ನೀವು ಸ್ಥಾನಕ್ಕೆ ಪ್ರಯತ್ನಿಸುತ್ತಿದ್ದೀರೊ?
“ಯಾವ ಪುರುಷನಾದರೂ ಮೇಲ್ವಿಚಾರಕನ ಸ್ಥಾನಕ್ಕೆ ಪ್ರಯತ್ನಿಸುವುದಾದರೆ ಅವನಿಗೆ ಉತ್ತಮ ಕೆಲಸದ ಬಯಕೆ ಇದೆ.”-1ತಿಮೊಥಿ 3:1, NW.
1. ಯೆಹೋವನ ಸಾಕ್ಷಿಗಳಿಗೆ ಯಾವ ಉದ್ದೇಶದ ನೆರವೇರಿಕೆ ಪರಮ ಪ್ರಾಮುಖ್ಯ?
ಯೆಹೋವನ ಸಾಕ್ಷಿಗಳಿಗೆ ದಿವ್ಯ ರೀತಿಯಲ್ಲಿ ನಡೆಸಲ್ಪಟ್ಟು ನಿರ್ವಹಿಸಲ್ಪಡುವ ಯೋಗ್ಯ ಉದ್ದೇಶಗಳಿವೆ. ಇದು ಆಶ್ಚರ್ಯವಲ್ಲ. ಏಕಂದರೆ ಅವರ ದೇವರು ಉದಾತ್ತ ಧ್ಯೇಯಗಳುಳ್ಳವನಾಗಿದ್ದು ತನ್ನ ಉದ್ದೇಶಗಳನ್ನು ಸದಾ ನೆರವೇರಿಸುತ್ತಾನೆ. (ಯೆಶಾಯ 55:8-11) ಉತ್ತಮ ಧ್ಯೇಯಗಳಿಲ್ಲದೆ, ತಮಗಲ್ಲದೆ ಇತರ ಯಾರಿಗೂ ಪ್ರಯೋಜನ ತರದೆ ಅಲಕ್ಷ್ಯದಿಂದ ಜೀವನ ಕಳೆಯುವವರಂತೆ ಯೆಹೋವನ ಸಾಕ್ಷಿಗಳಿರಬಾರದು. ದೇವರ ಸಾಕ್ಷಿಗಳಿಗೆ ಪರಮ ಪ್ರಾಮುಖ್ಯವಾಗಿರುವ ವಿಷಯವು ರಾಜ್ಯ ಸಂದೇಶವನ್ನು ಘೋಷಿಸಿ ದೇವರ ವಾಕ್ಯದ ಜೀವದಾಯಕ ಜ್ಞಾನದಲ್ಲಿ ಇತರರೊಂದಿಗೆ ಪಾಲಿಗರಾಗುವ ಉದಾತ್ತ ಉದ್ದೇಶವನ್ನು ನೆರವೇರಿಸುವುದೇ.—ಕೀರ್ತನೆ 119:105; ಮಾರ್ಕ 13:10; ಯೋಹಾನ 17:3.
2. 1 ತಿಮೊಥಿ 3:1 ರಲ್ಲಿ ಪೌಲನು ಕ್ರೈಸ್ತ ಪುರುಷರಿಗೆ ಯಾವ ಉದ್ದೇಶವನ್ನು ತಿಳಿಸುತ್ತಾನೆ?
2 ಯೆಹೋವನ ಸಂಘಟನೆಯಲ್ಲಿ ಇನ್ನಿತರ ಉದಾತ್ತ ಉದ್ದೇಶಗಳೂ ಇವೆ. ಅಪೊಸ್ತಲ ಪೌಲನು ಇವುಗಳಲ್ಲಿ ಒಂದನ್ನು ಉಲ್ಲೇಖಿಸುತ್ತಾ ಹೀಗೆ ಬರೆದನು: “ಆ ಹೇಳಿಕೆ ವಿಶ್ವಾಸಾರ್ಹವಾಗಿದೆ. ಯಾವ ಪುರುಷನಾದರೂ ಮೇಲ್ವಿಚಾರಕನ ಸ್ಥಾನಕ್ಕೆ ಪ್ರಯತ್ನಿಸುತ್ತಿರುವುದಾದರೆ ಅವನಿಗೆ ಉತ್ತಮ ಕೆಲಸದ ಬಯಕೆ ಇದೆ.” ಇಂಥ ಪುರುಷನು ಇತರರ ಹಿತಕ್ಕಾಗಿ ಯಾವುದನ್ನೋ ಸಾಧಿಸಲು ಬಯಸುತ್ತಾನೆ. ಅವನು “ಉತ್ತಮ ಕೆಲಸವನ್ನು” ಬಯಸುತ್ತಾನೆಯೇ ಹೊರತು ಅನಾಯಾಸ ಮತ್ತು ಖ್ಯಾತಿಯ ಜೀವನವನ್ನಲ್ಲ. ಇನ್ನೊಂದು ಭಾಷಾಂತರ ಹೇಳಿದ್ದು: “ನಾಯಕತ್ವದಲ್ಲಿ ತನ್ನ ಹೃದಯವನ್ನಿಡುವ ಪುರುಷನಿಗೆ ಸ್ತುತ್ಯಾರ್ಹವಾದ ಹೆಬ್ಬಯಕೆ ಇದೆ ಎಂದು ಹೇಳುವುದು ಪೂರ್ತಿ ಸತ್ಯ.”—1 ತಿಮೊಥಿ 3:1, ಫಿಲಿಪ್ಸ್.
ಹಿರಿಯರಿಗೆ ಅಪಾಯಗಳು
3, 4. ಮೇಲ್ವಿಚಾರಕನಾಗ ಪ್ರಯತ್ನಿಸುವ ಪುರುಷನು ತನ್ನ ಹೃದಯವನ್ನು ಏಕೆ ಕಾಪಾಡಿಕೊಳ್ಳಬೇಕು?
3 ಕ್ರೈಸ್ತ ಮೇಲ್ವಿಚಾರಕನಾಗಲು ತನ್ನ ಹೃದಯವನ್ನಿಟ್ಟಿರುವ ಪುರುಷನಿಗೆ “ಸ್ತುತ್ಯಾರ್ಹವಾದ ಹೆಬ್ಬಯಕೆ” ಇರುವುದು ಯಾವ ವಿಧದಲ್ಲಿ? ಒಂದುನಿರ್ದಿಷ್ಟ ಗುರಿಯನ್ನು ಸಾಧಿಸಲು ಇರುವ ಉತ್ಸಾಹಪೂರಿತ ಆಕಾಂಕ್ಷೆಯೇ ಹೆಬ್ಬಯಕೆ. ಹೌದು, ಉದಾತ್ತವೂ ತುಚ್ಛವೂ ಆದ ಹೆಬ್ಬಯಕೆಗಳಿವೆ ಎಂಬುದು ನಿಜ. ಆದರೆ ಒಬ್ಬ ಪುರುಷನು ಇತರರ ಸೇವೆ ಮಾಡುವ ಬಯಕೆಯಿಂದ ಮೇಲ್ವಿಚಾರಕನ ಸ್ಥಾನಕ್ಕೆ ದೈನ್ಯ ಭಾವದಿಂದ ಪ್ರಯತ್ನಿಸುವಲ್ಲಿ ಅವನ ಸೇವೆ ಪ್ರಾಮಾಣಿಕ ಪ್ರೇರಕ ಶಕಿಯ್ತಿಂದ ಮಾಡಲ್ಪಟ್ಟು ಆತ್ಮಿಕಾಶೀರ್ವಾದಗಳನ್ನು ಫಲಿಸಬಲ್ಲದು. ಆದರೆ ಅವನು ತನ್ನ ಹೃದಯವನ್ನು ಕಾಪಾಡುವುದು ಅವಶ್ಯ.—ಜ್ಞಾನೋಕ್ತಿ 4:23.
4 ಕೆಲವು ಹೆಬ್ಬಯಕೆಯ ಜನರು ಖ್ಯಾತಿಯನ್ನು ಬಯಸುತ್ತಾರೆ. ಇತರರು ಜೊತೆ ಮಾನವರ ಮೇಲೆ ದೊರೆತನವನ್ನು ಅಪೇಕ್ಷಿಸುತ್ತಾರೆ. ಪ್ರಾಧಾನ್ಯತೆ ಅಥವಾ ಅಧಿಕಾರಕ್ಕಿರುವ ದುರಾಶೆ, ಒಂದು ಸ್ವಸ್ಥವಾಗಿ ಕಾಣುವ ಮರವನ್ನೂ ಕುಸಿದು ಬೀಳಿಸುವ ಶಕ್ತಿಯಿರುವ ಕೊಳೆತ ಬೇರಿನಂತಿದೆ. ಇಂಥ ಕೆಟ್ಟ ಪ್ರೇರಣೆಯ ಹೆಬ್ಬಯಕೆಗೆ ಒಬ್ಬ ಕ್ರೈಸ್ತನೂ ಬಲಿಬೀಳಬಹುದು. (ಜ್ಞಾನೋಕ್ತಿ 16:18) ಅಪೊಸ್ತಲ ಯೋಹಾನನು ಹೇಳಿದ್ದು: “ಸಭೆಗೆ ಕೆಲವು ಮಾತುಗಳನ್ನು ಬರೆದಿದ್ದೆನು. ಆದರೆ ಸಭೆಯವರಲ್ಲಿ ಪ್ರಮುಖನಾಗಬೇಕೆಂದಿರುವ [“ಪ್ರತಿಯೊಂದರಲ್ಲೂ ನಾಯಕನಾಗಬೇಕೆಂದಿರುವ,” ಫಿಲಿಪ್ಸ್] ದಿಯೋತ್ರೇಫನು ನಮ್ಮ ಮಾತನ್ನು ಅಂಗೀಕರಿಸುವದಿಲ್ಲ. ಆದಕಾರಣ ನಾನು ಬಂದರೆ ಅವನು ಮಾಡುವ ಕೃತ್ಯಗಳ ವಿಷಯದಲ್ಲಿ ಎಲ್ಲರಿಗೂ ನೆನಪು ಕೊಡುವೆನು. ಅವನು ಹರಟೆಕೊಚ್ಚುವವನಾಗಿ ನಮ್ಮ ವಿಷಯದಲ್ಲಿ ಕೆಟ್ಟ ಕೆಟ್ಟ ಮಾತುಗಳನ್ನಾಡುತ್ತಾನೆ. ಇವೂ ಸಾಲದೆ ತಾನು ಸಹೋದರರನ್ನು ಸೇರಿಸಿಕೊಳ್ಳಬೇಕೆಂದಿರುವವರಿಗೆ ಅಡ್ಡಿಮಾಡಿ ಅವರನ್ನು ಸಭೆಯೊಳಗಿಂದ ಬಹಿಷ್ಕರಿಸುತ್ತಾನೆ.” (3 ಯೋಹಾನ 9, 10) ದಿಯೋತ್ರೇಫನ ಹೆಬ್ಬಯಕೆ ಅಕ್ರೈಸ್ತವಾಗಿತ್ತು. ದುರಂಹಕಾರ ಮತ್ತು ಹೆಬ್ಬಯಕೆಯ ಅಧಿಕಾರ ಲಾಲಸೆಗೆ ಯೇಸುವಿನ ನಿಜ ಅನುಯಾಯಿಗಳ ಮಧ್ಯೆ ಯಾವ ಸ್ಥಾನವೂ ಇಲ್ಲ.—ಜ್ಞಾನೋಕ್ತಿ 21:4.
5. ಮೇಲ್ವಿಚಾರಕರು ತಮ್ಮ ಕರ್ತವ್ಯಗಳನ್ನು ಯಾವ ಮನೋಭಾವದಿಂದ ಪಾಲಿಸಬೇಕು?
5 ಸರಿಯಾದ ಹೇತುವಿನಿಂದ ತನ್ನ ಕರ್ತವ್ಯಗಳನ್ನು ಮಾಡುವ ಕ್ರೈಸ್ತ ಮೇಲ್ವಿಚಾರಕನು ಸ್ವಾರ್ಥದ ಹೆಬ್ಬಯಕೆಯ ಬೆನ್ನು ಹಿಡಿಯನು. ಅವನು ಕ್ರೈಸ್ತ ಮೇಲ್ವಿಚಾರಣೆಯೆಂಬ ಉತ್ತಮ ಕೆಲಸವನ್ನು ದೇವದತ್ತ ಸುಯೋಗವೆಂದೆಣಿಸುತ್ತಾ ದೇವರ ಮಂದೆಯನ್ನು “ಬಲಾತ್ಕಾರದಿಂದಲ್ಲ, ದೇವರ ಚಿತ್ತದ ಪ್ರಕಾರ ಇಷ್ಟ ಪೂರ್ವಕವಾಗಿಯೂ ನೀಚವಾದ ದ್ರವ್ಯಾಶೆಯಿಂದಲ್ಲ, ಸಿದ್ಧ ಮನಸ್ಸಿನಿಂದಲೂ . . . ದೇವರು ನಿಮ್ಮ ವಶದಲ್ಲಿಟ್ಟಿರುವ ಸಭೆಗಳ ಮೇಲೆ ದೊರೆತನ ಮಾಡುವವರಂತೆ ನಡೆಯದೆ ಮಂದೆಗೆ ಮಾದರಿ”ಯಾಗಿದ್ದು ಪಾಲಿಸುವನು. (1 ಪೇತ್ರ 5:2, 3) ಹೌದು, ಮೇಲ್ವಿಚಾರಕರು ಹೆಮ್ಮೆಯನ್ನು ಬೆಳೆಸುತ್ತಾ ಅಧಿಕಾರವನ್ನು ದುರುಪಯೋಗಿಸುವುದರ ವಿರುದ್ಧ ತಮ್ಮನ್ನು ಕಾಪಾಡಿ ಕೊಳ್ಳಬೇಕು.
6. ಹಿರಿಯನು ದೇವ ಜನರ ಮೇಲೆ ಏಕೆ ದೊರೆತನ ಮಾಡಬಾರದು?
6 ಒಬ್ಬ ಹಿರಿಯನು ಇತರ ಕ್ರೈಸ್ತರ ಮೇಲೆ ದೊರೆತನ ಮಾಡಬಾರದು. ಏಕಂದರೆ ಅವನು ಅವರ ಸಹ ಕಾರ್ಮಿಕನೇ ಹೊರತು ‘ಅವರ ನಂಬಿಕೆಯ ಮೇಲೆ ಯಜಮಾನ’ ನಲ್ಲ. (2 ಕೊರಿಂಥ 1:24) ಕೆಲವು ಅಪೊಸ್ತಲರು ಖ್ಯಾತಿಯನ್ನು ಅಪೇಕ್ಷಿಸಿದಾಗ ಯೇಸು ಹೇಳಿದ್ದು: “ಜನಗಳನ್ನಾಳುವವರು ಅವರ ಮೇಲೆ ಅಹಂಕಾರದಿಂದ ದೊರೆತನ ಮಾಡುತ್ತಾರೆ ಮತ್ತು ದೊಡ್ಡವರು ಬಲಾತ್ಕಾರದಿಂದ ಅಧಿಕಾರ ನಡಿಸುತ್ತಾರೆ ಎಂದು ನೀವು ಬಲ್ಲಿರಷ್ಟೆ. ನಿಮ್ಮಲ್ಲಿ ಹಾಗಿರ ಬಾರದು; ಆದರೆ ನಿಮ್ಮಲ್ಲಿ ಮೊದಲನೆಯವನಾಗಬೇಕೆಂದಿರುವವನು ನಿಮ್ಮ ಆಳಾಗಿರಬೇಕು. ಹಾಗೆಯೇ ಮನುಷ್ಯ ಕುಮಾರನು ಸೇವೆ ಮಾಡಿಸಿ ಕೊಳ್ಳುವದಕ್ಕೆ ಬರಲಿಲ್ಲ. ಸೇವೆ ಮಾಡುವುದಕ್ಕೂ ಅನೇಕರನ್ನು ಬಿಡಿಸಿ ಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡು ಕೊಡುವುದಕ್ಕೂ ಬಂದನು.” (ಮತ್ತಾಯ 20:20-28) ಹಿರಿಯನು ಮುಖ್ಯ ಕುರುಬನಲ್ಲ, ಕೇವಲ ಉಪಕುರುಬ. ಅವನು ಮಂದೆಯ ಮೇಲೆ ದೊರೆತನ ಮಾಡುವಲ್ಲಿ ಅಹಂಕಾರದ ಆತ್ಮವನ್ನು ಪ್ರದರ್ಶಿಸುತ್ತಾನೆ. ಮತ್ತು ತನ್ನ ದುರಭಿಮಾನದ ಹೆಬ್ಬಯಕೆಯನ್ನು ಹೆಚ್ಚಿಸಲು ಸಹಾಯಕ್ಕಾಗಿ ಅವನು ಇತರರನ್ನು ಪ್ರೇರಿಸುವಲ್ಲಿ ವಿಶೇಷವಾಗಿ ಹಾನಿಯಾಗುವ ಸಂಭವವಿದೆ. ಒಂದು ಜ್ಞಾನೋಕ್ತಿ ನುಡಿಯುವುದು: “ಹೃದಯದಲ್ಲಿ ಅಹಂಕಾರಿಗಳೆಲ್ಲಾ ಯೆಹೋವನಿಗೆ ಅಸಹ್ಯ. ಒಂದು ಕೈ ಇನ್ನೊಂದನ್ನು ಕೂಡಬಹುದಾದರೂ ಅವನು ಶಿಕ್ಷೆಯಿಂದ ವಿಮುಕ್ತಿ ಹೊಂದನು.”—ಜ್ಞಾನೋಕ್ತಿ 16:5, NW.
7, 8. (ಎ)ಕ್ರೈಸ್ತ ಹಿರಿಯರು ದೈನ್ಯತೆಯುಳ್ಳವರಾಗುವುದು ಏಕೆ ಅಗತ್ಯ? (ಬಿ) ಒಬ್ಬ ದೈನ್ಯತೆಯ ಹಿರಿಯನ ಉದಾಹರಣೆ ಕೊಡಿ.
7 ಆದುದರಿಂದ ಕ್ರೈಸ್ತ ಹಿರಿಯರು ‘ದೇವರ ಬಲಿಷ್ಠ ಹಸ್ತದ ಕೆಳಗೆ ತಮ್ಮನ್ನು ತಗ್ಗಿಸಿ ಕೊಳ್ಳಬೇಕು.’ ದುರಹಂಕಾರ ಆತ್ಮಿಕ ಉಪಯುಕ್ತತೆಗೆ ಅಡ್ಡ ಬರುತ್ತದೆ. ಏಕಂದರೆ ದೈನ್ಯತೆಯುಳ್ಳವರು ಮಾತ್ರ ದೈವಿಕ ಚಿತ್ತವನ್ನು ಮಾಡಲು ಸಮರ್ಪಕವಾದ ಹೃದಯ ಮತ್ತು ಮನಸ್ಸಿನ ನೆಲೆಯಲ್ಲಿರುತ್ತಾರೆ. “ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ. ದೀನಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ.” (1 ಪೇತ್ರ 5:5, 6) ಹೌದು, ಯೆಹೋವನು ವಿನೀತ ಮನಸ್ಕರನ್ನು ಆಶೀರ್ವದಿಸುತ್ತಾನೆ. ಯೋಗ್ಯತೆಯ ಪುರುಷರು ಕ್ರೈಸ್ತ ಹಿರಿಯರುಗಳಾಗಿ ಸೇವೆ ಮಾಡಲು ನೇಮಿಸಲ್ಪಡುವುದು ಇವರೊಳಗಿಂದಲೇ.
8 ಯೆಹೋವನ ಸಾಕ್ಷಿಗಳ ಆಧುನಿಕ ಇತಿಹಾಸ ವಿನೀತ ಸೇವೆಯನ್ನು ಸಲ್ಲಿಸಿದ ದೇವ ಭಕ್ತಿಯ ಜನರ ವೃತ್ತಾಂತಗಳಿಂದ ತುಂಬಿದೆ. ಉದಾಹರಣೆಗೆ, ಒಂದು ಕಾಲದಲ್ಲಿ ಪಿಲ್ಗ್ರಿಮ್ ಅಥವಾ ಸಂಚಾರ ಮೇಲ್ವಿಚಾರಕ ಮತ್ತು ಬಹುಕಾಲ ಬೆತೆಲ್ ಕೆಲಸಗಾರನಾಗಿದ್ದ ನಮ್ರ ಭಾವದ ಡಬ್ಲ್ಯು. ಜೆ. ಥಾರ್ನ್ ಎಂಬವರನ್ನು ತಕ್ಕೊಳ್ಳಿರಿ. ಅವರ ಕುರಿತು ಒಬ್ಬ ಕ್ರೈಸ್ತನು ಹೇಳಿದ್ದು: “ಸಹೋದರ ಥಾರ್ನ್ ಹೇಳಿದ ಮತ್ತು ನನಗೆ ಈ ದಿನದ ತನಕವೂ ಸಹಾಯ ಮಾಡಿರುವ ಒಂದು ಹೇಳಿಕೆಯನ್ನು ನಾನೆಂದಿಗೂ ಮರೆಯಲಾರೆ. ಅವರು ಹೇಳಿದ್ದನ್ನು ನಾನು ಉಲ್ಲೇಖಿಸುತ್ತೆನೆ. ‘ನಾನು ನನ್ನ ವಿಷಯ ಆತ್ಮ ಪ್ರಶಂಸೆ ಮಾಡ ತೊಡಗುವಾಗೆಲ್ಲಾ ನನ್ನನ್ನು ಒಂದು ಮೂಲೆಗೆ ಕರೆದು ಕೊಂಡು ಹೋಗಿ, “ಎಲಾ, ಧೂಳಿನ ಕಣವೇ, ಅಹಂಕಾರಗೊಳ್ಳಲು ನಿನ್ನಲ್ಲಿ ಏನಿದೆ” ಎಂದು ಹೇಳುತ್ತೇನೆ.’ ಇದು, ಹಿರಿಯರೂ ಇತರರೂ ಪ್ರದರ್ಶಿಸಲು ಅದೆಷ್ಟು ಪ್ರಶಂಸಾರ್ಹ ಗುಣ! “ನಮ್ರತೆ ಮತ್ತು ಯೆಹೋವನ ಭಯದ ಫಲವು ಧನ ಮಾನ ಜೀವವೇ.”—ಜ್ಞಾನೋಕ್ತಿ 22:4.
ಸೇವೆ ಮಾಡುವ ದೇವದತ್ತ ಬಯಕೆ
9. ಮೇಲ್ವಿಚಾರಕನಾಗಿ ಸೇವೆ ಮಾಡುವ ಬಯಕೆ ದೇವದತ್ತವೆಂದು ಏಕೆ ಹೇಳಸಾಧ್ಯ?
9 ಮೇಲ್ವಿಚಾರಕನಾಗಿ ಸೇವೆ ಮಾಡುವ ಬಯಕೆ ದೇವ ದತ್ತವೊ? ಹೌದು, ಏಕಂದರೆ ಯೆಹೋವನಿಗೆ ಪವಿತ್ರ ಸೇವೆ ಸಲ್ಲಿಸಲು ಬೇಕಾಗುವ ಪ್ರೇರಕ ಶಕ್ತಿ, ಧೈರ್ಯ ಮತ್ತು ಬಲವನ್ನು ಆತನ ಆತ್ಮ ಒದಗಿಸುತ್ತದೆ. ದೃಷ್ಟಾಂತಕ್ಕೆ, ಯೇಸುವಿನ ಹಿಂಸೆಗೊಳಗಾಗಿದ್ದ ಹಿಂಬಾಲಕರು ಸಾರಲು ಧೈರ್ಯಕ್ಕಾಗಿ ಬೇಡಿ ಕೊಂಡಾಗ ಏನಾಯಿತು? “ಅವರು ಕೂಡಿದ್ದ ಸ್ಥಳ ನಡುಗಿತು, ಅವರೆಲ್ಲರು ಪವಿತ್ರಾತ್ಮ ಭರಿತರಾಗಿ ದೇವರ ವಾಕ್ಯವನ್ನು ಧೈರ್ಯದಿಂದ ಹೇಳುವವರಾದರು.” (ಅಪೊಸ್ತಲರ ಕೃತ್ಯಗಳು 4:27-31) ಪವಿತ್ರಾತ್ಮ ಇಂಥ ಪರಿಣಾಮಗಳನ್ನು ಫಲಿಸಿರುವ ಕಾರಣ ಒಬ್ಬ ವ್ಯಕ್ತಿ ಕೆಲಸ ಪ್ರಯತ್ನ ಮಾಡುವಂತೆಯೂ ಅದು ನಡೆಸ ಬಲ್ಲದು.
10. (ಎ)ಒಬ್ಬ ಕ್ರೈಸ್ತ ಪುರುಷನ ಸ್ಥಾನಕ್ಕೆ ಪ್ರಯತ್ನಿಸದಿರುವ ಕ್ರೈಸ್ತನು ಏನು ಮಾಡಬಹುದು? (ಬಿ) ದೇವರು ಒಂದು ಪವಿತ್ರ ಸುಯೋಗವನ್ನು ಕೊಡುವುದಾದರೆ ಯಾವುದರ ಖಾತ್ರಿ ನಮಗಿರಬಲ್ಲದು?
10 ಒಬ್ಬ ಪಕ್ವತೆಯ ಕ್ರೈಸ್ತನು ಈ ಪ್ರಯತ್ನವನ್ನು ಏಕೆ ಮಾಡಲಿಕ್ಕಿಲ್ಲ? ಅವನು ಆತ್ಮಿಕ ಪುರುಷನಾಗಿದ್ದರೂ ಒಂದುವೇಳೆ ತಾನು ಕೊರತೆಯುಳ್ಳವನೆಂದು ಎಣಿಸಬಹುದು. (1 ಕೊರಿಂಥ 2:14, 15) ನಮಗೆ ನಮ್ಮ ವಿಷಯದಲ್ಲಿ ನಿರಭಿಮಾನ, ಅಂದರೆ ಅಭಿಮಾನ ಮಿತಿಯ ಪ್ರಜ್ಞೆ ಇರಬೇಕೆಂಬುದು ನಿಜ. (ಮೀಕ 6:8) ಒಂದು ಜವಾಬ್ದಾರಿಗೆ ನಾವೇ ಅತ್ಯಂತ ಯೋಗ್ಯರು ಎಂದು ದುರಹಂಕಾರದಿಂದ ಯೋಚಿಸುವ ಬದಲಿಗೆ “ದೀನರಲ್ಲಿ ಜ್ಞಾನ”ವಿದೆಯೆಂದು ಜ್ಞಾಪಿಸಿ ಕೊಳ್ಳುವುದು ಲೇಸು. (ಜ್ಞಾನೋಕ್ತಿ 11:2) ಆದರೆ, ದೇವರು ನಮಗೆ ಸೇವಾ ಸುಯೋಗವನ್ನು ಕೊಡುವಾಗ ಅದನ್ನು ನಿರ್ವಹಿಸಲು ಶಕ್ತಿಯನ್ನೂ ಒದಗಿಸುವನೆಂದು ನಾವು ಗ್ರಹಿಸಬೇಕು. “ನನ್ನನ್ನು ಬಲಪಡಿಸುವಾತನಲ್ಲಿದ್ದು ಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ” ಎಂದು ಪೌಲನು ಹೇಳಿದನು.—ಫಿಲಿಪ್ಪಿಯ 4:13.
11. ತನಗೆ ಸಲಹೆ ನೀಡುವುದರಲ್ಲಿ ವಿವೇಕದ ಕೊರತೆಯಿದೆ ಎಂದೆಣಿಸಿ ಈ ಸ್ಥಾನಕ್ಕೆ ಪ್ರಯತ್ನ ಮಾಡದಿರಬಹುದಾದ ಕ್ರೈಸ್ತನು ತನು ಮಾಡಸಾಥ್ಯವಿದೆ?
11 ಒಬ್ಬ ಕ್ರೈಸ್ತನು ತನಗೆ ಸಲಹೆ ನೀಡುವುದರಲ್ಲಿ ವಿವೇಕದ ಕೊರತೆಯಿದೆ ಎಂದೆಣಿಸಿ ಈ ಸ್ಥಾನಕ್ಕೆ ಪ್ರಯತ್ನ ಮಾಡದಿರಬಹುದು. ಹೀಗಿರುವಲ್ಲಿ ಅವನು ಪ್ರಾಯಶಃ ದೇವರ ವಾಕ್ಯದ ಹೆಚ್ಚು ಶೃದ್ಧಾಪೂರ್ವಕ ವಿದ್ಯಾರ್ಥಿಯಾಗಿ ವಿವೇಕವನ್ನು ಸಂಪಾದಿಸ ಬಲ್ಲನು ಮತ್ತು ಅವನು ವಿವೇಕಕ್ಕಾಗಿ ನಿಶ್ಚಯವಾಗಿಯೂ ಪ್ರಾರ್ಥಿಸಬೇಕು. ಯಾಕೋಬನು ಬರೆದುದು: “ನಿಮ್ಮಲ್ಲಿ ಯಾವನಿಗಾದರೂ ಜ್ಞಾನ [ವಿವೇಕ, NW] ಕಡಿಮೆಯಾಗಿದ್ದರೆ ಅವನು ದೇವರನ್ನು ಕೇಳಿಕೊಳ್ಳಲಿ, ಅದು ಅವನಿಗೆ ದೊರಕುವದು; ದೇವರು ಹಂಗಿಸದೆ ಎಲ್ಲರಿಗೂ ಉದಾರ ಮನಸ್ಸಿನಿಂದ ಕೊಡುವವನಾಗಿದ್ದಾನೆ. ಸ್ವಲ್ಪವೂ ಸಂದೇಹ ಪಡದೆ ನಂಬಿಕೆಯಿಟ್ಟು ಕೇಳಿಕೊಳ್ಳಬೇಕು. ಸಂದೇಹ ಪಡುವವನೋ ಗಾಳಿಯಿಂದ ಬಡಿಯಲ್ಪಟ್ಟ ಸಮುದ್ರದ ತೆರೆಯಂತೆ ಅಲೆಯುತ್ತಿರುವವನು. ಆ ಮನುಷ್ಯನು ತಾನು ಕರ್ತನಿಂದ ಏನಾದರೂ ಹೊಂದುವನೆಂದು ಭಾವಿಸದೆ ಇರಲಿ; ಅವನು ಎರಡು ಮನಸ್ಸುಳ್ಳವನೂ ತನ್ನ ನಡತೆಯಲ್ಲೆಲ್ಲಾ ಚಂಚಲನೂ ಆಗಿದ್ದಾನೆ.” (ಯಾಕೋಬ 1:5-8) ಪ್ರಾರ್ಥನೆಗೆ ಉತ್ತರವಾಗಿ, ದೇವರು ಸೊಲೊಮೋನನಿಗೆ, “ವಿವೇಕ ಮತ್ತು ತಿಳುವಳಿಕೆಯ ಹೃದಯ”ವನ್ನು ಕೊಟ್ಟನು. (1 ಅರಸು 3:9-14, NW) ಸೊಲೊಮೋನನದ್ದು ಒಂದು ಪ್ರತ್ಯೇಕ ಸಂದರ್ಭವಾಗಿತ್ತಾದರೂ ಶೃದ್ಧಾಪೂರ್ವಕವಾದ ಅಧ್ಯಯನದ ಮತ್ತು ದೇವರ ಸಹಾಯದ ಮೂಲಕ ಸಭಾ ಜವಾಬ್ದಾರಿ ವಹಿಸಿರುವ ಜನರು ನೀತಿಯಿಂದ ಇತರರಿಗೆ ಬುದ್ಧಿ ಹೇಳಬಲ್ಲರು. “ಯೆಹೋವನೇ ಜ್ಞಾನ [ವಿವೇಕ, NW] ವನ್ನು ಕೊಡುವಾತನು. ಅವರ ಬಾಯಿಂದಲೇ ತಿಳುವಳಿಕೆಯೂ ವಿವೇಕವೂ ಹೊರಟು ಬರುತ್ತದೆ.”—ಜ್ಞಾನೋಕ್ತಿ 2:6.
12. ಕಳವಳದ ಕಾರಣ ಒಬ್ಬ ಪುರುಷನು ಪ್ರಯತ್ನಿಸದಿರುವಲ್ಲಿ ಯಾವುದು ಅವನಿಗೆ ಸಹಾಯ ಮಾಡಬಲ್ಲದು?
12 ತುಸು ಕಳವಳವು ಒಬ್ಬ ಪುರುಷನು ಈ ಸ್ಥಾನಕ್ಕೆ ಪ್ರಯತ್ನಿಸದಂತೆ ತಡೆದು ಹಿಡಿಯಬಹುದು. ಹಿರಿಯನಾಗುವ ಭಾರದ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ತಾನು ಅಸಮರ್ಥನಾಗಬಹುದೆಂದು ಅವನು ಎಣಿಸ ಬಹುದು. ಪೌಲನು ಸಹ ಒಪ್ಪಿಕೊಂಡದ್ದು: “ಎಲ್ಲಾ ಸಭೆಗಳ ವಿಷಯವಾದ ಚಿಂತೆ [ಕಳವಳ, NW]ಯು ದಿನದಿನವೂ ನನ್ನನ್ನು ಪೀಡಿಸುತ್ತದೆ.” (2 ಕೊರಿಂಥ 11:28) ಆದರೆ ಈ ಕಳವಳದ ಅನುಭವವಾಗುವಾಗ ಏನು ಮಾಡಬೇಕೆಂದು ಅಪೊಸ್ತಲನಿಗೆ ತಿಳಿದಿತ್ತು. ಅವನು ಬರೆದುದು: “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವ ವಿಷಯದಲ್ಲಿ ದೇವರ ಮುಂದೆ ಕೃತಜ್ಞತಾ ಸ್ತುತಿಯನ್ನೂ ಪ್ರಾರ್ಥನೆ ವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವ ಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.” (ಫಿಲಿಪ್ಪಿಯ 4:6, 7) ಹೌದು, ಪ್ರಾರ್ಥನೆ ಹಾಗೂ ದೇವರಲ್ಲಿ ಭರವಸೆ ಕಳವಳವನ್ನು ಉಪಶಮನಗೊಳಿಸಲು ಸಹಾಯ ಮಾಡುವುದು.
13. ಒಬ್ಬನು ಸ್ಥಾನಕ್ಕೆ ಪ್ರಯತ್ನಿಸಲು ಹಿಂಜರಿಯುವಲ್ಲಿ ಅವನು ಹೇಗೆ ಪ್ರಾರ್ಥಿಸಬಹುದು?
13 ತುಸು ಕಳವಳ ಇನ್ನೂ ಕಾಡುವುದಾದರೆ, ಕೆಲಸಕ್ಕೆ ಪ್ರಯತ್ನಿಸಲು ಹಿಂಜರಿಯುವ ಪುರುಷನು ದಾವೀದನಂತೆ ಪ್ರಾರ್ಥಿಸಬಹುದು: “ದೇವಾ, ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೋ; ನನ್ನನ್ನು ಶೋಧಿಸಿ ನನ್ನ [ಅಶಾಂತ, NW] ಆಲೋಚನೆಗಳನ್ನು ಗೊತ್ತುಮಾಡು, ನಾನು ಕೇಡಿನ ಮಾರ್ಗದಲ್ಲಿರುತ್ತೇನೋ ಏನೋ ನೋಡಿ ಸನಾತನ ಮಾರ್ಗದಲ್ಲಿ ನನ್ನನ್ನು ನಡಿಸು.” (ಕೀರ್ತನೆ 139:23, 24) “ಅಶಾಂತ” ಅಥವಾ “ಕಳವಳದ” ಆಲೋಚನೆಗಳು ಯಾವ ಪ್ರಕೃತಿಯವುಗಳೇ ಆಗಿರಲಿ ಅವುಗಳನ್ನು ನಿಭಾಯಿಸಿ ಆತ್ಮಿಕ ಪ್ರಗತಿ ಮಾಡಲಾಗುವಂತೆ ದೇವರು ಸಹಾಯ ಮಾಡಬಲ್ಲನು. (ನ್ಯೂ ಇಂಟರ್ನ್ಯಾಷನಲ್ ವರ್ಷನ್ ನೋಡಿ.) ಇನ್ನೊಂದು ಕೀರ್ತನೆಯಲ್ಲಿ ಇದನ್ನು ಉತ್ತಮವಾಗಿ ಹೇಳಲಾಗಿದೆ: “ಯೆಹೋವನೇ, ನನ್ನ ಕಾಲು ಜಾರಿತೆಂದು ಅಂದಾಗಲೇ ನಿನ್ನ ಕೃಪೆಯು ನನಗೆ ಆಧಾರವಾಯಿತು. ನನ್ನಲ್ಲಿ ಅನೇಕ ಚಿಂತೆಗಳಿರುವಾಗ ನಿನ್ನ ಸಂತೈಸುವಿಕೆಯಿಂದಲೇ ನನ್ನ ಪ್ರಾಣಕ್ಕೆ ಸಂತೋಷವುಂಟಾಗುತ್ತದೆ.”—ಕೀರ್ತನೆ 94:18, 19.
ಯೆಹೋವನ ಚಿತ್ತದಂತೆ ಆನಂದದಿಂದ ಸೇವೆ ಮಾಡಿರಿ
14. ಸ್ಥಾನಕ್ಕೆ ಪ್ರಯತ್ನ ಮಾಡದ ಕ್ರೈಸ್ತನು ದೇವರ ಪವಿತ್ರಾತ್ಮಕ್ಕಾಗಿ ಏಕೆ ಪ್ರಾರ್ಥಿಸಬೇಕು?
14 ಕಳವಳ, ಸಾಮರ್ಥ್ಯ ಕೊರತೆಯ ಅನಿಸಿಕೆ ಮತ್ತು ಪ್ರೇರಕ ಶಕ್ತಿಯ ಕೊರತೆಯ ಕಾರಣ ಒಬ್ಬ ಪುರುಷನು ಮೇಲ್ವಿಚಾರಕನ ಸ್ಥಾನಕ್ಕೆ ಪ್ರಯತ್ನಿಸದಿರುವುದಾದರೆ ದೇವರ ಆತ್ಮಕ್ಕಾಗಿ ಪ್ರಾರ್ಥಿಸುವುದು ಯೋಗ್ಯ. ಯೇಸು ಹೇಳಿದ್ದು: “ಹಾಗಾದರೆ ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೇ ಪದಾರ್ಥಗಳನ್ನು ಕೊಡ ಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮ ವರವನ್ನು ಕೊಡುವಲ್ಲವೇ.” (ಲೂಕ 11:13) ಸಮಾಧಾನ ಮತ್ತು ಆತ್ಮ ನಿಯಂತ್ರಣಗಳು ಆತ್ಮದ ಫಲಗಳಾಗಿರುವುದರಿಂದ, ಇದೇ ಆತ್ಮವು ನಾವು ಕಳವಳ ಮತ್ತು ಸಾಮರ್ಥ್ಯ ಕೊರತೆಯ ಮನೋಭಾವಗಳನ್ನು ನಿಭಾಯಿಸುವಂತೆ ಸಹಾಯ ಮಾಡಬಲ್ಲದು.—ಗಲಾತ್ಯ 5:22, 23.
15. ಪ್ರೇರಕ ಶಕ್ತಿಯ ಕೊರತೆಯುಳ್ಳವರು ತಮ್ಮನ್ನು ಸೇವಾ ಸುಯೋಗಗಳಿಗೆ ದೊರಕಿಸಿಕೊಳ್ಳಲು ಯಾವ ರೀತಿಯ ಪ್ರಾರ್ಥನೆಗಳು ಸಹಾಯ ಮಾಡ ಬಲ್ಲವು?
15 ಪ್ರೇರಕ ಶಕ್ತಿಯ ಕೊರತೆಯ ವಿಷಯವೇನು? ದೀಕ್ಷಾಸ್ನಾತ ಕ್ರೈಸ್ತರಾದ ನಾವು, ದೇವರು ತನ್ನ ಇಷ್ಟವನ್ನು ನಾವು ಮಾಡುವಂತೆ ನಡಿಸಲಿ ಎಂದು ಪ್ರಾರ್ಥಿಸುವುದು ಅಗತ್ಯ. ದಾವೀದನು ಬೇಡಿಕೊಂಡದ್ದು: “ಓ ಯೆಹೋವನೇ, ನಿನ್ನ ಮಾರ್ಗಗಳನ್ನು ನಾನು ತಿಳಿಯುವಂತೆ ಮಾಡು. . . . ನಿನ್ನ ಸತ್ಯದಲ್ಲಿ ನಾನು ನಡೆಯುವಂತೆ ಮಾಡಿ, ನನಗೆ ಕಲಿಸು.” (ಕೀರ್ತನೆ 25:4, 5, NW) ಇಂಥ ಪ್ರಾರ್ಥನೆಗಳು ನಾವು ತಪ್ಪುದಾರಿಯಿಂದ ದೂರವಿರುವಂತೆ ಸಹಾಯ ಮಾಡಬಲ್ಲವು ಮತ್ತು ಕೆಲಸ ಪ್ರಯತ್ನಕ್ಕೆ ನಮ್ಮಲ್ಲಿ ಪ್ರೇರಕ ಶಕ್ತಿಯ ಕೊರತೆಯಿರುವಾಗಲೂ ನಾವು ಈ ರೀತಿ ಪ್ರಾರ್ಥಿಸಬಹುದು. ಸೇವಾಸುಯೋಗಗಳನ್ನು ಅಂಗೀಕರಿಸುವ ಬಯಕೆ ನಮಗೆ ಬರುವಂತೆ ಮಾಡಲು ನಾವು ಯೆಹೋವನನ್ನು ಕೇಳಿಕೊಳ್ಳಬಹುದು. ವಾಸ್ತವವಾಗಿ, ನಾವು ದೇವರಾತ್ಮಕ್ಕಾಗಿ ಪ್ರಾರ್ಥಿಸಿ, ಅದು ನಮ್ಮನ್ನು ನಡಿಸುವಂತೆ ಬಿಡುವಲ್ಲಿ, ಸೇವಾಸುಯೋಗ ನೀಡಲ್ಪಡುವಾಗ ನಾವು ಅದಕ್ಕಾಗಿ ನಮ್ಮನ್ನು ದೊರಕಿಸಿಕೊಳ್ಳುವೆವು ಎಂಬುದು ನಿಸ್ಸಂಶಯ. ಏಕಂದರೆ ದೇವರ ಸೇವಕರು ಆತನ ಆತ್ಮವನ್ನು ನಿರೋಧಿಸಲು ಎಂದಿಗೂ ಮನಸ್ಸು ಮಾಡರು.—ಎಫೆಸ 4:30.
16. ಸಭಾ ಜವಾಬ್ದಾರಿಗಳಿಗೆ ಪ್ರಯತ್ನ ಮಾಡಲು ಯಾವ ಮನೋಭಾವ ಬಲವಾದ ಪ್ರೇರಕ ಶಕ್ತಿಯನ್ನು ಒದಗಿಸುತ್ತದೆ?
16 “ಕ್ರಿಸ್ತನ ಮನಸ್ಸು” ಉಳ್ಳವರಾದ ನಾವು ದೇವರ ಇಷ್ಟವನ್ನು ಮಾಡಲು ಆನಂದಿಸುತ್ತೇವೆ. (1 ಕೊರಿಂಥ 2:16) ಯೇಸುವಿನ ಮನೋಭಾವವು ಕೀರ್ತನೆಗಾರನು ಹೇಳಿದಂತೆ ಇತ್ತು: “ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವದೇ ನನ್ನ ಸಂತೋಷವು. ನಿನ್ನ ಧರ್ಮೋದೇಶವು ನನ್ನ ಅಂತರಂಗದಲ್ಲಿದೆ.” (ಕೀರ್ತನೆ 40:8) ಕ್ರಿಸ್ತನು, “ಇಗೋ ದೇವರೇ ನಿನ್ನ ಚಿತ್ತವನ್ನು ನೆರವೇರಿಸುವುದಕ್ಕೆ ಬಂದಿದ್ದೇನೆ” ಎಂದು ಹೇಳಿದನು ಮತ್ತು ಯಾತನೆಯ ಕಂಭದ ವರೆಗೂ ಅವನು ಇದನ್ನು ಮಾಡಿದನು. (ಇಬ್ರಿಯ 10:9, 10) ಯೆಹೋವನ ಸೇವೆಯಲ್ಲಿ ಸಾಧ್ಯವಿರುವುದನ್ನೆಲ್ಲಾ ಮಾಡುವ ಇಚ್ಛೆ, ಸಭಾ ಜವಾಬ್ದಾರಿಗಳಿಗೆ ಪ್ರಯತ್ನಿಸಲು ಬಲವಾದ ಪ್ರೇರಕ ಶಕ್ತಿಯನ್ನು ಒದಿಗಿಸುತ್ತದೆ.
ಭವಿಷ್ಯತ್ತಿಗೆ ನೋಡಿ
17. (ಎ)ಒಂದು ಕಾಲದಲ್ಲಿ ಮಾಡಿದಷ್ಟು ಪೂರ್ತಿಯಾಗಿ ಈಗ ಸೇವೆ ಮಾಡದ ಪುರುಷರನ್ನು ಏಕೆ ನಿರುತ್ತೇಜನಗೊಳಿಸಬಾರದು? (ಬಿ) ಅತ್ಯಂತ ದೊಡ್ಡ ಸುಯೋಗ ಯಾವುದು?
17 ಒಮ್ಮೆ ಸಭೆಯ ಪ್ರಾಮುಖ್ಯ ಜವಾಬ್ದಾರಿಗಳನ್ನು ವಹಿಸಿದ್ದ ಕೆಲವರಿಗೆ, ಆರೋಗ್ಯ ಸಮಸ್ಯೆ ಅಥವಾ ಇತರ ಕಾರಣಗಳಿಂದಾಗಿ ಈಗ ಅಂಥ ಸುಯೋಗಗಳಿರುವುದಿಲ್ಲ. ಇಂಥವರನ್ನು ನಿರುತ್ತೇಜನಗೊಳಿಸಬಾರದು. ಒಂದು ಕಾಲದಲ್ಲಿ ಸೇವೆ ಮಾಡಿದಷ್ಟು ಪೂರ್ತಿಯಾಗಿ ಈಗ ಸೇವೆ ಮಾಡಲು ಸಾಧ್ಯವಿಲ್ಲದ ಅನೇಕ ನಂಬಿಗಸ್ತ ಪುರುಷರು ಸಮಗ್ರತೆ ಪಾಲಿಸುವವರಾಗಿ ಸ್ಥಿರತೆಯಿಂದ ಇನ್ನೂ ನಿಂತಿರುತ್ತಾರೆಂದು ನಮಗೆ ತಿಳಿದದೆ. (ಕೀರ್ತನೆ 25:21) ದೀರ್ಘ ಕಾಲದ ವಿನೀತ ಹಿರಿಯರು ಹಿರಿಯ ಮಂಡಲಿಯಲ್ಲಿ ಇರುತ್ತಾ ತಮ್ಮ ಅನುಭವವನ್ನು ಇತರರಿಗೆ ದೊರಕಿಸಿಬಹುದು. ವೃದ್ಧಾಪ್ಯ ಅಥವಾ ದೌರ್ಬಲ್ಯದ ಕಾರಣ ಅವರು ಜವಾಬ್ದಾರಿಯನ್ನು ತ್ಯಜಿಸಬೇಕೆಂದಿಲ್ಲ. ಈ ಮಧ್ಯೆ, ಯೆಹೋವನ ಪ್ರತಿಯೊಬ್ಬ ಸಾಕ್ಷಿ, ಆತನ ಪವಿತ್ರ ನಾಮದ ಸಮರ್ಥಕರಾಗಿ, ‘ದೇವರ ರಾಜತ್ವದ ಮಹಿಮೆಯ ಕುರಿತು ಮಾತಾಡುವ’ ಈ ಅತ್ಯುತ್ತಮ ಸುಯೋಗವನ್ನು ಬೆಲೆಯುಳ್ಳದ್ದಾಗಿ ಎಣಿಸಲಿ.—ಕೀರ್ತನೆ 145:10-13.
18. (ಎ)ಒಬ್ಬ ಹಿರಿಯನು ಅಥವಾ ಶುಶ್ರೂಷಾ ಸೇವಕನು ಸ್ಥಾನ ಕಳೆದುಕೊಂಡರೆ ಯಾವುದರ ಅಗತ್ಯವಿದ್ದೀತು? (ಬಿ) ಸ್ಥಾನನಷ್ಟವಾಗಿದ್ದ ಒಬ್ಬ ಹಿರಿಯನು ಯಾವ ಉತ್ತಮ ಮನೋಭಾವವನ್ನು ಪ್ರದರ್ಶಿಸಿದನು?
18 ನೀವು ಒಮ್ಮೆ ಹಿರಿಯರು ಅಥವಾ ಶುಶ್ರೂಷಾ ಸೇವಕರಾಗಿದ್ದು ಈಗ ಹಾಗೆ ಸೇವೆ ಮಾಡುತ್ತಿಲ್ಲವಾಗಿರುವಲ್ಲಿ ದೇವರು ಇನ್ನೂ ನಿಮ್ಮನ್ನು ಪಾಲಿಸುತ್ತಾನೆ ಮತ್ತು ಪ್ರಾಯಶಃ, ಭವಿಷ್ಯತ್ತಿನಲ್ಲಿ ಅನಿರೀಕ್ಷಿತ ಸುಯೋಗಗಳನ್ನು ನಿಮಗೆ ಕೊಟ್ಟಾನೆಂದು ನಿಶ್ಚಯ ಮಾಡಿ ಕೊಳ್ಳಿರಿ. (1 ಪೇತ್ರ 5:6, 7) ಸ್ವಲ್ಪ ಹೊಂದಿಕೊಳ್ಳುವ ಆವಶ್ಯಕತೆ ನಿಮಗಿರುವಲ್ಲಿ ತಪ್ಪನ್ನು ಒಪ್ಪಿಕೊಂಡು ದೇವರ ಸಹಾಯದಿಂದ ಅದನ್ನು ತಿದ್ದಲು ಮನಸ್ಸುಳ್ಳವರಾಗಿರಿ. ಹಿರಿಯ ಸ್ಥಾನದಿಂದ ತೆಗೆಯಲ್ಪಟ್ಟಿರುವ ಕೆಲವರು ಅಕ್ರೈಸ್ತ ಮನೋಭಾವವನ್ನು ಆರಿಸಿಕೊಂಡಿದ್ದಾರೆ, ಮತ್ತು ಕೆಲವರು ನಿಷ್ಕ್ರಿಯರಾಗಿ ಸತ್ಯದಿಂದ ಬಿದ್ದು ಹೋಗಿರುವುದೂ ಉಂಟು. ಆದರೆ ಉತ್ತಮ ಮನೋಭಾವವನ್ನು ಪ್ರದರ್ಶಿಸಿದವರಂತೆ ಇರುವುದು ಎಷ್ಟು ವಿವೇಕ! ಉದಾಹರಣೆಗೆ, ಮಧ್ಯ ಅಮೆರಿಕದಲ್ಲಿ ಅನೇಕ ವರ್ಷ ಸೇವೆ ಮಾಡಿದ ಒಬ್ಬನನ್ನು ಹಿರಿಯ ಸ್ಥಾನದಿಂದ ತೆಗೆಯಲಾದಾಗ ಅವನಂದದ್ದು: “ನಾನು ಇಷ್ಟು ದೀರ್ಘಕಾಲ ಅಮೂಲ್ಯವೆಂದೆಣಿಸಿದ ಈ ಸುಯೋಗವನ್ನು ಕಳೆದು ಕೊಂಡದ್ದರಲ್ಲಿ ನನಗೆ ತುಂಬಾ ನೋವಿದೆ. ಆದರೆ ಸಹೋದರರು ನನ್ನನ್ನು ಯಾವ ವಿಧದಲ್ಲೇ ಉಪಯೋಗಿಸಲಿ, ಅದರಲ್ಲಿ ಶ್ರಮ ಪಟ್ಟು ಕೆಲಸ ಮಾಡಿ ನನ್ನ ಸೇವಾ ಸುಯೋಗವನ್ನು ಪುನಃ ಗಳಿಸಲು ಕೆಲಸ ನಡಿಸುತ್ತೇನೆ.” ಮತ್ತು ಸಕಾಲದಲ್ಲಿ, ಈ ಸಹೋದರನಿಗೆ ಪುನಃ ಹಿರಿಯನಾಗುವ ಸುಸಂದರ್ಭ ಲಭ್ಯವಾಯಿತು.
19. ಹಿರಿಯ ಅಥವಾ ಶುಶ್ರೂಷಾ ಸೇವಕನ ಸ್ಥಾನ ಕಳೆದುಕೊಂಡಿದ್ದ ಸಹೋದರನಿಗೆ ಯಾವ ಯೋಗ್ಯ ಸಲಹೆ ಕೊಡಲ್ಪಟ್ಟಿದೆ?
19 ನೀವು ಹಿರಿಯ ಅಥವಾ ಶುಶ್ರೂಷಾ ಸೇವಕ ಸ್ಥಾನದಿಂದ ತೆಗೆಯಲ್ಪಟ್ಟಿದ್ದರೆ ನಮ್ರ ಮನೋಭಾವವನ್ನು ಇಟ್ಟು ಕೊಳ್ಳಿರಿ. ಭಾವೀ ಸುಯೋಗಗಳಿಗೆ ನಿಮ್ಮನ್ನು ಅನರ್ಹರನ್ನಾಗಿ ಮಾಡಬಲ್ಲ ನಿಷ್ಠುರ ಮನೋಭಾವವನ್ನು ವಿಸರ್ಜಿಸಿರಿ. ದೇವಭಕ್ತಿಯ ಮನೋಭಾವ ಗೌರವವನ್ನು ಸಂಪಾದಿಸುತ್ತದೆ. ನಿರುತ್ತೇಜಿತರಾಗುವ ಬದಲಿಗೆ ಯೆಹೋವನು ನಿಮ್ಮ ಶುಶ್ರೂಷೆಯನ್ನು ಅಥವಾ ನಿಮ್ಮ ಕುಟುಂಬವನ್ನು ಹೇಗೆ ಆಶೀರ್ವದಿಸಿದ್ದಾನೆಂದು ಜ್ಞಾಪಿಸಿಕೊಳ್ಳಿರಿ. ನಿಮ್ಮ ಪರಿವಾರವನ್ನು ಆತ್ಮಿಕವಾಗಿ ಕಟ್ಟಿರಿ. ರೋಗಿಗಳನ್ನು ಭೇಟಿಯಾಗಿರಿ. ಬಲಹೀನರಿಗೆ ಪ್ರೋತ್ಸಾಹ ನೀಡಿರಿ. ಎಲ್ಲಕ್ಕೂ ಮಿಗಿಲಾಗಿ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿ ದೇವರನ್ನು ಸ್ತುತಿಸುವ ಸುವಾರ್ತೆ ಸಾರುವ ಸುಯೋಗವನ್ನು ಬೆಲೆಯುಳ್ಳದ್ದೆಂದು ಎಣಿಸಿರಿ.—ಕೀರ್ತನೆ 145:1, 2; ಯೆಶಾಯ 43:10-12.
20. ಮಾಜಿ ಹಿರಿಯ ಅಥವಾ ಶುಶ್ರೂಷಾ ಸೇವಕನಿಗೆ ಹಿರಿಯ ಮಂಡಲಿ ಹೇಗೆ ಸಹಾಯ ಮಾಡಸಾಧ್ಯವಿದೆ?
20 ಒಬ್ಬ ಮಾಜಿ ಮೇಲ್ವಿಚಾರಕನು ಅಥವಾ ಶುಶ್ರೂಷಾ ಸೇವಕನು ತನ್ನ ಸುಯೋಗವನ್ನು ಸ್ವಯಂ ಪ್ರೇರಿತನಾಗಿ ತ್ಯಜಿಸಿದಾಗಲೂ, ಈ ಸ್ಥಾನನಷ್ಟ ಅವನಿಗೆ ಪ್ರಯಾಸ ತರುತ್ತದೆಂದು ಹಿರಿಯ ಮಂಡಲಿಯವರು ಗ್ರಹಿಸಬೇಕು. ಅವನಿಗೆ ಬಹಿಷ್ಕಾರವಾಗಿಲ್ಲದಿರುವಲ್ಲಿ, ಆದರೆ ಆ ಸಹೋದರನು ಖಿನ್ನನಾಗಿದ್ದಾನೆಂದು ಹಿರಿಯರು ನೋಡುವಲ್ಲಿ ಅವರು ಪ್ರೀತಿಯ ಆತ್ಮಿಕ ನೆರವನ್ನು ಒದಗಿಸಬೇಕು. (1 ಥೆಸಲೊನೀಕ 5:14) ಸಭೆಗೆ ಅವನ ಆವಶ್ಯವಿದೆ ಎಂದು ಅವನು ಗ್ರಹಿಸುವಂತೆ ಅವರು ಸಹಾಯ ಮಾಡಬೇಕು. ಅವನಿಗೆ ಬುದ್ಧಿವಾದ ಬೇಕಾಗಿದ್ದರೂ, ಒಬ್ಬ ವಿನೀತ ಮತ್ತು ಕೃತಜ್ಞ ಪುರುಷನಿಗೆ ಸಭೆಯಲ್ಲಿ ಪುನಃ ಹೆಚ್ಚಿನ ಸೇವಾ ಸುಯೋಗಗಳನ್ನು ಪಡೆಯುವ ಮೊದಲು ದೀರ್ಘಕಾಲದ ಆವಶ್ಯಕತೆ ಇಲ್ಲದೆ ಹೋದೀತು.
21. ಸೇವಾ ಸುಯೋಗಗಳಿಗೆ ಕಾದವರಾರು, ಮತ್ತು ಇಂದು ಅದಕ್ಕಾಗಿ ಕಾಯುತ್ತಿರುವವರಿಗೆ ಏನು ಸೂಚಿಸಲ್ಪಡುತ್ತದೆ?
21 ನೀವು ಸ್ಥಾನಕ್ಕೆ ಪ್ರಯತ್ನ ಮಾಡುತ್ತಿರುವವರಾದರೆ, ಹೆಚ್ಚಿನ ಸೇವಾ ಸುಯೋಗಗಳನ್ನು ಪಡೆಯುವ ಮೊದಲು ಇನ್ನೂ ಸ್ವಲ್ಪ ಕಾಲ ಕಾಯ ಬೇಕಾದೀತು. ತಾಳ್ಮೆಗೆಡ ಬೇಡಿರಿ. ಐಗುಪ್ತದ ದಾಸತ್ವದಿಂದ ಇಸ್ರಾಯೇಲ್ಯರನ್ನು ಬಿಡಿಸಲು ಉಪಯೋಗಿಸಲ್ಪಡುವ ಮೊದಲು ಮೋಶೆ 40 ವರ್ಷ ಕಾಯುವ ಆವಶ್ಯವಿತ್ತು. (ಅಪೊಸ್ತಲರ ಕೃತ್ಯಗಳು 7:23-36) ಮೋಶೆಯ ಉತ್ತರಾಧಿಕಾರಿಯಾಗಿ ನೇಮಿಸಲ್ಪಡುವ ಮೊದಲು ಯೆಹೋಶುವನು ದೀರ್ಘಕಾಲ ಅನುಚರನಾಗಿ ಸೇವೆ ಮಾಡಿದನು. (ವಿಮೋಚನಕಾಂಡ 33:11; ಅರಣ್ಯಕಾಂಡ 27:15-23) ಇಸ್ರಾಯೇಲಿನ ಸಿಂಹಾಸನವನ್ನೇರುವ ಮೊದಲು ದಾವೀದನು ಸ್ವಲ್ಪ ಸಮಯ ಕಾದನು. (2 ಸಮುವೇಲ 2:7; 5:3) ಪೇತ್ರ ಮತ್ತು ಯೋಹಾನ ಮಾರ್ಕ ಕೆಲವು ಕಾಲದ ಶುದ್ಧೀಕರಣಕ್ಕೊಳಗಾದರೆಂದು ವ್ಯಕ್ತವಾಗುತ್ತದೆ. (ಮತ್ತಾಯ 26:69-75; ಯೋಹಾನ 21:15-19; ಅಪೊಸ್ತಲರ ಕೃತ್ಯಗಳು 13:13; 15:36-41; ಕೊಲೊಸ್ಸೆಯ 4:10) ಹೀಗೆ, ನಿಮಗೆ ಈಗ ಸಭಾ ಜವಾಬ್ದಾರಿ ಇಲ್ಲವಾದರೆ, ಹೆಚ್ಚು ಅನುಭವ ಪಡೆಯುವುದರ ಮೂಲಕ ನೀವು ರೂಪಿಸಲ್ಪಡಲು ಯೆಹೋವನು ಬಿಟ್ಟಿರಬಹುದು. ಹೇಗಿದ್ದರೂ, ನೀವು ಸ್ಥಾನಕ್ಕೆ ಪ್ರಯತ್ನಿಸುವಾಗ ದೇವರ ಸಹಾಯವನ್ನು ಯೋಚಿಸಿರಿ. ಆಗ ಆತನು ನಿಮಗೆ ಹೆಚ್ಚಿನ ಸುಯೋಗಗಳನ್ನು ಕೊಟ್ಟು ಆಶೀರ್ವದಿಸಾನು. ಈ ಮಧ್ಯೆ, ಸಭಾ ಜವಾಬ್ದಾರಿಗಳಿಗೆ ಅರ್ಹರಾಗಲು ಶೃದ್ಧಾಪೂರ್ವಕವಾಗಿ ಕೆಲಸ ನಡಿಸಿ ದಾವೀದನ ಮನೋಭಾವವನ್ನು ಪ್ರದರ್ಶಿಸಿರಿ. ಅವನು ಹೇಳಿದ್ದು: “ನನ್ನ ಬಾಯಿ ಯೆಹೋವನನ್ನು ಕೀರ್ತಿಸುವದು; ಎಲ್ಲಾ ಜೀವಿಗಳು ಆತನ ಪರಿಶುದ್ಧ ನಾಮವನ್ನು ಯುಗಯುಗಾಂತರಗಳಲ್ಲಿಯೂ ಕೊಂಡಾಡಲಿ.”—ಕೀರ್ತನೆ 145:21. (w90 9/1)
ನೀವು ಹೇಗೆ ಉತ್ತರಿಸುವಿರಿ?
◻ ಕ್ರೈಸ್ತ ಹಿರಿಯರು ಯಾವುದರ ವಿರುದ್ಧ ಎಚ್ಚರಿಕೆಯಿಂದಿರಬೇಕು?
◻ ಕಳವಳ ಅಥವಾ ಸಾಮರ್ಥ್ಯ ಕೊರತೆಯ ಕಾರಣ ಸ್ಥಾನಕ್ಕೆ ಪ್ರಯತ್ನಿಸದವರಿಗೆ ಏನು ಸಹಾಯ ಮಾಡಬಲ್ಲದು?
◻ ಸಭಾ ಜವಾಬ್ದಾರಿಗೆ ತನ್ನನ್ನು ದೊರಕಿಸಿಕೊಳ್ಳಲು ಒಬ್ಬನಿಗೆ ಯಾವುದು ಪ್ರೇರಕ ಶಕ್ತಿಯನ್ನು ನೀಡಬಲ್ಲದು?
◻ ಮಾಜಿ ಹಿರಿಯರು ಮತ್ತು ಶುಶ್ರೂಷಾ ಸೇವಕರು ಭವಿಷ್ಯತ್ತನ್ನು ಯಾವ ಮನೋಭಾವದಿಂದ ನೋಡಬೇಕು?
[ಪುಟ 11 ರಲ್ಲಿರುವ ಚಿತ್ರ]
ಡಬ್ಲ್ಯು. ಜೆ. ಥಾರ್ನ್ ಹಿರಿಯನಾಗಿ ಉತ್ತಮ ಮಾದರಿಯನ್ನಿಟ್ಟರು
[ಪುಟ 13 ರಲ್ಲಿರುವ ಚಿತ್ರ]
ಯೇಸುವಿನಂತೆ, ನೀವು, ಯೆಹೋವನ ಸೇವೆಯಲ್ಲಿ ಸಾಧ್ಯವಿರುವದನ್ನೆಲ್ಲಾ ಮಾಡಬಯಸುವಿರೋ?