ಇಂಕ ಜನರು ತಮ್ಮ ಸುವರ್ಣ ಸಾಮ್ರಾಜ್ಯವನ್ನು ಕಳೆದುಕೊಂಡ ವಿಧ
ಪೆರು ದೇಶದ ಎಚ್ಚರ! ಸುದ್ದಿಗಾರರಿಂದ
ಸೂರ್ಯೋದಯ. ಆ್ಯಂಡೀಸ್ನ ಹಿಮಾವೃತ ಶಿಖರಗಳಿಗೆ, ಮುಂಜಾನೆಯ ಆಕಾಶಕ್ಕೆ ಹೊಡೆಯುವ ಬೆಳಕಿನ ಕಿರಣಗಳು ನಸುಗೆಂಪು ಬಣ್ಣ ಬಳಿದಿದ್ದವು. ಇಂಡಿಯನ್ ಮೂಲನಿವಾಸಿಗಳಲ್ಲಿ ಹೊತ್ತಿಗೆ ಮುಂಚೆ ಎದ್ದಿದ್ದವರು, 4,300 ಮೀಟರುಗಳಷ್ಟು ಎತ್ತರದಲ್ಲಿ ಶೀತಲ ರಾತ್ರಿಯ ಚಳಿಯನ್ನು ತೊಲಗಿಸುವ ಸೂರ್ಯನ ಕಾವಿನಲ್ಲಿ ಆನಂದಿಸಿದರು. ನಿಧಾನವಾಗಿ, ಸೂರ್ಯಕಿರಣಗಳು ಇಂಕ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಕೂಸ್ಕೋ (“ಜಗತ್ತಿನ ಹೊಕ್ಕುಳು” ಎಂದು ಅರ್ಥ)ವಿನ ಮಧ್ಯದಲ್ಲಿದ್ದ ಸೂರ್ಯ ದೇವಾಲಯವನ್ನು ಆವರಿಸಲು ಕೆಳಗಿಳಿದುಬಂದವು. ಬಂಗಾರದ ಗೋಡೆಗಳು ಸೂರ್ಯನ ಕಿರಣಗಳನ್ನು ಪ್ರತಿಬಿಂಬಿಸಿದವು. ಸಂಪೂರ್ಣ ಬಂಗಾರದ ಲಾಮಗಳು, ವಿಕೂನ್ಯಗಳು ಮತ್ತು ಕಾಂಡರ್ ರಣಹದ್ದುಗಳು ದೇವಾಲಯದ ಎದುರಿನ ಇಂಕರa ತೋಟದಲ್ಲಿ ಮಿನುಗಿದವು. ದಾರಿಹೋಕರು ತಮ್ಮ ಸೂರ್ಯದೇವನ ಆರಾಧನೆಯಲ್ಲಿ, ಕೈಗೆ ಮುತ್ತಿಕ್ಕಿ ಕೈಯಾಡಿಸಿದರು. ತಾವು ಜೀವಿತರಾಗಿರುವುದಕ್ಕೆ ಮತ್ತು ತಮ್ಮ ಜೀವನೋಪಾಯವನ್ನು ಕೊಟ್ಟಿರುವನೆಂದು ಅವರು ನಂಬುತ್ತಿದ್ದ ಆ ಸೂರ್ಯನ ಆಶೀರ್ವಾದಕ್ಕೆ ಅವರೆಷ್ಟು ಕೃತಜ್ಞರಾಗಿದ್ದರು!
ಹದಿನಾಲ್ಕು ಮತ್ತು ಹದಿನಾರನೆಯ ಶತಮಾನಗಳ ಮಧ್ಯೆ ಒಂದು ಮಹಾ ಸುವರ್ಣ ಸಾಮ್ರಾಜ್ಯವು ದಕ್ಷಿಣ ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ಅಧಿಕಾರ ನಡೆಸಿತು. ಕುಶಲ ವಾಸ್ತುಶಿಲ್ಪಿಗಳಿಂದಲೂ ತಂತ್ರಜ್ಞರಿಂದಲೂ ಆಳಲ್ಪಡುತ್ತಿದ್ದ ಇಂಕ ಜನರು, ತಮ್ಮನ್ನು ಸಾಮಾಜಿಕವಾಗಿ ಉತ್ತಮಗೊಳಿಸಿಕೊಳ್ಳುವಂತೆ ವ್ಯವಸ್ಥಾಪಿಸಲ್ಪಟ್ಟಿದ್ದ ಒಂದು ಜನಾಂಗವಾಗಿದ್ದರು. ಆಮೋಘ ಇಂಕ ಸಾಮ್ರಾಜ್ಯವು, ಸರಿಸುಮಾರು 5,000 ಕಿಲೊಮೀಟರುಗಳಷ್ಟು ದೂರದ ವರೆಗೆ ತನ್ನ ಗಡಿಗಳನ್ನು ವ್ಯಾಪಿಸುತ್ತಾ, ಇಂದಿನ ಕೊಲಂಬಿಯದ ದಕ್ಷಿಣ ಭಾಗದಿಂದ ಹಿಡಿದು ಆರ್ಜೆಂಟೀನದ ತನಕವೂ ಹರಡಿತ್ತು. ವಾಸ್ತವವಾಗಿ, “ಹೆಚ್ಚುಕಡಮೆ ಇಡೀ ಜಗತ್ತನ್ನು ತಾವು ನಿಯಂತ್ರಿಸುತ್ತಿದ್ದೇವೆಂದು ಇಂಕ ಜನರು ನೆನಸಿದರು.” (ನ್ಯಾಷನಲ್ ಜಿಯಗ್ರಾಫಿಕ್) ತಮ್ಮ ಸಾಮ್ರಾಜ್ಯದ ಪರಿಮಿತಿಗಳ ಹೊರಗಡೆ ಜಯಿಸಲು ಯೋಗ್ಯವಾದ ಯಾವುದೇ ಸ್ಥಳವಿಲ್ಲವೆಂದು ಅವರು ನಂಬಿದರು. ಆದರೂ, ಈ ಸಾಮ್ರಾಜ್ಯ ಅಸ್ತಿತ್ವದಲ್ಲಿತ್ತೆಂದೂ ಬಾಕಿ ಉಳಿದ ಲೋಕಕ್ಕೆ ತಿಳಿದಿರಲಿಲ್ಲ.
ಈ ಇಂಕ ಜನರು ಯಾರಾಗಿದ್ದರು? ಅವರ ಮೂಲವೇನಾಗಿತ್ತು?
ಇಂಕ ಜನರಿಗಿಂತ ಪೂರ್ವದಲ್ಲಿ ಯಾರಿದ್ದರು?
ಆ ಭೂಖಂಡದ ಮೂಲನಿವಾಸಿಗಳು ಇಂಕ ಜನರಾಗಿರಲಿಲ್ಲವೆಂದು ಪ್ರಾಕ್ತನಶಾಸ್ತ್ರದ ಶೋಧಗಳು ತೋರಿಸುತ್ತವೆ. ಅವರಿಗಿಂತ ಮೊದಲು ನೂರಾರು ವರ್ಷಗಳಿಂದ ಸಾವಿರಾರು ವರ್ಷಗಳ ಮಧ್ಯೆ ಇತರ ಸುವಿಕಸಿತ ಸಂಸ್ಕೃತಿಗಳಿದ್ದವು. ಪ್ರಾಕ್ತನಶಾಸ್ತ್ರಜ್ಞರು ಇವನ್ನು ಲಾಂಬಾಯೆಕೆ, ಚಾವೀನ್, ಮೋಚೀಕಾ, ಚೀಮೂ ಹಾಗೂ ಟೀಆವಾನಾಕೋ ಸಂಸ್ಕೃತಿಗಳೆಂದು ವರ್ಗೀಕರಿಸಿದ್ದಾರೆ.
ಆ ಆದಿ ಗುಂಪುಗಳು ವಿವಿಧ ಪ್ರಾಣಿಗಳನ್ನು—ಜ್ಯಾಗ್ವಾರ್ ಚಿರತೆ, ಪ್ಯೂಮ ಹುಲಿ ಮತ್ತು ಮೀನುಗಳನ್ನು ಸಹ ಆರಾಧಿಸಿದರು. ಪರ್ವತ ದೇವತೆಗಳಿಗಾಗಿರುವ ಪೂಜ್ಯಭಾವವು ಅವರಲ್ಲಿ ವ್ಯಾಪಕವಾಗಿತ್ತು. ಕೆಲವು ಕುಲಗಳು ಕಾಮಾರಾಧನೆಯನ್ನು ಆಚರಿಸುತ್ತಿದ್ದವೆಂದು ಅವರ ಮಣ್ಣಿನ ಪಾತ್ರೆಗಳು ತೋರಿಸಿದವು. ಪೆರು ಮತ್ತು ಬೊಲೀವಿಯದ ಎತ್ತರದ ಮೇರೆಯಲ್ಲಿರುವ ಟಿಟಿಕಾಕ ಸರೋವರದ ಸಮೀಪ, ಒಂದು ಕುಲವು ಶಿಶ್ನಸಂಕೇತಗಳಿದ್ದ ದೇವಸ್ಥಾನವನ್ನು ಕಟ್ಟಿತು. ಇವನ್ನು, ಪಾಚಾ ಮಾಮಾ ಅಂದರೆ “ಭೂಮಾತೆ”ಯಿಂದ ಉತ್ತಮ ಬೆಳೆಯ ಆಶ್ವಾಸನೆಗಾಗಿ ಫಲಶಕ್ತಿ ಸಂಸ್ಕಾರಗಳಲ್ಲಿ ಆರಾಧಿಸಲಾಗುತ್ತಿತ್ತು.
ಮಿಥ್ಯೆ ಮತ್ತು ಸತ್ಯ
ಸುಮಾರು 1200ರಲ್ಲಿ ಇಂಕ ಜನರು ಗೋಚರಿಸಲಾರಂಭಿಸಿದರು. ಒಬ್ಬ ಇಂಕ ರಾಜಕುಮಾರಿ ಮತ್ತು ಸ್ಪ್ಯಾನಿಷ್ ವೀರಾನುಚರ ಮತ್ತು ಜಮೀನುದಾರನ ಪುತ್ರನಾದ ಇತಿಹಾಸಕಾರ ಗಾರ್ತೀಲಾಸೋ ತೇಲಾಬೇಗಾ ಎಂಬವನಿಗನುಸಾರ, ಇಂಕ ಮೂಲಪುರುಷ ಮಾಂಕೋ ಕಾಪಾಕ್ ಎಂಬವನನ್ನು ಅವನ ತಂದೆಯಾದ ಸೂರ್ಯದೇವನು ಮಾಂಕೋವಿನ ಸೋದರಿ/ವಧುವಿನ ಜೊತೆಗೆ, ಸಕಲ ಜನರನ್ನು ಸೂರ್ಯಾರಾಧನೆಯ ಕೆಳಗೆ ತರುವ ಸಲುವಾಗಿ, ಟಿಟಿಕಾಕ ಸರೋವರಕ್ಕೆ ಕಳುಹಿಸಿದನು ಎಂಬುದು ಪುರಾಣ ಕಥೆಯಾಗಿತ್ತು. ಇಂದು ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಈ ಕಥೆಯನ್ನು ಇನ್ನೂ ಕಲಿಸಿಕೊಡಲಾಗುತ್ತದೆ.
ಪುರಾಣವು ಹಾಗಿದ್ದರೂ, ಇಂಕ ಜನರು ಪ್ರಾಯಶಃ ಟಿಟಿಕಾಕ ಸರೋವರ ಪ್ರದೇಶದ ಕುಲಗಳಲ್ಲಿ ಒಂದು ಕುಲವಾದ ಟೀಅವನಾಕೋದಿಂದ ಬಂದಿರಬೇಕು. ಸಕಾಲದಲ್ಲಿ, ಹರಡುತ್ತಿದ್ದ ಸಾಮ್ರಾಜ್ಯವು, ಗೆಲ್ಲಲ್ಪಟ್ಟ ಕುಲಗಳ ಸುವ್ಯವಸ್ಥಿತ ಯೋಜನೆಗಳಲ್ಲಿ ಅನೇಕ ಕಾರ್ಯಗಳನ್ನು ವಶಮಾಡಿಕೊಂಡು, ಈಗಾಗಲೇ ಕಟ್ಟಲ್ಪಟ್ಟಿದ್ದ ಕಾಲುವೆಗಳನ್ನು ಮತ್ತು ಮೆಟ್ಟಲು ದಿಬ್ಬಗಳನ್ನು ವಿಕಸಿಸಿ ಪರಿಪೂರ್ಣಗೊಳಿಸಿತು. ಇಂಕ ಜನರು ಬೃಹದಾಕಾರದ ಕಟ್ಟಡಗಳ ರಚನೆಯಲ್ಲಿ ಶ್ರೇಷ್ಠರಾಗಿದ್ದರು. ಅವರ ವಾಸ್ತುಶಿಲ್ಪಿಗಳು, ಎತ್ತರದ ಪೀಠಭೂಮಿಯಿಂದ ಕೂಸ್ಕೋ ನಗರದ ಮೇಲೆ ಪ್ರತಿಭೆ ಬೀರುವ ಕೋಟೆ ಮತ್ತು ಸಾಕ್ಸಾವಾಮಾನ್ ದೇವಾಲಯವನ್ನು ಹೇಗೆ ಒಂದುಗೂಡಿಸಶಕ್ತರಾಗಿದ್ದರೆಂಬ ವಿಷಯದಲ್ಲಿ ಇನ್ನೂ ಅನೇಕ ಕಲ್ಪನೆಗಳಿವೆ. 100 ಟನ್ನಷ್ಟು ಭಾರಿಗಾತ್ರದ ಅಖಂಡ ಶಿಲೆಗಳನ್ನು ಜೋಡಿಸಲಾಯಿತು. ಅವುಗಳನ್ನು ಜೋಡಿಸಲು ಗಾರೆಯು ಉಪಯೋಗಿಸಲ್ಪಡಲಿಲ್ಲ. ಪುರಾತನ ಕೂಸ್ಕೋ ನಗರದ ಗೋಡೆಗಳಲ್ಲಿ ಕಂಡುಬರುವ ಜೋಡಿಸಲ್ಪಟ್ಟಿರುವ ಭಾರಿ ಶಿಲೆಗಳ ಮೇಲೆ ಭೂಕಂಪಗಳು ಕೊಂಚವೇ ಪರಿಣಾಮವನ್ನು ಬೀರಿವೆ.
ಸೂರ್ಯನ ಹೊಳೆಯುವ ದೇವಾಲಯ
ರಾಜನಗರವಾದ ಕೂಸ್ಕೋವಿನಲ್ಲಿ, ಇಂಕ ಜನರು ಮೆರುಗು ಕೊಡಲ್ಪಟ್ಟ ಶಿಲಾದೇವಾಲಯದಲ್ಲಿ ಸೂರ್ಯನನ್ನು ಆರಾಧಿಸಲಿಕ್ಕಾಗಿ ಒಂದು ಪುರೋಹಿತತ್ವವನ್ನು ವ್ಯವಸ್ಥಾಪಿಸಿದರು. ಒಳಗೋಡೆಗಳು ಶುದ್ಧ ಬಂಗಾರ ಮತ್ತು ಬೆಳ್ಳಿಯಿಂದ ಅಲಂಕರಿಸಲ್ಪಟ್ಟಿದ್ದವು. ಪುರೋಹಿತತ್ವದೊಂದಿಗೆ, ಲೀಮದ ಹೊರಭಾಗದಲ್ಲಿರುವ ಪಾಚಾಕಾಮಾಕ್ನಲ್ಲಿರುವ ಸೂರ್ಯ ದೇವಾಲಯದಲ್ಲಿ ಪುನಾರಚಿತ ಮಠದಂತಹ ವಿಶೇಷ ಸಂನ್ಯಾಸಿನೀ ಮಠಗಳನ್ನು ಸ್ಥಾಪಿಸಲಾಯಿತು. ಎದ್ದುಕಾಣುವಂತಹ ಸೌಂದರ್ಯವಿದ್ದ ಎಂಟು ವರ್ಷ ಪ್ರಾಯದಷ್ಟು ಎಳೆಯ ಕನ್ಯೆಯರನ್ನೂ, ‘ಸೂರ್ಯನ ಕನ್ಯೆಯರು’ ಆಗಿರುವಂತೆ ತರಬೇತುಗೊಳಿಸಲಾಯಿತು. ಇಂಕ ಜನರು ಮಾನವ ಬಲಿಗಳನ್ನೂ ಅರ್ಪಿಸಿದರೆಂದು ಪ್ರಾಕ್ತನ ಶಾಸ್ತ್ರೀಯ ಪುರಾವೆಯು ತೋರಿಸುತ್ತದೆ. ಅವರು ಮಕ್ಕಳನ್ನು ಆಪುಸ್ ಅಥವಾ ಪರ್ವತ ದೇವತೆಗಳಿಗೆ ಬಲಿಕೊಟ್ಟರು. ಮಕ್ಕಳ ಕೆಲವು ಶವಗಳು ಆ್ಯಂಡಿಯನ್ ಶಿಖರಗಳಲ್ಲಿ ಶೈತ್ಯದಿಂದ ಕಲ್ಲಾಗಿರುವುದು ಕಂಡುಬಂದಿದೆ.
ಇಂಕರಿಗೆ ಮತ್ತು ಆದಿ ಕುಲಗಳಿಗೆ ಬರವಣಿಗೆಯ ಜ್ಞಾನವಿರಲಿಲ್ಲವಾದರೂ, ಕೀಪೂ ಎಂದು ಕರೆಯಲ್ಪಟ್ಟದ್ದರ ಬಳಕೆಯಿಂದ ದಾಖಲೆಗಳನ್ನಿಡುವ ಒಂದು ಪದ್ಧತಿಯನ್ನು ಅವರು ವಿಕಸಿಸಿದರು. ಇದು, “ವಿವಿಧ ಬಣ್ಣಗಳ ಚಿಕ್ಕ ದಾರಗಳು ಒಂದು ಮುಖ್ಯ ದಾರದೊಂದಿಗೆ ಸಿಕ್ಕಿಸಲ್ಪಟ್ಟು ಮತ್ತು ಹೆಣೆಯಲ್ಪಟ್ಟು, ಪುರಾತನ ಪೆರು ದೇಶಸ್ಥರು ಉಪಯೋಗಿಸಿದ ಸಾಧನ”ವಾಗಿತ್ತು. ತಪಶೀಲು ಪಟ್ಟಿ ಮತ್ತು ದಾಖಲೆಗಳನ್ನಿಡಲು ನೇಮಿತರಾದವರು, ಜ್ಞಾಪಕ ಸಹಾಯಕವಾಗಿ ಇದನ್ನು ಉಪಯೋಗಿಸುತ್ತಿದ್ದರು.—ವೆಬ್ಸ್ಟರ್ಸ್ ನೈನ್ತ್ ನ್ಯೂ ಕಲಿಜಿಯೆಟ್ ಡಿಕ್ಷನೆರಿ.
ಸಾಮ್ರಾಜ್ಯವನ್ನು ಹೇಗೆ ಒಂದಾಗಿರಿಸಲಾಯಿತು?
ಕಟ್ಟುನಿಟ್ಟಾದ ನಿಯಮಗಳು ಮತ್ತು ಯೋಜಿತ ಹಂಚಿಕೆಯು ಒಂದು ಕೇಂದ್ರೀಯ ಸರಕಾರವನ್ನು ಸ್ಥಿರವಾಗಿ ಸ್ಥಾಪಿಸಿತು. ಎಲ್ಲರೂ ಇಂಕ ಜನರ ಭಾಷೆಯಾದ ಕೆಚವವನ್ನು ಕಲಿಯಬೇಕೆಂಬುದು ಆರಂಭದ ಒಂದು ಆವಶ್ಯಕತೆಯಾಗಿತ್ತು. ಎಲ್ ಕೆಚ್ಊಆ ಆಲ್ ಆಲ್ಕಾನ್ಸೆ ಡೇ ಟೋಡೋಸ್ (ಕೆಚವ ಸರ್ವರಿಗೂ ಸಾಧ್ಯ) ಎಂಬ ಪುಸ್ತಕವು ಹೇಳುವುದು: “ದಕ್ಷಿಣ ಅಮೆರಿಕದ ಭಾಷಾರೂಪಗಳಲ್ಲಿ ಕೆಚವ ಭಾಷೆಯು ಅತಿ ವ್ಯಾಪಕವೂ ಅತಿ ವೈವಿಧ್ಯವುಳ್ಳದ್ದೂ ಹಾಗೂ ಅತಿ ಸೊಬಗುಳ್ಳದ್ದೆಂದು” ಪರಿಗಣಿಸಲಾಗುತ್ತದೆ. ಪೆರುವಿನ ಪರ್ವತಗಳಲ್ಲಿನ ಸುಮಾರು 50 ಲಕ್ಷ ಜನರು ಮತ್ತು ಆ ಸಾಮ್ರಾಜ್ಯದ ಭಾಗವಾಗಿದ್ದ ಐದು ದೇಶಗಳ ಲಕ್ಷಗಟ್ಟಲೆ ಜನರು ಈಗಲೂ ಆ ಭಾಷೆಯನ್ನಾಡುತ್ತಾರೆ. ಟಿಟಿಕಾಕ ಸರೋವರದ ಆಗ್ನೇಯದಲ್ಲಿರುವ ಒಂದು ಗುಂಪು ಇನ್ನೂ, ಇಂಕ ಸಮಯಗಳ ಮೊದಲಿನ ಕೆಚವ ಭಾಷೆಯಿಂದ ಬಂದ, ಐಮರಾ ಭಾಷೆಯನ್ನು ಆಡುತ್ತದೆ.
ಕೆಚವ ಭಾಷೆಯ ಉಪಯೋಗವು, ಗೆಲ್ಲಲ್ಪಟ್ಟ ಸುಮಾರು 100 ಕುಲಗಳ ಮೇಲೆ ಏಕೀಕರಿಸಲ್ಪಟ್ಟ ಪರಿಣಾಮವನ್ನು ಉಂಟುಮಾಡಿತು. ಮತ್ತು ಪ್ರತಿಯೊಂದು ಗುಂಪಿನ ಆಡಳಿತವನ್ನು ನಡೆಸಿದ್ದ ಹಳ್ಳಿಯ ಕೂರಾಕಾ (ಯಜಮಾನ)ನಿಗೆ ಇದು ಸಹಾಯಕವಾಗಿತ್ತು. ಪ್ರತಿಯೊಂದು ಕುಟುಂಬಕ್ಕೆ ಕೆಲಸಮಾಡಲು ಜಮೀನನ್ನು ನೇಮಿಸಲಾಯಿತು. ವಿಜೇತನಾದ ಬಳಿಕ, ಸ್ಥಳಿಕ ಗೋತ್ರೀಯ ನೃತ್ಯಗಳಿಗೆ ಮತ್ತು ಉತ್ಸವಗಳಿಗೆ ಇಂಕನು ಅನುಮತಿ ಕೊಟ್ಟನು ಮತ್ತು ಅಧೀನತೆಯಲ್ಲಿದ್ದ ಎಲ್ಲರನ್ನು ಸಂತೃಪ್ತರನ್ನಾಗಿರಿಸಲಿಕ್ಕಾಗಿ, ನಾಟಕ ಮತ್ತು ಆಟಗಳನ್ನು ಒದಗಿಸಲಾಯಿತು.
ಮೀಟಾ ತೆರಿಗೆ
ಇಡೀ ಸಾಮ್ರಾಜ್ಯದಲ್ಲಿ ಹಣ ಚಲಾವಣೆಯಲ್ಲಿಲ್ಲದಿದ್ದುದರಿಂದ, ಬಂಗಾರ ಯಾವುದೇ ವ್ಯಕ್ತಿಗೆ ಬೆಲೆಬಾಳುವಂತಹದ್ದಾಗಿರಲಿಲ್ಲ. ಅದು ಸೂರ್ಯನನ್ನು ಪ್ರತಿಬಿಂಬಿಸಿದ್ದರಿಂದ ಒಂದು ಇಷ್ಟವಸ್ತುವಾಗಿತ್ತು ಅಷ್ಟೇ. ಹೊರಿಸಲ್ಪಟ್ಟ ಒಂದೇ ತೆರಿಗೆಯು ಮೀಟಾ (ಕೆಚವ, “ಸರದಿ”) ಆಗಿದ್ದು, ಅದು, ಇಂಕ ಅಧಿಕಾರಿಗಳ ಅನೇಕ ರಸ್ತೆ ಮತ್ತು ಕಟ್ಟಡ ಯೋಜನೆಗಳಲ್ಲಿ, ಸರದಿಗನುಸಾರ ಪ್ರಜೆಗಳು ಕಡ್ಡಾಯ ದುಡಿಮೆಯನ್ನು ಮಾಡುವುದನ್ನು ಅಗತ್ಯಪಡಿಸಿತು. ಹೀಗೆ ಸಾವಿರಾರು ಮಂದಿ ಇಂಡಿಯನ್ ಮೂಲನಿವಾಸಿ ಕಾರ್ಮಿಕರು ಕಾಯಿದೆಯ ಮೇರೆಗೆ ಕೆಲಸಕ್ಕೆ ಸೇರಿಸಲ್ಪಟ್ಟರು.
ಮೀಟಾ ಕಾರ್ಮಿಕರನ್ನು ಉಪಯೋಗಿಸುತ್ತ, ಇಂಕ ಕುಶಲ ನಿರ್ಮಾಪಕರು 24,000 ಕಿಲೊಮೀಟರುಗಳಿಗಿಂತಲೂ ಹೆಚ್ಚು ಉದ್ದಕ್ಕೆ ಹಾದಿಗಳ ಒಂದು ಜಾಲವನ್ನು ರಚಿಸಿದರು! ಕೂಸ್ಕೋವಿನಿಂದಾರಂಭಿಸಿ, ಇಂಕ ಜನರು ಸಾಮ್ರಾಜ್ಯದ ಅತಿ ದೂರದಲ್ಲಿದ್ದ ಸ್ಥಳಗಳನ್ನು ಜೋಡಿಸಲು ಶಿಲಾಧಾರಿತ ಹಾದಿಯ ವ್ಯೂಹವನ್ನು ನಿರ್ಮಿಸಿದರು. ಚಾಸ್ಕೀ ಎಂದು ಕರೆಯಲ್ಪಡುತ್ತಿದ್ದ ತರಬೇತು ಹೊಂದಿದ ಸಂದೇಶವಾಹಕರು ಇದನ್ನು ಉಪಯೋಗಿಸಿದರು. ಅವರು ಸುಮಾರು ಒಂದು ಅಥವಾ ಎರಡು ಕಿಲೊಮೀಟರುಗಳಷ್ಟು ದೂರದ ಮಧ್ಯದಲ್ಲಿದ್ದ ಗುಡಿಸಲುಗಳಲ್ಲಿ ಇರುತ್ತಿದ್ದರು. ಸಂದೇಶವಿದ್ದ ಒಬ್ಬ ಚಾಸ್ಕೀ ಬರಲಾಗಿ, ಮುಂದಿನ ಸರದಿಯ ಚಾಸ್ಕೀ ಅವನ ಪಕ್ಕದಲ್ಲಿ, ರಿಲೆ ಓಟಗಾರನಂತೆ ಓಡತೊಡಗುತ್ತಿದ್ದನು. ಈ ಪದ್ಧತಿಯನ್ನು ಉಪಯೋಗಿಸುತ್ತ, ಅವರು ಒಂದು ದಿನದಲ್ಲಿ 240 ಕಿಲೊಮೀಟರುಗಳ ಹಾದಿಯನ್ನು ಆವರಿಸಿದರು. ಸ್ವಲ್ಪ ಸಮಯದೊಳಗೆ, ಇಂಕ ಅರಸನಿಗೆ ತನ್ನ ಸಾಮ್ರಾಜ್ಯದ ಎಲ್ಲ ಕಡೆಗಳಿಂದ ವರದಿಗಳು ದೊರೆಯುತ್ತಿದ್ದವು.
ಇಂಕ ಅಧಿಕಾರಿಗಳು ದಾರಿಗಳ ಉದ್ದಕ್ಕೂ ದೊಡ್ಡ ಉಗ್ರಾಣಗಳನ್ನು ಸ್ಥಾಪಿಸಿದರು. ಇವುಗಳಲ್ಲಿ ಇಂಕ ಸೈನ್ಯಗಳ ದಂಡಯಾತ್ರೆಯ ಸಮಯಗಳಲ್ಲಿ ಉಪಯೋಗಕ್ಕಾಗಿ ಆಹಾರ ಸಂಗ್ರಹ ಮತ್ತು ಬಟ್ಟೆಬರೆಗಳನ್ನು ತುಂಬಿಸಿಡಲಾಗುತ್ತಿತ್ತು. ಸಾಧ್ಯವಿರುವಾಗೆಲ್ಲ, ಇಂಕ ಅರಸನು ಯುದ್ಧವನ್ನು ತಪ್ಪಿಸುತ್ತಿದ್ದನು. ಯುದ್ಧತಂತ್ರವನ್ನು ಉಪಯೋಗಿಸಿ, ಕುಲಗಳು ಸೂರ್ಯಾರಾಧನೆಯನ್ನು ಅಂಗೀಕರಿಸುವ ಷರತ್ತಿನ ಮೇರೆಗೆ ತನ್ನ ಆಳಿಕೆಗೆ ಬರುವಂತೆ ಆಮಂತ್ರಿಸಲು ಅವನು ವಿಶೇಷ ಪ್ರತಿನಿಧಿಗಳನ್ನು ಕಳುಹಿಸುತ್ತಿದ್ದನು. ಅವರು ಒಪ್ಪಿದರೆ, ಅವರು ತಮ್ಮದೇ ಆದ ಕುಲದಲ್ಲಿ ತರಬೇತುಹೊಂದಿದ ಇಂಕ ಶಿಕ್ಷಕರ ಮೇಲ್ವಿಚಾರಣೆಯ ಕೆಳಗೆ ಜೀವನ ನಡೆಸುವಂತೆ ಅನುಮತಿಸಲಾಗುತ್ತಿತ್ತು. ಅವರು ನಿರಾಕರಿಸುವಲ್ಲಿ, ಕನಿಕರರಹಿತ ಗೆಲ್ಲುವಿಕೆಗೆ ಬಲಿಯಾಗುತ್ತಿದ್ದರು. ಮೃತವೈರಿಗಳ ತಲೆಬುರುಡೆಗಳನ್ನು, ಜೋಳದಿಂದ ಮಾಡಿದ ಅಮಲೇರಿಸುತ್ತಿದ್ದ ಪಾನೀಯವನ್ನು ಕುಡಿಯುವ ಪಾತ್ರೆಗಳಾಗಿ ಉಪಯೋಗಿಸಲಾಗುತ್ತಿತ್ತು.
ಆ ಸಾಮ್ರಾಜ್ಯವು ತನ್ನ ಮೇರೆಗಳನ್ನು ಶೀಘ್ರವಾಗಿ ವಿಸ್ತರಿಸುತ್ತ, ಉತ್ತರದಿಂದ ದಕ್ಷಿಣ ದಿಕ್ಕುಗಳಲ್ಲಿ ಅಧಿಕತಮ ದೂರಕ್ಕೆ ತಲಪಿದ್ದು, ಒಂಬತ್ತನೆಯ ಇಂಕ ಸಮ್ರಾಟ ಪಾಚಾಕೂಟೀ (1438ರಿಂದ), ಅವನ ಕುಮಾರ ಟೋಪಾ ಇಂಕಾ ಯೂಪಾಂಕೀ ಮತ್ತು ವಿಜೇತ-ರಾಜ್ಯನೀತಿಜ್ಞ ವೈನಾ ಕಾಪಾಕ ಎಂಬವರ ಆಳಿಕೆಯಲ್ಲಿ. ಆದರೆ ಇದು ಬಾಳಲಿಕ್ಕಿರಲಿಲ್ಲ.
ಉತ್ತರ ದಿಕ್ಕಿನಿಂದ ಬಂದ ಆಕ್ರಮಣಕಾರರು
ಸುಮಾರು 1530ನೆಯ ಇಸವಿಯಲ್ಲಿ, ಸ್ಪ್ಯಾನಿಷ್ ವಿಜೇತ ಫ್ರಾನ್ಸೀಸ್ಕೋ ಪಿಸಾರೋ ಮತ್ತು ಅವನ ಸೈನಿಕರು ಪ್ಯಾನಮಾದಿಂದ ಬಂದರು. ಅಷ್ಟರೊಳಗೆ ಆಂತರಿಕ ಯುದ್ಧದಲ್ಲಿ ಸಿಕ್ಕಿಬಿದ್ದಿದ್ದ ಈ ಅಜ್ಞಾತ ದೇಶದಲ್ಲಿದ್ದ ಬಂಗಾರದ ಸುದ್ದಿಗಳಿಂದ ಅವರು ಆಕರ್ಷಿತರಾಗಿದ್ದರು. ಸಿಂಹಾಸನಕ್ಕೆ ನ್ಯಾಯಯುತವಾಗಿ ಉತ್ತರಾಧಿಕಾರಿಯಾಗಿದ್ದ ರಾಜಕುಮಾರ ಹುಆಸ್ಕಾರ್, ರಾಜಧಾನಿಯತ್ತ ದಂಡೆತ್ತಿ ಬರುತ್ತಿದ್ದ ತನ್ನ ಮಲಸೋದರ ಆಟಾಹುಆಲ್ಪಾನಿಂದ ಸೋಲಿಸಲ್ಪಟ್ಟು ಬಂಧಿಸಲ್ಪಟ್ಟಿದ್ದನು.
ಒಳನಾಡಿನ ನಗರವಾದ ಕಾಹಮಾರ್ಕಕ್ಕೆ ಕಷ್ಟದಿಂದ ನಡೆದು ಬಂದಾಗ, ಪಿಸಾರೋ ಮತ್ತು ಅವನ ಸೈನಿಕರನ್ನು, ದುರಾಕ್ರಮಣಕಾರ ಆಟಾಹುಆಲ್ಪಾ ಚೆನ್ನಾಗಿಯೇ ಸ್ವಾಗತಿಸಿದನು. ಆದರೂ ಸ್ಪ್ಯಾನಿಷ್ ಸೈನಿಕರು ಮೋಸದಿಂದ ಅವನನ್ನು ಪಲ್ಲಕ್ಕಿಯಿಂದ ಹಿಡಿದೆಳೆದು ಬಂಧಿಸಿ, ಅದೇ ಸಮಯದಲ್ಲಿ ಅವನ ಬೆರಗಾದ, ಅಸಜ್ಜಿತ ಸೈನಿಕರಲ್ಲಿ ಸಾವಿರಾರು ಮಂದಿಯನ್ನು ಹತಿಸುವುದರಲ್ಲಿ ಸಫಲರಾದರು.
ಆದರೂ, ಬಂಧಿಯಾಗಿದ್ದಾಗಲೂ, ಆಟಾಹುಆಲ್ಪಾ ಆಂತರಿಕ ಯುದ್ಧವನ್ನು ಮುಂದುವರಿಸಿದನು. ಅವನು ತನ್ನ ಮಲಸೋದರ ಇಂಕ ಹೂಆಸ್ಕಾರ್ನನ್ನೂ ರಾಜಕುಟುಂಬದ ನೂರಾರು ಮಂದಿಯನ್ನೂ ಕೊಲ್ಲುವಂತೆ ಸಂದೇಶವಾಹಕರನ್ನು ಕಳುಹಿಸಿದನು. ಅನುದ್ದಿಷ್ಟವಾಗಿ, ಪಿಸಾರೋವಿನ ವಿಜಯ ಯೋಜನೆಯನ್ನು ಅವನು ಸುಲಭಗೊಳಿಸಿದನು.
ಬಂಗಾರ ಮತ್ತು ಬೆಳ್ಳಿಯ ವಿಷಯದಲ್ಲಿ ಸ್ಪ್ಯಾನಿಷರಿಗಿದ್ದ ದುರಾಶೆಯನ್ನು ನೋಡಿ, ತನ್ನ ಬಿಡುಗಡೆಯ ಬೆಲೆಯಾಗಿ, ಆಟಾಹುಆಲ್ಪಾ ಒಂದು ದೊಡ್ಡ ಕೋಣೆಯನ್ನು ಬಂಗಾರ ಮತ್ತು ಬೆಳ್ಳಿಯ ಪುತ್ಥಳಿಗಳಿಂದ ತುಂಬಿಸುತ್ತೇನೆಂದು ವಚನಕೊಟ್ಟನು. ಆದರೆ ಪ್ರಯೋಜನವಾಗಲಿಲ್ಲ. ಮೋಸವು ಪುನಃ ಹಸ್ತಕ್ಷೇಪಮಾಡಿತು! ವಾಗ್ದತ್ತ ಬಿಡುಗಡೆಯ ಮೌಲ್ಯವನ್ನು ತುಂಬಿಸಿದ ಬಳಿಕ, ಸಂನ್ಯಾಸಿಗಳಿಂದ ವಿಗ್ರಹಾರಾಧಕನೆಂದು ಪರಿಗಣಿಸಲ್ಪಟ್ಟ 13ನೆಯ ಇಂಕನಾದ ಆಟಾಹುಆಲ್ಪಾನಿಗೆ, ಮೊದಲು ಕ್ಯಾಥೊಲಿಕನಾಗಿ ದೀಕ್ಷಾಸ್ನಾನ ಕೊಡಿಸಿ, ಆ ಬಳಿಕ ಕುತ್ತಿಗೆ ಹಿಸುಕಿ ಕೊಲ್ಲಲಾಯಿತು.
ಅಂತ್ಯದ ಪ್ರಾರಂಭ
ಆಟಾಹುಆಲ್ಪಾನ ಬಂಧನ ಮತ್ತು ಕೊಲೆಯು ಇಂಕ ಸಾಮ್ರಾಜ್ಯಕ್ಕೆ ಮಾರಕವಾದ ಆಘಾತವಾಗಿತ್ತು. ಆದರೆ ಇಂಡಿಯನ್ ಮೂಲನಿವಾಸಿಗಳು ಈ ಆಕ್ರಮಣಕಾರರನ್ನು ಪ್ರತಿಭಟಿಸಿದರು, ಮತ್ತು ಆ ಸಾಮ್ರಾಜ್ಯದ ಮರಣ ಯಾತನೆಗಳು ಇನ್ನು 40 ವರ್ಷಕಾಲ ಮುಂದುವರಿದವು.
ಸಹಾಯಕ ಪಡೆಗಳು ಆಗಮಿಸಿದಾಗ, ಇನ್ನೂ ಹೆಚ್ಚಿನ ಇಂಕ ಬಂಗಾರವನ್ನು ವಶಮಾಡಿಕೊಳ್ಳುವರೆ, ಪಿಸಾರೋ ಮತ್ತು ಅವನ ಸೈನಿಕರು ಕೂಸ್ಕೋವಿಗೆ ಹೋಗಲು ತವಕಪಟ್ಟರು. ಈ ಬೆನ್ನಟ್ಟುವಿಕೆಯಲ್ಲಿ, ಇಂಡಿಯನ್ ಮೂಲನಿವಾಸಿಗಳಿಂದ ನಿಕ್ಷೇಪಗಳ ರಹಸ್ಯಗಳನ್ನು ಹೊರಬರಿಸಲು ಅಥವಾ ಯಾವುದೇ ಪ್ರತಿಭಟಕರನ್ನು ಹೆದರಿಸಿ ಅಡಗಿಸಲು, ಆ ಸ್ಪ್ಯಾನಿಷರು ನಿರ್ಲಜ್ಜೆಯಿಂದ ಕ್ರೂರವಾದ ಚಿತ್ರಹಿಂಸೆಯನ್ನು ಬಳಸಿದರು.
ಮುಂದೆ ಇಂಕ ರಾಜನಾಗಲಿದ್ದ (ಮಾಂಕೋ ಇಂಕ ಯೂಪಾಂಕೀ), ಹೂಆಸ್ಕಾರನ ಸಹೋದರನಾದ ರಾಜಕುಮಾರ ಮಾಂಕೋ IIನ ಜೊತೆಗೂಡಿ, ಪಿಸಾರೋ ಕೂಸ್ಕೋವಿಗೆ ದಂಡೆತ್ತಿ ಹೋಗಿ ಅದರ ಎಲ್ಲ ಭಾರೀ ಬಂಗಾರದ ನಿಕ್ಷೇಪವನ್ನು ಸೂರೆಮಾಡಿದನು. ಬಂಗಾರದ ಪ್ರತಿಮೆಗಳಲ್ಲಿ ಹೆಚ್ಚಿನವನ್ನು ಕರಗಿಸಿ, ಸ್ಪೇನ್ಗಾಗಿ ಬಂಗಾರದ ಗಟ್ಟಿಗಳನ್ನಾಗಿ ಮಾಡಲಾಯಿತು. ಇಂಗ್ಲಿಷ್ ಕಡಲುಗಳ್ಳರು, ಪೆರುವಿನ ಸಂಪತ್ಭರಿತವಾದ ನಿಕ್ಷೇಪಗಳನ್ನು ಸಾಗಿಸುತ್ತಿದ್ದ ಸ್ಪ್ಯಾನಿಷ್ ವ್ಯಾಪಾರನೌಕೆಗಳನ್ನು ವಶಪಡಿಸಿಕೊಳ್ಳಲು ಆತುರದಿಂದಿದ್ದದ್ದು ಆಶ್ಚರ್ಯವಲ್ಲ! ಭಾರೀ ನಿಕ್ಷೇಪವನ್ನು ಹೊತ್ತುಕೊಂಡು ಪಿಸಾರೋ ಕರಾವಳಿಗೆ ಹೋಗಿ, 1535ರಲ್ಲಿ ಲೀಮ ನಗರವನ್ನು ತನ್ನ ಸರಕಾರೀ ಕೇಂದ್ರವಾಗಿ ಸ್ಥಾಪಿಸಿದನು.
ಈ ವಿಜೇತರ ದುರಾಶೆ ಮತ್ತು ಮೋಸದ ಕುರಿತಾಗಿ ಅಷ್ಟರೊಳಗೆ ಪೂರ್ತಿ ಅರಿತವನಾದ ಮಾಂಕೋ ಇಂಕ ಯೂಪಾಂಕೀಯು ಆಗ ದಂಗೆಯೆದ್ದನು. ಇತರರೂ ಸ್ಪ್ಯಾನಿಷರ ವಿರುದ್ಧ ದಂಗೆಯೆದ್ದರು. ಆದರೆ ಕೊನೆಗೆ ಇಂಡಿಯನ್ ಮೂಲನಿವಾಸಿಗಳು ತಮ್ಮಿಂದ ಸಾಧ್ಯವಾಗುವಷ್ಟರ ಮಟ್ಟಿಗೆ ಪ್ರತಿಭಟಿಸಲಿಕ್ಕಾಗಿ ದೂರದ ಪ್ರದೇಶಗಳಿಗೆ ಹೊರಟುಹೋಗಬೇಕಾಯಿತು. ಈ ಭದ್ರ ಆಶ್ರಯಸ್ಥಾನಗಳಲ್ಲಿ ಒಂದು, ಪರ್ವತಗಳಲ್ಲಿ ಅಡಗಿದ್ದ ಪವಿತ್ರ ನಗರವಾದ ಮಾಚೂ ಪೀಚೂ ಆಗಿರಸಾಧ್ಯವಿತ್ತು.
ಕೊನೆಯ ಇಂಕ
ಅಂತಿಮ ದೃಶ್ಯದಲ್ಲಿ, ಮಾಂಕೋ ಇಂಕ ಯೂಪಾಂಕೀಯ ಪುತ್ರನಾಗಿದ್ದ ಟೂಪಾಕ್ ಆಮಾರೂ ಇಂಕ ಅರಸನಾದನು (1572). ಆಗ ಸ್ಪ್ಯಾನಿಷ್ ರಾಜಪ್ರತಿನಿಧಿಗಳು ಪೆರುವನ್ನು ಆಳುತ್ತಿದ್ದರು. ರಾಜಪ್ರತಿನಿಧಿ ಟೋಲೇತೋವಿನ ಗುರಿಯು ಇಂಕ ಜನರನ್ನು ನಾಶಮಾಡುವುದಾಗಿತ್ತು. ಅವನು ಒಂದು ದೊಡ್ಡ ಸೈನ್ಯದೊಂದಿಗೆ ವಿಲ್ಕಾಬಾಂಬಾ ಪ್ರದೇಶದೊಳಗೆ ಪ್ರವೇಶಿಸಿದನು. ಟೂಪಾಕ್ ಆಮಾರೂವನ್ನು ಕಾಡಿನಲ್ಲಿಯೇ ಸೆರೆಹಿಡಿಯಲಾಯಿತು. ಅವನನ್ನೂ ಅವನ ಗರ್ಭಿಣಿ ಪತ್ನಿಯನ್ನೂ ವಧಿಸಲಿಕ್ಕಾಗಿ ಕೂಸ್ಕೋವಿಗೆ ಕೊಂಡೊಯ್ಯಲಾಯಿತು. ಒಬ್ಬ ಕಾನ್ಯಾರೀ ಇಂಡಿಯನ್ ಮೂಲನಿವಾಸಿಯು, ವಧಿಸಲಿಕ್ಕಾಗಿ ಟೂಪಾಕ್ ಆಮಾರೂವಿನ ಮೇಲೆ ಕತ್ತಿಯನ್ನೆತ್ತಿದನು. ಒಂದೇ ಹೊಡೆತದಲ್ಲಿ ತಮ್ಮ ಇಂಕ ಅರಸನ ಶಿರಚ್ಛೇದವಾದಾಗ ಚೌಕದಲ್ಲಿ ನೆರೆದಿದ್ದ ಸಾವಿರಾರು ಇಂಡಿಯನ್ ಮೂಲನಿವಾಸಿಗಳು ಕೇಳಿಸುವಷ್ಟು ದೊಡ್ಡದಾಗಿ ಸಂಕಟಧ್ವನಿಗೈದರು. ಅವನ ಮುಖ್ಯಸ್ಥರನ್ನು ಚಿತ್ರಹಿಂಸೆ ಕೊಟ್ಟು ಕೊಲ್ಲಲಾಯಿತು ಇಲ್ಲವೆ ಗಲ್ಲಿಗೇರಿಸಲಾಯಿತು. ಇಂತಹ ಕ್ರೂರವಾದ ಸಾವಿನೇಟಿನಿಂದ ಇಂಕ ಜನರ ಆಳಿಕೆ ಕೊನೆಗೊಂಡಿತು.
ನೇಮಿತ ರಾಜಪ್ರತಿನಿಧಿಗಳು, ಅನೇಕ ಕ್ಯಾಥೊಲಿಕ್ ಸಂನ್ಯಾಸಿಗಳು ಮತ್ತು ಪಾದ್ರಿಗಳೊಂದಿಗೆ, ಇಂಡಿಯನ್ ಮೂಲನಿವಾಸಿಗಳ ಮೇಲೆ ತಮ್ಮ ಒಳ್ಳೆಯ ಮತ್ತು ಕೆಟ್ಟ ಪ್ರಭಾವಗಳನ್ನು ಬೀರಿದರು. ದೀರ್ಘಕಾಲದ ತನಕ ಅವರನ್ನು ಕೇವಲ ಗುಲಾಮರಾಗಿ ಪರಿಗಣಿಸಲಾಯಿತು. ಅನೇಕರನ್ನು ಚಿನ್ನ ಅಥವಾ ಬೆಳ್ಳಿಯ ಗಣಿಗಳಲ್ಲಿ ಕೆಲಸಮಾಡುವಂತೆ ಒತ್ತಾಯಪಡಿಸಲಾಯಿತು. ಇದರಲ್ಲಿ ಒಂದು, ಬೊಲೀವಿಯದ ಪೋಟಸೀಯಲ್ಲಿರುವ ಭಾರೀ ಬೆಳ್ಳಿಯ ಅದುರಿದ್ದ ಪರ್ವತವಾಗಿತ್ತು. ಅಮಾನವೀಯ ಪರಿಸ್ಥಿತಿಗಳಿಂದ ಬದುಕಿ ಉಳಿಯಲು, ಪೀಡಿಸಲ್ಪಡುತ್ತಿದ್ದ ಇಂಡಿಯನರು, ಕೋಕ ಎಲೆಯ ಅಮಲಿನ ಪರಿಣಾಮದಿಂದಾಗಿ ಆ ಎಲೆಯನ್ನು ಉಪಯೋಗಿಸತೊಡಗಿದರು. ಪೆರು ಮತ್ತು ಬೊಲೀವಿಯಗಳು ಸ್ಪೇನಿನಿಂದ ತಮ್ಮ ಸ್ವಾತಂತ್ರ್ಯವನ್ನು ಪಡೆದದ್ದು, 19ನೆಯ ಶತಮಾನದಲ್ಲಿಯೇ.
ಇಂಕ ಜನರ ಆಧುನಿಕ ವಂಶಸ್ಥರು
ಈ ಆಧುನಿಕ ಯುಗದಲ್ಲಿ ಇಂಕ ವಂಶಸ್ಥರ ಸ್ಥಿತಿಯೇನು? ಪೆರುವಿಯನ್ ರಾಜಧಾನಿ ನಗರವಾದ ಲೀಮ, ಇತರ ಆಧುನಿಕ ನಗರಗಳಂತೆ ಲಕ್ಷಗಟ್ಟಲೆ ಜನರಿಂದ ಭರಿತವಾಗಿದೆ. ಆದರೆ ಹೊರಗಣ ಪ್ರಾಂತ್ಯಗಳಲ್ಲಿ ಕೆಲವೊಮ್ಮೆ, ನೂರು ವರ್ಷಗಳ ಹಿಂದೆಯೇ ಸಮಯವು ನಿಂತುಬಿಟ್ಟಿದೆಯೋ ಎಂಬಂತೆ ತೋರುತ್ತದೆ. ಅನೇಕ ದೂರದ ಹಳ್ಳಿಗಳು ಇನ್ನೂ ಕ್ಯಾಥೊಲಿಕ್ ಪಾದ್ರಿಗಳ ನಿಯಂತ್ರಣದಲ್ಲಿವೆ. ಮೂಲನಿವಾಸಿ ಬೇಸಾಯಗಾರನಿಗೆ ಹಳ್ಳಿಯ ಚೌಕದಲ್ಲಿರುವ ಕ್ಯಾಥೊಲಿಕ್ ಚರ್ಚು ಇನ್ನೂ ಪ್ರಮುಖ ಆಕರ್ಷಣೆಯಾಗಿದೆ. ಸೊಗಸಾಗಿ ಬಟ್ಟೆ ಧರಿಸಲ್ಪಟ್ಟ ಸಂತರು, ಬಣ್ಣವೈವಿಧ್ಯದ ಲೈಟುಗಳು, ಬಂಗಾರದ ವೇದಿ, ಉರಿಯುತ್ತಿರುವ ಮೇಣದ ಬತ್ತಿಗಳು, ಪಾದ್ರಿ ವಿಧಿವತ್ತಾಗಿ ಉಚ್ಚರಿಸುವ ರಹಸ್ಯಾರ್ಥದ ಸಂಸ್ಕಾರಗಳು ಮತ್ತು ವಿಶೇಷವಾಗಿ, ನೃತ್ಯ ಮತ್ತು ಉತ್ಸವಗಳು—ಇವೆಲ್ಲ ಅವನ ವಿನೋದಾವಶ್ಯಕತೆಯನ್ನು ರಂಜಿಸುತ್ತವೆ. ಆದರೆ ಕಣ್ಣಿಗೆ ಹಿಡಿಸುವ ಇಂತಹ ವಿನೋದಗಳು, ಪುರಾತನ ನಂಬಿಕೆಗಳನ್ನು ತೆಗೆದು ಹಾಕಿಲ್ಲ. ಮತ್ತು ರಹಸ್ಯ ಶಕ್ತಿಗಳಿವೆಯೆಂದು ಎಣಿಸಲಾಗುವ ಕೋಕ ಎಲೆಯ ಉಪಯೋಗವು, ಅನೇಕರ ಜೀವಿತಗಳನ್ನು ಇನ್ನೂ ಪ್ರಭಾವಿಸುತ್ತದೆ.
ಈಗ ಅನೇಕರು ಮಿಶ್ರ ಜಾತಿಯವರಾಗಿರುವ ಈ ಇಂಕ ವಂಶಸ್ಥರು, ತಮ್ಮ ಅದಮ್ಯ ಮನೋಭಾವದಿಂದಾಗಿ, ತಮ್ಮ ವರ್ಣರಂಜಿತ ನೃತ್ಯಗಳು ಮತ್ತು ಪ್ರಾತಿನಿಧಿಕ ವೈನೋ ಸಂಗೀತಗಳನ್ನು ಉಳಿಸಿಕೊಳ್ಳಲು ಶಕ್ತರಾಗಿದ್ದಾರೆ. ಅಪರಿಚಿತರೊಂದಿಗೆ ಅವರು ಆರಂಭದಲ್ಲಿ ಸಂಕೋಚವುಳ್ಳವರಾಗಿದ್ದರೂ, ಅವರ ತಮ್ಮ ಸಹಜ ಅತಿಥಿಸತ್ಕಾರವನ್ನು ತೋರಿಸುತ್ತಾರೆ. ಇಂಕ ಸಾಮ್ರಾಜ್ಯದ ಈ ವಂಶಜರನ್ನು ವ್ಯಕ್ತಿಪರವಾಗಿ ತಿಳಿದಿದ್ದು, ಬದುಕಿ ಉಳಿಯಲು ಅವರ ದೈನಂದಿನ ಹೋರಾಟವನ್ನು ಅವಲೋಕಿಸಿ, ಅವರನ್ನು ತಲಪಿ, ಸ್ಪರ್ಶಿಸಿ, ಪರಾಮರಿಸುವವರಿಗೊ, ಇಂಕ ಜನರ ಅನುಭವವು ಹೃದಯವಿದ್ರಾವಕವಾಗಿದೆ ನಿಶ್ಚಯ!
ಶಿಕ್ಷಣವು ಬದಲಾವಣೆಗಳನ್ನು ತರುತ್ತದೆ
ಎಚ್ಚರ! ಪತ್ರಿಕೆಯೊಂದಿಗಿನ ಒಂದು ಪತ್ರಿಕಾ ಭೇಟಿಯಲ್ಲಿ, ಟಿಟಿಕಾಕ ಸರೋವರ ಪ್ರದೇಶದ ಸಾಕಾ ಹಳ್ಳಿಯ ಐಮರಾ ಭಾಷೆಯನ್ನಾಡುವ ಇಂಡಿಯನ್ ಮೂಲನಿವಾಸಿಗಳ ವಂಶಜನಾದ ವಾಲೆಂಟೀನ್ ಆರೀಸಾಕಾ ಹೇಳಿದ್ದು: “ನಾನು ಯೆಹೋವನ ಸಾಕ್ಷಿಗಳಲ್ಲೊಬ್ಬನಾಗುವ ಮೊದಲು, ಹೆಸರಿಗೆ ಮಾತ್ರ ಕ್ಯಾಥೊಲಿಕನಾಗಿದ್ದೆ. ನನ್ನ ಕೆಲವು ಸ್ನೇಹಿತರೊಡಗೂಡಿ, ನಾನು ಅನೇಕ ವಿಧರ್ಮಿ ಆಚಾರಗಳನ್ನು ನಡೆಸುತ್ತಿದ್ದೆ. ನಾನು ಕೋಕ ಎಲೆಯನ್ನೂ ಅಗಿಯುತ್ತಿದ್ದೆ. ಆದರೆ ಈಗ ಅವೆಲ್ಲವನ್ನೂ ಬಿಟ್ಟುಬಿಟ್ಟಿದ್ದೇನೆ.”
ಆಪುಸ್ ಅನ್ನು ಕೋಪಗೊಳಿಸುವ ಸತತವಾದ ಭಯದಿಂದಾಗಿ ಆಚರಿಸುತ್ತಿದ್ದ ಅನೇಕ ಮೂಢನಂಬಿಕೆಗಳನ್ನು ಒಳ್ಳೆಯದಾಗಿ ನೆನಪಿಸಿಕೊಳ್ಳುತ್ತ, 89 ವರ್ಷ ಪ್ರಾಯದ ಪೆಟ್ರೋನೀಲಾ ಮಾಮಾನೀ ಹೇಳಿದ್ದು: “ಪರ್ವತ ದೇವತೆಗಳನ್ನು ಸಮಾಧಾನಗೊಳಿಸಲು ಮತ್ತು ನನ್ನ ಜೀವನೋಪಾಯವನ್ನು ದೃಢಪಡಿಸಿಕೊಳ್ಳಲು, ನಾನು ಕ್ರಮವಾಗಿ ನೈವೇದ್ಯಗಳನ್ನು ತೆಗೆದುಕೊಂಡುಹೋಗುತ್ತಿದ್ದೆ. ನನಗೆ ಅವುಗಳನ್ನು ಕೋಪಗೊಳಿಸಿ, ಅದರ ಪರಿಣಾಮವಾಗಿ ಬರುವ ವ್ಯಾಧಿಯ ಅಪಾಯಕ್ಕೊಳಗಾಗಲು ಎಂದಿಗೂ ಮನಸ್ಸಿರಲಿಲ್ಲ. ಈಗ ನನ್ನ ಮುದಿಪ್ರಾಯದಲ್ಲಿ, ವಿಷಯಗಳನ್ನು ವಿಭಿನ್ನ ರೀತಿಯಲ್ಲಿ ನೋಡಲು ಕಲಿತಿದ್ದೇನೆ. ಬೈಬಲಿನಿಂದಾಗಿ ಮತ್ತು ಯೆಹೋವನ ಸಾಕ್ಷಿಗಳಿಂದಾಗಿ, ನಾನು ಅಂತಹ ಯೋಚನೆಯಿಂದ ವಿಮುಕ್ತಳಾಗಿದ್ದೇನೆ.”
ಯೆಹೋವನ ಸಾಕ್ಷಿಗಳು ಕೆಚವ ಮತ್ತು ಐಮರಾ ಭಾಷೆ ಮಾತನಾಡುವ ಅನೇಕ ಮಂದಿ ಇಂಡಿಯನ್ ಮೂಲನಿವಾಸಿಗಳಿಗೆ ಓದಲು ಕಲಿಸುತ್ತಿದ್ದಾರೆ. ಸರದಿಯಾಗಿ, ಅವರು ಬೇರೆಯವರಿಗೆ ಬೈಬಲನ್ನು ಕಲಿಸುತ್ತಾರೆ. ಈ ವಿಧದಲ್ಲಿ ಸಾವಿರಾರು ಮಂದಿ ಇಂಕ ಮತ್ತು ಸ್ಪ್ಯಾನಿಷ್ ಇಂಡಿಯನರು ತಮ್ಮ ಜೀವಿತಗಳನ್ನು ಉತ್ತಮಗೊಳಿಸುವರೆ ಶಿಕ್ಷಿತರಾಗುತ್ತಿದ್ದಾರೆ. ಇಡೀ ಭೂಮಿಯ ಮೇಲೆ ಬೇಗನೆ ಸ್ಥಾಪಿಸಲ್ಪಡಲಿರುವ, ನ್ಯಾಯ, ಶಾಂತಿ ಮತ್ತು ನೀತಿಯ ಒಂದು ಹೊಸ ಲೋಕದ ಕುರಿತಾಗಿ ಬೈಬಲಿನಲ್ಲಿ ಕೊಡಲ್ಪಟ್ಟಿರುವ ದೇವರ ವಾಗ್ದಾನದ ಕುರಿತೂ ಅವರು ಕಲಿಯುತ್ತಿದ್ದಾರೆ.—2 ಪೇತ್ರ 3:13; ಪ್ರಕಟನೆ 21:1-4.
[ಪಾದಟಿಪ್ಪಣಿ]
a “ಇಂಕ” ಪದವು ಇಂಕ ಸಾಮ್ರಾಜ್ಯದ ಪರಮಾಧಿಕಾರಿಯನ್ನು ಹಾಗೂ ನಾಡಿಗರನ್ನು ಸಹ ಸೂಚಿಸಬಲ್ಲದು.
[ಪುಟ 15ರಲ್ಲಿರುವಚಿತ್ರ]
(For fully formatted text, see publication)
ಇಂಕ ಜನರ ಸುವರ್ಣ ಸಾಮ್ರಾಜ್ಯ
ದಕ್ಷಿಣ ಅಮೆರಿಕ
ಕೂಸ್ಕೋ
ಪೋಟಸೀ
ಇಂಕ ಸಾಮ್ರಾಜ್ಯ
ಮೆಕ್ಸಿಕೊ ಕೊಲ್ಲಿ
ಪೆಸಿಫಿಕ್ ಮಹಾಸಾಗರ
ಕೊಲಂಬಿಯ
ಎಕ್ವಡಾರ್
ಆ್ಯಂಡೀಸ್
ಪೆರು
ಕಾಹಮಾರ್ಕ
ಲೀಮ
ಪಾಚಾಕಾಮಾಕ್
ವಿಲ್ಕಾಬಾಂಬಾ
ಮಾಚೂ ಪೀಚೂ
ಕೂಸ್ಕೋ
ಟಿಟಿಕಾಕ ಸರೋವರ
ಬೊಲೀವಿಯ
ಚಿಲಿ
ಆರ್ಜೆಂಟೀನ
[ಪುಟ 16 ರಲ್ಲಿರುವ ಚಿತ್ರ]
ಮೇಲ್ಗಡೆ: ಕೂಸ್ಕೋವಿನ ಈ ಕ್ಯಾಥೊಲಿಕ್ ಚರ್ಚಿಗೆ ಸೂರ್ಯನ ಆದಿ ದೇವಾಲಯ ಅಸ್ತಿವಾರವಾಗಿದೆ
[ಪುಟ 16 ರಲ್ಲಿರುವ ಚಿತ್ರ]
ಎಡಕ್ಕೆ: ಚೂಕೀಟೋ ದೇವಾಲಯವೊಂದರಲ್ಲಿ ಇಂಕಪೂರ್ವದ ಶಿಶ್ನಬಿಂಬ
[ಪುಟ 16 ರಲ್ಲಿರುವ ಚಿತ್ರ]
ಬಲಕ್ಕೆ: ಇಂಕ ಯಜ್ಞಗಳ ರಕ್ತ ಈ ಶಿಲಾಕೆತ್ತನೆಗಳಲ್ಲಿ ಹರಿದುಹೋಯಿತು
[ಪುಟ 17 ರಲ್ಲಿರುವ ಚಿತ್ರ]
ಬಲಕ್ಕೆ: ಕೂಸ್ಕೋವಿನ ಹತ್ತಿರದ ಮಾಚೂ ಪೀಚೂವಿನಲ್ಲಿ ನೀರೊದಗಿಸಲ್ಪಟ್ಟಿರುವ ಮೆಟ್ಟಲು ದಿಬ್ಬಗಳು
[ಪುಟ 17 ರಲ್ಲಿರುವ ಚಿತ್ರ]
ಕೆಳಗೆ: ಮಾಚೂ ಪೀಚೂವಿನಲ್ಲಿನ ಒಂದು ಪುರಾತನ ದ್ವಾರದಿಂದ ಕಾಣುವ ನೋಟ
[ಪುಟ 17 ರಲ್ಲಿರುವ ಚಿತ್ರ]
ಕೆಳಗೆ ಬಲಕ್ಕೆ: ಸಾಕ್ಸಾವಾಮಾನ್ ಕೋಟೆ ದೇವಾಲಯದ 100 ಟನ್ನುಗಳಷ್ಟು ಭಾರದ ಶಿಲೆಗಳು