ಒತ್ತಡ—“ನಿಧಾನವಾಗಿ ಕೊಲ್ಲುವ ವಿಷ”
“ಜನರು ಯಾವಾಗಲೂ, ‘ಕಾಯಿಲೆ ಬೀಳುವಷ್ಟು ಒತ್ತಡ ಪರವಶವಾಗಬೇಡ’ ಎಂದು ಹೇಳುವುದನ್ನು ನಾವು ಕೇಳಿಸಿಕೊಳ್ಳುತ್ತೇವೆ. ಅದಕ್ಕೆ ನಿಜವಾದ ಜೀವಶಾಸ್ತ್ರೀಯ ಕಾರಣವಿದೆಯೆಂಬುದನ್ನು ಅವರು ಪ್ರಾಯಶಃ ತಿಳಿದಿರುವುದಿಲ್ಲ.”—ಡಾ. ಡೇವಿಡ್ ಫೆಲ್ಟನ್.
ಹದಿಪ್ರಾಯದ ಮಗ, ಕಡಿಮೆಯಾಗುತ್ತಿದ್ದ ಬ್ಯಾಂಕ್ ಅಕೌಂಟ್ ಮತ್ತು ತನ್ನ ಹೆತ್ತವರೊಂದಿಗೆ ಮನಸ್ತಾಪವಿದ್ದ ಒಂಟಿ ತಾಯಿಯಾದ ಜಿಲ್ಗೆ, ಒತ್ತಡ ಪರವಶಳಾಗಲು ಈಗಾಗಲೇ ಸಾಕಷ್ಟು ಕಾರಣವಿತ್ತು. ಆಗ ಅನೀರೀಕ್ಷಿತವಾಗಿ, ಆಕೆಯ ಕೈಯಲ್ಲಿ ತುರಿಸುವ ಉರಿಗುಳ್ಳೆಗಳು ಕಂಡುಬಂದವು. ಅವಳು ಆ್ಯಂಟಿಬಯಾಟಿಕ್ ಪ್ರತಿಜೀವಕ, ಕಾರ್ಟಿಸೋನ್ ಕ್ರೀಮ್ ಮತ್ತು ಹಿಸ್ಟಮೀನ್ರೋಧಕಗಳನ್ನು ಬಳಸಿದರೂ, ಇವುಗಳಿಂದ ಪರಿಹಾರ ದೊರಕಲಿಲ್ಲ. ಬದಲಿಗೆ, ಗುಳ್ಳೆಗಳು ಜಿಲ್ನ ದೇಹದಲ್ಲೆಲ್ಲ—ಮುಖಕ್ಕೂ—ಹರಡಿದವು. ಅಕ್ಷರಶಃ ಒತ್ತಡವು ಅವಳನ್ನು ಪೀಡಿಸುತ್ತಿತ್ತು.
ರೋಗಿಗಳ ಭಾವಾತ್ಮಕ ಸ್ಥಿತಿಯನ್ನು ಪರೀಕ್ಷೆಗೊಳಪಡಿಸುವ ಚರ್ಮಶಾಸ್ತ್ರೀಯ ಚಿಕಿತ್ಸಾಲಯಕ್ಕೆ ಜಿಲ್ಳನ್ನು ಸೇರಿಸಲಾಯಿತು. ಆ ಚಿಕಿತ್ಸಾಲಯದ ಜೊತೆಸ್ಥಾಪಕ, ಡಾ. ಥಾಮಸ್ ಗ್ಯ್ರಾಗ್, “ಅವರ ಜೀವಿತದಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತೇವೆ” ಎಂದು ಹೇಳುತ್ತಾರೆ. ಗುಣವಾಗದ ಚರ್ಮ ಸಮಸ್ಯೆಗಳಿರುವ ಜನರಿಗೆ, ಅಗತ್ಯವಿರುವ ಔಷಧೀಯ ಆರೈಕೆಯಲ್ಲದೆ, ಒತ್ತಡ ನಿರ್ವಹಣೆ ಮಾಡುವುದರಲ್ಲಿ ಸಹಾಯ ಬೇಕಾಗುತ್ತದೆಂದು ಅವರು ಅನೇಕ ವೇಳೆ ಕಂಡುಕೊಳ್ಳುತ್ತಾರೆ. ಡಾ. ಗ್ರ್ಯಾಗ್ ಒಪ್ಪಿಕೊಳ್ಳುವುದು: “ನಿಮಗೆ ಅನಿಸುವ ಅಥವಾ ನೀವು ವರ್ತಿಸುವ ರೀತಿಯು ಚರ್ಮರೋಗವನ್ನು ಬರಿಸುತ್ತದೆಂದು ಹೇಳುವುದು ತೀರ ಸರಳವಾದ ವಿಷಯವಾಗಿರಬಹುದು. ಆದರೆ ಒಬ್ಬನ ಭಾವಾತ್ಮಕ ಸ್ಥಿತಿಯು ಚರ್ಮವ್ಯಾಧಿಗಳಲ್ಲಿ ದೊಡ್ಡ ಪಾತ್ರವನ್ನು ವಹಿಸಬಲ್ಲದೆಂದು ನಾವು ಹೇಳಸಾಧ್ಯವಿದೆ. ಮತ್ತು ಒಬ್ಬಳಿಗೆ, ಆಕೆಯ ಜೀವನದಲ್ಲಿನ ಒತ್ತಡದ ಸಂಬಂಧದಲ್ಲಿ ಸಹಾಯಮಾಡದೆ, ಸ್ಟೀರೈಡ್ ಕ್ರೀಮ್ಗಾಗಿ ಔಷಧಚೀಟಿಗಳನ್ನು ಬರೆದುಕೊಡುತ್ತಿರಬಾರದು.”
ಒತ್ತಡವನ್ನು ನಿರ್ವಹಿಸುವ ಕುರಿತ ಕಲಿಕೆಯು ತನ್ನ ಜೀವವನ್ನು ಪದಶಃ ಉಳಿಸಿತೆಂದು ಜಿಲ್ ಅಭಿಪ್ರಯಿಸುತ್ತಾಳೆ. “ನನ್ನ ದೇಹದಲ್ಲಿ ಗುಳ್ಳೆಗಳು ಇನ್ನೂ ಏಳುತ್ತವೆ. ಆದರೆ ನನ್ನ ಚರ್ಮವು ಹಿಂದಿನಷ್ಟು ಹೀನ ಸ್ಥಿತಿಯಲ್ಲಿಲ್ಲ” ಎನ್ನುತ್ತಾಳೆ ಆಕೆ. ಇದೊಂದು ವಿಚಿತ್ರ ವಿದ್ಯಮಾನವೋ? ಖಂಡಿತವಾಗಿಯೂ ಇಲ್ಲ. ಉರಿಯೂತ, ಪೊರೆಗೂಡಿದ ಚರ್ಮರೋಗ, ಮೊಡವೆ ಮತ್ತು ಇಸಬುಗಳು ಸೇರಿರುವ ಚರ್ಮಕ್ಕೆ ಸಂಬಂಧಿಸಿದ ಅನೇಕ ರೋಗಗಳಲ್ಲಿ ಅನೇಕ ವೇಳೆ ಒತ್ತಡವು ಒಂದು ಅಂಶವಾಗಿದೆಯೆಂದು ಅನೇಕ ವೈದ್ಯರ ಅಭಿಪ್ರಾಯ.
ಒತ್ತಡ ಮತ್ತು ನಿಮ್ಮ ಸೋಂಕು ರಕ್ಷಾ ವ್ಯವಸ್ಥೆ
ಒತ್ತಡವು ನಿಮ್ಮ ರೋಗರಕ್ಷಾ ವ್ಯವಸ್ಥೆಯನ್ನು ನಿಗ್ರಹಿಸಿ, ಪ್ರಾಯಶಃ ಅನೇಕ ಸೋಂಕು ರೋಗಗಳಿಗೆ ದಾರಿಮಾಡಿಕೊಡಬಲ್ಲದೆಂದು ಪ್ರಸಕ್ತ ಸಂಶೋಧನೆಯು ತೋರಿಸುತ್ತದೆ. ನಂಜುಶಾಸ್ತ್ರಜ್ಞ ರಾನಲ್ಡ್ ಗ್ಲೇಸರ್ ಹೇಳುವುದು: “ಒತ್ತಡವು ನಿಮ್ಮನ್ನು ಕಾಯಿಲೆ ಬೀಳಿಸದಿದ್ದರೂ, ಅದು ನಿಮ್ಮ ಸೋಂಕು ರಕ್ಷಾ ವ್ಯವಸ್ಥೆಗೆ ಮಾಡುವ ಹಾನಿಯಿಂದಾಗಿ ಆ ಅಪಾಯವನ್ನು ಹೆಚ್ಚಿಸುತ್ತದೆ.” ಒತ್ತಡವನ್ನು ನೆಗಡಿ, ಫ್ಲೂ ಮತ್ತು ಹರ್ಪಿಸ್ಗಳಿಗೆ ಸಂಬಂಧಿಸಲು ವಿಶೇಷವಾಗಿ ನಿಶ್ಚಿತಾಭಿಪ್ರಾಯದ ಪುರಾವೆಯಿದೆ. ನಾವು ಅಂತಹ ನಂಜುಗಳಿಗೆ ಸದಾ ಒಡ್ಡಲ್ಪಟ್ಟಿರುವುದಾದರೂ, ನಮ್ಮ ಸೋಂಕು ರಕ್ಷಾ ವ್ಯವಸ್ಥೆಯು ಸಾಮಾನ್ಯವಾಗಿ ಅವುಗಳೊಂದಿಗೆ ಹೋರಾಡುತ್ತದೆ. ಆದರೆ ಒಬ್ಬ ವ್ಯಕ್ತಿ ಭಾವಾತ್ಮಕ ಒತ್ತಡದಲ್ಲಿರುವಾಗ, ಈ ರಕ್ಷಾ ವ್ಯವಸ್ಥೆ ಕಾರ್ಯನಡಿಸದಿರಸಾಧ್ಯವಿದೆ ಎಂಬುದು ಕೆಲವು ಮಂದಿ ಪರಿಣತರ ಹೇಳಿಕೆ.
ಒಳಗೂಡಿರುವ ಜೀವಶಾಸ್ತ್ರೀಯ ಕಾರ್ಯವಿಧಾನಗಳ ಪೂರ್ಣಾರ್ಥವು ಇನ್ನೂ ತಿಳಿದಿರುವುದಿಲ್ಲವಾದರೂ, ನೀವು ಒತ್ತಡದ ಕೆಳಗಿರುವಾಗ ನಿಮ್ಮನ್ನು ಕಾರ್ಯಕ್ಕೆ ಸಿದ್ಧಗೊಳಿಸುವ ಚೋದಕಸ್ರಾವಗಳು ನಿಮ್ಮ ರಕ್ತಪ್ರವಾಹದಲ್ಲಿ ಸುತ್ತುತ್ತಿರುವಾಗ ನಿಮ್ಮ ಸೋಂಕು ರಕ್ಷಾ ಕಾರ್ಯವನ್ನು ತಡೆಯಬಲ್ಲವೆಂದು ಕೆಲವರು ಊಹಿಸುತ್ತಾರೆ. ಈ ಚೋದಕಸ್ರಾವಗಳು ಕೇವಲ ಒಂದು ತಾತ್ಕಾಲಿಕ ಉದ್ದೇಶವುಳ್ಳವುಗಳು ಆಗಿರುವುದರಿಂದ, ಸಾಮಾನ್ಯವಾಗಿ ಇದರಿಂದ ಚಿಂತೆಗೆ ಅವಕಾಶವಿಲ್ಲ. ಆದರೂ, ಒಬ್ಬ ವ್ಯಕ್ತಿಯು ಸತತವಾದ ಮತ್ತು ತೀಕ್ಷ್ಣ ಒತ್ತಡವನ್ನು ಎದುರಿಸುವುದಾದರೆ, ಅವನ ಸೋಂಕು ರಕ್ಷಾ ವ್ಯವಸ್ಥೆಯು ಅವನನ್ನು ಕಾಯಿಲೆಗೆ ಬಲಿಬೀಳಿಸುವಷ್ಟರ ಮಟ್ಟಿಗೆ ನಿರರ್ಥಕವಾಗಬಹುದೆಂದು ಕೆಲವರು ಹೇಳುತ್ತಾರೆ.
ಒಬ್ಬ ವೈದ್ಯನನ್ನು ಸಂಪರ್ಕಿಸಲು ಬರುವಂತಹ ರೋಗಿಗಳಲ್ಲಿ ಸುಮಾರು 50ರಿಂದ 70 ಪ್ರತಿಶತ ರೋಗಿಗಳು, ಪ್ರಾತಿನಿಧಿಕವಾಗಿ ತಲೆನೋವು, ನಿರ್ನಿದ್ರತೆ, ಬಳಲಿಕೆ ಮತ್ತು ಜಠರಗರುಳಿನ ಸಮಸ್ಯೆಗಳು ಒಳಗೂಡಿರುವ, ಒತ್ತಡಸಂಬಂಧಿತ ಸಮಸ್ಯೆಗಳ ವಿಷಯದಲ್ಲಿ ದೂರುನೀಡಿದರೆಂದು ಕೆನಡದ ಡಾಕ್ಟರ್ಗಳು ಹೇಳುವುದೇಕೆಂಬುದನ್ನು ಇದು ವಿವರಿಸಲು ಸಹಾಯಮಾಡಬಹುದು. ಅಮೆರಿಕದಲ್ಲಿ ಇದರ ಅಂಕಿಯು 75ರಿಂದ 90 ಪ್ರತಿಶತವೆಂದು ಅಂದಾಜಿಸಲಾಗುತ್ತದೆ. “ಅಸ್ಥಿಗತವಾದ ಒತ್ತಡವು ನಿಧಾನವಾಗಿ ಕೊಲ್ಲುವ ವಿಷದಂತಿದೆ” ಎಂದು ತಾವು ಹೇಳುವಾಗ, ಅದು ಅತಿಶಯೋಕ್ತಿಯಾಗಿರುವುದಿಲ್ಲವೆಂದು ಡಾ. ಜೀನ್ ಕಿಂಗ್ ಭಾವಿಸುತ್ತಾರೆ.
ಏಕಮಾತ್ರ ಕಾರಣವೂ ಅಲ್ಲ, ಏಕಮಾತ್ರ ಪರಿಹಾರವೂ ಅಲ್ಲ
ವಿಷಯಗಳು ಮೇಲಿನಂತಿದ್ದರೂ, ಕಾಯಿಲೆ ಬೀಳಿಸುವಷ್ಟರ ಮಟ್ಟಿಗೆ ಸೋಂಕು ರಕ್ಷಾ ವ್ಯವಸ್ಥೆಯನ್ನು ಒತ್ತಡವು ಮಾತ್ರ ಪ್ರಭಾವಿಸಲು ಸಾಧ್ಯವಿದೆಯೆಂದು ವಿಜ್ಞಾನಿಗಳಿಗೆ ನಿಶ್ಚಯವಿಲ್ಲ. ಹೀಗೆ, ಒತ್ತಡವನ್ನು, ತೀಕ್ಷ್ಣವಾದ ರೂಪದಲ್ಲಿ ಅನುಭವಿಸುವ ಪ್ರತಿಯೊಬ್ಬನು, ರೋಗಕ್ಕೊಳಗಾಗುವನೆಂದು ತತ್ವಾತ್ಮಕವಾಗಿ ಹೇಳಸಾಧ್ಯವಿಲ್ಲ. ವಿಪರ್ಯಯವಾಗಿ, ಒತ್ತಡದ ಇಲ್ಲದಿರುವಿಕೆಯು, ಉತ್ತಮ ಆರೋಗ್ಯವನ್ನು ಖಾತರಿಪಡಿಸುವುದೆಂದು ಹೇಳಲೂ ಸಾಧ್ಯವಿಲ್ಲ, ಆಶಾವಾದದಿಂದ ಮತ್ತು ಸಕಾರಾತ್ಮಕವಾಗಿ ಯೋಚಿಸುವುದರಿಂದಾಗಿ ಕಾಯಿಲೆಯನ್ನು ದೂರಮಾಡಬಹುದೆಂಬ ತಪ್ಪು ಅಭಿಪ್ರಾಯದಿಂದ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸುವುದೂ ವಿವೇಕವಲ್ಲ. ಡಾ. ಡ್ಯಾನಿಯೆಲ್ ಗೋಲ್ಮನ್ ಎಚ್ಚರಿಸುವುದು: “ಈ ಮನೋಭಾವವು ಸರ್ವ ಪರಿಹಾರಕವೆಂಬ ಅಭಿಪ್ರಾಯದ ಪರಿಣಾಮವು, ಮನಸ್ಸಿನಿಂದಾಗಿ ಕಾಯಿಲೆಯು ಎಷ್ಟರ ಮಟ್ಟಿಗೆ ಪ್ರಭಾವಿಸಲ್ಪಡುತ್ತದೆಂಬುದರ ಕುರಿತ ವ್ಯಾಪಕವಾದ ಗಲಿಬಿಲಿ ಮತ್ತು ತಪ್ಪು ತಿಳಿವಳಿಕೆಯನ್ನು ಸೃಷ್ಟಿಸುವುದು ಮಾತ್ರವಲ್ಲ, ಪ್ರಾಯಶಃ ಇನ್ನೂ ಕೆಡುಕಾಗಿ, ಅದೊಂದು ನೈತಿಕ ಕುಂದು ಅಥವಾ ಆತ್ಮಿಕ ಅಯೋಗ್ಯತೆಯೊ ಎಂಬಂತೆ, ಕಾಯಿಲೆ ಬೀಳುವುದು ಕೆಲವು ಬಾರಿ ಜನರನ್ನು ದೋಷಿಭಾವವುಳ್ಳವರನ್ನಾಗಿಯೂ ಮಾಡುತ್ತದೆ.
ಆದಕಾರಣ, ಒಂದು ರೋಗದ ಕಾರಣವು, ಒಂದೇ ಒಂದು ಸಂಗತಿಗೆ ಪರಿಮಿತವಾಗಿರುವುದು ವಿರಳವೆಂಬುದನ್ನು ಗ್ರಹಿಸತಕ್ಕದ್ದು. ಆದರೂ, ಒತ್ತಡ ಮತ್ತು ಕಾಯಿಲೆ ಇವುಗಳ ಮಧ್ಯೆ ಇರುವ ಸಂಬಂಧವು, ಸಾಧ್ಯವಿರುವಲ್ಲೆಲ್ಲ ಈ “ನಿಧಾನವಾಗಿ ಕೊಲ್ಲುವ ವಿಷ”ವನ್ನು ಕಡಮೆಮಾಡುವ ವಿಧವನ್ನು ತಿಳಿಯುವ ವಿವೇಕವನ್ನು ಒತ್ತಿಹೇಳುತ್ತದೆ.
ಇದನ್ನು ಹೇಗೆ ಮಾಡಸಾಧ್ಯವಿದೆ ಎಂಬುದನ್ನು ಪರಿಗಣಿಸುವ ಮೊದಲು, ಒತ್ತಡದ ಸ್ವಭಾವವನ್ನು ನಾವು ಹೆಚ್ಚು ನಿಕಟವಾಗಿ ನೋಡಿ, ಅದು ಕೆಲವು ಸಂದರ್ಭಗಳಲ್ಲಿ ನಮಗೆ ಹೇಗೆ ಪ್ರಯೋಜನಕರವೂ ಆಗಿರಬಲ್ಲದು ಎಂಬುದನ್ನು ನೋಡೋಣ.
[ಪುಟ 5 ರಲ್ಲಿರುವ ಚೌಕ]
ಒತ್ತಡ ಸಂಬಂಧಿತವಾದ ಕೆಲವು ರೋಗಗಳು
• ಅಲರ್ಜಿಗಳು
• ಸಂಧಿವಾತ
• ಉಬ್ಬಸ
• ಬೆನ್ನು, ಕತ್ತು ಮತ್ತು ಭುಜ ನೋವು
• ನೆಗಡಿ
• ಖಿನ್ನತೆ
• ಅತಿಬೇಧಿ
• ಫ್ಲೂ
• ಜಠರಗರುಳಿನ ಸಮಸ್ಯೆಗಳು
• ತಲೆನೋವು
• ಹೃದ್ರೋಗಗಳು
• ನಿರ್ನಿದ್ರತೆ
• ತೀವ್ರ ತಲೆಶೂಲೆಗಳು
• ಪಾಚಕ (ಪೆಪ್ಟಿಕ್) ಅಲ್ಸರ್ಗಳು
• ಲೈಂಗಿಕ ಅಪಸಾಮಾನ್ಯ ಕ್ರಿಯೆ
• ಚರ್ಮ ಸಮಸ್ಯೆಗಳು
[ಪುಟ 6 ರಲ್ಲಿರುವ ಚಿತ್ರ]
ಡಾಕ್ಟರರಿಗೆ ಮಾಡುವ ಭೇಟಿಗಳಲ್ಲಿ ಅತಿ ಹೆಚ್ಚು ಪ್ರತಿಶತವು, ಒತ್ತಡದ ಕಾರಣದಿಂದಲೇ ಆಗಿದೆ