ಪಾಂಪೆ—ಸಮಯವು ಕದಲದೆ ನಿಂತ ಸ್ಥಳ
ಇಟಲಿಯ ಎಚ್ಚರ! ಸುದ್ದಿಗಾರರಿಂದ
ಬೆಂಕಿ ಗೂಡಿನಲ್ಲಿರುವ ಬಾಣಲೆಗಳೊಂದಿಗೆ ಅಡಿಗೆಕೋಣೆಗಳು, ಸಂಪೂರ್ಣ ಸರಕುಗಳುಳ್ಳ ಅಂಗಡಿಗಳು, ನಿರ್ಜಲ ಬುಗ್ಗೆಗಳು, ಶಿಥಿಲಗೊಂಡಿಲ್ಲದ ರಸ್ತೆಗಳು—ಬರಿದೂ ನಿರ್ಜನವೂ ಆದ, ನಿವಾಸಿಗಳಿಲ್ಲದ ಒಂದು ನಗರದಲ್ಲಿ, ಇವೆಲ್ಲವೂ ಉತ್ತಮ ಸ್ಥಿತಿಯಲ್ಲಿ ರಕ್ಷಿಸಲ್ಪಟ್ಟಿವೆ. ಇದು ಎಲ್ಲಿ ಸಮಯವು ಕದಲದೆ ನಿಂತಂತೆ ತೋರುತ್ತದೋ ಆ ಪಾಂಪೆಯಾಗಿದೆ.
1,900 ವರ್ಷಗಳಿಗಿಂತಲೂ ಹೆಚ್ಚು ಹಿಂದೆ ಆ ವಿಪತ್ತಿನ ದಿನದಲ್ಲಿ—ಯಾವುದು ನೇಪಲ್ಸ್ ಕೊಲ್ಲಿಯನ್ನು ನೋಡುವಂತಿತ್ತೋ ಆ ಜ್ವಾಲಾಮುಖಿಯಾದ ಮೌಂಟ್ ವೆಸೂವೀಯಸ್ ಹೊರಚಿಮ್ಮಿದಾಗ—ಪ್ರತಿಯೊಂದೂ ಹೇಗಿತ್ತೋ ಹಾಗೆಯೇ ಇದೆ. ಅದು ಪಾಂಪೆ, ಹರ್ಕ್ಯಲೇನೀಯಮ್, ಸ್ಟಾಬ್ಯ ಮತ್ತು ಸುತ್ತಮುತ್ತಲಿನ ಗ್ರಾಮಪ್ರದೇಶವನ್ನು ಬೂದಿ ಮತ್ತು ಲಾವದಲ್ಲಿ ಹುಗಿಯಿತು.
“ವೆಸೂವೀಯಸ್ ಪರ್ವತದ ಜ್ವಾಲಾಮುಖಿ ಸ್ವಭಾವದ ಕುರಿತು ಪ್ರಾಚೀನ ಜನರಿಗೆ ಕೇವಲ ಒಂದು ಅಸ್ಪಷ್ಟ ಕಲ್ಪನೆಯಿತ್ತು ಮತ್ತು ಎಲ್ಲಿ ದಟ್ಟವಾದ ಕಾಡುಗಳು ಅಲ್ಲಲ್ಲಿ ಸಂತೋಷಗೊಳಿಸುವ ದ್ರಾಕ್ಷಿ ತೋಟಗಳೊಂದಿಗೆ ಇದ್ದವೋ ಆ ಒಂದು ಹಚ್ಚಹಸಿರಿನ ಪರ್ವತವನ್ನಾಗಿ ಅದನ್ನು ಪರಿಗಣಿಸುವುದು ವಾಡಿಕೆಯಾಗಿತ್ತು” ಎಂದು ಪಾಂಪೆ ಪುಸ್ತಕವು ಹೇಳುತ್ತದೆ. ಆದರೆ ಸಾ.ಶ. 79, ಆಗಸ್ಟ್ 24ರಂದು, ಅನೇಕ ವರ್ಷಗಳ ನಿಶ್ಶಬ್ದತೆಯ ಅನಂತರ, ಆ ಪರ್ವತವು ಒಂದು ಭಾರಿ ಸ್ಫೋಟದೊಂದಿಗೆ ಎಚ್ಚರಗೊಂಡಿತು.
ಸಾ.ಶ. 79ರ ಹೊರಚಿಮ್ಮುವಿಕೆ
ಆ ಜ್ವಾಲಾಮುಖಿಯು, ಆಕಾಶವನ್ನು ಕತ್ತಲಾಗಿಸಿದ ಅನಿಲ, ಮ್ಯಾಗ್ಮಾ, ಮತ್ತು ಭಗ್ನಾವಶೇಷಗಳ ರಾಶಿಯನ್ನು ಕಾರಿತು ಮತ್ತು ಬೂದಿ ಹಾಗೂ ಲೇಪಿಲಿಯ (ಲಾವದ ಸಣ್ಣ ತುಂಡುಗಳು) ಭಯಂಕರವಾದೊಂದು ಮಳೆಯನ್ನು ಉಂಟುಮಾಡಿತು. ಎರಡು ದಿನಗಳೊಳಗೆ ಪಾಂಪೆ ಮತ್ತು ಗ್ರಾಮಪ್ರದೇಶದ ಒಂದು ವ್ಯಾಪಕವಾದ ಕ್ಷೇತ್ರವು—ಸರಾಸರಿ ಎರಡೂವರೆ ಮೀಟರುಗಳಷ್ಟು ಆಳದ—ಒಂದು ದಪ್ಪವಾದ ಪದರದಿಂದ ಆವರಿಸಲ್ಪಟ್ಟಿತು. ಉಗ್ರ ಕಂಪನಗಳು ನೆಲವನ್ನು ಅಲುಗಾಡಿಸುತ್ತಾ ಮುಂದುವರಿದಂತೆ, ಅದೃಶ್ಯ ಆದರೆ ಮಾರಕವಾದ, ವಿಷಕಾರಕ ಅನಿಲಗಳ ಒಂದು ದೈತ್ಯಾಕಾರದ ಮೋಡವು, ವಿನಾಶಕರ ಆಲಿಂಗನದೊಂದಿಗೋ ಎಂಬಂತೆ ಆ ನಗರವನ್ನು ಸುತ್ತುವರಿಯಿತು. ಪಾಂಪೆಯು ನಿಧಾನವಾಗಿ ಹುಗಿಯಲ್ಪಡುತ್ತಿದ್ದಾಗ, ಹರ್ಕ್ಯಲೇನೀಯಮ್ ಕ್ಷಣಮಾತ್ರದಲ್ಲಿ ಕಣ್ಮರೆಯಾಯಿತು. ರೀಸ್ಕೋಪ್ರೀರ ಪಾಂಪೇಈ (ಪಾಂಪೆಯನ್ನು ಪುನರ್‌ಅವಿಷ್ಕರಿಸುವುದು) ಎಂಬ ಪುಸ್ತಕಕ್ಕನುಸಾರ, ಹರ್ಕ್ಯಲೇನೀಯಮ್ “ದಡದ ಹತ್ತಿರ ಇಪ್ಪತ್ತೆರಡು ಮೀಟರು [72 ಅಡಿ]ಗಳಷ್ಟು ಆಳಕ್ಕೆ ತಲಪಿದ ಕೆಸರು ಮತ್ತು ಜ್ವಾಲಾಮುಖಿ ಭಗ್ನಾವಶೇಷಗಳಲ್ಲಿ”ನ ಪ್ರವಾಹದಲ್ಲಿ ಮುಳುಗಿಹೋಯಿತು.
ಪಾಂಪೆಯ ಸುಮಾರು 15,000 ನಿವಾಸಿಗಳ ಪ್ರತಿಕ್ರಿಯೆಗಳು ನಾನಾವಿಧವಾಗಿದ್ದವು. ತತ್‌ಕ್ಷಣವೇ ಓಡಿಹೋದವರು ಮಾತ್ರ ತಮ್ಮನ್ನು ರಕ್ಷಿಸಿಕೊಳ್ಳಲು ಶಕ್ತರಾದರು. ಕೆಲವರಾದರೋ, ತಮ್ಮ ಮನೆಗಳನ್ನು ಮತ್ತು ತಾವು ಪಡೆದಿದ್ದ ವಸ್ತುಗಳೆಲ್ಲವನ್ನು ತೊರೆಯಲು ಬಯಸದೆ, ಅಪಾಯದಿಂದ ತಪ್ಪಿಸಿಕೊಳ್ಳುವ ಆಶೆಯಿಂದ ಹಿಂದೆ ಉಳಿದರು. ಇತರರು, ತಮ್ಮ ಬಹುಮೌಲ್ಯದ ವಸ್ತುಗಳನ್ನು ಕಾಪಾಡಲು ಅತ್ಯಾಸೆಯುಳ್ಳವರಾಗಿ, ಓಡಿಹೋಗಲು ನಿರ್ಧರಿಸುವ ಮುನ್ನ ಹಿಂಜರಿದರು, ಆದರೆ ಬೂದಿಯ ಭಾರದಿಂದ ಕುಸಿದುಬಿದ್ದ, ತಮ್ಮ ಮನೆಗಳ ಚಾವಣಿಗಳಿಂದ ಕೇವಲ ಸಾಯಲಿಕ್ಕಾಗಿಯೇ.
ಒಂದು ಉದಾಹರಣೆಯು, ಸ್ಪಷ್ಟವಾಗಿ ಯಾರು ತನ್ನ ಐಶ್ವರ್ಯವನ್ನು ತೊರೆಯಲು ಬಯಸಲಿಲ್ಲವೋ ಆ “ಲ್ಯಾಟಿನ್ ಗ್ರಾಮದೇವತೆಯ ಮನೆ”ಯ ಒಡತಿಯದ್ದಾಗಿದೆ. ರಾಬರ್ ಏಟ್ಯನ್, ಲಾ ವೀ ಕಾಟೇಡ್ಯನ್ ಆ ಪಾಂಪೇ (ಪಾಂಪೆಯಲ್ಲಿನ ದಿನನಿತ್ಯ ಜೀವನ) ಎಂಬ ತಮ್ಮ ಪುಸ್ತಕದಲ್ಲಿ ಹೇಳುವುದು, “ಅತ್ಯವಸರದಿಂದ ಆ ಮನೆಯ ಹೆಂಗಸು ತನ್ನ ಅತ್ಯಂತ ಬೆಲೆಬಾಳುವ ಆಭರಣಗಳನ್ನು—ಸರ್ಪರೂಪದಲ್ಲಿರುವ ಚಿನ್ನದ ಕೈಬಳೆಗಳು, ಉಂಗುರಗಳು, ಹೇರ್‌ಪಿನ್‌ಗಳು, ಕಿವಿಯೋಲೆಗಳು, ಒಂದು ಬೆಳ್ಳಿಯ ಕನ್ನಡಿ, ಒಂದು ಚೀಲದ ತುಂಬ ಚಿನ್ನದ ನಾಣ್ಯಗಳು—ಒಟ್ಟುಮಾಡಿಕೊಂಡು, ಓಡಿಹೋಗಲು ಸಿದ್ಧಳಾದಳು.” ಪ್ರಾಯಶಃ ಬೀಳುತ್ತಿದ್ದ ಬೂದಿಯಿಂದ ಭಯಭೀತಳಾಗಿ, ಆಕೆ ಒಳಗೆ ಉಳಿದಳು. ಏಟ್ಯನ್ ಮುಂದುವರಿಸುವುದು, “ಸ್ವಲ್ಪ ಸಮಯದ ಅನಂತರ, ಆ ನಿಸ್ಸಹಾಯಕ ಮಹಿಳೆಯನ್ನು ಮತ್ತು ಆಕೆಯ ನಿಧಿಗಳನ್ನು ಹುಗಿದುಬಿಡುತ್ತಾ, ಆ ಚಾವಣಿಯು ಕುಸಿದುಬಿತ್ತು.” ಇತರರು ಎಲ್ಲೆಡೆಯಲ್ಲೂ ಪಸರಿಸಿದ ವಿಷಕಾರಕ ಅನಿಲಗಳಿಂದ ಶ್ವಾಸಬಂಧಿತರಾದರು.
ಹಿಂಜರಿದವರು ತಮ್ಮ ಜೀವಗಳನ್ನು ಕಾಪಾಡಿಕೊಳ್ಳಲಿಕ್ಕಾಗಿ, ಈ ಮಧ್ಯೆ ಲಾವ ಬೂದಿಯಿಂದ ರೂಪುಗೊಂಡಿದ್ದ ಪದರದ ಮೇಲೆ ಓಡಬೇಕಾಗಿತ್ತು. ಮಾರಕ ಅನಿಲವನ್ನು ಒಳಸೇದಿದ ಕಾರಣ ಉಸಿರುಕಟ್ಟಿಸಲ್ಪಟ್ಟು ಅವರು ಬಿದ್ದ ಸ್ಥಳದಲ್ಲೇ ಸತ್ತುಹೋದರು ಮತ್ತು ಸೂಕ್ಷ್ಮ ಬೂದಿಯ ಸತತವಾದ ಮಳೆಯ ಫಲಿತಾಂಶವಾಗಿ ಆವರಿಸಲ್ಪಟ್ಟರು. ಇನ್ನೂ ಅವರ ಮಗ್ಗುಲಲ್ಲಿ ಬಿದ್ದಿರುವ ಅವರ ಬೆಲೆಬಾಳುವ ವಸ್ತುಗಳೊಂದಿಗೆ, ಅವರ ಕರುಣಾಜನಕ ಅವಶೇಷಗಳು ಶತಮಾನಗಳ ಅನಂತರ ಕಂಡುಹಿಡಿಯಲ್ಪಟ್ಟವು. ಆ ನಗರ ಮತ್ತು ಅದರ ನಿವಾಸಿಗಳು 20 ಅಡಿಗಳಿಗಿಂತಲೂ ಹೆಚ್ಚು ಆಳದ ಬೂದಿಯ ಒಂದು ಪದರದ ಕೆಳಗೆ ಹುಗಿಯಲ್ಪಟ್ಟಿದ್ದರು.
ಆದರೂ, ಆ ವಿನಾಶಕಾರಕ ಮಳೆಯ ಫಲವಾಗಿ ಆ ನಗರದ ನಿವಾಸಿಗಳೂ ಪುನಃ ಕಾಣಿಸಿಕೊಂಡಿದ್ದಾರೆ. ಅದು ಹೇಗೆಂಬುದು ನಿಮಗೆ ಗೊತ್ತೋ? ಈ ಪುಟದಲ್ಲಿರುವ ಛಾಯಾಚಿತ್ರದಲ್ಲಿನ ಅವರ ದೇಹಗಳ ಎರಕದಚ್ಚುಗಳನ್ನು ಅವಲೋಕಿಸಿರಿ. ಅವುಗಳು ಹೇಗೆ ಮಾಡಲ್ಪಟ್ಟವು? ಕೊಳೆತುಹೋಗಿರುವ ಮಾಂಸದ ಮೂಲಕ ಬೂದಿಯಲ್ಲಿ ಬಿಡಲ್ಪಟ್ಟ ಖಾಲಿ ಜಾಗದೊಳಕ್ಕೆ ಪ್ಲ್ಯಾಸ್ಟರ್ ಆಫ್ ಪ್ಯಾರಿಸನ್ನು ಹೊಯ್ಯುವ ಮೂಲಕ, ಭೂಸಂಶೋಧನಶಾಸ್ತ್ರಜ್ಞರು, ಸಹಾಯಶೂನ್ಯ ಬಲಿಪಶುಗಳ ಅಂತಿಮ ದಾರುಣ ಯಾತನೆಯ ಭಾವಗಳನ್ನು—“ತನ್ನ ತಲೆಯನ್ನು ತನ್ನ ತೋಳುಗಳ ಮೇಲೆ ಇಟ್ಟುಕೊಂಡು ಮಲಗಿರುವ ಒಬ್ಬ ಯುವ ಸ್ತ್ರೀ; ಧೂಳು ಮತ್ತು ವಿಷಕಾರಕ ಅನಿಲಗಳ ಒಳಸೆಳೆದುಕೊಳ್ಳುವಿಕೆಯನ್ನು ತಡೆಗಟ್ಟಲಿಕ್ಕೆ ಸಾಧ್ಯವಾಗದ ಕೈವಸ್ತ್ರದಿಂದ ತನ್ನ ಬಾಯಿಯನ್ನು ಮುಚ್ಚಿಕೊಂಡಿರುವ ಒಬ್ಬ ಮನುಷ್ಯ; ನೂಕುನುಗ್ಗಲುಗಳ ಮತ್ತು ಉಸಿರುಕಟ್ಟುವಿಕೆಯ ಸೆಡೆತಗಳ ಅಸಂಗತ ಭಂಗಿಗಳಲ್ಲಿ ಬಿದ್ದಿರುವ, ಸಾರ್ವಜನಿಕ ಸ್ನಾನಗೃಹಗಳ ಸೇವಕರು; . . . ಮರುಕಹುಟ್ಟಿಸುವ ಮತ್ತು ನಿಷ್ಪ್ರಯೋಜಕವಾದ ಒಂದು ಕೊನೆಯ ಆಲಿಂಗನದಲ್ಲಿ ತನ್ನ ಪುಟ್ಟ ಮಗಳನ್ನು ತಬ್ಬಿಕೊಂಡಿರುವ ಒಬ್ಬ ತಾಯಿ”—ನೋಡಲು ನಮಗೆ ಸಾಧ್ಯಮಾಡಿದ್ದಾರೆ.—ಆರ್‌ಕೇಓ.
ಹರ್ಕ್ಯಲೇನೀಯಮ್‌ನಲ್ಲಿ ರಕ್ಷಣೆಯಿಲ್ಲ
ಪಾಂಪೆಯಿಂದ ಕೆಲವೊಂದು ಕಿಲೋಮೀಟರುಗಳಷ್ಟು ದೂರದಲ್ಲಿರುವ ಹರ್ಕ್ಯಲೇನೀಯಮ್‌ನಲ್ಲಿ, ತತ್‌ಕ್ಷಣವೇ ಓಡಿಹೋಗದವರು ತಾವು ಸಿಕ್ಕಿಕೊಂಡಿರುವುದಾಗಿ ಕಂಡುಕೊಂಡರು. ಪ್ರಾಯಶಃ ಸಮುದ್ರದ ಮೂಲಕ ತಪ್ಪಿಸಿಕೊಳ್ಳುವುದಕ್ಕಾಗಿ ಆಶಿಸುತ್ತಾ, ಅನೇಕರು ಕಡಲದಂಡೆಯೆಡೆಗೆ ತರಾತುರಿಯಿಂದ ಹೋದರು, ಆದರೆ ಒಂದು ಉಗ್ರ ಸಮುದ್ರಕಂಪನವು, ದೋಣಿಗಳನ್ನು ದಡದಿಂದ ಬಿಡುವುದನ್ನು ತಡೆಯಿತು. ಹರ್ಕ್ಯಲೇನೀಯಮ್‌ನಲ್ಲಿನ ಪುರಾತನ ಕಡಲ ದಂಡೆಯ ಇತ್ತೀಚಿನ ಅಗೆಯುವಿಕೆಗಳು, 300ಕ್ಕಿಂತಲೂ ಹೆಚ್ಚಿನ ಅಸ್ಥಿಪಂಜರಗಳನ್ನು ಅವಿಷ್ಕರಿಸಿವೆ. ಈ ಜನರು, ಯಾವುದರಿಂದ ಸಮುದ್ರವು ಕಾಣುತ್ತಿತ್ತೋ, ಆ ತಾರಸಿಯ ಕೆಳಗೆ ಆಶ್ರಯವನ್ನು ಪಡೆದುಕೊಂಡಂತೆ, ಕೆಸರು ಮತ್ತು ಜ್ವಾಲಾಮುಖಿಯ ಭಗ್ನಾವಶೇಷಗಳ ಭಯಂಕರವಾದ ಒಂದು ಪ್ರವಾಹದಿಂದ ಜೀವಂತವಾಗಿ ಹುಗಿಯಲ್ಪಟ್ಟರು. ಇಲ್ಲಿ ಕೂಡ, ಅನೇಕರು ತಮ್ಮ ಅತ್ಯಂತ ಬೆಲೆಬಾಳುವ ಸ್ವತ್ತುಗಳನ್ನು—ಚಿನ್ನದ ಆಭರಣಗಳು, ಬೆಳ್ಳಿ ಪಾತ್ರೆಗಳು, ಶಸ್ತ್ರಚಿಕಿತ್ಸಾ ಉಪಕರಣಗಳ ಒಂದು ಸಂಪೂರ್ಣ ಸಜ್ಜು—ಕಾಪಾಡಿಕೊಳ್ಳಲು ಪ್ರಯತ್ನಿಸಿದ್ದರು, ಎಲ್ಲವೂ ಇನ್ನೂ ತಮ್ಮ ಒಡೆಯರ ಅವಶೇಷಗಳ ಹತ್ತಿರದಲ್ಲಿ ನಿಷ್ಪ್ರಯೋಜಕವಾಗಿ ಬಿದ್ದಿವೆ.
ಸಮಯವು ಕದಲದೆ ನಿಂತಿತು
ನಿಸರ್ಗದ ಶಕ್ತಿಗಳ ಮುಂದೆ, ಜೀವನದ ದೌರ್ಬಲ್ಯಕ್ಕೆ ಪಾಂಪೆ ಸ್ಫುಟವಾದ ಸಾಕ್ಷ್ಯವನ್ನು ಒದಗಿಸುತ್ತದೆ. ಲೋಕದಲ್ಲಿನ ಇತರ ಯಾವುದೇ ಭೂಸಂಶೋಧನಾ ನಿವೇಶನಕ್ಕೆ ಅಸದೃಶವಾಗಿ, ಪಾಂಪೆಯ ಮತ್ತು ಸುತ್ತುಮುತ್ತಲಿನ ಕ್ಷೇತ್ರಗಳಲ್ಲಿನ ಅವಶೇಷಗಳು, ಆಧುನಿಕ ವಿದ್ವಾಂಸರು ಮತ್ತು ಕುತೂಹಲಿಗಳನ್ನು, ಸಾ.ಶ. ಪ್ರಥಮ ಶತಮಾನದಲ್ಲಿನ ದಿನನಿತ್ಯದ ಜೀವನದ ಬಗ್ಗೆ ಸೂಕ್ಷ್ಮಪರಿಶೀಲನೆ ಮಾಡಲು ಶಕ್ತರನ್ನಾಗಿ ಮಾಡುವ ಚಿಟಿಕೆ ಚಿತ್ರವನ್ನು ಒದಗಿಸುತ್ತವೆ.
ಆ ಸ್ಥಳದ ಸಮೃದ್ಧಿಯು, ಮುಖ್ಯವಾಗಿ ಬೇಸಾಯ, ಕೈಗಾರಿಕೆ ಮತ್ತು ವಾಣಿಜ್ಯದ ಮೇಲೆ ಆಧಾರಿತವಾಗಿತ್ತು. ಮಾನವಶಕ್ತಿಯ ತೀಕ್ಷ್ಣ ಉದ್ಯೋಗದಿಂದ—ದಿನಾಲೂ ದಾಸರು ಮತ್ತು ಸ್ವತಂತ್ರ ಪ್ರಜೆಗಳನ್ನು ಕೂಲಿಗಿಟ್ಟುಕೊಳ್ಳಲಾಗುತ್ತಿತ್ತು—ಫಲವತ್ತಾದ ಗ್ರಾಮಪ್ರದೇಶವು ಪುಷ್ಕಳವಾಗಿ ಉತ್ಪಾದಿಸಿತು. ನಗರದ ಹೆಚ್ಚಿನ ಚಟುವಟಿಕೆಗಳು ಆಹಾರ ಕಚ್ಚಾ ಪದಾರ್ಥಗಳ ವ್ಯಾಪಾರಕ್ಕೆ ಸಂಬಂಧಿಸಿದ್ದವು. ಪಾಂಪೆಯನ್ನು ಸಂದರ್ಶಿಸುವ ಯಾವನೂ ದವಸಧಾನ್ಯಗಳನ್ನು ಬೀಸಲಿಕ್ಕಾಗಿರುವ ಗಿರಣಿಗಳು, ತರಕಾರಿ ಮಾರುಕಟ್ಟೆ, ಮತ್ತು ಹಣ್ಣುಹಂಪಲು ಮತ್ತು ದ್ರಾಕ್ಷಾಮದ್ಯವನ್ನು ಮಾರುವವರ ಅಂಗಡಿಗಳನ್ನು ಇನ್ನೂ ಅವಲೋಕಿಸಸಾಧ್ಯವಿದೆ. ಒಮ್ಮೆ ವಾಣಿಜ್ಯಕ್ಕಾಗಿ—ಉಣ್ಣೆ ಮತ್ತು ನಾರನ್ನು ಸಂಸ್ಕರಿಸುವುದಕ್ಕಾಗಿ ಹಾಗೂ ಕೈಗಾರಿಕಾ ಮಟ್ಟದಲ್ಲಿ ಬಟ್ಟೆಯನ್ನು ನೂಲುವುದಕ್ಕಾಗಿ ಮತ್ತು ನೇಯುವುದಕ್ಕಾಗಿ—ಉಪಯೋಗಿಸಲ್ಪಟ್ಟ ಕಟ್ಟಡಗಳನ್ನೂ ನೀವು ನೋಡಬಲ್ಲಿರಿ. ಡಸನ್‌ಗಟ್ಟಲೆ ಸಣ್ಣ ಪ್ರಮಾಣದ ಇತರ ಕೈಗಾರಿಕೆಗಳೊಂದಿಗೆ, ಆಭರಣ ಕಾರ್ಖಾನೆಯಿಂದ ಹಿಡಿದು ಕಬ್ಬಿಣ ಸಾಮಾನುಗಳ ಅಂಗಡಿಯ ತನಕ, ಮನೆಗಳೊಂದಿಗೆ ಈ ಕಟ್ಟಡಗಳು, ಒಂದು ನಗರವನ್ನು ರಚಿಸಿದವು.
ಇಕ್ಕಟ್ಟಾದ, ಒಮ್ಮೆ ಕಿಕ್ಕಿರಿದಿದ್ದ ರಸ್ತೆಗಳು ಕಲ್ಲುಬಂಡೆಗಳಿಂದ ಹಾಸಲ್ಪಟ್ಟಿವೆ. ಅವುಗಳ ಪಾರ್ಶ್ವಗಳ ಉದ್ದಕ್ಕೂ ಪಕ್ಕದಾರಿಗಳು ಮತ್ತು ತೂಗು ನಾಲೆಗಳ ಚತುರ ವ್ಯವಸ್ಥೆಯ ಮೂಲಕ ಮಾಡಲ್ಪಟ್ಟ ಸಾರ್ವಜನಿಕ ಬುಗ್ಗೆಗಳಿವೆ. ಮುಖ್ಯ ಬೀದಿಗಳ ಮೂಲೆಗಳಲ್ಲಿ ಒಂದು ಕುತೂಹಲಕಾರಿ ವಿವರವನ್ನು ನೋಡಸಾಧ್ಯವಿದೆ. ಆಧುನಿಕ ರಸ್ತೆದಾಟುವ ಅಡ್ಡದಾರಿಗಳ ಪುರಾತನ ಪೂರ್ವಜರಂತೆ, ರಸ್ತೆಗಳ ಮಧ್ಯದಲ್ಲಿ ದೊಡ್ಡ ಎತ್ತರಿಸಿದ ಕಲ್ಲುತುಂಡುಗಳು ಪಾದಚಾರಿಗಳ ಸಾಗುವಿಕೆಯನ್ನು ಸುಗಮಗೊಳಿಸಿ, ಮಳೆ ಬಂದಾಗ ಅವರ ಪಾದಗಳು ಒದ್ದೆಯಾಗುವುದನ್ನು ತಪ್ಪಿಸುವಂತೆ ಸಾಧ್ಯಮಾಡಿದವು. ನಗರದಲ್ಲಿ ಬಂಡಿಗಳನ್ನು ಓಡಿಸುವ ಯಾರಾದರೂ ಈ ಎತ್ತರಿಸಿದ ಕಲ್ಲುತುಂಡುಗಳನ್ನು ತಪ್ಪಿಸಿಕೊಳ್ಳಲು ಸ್ವಲ್ಪ ಕೈಚಳಕವನ್ನು ಹೊಂದಿರಬೇಕಿತ್ತು. ಅವುಗಳು ಇನ್ನೂ ಅಲ್ಲಿವೆ! ಏನೊಂದೂ ಬದಲಾಗಿಲ್ಲ.
ಖಾಸಗಿ ಜೀವನ
ಪಾಂಪೆಯ ಜನರ ಖಾಸಗಿ ಜೀವಿತಗಳನ್ನು ಸುತ್ತುವರಿದಿದ್ದ ಸಂಕೋಚಭಾವವು ಕೂಡ, ಆಧುನಿಕ ಕಾಲಗಳಲ್ಲಿ ಜನರಿಂದ ಅನುಚಿತವಾದ ದಿಟ್ಟಿಸಿ ನೋಡುವಿಕೆಯನ್ನು ತಡೆಯುವುದಿಲ್ಲ. ಒಬ್ಬ ಖಡ್ಗಮಲ್ಲನ ಸಿಪಾಯಿ ಮನೆಯಲ್ಲಿ, ಅತ್ಯುತ್ಕೃಷ್ಟ ಆಭರಣವನ್ನು ತೊಟ್ಟುಕೊಂಡಿರುವ ಒಬ್ಬ ಮಹಿಳೆಯು, ಅವನ ಬಾಹುವಿನಲ್ಲಿ ಸತ್ತುಹೋಗಿರುವುದನ್ನು ಒಬ್ಬನು ನೋಡಸಾಧ್ಯವಿದೆ. ಮನೆಗಳ ಮತ್ತು ಅಂಗಡಿಗಳ ಬಾಗಿಲುಗಳು ರಭಸದಿಂದ ಅಗಲವಾಗಿ ತೆರೆದುಕೊಂಡಿವೆ. ಬೆಂಕಿ ಗೂಡುಗಳಲ್ಲಿನ ಬಾಣಲೆಗಳು, ಗೂಡುಒಲೆಯಲ್ಲಿ ಇನ್ನೂ ಬೆಂದಿರದ ಬ್ರೆಡ್, ಮತ್ತು ಗೋಡೆಗೆ ಒರಗಿರುವ ದೊಡ್ಡ ಜಾಡಿಗಳೊಂದಿಗೆ, ಈಗ ತಾನೇ ಕೆಲವೊಂದು ನಿಮಿಷಗಳ ಹಿಂದೆ ತೊರೆಯಲ್ಪಟ್ಟಿವೆಯೋ ಎಂಬಂತೆ ಅಡಿಗೆಕೋಣೆಗಳು ಪ್ರದರ್ಶಿಸಲ್ಪಟ್ಟಿವೆ. ಎಲ್ಲಿ ಆಶ್ಚರ್ಯಕರವಾಗಿ ಕೌಶಲಭರಿತವಾದ ಬೆಳ್ಳಿ ಬಟ್ಟಲುಗಳನ್ನು ಮತ್ತು ಪಾತ್ರೆಗಳನ್ನು ಉಪಯೋಗಿಸುತ್ತಾ, ಐಶ್ವರ್ಯವಂತರು ಹಾಯಾಗಿ ಔತಣದೂಟ ಮಾಡಿದರೋ ಅಂಥ ಗಾರೆಕೆಲಸ, ಗೋಡೆಯ ವರ್ಣಚಿತ್ರಗಳು, ಮತ್ತು ಶಬಲ ಖಚಿತ ಚಿತ್ರಗಳಿಂದ (ಮೊಸೇಯಿಕ್) ಅಲಂಕರಿಸಲ್ಪಟ್ಟ ಕೋಣೆಗಳಿವೆ. ಪ್ರಶಾಂತ ಒಳತೋಟಗಳು, ವೃಕ್ಷಪಂಕ್ತಿಗಳಿಂದ ಸುತ್ತುವರಿಯಲ್ಪಟ್ಟಿವೆ ಮತ್ತು ಈಗ ಸ್ತಬ್ಧವಾಗಿರುವ ನಲಿವಿನ ಬುಗ್ಗೆಗಳಿಂದ ಶೃಂಗರಿಸಲ್ಪಟ್ಟಿವೆ. ಮನೋಜ್ಞ ಕೃತಿಚಾತುರ್ಯದ ಅಮೃತಶಿಲೆ ಮತ್ತು ಕಂಚಿನ ಪ್ರತಿಮೆಗಳನ್ನೂ ಮತ್ತು ಕುಟುಂಬ ದೇವತೆಗಳ ವೇದಿಕೆಗಳನ್ನು ನೋಡಸಾಧ್ಯವಿದೆ.
ಆದರೂ, ಹೆಚ್ಚಿನವರ ಜೀವನ ಶೈಲಿಯು ಅತ್ಯಧಿಕವಾಗಿ ಸಭ್ಯವಾಗಿತ್ತು. ಮನೆಯಲ್ಲಿ ಅಡಿಗೆಮಾಡುವ ಸೌಕರ್ಯಗಳನ್ನು ಹೊಂದಿದ್ದಿರದ ಅನೇಕರು, ಹಲವಾರು ಮದ್ಯದಂಗಡಿಗಳಿಗೆ ಅಡಿಗಡಿಗೆ ಹೋಗುತ್ತಿದ್ದರು. ಅಲ್ಲಿ ಅವರು ಹೆಚ್ಚಿನ ಹಣಪಾವತಿಮಾಡದೆ, ಹರಟೆಹೊಡೆಯಲು, ಜೂಜಾಡಲು, ಅಥವಾ ಆಹಾರ ಮತ್ತು ಮದ್ಯಪಾನವನ್ನು ಕೊಂಡುಕೊಳ್ಳಸಾಧ್ಯವಿತ್ತು. ಇವುಗಳಲ್ಲಿ ಕೆಲವು ವೇಶ್ಯಾಗೃಹದ ಸ್ಥಳಗಳಾಗಿದ್ದಿರಬೇಕು; ಅಲ್ಲಿ ಪರಿಚಾರಿಕೆಯರು—ಅನೇಕ ವೇಳೆ ದಾಸಿಯರು—ಗಿರಾಕಿಗಳಿಗೆ ಮದ್ಯಪಾನಗಳನ್ನು ಕೊಟ್ಟ ಅನಂತರ, ವೇಶ್ಯೆಯರಾಗಿ ಕೆಲಸಮಾಡಿದರು. ಈ ರೀತಿಯ ಅಸಂಖ್ಯಾತ ಮದ್ಯದಂಗಡಿಗಳ ಹೊರತೂ, ಅನೇಕ ವೇಳೆ ತುಂಬ ಅಶ್ಲೀಲವಾದ ವರ್ಣಚಿತ್ರಗಳಿಂದ ಮತ್ತು ಬರಹಗಳಿಂದ ನಿರೂಪಿಸಿರುವ, ಇಪ್ಪತ್ತಕ್ಕೂ ಹೆಚ್ಚಿನ ಇತರ ವೇಶ್ಯಾಗೃಹಗಳನ್ನು ಭೂಸಂಶೋಧನೆಯು ಹೊರಗೆಡವಿದೆ.
ಕ್ರಿಯೆಕೈಕೊಳ್ಳಲು ಇದು ಸಮಯವಾಗಿದೆ
ಪಾಂಪೆಯ ಅನಿರೀಕ್ಷಿತ ವಿನಾಶವು ಒಬ್ಬರನ್ನು ಆಲೋಚಿಸುವಂತೆ ಮಾಡುತ್ತದೆ. ವ್ಯಕ್ತವಾಗಿಯೇ, ಅಲ್ಲಿ ನಾಶವಾದ ಸಾವಿರಾರು ಜನರು, ಸನ್ನಿಹಿತವಾಗಿದ್ದ ವಿಪತ್ತಿನ ಎಚ್ಚರಿಕೆಯ ಸೂಚನೆಗಳಿಗೆ—ಪದೇ ಪದೇ ಆದ ಭೂಕಂಪಗಳು, ಜ್ವಾಲಾಮುಖಿಯ ಸ್ಫೋಟಗಳು, ಮತ್ತು ಭಯಂಕರ ಲೇಪಿಲಿಯ ಮಳೆಗೆ—ಸಾಕಷ್ಟು ಚುರುಕುತನದಿಂದ ಪ್ರತಿಕ್ರಿಯಿಸಲಿಲ್ಲ. ಪ್ರಾಯಶಃ ತಮ್ಮ ಸುಖಸೌಕರ್ಯದ ಜೀವನ ಹಾಗೂ ತಮ್ಮ ಸ್ವತ್ತುಗಳನ್ನು ಬಿಟ್ಟುಕೊಡಲು ಬಯಸದಿದ್ದುದರಿಂದಲೇ ಅವರು ಹಿಂಜರಿದರು. ಅಪಾಯವು ದಾಟಿಹೋಗಬಹುದೆಂದು ಅಥವಾ ಪರಿಸ್ಥಿತಿಗಳು ಹೆಚ್ಚು ಕೆಟ್ಟುಹೋಗುವುದಾದರೆ ಓಡಿಹೋಗಲು ಇನ್ನೂ ಸಮಯವಿರುವುದು ಎಂದು ಅವರು ಆಶಿಸಿದ್ದಿರಬಹುದು. ವಿಷಾದನೀಯವಾಗಿ, ಅವರು ತಪ್ಪಾಗಿ ಎಣಿಸಿದ್ದರು.
ಇಂದು ಇಡೀ ಲೋಕವು ತದ್ರೀತಿಯ ಒಂದು ಪರಿಸ್ಥಿತಿಯಲ್ಲಿದೆ ಎಂದು ಶಾಸ್ತ್ರವಚನಗಳು ನಮಗೆ ತಿಳಿಸುತ್ತವೆ. ನಾವು ಜೀವಿಸುವ ಈ ಭ್ರಷ್ಟ ಸಮಾಜವು ದೇವರಿಂದ ದೂರವಾಗಿದೆ. ಅದು ಥಟ್ಟನೆ ನಿರ್ಮೂಲವಾಗುವುದರಲ್ಲಿದೆ. (2 ಪೇತ್ರ 3:10-12; ಎಫೆಸ 4:17-19) ಈ ಎಲ್ಲ ಪುರಾವೆಯು ಸಮಯವು ನಿಕಟವಾಗಿದೆ ಎಂಬುದನ್ನು ಸೂಚಿಸುತ್ತದೆ. (ಮತ್ತಾಯ 24:3-42; ಮಾರ್ಕ 13:3-37; ಲೂಕ 21:7-36) ಮತ್ತು ಪಾಂಪೆಯ ದುರಂತಮಯ ಅವಶೇಷಗಳು, ಅನಿರ್ಧಾರದ ಮೂರ್ಖತನಕ್ಕೆ ಒಂದು ಮೂಕಸಾಕ್ಷಿಯೋಪಾದಿ ನಿಂತಿವೆ.
[ಪುಟ 31 ರಲ್ಲಿರುವ ಚೌಕ]
ಕ್ರೈಸ್ತ ಶಿಲುಬೆಗಳೋ?
ರೊಟ್ಟಿಯಂಗಡಿಯ ಗೋಡೆಯ ಮೇಲಿನ ಗಾರೆಕೆಲಸದಲ್ಲಿ ಒಂದನ್ನು ಸೇರಿಸಿ, ಪಾಂಪೆಯಲ್ಲಿ ಪುನಃ ಕಂಡುಹಿಡಿದ ಹಲವಾರು ಶಿಲುಬೆಗಳು, ಸಾ.ಶ. 79ರಲ್ಲಿ ಆ ನಗರವು ನಾಶವಾಗುವುದಕ್ಕೆ ಮುಂಚೆ ಅದರಲ್ಲಿ ಕ್ರೈಸ್ತರ ಉಪಸ್ಥಿತಿಯ ಪುರಾವೆಯಾಗಿ ಕೆಲವರಿಂದ ಅರ್ಥವಿವರಣೆಮಾಡಲ್ಪಟ್ಟಿವೆ. ಇದು ಒಂದು ನ್ಯಾಯಸಮ್ಮತವಾದ ಊಹೆಯಾಗಿದೆಯೋ?
ಸ್ಫುಟವಾಗಿಯೂ ಇಲ್ಲ. ಆನ್‌ಟೊನ್ಯೋ ವಾರೋನೆ, ಪ್ರೀಸೆನ್ಸೆ ಗ್ವೀಡಾಈಕೆ ಏ ಕ್ರೀಸ್ಟ್ಯಾನೇ ಆ ಪಾಂಪೇ (ಪಾಂಪೆಯಲ್ಲಿನ ಯೆಹೂದಿ ಮತ್ತು ಕ್ರೈಸ್ತರ ಉಪಸ್ಥಿತಿಗಳು) ಎಂಬ ತನ್ನ ಪುಸ್ತಕದಲ್ಲಿ ಹೇಳುವುದು, “ಶಿಲುಬೆಯ ಸಕಲ ಆವಶ್ಯಕ ವೈಶಿಷ್ಟ್ಯಗಳ ಪಂಥವನ್ನು ಒಂದು ವಿಷಯವಸ್ತುವಾಗಿ” ಕಂಡುಕೊಳ್ಳಲು ನಾವು ಬಯಸುವಲ್ಲಿ, “ಸಮ್ರಾಟ ಮತ್ತು ವಿಧರ್ಮಿ ಜನಸಮೂಹದ ಮತಾಂತರವು ಪೂಜ್ಯಭಾವನೆಯ ಆರೋಪವನ್ನು ತಮ್ಮ ಆತ್ಮಿಕತೆಯೊಂದಿಗೆ ಹೆಚ್ಚು ಹೊಂದಿಸಿಕೊಂಡ ನಾಲ್ಕನೆಯ ಶತಮಾನದ ತನಕ ನಾವು ಕಾಯಬೇಕು.” “ಎರಡು ಮತ್ತು ಮೂರನೆಯ ಶತಮಾನಗಳಲ್ಲಿ ಕೂಡ ಮತ್ತು ಕಾನ್‌ಸ್ಟಂಟೈನ್‌ನ ಸಮಯದ ತನಕ, ಕ್ರೈಸ್ತತ್ವಕ್ಕೆ ಸಂಬಂಧಿಸಿದ ಅಂಥ ಒಂದು ಚಿಹ್ನೆಯನ್ನು ಕಂಡುಕೊಳ್ಳುವುದು ತೀರ ವಿರಳವಾಗಿದೆ” ಎಂದು ವಾರೋನೆ ಕೂಡಿಸುತ್ತಾರೆ.
ಅವರು ಕ್ರೈಸ್ತರಾಗಿರದಿರುವಲ್ಲಿ, ಅಂಥ ಚಿಹ್ನೆಗಳು ಯಾವ ಮೂಲವನ್ನು ಹೊಂದಿವೆ? ಒಂದು ಶಿಲುಬೆಯೆಂದೆಣಿಸಲ್ಪಟ್ಟ ಈ ಚಿಹ್ನೆಯ ಗುರುತು ಸ್ಥಾಪನೆಯ ಕುರಿತ ಸಂದೇಹಗಳಲ್ಲದೆ, ಅದೇ ರೊಟ್ಟಿಯಂಗಡಿಯಲ್ಲಿ ಸರ್ಪವೊಂದರ ರೂಪದಲ್ಲಿ ಒಂದು ದೇವತೆಯ ವರ್ಣಚಿತ್ರದ ಕಂಡುಹಿಡಿತವಲ್ಲದೆ, “ಆ ರೊಟ್ಟಿಯಂಗಡಿಯ ಹಿಡುವಳಿದಾರನ ಪೂರ್ವಭಾವಿತ ಕ್ರೈಸ್ತ ಆತ್ಮಿಕತೆಯೊಂದಿಗೆ ಸಮನ್ವಯಗೊಳಿಸಲು ಕಷ್ಟಕರವೂ ಆಗಿರುವ ಕೆಲವು ವಿಪರೀತ ಅಶ್ಲೀಲ ಕಂಡುಹಿಡಿತಗಳೂ ಇವೆ” ಎಂಬುದಾಗಿ ವಾರೋನೆ ಹೇಳುತ್ತಾರೆ. ಅವರು ಕೂಡಿಸುವುದು: “ಶಿಲುಬೆಯು ವಿಮೋಚನೆಯ ಒಂದು ಸಂಕೇತವಾಗಿ ಪರಿಣಮಿಸುವುದಕ್ಕಿಂತಲೂ ಮುನ್ನ, ನಾಗರಿಕತೆಯ ಆರಂಭದಿಂದ, ಈ ಶಿಲುಬೆಯಾಕಾರದ ಲಾಂಛನವು ಸ್ಪಷ್ಟವಾಗಿ ಇಂದ್ರಜಾಲ ಮತ್ತು ಸಂಸ್ಕಾರ ಸಂಬಂಧಿತ ಪ್ರಾಮುಖ್ಯತೆಯೊಂದಿಗೆ ಉಪಯೋಗಿಸಲ್ಪಟ್ಟಿತೆಂದು ಹೇಳಲಾಗುತ್ತದೆ.” ಪುರಾತನ ಸಮಯಗಳಲ್ಲಿ ಶಿಲುಬೆಯು ದುಷ್ಟ ಪ್ರಭಾವಗಳನ್ನು ನಿವಾರಿಸಲು ಅಥವಾ ನಾಶಗೊಳಿಸಲು ಶಕ್ತವಾಗಿತ್ತೆಂದು ಪರಿಗಣಿಸಲ್ಪಟ್ಟಿತ್ತು ಮತ್ತು ಮುಖ್ಯವಾಗಿ ಒಂದು ತಾಯಿತಿಯೋಪಾದಿ ಉಪಯೋಗಿಸಲ್ಪಟ್ಟಿತ್ತು ಎಂದು ಈ ವಿದ್ವಾಂಸನು ವಿವರಿಸುತ್ತಾನೆ.
[ಪುಟ 20 ರಲ್ಲಿರುವ ಚಿತ್ರ]
ಹಿನ್ನೆಲೆಯಲ್ಲಿ ವೆಸೂವೀಯಸ್ ಪರ್ವತದೊಂದಿಗೆ ಕಲಿಗ್ಯಲನ ಕಮಾನು
[ಪುಟ 20 ರಲ್ಲಿರುವ ಚಿತ್ರ]
ಮೇಲುಗಡೆ: ಪಾಂಪೆಯ ನಿವಾಸಿಗಳ ಪ್ಲ್ಯಾಸ್ಟರ್ ಎರಕದಚ್ಚುಗಳು
ಎಡಗಡೆ: ನೀರೊವಿನ ಕಮಾನು ಮತ್ತು ಜ್ಯುಪಿಟರ್‌ನ ದೇವಾಲಯದ ಒಂದು ಭಾಗದ ನೋಟ
[Picture Credit Lines on page 19]
Vertical borders: Glazier
Photos on pages (bottom), and 19: Soprintendenza Archeologica di Pompei