ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 4/14 ಪು. 12-13
  • ನಿಮ್ಮ ಕಣ್ಣೀರ ಹಿಂದಿರುವ ರಹಸ್ಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮ್ಮ ಕಣ್ಣೀರ ಹಿಂದಿರುವ ರಹಸ್ಯ
  • ಎಚ್ಚರ!—2014
  • ಅನುರೂಪ ಮಾಹಿತಿ
  • ಇಷ್ಟೆಲ್ಲ ಕಣ್ಣೀರು ಏಕೆ?
    ಎಚ್ಚರ!—1993
  • ಯೇಸುವಿನ ಕಣ್ಣೀರು ನಮಗೆ ತುಂಬ ಪಾಠಗಳನ್ನ ಕಲಿಸುತ್ತೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ನಿಮ್ಮ ಕಣ್ಣೀರನ್ನ ಯೆಹೋವ ಕೈಯಾರೆ ಕೂಡಿಸಿಡ್ತಾನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • “ಇಗೋ, ನಾನು ಎಲ್ಲವನ್ನು ಹೊಸದು ಮಾಡುತ್ತಿದ್ದೇನೆ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
ಇನ್ನಷ್ಟು
ಎಚ್ಚರ!—2014
g 4/14 ಪು. 12-13
ಕಣ್ಣೀರು ಸುರಿಸುತ್ತಿರುವ ವ್ಯಕ್ತಿ

ನಿಮ್ಮ ಕಣ್ಣೀರ ಹಿಂದಿರುವ ರಹಸ್ಯ

ಅಳು ಹುಟ್ಟಿನಿಂದಲೇ ನಮ್ಮ ಸಂಗಾತಿ. ನಾವು ಮಕ್ಕಳಾಗಿದ್ದಾಗ ನಮ್ಮ ಭಾವನಾತ್ಮಕ, ಶಾರೀರಿಕ ಅವಶ್ಯಕತೆಗಳಿಗಾಗಿ ಅಳುತ್ತಿದ್ದೆವು. ಆದ್ದರಿಂದ ಪರಿಣತನೊಬ್ಬನು ಶಿಶುಗಳ ಅಳುವನ್ನು ಆಹಾರ ಪೂರೈಸುವ “ಹೊಕ್ಕಳ ಬಳ್ಳಿಗೆ” ಹೋಲಿಸಿದ್ದಾನೆ. ಆದರೆ, ನಾವು ದೊಡ್ಡವರಾಗುತ್ತಾ ಹೋದಂತೆ ಬೇರೆ ವಿಧದಲ್ಲಿ ಸಂವಾದ ಮಾಡಲು ಶಕ್ತರಾದರೂ, ಕಣ್ಣೀರು ಸುರಿಸುತ್ತೇವೆ. ಏಕೆ?

ಭಾವನಾತ್ಮಕ ಕಣ್ಣೀರು ಉಕ್ಕಿ ಬರಲು ಅನೇಕ ಕಾರಣಗಳಿವೆ. ದುಃಖ, ನಿರಾಶೆ, ದೈಹಿಕ ಅಥವಾ ಮಾನಸಿಕ ವೇದನೆ ಇವೆಲ್ಲಾ ನಾವು ಕಣ್ಣೀರಿಡುವಂತೆ ಮಾಡುತ್ತವೆ. ಸಂತೋಷ, ಸಮಾಧಾನ, ಸಾಧನೆಯಂಥ ಸನ್ನಿವೇಶಗಳು ಕೂಡ ಭಾವನಾತ್ಮಕ ಕಣ್ಣೀರು ಬರಿಸುತ್ತವೆ. ಆದರೆ ಇವು ಆನಂದಬಾಷ್ಪಗಳು. ಕೆಲವೊಮ್ಮೆ ಒಬ್ಬರು ಅಳುವುದನ್ನು ನೋಡಿ ಇನ್ನೊಬ್ಬರಿಗೆ ಕಣ್ಣೀರು ಬರುತ್ತದೆ. “ಯಾವುದೇ ಕಾರಣಕ್ಕೇ ಇರಲಿ, ಯಾರಾದರು ಅಳುವುದನ್ನು ನೋಡಿದರೆ ಸಾಕು ನನಗೂ ಅಳು ಬಂದು ಬಿಡುತ್ತದೆ” ಎಂದು ಮರಿಯಾ ತಿಳಿಸುತ್ತಾರೆ. ಚಲನಚಿತ್ರದಲ್ಲಿ ಅಥವಾ ಪುಸ್ತಕದಲ್ಲಿ ಇರುವ ಕಾಲ್ಪನಿಕ ಸನ್ನಿವೇಶಗಳು ಸಹ ನಾವು ಅಳುವಂತೆ ಮಾಡುತ್ತವೆ.

ಕಣ್ಣೀರು ಹಾಕುತ್ತಿರುವ ಯುವತಿ, ಅಳುತ್ತಿರುವ ಮಗು ಮತ್ತು ಸ್ತ್ರೀಯೊಬ್ಬಳ ಆನಂದ ಬಾಷ್ಪ

ಅಳುವುದಕ್ಕೆ ಕಾರಣ ಏನೇ ಆಗಿರಲಿ, ಇದೊಂದು ಪ್ರಭಾವಶಾಲಿ ಮೌನ ಭಾಷೆ. “ಕೆಲವೇ ಕ್ಷಣಗಳಲ್ಲಿ ಅನೇಕ ವಿಷಯಗಳನ್ನು ತಿಳಿಯಪಡಿಸುವ ಬೇರೆ ಕೆಲವು ವಿಧಾನಗಳೂ ಇವೆ” ಎಂದು ಅಡಲ್ಟ್‌ ಕ್ರೈಯಿಂಗ್‌ (ಇಂಗ್ಲಿಷ್‌) ಎಂಬ ಪುಸ್ತಕ ವಿವರಿಸುತ್ತದೆ. ಕಣ್ಣೀರು ನಮ್ಮನ್ನು ಪ್ರತಿಕ್ರಿಯಿಸುವಂತೆ ಪ್ರಚೋದಿಸುತ್ತದೆ. ಉದಾಹರಣೆಗೆ, ಯಾರಾದರೂ ಕಣ್ಣೀರಿಡುವಾಗ ಅದು ಅವರು ಕಷ್ಟದಲ್ಲಿದ್ದಾರೆಂದು ನಮ್ಮನ್ನು ಎಚ್ಚರಿಸುತ್ತದೆ. ಹಾಗಾಗಿ, ಒಬ್ಬರು ದುಃಖದಿಂದ ಕಣ್ಣೀರು ಹಾಕುವಾಗ ಅದನ್ನು ನೋಡಿಯೂ ನೋಡದಂತೆ ಇರಲು ನಮ್ಮಲ್ಲಿ ಅನೇಕರಿಗೆ ಕಷ್ಟ. ಆದ್ದರಿಂದ ನಾವು ಅಳುತ್ತಿರುವವರಿಗೆ ಸಾಂತ್ವನ ನೀಡುತ್ತೇವೆ ಅಥವಾ ನೆರವಾಗುತ್ತೇವೆ.

ಅಳು ನಮ್ಮ ಭಾವನೆಗಳನ್ನು ಹೊರಹಾಕಲು ಸಹಾಯಕರ ಮತ್ತು ಅಳುವನ್ನು ತಡೆಯುವ ರೂಢಿ ಆರೋಗ್ಯಕ್ಕೆ ಹಾನಿಕರ ಎನ್ನುವುದು ಕೆಲವು ಪರಿಣತರ ನಂಬಿಕೆ. ಅಳುವುದರಿಂದಾಗುವ ಶಾರೀರಿಕ ಅಥವಾ ಮಾನಸಿಕ ಪ್ರಯೋಜನಗಳು ವೈಜ್ಞಾನಿಕವಾಗಿ ಸಾಬೀತಾಗಿಲ್ಲ ಎನ್ನುವುದು ಇನ್ನು ಕೆಲವರ ವಾದ. ಅದೇನೇ ಆಗಿದ್ದರೂ, 85 ಪ್ರತಿಶತ ಸ್ತ್ರೀಯರು ಮತ್ತು 73 ಪ್ರತಿಶತ ಪುರುಷರು ಅತ್ತ ನಂತರ ಮನಸ್ಸು ಹಗುರವಾಗುತ್ತದೆಂದು ವರದಿ ಮಾಡಿರುವುದು ಸಮೀಕ್ಷೆಗಳಿಂದ ತಿಳಿದುಬಂದಿದೆ. “ಕೆಲವೊಮ್ಮೆ ನಾನು ಅಳಬೇಕೆಂದು ನನಗನಿಸುತ್ತದೆ. ಅತ್ತ ನಂತರ ನನಗೆ ನಿರಾಳ ಅನಿಸುತ್ತದೆ, ವಿಷಯಗಳನ್ನು ಸ್ಪಷ್ಟವಾಗಿ ಸರಿಯಾದ ದೃಷ್ಟಿಕೋನದಿಂದ ನೋಡಲು ಸಾಧ್ಯವಾಗುತ್ತದೆ” ಎಂದು ನವೋಮಿ ತಿಳಿಸುತ್ತಾರೆ.

85 ಪ್ರತಿಶತ ಸ್ತ್ರೀಯರು ಮತ್ತು 73 ಪ್ರತಿಶತ ಪುರುಷರು ಅತ್ತ ನಂತರ ಮನಸ್ಸು ಹಗುರವಾಗುತ್ತದೆಂದು ವರದಿ ಮಾಡಿರುವುದು ಸಮೀಕ್ಷೆಗಳಿಂದ ತಿಳಿದುಬಂದಿದೆ

ಆದರೆ, ಈ ನಿರಾಳ ಅನಿಸಿಕೆ ಕೇವಲ ಅಳುವುದರ ಮೇಲೆಯೇ ಹೊಂದಿಕೊಂಡಿಲ್ಲ. ನಾವು ಅತ್ತಾಗ ಇತರರು ಪ್ರತಿಕ್ರಿಯಿಸುವ ರೀತಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಉದಾಹರಣೆಗೆ, ನಾವು ಕಣ್ಣೀರು ಹಾಕಿದಾಗ ಇತರರು ಸಾಂತ್ವನ ಅಥವಾ ಸಹಾಯ ನೀಡುವುದಾದರೆ ನಮಗೆ ನಿರಾಳ ಅನಿಸುತ್ತದೆ. ಆದರೆ, ನಾವು ಕಣ್ಣೀರಿಟ್ಟಾಗ ಇತರರು ಸರಿಯಾಗಿ ಪ್ರತಿಕ್ರಿಯಿಸದಿದ್ದರೆ ಮುಜುಗರವಾಗಬಹುದು ಅಥವಾ ನಿರ್ಲಕ್ಷ್ಯಮಾಡುತ್ತಿದ್ದಾರೆಂದು ಅನಿಸಬಹುದು.

ಕಣ್ಣೀರ ಹಿಂದಿರುವ ರಹಸ್ಯ ಇನ್ನೂ ರಹಸ್ಯವಾಗಿಯೇ ಉಳಿದಿದೆ. ಆದರೆ ನಮಗೆ ಗೊತ್ತಿರುವುದಿಷ್ಟೇ, ಕಣ್ಣೀರು ಸುರಿಸುವುದು ದೇವರು ಕೊಟ್ಟಿರುವ ಒಂದು ಕುತೂಹಲಕಾರಿ ಭಾವನಾತ್ಮಕ ಪ್ರತಿಕ್ರಿಯೆ. (g14-E 03)

ನಿಮಗಿದು ಗೊತ್ತಿತ್ತಾ?

ಸಾಮಾನ್ಯವಾಗಿ ನವಜಾತ ಶಿಶು ಅಳುವಾಗ ಕಣ್ಣೀರು ಸುರಿಸುವುದಿಲ್ಲ. ಕಣ್ಣುಗಳನ್ನು ಸಂರಕ್ಷಿಸಲು ಬೇಕಾದಷ್ಟು ತೇವಾಂಶ ಶಿಶುಗಳಲ್ಲಿರುತ್ತದೆ. ಕೆಲವು ವಾರಗಳು ಕಳೆದ ನಂತರ ಅವುಗಳ ಕಣ್ಣೀರ ಗ್ರಂಥಿ ಸಂಪೂರ್ಣವಾಗಿ ವಿಕಸಿಸಿದಾಗ ಕಣ್ಣೀರು ಬರಲು ಆರಂಭವಾಗುತ್ತದೆ.

ಮೂರು ಬಗೆಯ ಕಣ್ಣೀರು

  • ಕನಿಷ್ಟಮಿತಿಯ ಕಣ್ಣೀರು. ಇದು ಕಣ್ಣೀರಿನ ಗ್ರಂಥಿಯಿಂದ ನಿರಂತರವಾಗಿ ಉತ್ಪತ್ತಿಯಾಗುವ ತಿಳಿ ದ್ರವವಾಗಿದೆ. ಇದು ಕಣ್ಣನ್ನು ಸಂರಕ್ಷಿಸಿ, ತೇವದಿಂದಿರಿಸುತ್ತದೆ. ಅಲ್ಲದೆ, ನಮ್ಮ ದೃಷ್ಟಿಯನ್ನು ಸಹ ವೃದ್ಧಿಸುತ್ತದೆ. ಕಣ್ಣು ಮಿಟುಕಿಸಿದಾಗೆಲ್ಲ ಈ ದ್ರವವು ನಮ್ಮ ಕಣ್ಣುಗಳನ್ನು ಆವರಿಸುತ್ತದೆ.

  • ಪ್ರತಿಕ್ರಿಯಾತ್ಮಕ ಕಣ್ಣೀರು. ಯಾವುದೇ ವಸ್ತು ಅಥವಾ ಧೂಳು ಕಣ್ಣಿಗೆ ಬಿದ್ದಾಗ ಬರುವಂಥದ್ದೇ ಈ ಪ್ರತಿಕ್ರಿಯಾತ್ಮಕ ಕಣ್ಣೀರು. ಇದು ನಾವು ಆಕಳಿಸುವಾಗ ಮತ್ತು ನಗುವಾಗ ಸಹ ಬರುತ್ತದೆ.

  • ಭಾವನಾತ್ಮಕ ಕಣ್ಣೀರು. ಈ ಕಣ್ಣೀರು “ಮನುಷ್ಯರಿಗೆ” ಮಾತ್ರ ಬರುವಂಥದ್ದು. ನಾವು ಭಾವನಾತ್ಮಕವಾಗಿ ಕುಗ್ಗಿಹೋದಾಗ ಈ ಕಣ್ಣೀರನ್ನು ಸುರಿಸುತ್ತೇವೆ. ಪ್ರತಿಕ್ರಿಯಾತ್ಮಕ ಕಣ್ಣೀರಿಗಿಂತ ಈ ಕಣ್ಣೀರಲ್ಲಿ ಪ್ರೋಟೀನ್‌ನ ಅಂಶ ಸುಮಾರು 24 ಪ್ರತಿಶತ ಹೆಚ್ಚಿರುತ್ತದೆ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ