ಯುವಜನರ ಪ್ರಶ್ನೆ
ನನ್ನಲ್ಲಿನ ದುಃಖವನ್ನು ಹೇಗೆ ಹೊಡೆದೋಡಿಸಬಲ್ಲೆ?
“ನನ್ನ ಸ್ನೇಹಿತರಲ್ಲಿ ಯಾರಿಗಾದರೂ ಕಷ್ಟಬಂದಾಗ ಅವರ ಸಮಸ್ಯೆಗಳನ್ನು ಬಗೆಹರಿಸಲು, ಅವರು ಸ್ವಲ್ಪ ಸುಧಾರಿಸಿಕೊಳ್ಳುವಂತೆ ಸಹಾಯಮಾಡಲು ಅವರೊಟ್ಟಿಗೆ ಇರುತ್ತೇನೆ. ಆದರೆ ನನಗೆ ದುಃಖವಾದಾಗ ಯಾರಿಗೂ ಹೇಳಿಕೊಳ್ಳದೆ ಒಬ್ಬಳೇ ರೂಮಿನಲ್ಲಿ ಅಳುತ್ತಿರುತ್ತೇನೆ. ಇದು ಕೆಲವರಿಗೆ ಮಾತ್ರ ಗೊತ್ತು.”—ಕಟ್ರೀನ.*
“ನನಗೆ ದುಃಖವಾದಾಗ ಯಾರೊಟ್ಟಿಗೂ ಬೆರೆಯದೆ ಒಂಟಿಯಾಗಿರುತ್ತೇನೆ. ಯಾರಾದರೂ ಎಲ್ಲಿಗಾದರೂ ಆಮಂತ್ರಿಸಿದರೆ ಏನಾದರೂ ನೆಪ ಹೇಳಿ ಜಾರಿಕೊಳ್ಳುತ್ತೇನೆ. ನನ್ನೊಳಗಿನ ದುಃಖವನ್ನು ಮನೆಮಂದಿ ಮುಂದೆಯೂ ತೋರಿಸಿಕೊಳ್ಳುವುದಿಲ್ಲ. ನಾನು ಚೆನ್ನಾಗಿಯೇ ಇದ್ದೇನೆ ಎಂದುಕೊಳ್ಳುತ್ತಾರೆ.”—ರಾಕೇಶ್.
ಕಟ್ರೀನ, ರಾಕೇಶ್ರಂತೆ ನಿಮಗೆಂದಾದರೂ ಅನಿಸಿದೆಯೋ? ಹಾಗನಿಸಿರುವಲ್ಲಿ ‘ನನಗೇನೋ ಆಗಿದೆ’ ಎಂದು ದುಡುಕಿ ತೀರ್ಮಾನಿಸಬೇಡಿ. ನಿಜವೇನೆಂದರೆ, ಎಲ್ಲರೂ ಒಂದಲ್ಲ ಒಂದು ಸಮಯ ದುಃಖದಿಂದಿರುತ್ತಾರೆ. ಬೈಬಲ್ ಕಾಲದ ನಂಬಿಗಸ್ತ ಸ್ತ್ರೀ ಪುರುಷರಿಗೂ ಹಾಗಾಗಿದೆ.
ಕೆಲವೊಮ್ಮೆ ನಿಮ್ಮ ದುಃಖಕ್ಕೆ ಕಾರಣವೇನೆಂದು ನಿಮಗೆ ಗೊತ್ತಿರುತ್ತದೆ, ಇನ್ನೂ ಕೆಲವೊಮ್ಮೆ ಗೊತ್ತಿರುವುದಿಲ್ಲ. 19 ವರುಷದ ಅಕಿಲಾ ಹೀಗನ್ನುತ್ತಾಳೆ: “ನೀವು ದುಃಖದಿಂದಿರಲು ಏನೋ ದೊಡ್ಡ ಸಮಸ್ಯೆ ಆಗಿರಬೇಕೆಂದೇನಿಲ್ಲ. ಯಾವ ಸಮಯದಲ್ಲಾದರೂ ಅಂದರೆ ನಿಮ್ಮ ಬದುಕಿನಲ್ಲಿ ಸಮಸ್ಯೆಗಳೇ ಇಲ್ಲದಿದ್ದಾಗಲೂ ದುಃಖ ಉಕ್ಕಿಬರಬಹುದು. ಇದು ವಿಚಿತ್ರವೆನಿಸಿದರೂ ನಿಜ.”
ನಿಮ್ಮ ದುಃಖಕ್ಕೆ ಕಾರಣ ಇರಲಿ, ಇಲ್ಲದಂತೆ ತೋರಲಿ ಅದರ ಕಪಿಮುಷ್ಠಿಯಲ್ಲಿರುವಾಗ ನೀವೇನು ಮಾಡಬಹುದು?
ಸಲಹೆ #1: ಅದರ ಬಗ್ಗೆ ಮಾತಾಡಿರಿ. “ಮಿತ್ರನ ಪ್ರೀತಿಯು ನಿರಂತರ” ಎನ್ನುತ್ತದೆ ಬೈಬಲ್.—ಜ್ಞಾನೋಕ್ತಿ 17:17.
ಕಟ್ರೀನ: “ನನ್ನ ದುಃಖವನ್ನು ಯಾರೊಂದಿಗಾದರೂ ಹಂಚಿಕೊಂಡ ಬಳಿಕ ನನ್ನ ಮನಸ್ಸು ತುಂಬ ಹಗುರವಾಗುತ್ತದೆ. ಹೀಗೆ ಒಬ್ಬರಿಗಾದರೂ ನನ್ನ ಸಂಕಟ ತಿಳಿದು ಬರುತ್ತದೆ. ದುಃಖದ ಗುಂಡಿಯಲ್ಲಿ ಬಿದ್ದಿರುವ ನನಗೆ ಅವರು ಹಗ್ಗದ ಆಸರೆ ನೀಡಿ ಮೇಲಕ್ಕೆಳೆದು ಸಹಾಯಮಾಡುತ್ತಾರೆ.”
ಕಿವಿಮಾತು: ನೀವು ದುಃಖದಲ್ಲಿ ಮುಳುಗಿರುವಾಗ ಮನಸ್ಸನ್ನು ತೋಡಿಕೊಳ್ಳಬಹುದಾದ ಒಬ್ಬ ನಿಜ “ಮಿತ್ರನ” ಹೆಸರನ್ನು ಇಲ್ಲಿ ಬರೆಯಿರಿ.
....
ಸಲಹೆ #2: ಅದರ ಬಗ್ಗೆ ಬರೆಯಿರಿ. ದುಃಖವು ಜೀವನದ ಕಡೆಗೆ ನಿಮಗಿರುವ ನೋಟವನ್ನು ಮಬ್ಬಾಗಿಸುವಲ್ಲಿ ನಿಮ್ಮ ತಲೆಯಲ್ಲಿ ತುಂಬಿರುವುದನ್ನೆಲ್ಲ ಲಿಖಿತ ರೂಪಕ್ಕೆ ಇಳಿಸಲು ಪ್ರಯತ್ನಿಸಿ. ದಾವೀದನು ದೇವರ ಪ್ರೇರಣೆಯಿಂದ ಬರೆದ ಕೀರ್ತನೆಗಳಲ್ಲಿ ಕೆಲವೊಮ್ಮೆ ತನ್ನ ಅತೀವ ದುಃಖವನ್ನು ವ್ಯಕ್ತಪಡಿಸಿದ್ದುಂಟು. (ಕೀರ್ತನೆ 6:6) ನೀವೂ ಹಾಗೆಯೇ ನಿಮ್ಮ ಭಾವನೆಗಳನ್ನು ಬರೆದರೆ “ಸುಜ್ಞಾನವನ್ನೂ ಬುದ್ಧಿಯನ್ನೂ ಭದ್ರವಾಗಿ” ಇಟ್ಟುಕೊಳ್ಳಲು ಅಂದರೆ ಆಲೋಚನಾ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ನೆರವಾಗುವುದು.—ಜ್ಞಾನೋಕ್ತಿ 3:21.
ಹಂಸ: “ದುಃಖದ ನಿಮಿತ್ತ ಮನಸ್ಸಿನಲ್ಲಿ ಅಸ್ತವ್ಯಸ್ತವಾಗಿರುವ ಆಲೋಚನೆಗಳನ್ನೆಲ್ಲ ಬರೆಯುವುದರ ಮೂಲಕ ಅವನ್ನು ವ್ಯವಸ್ಥಿತಗೊಳಿಸಲು ನನಗೆ ಸಾಧ್ಯವಾಗುತ್ತದೆ. ನೀವೂ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿದಾಗ ನಿಮ್ಮ ದುಃಖಕ್ಕೆ ಕಾರಣವೇನೆಂದು ಅರ್ಥವಾಗುತ್ತದೆ. ಆಗ ದುಃಖ ಸ್ವಲ್ಪ ಕಡಿಮೆಯಾಗುವುದು.”
ಕಿವಿಮಾತು: ಕೆಲವರಿಗೆ ಡೈರಿ ಬರೆಯುವ ಅಭ್ಯಾಸವಿದೆ. ನಿಮಗೂ ಆ ಅಭ್ಯಾಸವಿರುವಲ್ಲಿ ಅದರಲ್ಲಿ ಯಾವುದನ್ನೂ ಸೇರಿಸಬಹುದು? ನೀವು ದುಃಖದಿಂದಿರುವ ಸಮಯದಲ್ಲಿ ನಿಮಗೆ ಹೇಗನಿಸುತ್ತದೆ ಹಾಗೂ ನಿಮ್ಮ ದುಃಖಕ್ಕೆ ಮೂಲ ಕಾರಣ ಏನೆಂದು ನೆನಸುತ್ತೀರಿ ಎಂಬುದನ್ನು ಸವಿವರವಾಗಿ ಬರೆಯಿರಿ. ಒಂದು ತಿಂಗಳ ನಂತರ ಅದನ್ನು ಮತ್ತೆ ಓದಿ. ಅದರ ಬಗ್ಗೆ ನಿಮ್ಮ ಭಾವನೆ ಬದಲಾಗಿದೆಯೋ? ಆಗಿರುವಲ್ಲಿ, ಆ ಬದಲಾವಣೆಗೆ ಕಾರಣ ಏನೆಂದು ಬರೆಯಿರಿ.
ಸಲಹೆ #3: ಅದರ ಬಗ್ಗೆ ಪ್ರಾರ್ಥಿಸಿ. ನಿಮ್ಮ ಚಿಂತೆಗಳ ಬಗ್ಗೆ ಪ್ರಾರ್ಥಿಸಿದರೆ ‘ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ನಿಮ್ಮ ಮಾನಸಿಕ ಶಕ್ತಿಗಳನ್ನೂ ಕಾಯುವುದು’ ಎಂದು ಬೈಬಲ್ ಹೇಳುತ್ತದೆ.—ಫಿಲಿಪ್ಪಿ 4:7.
ಎಸ್ತರ್: “ನನಗೆ ಯಾಕೆ ಇಷ್ಟು ದುಃಖವಾಗುತ್ತಿದೆಯೆಂದು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದರೂ ಗೊತ್ತಾಗುತ್ತಿರಲಿಲ್ಲ. ಕಾರಣಗಳಿಲ್ಲದೆ ದುಃಖಿಸಿ ದುಃಖಿಸಿ ರೋಸಿಹೋಗಿದ್ದೆ. ಸಂತೋಷವಾಗಿರಲು ಸಹಾಯಮಾಡುವಂತೆ ಯೆಹೋವ ದೇವರ ಬಳಿ ಬೇಡಿಕೊಂಡೆ. ಕೊನೆಗೂ ನನ್ನ ದುಃಖವನ್ನು ಹೊಡೆದೋಡಿಸಲು ಶಕ್ತಳಾದೆ. ಪ್ರಾರ್ಥನೆಗಿರುವ ಶಕ್ತಿಯನ್ನು ಎಂದೂ ಕಡಿಮೆ ಅಂದಾಜುಮಾಡಬೇಡಿ.”
ಕಿವಿಮಾತು: ಕೀರ್ತನೆ 139:23, 24ನ್ನು ಮಾದರಿಯಾಗಿಟ್ಟು ಯೆಹೋವನಿಗೆ ಪ್ರಾರ್ಥನೆ ಮಾಡಿ. ಯೆಹೋವನ ಮುಂದೆ ನಿಮ್ಮ ಹೃದಯ ಬಿಚ್ಚಿ ಮಾತಾಡಿ. ನಿಮ್ಮ ದುಃಖದ ಮೂಲ ಕಾರಣವನ್ನು ಕಂಡುಹಿಡಿಯಲು ಸಹಾಯಕ್ಕಾಗಿ ಬೇಡಿಕೊಳ್ಳಿ.
ಮೇಲೆ ಕೊಡಲಾಗಿರುವ ಸಲಹೆಗಳಲ್ಲದೆ ದೇವರ ವಾಕ್ಯದಲ್ಲಿ ಇನ್ನೂ ಹಲವಾರು ಅತ್ಯಮೂಲ್ಯ ವಿಷಯಗಳಿವೆ. (ಕೀರ್ತನೆ 119:105) ಬೈಬಲ್ ವೃತ್ತಾಂತಗಳಿಂದ ಸಿಗುವ ಪ್ರೋತ್ಸಾಹದಾಯಕ ಅಂಶಗಳನ್ನು ಮನಸ್ಸಿನಲ್ಲಿ ತುಂಬಿಸಿಕೊಂಡರೆ ಅವು ನಿಮ್ಮ ಆಲೋಚನೆ, ಭಾವನೆ, ಕ್ರಿಯೆಗಳ ಮೇಲೆ ಸಕಾರಾತ್ಮಕ ಪರಿಣಾಮಬೀರುವವು. (ಕೀರ್ತನೆ 1:1-3) ಬೈಬಲಿನ ಅಪೊಸ್ತಲರ ಕಾರ್ಯಗಳು ಎಂಬ ಪುಸ್ತಕದಲ್ಲಿ, ಹುರಿದುಂಬಿಸುವಂಥ ರೋಮಾಂಚಕರ ವೃತ್ತಾಂತಗಳಿವೆ. ನಿಮ್ಮ ಬೈಬಲ್ ವಾಚನದಿಂದ ಪ್ರೋತ್ಸಾಹದಾಯಕ ಅಂಶಗಳನ್ನು ಕಂಡುಕೊಳ್ಳಲು ನಿಮಗೆ ಇನ್ನಷ್ಟು ಸಹಾಯಮಾಡುವಂಥ ವಿಷಯಗಳು ಯುವ ಜನರ ಪ್ರಶ್ನೆಗಳು ಕಾರ್ಯಸಾಧಕ ಉತ್ತರಗಳು ಭಾಗ – 2a ಎಂಬ ಇಂಗ್ಲಿಷ್ ಪುಸ್ತಕದಲ್ಲಿ “ರೋಲ್ ಮಾಡಲ್” ಎಂಬ ಶೀರ್ಷಿಕೆಗಳುಳ್ಳ ಪುಟಗಳಲ್ಲಿವೆ. ಈ ಪುಟಗಳಲ್ಲಿ ಚರ್ಚಿಸಲಾಗಿರುವ 9 ವ್ಯಕ್ತಿಗಳ ವೃತ್ತಾಂತಗಳಲ್ಲಿ ಯೋಸೇಫ, ಹಿಜ್ಕೀಯ, ಲುದ್ಯ, ದಾವೀದರ ವೃತ್ತಾಂತಗಳು ಕೆಲವು. ಪುಟ 227ರಲ್ಲಿ ಅಪೊಸ್ತಲ ಪೌಲನ ಬಗ್ಗೆ ತಿಳಿಸಲಾಗಿದೆ. ಅವನು ತನ್ನ ಕುಂದುಕೊರತೆಗಳ ನಿಮಿತ್ತ ಕೆಲವೊಮ್ಮೆ ಅನುಭವಿಸುತ್ತಿದ್ದ ನಕಾರಾತ್ಮಕ ಭಾವನೆಗಳನ್ನು ಹೇಗೆ ಜಯಿಸಿದನು ಎಂಬುದನ್ನು ಓದಬಲ್ಲಿರಿ.
ಎಷ್ಟು ಪ್ರಯತ್ನಿಸಿದರೂ ದುಃಖದ ಭಾವನೆಗಳು ನಿಮ್ಮ ಬೆಂಬಿಡದಿರುವಲ್ಲಿ ಆಗೇನು?
ದುಃಖ ನಿಮ್ಮ ಬೆಂಬಿಡದಾಗ
“ಬೆಳಬೆಳಗ್ಗೆ ಕಣ್ತೆರೆದಾಗ ಕೆಲವೊಮ್ಮೆ, ಮತ್ತೊಂದು ದಿನವನ್ನು ವ್ಯರ್ಥವಾಗಿ ಕಳೆಯುವ ಬದಲು ಮಲಗಿಕೊಂಡಿರುವುದೇ ವಾಸಿ ಎಂದನಿಸುತ್ತದೆ” ಎನ್ನುತ್ತಾನೆ ರೋಶನ್. ಇವನಿಗೆ ತೀವ್ರ ಖಿನ್ನತೆ (ಕ್ಲಿನಿಕಲ್ ಡಿಪ್ರೆಷನ್) ಇದೆ. ಈ ಖಿನ್ನತೆ ಅನೇಕರನ್ನು ಬಾಧಿಸುತ್ತಿದೆ. ಯುವಜನರಲ್ಲಿ 25% ಮಂದಿ ವಯಸ್ಕರಾಗುವಷ್ಟರಲ್ಲಿ ಒಂದಲ್ಲ ಒಂದು ರೀತಿಯ ಖಿನ್ನತೆಯಿಂದ ಬಳಲುತ್ತಾರೆಂದು ಸಂಶೋಧನೆಗಳು ತೋರಿಸುತ್ತವೆ.
ಖಿನ್ನತೆ ಇದೆಯೋ ಇಲ್ಲವೋ ಎಂದು ತಿಳಿಯುವುದು ಹೇಗೆ? ಇದರ ಕೆಲವು ಲಕ್ಷಣಗಳು ಹೀಗಿವೆ: ಮೂಡ್ ಹಾಗೂ ನಡವಳಿಕೆಯಲ್ಲಿ ದೊಡ್ಡ ಬದಲಾವಣೆ, ಜನರೊಂದಿಗೆ ಬೆರೆಯದೆ ಒಂಟಿಯಾಗಿರುವುದು, ಬಹುಮಟ್ಟಿಗೆ ಎಲ್ಲಾ ಚಟುವಟಿಕೆಗಳಲ್ಲಿ ಅನಾಸಕ್ತಿ, ಊಟದ ಹಾಗೂ ನಿದ್ದೆಯ ರೂಢಿಗಳಲ್ಲಿ ಗಮನಾರ್ಹ ಬದಲಾವಣೆ, ‘ನಾನು ಯಾವುದಕ್ಕೂ ಪ್ರಯೋಜನವಿಲ್ಲ’ ಎಂಬ ಭಾವನೆ ಹಾಗೂ ಅನಗತ್ಯ ದೋಷಿ ಮನೋಭಾವ.
ಒಂದಲ್ಲ ಒಂದು ಸಮಯದಲ್ಲಿ ಹೆಚ್ಚುಕಡಿಮೆ ಎಲ್ಲರಲ್ಲೂ ಮೇಲೆ ತಿಳಿಸಿರುವ ಒಂದು ಅಥವಾ ಹೆಚ್ಚು ಲಕ್ಷಣಗಳು ಕಂಡುಬರುತ್ತವೆ. ಆದರೆ ನಿಮ್ಮಲ್ಲಿ ಈ ಲಕ್ಷಣಗಳು ಎರಡು ವಾರಕ್ಕಿಂತ ಹೆಚ್ಚಿನ ಸಮಯದ ವರೆಗೆ ಇರುವಲ್ಲಿ ನಿಮ್ಮ ಹೆತ್ತವರೊಂದಿಗೆ ಮಾತಾಡಿ ಡಾಕ್ಟರ್ ಬಳಿ ಹೋಗಬಾರದೇಕೆ? ನಿಮ್ಮ ದುಃಖಕ್ಕೆ ಯಾವುದಾದರೂ ವೈದ್ಯಕೀಯ ಕಾರಣವಿದೆಯೊ ಎಂಬುದನ್ನು ಡಾಕ್ಟರ್ ಕಂಡುಹಿಡಿಯಬಲ್ಲರು.b
ನೀವು ತೀವ್ರ ಖಿನ್ನತೆಯಿಂದ ಬಳಲುತ್ತಿರುವಲ್ಲಿ ತಲೆತಗ್ಗಿಸುವ ಅವಶ್ಯಕತೆಯಿಲ್ಲ. ಖಿನ್ನತೆಯಿಂದ ಬಳಲುತ್ತಿದ್ದ ಅನೇಕರು ಚಿಕಿತ್ಸೆ ತೆಗೆದುಕೊಂಡು ಸುಧಾರಿಸಿಕೊಂಡಿದ್ದಾರೆ. ಹೀಗೆ ಎಷ್ಟೋ ದಿನದಿಂದ ಇದ್ದ ದುಃಖದಿಂದ ಅವರು ಸ್ವಲ್ಪಮಟ್ಟಿಗಾದರೂ ಹೊರಬರಲು ಸಾಧ್ಯವಾಗಿದೆ. ನೀವು ದುಃಖದಿಂದಿರುವ ಕಾರಣ ಖಿನ್ನತೆಯಿರಲಿ ಬೇರೆ ಏನೇ ಇರಲಿ ಕೀರ್ತನೆ 34:18ರಲ್ಲಿರುವ ಈ ಸಾಂತ್ವನದ ಮಾತುಗಳನ್ನು ಯಾವಾಗಲೂ ಮನಸ್ಸಿನಲ್ಲಿಡಿ: “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ.” (g10-E 09)
“ಯುವಜನರ ಪ್ರಶ್ನೆ” ಲೇಖನಮಾಲೆಯ ಹೆಚ್ಚಿನ ಲೇಖನಗಳು www.watchtower.org/ype ವೆಬ್ಸೈಟ್ನಲ್ಲಿವೆ
[ಪಾದಟಿಪ್ಪಣಿಗಳು]
a ಈ ಲೇಖನದಲ್ಲಿ ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.
b ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.
ದುಃಖವು ದೀರ್ಘಸಮಯದ ವರೆಗೆ ಉಳಿದಾಗ ಕೆಲವು ಯುವಜನರು ತಮ್ಮ ಜೀವವನ್ನು ಅಂತ್ಯಗೊಳಿಸುವ ಬಗ್ಗೆ ಯೋಚಿಸುತ್ತಾರೆ. ನಿಮಗೂ ಇಂಥ ಯೋಚನೆ ಬಂದಿರುವಲ್ಲಿ, ತಡಮಾಡದೆ ಈಗಲೇ ವಿಶ್ವಾಸಾರ್ಹ ಪ್ರಾಯಸ್ಥ ವ್ಯಕ್ತಿಯೊಂದಿಗೆ ಮಾತಾಡಿ.—2008 ಜುಲೈ-ಸೆಪ್ಟೆಂಬರ್ ಎಚ್ಚರ! ಪತ್ರಿಕೆಯ ಪುಟ 25-27 ನೋಡಿ.
ಯೋಚಿಸಿ ನೋಡಿ
● ಅಳುವುದರಿಂದ ಪ್ರಯೋಜನಗಳಿವೆಯೋ?
“ನಾನು ಅಷ್ಟು ಸುಲಭವಾಗಿ ಅಳುವವಳಲ್ಲ, ಆದರೆ ದುಃಖದಿಂದಿರುವಾಗ ಅಳಲೇಬೇಕಾಗುತ್ತದೆ. ಮನಸಾರೆ ಅತ್ತುಬಿಡುವ ಮೂಲಕ ಭಾವನಾತ್ಮಕವಾಗಿ ಸಮಸ್ಥಿತಿಗೆ ಮರಳುವುದಕ್ಕೆ ಸಹಾಯವಾಗುತ್ತದೆ. ನಂತರ ನಾನು ಸರಿಯಾಗಿ ಯೋಚಿಸಲು ಪ್ರಾರಂಭಿಸುತ್ತೇನೆ. ಮುಂದೆ ಸಂತೋಷವಿದೆ ಎಂಬುದನ್ನು ನೋಡಲು ನನಗೆ ಸಾಧ್ಯವಾಗುತ್ತದೆ.” —ಲತಾ.
● ದುಃಖ ನಿಭಾಯಿಸಲು ಇತರರಿಂದ ನಿಮಗೆ ಹೇಗೆ ಸಹಾಯವಾಗುತ್ತದೆ?
“ದುಃಖದಿಂದಿರುವಾಗ ನಾನು ಒಂಟಿಯಾಗಿರದಂತೆ ನೋಡಿಕೊಳ್ಳಬೇಕಾಗುತ್ತದೆ. ನನಗೆ ಯಾಕೆ ಇಷ್ಟು ದುಃಖ ಆಗುತ್ತಿದೆ ಎಂದು ಯೋಚಿಸಲು, ಅರ್ಥಮಾಡಿಕೊಳ್ಳಲು ಮತ್ತು ಅಳಲು ಒಬ್ಬಳೇ ಇರಬೇಕೇನೋ ನಿಜ. ಆದರೆ ನಂತರ ಜನರೊಂದಿಗೆ ಬೆರೆಯುವುದೇ ಒಳ್ಳೇದೆಂದು ಕಂಡುಕೊಂಡಿದ್ದೇನೆ. ಹಾಗೆ ಮಾಡುವುದರಿಂದ, ನನ್ನನ್ನು ದುಃಖಕ್ಕೆ ಈಡುಮಾಡಿದ ವಿಷಯವನ್ನು ಮರೆಯುತ್ತೇನೆ.”—ಚಿತ್ರಾ.
[ಪುಟ 31ರಲ್ಲಿರುವ ಚೌಕ/ಚಿತ್ರಗಳು]
ನಿಮ್ಮ ಸಮಪ್ರಾಯದವರು ಏನನ್ನುತ್ತಾರೆ?
“ಸಾಮಾನ್ಯವಾಗಿ ನನ್ನನ್ನು ಯಾವಾಗ ದುಃಖ ಆವರಿಸುತ್ತದಂದರೆ ನಾನು ನನ್ನ ಬಗ್ಗೆ ಮಾತ್ರ ಯೋಚಿಸುವಾಗ. ಆದರೆ ಇತರರಿಗೆ ಸಹಾಯಮಾಡುವಾಗೆಲ್ಲ ನಾನು ಅವರ ಬಗ್ಗೆ ಯೋಚಿಸುತ್ತೇನೆ. ಹೀಗೆ ನನ್ನ ಸಂತೋಷವನ್ನು ಮರಳಿ ಪಡೆಯುತ್ತೇನೆ.”
“ನಾನು ಕ್ರಮವಾಗಿ ವ್ಯಾಯಾಮ ಮಾಡುವಾಗ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇದರಿಂದ ನನ್ನ ಮೂಡ್ ಹೆಚ್ಚಾಗಿ ಸರಿಯಾಗಿರುತ್ತದೆ. ವ್ಯಾಯಾಮ ಮಾಡಿ ಸುಸ್ತಾಗಿರುವ ನನ್ನಲ್ಲಿ ದುಃಖಿಸಲು ಶಕ್ತಿ ಉಳಿದಿರುವುದಿಲ್ಲ.”
[ಚಿತ್ರಗಳು]
ಡ್ರೆನೆಲ್
ರಿಬೆಕಾ
[ಪುಟ 32ರಲ್ಲಿರುವ ಚಿತ್ರ]
ನೆರವು ಮತ್ತು ಶ್ರಮದಿಂದ ದುಃಖ ಎಂಬ ಆಳವಾದ ಗುಂಡಿಯಿಂದ ನೀವು ಹೊರಬರಬಹುದು