ಅತ್ಯಂತ ಪ್ರಗತಿಪರ ಸಂಸ್ಥೆಯೊಂದಿಗೆ ಸೇವಿಸುವುದು
ರಾಬರ್ಟ್ ಹ್ಯಾಟ್ಸ್ಫೆಲ್ಟ್ ಹೇಳಿದಂತೆ
ಇಂದು ಬಹಳ ಹೆಚ್ಚು ಜನರು ಸಂಜೆಯ ವಾರ್ತೆಯನ್ನು ವರ್ಣವಿಶಿಷ್ಟತೆಯಲ್ಲಿ ವೀಕ್ಷಿಸಲು ಟೆಲಿವಿಷನನ್ನು ರಿಮೋಟ್ ಕಂಟ್ರೋಲ್ನ ಮೂಲಕ ಆರಂಭಿಸುತ್ತಾರೆ. ಇದನ್ನು ಅವರು ಯಾವುದೊ ಅಸಾಧಾರಣವಾದ ಸಂಗತಿಯೆಂದು ಪರಿಗಣಿಸುವುದೇ ಇಲ್ಲ. ಆದರೂ, ಒಂದು ಚಲನಚಿತ್ರ ಪರದೆಯ ಮೇಲೆ ಒಬ್ಬ ಮನುಷ್ಯನ ಸಹಜವಾದ ಆಕಾರಕ್ಕಿಂತ ದೊಡ್ಡದಾದ ಆಕಾರವನ್ನು, ಅಗಲವಾದ ಕಣ್ಣುಗಳ್ಳುಳ 12 ವರ್ಷ ವಯಸ್ಸಿನ ಹುಡುಗನಾದ ನಾನು ವೀಕ್ಷಿಸುತ್ತಿದ್ದದ್ದು ಕೇವಲ ನಿನ್ನೆಯೋ ಎಂಬಂತಿದೆ, ಮತ್ತು ಆ ಮನುಷ್ಯನು ಮಾತಾಡುತ್ತಿದ್ದನು!
ನಿಕರವಾಗಿ ಪ್ರಾಮುಖ್ಯವಾದ ವಾರ್ತೆಯೇನಲ್ಲವೆಂದು ನೀವು ಯೋಚಿಸಬಹುದು. ಆದರೆ, ಕಪ್ಪು ಮತ್ತು ಬಿಳಿ ಬಣ್ಣದ ಮೌನ ಚಿತ್ರಗಳ ಆರಂಭಿಕ ದಿನಗಳಲ್ಲಿ, 1915 ರಲ್ಲಿ, ಅದು ಖಂಡಿತವಾಗಿಯೂ ನನಗೆ ಆಧುನಿಕ ದಿನದ ಅದ್ಭುತಕಾರ್ಯದಂತೆ ತೋರಿತು. ಒಬ್ಬ ಗಂಭೀರ, ಗಡ್ಡವುಳ್ಳ ಮನುಷ್ಯನು ಪರದೆಯ ಮೇಲೆ ಕಾಣಿಸಿಕೊಂಡು ಹೇಳಿದ್ದು: “ಸೃಷ್ಟಿಯ ಫೋಟೊ ಡ್ರಾಮಾ ಐ.ಬಿ.ಎಸ್.ಎ., ಅವರಿಂದ, ಇಂಟರ್ನ್ಯಾಷನಲ್ ಬೈಬಲ್ ಸ್ಟ್ಯೂಡೆಂಟ್ಸ್ ಅಸೋಸಿಯೇಷನ್ನ ಮೂಲಕ ಸಾದರಪಡಿಸಲಾಗುತ್ತಿದೆ.” ಮುಂದಿನ ಎರಡು ತಾಸುಗಳ ವರೆಗೆ, ಬೈಬಲಿನ ಕಥೆಯು ನಮ್ಮ ಕಣ್ಣುಗಳ ಮುಂದೆ ಅನಾವರಣಗೊಂಡಿತು. ಆದರೂ, ನನ್ನ ಗಮನವನ್ನು ನಿಜವಾಗಿಯೂ ಸೆಳೆದದ್ದು, ಚಲನಚಿತ್ರದ ಮಧ್ಯ ಅಲ್ಲಲ್ಲಿ ಇಡಲ್ಪಟ್ಟ ವರ್ಣ ಚಿತ್ರ ಫಲಕಗಳು ಮತ್ತು ಸಮಕಾಲಿಕ ಮಾತುಕತೆಯಾಗಿತ್ತು.
ಅದನ್ನು ನಾನಾಗ ಗ್ರಹಿಸಲಿಲ್ಲ, ಆದರೆ ಆ ಮಹತ್ವದ ತಂತ್ರಜ್ಞಾನಕ್ಕಾಗಿ ನನ್ನ ಯೌವನದ ಉತ್ಸಾಹವು, ಭೂಮಿಯಲ್ಲಿನ ಅತ್ಯಂತ ಪ್ರಗತಿಪರ ಸಂಸ್ಥೆಯೊಂದಿಗೆ ಒಂದು ಜೀವಾವಧಿಯ ಜೀವನೋಪಾಯಕ್ಕೆ ಪೀಠಿಕೆಯಾಗಿತ್ತು.
ಆರಂಭಿಕ ದಿನಗಳು
ಇಸವಿ 1891 ರಲ್ಲಿ ನನ್ನ ತಂದೆ ಜರ್ಮನಿಯ ಡಿಲನ್ಬರ್ಗ್ನಿಂದ, ಅಮೆರಿಕದ ಪೆನ್ಸಿಲೇನ್ವಿಯದ, ಆಲಗೆನಿಯಲ್ಲಿರುವ ಜರ್ಮನ್ ಸಮುದಾಯಕ್ಕೆ ಬಂದರು. ತರುವಾಯ ಅಲ್ಲಿನ ಒಂದು ಜರ್ಮನ್ ಕುಟುಂಬದಲ್ಲಿ ಒಬ್ಬಾಕೆ ಹುಡುಗಿಯನ್ನು ಅವರು ಭೇಟಿಯಾದರು, ಮತ್ತು ಅವರು ವಿವಾಹವಾದರು. ನಾನು ಜುಲೈ 7, 1903 ರಂದು ಜನಿಸಿದೆ, ಮತ್ತು ಜರ್ಮನ್ ಹಾಗೂ ಇಂಗ್ಲಿಷ್—ಎರಡೂ ಭಾಷೆಗಳನ್ನು ಮಾತಾಡುವಂತೆ ಬೆಳೆಸಲ್ಪಟ್ಟೆ. ಇಸವಿ 1914 ರಲ್ಲಿ I ನೆಯ ಲೋಕ ಯುದ್ಧ ಆರಂಭಗೊಳ್ಳುವ ಮುಂಚೆ, ಕ್ಷಯರೋಗದ ಒಂದು ಸಾಂಕ್ರಾಮಿಕವು ನನ್ನ ಇಬ್ಬರೂ ಹೆತ್ತವರನ್ನು ಕಸಿದುಕೊಂಡು ಹೋಗಿ, ನನ್ನನ್ನು ಒಬ್ಬ ಅನಾಥನನ್ನಾಗಿ ಮಾಡಿಬಿಟ್ಟಿತು. ಸುಮಾರು ಅದೇ ಸಮಯದಲ್ಲಿ ನನ್ನ ಅಜ್ಜ ಪಾರ್ಶ್ವವಾಯುವಿನಿಂದ ತೀರಿಹೋದರು.
ನನ್ನ ಸೋದರತ್ತೆಯಾದ ಮಿನಾ ಬೊಯಿಮರ್, ಕರುಣೆಯಿಂದ ನನ್ನನ್ನು ಆಕೆಯ ಕುಟುಂಬದೊಳಗೆ ಸೇರಿಸಿಕೊಂಡರು. “ನನಗೆ ಐವರು ಮಕ್ಕಳಿದ್ದಾರೆ,” ಎಂದು ಆಕೆ ಹೇಳಿದಳು, “ಅವರೊಂದಿಗೆ ಇನ್ನು ಒಂದನ್ನು ಕೂಡ ಸೇರಿಸಬಹುದು.” ನನ್ನ ಹೆತ್ತವರ ಅಭಾವ ನನಗಾದರೂ, ಸೋದರತ್ತೆಯಾದ ಮಿನಾ ನನಗೊಂದು ಉತ್ತಮ ನೆಲೆಯನ್ನು ನೀಡಿದರು.
ನನ್ನ ಅತೆಯ್ತು ಬೈಬಲ್ ವಿದ್ಯಾರ್ಥಿಗಳ (ಆ ದಿನಗಳಲ್ಲಿ ಯೆಹೋವನ ಸಾಕ್ಷಿಗಳು ಹಾಗೆಂದು ಕರೆಯಲ್ಪಡುತ್ತಿದ್ದರು) ಆಲಗೆನಿ ಸಭೆಯ ಸುದೀರ್ಘ ಸಮಯದ ಒಬ್ಬ ಸದಸ್ಯರಾಗಿದ್ದರು. ಇಸವಿ 1909ರ ಮುಂಚೆ, ಆಗ ವಾಚ್ ಟವರ್ ಸೊಸೈಟಿಯ ಅಧ್ಯಕ್ಷರಾಗಿದ್ದ ಸಹೋದರ ಸಿ.ಟಿ. ರಸ್ಸಲ್ ಕೂಡ ಅದೇ ಸಭೆಗೆ ಹೋಗುತ್ತಿದ್ದರು. ಮಿನಾ ಅತೆಯ್ತು ನನ್ನನ್ನು ಕೂಟಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಆಗಿನ ಸಮಯದಲ್ಲಿ ನಮ್ಮ ಕುಟುಂಬವು ಅಭ್ಯಸಿಸಲು ಯಾ ಸಾರಲು ನಿಶ್ಚಯಿಸಿದ ಪ್ರಯತ್ನವನ್ನು ಮಾಡದಿದ್ದರೂ, ನಾವು ಕೂಟಗಳಲ್ಲಿ ಕೇಳಿದಂತಹ ವಿಷಯಗಳನ್ನು ನಮಗೆ ಪರಿಚಯವಿದ್ದ ಜನರೊಂದಿಗೆ ಅನೌಪಚಾರಿಕವಾಗಿ ಹಂಚಿಕೊಂಡೆವು.
ಇದೇ ಸಮಯದಲ್ಲಿಯೇ “ಫೋಟೊ ಡ್ರಾಮ”ವು ನನ್ನನ್ನು ಆಶ್ಚರ್ಯದಿಂದ ತುಂಬಿಸಿತು. ನಾನು ಯಾಂತ್ರಿಕ ಪ್ರವೃತ್ತಿಯುಳ್ಳವನಾಗಿದ್ದರಿಂದ, ಟೈಮ್ ಲ್ಯಾಪ್ಸ್ ಛಾಯಾಚಿತ್ರ ಕಲೆಯಂತೆಯೆ, ನವೀನ ಛಾಯಾಗ್ರಾಹಕ ತಂತ್ರಗಳು ಮತ್ತು ಧ್ವನಿ ⁄ ಚಿತ್ರದ ಸಮಕಾಲಿಕತೆಯು ನನ್ನನ್ನು ಆಕರ್ಷಿಸಿದವು. ಹೂವಿನ ಮೊಗ್ಗುಗಳು ಅರಳುವುದನ್ನು ನೋಡುವುದು ರೋಮಾಂಚಕಾರಿಯಾಗಿತ್ತು!
ಇಸವಿ 1916 ರಲ್ಲಿ ನಾವು ಸಹೋದರ ರಸ್ಸಲ್ರ ಮರಣದಿಂದ ದುಃಖಿತರಾದೆವು. ನಾವು ಆಲಗೆನಿಯಲ್ಲಿಯೇ ಜೀವಿಸುತ್ತಿದ್ದ ಕಾರಣ, ಕಾರ್ನೆಗಿ ಹಾಲಿನಲ್ಲಿ ನಡೆಸಲಾದ ಅವರ ಶವಸಂಸ್ಕಾರಕ್ಕೆ ನಾವು ಹಾಜರಾದೆವು. ಇಸವಿ 1903 ರಲ್ಲಿ ಸಹೋದರ ರಸ್ಸಲರು ಇ.ಎಲ್. ಈಟನ್ರೊಂದಿಗೆ ವಾದಿಸಿದ ಸಭಾಂಗಣವು ಇದೇ ಆಗಿತ್ತು. ಸಹೋದರ ರಸ್ಸಲರ ಬೈಬಲ್ ಪಾಂಡಿತ್ಯವನ್ನು ಅಪಮಾನಗೊಳಿಸಲು ನಿರೀಕ್ಷಿಸುತ್ತಾ, ಸಿ.ಟಿ. ರಸ್ಸಲರನ್ನು ಆರು ದಿನದ ವಾದಕ್ಕೆ ಸವಾಲೊಡ್ಡಿದ ಈ ಮೆತೊಡಿಸ್ಟ್ ಇಪಿಸ್ಕೊಪೇಲಿಯನ್ ಶುಶ್ರೂಷಕನ ಕುರಿತು ನಾನು ಕಥೆಗಳನ್ನು ಕೇಳಿದ್ದೆ. ಬದಲಿಗೆ, ರಸ್ಸಲರು ‘ನರಕದ ಮೇಲೆಯೇ ನೀರ್ಕೊಳವಿಯನ್ನು ತಿರುಗಿಸಿದ’ ರೆಂದು ಹೇಳಲಾಯಿತು. ಪಿಟ್ಸ್ಬರ್ಗ್ನಲ್ಲಿನ ಒಬ್ಬಾಕೆ ಸುವಿದಿತ ಪೂರ್ಣ ಸಮಯದ ಶುಶ್ರೂಷಕಳಾದ ಸಾರಾ ಕೇಲಿನ್, ರಸ್ಸಲ್ ದಂಪತಿಗಳನ್ನು ವೈಯಕ್ತಿಕವಾಗಿ ಅರಿತಿದ್ದಳು. ಶವಸಂಸ್ಕಾರದಲ್ಲಿ ಮರಿಯಾ ರಸ್ಸಲ್, ಸಂಪುಟದಲ್ಲಿ ಕೆಲವು ಹೂವುಗಳನ್ನು, “ನನ್ನ ಪ್ರಿಯ ಗಂಡನಿಗೆ” ಎಂಬ ಒಂದು ಟಿಪ್ಪಣಿಯೊಂದಿಗೆ ಇಡುವುದನ್ನು ಆಕೆ ನೋಡಿದಳು. ಕೆಲವು ವರ್ಷಗಳ ಮೊದಲೇ ಮರಿಯಾ ಸಹೋದರ ರಸ್ಸಲರಿಂದ ಅಗಲಿದ್ದರೂ, ಅವರನ್ನು ತನ್ನ ಗಂಡನೆಂದು ಆಕೆ ಇನ್ನೂ ಗುರುತಿಸಿದಳು.
ವರ್ಷಗಳು ಉರುಳಿದಂತೆ, ನನ್ನ ಭವಿಷ್ಯದ ಜೀವನೋಪಾಯಕ್ಕೆ ಉಪಯುಕ್ತವಾದ ಯಾಂತ್ರಿಕ ಸಾಮರ್ಥ್ಯಗಳನ್ನು ಪಡೆದುಕೊಳ್ಳುವ ಅನೇಕ ಅವಕಾಶಗಳು ನನಗಿದ್ದವು. ನನ್ನ ಪೋಷಕರಾಗಿದ್ದ ನನ್ನ ತಾಯಿಯ ಹಿರಿಯ ಅಣ್ಣನವರು, ಒಬ್ಬ ಕಟ್ಟಡ ಗುತ್ತಿಗೆಗಾರರಾಗಿದ್ದರು. ನನ್ನ ಶಾಲಾ ರಜೆಗಳಲ್ಲಿ, ತಮ್ಮ ವಿದ್ಯುಚ್ಛಿಲ್ಪಿಗಳೊಂದಿಗೆ—ಹಳೆಯ ಮಹಲುಗಳನ್ನು ಅನಿಲದಿಂದ ವಿದ್ಯುಚ್ಛಕ್ತಿಗೆ ಪರಿವರ್ತಿಸುತ್ತಾ—ಕೆಲಸಮಾಡಲು ನನ್ನನ್ನು ಅವರು ಅನುಮತಿಸಿದರು. ಇಸವಿ 1918 ರಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಕಲಾವಿಲಾಸಿ ರೇಡಿಯೊ ಟೆಲಿಗ್ರಾಫ್ ಸಜ್ಜನ್ನು ತಯಾರಿಸಿದರು. ಅಭ್ಯಸಿಸಲು ಮತ್ತು ವಿದ್ಯುಚ್ಛಕ್ತಿ ಹಾಗೂ ಕಾಂತಶಕ್ತಿಯೊಂದಿಗೆ ಹೊರಗೆ ಪ್ರಯೋಗಗಳನ್ನು ನಡೆಸಲು ನಾವು ಸಾಯಂಕಾಲಗಳಲ್ಲಿ ಭೇಟಿಯಾದೆವು. ಇಸವಿ 1926 ರಲ್ಲಿ, ಒಬ್ಬ ಮಿತ್ರನು ಮತ್ತು ನಾನು, ಬಾಲ್ಯದ ಕನಸೊಂದನ್ನು—ಹಡಗುಗಳಲ್ಲಿ ಕೆಲಸಮಾಡುವ ಮತ್ತು ಲೋಕದ ಸುತ್ತಲೂ ಪ್ರಯಾಣಿಸುವ—ಬೆನ್ನಟಲ್ಟು ನಿರ್ಧರಿಸಿದೆವು. ರೇಡಿಯೊ ಟೆಲಿಗ್ರಾಫ್ ನಿರ್ವಾಹಕರಿಗಾಗಿ ರೇಡಿಯೊ ಕಾರ್ಪೊರೇಷನ್ ಆಫ್ ಅಮೆರಿಕ ಶಾಲೆಯಲ್ಲಿ ನಮ್ಮ ಹೆಸರನ್ನು ನಾವು ನಮೂದಿಸಿಕೊಂಡೆವು.
ಬೆತೆಲ್ನಲ್ಲಿ ಒಂದು ಹೊಸ ಜೀವನ
ನಾವು ಹಾಜರಾಗುತ್ತಿದ್ದ ರೇಡಿಯೊ ಶಾಲೆಯು ನ್ಯೂ ಯಾರ್ಕ್ ನಗರದಲ್ಲಿತ್ತು, ಆದುದರಿಂದ ನಾನು ಬೈಬಲ್ ವಿದ್ಯಾರ್ಥಿಗಳ ಕೂಟಗಳಿಗಾಗಿ ನದಿಯನ್ನು ದಾಟಿ ಬ್ರೂಕ್ಲಿನ್ಗೆ ಬರುತ್ತಿದ್ದೆ. ಕೂಟಗಳು ಹಳೆಯ ಮೆಸಾನಿಕ್ ಮಂದಿರದ ಬಾಡಿಗೆಗೆ ಪಡೆದ ಸಭಾಂಗಣದಲ್ಲಿ ನಡೆಯುತ್ತಿದ್ದವು. ಆಗಿನ ಸಮಯದಲ್ಲಿ, ಇಡೀ ನ್ಯೂ ಯಾರ್ಕ್ ನಗರದ ಕ್ಷೇತ್ರಕ್ಕೆ ಕೇವಲ ಒಂದೇ ಸಭೆಯಿತ್ತು. ಬೆತೆಲ್ (ಬೈಬಲ್ ವಿದ್ಯಾರ್ಥಿಗಳ ಮುಖ್ಯ ಕಾರ್ಯಾಲಯದ ಕುಟುಂಬದವರ ಮನೆ) ನಲ್ಲಿರುವ ಸಹೋದರರಿಗೆ ನಾನೊಂದು ವಾಣಿಜ್ಯ ರೇಡಿಯೊ ಪರವಾನಿಗೆಗಾಗಿ (ಲೈಸೆನ್ಸಿಗಾಗಿ) ಅಧ್ಯಯನ ಮಾಡುತ್ತಿದ್ದೇನೆಂದು ತಿಳಿದುಬಂದಾಗ, ಅವರು ಹೇಳಿದ್ದು: “ಸಮುದ್ರಕ್ಕೆ ಹೋಗುವುದೇಕೆ? ಇಲ್ಲಿಯೇ ಒಂದು ರೇಡಿಯೊ ಕೇಂದ್ರ ನಮಗಿದೆ ಮತ್ತು ಒಬ್ಬ ನಿರ್ವಾಹಕನ ಅಗತ್ಯವಿದೆ.” ಒಂದು ಮುಖತಃ ಭೇಟಿಗಾಗಿ ಆಫೀಸಿಗೆ ಬರುವಂತೆ ಅವರು ನನ್ನನ್ನು ಆಮಂತ್ರಿಸಿದರು. ಅದು ಬೈಬಲ್ ವಿದ್ಯಾರ್ಥಿಗಳ ಮುಖ್ಯ ಕಾರ್ಯಾಲಯವೆಂಬ ಸಂಗತಿಯನ್ನು ಹೊರತು ಪಡಿಸಿ ಬೆತೆಲಿನ ಕುರಿತು ನನಗೆ ಏನೂ ಗೊತ್ತಿರಲಿಲ್ಲ.
ಸಹೋದರರು ನನ್ನ ಸಂದರ್ಶನವನ್ನು ಮಾಡಿದರು ಮತ್ತು ನಾನು ನನ್ನ ಶಾಲಾಭ್ಯಾಸವನ್ನು ಮುಗಿಸಿ, ಪರವಾನಿಗೆಯೊಂದನ್ನು ಪಡೆದು, ಆಮೇಲೆ ಬೆತೆಲಿಗೆ ಬರುವಂತೆ ಶಿಫಾರಸ್ಸು ಮಾಡಿದರು. ಪದವಿಯನ್ನು ಪಡೆದ ಬಳಿಕ, ಸಮುದ್ರದ ಪ್ರಯಾಣಕ್ಕಾಗಿ ಒಂದು ಹಡಗನ್ನು ಏರುವ ಬದಲು, ನನ್ನ ಕೆಲವು ಬಟ್ಟೆಗೆಳನ್ನು ಜೋಡಿಸಿಟ್ಟುಕೊಂಡು ಬೆತೆಲ್ಗೆ ಹೋಗುವ ಒಂದು ಭೂಗತ ಗಾಡಿಯನ್ನು ಹತ್ತಿದೆ. ನಾನು ಯೆಹೋವನಿಗೆ ಸಮರ್ಪಿಸಿಕೊಂಡು, ಸಾರುವ ಕೆಲಸದಲ್ಲಿ ಅನೇಕ ವರ್ಷಗಳಿಂದ ಭಾಗವಹಿಸುತ್ತಿದ್ದರೂ, ಬೆತೆಲಿಗೆ ಬಂದು ತಲಪಿದ ಎರಡು ವಾರಗಳ ತರುವಾಯ ದಶಂಬರ 1926ರ ತನಕ ನಾನು ದೀಕ್ಷಾಸ್ನಾನ ಪಡೆದಿರಲಿಲ್ಲ. ಆ ಸಮಯದಲ್ಲಿ ಅದು ಅಸಾಮಾನ್ಯ ಸಂಗತಿಯಾಗಿರಲಿಲ್ಲ.
ಆ ದಿನಗಳಲ್ಲಿ 150 ಸದಸ್ಯರೊಂದಿಗೆ ಬೆತೆಲ್ ಜನನಿಬಿಡವಾಗಿತ್ತು. ಪ್ರತಿಯೊಂದು ಕೋಣೆಯಲ್ಲಿ ನಾಲ್ಕು ಸಹೋದರರಿದ್ದರು. ಒಂದೇ ಕಟ್ಟಡದಲ್ಲಿ ನಾವೆಲ್ಲರೂ ಊಟ, ಕೆಲಸ, ಮತ್ತು ನಿದ್ರೆ ಮಾಡುತ್ತಿದ್ದ ಕಾರಣ ನಾನು ಅವರಲ್ಲಿ ಹೆಚ್ಚಿನವರೊಂದಿಗೆ ಬೇಗನೆ ಪರಿಚಿತನಾದೆ, ಮತ್ತು ನಿಶ್ಚಯವಾಗಿಯೂ ನಾವೆಲ್ಲರು ನ್ಯೂ ಯಾರ್ಕ್ ನಗರದಲ್ಲಿದ್ದ ಒಂದೇ ಸಭೆಗೆ ಹೋದೆವು. ಇಸವಿ 1927 ರಲ್ಲಿ, 124 ಕೊಲಂಬಿಯ ಹೈಟ್ಸ್ನಲ್ಲಿರುವ ಹೊಸ ಬೆತೆಲ್ ಗೃಹವು ಪೂರ್ಣಗೊಂಡಿತು, ಮತ್ತು ಒಂದು ಕೋಣೆಗೆ ಇಬ್ಬರಂತೆ ನಾವು ಜೀವಿಸಶಕ್ತರಾದೆವು.
ಇಸವಿ 1927 ರಲ್ಲಿಯೇ 117 ಆ್ಯಡಮ್ಸ್ ಸ್ಟ್ರೀಟ್ನಲ್ಲಿನ ಹೊಸ ಫ್ಯಾಕ್ಟರಿಯು ತೆರೆಯಿತು. ನಾನು 55 ಕಾನ್ಕರ್ಡ್ ಸ್ಟ್ರೀಟ್ನಲ್ಲಿದ್ದ ಹಳೆಯ ಫ್ಯಾಕ್ಟರಿಯಿಂದ ಸಜ್ಜನ್ನು ವರ್ಗಾಯಿಸಲು ಸಹಾಯ ಮಾಡಿದೆ. ರೇಡಿಯೊ ಸಜ್ಜಿನ ಜೊತೆಗೆ, ಫ್ಯಾಕ್ಟರಿಯಲ್ಲಿ ಮೇಲೆತ್ತಿಗೆಗಳು, ಮುದ್ರಣ ಯಂತ್ರಗಳು, ಬಟ್ಟೆ ಒಗೆಯುವ ಸಜ್ಜು, ಎಣ್ಣೆ ಜ್ವಾಲಕಗಳು ಇದ್ದವು—ಅವುಗಳಲ್ಲಿ ಒಂದು ತಂತಿ ಇದ್ದರೆ ಸರಿ, ಅದರೊಂದಿಗೆ ನಾನು ಕೆಲಸಮಾಡಿದೆ.
ಆದರೆ ಬೆತೆಲ್ ಒಂದು ಫ್ಯಾಕ್ಟರಿಗಿಂತಲೂ ಹೆಚ್ಚಿನದ್ದಾಗಿತ್ತು. ಪ್ರತಿಯೊಂದು ಪುಸ್ತಕ, ಪ್ರತಿಯೊಂದು ಕಿರುಹೊತ್ತಗೆ, ಪ್ರತಿಯೊಂದು ಪತ್ರಿಕೆಯ ಹಿಂದೆ ದೀನ, ಕಷ್ಟಪಟ್ಟು ಕೆಲಸಮಾಡುವ ಸೇವಕರ ಒಂದು ಸಮೂಹವಿತ್ತು. ಲೋಕದಲ್ಲಿ ಮನ್ನಣೆ ಮತ್ತು ಕೀರ್ತಿಯನ್ನು ಸಂಪಾದಿಸಲು ಅವರು ಬಯಸಲಿಲ್ಲ. ಬದಲಿಗೆ, ಅವರು ಕೇವಲ ಕರ್ತನ ಕೆಲಸವನ್ನು ಮಾಡಬಯಸಿದರು—ಮತ್ತು ಮಾಡಲು ಬಹಳಷ್ಟು ಇತ್ತು!
ಸಹೋದರ ರಥರ್ಫರ್ಡ್ರೊಂದಿಗೆ ಸಾಹಚರ್ಯ
ಸೊಸೈಟಿಯ ಎರಡನೆಯ ಅಧ್ಯಕ್ಷರಾಗಿದ್ದ ಜೋಸೆಫ್ ಎಫ್. ರಥರ್ಫರ್ಡ್ರೊಂದಿಗೆ ಕೆಲಸಮಾಡುವ ಸುಯೋಗದಿಂದ ನಾನು ಬಹಳವಾಗಿ ಪ್ರಯೋಜನಪಡೆದೆ. ಅವರೊಬ್ಬ ದೊಡ್ಡ ಮನುಷ್ಯರಾಗಿದ್ದರು, ಆರು ಅಡಿ ಎತ್ತರ, ದಪ್ಪಗಾಗಿರಲಿಲ್ಲ, ಆದರೆ ಗಟಿಮ್ಟುಟ್ಟಾಗಿದ್ದರು. ಬೆತೆಲ್ನಲ್ಲಿದ್ದ ಅನೇಕ ಯುವ ಸಹೋದರರು, ಅವರ ಪರಿಚಯವಾಗುವ ತನಕ ಅವರಿಗೆ ಕೊಂಚಮಟ್ಟಿಗೆ ಹೆದರುತ್ತಿದ್ದರು. ಅವರು ಸತತವಾಗಿ ಅಭ್ಯಸಿಸುತ್ತಾ, ಲಿಖಿತ ವಿಷಯವನ್ನು ತಯಾರಿಸುತ್ತಾ ಇರುತ್ತಿದ್ದರು.
ಸಹೋದರ ರಥರ್ಫರ್ಡ್ರಿಗೆ ವಿನೋದದ ಒಳ್ಳೆಯ ಪ್ರಜ್ಞೆಯಿತ್ತು. ಸಹೋದರ ರಸ್ಸಲರ ಸಮಯದಿಂದ ಬೆತೆಲ್ನಲ್ಲಿದ್ದ ಇಬ್ಬರು ವಯಸ್ಕ ಅವಿವಾಹಿತ ಸಹೋದರಿಯರು ಬೆತೆಲ್ ಕುಟುಂಬದಲಿದ್ದರು. ಅವರು ಭಾವಪ್ರದರ್ಶನ ಮಾಡದವರಾಗಿದ್ದರು ಮತ್ತು ಏನಾದರೂ ಹಾಸ್ಯಕರವಾಗಿದ್ದರೂ ಸಹ ಜೋರಾಗಿ ನಗುವುದು ಯೋಗ್ಯವಲ್ಲವೆಂದು ಅವರು ನಂಬಿದ್ದರು. ಕೆಲವೊಮ್ಮೆ ಊಟದ ಸಮಯದಲ್ಲಿ ಎಲ್ಲರನ್ನು ನಗುವಂತೆ ಮಾಡುವ ಒಂದು ಕಥೆಯನ್ನು ಸಹೋದರ ರಥರ್ಫರ್ಡ್ ಹೇಳುತ್ತಿದ್ದರು, ಇದು ಈ ಇಬ್ಬರು ಸಹೋದರಿಯರನ್ನು ರೇಗಿಸುತ್ತಿತ್ತು. ಹಾಗಿದ್ದರೂ, ಅವರು ಊಟದ ಸಮಯದ ಗಂಭೀರ ಬೈಬಲ್ ಚರ್ಚೆಗಳನ್ನು ಸಹ ನಡೆಸಿದ್ದರು.
ಸಹೋದರ ರಥರ್ಫರ್ಡ್ ಒಳ್ಳೆಯ ಅಡಿಗೆಯವರಾಗಿದ್ದರು ಮತ್ತು ಗೆಳೆಯರಿಗಾಗಿ ಊಟ ತಯಾರಿಸುವುದರಲ್ಲಿ ಆನಂದಿಸಿದರು. ಒಂದು ಬಾರಿ ಬೆತೆಲ್ ಅಡಿಗೆಯವರು ಕೋಳಿಗಳನ್ನು ಕೊಯ್ಯುವಾಗ ಕೆಲವು ಕೋಳೀ ಎಲುಬುಗಳನ್ನು ಮುರಿದರು. ಅವರು ಅಡಿಗೆಯ ಮನೆಗೆ ಹೋಗಿ ಒಂದು ಕೋಳಿಯನ್ನು ಕೊಯ್ಯುವ ಸರಿಯಾದ ರೀತಿಯನ್ನು ಅವರಿಗೆ ತೋರಿಸಿದರು. ತಮ್ಮ ಊಟದಲ್ಲಿ ಕೋಳಿಯ ಮುರಿದ ಎಲುಬುಗಳನ್ನು ಅವರು ಇಷ್ಟಪಡುತ್ತಿರಲಿಲ್ಲ!
ನಾನು ಅನೇಕ ವೇಳೆ ಸಹೋದರ ರಥರ್ಫರ್ಡ್ರ ಸುತ್ತಲೂ ಅನೌಪಚಾರಿಕ ಹಿನ್ನೆಲೆಗಳಲ್ಲಿ—ನಮ್ಮ ರೇಡಿಯೊ ಕೇಂದ್ರವಾದ ಡಬ್ಲ್ಯೂಬಿಬಿಆರ್ನಲ್ಲಿ, ಅಥವಾ ಸ್ಟ್ಯಾಟನ್ ದ್ವೀಪದಲ್ಲಿನ ಅವರ ಅಭ್ಯಾಸದ ಕೋಣೆಯಲ್ಲಿ—ಇರುತ್ತಿದ್ದೆ. ಅವರು ಬಹಳ ದಯಾಪರ ವ್ಯಕ್ತಿಯಾಗಿದ್ದರು ಮತ್ತು ಹೇಳಿದ್ದನ್ನು ಆಚರಿಸಿದರು. ತಾವು ಸ್ವತಃ ಮಾಡದೇ ಇರುತ್ತಿದ್ದ ಯಾವುದೇ ವಿಷಯವನ್ನು ಅವರು ಇತರರಿಂದ ಅಪೇಕ್ಷಿಸತ್ತಿರಲಿಲ್ಲ. ಇತರ ಅನೇಕ ಧಾರ್ಮಿಕ ಸಂಸ್ಥೆಗಳಲಿನ್ಲ ಜವಾಬ್ದಾರ ವ್ಯಕ್ತಿಗಳಂತೆ ಇರದೆ, ಸಹೋದರ ರಥರ್ಫರ್ಡ್ ಅತ್ಯುನ್ನತ ಆತ್ಮಿಕ ಮತ್ತು ನೈತಿಕ ಚಾರಿತ್ರ್ಯವುಳ್ಳವರಾಗಿದ್ದರು. ಅವರು ಸ್ಪಷ್ಟವಾಗಿಗಿ ಯೆಹೋವನ ರಾಜ್ಯಕ್ಕಾಗಿ ಜೀವಿಸಿದರು.
ಕಠಿನವಾದ ಹಣಕಾಸಿನ ಸಮಯಗಳು
ನಾನು ಬೆತೆಲಿಗೆ ಬಂದು ತಲಪಿದ ಕೆಲವು ವರ್ಷಗಳ ಅನಂತರ, ಲೋಕವು 1930 ಗಳ ಆರ್ಥಿಕ ಕುಸಿತವನ್ನು ಅನುಭವಿಸಿತು. ಸರಕುಗಳ ಬೆಲೆಗಳು ಕುಸಿದಂತೆ, ಹಣಕಾಸಿನ ಮಾರುಕಟ್ಟೆಗಳು ಕೂಡ ಕುಸಿದವು. ಕೆಲಸದ ಅವಕಾಶಗಳು ವಿರಳವಾಗಿದ್ದವು ಮತ್ತು ಹಣ ಸಂಗ್ರಹಗಳು ಸೀಮಿತವಾಗಿದ್ದವು. ಬೆತೆಲ್, ಕಾಣಿಕೆಯಾಗಿ ಬಂದ ಹಣದಿಂದ ಕೆಲಸಮಾಡಿತು, ಮತ್ತು ಕೆಲಸದ ಉಸ್ತುವಾರಿಗಾಗಿ ಸಾಕಷ್ಟು ಇತ್ತೆಂದು ಯೆಹೋವನು ಯಾವಾಗಲೂ ಖಚಿತಪಡಿಸಿಕೊಂಡನು. ಪ್ರತಿಯೊಬ್ಬನು ಬಯಸಿದ ಊಟವು ಇರದಿದ್ದರೂ, ನಾವು ಎಂದೂ ಊಟವಿಲ್ಲದೆ ಇದ್ದದ್ದಿಲ್ಲ. ಸಾಧ್ಯವಾದಷ್ಟು ಮಿತವಾಗಿ ನಾವು ಜೀವಿಸಿದೆವು, ಮತ್ತು ಬೆತೆಲಿನ ಹೊರಗೆ ಇದ್ದ ಸಹೋದರರು ಅವರಿಗೆ ಸಾಧ್ಯವಾದಂತೆ ನಮಗೆ ಭೌತಿಕವಾಗಿ ಸಹಾಯ ಮಾಡಿದರು.
ಇಸವಿ 1932 ರಲ್ಲಿ, ನಮ್ಮ ಫ್ಯಾಕ್ಟರಿಯ ನಂಬಿಗಸ್ತ ಮೇಲ್ವಿಚಾರಕರಾದ ಸಹೋದರ ರಾಬರ್ಟ್ ಮಾರ್ಟಿನ್ ತೀರಿಹೋದರು. ಅವರ ಸ್ಥಾನದಲ್ಲಿ ಇಪ್ಪತ್ತೇಳು ವರ್ಷ ವಯಸ್ಸಿನ ನೇಥನ್ ನಾರ್ ನೇಮಕಗೊಂಡರು. ಅವರೊಬ್ಬ ಬಹಳ ಸಮರ್ಥ ಯೌವನಸ್ಥರಾಗಿದ್ದರು. ಅವರನ್ನು ಫ್ಯಾಕ್ಟರಿ ಮೇಲ್ವಿಚಾರಕರಂತೆ ಸ್ವೀಕರಿಸುವುದು ಯಾರೊಬ್ಬರಿಗೂ ತೊಂದರೆಯಾದದ್ದು ನನ್ನ ನೆನಪಿಗೆ ಬರುವುದಿಲ್ಲ. ಇತರ ನಂಬಿಗಸ್ತ ಸಹೋದರರು, ಅವರೊಳಗೆ ಜಾನ್ ಕರ್ಜನ್, ಜಾರ್ಜ್ ಕೆಲಿ, ಡಗ್ ಗಾಲ್ಬ್ರೈತ್, ರಾಲ್ಫ್ ಲೆಫ್ಲ್ರ್, ಮತ್ತು ಎಡ್ ಬೇಕರ್—ಎಲ್ಲ ನನ್ನ ಪ್ರಿಯ ಜೊತೆ ಕೆಲಸಗಾರರು—ರಾಜ್ಯದ ಸೇವೆಗಾಗಿ ತಮ್ಮ ಕೌಶಲ ಮತ್ತು ಜಾಣತನವನ್ನು ಪೂರ್ಣ ಮನಸ್ಸಿನಿಂದ ಸಮರ್ಪಿಸಿದರು.—ಹೋಲಿಸಿ ವಿಮೋಚನಕಾಂಡ 35:34, 35.
ರೇಡಿಯೊದೊಂದಿಗೆ ಕೆಲಸಮಾಡುವುದು
ನಮ್ಮ ಸಂಸ್ಥೆಯು ಲಭ್ಯವಿರುವ ಯಾವುದೇ ವಿಧಾನದ ಮೂಲಕ ಸುವಾರ್ತೆಯ ಹಬ್ಬಿಸುವಿಕೆಗೆ ಸಂಪೂರ್ಣವಾಗಿ ಸಮರ್ಪಿತವಾಗಿತ್ತು. ಇಡೀ ಲೋಕವು ರಾಜ್ಯದ ಕುರಿತು ಅರಿಯಬೇಕಿತ್ತು, ಆದರೆ ನಾವು ಕೇವಲ ಕೆಲವು ಸಾವಿರ ಸಾಕ್ಷಿಗಳೆದ್ದೆವು. ಒಂದನೆಯ ಲೋಕ ಯುದ್ಧವನ್ನು ಹಿಂಬಾಲಿಸಿ, ರೇಡಿಯೊ ತಂತ್ರಜ್ಞಾನವು ಅದರ ಬಾಲ್ಯಾವಸ್ಥೆಯಲ್ಲಿತ್ತು. ಹಾಗಿದ್ದರೂ, ಆ ಸಮಯದಲ್ಲಿ ಯೆಹೋವನು ಒದಗಿಸಿದ್ದು ಸಂಸರ್ಗದ ಈ ವಿಧಾನವನ್ನೇ ಎಂದು ವಿವೇಚನೆಯುಳ್ಳ ಸಹೋದರರು ಅಭಿಪ್ರಯಿಸಿದರು. ಆದುದರಿಂದ 1923 ರಲ್ಲಿ, ನ್ಯೂ ಯಾರ್ಕ್ ನಗರದ ಐದು ಆಡಳಿತ ವಿಭಾಗಗಳಲ್ಲಿ ಒಂದಾದ ಸ್ಟ್ಯಾಟನ್ ಐಲ್ಯಂಡ್ನಲ್ಲಿ ರೇಡಿಯೊ ಕೇಂದ್ರ ಡಬ್ಲ್ಯೂಬಿಬಿಆರ್ ಅನ್ನು ಕಟ್ಟಲು ಅವರು ತೊಡಗಿದರು.
ಕೆಲವೊಮ್ಮೆ ನಾನು ನಮ್ಮ ಕೇಂದ್ರದ ಏಕಮಾತ್ರ ನಿರ್ವಾಹಕನಾಗಿರುತ್ತಿದ್ದೆ. ನಾನು ಸ್ಟ್ಯಾಟನ್ ಐಲ್ಯಂಡ್ನಲ್ಲಿ ಜೀವಿಸುತ್ತಿದ್ದೆ ಆದರೆ ವಿದ್ಯುತ್ತಿನ ಯಾ ಯಾಂತ್ರಿಕ ಕೆಲಸವನ್ನು ಮಾಡಲು ಬ್ರೂಕ್ಲಿನ್ನಲ್ಲಿದ್ದ ಫ್ಯಾಕ್ಟರಿಗೆ ಮೂರು ತಾಸಿನ ದೋಣಿ ಮತ್ತು ರೈಲುಗಾಡಿಯ ಪ್ರಯಾಣವನ್ನು ಮಾಡುತ್ತಿದ್ದೆ. ನಮ್ಮ ರೇಡಿಯೊ ಕೇಂದ್ರವನ್ನು ಮೂಲತಃ ಸ್ವಯಂ ಅಡಕವಾಗಿ ಮಾಡಲು, ನಾವು ಒಂದು ಡೀಜಲ್ ಉತ್ಪಾದಕವನ್ನು ಅಳವಡಿಸಿದೆವು. ಸ್ಟ್ಯಾಟನ್ ಐಲ್ಯಂಡ್ನಲ್ಲಿ ನಮ್ಮ ಸ್ವಂತ ನೀರಿನ ಬಾವಿಗಳು ಮತ್ತು ಅಲ್ಲಿನ ಸಣ್ಣ ಸಿಬ್ಬಂದಿಗೆ ಅಷ್ಟೇ ಅಲ್ಲದೆ ಬ್ರೂಕ್ಲಿನ್ನಲ್ಲಿದ್ದ ಬೆತೆಲ್ ಕುಟುಂಬಕ್ಕೆ ಕೂಡ ಆಹಾರವನ್ನು ಒದಗಿಸಿದ ಒಂದು ತೋಟವು ಸಹ ನಮಗಿತ್ತು.
ಹೆಚ್ಚಿನ ಸಹಾಯವು ತದನಂತರ ಬರುವ ವರೆಗೆ, ರೇಡಿಯೊ ಕೆಲಸದ ಜವಾಬ್ದಾರಿಗಳು ನನ್ನ ಕೂಟದ ಹಾಜರಿಯನ್ನು ಮತ್ತು ಕ್ಷೇತ್ರ ಸೇವೆಯನ್ನು ಬಹಳವಾಗಿ ಸೀಮಿತಗೊಳಿಸಿದವು. ನಮ್ಮ ವಾರ್ಷಿಕ ರಜೆಯ ಹೊರತು ಸಾಮಾಜಿಕ ಕಾರ್ಯಕ್ರಮಗಳಿಗಾಗಿ ಯಾ ವಾರಾಂತ್ಯದ ಸಂಚಾರಗಳಿಗಾಗಿ ಸಮಯವೇ ಇರುತ್ತಿರಲಿಲ್ಲ. ಯಾರೋ ಒಬ್ಬರು ನನ್ನನ್ನು ಒಮ್ಮೆ ಕೇಳಿದರು: “ಇಂತಹ ತಗಾದೆಯ ಒಂದು ವೇಳಾ ಪಟ್ಟಿಯೊಂದಿಗೆ, ನೀವು ಎಂದೂ ಬೆತೆಲನ್ನು ಬಿಡುವುದನ್ನು ಪರಿಗಣಿಸಲಿಲ್ಲವೊ?” ಪ್ರಾಮಾಣಿಕವಾಗಿ, “ಇಲ್ಲ” ಎಂದು ನಾನು ಹೇಳಲೇ ಬೇಕಾಗಿತ್ತು. ಭಕ್ತಿಯುಳ್ಳ ಅನೇಕ ಸಹೋದರ ಹಾಗೂ ಸಹೋದರಿಯರ ಜೊತೆಗೆ ಜೀವಿಸುವುದು ಮತ್ತು ಕೆಲಸಮಾಡುವುದು ಒಂದು ಸುಯೋಗವೂ ಆನಂದವೂ ಆಗಿ ಪರಿಣಮಿಸಿದೆ. ಮತ್ತು ಅಲ್ಲಿ ಮಾಡಲು ಯಾವಾಗಲೂ ಕೆಲಸವಿರುತ್ತಿತ್ತು, ಮಾಡಲು ಯಾವುದಾದರೂ ಹೊಸ ಯೋಜನೆ ಇರುತ್ತಿತ್ತು.
ನಾವು ಉತ್ಸಾಹಕರವಾದ ರೇಡಿಯೊ ಡ್ರಾಮಗಳನ್ನು ತಯಾರಿಸಿ ಪ್ರಸಾರಮಾಡಿದೆವು. ವಿಶೇಷ ಪರಿಣಾಮಗಳ ಧ್ವನಿ ಸಂಗ್ರಹ ಯಂತ್ರಗಳು ಇರದೆ, ನಮ್ಮ ಸ್ವಂತ ವಿಧಾನಗಳನ್ನು ನಾವು ರಚಿಸಬೇಕಿತ್ತು. ನಸುಗಾಳಿಯ ಅಥವಾ ಅತ್ಯುಗ್ರವಾದ ಬಿರುಗಾಳಿಯ ಶಬ್ದವನ್ನು ಪುನರ್ಸೃಷ್ಟಿಸಸಾಧ್ಯವಿದ್ದ ಒಂದು ಯಂತ್ರವನ್ನು ನಾವು ರಚಿಸಿದೆವು. ತೆಂಗಿನ ಕರಟಗಳ ಅರ್ಧಭಾಗಗಳು ಮೆತ್ತೆ ಹಲಗೆಗಳನ್ನು ಬಡಿಯುವ ಶಬ್ದವು, ಕಲ್ಲಿನ ರಸ್ತೆಗಳ ಮೇಲೆ ಸವಾರಿಮಾಡಿಕೊಂಡು ಹೋಗುವ ಕುದುರೆ ಗೊರಸಿನ ಶಬ್ದವಾಯಿತು. ಪ್ರತಿಯೊಂದು ಡ್ರಾಮವು ಪ್ರದರ್ಶನಾತ್ಮಕ ಕೆಲಸವಾಗಿತ್ತು. ಮತ್ತು ಜನರು ಆಲಿಸಿದರು. ಕೊಂಚ ಅಪಕರ್ಷಣೆಗಳ ಆ ದಿನಗಳಲ್ಲಿ ಅನೇಕ ಜನರು ಕೂತುಕೊಂಡು ಗಮನಕೊಟ್ಟರು.
ಇಸವಿ 1920 ಗಳಲ್ಲಿ ಮತ್ತು 1930 ಗಳ ಆದಿಭಾಗದಲ್ಲಿ, ಕೇವಲ ಒಂದು ಕಾರ್ಯಕ್ರಮಕ್ಕಾಗಿ ಹೆಚ್ಚಿನ ಸಂಖ್ಯೆಯ ಕೇಂದ್ರಗಳನ್ನು ರೇಡಿಯೊ ಮತ್ತು ಟೆಲಿಫೋನ್ ಲೈನ್ಗಳ ಮೂಲಕ ಜೋಡಿಸುತ್ತಾ, ಸೊಸೈಟಿಯು ರೇಡಿಯೊ ಇತಿಹಾಸವನ್ನು ಸೃಷ್ಟಿಸಿತು. ಹೀಗೆ ರಾಜ್ಯದ ವಾರ್ತೆಯು ಲೋಕವ್ಯಾಪಕವಾಗಿ ಲಕ್ಷಾಂತರ ಜನರನ್ನು ತಲಪಿತು.
ಫೋನೊಗ್ರಾಫ್
ಇಸವಿ 1930 ಗಳ ಮಧ್ಯಭಾಗದಲ್ಲಿ ಮತ್ತು 1940 ಗಳ ಆದಿಭಾಗದಲ್ಲಿ, ನಾವು ಫೋನೊಗ್ರಾಫ್ ರೆಕಾರ್ಡ್ಗಳನ್ನು, ಫೋನೊಗ್ರಾಫ್ಗಳನ್ನು, ಮತ್ತು ಇತರ ಧ್ವನಿ ಸಜ್ಜುಗಳನ್ನು ರಚಿಸಿ ತಯಾರಿಸಿದೆವು. ಒಂದು ವಿಶೇಷವಾದ ಚರಕಿ ಯಂತ್ರ (ಲೇದ್)ದ ಮೂಲಕ, ಜೇನುಮೇಣದ ಗಾಜಿನಂತೆ ನುಣುಪಾದ ಬಿಲ್ಲೆಗಳಿಂದ ನಾವು ಮೂಲಭೂತ ರೆಕಾರ್ಡ್ಗಳನ್ನು ಕತ್ತರಿಸಿದೆವು. ಪ್ರತಿಯೊಂದು ಮೂಲಭೂತ ರೆಕಾರ್ಡನ್ನು ಅದು ದೋಷರಹಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು, ಸೂಕ್ಷ್ಮದರ್ಶಕದ ಕೆಳಗೆ ಬಹಳ ಜಾಗರೂಕವಾಗಿ ನಾವು ಪರೀಕ್ಷಿಸಿದೆವು. ಯಾವುದೇ ಕೊರತೆಗಳು ಇರುವಲ್ಲಿ, ರೆಕಾರ್ಡಿಂಗ್ ಕಾಲವನ್ನು ಮತ್ತೆ ಪುನರಾವರ್ತಿಸಬೇಕಿತ್ತು ಮತ್ತು ಇನ್ನೊಂದು ಚರಕಿ ಯಂತ್ರದ ಕತ್ತರಿಸುವಿಕೆಯನ್ನು ಮಾಡಬೇಕಿತ್ತು. ಆಮೇಲೆ ನಾವು ಜೇನುಮೇಣದ ಮೂಲಭೂತ ರೆಕಾರ್ಡನ್ನು ಒಂದು ರೆಕಾರ್ಡ್ ಕಂಪನಿಗೆ ಕಳುಹಿಸಿದೆವು, ಅವರು ಫೋನೊಗ್ರಾಫ್ ಮತ್ತು ಫೋನೊಗ್ರಾಫ್ ರೆಕಾರ್ಡಗಳನ್ನು ಉತ್ಪಾದಿಸಿದರು.
ನನಗೆ ಬಹಳ ಚೆನ್ನಾಗಿ ನೆನಪಿರುವ ಒಂದು ರೋಮಾಂಚಕಾರಿ ಘಟನೆಯು, 1933 ರಲ್ಲಿ “ಶಾಂತಿ ಮತ್ತು ಏಳಿಗೆಯ ಮೇಲೆ ಪವಿತ್ರ ವರ್ಷದ ಪ್ರಭಾವ” ಎಂಬುದಾಗಿ ಹೆಸರಿಸಲಾದ ಸಹೋದರ ರಥರ್ಫರ್ಡ್ರ ಉಪನ್ಯಾಸವಾಗಿತ್ತು. ಆ ವರ್ಷವನ್ನು ಪೋಪರು “ಪವಿತ್ರ ವರ್ಷ” ವೆಂದು ಘೋಷಿಸಿದ್ದರು, ಮತ್ತು ರೇಡಿಯೊ ಪ್ರಸಾರ ಹಾಗೂ ಫೋನೊಗ್ರಾಫ್ಗಳ ಮೂಲಕ ನಾವು ಅದನ್ನು ಬಹಿರಂಗ ಪಡಿಸಿದೆವು ಮತ್ತು ಅದರಿಂದ ಪವಿತ್ರವಾದದ್ದು ಏನೂ ಆಗದೆಂದು ತೋರಿಸಿದೆವು. ಮತ್ತು ಸಂಭವಿಸಿದ್ದೇನಂದರೆ, ಆ ವರ್ಷ ಹಿಟ್ಲರನು ಕ್ಯಾತೊಲಿಕ್ ಚರ್ಚಿನ ಬೆಂಬಲದಿಂದ ಅಧಿಕಾರವನ್ನು ವಹಿಸಿಕೊಂಡನು, ಹೀಗೆ ಶಾಂತಿಗಾಗಿದ್ದ ಯಾವುದೇ ನಿರೀಕ್ಷೆಗಳು ಮಾಯವಾದವು.
ಅಮೆರಿಕದಲ್ಲಿ, ಕ್ಯಾತೊಲಿಕ್ ಆ್ಯಕ್ಷನ್ ಸಂಸ್ಥೆಯು, ಚರ್ಚ್ ಬಯಸಿದ್ದನ್ನು ಕಾರ್ಯರೂಪಕ್ಕೆ ತರಲು ರಚಿಸಲ್ಪಟ್ಟಿತು. ಅವರು ತಮ್ಮ ಸ್ವಂತ ಪುರುಷರನ್ನು ಪ್ರಧಾನ ವಾರ್ತಾಪತ್ರಿಕೆಗಳ, ಪತ್ರಿಕೆಗಳ, ಮತ್ತು ಪುಸ್ತಕ ಪ್ರಕಾಶಕರ ಸಂಪಾದಕ ಸಮಿತಿಗಳಲ್ಲಿ ಇರಿಸಿದರು. ರಾಜಕೀಯದಲ್ಲಿ ಅವರು ಕೈಹಾಕಿದರು ಮತ್ತು ನಮ್ಮ ಬೈಬಲ್ ಉಪನ್ಯಾಸಗಳನ್ನು ಪ್ರಸಾರಮಾಡುವ ಯಾವುದೇ ಕೇಂದ್ರವನ್ನು ಬಹಿಷ್ಕರಿಸುವ ಬೆದರಿಕೆಯನ್ನು ಹಾಕಿದರು. ವಿಶೇಷವಾಗಿ ಹತ್ತಿರದ ನ್ಯೂ ಜರ್ಸಿಯಲ್ಲಿ, ಕ್ಯಾತೊಲಿಕ್ ಆ್ಯಕ್ಷನ್ ಗುಂಪುಗಳ ಮೂಲಕ ಅನೇಕ ಸಾಕ್ಷಿಗಳು ಪೀಡಿಸಲ್ಪಟ್ಟರು. ಅವು ಉದ್ರೇಕಕಾರಿ ದಿನಗಳಾಗಿದ್ದವು!
ಕ್ಷೇತ್ರದಲ್ಲಿ ಆನಂದದಾಯಕ ಕೆಲಸ
ಮಧ್ಯ 1950 ಗಳೊಳಗೆ, ರಾಜ್ಯ ಪ್ರಚಾರಕರ ಬೆಳೆಯುತ್ತಿರುವ ಪಂಕ್ತಿಗಳು ಹೆಚ್ಚು ಜನರನ್ನು ಅವರ ಮನೆಗಳ ಬಾಗಿಲಲ್ಲೆ ತಲಪುತ್ತಿದ್ದವು. ವ್ಯಕ್ತಿಗಳು ಬೈಬಲ್ ಸತ್ಯವನ್ನು ತಿಳಿದುಕೊಳ್ಳುವಂತೆ ಸಹಾಯ ಮಾಡುವುದರಲ್ಲಿ ರೇಡಿಯೊಗಿಂತ ಇದು ಎಷ್ಟೋ ಹೆಚ್ಚು ಪರಿಣಾಮಕಾರಿಯಾಗಿ ಕಂಡುಬಂದಿತು. ಆದುದರಿಂದ 1957 ರಲ್ಲಿ ಡಬ್ಲ್ಯೂಬಿಬಿಆರನ್ನು ಮಾರುವಂತೆ ಮತ್ತು ನಮ್ಮ ಸಾಧನಗಳನ್ನು ಇತರ ದೇಶಗಳಲ್ಲಿ ವಿಸ್ತಾರಗೊಳ್ಳುತ್ತಿರುವ ಮಿಷನೆರಿ ಕೆಲಸಕ್ಕೆ ನಿರ್ದೇಶಿಸುವಂತೆ ನಿರ್ಣಯಿಸಲಾಯಿತು.
ಇಸವಿ 1955 ರಲ್ಲಿ, ಬ್ರೂಕ್ಲಿನ್ನಲ್ಲಿರುವ ಬೆಡ್ಫೊರ್ಡ್ ಸಭೆಗೆ ನಾನು ನೇಮಕಗೊಂಡೆ ಮತ್ತು ಅಲ್ಲಿ ನಾನು ಕ್ರಮವಾಗಿ ಕಾವಲಿನಬುರುಜು ಅಭ್ಯಾಸವನ್ನು ನಡೆಸಿದೆ. ಸೊಸೈಟಿಯು ನನ್ನನ್ನು ಸಂಚರಣ ಭಾಷಣಕಾರನಂತೆಯು ಸಹ ಉತ್ತರ ನ್ಯೂ ಯಾರ್ಕ್, ಪೆನ್ಸಿಲೇನ್ವಿಯ, ಕನೆಟಿಕಟ್, ಮತ್ತು ನ್ಯೂ ಜರ್ಸಿಗೆ ಕಳುಹಿಸಿತು. ಬೆಡ್ಫೊರ್ಡ್ ಸಭೆಗೆ ನೇಮಿಸಿದಾಗ, ನನಗೆ ನಾನು ಹೇಳಿಕೊಂಡೆ, ‘ನಾನು 50 ವರ್ಷಕ್ಕಿಂತಲೂ ಹೆಚ್ಚು ಪ್ರಾಯದವನು. ಕ್ಷೇತ್ರ ಸೇವೆಯಲ್ಲಿ ಈಗ ಸಾಧ್ಯವಾದಷ್ಟು ಮಟ್ಟಿಗೆ ನಾನು ಭಾಗವಹಿಸುವುದು ಉತ್ತಮ. ತದನಂತರ ನನಗೆ ಕಟಿವಾಯು ಬಂದರೆ ಅದನ್ನು ನಾನು ಅಷ್ಟೊಂದು ಆನಂದಿಸಲಿಕ್ಕಿಲ್ಲ.’
ರಾಜ್ಯದ ಬೀಜವನ್ನು ರೇಡಿಯೊದ ಮೂಲಕ ಪ್ರಸಾರಮಾಡುವ ಯಂತ್ರ ಕಲಾ ವಿಭಾಗದಲ್ಲಿ ಆ ಎಲ್ಲ ವರ್ಷಗಳು ಕೆಲಸಮಾಡಿದ ತರುವಾಯ, ವ್ಯಕ್ತಿಗಳೊಂದಿಗೆ ನೇರವಾಗಿ ಬೈಬಲ್ ಸತ್ಯದ ಬೀಜಗಳನ್ನು ನೆಟ್ಟು ನೀರು ಹಾಕುವುದು ನಿಜವಾದ ಹರ್ಷವೆಂದು ನಾನು ಕಂಡುಕೊಂಡೆ. ಸಭೆಯೊಂದಿಗೆ ಕೆಲಸಮಾಡುವುದರಲ್ಲಿ ನಾನು ನಿಜವಾಗಿಯೂ ಆನಂದಿಸಿದೆ. ತಮ್ಮ ಸಾಹಚರ್ಯದಲ್ಲಿ ಮನೆಯವನಾಗಿ ನನಗನಿಸುವಂತೆ ಮಾಡುತ್ತಾ, ಹಲವಾರು ಸಹೋದರ ಸಹೋದರಿಯರು ನನ್ನನ್ನು ತಮ್ಮ ಕುಟುಂಬದ ಒಂದು ಭಾಗವಾಗಿ ಮಾಡಿಕೊಂಡರು. ಈಗ ಬೆಳೆದಿರುವ ಆ ಚಿಕ್ಕ ಮಕ್ಕಳಲ್ಲಿ ಕೆಲವರು ನನ್ನನ್ನು ಇನ್ನೂ ಅಜ್ಜನೆಂದು ಕರೆಯುತ್ತಾರೆ. ನನ್ನ ಕಾಲುಗಳ ಮತ್ತು ಪಾದಗಳೊಂದಿಗಿನ ಸಮಸ್ಯೆಗಳು ನನ್ನನ್ನು ಮೆಟ್ಟಲುಗಳನ್ನು ಹತ್ತಲು ಯಾ ಭೂಗತ ರೈಲುಗಾಡಿಯಲ್ಲಿ ಪ್ರಯಾಣಿಸಲು ಅಶಕ್ತನಾಗುವಂತೆ ಮಾಡುವ ತನಕ, 30 ವರ್ಷಗಳ ವರೆಗೆ ಕ್ಷೇತ್ರ ಶುಶ್ರೂಷೆಯಲ್ಲಿ ಒಟ್ಟಿಗೆ ನಾವು ಒಳ್ಳೆಯ ಸಮಯಗಳನ್ನು ಅನುಭವಿಸಿದೆವು. ಇಸವಿ 1985 ರಲ್ಲಿ ಬೆತೆಲ್ನಲ್ಲಿಯೇ ಕೂಡುವ ಬ್ರೂಕ್ಲಿನ್ ಹೈಟ್ಸ್ ಸಭೆಗೆ ನಾನು ವರ್ಗಾವಣೆ ಪಡೆದುಕೊಂಡೆ.
ಯೆಹೋವನ ಸಂಸ್ಥೆಯು ಮಹಾ ವಿಸ್ತರಣೆಯನ್ನು ಅನುಭವಿಸಿದಂತೆ, ದೂರದ ದೇಶಗಳಲ್ಲಿ ಯೆಹೋವನ ಸಾಕ್ಷಿಗಳ ದೊಡ್ಡ ಅಧಿವೇಶನಗಳನ್ನು ನಾನು ಹಾಜರಾದಂತೆ, ವಿದೇಶೀ ಕ್ಷೇತ್ರಗಳಲ್ಲಿ ಆತನ ಆಶೀರ್ವಾದವನ್ನು ನೋಡುವ ಸುಯೋಗವನ್ನು ನಾನು ವೈಯಕ್ತಿಕವಾಗಿ ಪಡೆದೆ. ಕಟ್ಟಕಡೆಗೆ ಲೋಕದ ಸುತ್ತಲೂ ಪ್ರಯಾಣಿಸಲು ನಾನು ಶಕ್ತನಾದೆ! ಇಸವಿ 1950 ಗಳಿಂದ ಆರಂಭಿಸಿ, ಬೆತೆಲ್ ಸದಸ್ಯರಲ್ಲಿ ಕೆಲವರಾದ ನಾವು ಲಂಡನ್, ಪ್ಯಾರಿಸ್, ರೋಮ್, ನ್ಯೂರೆಮ್ಬರ್ಗ್, ಮತ್ತು ಕೊಪೆನ್ಹೇಗನ್ನ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಶಕ್ತರಾದೆವು. ಪರಿವರ್ತಿಸಲಾದ ಬಾಂಬರ್ಗಳ ಮೂಲಕ, ದೋಣಿ, ಮತ್ತು ರೈಲುಗಾಡಿಯ ಮೂಲಕ ನಾವು ಪ್ರಯಾಣ ಮಾಡಿದೆವು. ಸಂಚಾರಗಳು ನಿಶ್ಚಯವಾಗಿಯೂ ಚಿತ್ರಮಯವಾಗಿದ್ದವು, ಆದರೆ ಎಲ್ಲಕ್ಕಿಂತಲೂ ಅತ್ಯಂತ ರೋಮಾಂಚಕಾರಿಯಾದ ನೋಟಗಳು ನಮ್ಮ ಆದರಣೀಯ, ಸ್ವಾಗತ ಕೋರುವ ಸಹೋದರರ ಗುಂಪುಗಳಾಗಿದ್ದವು. ತದನಂತರದ ದಶಕಗಳು ಪೂರ್ವಕ್ಕೆ, ಪುನಃ ಪಾಶ್ಚಾತ್ಯ ಯೂರೋಪಿಗೆ, ಮತ್ತು ಬಹಳ ಇತ್ತೀಚೆಗೆ ಪೂರ್ವ ಯೂರೋಪಿನ ಪ್ರಯಾಣಗಳನ್ನು ತಂದವು. ಪೋಲೆಂಡ್, ಜರ್ಮನಿ, ಮತ್ತು ಚೆಕೊಸ್ಲಾವಾಕಿಯಾದಲ್ಲಿನ ಅದ್ಭುತಕರ ಅಧಿವೇಶನಗಳು ಪರವಶಗೊಳಿಸುವಂಥದ್ದಾಗಿದ್ದವು. ನಾನು ಪ್ರಥಮವಾಗಿ ಅದರ ಭಾಗವಾದಾಗಿನಿಂದ ನಮ್ಮ ದೇವಪ್ರಭುತ್ವ ಕುಟುಂಬವು ಹೇಗೆ ಬೆಳೆದಿದೆ!
ದೈವಿಕ ಮಾರ್ಗದರ್ಶನೆ
ಚಿಕ್ಕ ಹೆಜ್ಜೆಗಳಂತೆ ತೋರಿದ, ಸಂಸ್ಥೆಯ ಮೂಲಕ ತೆಗೆದುಕೊಳ್ಳಲ್ಪಟ್ಟ ಹೆಜ್ಜೆಗಳು ತದನಂತರ ದೈತ್ಯಾಕಾರದ ಹೆಜ್ಜೆಗಳಾಗಿ ಪರಿಣಮಿಸಿದವು. ನಾವು ಹೊಸ ರೀತಿಯ ಯೋಜನೆಗಳ—ಕೇವಲ ಸಾಕ್ಷಿ ಕಾರ್ಯವನ್ನು ಮಾಡುವಂತೆ ನಮಗೆ ಸಹಾಯ ಮಾಡುವ ಸಲಕರಣೆಗಳ—ಮೇಲೆ ಕೆಲಸಮಾಡುತ್ತಿದ್ದಾಗ, ಈ ಮಹತ್ತರವಾದ ಬೆಳವಣಿಗೆಯನ್ನು ಯಾರು ತಾನೇ ಮುನ್ನೋಡಶಕ್ತರಿದ್ದರು? ಯೆಹೋವನ ನಾಯಕತ್ವಕ್ಕೆ ಪ್ರತಿಕ್ರಿಯಿಸುತ್ತಾ, ನಾವು ನಂಬಿಕೆಯಲ್ಲಿ ಮುನ್ನಡೆದಿದ್ದೇವೆ.
ಲಭ್ಯವಿರುವ ಅತ್ಯಂತ ಇತ್ತೀಚಿಗಿನ ತಂತ್ರಜ್ಞಾನವನ್ನು ಬಳಸಲು ಯಾ ಲೋಕವ್ಯಾಪಕ ಕ್ಷೇತ್ರವನ್ನು ನೋಡಿಕೊಳ್ಳಲು ಸಹಾಯ ಮಾಡುವಂತೆ ತನ್ನ ಸ್ವಂತದ್ದನ್ನು ಸೃಷ್ಟಿಸಲು ಈ ಪ್ರಗತಿಪರ ಸಂಸ್ಥೆಯು ಭಯಪಟ್ಟಿಲ್ಲ. ರಾಜ್ಯ ಘೋಷಣೆಯನ್ನು ಮುಂದುವರಿಸುವುದಕ್ಕಾಗಿ ಉಪಯೋಗಿಸಲಾದ ವಿಧಾನಗಳಲ್ಲಿ ಮನೆಯಿಂದ ಮನೆಗೆ ಸಾರುವುದು, ರೇಡಿಯೊ ಜಾಲಬಂಧಗಳ ಉಪಯೋಗ, ಫೋನೊಗ್ರಾಫ್ ಸಾಕ್ಷಿಕಾರ್ಯ, ಮತ್ತು ಜನರ ಮನೆಗಳಲ್ಲಿ ಬೈಬಲ್ ಅಧ್ಯಯನಗಳನ್ನು ನಡೆಸುವ ಒಂದು ಕಾರ್ಯಕ್ರಮ ಸೇರಿವೆ. ಆರಂಭಿಕ ದಿನಗಳಲ್ಲಿ ನಮ್ಮ ಸ್ವಂತ ಮುದ್ರಣಾ ಕಾರ್ಯಗಳನ್ನು ಸ್ಥಾಪಿಸುವುದು ಮತ್ತು ಈಗ ಕಂಪ್ಯೂಟರೀಕರಿಸಿದ ಫೋಟೊಟೈಪ್ಸೆಟಿಂಗ್ ಮತ್ತು ಆಫ್ಸೆಟ್ ಮುದ್ರಣವನ್ನು ಅನೇಕ ಭಾಷೆಗಳಲ್ಲಿ ಬಳಸುವುದು ಸಣ್ಣ ಸಾಧನೆಯೇನಲ್ಲ. ದ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಾಡ್, ದೇವಪ್ರಭುತ್ವ ಶುಶ್ರೂಷಾ ಶಾಲೆ, ಮತ್ತು ಕ್ರಮವಾದ ಅಧಿವೇಶನಗಳು—ಇವೆಲ್ಲವು ಯೆಹೋವ ದೇವರಿಗೆ ಮತ್ತು ಆತನ ಮಗನಿಗೆ ಮಹಿಮೆಯನ್ನು ತರುವುದರಲ್ಲಿ ಒಂದು ಭಾಗವನ್ನು ವಹಿಸಿವೆ. ಈ ಎಲ್ಲ ಘಟನೆಗಳನ್ನು ವೈಯಕ್ತಿವಾಗಿ ವೀಕ್ಷಿಸುವ ಮತ್ತು ಭಾಗವಹಿಸುವ ಸುಯೋಗ ನನ್ನದಾಗಿದೆ.
ಭೂಮಿಯ ಮೇಲಿರುವ ಯೆಹೋವನ ಆತ್ಮ ನಿರ್ದೇಶಿತ ಸಂಸ್ಥೆಯು ಏನನ್ನು ಮಾಡಬೇಕು ಮತ್ತು ಹೇಗೆ ಎಂಬುದರ ಬಗ್ಗೆ ಮಾರ್ಗದರ್ಶನವನ್ನು ಪಡೆಯುತ್ತದೆ ಎಂಬುದು ನನಗೆ ಈಗ ಸ್ಪಷ್ಟವಾಗಿಗಿದೆ. ಆತನ ಇಡೀ ವಿಶ್ವವ್ಯಾಪಿ ಸಂಸ್ಥೆಯು—ದೃಶ್ಯ ಮತ್ತು ಅದೃಶ್ಯ—ಒಟ್ಟಿಗೆ ಕೆಲಸಮಾಡುತ್ತದೆ.
ಒಬ್ಬ ಯೌವನಸ್ಥನಂತೆ ಸಮುದ್ರಗಳಲ್ಲಿ ಪ್ರಯಾಣ ಮಾಡುವ ನನ್ನ ಯೋಜನೆಗಳನ್ನು ತೊರೆಯುವುದನ್ನು ನಾನು ಎಂದೂ ವಿಷಾದಿಸಿಲ್ಲ. ಯಾಕೆ, ಲೋಕದಲ್ಲಿ ಆಗುವ ಅತ್ಯಂತ ಉತ್ತೇಜನಕರ, ಅರ್ಥಭರಿತ ವಿಕಸನಗಳು ಇಲ್ಲಿ, ಯೆಹೋವನ ಸಂಸ್ಥೆಯೊಳಗೇ ಸಂಭವಿಸುತ್ತವೆ! ಆದುದರಿಂದ “ಮೇಲಿನ ಕರೆ”ಯ ಕಡೆಗಿನ ದಾರಿಯ ನನ್ನ ಪಯಣವು, ವಿಷಾದಗಳಿಲ್ಲದೆ, ಅನೇಕಾನೇಕ ಆನಂದಗಳಿಂದ ಮತ್ತು ಆಶೀರ್ವಾದಗಳಿಂದ ಗುರುತಿಸಲ್ಪಟ್ಟಿದೆ.—ಫಿಲಿಪ್ಪಿ 3:13, 14.
ಸಂಖ್ಯೆ 1914ನ್ನು ಜ್ಞಾಪಕದಲ್ಲಿಟ್ಟುಕೊಳ್ಳುವಂತೆ ನಾನು ಯುವ ಜನರಿಗೆ ಯಾವಾಗಲೂ ಹೇಳುತ್ತೇನೆ—ಅಂದರೆ ಕೀರ್ತನೆ 19:14. ಅದು ಹೇಳುವುದು: “ಯೆಹೋವನೇ, ನನ್ನ ಶರಣನೇ, ನನ್ನ ವಿಮೋಚಕನೇ, ನನ್ನ ಮಾತುಗಳೂ ನನ್ನ ಹೃದಯದ ಧ್ಯಾನವೂ ನಿನಗೆ ಸಮರ್ಪಕವಾಗಿರಲಿ.” ಎಲ್ಲ ಕಾರ್ಯಗಳಲ್ಲಿ ಯೆಹೋವನನ್ನು ಮೆಚ್ಚಿಸಲು ನಾವು ಬಯಸುತ್ತೇವೆ ಮತ್ತು ದಾವೀದನಂತೆ ಪ್ರಾರ್ಥಿಸುತ್ತೇವೆ: “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ತಿಳಿಸು; ನೀನು ಒಪ್ಪುವ ದಾರಿಯನ್ನು ತೋರಿಸು. ನಿನ್ನ ಸತ್ಯಾನುಸಾರವಾಗಿ ನನ್ನನ್ನು ನಡಿಸುತ್ತಾ ಉಪದೇಶಿಸು; ನೀನೇ ನನ್ನನ್ನು ರಕ್ಷಿಸುವ ದೇವರು; ಹಗಲೆಲ್ಲಾ ನಿನ್ನನ್ನೇ ನಿರೀಕ್ಷಿಸುವವನಾಗಿದ್ದೇನೆ.” (ಕೀರ್ತನೆ 25:4, 5) ಆ ಮಾತುಗಳಲ್ಲಿ ಬಹಳಷ್ಟು ಅರ್ಥವಿದೆ. ಅವುಗಳನ್ನು ನೆನಪಿನಲ್ಲಿಡುವುದು, ಯೆಹೋವನ ಪ್ರಗತಿಪರ ಸಂಸ್ಥೆಯೊಂದಿಗೆ ಜೊತೆಯಾಗಿ ಸರಿಯಾದ ದಿಕ್ಕಿನಲ್ಲಿ ಹೋಗುತ್ತಾ, ಸರಿಯಾದ ಮಾರ್ಗದಲ್ಲಿ ಇರುವಂತೆ ನಮಗೆ ಸಹಾಯಮಾಡಬಲ್ಲದು.
[ಪುಟ 23 ರಲ್ಲಿರುವ ಚಿತ್ರ]
ಗೆಳೆಯರಿಗಾಗಿ ಊಟಗಳನ್ನು ತಯಾರಿಸುವುದರಲ್ಲಿ ಸಹೋದರ ರಥರ್ಫರ್ಡ್ ಆನಂದಿಸಿದರು
[ಪುಟ 25 ರಲ್ಲಿರುವ ಚಿತ್ರ]
ರೇಡಿಯೊ ಕೇಂದ್ರ ಡಬ್ಲ್ಯೂಬಿಬಿಆರ್ನ ನಿಯಂತ್ರಣಗಳಲ್ಲಿ ರಾಬರ್ಟ್ ಹ್ಯಾಟ್ಸ್ಫೆಲ್ಟ್
[ಪುಟ 26 ರಲ್ಲಿರುವ ಚಿತ್ರ]
ಸಹೋದರ ಹ್ಯಾಟ್ಸ್ಫೆಲ್ಟ್ರ ಇತ್ತೀಚಿಗಿನ ಛಾಯಾಚಿತ್ರ