ಸಹೋದರ ವಾತ್ಯಲ್ಯಕ್ಕೆ ಕೀಲಿ ಕೈಯನ್ನು ಕಂಡುಕೊಳ್ಳುವುದು
“ನಿಮಗಿರುವ [ದೇವ, NW] ಭಕ್ತಿಗೆ . . . ಸಹೋದರ ಸ್ನೇಹ [ವಾತ್ಸಲ್ಯ, NW] ವನ್ನೂ . . . ಕೂಡಿಸಿರಿ.”—2 ಪೇತ್ರ 1:5-7.
1. ಯೆಹೋವನ ಜನರ ಒಕ್ಕೂಟಗಳು ಅಷ್ಟೊಂದು ಸಂತೋಷದ ಸಂದರ್ಭಗಳಾಗಿರುವುದರ ಮುಖ್ಯ ಕಾರಣಗಳಲ್ಲಿ ಒಂದು ಯಾವುದು?
ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಲ್ಲದ ವೈದ್ಯನೊಬ್ಬನು ಒಮ್ಮೆ, ಎಲ್ಲಿ ಅವನ ಮಗಳು ಮಿಷನೆರಿ ಸೇವೆಗಾಗಿ ತರಬೇತಿಯನ್ನು ಪಡೆದುಕೊಂಡಳೋ ಆ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಾದ್ನಿಂದ ಪದವೀಧರಳಾಗುವ ಸಮಯದಲ್ಲಿ ಹಾಜರಾದನು. ಆ ಸಂತೋಷಭರಿತ ಗುಂಪಿನಿಂದ ಅವನು ಎಷ್ಟೊಂದು ಪ್ರಭಾವಿತನಾದನೆಂದರೆ, ಈ ಜನರಲ್ಲಿ ತುಂಬಾ ಕಡಿಮೆ ಅನಾರೋಗ್ಯವು ಇದ್ದಿರಲೇಬೇಕೆಂದು ಅವನು ಅಭಿಪ್ರಾಯಪಟ್ಟನು. ಆ ಗುಂಪನ್ನು ಅಷ್ಟೊಂದು ಸಂತೋಷಕರವನ್ನಾಗಿ ಮಾಡಿದ್ದು ಯಾವುದು? ಆ ವಿಚಾರವಾಗಿ, ಸಭೆಗಳಲ್ಲಿ, ಸರ್ಕಿಟ್ ಸಮ್ಮೇಳನಗಳಲ್ಲಿ, ಮತ್ತು ಜಿಲ್ಲಾ ಅಧಿವೇಶನಗಳಲ್ಲಿ, ಯೆಹೋವನ ಸಾಕ್ಷಿಗಳ ಎಲ್ಲಾ ನೆರವಿಗಳನ್ನು ಯಾವುದು ಸಂತೋಷಕರ ಸಂದರ್ಭಗಳನ್ನಾಗಿ ಮಾಡುತ್ತದೆ? ಅವರು ಒಬ್ಬರಿಗೊಬ್ಬರು ತೋರಿಸುವ ಸಹೋದರ ವಾತ್ಸಲ್ಯವು ಅದಾಗಿಲವ್ಲೋ? ನಿಸ್ಸಂದೇಹವಾಗಿ, ಯೆಹೋವನ ಸಾಕ್ಷಿಗಳು ತಮ್ಮ ಧರ್ಮದಿಂದ ಅನುಭವಿಸುತ್ತಿರುವಷ್ಟು ಆನಂದಿಸುವಿಕೆ, ಸಂತೋಷ, ಮತ್ತು ಸುಖಾನುಭವವನ್ನು ಇತರ ಯಾವುದೇ ಧಾರ್ಮಿಕ ಗುಂಪು ಹೊಂದುತ್ತಿಲ್ಲವೆಂದು ಹೇಳಲ್ಪಟ್ಟಿರಲು ಒಂದು ಕಾರಣವು ಸಹೋದರ ವಾತ್ಸಲ್ಯವೇ ಆಗಿದೆ.
2, 3. ನಾವು ಒಬ್ಬರು ಇನ್ನೊಬ್ಬರ ಪರವಾಗಿ ಹೇಗೆ ಭಾವಿಸತಕ್ಕದ್ದು ಎಂದು ಯಾವ ಎರಡು ಗ್ರೀಕ್ ಪದಗಳು ವ್ಯವಹರಿಸುತ್ತವೆ, ಮತ್ತು ಅವುಗಳ ವಿಶಿಷ್ಟ್ಯ ಗುಣಲಕ್ಷಣಗಳು ಯಾವುವು?
2 ನಾವು ಅಂತಹ ಸಹೋದರ ವಾತ್ಸಲ್ಯವನ್ನು 1 ಪೇತ್ರ 1:22 ರ ಅಪೊಸ್ತಲ ಪೇತ್ರನ ಮಾತುಗಳ ದೃಷ್ಟಿಯಲ್ಲಿ ಎದುರುನೋಡಬೇಕು: “ನೀವು ಸತ್ಯೋಪದೇಶಕ್ಕೆ ವಿಧೇಯರಾಗಿದ್ದು ನಿಮ್ಮ ಆತ್ಮಗಳನ್ನು ಶುದ್ಧಮಾಡಿಕೊಂಡದ್ದರಿಂದ ನಿಷ್ಕಪಟವಾದ ಸಹೋದರ ವಾತ್ಸಲ್ಯವುಳ್ಳವರಾಗಿರತಕ್ಕದ್ದು. ಹೀಗಿರಲಾಗಿ ಒಬ್ಬರನ್ನೊಬ್ಬರು ಹೃದಯಪೂರ್ವಕವಾಗಿಯೂ ಯಥಾರ್ಥವಾಗಿಯೂ ಪ್ರೀತಿಸಿರಿ.” ಗ್ರೀಕ್ ಶಬ್ದದ ಮೂಲಾಂಶಗಳಲ್ಲಿ ಒಂದಾದ ಫಿಲಿಯ (ವಾತ್ಸಲ್ಯ) ವನ್ನು “ಸಹೋದರ ವಾತ್ಸಲ್ಯ” ಕ್ಕಾಗಿ ಇಲ್ಲಿ ಉಪಯೋಗಿಸಲಾಗಿದೆ. ಸಾಮಾನ್ಯವಾಗಿ “ಪ್ರೀತಿ” ಎಂಬದಾಗಿ ಭಾಷಾಂತರಿಸಲು ಉಪಯೋಗಿಸುವ ಪದವಾದ ಅಗಾಪೆಯ ಅರ್ಥದೊಂದಿಗೆ ಇದರ ಅರ್ಥವು ನಿಕಟ ಸಂಬಂಧವನ್ನು ಹೊಂದಿದೆ. (1 ಯೋಹಾನ 4:8) ಸಹೋದರ ವಾತ್ಸಲ್ಯ ಮತ್ತು ಪ್ರೀತಿಯು ಆಗಿಂದಾಗ್ಗೆ ಪರ್ಯಾಯ ಕ್ರಮದಲ್ಲಿ ಉಪಯೋಗಿಸಲ್ಪಡುತ್ತವಾದರೂ, ಅವುಗಳು ನಿರ್ದಿಷ್ಟವಾದ ವೈಶಿಷ್ಟ್ಯಗಳನ್ನು ಹೊಂದಿವೆ. ಅನೇಕ ಬೈಬಲ್ ಭಾಷಾಂತರಕಾರರು ಮಾಡುವಂತೆ, ನಾವು ಅವುಗಳನ್ನು ಒಂದಕ್ಕೊಂದು ತಪ್ಪು ಗ್ರಹಿಕೆ ಮಾಡಬಾರದು. (ಈ ಲೇಖನದಲ್ಲಿ ಮತ್ತು ಇದರ ನಂತರದ ಲೇಖನದಲ್ಲಿ ಈ ಶಬ್ದಗಳಲ್ಲಿ ಪ್ರತಿಯೊಂದನ್ನು ನಿರ್ವಹಿಸಲಿರುವೆವು.)
3 ಈ ಎರಡು ಗ್ರೀಕ್ ಶಬ್ದಗಳ ನಡುವೆ ಇರುವ ವ್ಯತ್ಯಾಸದ ಕುರಿತು, ಒಬ್ಬ ಗ್ರೀಕ್ ಪಂಡಿತರು ಗಮನಿಸಿದ್ದೇನಂದರೆ, ಫಿಲಿಯ “ಖಂಡಿತವಾಗಿಯೂ ಹೃತ್ಪೂರ್ವಕವಾದ ಮತ್ತು ಆಪತ್ತೆಯ ಮತ್ತು ವಾತ್ಸಲ್ಯದ” ಒಂದು ಶಬ್ದವಾಗಿದೆ. ಮತ್ತೊಂದು ಕಡೆಯಲ್ಲಿ, ಅಗಾಪೆಗೆ ಮನಸ್ಸಿನೊಂದಿಗೆ ಅಧಿಕವಾದುದನ್ನು ಮಾಡಲಿಕ್ಕಿದೆ. ಹೀಗೆ ನಮ್ಮ ವೈರಿಗಳನ್ನು ಪ್ರೀತಿ (ಅಗಾಪೆ) ಸುವಂತೆ ನಮಗೆ ಹೇಳಲ್ಪಟ್ಟಿರುವಾಗ, ಅವರಿಗಾಗಿ ವಾತ್ಸಲ್ಯವನ್ನು ನಾವು ಹೊಂದಿರುವುದಿಲ್ಲ. ಯಾಕೆ ಇಲ್ಲ? ಯಾಕಂದರೆ “ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.” (1 ಕೊರಿಂಥ 15:33) ಇನ್ನೂ ವ್ಯತ್ಯಾಸವಿದೆ ಎಂಬದನ್ನು ಅಪೊಸ್ತಲ ಪೇತ್ರನ ಮಾತುಗಳು ಸೂಚಿಸುತ್ತವೆ: “ನಿಮಗಿರುವ ಸಹೋದರ ವಾತ್ಸಲ್ಯಕ್ಕೆ . . . ಪ್ರೀತಿಯನ್ನೂ ಕೂಡಿಸಿರಿ.”—2 ಪೇತ್ರ 1:5-7; ಹೋಲಿಸಿ ಯೋಹಾನ 21:15-17.a
ಅತ್ಯಂತ ವಿಶೇಷವಾದ ಸಹೋದರ ವಾತ್ಸಲ್ಯದ ಉದಾಹರಣೆಗಳು
4. ಯಾಕೆ ಯೇಸು ಮತ್ತು ಯೋಹಾನರು ಒಬ್ಬರಿಗೊಬ್ಬರು ವಿಶೇಷವಾದ ವಾತ್ಸಲ್ಯವನ್ನು ಹೊಂದಿದ್ದರು?
4 ಅತ್ಯಂತ ವಿಶೇಷವಾದ ಸಹೋದರ ವಾತ್ಸಲ್ಯದ ಕುರಿತಾದ ಅನೇಕ ಅತ್ಯುತ್ತಮ ಉದಾಹರಣೆಗಳನ್ನು ದೇವರ ವಾಕ್ಯವು ನಮಗೆ ಒದಗಿಸುತ್ತದೆ. ಈ ವಿಶೇಷ ವಾತ್ಸಲ್ಯವು ಕೆಲವು ಹುಚ್ಚಾಟಿಕೆಯ ಫಲಿತಾಂಶವಾಗಿರುವುದಿಲ್ಲ ಬದಲಿಗೆ ಪ್ರಾಮುಖ್ಯವಾದ ಗುಣಗಳ ಕುರಿತಾದ ಗಣ್ಯತೆಯ ಮೇಲೆ ಅದು ಆಧಾರಿಸಿರುತ್ತದೆ. ನಿಸ್ಸಂಶಯವಾಗಿ ಅಪೊಸ್ತಲ ಯೋಹಾನನ ಕಡೆಗೆ ಯೇಸು ಕ್ರಿಸ್ತನಿಗಿದ್ದ ವಾತ್ಸಲ್ಯವು ಅತ್ಯುತ್ತಮವಾದ ಉದಾಹರಣೆಯಾಗಿದೆ. ನಿಸ್ಸಂದೇಹವಾಗಿ, ಆತನ ನಂಬಿಗಸ್ತ ಅಪೊಸ್ತಲರೆಲ್ಲರೆಡೆಗೆ ಯೇಸು ಸಹೋದರ ವಾತ್ಸಲ್ಯವನ್ನು ಹೊಂದಿದ್ದನು, ಮತ್ತು ಅದು ಒಳ್ಳೆಯ ಕಾರಣದಿಂದಾಗಿಯೆ. (ಲೂಕ 22:28) ಇದನ್ನು ಆತನು ತೋರಿಸಿದ ಒಂದು ವಿಧಾನವು ಯಾವುದೆಂದರೆ ಆತನ ಶಿಷ್ಯರ ಕಾಲುಗಳನ್ನು ತೊಳೆಯುವ ಮೂಲಕವೇ, ಹೀಗೆ ನಮ್ರತೆಯ ಒಂದು ಪಾಠವನ್ನು ಅವರಿಗೆ ಕೊಟ್ಟನು. (ಯೋಹಾನ 13:3-16) ಆದರೆ ಯೋಹಾನನು ಪುನಃ ಪುನಃ ಪ್ರಸ್ತಾಪಿಸಿರುವಂತೆ, ಯೇಸು ಯೋಹಾನನ ಕಡೆಗೆ ಒಂದು ವಿಶೇಷವಾದ ವಾತ್ಸಲ್ಯವನ್ನು ಹೊಂದಿದ್ದನು. (ಯೋಹಾನ 13:23; 19:26; 20:2) ಆತನ ಶಿಷ್ಯರಿಗಾಗಿ ಮತ್ತು ಅಪೊಸ್ತಲರಿಗಾಗಿ ವಾತ್ಸಲ್ಯವನ್ನು ತೋರಿಸಲು ಯೇಸುವಿಗೆ ಕಾರಣವಿದ್ದಂತೆಯೇ, ಯೇಸುವಿನೆಡೆಗೆ ಅವನಿಗಿದ್ದ ಆಳವಾದ ಗಣ್ಯತೆಯ ಕಾರಣದಿಂದ ಯೇಸು ಅವನಿಗಾಗಿ ವಿಶೇಷ ವಾತ್ಸಲ್ಯವನ್ನು ಹೊಂದಿದ್ದಾನೆಂದು ಯೋಹಾನನು ಅಧಿಕ ಸಂಭವನೀಯ ಕಾರಣವನ್ನು ಕೊಟ್ಟನು. ಇದನ್ನು ಅವನ ಸುವಾರ್ತೆ ಮತ್ತು ಅವನ ಪ್ರೇರಿತ ಪತ್ರಗಳೆರಡರಲ್ಲಿಯೂ, ಇರುವ ಯೋಹಾನನ ಬರಹಗಳಿಂದ ನಾವು ನೋಡಬಲ್ಲೆವು. ಆ ಬರಹಗಳಲ್ಲಿ ಪ್ರೀತಿಯ ಕುರಿತಾಗಿ ಎಷ್ಟೊಂದು ಬಾರಿ ಆಗಿಂದಾಗ್ಗೆ ಪ್ರಸ್ತಾಪಿಸಿದ್ದಾನೆ! ಯೇಸುವಿನ ಮಾನವಪೂರ್ವ ಅಸ್ತಿತ್ವಕ್ಕಾಗಿ ಅವನು ಪುನರಾವರ್ತಿಸಿರುವ ಉಲ್ಲೇಖಗಳ ಮೂಲಕ, ಹಾಗೆಯೇ ಯೋಹಾನ ಅಧ್ಯಾಯಗಳು 1 ಮತ್ತು 13 ರಿಂದ 17 ರಲ್ಲಿ ಅವನು ಏನನ್ನು ಬರೆದಿದ್ದಾನೋ ಅದರಲ್ಲಿ, ಯೇಸುವಿನ ಆತ್ಮಿಕ ಗುಣಗಳಿಗಾಗಿ ಯೋಹಾನನಿಗಿದ್ದ ಮಹತ್ತಾದ ಗಣ್ಯತೆಯನ್ನು ಕಾಣಬಹುದಾಗಿದೆ.—ಯೋಹಾನ 1:1-3; 3:13; 6:38, 42, 58; 17:5; 18:37.
5. ಪೌಲ ಮತ್ತು ತಿಮೊಥೆಯರು ಒಬ್ಬರಿಗೊಬ್ಬರು ತೋರಿಸುತ್ತಿದ್ದ ವಿಶೇಷವಾದ ವಾತ್ಸಲ್ಯವನ್ನು ಕುರಿತು ಏನು ಹೇಳಸಾಧ್ಯವಿದೆ?
5 ತದ್ರೀತಿಯಲ್ಲಿ, ಅಪೊಸ್ತಲ ಪೌಲನು ಮತ್ತು ಆತನ ಕ್ರೈಸ್ತ ಸಹವಾಸಿಯಾಗಿದ್ದ ತಿಮೊಥೆಯನು ಒಬ್ಬರಿಗೊಬ್ಬರು ಹೊಂದಿದ್ದ ಅತ್ಯಂತ ವಿಶೇಷವಾದ ಸಹೋದರ ವಾತ್ಸಲ್ಯವು, ನಿಶ್ಚಯವಾಗಿಯೂ, ಒಬ್ಬರೊಂದಿಗೊಬ್ಬರ ಗುಣಗಳಿಗಾಗಿರುವ ಗಣ್ಯತೆಯ ಮೇಲೆ ಆಧಾರಿಸಿದದ್ದರಿಂದ, ನಾವು ಲಕ್ಷಿಸದಿರಲು ಬಯಸುವುದಿಲ್ಲ. “ಅವನ ಹಾಗೆ ನಿಮ್ಮ ಕಾರ್ಯಗಳನ್ನು ಕುರಿತು ಯಥಾರ್ಥವಾಗಿ ಚಿಂತಿಸುವವರು ನನ್ನ ಬಳಿಯಲ್ಲಿ ಬೇರೆ ಯಾರೂ ಇಲ್ಲ. . . . ತಿಮೊಥೆಯನ ಗುಣವನ್ನು ನೀವು ನೋಡಿ ತಿಳುಕೊಂಡಿದ್ದೀರಿ; ಮಗನು ತಂದೆಗೆ ಹೇಗೋ ಹಾಗೆಯೇ ಅವನು ನನ್ನ ಜೊತೆಯಲ್ಲಿ ಸುವಾರ್ತಾಪ್ರಚಾರಕ್ಕಾಗಿ ಕಷ್ಟಪಟ್ಟು ಕೆಲಸನಡಿಸಿದ್ದಾನೆ,” ಪೌಲನ ಇಂತಹ ಬರಹಗಳು ತಿಮೊಥೆಯನ ಕುರಿತಾಗಿ ಒಳ್ಳೆಯ ಅಭಿಪ್ರಾಯಗಳನ್ನು ಒಳಗೊಂಡಿವೆ. (ಫಿಲಿಪ್ಪಿ 2:20-22) ತಿಮೊಥೆಯನ ಕಡೆಗೆ ಪೌಲನಿಗಿದ್ದ ಹೃತ್ಪೂರ್ವಕ ವಾತ್ಸಲ್ಯವನ್ನು ಆತನು ತಿಮೊಥೆಯನಿಗೆ ಬರೆದ ಪತ್ರಗಳಲ್ಲಿರುವ ಅನೇಕ ವೈಯಕ್ತಿಕ ಉಲ್ಲೇಖಗಳು ಪ್ರಕಟಪಡಿಸುತ್ತವೆ. ಉದಾಹರಣೆಗೆ, 1 ತಿಮೊಥೆಯ 6:20 ನ್ನು ಗಮನಿಸಿ: “ಎಲೈ ತಿಮೊಥೆಯನೇ, . . . . ನಿನ್ನ ವಶಕ್ಕೆ ಕೊಟ್ಟಿರುವದನ್ನೇ ಕಾಪಾಡು.” (1 ತಿಮೊಥೆಯ 4:12-16; ಸಹ ನೋಡಿರಿ; 5:23; 2 ತಿಮೊಥೆಯ 1:5; 3:14, 15) ವಿಶೇಷವಾಗಿ ತಿಮೊಥೆಯನಿಗೆ ಪೌಲನು ಬರೆದ ಪತ್ರಗಳನ್ನು ಆತನು ತೀತನಿಗೆ ಬರೆದ ಪತ್ರಗಳೊಂದಿಗೆ ಹೋಲಿಸುವಾಗ ಈ ಯುವಕನಿಗಾಗಿ ಪೌಲನಿಗಿದ್ದ ವಿಶೇಷ ವಾತ್ಸಲ್ಯವು ಎದ್ದುಕಾಣುತ್ತದೆ. ಎರಡನೆಯ ತಿಮೊಥೆಯ 1:3, 4 ರಲ್ಲಿರುವ ಪೌಲನ ಮಾತುಗಳಿಂದ ಗಮನಿಸ ಸಾಧ್ಯವಿರುವಂತೆ, ತಿಮೊಥೆಯನು ಅವರ ಸ್ನೇಹದ ಕುರಿತಾಗಿ ಅದೇ ರೀತಿ ಭಾವಿಸಿದಿರ್ದಬಹುದು: “ನಾನು ಹಗಲಿರುಳು ನನ್ನ ಪ್ರಾರ್ಥನೆಗಳಲ್ಲಿ ನಿನ್ನನ್ನು ತಪ್ಪದೆ ಜ್ಞಾಪಿಸಿಕೊಳ್ಳುತ್ತೇನೆ, . . . ನಿನ್ನ ಕಣ್ಣೀರುಗಳನ್ನು ನೆನಪಿಗೆ ತಂದು ನಿನ್ನನ್ನು ನೋಡಿ ಸಂತೋಷಭರಿತನಾಗಬೇಕೆಂದು ಅಪೇಕ್ಷಿಸುತ್ತೇನೆ.”
6, 7. ದಾವೀದ ಮತ್ತು ಯೋನಾತಾನರು ಒಬ್ಬರಿಗೊಬ್ಬರು ಯಾವ ಭಾವನೆಯನ್ನು ಹೊಂದಿದ್ದರು, ಮತ್ತು ಯಾಕೆ?
6 ದಾವೀದ ಮತ್ತು ಯೋನಾತಾನರಂತಹ ಉತ್ತಮ ಉದಾಹರಣೆಗಳನ್ನು ಹೀಬ್ರು ಶಾಸ್ತ್ರ ವಚನಗಳು ಸಹ ಒದಗಿಸುತ್ತವೆ. ನಾವು ಓದುವುದೇನಂದರೆ, ದಾವೀದನು ಗೊಲ್ಯಾತನನ್ನು ಕೊಂದ ಅನಂತರ, “ಯೋನಾತಾನನ ಪ್ರಾಣವು ದಾವೀದನ ಪ್ರಾಣದೊಡನೆ ಒಂದಾಯಿತು. ಅವನು ಇವನನ್ನು ತನ್ನ ಪ್ರಾಣದಂತೆಯೇ ಪ್ರೀತಿಸ ತೊಡಗಿದನು.” (1 ಸಮುವೇಲ 18:1) ಯೆಹೋವನ ನಾಮಕ್ಕಾಗಿ ದಾವೀದನು ತೋರಿಸಿದ ಹುರುಪಿನ ಮಾದರಿ ಮತ್ತು ದೈತ್ಯ ಗೊಲ್ಯಾತನನ್ನು ಎದುರಿಸಲು ಮುನ್ನುಗ್ಗುವುದರಲ್ಲಿ ಆತನು ತೋರಿಸಿದ್ದ ನಿರ್ಭಯತೆಯ ಗಣ್ಯತೆಯು ನಿಸ್ಸಂದೇಹವಾಗಿ ಯೋನಾತಾನನು ದಾವೀದನಿಗಾಗಿ ವಿಶೇಷ ವಾತ್ಸಲ್ಯವನ್ನು ಹೊಂದುವಂತೆ ಮಾಡಿತು.
7 ಯೋನಾತಾನನು ದಾವೀದನನ್ನು ಎಷ್ಟೊಂದು ಪ್ರೀತಿಸುತ್ತಿದ್ದನೆಂದರೆ, ದಾವೀದನನ್ನು ಅರಸನಾದ ಸೌಲನ ಕೈಯಿಂದ ತಪ್ಪಿಸಲಿಕ್ಕಾಗಿ ತನ್ನ ಸ್ವಂತ ಜೀವವನ್ನೇ ಗಂಡಾಂತರಕ್ಕೀಡುಮಾಡಿದನು. ದಾವೀದನು ಇಸ್ರಾಯೇಲ್ಯರ ಮುಂದಿನ ಅರಸನಾಗಿ ಯೆಹೋವನಿಂದ ಆರಿಸಲ್ಪಟ್ಟಿದ್ದಾನೆಂದು ತಿಳಿದಿದ್ದರೂ ಯೋನಾತಾನನು ಯಾವುದೇ ಸಮಯದಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಲಿಲ್ಲ. (1 ಸಮುವೇಲ 23:17) ದಾವೀದನು ಸಹ ಯೋನಾತಾನನ ಕಡೆಗೆ ಅಷ್ಟೇ ಆಳವಾದ ಪ್ರೀತಿಯನ್ನು ಹೊಂದಿದ್ದನೆಂದು, ಯೋನಾತಾನನ ಮರಣಕ್ಕಾಗಿ ಶೋಕಿಸುತ್ತಿರುವಾಗ ಆತನು ಹೇಳಿದ ಮಾತುಗಳಿಂದ ವ್ಯಕ್ತವಾಗುತ್ತದೆ: “ಯೋನಾತಾನನೇ, ನನ್ನ ಸಹೋದರನೇ, ನಿನಗೋಸ್ಕರ ನನ್ನಲ್ಲಿ ಬಹು ಸಂಕಟವುಂಟಾಗಿದೆ; ನೀನು ನನಗೆ ಬಹುಮನೋಹರನಾಗಿದ್ದಿ. ನನ್ನ ಮೇಲಿದ್ದ ನಿನ್ನ ಪ್ರೀತಿಯು ಆಶ್ಚರ್ಯಕರವಾದದ್ದೇ ಸರಿ; ಅದು ಸತೀಪ್ರೇಮಕ್ಕಿಂತ ಶ್ರೇಷ್ಠವಾದದ್ದು.” ನಿಜವಾಗಿ, ತೀವ್ರ ಗಣ್ಯತೆಯು ಅವರ ಸಂಬಂಧವನ್ನು ಗುರುತಿಸಿತ್ತು.—2 ಸಮುವೇಲ 1:26.
8. ಯಾವ ಇಬ್ಬರು ಸ್ತ್ರೀಯರು ಒಬ್ಬರಿಗೊಬ್ಬರು ವಿಶೇಷ ವಾತ್ಸಲ್ಯವನ್ನು ವ್ಯಕ್ತಪಡಿಸಿದ್ದರು, ಮತ್ತು ಯಾಕೆ?
8 ಇಬ್ಬರು ಸ್ತ್ರೀಯರಲ್ಲಿ ವಿಶೇಷ ಪ್ರೀತಿಯನ್ನು ತೋರ್ಪಡಿಸಿದ್ದ, ನೊವೊಮಿ ಮತ್ತು ಅವಳ ವಿಧವೆ ಸೊಸೆಯಾದ ರೂತಳ ಕುರಿತಾದ ಒಂದು ಉತ್ತಮ ಉದಾಹರಣೆಯನ್ನು ಕೂಡ ಹೀಬ್ರು ಶಾಸ್ತ್ರ ವಚನಗಳಲ್ಲಿ ನಾವು ಹೊಂದಿದ್ದೇವೆ. ರೂತಳು ನೊವೊಮಿಗೆ ಹೇಳಿದ ಮಾತುಗಳನ್ನು ಜ್ಞಾಪಿಸಿಕೊಳ್ಳಿರಿ: “ನಿನ್ನನ್ನು ಬಿಟ್ಟು ಹಿಂದಿರುಗಬೇಕೆಂದು ನನ್ನನ್ನು ಒತ್ತಾಯಪಡಿಸಬೇಡ. ನೀನು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುವೆನು; ನೀನು ವಾಸಿಸುವಲ್ಲೇ ನಾನೂ ವಾಸಿಸುವೆನು; ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು.” (ರೂತಳು 1:16) ನೊವೊಮಿಯು, ಅವಳ ನಡತೆಯ ಮೂಲಕ ಮತ್ತು ಯೆಹೋವನ ಕುರಿತು ಮಾತಾಡುವುದರ ಮೂಲಕ, ರೂತಳಿಂದ ಈ ಗಣ್ಯತೆಯುಳ್ಳ ಪ್ರತಿಕ್ರಿಯೆಯನ್ನು ಹೊರ ಸೆಳೆಯುವಂತೆ ಸಹಾಯಮಾಡಿದಳೆಂದು ನಾವು ನಿಶ್ಚಯಿಸುವುದಿಲ್ಲವೋ?—ಹೋಲಿಸಿ ಲೂಕ 6:40.
ಅಪೊಸ್ತಲ ಪೌಲನ ಉದಾಹರಣೆ
9. ಪೌಲನು ಸಹೋದರ ವಾತ್ಸಲ್ಯವನ್ನು ತೋರಿಸುವುದರಲ್ಲಿ ಮಾದರಿಯಾಗಿದ್ದನೆಂದು ಯಾವುದು ತೋರಿಸುತ್ತದೆ?
9 ನಾವು ನೋಡಿದಂತೆ, ಅಪೊಸ್ತಲ ಪೌಲನು ತಿಮೊಥೆಯನ ಕುರಿತು ಅತ್ಯಂತ ವಿಶೇಷವಾದ ಸಹೋದರ ವಾತ್ಸಲ್ಯವನ್ನು ಹೊಂದಿದ್ದನು. ಆದರೆ ಸರ್ವಸಾಮಾನ್ಯವಾಗಿ ಆತನ ಸಹೋದರರಿಗಾಗಿ ಹೃತ್ಪೂರ್ವಕ ವಾತ್ಸಲ್ಯವನ್ನು ವ್ಯಕ್ತಪಡಿಸುವುದರಲ್ಲಿ ಸಹ ಆತನು ಒಂದು ಅದ್ಭುತವಾದ ಮಾದರಿಯನ್ನಿಟ್ಟನು. ಎಫೆಸದಿಂದ ಬಂದ ಹಿರಿಯರಿಗೆ ಆತನಂದದ್ದು: “ನಾನು ಕಣ್ಣೀರು ಸುರಿಸುತ್ತಾ ಮೂರು ವರುಷ ಹಗಲಿರುಳು ಎಡೆಬಿಡದೆ ಪ್ರತಿಯೊಬ್ಬನಿಗೆ ಬುದ್ಧಿಹೇಳಿದೆನೆಂದು ನೀವು ಜ್ಞಾಪಕಮಾಡಿಕೊಂಡು ಎಚ್ಚರವಾಗಿರಿ.” ಹೃತ್ಪೂರ್ವಕವಾದ ಸಹೋದರ ವಾತ್ಸಲ್ಯ? ನಿಸ್ಸಂದೇಹವಾಗಿ! ಮತ್ತು ಪೌಲನ ಕುರಿತು ಅವರಿಗೂ ಸಹ ಇಂಥದ್ದೇ ಅನಿಸಿಕೆಯಾಯಿತು. ಅವರು ಇನ್ನು ಮೇಲೆ ಅವನ ಮುಖವನ್ನು ಕಾಣುವದಿಲ್ಲವೆಂದು ಪೌಲನು ಹೇಳುವುದನ್ನು ಕೇಳಿ “ಅವರೆಲ್ಲರು ಬಹಳವಾಗಿ ಅತರ್ತು. ಮತ್ತು ಅವನ ಕೊರಳನ್ನು ತಬ್ಬಿಕೊಂಡು ಅವನಿಗೆ ಮುದ್ದಿಟ್ಟರು.” (ಅ. ಕೃತ್ಯಗಳು 20:31, 37) ಕೃತಜ್ಞತೆಯಿಂದ ಆಧಾರಿತವಾದ ಸಹೋದರ ವಾತ್ಸಲ್ಯ? ಹೌದು! ಆತನ ಸಹೋದರ ವಾತ್ಸಲ್ಯವನ್ನು 2 ಕೊರಿಂಥ 6:11-13 ರಲ್ಲಿರುವ ಆತನ ಮಾತುಗಳಿಂದ ಸಹ ಕಾಣಬಹುದಾಗಿದೆ: “ಕೊರಿಂಥದವರೇ, ನಾವು ನಿಮ್ಮೊಡನೆ ಧಾರಾಳವಾಗಿ ಮಾತಾಡುತ್ತಾ ಇದ್ದೇವೆ; ನಮ್ಮ ಹೃದಯವು ನಿಮ್ಮ ವಿಷಯದಲ್ಲಿ ವಿಶಾಲವಾಯಿತು. . . . ನಿಮ್ಮ ವಿಷಯದಲ್ಲಿ ನಮ್ಮ ಹೃದಯವು ವಿಶಾಲವಾಗಿರುವದರಿಂದ ನಮ್ಮ ವಿಷಯದಲ್ಲಿ ನಿಮ್ಮ ಹೃದಯವನ್ನೂ ವಿಶಾಲಮಾಡಿಕೊಳ್ಳಿರಿ. ನೀವು ನನ್ನ ಮಕ್ಕಳೆಂದು ಭಾವಿಸಿ ಹೀಗೆ ಹೇಳುತ್ತೇನೆ.”
10. ಸಹೋದರ ವಾತ್ಸಲ್ಯದ ಯಾವ ಕೊರತೆಯು 2 ಕೊರಿಂಥ ಅಧ್ಯಾಯ 11 ದಲ್ಲಿ ಅವನ ಶೋಧನೆಗಳನ್ನು ಪೌಲನು ವರ್ಣಿಸುವಂತೆ ನಡಿಸಿತು?
10 ಸ್ಪಷ್ಟವಾಗಿಗಿಯೇ, ಕೊರಿಂಥದವರಲ್ಲಿ ಅನೇಕರು ಅಪೊಸ್ತಲ ಪೌಲನಿಗೆ ಗಣ್ಯತೆಯ ಸಹೋದರ ವಾತ್ಸಲ್ಯವನ್ನು ವ್ಯಕ್ತಪಡಿಸುವುದರಲ್ಲಿ ಕೊರತೆಯುಳ್ಳವರಾಗಿದ್ದರು. ಹೀಗೆ, ಅವರಲ್ಲಿ ಕೆಲವರು ಆಪಾದಿಸಿದ್ದು: “ಅವನಿಂದ ಬಂದ ಪತ್ರಿಕೆಗಳು ಗೌರವವಾದವುಗಳೂ ಬಲವುಳ್ಳವುಗಳೂ ಆಗಿವೆ; ಅವನು ಸಾಕ್ಷಾತ್ತಾಗಿ ಬಂದರೆ ಅವನು ನಿರ್ಬಲನು, ಅವನ ಮಾತು ಗಣನೆಗೆ ಬಾರದ್ದು.” (2 ಕೊರಿಂಥ 10:10) ಆದುದರಿಂದಲೇ ಪೌಲನು ಅವರ “ಅತಿಶ್ರೇಷ್ಠರಾದ ಅಪೊಸ್ತಲರಿಗೆ” ಸೂಚಿಸಿ ಮಾತಾಡಿದನು ಮತ್ತು 2 ಕೊರಿಂಥ 11:5, 22-33 ರಲ್ಲಿ ದಾಖಲಿಸಲ್ಪಟ್ಟಂತೆ ಆತನು ಸಹಿಸಿಕೊಂಡ ಸಂಕಷ್ಟಗಳನ್ನು ಕುರಿತು ಹೇಳುವಂತೆ ಪ್ರಚೋದಿಸಲ್ಪಟ್ಟನು.
11. ಥೆಸಲೊನೀಕದಲ್ಲಿದ್ದ ಕ್ರೈಸ್ತರಿಗಾಗಿ ಪೌಲನು ತೋರಿಸಿದ್ದ ವಾತ್ಸಲ್ಯದ ಕುರಿತು ಯಾವ ಪುರಾವೆಯು ಇದೆ?
11 ಆತನು ಸುವಾರ್ತೆಯನ್ನು ಯಾರಿಗೆ ಸಾರಿದನೋ ಅವರಿಗಾಗಿ ಪೌಲನ ಹೃತ್ಪೂರ್ವಕವಾದ ವಾತ್ಸಲ್ಯವು 1 ಥೆಸಲೊನೀಕ 2:8 ರ ಪೌಲನ ಮಾತುಗಳಿಂದ ವಿಶೇಷವಾಗಿ ಸ್ಪಷ್ಟವಾಗಿಗುತ್ತದೆ: “ನೀವು ನನಗೆ ಅತಿಪ್ರಿಯರಾದ ಕಾರಣ ನಾವು ನಿಮ್ಮಲ್ಲಿ ಮಮತೆಯುಳ್ಳವರಾಗಿ ದೇವರ ಸುವಾರ್ತೆಯನ್ನು ಹೇಳುವದಕ್ಕೆ ಮಾತ್ರವಲ್ಲದೆ ನಿಮಗೋಸ್ಕರ ಪ್ರಾಣವನ್ನೇ ಕೊಡುವದಕ್ಕೆ ಸಂತೋಷಿಸುವವರಾದೆವು.” ವಾಸ್ತವದಲ್ಲಿ, ಈ ಹೊಸ ಸಹೋದರರ ಕಡೆಗೆ ಆತನಿಗೆ ಎಷ್ಟೊಂದು ವಾತ್ಸಲ್ಯವಿತ್ತೆಂದರೆ—ಅವರು ಹೇಗೆ ಹಿಂಸೆಯನ್ನು ಸಹಿಸಿಕೊಳ್ಳುತ್ತಿದ್ದಾರೆಂದು ತಿಳಿದುಕೊಳ್ಳಲು ಅವನೆಷ್ಟು ತವಕಗೊಂಡಿದ್ದನೆಂದರೆ—ಆತನು ಇನ್ನು ಹೆಚ್ಚು ಸಮಯ ತಡೆಯಲಾರದೆ ತಿಮೊಥೆಯನನ್ನು ಕಳುಹಿಸಿದನು, ಮತ್ತು ಅವನು ಕೊಟ್ಟ ಒಂದು ಶುಭವರ್ತಮಾನವು ಪೌಲನಿಗೆ ಹೆಚ್ಚಿನ ಆದರಣೆಯನ್ನು ನೀಡಿತು. (1 ಥೆಸಲೊನೀಕ 3:1, 2, 6, 7) ಇನ್ಸೈಟ್ ಆನ್ ದಿ ಸ್ಕ್ರಿಪ್ಚರ್ಸ್ ಸಮರ್ಪಕವಾಗಿಯೇ ಗಮನಿಸುವುದು: “ಪೌಲ ಮತ್ತು ಆತನು ಯಾರಿಗೆ ಸುವಾರ್ತೆಯನ್ನು ಸಾರಿದನೋ ಅವರ ನಡುವೆ ಸಹೋದರ ವಾತ್ಸಲ್ಯದ ಒಂದು ನಿಕಟವಾದ ಬಂಧನವು ಅಸ್ತಿತ್ವದಲ್ಲಿತ್ತು.”
ಗಣ್ಯತೆ—ಸಹೋದರ ವಾತ್ಸಲ್ಯಕ್ಕೆ ಕೀಲಿ ಕೈ
12. ನಮ್ಮ ಸಹೋದರರಿಗಾಗಿ ನಮ್ಮ ಹೃತ್ಪೂರ್ವಕವಾದ ವಾತ್ಸಲ್ಯವನ್ನು ನಾವು ತೋರಿಸಲು ಯಾವ ಕಾರಣಗಳು ಇವೆ?
12 ನಿಸ್ಸಂದೇಹವಾಗಿ, ಗಣ್ಯತೆಯು ಸಹೋದರ ವಾತ್ಸಲ್ಯಕ್ಕೆ ಕೀಲಿ ಕೈಯಾಗಿದೆ. ನಮ್ಮ ವಾತ್ಸಲ್ಯವನ್ನು ಹೊರಸೆಳೆಯುವ, ಅವರ ಕುರಿತು ಹೆಚ್ಚು ಒಲುಮೆಯುಳ್ಳವರಾಗುವಂತೆ ಮಾಡುವ, ಯೆಹೋವನ ಸಮರ್ಪಿತ ಸಾಕ್ಷಿಗಳೆಲ್ಲರೂ ನಾವು ಗಣ್ಯಮಾಡುವಂತಹ ಗುಣಗಳನ್ನು ಹೊಂದಿಲ್ಲವೋ? ನಾವೆಲ್ಲರೂ ಪ್ರಥಮವಾಗಿ ದೇವರ ರಾಜ್ಯವನ್ನೂ ಮತ್ತು ಆತನ ನೀತಿಯನ್ನೂ ಹುಡುಕುವವರಾಗಿದ್ದೇವೆ. ನಾವೆಲ್ಲರೂ ನಮ್ಮ ಮೂವರು ಸಾಮಾನ್ಯ ಶತ್ರುಗಳ ವಿರುದ್ಧ ಒಂದು ಧೈರ್ಯದ ಹೋರಾಟವನ್ನು ನಡಿಸುತ್ತಿದ್ದೇವೆ: ಸೈತಾನ ಮತ್ತು ಆತನ ದೆವ್ವಗಳು, ಸೈತಾನನ ನಿಯಂತ್ರಣದ ಕೆಳಗಿರುವ ದುಷ್ಟ ಲೋಕ, ಮತ್ತು ಸ್ವಂತ ಅನುವಂಶೀಯ ಪಾಪಪೂರ್ಣ ಪ್ರವೃತ್ತಿಗಳು. ನಿಮ್ಮ ಸಹೋದರರು ಪರಿಸ್ಥಿತಿಗಳ ವೀಕ್ಷಣೆಗನುಸಾರ ತಮ್ಮಿಂದಾದಷ್ಟು ಅತ್ಯುತ್ತಮವಾದುದನ್ನು ಮಾಡುತ್ತಿದ್ದಾರೆ ಎಂಬ ನಿಲುವನ್ನು ನಾವು ಯಾವಾಗಲೂ ತೆಗೆದುಕೊಳ್ಳಬಾರದೋ? ಭೂಮಿಯಲ್ಲಿರುವ ಪ್ರತಿಯೊಬ್ಬರೂ ಯೆಹೋವನ ಪಕ್ಷ ಅಥವಾ ಸೈತಾನನ ಪಕ್ಷದವರಾಗಿದ್ದಾರೆ. ನಮ್ಮ ಸಮರ್ಪಿತ ಸಹೋದರರು ಮತ್ತು ಸಹೋದರಿಯರು ಯೆಹೋವನ ಪಕ್ಷವಹಿಸುವವರಾಗಿದ್ದಾರೆ, ಹೌದು, ನಮ್ಮ ಪಕ್ಷದವರಾಗಿದ್ದಾರೆ, ಆದುದರಿಂದ ನಮ್ಮ ಸಹೋದರ ವಾತ್ಸಲ್ಯಕ್ಕೆ ಅರ್ಹರಾಗಿದ್ದಾರೆ.
13. ಹಿರಿಯರ ಕಡೆಗೆ ಹೃತ್ಪೂರ್ವಕವಾದ ವಾತ್ಸಲ್ಯವನ್ನು ನಾವು ಯಾಕೆ ಹೊಂದಿರಬೇಕು?
13 ನಮ್ಮ ಹಿರಿಯರಿಗೆ ಗಣ್ಯತೆ ತೋರಿಸುವುದರ ಕುರಿತೇನು? ಸಭೆಯ ಅಭಿರುಚಿಗಳಿಗಾಗಿ ಅವರು ಕಷ್ಟಪಟ್ಟು ದುಡಿಯುವ ವಿಧಾನವನ್ನು ಪರಿಗಣಿಸುವಲ್ಲಿ ಅವರಿಗಾಗಿ ನಮ್ಮ ಹೃದಯಗಳಲ್ಲಿ ಒಂದು ಹೃತ್ಪೂರ್ವಕವಾದ ಮೆಚ್ಚಿಕೆಯ ಸ್ಥಾನವನ್ನು ನಾವು ಹೊಂದಿರಬಾರದೋ? ನಮ್ಮೆಲ್ಲರಂತೆಯೇ, ಅವರಿಗೆ ಸ್ವತಃ ಅವರನ್ನು ಮತ್ತು ಅವರ ಕುಟುಂಬಗಳನ್ನು ಪೋಷಿಸಲಿಕ್ಕಿರುತ್ತದೆ. ನಾವೆಲ್ಲರೂ ಮಾಡಲಿಕ್ಕಿರುವಂತೆ ವೈಯಕ್ತಿಕ ಅಭ್ಯಾಸ, ಸಭಾ ಕೂಟಗಳಿಗೆ ಹಾಜರಾಗುವುದು, ಮತ್ತು ಕ್ಷೇತ್ರ ಸೇವೆಯಲ್ಲಿ ಭಾಗವಹಿಸುವಿಕೆಗಳಂತಹ ಹಂಗುಗಳು ಅವರಿಗೂ ಸಹ ಇವೆ. ಇದಕ್ಕೆ ಕೂಡಿಸಿ, ಕೂಟಗಳಿಗಾಗಿ ಕಾರ್ಯಕ್ರಮದ ನಿರ್ವಹಣೆಗಳನ್ನು ತಯಾರಿಸುವ, ಸಾರ್ವಜನಿಕ ಭಾಷಣಗಳನ್ನು ಕೊಡುವ, ಮತ್ತು ಕೆಲವೊಮ್ಮೆ ತಾಸುಗಟ್ಟಲೆ ಮೊಕದ್ದಮೆಯ ವಿಚಾರಣೆಗಳಿಂದ ಒಳಗೊಂಡ, ಸಭೆಯಲ್ಲಿ ಎಬ್ಬಿಸಲ್ಪಡುವ ಸಮಸ್ಯೆಗಳಿಗೆ ಕಾಳಜಿ ವಹಿಸುವ ಹಂಗು ಅವರಿಗಿದೆ. ನಿಜವಾಗಿಯೂ, “ಅಂಥವರನ್ನು ಮಾನ್ಯರೆಂದೆಣಿ” ಸಲು ನಾವು ಬಯಸುತ್ತೇವೆ.—ಫಿಲಿಪ್ಪಿ 2:29.
ಸಹೋದರ ವಾತ್ಸಲ್ಯವನ್ನು ವ್ಯಕ್ತಪಡಿಸುವುದು
14. ಸಹೋದರ ವಾತ್ಸಲ್ಯವನ್ನು ತೋರಿಸುವಂತೆ ಯಾವ ಶಾಸ್ತ್ರ ವಚನಗಳು ನಮಗೆ ಆಜ್ಞೆಯನ್ನೀಯುತ್ತವೆ?
14 ಯೆಹೋವನನ್ನು ಸಂತೋಷಪಡಿಸಲು, ಯೇಸು ಕ್ರಿಸ್ತನು ಮತ್ತು ಪೌಲನು ಮಾಡಿದಂತೆ, ನಮ್ಮ ಜೊತೆ ವಿಶ್ವಾಸಿಗಳಿಗಾಗಿ ಸಹೋದರ ವಾತ್ಸಲ್ಯದ ಹೃತ್ಪೂರ್ವಕವಾದ ಭಾವನೆಯನ್ನು ನಾವು ವ್ಯಕ್ತಪಡಿಸಬೇಕು. ನಾವು ಓದುವುದು: “ [ಸಹೋದರ ವಾತ್ಸಲ್ಯ] ದಿಂದ ಒಬ್ಬರನ್ನೊಬ್ಬರು ಪ್ರೀತಿಸಿರಿ.” (ರೋಮಾಪುರ 12:10, ಕಿಂಗ್ಡಮ್ ಇಂಟರ್ಲಿನಿಯರ್) “[ಸಹೋದರ ವಾತ್ಸಲ್ಯ]ದ ವಿಷಯದಲ್ಲಿ ನಿಮಗೆ ಬರೆಯುವದು ಅವಶ್ಯವಿಲ್ಲ; ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಉಪದೇಶವನ್ನು ನೀವೇ ದೇವರಿಂದ ಹೊಂದಿದ್ದೀರಿ.” (1 ಥೆಸಲೊನೀಕ 4:9, ಇಂಟರ್) “ನಿಮ್ಮ [ಸಹೋದರ ವಾತ್ಸಲ್ಯ]ವು ನೆಲೆಯಾಗಿರಲಿ.” (ಇಬ್ರಿಯ 13:1, ಇಂಟರ್) ಭೂಮಿಯಲ್ಲಿರುವ ಆತನ ಮಕ್ಕಳಿಗೆ ನಾವು ಸಹೋದರ ವಾತ್ಸಲ್ಯವನ್ನು ತೋರಿಸುವಾಗ ಖಂಡಿತವಾಗಿಯೂ ನಮ್ಮ ಸ್ವರ್ಗೀಯ ತಂದೆಯು ಸಂತೋಷಪಡುತ್ತಾನೆ!
15. ಸಹೋದರ ವಾತ್ಸಲ್ಯವನ್ನು ವ್ಯಕ್ತಪಡಿಸುವ ಕೆಲವೊಂದು ಮಾರ್ಗಗಳು ಯಾವುವು?
15 ಅಪೊಸ್ತಲರ ಸಮಯಗಳಲ್ಲಿ ಕ್ರೈಸ್ತರು “ಪವಿತ್ರವಾದ ಮುದ್ದಿಟ್ಟು” ಅಥವಾ “ಪ್ರೀತಿಯ ಮುದ್ದನ್ನಿಟ್ಟು” ಒಬ್ಬರನ್ನೊಬ್ಬರು ವಂದಿಸುವ ಪದ್ಧತಿಯಿತ್ತು. (ರೋಮಾಪುರ 16:16; 1 ಪೇತ್ರ 5:14) ನಿಜವಾಗಿಯೂ ಸಹೋದರ ವಾತ್ಸಲ್ಯದ ಕುರಿತಾದ ಒಂದು ವ್ಯಕ್ತಪಡಿಸುವಿಕೆ! ಇಂದು, ಭೂಮಿಯ ಅಧಿಕಾಂಶ ಭಾಗಗಳಲ್ಲಿ, ಒಂದು ಯಥಾರ್ಥವಾದ ಸ್ನೇಹಮಯ ನಗೆ ಮತ್ತು ಒಂದು ದೃಢವಾದ ಹಸ್ತಲಾಘವವವು ಹೆಚ್ಚು ಸೂಕ್ತವಾದ ವ್ಯಕ್ತಪಡಿಸುವಿಕೆಯಾಗಿರುವುದು. ಮೆಕ್ಸಿಕೊದಂತಹ ಲ್ಯಾಟಿನ್ ದೇಶಗಳಲ್ಲಿ, ಅಭಿವಂದನೆಯು ತೋಳುಗಳಿಂದ ಅಪ್ಪಿಕೊಳ್ಳುವ ರೂಪದಲ್ಲಿದ್ದು, ನಿಜವಾಗಿಯೂ ವಾತ್ಸಲ್ಯದ ಒಂದು ಅಭಿವ್ಯಕ್ತಿಯಾಗಿದೆ. ಅವರ ದೇಶಗಳಲ್ಲಿ ಸಂಭವಿಸುತ್ತಿರುವ ಮಹತ್ತಾದ ಅಭಿವೃದ್ಧಿಗೆ ಈ ಸಹೋದರರಿಂದ ದೊರಕುತ್ತಿರುವ ಇಂತಹ ಹೃತ್ಪೂರ್ವಕವಾದ ವಾತ್ಸಲ್ಯವೇ ಕಾರಣವಾಗಿದ್ದಿರಬಹುದು.
16. ನಮ್ಮ ರಾಜ್ಯ ಸಭಾಗೃಹಗಳಲ್ಲಿ ಸಹೋದರ ವಾತ್ಸಲ್ಯವನ್ನು ಪ್ರದರ್ಶಿಸಲಿಕ್ಕಾಗಿ ಯಾವ ಸುಸಂದರ್ಭಗಳು ನಮಗಿವೆ?
16 ನಾವು ರಾಜ್ಯ ಸಭಾಗೃಹವನ್ನು ಪ್ರವೇಶಿಸುವಾಗ, ಸಹೋದರ ವಾತ್ಸಲ್ಯವನ್ನು ವ್ಯಕ್ತಪಡಿಸಲು ನಾವೊಂದು ವಿಶೇಷ ಪ್ರಯತ್ನವನ್ನು ಮಾಡುತ್ತೇವೋ? ವಿಶೇಷವಾಗಿ ವ್ಯಾಕುಲಗೊಂಡವರಂತೆ ಕಾಣುವವರಿಗೆ, ಪ್ರೋತ್ಸಾಹನೆಯನ್ನೀಯುವ ಮಾತುಗಳನ್ನಾಡುವಂತೆ ಇದು ನಮಗೆ ಪ್ರಚೋದನೆಯನ್ನೀಯುತ್ತದೆ. “ಮನಗುಂದಿದವರನ್ನು ಧೈರ್ಯಪಡಿಸು” ವಂತೆ ನಮಗೆ ಹೇಳಲ್ಪಟ್ಟಿದೆ. (1 ಥೆಸಲೊನೀಕ 5:14) ನಿಶ್ಚಯವಾಗಿಯೂ ಅದು ನಾವು ಸಹೋದರ ವಾತ್ಸಲ್ಯವನ್ನು ನಿವೇದಿಸಿಕೊಳ್ಳಲು ಸಾಧ್ಯವಿರುವ ಒಂದು ಮಾರ್ಗವಾಗಿದೆ. ಇನ್ನೊಂದು ಉತ್ತಮ ಮಾರ್ಗವು ಯಾವುದೆಂದರೆ ಒಂದು ಅತ್ಯುತ್ತಮವಾದ ಸಾರ್ವಜನಿಕ ಭಾಷಣ, ಚೆನ್ನಾಗಿ ನಿರ್ವಹಿಸಲ್ಪಟ್ಟ ಕಾರ್ಯಕ್ರಮದ ಒಂದು ಭಾಗ, ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿ ಭಾಷಕನಿಂದ ಮುಂದಿಡಲ್ಪಟ್ಟ ಒಳ್ಳೇ ಪ್ರಯತ್ನಕ್ಕಾಗಿ, ಮತ್ತು ಇತ್ಯಾದಿಗಳಿಗಾಗಿ ಗಣ್ಯತೆಯನ್ನು ವ್ಯಕ್ತಪಡಿಸುವುದು.
17. ಒಬ್ಬ ಹಿರಿಯನು ಸಭೆಯವರ ವಾತ್ಸಲ್ಯವನ್ನು ಹೇಗೆ ಸಂಪಾದಿಸಿಕೊಂಡನು?
17 ಬಹಳ ತಡವಾಗದಿರುವಲ್ಲಿ ಒಂದು ಕೂಟದ ಅನಂತರ ಒಂದು ಊಟಕ್ಕಾಗಿ ಅಥವಾ ಪ್ರಾಯಶಃ ಒಂದು ಲಘು ಉಪಹಾರಕ್ಕಾಗಿ ವಿವಿಧ ಜನರನ್ನು ಆಮಂತ್ರಿಸುವುದರ ಕುರಿತೇನು? ಲೂಕ 14:12-14 ರಲ್ಲಿರುವ ಯೇಸುವಿನ ಸಲಹೆಯನ್ನು ಅನ್ವಯಿಸುವಂತೆ ನಾವು ಬಿಡಬಾರದೋ? ಒಮ್ಮೆ ಹಿಂದಿನ ಮಿಷನೆರಿಯೊಬ್ಬನು, ಬೇರೆ ಎಲ್ಲರೂ ವಿವಿಧ ಕುಲಗಳಿಂದ ಒಳಗೂಡಿದ್ದಂತಹ ಸಭೆಯೊಂದರಲ್ಲಿ ಮೇಲ್ವಿಚಾರಕನಾಗಿ ನೇಮಿಸಲ್ಪಟ್ಟನು. ಆ ಸಭೆಯಲ್ಲಿ ಸಹೋದರ ವಾತ್ಸಲ್ಯದ ಕೊರತೆಯಿರುವುದನ್ನು ಅವನು ಗಮನಿಸಿದನು, ಆದುದರಿಂದ ಪರಿಸ್ಥಿತಿಯನ್ನು ಸರಿಪಡಿಸಲು ಅವನೊಂದು ಉಪಾಯವನ್ನು ಮಾಡಿದನು. ಹೇಗೆ? ಪ್ರತಿ ಆದಿತ್ಯವಾರ, ಒಂದು ಊಟಕ್ಕಾಗಿ ಬೇರೆ ಬೇರೆ ಕುಟುಂಬಗಳನ್ನು ಒಂದೊಂದಾಗಿ ಅವನು ಆಮಂತ್ರಿಸಿದನು. ವರ್ಷದ ಅಂತ್ಯದಲ್ಲಿ ಅವರೆಲ್ಲರೂ ಹೃತ್ಪೂರ್ವಕವಾದ ಸಹೋದರ ವಾತ್ಸಲ್ಯವನ್ನು ಅವನ ಕಡೆಗೆ ವ್ಯಕ್ತಪಡಿಸತೊಡಗಿದರು.
18. ಅಸ್ವಸ್ಥರಾದ ನಮ್ಮ ಸಹೋದರ ಮತ್ತು ಸಹೋದರಿಯರಿಗಾಗಿ ನಾವು ಸಹೋದರ ವಾತ್ಸಲ್ಯವನ್ನು ಹೇಗೆ ತೋರಿಸಬಲ್ಲೆವು?
18 ಮನೆಯಲ್ಲಿ ಅಥವಾ ಒಂದು ಆಸ್ಪತ್ರೆಯಲ್ಲಿ, ಒಬ್ಬ ಸಹೋದರ ಅಥವಾ ಸಹೋದರಿಯು ಅಸ್ವಸ್ಥಳಾಗಿರುವುದಾದರೆ, ನೀವು ಕಾಳಜಿಯನ್ನು ವಹಿಸುತ್ತೀರೆಂದು ಅವರು ತಿಳಿಯುವಂತೆ ಸಹೋದರ ವಾತ್ಸಲ್ಯವು ನಮಗೆ ಪ್ರಚೋದಿಸುವುದು. ಅಥವಾ ರೋಗೋಪಚಾರ ಗೃಹ (ನರ್ಸಿಂಗ್ ಹೋಂ) ಗಳಲ್ಲಿ ಜೀವಿಸಿರುವವರ ಕುರಿತೇನು? ಒಂದು ವೈಯಕ್ತಿಕ ಭೇಟಿಯನ್ನು, ಒಂದು ಫೋನ್ ಕರೆಯನ್ನು, ಅಥವಾ ಹೃತ್ಪೂರ್ವಕವಾದ ಭಾವನೆಯನ್ನು ವ್ಯಕ್ತಪಡಿಸುವ ಒಂದು ಕಾರ್ಡ್ ಕಳುಹಿಸುವುದನ್ನು ಯಾಕೆ ಮಾಡಬಾರದು?
19, 20. ನಮ್ಮ ಸಹೋದರ ವಾತ್ಸಲ್ಯವು ವಿಶಾಲವಾದದ್ದು ಎಂಬುದನ್ನು ನಾವು ಹೇಗೆ ತೋರಿಸಬಲ್ಲೆವು?
19 ಸಹೋದರ ವಾತ್ಸಲ್ಯದ ಕುರಿತಾದ ಅಂತಹ ಅಭಿವ್ಯಕ್ತಿಗಳನ್ನು ನೀಡುವಾಗ, ನಾವು ನಮ್ಮನ್ನು ಹೀಗೆ ಕೇಳಿಕೊಳ್ಳಸಾಧ್ಯವಿದೆ, ‘ನನ್ನ ಸಹೋದರ ವಾತ್ಸಲ್ಯವು ಪಕ್ಷಪಾತವುಳ್ಳದ್ದೋ? ಚರ್ಮದ ಬಣ್ಣ, ವಿದ್ಯಾಭ್ಯಾಸ, ಅಥವಾ ಪ್ರಾಪಂಚಿಕ ಐಶ್ವರ್ಯಗಳಂತಹ ಅಂಶಗಳು, ಸಹೋದರ ವಾತ್ಸಲ್ಯದ ಕುರಿತಾದ ನನ್ನ ವ್ಯಕ್ತಪಡಿಸುವಿಕೆಗಳನ್ನು ಪ್ರಭಾವಿಸುತ್ತವೊ? ಅಪೊಸ್ತಲ ಪೌಲನು ಕೊರಿಂಥದಲ್ಲಿರುವ ಕ್ರೈಸ್ತರಿಗೆ ಮಾಡಲು ಒತ್ತಾಯಿಸಿದಂತೆ, ನನ್ನ ಸಹೋದರ ವಾತ್ಸಲ್ಯದಲ್ಲಿ ಹೃದಯವನ್ನು ವಿಶಾಲವಾದದ್ದಾಗಿ ಮಾಡುವ ಆವಶ್ಯಕತೆ ನನಗಿದೆಯೇ?’ ನಮ್ಮ ಸಹೋದರರನ್ನು ಸಕಾರಾತ್ಮಕವಾಗಿ ದೃಷ್ಟಿಸುವಂತೆ, ಅವರ ಉತ್ತಮ ಗುಣಗಳಿಗಾಗಿ ಅವರಿಗೆ ಗಣ್ಯತೆಯನ್ನು ವ್ಯಕ್ತಪಡಿಸುವಂತೆ, ನಮ್ಮನ್ನು ಸಹೋದರ ವಾತ್ಸಲ್ಯವು ಪ್ರಚೋದಿಸುವುದು. ನಮ್ಮ ಸಹೋದರನ ಆತ್ಮಿಕ ಪ್ರಗತಿಗಾಗಿ ಅಸೂಯೆಯನ್ನು ವ್ಯಕ್ತಪಡಿಸುವ ಬದಲಾಗಿ ನಾವು ಅದಕ್ಕಾಗಿ ಉಲ್ಲಾಸಿಸುವಂತೆ ಕೂಡ ಸಹೋದರ ವಾತ್ಸಲ್ಯವು ನಮಗೆ ಸಹಾಯಮಾಡುವುದು.
20 ಶುಶ್ರೂಷೆಯಲ್ಲಿ ನಮ್ಮ ಸಹೋದರರಿಗೆ ಸಹಾಯ ಮಾಡುವಂತೆ ಕೂಡ ಸಹೋದರ ವಾತ್ಸಲ್ಯವು ನಮಗೆ ಎಚ್ಚರಿಕೆಯನ್ನುಂಟುಮಾಡುತ್ತದೆ. ನಮ್ಮ ಸಂಗೀತಗಳಲ್ಲಿ ಒಂದು (ಸಂಖ್ಯೆ 92, ಇಂಗ್ಲಿಷಿನ ಅನುವಾದ) ವ್ಯಕ್ತಪಡಿಸುವಂತೆ ಅದು ಇರಬೇಕಾಗಿದೆ:
“ಎಲ್ಲಾ ನಿರ್ಬಲರಿಗೆ ದಯಾಪೂರಿತ ನೆರವು ನೀಡಿರಿ,
ಆ ಮೂಲಕ ಅವರು ಕೂಡ ಧೈರ್ಯದಿಂದ ಮಾತಾಡಲಾಗಲು.
ಕೋಮಲ ವರುಷಗಳವರನ್ನು ಎಂದಿಗೂ ಅಲಕ್ಷಿಸಿದಿರ್ರಿ,
ದೃಢವಾಗಿ ಅವರು ಬೆಳೆಯಲು ಮತ್ತು ಅವರ ಭಯವನ್ನು ಹೋಗಲಾಡಿಸಲು.”
21. ನಾವು ಸಹೋದರ ವಾತ್ಸಲ್ಯವನ್ನು ತೋರಿಸುವಾಗ ಯಾವ ಪ್ರತಿಕ್ರಿಯೆಯನ್ನು ನಾವು ನಿರೀಕ್ಷಿಸಬಲ್ಲೆವು?
21 ಆದುದರಿಂದ ಸಹೋದರ ವಾತ್ಸಲ್ಯವನ್ನು ವ್ಯಕ್ತಪಡಿಸುವುದರಲ್ಲಿ, ಯೇಸು ತನ್ನ ಪರ್ವತ ಪ್ರಸಂಗದಲ್ಲಿ ತಿಳಿಸಿದ ತ್ತತ್ವವು ಅನ್ವಯಿಸುತ್ತದೆಂಬದನ್ನು ನಾವು ಮರೆಯದಿರೋಣ: “ಕೊಡಿರಿ, ಆಗ ನಿಮಗೂ ಕೊಡುವರು; ಜಡಿದು ಅಲ್ಲಾಡಿಸಿ ಹೊರ ಚೆಲ್ಲುವ ಹಾಗೆ ತುಂಬಾ ಅಳತೆಯನ್ನು ಅಳೆದು ನಿಮ್ಮ ಸೆರಗಿಗೆ ಹಾಕುವರು. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು.” (ಲೂಕ 6:38) ನಾವು ಸ್ವತಃ ಯೆಹೋವನ ಸೇವಕರಾಗಿರುವಂತೆ ಯೆಹೋವನ ಸೇವಕರಾಗಿರುವವರಿಗೆ ಗೌರವವನ್ನು ವ್ಯಕ್ತಪಡಿಸುತ್ತಾ, ಸಹೋದರ ವಾತ್ಸಲ್ಯವನ್ನು ನಾವು ತೋರಿಸುವಾಗ ನಮ್ಮನ್ನು ನಾವು ಪ್ರಯೋಜನಪಡಿಸಿಕೊಳ್ಳುತ್ತೇವೆ. ಯಾರು ಸಹೋದರ ವಾತ್ಸಲ್ಯವನ್ನು ತೋರಿಸುವವರಲ್ಲಿ ಉಲ್ಲಾಸಪಡುತ್ತಾರೋ ಅವರು ನಿಜವಾಗಿಯೂ ಧನ್ಯರು!
[ಅಧ್ಯಯನ ಪ್ರಶ್ನೆಗಳು]
a ಹಿಂಬಾಲಿಸುವ ಲೇಖನವನ್ನು ನೋಡಿರಿ: “ಪ್ರೀತಿ (ಅಗಾಪೆ)—ಅದೇನಲ್ಲ ಮತ್ತು ಅದೇನಾಗಿದೆ.”
ನೀವು ಹೇಗೆ ಉತ್ತರಿಸುವಿರಿ?
▫ ಯಾವ ಗ್ರೀಕ್ ಪದಗಳು ನಮ್ಮ ಭಾವೋದ್ರೇಕಗಳೊಂದಿಗೆ ವ್ಯವಹರಿಸುತ್ತವೆ, ಮತ್ತು ಅವು ಹೇಗೆ ವೈಶಿಷ್ಟ್ಯವುಳ್ಳವುಗಳಾಗಿವೆ?
▫ ಸಹೋದರ ವಾತ್ಸಲ್ಯಕ್ಕೆ ಯಾವುದು ಕೀಲಿ ಕೈಯಾಗಿದೆ?
▫ ವಿಶೇಷವಾದ ಸಹೋದರ ವಾತ್ಸಲ್ಯಕ್ಕಾಗಿ ಯಾವ ಶಾಸ್ತ್ರೀಯ ಉದಾಹರಣೆಗಳು ನಮಗೆ ಕೊಡಲ್ಪಟ್ಟಿವೆ?
▫ ನಮ್ಮ ಸಹೋದರರಿಗೆ ಮತ್ತು ಹಿರಿಯರಿಗಾಗಿ ನಾವು ಹೃತ್ಪೂರ್ವಕವಾದ ವಾತ್ಸಲ್ಯವನ್ನು ಹೊಂದಿರಬೇಕು ಯಾಕೆ?
[ಪುಟ 15 ರಲ್ಲಿರುವ ಚಿತ್ರ]
ಅವರ ನಂಬಿಕೆಗೆ ಸಹೋದರ ವಾತ್ಸಲ್ಯವನ್ನು ಮತ್ತು ಇತರ ಕ್ರೈಸ್ತ ಗುಣಗಳನ್ನು ಕೂಡಿಸುವಂತೆ ಅಪೊಸ್ತಲ ಪೇತ್ರನು ಅವನ ಸಹೋದರರಿಗೆ ಒತ್ತಾಯಿಸಿದನು