ಪ್ರತೀಕಾರವು ತಪ್ಪೋ?
ಅಮೆರಿಕದ ಒಂದು ಮುಕ್ತ ರಸ್ತೆಯಲ್ಲಿ ಒಂದು ಕಾರು ಬೇರೊಂದು ಕಾರಿಗೆ ದಾಟಿಹೋಗುವಂತೆ ಎಡೆಗೊಡಲು ನಿಧಾನಿಸಿತು. ಎರಡನೆಯ ಕಾರಿನ ಡ್ರೈವರನು ಅತಿಕ್ರಮಿಸಿದ ವಾಹನಕ್ಕೆ ಗುಂಡು ಹೊಡೆದ ಮೂಲಕ ಪ್ರತೀಕಾರ ತೋರಿಸಿದ, ನಿರ್ದೋಷಿ ಪಯಣಿಗನೊಬ್ಬನ ಹತ್ಯೆಯಾಯಿತು.
ಹದಿಹರೆಯದ ಹುಡುಗಿಯೊಬ್ಬಳ ಶಾಲಾ-ನಾಟಕದ ಪಾತ್ರವೊಂದು ಬೇರೊಬ್ಬ ಹುಡುಗಿಗೆ ಹೋಯಿತು. ಆ ಹುಡುಗಿ ಬೇರೊಂದು ಶಾಲೆಯ ಇನ್ನೊಬ್ಬ ಹುಡುಗನನ್ನು ಭೇಟಿಯಾಗುತ್ತಿದ್ದಾಳೆಂದು ಅವಳ ಪ್ರಿಯಕರನಿಗೆ ಹೇಳಿಕೊಟ್ಟ ಮೂಲಕ ಈಕೆ ಪ್ರತೀಕಾರ ತೋರಿಸಿದಳು. ಹೀಗೆ ಈಕೆ ಆ ಹುಡುಗಿಯ ಪ್ರಿಯಕರನೊಂದಿಗಿನ ಸುಸಂಬಂಧವನ್ನು ಧ್ವಂಸಮಾಡಿದಳು.
ಹೆಚ್ಚಿನ ಜನರು ತಮಗೆ ತಪ್ಪುಗೈಯಲ್ಪಟ್ಟಿದೆ ಎಂದು ನೆನಸುವಾಗ, ಪ್ರತೀಕಾರ ಮಾಡುವುದರಲ್ಲಿ ಸಮರ್ಥನೆಯ ಅನಿಸಿಕೆಯನ್ನು ಪಡೆಯುತ್ತಾರೆ. ಒಂದಲ್ಲ ಒಂದು ರೀತಿಯಲ್ಲಿ ಅವರು, “ಕೋಪಿಸಿಕೊಳ್ಳದಿರು, ಬರೇ ಹಿಂದಿರುಗಿಸಿಕೊಡು,” ಎಂಬ ಧ್ಯೇಯಮಂತ್ರವನ್ನು ಪಾಲಿಸುತ್ತಾರೆ. ಇಂದು ನೆರೆಯವನ ಮೇಲಣ ಪ್ರೀತಿಯು ಅತಿ ಕ್ಷೀಣಸ್ಥಿತಿಯಲ್ಲಿದೆ, ಮತ್ತು ಪ್ರತೀಕಾರದ ಆತ್ಮವು ಮೇಲೇರುತ್ತಾ ಇದೆ.—ಮತ್ತಾಯ 24:12.
ಪ್ರತೀಕಾರವನ್ನು ನೀವಾದರೋ ಹೇಗೆ ವೀಕ್ಷಿಸುತ್ತೀರಿ? ಬೈಬಲನ್ನು ನೀವು ನಂಬುವುದಾದರೆ, ತತ್ವದೃಷ್ಟಿಯಲ್ಲಿ ಪ್ರತೀಕಾರವು ತಪ್ಪು ಎಂದು ಪ್ರಾಯಶಃ ನಿಮಗನಿಸಬಹುದು. ಆದರೆ ಭಕ್ತಿಹೀನ ಲೋಕವೊಂದರಲ್ಲಿ ಜೀವಿಸುತ್ತಿರಲಾಗಿ, ಸೇಡುತೀರಿಸುವ ಎದುರುಪದವಾದ ಕ್ಷಮಾಭಾವವು ಬಹುಮಟ್ಟಿಗೆ ಅವ್ಯಾವಹಾರ್ಯವೆಂದು ನೀವು ಭಾವಿಸಬಹುದು. ನಿಮಗೆ ಮೋಸ ಮಾಡಲ್ಪಟ್ಟಲ್ಲಿ ಅಥವಾ ಸದೆಬಡೆದು ಸುಲಿದರೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ? ಯಾರಾದರೂ ನಿಮ್ಮನ್ನು ದುರ್ಲಕ್ಷಿಸಿದಲ್ಲಿ ಅಥವಾ ಇತರರೊಂದಿಗೆ ನಿಮ್ಮನ್ನು ಹೀನೈಸಿ ಮಾತಾಡಿದರೆ, ಸೇಡುತೀರಿಸುವ ಭಾವನೆ ಬರುತ್ತದೋ? ನೀವು ಪ್ರತಿಹಿಂಸಕರೋ ಅಥವಾ ಕ್ಷಮಿಸುವವರೋ?
ಪ್ರತೀಕಾರದ ಮನೋಭಾವವು ಬಾಧಿಸುವದು
ಸಿಟ್ಟಿನ ಪರಿಮಾಣಗಳು ಇರುತ್ತವೆ, ನಿಶ್ಚಯ. ಆದರೆ ಪ್ರತೀಕಾರ ಕೊಡಬಯಸುವ ಹೆಚ್ಚಿನವರು ಹೊಡೆತಗಳಿಗೆ ಯಾ ಪಾತಕೀಯ ಆಕ್ರಮಣಕ್ಕೆ ಗುರಿಯಾಗಿರುವವರಲ್ಲ. ಈ ಲೇಖನದ ಆರಂಭದಲ್ಲಿ ಉಲ್ಲೇಖಿತ “ತಪ್ಪುಗಳು” ಅಷ್ಟು ಮುಖ್ಯವಲ್ಲದವುಗಳಾಗಿದ್ದವು, ಆದರೂ ಪ್ರತೀಕಾರ ಕೊಡಲು ನಿರ್ಧರಿಸಿದವರ ಮನಸ್ಸಿನಲ್ಲಿ ಅವು ಬೃಹದಾಕಾರದ ತಪ್ಪಾಗಿ ತೋರಿದವು.
ನಾವು ಪ್ರತೀಕಾರದ ಭಾವವನ್ನು ಬೆಳೆಸಬಾರದೆಂದು ಬೈಬಲು ಹೇಳುತ್ತದೆ. ಜ್ಞಾನೋಕ್ತಿ 24:29 ಹೇಳುವುದು: “ಅವನು ನನಗೆ ಮಾಡಿದಂತೆ ನಾನೂ ಅವನಿಗೆ ಮಾಡುವೆನು. ಅವನು ಮಾಡಿದ್ದಕ್ಕೆ ಸರಿಯಾಗಿ ಮುಯ್ಯಿ ತೀರಿಸುವೆನು ಅಂದುಕೊಳ್ಳಬೇಡ.” ಏಕೆ ಬೇಡ? ಏಕೆಂದರೆ ಅಂಥ ಒಂದು ಮನೋಭಾವವು ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಹಾನಿಕಾರಕವು. ಸೇಡುತೀರಿಸುವ ಆಲೋಚನೆಗಳು ಮನೋಶಾಂತಿಯನ್ನು ಕೆಡಿಸುತ್ತವೆ ಮತ್ತು ಯುಕ್ತ ವಿವೇಚನೆಯನ್ನು ನಿರೋಧಿಸುತ್ತವೆ. ಈ ವಾರ್ತಾವರದಿಯನ್ನು ಗಮನಿಸಿರಿ: “ಇಬ್ಬರು ರೈತರು ತಮ್ಮ ಟ್ರಕ್ ಬಂಡಿಯೊಳಗಿಂದ ಗುಂಡುಹೊಡೆಯುತ್ತಾ ಪಾರ್ಕಿಂಗ್ ಸ್ಥಳದಲ್ಲಿ ಒಬ್ಬರನ್ನೊಬ್ಬರು ಕೊಂದರು, ಹೀಗೆ ತಾವು ಚಿಕ್ಕ ಮಕ್ಕಳಾಗಿದ್ದಾಗ ಆರಂಭಿಸಿದ್ದ ಒಂದು 40-ವರ್ಷದ ಜಗಳವನ್ನು ತೀರಿಸಿಕೊಂಡರು.” ಅವರ ಜೀವಮಾನದಲ್ಲೆಲ್ಲಾ ಈ ಇಬ್ಬರು ಪುರುಷರ ಯೋಚನೆಯು, ಸೇಡು ತೀರಿಸುವ ಆತ್ಮದ ಉರಿಯಿಂದ ನಂಜೇರಿದ್ದ ಕುರಿತಾಗಿ ಕಲ್ಪಿಸಿಕೊಳ್ಳಿರಿ!—ಜ್ಞಾನೋಕ್ತಿ 14:29, 30.
ಪ್ರತೀಕಾರಯುಕ್ತ ಭಾವವನ್ನು ಬೆಳೆಸಬಾರದಾದ ಇನ್ನೊಂದು ಕಾರಣವು ಯಾವದಂದರೆ ತಪ್ಪುಗೈಯುವವರು—ಘೋರ ತಪ್ಪುಗಾರರು ಸಹಾ—ಬದಲಾಗಬಲ್ಲರು. ದೃಷ್ಟಾಂತಕ್ಕಾಗಿ, ಒಂದು ಸಮಯದಲ್ಲಿ ಅಪೊಸ್ತಲ ಪೌಲನು, ಶಿಷ್ಯನಾದ ಸೆಫ್ತನನ ‘ಕೊಲೆಗೆ ಸಮ್ಮತಿಸುವವನಾಗಿದ್ದನು’ ಮತ್ತು ‘ಕರ್ತನ ಶಿಷ್ಯರ ಮೇಲೆ ರೌದ್ರನಾಗಿದ್ದು ಬೆದರಿಕೆಯನ್ನು ಹಾಕುತ್ತಾ’ ಇದ್ದವನು. ಆದರೆ ಅವನು ಬದಲಾದನು. ಯಾರ ಜೀವಿತವು ಆ ಆರಂಭದ ಸಮಯದಿಂದ ಪೌಲನಿಂದ ಅಪಾಯದ ಬೆದರಿಕೆಯಲ್ಲಿತ್ತೋ ಆ ಅಪೊಸ್ತಲ ಪೇತ್ರನು ಅವನನ್ನು ವರ್ಷಗಳ ನಂತರ, “ನಮ್ಮ ಪ್ರಿಯ ಸಹೋದರನಾದ ಪೌಲನು’ ಎಂದು ಕರೆದನು. (ಅಪೊಸ್ತಲರ ಕೃತ್ಯಗಳು 8:1; 9:1; 2 ಪೇತ್ರ 3:15) ವಿಶೇಷವಾಗಿ ದಮಸ್ಕದಲ್ಲಿ ಕುರುಡನಾಗಿ ಬಿದ್ದು ಕಾಯುತ್ತಿದ್ದಾಗ, ಕ್ರೈಸ್ತರು ಪೌಲನ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಬಹುದಿತ್ತು. (ಅಪೊಸ್ತಲರ ಕೃತ್ಯಗಳು 9:3-15) ಎಂಥ ಶೋಚನೀಯ ತಪ್ಪು ಆದಾಗುತ್ತಿತ್ತು!
ಆದುದರಿಂದ, ಅನಂತರ ಪೌಲನು, ರೋಮಾಪುರ 12:20ರಲ್ಲಿ ಹೀಗೆ ಸೂಚನೆ ಕೊಡಶಕ್ತನಾದನು: “ಹಾಗಾದರೆ ನಿನ್ನ ವೈರಿ ಹಸಿದಿದ್ದರೆ ಅವನಿಗೆ ಊಟಕ್ಕೆ ಬಡಿಸು. ಬಾಯಾರಿದ್ದರೆ ಕುಡಿಯುವದಕ್ಕೆ ಕೊಡು.” ಯಾಕೆ? ಯಾಕಂದರೆ ವೈರಿಯ ಮೇಲೆ ನಾವಾಗಿಯೇ ಸೇಡು ತೀರಿಸಿದರೆ ನಾವಾತನ ಮನೋಭಾವವನ್ನು ಕಠಿಣಗೊಳಿಸುತ್ತೇವೆ ಮತ್ತು ನಮ್ಮ ನಡುವೆ ಇರುವ ವೈರತ್ವವನ್ನು ಖಾಯಂಗೊಳಿಸುತ್ತೇವೆ. ಆದರೆ ನಮಗೆ ತಪ್ಪು ಮಾಡಿದವನಿಗೆ ಅಥವಾ ನಮ್ಮನ್ನು ನೋಯಿಸಿದವನಿಗೆ ನಾವು ಒಳ್ಳೇದನ್ನು ಮಾಡುವುದಾದರೆ, ನಾವಾತನ ಮನೋಭಾವವನ್ನು ಮೃದುಗೊಳಿಸಿ, ಪೂರ್ವದ ಆ ವೈರಿಯನ್ನು ಮಿತ್ರನನ್ನಾಗಿ ಮಾಡಶಕ್ತರಾಗಬಹುದು.
ನಮ್ಮ ಸ್ವಂತ ಬಲಹೀನತೆಗಳನ್ನು ಮನಗಾಣುವುದು ಸಹಾ, ಸೇಡು ತೀರಿಸಬಯಸುವ ಕಟುಭಾವವನ್ನು ವರ್ಜಿಸುವಂತೆ ಸಹಾಯಕಾರಿಯು. ಕೀರ್ತನೆಗಾರನು ಕೇಳಿದ್ದು: “ಯೆಹೋವನೇ, ಯಾಹುವೇ, ನೀನು ಪಾಪಗಳನ್ನು ಎಣಿಸುವುದಾದರೆ ನಿನ್ನ ಮುಂದೆ ಯಾರು ನಿಂತಾರು?” (ಕೀರ್ತನೆ 130:3) ನಾವೆಲ್ಲರೂ ಬೇರೆಯವರನ್ನು ನೋಯಿಸಿದ್ದೇವೆ ಅಥವಾ ಅವರಿಗೆ ತಪ್ಪು ಮಾಡಿದ್ದೇವೆ. ಅವರು ಸೇಡು ತೀರಿಸಲು ಪ್ರಯತ್ನಿಸದೆ ಇದದ್ದಕ್ಕಾಗಿ ನಾವು ಸಂತೋಷ ಪಟ್ಟಿಲ್ಲವೇ? ಹೀಗಿರಲಾಗಿ, ತದ್ರೀತಿಯ ನಿಗ್ರಹವನ್ನು ನಾವೂ ತೋರಿಸಬಾರದೇ? ಯೇಸು ಸೂಚನೆ ಕೊಟ್ಟದ್ದು: “ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.”—ಮತ್ತಾಯ 7:12.
“ಕೆಟ್ಟತನವನ್ನು ಹಗೆ ಮಾಡಿರಿ” ಎಂದು ಬೈಬಲು ಹೇಳುತ್ತದೆ, ನಿಜ. (ಕೀರ್ತನೆ 97:10; ಆಮೋಸ 5:15) ಆದರೆ ಕೆಟ್ಟದ್ದನ್ನು ಮಾಡುವವರನ್ನು ಹಗೆಮಾಡುವಂತೆ ಅದು ನಮಗೆ ಹೇಳುವದಿಲ್ಲ. ವಾಸ್ತವದಲ್ಲಿ ಯೇಸು ನಮಗೆ ಆಜ್ಞಾಪಿಸಿದ್ದು: “ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಿಂಸೆ ಪಡಿಸುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ.” (ಮತ್ತಾಯ 5:44) ಹಾನಿಗೆ ಪ್ರತಿಯಾಗಿ ಹಾನಿಯನ್ನು ನಾವು ಮಾಡುವುದಾದರೆ, ತಪ್ಪಿತಸ್ಥನ ಆತ್ಮವನ್ನೇ ನಾವು ಅನುಕರಿಸುತ್ತೇವೆ. ಪ್ರಾಚೀನ ಜ್ಞಾನೋಕ್ತಿ ಹೇಳುವದು: “ಕೇಡಿಗೆ ಮುಯ್ಯಿ ತೀರಿಸುವೆನು ಅನ್ನಬೇಡ; ಯೆಹೋವನನ್ನು ನಿರೀಕ್ಷಿಸಿಕೊಂಡಿರು, ಆತನೇ ನಿನ್ನನ್ನುದ್ಧರಿಸುವನು.” (ಜ್ಞಾನೋಕ್ತಿ 20:22) ಎಂಥ ವಿವೇಕಪ್ರದ ಮನೋಭಾವವು! ದುರ್ನಡತೆಯವರನ್ನು ಅನುಕರಿಸುವ ಶೋಧನೆಯನ್ನು ಎದುರಿಸುವ ಮೂಲಕ ನಮ್ಮನ್ನು ಜಯಶಾಲಿಗಳಾಗಿ ತೋರಿಸುವುದು ಅದೆಷ್ಟು ಉತ್ತಮ.—ಯೋಹಾನ 16:33; ರೋಮಾಪುರ 12:17, 21.
ಶಿಕ್ಷೆ—ಯಾರಿಂದ?
ಕೆಲವು ಕೃತ್ಯಗಳಾದರೋ ವೈಯಕ್ತಿಕ ಮುಖಭಂಗ ಮತ್ತು ನೋವಿಗಿಂತ ಹೆಚ್ಚು ಗಂಭೀರವಾಗಿವೆ, ನಿಶ್ಚಯ. ಪಾತಕವೊಂದಕ್ಕೆ ನಾವು ಗುರಿಯಾಗಿದ್ದವರಾದರೆ ಆಗೇನು? ನ್ಯಾಯೋಚಿತವಾಗಿ ಏನಾದರೂ ಮಾಡಲ್ಪಡಬೇಕೆಂದು ನಾವು ಬಯಸುವುದು ಸ್ವಾಭಾವಿಕ. ಆದರೆ ಏನು ಮಾಡಲ್ಪಡಬೇಕು? ವೈಯಕ್ತಿಕವಾಗಿಯೇ ವಿಷಯಗಳನ್ನು ನಿರ್ವಹಿಸಿ ಮುಯ್ಯಿಗೆ ಮುಯ್ಯಿ ತೀರಿಸುವುದು ಕೆಲವು ಸಮಾಜಗಳಲ್ಲೇನೂ ಅಸಾಮಾನ್ಯವಲ್ಲ. ಆದರೆ ಅಂಥ ಸಮಾಜಗಳು ರಕ್ತಪಾತದ ವೈರತ್ವಗಳಿಂದ ಭಗ್ನಗೊಂಡಿವೆ. ಇಂದು ದೇವರ ನಿಯಮವಾಗಲಿ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಮನುಷ್ಯನ ನಿಯಮವಾಗಲಿ, ಪಾತಕಗಳಿಗಾಗಿ ವೈಯಕ್ತಿಕ ಪ್ರತೀಕಾರವನ್ನು ಸಲ್ಲಿಸಲು ಅನುಮತಿಸುವುದಿಲ್ಲ ಮತ್ತು ಇದು ಸಕಾರಣಕ್ಕಾಗಿಯೇ. ಇಂಥ ವೈಯಕ್ತಿಕ ಹಿಂಸಾಚಾರವು ಇನ್ನಷ್ಟು ಹೆಚ್ಚು ಹಿಂಸಾಚಾರವನ್ನು ಹುಟ್ಟಿಸುತ್ತದೆ.
ಹೀಗಿರಲಾಗಿ, ಪಾತಕಕ್ಕೆ ಬಲಿಯಾದವನು ಸುಮ್ಮನೆ ಕೂತು ದುರಾಚಾರವನ್ನು ನಿಶ್ಚೇಷ್ಟನಾಗಿ ಸಹಿಸಬೇಕೋ? ಅದರ ಅವಶ್ಯವಿಲ್ಲ. ನಮ್ಮ ಜೀವ ಯಾ ಆಸ್ತಿಯು ಅತಿಕ್ರಮಿಸಲ್ಪಟ್ಟಲ್ಲಿ, ಅಧಿಕಾರಿಗಳ ಕಡೆಗೆ ತಿರುಗಸಾಧ್ಯವಿದೆ. ಪೊಲೀಸರನ್ನು ಕರೆಯ ಬಯಸಬಹುದು. ಕೆಲಸದಲ್ಲಿ, ಮೇಲ್ವಿಚಾರ ಮುಖ್ಯಸ್ಥನನ್ನು ಸಂಪರ್ಕಿಸಬಹುದು. ಶಾಲೆಯಲ್ಲಿ, ಪ್ರಾಧ್ಯಾಪಕನಿಗೆ ತಿಳಿಸಬಹುದು. ಅವರು ಅಲ್ಲಿರುವ ಒಂದು ಕಾರಣವು ಅದಕ್ಕಾಗಿಯೇ—ನ್ಯಾಯವನ್ನು ಎತ್ತಿಹಿಡಿಯಲು. ಸರಕಾರಿ ಅಧಿಕಾರಿಯು “ದೇವರ ಸೇವಕನಾಗಿದ್ದು ಕೆಟ್ಟದ್ದನ್ನು ನಡಿಸುವವನಿಗೆ ದೇವರ ದಂಡನೆಯನ್ನು ವಿಧಿಸಲಿಕ್ಕಾಗಿ” ಇರುತ್ತಾರೆಂದು ಬೈಬಲು ನಮಗೆ ಹೇಳುತ್ತದೆ. (ರೋಮಾಪುರ 13:4) ಸರಕಾರವು ತನ್ನ ಅಧಿಕಾರವನ್ನು ಉಪಯೋಗಿಸುವಂತೆ, ಕೆಟ್ಟತನವನ್ನು ನಿಲ್ಲಿಸುವಂತೆ ಮತ್ತು ತಪ್ಪಿತಸ್ಥರನ್ನು ದಂಡಿಸುವಂತೆ ನ್ಯಾಯವು ಆವಶ್ಯಪಡಿಸುತ್ತದೆ.
ಹೌದು, ನ್ಯಾಯವು ಕೆಲವು ಸಾರಿ ಬಹಳ ವಿಳಂಬಿಸಿ ಬರುತ್ತದೆ. ಬಾಳು-ಬೇಸತ್ತ ಲೇಖಕನೊಬ್ಬನು ಹೇಳಿದ್ದು: “ನ್ಯಾಯವು ಬಹುಮಟ್ಟಿಗೆ ಯಾವಾಗಲೂ ತಡವಾಗಿ ಬರುವ ರೈಲು ಬಂಡಿಯಂತಿದೆ.” ಕೆಲವೊಮ್ಮೆ ಆ ರೈಲುಬಂಡಿಯು ಆಗಮಿಸುವುದಂತೂ ಇಲ್ಲ, ನಿಶ್ಚಯ. ಅನ್ಯಾಯಗಾರರು ಎಷ್ಟು ಪ್ರಬಲರಾಗಿರಬಹುದೆಂದರೆ ಅಧಿಕಾರಿಗಳು ಅವರನ್ನು ಅಂಕೆಯಲ್ಲಿಡ ಶಕ್ತರಾಗದೆ ಇರಬಹುದು. ಆದರೂ ವಿವೇಕದ ಮಾರ್ಗವು ಆತ್ಮ-ನಿಗ್ರಹವೇ. “ಮೂಢನು ತನ್ನ ಕೋಪವನ್ನೆಲ್ಲಾ ತೋರಿಸುವನು; ಜ್ಞಾನಿಯು ತನ್ನ ಕೋಪವನ್ನು ತಡೆದು ಶಮನಪಡಿಸಿಕೊಳ್ಳುವನು” ಎನ್ನುತ್ತದೆ ಬೈಬಲು.—ಜ್ಞಾನೋಕ್ತಿ 29:11.
ಪ್ರತೀಕಾರ—ಯಾರಿಂದ?
ಪ್ರತೀಕಾರ ಮಾಡುವದರಿಂದ ನಮ್ಮನ್ನು ತಡೆದು ಹಿಡಿಯುವಿಕೆಯು ಹೀಗೆ ನಮಗೆ ಪ್ರಯೋಜನವನ್ನು ತರುತ್ತದೆ. ನ್ಯಾಯವು ವಿಧಿಸಲ್ಪಡಬೇಕೆಂದಾದರೆ, ದೇವರೇ ಅದನ್ನು ತಕ್ಕ ಕಾಲದಲ್ಲಿ ವಿಧಿಸುವನೆಂದು ತಿಳಿದವರಾಗಿ ನಾವು ಶಾಂತರಾಗಿ ಕಾಯಬಹುದು. ದುರ್ನಡತೆಗೆ ಶಿಕ್ಷೆಯು ವಿಧಿಸಲ್ಪಡದಿದ್ದಲ್ಲಿ ಅದು ದುಷ್ಟತನಕ್ಕೆ ನಡಿಸುವದೆಂದು ಯೆಹೋವನಿಗೆ ತಿಳಿದದೆ. (ಪ್ರಸಂಗಿ 8:11) ನಿರ್ದಯಿಗಳಾದ ದುಷ್ಟರು ಮಾನವ ಕುಲವನ್ನು ಸದಾಕಾಲವೂ ದಬ್ಬುವಂತೆ ಆತನು ಬಿಡಲಾರನು. ಆದುದರಿಂದಲೇ ಅಪೊಸ್ತಲ ಪೌಲನು ನಮಗೆ ಸೂಚಿಸಿದ್ದು: “ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ. ಯಾಕಂದರೆ ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಯೆಹೋವನು ಹೇಳುತ್ತಾನೆಂಬದಾಗಿ ಬರೆದದೆ.” (ರೋಮಾಪುರ 12:19) ನಿಶ್ಚಯವಾಗಿ ಬೈಬಲು ನಿರ್ಮಾಣಿಕನ ಮುಯ್ಯಿ ತೀರಿಸುವ ದಿನದ ಕುರಿತಾಗಿ ಮಾತಾಡುತ್ತದೆ. ಈ ಪ್ರತೀಕಾರದ ದಿನವು ಯಾವುದಾಗಲಿದೆ? ಮತ್ತು ದೇವರ ಮುಯ್ಯಿ ತೀರಿಸುವಿಕೆಗೆ ಗುರಿಯಾಗುವವರು ಯಾರು? ನಾವಿದನ್ನು ಮುಂದಿನ ಲೇಖನದಲ್ಲಿ ಚರ್ಚಿಸುವೆವು. (w91 11/1)
[ಪುಟ 4 ರಲ್ಲಿರುವ ಚೌಕ]
ಪ್ರತೀಕಾರದ ಭಾವಾವೇಶಗಳನ್ನು ಅಂಕೆಯಲ್ಲಿಡಲು, ನೆನಪಿಡಿರಿ
▫ ನ್ಯಾಯವನ್ನು ತರುವ ಕುರಿತು ದೇವರಿಗೆ ಚಿಂತೆ ಇದೆ
▫ ಪ್ರತೀಕಾರದ ಮನೋಭಾವಕ್ಕೆ ಎಡೆಗೊಡುವದು ಹಾನಿಕಾರಕವು
▫ ದಯೆ ತೋರಿಸುವುದು ಹೆಚ್ಚಾಗಿ ಇತರೊಂದಿಗಿನ ಸಮಸ್ಯೆಯನ್ನು ಕಡಿಮೆಗೊಳಿಸುತ್ತದೆ
▫ ನಮ್ಮ ಸ್ವಂತ ಪಾಪಗಳಲ್ಲಿ ಅನೇಕವು ಉಪೇಕ್ಷಿಸಲ್ಪಟ್ಟಿವೆ
▫ ತಪ್ಪಿತಸ್ಥರು ಬದಲಾಗ ಸಾಧ್ಯವಿದೆ
▫ ಲೋಕದ ಮಾರ್ಗಗಳನ್ನು ಎದುರಿಸುವ ಮೂಲಕ ನಾವದನ್ನು ಜಯಿಸುತ್ತೇವೆ