ಯುವ ಜನರು ಪ್ರಶ್ನಿಸುವುದು. . .
ನಾನು ಶಾಲೆಯಲ್ಲಿ ಹೆಚ್ಚು ಉತ್ತಮವಾಗಿ ಕಲಿಯಶಕ್ತನಾಗಿರುವೆನೊ?
“ದರ್ಜೆಗಳು ನನ್ನ ಹೆತ್ತವರಿಗೆ ಬಹಳಷ್ಟು ಪ್ರಾಮುಖ್ಯವಾಗಿವೆ. ‘ನಿನ್ನ ಗಣಿತದ ಕಿರುಪರೀಕ್ಷೆಯಲ್ಲಿ ನೀನು ಎಷ್ಟು ಅಂಕಗಳನ್ನು ಪಡೆದೆ? ನಿನ್ನ ಇಂಗ್ಲಿಷ್ ಪೇಪರ್ನಲ್ಲಿ ನೀನು ಎಷ್ಟು ಅಂಕಗಳನ್ನು ಪಡೆದೆ?’ ಅದನ್ನು ನಾನು ದ್ವೇಷಿಸುತ್ತೇನೆ!”—13 ವರ್ಷ ಪ್ರಾಯದ ಸ್ಯಾಮ್.
ಸ್ಯಾಮ್ ಒಬ್ಬನೇ ಈ ಸಂಕಟಕರವಾದ ಸ್ಥಿತಿಯಲ್ಲಿ ಇಲ್ಲ. ನಿಜವಾಗಿಯೂ, “ಹೆಚ್ಚು ಉತ್ತಮವಾಗಿ ಕಲಿಯಸಾಧ್ಯವಿದೆ” (ಇಂಗ್ಲಿಷ್) ಎಂಬ ಪುಸ್ತಕದ ಲೇಖಕರು ಬರೆಯುವುದು: “ತಮ್ಮ ಮಗು, ಅವನು ಅಥವಾ ಅವಳು ಶಾಲೆಯಲ್ಲಿ ಕಲಿಯಲು ಸಮರ್ಥರಾಗಿರುವಷ್ಟು ಚೆನ್ನಾಗಿ ಕಲಿಯುತ್ತಿದೆ ಎಂದು ಆಲೋಚಿಸುವ ಹೆತ್ತವರನ್ನು ನಾವು ಇನ್ನೂ ಭೇಟಿಯಾಗಿಲ್ಲ.” ಆದರೆ ಸ್ಯಾಮ್ನಂತೆ, ಅನೇಕ ಯುವ ಜನರಿಗೆ, ತಮ್ಮ ಶಾಲಾಕೆಲಸದಲ್ಲಿ ಪ್ರಗತಿಯನ್ನು ಮಾಡುವಂತೆ—ಬಹುಶಃ ಶಾಲೆಯಲ್ಲಿ ಎಲ್ಲರನ್ನೂ ಮೀರಿಸುವಂತೆ—ತಮ್ಮ ಹೆತ್ತವರು ತಮ್ಮ ಮೇಲೆ ತೀರ ಹೆಚ್ಚು ಒತ್ತಡವನ್ನು ಹಾಕುತ್ತಿದ್ದಾರೆ ಎಂಬ ಅನಿಸಿಕೆಯಿದೆ. ತರಗತಿಯಲ್ಲಿ ಅವರು ಇನ್ನೂ ಹೆಚ್ಚಿನ ಒತ್ತಡವನ್ನು ಎದುರಿಸಬಹುದು. “ಶಿಕ್ಷಕರಿಗೆ ಸಾಕಷ್ಟು ತಾಳ್ಮೆಯಿಲ್ಲ” ಎಂದು ಒಬ್ಬ ಹದಿವಯಸ್ಕನು ಆಪಾದಿಸುತ್ತಾನೆ. “ನೀವು ಆಗಿಂದಾಗಲೇ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ಅವರು ಬಯಸುತ್ತಾರೆ ಮತ್ತು ನೀವು ನೆನಪಿನಲ್ಲಿಟ್ಟುಕೊಳ್ಳದಿದ್ದಲ್ಲಿ, ಅವರು ನೀವು ಮೂರ್ಖರಾಗಿದ್ದೀರಿ ಎಂದು ಭಾವಿಸುವಂತೆ ಮಾಡುತ್ತಾರೆ. ಆದುದರಿಂದ ನಾನು ಪ್ರಯತ್ನವನ್ನೇ ಮಾಡುವುದಿಲ್ಲ.”
ಹೆತ್ತವರು ಮತ್ತು ಶಿಕ್ಷಕರ ನಿರೀಕ್ಷಣೆಗಳಿಗನುಸಾರ ಜೀವಿಸಲು ತಪ್ಪಿಹೋಗುವ ಯುವ ಜನರು ಅನೇಕವೇಳೆ ಕಡಿಮೆ ಸಾಧಕರು (ಅಂಡರ್ಅಚೀವರ್ಸ್) ಎಂದು ಕರೆಯಲ್ಪಡುತ್ತಾರೆ. ಮತ್ತು ಶಾಲೆಯಲ್ಲಿ, ಯಾವುದೋ ಒಂದು ಹಂತದಲ್ಲಿ ಕಾರ್ಯತಃ ಎಲ್ಲ ವಿದ್ಯಾರ್ಥಿಗಳು ಕಡಿಮೆ ಸಾಧನೆಯನ್ನು ಮಾಡುತ್ತಾರೆ. ಏಕೆ? ಆಸಕ್ತಿಕರವಾಗಿ, ಸೋಮಾರಿತನ ಅಥವಾ ಕಲಿಯುವ ಅಸಾಮರ್ಥ್ಯವು ಯಾವಾಗಲೂ ಅದಕ್ಕೆ ಕಾರಣವಾಗಿರುವುದಿಲ್ಲ.a
ಕೆಲವರು ಕಡಿಮೆ ಸಾಧಕರಾಗಿರುವುದರ ಕಾರಣ
ಶಾಲಾಕೆಲಸದ ವಿಷಯಕ್ಕೆ ಬರುವಾಗ, ಕೆಲವು ಯುವ ಜನರು ಯಾವುದೇ ವಿಶೇಷ ಪ್ರಯತ್ನವಿಲ್ಲದೆ ಮುಂದುವರಿಯಲು ಇಷ್ಟಪಡುವಂತೆ ತೋರುವುದು ಒಪ್ಪತಕ್ಕ ವಿಷಯವೇ. “ನಾನು ತೀರ ಕಡಿಮೆ ಪ್ರಯತ್ನದಿಂದ ಕಲಿಯಲು ಶಕ್ತನಾಗಿರುವಲ್ಲಿ, ನಾನು ಕೇವಲ ಅಷ್ಟನ್ನೇ ಮಾಡುತ್ತೇನೆ” ಎಂದು 15 ವರ್ಷ ಪ್ರಾಯದ ಹರ್ಮನ್ ಒಪ್ಪಿಕೊಳ್ಳುತ್ತಾನೆ. ಆದರೂ, ಪ್ರಾಮಾಣಿಕವಾಗಿ ಹೇಳುವುದಾದರೆ, ಈ ಯುವ ಜನರಲ್ಲಿ ಎಲ್ಲರೂ ಕಲಿಯುವ ವಿಷಯದಲ್ಲಿ ಉದಾಸೀನ ಭಾವದವರಾಗಿರುವುದಿಲ್ಲ. ಅವರು ನಿರ್ದಿಷ್ಟ ವಿಷಯ (ಸಬ್ಜೆಕ್ಟ್)ವನ್ನು ಅಹಿತಕರವಾದದ್ದಾಗಿ ಕಂಡುಕೊಳ್ಳಬಹುದಷ್ಟೆ. ತದನಂತರ, ಅವರು ಏನನ್ನು ಕಲಿಯುತ್ತಿದ್ದಾರೋ ಅದರ ಪ್ರಾಯೋಗಿಕ ಮೌಲ್ಯವನ್ನು ನೋಡುವುದರ ವಿಷಯದಲ್ಲಿ ತೊಂದರೆಯಿರುವ ಕೆಲವರಿದ್ದಾರೆ. 17 ವರ್ಷ ಪ್ರಾಯದ ರೂಬನ್ ಅದನ್ನು ಈ ರೀತಿಯಲ್ಲಿ ವ್ಯಕ್ತಪಡಿಸಿದನು: “ಕೆಲವು ಸಬ್ಜೆಕ್ಟ್ಗಳು ಇವೆ, ಮತ್ತು ನಾನು ಶಾಲೆಯನ್ನು ಬಿಟ್ಟ ಬಳಿಕ ಖಂಡಿತವಾಗಿಯೂ ಅವುಗಳನ್ನು ಪುನಃ ಎಂದಿಗೂ ಉಪಯೋಗಿಸುವುದಿಲ್ಲ.” ಆಸಕ್ತಿ ಅಥವಾ ಪ್ರೋತ್ಸಾಹದ ಕೊರತೆಯು, ಸುಲಭವಾಗಿಯೇ ಕಡಿಮೆ ಸಾಧನೆಯ ಕಡೆಗೆ ನಡಿಸಸಾಧ್ಯವಿದೆ.
ಇನ್ನಿತರ ಕಾರಣಗಳಿವೆ. ಉದಾಹರಣೆಗಾಗಿ, ಶಿಕ್ಷಕರೊಬ್ಬರ ಬೋಧಿಸುವ ವಿಧವು ತೀರ ವೇಗವಾಗಿರುವಲ್ಲಿ, ನೀವು ಆಶಾಭಂಗಗೊಳ್ಳುವಿರಿ. ಅದು ತೀರ ನಿಧಾನಗತಿಯದ್ದಾಗಿರುವಲ್ಲಿ, ನೀವು ಬೇಸರಗೊಳ್ಳುವಿರಿ. ಶಾಲೆಯಲ್ಲಿ ನೀವು ಎಷ್ಟು ಚೆನ್ನಾಗಿ ಕಲಿಯುತ್ತೀರಿ ಎಂಬುದರ ಮೇಲೆ ಸಮಾನಸ್ಥರ ಒತ್ತಡವು ಸಹ ಪ್ರಭಾವವನ್ನು ಬೀರಬಲ್ಲದು. ಕಡಿಮೆ ಸಾಧನೆಮಾಡುವ ಮಕ್ಕಳು (ಇಂಗ್ಲಿಷ್) ಎಂಬ ಪುಸ್ತಕವು ವಿವರಿಸುವುದು: “ಬುದ್ಧಿವಂತ, ಶೈಕ್ಷಣಿಕವಾಗಿ ಸಮರ್ಥವಾದ ಮಗುವೊಂದು, ಶೈಕ್ಷಣಿಕವಲ್ಲದ ವಿಚಾರಗಳ ಕಡೆಗೆ ಅಭಿಮುಖವಾದ ಸಮಾನಸ್ಥರ ಗುಂಪಿನಿಂದ ಅಂಗೀಕರಿಸಲ್ಪಡಲು ಬಯಸುವಲ್ಲಿ, ಅವನು ಕಡಿಮೆ ಸಾಧನೆಮಾಡುವ ಒತ್ತಾಯದ ಅನಿಸಿಕೆಗೆ ಒಳಗಾಗಬಹುದು.” ಹೀಗೆ, ಶಾಲೆಯಲ್ಲಿ ತನ್ನ ಆರಂಭದ ವರ್ಷಗಳಲ್ಲಿ ತಾನು ಕಷ್ಟಪಟ್ಟು ಓದಿದಾಗ, ಇತರರು ಈರ್ಷ್ಯೆಗೊಂಡರು ಮತ್ತು ತನ್ನನ್ನು ಗೇಲಿಮಾಡಿದರೆಂದು ಒಬ್ಬ ಹದಿವಯಸ್ಕನು ದೂರಿದನು. ಹೌದು, ಯೌವನಸ್ಥನೊಬ್ಬನು ಜ್ಞಾನೋಕ್ತಿ 14:17ರಲ್ಲಿರುವ (NW) ಮೂಲತತ್ವದ ವಾಸ್ತವಿಕತೆಯನ್ನು ಎದುರಿಸಬಹುದು: “ಆಲೋಚನಾ ಸಾಮರ್ಥ್ಯಗಳಿರುವ ವ್ಯಕ್ತಿಯೊಬ್ಬನು ದ್ವೇಷಿಸಲ್ಪಡುತ್ತಾನೆ.”
ಕೆಲವೊಮ್ಮೆ, ಕಡಿಮೆ ಸಾಧನೆಯ ಕಾರಣಗಳು ತೀರ ಜಟಿಲವಾಗಿರುತ್ತವೆ. ದುಃಖಕರವಾಗಿಯೇ, ಕೆಲವು ಯುವ ಜನರು ಸ್ವತಃ ನಕಾರಾತ್ಮಕವಾದ ಭಾವನೆಯೊಂದಿಗೆ ದೊಡ್ಡವರಾಗುತ್ತಾರೆ. ಒಂದು ಮಗುವಿಗೆ, ಸತತವಾಗಿ ಮಂದಬುದ್ಧಿಯವನು, ಮೂರ್ಖ, ಅಥವಾ ಸೋಮಾರಿ ಎಂಬಂತಹ ನಿರ್ದಯವಾದ ಅಡ್ಡಹೆಸರುಗಳಿಂದ ಬೈಗುಳ ಸುರಿಮಳೆಯು ಸುರಿಸಲ್ಪಡುವಾಗ ಇದು ಫಲಿಸಬಲ್ಲದು. ಅಸಂತೋಷಕರವಾಗಿಯೇ, ವಾಸ್ತವದಲ್ಲಿ ಆ ಯೌವನಸ್ಥನು ತನಗೆ ಕೊಡಲ್ಪಟ್ಟಿರುವ ಅಡ್ಡಹೆಸರುಗಳಿಗೆ ಅನುಸಾರವಾಗಿಯೇ ಜೀವಿಸಬಹುದು. ಒಬ್ಬ ವೈದ್ಯನು ಅದನ್ನು ಹೀಗೆ ಹೇಳುತ್ತಾನೆ: “ನೀವು ಹೆಡ್ಡರೆಂದು ನಿಮಗೆ ಹೇಳಲ್ಪಟ್ಟಿದ್ದು, ನೀವು ಅದನ್ನು ನಂಬಲು ಮನಸ್ಸುಮಾಡುವಲ್ಲಿ, ನೀವು ಅದೇ ರೀತಿಯಲ್ಲಿ ವರ್ತಿಸುವಿರಿ.”
ಆಗಿಂದಾಗ್ಗೆ, ಹೆತ್ತವರ ಹಾಗೂ ಶಿಕ್ಷಕರ ರೇಗಾಟಗಳು ಸದುದ್ದೇಶವುಳ್ಳವುಗಳಾಗಿರುತ್ತವೆ. ಆದರೆ, ಅಷ್ಟಾದರೂ, ಯುವ ಜನರು ತಮ್ಮಿಂದ ತೀರ ಹೆಚ್ಚು ಕೇಳಿಕೊಳ್ಳಲ್ಪಡುತ್ತಿದೆ ಎಂಬ ಅನಿಸಿಕೆಗೊಳಗಾಗಬಹುದು. ನಿಮ್ಮ ವಿದ್ಯಮಾನದಲ್ಲಿ ಅದು ಸತ್ಯವಾಗಿ ತೋರುವಲ್ಲಿ, ನಿಮ್ಮ ಹೆತ್ತವರು ಹಾಗೂ ಶಿಕ್ಷಕರು ನಿಮ್ಮನ್ನು ಕೆರಳಿಸಲು ಪ್ರಯತ್ನಿಸುತ್ತಿಲ್ಲ ಎಂಬ ವಿಷಯದಲ್ಲಿ ಸಂಪೂರ್ಣ ಖಾತ್ರಿಯಿರಲಿ. ಬಹುಶಃ ನೀವು ನಿಮ್ಮ ಸಂಪೂರ್ಣ ಸಾಮರ್ಥ್ಯವನ್ನು ತಲಪುವಂತೆ ಅವರು ಬಯಸುತ್ತಿದ್ದಾರಷ್ಟೆ. ಆದರೂ, ಅವರ ನಿರೀಕ್ಷೆಯನ್ನು ತಲಪುವ ಚಿಂತೆಯು, ಸುಮ್ಮನೆ ಆ ಪ್ರಯತ್ನವನ್ನು ಬಿಟ್ಟುಬಿಡುವಂತಹ ಅನಿಸಿಕೆಯನ್ನು ನಿಮ್ಮಲ್ಲಿ ಉಂಟುಮಾಡಬಹುದು. ಆದರೆ ಪ್ರಯತ್ನಿಸುವುದನ್ನು ಬಿಟ್ಟುಬಿಡಬೇಡಿರಿ: ನೀವು ಶಾಲೆಯಲ್ಲಿ ಹೆಚ್ಚು ಉತ್ತಮವಾಗಿ ಕಲಿಯಬಲ್ಲಿರಿ.
ಪ್ರಚೋದಿತರಾಗುವುದು
ಮೊತ್ತಮೊದಲ ಹೆಜ್ಜೆಯು, ಪ್ರಚೋದಿತರಾಗುವುದೇ ಆಗಿದೆ! ಅದನ್ನು ಮಾಡಲು, ನೀವು ಏನನ್ನು ಕಲಿಯುತ್ತಿದ್ದೀರೋ ಅದರಲ್ಲಿ ನೀವು ಉದ್ದೇಶವನ್ನು ಕಾಣುವ ಅಗತ್ಯವಿದೆ. ಬೈಬಲು ಹೇಳುವುದು: “ಉಳುವವನು ಬೆಳೆಯಲ್ಲಿ ತನಗೆ ಪಾಲು ದೊರಕುತ್ತದೆಂದು ಉಳುವದೂ, ಒಕ್ಕುವವನು ತನಗೆ ಪಾಲು ದೊರಕುತ್ತದೆಂದು ಒಕ್ಕುವದೂ ನ್ಯಾಯ.” (1 ಕೊರಿಂಥ 9:10) ನಿರ್ದಿಷ್ಟ ಸಬ್ಜೆಕ್ಟ್ಗಳ ಮೂಲಕ “ಉಳು”ವುದರ ಮೌಲ್ಯವನ್ನು ನೋಡುವುದು ಯಾವಾಗಲೂ ಸುಲಭವಾದದ್ದಾಗಿರುವುದಿಲ್ಲ. ಉದಾಹರಣೆಗಾಗಿ, ನೀವು ಹೀಗೆ ಹೇಳಬಹುದು, ‘ನಾನು ಒಬ್ಬ ಕಂಪ್ಯೂಟರ್ ಪ್ರೊಗ್ರ್ಯಾಮರ್ ಆಗಲು ಬಯಸುತ್ತೇನೆ. ಆದುದರಿಂದ ನಾನು ಇತಿಹಾಸದ ವಿಷಯವನ್ನು ಏಕೆ ಅಧ್ಯಯನಿಸಬೇಕು?’
ನಿಮ್ಮ ಶಾಲಾ ಪಾಠಕ್ರಮದಲ್ಲಿರುವ ಪ್ರತಿಯೊಂದೂ ವಿಷಯವು ಸುಸಂಬದ್ಧವಾಗಿ—ಕಡಿಮೆಪಕ್ಷ ಸದ್ಯದ ಸಮಯದಲ್ಲಿ—ಕಂಡುಬರದಿರಬಹುದು ಎಂಬುದು ಒಪ್ಪತಕ್ಕ ವಿಷಯವೇ. ಆದರೆ ದೀರ್ಘವಾದ ದೃಷ್ಟಿಕೋನವನ್ನು ಪಡೆದುಕೊಳ್ಳಲು ಪ್ರಯತ್ನಿಸಿರಿ. ಬೇರೆ ಬೇರೆ ಸಬ್ಜೆಕ್ಟ್ಗಳಲ್ಲಿರುವ ಸಾಮಾನ್ಯವಾದ ಒಂದು ಶಿಕ್ಷಣವು, ನಿಮ್ಮ ಸುತ್ತಲೂ ಇರುವ ಲೋಕದ ಕುರಿತಾದ ನಿಮ್ಮ ತಿಳಿವಳಿಕೆಯನ್ನು ಸಂಪದ್ಯುಕ್ತಗೊಳಿಸುವುದು. ಸುಶಿಕ್ಷಣವು ತಮಗೆ ‘ಯಾರಾರಿಗೆ ಎಂಥೆಂಥವರಾಗಬೇಕೋ ಅಂಥಂಥವರಾಗಲು’ ಸಹಾಯ ಮಾಡಿದೆಯೆಂದು, ಯೆಹೋವನ ಸಾಕ್ಷಿಗಳ ನಡುವೆ ಇರುವ ಅನೇಕ ಯುವ ಜನರು ಕಂಡುಕೊಂಡಿದ್ದಾರೆ; ಇದು ಜೀವಿತದ ವಿವಿಧ ಹಿನ್ನೆಲೆಗಳಿಂದ ಬಂದ ಜನರಿಗೆ ರಾಜ್ಯ ಸಂದೇಶವನ್ನು ಪ್ರಸ್ತುತಪಡಿಸುವುದರಲ್ಲಿ ಹೆಚ್ಚು ಮಹತ್ತರವಾದ ಬಹುಮುಖ ಸಾಮರ್ಥ್ಯವನ್ನು ಅವರಿಗೆ ಕೊಟ್ಟಿದೆ. (1 ಕೊರಿಂಥ 9:22) ಒಂದು ಸಬ್ಜೆಕ್ಟ್ ನಿಮಗೆ ತೀರ ಕಡಿಮೆ ಪ್ರಾಯೋಗಿಕ ಮೌಲ್ಯದ್ದಾಗಿದೆಯೆಂದು ತೋರುವಾಗಲೂ, ಅದರಲ್ಲಿ ಪಾರಂಗತರಾಗುವ ಮೂಲಕ ನೀವು ಅದರಿಂದ ಪ್ರಯೋಜನವನ್ನು ಪಡೆದುಕೊಳ್ಳುವಿರಿ. ಕಡಿಮೆಪಕ್ಷ, ನೀವು ನಿಮ್ಮ “ಆಲೋಚನಾ ಸಾಮರ್ಥ್ಯ”ವನ್ನಾದರೂ (NW) ಅಧಿಕಗೊಳಿಸಿಕೊಳ್ಳುತ್ತೀರಿ; ಇದು ಮುಂದೆ ಭವಿಷ್ಯತ್ತಿನಲ್ಲಿ ನಿಮಗೆ ಭಾರಿ ಪ್ರಯೋಜನವನ್ನು ಉಂಟುಮಾಡುವುದು.—ಜ್ಞಾನೋಕ್ತಿ 1:1-4.
ಶಾಲೆಯು ನಿಮ್ಮ ಗುಪ್ತವಾದ ಕೌಶಲಗಳನ್ನು ಹೊರಗೆಡವಲು ಸಹ ಸಹಾಯ ಮಾಡಸಾಧ್ಯವಿದೆ. “ನಿನಗೆ ದೊರಕಿದ ದೇವರ ಕೃಪಾವರವು ಪ್ರಜ್ವಲಿಸುವಂತೆ” ಮಾಡು ಎಂದು ಅಪೊಸ್ತಲ ಪೌಲನು ತಿಮೊಥೆಯನಿಗೆ ಬರೆದನು. (2 ತಿಮೊಥೆಯ 1:6) ಕ್ರೈಸ್ತ ಸಭೆಯಲ್ಲಿ ತಿಮೊಥೆಯನು ಯಾವುದೋ ವಿಶೇಷ ಸೇವೆಗೆ ನೇಮಿಸಲ್ಪಟ್ಟಿದ್ದನೆಂಬುದು ಸುವ್ಯಕ್ತ. ಆದರೆ ಅವನು ದೇವದತ್ತ ಸಾಮರ್ಥ್ಯ—ಅವನ “ಕೃಪಾವರ”—ವನ್ನು ನಿಶ್ಚಲವಾಗಿರುವಂತೆ ಹಾಗೂ ವ್ಯರ್ಥವಾಗಿ ಹೋಗುವಂತೆ ಬಿಡುವುದಲ್ಲ, ಬದಲಾಗಿ ಅದನ್ನು ಬೆಳೆಸಿಕೊಳ್ಳುವ ಅಗತ್ಯವಿತ್ತು. ನಿಶ್ಚಯವಾಗಿಯೂ, ತಿಮೊಥೆಯನ ಕೃಪಾವರದಂತೆಯೇ, ನಿಮ್ಮ ವಿದ್ಯಾಭ್ಯಾಸಸಂಬಂಧಿತ ಸಾಮರ್ಥ್ಯಗಳು ದೇವರಿಂದ ನೇರವಾಗಿ ನಿಮಗೆ ಅನುಗ್ರಹಿಸಲ್ಪಡುವುದಿಲ್ಲ. ಆದರೂ, ಕಲೆಯಲ್ಲಾಗಲಿ, ಸಂಗೀತದಲ್ಲಾಗಲಿ, ಗಣಿತದಲ್ಲಾಗಲಿ, ವಿಜ್ಞಾನದಲ್ಲಾಗಲಿ, ಅಥವಾ ಇತರ ಕ್ಷೇತ್ರಗಳಲ್ಲಾಗಲಿ, ನಿಮಗಿರುವ ಸಾಮರ್ಥ್ಯಗಳು ನಿಮಗೆ ವಿಶೇಷವಾದವುಗಳಾಗಿವೆ. ಮತ್ತು ಅಂತಹ ಪ್ರತಿಭೆಗಳನ್ನು ಕಂಡುಹಿಡಿಯಲು ಹಾಗೂ ವಿಕಸಿಸಲು ಶಾಲೆಯು ನಿಮಗೆ ಸಹಾಯ ಮಾಡಬಲ್ಲದು.
ಒಳ್ಳೆಯ ಅಭ್ಯಾಸ ರೂಢಿಗಳು
ಆದರೂ, ಶಾಲೆಯಿಂದ ಅತ್ಯಧಿಕ ಪ್ರಯೋಜನವನ್ನು ಪಡೆದುಕೊಳ್ಳಲಿಕ್ಕಾಗಿ, ನಿಮಗೆ ಒಂದು ಒಳ್ಳೆಯ ಅಭ್ಯಾಸ ನಿಯತಕ್ರಮದ ಅಗತ್ಯವಿದೆ. (ಫಿಲಿಪ್ಪಿ 3:16ನ್ನು ಹೋಲಿಸಿರಿ.) ಬಹಳಷ್ಟು ವಸ್ತುವಿಷಯವನ್ನು ಆವರಿಸಲಿಕ್ಕಾಗಿ ಸಾಕಷ್ಟು ಸಮಯವನ್ನು ಶೆಡ್ಯೂಲ್ ಮಾಡಿರಿ, ಆದರೆ ನೀವು ನಿಮ್ಮನ್ನು ಚೇತನಗೊಳಿಸಿಕೊಳ್ಳಲು ಸಾಧ್ಯವಾಗುವಂತೆ ಮಧ್ಯೆ ಮಧ್ಯೆ ವಿರಾಮವನ್ನು ಪಡೆದುಕೊಳ್ಳಿ. ನಿಮ್ಮ ಅಭ್ಯಾಸದಲ್ಲಿ ವಾಚನವು ಒಳಗೂಡಿರುವಲ್ಲಿ, ಮೊದಲು ವಸ್ತುವಿಷಯದ ಸಮೀಕ್ಷೆಮಾಡಿರಿ; ಇದರಿಂದಾಗಿ ನಿಮಗೆ ಅದರ ಸಂಪೂರ್ಣ ಹೊರನೋಟವು ದೊರಕಬಲ್ಲದು. ತದನಂತರ, ಅಧ್ಯಾಯದ ಶೀರ್ಷಿಕೆಗಳು ಅಥವಾ ಮುಖ್ಯ ಶಿರೋನಾಮಗಳ ಮೇಲಾಧಾರಿತವಾದ ಪ್ರಶ್ನೆಗಳನ್ನು ಸಿದ್ಧಪಡಿಸಿರಿ. ಆ ಬಳಿಕ ಓದಿ, ಹಾಗೆ ಓದುತ್ತಿರುವಾಗ ನಿಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತಾ ಹೋಗಿ. ಕೊನೆಯದಾಗಿ, ನೀವು ಕಲಿತಿರುವ ವಿಷಯವನ್ನು ನೆನಪಿನಿಂದ ಕಂಠಪಾಠಮಾಡಲು ನಿಮಗೆ ಸಾಧ್ಯವಿದೆಯೋ ಎಂದು ನೋಡಿ.
ನೀವು ಕಲಿತಿರುವ ವಿಷಯವನ್ನು, ಈಗಾಗಲೇ ನಿಮಗೆ ತಿಳಿದಿರುವ ವಿಷಯದೊಂದಿಗೆ ಸಂಬಂಧಿಸಿರಿ. ಉದಾಹರಣೆಗೆ, ವಿಜ್ಞಾನದ ಕೋರ್ಸು ಒಂದು ಕಿಟಕಿಯಾಗಿರಸಾಧ್ಯವಿದ್ದು, ಅದರ ಮೂಲಕ ನಾವು ದೇವರ ‘ಕಣ್ಣಿಗೆ ಕಾಣದಿರುವ ಗುಣಲಕ್ಷಣಗಳನ್ನು’ ನೋಡಸಾಧ್ಯವಿದೆ. (ರೋಮಾಪುರ 1:20) ಇತಿಹಾಸವು ಈ ಕೆಳಗಿನ ಹೇಳಿಕೆಯ ಸತ್ಯತೆಯನ್ನು ನೀವೇ ರುಜುಪಡಿಸುವಂತೆ ನಿಮಗೆ ಸಹಾಯ ಮಾಡಬಲ್ಲದು: “ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” (ಯೆರೆಮೀಯ 10:23) ನೀವು ನಿಮ್ಮನ್ನು ಅಭ್ಯಾಸಿಸಲು ತೊಡಗಿಸಿಕೊಳ್ಳುವಾಗ, ನೀವು ಕಲಿಯುವುದನ್ನು ಹೆಚ್ಚು ಸುಲಭವಾದದ್ದಾಗಿ, ಅಷ್ಟುಮಾತ್ರವಲ್ಲದೆ ಹೆಚ್ಚು ಆನಂದದಾಯಕವಾದದ್ದಾಗಿ ಕಂಡುಕೊಳ್ಳುವುದು ಸಂಭವನೀಯ! ಸೊಲೊಮೋನನು ಗಮನಿಸಿದ್ದು: “ವಿವೇಕಿಗೆ ತಿಳುವಳಿಕೆಯು ಸುಲಭವಾಗಿ ದೊರೆಯುವದು.”—ಜ್ಞಾನೋಕ್ತಿ 14:6.
ಸಕಾರಾತ್ಮಕವಾದ ಮನೋಭಾವವನ್ನು ಇಟ್ಟುಕೊಳ್ಳಿರಿ
ಆದರೂ, ಕೆಲವೊಮ್ಮೆ, ಕಡಿಮೆ ಸಾಧನೆಯು ಒಬ್ಬನ ಮಿತ್ರರ ಆಯ್ಕೆಗೆ ಸಂಬಂಧಿಸಿರುತ್ತದೆ. ನಿಮ್ಮ ಸ್ನೇಹಿತರು ಯಶಸ್ಸನ್ನು ಉತ್ತೇಜಿಸುತ್ತಾರೋ ಅಥವಾ ಸ್ವತಃ ಅವರೇ ಕಡಿಮೆ ಸಾಧಕರಾಗಿದ್ದಾರೊ? ಬೈಬಲ್ ಜ್ಞಾನೋಕ್ತಿಯೊಂದು ಹೇಳುವುದು: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.” (ಜ್ಞಾನೋಕ್ತಿ 13:20) ಆದುದರಿಂದ, ನಿಮ್ಮ ಸಹವಾಸಿಗಳನ್ನು ವಿವೇಕದಿಂದ ಆರಿಸಿಕೊಳ್ಳಿರಿ. ಶಾಲೆಯ ಕಡೆಗೆ ಸಕಾರಾತ್ಮಕವಾದ ಮನೋಭಾವ ಇರುವವರೊಂದಿಗೆ ಸಹವಾಸಮಾಡಿರಿ. ನಿಮ್ಮ ದರ್ಜೆಗಳನ್ನು ಉತ್ತಮಗೊಳಿಸಲಿಕ್ಕಾಗಿರುವ ನಿಮ್ಮ ಗುರಿಯ ಕುರಿತು ನಿಮ್ಮ ಶಿಕ್ಷಕರೊಂದಿಗೆ ವೈಯಕ್ತಿಕವಾಗಿ ಮಾತಾಡಲು ಹಿಂಜರಿಯಬೇಡಿರಿ. ನಿಸ್ಸಂದೇಹವಾಗಿಯೂ ಹಾಗೆ ಮಾಡುವಂತೆ ನಿಮಗೆ ಸಹಾಯ ಮಾಡಲಿಕ್ಕಾಗಿ ನಿಮ್ಮ ಶಿಕ್ಷಕರು ಹೆಚ್ಚಿನ ಪ್ರಯತ್ನವನ್ನು ಮಾಡುವರು.
ನಿಮ್ಮ ಸಾಮರ್ಥ್ಯಗಳ ಕುರಿತು ನಕಾರಾತ್ಮಕವಾದ ಆಲೋಚನೆಗಳಿಂದ ಆಕ್ರಮಿಸಲ್ಪಟ್ಟಿರುವಾಗ, ಅಪೊಸ್ತಲ ಪೌಲನ ಉದಾಹರಣೆಯನ್ನು ಪರಿಗಣಿಸಿರಿ. ಅವನ ಮಾತಿನ ಸಾಮರ್ಥ್ಯವನ್ನು ಜನರು ಟೀಕಿಸಿದಾಗ, ಅವನು ಉತ್ತರಿಸಿದ್ದು: “ನಾನು ವಾಕ್ಚಾತುರ್ಯದಲ್ಲಿ ನಿಪುಣನಲ್ಲದಿದ್ದರೂ ಜ್ಞಾನದಲ್ಲಿ ನಿಪುಣನಾಗಿದ್ದೇನೆ.” (2 ಕೊರಿಂಥ 10:10; 11:6) ಹೌದು, ಪೌಲನು ತನ್ನ ದೌರ್ಬಲ್ಯಗಳಿಗೆ ಬದಲಾಗಿ ತನ್ನ ಸಾಮರ್ಥ್ಯಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸಿದನು. ನಿಮ್ಮ ಸಾಮರ್ಥ್ಯಗಳು ಯಾವುವು? ನಿಮಗೆ ಅವುಗಳನ್ನು ಒಂದೊಂದಾಗಿ ಗುರುತಿಸುವುದು ಅಸಾಧ್ಯವಾಗಿರುವಲ್ಲಿ, ನೀವು ಅದನ್ನು ಒಬ್ಬ ಬೆಂಬಲಾತ್ಮಕ ವಯಸ್ಕನೊಂದಿಗೆ ಏಕೆ ಮಾತಾಡಬಾರದು? ಅಂತಹ ಮಿತ್ರನೊಬ್ಬನು, ನಿಮ್ಮ ಸಾಮರ್ಥ್ಯಗಳನ್ನು ಗುರುತಿಸಲು ಹಾಗೂ ಸಾಧ್ಯವಾದಷ್ಟು ಹೆಚ್ಚು ಅವುಗಳಿಂದ ಪ್ರಯೋಜನವನ್ನು ಪಡೆದುಕೊಳ್ಳಲು ನಿಮಗೆ ಸಹಾಯ ಮಾಡಬಲ್ಲನು.
ಸಮಸ್ಯೆಗಳಿದ್ದರೂ ಪ್ರಗತಿಮಾಡುತ್ತಿರುವುದು
“ಈ ಕಾರ್ಯಗಳನ್ನು ಸಾಧಿಸಿಕೊಳ್ಳುವದರಲ್ಲಿ ಆಸಕ್ತನಾಗಿರು. ಇದರಿಂದ ನಿನ್ನ ಅಭಿವೃದ್ಧಿಯು [“ಪ್ರಗತಿಯು,” NW] ಎಲ್ಲರಿಗೂ ಪ್ರಸಿದ್ಧವಾಗುವದು.” (1 ತಿಮೊಥೆಯ 4:15) ಒಬ್ಬ ತಂದೆಯು ತನ್ನ ಮಗನೊಂದಿಗೆ ಮಾತಾಡುತ್ತಿರುವಂತೆ, ಈಗಾಗಲೇ ಸಫಲನಾಗಿರುವ ತಿಮೊಥೆಯನಿಗೆ ಪೌಲನು, ಶುಶ್ರೂಷೆಯಲ್ಲಿ ಇನ್ನೂ ಹೆಚ್ಚು ಪ್ರಗತಿಯನ್ನು ಮಾಡುವಂತೆ ಅವನನ್ನು ಉತ್ತೇಜಿಸಿದನು. ಬೈಬಲ್ ಸಮಯಗಳಲ್ಲಿ, “ಪ್ರಗತಿಮಾಡು” ಎಂಬ ಗ್ರೀಕ್ ಕ್ರಿಯಾಪದವು ಅಕ್ಷರಾರ್ಥಕವಾಗಿ “ಕತ್ತರಿಸಿ ಮುಂದೆಹೋಗು” ಎಂಬುದನ್ನು ಅರ್ಥೈಸಿತು. ಇದು, ಯಾರಾದರೊಬ್ಬರು ಪೊದೆಗಳನ್ನು ಕತ್ತರಿಸುತ್ತಾ ದಾರಿಮಾಡಿಕೊಂಡು ಮುಂದೆಹೋಗುವುದನ್ನು ಮನಸ್ಸಿಗೆ ತರುತ್ತದೆ. ಕೆಲವೊಮ್ಮೆ, ಶಾಲೆಯಲ್ಲಿ ಮುಂದುವರಿಯುವುದು ಅದೇ ರೀತಿ ಕಂಡುಬರಬಹುದು. ಆದರೆ ಅಂತಿಮ ಬಹುಮಾನವು ಪ್ರಯತ್ನಕ್ಕೆ ಅರ್ಹವಾಗಿದೆ ಎಂದು ನಾವು ಆಲೋಚಿಸುವಲ್ಲಿ, ಶಾಲೆಯ ಹಾದಿಯನ್ನು ಪೂರೈಸುವುದು ಹೆಚ್ಚು ಸುಲಭವಾದದ್ದಾಗಿರುವುದು.
ಪ್ರಯತ್ನ, ಪ್ರೇರಣೆ, ಮತ್ತು ಕಲಿಯುವಿಕೆಯು ಜೊತೆಜೊತೆಯಾಗಿ ಕಾರ್ಯನಡಿಸುತ್ತದೆ. ದೃಷ್ಟಾಂತಕ್ಕಾಗಿ: ಒಂದು ಸಂಗೀತ ಸಾಧನವನ್ನು ನುಡಿಸುವ ಯಾರಾದರೊಬ್ಬರ ಕುರಿತು ಆಲೋಚಿಸಿರಿ. ಅವನು ಅದನ್ನು ನುಡಿಸುವುದರಲ್ಲಿ ಆನಂದಿಸುವಲ್ಲಿ, ಅವನು ಅದನ್ನು ಇನ್ನೂ ಹೆಚ್ಚಾಗಿ ನುಡಿಸುತ್ತಾನೆ. ಅವನು ಹೆಚ್ಚೆಚ್ಚು ನುಡಿಸಿದಂತೆ, ಅವನ ನೈಪುಣ್ಯವು ಹೆಚ್ಚುತ್ತದೆ, ಅದರಿಂದ ಅವನ ಆನಂದವು ಇನ್ನೂ ಹೆಚ್ಚುತ್ತದೆ. ನಾವು ಹೆಚ್ಚು ವಿಷಯಗಳನ್ನು ಕಲಿತಂತೆ, ಇನ್ನೂ ಹೆಚ್ಚು ವಿಷಯಗಳನ್ನು ಕಲಿಯುವುದು ನಮಗೆ ತುಂಬ ಸುಲಭ. ಆದುದರಿಂದ, ನಿಮ್ಮ ಶಾಲಾಕೆಲಸದಿಂದ ಎದೆಗುಂದದಿರಿ. ಅಗತ್ಯವಿರುವ ಪ್ರಯತ್ನವನ್ನು ಮಾಡಿರಿ, ಮೇಲುಗೈ ಸಾಧಿಸಲು ನಿಮಗೆ ಸಹಾಯ ಮಾಡುವವರೊಂದಿಗೆ ಸಹವಾಸ ಮಾಡಿರಿ, ಮತ್ತು ಪುರಾತನ ಅರಸನಾದ ಆಸನಿಗೆ ಅಜರ್ಯನು ನುಡಿದ ಮಾತುಗಳನ್ನು ಹೃದಯಕ್ಕೆ ತೆಗೆದುಕೊಳ್ಳಿರಿ: “ನಿಮ್ಮ ಕೈಗಳು ಜೋಲು ಬೀಳದಿರಲಿ. ನಿಮ್ಮ ಪ್ರಯತ್ನಕ್ಕೆ ಫಲತಪ್ಪದು.”—2 ಪೂರ್ವಕಾಲವೃತ್ತಾಂತ 15:7.
[ಪಾದಟಿಪ್ಪಣಿ]
a ಕಲಿಯುವ ಅಸಾಮರ್ಥ್ಯಗಳಿರುವ ಯುವ ಜನರು, ಈ ವಿಷಯದಲ್ಲಿ ವಿಶೇಷ ಪಂಥಾಹ್ವಾನಗಳನ್ನು ಎದುರಿಸಬಹುದು. ಹೆಚ್ಚಿನ ಮಾಹಿತಿಗಾಗಿ, ಜುಲೈ 8, 1996ರ ಎಚ್ಚರ! ಪತ್ರಿಕೆಯ, 26-28ನೆಯ ಪುಟಗಳನ್ನು ನೋಡಿರಿ.
[ಪುಟ 16 ರಲ್ಲಿರುವ ಚಿತ್ರ]
ನಿಮ್ಮ ದರ್ಜೆಗಳನ್ನು ಉತ್ತಮಗೊಳಿಸಲಿಕ್ಕಾಗಿರುವ ನಿಮ್ಮ ಗುರಿಯ ಕುರಿತು ನಿಮ್ಮ ಶಿಕ್ಷಕರೊಂದಿಗೆ ಮಾತಾಡಲು ಹಿಂಜರಿಯಬೇಡಿರಿ
[ಪುಟ 17 ರಲ್ಲಿರುವ ಚಿತ್ರ]
ಒಂದು ಸಬ್ಜೆಕ್ಟ್ ನಿಮಗೆ ತೀರ ಕಡಿಮೆ ಪ್ರಾಯೋಗಿಕ ಮೌಲ್ಯದ್ದಾಗಿದೆಯೆಂದು ತೋರುವಾಗಲೂ, ಅದರಲ್ಲಿ ಪಾರಂಗತರಾಗುವ ಮೂಲಕ ನೀವು ಅದರಿಂದ ಪ್ರಯೋಜನವನ್ನು ಪಡೆದುಕೊಳ್ಳುವಿರಿ