ದುರ್ವಾಸನೆಯ ಉಸಿರಿನ ವಿಷಯದಲ್ಲಿ ನೀವೇನು ಮಾಡಬಲ್ಲಿರಿ?
ವಿವಿಧ ಸಂದರ್ಭಗಳಲ್ಲಿ ವಯಸ್ಕ ಜನಸಂಖ್ಯೆಯ 80ಕ್ಕಿಂತಲೂ ಹೆಚ್ಚು ಪ್ರತಿಶತ ಮಂದಿಯನ್ನು ಬಾಧಿಸುತ್ತಿರುವ ಇದನ್ನು ಲೋಕದ ಅತ್ಯಂತ ಸಾಮಾನ್ಯ ವ್ಯಾಧಿಗಳಲ್ಲಿ ಒಂದೆಂದು ಹೇಳಲಾಗುತ್ತದೆ. ಇದು ಪೇಚಾಟ, ಆಶಾಭಂಗ, ಮತ್ತು ಕಡುಸಂಕಟವನ್ನು ಉಂಟುಮಾಡಬಲ್ಲದು.
ವೃತ್ತಿಪರ ಕ್ಷೇತ್ರಗಳಲ್ಲಿ, ಲ್ಯಾಟಿನ್ ಶಬ್ದವಾದ ಹಾಲಿಟಸ್ನಿಂದ ಇದು ವ್ಯಾಪಕವಾಗಿ ಹಾಲಿಟೋಸಿಸ್ (ದುರ್ಗಂಧ ಶ್ವಾಸ) ಎಂದು ವಿದಿತವಾಗಿದ್ದು, “ಉಸಿರು” ಎಂಬರ್ಥ ಇದಕ್ಕಿದೆ ಮತ್ತು -ಓಸಿಸ್ ಎಂಬ ಪ್ರತ್ಯಯವು ಅಸಾಮಾನ್ಯ ಸ್ಥಿತಿಗೆ ಸೂಚಕವಾಗಿದೆ. ಕೆಲವರು ಇದನ್ನು ಬಾಯಿಯ ದುರ್ವಾಸನೆಯೆಂದು ಸಹ ಕರೆಯುತ್ತಾರೆ. ಆದರೆ ಅಧಿಕಾಂಶ ಜನರಿಗೆ ಇದು ಸರಳವಾಗಿ ದುರ್ವಾಸನೆಯ ಉಸಿರು ಎಂದು ತಿಳಿದಿದೆ!
ನೀವು ದುರ್ವಾಸನೆಯ ಉಸಿರನ್ನು ಹೊಂದಿದ್ದೀರೊ? ಬೇರೆ ಜನರಲ್ಲಿ ದುರ್ವಾಸನೆಯ ಉಸಿರನ್ನು ಗುರುತಿಸುವುದರಲ್ಲಿ ನಿಮಗೆ ಯಾವುದೇ ತೊಂದರೆಯು ಇಲ್ಲದಿರಬಹುದಾದರೂ, ನಿಮ್ಮ ಸ್ವಂತ ದುರ್ವಾಸನೆಯ ಉಸಿರನ್ನು ಪತ್ತೆಹಚ್ಚುವುದು ನಿಮಗೆ ಬಹುಶಃ ಅಸಾಧ್ಯ. ನಾವು ನಮ್ಮ ಸ್ವಂತ ದುರ್ವಾಸನೆಯ ಉಸಿರಿಗೆ ರೂಢಿ ಮಾಡಿಕೊಳ್ಳುವ ಪ್ರವೃತ್ತಿಯುಳ್ಳವರಾಗುತ್ತೇವೆ ಮತ್ತು “ವಿಪರೀತವಾದ ದುರ್ವಾಸನೆಯ ಉಸಿರನ್ನು ಹೊಂದಿರುವ” ಜನರು ಸಹ “ವೈಯಕ್ತಿಕವಾಗಿ ಸಮಸ್ಯೆಯ ಅರಿವುಳ್ಳವರಾಗಿಲ್ಲದಿರಬಹುದು” ಎಂದು ಅಮೆರಿಕದ ದಂತ ಸಂಘದ JADA ಪತ್ರಿಕೆಯು ವಿವರಿಸುತ್ತದೆ. ಆದುದರಿಂದಲೇ, ಬೇರೆ ಯಾರಾದರೊಬ್ಬರು ಅದನ್ನು ನಮ್ಮ ಗಮನಕ್ಕೆ ತರುವಾಗ ಮಾತ್ರವೇ, ನಮ್ಮಲ್ಲಿ ಅಧಿಕಾಂಶ ಮಂದಿ ನಮ್ಮ ಸ್ವಂತ ದುರ್ವಾಸನೆಯ ಉಸಿರಿನ ಅರಿವುಳ್ಳವರಾಗುತ್ತೇವೆ. ಎಂತಹ ಪೇಚಾಟದ ಸಂಗತಿ!
ಇದೊಂದು ವ್ಯಾಪಕವಾದ ಸಮಸ್ಯೆಯಾಗಿದೆ ಎಂಬ ವಾಸ್ತವಾಂಶವು ಸಾಂತ್ವನದ ವಿಷಯವಾಗಿರುವುದಿಲ್ಲ. ದುರ್ವಾಸನೆಯ ಉಸಿರು ಸಾಮಾನ್ಯವಾಗಿ ಅಸಹ್ಯಕರವೂ ಅನಂಗೀಕೃತವೂ ಆದುದಾಗಿ ಪರಿಗಣಿಸಲ್ಪಡುತ್ತದೆ. ಕೆಲವು ವಿದ್ಯಮಾನಗಳಲ್ಲಿ, ಇದು ಗಂಭೀರವಾದ ಭಾವನಾತ್ಮಕ ರೋಗಾವಸ್ಥೆಯನ್ನೂ ಉಂಟುಮಾಡಬಲ್ಲದು. ಇಸ್ರೇಲ್ನಲ್ಲಿನ ಟೆಲವೀವ್ ವಿಶ್ವವಿದ್ಯಾನಿಲಯದ, ಬಾಯಿಯ ಸೂಕ್ಷ್ಮದರ್ಶಕ ಜೀವಿ ಶಾಸ್ತ್ರದ ಪ್ರಯೋಗಶಾಲೆಯ ಮುಖ್ಯಸ್ಥರಾದ ಡಾ. ಮೆಲ್ ರಾಸೆನ್ಬರ್ಗ್ ವಿವರಿಸುವುದು: “ನಿಜವಾಗಿರಲಿ ಗ್ರಾಹ್ಯವಾಗಿರಲಿ, ಬಾಯಿಯ ದುರ್ವಾಸನೆಯು, ಸಾಮಾಜಿಕ ಪ್ರತ್ಯೇಕತೆ, ವಿವಾಹವಿಚ್ಛೇದ ನಡೆವಳಿಗಳು, ಮತ್ತು ಆತ್ಮಹತ್ಯೆಯ ಪರಿಭಾವನೆಗೆ ಸಹ ಮುನ್ನಡೆಸಬಲ್ಲದು.”
ದುರ್ವಾಸನೆಯ ಉಸಿರಿನ ಕುರಿತು ಏನು ವಿದಿತವಾಗಿದೆ?
ದುರ್ವಾಸನೆಯ ಉಸಿರನ್ನು, ಅನಾರೋಗ್ಯದ ಒಂದು ಭಾವೀ ನಿರ್ದೇಶಕದೋಪಾದಿ ಆರೋಗ್ಯ ವೃತ್ತಿಪರರು ಬಹಳ ದೀರ್ಘ ಸಮಯದ ಹಿಂದೆಯೇ ಗ್ರಹಿಸಿದ್ದಾರೆ. ಆ ಕಾರಣದಿಂದಲೇ, ಪುರಾತನ ಸಮಯಗಳಿಂದ ಮಾನವರ ಬಾಯಿಯ ವಾಸನೆಗಳ ಅಧ್ಯಯನವನ್ನು ವೈದ್ಯರು ಮಾಡಿದ್ದಾರೆ.
ಸುಮಾರು ಇನ್ನೂರು ವರ್ಷಗಳ ಹಿಂದೆ, ಪ್ರಖ್ಯಾತ ಫ್ರೆಂಚ್ ರಸಾಯನ ಶಾಸ್ತ್ರಜ್ಞನಾದ ಆನ್ವ್ಟಾನ್ ಲಾರಾ ಲವಾಸೀಏ, ಮಾನವ ಉಸಿರಿನ ಘಟಕಗಳ ಅಧ್ಯಯನ ಮಾಡಲಿಕ್ಕಾಗಿ ಒಂದು ಉಸಿರು ಪರೀಕಕ್ಷವನ್ನು ಕಂಡುಹಿಡಿದನು. ಅಂದಿನಿಂದ, ವಿಜ್ಞಾನಿಗಳು ಪ್ರಗತಿಗೊಂಡ ಮಾದರಿಗಳನ್ನು ವಿಕಸಿಸಿದ್ದಾರೆ. ಇಂದು, ಕೆನಡ, ಇಸ್ರೇಲ್, ಜಪಾನ್ ಮತ್ತು ನೆದರ್ಲೆಂಡ್ಸ್ನಲ್ಲಿರುವ ಪ್ರಯೋಗಶಾಲೆಗಳು, ಬಾಯಿಯಲ್ಲಿನ ಅಸಹ್ಯಕರವಾದ ವಾಸನೆಗಳ ಮಟ್ಟವನ್ನು ಅಳತೆಮಾಡುವ ಹ್ಯಾಲಿಮೀಟರನ್ನು ಉಪಯೋಗಿಸುತ್ತಿವೆ. ನ್ಯೂ ಸೀಲೆಂಡ್ನಲ್ಲಿ, ವಿಜ್ಞಾನಿಗಳು ಪಾಕ್ಲ್-ಬೆಳವಣಿಗೆ (ದಂತ ಲೋಳೆಪೊರೆ) ಕೇಂದ್ರಗಳನ್ನು—ಕೃತಕ ಬಾಯಿಗಳೆಂದು ಸಹ ವಿದಿತವಾಗಿವೆ—ವಿಕಸಿಸಿದ್ದಾರೆ. ಇವು ಜೊಲ್ಲುರಸ, ದಂತ ಲೋಳೆಪೊರೆ, ಬ್ಯಾಕ್ಟೀರಿಯ, ಮತ್ತು ದುರ್ವಾಸನೆಯ ಉಸಿರಿನೊಂದಿಗೆ, ಪ್ರತಿನಿಧಿರೂಪದ ಮಾನವ ಬಾಯಿಯಲ್ಲಿರುವಂತಹ ಪರಿಸರವನ್ನು ನಕಲುಮಾಡುತ್ತವೆ.a
ಆಧುನಿಕ ತಾಂತ್ರಿಕತೆಯ ಸಹಾಯದಿಂದ, ವಿಜ್ಞಾನಿಗಳು ನಮ್ಮ ಉಸಿರಿನ ಕುರಿತು ಹೆಚ್ಚನ್ನು ತಿಳಿದುಕೊಂಡಿದ್ದಾರೆ. ಉದಾಹರಣೆಗಾಗಿ, ಸೈಎಂಟಿಫಿಕ್ ಅಮೆರಿಕನ್ ಪತ್ರಿಕೆಗನುಸಾರ, “ಸಾಮಾನ್ಯವಾದ ಮಾನವ ಉಸಿರಿನಲ್ಲಿ ಬಾಷ್ಪವಾಗುವ ಬಹುತೇಕ 400 ಜೈವಿಕ ಸಂಯುಕ್ತಗಳನ್ನು ಸಂಶೋಧಕರು ಈಗ ಗುರುತಿಸಿದ್ದಾರೆ.” ಆದರೂ ಈ ಸಂಯುಕ್ತಗಳೆಲ್ಲವೂ ಅಸಹ್ಯವಾದ ವಾಸನೆಗಳನ್ನು ಉತ್ಪಾದಿಸುವುದಿಲ್ಲ. ದುರ್ವಾಸನೆಯ ಉಸಿರಿನಲ್ಲಿನ ಪ್ರಮುಖ ದೋಷಿಗಳು, ಹೈಡ್ರೊಜನ್ ಸಲ್ಫೈಡ್ ಮತ್ತು ಮೆಥಿಲ್ ಮರ್ಕ್ಯಾಪ್ಟ್ಯಾನ್ಗಳಾಗಿವೆ. ಈ ಅನಿಲಗಳು ನಮ್ಮ ಉಸಿರಿಗೆ ಸ್ಕಂಕ್ ಪ್ರಾಣಿಯ ದುರ್ಗಂಧಕ್ಕೆ ತೀರ ಸದೃಶವಾದ ಒಂದು ವಾಸನೆಯನ್ನು ಕೊಡುತ್ತವೆಯೆಂದು ಹೇಳಲಾಗಿದೆ.
ಬ್ಯಾಕ್ಟೀರಿಯದ 300ಕ್ಕಿಂತಲೂ ಹೆಚ್ಚಿನ ಜಾತಿಗಳಿಗೆ, ಮಾನವ ಬಾಯಿಯು ಮನೆಯಾಗಿದೆ. ಟಫ್ಟ್ಸ್ ಯೂನಿವರ್ಸಿಟಿ ಡಯೆಟ್ ಆ್ಯಂಡ್ ನ್ಯೂಟ್ರಿಷನ್ ಲೆಟರ್ ಹೇಳುವುದು: “ಮಬ್ಬಾದ, ಬೆಚ್ಚಗೆನ, ಮತ್ತು ತೇವವಿರುವ ಬಾಯಿ, ವಾಸನೆಯನ್ನುಂಟುಮಾಡುವ ಬ್ಯಾಕ್ಟೀರಿಯವನ್ನು ವರ್ಧಿಸಲು ಶ್ರೇಷ್ಠರೀತಿಯ ಪರಿಸರವಾಗುತ್ತದೆ.” ಆದರೆ ದುರ್ವಾಸನೆಯ ಉಸಿರಿಗೆ, ನಾಲ್ಕು ಜಾತಿಗಳು ಮಾತ್ರವೇ ಪ್ರಮುಖವಾಗಿ ಕಾರಣವಾಗಿವೆ. ಅವು ನಿಮ್ಮ ಬಾಯಿಯಲ್ಲಿ ಜೀವಿಸುತ್ತವೆ, ಆದರೆ ಬಹುಶಃ ಅವುಗಳನ್ನು ನೀವಿನ್ನೂ ಹೆಸರಿನಿಂದ ತಿಳಿದುಕೊಳ್ಳದಿರುವುದು ಸಂಭವನೀಯ. ವೀಲೊನೆಲ ಆಲ್ಕಲೆಸೆನ್ಸ್, ಫೂಸ್ಲೋಬ್ಯಾಕ್ಟೀರಿಯಮ್ ನ್ಯೂಕ್ಲಿಯೋಟಮ್, ಬ್ಯಾಕ್ಟೀರೈಡೀಸ್ ಮೆಲನಿನೋಜೆನಿಕಸ್, ಮತ್ತು ಕ್ಲೆಬ್ಸಿಯೆಲ ನ್ಯೂಮೋನಿಯ ಎಂಬವು ಅವುಗಳಾಗಿವೆ. ಆಹಾರದ ಕಣಗಳು, ಸತ್ತ ಜೀವಕೋಶಗಳು, ಮತ್ತು ಬಾಯಿಯಲ್ಲಿರುವ ಇತರ ವಸ್ತುವನ್ನು ಅವು ತಿನ್ನುತ್ತವೆ. ಬ್ಯಾಕ್ಟೀರಿಯದ ಈ ಕಾರ್ಯಚಟುವಟಿಕೆಯು ಪ್ರತಿಯಾಗಿ ಹೊಲಸು ನಾತದ ಅನಿಲಗಳನ್ನು ಉತ್ಪಾದಿಸುತ್ತದೆ. ಕಸವು ಕೊಳೆಯುವಾಗ ಏನು ಸಂಭವಿಸುತ್ತದೋ ಅದಕ್ಕೆ ಈ ಪ್ರಕ್ರಿಯೆಯು ಸದೃಶವಾಗಿದೆ. ಸೂಕ್ತವಾಗಿಯೇ, ದಂತ ಪತ್ರಿಕೆಯಾದ ಜೆ ಪೆರಿಯೊಡಾಂಟಲ್ ವಿವರಿಸುವುದು: “ಅತ್ಯಧಿಕ ವಿದ್ಯಮಾನಗಳಲ್ಲಿ, ಸೂಕ್ಷ್ಮದರ್ಶಕೀಯ ಜೀವಿಯ ಕೊಳೆತದ [ಜೈವಿಕ ಪದಾರ್ಥದ ಕೊಳೆಯುವಿಕೆ] ಫಲಿತಾಂಶವಾಗಿ, ದುರ್ಗಂಧ ಶ್ವಾಸವು ಬಾಯಿಯಲ್ಲೇ ಉತ್ಪತ್ತಿಯಾಗುತ್ತದೆ.” ಪರೀಕ್ಷಿಸದೆ ಬಿಡಲ್ಪಟ್ಟಲ್ಲಿ, ಈ ಪ್ರಕ್ರಿಯೆಯು ಹಲ್ಲುಗಳ ಕೊಳೆತ ಮತ್ತು ಒಸಡಿನ ರೋಗಕ್ಕೆ ಮುನ್ನಡೆಸಬಲ್ಲದು.
“ಸುಪ್ರಭಾತ! ಹೇಗಿದೆ ನಿಮ್ಮ ಉಸಿರು?”
ಬಾಯಿಯಲ್ಲಿನ ಕೊಳೆತದ ಈ ಪ್ರಕ್ರಿಯೆಯು, ನಿದ್ರೆಯ ಸಮಯದಲ್ಲಿ ವೇಗವರ್ಧಿಸುತ್ತದೆ. ಏಕೆ? ಹಗಲಿನ ವೇಳೆಯಲ್ಲಿ, ಬ್ಯಾಕ್ಟೀರಿಯವನ್ನು ತೆಗೆದುಹಾಕುತ್ತಾ, ಆಮ್ಲಜನಕಭರಿತವಾದ ಮತ್ತು ಸ್ವಲ್ಪಮಟ್ಟಿಗೆ ಆಮೀಯ್ಲವಾದ ಜೊಲಿನ್ಲಿಂದ ಬಾಯಿಯು ಸತತವಾಗಿ ತೊಳೆಯಲ್ಪಡುತ್ತದೆ. ಆದರೂ, ನಿದ್ರೆಯ ಸಮಯದಲ್ಲಿ ಜೊಲಿನ್ಲ ಪ್ರತಿಗಂಟೆಯ ಉತ್ಪಾದನೆಯು, ಸಾಮಾನ್ಯ ಪ್ರಮಾಣಕ್ಕಿಂತ ಸುಮಾರು 1/50 ಬಾರಿಯಷ್ಟು ಕಡಿಮೆಗೊಳಿಸಲ್ಪಡುತ್ತದೆ. ಒಂದು ಪತ್ರಿಕೆಯು ಹೇಳಿಕೆಯನ್ನೀಯುವಂತೆ, ತನ್ನ ಕೆಟ್ಟ ರುಚಿಯ ಸಂವೇದನೆಯೊಂದಿಗೆ, ಸುವಿದಿತವಾದ “ಬೆಳಗ್ಗಿನ ಉಸಿರನ್ನು” ಉಂಟುಮಾಡುತ್ತಾ, ಒಣಗಿದ ಬಾಯಿಯೊಂದು “160,000 ಕೋಟಿಗಿಂತಲೂ ಹೆಚ್ಚಿನ ಬ್ಯಾಕ್ಟೀರಿಯದ ಹರಿಯದೆ ನಿಂತಿರುವ ಒಂದು ಕೊಳವಾಗುತ್ತದೆ.”
ನೀವು ಎಚ್ಚರವಾಗಿರುವಾಗ ಒತ್ತಡದಿಂದ ಸಹ, ಕಡಿಮೆಗೊಂಡ ಜೊಲಿನ್ಲ ಪ್ರವಹಿಸುವಿಕೆಯು ಆರಂಭವಾಗಸಾಧ್ಯವಿದೆ. ಉದಾಹರಣೆಗೆ, ಪುಕ್ಕಲಾದ ಒಬ್ಬ ಸಾರ್ವಜನಿಕ ಭಾಷಣಕಾರನು, ಭಾಷಣ ಕೊಡುವಾಗ ಅವನ ಬಾಯಿ ಒಣಗಬಹುದು ಮತ್ತು ಫಲಿತಾಂಶವಾಗಿ ದುರ್ಗಂಧ ಶ್ವಾಸದ ಒಂದು ಕೆಟ್ಟ ರೋಗವನ್ನು ಹೊಂದಬಹುದು. ಬಾಯಿ ಒಣಗುವಿಕೆಯು, ಅನೇಕ ರೋಗಗಳ ರೋಗಲಕ್ಷಣವಾಗಿ ಅಥವಾ ಅಡ್ಡತೊಡಕಾಗಿಯೂ ಇದೆ.
ಆದರೆ ದುರ್ವಾಸನೆಯ ಉಸಿರು ಯಾವಾಗಲೂ ಬಾಯಿಯಲ್ಲಿನ ಬ್ಯಾಕ್ಟೀರಿಯದ ಕಾರ್ಯಚಟುವಟಿಕೆಯ ಒಂದು ಫಲಿತಾಂಶವಾಗಿರುವುದಿಲ್ಲ. ವಾಸ್ತವವಾಗಿ, ಬಾಯಿಯ ದುರ್ವಾಸನೆಯು ಅನೇಕವೇಳೆ ವಿವಿಧ ಪರಿಸ್ಥಿತಿಗಳು ಮತ್ತು ಅಸ್ವಸ್ಥತೆಗಳ ಒಂದು ರೋಗಲಕ್ಷಣವಾಗಿದೆ. (13ನೆಯ ಪುಟದಲ್ಲಿರುವ ರೇಖಾಚೌಕವನ್ನು ನೋಡಿರಿ.) ಈ ಕಾರಣದಿಂದ, ವರ್ಣಿಸಲಸಾಧ್ಯವಾದ ನಿತ್ಯವಾದ ದುರ್ವಾಸನೆಯ ಉಸಿರಿನ ವಿದ್ಯಮಾನಗಳಲ್ಲಿ, ವೈದ್ಯಕೀಯ ಗಮನವನ್ನು ಪಡೆಯಲು ಪ್ರಯತ್ನಿಸುವುದು ಅತ್ಯುತ್ತಮವಾಗಿದೆ.
ದುರ್ವಾಸನೆಯ ಉಸಿರು ಹೊಟ್ಟೆಯಲ್ಲಿ ಸಹ ಉತ್ಪತ್ತಿಯಾಗಬಹುದು. ಆದರೂ, ಜನಪ್ರಿಯ ನಂಬಿಕೆಗೆ ವ್ಯತಿರಿಕ್ತವಾಗಿ, ಇದು ವಿರಳವಾಗಿ ಸಂಭವಿಸುತ್ತದೆ. ತೀರ ಹೆಚ್ಚು ಸಲ, ಶ್ವಾಸಕೋಶಗಳಿಂದ ಕೆಲವು ಅಹಿತಕರ ವಾಸನೆಗಳು ನಿಮ್ಮ ಬಾಯಿಯನ್ನು ತಲಪುತ್ತವೆ. ಹೇಗೆ? ಬೆಳ್ಳುಳ್ಳಿ ಅಥವಾ ಈರುಳ್ಳಿಗಳಂತಹ ಕೆಲವು ಆಹಾರಗಳು ಜೀರ್ಣಗೊಂಡಾಗ, ಅವು ರಕ್ತಪ್ರವಾಹವನ್ನು ಪ್ರವೇಶಿಸುತ್ತವೆ ಮತ್ತು ಶ್ವಾಸಕೋಶಗಳಿಗೆ ರವಾನಿಸಲ್ಪಡುತ್ತವೆ. ಸಂಯೋಜಿತವಾದ ವಾಸನೆಗಳು ತದನಂತರ ಉಸಿರಾಟದ ಪ್ರದೇಶದ ಮೂಲಕ, ನಿಮ್ಮ ಬಾಯಿ ಮತ್ತು ಮೂಗಿನ ಒಳಕ್ಕೆ ಮತ್ತು ಹೊರಕ್ಕೆ ಬಿಡಲ್ಪಡುತ್ತವೆ. ಹೆಲ್ತ್ ಪತ್ರಿಕೆಗನುಸಾರ, “ತಮ್ಮ ಪಾದತಲಗಳ ಮೇಲೆ ಬೆಳ್ಳುಳ್ಳಿಯ ಸೊಳೆಗಳು ಸುಮ್ಮನೆ ಉಜ್ಜಲ್ಪಡುವಾಗ ಅಥವಾ ಜಗಿಯದೆ ನುಂಗಲ್ಪಡುವಾಗ ಸಹ, ಜನರು ಬೆಳ್ಳುಳ್ಳಿಯ ಉಸಿರನ್ನು ಪಡೆದುಕೊಳ್ಳುತ್ತಾರೆಂದು ಅಧ್ಯಯನಗಳು ತೋರಿಸಿವೆ.”
ಮದ್ಯಸಾರ ಪಾನೀಯಗಳನ್ನು ಕುಡಿಯುವುದೂ ನಿಮ್ಮ ರಕ್ತ ಮತ್ತು ಶ್ವಾಸಕೋಶಗಳನ್ನು ಮದ್ಯಸಾರದ ವಾಸನೆಯಿಂದ ತುಂಬಿಸುವುದು. ಇದು ಸಂಭವಿಸುವಾಗ, ಕಾಯುವುದರ ಹೊರತಾಗಿ ಪರಿಸ್ಥಿತಿಯನ್ನು ಸರಿಪಡಿಸಲು ಕಾರ್ಯತಃ ನೀವು ಮಾಡಸಾಧ್ಯವಿರುವ ಯಾವ ವಿಷಯವೂ ಇರುವುದಿಲ್ಲ. ಕೆಲವು ಆಹಾರ ವಾಸನೆಗಳು 72 ತಾಸುಗಳ ವರೆಗೆ ನಿಮ್ಮ ದೇಹದಲ್ಲಿ ಬಳಸಾಡುವವು.
ದುರ್ವಾಸನೆಯ ಉಸಿರನ್ನು ತಡೆಗಟ್ಟುವ ವಿಧ
ಮಿಠಾಯಿರೂಪದ ಉಸಿರಿನ ನಿರ್ಮಲಕಾರಕ (ಫ್ರೆಶ್ನರ್)ವೊಂದನ್ನು ಕೇವಲ ಜಗಿಯುವುದರಿಂದ ದುರ್ವಾಸನೆಯ ಉಸಿರನ್ನು ಸರಿಪಡಿಸಲು ಸಾಧ್ಯವಿಲ್ಲ. ದುರ್ವಾಸನೆಯ ಉಸಿರು ಅನೇಕವೇಳೆ ಬಾಯಿಯಲ್ಲಿನ ಬ್ಯಾಕ್ಟೀರಿಯದ ಕಾರ್ಯಚಟುವಟಿಕೆಯ ಒಂದು ಫಲಿತಾಂಶವಾಗಿದೆ ಎಂಬುದನ್ನು ಜ್ಞಾಪಕದಲ್ಲಿಡಿರಿ. ಬಾಯಿಯಲ್ಲಿ ಉಳಿದಿರುವ ಆಹಾರದ ಸಣ್ಣ ಚೂರುಗಳು, ಕೋಟ್ಯಂತರ ಬ್ಯಾಕ್ಟೀರಿಯಗಳಿಗೆ ಔತಣವನ್ನು ಒದಗಿಸುತ್ತವೆ ಎಂಬುದನ್ನು ಒಬ್ಬನು ಯಾವಾಗಲೂ ಮನಸ್ಸಿನಲ್ಲಿಡಬೇಕು. ಆದುದರಿಂದ, ಬ್ಯಾಕ್ಟೀರಿಯದ ಸಂಖ್ಯೆಯನ್ನು ಕಡಿಮೆಗೊಳಿಸುತ್ತಾ, ನಿಮ್ಮ ಬಾಯಿಯನ್ನು ಸ್ವಚ್ಛವಾಗಿಡುವುದು, ದುರ್ವಾಸನೆಯ ಉಸಿರನ್ನು ದೂರಮಾಡುವ ಒಂದು ಪ್ರಮುಖ ಮಾರ್ಗವಾಗಿದೆ. ನಿಮ್ಮ ಹಲ್ಲುಗಳಿಂದ ಆಹಾರ ಕಣಗಳು ಮತ್ತು ದಂತ ಲೋಳೆಪೊರೆಯನ್ನು ಕ್ರಮವಾಗಿ ತೆಗೆದುಹಾಕುವ ಮೂಲಕ ಇದನ್ನು ಮಾಡಸಾಧ್ಯವಿದೆ. ಹೇಗೆ? ಊಟಗಳ ಬಳಿಕ ಮತ್ತು ಮಲಗುವ ಸಮಯದಲ್ಲಿ ನಿಮ್ಮ ಹಲ್ಲುಗಳನ್ನು ಉಜ್ಜುವುದು ಪ್ರಾಮುಖ್ಯವಾಗಿದೆ. ಆದರೆ ಹಲ್ಲುಗಳನ್ನು ಉಜ್ಜುವುದು ತೆಗೆದುಕೊಳ್ಳಬೇಕಾದ ಹೆಜ್ಜೆಗಳಲ್ಲಿ ಕೇವಲ ಒಂದಾಗಿದೆ.
ಒಂದು ಬ್ರಷ್ನಿಂದ ತಲಪಲಸಾಧ್ಯವಾದ ಹಲ್ಲಿನ ಮೇಲ್ಮೈಗಳಿವೆ. ಆದುದರಿಂದ ಕಡಿಮೆಪಕ್ಷ ಒಂದು ದಿನಕ್ಕೆ ಒಮ್ಮೆ ದಂತರೇಷ್ಮೆಯಿಂದ ಸಂದುಗಳನ್ನು ಶುಚಿಮಾಡುವುದು ಅತ್ಯಾವಶ್ಯಕ. ಬ್ಯಾಕ್ಟೀರಿಯಗಳಿಗೆ ಅಚ್ಚುಮೆಚ್ಚಿನ ಅಡಗುವ ಸ್ಥಳವಾಗಿಯೂ ಸಾಕಣೆಯ ನೆಲೆಯಾಗಿಯೂ ಇರುವ, ನಿಮ್ಮ ನಾಲಗೆಯನ್ನು ಮೃದುವಾಗಿ ಉಜ್ಜುವಂತೆ ಸಹ ಪರಿಣತರು ಶಿಫಾರಸ್ಸು ಮಾಡುತ್ತಾರೆ. ಒಬ್ಬ ದಂತವೈದ್ಯರಿಂದ ಹಾಗೂ ದಂತ ಆರೋಗ್ಯ ಶಾಸ್ತ್ರಜ್ಞರೊಬ್ಬರಿಂದ ನಿಯತಕಾಲಿಕ ತಪಾಸಣೆಗಳು ಮತ್ತು ಹಲ್ಲಿನ ಪೊರೆ ಕಳಚುವಿಕೆಯು ಸಹ ಅಗತ್ಯವಾಗಿದೆ. ಈ ಹೆಜ್ಜೆಗಳಲ್ಲಿ ಯಾವುದಾದರೂ ಒಂದನ್ನು ನಿರ್ಲಕ್ಷಿಸುವುದು, ದುರ್ವಾಸನೆಯ ಉಸಿರು ಮತ್ತು, ಸಕಾಲದಲ್ಲಿ ಹಲ್ಲಿನ ಹಾಗೂ ಒಸಡಿನ ಗುರುತರ ರೋಗಗಳಲ್ಲಿ ಫಲಿಸಬಲ್ಲದು.
ನಿಮ್ಮ ಉಸಿರನ್ನು ಸ್ವಚ್ಛಗೊಳಿಸಲಿಕ್ಕಾಗಿ ತೆಗೆದುಕೊಳ್ಳಸಾಧ್ಯವಿರುವಂತಹ ಕೆಲವು ತಾತ್ಕಾಲಿಕ ಕ್ರಮಗಳಿವೆ. ನೀರನ್ನು ಕುಡಿಯಿರಿ, ಸಕ್ಕರೆರಹಿತ ಅಂಟುಮಿಠಾಯಿ (ಚೂಯಿಂಗ್ಗಮ್) ಅಗಿಯಿರಿ—ನಿಮ್ಮ ಜೊಲ್ಲುರಸದ ಪ್ರವಹಿಸುವಿಕೆಯನ್ನು ಅಧಿಕಗೊಳಿಸುವಂತೆ ಏನನ್ನಾದರೂ ಮಾಡಿರಿ. ಜೊಲ್ಲುರಸವು ಸ್ವಾಭಾವಿಕ ಬಾಯಿಮಾರ್ಜಕದಂತೆ ಕಾರ್ಯನಡಿಸುತ್ತಿದ್ದು, ಬ್ಯಾಕ್ಟೀರಿಯವನ್ನು ತೊಳೆದು ಹೊರಹಾಕುತ್ತದೆ ಮತ್ತು ಅವುಗಳಿಗಾಗಿ ನಿರಾಶ್ರಿತ ಪರಿಸರವೊಂದನ್ನು ಉಂಟುಮಾಡುತ್ತದೆ ಎಂಬುದನ್ನು ನೆನಪಿನಲ್ಲಿಡಿರಿ.
ಮಾರಾಟಕ್ಕಿರುವ ಬಾಯಿಮಾರ್ಜಕಗಳು ಸಹಾಯ ಮಾಡಬಲ್ಲವು, ಆದರೆ ದುರ್ವಾಸನೆಯ ಉಸಿರಿನೊಂದಿಗೆ ಹೆಣಗುತ್ತಿರುವಾಗ ನೀವು ಅವುಗಳ ಮೇಲೆ ಸಂಪೂರ್ಣವಾಗಿ ಅವಲಂಬಿಸಬಾರದೆಂದು ಇತ್ತೀಚೆಗಿನ ಅಧ್ಯಯನಗಳು ತೋರಿಸುತ್ತವೆ. ವಾಸ್ತವವಾಗಿ, ಮದ್ಯಸಾರವು ಸೇರಿರುವ ಬಾಯಿಮಾರ್ಜಕಗಳಿಂದ ಆಗಾಗ್ಗೆ ಬಾಯಿಮುಕ್ಕಳಿಸುವುದು, ಬಾಯಿ ಒಣಗುವಿಕೆಯನ್ನು ಉಂಟುಮಾಡಬಲ್ಲದು. ಬಳಕೆದಾರನಿಗೆ ಲಭ್ಯವಿರುವ, ಬಾಯಿತೊಳೆಯುವ ಅತ್ಯಂತ ಪರಿಣಾಮಕಾರಿ ಉತ್ಪನ್ನಗಳಲ್ಲಿ ಕೆಲವು, ಕೇವಲ 28 ಪ್ರತಿಶತದಷ್ಟು ದಂತ ಲೋಳೆಪೊರೆಯನ್ನು ಕಡಿಮೆ ಮಾಡುತ್ತವೆ. ಆದುದರಿಂದ ನಿಮ್ಮ ಅಚ್ಚುಮೆಚ್ಚಿನ ಬಾಯಿಮಾರ್ಜಕದಿಂದ ಚೆನ್ನಾಗಿ ತೊಳೆದ ಬಳಿಕ, ಮೂಲದ ಬ್ಯಾಕ್ಟೀರಿಯ ಸಂಖ್ಯೆಯ 70ಕ್ಕಿಂತಲೂ ಹೆಚ್ಚಿನ ಪ್ರತಿಶತವು ಇನ್ನೂ ನಿಮ್ಮ ಬಾಯಲ್ಲಿರಬಹುದು. ಪ್ರಯೋಗಗಳ ಸರಣಿಯೊಂದರಲ್ಲಿ, ಬಾಯಿಮಾರ್ಜಕವೊಂದರಿಂದ “ಬಾಯಿಯನ್ನು ತೊಳೆದ ಬಳಿಕ 10 ನಿಮಿಷಗಳು ಮತ್ತು ಒಂದು ತಾಸುಗಳ ನಡುವೆ ಯಾವಾಗಲೋ ದುರ್ವಾಸನೆಯ ಉಸಿರು ಲಾಕ್ಷಣಿಕವಾಗಿ ಹಿಂದಿರುಗಿತು” ಎಂದು ಕನ್ಸ್ಯೂಮರ್ ರಿಪೋರ್ಟ್ಸ್ ಪತ್ರಿಕೆಯು ತಿಳಿಸುತ್ತದೆ. ವೈದ್ಯರ ಸಲಹೆಗನುಸಾರ ಅನೇಕ ದೇಶಗಳಲ್ಲಿ ಲಭ್ಯವಿರುವ, ಹೆಚ್ಚು ಪ್ರಬಲವಾದ ಬಾಯಿಮಾರ್ಜಕಗಳು ಸಹ, ದಂತ ಲೋಳೆಪೊರೆಯನ್ನು 55 ಪ್ರತಿಶತದಷ್ಟು ಮಾತ್ರವೇ ಕಡಿಮೆ ಮಾಡುತ್ತವೆ. ಕೆಲವೇ ತಾಸುಗಳೊಳಗೆ, ಬ್ಯಾಕ್ಟೀರಿಯಗಳು ತಮ್ಮ ಹಿಂದಿನ ಸಂಖ್ಯೆಗಳಿಗೆ ಪುನಃ ಏರುತ್ತವೆ.
ಸ್ಪಷ್ಟವಾಗಿಗಿಯೇ, ದುರ್ವಾಸನೆಯ ಉಸಿರನ್ನು ತಡೆಗಟ್ಟುವ ವಿಷಯದ ಕುರಿತಾಗಿ, ಅಸಡ್ಡೆಯ ಒಂದು ಮನೋಭಾವವು ತೊರೆಯಲ್ಪಡತಕ್ಕದ್ದು. ಅದಕ್ಕೆ ಬದಲಾಗಿ, ಸತತವಾದ ದುರಸ್ತಿಯ ಅಗತ್ಯವಿರುವ ಅಮೂಲ್ಯ ಸಾಧನಗಳೋಪಾದಿ ನೀವು ನಿಮ್ಮ ಹಲ್ಲುಗಳನ್ನು ಮತ್ತು ಬಾಯಿಯನ್ನು ನೋಡಿಕೊಳ್ಳಬೇಕು. ಜವಾಬ್ದಾರಿ ಬಡಗಿಗಳು ಮತ್ತು ಯಂತ್ರಕರ್ಮಿಗಳು, ಪ್ರತಿಯೊಂದು ಕೆಲಸವು ಪೂರ್ಣವಾದ ಬಳಿಕ ದುರಸ್ತಿಯ ನಿರ್ದಿಷ್ಟವಾದ ಕಾರ್ಯವಿಧಾನಗಳನ್ನು ಅನುಸರಿಸುವ ಮೂಲಕ, ತಮ್ಮ ಸಾಧನಗಳನ್ನು ತುಕ್ಕು, ಸವೆತ, ಮತ್ತು ಇತರ ಹಾನಿಯ ವಿರುದ್ಧವಾಗಿ ಸಂರಕ್ಷಿಸುತ್ತಾರೆ. ಯಾವುದೇ ಮಾನವ ನಿರ್ಮಿತ ಸಾಧನಗಳಿಗಿಂತ ನಿಮ್ಮ ಬಾಯಿ ಮತ್ತು ಹಲ್ಲುಗಳು ಹೆಚ್ಚು ಅಮೂಲ್ಯವಾಗಿವೆ. ಆದುದರಿಂದ ಅವುಗಳಿಗೆ ಸಲ್ಲತಕ್ಕ ದುರಸ್ತು ಮತ್ತು ಆರೈಕೆಯನ್ನು ಅವುಗಳಿಗೆ ಕೊಡಿರಿ. ಇದನ್ನು ಮಾಡುವ ಮೂಲಕ, ನೀವು ದುರ್ವಾಸನೆಯ ಉಸಿರಿನೊಂದಿಗೆ ಜೊತೆಗೂಡುವ ಆಶಾಭಂಗ ಮತ್ತು ಪೇಚಾಟವನ್ನು ಕುಂದಿಸುವಿರಿ. ಹೆಚ್ಚು ಪ್ರಮುಖವಾಗಿ, ನಿಮ್ಮ ಬಾಯಿ ಹೆಚ್ಚು ಸ್ವಚ್ಛವೂ ಹೆಚ್ಚು ಆರೋಗ್ಯಕರವೂ ಆಗಿರುವುದು.
[ಅಧ್ಯಯನ ಪ್ರಶ್ನೆಗಳು]
a ಹಲ್ಲುಗಳ ಮೇಲ್ಮೈಯ ಮೇಲೆ ಬೆಳೆಯುವ ಅಂಟಿನಂತಹ ಒಂದು ವಸ್ತುವು ದಂತ ಲೋಳೆಪೊರೆಯಾಗಿದೆ. ನಿಮ್ಮ ಹಲ್ಲುಗಳನ್ನು ಮತ್ತು ಒಸಡುಗಳನ್ನು ಹಾನಿಗೊಳಿಸಬಲ್ಲ ಬ್ಯಾಕ್ಟೀರಿಯದಿಂದ ಇದು ಬಹುಮಟ್ಟಿಗೆ ರಚಿತವಾಗಿದೆ.
[ಪುಟ 24 ರಲ್ಲಿರುವ ಚೌಕ]
ಯಾವುದು ದುರ್ವಾಸನೆಯ ಉಸಿರನ್ನು ಉಂಟುಮಾಡುತ್ತದೆ?
ದುರ್ವಾಸನೆಯ ಉಸಿರನ್ನು ಉಂಟುಮಾಡಬಲ್ಲಂತಹ ಅನೇಕ ಸನ್ನಿವೇಶಗಳು, ಅನಾರೋಗ್ಯಗಳು, ಮತ್ತು ಹವ್ಯಾಸಗಳಲ್ಲಿ ಈ ಕೆಳಗಿನವು ಸೇರಿವೆ:
ಬ್ರಾಂಕೈಟಿಸ್ (ಶ್ವಾಸನಾಳಗಳ ಉರಿಯೂತ)
ಅಸ್ಥಿಗತ ಜಠರಚರ್ಮಗಳ ಊತ
ಮಧುಮೂತ್ರವ್ಯಾಧಿ
ಮದ್ಯಸಾರ ಪಾನೀಯಗಳ ಕುಡಿತ
ಬಾಯಿಯ ಒಣಗುವಿಕೆ
ಎಂಪೈಯೀಮ
ತೇಗು (ತೇಕು)
ಒಸಡಿನ ರೋಗ
ಹಏಟಲ್ ಹರ್ನಿಯ (ತೆರಗಂಡಿ ಅಂತ್ರವೃದ್ಧಿ)
ಮೂತ್ರಜನಕಾಂಗಗಳ ಕುಸಿತ
ಪಿತ್ತಜನಕಾಂಗದ ರೋಗ
ಋತುಸ್ರಾವ
ಬಾಯಿಯ ಹುಣ್ಣುಗಳು
ಅಂಡಾಣುನೆರೆತ
ಬಾಯಿಯ ನ್ಯೂನ ನೈರ್ಮಲ್ಯ
ನಾಳಿವ್ರಣ
ಹೊಗೆಸೊಪ್ಪು ಸೇದುವಿಕೆ
ಕ್ಯಾನ್ಸರ್ನ ಕೆಲವು ವಿಧಗಳು
ಔಷಧದ್ರವ್ಯಗಳ ಕೆಲವು ವಿಧಗಳು
ಹಲ್ಲಿನ ಕೊಳೆತ
ಕ್ಷಯ ರೋಗ
ದಂತ ಶಸ್ತ್ರಚಿಕಿತ್ಸೆಯಿಂದಾದ ಗಾಯಗಳು
[ಪುಟ 26 ರಲ್ಲಿರುವ ಚೌಕ]
ನಿಮ್ಮ ನಾಲಗೆಯು ಸಹ ಗಮನವನ್ನು ಅಗತ್ಯಪಡಿಸುತ್ತದೆ
ಅತ್ಯಂತ ಸಮೀಪವಿರುವ ಕನ್ನಡಿಯ ಬಳಿ ಹೋಗಿ, ನಿಮ್ಮ ನಾಲಗೆಯ ಕಡೆಗೆ ಒಮ್ಮೆ ಚೆನ್ನಾಗಿ ದೃಷ್ಟಿಹರಿಸಿರಿ. ಅದು ಅಸಂಖ್ಯಾತವಾದ ಸಣ್ಣ ಬಿರುಕುಗಳಿಂದ ಆವರಿಸಲ್ಪಟ್ಟಿದೆಯೆ? ಇದು ಸಾಮಾನ್ಯ. ಆದರೆ ನಿಮ್ಮ ನಾಲಗೆಯ ಮೇಲ್ಮೈಯಲ್ಲಿರುವ ಆ ಬಿರುಕುಗಳು, ಕೋಟ್ಯಂತರ ಬ್ಯಾಕ್ಟೀರಿಯಗಳಿಗೆ ಆಶ್ರಯವನ್ನು ಒದಗಿಸಬಲ್ಲವು. ಕಲಕದೆ ಬಿಡಲ್ಪಡುವಾಗ, ಬ್ಯಾಕ್ಟೀರಿಯವು ನಿರಂತರವಾದ ದುರ್ವಾಸನೆಯ ಉಸಿರಿನ ಸಮಸ್ಯೆ ಮತ್ತು ಇತರ ಅನಾರೋಗ್ಯಕರ ಪರಿಸ್ಥಿತಿಗಳನ್ನು ಸೃಷ್ಟಿಸಬಲ್ಲದು. ಆದಾಗಲೂ, ಜನರು ಬಾಯಿಯ ಆರೋಗ್ಯ ಶಾಸ್ತ್ರವನ್ನು ಅನುಸರಿಸುತ್ತಿರುವಾಗ, ಅನೇಕವೇಳೆ ನಾಲಗೆಯನ್ನು ನಿರ್ಲಕ್ಷಿಸುತ್ತಾರೆ.
ಒಂದು ಮೃದುವಾದ ಬ್ರಿಸ್ಲ್ಗಳುಳ್ಳ ಟೂತ್ಬ್ರಷ್ನಿಂದ ನಾಲಗೆಯ ಮೇಲಿನ ಮೇಲ್ಮೈಯನ್ನು ಕ್ರಮವಾಗಿ ಉಜ್ಜುವುದನ್ನು, ದುರ್ಗಂಧ ಶ್ವಾಸಕ್ಕೆ ಚಿಕಿತ್ಸೆಯೋಪಾದಿ ದಂತವೈದ್ಯರು ಶಿಫಾರಸ್ಸು ಮಾಡುತ್ತಾರೆ. ನಾಲಗೆಯ ಒಂದು ಸ್ಕ್ರೇಪರನ್ನು ಉಪಯೋಗಿಸುವುದನ್ನು ಕೆಲವು ಪರಿಣತರು ಶಿಫಾರಸ್ಸು ಮಾಡುತ್ತಾರೆ. ಭಾರತದಲ್ಲಿ, ಜನರು ದುರ್ವಾಸನೆಯ ಉಸಿರನ್ನು ದೂರಮಾಡಲಿಕ್ಕಾಗಿರುವ ಒಂದು ಮಾರ್ಗದೋಪಾದಿ ನಾಲಗೆಯ ಸ್ಕ್ರೇಪರ್ಗಳನ್ನು ಅನೇಕ ಸಂತತಿಗಳಿಂದ ಉಪಯೋಗಿಸಿದ್ದಾರೆ. ವರ್ಷಗಳ ಹಿಂದೆ ಅವು ಲೋಹದಿಂದ ಮಾಡಲ್ಪಟ್ಟಿದ್ದವು, ಆದರೆ ಇಂದು ಪ್ಲ್ಯಾಸ್ಟಿಕ್ ಸ್ಕ್ರೇಪರ್ಗಳು ಹೆಚ್ಚು ಸಾಮಾನ್ಯವಾಗಿವೆ. ಕೆಲವು ಸ್ಥಳಗಳಲ್ಲಿ, ಒಂದು ಸ್ಕ್ರೇಪರನ್ನು ಪಡೆದುಕೊಳ್ಳಲಿಕ್ಕಾಗಿ ನೀವು ನಿಮ್ಮ ದಂತವೈದ್ಯರನ್ನು ಸಂಧಿಸಬೇಕಾಗಬಹುದು.
[ಪುಟ 25 ರಲ್ಲಿರುವ ಚಿತ್ರಗಳು]
ಹಲ್ಲುಗಳು ಮತ್ತು ನಾಲಗೆಯನ್ನು ದಂತರೇಷ್ಮೆಯಿಂದ ಶುಚಿಮಾಡುವುದು ಹಾಗೂ ಉಜ್ಜುವುದು ಬಾಯಿಯ ಒಳ್ಳೆಯ ನೈರ್ಮಲ್ಯದಲ್ಲಿ ಒಳಗೂಡಿದೆ
[ಪುಟ 23 ರಲ್ಲಿರುವ ಚಿತ್ರ ಕೃಪೆ]
Life