವ ವೈಶಿಷ್ಟ್ಯಗಳಾವುವು? (ಬಿ) ಉತ್ಸವದ ಸಮಯದಲ್ಲಿ 70 ಹೋರಿಗಳು ಏಕೆ ಅರ್ಪಿಸಲ್ಪಟ್ಟವು?
15 ಪ್ರತಿ ವರ್ಷ, ಪರ್ಣಶಾಲೆಗಳ ಉತ್ಸವವನ್ನು ಪ್ರಾಚೀನ ಇಸ್ರಾಯೇಲು ಆಚರಿಸುವಂತೆ ಕೇಳಿಕೊಳ್ಳಲ್ಪಟ್ಟಿತು. ಅದು ಒಂದು ವಾರದ ತನಕ ಮುಂದುವರಿಯುತ್ತಿತ್ತು ಮತ್ತು ಕೊಯ್ಲಿನ ಒಟ್ಟೈಸುವಿಕೆಯ ಸಮಯದ ಕೊನೆಯಲ್ಲಿ ಬಂದಿತು. ಅದು ಕೃತಜ್ಞತಾ ನಿವೇದನೆಯ ಹರ್ಷಭರಿತ ಸಮಯವಾಗಿತ್ತು. ಒಂದು ವಾರದ ಸಮಯಾವಧಿಯ ವರೆಗೆ ಅವರು ಮರಗಳ ಎಲೆಗಳಿಂದ, ವಿಶೇಷವಾಗಿ ತಾಳೆಯ ಗರಿಗಳಿಂದ ಮುಚ್ಚಲ್ಪಟ್ಟ ತಾತ್ಕಾಲಿಕ ಆಶ್ರಯಗಳಲ್ಲಿ ವಾಸಿಸಬೇಕಿತ್ತು. ಈ ಉತ್ಸವವು, ದೇವರು ತಮ್ಮ ಪೂರ್ವಜರನ್ನು ಐಗುಪ್ತದಿಂದ ಹೇಗೆ ರಕ್ಷಿಸಿದ್ದನೆಂದು ಮತ್ತು ಅವರು ವಾಗ್ದತ್ತ ದೇಶವನ್ನು ತಲಪಿದ ತನಕ ಅರಣ್ಯದಲ್ಲಿ 40 ವರ್ಷಗಳ ವರೆಗೆ ಸಂಚರಿಸುತ್ತಿದ್ದಾಗ, ಅವರು ಪರ್ಣಶಾಲೆಗಳಲ್ಲಿ ವಾಸಿಸಿದಾಗ ಅವರ ಪರಾಮರಿಕೆಯನ್ನು ಆತನು ಹೇಗೆ ಮಾಡಿದನೆಂಬುದರ ಬಗ್ಗೆ ಇಸ್ರಾಯೇಲಿಗೆ ಮರುಜ್ಞಾಪನ ನೀಡಿತು. (ಯಾಜಕಕಾಂಡ 23:39-43) ಉತ್ಸವದ ಸಮಯದಲ್ಲಿ, ದೇವಾಲಯದ ವೇದಿಯ ಮೇಲೆ 70 ಹೋರಿಗಳನ್ನು ಬಲಿಯರ್ಪಿಸಲಾಯಿತು. ಪ್ರಮಾಣಕ್ಕನುಸಾರ, ಉತ್ಸವದ ಈ ವೈಶಿಷ್ಟ್ಯವು, ಯೇಸು ಕ್ರಿಸ್ತನ ಮೂಲಕ ನಡೆಸಲ್ಪಟ್ಟ ಪರಿಪೂರ್ಣ ಹಾಗೂ ಸಂಪೂರ್ಣ ಜೀವರಕ್ಷಕ ಕೆಲಸದ ಪ್ರವಾದನಾಸೂಚಕವಾಗಿತ್ತು. ಅವನ ಪ್ರಾಯಶ್ಚಿತ್ತ ಯಜ್ಞದ ಪ್ರಯೋಜನಗಳು, ನೋಹನಿಂದ ಬಂದ ಮಾನವಕುಲದ 70 ಕುಟುಂಬಗಳ ಎಣಿಕೆಯಿಲ್ಲದ ಸಂತತಿಗಳಿಗೆ ಕಟ್ಟಕಡೆಗೆ ಪ್ರವಹಿಸುವುದು.—ಆದಿಕಾಂಡ 10:1-29; ಅರಣ್ಯಕಾಂಡ 29:12-34; ಮತ್ತಾಯ 20:28.
16, 17. (ಎ) ಪರ್ಣಶಾಲೆಗಳ ಸೂಚಿತರೂಪದ ಉತ್ಸವವು ಯಾವಾಗ ಆರಂಭಿಸಿತು, ಮತ್ತು ಅದು ಹೇಗೆ ಮುಂದುವರಿಯಿತು? (ಬಿ) ಮಹಾ ಸಮೂಹದವರು ಆಚರಣೆಯಲ್ಲಿ ಹೇಗೆ ಪಾಲುತೆಗೆದುಕೊಳ್ಳುತ್ತಾರೆ?
16 ಹೀಗೆ ಪರ್ಣಶಾಲೆಗಳ ಆ ಪ್ರಾಚೀನ ಉತ್ಸವವು, ಯೆಹೋವನ ಮಹಾ ಆತ್ಮಿಕ ದೇವಾಲಯದೊಳಕ್ಕೆ ವಿಮೋಚಿಸಲ್ಪಟ್ಟ ಪಾಪಿಗಳ ಹರ್ಷಭರಿತ ಒಟ್ಟುಗೂಡಿಸುವಿಕೆಗೆ ಸೂಚಿಸಿತು. ಈ ಉತ್ಸವದ ನೆರವೇರಿಕೆಯು, ಸಾ.ಶ. 33ರ ಪಂಚಾಶತ್ತಮದಂದು, ಕ್ರೈಸ್ತ ಸಭೆಯೊಳಕ್ಕೆ ಆತ್ಮಿಕ ಇಸ್ರಾಯೇಲ್ಯರ ಹರ್ಷಭರಿತ ಒಟ್ಟುಗೂಡಿಸುವಿಕೆಯ ಆರಂಭದಿಂದ ತೊಡಗಿತು. (ಅ. ಕೃತ್ಯಗಳು 2:41, 46, 47) ಅವರ ನಿಜವಾದ “ಪೌರತ್ವವು ಪರಲೋಕಗಳಲ್ಲಿ ಇರುವುದ” (NW)ರಿಂದ, ಈ ಅಭಿಷಿಕ್ತರು ತಾವು ಸೈತಾನನ ಲೋಕದಲ್ಲಿ “ತಾತ್ಕಾಲಿಕ ನಿವಾಸಿಗಳು” (NW) ಆಗಿದ್ದೇವೆಂಬುದನ್ನು ಗಣ್ಯಮಾಡಿದರು. (1 ಪೇತ್ರ 2:11; ಫಿಲಿಪ್ಪಿ 3:20) ಈ ಹರ್ಷಭರಿತ ಉತ್ಸವವು, ಕ್ರೈಸ್ತಪ್ರಪಂಚದ ರಚನೆಯಲ್ಲಿ ಫಲಿಸಿದ ಧರ್ಮಭ್ರಷ್ಟತೆಯಿಂದ ತಾತ್ಕಾಲಿಕವಾಗಿ ಮರೆಮಾಡಲ್ಪಟ್ಟಿತು. (2 ಥೆಸಲೊನೀಕ 2:1-3) ಹಾಗಿದ್ದರೂ, 1,44,000 ಆತ್ಮಿಕ ಇಸ್ರಾಯೇಲ್ಯರ ಉಳಿದ ಸದಸ್ಯರ ಹರ್ಷಭರಿತ ಒಟ್ಟುಗೂಡಿಸುವಿಕೆ, ಅದನ್ನು ಅನುಸರಿಸಿದ ಪ್ರಕಟನೆ 7:9ರ ಅಂತಾರಾಷ್ಟ್ರೀಯ ಮಹಾ ಸಮೂಹದವರ ಒಟ್ಟುಗೂಡಿಸುವಿಕೆಯ ಮೂಲಕ ಉತ್ಸವವು 1919ರಲ್ಲಿ ಮತ್ತೆ ಆರಂಭಿಸಿತು.
17 ಈ ಮಹಾ ಸಮೂಹದವರು ತಮ್ಮ ಕೈಗಳಲ್ಲಿ ಖರ್ಜೂರದ ಗರಿಗಳುಳ್ಳವರಾಗಿ ಚಿತ್ರಿಸಲ್ಪಟ್ಟಿದ್ದಾರೆ. ಇದು ಅವರು ಸಹ ಪರ್ಣಶಾಲೆಗಳ ಸೂಚಿತರೂಪದ ಉತ್ಸವದ ಹರ್ಷಭರಿತ ಆಚರಣೆಕಾರರೆಂಬುದನ್ನು ತೋರಿಸುತ್ತದೆ. ಸಮರ್ಪಿತ ಕ್ರೈಸ್ತರೋಪಾದಿ, ಅವರು ಯೆಹೋವನ ದೇವಾಲಯದೊಳಕ್ಕೆ ಹೆಚ್ಚು ಆರಾಧಕರನ್ನು ಒಟ್ಟುಗೂಡಿಸುವ ಕೆಲಸದಲ್ಲಿ ಹರ್ಷಭರಿತರಾಗಿ ಭಾಗವಹಿಸುತ್ತಾರೆ. ಇನ್ನೂ ಹೆಚ್ಚಾಗಿ, ಪಾಪಿಗಳೋಪಾದಿ, ತಮಗೆ ಭೂಮಿಯ ಮೇಲೆ ಶಾಶ್ವತವಾಗಿ ವಾಸಿಸುವ ಹಕ್ಕುಗಳಿರುವುದಿಲ್ಲವೆಂಬುದನ್ನು ಅವರು ಗಣ್ಯಮಾಡುತ್ತಾರೆ. ಇವರು, ಭಾವಿ ಪುನರುತ್ಥಾನಗೊಂಡವರೊಂದಿಗೆ, ಕ್ರಿಸ್ತನ ಸಾವಿರ ವರ್ಷದ ಆಳಿಕೆಯ ಅಂತ್ಯದಲ್ಲಿ ಮಾನವ ಪರಿಪೂರ್ಣತೆಯನ್ನು ತಲಪುವ ತನಕ, ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯನ್ನಿಡುತ್ತಾ ಇರಬೇಕು.—ಪ್ರಕಟನೆ 20:5.
18. (ಎ) ಯೇಸು ಕ್ರಿಸ್ತನ ಸಾವಿರ ವರ್ಷದ ಆಳಿಕೆಯ ಅಂತ್ಯದಲ್ಲಿ ಏನು ಸಂಭವಿಸುವುದು? (ಬಿ) ಯೆಹೋವನ ಸತ್ಯಾರಾಧನೆಯು ಕಟ್ಟಕಡೆಗೆ ಹೇಗೆ ವಿಜಯಿಯಾಗುವುದು?
18 ಆಗ, ಭೂಮಿಯ ಮೇಲಿರುವ ದೇವರ ಆರಾಧಕರು ಒಂದು ಸ್ವರ್ಗೀಯ ಯಾಜಕತ್ವದ ಅಗತ್ಯವಿಲ್ಲದೆ ಮಾನವ ಪರಿಪೂರ್ಣತೆಯಲ್ಲಿ ಆತನ ಮುಂದೆ ನಿಲ್ಲುವರು. ಯೇಸು ಕ್ರಿಸ್ತನು “ತಂದೆಯಾಗಿರುವ ದೇವರಿಗೆ ರಾಜ್ಯವನ್ನು ಒಪ್ಪಿಸಿಕೊಡುವಾಗ” ಆ ಸಮಯವು ಒದಗಿಬಂದಿರುವುದು. (1 ಕೊರಿಂಥ 15:24) ಪರಿಪೂರ್ಣಗೊಳಿಸಲ್ಪಟ್ಟ ಮಾನವ ಕುಲವನ್ನು ಪರೀಕ್ಷಿಸಲು ಸೈತಾನನನ್ನು “ಸ್ವಲ್ಪಕಾಲ”ಕ್ಕಾಗಿ ಬಿಡುಗಡೆಮಾಡಲಾಗುವುದು. ಯಾವುದೇ ಅಪನಂಬಿಗಸ್ತ ವ್ಯಕ್ತಿಗಳು, ಸೈತಾನನು ಮತ್ತು ಅವನ ದೆವ್ವಗಳೊಂದಿಗೆ ಸದಾಕಾಲಕ್ಕೆ ನಾಶಗೊಳಿಸಲ್ಪಡುವರು. ನಂಬಿಗಸ್ತರಾಗಿ ಉಳಿಯುವವರಿಗೆ ಅನಂತಕಾಲದ ಜೀವಿತವು ಅನುಗ್ರಹಿಸಲ್ಪಡುವುದು. ಅವರು ಭೂಪ್ರಮೋದವನದಲ್ಲಿ ಶಾಶ್ವತ ನಿವಾಸಿಗಳಾಗುವರು. ಹೀಗೆ ಪರ್ಣಶಾಲೆಗಳ ಸೂಚಿತರೂಪದ ಉತ್ಸವವು ಒಂದು ಮಹಿಮಾಭರಿತ, ಜಯಶಾಲಿಯಾದ ಸಮಾಪ್ತಿಗೆ ಬಂದಿರುವುದು. ಸತ್ಯಾರಾಧನೆಯು, ಯೆಹೋವನ ಅನಂತಕಾಲದ ಮಹಿಮೆಗೆ ಮತ್ತು ಮಾನವಕುಲದ ಅನಂತ ಸಂತೋಷಕ್ಕೆ ವಿಜಯಿಯಾಗಿರುವುದು.—ಪ್ರಕಟನೆ 20:3, 7-10, 14, 15.
[ಅಧ್ಯಯನ ಪ್ರಶ್ನೆಗಳು]
a ಜೆಕರ್ಯ 14ನೆಯ ಅಧ್ಯಾಯದ ಪ್ರತಿಯೊಂದು ವಚನದ ವಿವರಣೆಗಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ 1972ರಲ್ಲಿ ಪ್ರಕಾಶಿಸಲ್ಪಟ್ಟ, ಪ್ಯಾರಡೈಸ್ ರೆಸ್ಟೋರ್ಡ್ ಟು ಮ್ಯಾನ್ಕೈಂಡ್—ಬೈ ತಿಯಾಕ್ರಸಿ! ಎಂಬ ಪುಸ್ತಕದ 21 ಮತ್ತು 22ನೆಯ ಅಧ್ಯಾಯಗಳನ್ನು ನೋಡಿರಿ.
b ಆಧುನಿಕ ದಿನದ ದೇವಸ್ಥಾನದಾಸರ ಕುರಿತಾದ ಹೆಚ್ಚಿನ ಮಾಹಿತಿಗಾಗಿ, ಜುಲೈ 15, 1992ರ ಕಾವಲಿನಬುರುಜು, ಪುಟ 16ನ್ನು ನೋಡಿರಿ.
ಪುನರ್ವಿಮರ್ಶಾ ಪ್ರಶ್ನೆಗಳು
◻ ಪ್ರಥಮ ಜಾಗತಿಕ ಯುದ್ಧದ ಸಮಯದಲ್ಲಿ “ಯೆರೂಸಲೇಮ್” ಹೇಗೆ ಆಕ್ರಮಣಕ್ಕೊಳಗಾಗಿತ್ತು?—ಜೆಕರ್ಯ 14:2.
◻ 1919ರಂದಿನಿಂದ ದೇವರ ಜನರಿಗೆ ಏನು ಸಂಭವಿಸಿದೆ?
◻ ಪರ್ಣಶಾಲೆಗಳ ಸೂಚಿತರೂಪದ ಉತ್ಸವವನ್ನು ಆಚರಿಸುವುದರಲ್ಲಿ ಯಾರು ಇಂದು ಪಾಲುತೆಗೆದುಕೊಳ್ಳುತ್ತಾರೆ?
◻ ಸತ್ಯಾರಾಧನೆಯು ಸಂಪೂರ್ಣವಾಗಿ ಹೇಗೆ ವಿಜಯಿಯಾಗುವುದು?
[ಪುಟ 23 ರಲ್ಲಿರುವ ಚಿತ್ರ]
ಪರ್ಣಶಾಲೆಗಳ ಉತ್ಸವವನ್ನು ಆಚರಿಸುವುದರಲ್ಲಿ ಖರ್ಜೂರದ ಗರಿಗಳು ಉಪಯೋಗಿಸಲ್ಪಟ್ಟವು