ಏಡ್ಸ್—ಅದರೊಂದಿಗೆ ಹೋರಾಡುವ ವಿಧ
ಸದ್ಯಕ್ಕೆ ಏಡ್ಸ್ ರೋಗಕ್ಕೆ ಮದ್ದಿಲ್ಲ, ಮತ್ತು ವೈದ್ಯಕೀಯ ವಿಜ್ಞಾನವು ಒಂದು ಮದ್ದನ್ನು ಬೇಗ ಕಂಡುಹಿಡಿಯುವುದು ಅಸಂಭವನೀಯವೆಂಬಂತೆ ಕಾಣುತ್ತದೆ. ಹೊಸ ಚಿಕಿತ್ಸೆಗಳು ರೋಗದ ಪ್ರಗತಿಯನ್ನು ನಿಧಾನಗೊಳಿಸುತ್ತವಾದರೂ, ಮೊದಲಾಗಿ ಈ ಸೋಂಕು ತಗಲದಂತೆ ಸೂಕ್ತಕ್ರಮಗಳನ್ನು ಕೈಕೊಳ್ಳುವುದು ಎಷ್ಟೋ ಲೇಸು. ಆದರೂ, ನಾವು ತಡೆಗಟ್ಟುವ ಕ್ರಮವನ್ನು ಚರ್ಚಿಸುವುದಕ್ಕೆ ಮೊದಲು, ಏಡ್ಸ್ ವೈರಸ್ (ಏಚ್ಐವಿ) ಹೇಗೆ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಹರಡುತ್ತದೆ ಹಾಗೂ ಅದು ಹೇಗೆ ಹರಡುವುದಿಲ್ಲ ಎಂಬುದನ್ನು ನಾವು ಸ್ವಲ್ಪ ಮಟ್ಟಿಗೆ ತಿಳಿದುಕೊಳ್ಳೋಣ.
ಒಬ್ಬ ವ್ಯಕ್ತಿಯು ನಾಲ್ಕು ಪ್ರಮುಖ ವಿಧಗಳಲ್ಲಿ ಸೋಂಕಿತನಾಗಬಹುದು: (1) ರೋಗದಿಂದ ಕಲುಷಿತಗೊಂಡಿರುವ ಸೂಜಿ ಹಾಗೂ ಸಿರಿಂಜ್ನಿಂದ, (2) ಸೋಂಕಿತನಾಗಿರುವ ವ್ಯಕ್ತಿಯೊಂದಿಗೆ ಲೈಂಗಿಕ ಸಂಭೋಗವನ್ನು (ಯೋನಿ, ಗುದದ್ವಾರ, ಅಥವಾ ಬಾಯಿಯ ಮೂಲಕ) ನಡೆಸುವ ಮೂಲಕ, (3) ರಕ್ತಪೂರಣಗಳು ಮತ್ತು ರಕ್ತದ ಉತ್ಪನ್ನಗಳ ಮೂಲಕ—ಆದರೆ ಅಭಿವೃದ್ಧಿಹೊಂದಿರುವ ದೇಶಗಳಲ್ಲಿ ಇದರ ಅಪಾಯವು ಕಡಿಮೆಯಾಗಿದೆ, ಏಕೆಂದರೆ ಅಲ್ಲಿ ಏಚ್ಐವಿ ಪ್ರತಿಜೀವಾಣುಗಳು ಇವೆಯೋ ಎಂದು ನೋಡುವುದಕ್ಕಾಗಿ ಪರೀಕ್ಷೆಗಳು ನಡೆಸಲ್ಪಡುತ್ತವೆ, ಮತ್ತು (4) ಅವನ ಅಥವಾ ಅವಳ ಏಚ್ಐವಿ ವೈರಸ್ ಇರುವ ತಾಯಿಯ ಮೂಲಕ—ಜನನಕ್ಕೆ ಮುಂಚೆ ಅಥವಾ ಜನನದ ಸಮಯದಲ್ಲಿ, ಇಲ್ಲವೆ ಎದೆಹಾಲನ್ನು ಕುಡಿಸುವ ಮೂಲಕ ಅವಳು ತನ್ನ ಮಗುವಿಗೆ ಈ ರೋಗವನ್ನು ದಾಟಿಸಸಾಧ್ಯವಿದೆ.
ಯು.ಎಸ್. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ (ಸಿಡಿಸಿ)ಗನುಸಾರ, ಸದ್ಯದ ವೈಜ್ಞಾನಿಕ ಪುರಾವೆಯು ತಿಳಿಸುವುದೇನೆಂದರೆ, (1) ನಿಮಗೆ ನೆಗಡಿ ಅಥವಾ ಫ್ಲೂ ಜ್ವರವು ಇದ್ದಕ್ಕಿದ್ದಂತೆ ಬರುತ್ತದೆ; ಆದರೆ ಏಡ್ಸ್ ಹೀಗೆ ಬರಸಾಧ್ಯವಿಲ್ಲ, (2) ಏಡ್ಸ್ ರೋಗವಿರುವ ಒಬ್ಬ ವ್ಯಕ್ತಿಯ ಪಕ್ಕದಲ್ಲಿ ಕುಳಿತುಕೊಳ್ಳುವ ಮೂಲಕ ಅಥವಾ ಆ ರೋಗದಿಂದ ಸೋಂಕಿತನಾಗಿರುವ ಒಬ್ಬ ವ್ಯಕ್ತಿಯನ್ನು ಮುಟ್ಟುವ ಇಲ್ಲವೆ ಅಪ್ಪಿಕೊಳ್ಳುವುದರಿಂದ ಇತರರಿಗೆ ಈ ರೋಗವು ಸೋಂಕಸಾಧ್ಯವಿಲ್ಲ, (3) ಈ ರೋಗವನ್ನು ಸೋಂಕಿಸಿಕೊಂಡಿರುವ ಒಬ್ಬ ವ್ಯಕ್ತಿಯು ಮುಟ್ಟಿರುವ, ತಯಾರಿಸಿರುವ, ಅಥವಾ ಬಡಿಸಿರುವ ಆಹಾರವನ್ನು ಸೇವಿಸುವ ಮೂಲಕ ಈ ರೋಗವು ತಗಲಸಾಧ್ಯವಿಲ್ಲ, ಮತ್ತು (4) ಅಂತಹ ರೋಗಿಗಳು ಉಪಯೋಗಿಸುವ ಟಯಿಲೆಟ್ಗಳು, ಟೆಲಿಫೋನ್ಗಳು, ಬಟ್ಟೆಗಳು, ಅಥವಾ ಕುಡಿಯುವ ಲೋಟಗಳು ಹಾಗೂ ತಿನ್ನುವ ತಟ್ಟೆಗಳನ್ನು ಇತರರು ಉಪಯೋಗಿಸುವ ಮೂಲಕ ಈ ರೋಗವು ಬರಸಾಧ್ಯವಿಲ್ಲ. ಇದಲ್ಲದೆ, ಏಚ್ಐವಿ ವೈರಸ್, ಸೊಳ್ಳೆಗಳ ಮೂಲಕ ಅಥವಾ ಇನ್ನಿತರ ಕೀಟಗಳ ಮೂಲಕ ಸಹ ರವಾನಿಸಲ್ಪಡುವುದಿಲ್ಲ ಎಂದು ಸಿಡಿಸಿ ಹೇಳುತ್ತದೆ.
ರೋಗವನ್ನು ತಡೆಗಟ್ಟಲಿಕ್ಕಾಗಿರುವ ಕೀಲಿ ಕೈಗಳು
ಏಡ್ಸ್ ವೈರಸ್, ಈ ರೋಗದಿಂದ ಸೋಂಕಿತರಾಗಿರುವ ಜನರ ರಕ್ತಪ್ರವಾಹದಲ್ಲಿ ಅಡಗಿರುತ್ತದೆ. ಇಂತಹ ವ್ಯಕ್ತಿಯು ಚುಚ್ಚುಮದ್ದನ್ನು ಚುಚ್ಚಿಸಿಕೊಳ್ಳುವಲ್ಲಿ, ಸ್ವಲ್ಪ ರಕ್ತ ಹಾಗೂ ಅದರ ಜೊತೆಗೆ ವೈರಸ್ ಸಹ ಆ ಸೂಜಿಯಲ್ಲಿ ಅಥವಾ ಸಿರಿಂಜ್ನಲ್ಲಿ ಉಳಿಯಬಹುದು. ಈ ರೀತಿ ಕಲುಷಿತಗೊಂಡಿರುವ ಒಂದು ಸೂಜಿಯಿಂದ ಇನ್ನೊಬ್ಬ ವ್ಯಕ್ತಿಗೆ ಚುಚ್ಚುಮದ್ದನ್ನು ನೀಡಿದಾಗ, ಆ ವೈರಸ್ ಇನ್ನೊಬ್ಬರಿಗೆ ದಾಟಿಸಲ್ಪಡಸಾಧ್ಯವಿದೆ. ಒಂದು ಸೂಜಿ ಅಥವಾ ಸಿರಿಂಜ್ನ ಬಗ್ಗೆ ನಿಮಗೆ ಸಂಶಯವಿರುವಾಗ, ಅದರ ಕುರಿತು ವೈದ್ಯರನ್ನು ಅಥವಾ ನರ್ಸನ್ನು ವಿಚಾರಿಸಲು ಎಂದೂ ಭಯಪಡಬೇಡಿ. ಅದರ ಬಗ್ಗೆ ತಿಳಿದುಕೊಳ್ಳಲು ನಿಮಗೆ ಹಕ್ಕಿದೆ; ಏಕೆಂದರೆ ನಿಮ್ಮ ಜೀವವೇ ಅಪಾಯದಲ್ಲಿದೆ.
ಸೋಂಕಿತರಾದ ಜನರ ವೀರ್ಯ ಹಾಗೂ ಯೋನಿಯ ಸ್ರಾವಗಳಲ್ಲಿ ಸಹ ಏಡ್ಸ್ ವೈರಸ್ ಇರುತ್ತದೆ. ಆದುದರಿಂದ, ತಡೆಗಟ್ಟುವ ಕ್ರಮದ ಕುರಿತು ಸಿಡಿಸಿ ಶಿಫಾರಸ್ಸು ಮಾಡುವುದು: “ಇದನ್ನು ತಡೆಗಟ್ಟಲು, ಭೋಗವರ್ಜನೆಯು ಏಕಮಾತ್ರ ಸುರಕ್ಷಿತ ವಿಧಾನವಾಗಿದೆ. ಒಂದುವೇಳೆ ನೀವು ಲೈಂಗಿಕ ಸಂಭೋಗವನ್ನು ಮಾಡಬೇಕಾಗಿರುವಲ್ಲಿ, ಸೋಂಕಿತನಾಗಿರದಂತಹ ಒಬ್ಬ ಸಹಭಾಗಿಯೊಂದಿಗೆ, ದೀರ್ಘಕಾಲದ ತನಕ ಪರಸ್ಪರ ನಿಷ್ಠೆಯ ಸಂಬಂಧವನ್ನು ಅನುಭವಿಸುವ ವರೆಗೆ, ಅಂದರೆ ವಿವಾಹವಾಗುವ ತನಕ ಕಾಯಿರಿ.”
ನೀವು ಏಡ್ಸ್ ರೋಗವನ್ನು ಸೋಂಕಿಸಿಕೊಳ್ಳದಿರಲಿಕ್ಕಾಗಿ, “ಪರಸ್ಪರ ನಿಷ್ಠೆಯ ಸಂಬಂಧ”ವನ್ನು ಕಾಪಾಡಿಕೊಳ್ಳಬೇಕು ಎಂಬುದನ್ನು ಗಮನಿಸಿರಿ. ನೀವು ನಿಷ್ಠೆಯಿಂದಿದ್ದು, ನಿಮ್ಮ ಸಹಭಾಗಿಯು ನಿಷ್ಠೆಯಿಂದ ಇಲ್ಲದಿರುವಲ್ಲಿ, ನೀವು ಸುರಕ್ಷಿತರಲ್ಲ. ಯಾವ ಸಮಾಜಗಳಲ್ಲಿ ಪುರುಷರು ಸ್ತ್ರೀಯರನ್ನು ಲೈಂಗಿಕವಾಗಿ ಹಾಗೂ ಆರ್ಥಿಕವಾಗಿ ದಬ್ಬಾಳಿಕೆಗೆ ಒಳಪಡಿಸುತ್ತಾರೋ ಅಂತಹ ಸಮಾಜಗಳಲ್ಲಿ ಇದು ಕಷ್ಟಕರವಾದ ಸಮಸ್ಯೆಯನ್ನು ತಂದೊಡ್ಡುತ್ತದೆ. ಕೆಲವು ದೇಶಗಳಲ್ಲಿ, ಸುರಕ್ಷಿತವಾದ ಸೆಕ್ಸ್ ಕ್ರಮಗಳನ್ನು ಏರ್ಪಡಿಸುವ ಮಾತಿರಲಿ, ಸ್ತ್ರೀಯರು ಪುರುಷರೊಂದಿಗೆ ಸೆಕ್ಸ್ನ ವಿಷಯವಾಗಿ ಚರ್ಚಿಸಲು ಸಹ ನಿರ್ಬಂಧವಿರುತ್ತದೆ.
ಆದರೂ, ಅಂತಹ ಎಲ್ಲ ಸ್ತ್ರೀಯರು ಇದನ್ನು ನಿಭಾಯಿಸಲು ಅಸಮರ್ಥರಾಗಿರುವುದಿಲ್ಲ. ಪಶ್ಚಿಮ ಆಫ್ರಿಕದ ದೇಶವೊಂದರಲ್ಲಿ, ಒಂದು ಅಧ್ಯಯನವು ತೋರಿಸಿದ್ದೇನೆಂದರೆ, ಹಣಕಾಸಿನ ವಿಷಯದಲ್ಲಿ ಸ್ವತಂತ್ರರಾಗಿದ್ದ ಸ್ತ್ರೀಯರು, ಯಾವುದೇ ಹಿಂಸಾತ್ಮಕ ಪರಿಣಾಮಗಳಿಲ್ಲದೆ, ತಮ್ಮ ಸೋಂಕಿತ ಗಂಡಂದಿರೊಂದಿಗೆ ಲೈಂಗಿಕ ಸಂಭೋಗವನ್ನು ನಿಲ್ಲಿಸಿಬಿಡಲು ಶಕ್ತರಾಗಿದ್ದರು. ಅಮೆರಿಕದ ನ್ಯೂ ಜೆರ್ಸಿಯಲ್ಲಿ, ಪುರುಷರು ಕಾಂಡಮನ್ನು ಧರಿಸಲು ಇಷ್ಟಪಡದಿದ್ದಾಗ, ಕೆಲವು ಸ್ತ್ರೀಯರು ಅಂತಹ ಪುರುಷರೊಂದಿಗೆ ಸಂಭೋಗ ಮಾಡಲು ನಿರಾಕರಿಸಿದರು. ರಬ್ಬರಿನ ಕಾಂಡಮ್ಗಳು, ಏಚ್ಐವಿ ಹಾಗೂ ಇನ್ನಿತರ ರತಿರವಾನಿತ ರೋಗಗಳ ವಿರುದ್ಧ ಸಂರಕ್ಷಣೆಯನ್ನು ಒದಗಿಸಸಾಧ್ಯವಿರುವುದಾದರೂ, ಅವುಗಳನ್ನು ಸರಿಯಾಗಿ ಹಾಗೂ ಕ್ರಮಬದ್ಧವಾಗಿ ಉಪಯೋಗಿಸಬೇಕು.
ಪರೀಕ್ಷೆಮಾಡಿಸಿಕೊಳ್ಳಬೇಕಾದ ಸಮಯ
ಹಿಂದಿನ ಲೇಖನದಲ್ಲಿ ಪ್ರಸ್ತಾಪಿಸಲಾಗಿದ್ದ ಕ್ಯಾರನ್, ಆ ರೋಗವನ್ನು ಸೋಂಕಿಸಿಕೊಳ್ಳುವುದರ ವಿರುದ್ಧ ತನ್ನನ್ನು ಸಂರಕ್ಷಿಸಿಕೊಳ್ಳಲಿಕ್ಕಾಗಿ ಯಾವುದಾದರೂ ಕ್ರಮವನ್ನು ಕೈಕೊಳ್ಳಸಾಧ್ಯವಿತ್ತು. ಅವರು ವಿವಾಹವಾಗುವ ಕೆಲವು ವರ್ಷಗಳ ಮೊದಲೇ ಅವಳ ಗಂಡನು ಆ ರೋಗವನ್ನು ಸೋಂಕಿಸಿಕೊಂಡಿದ್ದನು, ಮತ್ತು ಆ ಸಾಂಕ್ರಾಮಿಕ ರೋಗ ಹಾಗೂ ಏಚ್ಐವಿ ಪರೀಕ್ಷೆಯು ಆರಂಭದ ಹಂತಗಳಲ್ಲಿದ್ದ ಸಮಯದಲ್ಲೇ ಅವರು ವಿವಾಹವಾಗಿದ್ದರು. ಈಗಲಾದರೋ, ಕೆಲವು ದೇಶಗಳಲ್ಲಿ ಏಚ್ಐವಿ ಪರೀಕ್ಷೆಯು ನಿಯತಕ್ರಮವಾಗಿಬಿಟ್ಟಿದೆ. ಆದುದರಿಂದ, ಏಚ್ಐವಿಯ ಸಂಬಂಧದಲ್ಲಿ ಅವನ ಅಥವಾ ಅವಳ ಸ್ಥಿತಿಯ ಕುರಿತು ವ್ಯಕ್ತಿಯೊಬ್ಬನಿಗೆ ಅನುಮಾನವಿರುವಲ್ಲಿ, ಪ್ರಣಯಾಚರಣೆಯನ್ನು ಆರಂಭಿಸುವ ಮೊದಲೇ ಪರೀಕ್ಷೆಮಾಡಿಸಿಕೊಳ್ಳುವುದು ಒಳ್ಳೆಯದು. ಕ್ಯಾರನ್ ಹೀಗೆ ಸಲಹೆ ಕೊಡುತ್ತಾಳೆ: “ನಿಮ್ಮ ವಿವಾಹ ಸಂಗಾತಿಯನ್ನು ಜಾಗ್ರತೆಯಿಂದ ಆರಿಸಿಕೊಳ್ಳಿರಿ. ತಪ್ಪಾದ ಆಯ್ಕೆಯು ನಿಮಗೆ ಬಹಳಷ್ಟು ಕಷ್ಟಾನುಭವವನ್ನು ತಂದೊಡ್ಡಸಾಧ್ಯವಿದೆ ಮತ್ತು ನೀವು ಸಹ ಜೀವವನ್ನು ಕಳೆದುಕೊಳ್ಳಸಾಧ್ಯವಿದೆ.”
ಒಂದುವೇಳೆ ವ್ಯಭಿಚಾರವನ್ನು ಮಾಡಿರುವಲ್ಲಿ, ಒಂದು ಪರೀಕ್ಷೆಯು ಮುಗ್ಧ ಸಂಗಾತಿಯನ್ನು ಸಂರಕ್ಷಿಸಲು ಸಹಾಯ ಮಾಡಬಹುದು. ಆ ಸೋಂಕು ತಗಲಿದ ಬಳಿಕ ಆರು ತಿಂಗಳುಗಳ ವರೆಗೆ ಏಚ್ಐವಿಯು ಸರಿಯಾಗಿ ಕಂಡುಬರುವುದಿಲ್ಲವಾದ್ದರಿಂದ, ಅನೇಕ ಪರೀಕ್ಷೆಗಳನ್ನು ನಡೆಸುವ ಅಗತ್ಯವಿರಬಹುದು. ಒಂದುವೇಳೆ ಲೈಂಗಿಕ ಸಂಬಂಧಗಳನ್ನು (ಆ ವ್ಯಭಿಚಾರಿಯನ್ನು ಕ್ಷಮಿಸಲಾಗಿದೆ ಎಂಬ ಸೂಚನೆಯನ್ನು ಕೊಡುತ್ತಾ) ಪುನಃ ಆರಂಭಿಸುವಲ್ಲಿ, ಆ ರೋಗವನ್ನು ತಗಲಿಸಿಕೊಳ್ಳದೆ ಸುರಕ್ಷಿತವಾಗಿರಲು, ಕಾಂಡಮ್ನ ಬಳಕೆಯು ಸಹಾಯ ಮಾಡಬಲ್ಲದು.
ಇದರ ಕುರಿತಾದ ತಿಳುವಳಿಕೆ ನಮಗೆ ಹೇಗೆ ಸಹಾಯ ಮಾಡಸಾಧ್ಯವಿದೆ?
ಏಡ್ಸ್ ರೋಗವು ಕಂಡುಹಿಡಿಯಲ್ಪಡುವ ಬಹಳ ಸಮಯಕ್ಕೆ ಮುಂಚೆಯೇ ಬೈಬಲು ಬರೆಯಲ್ಪಟ್ಟಿತ್ತೆಂಬುದು ಗಮನಾರ್ಹವಾದ ವಿಷಯವಾಗಿರುವುದಾದರೂ, ಅದರ ಮೂಲತತ್ವಗಳಿಗನುಸಾರ ಜೀವಿಸುವುದು, ಆ ರೋಗದ ವಿರುದ್ಧ ನಮ್ಮನ್ನು ಸಂರಕ್ಷಿಸಿಕೊಳ್ಳುವಂತೆ ಮಾಡಬಲ್ಲದು. ಉದಾಹರಣೆಗಾಗಿ, ವಿವಾಹದ ಹೊರಗಿನ ಲೈಂಗಿಕ ಸಂಬಂಧವನ್ನು ಬೈಬಲು ಖಂಡಿಸುತ್ತದೆ, ವಿವಾಹ ಬಂಧದೊಳಗೆ ಪತಿಪತ್ನಿಯರಲ್ಲಿ ನಿಷ್ಠೆಯನ್ನು ಅಗತ್ಯಪಡಿಸುತ್ತದೆ, ಮತ್ತು ಯಾರು ಬೈಬಲ್ ಮೂಲತತ್ವಗಳನ್ನು ತದ್ರೀತಿ ತಮ್ಮ ಜೀವಿತಗಳಲ್ಲಿ ಅನ್ವಯಿಸುತ್ತಾರೋ ಅಂತಹ ವ್ಯಕ್ತಿಗಳನ್ನೇ ಕ್ರೈಸ್ತರು ವಿವಾಹವಾಗಬೇಕು ಎಂದು ಹೇಳುತ್ತದೆ. (1 ಕೊರಿಂಥ 7:39; ಇಬ್ರಿಯ 13:4) ದೇಹವನ್ನು ಅಶುದ್ಧಗೊಳಿಸುವ ಮದ್ಯಪಾನ ಮತ್ತು ಅಮಲೌಷಧ ಚಟವನ್ನು ಹಾಗೂ ರಕ್ತದ ಸೇವನೆಯನ್ನು ಅದು ನಿಷೇಧಿಸುತ್ತದೆ.—ಅ. ಕೃತ್ಯಗಳು 15:20; 2 ಕೊರಿಂಥ 7:1.
ಸ್ವತಃ ನೀವೇ, ಏಚ್ಐವಿ ವೈರಸ್ ಇರುವ ವ್ಯಕ್ತಿಗಳು ಒಳಗಾಗಬಹುದಾದ ಅಪಾಯಗಳು ಮತ್ತು ಹಾನಿಗಳ ಕುರಿತಾದ ಜ್ಞಾನವನ್ನು ಸಂಗ್ರಹಿಸುವುದು ವಿವೇಕಯುತವಾದದ್ದಾಗಿದೆ. ಏಡ್ಸ್ನ ಕುರಿತಾದ ಮಾಹಿತಿಯನ್ನು ಸಂಗ್ರಹಿಸುವುದು, ತಮ್ಮನ್ನು ಸಂರಕ್ಷಿಸಿಕೊಳ್ಳಲು ಜನರನ್ನು ಸಜ್ಜುಗೊಳಿಸುತ್ತದೆ.
ಏಡ್ಸ್ ಆ್ಯಕ್ಷನ್ ಲೀಗ್ ಹೇಳುವುದು: “ಅಧಿಕಾಂಶ ವಿದ್ಯಮಾನಗಳಲ್ಲಿ ಏಡ್ಸ್ ರೋಗವನ್ನು ತಡೆಗಟ್ಟಸಾಧ್ಯವಿದೆ. ಒಂದು ಔಷಧವನ್ನು ಕಂಡುಕೊಳ್ಳುವ ವರೆಗೆ, ಅದರ ಕುರಿತಾದ ತಿಳುವಳಿಕೆಯನ್ನು ಪಡೆದುಕೊಳ್ಳುವುದು, ಏಡ್ಸ್ನ ವಿರುದ್ಧ ರಕ್ಷಣೆಯನ್ನು ಪಡೆದುಕೊಳ್ಳಲಿಕ್ಕಾಗಿರುವ ಅತ್ಯುತ್ತಮವಾದ ಹಾಗೂ ಏಕಮಾತ್ರ [ಸಾಮುದಾಯಿಕ] ಮಾರ್ಗವಾಗಿದೆ.” (ಓರೆಅಕ್ಷರಗಳು ನಮ್ಮವು.) ಏಡ್ಸ್ನ ಕುರಿತು ಹೆತ್ತವರು ಪರಸ್ಪರ ಮಾತಾಡಿಕೊಳ್ಳುವುದು ಹಾಗೂ ತಮ್ಮ ಮಕ್ಕಳೊಂದಿಗೆ ಅದರ ಕುರಿತು ಮುಚ್ಚುಮರೆಯಿಲ್ಲದೆ ಮಾತಾಡುವುದು ಒಳಿತಾದದ್ದಾಗಿದೆ.
ಯಾವೆಲ್ಲ ಚಿಕಿತ್ಸಾ ಆಯ್ಕೆಗಳಿವೆ?
ಒಬ್ಬ ವ್ಯಕ್ತಿಯು ಏಚ್ಐವಿಯಿಂದ ಸೋಂಕಿತನಾದ ಬಳಿಕ, ಸುಮಾರು ಆರರಿಂದ ಹತ್ತು ವರ್ಷಗಳ ವರೆಗೆ ರೋಗಲಕ್ಷಣಗಳು ಗೋಚರವಾಗುವುದಿಲ್ಲ. ಈ ವರ್ಷಗಳಲ್ಲಿ, ದೇಹದ ಒಳಭಾಗದಲ್ಲೇ ರೋಗವು ಪ್ರಬಲವಾಗುತ್ತಿರುತ್ತದೆ. ಪ್ರತಿಯೊಂದು ವೈರಸ್ಗಳ ಸಂತಾನಾಭಿವೃದ್ಧಿಯಾಗಿ, ಅವು ಸೋಂಕು ರಕ್ಷಾ ವ್ಯವಸ್ಥೆಯ ಜೀವಕೋಶಗಳನ್ನು ನಾಶಮಾಡಿಬಿಡುತ್ತವೆ. ಸೋಂಕು ರಕ್ಷಾ ವ್ಯವಸ್ಥೆಯ ಜೀವಕೋಶಗಳು ಆ ವೈರಸ್ಗಳೊಂದಿಗೆ ಕಾದಾಡುತ್ತವೆ. ಕಾಲಕ್ರಮೇಣ, ಪ್ರತಿ ದಿನ ಅಸಂಖ್ಯಾತ ಹೊಸ ವೈರಸ್ಗಳು ಉತ್ಪಾದಿಸಲ್ಪಡುವುದರಿಂದ, ಸೋಂಕು ರಕ್ಷಾ ವ್ಯವಸ್ಥೆಯು ಸೋತುಹೋಗುತ್ತದೆ.
ಸೋಂಕು ರಕ್ಷಾ ವ್ಯವಸ್ಥೆಗೆ ಸಹಾಯ ಮಾಡಲು ಪ್ರಯತ್ನಿಸಲಿಕ್ಕಾಗಿ, ಬೇರೆ ಬೇರೆ ರೀತಿಯ ಔಷಧಗಳು ಕಂಡುಹಿಡಿಯಲ್ಪಟ್ಟಿವೆ. ಆ ಔಷಧಗಳಿಗೆ ಜಟಿಲವಾದ ಹೆಸರುಗಳಿದ್ದು, ಎ.ಸೆಡ್.ಟಿ, ಡಿಡಿಐ, ಹಾಗೂ ಡಿಡಿಸಿ ಎಂಬ ಅಕ್ಷರಗಳಿಂದ ಗುರುತಿಸಲ್ಪಡುತ್ತವೆ. ಈ ಔಷಧಗಳು ಭಾರಿ ಪ್ರಯೋಜನಗಳನ್ನು ಹಾಗೂ ವಾಸಿಯಾಗುವ ನಿರೀಕ್ಷೆಯನ್ನು ಕೊಡುತ್ತವೆಂದು ಕೆಲವರು ನಂಬಿದ್ದರಾದರೂ, ಅಂತಹ ನಿರೀಕ್ಷೆಗಳು ಸುಳ್ಳಾದವು. ಕಾಲಕಳೆದಂತೆ ಅವುಗಳ ಪರಿಣಾಮಕಾರಿತ್ವವು ಕಡಿಮೆಯಾಯಿತು ಮಾತ್ರವಲ್ಲ, ಇದರಿಂದ ಕೆಲವು ಜನರಿಗೆ ಅಪಾಯಕರವಾದ ಅಡ್ಡಪರಿಣಾಮಗಳೂ ಉಂಟಾದವು. ಆ ಅಡ್ಡತೊಡಕುಗಳಲ್ಲಿ ಕೆಲವು ಯಾವುವೆಂದರೆ, ರಕ್ತಕಣಗಳ ಕಡಿಮೆಯಾಗುವಿಕೆ, ರಕ್ತ ಹೆಪ್ಪುಗಟ್ಟುವಿಕೆಯ ವ್ಯಾಧಿ, ಹಾಗೂ ಕೈಕಾಲುಗಳಲ್ಲಿನ ನರಗಳ ಹಾನಿ.
ಈಗ ಹೊಸ ರೀತಿಯ ಔಷಧಗಳು ಬಂದಿವೆ: ಪ್ರೊಟೀಸ್ ಇನ್ಹಿಬಿಟರ್ಸ್. ವೈದ್ಯರು ಈ ಮೂರು ರೀತಿಯ ಔಷಧಗಳನ್ನು, ಹಾಗೂ ಇದರೊಂದಿಗೆ ವೈರಸ್ ನಿರೋಧಕ ಔಷಧಗಳನ್ನು ಬರೆದುಕೊಡುತ್ತಾರೆ. ಈ ಮೂರು ವಿಧದ ಚಿಕಿತ್ಸೆಯು ಆ ವೈರಸನ್ನು ನಾಶಪಡಿಸುವುದಿಲ್ಲವಾದರೂ, ಬಹುಮಟ್ಟಿಗೆ ದೇಹದಲ್ಲಿ ಅದರ ಸಂಖ್ಯಾಭಿವೃದ್ಧಿಯಾಗುವುದನ್ನು ತಡೆಯುತ್ತದೆ ಎಂಬುದನ್ನು ಪರೀಕ್ಷೆಗಳು ರುಜುಪಡಿಸಿವೆ.
ಈ ರೋಗದಿಂದ ಅಸ್ವಸ್ಥರಾಗಿರುವವರ ಆರೋಗ್ಯವು ಸುಧಾರಿಸುವುದರಲ್ಲಿ, ಮೂರು ವಿಧದ ಚಿಕಿತ್ಸೆಯು ಬಹಳಷ್ಟು ಪ್ರಗತಿಯನ್ನು ಉಂಟುಮಾಡಿದೆ. ಆದರೂ, ಏಚ್ಐವಿಯಿಂದ ಬಾಧಿತರಾಗಿರುವ ಜನರಿಗೆ, ಆದಷ್ಟು ಬೇಗನೆ, ಅಂದರೆ ರೋಗಲಕ್ಷಣಗಳು ತಾವಾಗಿಯೇ ಕಂಡುಬರುವುದಕ್ಕೆ ಮೊದಲೇ ಈ ಔಷಧವನ್ನು ಕೊಡುವಲ್ಲಿ, ಈ ಔಷಧವು ಅತ್ಯುತ್ತಮವಾಗಿ ಕಾರ್ಯನಡಿಸುತ್ತದೆಂದು ಪರಿಣತರು ನಂಬುತ್ತಾರೆ. ಆ ಹಂತದಲ್ಲಿ ಔಷಧವು ನೀಡಲ್ಪಡುವಾಗ, ಆ ವೈರಸ್ ಪೂರ್ತಿ ವಿಕಾಸಗೊಂಡ ಏಡ್ಸ್ ರೋಗವಾಗಿ ಪರಿಣಮಿಸದಂತೆ ಸ್ವಲ್ಪಮಟ್ಟಿಗೆ ತಡೆಗಟ್ಟಲು ಸಾಧ್ಯವಿರಬಹುದು. ಇದು ತುಂಬ ಹೊಸದಾದ ಚಿಕಿತ್ಸೆಯಾಗಿರುವುದರಿಂದ, ಎಷ್ಟರ ವರೆಗೆ ಈ ಚಿಕಿತ್ಸೆಯು ಆ ರೋಗವನ್ನು ನಿಗ್ರಹಿಸುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.
ಮೂರು ವಿಧದ ಚಿಕಿತ್ಸೆಯು ತುಂಬ ದುಬಾರಿಯಾಗಿದೆ. ಮೂರು ವೈರಸ್ ನಿರೋಧಕ ಔಷಧಗಳು ಹಾಗೂ ಪ್ರಯೋಗಶಾಲೆಯ ಪರೀಕ್ಷೆಯ ಸರಾಸರಿ ವೆಚ್ಚವು, ಒಂದು ವರ್ಷಕ್ಕೆ 4,80,000 ರೂಪಾಯಿಗಳಷ್ಟಾಗುತ್ತದೆ. ಹಣಕಾಸಿನ ಹೊರೆಯ ಜೊತೆಗೆ, ಮೂರು ವಿಧದ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿರುವ ರೋಗಿಯು, ಲೆಕ್ಕವಿಲ್ಲದಷ್ಟು ಬಾರಿ ಫ್ರಿಜ್ನ ಬಳಿಗೆ ಹೋಗಿಬರಬೇಕಾಗುತ್ತದೆ; ಏಕೆಂದರೆ ಆ ಔಷಧಗಳನ್ನು ಫ್ರಿಜ್ನಲ್ಲಿ ಇಡಬೇಕಾಗುತ್ತದೆ. ವ್ಯಕ್ತಿಯೊಬ್ಬನು ಕೆಲವು ಮಾತ್ರೆಗಳನ್ನು ದಿನಕ್ಕೆ ಎರಡು ಬಾರಿ ಮತ್ತು ಇನ್ನಿತರ ಮಾತ್ರೆಗಳನ್ನು ದಿನಕ್ಕೆ ಮೂರು ಬಾರಿ ನುಂಗುತ್ತಾನೆ. ಕೆಲವು ಮಾತ್ರೆಗಳನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು, ಇನ್ನಿತರ ಮಾತ್ರೆಗಳನ್ನು ಊಟದ ನಂತರ ತೆಗೆದುಕೊಳ್ಳಬೇಕು. ಏಡ್ಸ್ ರೋಗಕ್ಕೆ ತುತ್ತಾಗಿರುವ ರೋಗಿಯೊಬ್ಬನಿಗೆ ಇನ್ನಿತರ ಸೋಂಕುಗಳು ತಗಲಸಾಧ್ಯವಿರುವುದರಿಂದ, ಅವುಗಳ ವಿರುದ್ಧ ಹೋರಾಡಲಿಕ್ಕಾಗಿ ಅವನು ಬೇರೆ ಔಷಧಗಳನ್ನು ತೆಗೆದುಕೊಳ್ಳಬೇಕಾಗಿರುವಾಗ, ಚಿಕಿತ್ಸೆಯು ಇನ್ನೂ ಹೆಚ್ಚು ಜಟಿಲವಾಗುತ್ತದೆ.
ಒಬ್ಬ ವ್ಯಕ್ತಿಯು ಮೂರು ವಿಧದ ಚಿಕಿತ್ಸೆಯನ್ನು ಮಧ್ಯದಲ್ಲೇ ನಿಲ್ಲಿಸಿಬಿಡುವುದಾದರೆ, ಆಗ ಏನು ಸಂಭವಿಸುತ್ತದೋ ಅದು ವೈದ್ಯರಿಗೆ ಅತ್ಯಧಿಕ ಚಿಂತೆಯನ್ನು ಉಂಟುಮಾಡುತ್ತದೆ. ಆಗ ವೈರಸ್ ಸಂತಾನಾಭಿವೃದ್ಧಿಯು ಪುನಃ ಆರಂಭವಾಗುತ್ತದೆ, ಅದು ಕಡಿಮೆಯಾಗುವುದೇ ಇಲ್ಲ, ಮತ್ತು ಈಗಾಗಲೇ ನಡೆಸಲ್ಪಟ್ಟಿದ್ದ ಚಿಕಿತ್ಸೆಯಿಂದ ಪಾರಾಗಿ ಉಳಿದಿರುವ ವೈರಸ್ಗಳು, ಈ ಮುಂಚೆ ಆ ವ್ಯಕ್ತಿಯು ತೆಗೆದುಕೊಳ್ಳುತ್ತಿದ್ದ ಔಷಧಗಳಿಗೆ ಪ್ರತಿರೋಧಿಗಳಾಗಿ ಪರಿಣಮಿಸಬಹುದು. ಔಷಧ-ಪ್ರತಿರೋಧಿಗಳಾದ ಏಚ್ಐವಿ ವೈರಸ್ಗಳಿಗೆ ಚಿಕಿತ್ಸೆ ನೀಡುವುದು ಹೆಚ್ಚು ಕಷ್ಟಕರವಾದದ್ದಾಗಿದೆ. ಅಷ್ಟುಮಾತ್ರವಲ್ಲ, ಈ ಸೂಪರ್ ವೈರಸ್ಗಳು ಬೇರೆಯವರಿಗೂ ರವಾನಿಸಲ್ಪಡಸಾಧ್ಯವಿದೆ.
ಲಸಿಕೆಗಳಿಂದ ಪರಿಹಾರವಿದೆಯೆ?
ಲೋಕವ್ಯಾಪಕವಾಗಿರುವ ಏಡ್ಸ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲಿಕ್ಕಿರುವ ಕೀಲಿ ಕೈಯು, ಸುರಕ್ಷಿತವಾದ ಹಾಗೂ ಪರಿಣಾಮಕಾರಿಯಾದ ಲಸಿಕೆಯನ್ನು ಕಂಡುಹಿಡಿಯುವುದೇ ಆಗಿದೆಯೆಂದು ಕೆಲವು ಏಡ್ಸ್ ಸಂಶೋಧಕರು ನಂಬುತ್ತಾರೆ. ಅರಿಶಿನಕಾಮಲೆ, ದಡಾರ, ಮಂಪ್ಸ್, ಹಾಗೂ ಜರ್ಮನ್ ದಡಾರಗಳ ವಿರುದ್ಧ ಕಾರ್ಯನಡಿಸುವ ಯಶಸ್ವಿಕರ ಲಸಿಕೆಗಳನ್ನು, ದುರ್ಬಲ ವೈರಸ್ಗಳಿಂದ ಮಾಡಲಾಗಿದೆ. ಸಾಮಾನ್ಯವಾಗಿ, ಒಂದು ದುರ್ಬಲ ವೈರಸನ್ನು ದೇಹಕ್ಕೆ ಒಳಸೇರಿಸುವಾಗ, ಸೋಂಕು ರಕ್ಷಾ ವ್ಯವಸ್ಥೆಯು ಅದನ್ನು ನಾಶಮಾಡಲು ಕ್ರಿಯೆಗೈಯುತ್ತದೆ ಮಾತ್ರವಲ್ಲ, ನಿಜವಾದ ಒಂದು ವೈರಸ್ನ ಯಾವುದೇ ರೀತಿಯ ಆಕ್ರಮಣವನ್ನು ಯಶಸ್ವಿಕರವಾಗಿ ನಿಭಾಯಿಸುವ ರಕ್ಷಣೆಯನ್ನು ಸಹ ಅದು ನಿರ್ಮಿಸುತ್ತದೆ.
ಇತ್ತೀಚೆಗೆ ಮಂಗಗಳೊಂದಿಗೆ ನಡೆಸಲ್ಪಟ್ಟ ಎರಡು ಪ್ರಯೋಗಗಳು ಸೂಚಿಸುವುದೇನೆಂದರೆ, ಏಚ್ಐವಿ ವೈರಸ್ನ ವಿಷಯದಲ್ಲಿ ಒಂದು ಸಮಸ್ಯೆಯಿದೆ. ಅದೇನೆಂದರೆ, ದುರ್ಬಲವಾಗಿರುವ ವೈರಸ್ಗಳು ಸಹ ಮಾರಕವಾಗಿ ಪರಿಣಮಿಸಬಲ್ಲವು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಯಾವುದರ ವಿರುದ್ಧ ಸಂರಕ್ಷಣೆಯನ್ನು ಒದಗಿಸುವಂತೆ ಈ ಲಸಿಕೆಯು ತಯಾರಿಸಲ್ಪಟ್ಟಿದೆಯೋ ಆ ರೋಗವನ್ನೇ ಇದು ಉಂಟುಮಾಡಬಹುದು.
ಲಸಿಕೆಯ ಅನ್ವೇಷಣೆಯು ನಿರಾಶಾಜನಕವಾಗಿಯೂ ಆಶಾಭಂಗವಾಗಿಯೂ ಪರಿಣಮಿಸಿದೆ. ಖಂಡಿತವಾಗಿಯೂ ದುರ್ಬಲ ವೈರಸ್ಗಳನ್ನು ನಾಶಮಾಡಸಾಧ್ಯವಿದ್ದ ಡಸನ್ಗಟ್ಟಲೆ ಪ್ರಾಯೋಗಿಕ ಮಿಶ್ರಣಗಳು ಉಪಯೋಗಿಸಲ್ಪಟ್ಟಿರುವುದಾದರೂ, ಏಚ್ಐವಿಯು ಮಾತ್ರ ಅಚಲವಾಗಿದೆ. ಇದಲ್ಲದೆ, ಏಚ್ಐವಿಯು ಅತಿ ಬೇಗನೆ ಹೊಸ ವಂಶಗಳನ್ನು ಉತ್ಪತ್ತಿಮಾಡುತ್ತದೆ. ಈ ಕಾರಣದಿಂದ ಅದು ಕೈಗೆ ನಿಲುಕದ್ದಾಗಿದೆ. (ಸದ್ಯಕ್ಕೆ ಲೋಕದಾದ್ಯಂತ ಕಡಿಮೆಪಕ್ಷ ಹತ್ತು ರೀತಿಯ ಏಚ್ಐವಿಗಳಿವೆ.) ಈ ಸಮಸ್ಯೆಗೆ ಹೆಚ್ಚನ್ನು ಕೂಡಿಸುತ್ತಾ, ಲಸಿಕೆಯು ಯಾವ ಸೋಂಕು ರಕ್ಷಾ ವ್ಯವಸ್ಥೆಯ ಜೀವಕೋಶಗಳನ್ನು ಹೋರಾಟಕ್ಕಾಗಿ ಸಿದ್ಧಗೊಳಿಸಬೇಕಾಗಿದೆಯೋ, ಅದೇ ಜೀವಕೋಶಗಳ ಮೇಲೆ ಇದು ನೇರವಾಗಿ ಆಕ್ರಮಣಮಾಡುತ್ತದೆ.
ಆರ್ಥಿಕತೆಯು ಸಹ ಸಂಶೋಧನೆಯಲ್ಲಿ ಒಂದು ಪಾತ್ರವನ್ನು ವಹಿಸುತ್ತದೆ. “ಖಾಸಗಿ ಉದ್ಯಮದಿಂದ ನಮಗೆ ಹಣಕಾಸಿನ ವಚನಬದ್ಧತೆಯು ದೊರಕುತ್ತಿರುವುದು ತುಂಬ ಕಡಿಮೆ” ಎಂದು, ವಾಷಿಂಗ್ಟನ್ ಆಧಾರಿತವಾದ ಅಂತಾರಾಷ್ಟ್ರೀಯ ಏಡ್ಸ್ ವ್ಯಾಕ್ಸಿನ್ ಇನಿಷಿಏಟೀವ್ ಹೇಳಿತು. ಲಸಿಕೆಯು ಯಾವುದೇ ರೀತಿಯ ಲಾಭಗಳನ್ನು ತರಸಾಧ್ಯವಿಲ್ಲ, ಏಕೆಂದರೆ ಅಧಿಕಾಂಶ ಲಸಿಕೆಯು ಕಡಿಮೆ ಅಭಿವೃದ್ಧಿಯಾಗಿರುವ ದೇಶಗಳಲ್ಲಿ ಮಾರಾಟ ಮಾಡಲ್ಪಡುತ್ತದೆ ಎಂಬಂತಹ ಭಯಗಳೇ ಇದಕ್ಕೆ ಕಾರಣವೆಂದು ಹೇಳಲಾಯಿತು.
ಈ ಎಲ್ಲ ಕಷ್ಟಗಳನ್ನು ಎದುರಿಸಬೇಕಾಗಿದ್ದರೂ, ಯಶಸ್ವಿಕರವಾದ ಒಂದು ಲಸಿಕೆಯನ್ನು ಕಂಡುಹಿಡಿಯಲಿಕ್ಕಾಗಿ ಸಂಶೋಧಕರು ಅನ್ವೇಷಣೆಯನ್ನು ನಡೆಸುವುದನ್ನು ಮುಂದುವರಿಸಿದ್ದಾರೆ. ಸದ್ಯಕ್ಕೆ, ಅತಿ ಬೇಗನೆ ಒಂದು ಲಸಿಕೆಯನ್ನು ಕಂಡುಹಿಡಿಯುವುದು ಅಸಂಭವನೀಯ ಎಂಬಂತೆ ತೋರುತ್ತದೆ. ಆಶಾದಾಯಕವಾದ ಒಂದು ಲಸಿಕೆಯು ಪ್ರಯೋಗಶಾಲೆಯಿಂದ ಹೊರಬರುವುದಾದರೂ, ಅನಂತರ ಆ ಲಸಿಕೆಯನ್ನು ಮಾನವರ ಮೇಲೆ ಪ್ರಯೋಗಿಸುವುದು, ಕಷ್ಟಕರವಾದ, ದುಬಾರಿಯಾದ, ಹಾಗೂ ಅಪಾಯಕರವಾದ ಕೆಲಸವಾಗಿದೆ.
[ಪುಟ 5 ರಲ್ಲಿರುವ ಚೌಕ]
ಏಚ್ಐವಿಯಿಂದ ಯಾರು ಸೋಂಕಿತರಾಗುತ್ತಿದ್ದಾರೆ?
ಲೋಕವ್ಯಾಪಕವಾಗಿ, ಪ್ರತಿ ದಿನ ಸುಮಾರು 16,000 ಜನರು ಈ ವೈರಸ್ನಿಂದ ಸೋಂಕಿತರಾಗುತ್ತಿದ್ದಾರೆ. ಅವರಲ್ಲಿ 90 ಪ್ರತಿಶತಕ್ಕಿಂತಲೂ ಹೆಚ್ಚು ಮಂದಿ ಅಭಿವೃದ್ಧಿಹೊಂದುತ್ತಿರುವ ದೇಶಗಳಲ್ಲಿದ್ದಾರೆ ಎಂದು ಹೇಳಲಾಗುತ್ತದೆ. ಸುಮಾರು 10 ಮಂದಿಯಲ್ಲಿ ಒಂದು, 15 ವರ್ಷಗಳಿಗಿಂತಲೂ ಚಿಕ್ಕ ಪ್ರಾಯದ ಮಗುವಾಗಿದೆ. ಉಳಿದವರು ವಯಸ್ಕರಾಗಿದ್ದು, ಅವರಲ್ಲಿ 40 ಪ್ರತಿಶತಕ್ಕಿಂತಲೂ ಹೆಚ್ಚು ಮಂದಿ ಸ್ತ್ರೀಯರಾಗಿದ್ದಾರೆ. ಮತ್ತು ಆ ಉಳಿದ ವಯಸ್ಕರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಂದಿ 15ರಿಂದ 24ರ ನಡುವಿನ ಪ್ರಾಯದವರಾಗಿದ್ದಾರೆ.—ಲೋಕಾರೋಗ್ಯ ಸಂಸ್ಥೆ ಹಾಗೂ ಜಾಯಿಂಟ್ ಯುನೈಟೆಡ್ ನೇಷನ್ಸ್ ಪ್ರೋಗ್ರ್ಯಾಮ್ ಆನ್ ಏಚ್ಐವಿ/ಏಡ್ಸ್.
[ಪುಟ 7 ರಲ್ಲಿರುವ ಚೌಕ]
ಇದಕ್ಕೆ ಯಾರು ತುತ್ತಾಗಿದ್ದಾರೆ ಎಂಬುದನ್ನು ಹೇಗೆ ಹೇಳಸಾಧ್ಯವಿದೆ?
ಒಬ್ಬ ವ್ಯಕ್ತಿಯನ್ನು ಕೇವಲ ಹೊರಗಿನಿಂದ ನೋಡಿ, ಅವನಿಗೆ ಏಚ್ಐವಿ ಸೋಂಕಿದೆಯೊ ಇಲ್ಲವೊ ಎಂಬುದನ್ನು ನೀವು ಹೇಳಸಾಧ್ಯವಿಲ್ಲ. ಏಚ್ಐವಿ ಇದ್ದು, ಅದರ ರೋಗಲಕ್ಷಣಗಳು ಗೋಚರವಾಗದಿರುವಂತಹ ರೋಗಿಗಳು ಆರೋಗ್ಯವಂತರಾಗಿ ಕಂಡುಬರುವುದಾದರೂ, ಅವರು ಈ ವೈರಸನ್ನು ಇತರರಿಗೆ ದಾಟಿಸಸಾಧ್ಯವಿದೆ. ತನಗೆ ಏಚ್ಐವಿ ವೈರಸ್ ಸೋಂಕಿಲ್ಲ ಎಂದು ಹೇಳುವ ಒಬ್ಬ ವ್ಯಕ್ತಿಯ ಮಾತನ್ನು ನೀವು ನಂಬಸಾಧ್ಯವಿದೆಯೊ? ವಾಸ್ತವವಾಗಿ ಹಾಗಿಲ್ಲ. ಏಚ್ಐವಿ ಇರುವ ಅನೇಕ ಜನರಿಗೆ, ಆ ವೈರಸ್ ತಮ್ಮಲ್ಲಿ ಇದೆಯೆಂಬ ಪರಿವೆ ಇರುವುದಿಲ್ಲ. ಯಾರಿಗೆ ಅದು ಗೊತ್ತಿದೆಯೋ ಅವರು ಅದನ್ನು ರಹಸ್ಯವಾಗಿಡಲು ಪ್ರಯತ್ನಿಸಬಹುದು, ಅಥವಾ ಸುಳ್ಳು ಹೇಳಬಹುದು. ಏಚ್ಐವಿಯಿಂದ ಸೋಂಕಿತರಾಗಿರುವ 10ರಲ್ಲಿ 4 ಮಂದಿ, ಅವರ ಸದ್ಯದ ಸ್ಥಿತಿಯ ಕುರಿತು ಅವರವರ ಲೈಂಗಿಕ ಸಂಗಾತಿಗಳಿಗೆ ತಿಳಿಯಪಡಿಸಲು ಅಸಮರ್ಥರಾದರು ಎಂದು ಅಮೆರಿಕದ ಒಂದು ಸಮೀಕ್ಷೆಯು ಪ್ರಕಟಪಡಿಸಿತು.
[ಪುಟ 6 ರಲ್ಲಿರುವ ಚೌಕ/ಚಿತ್ರಗಳು]
ಏಚ್ಐವಿ ಹಾಗೂ ಏಡ್ಸ್ನ ಮಧ್ಯೆಯಿರುವ ಸಂಬಂಧ
ಏಚ್ಐವಿ ಅಂದರೆ, “ಹ್ಯೂಮನ್ ಇಮ್ಯೂನೊಡಿಫಿಶಿಯೆನ್ಸಿ ವೈರಸ್” ಎಂದಾಗಿದೆ, ದೇಹದ ರೋಗ ಪ್ರತಿರೋಧಕ ಸೋಂಕು ರಕ್ಷಾ ವ್ಯವಸ್ಥೆಯ ಭಾಗಗಳನ್ನು ಈ ವೈರಸ್ ನಿಧಾನವಾಗಿ ಧ್ವಂಸಗೊಳಿಸುತ್ತದೆ. ಏಡ್ಸ್ ಅಂದರೆ, “ಅಕ್ವೈರ್ಡ್ ಇಮ್ಯೂನೊಡಿಫಿಶಿಯೆನ್ಸಿ ಸಿಂಡ್ರೋಮ್” ಎಂದಾಗಿದೆ. ಇದು ಏಚ್ಐವಿ ಸೋಂಕಿದ ಬಳಿಕ ಪರಿಣಮಿಸುವ, ಅಂತಿಮವಾದ, ಅಂದರೆ ಜೀವಕ್ಕೇ ಅಪಾಯನ್ನುಂಟುಮಾಡುವ ಹಂತವಾಗಿದೆ. ಏಚ್ಐವಿ ವೈರಸ್ ಸೋಂಕು ರಕ್ಷಾ ವ್ಯವಸ್ಥೆಯನ್ನು ಬಹಳವಾಗಿ ಹಾನಿಗೊಳಿಸಿದೆ, ಹಾಗೂ ಇದು ರೋಗಿಯನ್ನು, ಸೋಂಕು ರಕ್ಷಾ ವ್ಯವಸ್ಥೆಯು ಹೋರಾಡಲು ಅಸಾಧ್ಯವಾದ ಇನ್ನಿತರ ಸೋಂಕು ರೋಗಗಳಿಗೆ ಗುರಿಮಾಡುತ್ತದೆ ಎಂಬುದನ್ನು ಈ ಹೆಸರೇ ವರ್ಣಿಸುತ್ತದೆ.
[ಕೃಪೆ]
CDC, Atlanta, Ga.
[ಪುಟ 7 ರಲ್ಲಿರುವ ಚಿತ್ರ]
ವಿವಾಹವಾಗಲು ಯೋಜಿಸುವುದಕ್ಕೆ ಮೊದಲು, ಏಚ್ಐವಿ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಒಂದು ವಿವೇಕಭರಿತ ಆಯ್ಕೆಯಾಗಿದೆ