ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w95 2/1 ಪು. 4-7
  • ಇದು ನಿರ್ಣಯಿಸುವ ಸಮಯವೇಕೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಇದು ನಿರ್ಣಯಿಸುವ ಸಮಯವೇಕೆ?
  • ಕಾವಲಿನಬುರುಜು—1995
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಇಸ್ರಾಯೇಲ್‌ ತ್ಯಜಿಸಲ್ಪಟ್ಟ ಕಾರಣ
  • ಕ್ರೈಸ್ತಪ್ರಪಂಚದ ಮಹಾ ಧರ್ಮಭ್ರಷ್ಟತೆ
  • ಸುಧಾರಣೆಯು ಅಸಾಧ್ಯವೋ?
  • “ಅವಳನ್ನು ಬಿಟ್ಟು ಹೊರಗೆ” ಬರಲು ಸಮಯವು ಇದಾಗಿದೆ
  • ಕ್ರೈಸ್ತಪ್ರಪಂಚವು ಈ ಲೋಕದ ಒಂದು ಭಾಗವಾದ ವಿಧ
    ಕಾವಲಿನಬುರುಜು—1993
  • “ಅಧರ್ಮ ಸ್ವರೂಪನ” ವಿರುದ್ಧ ದೇವರ ನ್ಯಾಯತೀರ್ಪು
    ಕಾವಲಿನಬುರುಜು—1990
  • ಲೌಕಿಕ ಧರ್ಮವು ಅಂತ್ಯಗೊಳ್ಳಲಿರುವುದಕ್ಕೆ ಕಾರಣ
    ಕಾವಲಿನಬುರುಜು—1996
ಕಾವಲಿನಬುರುಜು—1995
w95 2/1 ಪು. 4-7

ಇದು ನಿರ್ಣಯಿಸುವ ಸಮಯವೇಕೆ?

ಸಾ.ಶ.ಪೂ. 16ನೇ ಶತಮಾನದಲ್ಲಿ, ದೇವರು ಇಸ್ರಾಯೇಲ್ಯರನ್ನು “ಎಲ್ಲಾ ಜನಾಂಗಗಳಲ್ಲಿ” ತನ್ನ “ಸಕ್ವೀಯಜನರಾಗಿ . . . ಪರಿಶುದ್ಧಜನ” ರಾಗಿ ಆರಿಸಿಕೊಂಡನು. (ವಿಮೋಚನಕಾಂಡ 19:5, 6) ಅವರು ನೆರೆಹೊರೆಯ ಜನಾಂಗಗಳ ವಿಗ್ರಹಾರಾಧನೆ ಮತ್ತು ಭ್ರಷ್ಟ ಆಚರಣೆಗಳಿಂದ ತಾವು ದೂಷಿತರಾಗುವಂತೆ ಅನುಮತಿಸುತ್ತಾ, ಸ್ವಲ್ಪ ಸಮಯದಲ್ಲೇ, ತಮ್ಮ ಪರಿಶುದ್ಧತೆ, ತಮ್ಮ ಧಾರ್ಮಿಕ ಶುದ್ಧತೆಯನ್ನು ಕಳೆದುಕೊಂಡರು. ಹೀಗೆ ಅವರು ತಮ್ಮನ್ನು “ಆಜೆಗ್ಞೆ ಮಣಿಯದ ಜನ” ರಾಗಿ ಪ್ರಕಟಪಡಿಸಿದರು. (ಧರ್ಮೋಪದೇಶಕಾಂಡ 9:6, 13; 10:16; 1 ಕೊರಿಂಥ 10:7-11) ಯೆಹೋಶುವನ ಮರಣವನ್ನು ಹಿಂಬಾಲಿಸಿದ ಮುನ್ನೂರಕ್ಕಿಂತ ಹೆಚ್ಚು ವರ್ಷಗಳ ಅವಧಿಯಲ್ಲಿ, ಯೆಹೋವನು ನ್ಯಾಯಸ್ಥಾಪಕರನ್ನು, ಇಸ್ರಾಯೇಲ್ಯರನ್ನು ಸತ್ಯಾರಾಧನೆಗೆ ಹಿಂದೆ ಕೊಂಡೊಯ್ಯಬೇಕಾಗಿದ್ದ ನಂಬಿಗಸ್ತ ಮಾರ್ಗದರ್ಶಿಗಳನ್ನು ಎಬ್ಬಿಸಿದನು. ಆದರೂ ಜನರು, “ತಮ್ಮ ದುಮಾರ್ಗವನ್ನೂ ಮೊಂಡತನವನ್ನೂ ಬಿಡಲೇ ಇಲ್ಲ.”—ನ್ಯಾಯಸ್ಥಾಪಕರು 2:17-19.

ಅನಂತರ, ಜನರನ್ನು ಸತ್ಯಾರಾಧನೆಗೆ ಹಿಂದಿರುಗಲು ಪ್ರೇರಿಸುವಂತೆ ದೇವರು ನಂಬಿಗಸ್ತ ರಾಜರನ್ನು ಮತ್ತು ಪ್ರವಾದಿಗಳನ್ನು ಎಬ್ಬಿಸಿದನು. ಪ್ರವಾದಿಯಾದ ಅಜರ್ಯನು ರಾಜನಾದ ಆಸ ಮತ್ತು ಅವನ ಸಹ ದೇಶೀಯರು ಯೆಹೋವನನ್ನು ಹುಡುಕುವಂತೆ ಪ್ರೋತ್ಸಾಹಿಸಿದನು: “ನೀವು ಆತನನ್ನು ಹುಡುಕಿದರೆ ನಿಮಗೆ ಸಿಕ್ಕುವನು; ಆತನನ್ನು ಬಿಟ್ಟರೆ ಆತನೂ ನಿಮ್ಮನ್ನು ಬಿಟ್ಟುಬಿಡುವನು.” ಆಸನು ಯೆಹೂದ ರಾಜ್ಯದಲ್ಲಿ ಧಾರ್ಮಿಕ ಸುಧಾರಣೆಯನ್ನು ಆಚರಣೆಗೆ ತಂದನು. (2 ಪೂರ್ವಕಾಲವೃತ್ತಾಂತ 15:1-16) ತರುವಾಯ, ಪ್ರವಾದಿಯಾದ ಯೋವೇಲನ ಮೂಲಕ ದೇವರು ಆ ಆಮಂತ್ರಣವನ್ನು ನವೀಕರಿಸಬೇಕಾಯಿತು. (ಯೋವೇಲ 2:12, 13) ಇನ್ನೂ ಕೆಲವು ಸಮಯಾನಂತರ, ಚೆಫನ್ಯನು ಯೆಹೂದದ ನಿವಾಸಿಗಳಿಗೆ “ಯೆಹೋವನನ್ನು ಆಶ್ರಯಿಸಲು” ಉತ್ತೇಜಿಸಿದನು. ಯುವ ರಾಜನಾದ ಯೋಷೀಯನು ವಿಗ್ರಹಾರಾಧನೆ ಮತ್ತು ಭ್ರಷ್ಟತೆಯನ್ನು ನಿರ್ಮೂಲಮಾಡಲು ಸುಧಾರಣೆಗಳ ಒಂದು ಚಳವಳಿಯಲ್ಲಿ ಅದನ್ನು ಮಾಡಿದನು.—ಚೆಫನ್ಯ 2:3; 2 ಪೂರ್ವಕಾಲವೃತ್ತಾಂತ 34:3-7.

ಪಶ್ಚಾತ್ತಾಪದ ಅಂತಹ ಘಟನಾವಳಿಗಳ ಹೊರತಾಗಿಯೂ, ಜನರ ಧಾರ್ಮಿಕ ಸ್ಥಿತಿಯು ಹೆಚ್ಚೆಚ್ಚು ವಿಷಮವಾಗುತ್ತಿತ್ತು. (ಯೆರೆಮೀಯ 2:13; 44:4, 5) ವಿಗ್ರಹಾರಾಧಕ ಆಚರಣೆಗಳಿಂದ ಕಲುಷಿತವಾಗಿದ್ದ ಧಾರ್ಮಿಕ ವ್ಯವಸ್ಥೆಯನ್ನು ಖಂಡಿಸುತ್ತಾ, ಯೆರೆಮೀಯನು ಅದನ್ನು ಸುಧಾರಣೆ ಮಾಡಲಸಾಧ್ಯವಾದದ್ದಾಗಿ ವರ್ಣಿಸಿದನು: “ಕೂಷ್ಯನು ತನ್ನ ಚರ್ಮವನ್ನು ಮಾರ್ಪಡಿಸಬಲ್ಲನೇ? ಚಿರತೆಯು ತನ್ನ ಚುಕ್ಕೆಗಳನ್ನು ಬದಲಾಯಿಸೀತೇ? ಹೀಗಾದರೆ ದುಷ್ಟತನದಲ್ಲಿ ಶಿಕ್ಷಿತರಾದ ನೀವು ಶಿಷ್ಟತನದಲ್ಲಿ ನಡೆಯಬಹುದು.” (ಯೆರೆಮೀಯ 13:23) ಈ ಕಾರಣದಿಂದಾಗಿ, ದೇವರು ಯೆಹೂದದ ರಾಜ್ಯದ ಮೇಲೆ ಒಂದು ಕಠಿಣತಮ ಶಿಕ್ಷೆಯನ್ನು ಹೇರಿಸಿದನು. ಯೆರೂಸಲೇಮ್‌ ಮತ್ತು ಅದರ ದೇವಾಲಯವು ಸಾ.ಶ.ಪೂ. 607 ರಲ್ಲಿ ನಾಶವಾಯಿತು, ಮತ್ತು ಪಾರಾದವರನ್ನು ಬಬಿಲೋನಿಗೆ ದಾಸರಾಗಿ ಗಡೀಪಾರು ಮಾಡಲಾಯಿತು, ಅಲ್ಲಿ ಅವರು 70 ವರ್ಷಗಳ ವರೆಗೆ ಉಳಿದರು.

ಆ ಸಮಯಾವಧಿಯು ಮುಕ್ತಾಯವಾದ ನಂತರ, ದೇವರು ದಯೆಯನ್ನು ತೋರಿಸಿದನು. ಇಸ್ರಾಯೇಲ್ಯರನ್ನು ಬಿಡಿಸಲಿಕ್ಕಾಗಿ ಆತನು ರಾಜನಾದ ಕೋರೆಷನನ್ನು ಪ್ರೇರಿಸಿದನು, ಇವರಲ್ಲಿ ಒಂದು ಉಳಿಕೆಯು ದೇವಾಲಯವನ್ನು ಪುನಃ ಕಟ್ಟಲು ಯೆರೂಸಲೇಮಿಗೆ ಹಿಂದಿರುಗಿತು. ಇದೆಲ್ಲದರಿಂದ ಒಂದು ಪಾಠವನ್ನು ಕಲಿಯುವ ಬದಲಿಗೆ, ಅವರು ಪುನಃ ಒಮ್ಮೆ ಸತ್ಯಾರಾಧನೆಯಿಂದ ಪಥಭ್ರಷ್ಟರಾದರು, ಹೀಗೆ ಯೆಹೋವ ದೇವರು ತನ್ನ ಆಮಂತ್ರಣವನ್ನು ನವೀಕರಿಸುವಂತೆ ಮಾಡಿದರು: “ನನ್ನ ಕಡೆಗೆ ಪುನಃ ತಿರುಗಿರಿ; ತಿರುಗಿದರೆ ನಾನು ನಿಮ್ಮ ಕಡೆಗೆ ಪುನಃ ತಿರುಗುವೆನು.”—ಮಲಾಕಿಯ 3:7.

ಇಸ್ರಾಯೇಲ್‌ ತ್ಯಜಿಸಲ್ಪಟ್ಟ ಕಾರಣ

ಯೇಸುವಿನ ಸಮಯದಲ್ಲಿ ಇಸ್ರಾಯೇಲ್ಯರ ಧಾರ್ಮಿಕ ಸ್ಥಿತಿ ಏನಾಗಿತ್ತು? ಕಪಟಿ ಧಾರ್ಮಿಕ ಮುಖಂಡರು “ಮನುಷ್ಯರು ಕಲ್ಪಿಸಿದ ಕಟ್ಟಳೆಗಳನ್ನೇ” ಬೋಧಿಸುವ “ಕುರುಡ ಮಾರ್ಗದರ್ಶಿಗಳಾಗಿದ್ದರು”. (NW) ‘ಅವರು ತಮ್ಮ ಸಂಪ್ರದಾಯ ನಿಮಿತ್ತ ದೇವರ ಆಜ್ಞೆಯನ್ನು ಮೀರುತ್ತಿದ್ದರು.’ ಜನರು ದೇವರನ್ನು “ಮಾತಿನಿಂದ” ಸನ್ಮಾನಿಸಿದರು, ಆದರೆ ಅವರ ಹೃದಯವು ಅವನಿಂದ ಬಹಳ ದೂರವಿತ್ತು. (ಮತ್ತಾಯ 15:3, 4, 8, 9, 14) ಒಂದು ಜನಾಂಗದೋಪಾದಿ ಅವರು ಪಶ್ಚಾತ್ತಾಪಪಡಲು ಇನ್ನೊಂದು ಅವಕಾಶವನ್ನು ಪಡೆಯಲಿದ್ದರೋ? ಇಲ್ಲ. ಯೇಸು ಅಂದದ್ದು: “ದೇವರರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಕ್ಕೆ ಕೊಡಲಾಗುವುದು.” ಅವನು ಮುಂದೆ ಅಂದದ್ದು: “ನಿಮ್ಮ ಆಲಯವು,” ಯೆರೂಸಲೇಮಿನಲ್ಲಿರುವ ದೇವಾಲಯವು, “ನಿಮಗೆ ಬರೀದಾಗಿ ಬಿಟ್ಟದೆ.” (ಮತ್ತಾಯ 21:43; 23:38) ಅವರ ತಪ್ಪು ಭಾರೀ ದೊಡ್ಡದಾಗಿತ್ತು. ಅವರು ಯೇಸುವನ್ನು ಮೆಸ್ಸೀಯನಾಗಿ ತಿರಸ್ಕರಿಸಿದರು ಮತ್ತು ದಬ್ಬಾಳಿಕೆಯ ರೋಮನ್‌ ಕೈಸರನನ್ನು ತಮ್ಮ ಅರಸನನ್ನಾಗಿ ಆರಿಸುತ್ತಾ ಅವನನ್ನು ಕೊಲ್ಲಿಸಿದರು.—ಮತ್ತಾಯ 27:25; ಯೋಹಾನ 19:15.

ತನ್ನ ಶುಶ್ರೂಷೆಯನ್ನು ಆತನು ನೆರವೇರಿಸಿದ ಅವಧಿಯು ನ್ಯಾಯತೀರ್ಪಿನ ಒಂದು ಸಮಯವಾಗಿತ್ತೆಂದು ಅರ್ಥಮಾಡಿಕೊಳ್ಳಲು ಇಸ್ರಾಯೇಲ್ಯರು ಬಯಸಲಿಲ್ಲ. ಯೆರೂಸಲೇಮಿನ ಅಪನಂಬಿಗಸ್ತ ನಿವಾಸಿಗಳಿಗೆ ಯೇಸು ಅಂದದ್ದು: “ನೀನು ಪರೀಕ್ಷಿಸಲ್ಪಡುತ್ತಿದ್ದ ಸಮಯವನ್ನು ನೀನು ಅರಿತುಕೊಳ್ಳಲಿಲ್ಲ.”—ಲೂಕ 19:44 NW.

ಸಾ.ಶ. 33ರ ಪಂಚಾಶತ್ತಮದಂದು, ಪ್ರತಿಯೊಂದು ಕುಲ ಮತ್ತು ಜನಾಂಗದಿಂದ ಅರಿಸಲ್ಪಡಲಿದ್ದ ತನ್ನ ಪುತ್ರನಾದ ಯೇಸು ಕ್ರಿಸ್ತನ ಆತ್ಮಾಭಿಷಿಕ್ತ ಶಿಷ್ಯರನ್ನು, ಒಂದು ಹೊಸ ಜನಾಂಗ, ಅಥವಾ ಪ್ರಜೆಯನ್ನು ದೇವರು ರಚಿಸಿದನು. (ಅ.ಕೃತ್ಯಗಳು 10:34, 35; 15:14) ಯೆಹೂದಿ ಧಾರ್ಮಿಕ ವ್ಯವಸ್ಥೆಯ ಕೊನೆಗೆ ಸುಧಾರಿಸುವದೆಂಬ ಯಾವದೇ ನಿರೀಕ್ಷೆ ಇತ್ತೋ? ಯೆರೂಸಲೇಮನ್ನು ನೆಲಸಮಮಾಡುತ್ತಾ, ಸಾ.ಶ. 70 ರಲ್ಲಿ ರೋಮನ್‌ ಸೈನ್ಯಗಳು ಉತ್ತರವನ್ನು ಒದಗಿಸಿದವು. ಆ ಧಾರ್ಮಿಕ ವ್ಯವಸ್ಥೆಯನ್ನು ದೇವರು ಸಂಪೂರ್ಣವಾಗಿ ತಿರಸ್ಕರಿಸಿದ್ದನು.—ಲೂಕ 21:5, 6.

ಕ್ರೈಸ್ತಪ್ರಪಂಚದ ಮಹಾ ಧರ್ಮಭ್ರಷ್ಟತೆ

ಆತ್ಮಾಭಿಷಿಕ್ತ ಕ್ರೈಸ್ತರು “ದೇವರಾದುಕೊಂಡ ಜನಾಂಗವೂ, ಮೀಸಲಾದ ಜನವೂ” ಆಗಿ ರೂಪುಗೊಂಡರು. (1 ಪೇತ್ರ 2:9; ಗಲಾತ್ಯ 6:16) ಆದರೆ ಆದಿ ಕ್ರೈಸ್ತ ಸಭೆಯು ಸಹ ತನ್ನ ಧಾರ್ಮಿಕ ಶುದ್ಧತೆಯನ್ನು ಹೆಚ್ಚು ಸಮಯದ ವರೆಗೆ ಕಾಪಾಡಿಕೊಳ್ಳಲಿಲ್ಲ.

ಶಾಸ್ತ್ರವಚನಗಳು ಒಂದು ಮಹಾ ಧರ್ಮಭ್ರಷ್ಟತೆ, ಅಥವಾ ಸತ್ಯ ನಂಬಿಕೆಯಿಂದ ಬಿದ್ದುಹೋಗುವುದರ ಕುರಿತು ಮುಂತಿಳಿಸಿದ್ದವು. ಯೇಸುವಿನ ಸಾಮ್ಯದ ಸಾಂಕೇತಿಕ ಹಣಜಿ ಅಂದರೆ, ನಕಲಿ ಕ್ರೈಸ್ತರು, ಸಾಂಕೇತಿಕ ಗೋದಿ, ಅಥವಾ ದೇವರಾತ್ಮದಿಂದ ಅಭಿಷಿಕ್ತರಾದ ನಿಜ ಕ್ರೈಸ್ತರನ್ನು ಅದುಮಿಡಲು ಪ್ರಯತ್ನಿಸಲಿದ್ದರು. ದೇವರ ಪ್ರಧಾನ ಶತ್ರು, ಪಿಶಾಚನಿಂದ ಪ್ರವರ್ಧಿಸಲಾದ ಸುಳ್ಳು ಕ್ರೈಸ್ತತ್ವದ ಹರಡುವಿಕೆ, “ಜನರು ನಿದ್ರೆಮಾಡುವ ಕಾಲದಲ್ಲಿ”, ಸ್ವಲ್ಪದರಲ್ಲೇ ಆರಂಭವಾಗಲಿತ್ತು ಎಂಬದನ್ನು ದೃಷ್ಟಾಂತವು ಪ್ರಕಟಪಡಿಸಿತು. ಇದು ಕ್ರಿಸ್ತನ ನಂಬಿಗಸ್ತ ಅಪೊಸ್ತಲರ ಮರಣದ ನಂತರ, ಪರಿಣಾಮವಾಗಿ ಬಂದ ಆತ್ಮಿಕ ತೂಕಡಿಕೆಯ ಅವಧಿಯಲ್ಲಿ ಸಂಭವಿಸಿತು. (ಮತ್ತಾಯ 13:24-30, 36-43; 2 ಥೆಸಲೊನೀಕ 2:6-8) ಅಪೊಸ್ತಲರಿಂದ ಮುಂತಿಳಿಸಲ್ಪಟ್ಟಂತೆ, ಅನೇಕ ನಕಲಿ ಕ್ರೈಸ್ತರು ಮಂದೆಯೊಳಗೆ ನುಸುಳಿಕೊಂಡರು. (ಅ. ಕೃತ್ಯಗಳು 20:29, 30; 1 ತಿಮೊಥೆಯ 4:1-3; 2 ತಿಮೊಥೆಯ 2:16-18; 2 ಪೇತ್ರ 2:1-3) ಅಪೊಸ್ತಲರೊಳಗೆ ಕೊನೆಯದಾಗಿ ಸತ್ತವನು ಯೋಹಾನನು. ಸುಮಾರು ಸಾ.ಶ. 98ರ ವರ್ಷದಲ್ಲಿ ಅವನು, “ಕಡೇ ಗಳಿಗೆಯು,” ಅಪೊಸ್ತಲ ಸಂಬಂಧಿತ ಅವಧಿಯ ಕೊನೆಯ ಭಾಗವು ಆಗಲೇ ಪ್ರಾರಂಭಿಸಿತ್ತೆಂದು ಬರೆದನು.—1 ಯೋಹಾನ 2:18, 19.

ರೋಮನ್‌ ಚಕ್ರವರ್ತಿ ಕಾನ್‌ಸ್ಟಂಟೀನನ ಧಾರ್ಮಿಕ ಮತ್ತು ರಾಜಕೀಯ ಶಕ್ತಿಯ ಮೈತ್ರಿಯಿಂದಾಗಿ, ಕ್ರೈಸ್ತ ಪ್ರಪಂಚದ ಆತ್ಮಿಕ, ಸೈದ್ಧಾಂತಿಕ, ಮತ್ತು ನೈತಿಕ ಪರಿಸ್ಥಿತಿಯು ನಾಟಕೀಯವಾಗಿ ಕೆಟ್ಟುಹೋಯಿತು. “ನಾಲ್ಕನೆಯ ಶತಮಾನದಲ್ಲಿ ಚರ್ಚಿನ ವಿಜಯೋತ್ಸವವು” ಕ್ರೈಸ್ತ ದೃಷ್ಟಿಕೋನದಿಂದ “ಒಂದು ವಿಪತ್ತು” ಆಗಿತ್ತು ಎಂದು ಅನೇಕ ಇತಿಹಾಸಗಾರರು ಒಪ್ಪುತ್ತಾರೆ. ‘ಕ್ರೈಸ್ತಪ್ರಪಂಚವು ತನ್ನ ಉಚ್ಚ ನೈತಿಕ ಮಟ್ಟವನ್ನು ಕಳೆದುಕೊಂಡಿತು’ ಮತ್ತು ವಿಧರ್ಮದಿಂದ, “ಮರಿಯಳ ಆರಾಧನೆ” ಮತ್ತು “ಸಂತರ” ಭಕ್ತಿ ಹಾಗೂ ತ್ರಯೈಕ್ಯದ ವಿಚಾರಗಳಂತಹ ಅನೇಕ ಆಚರಣೆಗಳನ್ನು ಮತ್ತು ತತ್ವಜ್ಞಾನಗಳನ್ನು ಸ್ವೀಕರಿಸಿತು.

ಅವಳ ಹುಸಿ ವಿಜಯೋತ್ಸಾಹದ ನಂತರ, ಕ್ರೈಸ್ತಪ್ರಪಂಚದ ಪರಿಸ್ಥಿತಿಯು ಹದಗೆಟ್ಟಿತ್ತು. ಪೋಪರು ಮತ್ತು ಸಮಾಲೋಚನಾ ಸಮಿತಿಗಳಿಂದ ಶಾಸನಗಳು ಮತ್ತು ಸೈದ್ಧಾಂತಿಕ ನಿರೂಪಣೆಗಳು, ಇದಕ್ಕೆ ಕೂಡಿಸಿ ಪಾಷಂಡ ನ್ಯಾಯವಿಚಾರಣೆಗಳು, ಕ್ರುಸೇಡ್‌ಗಳು ಮತ್ತು ಕ್ಯಾತೊಲಿಕ್‌ ಮತ್ತು ಪ್ರಾಟೆಸ್ಟಂಟರ ನಡುವೆ “ಪವಿತ್ರ” ಯುದ್ಧಗಳು, ಒಂದು ಸುಧಾರಿಸಲಾಗದ ಧಾರ್ಮಿಕ ವ್ಯವಸ್ಥೆಯನ್ನು ಉತ್ಪಾದಿಸಿದವು.

ಎ ವರ್ಲ್ಡ್‌ ಲಿಟ್‌ ಓನ್‌ಲಿ ಬೈ ಫೈಯರ್‌ ಎಂಬ ತನ್ನ ಪುಸ್ತಕದಲ್ಲಿ, ವಿಲ್ಯಮ್‌ ಮ್ಯಾನ್‌ಚೆಸ್ಟರ್‌ ಬರೆಯುವದು: “ಹದಿನೈದನೆಯ ಮತ್ತು ಹದಿನಾರನೆಯ ಶತಮಾನಗಳ ಪೋಪರು ರೋಮನ್‌ ಸಮ್ರಾಟರಂತೆ ಜೀವಿಸಿದರು. ಅವರು ಲೋಕದಲ್ಲಿ ಅತ್ಯಂತ ಧನಿಕ ಮನುಷ್ಯರಾಗಿದ್ದರು, ಮತ್ತು ಅವರು ಮತ್ತವರ ಕಾರ್ಡಿನಲರು ಪವಿತ್ರ ಹುದ್ದೆಗಳನ್ನು ಮಾರಾಟ ಮಾಡುವ ಮೂಲಕ ತಮ್ಮನ್ನು ಇನ್ನೂ ಹೆಚ್ಚು ಶ್ರೀಮಂತಗೊಳಿಸಿಕೊಂಡರು.” ಮಹಾ ಧರ್ಮಭ್ರಷ್ಟತೆಯ ಸಮಯದಲ್ಲಿ, ಸಾಂಕೇತಿಕ ಗೋದಿಯ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತಾ ಚಿಕ್ಕ ಗುಂಪುಗಳು ಅಥವಾ ಏಕೈಕ ವ್ಯಕ್ತಿಗಳು ನಿಜ ಕ್ರೈಸ್ತತ್ವವನ್ನು ಪುನಃಕಂಡುಹಿಡಿಯಲು ಪ್ರಯತ್ನಿಸಿದರು. ಅವರು ಅನೇಕ ಸಲ ಕಠಿನ ಹಿಂಸೆಯನ್ನು ಅನುಭವಿಸಿದರು. ಅದೇ ಪುಸ್ತಕವು ಹೇಳುವುದು: “ಕ್ರೈಸ್ತತ್ವದ, ಪ್ರಾಟೆಸ್ಟಂಟ್‌ ಮತ್ತು ಕ್ಯಾತೊಲಿಕರ ನಿಜ ಸಂತರು ಜ್ವಾಲೆಗಳಿಂದ ಆವೃತ್ತರಾದ ಕಪ್ಪಾಗಿಸಿದ ಹುತಾತ್ಮರಂತೆ ಆಗಿದ್ದರೆಂದು ಕೆಲವೊಮ್ಮೆ ತೋರುತ್ತಿತ್ತು.” ಇತರರು, ಮಾರ್ಟಿನ್‌ ಲೂತರ್‌ ಮತ್ತು ಜಾನ್‌ ಕ್ಯಾಲ್‌ವಿನ್‌ರಂತಹ ನಾಮಮಾತ್ರದ ಸುಧಾರಕರು, ಕ್ಯಾತೊಲಿಕ್‌ ಚರ್ಚಿನಿಂದ ಬೇರ್ಪಡಿಸಲ್ಪಟ್ಟ ಬಾಳುವ ಧಾರ್ಮಿಕ ಸಂಸ್ಥಾಪನೆಗಳನ್ನು ಸೃಷ್ಟಿಸಲು ಸಮರ್ಥರಾದರು ಆದರೆ ಅದು ಅದರ ಮೂಲಭೂತ ಬೋಧನೆಗಳಲ್ಲಿ ಇನ್ನೂ ಭಾಗಿಯಾಗಿತ್ತು. ಅವರು ರಾಜಕೀಯ ವ್ಯವಹಾರಗಳಲ್ಲೂ ಆಳವಾಗಿ ಒಳಗೂಡಿದ್ದರು.

ಪ್ರಾಟೆಸ್ಟಂಟ್‌ ಕ್ಷೇತ್ರದಲ್ಲಿ, ಧಾರ್ಮಿಕ ಪುನರ್ಜಾಗೃತಿಯೆಂದು ಕರೆಯಲ್ಪಡುವಂತಹದ್ದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಗಳನ್ನು ಮಾಡಲಾಯಿತು. ಉದಾಹರಣೆಗಾಗಿ, 18 ಮತ್ತು 19 ನೇ ಶತಮಾನಗಳಲ್ಲಿ, ಈ ಪ್ರಯತ್ನಗಳು ಹುರುಪಿನ ವಿದೇಶೀ ಮಿಷನೆರಿ ಚಟುವಟಿಕೆಯಲ್ಲಿ ಪರಿಣಮಿಸಿದವು. ಆದಾಗಲೂ, ಧಾರ್ಮಿಕ ಕುರುಬರು ಸ್ವತಃ ಒಪ್ಪಿಕೊಳ್ಳುವಂತೆ, ಇಂದು ಪ್ರಾಟೆಸ್ಟಂಟ್‌ ಹಿಂಡಿನ ಆತ್ಮಿಕ ಪರಿಸ್ಥಿತಿಯು ಖಂಡಿತವಾಗಿಯೂ ಪ್ರೋತ್ಸಾಹದಾಯಕವಾಗಿರುವದಿಲ್ಲ. “ಚರ್ಚುಗಳೊಳಗೆಯೇ, ನಂಬಿಕೆಯ ಬಿಕ್ಕಟ್ಟು ಇದೆ” ಎಂದು ಪ್ರಾಟೆಸ್ಟಂಟ್‌ ದೇವತಾಶಾಸ್ತ್ರಜ್ಞ ಒಸ್ಕರ್‌ ಕೂಲ್‌ಮನ್‌ ಇತ್ತೀಚೆಗೆ ಒಪ್ಪಿಕೊಂಡರು.

ಕ್ಯಾತೊಲಿಕ್‌ ಚರ್ಚಿನೊಳಗೆ ಸುಧಾರಣೆಗಳು ಮತ್ತು ಪ್ರತಿಸುಧಾರಣೆಗಳು ಸಹ ಪ್ರವರ್ಧಿಸಲ್ಪಟ್ಟಿವೆ. 11 ರಿಂದ 13 ನೆಯ ಶತಮಾನದ ವರೆಗೆ, ವೈದಿಕರ ವ್ಯಾಪಕ ಭ್ರಷ್ಟತೆ ಮತ್ತು ಅಪಾರ ಐಶ್ವರ್ಯದ ಮಧ್ಯೆಯೂ, ಬಡತನದ ಶಪಥವನ್ನು ಕಟ್ಟುನಿಟ್ಟಾಗಿ ಪರಿಪಾಲಿಸಿದ ಸಂನ್ಯಾಸಿಗಳ ಸಮುದಾಯಗಳನ್ನು ರಚಿಸಲಾಯಿತು. ಆದರೆ ಅವರ ಮೇಲೆ ನಿಕಟವಾಗಿ ಕಾವಲಿಡಲಾಗುತ್ತಿತ್ತು ಮತ್ತು ವಿದ್ವಾಂಸರಿಗನುಸಾರ, ಕ್ರೈಸ್ತ ಮಠೀಯ ಪುರೋಹಿತ ಪ್ರಭುತ್ವದಿಂದ ನಿಗ್ರಹಿಸಲಾಗುತ್ತಿತ್ತು. ಅನಂತರ ಕೌನ್ಸಿಲ್‌ ಆಫ್‌ ಟ್ರೆಂಟ್‌ನಿಂದ ಪ್ರವರ್ಧಿಸಲಾದ ಮತ್ತು ಪ್ರಾಟೆಸ್ಟಂಟ್‌ ಸುಧಾರಣೆಯನ್ನು ಎದುರಿಸಲು ಪ್ರಮುಖವಾಗಿ ನಿರ್ದೇಶಿಸಲ್ಪಟ್ಟ 16 ನೆಯ ಶತಮಾನದ ಪ್ರತಿಸುಧಾರಣೆಯು ಬಂತು.

19ನೇ ಶತಮಾನದ ಮೊದಲ ಅರ್ಧ ಭಾಗದಲ್ಲಿ, ಕ್ರೈಸ್ತ ಮಠೀಯ ಪುನಃಸ್ಥಾಪನೆಯ ಅವಧಿಯಲ್ಲಿ, ಕ್ಯಾತೊಲಿಕ್‌ ಚರ್ಚು ಒಂದು ಸರ್ವಾಧಿಕಾರದ ಮತ್ತು ಸಂಪ್ರದಾಯವಾದಿ ನಿಲುವನ್ನು ತೆಗೆದುಕೊಂಡಿತು. ಆದಾಗಲೂ, ನಿಜ ಕ್ರೈಸ್ತತ್ವವನ್ನು ಪುನಃಸ್ಥಾಪಿಸಲಿಕ್ಕಾಗಿ ಯಾವುದೇ ನಿಜವಾದ ಸುಧಾರಣೆಗಳು ಮಾಡಲ್ಪಟ್ಟವು ಎಂದು ಹೇಳಲು ಸಾಧ್ಯವಿಲ್ಲ. ಬದಲಾಗಿ, ಇವು ಲೋಕದ ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ಬದಲಾವಣೆಯ ಎದುರಿನಲ್ಲಿ ವೈದಿಕರ ಅಧಿಕಾರವನ್ನು ಬಲಪಡಿಸುವ ಪ್ರಯತ್ನಗಳು ಆಗಿದ್ದವಷ್ಟೇ.

ಇನ್ನೂ ಇತ್ತೀಚೆಗೆ, 1960 ಗಳಲ್ಲಿ, ವ್ಯಾಟಿಕನ್‌ IIರ ಸಾರ್ವತ್ರಿಕ ಕೌನ್ಸಿಲ್‌ನೊಂದಿಗೆ ಕ್ಯಾತೊಲಿಕ್‌ ಚರ್ಚು ಗಾಢವಾದ ಬದಲಾವಣೆಯ ಒಂದು ಕಾರ್ಯಗತಿಯನ್ನು ಪ್ರಯೋಗಿಸಲು ಬಯಸಿದಂತೆ ತೋರುತ್ತಿತ್ತು. ಆದಾಗಲೂ, ಚರ್ಚಿನ ಪ್ರಗತಿಶೀಲ ಸದಸ್ಯರ ಮನೋಭಾವವನ್ನು ನಿಗ್ರಹಿಸಲು ಸದ್ಯದ ಪೋಪರಿಂದ ಧಾರ್ಮಿಕ ಮಂತ್ರಣ ಸಭೆಯ ನವೀಕರಣವೆಂದು ಹೇಳಲಾಗುವಂತಹದ್ದಕ್ಕೆ ಒಂದು ಹಠಾತ್ತಾದ ತಡೆಯು ಹೊರಿಸಲ್ಪಟ್ಟಿತು. ವೈಟಿವಾ ಪುನಃಸ್ಥಾಪನೆಯೆಂದು ಕೆಲವರು ಕರೆಯುವ ಈ ಹಂತವು, “ಕಾನ್ಸ್‌ಟಂಟೀನಿಸಮ್‌ನ ಒಂದು ಹೊಸ ರೂಪ” ವೆಂದು ಒಂದು ಕ್ಯಾತೊಲಿಕ್‌ ಗುಂಪಿನಿಂದ ವಿಶದೀಕರಿಸಲ್ಪಟ್ಟಿದೆ. ಲಾ ಚೀವಿಲ್‌ಟಾ ಕಾಟಾಲಿಕಾ ಎಂಬ ಜೆಸ್ಯೂಟ್‌ ಪತ್ರಿಕೆಯಿಂದ ತೋರಿಸಲ್ಪಟ್ಟಂತೆ, ಇತರ ಧರ್ಮಗಳಂತೆ, ಕ್ಯಾತೊಲಿಕ್‌ ಚರ್ಚು “ಒಂದು ಅಮೂಲಾಗ್ರ ಮತ್ತು ಜಾಗತಿಕ ಬಿಕ್ಕಟ್ಟನ್ನು” ಎದುರಿಸುತ್ತಿದೆ: “ಅಮೂಲಾಗ್ರ ಯಾಕಂದರೆ ಅದು ನಂಬಿಕೆ ಮತ್ತು ಕ್ರಿಸ್ತೀಯ ಜೀವಿತದ ಬೇರುಗಳನ್ನೇ ಒಳಗೊಂಡಿರುತ್ತದೆ; ಜಾಗತಿಕ ಯಾಕಂದರೆ ಅದು ಕ್ರೈಸ್ತತ್ವದ ಎಲ್ಲಾ ಮುಖಗಳನ್ನು ಒಳಗೊಂಡಿರುತ್ತದೆ.”

ಕ್ರೈಸ್ತಪ್ರಪಂಚದ ಧರ್ಮಗಳು ಸುಧಾರಣೆಯ ಒಂದು ಕಾರ್ಯಗತಿಗೆ ನಿಜವಾಗಿ ಒಳಪಟ್ಟಿಲ್ಲ, ಮತ್ತು ಅವರಿದನ್ನು ಮಾಡಲೂ ಸಾಧ್ಯವಿಲ್ಲ, ಯಾಕಂದರೆ “ಕೊಯ್ಲಿನ” ಸಮಯದಲ್ಲಿ ಮಾತ್ರವೇ ನಿಜ ಕ್ರೈಸ್ತತ್ವವು ಪುನಃಸ್ಥಾಪಿಸಲ್ಪಟ್ಟು, ಸಾಂಕೇತಿಕ ಗೋದಿಯು ಒಂದೇ ಶುದ್ಧ ಸಭೆಯೊಳಗೆ ಒಟ್ಟುಗೂಡಿಸಲ್ಪಡಲಿದೆ. (ಮತ್ತಾಯ 13:30, 39) ಕ್ರೈಸ್ತರೆಂದು ಹೇಳಿಕೊಳ್ಳುತ್ತಿರಲಿ ಯಾ ಇಲ್ಲದಿರಲಿ, ಧರ್ಮದ ಹೆಸರಿನಲ್ಲಿ ನಡಿಸಲ್ಪಟ್ಟ ಅಪರಾಧಗಳು ಮತ್ತು ದುಷ್ಕಾರ್ಯಗಳು, ಕ್ರೈಸ್ತಪ್ರಪಂಚದಿಂದ ನಿಜವಾದ ಸುಧಾರಣೆಯನ್ನು ನಿರೀಕ್ಷಿಸುವದು ವಾಸ್ತವಿಕವೊ? ಎಂಬ ಪ್ರಶ್ನೆಯನ್ನು ಪ್ರೇರಿಸುತ್ತದೆ.

ಸುಧಾರಣೆಯು ಅಸಾಧ್ಯವೋ?

ಪ್ರಕಟನೆ ಪುಸ್ತಕವು, ಅಥವಾ ಅಪಾಕಲಿಪ್ಸ್‌ “ಮಹಾ ಬಾಬೆಲು” ಎಂಬ ರಹಸ್ಯವಾದಿ ಹೆಸರನ್ನು ಹೊತ್ತುಕೊಂಡಿರುವ ಒಂದು ಸಾಂಕೇತಿಕ ಮಹಾ ಜಾರಸ್ತ್ರೀಯ ಕುರಿತಾಗಿ ಮಾತಾಡುತ್ತದೆ. (ಪ್ರಕಟನೆ 17:1, 5) ಈ ಸಂಕೇತದ ರಹಸ್ಯವನ್ನು ವಿವರಿಸಲು ಅನೇಕ ಶತಮಾನಗಳಿಂದ ಬೈಬಲ್‌ ವಾಚಕರು ಪ್ರಯತ್ನಪಟ್ಟಿದ್ದಾರೆ. ವೈದಿಕರ ಐಶ್ವರ್ಯ ಮತ್ತು ಭ್ರಷ್ಟತನದಿಂದ ಅನೇಕರು ಜುಗುಪ್ಸೆಗೊಂಡಿದ್ದರು. ಮಹಾ ಬಾಬೆಲು ಕ್ರೈಸ್ತ ಮಠೀಯ ಪುರೋಹಿತ ಪ್ರಭುತ್ವವನ್ನು ಪ್ರತಿನಿಧೀಕರಿಸಿತೆಂದು ಕೆಲವರು ನೆನಸಿದರು. ಅವರಲ್ಲಿ, 1415 ರಲ್ಲಿ ಜೀವಂತವಾಗಿ ಸುಡಲ್ಪಟ್ಟ ಒಬ್ಬ ಬೊಹೀಮ್ಯನ್‌ ಕ್ಯಾತೊಲಿಕ್‌ ಪಾದ್ರಿ, ಯಾನ್‌ ಹುಸ್‌, ಮತ್ತು 1570 ರಲ್ಲಿ ಗಲ್ಲಿಗೇರಿಸಲ್ಪಟ್ಟು ಸುಡಲ್ಪಟ್ಟ ಒಬ್ಬ ಇಟ್ಯಾಲಿಯನ್‌ ಮಾನುಷ್ಯ ದಾರ್ಶನಿಕನಾಗಿದ್ದ ಆಒನ್ಯೋ ಪಾಲೆಆರಿ ಇದ್ದರು. ಅದು “ತನ್ನ ಆದಿ ಘನತೆಗೆ” ಹಿಂದಿರುಗುವುದು ಎಂಬ ನಿರೀಕ್ಷೆಯಲ್ಲಿ ಇಬ್ಬರೂ ಸಾಫಲ್ಯವಿಲ್ಲದೆ ಕ್ಯಾತೊಲಿಕ್‌ ಚರ್ಚನ್ನು ಸುಧಾರಿಸಲು ಶ್ರಮಪಟ್ಟರು.

ವ್ಯತಿರಿಕ್ತವಾಗಿ, ಪ್ರಕಟನೆಯ 17 ಮತ್ತು 18 ನೆಯ ಅಧ್ಯಾಯಗಳು, ಮಹಾ ಬಾಬೆಲು ಎಲ್ಲಾ ಸುಳ್ಳು ಧರ್ಮಗಳ ಲೋಕ ಸಾಮ್ರಾಜ್ಯವನ್ನು ಪ್ರತಿನಿಧಿಸುತ್ತದೆಂದು ಸೂಚಿಸುತ್ತವೆ.a ಈ ಸಂಘಟಿತ “ಮಹಾ ಜಾರಸ್ತ್ರೀಯು”, ಸುಧಾರಣೆ ಮಾಡಲಸಾಧ್ಯವಾದವಳಾಗಿದ್ದಾಳೆ ಯಾಕಂದರೆ “ಅವಳ ಪಾಪಗಳು ಒಂದರ ಮೇಲೊಂದು ಸೇರಿ ಆಕಾಶದ ಪರ್ಯಂತರಕ್ಕೂ ಬೆಳೆದಿವೆ.” ವಾಸ್ತವದಲ್ಲಿ, ಈ 20 ನೆಯ ಶತಮಾನದಲ್ಲಿ, ಕಾರ್ಯತಃ ಎಲ್ಲಾ ಧರ್ಮಗಳು, ಕೇವಲ ಕ್ರೈಸ್ತಪ್ರಪಂಚದವುಗಳಲ್ಲ, ಇಷ್ಟೊಂದು ರಕ್ತವನ್ನು ಸುರಿಸುವದನ್ನು ಮುಂದುವರಿಸುತ್ತಿರುವ ಯುದ್ಧಗಳಿಗಾಗಿ ಮತ್ತು ಮಾನವಕುಲವನ್ನು ಬಾಧಿಸುತ್ತಿರುವ ವಿಪರೀತ ನೈತಿಕ ಅವನತಿಯ ಹೊಣೆಗಾರಿಕೆಯಲ್ಲಿ ಪಾಲಿಗರಾಗಿದ್ದಾರೆ. ಫಲಸ್ವರೂಪವಾಗಿ, ದೇವರು “ಬಾಬೆಲಿನ” ನಾಶನವನ್ನು ವಿಧಿಸಿದ್ದಾನೆ.—ಪ್ರಕಟನೆ 18:5, 8.

“ಅವಳನ್ನು ಬಿಟ್ಟು ಹೊರಗೆ” ಬರಲು ಸಮಯವು ಇದಾಗಿದೆ

ಬೈಬಲ್‌ ಪ್ರವಾದನೆಗಳ ನೆರವೇರಿಕೆಯು, ನಮ್ಮ ದಿನಗಳು ಈ ದುಷ್ಟ “ವಿಷಯ ವ್ಯವಸ್ಥೆಯ ಸಮಾಪ್ತಿಗೆ” ಸದೃಶವಾಗಿವೆಯೆಂದು ಪ್ರಕಟಪಡಿಸುತ್ತದೆ. (ಮತ್ತಾಯ 24:3, NW) ದೇವರನ್ನು ಯಥಾರ್ಥವಾಗಿ ಆರಾಧಿಸಲು ಬಯಸುವ ಯಾವನಾದರೂ ತನ್ನ ಸ್ವಂತ ಅಭಿಪ್ರಾಯಗಳನ್ನು ಮತ್ತು ಇಷ್ಟಗಳನ್ನು ಅನುಸರಿಸಲಾರನು. ಅವನು ‘ಯೆಹೋವನು ಸಿಕ್ಕುವ ಕಾಲದಲ್ಲಿ’ ಹೌದು, ಈಗಲೇ ‘ಆತನನ್ನು ಆಶ್ರಯಿಸಬೇಕು,’ ಯಾಕಂದರೆ ಯೇಸುವಿನಿಂದ ಮುಂತಿಳಿಸಲ್ಪಟ್ಟ “ಮಹಾ ಸಂಕಟವು” ಹತ್ತಿರವಿದೆ. (ಯೆಶಾಯ 55:6; ಮತ್ತಾಯ 24:21, NW) ಇಸ್ರಾಯೇಲಿನ ಜನರ ವಿಷಯದಲ್ಲಿ ಸತ್ಯವಾಗಿದ್ದಂತೆ, ತನ್ನ ಪುರಾತನತ್ವದ ಕುರಿತಾಗಿ ಅದು ಕೇವಲ ಕೊಚ್ಚಿಕೊಳ್ಳುವದರಿಂದ ದೇವರು ಧರ್ಮವೊಂದರ ಭ್ರಷ್ಟತೆಯನ್ನು ಸಹಿಸಲಾರನು. ಮುಳುಗಲು ವಿಧಿಸಲ್ಪಟ್ಟ ಒಂದು ಹಡಗನ್ನು ದುರಸ್ತು ಮಾಡಲು ಶ್ರಮಿಸುವ ಬದಲಿಗೆ, ದೇವರ ಮೆಚ್ಚಿಕೆ ಮತ್ತು ರಕ್ಷಣೆಯನ್ನು ಆಶಿಸುವವರೆಲ್ಲರೂ ವಿಳಂಬವಿಲ್ಲದೆ ಪ್ರಕಟನೆ 18:4ರ (NW) ಪ್ರೇರಿತ ಆಜೆಗ್ಞೆ ವಿಧೇಯರಾಗಬೇಕು: “ಅವಳೊಂದಿಗೆ ಅವಳ ಪಾಪಗಳಲ್ಲಿ ಪಾಲುಗಾರರಾಗಲು ನೀವು ಬಯಸದಿದ್ದರೆ, ಮತ್ತು ಅವಳ ಉಪದ್ರವಗಳ ಅಂಶವನ್ನು ಪಡೆಯಲು ನೀವು ಬಯಸದಿದ್ದರೆ, ನನ್ನ ಜನರೇ, [ಮಹಾ ಬಾಬೆಲನ್ನು] ಬಿಟ್ಟು ಹೊರಗೆ ಬನ್ನಿರಿ.”

ಆದರೆ ‘ಹೊರಗೆ ಬಂದು’ ಹೋಗುವದೆಲ್ಲಿಗೆ? ಇನ್ನೆಲ್ಲಿ ರಕ್ಷಣೆಯು ಸಿಗುತ್ತದೆ? ತಪ್ಪಾದ ಸ್ಥಳದಲ್ಲಿ ಆಶ್ರಯವನ್ನು ಹುಡುಕುವ ಅಪಾಯವಿದೆಯಲ್ಲವೇ? ದೇವರ ಮೆಚ್ಚಿಕೆಯಿರುವ ಒಂದೇ ಧರ್ಮವನ್ನು ಹೇಗೆ ಗುರುತಿಸಸಾಧ್ಯವಿದೆ? ಏಕಮಾತ್ರ ಭರವಸಾರ್ಹವಾದ ಉತ್ತರಗಳನ್ನು ದೇವರ ವಾಕ್ಯದಲ್ಲಿ ಕಂಡುಕೊಳ್ಳಸಾಧ್ಯವಿದೆ. (2 ತಿಮೊಥೆಯ 3:16, 17) ಬೈಬಲನ್ನು ಹೆಚ್ಚು ನಿಕಟವಾಗಿ ಪರೀಕ್ಷಿಸಲು ಯೆಹೋವನ ಸಾಕ್ಷಿಗಳು ನಿಮ್ಮನ್ನು ಆಮಂತ್ರಿಸುತ್ತಾರೆ. ತನ್ನ ಆಸನ್ನವಾಗಿರುವ ಕೋಪದ ದಿನದಲ್ಲಿ ಆತನು ಕಾಪಾಡಲಿರುವ ‘ತನ್ನ ಹೆಸರಿಗಾಗಿರುವ ಒಂದು ಪ್ರಜೆ’ಯಾಗಿ ದೇವರು ಆರಿಸಿರುವವರು ಯಾರೆಂದು ನೀವು ತಿಳಿಯಲು ಶಕ್ತರಾಗುವಿರಿ.—ಅ. ಕೃತ್ಯಗಳು 15:14; ಚೆಫನ್ಯ 2:3; ಪ್ರಕಟನೆ 16:14-16.

[ಅಧ್ಯಯನ ಪ್ರಶ್ನೆಗಳು]

a  ಶಾಸ್ತ್ರೀಯವಾಗಿ ಸರಿಯಾದ ವಿಧದಲ್ಲಿ ಸಾಂಕೇತಿಕ ಮಹಾ ಬಾಬೆಲನ್ನು ಗುರುತಿಸಲು 1988 ರಲ್ಲಿ ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿಸಲಾದ ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ! (ಇಂಗ್ಲಿಷ್‌) ಪುಸ್ತಕದ ಅಧ್ಯಾಯಗಳು 33 ರಿಂದ 37ರ ತನಕ ನೋಡಿರಿ.

[ಪುಟ 7 ರಲ್ಲಿರುವ ಚಿತ್ರ]

ನಿಮ್ಮ ಧಾರ್ಮಿಕ ಹಡಗು ಮುಳುಗುತ್ತಿದೆಯಾದರೆ, ನಿಜ ಕ್ರೈಸ್ತತ್ವದ ರಕ್ಷಣಾ ಹಡಗಿಗೆ ತಿರುಗಿರಿ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ