ಯೆಹೋವನ ಸಾಕ್ಷಿಗಳು ಗ್ರೀಸ್ನಲ್ಲಿ ನಿರ್ದೋಷೀಕರಿಸಲ್ಪಟ್ಟದ್ದು
ಎಚ್ಚರ! ಸುದ್ದಿಗಾರರಿಂದ
ಕ್ರೀಟ್ ದ್ವೀಪದ ಗಾಸೀ ಹಳ್ಳಿಯ ಆರ್ತೊಡಾಕ್ಸ್ ಪಾದ್ರಿ ತನ್ನ ಪ್ರಸಂಗವೊಂದರಲ್ಲಿ, “ಯೆಹೋವನ ಸಾಕ್ಷಿಗಳಿಗೆ ನಮ್ಮ ಹಳ್ಳಿಯಲ್ಲಿಯೇ ಒಂದು ಸಭಾಗೃಹವಿದೆ. ಅವರನ್ನು ತೊಲಗಿಸಲು ನನಗೆ ನಿಮ್ಮ ಬೆಂಬಲವು ಅಗತ್ಯ,” ಎಂದು ಹೇಳಿದನು. ಕೆಲವು ದಿನಗಳ ಬಳಿಕ ಒಂದು ಸಾಯಂಕಾಲ ರಾಜ್ಯ ಸಭಾಗೃಹದ ಕಿಟಿಕಿಗಳನ್ನು ಒಡೆಯಲಾಯಿತು, ಮತ್ತು ಅಜ್ಞಾತ ವ್ಯಕ್ತಿಗಳು ಅದಕ್ಕೆ ಗುಂಡುಹೊಡೆದರು. ಹೀಗೆ ಧಾರ್ಮಿಕ ಸ್ವಾತಂತ್ರ್ಯದ ವಿವಾದವು ಗ್ರೀಸ್ನಲ್ಲಿ ಪುನಃ ಎದ್ದುಬಂತು.
ಈ ಘಟನೆಗಳು ನಾಲ್ವರು ಸ್ಥಳಿಕ ಸಾಕ್ಷಿಗಳಾದ ಕೀರಿಯಾಕಾಸ್ ಬಾಕ್ಸೇವಾನೀಸ್, ವಾಸೀಲೀಸ್ ಹಾಡ್ಸಾಕೀಸ್, ಕಾಸ್ಟಾಸ್ ಮಾಕ್ರೀಡಾಕೀಸ್ ಮತ್ತು ಟೀಟಾಸ್ ಮಾನೂಸಾಕೀಸ್—ಇವರನ್ನು, ತಾವು ಧಾರ್ಮಿಕ ಕೂಟಗಳನ್ನು ನಡೆಸುವರೆ ಪರ್ಮಿಟಿಗಾಗಿ ಶಿಕ್ಷಣ ಮತ್ತು ಧಾರ್ಮಿಕ ವಿಚಾರಗಳ ಮಂತ್ರಿಗೆ ಅರ್ಜಿ ಸಲ್ಲಿಸುವಂತೆ ಪ್ರಚೋದಿಸಿತು. ಒಂದು ಪರ್ಮಿಟನ್ನು ಪಡೆಯುವುದು ಕೊನೆಗೆ ತಮಗೆ ಪೊಲೀಸ್ ರಕ್ಷಣೆಯನ್ನು ದೊರಕಿಸುವುದೆಂದು ಅವರು ನಿರೀಕ್ಷಿಸಿದರು. ಆದರೂ, ಅದು ಅಷ್ಟು ಸುಲಭವಾಗಿರಲಿಲ್ಲ.
ಪಾದ್ರಿಯು ಇರ್ಯಾಕ್ಲೀಅನ್ನಲ್ಲಿರುವ ಭದ್ರತಾ ಪೊಲೀಸ್ ಪ್ರಧಾನ ಕಚೇರಿಗೆ, ತನ್ನ ಆಡಳಿತ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹಕ್ಕೆ ಅಧಿಕಾರಿಗಳ ಗಮನವನ್ನು ಸೆಳೆಯುತ್ತ, ನಿರ್ಬಂಧಗಳನ್ನು ಹಾಕಬೇಕೆಂದೂ ಅವರ ಕೂಟಗಳು ನಿಷೇಧಿಸಲ್ಪಡಬೇಕೆಂದೂ ಹೇಳಿ ಒಂದು ಪತ್ರ ಕಳುಹಿಸಿದನು. ಇದು ಒಂದು ಪೊಲೀಸ್ ತನಿಖೆಯಲ್ಲಿ ಮತ್ತು ವಿಚಾರಣೆಗಳಲ್ಲಿ ಪರಿಣಮಿಸಿತು. ಕೊನೆಯದಾಗಿ, ಅಭಿಯೋಕ್ತನು ಸಾಕ್ಷಿಗಳ ವಿರುದ್ಧ ಆಪರಾಧಿಕ ದಾವಾ ಹಾಕಿದಾಗ ಈ ಮೊಕದ್ದಮೆಯನ್ನು ನ್ಯಾಯಸ್ಥಾನದ ಮುಂದೆ ತರಲಾಯಿತು.
ಇರ್ಯಾಕ್ಲೀಅನ್ನ ಕ್ರಿಮಿನಲ್ ಕೋರ್ಟು, ಅಕ್ಟೋಬರ್ 6, 1987ರಂದು, “ಅವರು ಮೇಲೆ ಆರೋಪಿಸಲಾಗಿರುವ ಕಾರ್ಯವನ್ನು ಮಾಡಿಲ್ಲ, ಏಕೆಂದರೆ ಒಂದು ಧರ್ಮದ ಸದಸ್ಯರು ಕೂಟಗಳನ್ನು ನಡೆಸಲು ಸ್ವತಂತ್ರರು . . ., ಪರ್ಮಿಟ್ ಅಗತ್ಯವಿಲ್ಲ,” ಎಂದು ಹೇಳಿ, ಆ ನಾಲ್ವರು ಪ್ರತಿವಾದಿಗಳನ್ನು ಬಿಡುಗಡೆಮಾಡಿತು. ಆದರೂ, ಅಭಿಯೋಕ್ತನು ಎರಡು ದಿನಗಳ ಬಳಿಕ ಆ ನಿರ್ಣಯದ ವಿರುದ್ಧ ಅಪ್ಪೀಲು ಮಾಡಿದಾಗ ಆ ಮೊಕದ್ದಮೆಯನ್ನು ಉಚ್ಚ ನ್ಯಾಯಾಲಯದ ಮುಂದೆ ತರಲಾಯಿತು. ಫೆಬ್ರವರಿ 15, 1990ರಂದು, ಈ ಕೋರ್ಟು ಸಾಕ್ಷಿಗಳನ್ನು ಎರಡು ತಿಂಗಳುಗಳ ಸಜೆ ಮತ್ತು ಸುಮಾರು 100 ಡಾಲರ್ಗಳ ದಂಡಕ್ಕೊಳಪಡಿಸಿತು. ಆ ತರುವಾಯ, ಪ್ರತಿವಾದಿಗಳು ಗ್ರೀಕ್ ಅತ್ಯುಚ್ಚ ನ್ಯಾಯಾಲಯಕ್ಕೆ ಅಪ್ಪೀಲ್ ಮಾಡಿದರು.
ಮಾರ್ಚ್ 19, 1991ರಲ್ಲಿ, ಅತ್ಯುಚ್ಚ ನ್ಯಾಯಾಲಯವು ಅಪ್ಪೀಲನ್ನು ವಜಾಮಾಡಿ ಅಪರಾಧ ನಿರ್ಣಯನ್ನು ಸಮರ್ಥಿಸಿತು. ಎರಡು ವರುಷಗಳಿಗೂ ಹೆಚ್ಚು ಸಮಯಾನಂತರ, ಸೆಪ್ಟೆಂಬರ್ 20, 1993ರಂದು, ಸುಪ್ರೀಮ್ ಕೋರ್ಟಿನ ನಿರ್ಣಯ ಪ್ರಕಟವಾದಾಗ, ರಾಜ್ಯ ಸಭಾಗೃಹಕ್ಕೆ ಪೊಲೀಸರು ಮುದ್ರೆಹಾಕಿ ಮುಚ್ಚಿದರು. ಒಂದು ಪೊಲೀಸ್ ಪತ್ರದಿಂದ ತಿಳಿದುಬಂದಂತೆ, ಕ್ರೀಟ್ನ ಆರ್ತೊಡಾಕ್ಸ್ ಚರ್ಚ್ ಈ ಕೆಲಸದ ಹಿಂದೆ ಇತ್ತು.
ಈ ಪರಿಸ್ಥಿತಿಯು ಎದ್ದು ಬರಲು ಕಾರಣವು, ಧಾರ್ಮಿಕ ಸ್ವಾತಂತ್ರ್ಯವನ್ನು ತಡೆಗಟ್ಟುವ ಉದ್ದೇಶದಿಂದ 1938ರಲ್ಲಿ ಅಂಗೀಕೃತವಾದ ಕೆಲವು ನಿಯಮಗಳು ಗ್ರೀಸ್ನಲ್ಲಿ ಇನ್ನೂ ಜಾರಿಯಲ್ಲಿವೆ. ಒಬ್ಬನು ಒಂದು ಆರಾಧನಾ ಸ್ಥಳವನ್ನು ಬಳಸಬಯಸುವಲ್ಲಿ, ಶಿಕ್ಷಣ ಮತ್ತು ಧಾರ್ಮಿಕ ವಿಚಾರಗಳ ಮಂತ್ರಾಲಯದಿಂದಲೂ ಆರ್ತೊಡಾಕ್ಸ್ ಚರ್ಚಿನ ಸ್ಥಳಿಕ ಬಿಷಪರಿಂದಲೂ ಪರ್ಮಿಟನ್ನು ಪಡೆದುಕೊಳ್ಳಲೇಬೇಕೆಂದು ಆ ನಿಯಮಗಳು ನಿರ್ಬಂಧಿಸುತ್ತವೆ. ಹಲವಾರು ದಶಕಗಳಿಂದ, ಈ ಪ್ರಾಚೀನ ನಿಯಮಗಳು ಯೆಹೋವನ ಸಾಕ್ಷಿಗಳಿಗೆ ಅನೇಕ ತೊಂದರೆಗಳನ್ನು ತಂದಿವೆ.
ಧರ್ಮ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳು
ಸುಪ್ರೀಮ್ ಕೋರ್ಟು ತಮ್ಮ ಅಪರಾಧ ನಿರ್ಣಯವನ್ನು ಎತ್ತಿಹಿಡಿದಿದೆ ಎಂದು ತಿಳಿದೊಡನೆ, ಆ ನಾಲ್ವರು ಸಾಕ್ಷಿಗಳು, ಆಗಸ್ಟ್ 7, 1991ರಂದು ಫ್ರಾನ್ಸ್ನ ಸ್ಟ್ರಾಸ್ಬುರ್ಗ್ನಲ್ಲಿರುವ ಮಾನವ ಹಕ್ಕುಗಳ ಯೂರೋಪಿಯನ್ ಕಮಿಷನ್ಗೆ ಒಂದು ಅರ್ಜಿ ಸಲ್ಲಿಸಿದರು. ತಮ್ಮ ಅಪರಾಧ ನಿರ್ಣಯವು ಯೂರೋಪಿಯನ್ ಒಪ್ಪಂದದ, ಯೋಚನೆ, ಮನಸ್ಸಾಕ್ಷಿ, ಧರ್ಮ, ಹಾಗೂ ಒಬ್ಬನ ಧರ್ಮವನ್ನು ಒಬ್ಬನಾಗಿ ಅಥವಾ ಸಮಾಜದಲ್ಲಿ ಇತರರೊಂದಿಗೆ ಬಹಿರಂಗವಾಗಿ ಅಥವಾ ಖಾಸಗಿಯಾಗಿ ತೋರಿಸುವ ಸ್ವಾತಂತ್ರ್ಯವನ್ನು ಭದ್ರಪಡಿಸುವ 9ನೆಯ ಕಾಯಿದೆಯನ್ನು ಉಲ್ಲಂಘಿಸುತ್ತದೆಂದು ಅರ್ಜಿದಾರರು ವಾದಿಸಿದರು.
ಮೇ 25, 1995ರಂದು, ಆ ಕಮಿಷನ್ನ 25 ಮಂದಿ ಸದಸ್ಯರು, ಈ ಮೊಕದ್ದಮೆಯಲ್ಲಿ ಗ್ರೀಸ್ ದೇಶ ಯೂರೋಪಿಯನ್ ಒಪ್ಪಂದದ 9ನೆಯ ಲಿಖಿತ ಕಾನೂನನ್ನು ಉಲ್ಲಂಘಿಸಿತ್ತೆಂದು ಸರ್ವಾನುಮತದ ನಿರ್ಣಯಕ್ಕೆ ಬಂದರು. ಈ ಅಪರಾಧ ನಿರ್ಣಯವು ಧಾರ್ಮಿಕ ಸ್ವಾತಂತ್ರ್ಯದ ಇಂಗಿತಕ್ಕೆ ಹೊಂದಿಕೆಯಾಗಿರುವುದಿಲ್ಲ ಮತ್ತು ಒಂದು ಪ್ರಜಾಪ್ರಭುತ್ವ ಸಮಾಜದಲ್ಲಿ ಇದರ ಅಗತ್ಯವಿರುವುದಿಲ್ಲವೆಂಬುದು ಅವರ ತೀರ್ಪಾಗಿತ್ತು. ಆ ಮೊಕದ್ದಮೆಯ ಅಂಗೀಕಾರಾರ್ಹತೆಯ ಸಂಬಂಧದ ಈ ತೀರ್ಪು ಇನ್ನೂ ಹೇಳಿದ್ದು: “ಅರ್ಜಿದಾರರು . . . ಯಾರ ಧಾರ್ಮಿಕ ಸಂಸ್ಕಾರಗಳೂ ಆಚಾರಗಳೂ ವ್ಯಾಪಕವಾಗಿ ಪ್ರಸಿದ್ಧವಾಗಿದ್ದು ಅನೇಕ ಯೂರೋಪಿಯನ್ ರಾಷ್ಟ್ರಗಳಲ್ಲಿ ಪ್ರಮಾಣೀಕೃತವಾಗಿವೆಯೊ ಅಂತಹ ಒಂದು ಆಂದೋಲನದ ಸದಸ್ಯರು.” ಅಂತಿಮವಾಗಿ, ಆ ನಿಯೋಗವು ಈ ಮೊಕದ್ದಮೆಯನ್ನು ಮಾನವ ಹಕ್ಕುಗಳ ಯೂರೋಪಿಯನ್ ಕೋರ್ಟಿಗೆ ಕಳುಹಿಸಿತು.
ಯೆಹೋವನ ಸಾಕ್ಷಿಗಳನ್ನು ನಿಲ್ಲಿಸಸಾಧ್ಯವಿಲ್ಲ
ವಿಚಾರಣೆಯನ್ನು ಮೇ 20, 1996ಕ್ಕೆ ಇಡಲಾಯಿತು. ವಿಚಾರಣಾಲಯದಲ್ಲಿ 200ಕ್ಕೂ ಹೆಚ್ಚು ಜನರಿದ್ದರು. ಇದರಲ್ಲಿ ಸ್ಥಳಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಪ್ರೊಫೆಸರರು, ಪತ್ರಿಕೋದ್ಯೋಗಿಗಳು ಮತ್ತು ಗ್ರೀಸ್, ಜರ್ಮನಿ, ಬೆಲ್ಜಿಯಮ್ ಮತ್ತು ಫ್ರಾನ್ಸ್ ದೇಶಗಳ ಅನೇಕ ಯೆಹೋವನ ಸಾಕ್ಷಿಗಳಿದ್ದರು.
ಆ್ಯಥೆನ್ಸ್ ವಿಶ್ವವಿದ್ಯಾಲಯದ ವಿಶ್ರಾಂತ ಮಹೋಪಾಧ್ಯಾಯರೂ ಸಾಕ್ಷಿಗಳ ವಕೀಲರೂ ಆದ ಶ್ರೀ ಫೆತೋನ್ ವೆಗ್ಲೆರೀಸ್, ಉಪಯೋಗಿಸಿದ ಕಾರ್ಯನೀತಿ ಮತ್ತು ರಾಷ್ಟ್ರೀಯ ಅಧಿಕಾರಿಗಳು ಕೊಟ್ಟಿರುವ ನ್ಯಾಯತೀರ್ಪುಗಳು ಯೂರೋಪಿಯನ್ ಒಪ್ಪಂದವನ್ನು ಉಲ್ಲಂಘಿಸಿರುವುದು ಮಾತ್ರವಲ್ಲ, ಗ್ರೀಸ್ನ ಸಂವಿಧಾನವನ್ನೂ ಉಲ್ಲಂಘಿಸಿವೆಯೆಂದು ಪ್ರತಿಪಾದಿಸಿದರು. “ಹೀಗೆ ಕೋರ್ಟು ನಿರ್ವಹಣೆಮಾಡಿರುವುದು ರಾಷ್ಟ್ರೀಯ ಕಾನೂನು ಮತ್ತು ಅದರ ಅನ್ವಯವೇ.”
ಗ್ರೀಕ್ ಸರಕಾರದ ವಕೀಲರು, ಕೌನ್ಸಿಲ್ ಆಫ್ ಸ್ಟೇಟ್ನ ಒಬ್ಬ ನ್ಯಾಯಾಧೀಶರಾಗಿದ್ದರು. ಇವರು ನಿಜತ್ವಗಳನ್ನು ಚರ್ಚಿಸುವ ಬದಲು, ಗ್ರೀಸ್ನಲ್ಲಿ ಆರ್ತೊಡಾಕ್ಸ್ ಚರ್ಚ್ ತೆಗೆದುಕೊಂಡಿರುವ ಸ್ಥಾನ, ಸರಕಾರ ಮತ್ತು ಜನರೊಂದಿಗೆ ಅದಕ್ಕಿರುವ ನಿಕಟ ಸಂಬಂಧ ಮತ್ತು ಇತರ ಧರ್ಮಗಳನ್ನು ತಡೆಹಿಡಿಯಲು ಇರುವ ಅಗತ್ಯವನ್ನು ಸೂಚಿಸಿದರು. ಇದಲ್ಲದೆ, 1960ರಿಂದ ಹಿಡಿದು, ಯೆಹೋವನ ಸಾಕ್ಷಿಗಳು ತಮ್ಮ ಸಂಖ್ಯೆಯನ್ನು ಬಹಳವಾಗಿ ಹೆಚ್ಚಿಸುವುದರಲ್ಲಿ ಸಾಫಲ್ಯವನ್ನು ಪಡೆದಿದ್ದಾರೆ ಎಂದು ಅವರು ಹೇಳಿದರು. ಇನ್ನೊಂದು ಮಾತಿನಲ್ಲಿ, ಆರ್ತೊಡಾಕ್ಸ್ ಏಕಸ್ವಾಮ್ಯವನ್ನು ಯಶಸ್ವಿಯಾಗಿ ಸವಾಲಿಗೊಡ್ಡಲಾಗಿತ್ತು!
ಧಾರ್ಮಿಕ ಸ್ವಾತಂತ್ರ್ಯವು ಎತ್ತಿಹಿಡಿಯಲ್ಪಡುತ್ತದೆ
ತೀರ್ಪು ಸೆಪ್ಟೆಂಬರ್ 26ಕ್ಕೆ ಕೊಡಲಾಗುವುದರಲ್ಲಿತ್ತು. ಕಾತರಪೂರ್ವಕವಾದ ನಿರೀಕ್ಷೆ, ವಿಶೇಷವಾಗಿ ಯೆಹೋವನ ಸಾಕ್ಷಿಗಳ ಮಧ್ಯೆ ಉಕ್ಕೇರುತ್ತಿತ್ತು. ಚೇಂಬರಿನ ಅಧ್ಯಕ್ಷರಾದ ಶ್ರೀ ರೂಡಾಲ್ಫ್ ಬರ್ನ್ಹಾರ್ಡ್ ತೀರ್ಪನ್ನು ಓದಿಹೇಳಿದರು: ಒಂಬತ್ತು ಮಂದಿ ನ್ಯಾಯಾಧೀಶರನ್ನು ಒಳಗೊಂಡಿದ್ದ ಕೋರ್ಟು ಸರ್ವಾನುಮತದಿಂದ ಗ್ರೀಸ್ ದೇಶವು ಯೂರೋಪಿಯನ್ ಒಪ್ಪಂದದ 9ನೆಯ ಕಾಯಿದೆಯನ್ನು ಉಲ್ಲಂಘಿಸಿದೆಯೆಂದು ತೀರ್ಪುಕೊಟ್ಟಿದೆ. ಅರ್ಜಿದಾರರ ಖರ್ಚಿಗಾಗಿ ಸುಮಾರು 17,000 ಡಾಲರುಗಳನ್ನು ವಾದಿಗಳು ಕೊಡುವಂತೆಯೂ ಅದು ವಿಧಿಸಿತು. ಹೆಚ್ಚು ಪ್ರಾಮುಖ್ಯವಾಗಿ, ಆ ತೀರ್ಪಿನಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅನುಕೂಲವಾದ ಅನೇಕ ಗಮನಾರ್ಹ ವಾದಗಳೂ ಸೇರಿದ್ದವು.
ಗ್ರೀಕ್ ಕಾಯಿದೆಯು “ಧಾರ್ಮಿಕ ಸ್ವಾತಂತ್ರ್ಯದ ಬಳಕೆಯಲ್ಲಿ ರಾಜಕೀಯ, ಆಡಳಿತ ಮತ್ತು ಪುರೋಹಿತ ಅಧಿಕಾರಿಗಳಿಂದ ದೂರ ವ್ಯಾಪ್ತಿಯುಳ್ಳ ಹಸ್ತಕ್ಷೇಪವನ್ನು” ಅನುಮತಿಸುತ್ತದೆ ಎಂದು ಕೋರ್ಟು ಗಮನಿಸಿತು. ಒಂದು ಪರ್ಮಿಟನ್ನು ಪಡೆಯುವ ಕಾರ್ಯವಿಧಾನವನ್ನು ಸರಕಾರವು, “ಕೆಲವು ಅಸಾಂಪ್ರದಾಯಿಕ ಆಂದೋಲನಗಳ, ವಿಶೇಷವಾಗಿ ಯೆಹೋವನ ಸಾಕ್ಷಿಗಳ ಧಾರ್ಮಿಕ ನಂಬಿಕೆಗಳ ಆಚರಣೆಯ ಮೇಲೆ ಬಿರುಸಾದ, ಅಥವಾ ನಿಶ್ಚಯವಾಗಿ ನಿಷೇಧಾರ್ಥಕ ಷರತ್ತುಗಳನ್ನು ಹಾಕಲು” ಉಪಯೋಗಿಸಿದೆ ಎಂದು ಅದು ಕೂಡಿಸಿ ಹೇಳಿತು. ಆರ್ತೊಡಾಕ್ಸ್ ಚರ್ಚು ಅನೇಕ ದಶಕಗಳಲ್ಲಿ ಉಪಯೋಗಿಸಿದ ಘೋರ ತಂತ್ರಗಳನ್ನು ಈ ಅಂತಾರಾಷ್ಟ್ರೀಯ ಕೋರ್ಟು ಬಯಲುಪಡಿಸಿತು.
“ಒಪ್ಪಂದವು ಖಾತರಿಕೊಟ್ಟಿರುವ ಧರ್ಮ ಸ್ವಾತಂತ್ರ್ಯದ ಹಕ್ಕು, ಧಾರ್ಮಿಕ ನಂಬಿಕೆಗಳು ಅಥವಾ ಅಂತಹ ನಂಬಿಕೆಗಳನ್ನು ವ್ಯಕ್ತಪಡಿಸಲು ಉಪಯೋಗಿಸುವ ಮಾಧ್ಯಮಗಳು ನ್ಯಾಯವಾದವುಗಳೊ ಅಲ್ಲವೊ ಎಂಬುದನ್ನು ನಿರ್ಧರಿಸುವ ಹಕ್ಕನ್ನು ಸರಕಾರದಿಂದ ಹೊರಗಿಡುತ್ತದೆ” ಎಂದು ಕೋರ್ಟು ಒತ್ತಿಹೇಳಿತು. “ಗ್ರೀಕ್ ನಿಯಮವು ಒದಗಿಸಿರುವ ‘ಜ್ಞಾತ ಧರ್ಮ’ದ ನಿರೂಪಣೆಯೊಳಗೆ ಯೆಹೋವನ ಸಾಕ್ಷಿಗಳು ಬರುತ್ತಾರೆ. . . . ಇದನ್ನೂ ಸರಕಾರವು ಒಪ್ಪಿಕೊಂಡಿದೆ,” ಎಂದೂ ಅದು ಹೇಳಿತು.
ಬರಿಯ ತಮಾಷೆಯಲ್ಲ
ಮುಂದಿನ ಕೆಲವು ದಿನಗಳಲ್ಲಿ ಪ್ರಧಾನ ಗ್ರೀಕ್ ವಾರ್ತಾಪತ್ರಗಳಲ್ಲಿ ಹೆಚ್ಚಿನವು ಈ ಮೊಕದ್ದಮೆಯನ್ನು ಪ್ರಕಟಿಸಿದವು. ಸೆಪ್ಟೆಂಬರ್ 29, 1996ರಲ್ಲಿ, ಕಾತೀಮೆರೀನೀಯ ಭಾನುವಾರದ ಸಂಚಿಕೆಯು ಹೀಗೆಂದಿತು: “ಗ್ರೀಕ್ ಸರಕಾರವು ಇದೊಂದು ‘ಬರಿಯ ತಮಾಷೆ’ ಎಂದು ಹೇಳುತ್ತ ಇದನ್ನು ಅಸಡ್ಡೆ ಮಾಡಲು ಎಷ್ಟು ಪ್ರಯತ್ನಿಸಿದರೂ, ಸ್ಟ್ರಾಸ್ಬುರ್ಗ್ನಲ್ಲಿರುವ ಮಾನವ ಹಕ್ಕುಗಳ ಯೂರೋಪಿಯನ್ ಕೋರ್ಟಿನಿಂದ ಅದಕ್ಕೆ ದೊರೆತ ‘ಮುಖಭಂಗವು’ ನಿಜವಾಗಿಯೂ ವಾಸ್ತವವಾಗಿದೆ, ಅಂತಾರಾಷ್ಟ್ರೀಯ ಪ್ರಮಾಣದಲ್ಲಿ ಬರೆಯಲ್ಪಟ್ಟಿರುವ ನಿಜತ್ವವಾಗಿದೆ. ಕೋರ್ಟು ಗ್ರೀಸ್ಗೆ ಮಾನವ ಹಕ್ಕುಗಳ ಒಪ್ಪಂದದ 9ನೆಯ ಕಾಯಿದೆಯ ಕುರಿತು ಜ್ಞಾಪಕಹುಟ್ಟಿಸಿ, ಗ್ರೀಕ್ ಶಾಸನ ರಚನೆಯನ್ನು ಒಕ್ಕೊರಲಾಗಿ ಖಂಡಿಸಿತು.”
ಆ್ಯಥೆನ್ಸ್ ದೈನಿಕವಾದ ಎತ್ನೋಸ್, ಸೆಪ್ಟೆಂಬರ್ 28, 1996ರಲ್ಲಿ, ಯೂರೋಪಿಯನ್ ಕೋರ್ಟು, “ಗ್ರೀಸನ್ನು ಖಂಡಿಸಿ, ಯೆಹೋವನ ಸಾಕ್ಷಿಗಳಾಗಿರುವ ದೌರ್ಭಾಗ್ಯವನ್ನು ಅನುಭವಿಸುವ ತನ್ನ ಪೌರರಿಗೆ ಹಣಕೊಡಬೇಕೆಂದು ಆಜ್ಞಾಪಿಸಿತು” ಎಂದು ಬರೆಯಿತು.
ಅರ್ಜಿದಾರರ ವಕೀಲರಲ್ಲಿ ಒಬ್ಬರಾದ ಶ್ರೀ ಪಾನಾಸ್ ಬೀಟ್ಸಾಕೀಸ್ ಎಂಬವರನ್ನು ರೇಡಿಯೊ ಕಾರ್ಯಕ್ರಮದಲ್ಲಿ ಸಂದರ್ಶಿಸಲಾದಾಗ ಅವರು ಹೇಳಿದ್ದು: “ನಾವು 1996ನೆಯ ವರ್ಷದಲ್ಲಿ, 21ನೆಯ ಶತಮಾನದ ಅಂಚಿನಲ್ಲಿ ಜೀವಿಸುತ್ತಿದ್ದೇವೆ. ಮತ್ತು ಆಡಳಿತದಿಂದ ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಬಳಕೆಯ ಸಂಬಂಧದಲ್ಲಿ ಭೇದಭಾವ, ಕಿರುಕುಳ ಮತ್ತು ಹಸ್ತಕ್ಷೇಪವು ಇರಬಾರದೆಂಬುದು ವ್ಯಕ್ತ. . . . ಸರಕಾರವು ತನ್ನ ಕಾರ್ಯನೀತಿಯನ್ನು ಪುನರ್ಪರೀಕ್ಷಿಸಿ ಈ ದಿನ ಮತ್ತು ಯುಗದಲ್ಲಿ ಯಾವ ಉದ್ದೇಶವನ್ನೂ ಸಾಧಿಸದ ಈ ಅವಿವೇಕದ ಭೇದಭಾವವನ್ನು ನಿಲ್ಲಿಸಲು ಇದೊಂದು ಸದವಕಾಶವಾಗಿದೆ.”
ಮಾನೂಸಾಕೀಸ್ ಮತ್ತು ಇತರರ ಪ್ರತಿಯಾಗಿ ಗ್ರೀಸ್ ಮೊಕದ್ದಮೆಯಲ್ಲಿ ಕೊಡಲ್ಪಟ್ಟ ತೀರ್ಪು, ಗ್ರೀಸ್ನಲ್ಲಿರುವ ಯೆಹೋವನ ಸಾಕ್ಷಿಗಳು ಆಡಳಿತ, ಪೊಲೀಸ್ ಮತ್ತು ಚರ್ಚಿನಿಂದ ಹಸ್ತಕ್ಷೇಪವಿಲ್ಲದೆ ಧಾರ್ಮಿಕ ಸ್ವಾತಂತ್ರ್ಯವನ್ನು ಅನುಭವಿಸುವಂತೆ ಯೂರೋಪಿಯನ್ ಕೋರ್ಟಿನ ತೀರ್ಪಿಗನುಸಾರ ಗ್ರೀಕ್ ಸರಕಾರ ತನ್ನ ಶಾಸನವನ್ನು ಹೊಂದಿಸಿಕೊಳ್ಳುವುದೆಂಬ ನಿರೀಕ್ಷೆಯನ್ನು ಕೊಡುತ್ತದೆ. ಇದಲ್ಲದೆ ಇದು, ಗ್ರೀಕ್ ನ್ಯಾಯಪದ್ಧತಿಯ ವಿರುದ್ಧ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಪಟ್ಟ ವಿಷಯಗಳ ಮೇಲೆ ಯೂರೋಪಿಯನ್ ಕೋರ್ಟು ಕೊಟ್ಟ ಎರಡನೆಯ ತೀರ್ಪಾಗಿದೆ.a
ದೇವರ ವಾಕ್ಯಕ್ಕೆ ವಿರೋಧವಾಗಿರದ ಎಲ್ಲ ಸಂಗತಿಗಳಲ್ಲಿ ಯೆಹೋವನ ಸಾಕ್ಷಿಗಳು ಸರಕಾರೀ “ಮೇಲಧಿಕಾರಿಗಳಿಗೆ” ವಿಧೇಯರಾಗುತ್ತಾರೆಂಬುದು ವ್ಯಾಪಕವಾಗಿ ತಿಳಿದಿರುವ ವಿಷಯ. (ರೋಮಾಪುರ 13:1, 7) ಸಾರ್ವಜನಿಕ ಕ್ರಮವ್ಯವಸ್ಥೆಗೆ ಅವರೆಂದಿಗೂ ಹಾನಿ ತರುವವರಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಅವರ ಸಾಹಿತ್ಯಗಳೂ ಸಾರ್ವಜನಿಕ ಶುಶ್ರೂಷೆಯೂ, ಪ್ರತಿಯೊಬ್ಬನೂ ನಿಯಮಪಾಲಕ ಪೌರನಾಗುವಂತೆ ಮತ್ತು ಶಾಂತಿಯ ಜೀವನವನ್ನು ಜೀವಿಸುವಂತೆ ಪ್ರೋತ್ಸಾಹಿಸುತ್ತವೆ. ಅವರು ಪ್ರಾಮಾಣಿಕ ಮತ್ತು ಸುಸ್ಥಾಪಿತ ಧರ್ಮವಾಗಿದ್ದಾರೆ, ಮತ್ತು ಅವರ ಸದಸ್ಯರು ತಮ್ಮ ನೆರೆಹೊರೆಗಳ ಯೋಗಕ್ಷೇಮಕ್ಕೆ ಹೆಚ್ಚಿನ ಸಹಾಯವನ್ನು ಮಾಡಿದ್ದಾರೆ. ಬೈಬಲಿನ ಉನ್ನತ ನೈತಿಕ ಮಟ್ಟಗಳನ್ನು ಸಮರ್ಥಿಸುವ ಅವರ ದೃಢಸಂಕಲ್ಪ ಮತ್ತು ವಿಶೇಷವಾಗಿ ಅವರ ಬೈಬಲ್ ಶಿಕ್ಷಣ ಕೆಲಸದಲ್ಲಿ ವ್ಯಕ್ತವಾಗುವ ನೆರೆಯವರ ಮೇಲಿರುವ ಪ್ರೀತಿಯು, ಅವರು ಅಸ್ತಿತ್ವದಲ್ಲಿರುವ 200ಕ್ಕೂ ಹೆಚ್ಚಿನ ದೇಶಗಳ ಮೇಲೆ ಹಿತಕರವಾದ ಪರಿಣಾಮವನ್ನು ಉಂಟುಮಾಡಿದೆ.
ಯೂರೋಪಿಯನ್ ಕೋರ್ಟು ಕೊಟ್ಟ ತೀರ್ಪುಗಳು ಗ್ರೀಸ್ನಲ್ಲಿರುವ ಯೆಹೋವನ ಸಾಕ್ಷಿಗಳಿಗೂ ಇತರ ಧಾರ್ಮಿಕ ಅಲ್ಪ ಸಂಖ್ಯಾತರಿಗೂ ಹೆಚ್ಚಿನ ಧಾರ್ಮಿಕ ಸ್ವಾತಂತ್ರ್ಯವನ್ನು ಕೊಡಲು ಸಹಾಯಮಾಡೀತೆಂದು ನಿರೀಕ್ಷಿಸಲಾಗುತ್ತದೆ.
[ಅಧ್ಯಯನ ಪ್ರಶ್ನೆಗಳು]
a 1993ರಲ್ಲಿ ಕೊಡಲ್ಪಟ್ಟ ಪ್ರಥಮ ತೀರ್ಪು, ಕಾಕೀನಾಕೀಸ್ ಪ್ರತಿಯಾಗಿ ಗ್ರೀಸ್ ಮೊಕದ್ದಮೆಯಾಗಿತ್ತು.—ಕಾವಲಿನಬುರುಜು, ಸೆಪ್ಟೆಂಬರ್ 1, 1993, ಪುಟ 27ನ್ನು ನೋಡಿ.
[ಪುಟ 23 ರಲ್ಲಿರುವ ಚಿತ್ರ]
ಪೊಲೀಸರು ಸೆಪ್ಟೆಂಬರ್ 20, 1996ರಂದು ಮುದ್ರೆ ಒತ್ತಿ ಮುಚ್ಚಿದ ಆರಂಭದ ರಾಜ್ಯ ಸಭಾಗೃಹ
[ಪುಟ 23 ರಲ್ಲಿರುವ ಚಿತ್ರ]
ಮಾನವ ಹಕ್ಕುಗಳ ಯೂರೋಪಿಯನ್ ಕೋರ್ಟ್, ಸ್ಟ್ರಾಸ್ಬುರ್ಗ್
[ಪುಟ 24 ರಲ್ಲಿರುವ ಚಿತ್ರ]
ಒಳಗೊಂಡಿದ್ದ ಸಾಕ್ಷಿಗಳು: ಟಿ. ಮಾನೂಸಾಕೀಸ್, ವಿ. ಹಾಡ್ಸಾಕೀಸ್, ಕೆ. ಮಾಕ್ರೀಡಾಕೀಸ್, ಕೆ. ಬಾಕ್ಸೇವಾನೀಸ್