ರಾಜ್ಯ ಘೋಷಕರ ವರದಿ
ಪರುಗೆಯ್ವಲ್ಲಿ ನೇಮಿಸಲ್ಪಡದ ಕ್ಷೇತ್ರದ ಸೇವೆಯು ಫಲಕೊಡುತ್ತಿದೆ
ವಾಚ್ ಟವರ್ ಸೊಸೈಟಿಯ ಪರುಗ್ವೆ ಬ್ರಾಂಚ್ ಆಫೀಸಿಗೆ ತನ್ನೆಲ್ಲಾ ಕ್ಷೇತ್ರದಲ್ಲಿ ರಾಜ್ಯದ ಸುವಾರ್ತೆಯನ್ನು ಸಾರುವ ಅಗತ್ಯತೆಯ ಪೂರ್ಣ ಅರಿವಿದೆ. (ಅ.ಕೃತ್ಯಗಳು 1:8) ಬರಲಿರುವ “ಮಹಾ ಸಂಕಟ” ದಲ್ಲಿ ಈ ದುಷ್ಟ ವ್ಯವಸ್ಥೆಗೆ ಯೆಹೋವನು ಅಂತ್ಯವನ್ನು ತರುವ ಮುಂಚಿತವಾಗಿ ಎಲ್ಲರೂ ರಾಜ್ಯದ ಕುರಿತು ಕಲಿಯುವ ಮತ್ತು ಯೆಹೋವನನ್ನು ಸೇವಿಸುವ ಸಮಯವು ಇದಾಗಿದೆ. (ಮತ್ತಾಯ 24:21, 22) ಸಭೆಗೆ ನೇಮಿಸಲ್ಪಡದ ಕ್ಷೇತ್ರಗಳಲ್ಲಿರುವ ಜನರ ಸಹಾಯಕ್ಕಾಗಿ ಏನು ಮಾಡಲ್ಪಡುತ್ತಿದೆ ಎಂಬದನ್ನು ಕೆಳಗಿನ ಅನುಭವಗಳು ತೋರಿಸುತ್ತವೆ. ಬ್ರಾಂಚ್ ವರದಿಸುವುದು:
ನೇಮಿಸಲ್ಪಡದ ಎಲ್ಲಾ ಕ್ಷೇತ್ರಗಳನ್ನು ತಾತ್ಕಾಲಿಕ ವಿಶೇಷ ಪಯನೀಯರರುಗಳಿಂದ ಆವರಿಸಲು ಏರ್ಪಾಡನ್ನು ಮಾಡಲಾಯಿತು. 1990 ರ ಸೇವಾ ವರ್ಷದಲ್ಲಿ ನವಂಬರದಿಂದ ಜನವರಿಯ ತನಕದ ತಿಂಗಳುಗಳಲ್ಲಿ 39 ಸಹೋದರ ಮತ್ತು ಸಹೋದರಿಯರು ಎಲ್ಲಿ ಇನ್ನೂ ರಾಜ್ಯ ಪ್ರಚಾರಕರಿಲ್ಲವೋ ಅಂಥ ಒಟ್ಟು ನೂರು ಶಹರಗಳನ್ನು ಮತ್ತು ಚಿಕ್ಕ ಊರುಗಳನ್ನು ಆವರಿಸಿದರು. ಅವರು ಒಟ್ಟಿಗೆ 6,119 ಪುಸ್ತಕಗಳನ್ನು, 4,262 ಕಿರು ಪುಸ್ತಕಗಳನ್ನು ಮತ್ತು 5,144 ಪತ್ರಿಕೆಗಳನ್ನು ಹಂಚಲು ಶಕ್ತರಾದರು. ಈ ಚಟುವಟಿಕೆಯ ಫಲಿತಾಂಶವಾಗಿ ಪ್ರಚಾರಕರ ಹೊಸ ಗುಂಪುಗಳು ರೂಪಿಸಲ್ಪಡುತ್ತಾ ಇವೆ.
▫ ಒಬ್ಬ ಸ್ತ್ರೀಯು ನೇಮಿಸಲ್ಪಡದ ಕ್ಷೇತ್ರದಲ್ಲಿ ಸೇವೆ ಮಾಡುತ್ತಿದ್ದ ಒಬ್ಬ ಪಯನೀಯರ ಸಹೋದರಿಯಿಂದ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕವನ್ನು ಪಡಕೊಂಡಳು. ಪಯನೀಯರಳು ಅವಳಿಗೆ ಒಂದು ಬೈಬಲ್ ಅಧ್ಯಯನವನ್ನು ನೀಡಿದಾಗ ಅವಳದನ್ನು ಸಂತೋಷದಿಂದ ಸ್ವೀಕರಿಸಿದಳು. ಪಯನೀಯರಳು ಹಿಂದೆ ಬಂದಾಗ, ಅವಳಿಗಾಗಿ ಆ ಮಹಿಳೆ ಮಾತ್ರವಲ್ಲದೆ ಅವಳ ಗಂಡ ಮತ್ತು ಅವರ ಹತ್ತು ಮಂದಿ ಮಕ್ಕಳೂ ಕಾಯುತ್ತಿದ್ದರು. ಮುಂದಿನ ಭೇಟಿಯಲ್ಲಿ, ಆ ಕುಟುಂಬ ಹಾಗೂ ಅವರ ಮಿತ್ರರು ಮತ್ತು ನೆರೆಯವರು ಬೈಬಲ್ ಅಭ್ಯಾಸಕ್ಕೆ ಸಿದ್ಧರಾಗಿದ್ದರು! ಅಭ್ಯಾಸ ಬಹಳ ಉತ್ತಮವಿದೆ ಮತ್ತು ಯೆಹೋವನು ಕೊಡುವ ನಿರೀಕ್ಷೆ ಮತ್ತು ಆಶೀರ್ವಾದಗಳು ಆಶ್ಚರ್ಯಕರ ಎಂದು ಹೇಳುತ್ತಾ ಆ ಸ್ತ್ರೀಯು ಅವರನ್ನು ಆಮಂತ್ರಿಸಿದ್ದಳು. ಅದು ಹಿಂದೆ ಯಾರೂ ಆಕೆಗೆ ತಿಳಿಸದ ಒಂದು ಸಂಗತಿಯಾಗಿತ್ತು ಆದ್ದರಿಂದ ಅವಳ ನೆರೆಯವರು ಮತ್ತು ಮಿತ್ರರು ಈ ಸುವಾರ್ತೆಯನ್ನು ಕೇಳಬೇಕೆಂದು ಆಕೆ ಬಯಸಿದ್ದಳು.
ಪ್ರತಿ ಸಲ ಪಯನೀಯರಳು ಅಭ್ಯಾಸ ನಡಿಸಿದಾಗ ಅಲ್ಲಿ ಎಷ್ಟು ಮಂದಿ ಹಾಜರಿದ್ದರೆಂದರೆ ಅದು ಒಂದು ಚಿಕ್ಕ ಸಭೆಯಂತೆ ತೋರುತ್ತಿತ್ತು. ಈ ಆಸಕ್ತ ಜನರು ಅನೇಕ ಪ್ರಶ್ನೆಗಳನ್ನು ಕೇಳಿದರು ಮತ್ತು ಅಭ್ಯಾಸದಲ್ಲಿ ಭಾಗಿಗಳಾದರು. ಒಮ್ಮೆ ಕ್ಷೇತ್ರದಲ್ಲಿ ಸೇವೆಯಾದ ಮೇಲೆ ತಾನು ತನ್ನ ಸಂಗಡಿಗರೊಂದಿಗೆ ಹೊಸ ಕ್ಷೇತ್ರಕ್ಕೆ ಹೋಗಬೇಕು ಎಂದು ಪಯನೀಯರಳು ವಿವರಿಸಿದಾಗ, ಆ ಹೆಂಗಸು ತಮಗೇನಾಗಲಿದೆ ಎಂದು ಚಿಂತೆಯಿಂದ ಕೇಳಿದಳು. ಅತಿ ಸಮೀಪದ ಸಭೆಯಿಂದ ಸಹೋದರರು ಬಂದು ಆ ಅಭ್ಯಾಸವನ್ನು ಮುಂದುವರಿಸುವಂತೆ ಏರ್ಪಾಡುಗಳನ್ನು ಮಾಡಲಾಯಿತು. ಈಗ ವಿಶೇಷ ಪಯನೀಯರರು ಈ ಆಸಕ್ತ, ಕುರಿಸದೃಶ ಜನರಿಗೆ ಸಹಾಯಮಾಡುವಂತೆ ಅಲ್ಲಿ ನೇಮಿಸಲ್ಪಟ್ಟಿದ್ದಾರೆ.
▫ ನೇಮಿಸಲ್ಪಡದ ಇನ್ನೊಂದು ಕ್ಷೇತ್ರದಲ್ಲಿ ಮನೆ ಮನೆಯ ಸೇವೆಯನ್ನು ಮಾಡುತ್ತಿದ್ದಾಗ ಒಬ್ಬ ಪಯನೀಯರ ಸಹೋದರಿಯು ಸುಮಾರು ಹತ್ತು ವರ್ಷಗಳ ಹಿಂದೆ ನಿತ್ಯ ಜೀವಕ್ಕೆ ನಡಿಸುವ ಸತ್ಯವು ಎಂಬ ಪುಸ್ತಕವನ್ನು ಪಡೆದಿದ್ದ ಒಬ್ಬ ಮನುಷ್ಯನನ್ನು ಕಂಡುಕೊಂಡಳು. ಆ ಸಮಯದಿಂದ ಅವನು ಯೆಹೋವನ ಸಾಕ್ಷಿಗಳೊಂದಿಗೆ ಎಲ್ಲಾ ಸಂಪರ್ಕವನ್ನು ಕಳಕೊಂಡಿದ್ದನು. ಆದರೂ, ಯಾರನ್ನು ಅವನು ಸೇನಾಧೀಶ್ವರನಾದ ಯೆಹೋವನೆಂದು ಕರೆಯುತ್ತಿದ್ದನೋ ಆ ಯೆಹೋವನು ಒಬ್ಬನೇ ಸತ್ಯ ದೇವರೆಂದೂ ಮತ್ತು ಆತನೊಬ್ಬನನ್ನೇ ಆರಾಧಿಸಬೇಕೆಂದೂ ಅವನಿಗೆ ತಿಳಿದಿತ್ತು. ಅವನು ತಾನಾಗಿಯೇ ತನ್ನ ಪರಿಚಿತರೆಲ್ಲರಿಗೆ ಯೆಹೋವನ ಕುರಿತು ತಿಳಿಸಲು ತೊಡಗಿದ್ದನು. ವಾಸ್ತವದಲ್ಲಿ ಅವನು ಪ್ರತಿ ವಾರ ಒಂದು ಆಸಕ್ತ ದಂಪತಿಗಳೊಂದಿಗೆ ಯೆಹೋವನ ಕುರಿತು ಮಾತನಾಡಲು ಮೂರು ಕಿಲೊಮೀಟರ್ ನಡೆದು ಹೋಗುತ್ತಿದ್ದನು, ಯಾಕಂದರೆ, ಅವನು ಹೇಳಿದ ಪ್ರಕಾರ, ‘ನಾನು ಅವರನ್ನು ಸಂದರ್ಶಿಸುವುದನ್ನು ಬಿಟ್ಟರೆ, ಅವರು ಯೆಹೋವನನ್ನು ಮರೆತುಬಿಟ್ಟಾರು.’ ಈ ವಿವಾಹಿತ ದಂಪತಿಗಳಲ್ಲದೆ ಅಲ್ಲಿದ್ದ ಬೇರೆ ಸುಮಾರು ಹತ್ತು ಮಂದಿಗೆ ಒಂದು ಬೈಬಲ್ ಅಧ್ಯಯನ ಬೇಕಿತ್ತು—ಇದೆಲ್ಲವೂ ಆ ಆಸಕ್ತ ವ್ಯಕ್ತಿಯು ಅವರಿಗೆ ಸಾರಿದ ಪರಿಣಾಮವಾಗಿ ಆಯಿತು.
ಗಮನಾರ್ಹವಾಗಿ, ಆ ಪಯನೀಯರಳು ಅವನನ್ನು ಸಂದರ್ಶಿಸುವ ಕೆಲವೇ ದಿನಗಳ ಮುಂಚಿತವಾಗಿ, ಒಬ್ಬ ಸ್ಥಳೀಕ ಪಾದ್ರಿ ಮತ್ತು ಅವನ ಮೆರವಣಿಗೆಯು ಕನ್ಯೆಯ ವಿಗ್ರಹದೊಂದಿಗೆ ಅವನ ಮನೆಯನ್ನು ಪ್ರವೇಶಿಸಲು ಬಂದಾಗ ಈ ಮನುಷ್ಯನು ಬಿಟ್ಟಿರಲಿಲ್ಲ, ತಾನು ವಿಗ್ರಹಗಳನ್ನು ನಂಬುವುದಿಲ್ಲ ಎಂದು ಅವನು ತಿಳಿಸಿದ್ದನು. ಪಾದ್ರಿಯು ಬಹು ಕ್ರೋಧಿತನಾಗಿದ್ದನು. ಆ ರಾತ್ರಿ ಈ ಮನುಷ್ಯನು ಸಹಾಯಕ್ಕಾಗಿ ಯೆಹೋವನನ್ನು ಪ್ರಾರ್ಥಿಸಿದ್ದನು. ಹೀಗೆ ಆ ಪಯನೀಯರಳು ಸಂದರ್ಶಿಸಿದಾಗ ಅವನಿಗಾದ ಭಾವೋದ್ರೇಕ ಮತ್ತು ಸಂತೋಷವನ್ನು ಊಹಿಸಿಕೊಳ್ಳಿರಿ! ಕ್ರಮವಾದ ಬೈಬಲ್ ಅಧ್ಯಯನಕ್ಕಾಗಿ ಕೂಡಲೇ ಏರ್ಪಾಡುಗಳನ್ನು ಮಾಡಲಾಯಿತು, ಮತ್ತು ಆ ಮನುಷ್ಯನು ದೇವಪ್ರಭುತ್ವ ಸಂಸ್ಥೆಯೊಂದಿಗೆ ಸಹವಾಸದಲ್ಲಿ ಪ್ರಗತಿ ಮಾಡುತ್ತಾ ಇದ್ದಾನೆ.
ಹೀಗೆ ಈ ನೇಮಕವಾಗದ ಕ್ಷೇತ್ರಗಳಲ್ಲಿ ಒಂದು ಪೂರ್ಣವಾದ ಸಾಕ್ಷಿಯನ್ನು ಕೊಡುವಂತೆ ಈ ಸಹೋದರರು ಪ್ರಯತ್ನ ಮಾಡುತ್ತಿರುವಾಗ, ಪರುಗ್ವೆಯಲ್ಲಿ ಯೆಹೋವನು ಅವರ ಒಟ್ಟುಗೂಡಿಸುವ ಕಾರ್ಯವನ್ನು ಆಶೀರ್ವದಿಸುತ್ತಾ ಇದ್ದಾನೆ.—ಮತ್ತಾಯ 24:14. (w92 4/1)