ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w95 12/15 ಪು. 11-16
  • ಅವರು “ಹಾಗೆಯೇ ಮಾಡಿದರು”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅವರು “ಹಾಗೆಯೇ ಮಾಡಿದರು”
  • ಕಾವಲಿನಬುರುಜು—1995
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನೋಹನ ದಿನಗಳಲ್ಲಿ
  • ಮೋಶೆ—ಮನುಷ್ಯರಲ್ಲಿ ಅತಿ ದೀನನು
  • ಯೆಹೋಶುವ—ಧೈರ್ಯವಂತನು ಮತ್ತು ಬಹಳ ಪ್ರಬಲನು
  • ಅರಸರು—ನಂಬಿಗಸ್ತರು ಮತ್ತು ಅವಿಧೇಯರು
  • ದೇವರ ವಾಕ್ಯಕ್ಕನುಸಾರ ಜೀವಿಸುವುದು
  • ಯೆಹೋವನ ಮಾರ್ಗಗಳನ್ನು ತಿಳಿದುಕೊಳ್ಳುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ಯೆಹೋಶುವನು ಜ್ಞಾಪಕದಲ್ಲಿಟ್ಟುಕೊಂಡ ವಿಷಯಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ಯೇಸು ಕ್ರಿಸ್ತನು ಮೋಶೆಯಂಥ ಪ್ರವಾದಿ ಆಗಿದ್ದನು ಹೇಗೆ?
    ಕಾವಲಿನಬುರುಜು—1992
  • ನೀವು ಸಿದ್ಧರಾಗಿದ್ದೀರೆಂದು ತೋರಿಸಿಕೊಡಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
ಇನ್ನಷ್ಟು
ಕಾವಲಿನಬುರುಜು—1995
w95 12/15 ಪು. 11-16

ಅವರು “ಹಾಗೆಯೇ ಮಾಡಿದರು”

“ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ.”—1 ಯೋಹಾನ 5:3.

1. ದೇವರ ಪ್ರೀತಿಯ ವಿಸ್ತಾರದ ಕುರಿತು ಏನನ್ನು ಹೇಳಸಾಧ್ಯವಿದೆ?

“ದೇವರು ಪ್ರೀತಿಸ್ವರೂಪಿಯು.” ದೇವರನ್ನು ಅರಿಯುವ ಮತ್ತು ಆತನ ಆಜೆಗ್ಞಳಿಗೆ ವಿಧೇಯತೆ ತೋರಿಸುವವರೆಲ್ಲರು, ಆ ಪ್ರೀತಿಯ ಗಾಢತೆಗಾಗಿ ಆಳವಾದ ಗಣ್ಯತೆಯನ್ನು ಪಡೆಯುತ್ತಾರೆ. “ನಾವು ದೇವರನ್ನು ಪ್ರೀತಿಸಿದರ್ದಲಿಯ್ಲಲ್ಲ, ಆತನು ನಮ್ಮನ್ನು ಪ್ರೀತಿಸಿ ನಮ್ಮ ಪಾಪನಿವಾರಣಾರ್ಥವಾಗಿ ತನ್ನ ಮಗನನ್ನು ಕಳುಹಿಸಿಕೊಟ್ಟದರಲ್ಲಿಯೇ ಪ್ರೀತಿಯ ನಿಜ ಗುಣವು ತೋರಿಬರುತ್ತದೆ.” ಯೇಸುವಿನ ಅಮೂಲ್ಯವಾದ ಪ್ರಾಯಶ್ಚಿತ್ತ ಯಜ್ಞದಲ್ಲಿ ನಾವು ನಂಬಿಕೆಯನ್ನು ನಿರ್ವಹಿಸಿದಂತೆ, ನಾವು ‘ದೇವರ ಪ್ರೀತಿಯಲ್ಲಿ ನೆಲೆಗೊಂಡಿರುತ್ತೇವೆ.’ (1 ಯೋಹಾನ 4:8-10, 16) ಹೀಗೆ, ನಾವು ಈಗ ಆತ್ಮಿಕ ಆಶೀರ್ವಾದಗಳ ವಿಪುಲತೆಯನ್ನು ಮತ್ತು ಬರಲಿರುವ ವಿಷಯಗಳ ವ್ಯವಸ್ಥೆಯಲ್ಲಿ ನಿತ್ಯಜೀವವನ್ನು ಅನುಭವಿಸಬಹುದು.—ಯೋಹಾನ 17:3; 1 ಯೋಹಾನ 2:15, 17.

2. ದೇವರ ಆಜ್ಞೆಗಳನ್ನು ಪಾಲಿಸುವುದು ಆತನ ಸೇವಕರಿಗೆ ಹೇಗೆ ಪ್ರಯೋಜನಕರವಾದದ್ದಾಗಿದೆ?

2 ದೇವರ ಆಜ್ಞೆಗಳನ್ನು ಪಾಲಿಸಿರುವವರ ಮತ್ತು ಫಲಸ್ವರೂಪವಾಗಿ ಹೇರಳವಾಗಿ ಆಶೀರ್ವದಿಸಲ್ಪಟ್ಟಿರುವವರ ಉದಾಹರಣೆಗಳಿಂದ ಬೈಬಲ್‌ ದಾಖಲೆಯು ತುಂಬಿರುತ್ತದೆ. ಇವರಲ್ಲಿ ಕ್ರೈಸ್ತ ಪೂರ್ವ ಸಾಕ್ಷಿಗಳು ಸೇರಿದ್ದಾರೆ; ಅವರಲ್ಲಿ ಕೆಲವರ ಕುರಿತು ಅಪೊಸ್ತಲ ಪೌಲನು ಹೀಗೆ ಬರೆದನು: “ಇವರೆಲ್ಲರು ವಾಗ್ದಾನದ ಫಲಗಳನ್ನು ಹೊಂದದೆ ಅವುಗಳನ್ನು ದೂರದಿಂದ ನೋಡಿ ಉಲ್ಲಾಸದೊಡನೆ ವಂದಿಸಿ ನಂಬಿಕೆಯುಳ್ಳವರಾಗಿ ಮೃತರಾದರು. ತಾವು ಭೂಮಿಯ ಮೇಲೆ ಪರದೇಶದವರೂ ಪ್ರವಾಸಿಗಳೂ ಆಗಿದ್ದೇವೆಂದು ಒಪ್ಪಿಕೊಂಡರು.” (ಇಬ್ರಿಯ 11:13) ತದನಂತರ, ದೇವರ ದೃಢನಿಷ್ಠೆಯುಳ್ಳ ಕ್ರೈಸ್ತ ಸೇವಕರು, ‘ಯೇಸು ಕ್ರಿಸ್ತನ ಮುಖಾಂತರ ಬಂದ ಕೃಪೆಯಿಂದ ಮತ್ತು ಸತ್ಯದಿಂದ’ ಪ್ರಯೋಜನಪಡೆದರು. (ಯೋಹಾನ 1:17) ಮಾನವ ಇತಿಹಾಸದ ಸುಮಾರು 6,000 ವರ್ಷಗಳಾದ್ಯಂತ, ಆತನ ಆಜೆಗ್ಞಳಿಗೆ ವಿಧೇಯರಾಗಿದ್ದ ನಂಬಿಗಸ್ತ ಸಾಕ್ಷಿಗಳನ್ನು ಯೆಹೋವನು ಬಹುಮಾನಿಸಿದ್ದಾನೆ; ಆ ಆಜ್ಞೆಗಳು ನಿಜವಾಗಿಯೂ “ಭಾರವಾದವುಗಳಲ್ಲ.”—1 ಯೋಹಾನ 5:2, 3.

ನೋಹನ ದಿನಗಳಲ್ಲಿ

3. ಯಾವ ವಿಧಗಳಲ್ಲಿ ನೋಹನು “ಹಾಗೆಯೇ” ಮಾಡಿದನು?

3 ಬೈಬಲ್‌ ದಾಖಲೆಯು ಹೇಳುವುದು: “ನಂಬಿಕೆಯಿಂದಲೇ ನೋಹನು ಅದು ವರೆಗೆ ಕಾಣದಿದ್ದ ಸಂಗತಿಗಳ ವಿಷಯವಾಗಿ ದೈವೂಕ್ತಿಯನ್ನು ಹೊಂದಿ ಭಯಭಕ್ತಿಯುಳ್ಳವನಾಗಿ ತನ್ನ ಮನೆಯವರ ಸಂರಕ್ಷಣೆಗೋಸ್ಕರ ನಾವೆಯನ್ನು ಕಟ್ಟಿ ಸಿದ್ಧಮಾಡಿದನು. ಅದರಿಂದ ಅವನು ಲೋಕದವರನ್ನು ದಂಡನೆಗೆ ಪಾತ್ರರೆಂದು ನಿರ್ಣಯಿಸಿಕೊಂಡು ನಂಬಿಕೆಯ ಫಲವಾದ ನೀತಿಗೆ ಬಾಧ್ಯನಾದನು.” “ಸುನೀತಿಯನ್ನು ಸಾರುವವ”ನೋಪಾದಿ, ನೋಹನು ಆಸನ್ನವಾಗಿದ್ದ ದೈವಿಕ ನ್ಯಾಯತೀರ್ಪಿನ ಕುರಿತು ಹಿಂಸಾಚಾರದ ಪ್ರಳಯ ಪೂರ್ವ ಲೋಕಕ್ಕೆ ಎಚ್ಚರಿಕೆ ನೀಡುತ್ತ, ದೇವರಿಗೆ ಪೂರ್ಣವಾಗಿ ವಿಧೇಯನಾದನು. (ಇಬ್ರಿಯ 11:7; 2 ಪೇತ್ರ 2:5) ನಾವೆಯನ್ನು ಕಟ್ಟುವುದರಲ್ಲಿ, ಅವನು ದೈವಿಕವಾಗಿ ಒದಗಿಸಲ್ಪಟ್ಟ ನೀಲಿನಕ್ಷೆಯನ್ನು ಜಾಗರೂಕವಾಗಿ ಅನುಸರಿಸಿದನು. ಅನಂತರ ಅವನು ಗೊತ್ತುಮಾಡಲ್ಪಟ್ಟ ಪ್ರಾಣಿಗಳನ್ನು ಮತ್ತು ಆಹಾರ ಸರಬರಾಯಿಗಳನ್ನು ಒಳಗೆ ತಂದನು. “ದೇವರು ಅವನಿಗೆ ಏನೆಲ್ಲ ಆಜ್ಞಾಪಿಸಿದನೊ ಅದಕ್ಕನುಸಾರ ಮಾಡಲು ನೋಹನು ಮುಂದೆಸಾಗಿದನು. ಅವನು ಹಾಗೆಯೇ ಮಾಡಿದನು.”—ಆದಿಕಾಂಡ 6:22, NW.

4, 5. (ಎ) ಈ ದಿನದ ವರೆಗೆ ಒಂದು ದುಷ್ಟ ಪ್ರಭಾವವು ಮಾನವಕುಲವನ್ನು ಹೇಗೆ ಪ್ರಭಾವಿಸಿದೆ? (ಬಿ) ದೈವಿಕ ಉಪದೇಶಗಳಿಗೆ ವಿಧೇಯರಾಗುವಲ್ಲಿ ನಾವು “ಹಾಗೆಯೇ” ಏಕೆ ಮಾಡತಕ್ಕದ್ದು?

4 ನೋಹ ಮತ್ತು ಅವನ ಕುಟುಂಬಕ್ಕೆ ಅವಿಧೇಯ ದೂತರ ದುಷ್ಟ ಪ್ರಭಾವದೊಂದಿಗೆ ಹೆಣಗಾಡಬೇಕಾಗಿತ್ತು. ದೇವರ ಈ ಪುತ್ರರು ಮಾನವ ದೇಹ ತಾಳಿ, ಸ್ತ್ರೀಯರೊಂದಿಗೆ ಸಹಜೀವನ ನಡೆಸಿ, ಮಾನವಕುಲವನ್ನು ಪೀಡಿಸಿದ ಅತಿಮಾನುಷ ಮಿಶ್ರಸಂತಾನವನ್ನು ಉತ್ಪಾದಿಸಿದರು. “ಭೂಲೋಕದವರು ದೇವರ ದೃಷ್ಟಿಗೆ ಕೆಟ್ಟುಹೋಗಿದ್ದರು; ಅನ್ಯಾಯವು ಲೋಕವನ್ನು ತುಂಬಿಕೊಂಡಿತ್ತು.” ಆ ದುಷ್ಟ ಸಂತತಿಯನ್ನು ನಾಶಮಾಡಲು ಯೆಹೋವನು ಮಹಾ ಪ್ರಳಯವನ್ನು ಕಳುಹಿಸಿದನು. (ಆದಿಕಾಂಡ 6:4, 11-17; 7:1) ನೋಹನ ದಿನದಂದಿನಿಂದ ಪೈಶಾಚಿಕ ದೂತರು ಮಾನವ ಸ್ವರೂಪದಲ್ಲಿ ರೂಪತಾಳುವಂತೆ ಅನುಮತಿಸಲ್ಪಟ್ಟಿರುವುದಿಲ್ಲ. ಆದರೂ, ‘ಇಡೀ ಲೋಕವು ದುಷ್ಟನ,’ ಪಿಶಾಚನಾದ ಸೈತಾನನ ‘ವಶದಲ್ಲಿರುತ್ತ ಮುಂದುವರಿಯುತ್ತದೆ.’ (1 ಯೋಹಾನ 5:19; ಪ್ರಕಟನೆ 12:9) ಪ್ರವಾದನಾತ್ಮಕವಾಗಿ, ಯೇಸು ನೋಹನ ದಿನದ ಆ ದಂಗೆಕೋರ ಸಂತತಿಯನ್ನು, 1914ರಲ್ಲಿ ಸುವ್ಯಕ್ತವಾಗಲು ತೊಡಗಿದ ತನ್ನ “ಸಾನ್ನಿಧ್ಯ”ದ ಸೂಚನೆಯ ಸಮಯದಿಂದ ಅವನನ್ನು ತಿರಸ್ಕರಿಸಿರುವ ಮಾನವಕುಲದ ಸಂತತಿಗೆ ಹೋಲಿಸಿದನು.—ಮತ್ತಾಯ 24:3, 34, 37-39; ಲೂಕ 17:26, 27.

5 ಇಂದು, ನೋಹನ ದಿನದಲ್ಲಾದಂತೆ, ಮಾನವಕುಲವನ್ನು ಮತ್ತು ನಮ್ಮ ಗ್ರಹವನ್ನು ನಾಶನಕ್ಕೆ ತರಲು ಸೈತಾನನು ಪ್ರಯತ್ನಿಸುತ್ತಿದ್ದಾನೆ. (ಪ್ರಕಟನೆ 11:15-18) ಆದಕಾರಣ ಈ ಪ್ರೇರಿತ ಆಜೆಗ್ಞೆ ನಾವು ಲಕ್ಷ್ಯಕೊಡುವುದು ಜರೂರಾದದ್ದು: “ಸೈತಾನನ ತಂತ್ರೋಪಾಯಗಳನ್ನು ನೀವು ಎದುರಿಸಿ ನಿಲ್ಲುವದಕ್ಕೆ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ.” (ಎಫೆಸ 6:11, ಪಾದಟಿಪ್ಪಣಿ, NW) ಇದರಲ್ಲಿ, ನಾವು ದೇವರ ವಾಕ್ಯವನ್ನು ಅಭ್ಯಸಿಸುವ ಮತ್ತು ಅದನ್ನು ನಮ್ಮ ಜೀವಿತಗಳಲ್ಲಿ ಅನ್ವಯಿಸುವ ಮೂಲಕ ಬಲಗೊಳಿಸಲ್ಪಡುತ್ತೇವೆ. ಇನ್ನೂ ಹೆಚ್ಚಾಗಿ, ನಾವು ಹೋಗಬೇಕಾದ ದಾರಿಯಲ್ಲಿ ನಮ್ಮನ್ನು ತಾಳ್ಮೆಯಿಂದ ಪರಿಪಾಲಿಸಲು, ಅದರ ಅಭಿಷಿಕ್ತ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಮತ್ತು ಅದರ ಪ್ರೀತಿಯ ಹಿರಿಯರೊಂದಿಗೆ ಯೆಹೋವನ ಕಾಳಜಿ ವಹಿಸುವ ಸಂಸ್ಥೆಯು ನಮಗಿದೆ. ನೆರವೇರಿಸಲು ನಮಗೊಂದು ಭೌಗೋಲಿಕ ಸಾರುವ ಕೆಲಸವಿದೆ. (ಮತ್ತಾಯ 24:14, 45-47) ದೈವಿಕ ಉಪದೇಶಗಳಿಗೆ ಅಷ್ಟೊಂದು ಜಾಗರೂಕವಾಗಿ ವಿಧೇಯನಾದ ನೋಹನಂತೆ, ನಾವು ಯಾವಾಗಲೂ “ಹಾಗೆಯೇ” ಮಾಡೋಣ.

ಮೋಶೆ—ಮನುಷ್ಯರಲ್ಲಿ ಅತಿ ದೀನನು

6, 7. (ಎ) ಯಾವ ಪ್ರತಿಫಲದಾಯಕ ಆಯ್ಕೆಯನ್ನು ಮೋಶೆಯು ಮಾಡಿದನು? (ಬಿ) ಯಾವ ಧೈರ್ಯವುಳ್ಳ ನಮೂನೆಯನ್ನು ಮೋಶೆಯು ನಮಗಾಗಿ ಇಟ್ಟನು?

6 ನಂಬಿಕೆಯ ಮತ್ತೊಬ್ಬ ಮನುಷ್ಯ—ಮೋಶೆಯನ್ನು ಪರಿಗಣಿಸಿರಿ. ಐಗುಪ್ತದ ಸುಖಭೋಗಗಳ ಮಧ್ಯೆ ಅವನೊಂದು ಭೋಗಾಸಕ್ತಿಯ ಜೀವಿತವನ್ನು ಅನುಭವಿಸಬಹುದಿತ್ತು. ಆದರೆ ಅವನು “ಸ್ವಲ್ಪಕಾಲ ಪಾಪಭೋಗಗಳನ್ನನುಭವಿಸುವದಕ್ಕಿಂತ ದೇವರ ಜನರೊಂದಿಗೆ ಕಷ್ಟವನ್ನನುಭವಿಸುವದೇ ಒಳ್ಳೇದೆಂದು ತೀರ್ಮಾನಿಸಿಕೊಂಡನು.” ಯೆಹೋವನ ನಿಯೋಜಿತ ಸೇವಕನೋಪಾದಿ, “ಬರುವ ಪ್ರತಿಫಲದ ಮೇಲೆ ಕಣ್ಣಿಟ್ಟಿದ್ದನು. [ಮತ್ತು] . . . ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನೋ ಎಂಬಂತೆ ದೃಢಚಿತ್ತನಾಗಿದ್ದನು.”—ಇಬ್ರಿಯ 11:23-28.

7 ಅರಣ್ಯಕಾಂಡ 12:3ರಲ್ಲಿ ನಾವು ಓದುವುದು: “ಆ ಮೋಶೆ ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಬಹುಸಾತ್ವಿಕನು [“ದೀನನು,” NW].” ವ್ಯತಿರೇಕವಾಗಿ, ಐಗುಪ್ತದ ಫರೋಹನು ಎಲ್ಲ ಮನುಷ್ಯರಲ್ಲಿ ಅತಿ ಪ್ರತಿಷ್ಠೆಯ ವ್ಯಕ್ತಿಯಂತೆ ವರ್ತಿಸಿದನು. ಫರೋಹನ ಮೇಲೆ ಬರಲಿರುವ ತನ್ನ ನ್ಯಾಯತೀರ್ಪನ್ನು ಘೋಷಿಸುವಂತೆ ಯೆಹೋವನು ಮೋಶೆ ಆರೋನರಿಗೆ ಆಜ್ಞಾಪಿಸಿದಾಗ, ಅವರು ಹೇಗೆ ಪ್ರತಿಕ್ರಿಯಿಸಿದರು? ನಾವು ಹೇಳಲ್ಪಟ್ಟಿರುವುದು: “ಯೆಹೋವನ ಆಜ್ಞೆಯಂತೆಯೇ ಮೋಶೆ ಆರೋನರು ಮಾಡಿದರು. ಅವರು ಹಾಗೆಯೇ ಮಾಡಿದರು.” (ವಿಮೋಚನಕಾಂಡ 7:4-7, NW) ಇಂದು ದೇವರ ನ್ಯಾಯತೀರ್ಪುಗಳನ್ನು ಘೋಷಿಸುವವರಾದ ನಮಗೆ ಎಂತಹ ಧೈರ್ಯವುಳ್ಳ ನಮೂನೆ!

8. “ಹಾಗೆಯೇ” ಮಾಡುವಂತೆ ಇಸ್ರಾಯೇಲ್ಯರು ಹೇಗೆ ಕೇಳಿಕೊಳ್ಳಲ್ಪಟ್ಟರು, ಮತ್ತು ಫಲಿತಾಂಶವಾಗಿ ಅನುಭವಿಸಲ್ಪಟ್ಟ ಹರ್ಷವು ಹತ್ತಿರದ ಭವಿಷ್ಯತ್ತಿನೊಂದಿಗೆ ಹೇಗೆ ಸಮಾಂತರಗೊಳಿಸಲ್ಪಡುವುದು?

8 ಇಸ್ರಾಯೇಲ್ಯರು ಮೋಶೆಗೆ ನಿಷ್ಠಾವಂತ ಬೆಂಬಲವನ್ನು ನೀಡಿದರೊ? ಹತ್ತು ಬಾಧೆಗಳಲ್ಲಿ ಒಂಬತ್ತರಿಂದ ಯೆಹೋವನು ಐಗುಪ್ತವನ್ನು ಹಿಂಸಿಸಿದ ತರುವಾಯ, ಇಸ್ರಾಯೇಲಿಗೆ ಪಸ್ಕವನ್ನು ಆಚರಿಸುವುದರ ಕುರಿತು ಸವಿಸ್ತಾರವಾದ ಉಪದೇಶಗಳನ್ನು ಆತನು ಕೊಟ್ಟನು. “ಜನರು ತಲೆಬಾಗಿ ನಮಸ್ಕರಿಸಿದರು. ತರುವಾಯ ಇಸ್ರಾಯೇಲ್ಯ ಪುತ್ರರು ಅಲ್ಲಿಂದ ಹೊರಟು, ಯೆಹೋವನು ಮೋಶೆ ಆರೋನರಿಗೆ ಆಜ್ಞಾಪಿಸಿದ ಪ್ರಕಾರವೇ ಮಾಡಿದರು. ಅವರು ಹಾಗೆಯೇ ಮಾಡಿದರು.” (ವಿಮೋಚನಕಾಂಡ 12:27, 28, NW) ವಿಶೇಷ ಘಟನೆಯುಳ್ಳ ಆ ದಿನ—ಸಾ.ಶ.ಪೂ. 1513, ನೈಸಾನ್‌ 14ರ ಮಧ್ಯರಾತ್ರಿಯಂದು, ದೇವರ ದೂತನು ಐಗುಪ್ತದ ಎಲ್ಲ ಚೊಚ್ಚಲುಮಕ್ಕಳನ್ನು ವಧಿಸಿದನು, ಆದರೆ ಇಸ್ರಾಯೇಲ್ಯ ಮನೆಗಳನ್ನು ದಾಟಿಹೋದನು. ಇಸ್ರಾಯೇಲಿನ ಚೊಚ್ಚಲುಮಕ್ಕಳು ಏಕೆ ಉಳಿಸಲ್ಪಟ್ಟರು? ಏಕೆಂದರೆ ಅವರು ತಮ್ಮ ಮನೆಬಾಗಿಲುಗಳ ಮೇಲೆ ಚಿಮುಕಿಸಲ್ಪಟ್ಟಿದ್ದ ಪಸ್ಕದ ಕುರಿಮರಿಯ ರಕ್ತದಲ್ಲಿ ಸಂರಕ್ಷಣೆಯನ್ನು ಕಂಡುಕೊಂಡಿದ್ದರು. ಯೆಹೋವನು ಮೋಶೆ ಆರೋನರಿಗೆ ಆಜ್ಞಾಪಿಸಿದಂತೆಯೇ ಅವರು ಮಾಡಿದ್ದರು. ಹೌದು, “ಅವರು ಹಾಗೆಯೇ ಮಾಡಿದರು.” (ವಿಮೋಚನಕಾಂಡ 12:50, 51, NW) ಕೆಂಪು ಸಮುದ್ರದ ಬಳಿ, ಫರೋಹನನ್ನು ಮತ್ತು ಅವನ ಬಲಿಷ್ಠ ಸೈನಿಕ ಯಂತ್ರವನ್ನು ನಾಶಗೊಳಿಸಿದಾಗ, ಯೆಹೋವನು ತನ್ನ ವಿಧೇಯ ಜನರನ್ನು ಕಾಪಾಡುವುದರಲ್ಲಿ ಮತ್ತೊಂದು ಅದ್ಭುತಕಾರ್ಯವನ್ನು ನಡೆಸಿದನು. ಇಸ್ರಾಯೇಲ್ಯರು ಎಷ್ಟೊಂದು ಅತ್ಯಾನಂದಪಟ್ಟರು! ತದ್ರೀತಿಯಲ್ಲಿ ಇಂದು, ಯೆಹೋವನ ಆಜೆಗ್ಞಳಿಗೆ ವಿಧೇಯರಾಗಿರುವ ಅನೇಕರು, ಅರ್ಮಗೆದೋನಿನಲ್ಲಿ ಆತನ ನಿರ್ದೋಷೀಕರಣದ ಪ್ರತ್ಯಕ್ಷ ಸಾಕ್ಷಿಗಳಾಗಿರಲು ಹರ್ಷಿಸುವರು.—ವಿಮೋಚನಕಾಂಡ 15:1, 2; ಪ್ರಕಟನೆ 15:3, 4.

9. ಸಾಕ್ಷಿಗುಡಾರದ ಸಂಬಂಧದಲ್ಲಿ ಇಸ್ರಾಯೇಲ್ಯರ “ಹಾಗೆಯೇ” ಮಾಡುವಿಕೆಯಿಂದ ಯಾವ ಆಧುನಿಕ ದಿನದ ಸುಯೋಗಗಳು ಮುನ್‌ಸೂಚಿಸಲ್ಪಟ್ಟಿವೆ?

9 ಚಂದಾವನ್ನು ಎತ್ತುವಂತೆ ಮತ್ತು ಅರಣ್ಯದಲ್ಲಿ ಒಂದು ಸಾಕ್ಷಿಗುಡಾರವನ್ನು ಕಟ್ಟುವಂತೆ ಯೆಹೋವನು ಇಸ್ರಾಯೇಲಿಗೆ ಆಜ್ಞೆ ಕೊಟ್ಟಾಗ, ಜನರು ಉದಾರವಾಗಿ ತಮ್ಮ ಪೂರ್ಣ ಬೆಂಬಲವನ್ನು ನೀಡಿದರು. ಆಮೇಲೆ, ಅತ್ಯಲ್ಪ ವಿವರದ ವಿಷಯದಲ್ಲೂ ಮೋಶೆ ಮತ್ತು ಅವನ ಸಿದ್ಧಮನಸ್ಸಿನ ಜೊತೆಕಾರ್ಮಿಕರು ಯೆಹೋವನಿಂದ ಒದಗಿಸಲ್ಪಟ್ಟ ಕಟ್ಟಡ ರಚನೆಯ ಯೋಜನೆಗಳನ್ನು ಅನುಸರಿಸಿದರು. “ಈ ರೀತಿಯಲ್ಲಿ ದೇವದರ್ಶನದ ಗುಡಾರದ ಕೆಲಸವೆಲ್ಲಾ ಸಂಪೂರ್ತಿಯಾಯಿತು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಾಯೇಲ್ಯರು ಅದನ್ನು ಮಾಡಿದ್ದರು. ಅವರು ಹಾಗೆಯೇ ಮಾಡಿದರು.” ತದ್ರೀತಿಯಲ್ಲಿ, ಯಾಜಕತ್ವದ ಪ್ರಾರಂಭೋತ್ಸವದ ಸಮಯದಲ್ಲಿ, “ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆ ಎಲ್ಲವನ್ನು ಮಾಡಿದನು. ಅವನು ಹಾಗೆಯೇ ಮಾಡಿದನು.” (ವಿಮೋಚನಕಾಂಡ 39:32, NW; 40:16, NW) ಆಧುನಿಕ ಸಮಯಗಳಲ್ಲಿ, ಸಾರುವ ಕೆಲಸಕ್ಕೆ ಮತ್ತು ರಾಜ್ಯದ ವಿಸ್ತರಣೆಗಾಗಿರುವ ಕಾರ್ಯಕ್ರಮಗಳಿಗೆ ಮನಃಪೂರ್ತಿಯಾದ ಬೆಂಬಲವನ್ನು ನೀಡುವ ಅವಕಾಶ ನಮಗಿದೆ. ಆದುದರಿಂದ “ಹಾಗೆಯೇ” ಮಾಡುವುದರಲ್ಲಿ ಐಕ್ಯರಾಗುವ ಸುಯೋಗ ನಮ್ಮದಾಗಿದೆ.

ಯೆಹೋಶುವ—ಧೈರ್ಯವಂತನು ಮತ್ತು ಬಹಳ ಪ್ರಬಲನು

10, 11. (ಎ) ಯಶಸ್ಸಿಗಾಗಿ ಯೆಹೋಶುವನನ್ನು ಯಾವುದು ಸಜ್ಜುಗೊಳಿಸಿತು? (ಬಿ) ಆಧುನಿಕ ದಿನದ ಪರೀಕ್ಷೆಗಳನ್ನು ನಿಭಾಯಿಸುವಂತೆ ನಾವು ಹೇಗೆ ಬಲಗೊಳಿಸಲ್ಪಡಬಹುದು?

10 ವಾಗ್ದತ್ತ ದೇಶದೊಳಗೆ ಇಸ್ರಾಯೇಲನ್ನು ನಡೆಸುವಂತೆ ಮೋಶೆಯು ಯೆಹೋಶುವನನ್ನು ನಿಯೋಜಿಸಿದಾಗ, ಯೆಹೋವನ ಪ್ರೇರಿತವಾದ ಲಿಖಿತ ವಾಕ್ಯವು ಬಹುಶಃ ಮೋಶೆಯ ಐದು ಪುಸ್ತಕಗಳಲ್ಲಿ, ಒಂದೆರಡು ಕೀರ್ತನೆಗಳಲ್ಲಿ ಮತ್ತು ಯೋಬನ ಪುಸ್ತಕದಲ್ಲಿ ಮಾತ್ರ ಲಭ್ಯವಾಗಿತ್ತು. ವಾಗ್ದತ್ತ ದೇಶವನ್ನು ಅವರು ತಲಪಿದಾಗ, ಜನರನ್ನು ಒಟ್ಟುಗೂಡಿಸುವಂತೆ ಮತ್ತು “ಅವರೆಲ್ಲರಿಗೂ ಕೇಳಿಸುವಂತೆ ಈ ಧರ್ಮಶಾಸ್ತ್ರವನ್ನು ಅವರ ಮುಂದೆ ಓದು”ವಂತೆ, ಮೋಶೆ ಯೆಹೋಶುವನಿಗೆ ಉಪದೇಶ ನೀಡಿದ್ದನು. (ಧರ್ಮೋಪದೇಶಕಾಂಡ 31:10-12) ಅಷ್ಟಲ್ಲದೆ, ಸ್ವತಃ ಯೆಹೋವನೇ ಯೆಹೋಶುವನಿಗೆ ಆಜ್ಞೆ ಕೊಟ್ಟದ್ದು: “ಈ ಧರ್ಮಶಾಸ್ತ್ರವು ಯಾವಾಗಲೂ ನಿನ್ನ ಬಾಯಲ್ಲಿರಲಿ; ಹಗಲಿರುಳು ಅದನ್ನು ಧ್ಯಾನಿಸುತ್ತಾ ಅದರಲ್ಲಿ ಬರೆದಿರುವದನ್ನೆಲ್ಲಾ ಕೈಕೊಂಡು ನಡಿ. ಆಗ ನಿನ್ನ ಮಾರ್ಗದಲ್ಲೆಲ್ಲಾ ಸಫಲನಾಗುವಿ, ಕೃತಾರ್ಥನಾಗುವಿ.”—ಯೆಹೋಶುವ 1:8.

11 ಯೆಹೋವನ ವಾಕ್ಯವಾದ ಬೈಬಲಿನ ದೈನಿಕ ವಾಚನವು, ಈ ಕಠಿನವಾದ “ಕಡೇ ದಿವಸಗಳ” ಪರೀಕ್ಷೆಗಳನ್ನು ನಿಭಾಯಿಸುವಂತೆ ತನ್ನ ಆಧುನಿಕ ದಿನದ ಸಾಕ್ಷಿಗಳನ್ನು ಬಲಪಡಿಸುವಂತೆಯೇ, ಯೆಹೋವನ “ಧರ್ಮಶಾಸ್ತ್ರ”ದ ದೈನಿಕ ವಾಚನವು ಮುಂದಿದ್ದ ಪರೀಕ್ಷೆಗಳನ್ನು ನಿರ್ವಹಿಸಲು ಯೆಹೋಶುವನನ್ನು ಸಜ್ಜುಗೊಳಿಸಿತು. (2 ತಿಮೊಥೆಯ 3:1) ನಾವು ಒಂದು ಹಿಂಸಾತ್ಮಕ ಲೋಕದಿಂದ ಸುತ್ತುವರಿಯಲ್ಪಟ್ಟಿರುವುದು ಸತ್ಯವಾಗಿರುವಂತೆಯೇ, ಯೆಹೋಶುವನಿಗೆ ದೇವರು ನೀಡಿದ ಬುದ್ಧಿವಾದವನ್ನು ನಾವು ಸಹ ಹೃದಯಕ್ಕೆ ತೆಗೆದುಕೊಳ್ಳೋಣ: “ಸ್ಥಿರಚಿತ್ತನಾಗಿರು, ಧೈರ್ಯದಿಂದಿರು, ಅಂಜಬೇಡ, ಕಳವಳಗೊಳ್ಳಬೇಡ. ನೀನು ಹೋಗುವಲ್ಲೆಲ್ಲಾ ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುತ್ತಾನೆ.” (ಯೆಹೋಶುವ 1:9) ಕಾನಾನ್‌ ದೇಶವನ್ನು ಜಯಿಸಿದ ತರುವಾಯ, ಇಸ್ರಾಯೇಲಿನ ಗೋತ್ರಗಳು ತಮ್ಮ ಪಿತ್ರಾರ್ಜಿತ ಬಾಧ್ಯತೆಯಲ್ಲಿ ನೆಲೆಗೊಳ್ಳುತ್ತಿದ್ದಾಗ ಹೇರಳವಾಗಿ ಬಹುಮಾನಿಸಲ್ಪಟ್ಟವು. “ಯೆಹೋವನು ಮೋಶೆಗೆ ಆಜ್ಞಾಪಿಸಿದಂತಯೇ ಇಸ್ರಾಯೇಲ್ಯ ಪುತ್ರರು ಮಾಡಿದರು.” (ಯೆಹೋಶುವ 14:5, NW) ವಿಧೇಯತೆಯಿಂದ “ಹಾಗೆಯೇ” ಮಾಡುತ್ತಾ, ಇಂದು ದೇವರ ವಾಕ್ಯವನ್ನು ಓದುವ ಮತ್ತು ಅದನ್ನು ನಮ್ಮ ಜೀವಿತಗಳಲ್ಲಿ ಅನ್ವಯಿಸುವ ನಮಗೆಲ್ಲರಿಗೂ ತದ್ರೀತಿಯ ಬಹುಮಾನವು ಕಾದಿರುತ್ತದೆ.

ಅರಸರು—ನಂಬಿಗಸ್ತರು ಮತ್ತು ಅವಿಧೇಯರು

12. (ಎ) ಇಸ್ರಾಯೇಲಿನಲ್ಲಿ ಅರಸರಿಗೆ ಯಾವ ಆಜ್ಞೆಯು ಕೊಡಲ್ಪಟ್ಟಿತು? (ಬಿ) ವಿಧೇಯರಾಗಲು ಅರಸರ ಅಸಫಲತೆಯು ಯಾವುದರಲ್ಲಿ ಫಲಿಸಿತು?

12 ಇಸ್ರಾಯೇಲಿನಲ್ಲಿದ್ದ ಅರಸರ ಕುರಿತೇನು? ಯೆಹೋವನು ಅರಸನ ಮೇಲೆ ಈ ಆವಶ್ಯಕತೆಯನ್ನು ಇರಿಸಿದ್ದನು: “ಅವನು ರಾಜ್ಯಾಧಿಕಾರಕ್ಕೆ ಬಂದಾಗ ಯಾಜಕ ಸೇವೆಮಾಡುವ ಲೇವಿಯರ ವಶದಲ್ಲಿರುವ ಈ ಧರ್ಮಶಾಸ್ತ್ರಗ್ರಂಥದ ಒಂದು ಪ್ರತಿಯನ್ನು ತನಗೋಸ್ಕರ ಪುಸ್ತಕರೂಪವಾಗಿ ಬರೆಯಿಸಿಕೊಳ್ಳಬೇಕು. . . . ಯೆಹೋವನ ಆಜ್ಞೆಯನ್ನು ಮೀರಿ ಎಡಬಲಕ್ಕೆ ತಿರುಗಿಕೊಳ್ಳದೆ ತನ್ನ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಈ ಧರ್ಮಶಾಸ್ತ್ರದ ಎಲ್ಲಾ ವಾಕ್ಯಗಳನ್ನೂ ವಿಧಿಗಳನ್ನೂ ಅನುಸರಿಸುವದಕ್ಕೆ ಅಭ್ಯಾಸಮಾಡಿಕೊಳ್ಳುವಂತೆ ಈ ಗ್ರಂಥವು ಅವನ ಬಳಿಯಲ್ಲೇ ಇರಬೇಕು; ಅವನು ತನ್ನ ಜೀವಮಾನದ ದಿನಗಳೆಲ್ಲಾ ಅದರಲ್ಲಿ ಓದಿಕೊಳ್ಳುತ್ತಾ ಇರಬೇಕು.” (ಧರ್ಮೋಪದೇಶಕಾಂಡ 17:18, 19) ಇಸ್ರಾಯೇಲಿನ ಅರಸರು ಆ ಆಜೆಗ್ಞೆ ವಿಧೇಯರಾದರೊ? ಸಾಮಾನ್ಯವಾಗಿ, ಅವರು ಶೋಚನೀಯವಾಗಿ ವಿಫಲರಾದರು, ಆದುದರಿಂದ ಅವರು ಧರ್ಮೋಪದೇಶಕಾಂಡ 28:15-68ರಲ್ಲಿ ಮುಂತಿಳಿಸಲ್ಪಟ್ಟ ಶಾಪಗಳನ್ನು ಅನುಭವಿಸಿದರು. ಕೊನೆಯದಾಗಿ, ಇಸ್ರಾಯೇಲ್‌ “ಭೂಮಂಡಲದ ಚತುರ್ದಿಕ್ಕುಗಳಲ್ಲಿ . . . ಚದುರಿಸ”ಲ್ಪಟ್ಟಿತು.

13. ಯೆಹೋವನ ವಾಕ್ಯಕ್ಕಾಗಿ ಪ್ರೀತಿಯನ್ನು ತೋರಿಸುವ ಮೂಲಕ ದಾವೀದನಂತೆ ನಾವು ಹೇಗೆ ಪ್ರಯೋಜನ ಪಡೆಯಬಹುದು?

13 ಹಾಗಿದ್ದರೂ, ಇಸ್ರಾಯೇಲಿನಲ್ಲಿನ ಪ್ರಥಮ ನಂಬಿಗಸ್ತ ಮಾನವ ಅರಸನಾದ ದಾವೀದನು, ಯೆಹೋವನಿಗೆ ವಿಶೇಷವಾದ ಭಕ್ತಿಯನ್ನು ತೋರಿಸಿದನು. ಅವನು ಜಯಿಸುವ ‘ಯೂದಾ ಕುಲದಲ್ಲಿ ಜನಿಸಿದ ಸಿಂಹವೂ ದಾವೀದನ ಅಂಕುರದವನೂ ಆಗಿರುವ’ ಕ್ರಿಸ್ತ ಯೇಸುವನ್ನು ಮುನ್‌ಸೂಚಿಸುತ್ತಾ, ‘ಯೆಹೂದದಲ್ಲಿ ಪ್ರಾಯದ ಸಿಂಹದಂತಿದ್ದನು.’ (ಆದಿಕಾಂಡ 49:8, 9; ಪ್ರಕಟನೆ 5:5) ದಾವೀದನ ಬಲವು ಯಾವುದರಲ್ಲಿ ಅಡಗಿತ್ತು? ಯೆಹೋವನ ಲಿಖಿತ ವಾಕ್ಯಕ್ಕಾಗಿ ಅವನಲ್ಲಿ ಆಳವಾದ ಗಣ್ಯತೆಯಿತ್ತು ಮತ್ತು ಅದಕ್ಕನುಗುಣವಾಗಿ ಅವನು ಜೀವಿಸಿದನು. “ದಾವೀದನ ಕೀರ್ತನೆ”ಯಾದ ಕೀರ್ತನೆ 19ರಲ್ಲಿ ನಾವು ಓದುವುದು: “ಯೆಹೋವನ ಧರ್ಮಶಾಸ್ತ್ರವು ಲೋಪವಿಲ್ಲದ್ದು.” ಯೆಹೋವನ ಕಟ್ಟಳೆ, ನಿಯಮಗಳು, ಆಜ್ಞೆ ಮತ್ತು ವಿಧಿಗಳ ಕುರಿತು ಸೂಚಿಸಿಯಾದ ಮೇಲೆ, ದಾವೀದನು ಹೀಗೆ ಹೇಳುತ್ತ ಮುಂದುವರಿಸುತ್ತಾನೆ: “ಅವು ಬಂಗಾರಕ್ಕಿಂತಲೂ ಅಪರಂಜಿರಾಶಿಗಿಂತಲೂ ಅಪೇಕ್ಷಿಸತಕ್ಕವುಗಳು. ಅವು ಜೇನಿಗಿಂತಲೂ ಶೋಧಿಸಿದ ಜೇನುತುಪ್ಪಕ್ಕಿಂತಲೂ ಸಿಹಿಯಾಗಿವೆ. ಅವುಗಳ ಮೂಲಕ ನಿನ್ನ ದಾಸನಿಗೆ ಎಚ್ಚರಿಕೆಯಾಗುತ್ತದೆ; ಅವುಗಳನ್ನು ಕೈಕೊಳ್ಳುವದರಿಂದ ಬಹಳ ಫಲ ಉಂಟಾಗುತ್ತದೆ.” (ಕೀರ್ತನೆ 19:7-11) ಯೆಹೋವನ ವಾಕ್ಯದ ದೈನಿಕ ವಾಚನ ಮತ್ತು ಅದರ ಕುರಿತಾದ ಮನನವು 3,000 ವರ್ಷಗಳ ಹಿಂದೆ ಪ್ರತಿಫಲದಾಯಕವಾಗಿದ್ದರೆ, ಇಂದು ಅದು ಎಷ್ಟೊಂದು ಹೆಚ್ಚು ಪ್ರತಿಫಲದಾಯಕವಾಗಿದೆ!—ಕೀರ್ತನೆ 1:1-3; 13:6; 119:72, 97, 111.

14. ಜ್ಞಾನಕ್ಕಿಂತ ಹೆಚ್ಚಿನ ವಿಷಯದ ಅಗತ್ಯವನ್ನು ಸೊಲೊಮೋನನ ಮಾರ್ಗಕ್ರಮವು ಯಾವ ವಿಧದಲ್ಲಿ ತೋರಿಸುತ್ತದೆ?

14 ಆದರೂ, ಕೇವಲ ಜ್ಞಾನವನ್ನು ಸಂಪಾದಿಸುವುದು ಸಾಕಾಗಿರುವುದಿಲ್ಲ. ದೇವರ ಸೇವಕರಿಗೆ ಆ ಜ್ಞಾನಕ್ಕನುಸಾರವಾಗಿ ಕಾರ್ಯಮಾಡುವುದು, ದೈವಿಕ ಚಿತ್ತಕ್ಕನುಸಾರ ಅದನ್ನು ಅನ್ವಯಿಸುವುದು, ಹೌದು “ಹಾಗೆಯೇ” ಮಾಡುವುದು ಸಹ ಅಗತ್ಯವಾಗಿದೆ. ಯಾರನ್ನು ಯೆಹೋವನು, “ಯೆಹೋವನ ರಾಜ್ಯಸಿಂಹಾಸನವಾಗಿರುವ ಇಸ್ರಾಯೇಲ್‌ಸಿಂಹಾಸನದ ಮೇಲೆ ಕುಳ್ಳಿರಿಸುವದಕ್ಕೋಸ್ಕರ ಆರಿಸಿಕೊಂಡ”ನೊ, ಆ ದಾವೀದನ ಮಗನಾದ ಸೊಲೊಮೋನನ ವಿಷಯದಲ್ಲಿ ಇದನ್ನು ದೃಷ್ಟಾಂತಿಸಸಾಧ್ಯವಿದೆ. “ಪ್ರೇರಣೆಯ ಮೂಲಕ” ದಾವೀದನು ಪಡೆದ ಕಟ್ಟಡ ರಚನೆಯ ಯೋಜನೆಗಳನ್ನು ಉಪಯೋಗಿಸುತ್ತಾ, ದೇವಾಲಯವನ್ನು ಕಟ್ಟುವ ನೇಮಕವನ್ನು ಸೊಲೊಮೋನನು ಪಡೆದನು. (1 ಪೂರ್ವಕಾಲವೃತ್ತಾಂತ 28:5, 11-13) ಈ ಮಹತ್ತರವಾದ ಕೆಲಸವನ್ನು ಸೊಲೊಮೋನನು ಹೇಗೆ ಪೂರೈಸಸಾಧ್ಯವಿತ್ತು? ಒಂದು ಪ್ರಾರ್ಥನೆಗೆ ಉತ್ತರವಾಗಿ, ಯೆಹೋವನು ಅವನಿಗೆ ವಿವೇಕ ಮತ್ತು ಜ್ಞಾನವನ್ನು ದಯಪಾಲಿಸಿದನು. ಇವುಗಳೊಂದಿಗೆ ಮತ್ತು ದೈವಿಕವಾಗಿ ಒದಗಿಸಲ್ಪಟ್ಟ ಯೋಜನೆಗಳಿಗೆ ಬಲವಾಗಿ ಅಂಟಿಕೊಳ್ಳುವ ಮೂಲಕ, ಯೆಹೋವನ ಮಹಿಮೆಯಿಂದ ತುಂಬಿದ ಆ ಅತ್ಯುತ್ಕೃಷವ್ಟಾದ ಮನೆಯನ್ನು ನಿರ್ಮಿಸಲು ಸೊಲೊಮೋನನು ಶಕ್ತನಾದನು. (2 ಪೂರ್ವಕಾಲವೃತ್ತಾಂತ 7:2, 3) ಆದರೆ, ತದನಂತರ ಸೊಲೊಮೋನನು ವಿಫಲನಾದನು. ಯಾವ ವಿಷಯದಲ್ಲಿ? ಇಸ್ರಾಯೇಲಿನಲ್ಲಿನ ಅರಸನ ಕುರಿತಾಗಿ ಯೆಹೋವನ ಧರ್ಮಶಾಸ್ತ್ರವು ಹೀಗೆ ಹೇಳಿತ್ತು: “ಅವನು ಅನೇಕ ಸ್ತ್ರೀಯರನ್ನು ಮದುವೆಮಾಡಿಕೊಳ್ಳಬಾರದು; ಮಾಡಿಕೊಂಡರೆ ಅವನ ಮನಸ್ಸು ಯೆಹೋವನ ಕಡೆಯಿಂದ ತಿರುಗುವದಕ್ಕೆ ಅವಕಾಶವಾಗುವದು.” (ಧರ್ಮೋಪದೇಶಕಾಂಡ 17:17) ಆದರೂ, ಸೊಲೊಮೋನನಿಗೆ “ಏಳುನೂರು ಮಂದಿ ಪತ್ನಿಯರಲ್ಲದೆ ಮುನ್ನೂರು ಮಂದಿ ಉಪಪತ್ನಿಯರಿದ್ದರು. ಈ ಸ್ತ್ರೀಯರು . . . ಅವನ ಹೃದಯವನ್ನು ಅನ್ಯದೇವತೆಗಳ ಕಡೆಗೆ ತಿರುಗಿಸಿದರು.” ತನ್ನ ತದನಂತರದ ವರ್ಷಗಳಲ್ಲಿ, ಸೊಲೊಮೋನನು “ಹಾಗೆಯೇ” ಮಾಡುವುದರಿಂದ ವಿಮುಖನಾದನು.—1 ಅರಸುಗಳು 11:3, 4; ನೆಹೆಮೀಯ 13:26.

15. ಯೋಷೀಯನು “ಹಾಗೆಯೇ” ಮಾಡಿದ್ದು ಹೇಗೆ?

15 ಯೆಹೂದದಲ್ಲಿ ಕೆಲವು ವಿಧೇಯ ಅರಸರಿದ್ದರು, ಅವರಲ್ಲಿ ಕೊನೆಯವನು ಯೋಷೀಯನಾಗಿದ್ದನು. ಸಾ.ಶ.ಪೂ. 648ರ ವರ್ಷದಲ್ಲಿ, ಅವನು ದೇಶದಿಂದ ಮೂರ್ತಿಪೂಜೆಯನ್ನು ತೆಗೆದುಹಾಕಲು ಮತ್ತು ಯೆಹೋವನ ಮಂದಿರವನ್ನು ನವೀಕರಿಸಲು ತೊಡಗಿದನು. ಮಹಾಯಾಜಕನು “ಮೋಶೆಯ ಮುಖಾಂತರವಾಗಿ ಕೊಡಲ್ಪಟ್ಟ ಯೆಹೋವನ ಧರ್ಮೋಪದೇಶದ ಗ್ರಂಥ”ವನ್ನು ಕಂಡುಕೊಂಡದ್ದು ಅಲ್ಲಿಯೇ. ಇದರ ಕುರಿತು ಯೋಷೀಯನು ಏನು ಮಾಡಿದನು? “ಅನಂತರ ಅರಸನು ದೂತರ ಮುಖಾಂತರ ಯೆರೂಸಲೇಮಿನ ಮತ್ತು ಯೆಹೂದದ ಎಲ್ಲಾ ಹಿರಿಯರನ್ನು ಕೂಡಿಸಿ ಯೆರೂಸಲೇಮಿನವರನ್ನೂ ಬೇರೆ ಎಲ್ಲಾ ಯೆಹೂದ್ಯರನ್ನೂ ಯಾಜಕರನ್ನೂ ಲೇವಿಯರನ್ನೂ ಕರಕೊಂಡು ಯೆಹೋವನ ಆಲಯಕ್ಕೆ ಹೋದನು. ದೊಡ್ಡವರು ಮೊದಲುಗೊಂಡು ಚಿಕ್ಕವರ ವರೆಗೆ ಎಲ್ಲರೂ ಅವನನ್ನು ಹಿಂಬಾಲಿಸಿದರು ಅಲ್ಲಿ ಅವನು ಎಲ್ಲರಿಗೂ ಕೇಳಿಸುವಂತೆ ಯೆಹೋವನ ಆಲಯದಲ್ಲಿ ಸಿಕ್ಕಿದ ನಿಬಂಧನಗ್ರಂಥವನ್ನು ಸಂಪೂರ್ಣವಾಗಿ ಓದಿಸಿ ತನ್ನ ಸ್ಥಳದಲ್ಲಿ ನಿಂತು ತಾನು ಯೆಹೋವನ ಮಾರ್ಗದಲ್ಲಿ ನಡೆಯುವದಾಗಿಯೂ ಆತನ ಆಜ್ಞಾನಿಯಮವಿಧಿಗಳನ್ನು ಪೂರ್ಣಮನಸ್ಸಿನಿಂದಲೂ ಪೂರ್ಣಪ್ರಾಣದಿಂದಲೂ ಕೈಕೊಳ್ಳುವದಾಗಿಯೂ ನಿಬಂಧನಗ್ರಂಥದಲ್ಲಿ ಬರೆದಿರುವ ಎಲ್ಲಾ ವಾಕ್ಯಗಳನ್ನು ನೆರವೇರಿಸುವದಾಗಿಯೂ ಯೆಹೋವನಿಗೆ ಪ್ರಮಾಣಮಾಡಿದನು.” (2 ಪೂರ್ವಕಾಲವೃತ್ತಾಂತ 34:14, 29-31) ಹೌದು, ಯೋಷೀಯನು “ಹಾಗೆಯೇ ಮಾಡಿದನು.” ತನ್ನ ನಂಬಿಗಸ್ತ ಮಾರ್ಗಕ್ರಮದ ಫಲವಾಗಿ, ನಂಬಿಕೆಯಿಲ್ಲದ ಯೆಹೂದದ ಮೇಲೆ ಯೆಹೋವನ ನ್ಯಾಯತೀರ್ಪಿನ ನಿರ್ವಹಣೆಯು ಅವನ ತಪ್ಪಿತಸ್ಥ ಪುತ್ರರ ದಿನಗಳ ವರೆಗೆ ತಡೆಹಿಡಿಯಲ್ಪಟ್ಟಿತು.

ದೇವರ ವಾಕ್ಯಕ್ಕನುಸಾರ ಜೀವಿಸುವುದು

16, 17. (ಎ) ಯಾವ ವಿಷಯಗಳಲ್ಲಿ ನಾವು ಯೇಸುವಿನ ಹೆಜ್ಜೆಜಾಡುಗಳನ್ನು ಅನುಸರಿಸಬೇಕು? (ಬಿ) ದೇವರ ಬೇರೆ ಯಾವ ನಂಬಿಗಸ್ತ ಸೇವಕರು ನಮಗೆ ಉದಾಹರಣೆಗಳನ್ನು ಒದಗಿಸುತ್ತಾರೆ?

16 ಜೀವಿಸಿರುವ ಸಕಲ ಮನುಷ್ಯರಲ್ಲಿ ದೇವರ ವಾಕ್ಯದ ಮೇಲೆ ಮನನ ಮಾಡುವ ಮತ್ತು ಅದಕ್ಕನುಗುಣವಾಗಿ ಜೀವಿಸುವುದರ ಅತ್ಯುತ್ತಮ ಉದಾಹರಣೆಯು, ಕರ್ತನಾದ ಯೇಸು ಕ್ರಿಸ್ತನದ್ದಾಗಿದೆ. ದೇವರ ವಾಕ್ಯವು ಅವನಿಗೆ ಆಹಾರದಂತಿತ್ತು. (ಯೋಹಾನ 4:34) ಅವನು ತನ್ನ ಕೇಳುಗರಿಗೆ ಹೇಳಿದ್ದು: “ತಂದೆಯು ಮಾಡುವದನ್ನು ಕಂಡು ಮಗನು ಮಾಡುತ್ತಾನೆ ಹೊರತು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು; ಆತನು ಮಾಡುವದನ್ನೆಲ್ಲಾ ಹಾಗೆಯೇ ಮಗನೂ ಮಾಡುತ್ತಾನೆ.” (ಯೋಹಾನ 5:19, 30; 7:28; 8:28, 42) “ನನ್ನ ಚಿತ್ತದಂತೆ ನಡೆಯುವದಕ್ಕಾಗಿ ನಾನು ಬಂದಿಲ್ಲ, ನನ್ನನ್ನು ಕಳುಹಿಸಿದಾತನ ಚಿತ್ತವನ್ನೇ ನೆರವೇರಿಸುವದಕ್ಕೆ ಪರಲೋಕದಿಂದ ಬಂದೆನು,” ಎಂದು ಘೋಷಿಸುತ್ತಾ, ಯೇಸು “ಹಾಗೆಯೇ ಮಾಡಿದನು.” (ಯೋಹಾನ 6:38) ಯೇಸುವಿನ ಹೆಜ್ಜೆಜಾಡುಗಳನ್ನು ಅನುಸರಿಸುವ ಮೂಲಕ, ಯೆಹೋವನ ಸಮರ್ಪಿತ ಸಾಕ್ಷಿಗಳಾದ ನಾವು, “ಹಾಗೆಯೇ” ಮಾಡುವಂತೆ ಆಹ್ವಾನಿಸಲ್ಪಟ್ಟಿದ್ದೇವೆ.—ಲೂಕ 9:23; 14:27; 1 ಪೇತ್ರ 2:21.

17 ದೇವರ ಚಿತ್ತವನ್ನು ಮಾಡುವುದು ಯೇಸುವಿನ ಮನಸ್ಸಿನಲ್ಲಿ ಯಾವಾಗಲೂ ಪ್ರಮುಖವಾದ ವಿಷಯವಾಗಿತ್ತು. ಅವನು ದೇವರ ವಾಕ್ಯದೊಂದಿಗೆ ಸಂಪೂರ್ಣವಾಗಿ ಚಿರಪರಿಚಿತನಾಗಿದ್ದನು ಮತ್ತು ಹೀಗೆ ಶಾಸ್ತ್ರೀಯ ಉತ್ತರಗಳನ್ನು ಕೊಡಲು ಸಿದ್ಧನಾಗಿದ್ದನು. (ಮತ್ತಾಯ 4:1-11; 12:24-31) ದೇವರ ವಾಕ್ಯಕ್ಕೆ ಸತತವಾದ ಗಮನವನ್ನು ನೀಡುವ ಮೂಲಕ ನಾವು ಸಹ ‘ಪ್ರವೀಣರಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧರಾಗುವೆವು.’ (2 ತಿಮೊಥೆಯ 3:16, 17) ಪ್ರಾಚೀನ ಸಮಯಗಳಲ್ಲಿ ಮತ್ತು ತರುವಾಯದ ಸಮಯಗಳಲ್ಲಿದ್ದ ಯೆಹೋವನ ನಂಬಿಗಸ್ತ ಸೇವಕರ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, “ನಾನು ತಂದೆಯನ್ನು ಪ್ರೀತಿಸುತ್ತೇನೆಂಬದು ಲೋಕಕ್ಕೆ ತಿಳಿದಿರಬೇಕೆಂದು ತಂದೆಯು ನನಗೆ ಕೊಟ್ಟ ಆಜ್ಞೆಯ ಮೇರೆಗೆ ಇದನ್ನು ಮಾಡುತ್ತೇನೆ,” ಎಂದು ಹೇಳಿದ ನಮ್ಮ ಯಜಮಾನನಾದ ಯೇಸು ಕ್ರಿಸ್ತನ ಉದಾಹರಣೆಯನ್ನು ನಾವು ಅನುಸರಿಸೋಣ. (ಯೋಹಾನ 14:31) “ಹಾಗೆಯೇ” ಮಾಡುವುದನ್ನು ಮುಂದುವರಿಸುವ ಮೂಲಕ ಸಹ ನಾವು ದೇವರಿಗಾಗಿರುವ ನಮ್ಮ ಪ್ರೀತಿಯನ್ನು ತೋರಿಸೋಣ.—ಮಾರ್ಕ 12:29-31.

18. “ವಾಕ್ಯದ ಪ್ರಕಾರ ಮಾಡು”ವವರಾಗಲು ಯಾವುದು ನಮ್ಮನ್ನು ಪ್ರಚೋದಿಸತಕ್ಕದ್ದು, ಮತ್ತು ಏನನ್ನು ಮುಂದೆ ಚರ್ಚಿಸಲಾಗುವುದು?

18 ಬೈಬಲ್‌ ಸಮಯಗಳಲ್ಲಿದ್ದ ದೇವರ ಸೇವಕರ ವಿಧೇಯ ಮಾರ್ಗಕ್ರಮದ ಕುರಿತು ನಾವು ಮನನ ಮಾಡಿದಂತೆ, ಸೈತಾನನ ದುಷ್ಟ ವ್ಯವಸ್ಥೆಯ ಮುಕ್ತಾಯದ ದಿನಗಳಲ್ಲಿ ನಂಬಿಗಸ್ತ ಸೇವೆಯನ್ನು ಮಾಡುವಂತೆ ನಾವು ಉತ್ತೇಜಿಸಲ್ಪಡುವುದಿಲ್ಲವೊ? (ರೋಮಾಪುರ 15:4-6) ಮುಂದಿನ ಲೇಖನವು ಚರ್ಚಿಸಲಿರುವಂತೆ, ನಾವು ಪೂರ್ಣವಾದ ಅರ್ಥದಲ್ಲಿ “ವಾಕ್ಯದ ಪ್ರಕಾರ ಮಾಡು”ವವರಾಗಲು ಖಂಡಿತವಾಗಿಯೂ ಪ್ರಚೋದಿಸಲ್ಪಡತಕ್ಕದ್ದು.—ಯಾಕೋಬ 1:22, NW.

ನೀವು ಜ್ಞಾಪಿಸಿಕೊಳ್ಳುತ್ತೀರೊ?

◻ “ದೇವರ ಪ್ರೀತಿಯು” ನಮಗೆ ಯಾವ ಅರ್ಥದಲ್ಲಿರಬೇಕು?

◻ ನೋಹ, ಮೋಶೆ ಮತ್ತು ಯೆಹೋಶುವರ ಉದಾಹರಣೆಗಳಿಂದ ನಾವು ಏನನ್ನು ಕಲಿಯುತ್ತೇವೆ?

◻ ಇಸ್ರಾಯೇಲಿನಲ್ಲಿನ ಅರಸರು ಎಷ್ಟರ ಮಟ್ಟಿಗೆ ದೇವರ “ವಾಕ್ಯ”ಕ್ಕೆ ವಿಧೇಯರಾಗಿದ್ದರು?

◻ “ಹಾಗೆಯೇ” ಮಾಡುವುದರಲ್ಲಿ ಯೇಸು ನಮ್ಮ ಆದರ್ಶನಾಗಿರುವುದು ಹೇಗೆ?

[ಪುಟ 15 ರಲ್ಲಿರುವ ಚಿತ್ರಗಳು]

ನೋಹ, ಮೋಶೆ ಮತ್ತು ಯೆಹೋಶುವರು “ಹಾಗೆಯೇ ಮಾಡಿದರು”

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ