ಯೆಹೋವನು ನಿಮ್ಮನ್ನು ಬಲಿಷ್ಠರನ್ನಾಗಿ ಮಾಡಬಲ್ಲನು
“ಸೋತವನಿಗೆ ತ್ರಾಣವನ್ನು ಅನುಗ್ರಹಿಸಿ ನಿರ್ಬಲನಿಗೆ ಬಹು ಬಲವನ್ನು ದಯಪಾಲಿಸುತ್ತಾನೆ.”—ಯೆಶಾಯ 40:29.
1, 2. ಯೆಹೋವನ ಹೇರಳವಾದ ಶಕ್ತಿಯ ಕೆಲವು ಪ್ರಮಾಣಗಳಾವುವು?
ಯೆಹೋವನು “ಪರಾಕ್ರಮಿ” ಯಾದ ದೇವರಾಗಿದ್ದಾನೆ. ದೇವರ “ನಿತ್ಯಶಕ್ತಿ ಹಾಗೂ ದೇವತ್ವದ” ಪ್ರಮಾಣವನ್ನು ನಾವು ಆತನ ಭೌತಿಕ ಸೃಷ್ಟಿಯ ವೈಭವದಲ್ಲಿ ನೋಡಬಲ್ಲೆವು. ಆತನ ಸೃಷ್ಟಿಕರ್ತೃತ್ವದ ಇಂತಹ ಪ್ರಮಾಣವನ್ನು ಅಂಗೀಕರಿಸಲು ನಿರಾಕರಿಸುವವರು ಅಕ್ಷಮ್ಯರು.—ಕೀರ್ತನೆ 147:5; ರೋಮಾಪುರ 1:19, 20, NW.
2 ವಿಜ್ಞಾನಿಗಳು ವಿಶ್ವವನ್ನು—ಅದರ ಕೋಟ್ಯನುಕೋಟಿ ಜ್ಯೋತಿರ್ವರ್ಷಗಳ ವರೆಗೆ ವಿಸ್ತರಿಸುವ ಎಣಿಕೆಯಿಲ್ಲದ ಆಕಾಶಗಂಗೆಗಳನ್ನು—ಆಳವಾಗಿ ಶೋಧಿಸಿದಂತೆ, ಯೆಹೋವನ ಬಲವು ಹೆಚ್ಚೆಚ್ಚಾಗಿ ಸುವ್ಯಕ್ತವಾಗುತ್ತದೆ. ಕತ್ತಲಾದ ಆದರೆ ಮೋಡರಹಿತ ರಾತ್ರಿಯಂದು ಸ್ವರ್ಗಗಳನ್ನು ದಿಟ್ಟಿಸು ನೋಡಿರಿ ಮತ್ತು ನಿಮಗೆ ಕೀರ್ತನೆಗಾರನಂತೆ ಅನಿಸುವುದು ಬಹಳ ಸಂಭವನೀಯ: “ನಿನ್ನ ಕೈಕೆಲಸವಾಗಿರುವ ಆಕಾಶಮಂಡಲವನ್ನೂ ನೀನು ಉಂಟುಮಾಡಿದ ಚಂದ್ರನಕ್ಷತ್ರಗಳನ್ನೂ ನಾನು ನೋಡುವಾಗ—ಮನುಷ್ಯನು ಎಷ್ಟು ಮಾತ್ರದವನು, ಅವನನ್ನು ನೀನು ಯಾಕೆ ನೆನಸಬೇಕು? ಮಾನವನು ಎಷ್ಟರವನು, ಅವನಲ್ಲಿ ಯಾಕೆ ಲಕ್ಷ್ಯವಿಡಬೇಕು?” (ಕೀರ್ತನೆ 8:3, 4) ಮತ್ತು ಯೆಹೋವನು ಮನುಷ್ಯನ, ನಮ್ಮ ಎಷ್ಟು ಒಳ್ಳೆಯ ಕಾಳಜಿಯನ್ನು ವಹಿಸಿದ್ದಾನೆ! ಪ್ರಥಮ ಪುರುಷ ಮತ್ತು ಸ್ತ್ರೀಗೆ ಆತನು ಸುಂದರವಾದೊಂದು ಭೂಗೃಹವನ್ನು ಒದಗಿಸಿದನು. ಅದರ ಮಣ್ಣಿಗೂ—ಪುಷ್ಟಿಕರ, ಮಲಿನವಾಗದ ಆಹಾರವನ್ನು ನೀಡುತ್ತಾ, ಸಸ್ಯವನ್ನು ಬೆಳೆಸಲಿಕ್ಕಾಗಿ—ಶಕಿಯ್ತಿತ್ತು. ದೇವರ ಶಕ್ತಿಯ ಈ ಪ್ರದರ್ಶನದಿಂದ ಮನುಷ್ಯ ಮತ್ತು ಪ್ರಾಣಿಗಳು ಭೌತಿಕ ಶಕ್ತಿಯನ್ನು ಪಡೆಯುತ್ತವೆ.—ಆದಿಕಾಂಡ 1:12; 4:12; 1 ಸಮುವೇಲ 28:22.
3. ವಿಶ್ವದ ಭೌತಿಕ ವಿಷಯಗಳನ್ನು ಹೊರತುಪಡಿಸಿ, ಬೇರೆ ಯಾವ ಸಂಗತಿಯು ದೇವರ ಶಕ್ತಿಯನ್ನು ಪ್ರದರ್ಶಿಸುತ್ತದೆ?
3 ಸ್ವರ್ಗಗಳು ಆಕರ್ಷಕವಾಗಿಯೂ ಮತ್ತು ಭೂಮಿಯ ಸಸ್ಯವರ್ಗ ಹಾಗೂ ಪ್ರಾಣಿವರ್ಗವು ಮನೋಹರವಾಗಿಯೂ ಇರುವುದಲ್ಲದೆ, ಅವು ನಮಗೆ ದೇವರ ಶಕ್ತಿಯನ್ನು ಪ್ರದರ್ಶಿಸುತ್ತವೆ. ಅಪೊಸ್ತಲ ಪೌಲನು ಬರೆದದ್ದು: “ಹೇಗಂದರೆ ಕಣ್ಣಿಗೆ ಕಾಣದಿರುವ ಆತನ ಗುಣಲಕ್ಷಣಗಳು ಅಂದರೆ ಆತನ ನಿತ್ಯಶಕ್ತಿಯೂ ದೇವತ್ವವೂ ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತವೆ.” (ರೋಮಾಪುರ 1:20) ಆದರೆ ನಮ್ಮ ಗಮನಕ್ಕೆ ಮತ್ತು ಗಣ್ಯತೆಗೆ ಯೋಗ್ಯವಾಗಿರುವ ಆತನ ಶಕ್ತಿಯ ಇನ್ನೊಂದು ಪ್ರಮಾಣವಿದೆ. ‘ವಿಶ್ವಕ್ಕಿಂತ ಹೆಚ್ಚಾಗಿ ದೇವರ ಶಕ್ತಿಯನ್ನು ಯಾವುದು ಪ್ರದರ್ಶಿಸುತ್ತದೆ?’ ಎಂದು ನೀವು ಆಶ್ಚರ್ಯಪಡಬಹುದು. ಉತ್ತರವು ಯೇಸು ಕ್ರಿಸ್ತನು. ವಾಸ್ತವವಾಗಿ, ದೇವಪ್ರೇರಣೆಯ ಮೂಲಕ ಅಪೊಸ್ತಲ ಪೌಲನು ಹೇಳುವುದೇನೆಂದರೆ, ಶೂಲಕ್ಕೆ ಏರಿಸಲ್ಪಟ್ಟ ಕ್ರಿಸ್ತನು “ದೇವರ ಶಕ್ತಿಯೂ ದೇವರ ಜ್ಞಾನವೂ” ಆಗಿದ್ದಾನೆ. (1 ಕೊರಿಂಥ 1:24) ‘ಅದು ಏಕೆ?’ ಎಂದು ನೀವು ಕೇಳಬಹುದು, ‘ಮತ್ತು ಅದು ನನ್ನ ಜೀವಿತದ ಮೇಲೆ ಈಗ ಯಾವ ಪ್ರಭಾವವನ್ನು ಬೀರಬಲ್ಲದು?’
ತನ್ನ ಮಗನ ಮುಖಾಂತರ ಪ್ರದರ್ಶಿಸಲ್ಪಟ್ಟ ಶಕ್ತಿ
4. ತನ್ನ ಮಗನ ಸಂಬಂಧದಲ್ಲಿ ದೇವರ ಶಕ್ತಿಯು ಹೇಗೆ ತೋರಿಸಲ್ಪಟ್ಟಿತು?
4 ತನ್ನ ಏಕಜಾತ ಪುತ್ರನನ್ನು ತನ್ನ ಸ್ವರೂಪದಲ್ಲಿ ದೇವರು ಸೃಷ್ಟಿಸಿದಾಗ ಆತನ ಶಕ್ತಿಯು ಪ್ರಥಮವಾಗಿ ಪ್ರದರ್ಶಿಸಲ್ಪಟ್ಟಿತು. ಇತರ ಎಲ್ಲ ವಿಷಯಗಳನ್ನು ಸೃಷ್ಟಿಸುವುದರಲ್ಲಿ ದೇವರ ಹೇರಳವಾದ ಶಕ್ತಿಯನ್ನು ಉಪಯೋಗಿಸುವ ಮೂಲಕ, ಈ ಆತ್ಮ ಪುತ್ರನು “ಕುಶಲ ಶಿಲ್ಪಿ” ಯೋಪಾದಿ ಯೆಹೋವನನ್ನು ಸೇವಿಸಿದನು. (ಜ್ಞಾನೋಕ್ತಿ 8:22, 30, NW) ಕೊಲೊಸ್ಸೆಯಲ್ಲಿದ್ದ ತನ್ನ ಕ್ರೈಸ್ತ ಸಹೋದರರಿಗೆ ಪೌಲನು ಬರೆದದ್ದು: “ಭೂಪರಲೋಕಗಳಲ್ಲಿರುವ ದೃಶ್ಯಾದೃಶ್ಯವಾದವುಗಳೆಲ್ಲವೂ . . . ಆತನಲ್ಲಿ ಸೃಷ್ಟಿಸಲ್ಪಟ್ಟವು. ಸರ್ವವು ಆತನ ಮುಖಾಂತರವಾಗಿಯೂ ಆತನಿಗೋಸ್ಕರವಾಗಿಯೂ ಸೃಷ್ಟಿಸಲ್ಪಟ್ಟಿತು.”—ಕೊಲೊಸ್ಸೆ 1:15, 16.
5-7. (ಎ) ಪೂರ್ವದಲ್ಲಿ, ದೇವರ ಶಕ್ತಿಯ ಪ್ರದರ್ಶನಗಳಲ್ಲಿ ಮಾನವರು ಹೇಗೆ ಒಳಗೊಂಡಿದ್ದರು? (ಬಿ) ಇಂದು ಕ್ರೈಸ್ತರ ವಿಷಯದಲ್ಲಿ ದೇವರ ಶಕ್ತಿಯು ಪ್ರದರ್ಶಿಸಲ್ಪಡಬಲ್ಲದೆಂದು ನಂಬಲು ಯಾವ ಕಾರಣವಿದೆ?
5 ನಾವು ‘ಭೂಮಿಯ ಮೇಲೆ ಸೃಷ್ಟಿಸಲ್ಪಟ್ಟ ವಿಷಯಗಳ’ ಭಾಗವಾಗಿದ್ದೇವೆ. ಆದುದರಿಂದ ಮಾನವರಾದ ನಮ್ಮ ಕಡೆಗೆ ದೇವರ ಶಕ್ತಿಯು ವಿಸ್ತರಿಸಬಲದ್ಲೊ? ಒಳ್ಳೇದು, ಅಪರಿಪೂರ್ಣ ಮಾನವರೊಂದಿಗೆ ದೇವರ ವ್ಯವಹಾರದ ಉದ್ದಕ್ಕೂ, ಆತನ ಉದ್ದೇಶಗಳನ್ನು ನೆರವೇರಿಸುವ ಸಲುವಾಗಿ ತನ್ನ ಸೇವಕರಿಗೆ ಯೆಹೋವನು ಕೆಲವು ನಿರ್ದಿಷ್ಟ ಸಮಯಗಳಲ್ಲಿ ಹೆಚ್ಚಿನ ಶಕ್ತಿಯನ್ನು ನೀಡಿದ್ದಾನೆ. ಸಾಧಾರಣವಾಗಿ ಅಪರಿಪೂರ್ಣ ಮಾನವರು 70 ಯಾ 80 ವರ್ಷಗಳು ಜೀವಿಸುತ್ತಾರೆಂದು ಮೋಶೆಗೆ ಗೊತ್ತಿತ್ತು. (ಕೀರ್ತನೆ 90:10) ಸ್ವತಃ ಮೋಶೆಯ ಕುರಿತೇನು? ಅವನು 120 ವರ್ಷ ವಯಸ್ಸಿನ ವರೆಗೆ ಜೀವಿಸಿದನು, ಆದರೂ “ಅವನ ಕಣ್ಣು ಮೊಬ್ಬಾಗಲಿಲ್ಲ, ಅವನ ಜೀವಕಳೆ ಕುಂದಿಹೋಗಿರಲಿಲ್ಲ.” (ಧರ್ಮೋಪದೇಶಕಾಂಡ 34:7) ಅಂತಹ ಚೈತನ್ಯವನ್ನು ಕಾಪಾಡಿಕೊಳ್ಳುವಂತೆ ಯಾ ಅಷ್ಟು ದೀರ್ಘವಾದ ಜೀವಿತವನ್ನು ಜೀವಿಸುವಂತೆ ದೇವರು ತನ್ನ ಪ್ರತಿಯೊಬ್ಬ ಸೇವಕನನ್ನು ಶಕ್ತನನ್ನಾಗಿ ಮಾಡುವನೆಂದು ಇದು ಅರ್ಥೈಸುವುದಿಲ್ಲವಾದರೂ, ಯೆಹೋವನು ಮಾನವರನ್ನು ಶಕ್ತರನ್ನಾಗಿ ಮಾಡಬಲ್ಲನೆಂದು ಇದು ರುಜುಪಡಿಸುತ್ತದೆ.
6 ಪುರುಷರಿಗೆ ಮತ್ತು ಸ್ತ್ರೀಯರಿಗೆ ಶಕಿಕ್ತೊಡಬಲ್ಲ ದೇವರ ಸಾಮರ್ಥ್ಯವನ್ನು ಇನ್ನೂ ಹೆಚ್ಚಾಗಿ ತೋರಿಸುವ ವಿಷಯವು, ಆತನು ಅಬ್ರಹಾಮನ ಹೆಂಡತಿಗೆ ಮಾಡಿದ ಸಂಗತಿಯಾಗಿದೆ. “ಸಾರಳು ವಾಗ್ದಾನಮಾಡಿದಾತನನ್ನು ನಂಬತಕ್ಕವನೆಂದೆಣಿಸಿ ತಾನು ಪ್ರಾಯಮೀರಿದವಳಾಗಿದ್ದರೂ ನಂಬಿಕೆಯಿಂದಲೇ ಗರ್ಭವತಿಯಾಗುವದಕ್ಕೆ ಶಕ್ತಿಯನ್ನು ಹೊಂದಿದಳು.” ಅಥವಾ ಇಸ್ರಾಯೇಲಿನಲ್ಲಿ ನ್ಯಾಯಸ್ಥಾಪಕರನ್ನು ಮತ್ತು ಇತರರನ್ನು ಯೆಹೋವನು ಹೇಗೆ ಶಕ್ತರನ್ನಾಗಿ ಮಾಡಿದನೆಂಬುದನ್ನು ಪರಿಗಣಿಸಿರಿ: “ಗಿಡಿಯೋನ್ ಬಾರಾಕ್ ಸಂಸೋನ್ ಎಫ್ಥ ದಾವೀದ್ ಸಮುವೇಲ್ . . . ನಿರ್ಬಲರಾಗಿದ್ದು ಬಲಿಷ್ಠರಾದರು.”—ಇಬ್ರಿಯ 11:11, 32-34.
7 ಅಂತಹ ಶಕ್ತಿಯು ನಮ್ಮ ವಿಷಯದಲ್ಲಿಯೂ ಕಾರ್ಯಕಾರಿಯಾಗಬಲ್ಲದು. ಒಂದು ಅದ್ಭುತದ ಮೂಲಕ ನಾವು ಈಗ ಸಂತಾನವನ್ನು ಅಪೇಕ್ಷಿಸದಿರಬಹುದು, ಯಾ ಸಂಸೋನನಂತಹ ದೇಹಬಲವನ್ನು ನಾವು ಪ್ರದರ್ಶಿಸದಿರಬಹುದು. ಆದರೆ ಕೊಲೊಸ್ಸೆಯಲ್ಲಿದ್ದ ಸಾಮಾನ್ಯ ಮಾನವರಿಗೆ ಪೌಲನು ಉಲ್ಲೇಖಿಸಿದಂತೆ, ನಾವು ಬಲಿಷ್ಠರಾಗಿರಬಲ್ಲೆವು. ಹೌದು, ಪೌಲನು ಪುರುಷರಿಗೆ, ಸ್ತ್ರೀಯರಿಗೆ, ಮತ್ತು ಮಕ್ಕಳಿಗೆ—ಇಂದು ನಾವು ಸಭೆಗಳಲ್ಲಿ ಕಂಡುಕೊಳ್ಳುವಂತೆಯೇ—ಬರೆದನು, ಮತ್ತು ಅವರು “ಆತನ ಮಹಿಮಶಕ್ತಿಯ ಪ್ರಕಾರ . . . ಬಲಿಷ್ಠರಾಗಿ” ಮಾಡಲ್ಪಡುತ್ತಿದ್ದರೆಂದು ಅವನಂದನು.—ಕೊಲೊಸ್ಸೆ 1:11.
8, 9. ಪ್ರಥಮ ಶತಮಾನದಲ್ಲಿ, ನಮ್ಮಂತಹ ಮಾನವರ ವಿಷಯದಲ್ಲಿ ಯೆಹೋವನ ಶಕ್ತಿಯು ಹೇಗೆ ವ್ಯಕ್ತಿಗೊಳಿಸಲ್ಪಟ್ಟಿತು?
8 ಯೇಸುವಿನ ಭೂಶುಶ್ರೂಷೆಯ ಸಮಯದಲ್ಲಿ, ತನ್ನ ಮಗನ ಮುಖಾಂತರ ಆತನ ಶಕ್ತಿಯು ಕೆಲಸಮಾಡುತ್ತಿದೆ ಎಂಬುದನ್ನು ಯೆಹೋವನು ಸೃಷ್ಟಗೊಳಿಸಿದನು. ಉದಾಹರಣೆಗೆ, ಕಪೆರ್ನೌಮಿನಲ್ಲಿ ಯೇಸುವಿನ ಬಳಿಗೆ ಸಮೂಹಗಳು ಒಟ್ಟುಗೂಡಿದ ಸಮಯ, “ಗುಣಮಾಡುವದಕ್ಕೆ ಕರ್ತನ (ಯೆಹೋವನ, NW) ಶಕ್ತಿಯು ಆತನಲ್ಲಿತ್ತು.”—ಲೂಕ 5:17.
9 ತನ್ನ ಪುನರುತ್ಥಾನವನ್ನು ಅನುಸರಿಸಿ, ‘ಪವಿತ್ರಾತ್ಮವು ಅವರ ಮೇಲೆ ಬರಲು ಅವರು ಬಲವನ್ನು ಹೊಂದುವರೆಂದು’ ಯೇಸು ತನ್ನ ಹಿಂಬಾಲಕರಿಗೆ ಆಶ್ವಾಸನೆಯನ್ನೀಡಿದನು. (ಅ. ಕೃತ್ಯಗಳು 1:8) ಎಷ್ಟು ಸತ್ಯವಾಗಿತ್ತು! ಸಾ.ಶ. 33ರ ಪಂಚಾಶತ್ತಮದ ಅನಂತರ, ಕೆಲವು ದಿನಗಳಲ್ಲಿ ಸಂಭವಿಸಿದ ಬೆಳವಣಿಗೆಗಳ ಕುರಿತು ಒಬ್ಬ ಇತಿಹಾಸಗಾರನು ವರದಿಸುವುದು: “ಕರ್ತನಾದ ಯೇಸು ಜೀವಂತವಾಗಿ ಎದ್ದುಬಂದನೆಂಬದಕ್ಕೆ ಅಪೊಸ್ತಲರು ಬಹು ಬಲವಾಗಿ ಸಾಕ್ಷಿಹೇಳುತ್ತಿದ್ದರು.” (ಅ. ಕೃತ್ಯಗಳು 4:33) ತಾನು ಮಾಡಬೇಕೆಂದು ದೇವರು ನಿಯೋಗಿಸಿದ ಕೆಲಸಕ್ಕಾಗಿ ಶಕ್ತಿಶಾಲಿಯಾಗಿ ಮಾಡಲ್ಪಟ್ಟ ಒಬ್ಬ ವ್ಯಕ್ತಿ ಸ್ವತಃ ಪೌಲನಾಗಿದ್ದನು. ತನ್ನ ಮತಾಂತರ ಮತ್ತು ದೃಷ್ಟಿಯ ಗುಣಹೊಂದುವಿಕೆಯ ಅನಂತರ, ಅವನು “ಅಧಿಕ ಸಾಮರ್ಥ್ಯವುಳ್ಳವನಾಗಿ ಯೇಸುವೇ ಕ್ರಿಸ್ತನೆಂದು ಸಿದ್ಧಾಂತಪಡಿಸಿ ದಮಸ್ಕದಲ್ಲಿದ್ದ ಯೆಹೂದ್ಯರನ್ನು ಉತ್ತರವಿಲ್ಲದವರಾಗಿ ಮಾಡಿದನು.”—ಅ. ಕೃತ್ಯಗಳು 9:22.
10. ದೇವರಿಂದ ಬಂದ ಶಕ್ತಿಯು ಪೌಲನ ವಿಷಯದಲ್ಲಿ ಹೇಗೆ ಸಹಾಯಕಾರಿಯಾಗಿತ್ತು?
10 ಸಾವಿರಾರು ಕಿಲೊಮೀಟರುಗಳನ್ನು ಆವರಿಸುವ ಮೂರು ಮಿಷನೆರಿ ಪ್ರಯಾಣಗಳನ್ನು ಪೂರೈಸಲು ಬೇಕಿದ್ದ ಆತ್ಮಿಕ ಮತ್ತು ಮಾನಸಿಕ ದಾರ್ಢ್ಯವನ್ನು ನಾವು ಪರಿಗಣಿಸುವಾಗ, ಖಂಡಿತವಾಗಿ ಪೌಲನಿಗೆ ಹೆಚ್ಚಿನ ಶಕ್ತಿಯ ಅಗತ್ಯವಿತ್ತು. ಸೆರೆಮನೆವಾಸಗಳನ್ನು ತಾಳಿಕೊಳ್ಳುತ್ತಾ ಮತ್ತು ಮರಣವನ್ನು ಎದುರಿಸುತ್ತಾ, ಅವನು ಎಲ್ಲ ಪ್ರಕಾರದ ಯಾತನೆಗಳನ್ನು ಸಹಿಸಿದನು. ಹೇಗೆ? ಅವನು ಉತ್ತರಿಸಿದ್ದು: “ಆದರೆ ಕರ್ತನು ನನ್ನ ಬಳಿಯಲ್ಲಿ ನಿಂತು ನನ್ನನ್ನು ಬಲಪಡಿಸಿ ನನ್ನ ಮೂಲಕ ಸುವಾರ್ತೆಯು ಸಂಪೂರ್ಣವಾಗಿ ಸಾರಲ್ಪಡುವಂತೆ . . . ಮಾಡಿದನು.”—2 ತಿಮೊಥೆಯ 4:6-8, 17; 2 ಕೊರಿಂಥ 11:23-27.
11. ದೇವರ ಶಕ್ತಿಯ ವಿಷಯದಲ್ಲಿ, ಕೊಲೊಸ್ಸೆಯಲ್ಲಿದ್ದ ತನ್ನ ಜೊತೆ ಸೇವಕರಿಗಾಗಿ ಯಾವ ನಿರೀಕ್ಷೆಯನ್ನು ಪೌಲನು ಸೂಚಿಸಿದನು?
11 ಹಾಗಾದರೆ, ಕೊಲೊಸ್ಸೆಯಲ್ಲಿ “ಕ್ರಿಸ್ತನಲ್ಲಿರುವ . . . ಸಹೋದರರಿಗೆ” ಬರೆಯುವಾಗ, “ಆತನ [ಯೆಹೋವನ] ಮಹಿಮಶಕ್ತಿಯ ಪ್ರಕಾರ ಪರಿಪೂರ್ಣಬಲಹೊಂದಿ ಬಲಿಷ್ಠರಾಗಿ ಆನಂದಪೂರ್ವಕವಾದ ತಾಳ್ಮೆಯನ್ನೂ ದೀರ್ಘಶಾಂತಿಯನ್ನೂ ಯಾವಾಗಲೂ ತೋರಿಸ” ಬಹುದಿತ್ತೆಂದು ಪೌಲನು ಅವರಿಗೆ ಆಶ್ವಾಸನೆ ನೀಡಿದರ್ದಲ್ಲಿ ಆಶ್ಚರ್ಯವೇನೂ ಇರುವುದಿಲ್ಲ. (ಕೊಲೊಸ್ಸೆ 1:2, 11) ಆ ಮಾತುಗಳು ಪ್ರಥಮವಾಗಿ ಅಭಿಷಿಕ್ತ ಕ್ರೈಸ್ತರಿಗೆ ಸಂಬೋಧಿಸಲ್ಪಟ್ಟಿದ್ದರೂ, ಕ್ರಿಸ್ತನ ಹೆಜ್ಜೆಜಾಡನ್ನು ಅನುಸರಿಸುವ ಎಲ್ಲರೂ ಪೌಲನು ಬರೆದ ವಿಷಯದಿಂದ ಬಹಳವಾಗಿ ಪ್ರಯೋಜನಪಡೆಯಬಲ್ಲರು.
ಕೊಲೊಸ್ಸೆಯಲ್ಲಿ ಬಲಿಷ್ಠರಾಗಿ ಮಾಡಲ್ಪಟ್ಟದ್ದು
12, 13. ಕೊಲೊಸ್ಸೆಯವರಿಗೆ ಬರೆದ ಪತ್ರದ ಹಿನ್ನೆಲೆ ಏನಾಗಿದೆ, ಮತ್ತು ಅದಕ್ಕೆ ಬಂದ ಪ್ರತಿಕ್ರಿಯೆ ಬಹುಶಃ ಏನಾಗಿತ್ತು?
12 ಏಷಿಯಾದ ರೋಮನ್ ಪ್ರಾಂತ್ಯದಲ್ಲಿದ್ದ ಕೊಲೊಸ್ಸೆ ಪಟ್ಟಣದ ಸಭೆಯು, ಎಪಫ್ರ ಎಂಬ ನಂಬಿಗಸ್ತ ಕ್ರೈಸ್ತನ ಸಾರುವಿಕೆಯ ಮುಖಾಂತರ ಬಹುಶಃ ರೂಪಗೊಂಡಿತ್ತು. ಸಾ.ಶ. 58ರ ಸುಮಾರಿಗೆ ರೋಮಿನಲ್ಲಿ ಪೌಲನ ಬಂಧನದ ಕುರಿತು ಅವನು ಕೇಳಿದಾಗ, ಅಪೊಸ್ತಲನನ್ನು ಭೇಟಿಯಾಗಲು ಮತ್ತು ಕೊಲೊಸ್ಸೆಯಲ್ಲಿದ್ದ ತನ್ನ ಸಹೋದರರ ಪ್ರೀತಿ ಮತ್ತು ಸ್ಥಿರಚಿತ್ತದ ಉತ್ತಮ ವರದಿಯಿಂದ ಅವನನ್ನು ಪ್ರೋತ್ಸಾಹಿಸಲು ಎಪಫ್ರನು ನಿಶ್ಚಯಿಸಿದನೆಂದು ತೋರುತ್ತದೆ. ಕೊಲೊಸ್ಸೆಯ ಸಭೆಯಲ್ಲಿ ತಿದ್ದುಪಡಿಯ ಅಗತ್ಯವಿದ್ದ ಕೆಲವು ಸಮಸ್ಯೆಗಳ ನಂಬಿಗಸ್ತ ವರದಿಯನ್ನು ಸಹ ಎಪಫ್ರನು ಬಹುಶಃ ನೀಡಿದನು. ಸರದಿಯಾಗಿ, ಸಭೆಗೆ ಉತ್ತೇಜನದ ಮತ್ತು ಬುದ್ಧಿವಾದದ ಪತ್ರವನ್ನು ಬರೆಯುವಂತೆ ಪೌಲನು ಪ್ರೇರಿಸಲ್ಪಟ್ಟನು. ಆ ಪತ್ರದ ಮೊದಲನೆಯ ಅಧ್ಯಾಯದಿಂದ ನೀವು ಸಹ ಗಣನೀಯ ಉತ್ತೇಜನವನ್ನು ಪಡೆಯಬಹುದು, ಯಾಕೆಂದರೆ ಯೆಹೋವನು ತನ್ನ ಸೇವಕರನ್ನು ಹೇಗೆ ಬಲಿಷ್ಠರನ್ನಾಗಿ ಮಾಡಬಲ್ಲನೆಂಬುದನ್ನು ಅದು ವ್ಯಕ್ತಪಡಿಸುತ್ತದೆ.
13 ಪೌಲನು ಅವರನ್ನು “ಕ್ರಿಸ್ತನಲ್ಲಿರುವ ನಂಬಿಗಸ್ತರಾದ ಸಹೋದರ”ರು ಎಂಬುದಾಗಿ ವರ್ಣಿಸಿದಾಗ, ಕೊಲೊಸ್ಸೆಯಲ್ಲಿದ್ದ ಸಹೋದರ ಸಹೋದರಿಯರಿಗೆ ಹೇಗನಿಸಿರಬಹುದೆಂದು ನೀವು ಊಹಿಸಬಲ್ಲಿರಿ. ಅವರು ಕ್ರೈಸ್ತರಾದ ಸಮಯದಿಂದ ‘ದೇವಜನರ ಮೇಲಿರುವ ಪ್ರೀತಿಗಾಗಿ’ ಮತ್ತು ‘ಸುವಾರ್ತೆಯ ಫಲಕೊಡುವುದಕ್ಕಾಗಿ’ ಪ್ರಶಂಸೆಗೆ ಅರ್ಹರಾಗಿದ್ದರು! ನಮ್ಮ ಸಭೆಯ ಕುರಿತು, ವೈಯಕ್ತಿಕವಾಗಿ ನಮ್ಮೆಲ್ಲರ ಕುರಿತು ತದ್ರೀತಿಯ ಅಭಿವ್ಯಕ್ತಿಗಳನ್ನು ಮಾಡಸಾಧ್ಯವಿದೆಯೊ?—ಕೊಲೊಸ್ಸೆ 1:2-8.
14. ಕೊಲೊಸ್ಸೆಯವರ ಕುರಿತು ಪೌಲನ ಬಯಕೆ ಏನಾಗಿತ್ತು?
14 ತಾನು ಪಡೆದಂತಹ ವರದಿಯಿಂದ ಪೌಲನು ಎಷ್ಟು ಪ್ರೇರಿಸಲ್ಪಟ್ಟನೆಂದರೆ, ಅವನು ಅವರಿಗಾಗಿ ಪ್ರಾರ್ಥಿಸುವುದನ್ನು ಮತ್ತು “ಸಕಲ ಆತ್ಮೀಯ ಜ್ಞಾನವನ್ನೂ ಗ್ರಹಿಕೆಯನ್ನೂ ಹೊಂದಿ ಕರ್ತನ ಚಿತ್ತದ ವಿಷಯವಾದ ತಿಳುವಳಿಕೆಯಿಂದ ತುಂಬಿಕೊಂಡು ಆತನಿಗೆ ಯೋಗ್ಯರಾಗಿ ನಡೆ” ಯಬೇಕೆಂದು ಕೇಳಿಕೊಳ್ಳುವುದನ್ನು ನಿಲ್ಲಿಸಿರಲಿಲ್ಲವೆಂದು ಪೌಲನು ಕೊಲೊಸ್ಸೆಯವರಿಗೆ ಹೇಳಿದನು. ಅವರು “ಸಕಲಸತ್ಕಾರ್ಯವೆಂಬ ಫಲವನ್ನು ಕೊಡುತ್ತಾ ದೇವಜ್ಞಾನದಿಂದ ಅಭಿವೃದ್ಧಿಯಾಗುತ್ತಿರಬೇಕೆಂತಲೂ ಆತನ ಮಹಿಮಶಕ್ತಿಯ ಪ್ರಕಾರ ಪರಿಪೂರ್ಣಬಲಹೊಂದಿ ಬಲಿಷ್ಠರಾಗಿ ಆನಂದಪೂರ್ವಕವಾದ ತಾಳ್ಮೆಯನ್ನೂ ದೀರ್ಘಶಾಂತಿಯನ್ನೂ ಯಾವಾಗಲೂ ತೋರಿಸುವವರಾಗಿರಬೇಕೆಂತಲೂ” ಅವನು ಪ್ರಾರ್ಥಿಸಿದನು.—ಕೊಲೊಸ್ಸೆ 1:9-11.
ಇಂದು ಕೂಡ ಶಕ್ತರಾಗಿಸಲ್ಪಡುವುದು
15. ಪೌಲನು ಕೊಲೊಸ್ಸೆಯವರಿಗೆ ಬರೆದ ವಿಷಯದಲ್ಲಿ ಪ್ರತಿಬಿಂಬಿಸಲ್ಪಟ್ಟ ಅದೇ ಮನೋಭಾವವನ್ನು ನಾವು ಹೇಗೆ ಪ್ರದರ್ಶಿಸಬಲ್ಲೆವು?
15 ಎಂತಹ ಉತ್ತಮ ಮಾದರಿಯನ್ನು ಪೌಲನು ನಮಗಾಗಿಟ್ಟನು! ತಮ್ಮ ಕಷ್ಟಾನುಭವಗಳ ಹೊರತೂ ತಾವು ತಾಳಿಕೊಳ್ಳುವಂತೆ ಮತ್ತು ತಮ್ಮ ಆನಂದವನ್ನು ಕಾಪಾಡಿಕೊಳ್ಳುವಂತೆ, ಭೂಮಿಯ ಸುತ್ತಲೂ ಇರುವ ನಮ್ಮ ಸಹೋದರರಿಗೆ ನಮ್ಮ ಪ್ರಾರ್ಥನೆಗಳ ಅಗತ್ಯವಿದೆ. ಇನ್ನೊಂದು ಸಭೆಯಲ್ಲಿ, ಯಾ ಇನ್ನೊಂದು ದೇಶದಲ್ಲಿರುವ ಸಹೋದರರಿಗೆ ತೊಂದರೆಗಳಿವೆ ಎಂಬ ವಾರ್ತೆಯನ್ನು ನಾವು ಪಡೆಯುವಾಗ, ಪೌಲನಂತೆ ನಾವು ನಮ್ಮ ಪ್ರಾರ್ಥನೆಗಳಲ್ಲಿ ನಿರ್ದಿಷ್ಟರಾಗಿರಬೇಕು. ಹತ್ತಿರದಲ್ಲಿರುವ ಸಭೆಗೆ ನೈಸರ್ಗಿಕ ವಿಪತ್ತು ಯಾ ಯಾವುದೊ ಆತ್ಮಿಕ ತೊಂದರೆಯು ತಟ್ಟಿರಬಹುದು. ಅಥವಾ ಆಂತರಿಕ ಯುದ್ಧದಿಂದ ಯಾ ಅಂತರಕುಲಗಳ ಕೊಲ್ಲುವಿಕೆಗಳಿಂದ ಕಷ್ಟಾನುಭವಿಸುತ್ತಿರುವ ಒಂದು ದೇಶದಲ್ಲಿ ಕ್ರೈಸ್ತರು ತಾಳಿಕೊಳ್ಳುತ್ತಿರಬಹುದು. ನಮ್ಮ ಸಹೋದರರು “ಆತನಿಗೆ ಯೋಗ್ಯರಾಗಿ ನಡೆ” ಯುವಂತೆ, ಅವರು ತಾಳಿಕೊಳ್ಳುವಾಗ ರಾಜ್ಯ ಫಲವನ್ನು ನೀಡುತ್ತಾ ಇರುವಂತೆ, ಮತ್ತು ಜ್ಞಾನದಲ್ಲಿ ಅಭಿವೃದ್ಧಿ ಹೊಂದುವಂತೆ ಸಹಾಯ ಮಾಡಲು, ನಾವು ಪ್ರಾರ್ಥನೆಯಲ್ಲಿ ದೇವರನ್ನು ಕೇಳತಕ್ಕದ್ದು. ಈ ರೀತಿಯಲ್ಲಿ “ಮಹಿಮಶಕ್ತಿಯ ಪ್ರಕಾರ . . . ಬಲಿಷ್ಠರಾಗಿ” ಮಾಡಲ್ಪಟ್ಟು, ದೇವರ ಸೇವಕರು ಆತನ ಆತ್ಮದ ಶಕ್ತಿಯನ್ನು ಹೊಂದುತ್ತಾರೆ. ನಿಮ್ಮ ತಂದೆಯು ಕೇಳುವನು ಮತ್ತು ಪ್ರತಿಕ್ರಿಯಿಸುವನೆಂದು ನೀವು ನಿಶ್ಚಿತರಾಗಿರಬಲ್ಲಿರಿ.—1 ಯೋಹಾನ 5:14, 15.
16, 17. (ಎ) ಪೌಲನು ಬರೆದಂತೆ, ಯಾವ ವಿಷಯಕ್ಕಾಗಿ ನಾವು ಕೃತಜ್ಞರಾಗಿರಬೇಕು? (ಬಿ) ಯಾವ ಅರ್ಥದಲ್ಲಿ ದೇವರ ಜನರು ಬಿಡುಗಡೆಗೊಳಿಸಲ್ಪಟ್ಟಿದ್ದಾರೆ ಮತ್ತು ಕ್ಷಮಿಸಲ್ಪಟ್ಟಿದ್ದಾರೆ?
16 ಕೊಲೊಸ್ಸೆಯವರು ‘ಬೆಳಕಿನ ರಾಜ್ಯದೊಳಗೆ ದೇವಜನರ ಬಾಧ್ಯತೆಯಲ್ಲಿ ಪಾಲುಗಾರರಾಗುವದಕ್ಕೆ ಅವರನ್ನು ಯೋಗ್ಯರನ್ನಾಗಿ ಮಾಡಿದ ತಂದೆಗೆ ಕೃತಜ್ಞತಾಸ್ತುತಿಯನ್ನು’ ಮಾಡುತ್ತಿರಬೇಕೆಂದು ಪೌಲನು ಬರೆದನು. ಆತನ ಏರ್ಪಾಡಿನಲ್ಲಿ—ಆತನ ರಾಜ್ಯದ ಸ್ವರ್ಗೀಯ ರಾಜ್ಯದಲ್ಲಾಗಲಿ ಯಾ ಭೂರಾಜ್ಯದಲ್ಲಾಗಲಿ—ನಮ್ಮ ಸ್ಥಾನಕ್ಕಾಗಿ ನಾವು ಕೂಡ ನಮ್ಮ ಸ್ವರ್ಗೀಯ ತಂದೆಗೆ ಉಪಕಾರ ಸಲ್ಲಿಸೋಣ. ಅಪರಿಪೂರ್ಣ ಮಾನವರನ್ನು ದೇವರು ತನ್ನ ನೋಟದಲ್ಲಿ ಯೋಗ್ಯರನ್ನಾಗಿ ಹೇಗೆ ಮಾಡಿದನು? ಪೌಲನು ತನ್ನ ಅಭಿಷಿಕ್ತ ಸಹೋದರರಿಗೆ ಬರೆದದ್ದು: “ದೇವರು ನಮ್ಮನ್ನು ಅಂಧಕಾರದ ಧೊರೆತನದಿಂದ ಬಿಡಿಸಿ ತನ್ನ ಪ್ರಿಯ ಕುಮಾರನ ರಾಜ್ಯದೊಳಗೆ ಸೇರಿಸಿದನು. ಆ ಕುಮಾರನಲ್ಲಿ ನಮ್ಮ ಪಾಪಗಳು ಪರಿಹಾರವಾಗಿ ನಮಗೆ ಬಿಡುಗಡೆಯಾಯಿತು.”—ಕೊಲೊಸ್ಸೆ 1:12-14.
17 ನಮ್ಮ ನಿರೀಕ್ಷೆಯು ಏನೇ ಆಗಿರಲಿ—ಸ್ವರ್ಗೀಯ ಯಾ ಐಹಿಕ—ಯೆಹೋವನ ಪ್ರಿಯ ಮಗನ ಪ್ರಾಯಶ್ಚಿತ್ತ ಬಲಿಯ ಅಮೂಲ್ಯವಾದ ಒದಗಿಸುವಿಕೆಯಲ್ಲಿ ನಮ್ಮ ನಂಬಿಕೆಯ ಮೂಲಕ ಸಾಧಿಸಲ್ಪಟ್ಟ, ಅಂಧಕಾರದ ಈ ದುಷ್ಟ ವ್ಯವಸ್ಥೆಯಿಂದ ನಮ್ಮ ಬಿಡುಗಡೆಗಾಗಿ ನಾವು ದೇವರಿಗೆ ದಿನನಿತ್ಯವೂ ಉಪಕಾರ ಸಲ್ಲಿಸುತ್ತೇವೆ. (ಮತ್ತಾಯ 20:28) ಆತ್ಮಾಭಿಷಿಕ್ತ ಕ್ರೈಸ್ತರು ‘ದೇವರ ಪ್ರೀತಿಯ ಮಗನ ರಾಜ್ಯದೊಳಗೆ ಸ್ಥಳಾಂತರಿಸಲ್ಪಡ’ ಲಾಗುವಂತೆ ಪ್ರಾಯಶ್ಚಿತವ್ತು ವಿಶೇಷ ವಿಧದಲ್ಲಿ ತಮಗೆ ಅನ್ವಯಿಸಲ್ಪಟ್ಟವರಾಗಿ ಪ್ರಯೋಜನ ಹೊಂದಿದ್ದಾರೆ. (ಲೂಕ 22:20, 29, 30) ಆದರೆ “ಬೇರೆ ಕುರಿಗಳು” ಸಹ ಪ್ರಾಯಶ್ಚಿತದ್ತಿಂದ ಈಗಲೂ ಪ್ರಯೋಜನ ಪಡೆಯುತ್ತವೆ. (ಯೋಹಾನ 10:16) ದೇವರ ಸ್ನೇಹಿತರೋಪಾದಿ ಆತನ ಮುಂದೆ ನೀತಿಯ ನಿಲುವನ್ನು ಹೊಂದಿರಲು ಅವರು ಆತನ ಕ್ಷಮಾಪಣೆಯನ್ನು ಪಡೆಯಬಲ್ಲರು. ಅಂತ್ಯದ ಈ ಸಮಯದಲ್ಲಿ “ರಾಜ್ಯದ ಈ ಸುವಾರ್ತೆಯನ್ನು” ಘೋಷಿಸುವುದರಲ್ಲಿ ಅವರಿಗೆ ದೊಡ್ಡ ಭಾಗವಿದೆ. (ಮತ್ತಾಯ 24:14) ಅದರೊಂದಿಗೆ, ಕ್ರಿಸ್ತನ ಸಹಸ್ರ ವರ್ಷಗಳ ಆಳಿಕೆಯ ಕೊನೆಯಲ್ಲಿ, ಸಂಪೂರ್ಣವಾಗಿ ನೀತಿವಂತರೂ ಶಾರೀರಿಕವಾಗಿ ಪರಿಪೂರ್ಣರೂ ಆಗುವ ಅದ್ಭುತಕರ ನಿರೀಕ್ಷೆ ಅವರಿಗಿದೆ. ಪ್ರಕಟನೆ 7:13-17 ರಲ್ಲಿರುವ ವರ್ಣನೆಯನ್ನು ನೀವು ಓದುವಾಗ, ಇದು ಬಿಡುಗಡೆ ಮಾಡಲ್ಪಡುವ ಮತ್ತು ಆಶೀರ್ವದಿಸಲ್ಪಡುವ ಪ್ರಮಾಣವಾಗಿದೆಯೆಂದು ನೀವು ಒಪ್ಪುವುದಿಲ್ಲವೊ ಎಂದು ನೋಡಿ.
18. ಕೊಲೊಸ್ಸೆಯವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾದ ಯಾವ ಸಂಧಾನವನ್ನು ದೇವರು ಇನ್ನೂ ಸಾಧಿಸುತ್ತಿದ್ದಾನೆ?
18 ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷನಿಗೆ ನಾವು ಎಷ್ಟು ಋಣಿಗಳಾಗಿದ್ದೇವೆಂದು ಗ್ರಹಿಸುವಂತೆ ಪೌಲನ ಪತ್ರವು ನಮಗೆ ಸಹಾಯ ಮಾಡುತ್ತದೆ. ಕ್ರಿಸ್ತನ ಮುಖಾಂತರ ದೇವರು ಏನನ್ನು ಸಾಧಿಸುತ್ತಿದ್ದನು? “ಆತನು ಶಿಲುಬೆಯ ಮೇಲೆ ಸುರಿಸಿದ ರಕ್ತದಿಂದ ತಾನು ಸಮಾಧಾನವನ್ನು ಉಂಟುಮಾಡಿ ಭೂಪರಲೋಕಗಳಲ್ಲಿರುವ ಸಮಸ್ತವನ್ನೂ ಆತನ ಮೂಲಕ ತನಗೆ ಸಂಧಾನಪಡಿಸಿಕೊಳ್ಳಬೇಕೆಂತಲೂ ನಿಷ್ಕರ್ಷೆಮಾಡಿದನು.” ಏದೆನ್ನಲ್ಲಿ ದಂಗೆಯ ಮುಂಚೆ ಇದ್ದ ಹಾಗೆ ಎಲ್ಲ ಸೃಷ್ಟಿಯನ್ನು ತನ್ನೊಂದಿಗೆ ಸಂಪೂರ್ಣ ಹೊಂದಾಣಿಕೆಯಲ್ಲಿ ತರುವುದು ದೇವರ ಉದ್ದೇಶವಾಗಿದೆ. ಎಲ್ಲ ವಿಷಯಗಳನ್ನು ಸೃಷ್ಟಿಸಲು ಉಪಯೋಗಿಸಲ್ಪಟ್ಟವನೇ ಈ ಸಂಧಾನವನ್ನು ಸಾಧಿಸುವಂತೆ ಈಗ ಉಪಯೋಗಿಸಲ್ಪಡುತ್ತಿದ್ದಾನೆ.—ಕೊಲೊಸ್ಸೆ 1:20.
ಯಾವ ಉದ್ದೇಶಕ್ಕಾಗಿ ಶಕ್ತಗೊಳಿಸಲ್ಪಟ್ಟದ್ದು?
19, 20. ನಾವು ಪರಿಶುದ್ಧರೂ ನಿರ್ದೋಷಿಗಳೂ ಆಗಿರುವುದು ಯಾವುದರ ಮೇಲೆ ಅವಲಂಬಿಸಿದೆ?
19 ನಮ್ಮಲ್ಲಿ ಯಾರು ದೇವರೊಂದಿಗೆ ಸಂಧಾನಮಾಡಿಕೊಂಡಿದ್ದಾರೋ ಅವರ ಮೇಲೆ ಜವಾಬ್ದಾರಿಗಳು ಬರುತ್ತವೆ. ನಾವು ಒಮ್ಮೆ ಪಾಪಪೂರ್ಣರಾಗಿದ್ದೆವು ಮತ್ತು ದೇವರಿಂದ ವಿಮುಖಗೊಳಿಸಲ್ಪಟ್ಟಿದ್ದೆವು. ಆದರೆ ಈಗ, ಯೇಸುವಿನ ಯಜ್ಞದಲ್ಲಿ ನಂಬಿಕೆಯನ್ನಿಟ್ಟ ಕಾರಣ ಮತ್ತು ಕೆಟ್ಟದ್ದಾಗಿರುವ ಕೆಲಸಗಳ ಮೇಲೆ ಇನ್ನು ಮುಂದೆ ನಮ್ಮ ಮನಸ್ಸುಗಳನ್ನು ಇಡದಿರುವ ಕಾರಣ, ನಾವು ಮೂಲಭೂತವಾಗಿ ಒಂದು ‘ಪರಿಶುದ್ಧ ಹಾಗೂ ನಿರ್ದೋಷ’ ಸ್ಥಿತಿಯಲ್ಲಿ, ‘[ದೇವರ] ಮುಂದೆ ನಿರಪರಾಧಿಗಳಾಗಿ’ ನಿಲ್ಲುತ್ತೇವೆ. (ಕೊಲೊಸ್ಸೆ 1:21, 22) ಪ್ರಾಚೀನ ಸಮಯದ ಆ ನಂಬಿಗಸ್ತ ಸಾಕ್ಷಿಗಳ ಕುರಿತು ದೇವರು ಲಜ್ಜಿತನಾಗಿರದಂತೆಯೆ, ನಮ್ಮ ದೇವರೆಂದು ಕರೆಯಲ್ಪಡಲು ನಮ್ಮ ಕುರಿತು ಸಹ ಆತನು ಲಜ್ಜಿತನಾಗಿರುವುದಿಲ್ಲ. (ಇಬ್ರಿಯ 11:16) ಇಂದು, ತಪ್ಪಾಗಿ ಆತನ ಪ್ರಖ್ಯಾತ ಹೆಸರನ್ನು ಧರಿಸಿರುತ್ತೇವೆಂದಾಗಲಿ ಭೂಮಿಯ ಕಟ್ಟಕಡೆಯ ವರೆಗೆ ಆ ಹೆಸರನ್ನು ಘೋಷಿಸಲು ಭಯಪಡುತ್ತೇವೆಂದಾಗಲಿ ಯಾರೂ ನಮ್ಮನ್ನು ದೂಷಿಸಸಾಧ್ಯವಿಲ್ಲ!
20 ಆದರೂ ಕೊಲೊಸ್ಸೆ 1:23 ರಲ್ಲಿ ಪೌಲನು ಸೇರಿಸಿದ ಎಚ್ಚರಿಕೆಯನ್ನು ಗಮನಿಸಿರಿ: “ನೀವು ಕೇಳಿದಂಥ ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ ಸಾರಲ್ಪಟ್ಟಂಥ ಸುವಾರ್ತೆಯಿಂದ ಉಂಟಾದ ನಿರೀಕ್ಷೆಯನ್ನು ಬಿಟ್ಟು ತೊಲಗಿಹೋಗದೆ ಅಸ್ತಿವಾರದ ಮೇಲೆ ನಿಂತು ಸ್ಥಿರವಾಗಿದ್ದು ನಂಬಿಕೆಯಲ್ಲಿ ನೆಲೆಗೊಂಡಿರುವದಾದರೆ ಆ ಪದವಿ ನಿಮಗೆ ಪ್ರಾಪ್ತವಾಗುವದು.” ಆತನ ಪ್ರಿಯ ಮಗನ ಹೆಜ್ಜೆಜಾಡುಗಳನ್ನು ಅನುಸರಿಸುತ್ತಾ, ಯೆಹೋವನಿಗೆ ನಂಬಿಗಸ್ತರಾಗಿ ಉಳಿಯುವುದರ ಮೇಲೆ ಎಷ್ಟೊಂದು ವಿಷಯಗಳು ಅವಲಂಬಿಸಿವೆ. ಯೆಹೋವ ಮತ್ತು ಯೇಸು ನಮಗಾಗಿ ಎಷ್ಟೋ ಸಂಗತಿಗಳನ್ನು ಮಾಡಿದ್ದಾರೆ! ಪೌಲನ ಸಲಹೆಯನ್ನು ಅನುಸರಿಸುವ ಮೂಲಕ ಅವರಿಗಾಗಿ ನಾವು ಪ್ರೀತಿಯನ್ನು ತೋರಿಸುವಂತಾಗಲಿ.
21. ಇಂದು ರೋಮಾಂಚಗೊಳ್ಳಲು ನಮಗೆ ಮಹಾ ಕಾರಣವಿದೆ ಏಕೆ?
21 ‘ತಾವು ಕೇಳಿದ್ದ ಸುವಾರ್ತೆಯು’ ಈಗಾಗಲೇ ‘ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ ಸಾರಲ್ಪಟ್ಟಿದೆ’ ಎಂಬುದನ್ನು ಕೇಳಲು ಕೊಲೊಸ್ಸೆಯ ಕ್ರೈಸ್ತರು ರೋಮಾಂಚಗೊಂಡಿರಬೇಕು. ಇಂದು ರಾಜ್ಯದ ಸುವಾರ್ತೆಯು ಘೋಷಿಸಲ್ಪಡುತ್ತಿರುವ—45 ಲಕ್ಷಕ್ಕಿಂತಲೂ ಅಧಿಕ ಸಾಕ್ಷಿಗಳಿಂದ 230 ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ—ವಿಸ್ತಾರದ ಕುರಿತು ಕೇಳುವುದು ಇನ್ನೂ ಹೆಚ್ಚು ಉತ್ತೇಜನದಾಯಕವಾಗಿದೆ. ಯಾಕೆ, ಪ್ರತಿ ವರ್ಷ ಎಲ್ಲ ರಾಷ್ಟ್ರಗಳಿಂದ ಸುಮಾರು 3,00,000 ಜನರು ದೇವರೊಂದಿಗೆ ಸಂಧಾನಮಾಡಿಕೊಳ್ಳುತ್ತಿದ್ದಾರೆ!—ಮತ್ತಾಯ 24:14; 28:19, 20.
22. ನಾವು ಕಷ್ಟಾನುಭವವನ್ನು ಅನುಭವಿಸಿದರೂ, ದೇವರು ನಮಗಾಗಿ ಏನನ್ನು ಮಾಡಬಲ್ಲನು?
22 ಕೊಲೊಸ್ಸೆಯವರಿಗೆ ಪತ್ರವನ್ನು ಬರೆದ ಸಮಯದಲ್ಲಿ ಪೌಲನು ಬಂಧಿಸಲ್ಪಟ್ಟಿದ್ದನೆಂಬುದು ವ್ಯಕ್ತವಾಗಿದ್ದರೂ, ಯಾವುದೇ ವಿಧದಲ್ಲಿ ಅವನು ತನ್ನ ಸ್ಥಿತಿಗಾಗಿ ದುಃಖಿಸಲಿಲ್ಲ. ಬದಲಿಗೆ, ಅವನಂದದ್ದು: “ನಾನು ಈಗ ನಿಮಗೋಸ್ಕರ ಅನುಭವಿಸುತ್ತಿರುವ ಬಾಧೆಗಳಲ್ಲಿ ಸಂತೋಷ” ಪಡುತ್ತಿದ್ದೇನೆ. “ಆನಂದಪೂರ್ವಕವಾದ ತಾಳ್ಮೆಯನ್ನೂ ದೀರ್ಘಶಾಂತಿಯನ್ನೂ” ತೋರಿಸುವುದು ಏನನ್ನು ಒಳಗೊಂಡಿತ್ತೆಂದು ಪೌಲನಿಗೆ ಗೊತ್ತಿತ್ತು. (ಕೊಲೊಸ್ಸೆ 1:11, 24) ಆದರೆ ಇದನ್ನು ತನ್ನ ಸ್ವಂತ ಬಲದಿಂದ ಮಾಡಲಿಲ್ಲವೆಂದು ಅವನಿಗೆ ಗೊತ್ತಿತ್ತು. ಯೆಹೋವನು ಅವನನ್ನು ಬಲಿಷ್ಠನನ್ನಾಗಿ ಮಾಡಿದ್ದನು! ಇಂದು ಕೂಡ ವಿಷಯವು ಹಾಗೆಯೇ ಇದೆ. ಬಂಧಿಸಲ್ಪಟ್ಟ ಮತ್ತು ಹಿಂಸಿಸಲ್ಪಟ್ಟ ಸಾವಿರಾರು ಸಾಕ್ಷಿಗಳು ಯೆಹೋವನನ್ನು ಸೇವಿಸುವುದರಲ್ಲಿ ಇರುವ ತಮ್ಮ ಆನಂದವನ್ನು ಕಳೆದುಕೊಂಡಿಲ್ಲ. ಬದಲಿಗೆ, ಯೆಶಾಯ 40:29-31 ರಲ್ಲಿ ಕಂಡುಕೊಳ್ಳುವಂತೆ, ದೇವರ ಮಾತುಗಳ ಸತ್ಯತೆಯನ್ನು ಅವರು ಗಣ್ಯಮಾಡುತ್ತಾರೆ: “ನಿರ್ಬಲನಿಗೆ ಬಹು ಬಲವನ್ನು ದಯಪಾಲಿಸುತ್ತಾನೆ. . . . ಯೆಹೋವನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು.”
23, 24. ಕೊಲೊಸ್ಸೆ 1:26 ರಲ್ಲಿ ಉಲ್ಲೇಖಿಸಲಾದ ಪವಿತ್ರ ರಹಸ್ಯವು ಏನಾಗಿದೆ?
23 ಕ್ರಿಸ್ತನ ಮೇಲೆ ಕೇಂದ್ರೀಕೃತವಾಗಿದ್ದ ಸುವಾರ್ತೆಯ ಶುಶ್ರೂಷೆಯು ಪೌಲನಿಗೆ ಬಹಳ ಮುಖ್ಯವಾಗಿತ್ತು. ದೇವರ ಉದ್ದೇಶದಲ್ಲಿ ಕ್ರಿಸ್ತನ ಪಾತ್ರದ ಮೌಲ್ಯವನ್ನು ಇತರರು ಗಣ್ಯಮಾಡಬೇಕೆಂದು ಅವನು ಬಯಸಿದನು, ಆದುದರಿಂದ ಅದನ್ನು ಅವನು “ಹಿಂದಿನ ಯುಗಗಳಿಂದಲೂ ತಲತಲಾಂತರಗಳಿಂದಲೂ ಮರೆಯಾಗಿದ್ದ ಪವಿತ್ರ ರಹಸ್ಯ” ವೆಂದು ವರ್ಣಿಸಿದನು. ಆದರೆ ಅದು ಸದಾಕಾಲ ಒಂದು ರಹಸ್ಯವಾಗಿ ಉಳಿಯುವ ಉದ್ದೇಶವಿರಲಿಲ್ಲ. ಪೌಲನು ಕೂಡಿಸಿದ್ದು: “ಈಗಿನ ಕಾಲದಲ್ಲಿ ದೇವಜನರಿಗೆ ತಿಳಿಸಲ್ಪಟ್ಟಿದೆ.” (ಕೊಲೊಸ್ಸೆ 1:26, NW) ಏದೆನ್ನಲ್ಲಿ ದಂಗೆಯು ಆರಂಭಗೊಂಡಾಗ, ‘ಸ್ತ್ರೀಯ ಸಂತತಿಯು ಸರ್ಪದ ತಲೆಯನ್ನು ಜಜ್ಜುವುದೆಂದು’ ಮುಂತಿಳಿಸುತ್ತಾ, ಬರಲಿರುವ ಉತ್ತಮ ವಿಷಯಗಳ ವಾಗ್ದಾನವನ್ನು ಯೆಹೋವನು ಕೊಟ್ಟನು. (ಆದಿಕಾಂಡ 3:15) ಇದು ಏನನ್ನು ಅರ್ಥೈಸಿತು? ತಲೆಮೊರೆಗಳ ವರೆಗೆ, ಶತಮಾನಗಳ ವರೆಗೆ, ಅದೊಂದು ರಹಸ್ಯವಾಗಿ ಉಳಿಯಿತು. ತದನಂತರ ಯೇಸು ಬಂದನು, ಮತ್ತು ಅವನು “ಸುವಾರ್ತೆಯ ಮೂಲಕ ಜೀವವನ್ನೂ ನಿರ್ಲಯತ್ವವನ್ನೂ ಪ್ರಕಾಶಗೊಳಿಸಿದನು.”—2 ತಿಮೊಥೆಯ 1:10.
24 ಹೌದು, “ಪವಿತ್ರ ರಹಸ್ಯ”ವು ಕ್ರಿಸ್ತನ ಮತ್ತು ಮೆಸ್ಸೀಯನ ರಾಜ್ಯದ ಸುತ್ತಲೂ ಕೇಂದ್ರೀಕೃತವಾಗಿದೆ. ಕ್ರಿಸ್ತನೊಂದಿಗೆ ರಾಜ್ಯ ಆಳಿಕ್ವೆಯಲ್ಲಿ ಭಾಗವಹಿಸುವವರನ್ನು ಸೂಚಿಸುತ್ತಾ, “ಪರಲೋಕದಲ್ಲಿರುವ ವಿಷಯಗಳನ್ನು” ಪೌಲನು ಉಲ್ಲೇಖಿಸಿದನು. ಇವರು “ಭೂಮಿಯ ಮೇಲಿರುವ ವಿಷಯ” ಗಳಿಗೆ, ಅನಂತ ಪ್ರಮೋದವನವನ್ನು ಇಲ್ಲಿ ಆನಂದಿಸುವವರೆಲ್ಲರಿಗೆ ಅಗಣಿತ ಆಶೀರ್ವಾದಗಳನ್ನು ತರುವುದರಲ್ಲಿ ಸಾಧಕರಾಗಿರುವರು. ಹಾಗಾದರೆ, “ಈ ಮರ್ಮದ ಮಹಿಮಾತಿಶಯ”ಕ್ಕೆ ಪೌಲನು ಸೂಚಿಸಿ ಹೇಳುವುದು ಎಷ್ಟು ಸೂಕ್ತವಾಗಿತ್ತೆಂದು ನೀವು ನೋಡಬಲ್ಲಿರಿ.—ಕೊಲೊಸ್ಸೆ 1:20, 27.
25. ಕೊಲೊಸ್ಸೆ 1:29 ರಲ್ಲಿ ಸೂಚಿಸಲಾದಂತೆ, ಈಗ ನಮ್ಮ ಮನೋಭಾವವು ಏನಾಗಿರಬೇಕು?
25 ರಾಜ್ಯದಲ್ಲಿ ತನ್ನ ಸ್ಥಾನಕ್ಕಾಗಿ ಪೌಲನು ಆತುರದಿಂದ ಎದುರುನೋಡಿದನು. ಏನನ್ನೂ ಮಾಡದೆ ನಿರೀಕ್ಷಿಸಸಾಧ್ಯವಿರುವ ವಿಷಯವು ಅದಾಗಿರಲಿಲ್ಲವೆಂದು ಅವನು ಗ್ರಹಿಸಿದನು. “ನನ್ನಲ್ಲಿ ಕಾರ್ಯಸಾಧಿಸುವ ದೇವರ ಬಲವನ್ನು ಪ್ರಯೋಗಮಾಡಿ ಇದಕ್ಕೋಸ್ಕರವೇ ಹೋರಾಡುತ್ತೇನೆ, ಪ್ರಯಾಸಪಡುತ್ತೇನೆ.” (ಕೊಲೊಸ್ಸೆ 1:29) ಜೀವವನ್ನು ರಕ್ಷಿಸುವ ಶುಶ್ರೂಷೆಯನ್ನು ಸಾಧಿಸುವಂತೆ ಯೆಹೋವನು ಕ್ರಿಸ್ತನ ಮೂಲಕ ಪೌಲನನ್ನು ಬಲಿಷ್ಠನನ್ನಾಗಿ ಮಾಡಿದನು. ಇಂದು ನಮಗೆ ಯೆಹೋವನು ಅದನ್ನೇ ಮಾಡಬಲ್ಲನು. ಆದರೆ ನಾವು ನಮ್ಮನ್ನೇ ಕೇಳಿಕೊಳ್ಳತಕ್ಕದ್ದು, ‘ನಾನು ಸತ್ಯವನ್ನು ಮೊದಲಾಗಿ ಕಲಿತಾಗ ನನ್ನಲ್ಲಿದ್ದ ಸೌವಾರ್ತಿಕ ಆತ್ಮವು ಈಗ ಇದೆಯೊ?’ ನಿಮ್ಮ ಉತ್ತರವೇನು? ‘ಕಾರ್ಯಸಾಧಿಸುವ ಯೆಹೋವನ ಬಲವನ್ನು ಪ್ರಯೋಗಮಾಡಿ ಇದಕ್ಕೋಸ್ಕರವೇ ಹೋರಾಡುತ್ತಾ, ಪ್ರಯಾಸಪಡುತ್ತಾ’ ಇರುವಂತೆ ನಮ್ಮಲ್ಲಿ ಪ್ರತಿಯೊಬ್ಬರಿಗೆ ಯಾವುದು ಸಹಾಯ ಮಾಡಬಲ್ಲದು? ಮುಂದಿನ ಲೇಖನವು ಈ ವಿಷಯವನ್ನೇ ಚರ್ಚಿಸುತ್ತದೆ.
ನೀವು ಗಮನಿಸಿದಿರೊ?
▫ ಮಾನವರ ಪರವಾಗಿ ಯೆಹೋವನು ತನ್ನ ಶಕ್ತಿಯನ್ನು ಪ್ರದರ್ಶಿಸಬಲ್ಲನೆಂದು ನಾವು ನಿಶ್ಚಿತರಾಗಿರಸಾಧ್ಯವಿದೆ ಏಕೆ?
▫ ಕೊಲೊಸ್ಸೆ 1 ನೆಯ ಅಧ್ಯಾಯದಲ್ಲಿರುವ ಪೌಲನ ಮಾತುಗಳಿಗೆ ಹಿನ್ನೆಲೆಯು ಏನಾಗಿದೆ?
▫ ಕೊಲೊಸ್ಸೆ 1:20 ರಲ್ಲಿ ಉಲ್ಲೇಖಿಸಲಾದ ಸಂಧಾನವನ್ನು ದೇವರು ಹೇಗೆ ಪೂರೈಸುತ್ತಿದ್ದಾನೆ?
▫ ಆತನ ಶಕಿಯ್ತಿಂದ ಯೆಹೋವನು ನಮ್ಮ ಮುಖಾಂತರ ಏನನ್ನು ಸಾಧಿಸಬಲ್ಲನು?
[ಪುಟ 8ರಲ್ಲಿರುವಚಿತ್ರ/ಚಿತ್ರಗಳು]
ಕೊಲೊಸ್ಸೆ