ಯೆಹೋವನು ಮಹಾಕೃಪೆಯಿಂದ ಕ್ಷಮಿಸುತ್ತಾನೆ
“ದುಷ್ಟನು ತನ್ನ ದುರ್ಮಾರ್ಗವನ್ನು ಬಿಡಲಿ, ಕೆಡುಕನು ತನ್ನ ದುರಾಲೋಚನೆಗಳನ್ನು ತ್ಯಜಿಸಲಿ; ಯೆಹೋವನ ಕಡೆಗೆ ತಿರುಗಿಕೊಂಡು ಬರಲಿ, . . . ಆತನು ಮಹಾಕೃಪೆಯಿಂದ ಕ್ಷಮಿಸುವನು.”—ಯೆಶಾಯ 55:7.
1. ಯೆಹೋವನ ಕ್ಷಮಾಪಣೆಯನ್ನು ಪಡೆದವರು ಈಗ ಯಾವುದರಿಂದ ಆಶೀರ್ವದಿಸಲ್ಪಟ್ಟಿದ್ದಾರೆ?
ಯೆಹೋವನು ಪಶ್ಚಾತ್ತಾಪಿಗಳಾದ ತಪ್ಪಿತಸ್ಥರನ್ನು ಕ್ಷಮಿಸುತ್ತಾನೆ ಮತ್ತು ಒಂದು ಆತ್ಮಿಕ ಪರದೈಸದಲ್ಲಿ ಮನೋಶಾಂತಿಯನ್ನು ಆನಂದಿಸಲು ಶಕ್ತರನ್ನಾಗಿ ಮಾಡುತ್ತಾನೆ. ಇದು ಹಾಗೆ ಏಕೆಂದರೆ ಅವರು ಈ ಆವಶ್ಯಕತೆಗಳನ್ನು ಪೂರೈಸುತ್ತಾರೆ: “ಯೆಹೋವನು ಸಿಕ್ಕುವ ಕಾಲದಲ್ಲಿ ಆತನನ್ನು ಆಶ್ರಯಿಸಿರಿ, [ಹುಡುಕಿರಿ, NW] ಆತನು ಸಮೀಪದಲ್ಲಿರುವಾಗ ಆತನಿಗೆ ಬಿನ್ನಹ ಮಾಡಿರಿ. ದುಷ್ಟನು ತನ್ನ ದುರ್ಮಾರ್ಗವನ್ನು ಬಿಡಲಿ, ಕೆಡುಕನು ತನ್ನ ದುರಾಲೋಚನೆಗಳನ್ನು ತ್ಯಜಿಸಲಿ; ಯೆಹೋವನ ಕಡೆಗೆ ತಿರುಗಿಕೊಂಡು ಬರಲಿ, ಆತನು ಅವನನ್ನು ಕರುಣಿಸುವನು; ನಮ್ಮ ದೇವರನ್ನು ಆಶ್ರಯಿಸಲಿ, ಆತನು ಮಹಾಕೃಪೆಯಿಂದ ಕ್ಷಮಿಸುವನು.”—ಯೆಶಾಯ 55:6, 7.
2. (ಎ) ಯೆಶಾಯ 55:6, 7 ರಲ್ಲಿ ತಿಳಿಸಿದ ಪ್ರಕಾರ, ‘ಯೆಹೋವನನ್ನು ಹುಡುಕುವುದು’ ಮತ್ತು ಆತನ ‘ಕಡೆಗೆ ತಿರುಗಿಕೊಳ್ಳುವುದು’ ಎಂಬದರ ಅರ್ಥವೇನು? (ಬಿ) ಬಾಬೆಲಿನ ಯೆಹೂದ್ಯ ಬಂದಿವಾಸಿಗಳಿಗೆ ಯೆಹೋವನೆಡೆಗೆ ಹಿಂತಿರುಗುವ ಅಗತ್ಯವಿತ್ತೇಕೆ, ಮತ್ತು ಅವರಲ್ಲಿ ಕೆಲವರಿಗೆ ಏನು ಸಂಭವಿಸಿತು?
2 “ಯೆಹೋವನನ್ನು ಹುಡುಕು” ವುದಕ್ಕೆ ಮತ್ತು ಆತನಿಗೆ ಸ್ವೀಕರಣೀಯವಾಗಿ ಬಿನ್ನಹಮಾಡುವುದಕ್ಕೆ, ಒಬ್ಬ ದುಷ್ಟ ವ್ಯಕ್ತಿಯು ತನ್ನ ದುರ್ಮಾರ್ಗವನ್ನು ಮತ್ತು ಇತರರಿಗೆ ಹಾನಿಮಾಡುವ ಯಾವುದೇ ಆಲೋಚನೆಯನ್ನು ತ್ಯಜಿಸಲೇ ಬೇಕು. “ಯೆಹೋವನ ಕಡೆಗೆ ತಿರುಗಿ” ಬರುವ ಅಗತ್ಯವು, ಯಾರೊಂದಿಗೆ ಒಮ್ಮೆ ಅವನಿಗೆ ಆಪ್ತ ಸಂಬಂಧವಿತ್ತೋ ಆ ದೇವರನ್ನು ತಪ್ಪಿತಸ್ಥನು ತ್ಯಜಿಸಿದ್ದಾನೆ ಎಂಬದನ್ನು ಸೂಚಿಸುತ್ತದೆ. ದೇವರೆಡೆಗೆ ಯಾರ ಅಪನಂಬಿಗಸ್ತಿಕೆಯು ಕಟ್ಟಕಡೆಗೆ ಅವರನ್ನು ಬಾಬೆಲಿನಲ್ಲಿ ಬಂದಿವಾಸಕ್ಕೆ ನಡಿಸಿತ್ತೋ ಆ ಯೆಹೂದದ ನಿವಾಸಿಗಳ ವಿದ್ಯಮಾನವು ಹಾಗೆಯೇ ಇತ್ತು. ಬಾಬೆಲಿನ ಬಂದಿವಾಸಕ್ಕೆ ಮತ್ತು ಅವರ ಸ್ವದೇಶದ 70 ವರ್ಷಗಳು ಮುಂತಿಳಿಸಲ್ಪಟ್ಟ ನಿರ್ಜನತೆಗೆ ಅವರನ್ನು ನಡಿಸಿದ ಆ ದುಷ್ಕೃತ್ಯಗಳಿಗಾಗಿ ಪಶ್ಚಾತ್ತಾಪಪಡುವ ಮೂಲಕ, ಆ ಯೆಹೂದ್ಯ ಬಂದಿವಾಸಿಗಳು ಯೆಹೋವನ ಬಳಿಗೆ ಹಿಂತಿರುಗುವ ಅಗತ್ಯವಿತ್ತು. ಸಾ.ಶ.ಪೂ. 537 ರಲ್ಲಿ ಆ ದೇಶವು, ಸರಕಾರಿ ಆಜ್ಞಾಪನೆಯ ಮೇರೆಗೆ ಬಾಬೆಲಿನಿಂದ ಮುಕ್ತಮಾಡಲ್ಪಟ್ಟ ಒಂದು ದೇವಭೀರು ಯೆಹೂದ್ಯ ಉಳಿಕೆಯವರಿಂದ ಪುನಃ ನಿವಾಸಿಸಲ್ಪಟ್ಟಿತು. (ಎಜ್ರ 1:1-8; ದಾನಿಯೇಲ 9:1-4) ಆ ಪುನಃಸ್ಥಾಪನೆಯ ಪರಿಣಾಮಗಳು ಎಷ್ಟು ಸಂಭ್ರಮದ್ದಾಗಿದ್ದವೆಂದರೆ, ಯೆಹೂದ ದೇಶವನ್ನು ಏದೆನ್ ಪ್ರಮೋದವನಕ್ಕೆ ಹೋಲಿಸಲಾಗಿತ್ತು.—ಯೆಹೆಜ್ಕೇಲ 36:33-36.
3. ಆತ್ಮಿಕ ಇಸ್ರಾಯೇಲ್ಯ ಉಳಿಕೆಯವರಿಗೆ, ಯೆಹೂದಕ್ಕೆ ಹಿಂತಿರುಗಿದ ದೇವ-ಭೀರು ಬಂದಿವಾಸಿಗಳಿಗೆ ಆದಂಥ ಒಂದು ಅನುಭವವಾದದ್ದು ಹೇಗೆ?
3 ಬಬಿಲೋನ್ಯ ಬಂದಿವಾಸದ ಅನಂತರ ಯೆಹೂದಕ್ಕೆ ಹಿಂತಿರುಗಿದ ಆ ದೇವಭೀರು ಯೆಹೂದ್ಯರಿಗಾದಂಥ ಒಂದು ಅನುಭವವು ಆತ್ಮಿಕ ಇಸ್ರಾಯೇಲ್ಯರಿಗೂ ಆಯಿತು. (ಗಲಾತ್ಯ 6:16) ಒಂದನೆಯ ಲೋಕ ಯುದ್ಧದ ಬೆನ್ನಿನಲ್ಲೇ, ಆತ್ಮಿಕ ಇಸ್ರಾಯೇಲ್ಯರ ಉಳಿಕೆಯವರು ತಮ್ಮ ಮಾರ್ಗಗಳಲ್ಲಿ ಮತ್ತು ತಮ್ಮ ಆಲೋಚನೆಗಳಲ್ಲಿ ಕೆಲವು ಬದಲಾವಣೆಯನ್ನು ಮಾಡಿಕೊಂಡರು. ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲಿನ ಕ್ಷೇತ್ರದಲ್ಲಿ, ದೇವರ ಪೂರ್ಣ ಅನುಗ್ರಹದಿಂದ ಅವರ ಬಂದಿವಾಸದ ಅಂತ್ಯವನ್ನು 1919 ನೆಯ ವರ್ಷವು ಗುರುತಿಸಿತು. ಮನುಷ್ಯನ ಭಯ ಮತ್ತು ಯೆಹೋವನ ಸೇವೆಯಲ್ಲಿ ನಿಷ್ಕ್ರಿಯೆಯನ್ನು ಒಳಗೂಡಿದ್ದ ಪಾಪಗಳಿಗಾಗಿ ಅವರು ಪಶ್ಚಾತ್ತಾಪ ಪಟ್ಟ ಕಾರಣ, ಅವನು ಅವರನ್ನು ಮಹಾ ಬಾಬೆಲಿನೊಳಗಿಂದ ಬಿಡಿಸಿ, ಅವರ ನ್ಯಾಯಯುಕ್ತ ಆತ್ಮಿಕ ಆಸ್ತಿಗೆ ಅವರನ್ನು ಪುನಃ ಕರತಂದನು, ಮತ್ತು ರಾಜ್ಯ ಸಂದೇಶವನ್ನು ಸಾರಲು ಅವರನ್ನು ಪುನಃ ಉಪಯೋಗಿಸ ತೊಡಗಿದನು. ಅಂದಿನಿಂದ ಒಂದು ಆತ್ಮಿಕ ಪರದೈಸವು ದೇವರ ಜನರ ನಡುವೆ, ಆತನ ಪವಿತ್ರ ನಾಮದ ಗೌರವಕ್ಕಾಗಿ ಸಮೃದ್ಧಿಯನ್ನು ಪಡೆಯುತ್ತಾ ಇದೆ. (ಯೆಶಾಯ 55:8-13) ಹೀಗೆ, ಪುರಾತನ ಪ್ರಥಮರೂಪದಲ್ಲಿ ಮತ್ತು ಆಧುನಿಕ ಮೂಲಬಿಂಬದಲ್ಲಿ, ದೈವಿಕ ಕ್ಷಮೆಯನ್ನು ಆಶೀರ್ವಾದಗಳು ಹಿಂಬಾಲಿಸುತ್ತವೆ ಎಂಬದಕ್ಕೆ ಮತ್ತು ಯೆಹೋವನು ಪಶ್ಚಾತ್ತಾಪಿಗಳನ್ನು ಮಹಾಕೃಪೆಯಿಂದ ನಿಶ್ಚಯವಾಗಿಯೂ ಕ್ಷಮಿಸುತ್ತಾನೆಂಬದಕ್ಕೆ ಸ್ಪಷ್ಟವಾಗಿದ ರುಜುವಾತು ನಮಗಿದೆ.
4. ಯೆಹೋವನ ಕೆಲವು ಸೇವಕರಿಗೆ ಯಾವ ಭಯವು ಇದೆ?
4 ಆದುದರಿಂದ ಯೆಹೋವನ ಪ್ರಚಲಿತ-ದಿನದ ಸೇವಕರು ಆತನ ಕ್ಷಮೆಯಲ್ಲಿ ಭರವಸೆಯನ್ನು ಇಡಸಾಧ್ಯವಿದೆ. ಆದರೂ, ಅವರಲ್ಲಿ ಕೆಲವರು ತಮ್ಮ ಹಿಂದಣ ಪಾಪಗಳಿಗಾಗಿ ಪರಿತಾಪಪಡುತ್ತಾರೆ ಮತ್ತು ದೋಷಯುಕ್ತ ಭಾವನೆಗಳು ಅವರನ್ನು ಬಹಳಮಟ್ಟಿಗೆ ಮುಳುಗಿಸಿಯೇ ಬಿಡುತ್ತವೆ. ಆತ್ಮಿಕ ಪರದೈಸದಲ್ಲಿ ನಿವಾಸಿಸುವುದಕ್ಕೆ ತಮ್ಮನ್ನು ಅರ್ಹರೆಂದು ಅವರು ಪರಿಗಣಿಸುವುದಿಲ್ಲ. ವಾಸ್ತವದಲ್ಲಿ ಕೆಲವರು, ತಾವು ಅಕ್ಷಮ್ಯ ಪಾಪವನ್ನು ಮಾಡಿದ್ದೇವೆ ಮತ್ತು ಯೆಹೋವನ ಕ್ಷಮೆಯನ್ನು ಎಂದೂ ಪಡೆಯೆವು ಎಂದು ಭಯಪಡುತ್ತಾರೆ. ಅದು ಸಂಭವನೀಯವೋ?
ಕೆಲವು ಪಾಪಗಳು ಅಕ್ಷಮ್ಯವು
5. ಕೆಲವು ಪಾಪಗಳನ್ನು ಅಕ್ಷಮ್ಯವೆಂದು ಹೇಳಸಾಧ್ಯವಿದೆಯೇಕೆ?
5 ಕೆಲವು ಪಾಪಗಳು ಅಕ್ಷಮ್ಯವಾಗಿವೆ. ಯೇಸು ಕ್ರಿಸ್ತನು ಅಂದದ್ದು: “ಮನುಷ್ಯನು ಮಾಡುವ ಪ್ರತಿಯೊಂದು ಪಾಪಕ್ಕೂ ದೂಷಣೆಗೂ ಕ್ಷಮಾಪಣೆ ಉಂಟಾಗುವದು; ಆದರೆ ಪವಿತ್ರಾತ್ಮ ದೂಷಣೆಗೆ ಕ್ಷಮಾಪಣೆಯಿಲ್ಲ.” (ಮತ್ತಾಯ 12:31) ಹೀಗಿರಲಾಗಿ, ದೇವರ ಪವಿತ್ರಾತ್ಮ ಅಥವಾ ಕಾರ್ಯಕಾರಿ ಶಕ್ತಿಗೆ ವಿರುದ್ಧವಾದ ದೂಷಣೆಯು, ಕ್ಷಮಿಸಲ್ಪಡುವುದಿಲ್ಲ. ಅಂಥ ಪಾಪದ ಕುರಿತು ಅಪ್ರತ್ಯಕ್ಷವಾಗಿ ಸೂಚಿಸುವಾಗ ಪೌಲನು ಬರೆದದ್ದು: “ಒಂದು ಸಾರಿ ಜ್ಞಾನಪ್ರಕಾಶದಲ್ಲಿ ಸೇರಿದವರು . . . ಭ್ರಷ್ಟರಾದರೆ ಅವರಲ್ಲಿ ತಿರಿಗಿ ಮಾನಸಾಂತರವನ್ನು ಹುಟ್ಟಿಸುವದು ಅಸಾಧ್ಯ; ಯಾಕಂದರೆ ಅವರು ತಮ್ಮ ಪಾಲಿಗೆ ದೇವರ ಮಗನನ್ನು ಪುನಃ ಶಿಲುಬೆಗೆ ಹಾಕುವವರೂ ಆತನನ್ನು ಎಲ್ಲರ ಮುಂದೆ ಅವಮಾನಪಡಿಸುವವರೂ ಆಗಿದ್ದಾರೆ.”—ಇಬ್ರಿಯ 6:4-6.
6. ಒಂದು ಪಾಪವು ಕ್ಷಮಿಸಲ್ಪಡುತ್ತದೋ ಇಲ್ಲವೋ ಎಂಬದನ್ನು ನಿರ್ಧರಿಸುವಂಥಾದ್ದು ಯಾವುದು?
6 ಒಬ್ಬ ವ್ಯಕ್ತಿಯು ಅಕ್ಷಮ್ಯ ಪಾಪ ಮಾಡಿದ್ದಾನೋ ಇಲ್ಲವೋ ಎಂಬದನ್ನು ದೇವರು ಮಾತ್ರವೇ ತಿಳಿದಿದ್ದಾನೆ. ಆದರೂ, ಈ ವಿಷಯದ ಮೇಲೆ ಬೆಳಕನ್ನು ಬೀರುತ್ತಾ ಪೌಲನು ಬರೆದದ್ದು: “ಯಾಕಂದರೆ ಸತ್ಯದ ಪರಿಜ್ಞಾನವನ್ನು ನಾವು ಹೊಂದಿದ ಮೇಲೆ ಬೇಕೆಂದು ಪಾಪಮಾಡಿದರೆ ಪಾಪಪರಿಹಾರಕ್ಕಾಗಿ ಇನ್ನಾವ ಯಜ್ಞವೂ ಇರುವದಿಲ್ಲ; ಅತ್ಯಂತ ಭಯದಿಂದ ಎದುರುನೋಡತಕ್ಕ ನ್ಯಾಯತೀರ್ಪೇ” ಇರುವುದು. (ಇಬ್ರಿಯ 10:26, 27) ಒಬ್ಬ ಹಟಮಾರಿ ವ್ಯಕ್ತಿಯು ಬೇಕುಬೇಕೆಂದು ಕ್ರಿಯೆಗೈಯುತ್ತಾನೆ, ಅಥವಾ “ಹಟಸಾಧನೆಯಿಂದ ಮತ್ತು ಹೆಚ್ಚಾಗಿ ಸ್ವೇಚ್ಛೆಯಿಂದ ದುರುಳತನ” ನಡಿಸುವವನಾಗಿದ್ದಾನೆ. (ವೆಬ್ಸ್ಟರ್ಸ್ ನ್ಯೂ ಕಲೀಜಿಯೆಟ್ ಡಿಕ್ಷನರಿ) ಸತ್ಯವನ್ನು ತಿಳಿದಾದ ಮೇಲೆ ಬೇಕುಬೇಕೆಂದು ಮತ್ತು ಹಟದಿಂದ ಪಾಪವನ್ನು ನಡಿಸುತ್ತಾ ಇರುವವನಿಗೆ ಕ್ಷಮಾಪಣೆಯು ಇರುವುದಿಲ್ಲ. ಆದಕಾರಣ, ಪಾಪವು ಕ್ಷಮ್ಯವೋ ಅಲ್ಲವೋ ಎಂಬದರ ಮೇಲೆ ಪ್ರಭಾವಬೀರುವಂಥದ್ದು ಅದರಲ್ಲಿ ಒಳಗೂಡಿರುವ ಹಟಮಾರಿತನದ ಪ್ರಮಾಣ, ಹೃದಯ ಸ್ಥಿತಿಯೇ ಹೊರತು ಸ್ವತಃ ಪಾಪವು ತಾನೇ ಅಷ್ಟಲ್ಲ. ಇನ್ನೊಂದು ಕಡೆ, ತಪ್ಪಿತಸ್ಥ ಕ್ರೈಸ್ತನು ತನ್ನ ತಪ್ಪಿನ ಕುರಿತು ಆಳವಾಗಿ ತಲ್ಲಣಗೊಂಡಿರುವಾಗ, ಸಂಭವನೀಯ ಸನ್ನಿವೇಶವಾದರೂ ಹೇಗಿರುವುದು? ಅವನ ಮಹಾ ಪರಿತಾಪವು ವಾಸ್ತವದಲ್ಲಿ ಅವನು ಅಕ್ಷಮ್ಯ ಪಾಪವನ್ನು ಮಾಡಿರುವುದಿಲ್ಲವೆಂಬದಕ್ಕೆ ಪ್ರಾಯಶಃ ಸೂಚಿಸಲೂಬಹುದು.
ಅವರ ಪಾಪಗಳು ಅಕ್ಷಮ್ಯವಾಗಿದ್ದವು
7. ಯೇಸುವಿನ ಕೆಲವು ಧಾರ್ಮಿಕ ವಿರೋಧಿಗಳು ಅಕ್ಷಮ್ಯ ಪಾಪವನ್ನು ಮಾಡಿದ್ದರೆಂದು ನಾವು ಹೇಳಬಲ್ಲೆವೇಕೆ?
7 ಯೇಸುವನ್ನು ವಿರೋಧಿಸಿದ ಕೆಲವು ಯೆಹೂದ್ಯ ಧಾರ್ಮಿಕ ಮುಖಂಡರು ಬೇಕುಬೇಕೆಂದು, ಮತ್ತು ಹೀಗೆ ಅಕ್ಷಮ್ಯ ಪಾಪವನ್ನು ಮಾಡಿದ್ದರು. ಯೇಸು ಒಳ್ಳೆಯದನ್ನು ಮಾಡಿದಾಗ ಮತ್ತು ಮಹತ್ಕಾರ್ಯಗಳನ್ನು ನಡಿಸಿದಾಗ, ಆತನ ಮೂಲಕ ದೇವರಾತ್ಮವು ಕಾರ್ಯನಡಿಸುವುದನ್ನು ಅವರು ಕಣ್ಣಾರೆ ಕಂಡಿದ್ದರೂ, ಆ ವೈದಿಕರು ಅವನ ಶಕ್ತಿಗೆ ಬೆಲ್ಚೆಬೂಲನನ್ನು ಅಥವಾ ಸೈತಾನನನ್ನು ಹೊಣೆಮಾಡಿದರು. ದೇವರಾತ್ಮದ ಅಲ್ಲಗಳೆಯಲಾಗದ ಕಾರ್ಯಗತಿಯನ್ನು ಪೂರ್ಣ ತಿಳಿದವರಾಗಿಯೇ ಅವರು ಪಾಪಮಾಡಿದರು. ಹೀಗೆ, ಅವರು ಕ್ಷಮಿಸಲ್ಪಡದ ಪಾಪವನ್ನು ಮಾಡಿದರು, ಯಾಕಂದರೆ ಯೇಸುವಂದದ್ದು: “ಪವಿತ್ರಾತ್ಮನಿಗೆ ವಿರೋಧವಾಗಿ ಮಾತಾಡಿದರೆ ಅವನಿಗೆ ಇಹದಲ್ಲಾಗಲಿ ಪರದಲ್ಲಾಗಲಿ ಕ್ಷಮಿಸಲ್ಪಡುವದಿಲ್ಲ.”—ಮತ್ತಾಯ 12:22-32.
8. ಇಸ್ಕರಿಯೋತ ಯೂದನ ಪಾಪವು ಅಕ್ಷಮ್ಯವಾಗಿತೇಕ್ತೆ?
8 ಇಸ್ಕರಿಯೋತ ಯೂದನ ಪಾಪವು ಸಹ ಅಕ್ಷಮ್ಯವಾಗಿತ್ತು. ಯೇಸುವಿಗೆ ಅವನು ಮಾಡಿದ ದ್ರೋಹವು, ಒಂದು ಕಪಟತನ ಮತ್ತು ಅಪ್ರಾಮಾಣಿಕ ನಡೆವಳಿಯ ಬುದ್ಧಿಪೂರ್ವಕವಾದ, ತಿಳಿದುಮಾಡಿದ ಪರಾಕಾಷ್ಠೆಯಾಗಿತ್ತು. ಉದಾಹರಣೆಗೆ, ಮರಿಯಳು ಯೇಸುವನ್ನು ಬೆಲೆಯುಳ್ಳ ತೈಲದಿಂದ ಅಭಿಷೇಕಿಸುವುದನ್ನು ಯೂದನು ಕಂಡಾಗ, ಅವನು ಕೇಳಿದ್ದು: “ಯಾಕೆ ಈ ತೈಲವನ್ನು ಮುನ್ನೂರು ಹಣಕ್ಕೆ ಮಾರಿ ಬಡವರಿಗೆ ಕೊಡಲಿಲ್ಲ?” ಅಪೊಸ್ತಲ ಯೋಹಾನನು ಕೂಡಿಸಿದ್ದು: “ಅವನು [ಯೂದನು] ಬಡವರಿಗೋಸ್ಕರ ಚಿಂತಿಸಿ ಇದನ್ನು ಹೇಳಲಿಲ್ಲ; ಅವನು ಕಳ್ಳನಾಗಿದ್ದು ತನ್ನ ವಶದಲ್ಲಿದ್ದ ಅವರ ಹಣದ ಚೀಲದಲ್ಲಿ ಹಾಕಿದ್ದನ್ನು ತಕ್ಕೊಳ್ಳುವವನಾಗಿದದ್ದರಿಂದಲೇ ಹೇಳಿದನು.” ಆಮೇಲೆ ಕೊಂಚ ಸಮಯದೊಳಗೆ ಯೂದನು ಯೇಸುವನ್ನು ಮೂವತ್ತು ಬೇಳ್ಳಿ ನಾಣ್ಯಗಳಿಗಾಗಿ ಹಿಡಿದುಕೊಟ್ಟನು. (ಯೋಹಾನ 12:1-6; ಮತ್ತಾಯ 26:6-16) ಯೂದನು ಮಾಡಿದ ತಪ್ಪಿಗಾಗಿ ಪರಿತಾಪಗೊಂಡನು ಮತ್ತು ಆತ್ಮಹತ್ಯ ಮಾಡಿಕೊಂಡನು, ನಿಜ. (ಮತ್ತಾಯ 27:1-5) ಆದರೆ ಅವನ ಬುದ್ಧಿಪೂರ್ವಕವಾದ, ಪಟ್ಟುಹಿಡಿದು ನಡೆಸಿದ ಸ್ವಾರ್ಥ ನಡೆವಳಿ ಮತ್ತು ವಿಶ್ವಾಸಘಾತುಕ ಕೃತ್ಯವು ಪವಿತ್ರಾತ್ಮನ ವಿರುದ್ಧವಾಗಿ ಅವನ ಪಾಪವನ್ನು ಪ್ರತಿಬಿಂಬಿಸಿತ್ತಾದ್ದರಿಂದ, ಅವನಿಗೆ ಕ್ಷಮಿಸಲ್ಪಡಲಿಲ್ಲ. ಯೇಸು ಯೂದನನ್ನು, “ನಾಶಕ್ಕೆ ಗುರಿಯಾದ ಆ ಮನುಷ್ಯನು” ಎಂದು ಕರೆದದ್ದು ಅದೆಷ್ಟು ಯಥೋಚಿತವು!—ಯೋಹಾನ 17:12; ಮಾರ್ಕ 3:29; 14:21.
ಅವರ ಪಾಪಗಳು ಕ್ಷಮಿಸಲ್ಪಟ್ಟವು
9. ಬತ್ಷೆಬೆಯ ಸಂಬಂಧದಲ್ಲಿ ದಾವೀದನ ಪಾಪಗಳನ್ನು ದೇವರು ಕ್ಷಮಿಸಿದ್ದೇಕೆ?
9 ಬುದ್ಧಿಪೂರ್ವಕವಾದ ಪಾಪಗಳು, ದೇವರಿಂದ ಕ್ಷಮಿಸಲ್ಪಟ್ಟವರ ತಪ್ಪುಗಳೊಂದಿಗೆ ತೀವ್ರ ವೈದೃಶ್ಯದಲ್ಲಿ ನಿಲ್ಲುತ್ತವೆ. ಇಸ್ರಾಯೇಲಿನ ಅರಸನಾದ ದಾವೀದನನ್ನು ದೃಷ್ಟಾಂತಕ್ಕಾಗಿ ತಕ್ಕೊಳ್ಳಿರಿ. ಅವನು ಊರೀಯನ ಪತ್ನಿಯಾದ ಬತ್ಷೆಬೆಯೊಂದಿಗೆ ವ್ಯಭಿಚಾರಗೈದನು, ಮತ್ತು ತದನಂತರ ಯುದ್ಧದಲ್ಲಿ ಊರೀಯನ ಮರಣವನ್ನು ಉಪಾಯದಿಂದ ನಿಯೋಜಿಸುವಂತೆ ಯೋವಾಬನಿಗೆ ಹೇಳಿಕೊಟ್ಟನು. (2 ಸಮುವೇಲ 11:1-27) ದಾವೀದನಿಗೆ ದೇವರು ಕರುಣೆಯನ್ನು ತೋರಿಸಿದ್ದೇಕೆ? ಪ್ರಾಮುಖ್ಯವಾಗಿ ರಾಜ್ಯದ ಒಡಂಬಡಿಕೆಯ ಕಾರಣದಿಂದ, ಆದರೆ ಸ್ವತಃ ದಾವೀದನ ಕರುಣಾಪೂರ್ಣತೆ ಮತ್ತು ಆತನ ನಿಜ ಪಶ್ಚಾತ್ತಾಪದಿಂದಾಗಿಯೂ.—1 ಸಮುವೇಲ 24:4-7; 2 ಸಮುವೇಲ 7:12; 12:13.
10. ಪೇತ್ರನು ಘೋರವಾದ ಪಾಪವನ್ನು ಮಾಡಿದಾಗ್ಯೂ, ದೇವರು ಅವನನ್ನು ಕ್ಷಮಿಸಿದ್ದೇಕೆ?
10 ಅಪೊಸ್ತಲನಾದ ಪೇತ್ರನನ್ನು ಸಹ ಪರಿಗಣಿಸಿರಿ. ಯೇಸುವನ್ನು ಪದೇ ಪದೇ ಅಲ್ಲಗಳೆದ ಮೂಲಕ ಅವನು ಗಂಭೀರವಾದ ಪಾಪವನ್ನು ಮಾಡಿದನು. ದೇವರು ಪೇತ್ರನನ್ನು ಕ್ಷಮಿಸಿದ್ದೇಕೆ? ಇಸ್ಕರಿಯೋತ ಯೂದನಿಗೆ ಅಸದೃಶವಾಗಿ, ಪೇತ್ರನು ದೇವರ ಮತ್ತು ಕ್ರಿಸ್ತನ ಸೇವೆಯಲ್ಲಿ ಪ್ರಾಮಾಣಿಕನಾಗಿದ್ದನು. ಈ ಅಪೊಸ್ತಲನ ಪಾಪವು ಮಾಂಸಿಕ ಬಲಹೀನತೆಯಿಂದಾಗಿತ್ತು, ಮತ್ತು ಅವನು ನಿಜವಾಗಿಯೂ ಪಶ್ಚಾತ್ತಾಪಪಟ್ಟನು ಮತ್ತು “ಬಹು ವ್ಯಥೆಪಟ್ಟು ಅತನ್ತು.”—ಮತ್ತಾಯ 26:69-75.
11. “ಪಶ್ಚಾತ್ತಾಪ” ದ ಅರ್ಥವಿವರಣೆಯನ್ನು ನೀವು ಹೇಗೆ ಮಾಡುವಿರಿ, ಮತ್ತು ಒಬ್ಬ ವ್ಯಕ್ತಿಯು ನಿಜವಾಗಿ ಪಶ್ಚಾತ್ತಾಪಿಯಾಗಿದ್ದರೆ ಅವನು ಏನು ಮಾಡತಕ್ಕದ್ದು?
11 ಒಬ್ಬನು ಘೋರವಾದ ಪಾಪಮಾಡಿದರೂ ಕೂಡ ಯೆಹೋವ ದೇವರ ಕ್ಷಮೆಯನ್ನು ಪಡೆಯ ಸಾಧ್ಯವಿದೆ ಎಂದು ಮೇಲಿನ ಉದಾಹರಣೆಗಳು ತೋರಿಸುತ್ತವೆ. ಆದರೆ ಕ್ಷಮಿಸಲ್ಪಡಲಿಕ್ಕಾಗಿ ಯಾವ ಮನೋಭಾವವು ಆವಶ್ಯಕವಾಗಿದೆ? ತಪ್ಪಿತಸ್ಥ ಕ್ರೈಸ್ತನು ದೇವರಿಂದ ಕ್ಷಮಿಸಲ್ಪಡಬೇಕಾದರೆ ನಿಜ ಪಶ್ಚಾತ್ತಾಪವು ಅತ್ಯಾವಶ್ಯಕ. ಪಶ್ಚಾತ್ತಾಪ ಪಡುವುದು ಎಂದರೆ, “ಹಿಂದಣ ತಪ್ಪುಗಳ ಪ್ರಾಯಶ್ಚಿತ್ತಕ್ಕಾಗಿ ಪಾಪವನ್ನು ತ್ಯಜಿಸುವುದು” ಅಥವಾ “ಒಬ್ಬನು ಮಾಡಿದ ಅಥವಾ ಮಾಡಲು ತಪ್ಪಿದ ವಿಷಯಕ್ಕಾಗಿ ವಿಷಾದಿಸುವುದು ಅಥವಾ ಪರಿತಾಪ ಪಡುವುದು.” (ವೆಬ್ಸ್ಟರ್ಸ್ ತರ್ಡ್ ನ್ಯೂ ಇಂಟರ್ನ್ಯಾಷನಲ್ ಡಿಕ್ಷನರಿ) ನಿಜವಾಗಿಯೂ ಪಶ್ಚಾತ್ತಾಪಪಟ್ಟ ಒಬ್ಬ ವ್ಯಕ್ತಿಯು, ಯೆಹೋವನ ನಾಮ ಮತ್ತು ಸಂಸ್ಥೆಯ ಮೇಲೆ ಅವನ ಪಾಪವು ತಂದ ನಿಂದೆ, ದುಃಖ, ಅಥವಾ ಸಮಸ್ಯೆಗಳಿಗಾಗಿ ತೀವ್ರ ಪರಿತಾಪವನ್ನು ತೋರಿಸುವನು. ಪಶ್ಚಾತ್ತಾಪಿಯಾದ ತಪ್ಪಿತಸ್ಥನು ಪಶ್ಚಾತ್ತಾಪಕ್ಕೆ ಯೋಗ್ಯವಾದ ಕೃತ್ಯಗಳನ್ನು ನಡಿಸುತ್ತಾ, ಅನುರೂಪವಾದ ಫಲವನ್ನು ಸಹ ಉತ್ಪಾದಿಸುವನು. (ಮತ್ತಾಯ 3:8; ಅ. ಕೃತ್ಯಗಳು 26:20) ದೃಷ್ಟಾಂತಕ್ಕಾಗಿ, ಅವನು ಯಾರನ್ನಾದರೂ ವಂಚಿಸಿದ್ದರೆ, ಆ ನಷ್ಟವನ್ನು ಭರ್ತಿಗೊಳಿಸುವುದಕ್ಕಾಗಿ ಅವನು ನ್ಯಾಯವಾದ ಹೆಜ್ಜೆಗಳನ್ನು ತಕ್ಕೊಳ್ಳುವನು. (ಲೂಕ 19:8) ಅಂಥ ಒಬ್ಬ ಪಶ್ಚಾತ್ತಾಪಿ ಕ್ರೈಸ್ತನಿಗೆ ಯೆಹೋವನು ಮಹಾಕೃಪೆಯಲ್ಲಿ ಕ್ಷಮಿಸುವನೆಂದು ಭರವಸೆಯಿಡಲು ನ್ಯಾಯವಾದ ಶಾಸ್ತ್ರೀಯ ಕಾರಣಗಳಿವೆ. ಅವುಗಳು ಯಾವುವು?
ದೇವರ ಕ್ಷಮಾಪಣೆಯಲ್ಲಿ ಭರವಸೆಯಿಡಲು ಕಾರಣಗಳು
12. ಪಶ್ಚಾತ್ತಾಪಿಯಾದ ವ್ಯಕ್ತಿಯು ಕ್ಷಮಾಪಣೆಗಾಗಿ ಪ್ರಾರ್ಥಿಸಶಕ್ತನೆಂದು ಕೀರ್ತನೆ 25:11 ಯಾವ ಆಧಾರದ ಮೇಲೆ ಸೂಚಿಸುತ್ತದೆ?
12 ಒಬ್ಬ ಪಶ್ಚಾತ್ತಾಪಿ ತಪ್ಪಿತಸ್ಥನು ಯೆಹೋವನ ನಾಮದ ಆಧಾರದಲ್ಲಿ ಕ್ಷಮಾಪಣೆಗಾಗಿ ಭರವಸೆಯಿಂದ ಪ್ರಾರ್ಥಿಸಬಹುದು. ದಾವೀದನು ಬೇಡಿದ್ದು: “ಯೆಹೋವನೇ, ನನ್ನ ಪಾಪವು ಬಹು ಘೋರವಾಗಿದೆ; ಆದರೂ ನಿನ್ನ ಹೆಸರಿನ ನಿಮಿತ್ತ ಅದನ್ನು ಕ್ಷಮಿಸು.” (ಕೀರ್ತನೆ 25:11) ಅಂಥ ಪ್ರಾರ್ಥನೆ, ತಪ್ಪಿತಸ್ಥನು ದೇವರ ನಾಮದ ಮೇಲೆ ತಂದ ಯಾವುದೇ ನಿಂದೆಗಾಗಿ ಪಶ್ಚಾತ್ತಾಪದ ಸಮೇತ, ಭವಿಷ್ಯತ್ತಿನಲ್ಲಿನ ಘೋರ ಪಾಪಕ್ಕೆ ಒಂದು ತಡೆಗಟ್ಟಾಗಿಯೂ ಕಾರ್ಯನಡಿಸಬೇಕು.
13. ದೈವಿಕ ಕ್ಷಮಾಪಣೆಯಲ್ಲಿ ಪ್ರಾರ್ಥನೆ ಯಾವ ಪಾತ್ರವನ್ನು ವಹಿಸುತ್ತದೆ?
13 ಯೆಹೋವ ದೇವರು ತಪ್ಪಿತಸ್ಥ ಆದರೆ ಪಶ್ಚಾತ್ತಾಪ ಪಡುವ ತನ್ನ ಸೇವಕರ ಹೃದಯಪೂರ್ವಕ ಪ್ರಾರ್ಥನೆಗಳನ್ನು ಉತ್ತರಿಸುತ್ತಾನೆ. ದೃಷ್ಟಾಂತಕ್ಕಾಗಿ, ಬತ್ಷೆಬೆಯ ಸಂಬಂಧದಲ್ಲಿ ತನ್ನ ಪಾಪಗಳ ಘೋರತೆಯನ್ನು ಅರಿತ ಅನಂತರ ಹೃದಯಪೂರ್ವಕವಾಗಿ ಪ್ರಾರ್ಥಿಸಿದ ದಾವೀದನನ್ನು ಯೆಹೋವನು ಬೇಕುಬೇಕೆಂದು ದುರ್ಲಕ್ಷಿಸಲಿಲ್ಲ. ವಾಸ್ತವದಲ್ಲಿ, ಕೀರ್ತನೆ 51 ರಲ್ಲಿ ದಾವೀದನ ಮಾತುಗಳು ಯಾಚಕನ ಅನೇಕ ಮನೋಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಆತನು ಬೇಡಿಕೊಂಡದ್ದು: “ಪ್ರೀತಿಸ್ವರೂಪನಾದ ದೇವರೇ, ನನ್ನನ್ನು ಕರುಣಿಸು; ಕರುಣಾನಿಧಿಯೇ, ನನ್ನ ದ್ರೋಹವನ್ನೆಲ್ಲಾ ಅಳಿಸಿಬಿಡು. ನನ್ನ ಪಾಪವನ್ನು ಸಂಪೂರ್ಣವಾಗಿ ತೊಳೆದುಬಿಡು; ನನ್ನ ದೋಷವನ್ನು ಪರಿಹರಿಸಿ ನನ್ನನ್ನು ಶುದ್ಧಿಗೊಳಿಸು. ಕುಗ್ಗಿದ ಮನಸ್ಸೇ ದೇವರಿಗೆ ಇಷ್ಟಯಜ್ಞ; ದೇವರೇ, ಪಶ್ಚಾತ್ತಾಪದಿಂದ ಜಜ್ಜಿಹೋದ ಮನಸ್ಸನ್ನು ನೀನು ತಿರಸ್ಕರಿಸುವುದಿಲ್ಲ.”—ಕೀರ್ತನೆ 51:1, 2, 17.
14. ಯೇಸುವಿನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯಿಡುವವರನ್ನು ದೇವರು ಕ್ಷಮಿಸುತ್ತಾನೆಂಬದಕ್ಕೆ ಶಾಸ್ತ್ರವಚನಗಳು ಹೇಗೆ ಆಶ್ವಾಸನ ಕೊಡುತ್ತವೆ?
14 ಯೇಸುವಿನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆ ಇಡುವವರನ್ನು ದೇವರು ಕ್ಷಮಿಸುತ್ತಾನೆ. ಪೌಲನು ಬರೆದದ್ದು: “ಈತನು ನಮಗೋಸ್ಕರ ತನ್ನ ರಕ್ತವನ್ನು ಸುರಿಸಿದ್ದರಿಂದ ನಮ್ಮ ಅಪರಾಧಗಳು ಪರಿಹಾರವಾಗಿ ನಮಗೆ ಬಿಡುಗಡೆಯಾಯಿತು.” (ಎಫೆಸ 1:7) ತದ್ರೀತಿಯ ಅರ್ಥದೊಂದಿಗೆ, ಅಪೊಸ್ತಲ ಯೋಹಾನನು ಬರೆದದ್ದು: “ನನ್ನ ಪ್ರಿಯರಾದ ಮಕ್ಕಳೇ, ನೀವು ಪಾಪಮಾಡದಂತೆ ಈ ಮಾತುಗಳನ್ನು ನಿಮಗೆ ಬರೆಯುತ್ತೇನೆ. ಯಾವನಾದರೂ ಪಾಪಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನೆಂಬ ಸಹಾಯಕನು ನಮಗಿದ್ದಾನೆ. ಆತನು ನಮ್ಮ ಪಾಪಗಳನ್ನು ನಿವಾರಣಮಾಡುವ ಯಜ್ಞವಾಗಿದ್ದಾನೆ; ನಮ್ಮ ಪಾಪಗಳನ್ನು ಮಾತ್ರವಲ್ಲದೆ ಸಮಸ್ತ ಲೋಕದ ಪಾಪಗಳನ್ನು ಸಹ ನಿವಾರಣಮಾಡುತ್ತಾನೆ.”—1 ಯೋಹಾನ 2:1, 2.
15. ದೇವರ ಕರುಣೆಯನ್ನು ಆನಂದಿಸುತ್ತಾ ಮುಂದರಿಯಲು, ಒಬ್ಬ ಪಶ್ಚಾತ್ತಾಪಿ ಪಾಪಿಯು ಏನು ಮಾಡಲೇಬೇಕು?
15 ಯೆಹೋವನ ಕರುಣೆಯು ಒಬ್ಬ ಪಶ್ಚಾತ್ತಾಪಿಯಾದ ತಪ್ಪಿತಸ್ಥನಿಗೆ, ತನಗೆ ಕ್ಷಮಿಸಲ್ಪಡಸಾಧ್ಯವಿದೆಂಬ ಆತ್ಮವಿಶ್ವಾಸಕ್ಕೆ ಒಂದು ಆಧಾರವನ್ನು ಕೊಡುತ್ತದೆ. ನೆಹೆಮೀಯನು ಹೇಳಿದ್ದು: “ನೀನಾದರೋ ಪಾಪಗಳನ್ನು ಕ್ಷಮಿಸುವವನೂ ಕನಿಕರದಯೆಯುಳ್ಳವನೂ ದೀರ್ಘಶಾಂತನೂ ಕೃಪಾಳುವೂ ಆಗಿರುವ ದೇವರು.” (ನೆಹೆಮೀಯ 9:17; ಹೋಲಿಸಿರಿ ವಿಮೋಚನಕಾಂಡ 34:6, 7.) ನಿಶ್ಚಯವಾಗಿ, ದೈವಿಕ ಕರುಣೆಯನ್ನು ಆನಂದಿಸುತ್ತಾ ಮುಂದರಿಯಲಿಕ್ಕೆ, ಪಾಪಿಯು ದೇವರ ನಿಯಮವನ್ನು ಪಾಲಿಸಲು ಪ್ರಯಾಸಪಡಲೇಬೇಕು. ಕೀರ್ತನೆಗಾರನು ಹೇಳಿದ ಪ್ರಕಾರ: “ನಾನು ಬದುಕುವಂತೆ ನಿನ್ನ ಕರುಣೆಯು ನನಗೆ ದೊರೆಯಲಿ. ನಿನ್ನ ಧರ್ಮಶಾಸ್ತ್ರವೇ ನನ್ನ ಆನಂದವಾಗಿದೆ. ಯೆಹೋವನೇ, ನಿನ್ನ ಕೃಪಾಕಾರ್ಯಗಳು ಬಹಳವಾಗಿವೆ; ನಿನ್ನ ವಿಧಿಗಳಿಗೆ ತಕ್ಕಂತೆ ನನ್ನನ್ನು ಚೈತನ್ಯಗೊಳಿಸು.”—ಕೀರ್ತನೆ 119:77, 156.
16. ಯೆಹೋವನು ನಮ್ಮ ಪಾಪಪೂರ್ಣ ಸ್ಥಿತಿಯನ್ನು ಲಕ್ಷ್ಯಕ್ಕೆ ತರುತ್ತಾನೆಂಬ ನಿಜತ್ವದಲ್ಲಿ ಯಾವ ಆದರಣೆಯು ಇದೆ?
16 ಯೆಹೋವನು ನಮ್ಮ ಪಾಪಪೂರ್ಣ ಸ್ಥಿತಿಯನ್ನು ಲಕ್ಷ್ಯಕ್ಕೆ ತರುತ್ತಾನೆಂಬ ನಿಜತ್ವವು ಸಹ ಒಬ್ಬ ಪಶ್ಚಾತ್ತಾಪಿ ತಪ್ಪಿತಸ್ಥನಿಗೆ ಆದರಣೆಯನ್ನು ಮತ್ತು ದೇವರು ತನ್ನನ್ನು ಕ್ಷಮಿಸುವನೆಂಬ ಭರವಸೆಯೊಂದಿಗೆ ಪ್ರಾರ್ಥಿಸುವುದಕ್ಕೆ ಕಾರಣವನ್ನು ಕೊಡುತ್ತದೆ. (ಕೀರ್ತನೆ 51:5; ರೋಮಾಪುರ 5:12) ಕೀರ್ತನೆಗಾರ ದಾವೀದನು ಸಂತೈಸುವ ಆಶ್ವಾಸನೆಯನ್ನು ಕೊಡುತ್ತಾ ಘೋಷಿಸಿದ್ದು: “ಆತನು [ಯೆಹೋವ ದೇವರು] ನಮ್ಮ ಪಾಪಗಳಿಗೆ ಸರಿಯಾಗಿ ನಮ್ಮನ್ನು ಶಿಕ್ಷಿಸಲಿಲ್ಲ; ನಮ್ಮ ಅಪರಾಧಗಳಿಗೆ ತಕ್ಕಂತೆ ದಂಡಿಸಲಿಲ್ಲ. ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೂ ಆತನಲ್ಲಿ ಭಯಭಕ್ತಿಯುಳ್ಳವರ ಮೇಲೆ ಆತನ ಕೃಪೆಯು ಅಷ್ಟು ಅಪಾರವಾಗಿದೆ. ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರವೋ ನಮ್ಮ ದ್ರೋಹಗಳನ್ನು ನಮ್ಮಿಂದ ತೆಗೆದು ಅಷ್ಟುದೂರ ಮಾಡಿದ್ದಾನೆ. ತಂದೆಯು ಮಕ್ಕಳನ್ನು ಕನಿಕರಿಸುವಂತೆ ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕನಿಕರಿಸುತ್ತಾನೆ. ಆತನು ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂದು ನೆನಪುಮಾಡಿಕೊಳ್ಳುತ್ತಾನೆ.” (ಕೀರ್ತನೆ 103:10-14) ಹೌದು, ನಮ್ಮ ಸ್ವರ್ಗೀಯ ತಂದೆಯು ಒಬ್ಬ ಮಾನವ ತಂದೆಗಿಂತಲೂ ಹೆಚ್ಚು ದಯಾಳುವೂ ಕನಿಕರವುಳ್ಳವನೂ ಆಗಿರುತ್ತಾನೆ.
17. ಕ್ಷಮಾಪಣೆಯ ಮೇಲೆ ಒಬ್ಬನ ಹಿಂದಣ ನಂಬಿಗಸ್ತ ದೇವರ ಸೇವೆಗೆ ಯಾವ ಸಂಬಂಧವಿದೆ?
17 ಒಬ್ಬ ಪಶ್ಚಾತ್ತಾಪಿ ಪಾಪಿಯು ಯೆಹೋವನು ಅವನ ಹಿಂದಣ ನಂಬಿಗಸ್ತ ಸೇವೆಯ ದಾಖಲೆಯನ್ನು ಅಸಡ್ಡೆಮಾಡನೆಂಬ ಭರವಸೆಯಿಂದ ಕ್ಷಮಾಪಣೆಗಾಗಿ ಪ್ರಾರ್ಥಿಸಬಲ್ಲನು. ನೆಹೆಮೀಯನು ತನ್ನ ಪಾಪಕ್ಕಾಗಿ ಕ್ಷಮೆಯನ್ನು ಕೋರಿರಲಿಲ್ಲ, ಆದರೂ ಅವನು ಹೀಗಂದಿದ್ದನು: “ನನ್ನ ದೇವರೇ, ನನ್ನ ಹಿತಕ್ಕಾಗಿ ಇದನ್ನು ನೆನಪುಮಾಡಿಕೋ.” (ನೆಹೆಮೀಯ 13:31) ಪಶ್ಚಾತ್ತಾಪಿಯಾದ ಒಬ್ಬ ಕ್ರೈಸ್ತನು ಈ ಮಾತುಗಳಲ್ಲಿ ಆದರಣೆಯನ್ನು ಕಂಡುಕೊಳ್ಳಬಹುದು: “ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.”—ಇಬ್ರಿಯ 6:10.
ಹಿರೀ ಪುರುಷರಿಂದ ಸಹಾಯ
18. ಒಬ್ಬ ಕ್ರೈಸ್ತನ ಪಾಪವು ಅವನನ್ನು ಆತ್ಮಿಕವಾಗಿ ಅಸ್ವಸ್ಥನನ್ನಾಗಿ ಮಾಡಿದ್ದಲ್ಲಿ ಏನು ಮಾಡಬೇಕು?
18 ಒಬ್ಬ ಕ್ರೈಸ್ತನಿಗೆ ಆತ್ಮಿಕ ಪರದೈಸದಲ್ಲಿ ಉಳಿಯಲು ತಾನು ಅಯೋಗ್ಯನು ಅಥವಾ ಅವನ ಪಾಪವು ಅವನನ್ನು ಆತ್ಮಿಕವಾಗಿ ರೋಗಿಯನ್ನಾಗಿ ಮಾಡಿರುವುದರಿಂದ ಪ್ರಾರ್ಥನೆಮಾಡಲು ಅಶಕ್ತನು ಎಂಬ ಅನಿಸಿಕೆಯಾದರೆ ಆಗೇನು? “ಅವನು ಸಭೆಯ ಹಿರಿಯರನ್ನು ಕರೇಕಳುಹಿಸಲಿ; ಅವರು ಕರ್ತನ [ಯೆಹೋವನ, NW] ಹೆಸರಿನಿಂದ ಅವನಿಗೆ ಎಣ್ಣೆ ಹಚ್ಚಿ ಅವನಿಗೋಸ್ಕರ ದೇವರನ್ನು ಪ್ರಾರ್ಥಿಸಲಿ,” ಎಂದು ಬರೆದಿದ್ದಾನೆ ಶಿಷ್ಯ ಯಾಕೋಬನು. “ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ರೋಗಿಯನ್ನು ರಕ್ಷಿಸುವುದು; ಕರ್ತನು [ಯೆಹೋವನು, NW] ಅವನನ್ನು ಎಬ್ಬಿಸುವನು; ಮತ್ತು ಪಾಪ ಮಾಡಿದವನಾಗಿದ್ದರೆ ಅದು ಪರಿಹಾರವಾಗುವದು.” ಹೌದು, ಒಳ್ಳೆಯ ಆತ್ಮಿಕ ಆರೋಗ್ಯಕ್ಕೆ ಪುನಃಸ್ಥಾಪಿಸುವ ನಿರೀಕ್ಷೆಗಳಲ್ಲಿ ಸಭಾ ಹಿರಿಯರು, ಒಬ್ಬ ಪಶ್ಚಾತ್ತಾಪಿ ಜೊತೆ ವಿಶ್ವಾಸಿಯೊಂದಿಗೆ ಮತ್ತು ಅವನಿಗಾಗಿ, ಪರಿಣಾಮಕಾರಿಯಾಗಿ ಪ್ರಾರ್ಥನೆ ಮಾಡಬಲ್ಲರು.—ಯಾಕೋಬ 5:14-16.
19. ಒಬ್ಬ ವ್ಯಕ್ತಿಯು ಬಹಿಷ್ಕೃತನಾಗಿದ್ದರೆ, ಕ್ಷಮಿಸಲ್ಪಡಲು ಮತ್ತು ಪುನಃಸ್ಥಾಪನೆ ಹೊಂದಲು ಅವನೇನು ಮಾಡಬೇಕು?
19 ಒಂದುವೇಳೆ ಒಂದು ನ್ಯಾಯ ನಿರ್ಣಾಯಕ ಕಮಿಟಿಯು ಪಶ್ಚಾತ್ತಾಪಪಡದ ಒಬ್ಬ ಪಾಪಿಯನ್ನು ಬಹಿಷ್ಕಾರ ಮಾಡಿದರೂ ಕೂಡ, ಅವನು ಒಂದು ಅಕ್ಷಮ್ಯ ಪಾಪವನ್ನು ಮಾಡಿದ್ದಾನೆಂದು ಅದರ ಅರ್ಥವಲ್ಲ. ಆದರೂ ಕ್ಷಮಿಸಲ್ಪಡಲು ಮತ್ತು ಪುನಃಸ್ಥಾಪಿಸಲ್ಪಡಲು, ಅವನು ದೀನತೆಯಿಂದ ದೇವರ ನಿಯಮಗಳಿಗೆ ವಿಧೇಯನಾಗಬೇಕು, ಪಶ್ಚಾತ್ತಾಪಕ್ಕೆ ಯೋಗ್ಯವಾದ ಫಲಗಳನ್ನು ಉತ್ಪಾದಿಸಬೇಕು, ಮತ್ತು ಪುನಃಸ್ಥಾಪನೆಗಾಗಿ ಹಿರಿಯರಿಗೆ ಅರ್ಜಿಮಾಡಬೇಕು. ಜಾರನಾದ ಒಬ್ಬ ವ್ಯಕ್ತಿಯು ಪುರಾತನ ಕೊರಿಂಥ ಸಭೆಯಿಂದ ಬಹಿಷ್ಕರಿಸಲ್ಪಟ್ಟ ಮೇಲೆ, ಪೌಲನು ಬರೆದದ್ದು: “ಇಂಥವನಿಗೆ ನಿಮ್ಮಲ್ಲಿ ಹೆಚ್ಚಾದ ಜನರಿಂದುಂಟಾದ ಆ ಶಿಕ್ಷೆಯೇ ಸಾಕು. ಇನ್ನೂ ಅವನನ್ನು ಶಿಕ್ಷಿಸದೆ ಮನ್ನಿಸಿರಿ, ಸಂತೈಸಿರಿ. ಇಲ್ಲವಾದರೆ ಅವನು ಅಧಿಕವಾದ ದುಃಖದಲ್ಲಿ ಮುಳುಗಿ ಹೋದಾನು. ಆದದರಿಂದ ಅವನಿಗೆ ನಿಮ್ಮ ಪ್ರೀತಿಯನ್ನು ನಿಶ್ಚಯಪಡಿಸಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.”—2 ಕೊರಿಂಥ 2:6-8; 1 ಕೊರಿಂಥ 5:1-13.
ದೇವರು ಬಲವನ್ನು ಕೊಡುತ್ತಾನೆ
20, 21. ಅಕ್ಷಮ್ಯ ಪಾಪವನ್ನು ಗೈದ ಸಂಭವನೀಯತೆಯ ಕುರಿತು ಚಿಂತೆಯನ್ನು ಅನುಭವಿಸುವ ಒಬ್ಬ ವ್ಯಕ್ತಿಗೆ ಯಾವುದು ಸಹಾಯಕಾರಿಯಾಗಬಹುದು?
20 ಅನಾರೋಗ್ಯ ಅಥವಾ ಒತ್ತಡದಂಥ ವಿಷಯಗಳು ಅಕ್ಷಮ್ಯ ಪಾಪವನ್ನು ಗೈದದರ ಕುರಿತಾಗಿ ಚಿಂತೆಯನ್ನುಂಟು ಮಾಡುತ್ತಿದ್ದರೆ, ಸಾಕಷ್ಟು ವಿಶ್ರಾಂತಿ ಮತ್ತು ನಿದ್ದೆಯನ್ನು ಪಡೆಯುವುದು ಸಹಾಯಕಾರಿಯಾಗಬಹುದು. ಆದರೂ ವಿಶೇಷವಾಗಿ, ಪೇತ್ರನ ಮಾತುಗಳನ್ನು ನೀವು ನೆನಪಿಸಿಕೊಳ್ಳಬೇಕು: “ನಿಮ್ಮ ಚಿಂತೆಯನ್ನೆಲ್ಲಾ ಆತನ [ದೇವರ] ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ.” ಮತ್ತು ಸೈತಾನನು ನಿಮ್ಮನ್ನೆಂದೂ ನಿರಾಶೆಗೊಳಿಸುವಂತೆ ಬಿಡಬೇಡಿರಿ, ಯಾಕಂದರೆ ಪೇತ್ರನು ಕೂಡಿಸಿದ್ದು: “ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ; ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ. ನೀವು ನಂಬಿಕೆಯಲ್ಲಿ ದೃಢವಾಗಿದ್ದು ಅವನನ್ನು ಎದುರಿಸಿರಿ; ಲೋಕದಲ್ಲಿರುವ ನಿಮ್ಮ ಸಹೋದರರೂ ಅಂಥ ಬಾಧೆಗಳನ್ನೇ ಅನುಭವಿಸುತ್ತಿದ್ದಾರೆಂದು ನಿಮಗೆ ತಿಳಿದದೆಯಲ್ಲಾ. . . . ಕೃಪಾಪೂರ್ಣನಾದ ದೇವರು ತಾನೇ ನೀವು ಸ್ವಲ್ಪಕಾಲ ಬಾಧೆಪಟ್ಟ ಮೇಲೆ ನಿಮ್ಮನ್ನು ಯೋಗ್ಯಸ್ಥಿತಿಗೆ ತಂದು ನೆಲೆಗೊಳಿಸಿ ಬಲಪಡಿಸುವನು.”—1 ಪೇತ್ರ 5:6-10.
21 ಹೀಗೆ ನೀವು ಪಶ್ಚಾತ್ತಾಪಿಗಳಾದರೂ ಅಕ್ಷಮ್ಯ ಪಾಪಕ್ಕೆ ದೋಷಿಗಳಾಗಿದ್ದೀರೆಂಬ ಭಯವುಳ್ಳವರಾಗಿದ್ದರೆ, ದೇವರ ಮಾರ್ಗಗಳು ವಿವೇಕಪ್ರದವೂ, ನ್ಯಾಯವೂ ಮತ್ತು ಪ್ರೀತಿಯುಳ್ಳವುಗಳೂ ಆಗಿವೆಯೆಂಬದನ್ನು ನೆನಪಿನಲ್ಲಿಡಿರಿ. ಆದುದರಿಂದ, ನಂಬಿಕೆಯಲ್ಲಿ ಆತನಿಗೆ ಪ್ರಾರ್ಥಿಸಿರಿ. “ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ” ಮೂಲಕ ಆತನು ಒದಗಿಸುವ ಆತ್ಮಿಕ ಅಹಾರವನ್ನು ಸೇವಿಸುತ್ತಾ ಇರ್ರಿ. (ಮತ್ತಾಯ 24:45-47) ಜೊತೆ ವಿಶ್ವಾಸಿಗಳೊಂದಿಗೆ ಸಹವಸಿಸಿರಿ ಮತ್ತು ಕ್ರೈಸ್ತ ಶುಶ್ರೂಷೆಯಲ್ಲಿ ಕ್ರಮವಾಗಿ ಭಾಗವಹಿಸಿರಿ. ಇದು ನಿಮ್ಮ ನಂಬಿಕೆಯನ್ನು ಬಲಪಡಿಸುವುದು ಮತ್ತು ದೇವರು ನಿಮ್ಮ ಪಾಪವನ್ನು ಕ್ಷಮಿಸಿರದಿರಬಹುದು ಎಂಬ ಯಾವುದೇ ಭಯದಿಂದ ನಿಮ್ಮನ್ನು ಮುಕ್ತಗೊಳಿಸುವುದು.
22. ಮುಂದೆ ನಾವು ಏನನ್ನು ಚರ್ಚಿಸಲಿರುವೆವು?
22 ಯೆಹೋವನು ಮಹಾ ಕೃಪೆಯಿಂದ ಕ್ಷಮಿಸುತ್ತಾನೆಂಬ ತಿಳುವಳಿಕೆಯಿಂದ ಆತ್ಮಿಕ ಪರದೈಸದ ನಿವಾಸಿಗಳು ಆದರಣೆಯನ್ನು ಪಡೆಯ ಸಾಧ್ಯವಿದೆ. ಆದರೂ ಅವರ ಜೀವನವು ಇಂದು ಸಂಕಷ್ಟರಹಿತವಾಗಿ ಇರುವುದಿಲ್ಲ. ಪ್ರಾಯಶಃ ಒಬ್ಬ ಪ್ರಿಯ ವ್ಯಕ್ತಿಯು ಸತ್ತಿರುವ ಅಥವಾ ಆಪ್ತ ಮಿತ್ರನು ವಿಷಮ ರೋಗದಲ್ಲಿರುವ ಕಾರಣ ಅವರು ಕುಗ್ಗಿಹೋಗಿರಬಹುದು. ನಾವು ನೋಡಲಿರುವ ಪ್ರಕಾರ, ಇವುಗಳಲ್ಲಿ ಮತ್ತು ಇತರ ಸನ್ನಿವೇಶಗಳಲ್ಲಿ, ಯೆಹೋವನು ತನ್ನ ಪವಿತ್ರಾತ್ಮದ ಮೂಲಕವಾಗಿ ತನ್ನ ಜನರಿಗೆ ಸಹಾಯಮಾಡುತ್ತಾನೆ ಮತ್ತು ನಡಿಸುತ್ತಾನೆ. (w92 9/15)
ನಿಮ್ಮ ಉತ್ತರಗಳೇನು?
▫ ‘ಯೆಹೋವನು ಮಹಾಕೃಪೆಯಿಂದ ಕ್ಷಮಿಸುತ್ತಾನೆ’ ಎಂಬದಕ್ಕೆ ಯಾವ ರುಜುವಾತು ಇದೆ?
▫ ಯಾವ ಪಾಪಕ್ಕೆ ಕ್ಷಮಾಪಣೆ ಇಲ್ಲ?
▫ ಯಾವ ಪರಿಸ್ಥಿತಿಗಳ ಕೆಳಗೆ ಒಬ್ಬನ ಪಾಪಗಳು ಕ್ಷಮಿಸಲ್ಪಡುತ್ತವೆ?
▫ ಪಶ್ಚಾತ್ತಾಪಿ ತಪ್ಪಿತಸ್ಥರು ದೇವರ ಕ್ಷಮಾಪಣೆಯಲ್ಲಿ ಭರವಸೆಯಿಡಬಲ್ಲರೇಕೆ?
▫ ಪಶ್ಚಾತ್ತಾಪಿ ತಪ್ಪಿತಸ್ಥರಿಗೆ ಯಾವ ಸಹಾಯವು ದೊರೆಯುತ್ತದೆ?
[ಪುಟ 10 ರಲ್ಲಿರುವ ಚಿತ್ರ]
ದಾವೀದ ಮತ್ತು ಪೇತ್ರರು ಕ್ಷಮಿಸಲ್ಪಟ್ಟರಾದರೂ ಇಸ್ಕರಿಯೋತ ಯೂದನು ಏಕೆ ಕ್ಷಮಿಸಲ್ಪಡಲಿಲವ್ಲೆಂದು ನಿಮಗೆ ಗೊತ್ತೋ?
[ಪುಟ 12 ರಲ್ಲಿರುವ ಚಿತ್ರ]
ಒಬ್ಬ ಕ್ರೈಸ್ತನಿಗೆ ಆತ್ಮಿಕವಾಗಿ ನೆರವಾಗಲು ಸಭಾ ಹಿರಿಯರ ಸಹಾಯವು ಹೆಚ್ಚನ್ನು ಮಾಡಬಲ್ಲದು