ನೀವು ಸ್ವರ್ಗಕ್ಕೆ ಒಯ್ಯಲ್ಪಡುವಿರೋ?
ಅನೇಕ ಜನರು ತಾವು ಸತ್ತ ಮೇಲೆ ಸ್ವರ್ಗಕ್ಕೆ ಹೋಗುತ್ತೇವೆಂದು ನಂಬುತ್ತಾರೆ. ಆದರೆ ಕೆಲವರು ಆನಂದ ಪರವಶತೆ (ರ್ಯಾಪ್ಚರ್) ಎಂದು ಕರೆಯಲ್ಪಡುವುದರಲ್ಲಿ ಸ್ವರ್ಗಕ್ಕೆ ಎತ್ತಲ್ಪಡುವರು ಎಂದು ನೆನಸುತ್ತಾರೆ. ಅದು ನಿಮ್ಮ ನಿರೀಕ್ಷಣೆಯೋ?
“ಲಕ್ಷ ಲಕ್ಷಾಂತರ ಜನರು ಎಲ್ಲಿ ಹೋದರೆಂಬ ಯಾವುದೇ ಸುಳಿವಿಲ್ಲದೆ ಫಕ್ಕನೆ ಕಾಣದೆ ಹೋಗುವುದು” ಆನಂದ ಪರವಶತೆ ಆಗಿರುತ್ತದೆ! ಹೀಗೆಂದು ಒಬ್ಬ ಪ್ರಾಟೆಸ್ಟಂಟ್ ಸುವಾರ್ತಿಕರಂದರು. ಇವ್ಯಾಂಜೆಲಿಕಲ್ ಡಿಕ್ಷನರಿ ಆಫ್ ತಿಯಾಲೊಜಿಗನುಸಾರ, “ಆನಂದ ಪರವಶತೆ” ಎಂಬ ಪದವು “ಕ್ರಿಸ್ತನ ಎರಡನೇ ಆಗಮನದಲ್ಲಿ ಚರ್ಚ್ ಆತನೊಂದಿಗೆ ಐಕ್ಯವಾಗುವುದನ್ನು” ಸೂಚಿಸುತ್ತದೆ.
ಯೇಸು ಕ್ರಿಸ್ತನನ್ನು ಎದುರುಗೊಳ್ಳುವುದಕ್ಕಾಗಿ ಸ್ನೇಹಿತರನ್ನು ಮತ್ತು ಕುಟುಂಬ ಸದಸ್ಯರನ್ನು ಬಿಟ್ಟು ಹೋಗುವುದನ್ನು ಆಲೋಚಿಸುವುದು ಕೆಲವರಿಗೆ ಮನಸ್ಸು ಕಲಕಿಸುವಂಥದ್ದಾಗಿ ತೋರುತ್ತದೆ. ಆದರೂ, ಆನಂದ ಪರವಶತೆಯು ಸಂಭವಿಸಲೇ ಬೇಕು ಎಂದು ಅನೇಕರು ನಂಬುತ್ತಾರೆ. ಅದು ಸಂಭವಿಸಲಿದೆಯೇ? ಹಾಗಿರುವುದಾದರೆ, ಯಾವಾಗ?
ಆನಂದ ಪರವಶತೆಯ ವಿವಿಧ ಅಭಿಪ್ರಾಯಗಳು
ಕ್ರಿಸ್ತನ ವಾಗ್ದತ್ತ ಸಾವಿರ ವರ್ಷದ ಆಳಿಕೆಯ ಆರಂಭದ ಮೊದಲು, “ಮಹಾ ಸಂಕಟ” ಎಂದು ಕರೆಯಲ್ಪಡುವ ಒಂದು ಕಾಲಾವಧಿಯು ಇರುವುದೆಂದು ಬೈಬಲ್ ತೋರಿಸಿಕೊಡುತ್ತದೆ. ಯೇಸುವಂದದ್ದು: “ಅಂಥ ಸಂಕಟವು ಲೋಕ ಹುಟ್ಟಿದ್ದು ಮೊದಲುಗೊಂಡು ಇಂದಿನವರೆಗೂ ಆಗಲಿಲ್ಲ, ಇನ್ನೂ ಮೇಲೆಯೂ ಆಗುವದಿಲ್ಲ.” (ಮತ್ತಾಯ 24:21; ಪ್ರಕಟನೆ 20:6) ಕೆಲವರು ಆನಂದ ಪರವಶತೆಯನ್ನು ಮಹಾ ಸಂಕಟಕ್ಕಿಂತ ಮುಂಚೆ ಇಡುತ್ತಾರೆ. ಇತರರು ಮಹಾ ಸಂಕಟದ ಸಮಯದಲ್ಲಿ ಅದನ್ನು ನಿರೀಕ್ಷಿಸುತ್ತಾರೆ. ಇನ್ನಿತರರು ಆ ಅಸಮಾನ ಸಂಕಟದ ಅನಂತರ ಆನಂದ ಪರವಶತೆಯು ಬರುವದೆಂದು ನೆನಸುತ್ತಾರೆ.
ಸಂಕಟಾನಂತರದ ಆನಂದಪರವಶತೆಯ ಅಭಿಪ್ರಾಯವು 19ನೇ ಶತಮಾನದ ಆರಂಭದ ವರೆಗೂ ಪ್ರಧಾನವಾಗಿತ್ತು. ಆನಂತರ, ಇಂಗ್ಲೆಂಡಿನಲ್ಲಿ ಒಂದು ಚಳುವಳಿಯು ಹಿಂದಣ ಚರ್ಚ್ ಆಫ್ ಐರ್ಲ್ಯಾಂಡ್ನ ಪಾದ್ರಿ, ಜಾನ್ ನೆಲ್ಸನ್ ಡರ್ಬಿಯ ಮುಂದಾಳುತ್ವದ ಮೂಲಕ ವಿಕಸಿಸಿತು. ಅವನು ಮತ್ತು ಅದೇ ಅಭಿರುಚಿಯುಳ್ಳ ಆ್ಯಂಗ್ಲಿಕನರು ಬ್ರೆದ್ರನ್ ಎಂದು ಗುರುತಿಸಲ್ಪಟ್ಟವರಾದರು. ಡರ್ಬಿಯು ಆತನ ಸ್ಥಳವಾದ ಪಿಮ್ಲತ್ ಮೂಲದಿಂದ, ಸ್ವಿಟ್ಸರ್ಲೆಂಡ್ ಮತ್ತು ಯೂರೋಪ್ನ ಬೇರೆ ಕಡೆಗಳಲ್ಲಿ ಸಾರಲು ಪ್ರಯಾಣ ಮಾಡಿದನು. ಕ್ರಿಸ್ತನ ಹಿಂದಿರುಗುವಿಕೆಯು ಎರಡು ಹಂತಗಳಲ್ಲಿ ಸಂಭವಿಸುವುದೆಂದು ಆತನು ಪ್ರತಿಪಾದಿಸಿದನು. ಏಳು ವರ್ಷ ಕಾಲಾವಧಿಯ ಸಂಕಟವು ಭೂಮಿಯನ್ನು ಧ್ವಂಸಗೊಳಿಸುವ ಮುಂಚೆ “ಸಂತರು” ಎತ್ತಲ್ಪಡುವಂಥ, ರಹಸ್ಯ ಆನಂದಪರವಶತೆಯೊಂದಿಗೆ ಅದು ಆರಂಭವಾಗುವುದು. ಅನಂತರ ಕ್ರಿಸ್ತನು ಈ “ಸಂತರೊಂದಿಗೆ” ಕೂಡಿ, ದೃಶ್ಯವಾಗಿ ಕಾಣಬರುವನು, ಮತ್ತು ಅವರು ಜತೆಯಾಗಿ ಸಾವಿರ ವರ್ಷ ಭೂಮಿಯ ಮೇಲೆ ಆಳುವರು.
ಲೋಕದಿಂದ ಪ್ರತ್ಯೇಕವಾಗಿರುವ ಅಗತ್ಯತೆಯನ್ನು ಡರ್ಬಿಯು ಒತ್ತಿಹೇಳಿದನು, ಮತ್ತು ಆತನ ಅಭಿಪ್ರಾಯಗಳಲ್ಲಿ ಭಾಗಿಯಾಗುವವರು ಕಟ್ಟಕಡೆಗೆ ಎಕ್ಸ್ಕ್ಲ್ಯೂಸಿವ್ ಬ್ರೆದ್ರನ್ ಎಂದು ಗುರುತಿಸಲ್ಪಟ್ಟವರಾದರು. ಆನಂದಪರವಶತೆಯಲ್ಲಿ ನಂಬುವ, ಆದರೆ ಅದು ಸಂಕಟದ ಮುಂಚೆ ಎಂದು ನಂಬದೆ ಇರುವ ಒಂದು ಭಿನ್ನವಾದ ಪಂಗಡದ ನಾಯಕತ್ವವನ್ನು ಬಿ. ಡಬ್ಲ್ಯೂ. ನ್ಯೂಟನ್ ವಹಿಸಿದನು. “ಕ್ರಿಸ್ತನ ಬರೋಣದ ನಿರೀಕ್ಷೆಗೆ ರಹಸ್ಯ ಆನಂದಪರವಶತೆಯ ವಾದಗಳು ಕೇಡಿನದ್ದಾಗಿವೆ” ಎಂದು ಸಂಕಟಾನಂತರದ ಸಮರ್ಥಕ ಅಲೆಕ್ಸಾಂಡರ್ ರೀಸ್ ಸಾಧಿಸಿದನು.
ಅಭಿಪ್ರಾಯದಲ್ಲಿನ ಈ ವ್ಯತ್ಯಾಸವು “ಕ್ರಿಸ್ತನ ಬರೋಣದ ಸಂಬಂಧದಲ್ಲಿ [ಅವರ] ನಿರೀಕ್ಷೆಯ ಸ್ವಭಾವ” ವನ್ನು ಬಾಧಿಸುವಷ್ಟು ಗಂಭೀರವಾದದ್ದಾಗಿದೆ ಎಂದು ಸಂಕಟಕ್ಕೆ ಪೂರ್ವದ ವಾದಿಗಳು ನಂಬುತ್ತಾರೆ. ಇತರರು, ಕ್ರಿಸ್ತನಿಗೆ ಅತ್ಯಂತ ಹೆಚ್ಚು ನಿಷ್ಠೆಯುಳ್ಳವರು ಮೊದಲು ಆನಂದಪರವಶತೆಯನ್ನು ಹೊಂದುವರು ಮತ್ತು ಅನಂತರ ಹೆಚ್ಚು ಲೌಕಿಕರು ತಕ್ಕೊಳ್ಳಲ್ಪಡುವರು ಎಂದು ನಂಬುತ್ತಾ, ಒಂದು “ಭಾಗಶಃ ಆನಂದಪರವಶತೆಯ ವಾದ” ದ ಮೇಲೆ ಭರವಸೆಯನ್ನಿಡುತ್ತಾರೆ.
ನಂಬಿಗಸ್ತ ಕ್ರೈಸ್ತರ ಒಂದು ಸನ್ನಿಹಿತ ಆನಂದಪರವಶತೆಯನ್ನು ಅನೇಕ ಸುವಾರ್ತಿಕ ಗುಂಪುಗಳು ಪ್ರಚುರಿಸುತ್ತವೆ. ಹಾಗಿದ್ದರೂ, ವಿಭಿನ್ನ ಅಭಿಪ್ರಾಯಗಳ ನೋಟದಲ್ಲಿ, ಬ್ರಿಟನ್ನ ಈಲಿಮ್ ಪೆಂಟೆಕಾಸ್ಟಲ್ ಚರ್ಚಿನ ಮೂಲಕ ಪ್ರಕಾಶಿಸಲ್ಪಟ್ಟ ಪುಸ್ತಿಕೆಯೊಂದು ಹೇಳುವುದು: “ಕರ್ತ ಯೇಸುವಿನ ಹಿಂದಿರುಗುವಿಕೆಗೆ ಸಂಬಂಧಿಸಿದ ಘಟನೆಗಳ ಸ್ಥೂಲ ಹೊರಮೇರೆಯನ್ನು ಅನುಮೋದಿಸುವಾಗ . . . , ವ್ಯಕ್ತಿಯ ಮನವರಿಕೆಗನುಸಾರ ಪ್ರವಾದನೆಯ ಅರ್ಥವಿವರಣೆಯನ್ನು ಮಾಡುವಲ್ಲಿ ಸ್ವತಂತ್ರತೆಯನ್ನು ಅನುಮತಿಸಲಾಗಿದೆ. ಅನೇಕರು, ಘಟನೆಗಳು ತಾವೇ ಪ್ರವಾದನೆಯ ಕಾರ್ಯಕ್ರಮವನ್ನು ಪ್ರಕಾಶಗೊಳಿಸುವಂತೆ ತಾಳ್ಮೆಯಿಂದ ಕಾಯುತ್ತಾ ಒಂದು ಅತ್ತತ್ವಾತ್ಮಕ ಸ್ಥಾನವನ್ನು ಸ್ವೀಕರಿಸುತ್ತಾರೆ.”
ದೇವರ ಪ್ರೇರಿತ ವಾಕ್ಯವಾದ ಬೈಬಲು, ನಾವು ಎಲ್ಲಾ ನಂಬಿಕೆಗಳ ಸತ್ಯತೆಯನ್ನು ಅಳತೆ ಮಾಡಬೇಕಾಗಿರುವ ಮಟ್ಟವಾಗಿರುತ್ತದೆ. (2 ತಿಮೊಥೆಯ 1:13; 3:16, 17) ಆದುದರಿಂದ, ಆನಂದಪರವಶತೆಯ ಬಗ್ಗೆ ಅದು ಏನನ್ನುತ್ತದೆ?