ಹಾಡುಹಕ್ಕಿಗಳು ತಿಳಿವಳಿಕೆಗೆ ಮೀರುವ ಸಂಗೀತ-ಕೌಶಲವುಳ್ಳವುಗಳು
“ಪ್ರಾತಃಕಾಲದ ಮೊದಲಿನ ತಾಸುಗಳು. ನಗರಕ್ಕೆ ಹೊಂದಿಕೊಂಡಿದ್ದ ನನ್ನ ಕಿವಿಗಳಿಗೆ ವಿಚಿತ್ರವಾಗಿ ಕೇಳಿಬಂದ ಸದ್ದು ನನ್ನನ್ನು ಎಬ್ಬಿಸಿತು. ವಿಚಿತ್ರವಾದರೂ ಸೊಗಸಾದ ಸದ್ದು. ಹಕ್ಕಿಗಳ ಹಾಡು ಅದಾಗಿತ್ತು. ಒಂದೆರಡು ಹಕ್ಕಿಗಳಲ್ಲ, ಅನೇಕಾನೇಕ ಹಕ್ಕಿಗಳು. ನನ್ನ ಮಂಚದ ಮೇಲೆ ಮಲಗುತ್ತಾ ಅದನ್ನು ಕೇಳುತ್ತಿದ್ದಾಗ ವರ್ಧಿಸಿದ ಆಶ್ಚರ್ಯ ನನ್ನನ್ನು ಕವಿಯಿತು. ನಾನು ಎದ್ದು ಕಿಟಿಕಿಯ ಬಳಿ ಹೋಗಿ ಅದನ್ನು ತೆರೆದು ಅದರ ಕಟ್ಟಿನ ಮೇಲೆ ಮೊಣಕೈಯಿಟ್ಟು ಕೆಳಗೆ ಮೊಣಕಾಲೂರಿದೆ. ಈಗ ಹತ್ತಿರವಾಗಿ ಕೇಳಿಬಂದ ಸದ್ದಿನ ಶಕ್ತಿ ಜಾಸ್ತಿಯಾಗಿ ಇಡೀ ಹೊರಪ್ರದೇಶ ಸಂಗೀತಮಯವಾಗಿತ್ತು. ತಮ್ಮ ಪ್ರತ್ಯೇಕ ಹಾಡುಗಳಿದ್ದ ಅನೇಕ ಹಾಡುಹಕ್ಕಿಗಳಿದ್ದರೂ ಅವೆಲ್ಲ ಒಂದು ಮಹಾ ಮೇಳಗೀತವಾಗಿ ಒಂದಾಗಿಸಿಕೊಂಡಿದ್ದವು. ಶೀತಲ ಗಾಳಿಯನ್ನು ನಾನು ಅಲಕ್ಷ್ಯ ಮಾಡಿದೆ. ಹಾಡು ನನ್ನನ್ನು ಮುಗ್ಧಗೊಳಿಸಿತ್ತು.”
ಈ ಮೇಲಿನ ಅನುಭವ ನ್ಯೂ ಯಾರ್ಕ್ ನಗರದ ಒಬ್ಬನಿಗಾಯಿತು. ಅವನು ಇಂಗ್ಲೆಂಡಿನ ಉತ್ತರ ಯಾರ್ಕ್ಷರ್ನಲ್ಲಿ ತನ್ನ ಮಿತ್ರರ ಭೇಟಿಗಾಗಿ ಹೋಗಿದ್ದನು. ಅವರ ಮನೆಯ ಸುತ್ತಲೂ ಬಯಲು, ಕಾಡು ಮತ್ತು ಹಕ್ಕಿಗಳಿದ್ದವು. ತನ್ನ ಆತಿಥೇಯ ದಂಪತಿಗಳನ್ನು ಅವನು ಆ ಬೆಳಗ್ಗೆ ವಂದಿಸಿದಾಗ ಅವನು ಉತ್ಸಾಹಪೂರಿತನಾಗಿದ್ದನು. ಅವನು ‘ಅರುಣೋದಯ ಮೇಳಗೀತ’ ಕ್ಕೆ ಆಗ ತಾನೆ ಒಡ್ಡಲ್ಪಟ್ಟವನಾಗಿದ್ದನೆಂದು ಅವರು ವಿವರಿಸಿದರು. ಅದು ಪ್ರತಿ ವಸಂತಕಾಲ ಮತ್ತು ನಡುಬೇಸಗೆಯಲ್ಲಿ ನಡೆಯುತ್ತದೆ. ಒಂದು ‘ಸಂಧ್ಯಾ ಮೇಳಗೀತ’ ಸಹ ಇದೆ. ಇದು ಸದ್ದಿನಲ್ಲಿ ಕಡಮೆಯಾದರೂ ಮನಮುಟ್ಟುವ ರೀತಿಯದ್ದು. ಜಗತ್ತಿನ ಅನೇಕ ಪ್ರದೇಶಗಳಲ್ಲಿ, ಇಂಥ ಪ್ರದರ್ಶನಗಳು ವಿರಳವಾಗುತ್ತಿವೆ; ಇನ್ನು ಕೆಲವು ಭಾಗಗಳಲ್ಲಿ ಅವು ನಿಂತುಹೋಗಿವೆ.
ಕಂಡುಹಿಡಿಯಲ್ಪಟ್ಟಿರುವ ಸುಮಾರು 9,000 ಹಕ್ಕಿ ಜಾತಿಗಳಲ್ಲಿ, ಸುಮಾರು 5,000 ಹಕ್ಕಿಗಳನ್ನು ಆಸೀನ್ಸ್ (oscines) ಎಂಬ ಉಪಜಾತಿಯ ಹಾಡುಹಕ್ಕಿಗಳೆಂದು ವರ್ಗೀಕರಿಸಲಾಗಿದೆ. ಕೆಲವು ಹೆಣ್ಣುಹಕ್ಕಿಗಳು ಹಾಡುತ್ತವಾದರೂ ಈ ಪ್ರಾತಃಕಾಲ ಮತ್ತು ಸಾಯಂಕಾಲದ ಸಂಗೀತ ರಚನಾ ಮೇಳಗೀತಗಳನ್ನು ಹಾಡುವುದು ಗಂಡು ಹಕ್ಕಿಗಳೆ. ತಮ್ಮ ಪ್ರದೇಶವನ್ನು ಕಾಯಲಿಕ್ಕಾಗಿ ಮತ್ತು ಸಂಗಾತಿ ಹಕ್ಕಿಯನ್ನು ಪಡೆಯಲಿಕ್ಕಾಗಿ ಅವು ಹಾಡುತ್ತವೆ ಎಂದು ನಮಗೆ ಹೇಳಲಾಗುತ್ತದೆ. ಆದರೆ ಅವುಗಳಿಗೆ ಸಂಗೀತದಲ್ಲಿರುವ ಆನಂದವೂ ಇದಕ್ಕೆ ಕಾರಣವಾಗಿರಬಲ್ಲದು. ನಿಶ್ಚಯವಾಗಿ, ಆ ಅರುಣೋದಯ ಮೇಳಗೀತ ಹೆಚ್ಚುತ್ತಾ ಪರಮಾವಧಿಗೇರುವಾಗ ಮತ್ತು ಅದು 30 ನಿಮಿಷಗಳ ವರೆಗೂ ನಿಲ್ಲದಿರುವಾಗ ಹಾಡುಗಾರರು ಉತ್ಸವಾಸಕ್ತಿಯನ್ನು ತಲುಪುತ್ತಾರೆ.
ಮಹಾ ವೈವಿಧ್ಯದ ಗೀತಗಳು
ಈ ಗೀತಗಳು ಸರಳತೆಯಿಂದ ಜಟಿಲತೆ, ಜಟಿಲತೆಯಿಂದ ಪರಿಷ್ಕಾರವಾಗಿರುವವುಗಳ ವರೆಗೂ ವೈವಿಧ್ಯವಾಗಿವೆ. ಬಿಳಿ ಮುಕುಟದ ಗುಬ್ಬಚ್ಚಿ ಅನಂತವಾಗಿ ಪುನರಾವೃತ್ತಿಸಿ ಬರುವ ಒಂದು ಸರಳ ಗೀತದಲ್ಲಿ ತೃಪ್ತಿಹೊಂದುವಂತೆ ಕಾಣುತ್ತದೆ. ಆದರೆ ಹಾಡು ಗುಬ್ಬಚ್ಚಿಯ ಸಂಗೀತ ಕೃತಿ ಹೆಚ್ಚು ವಿಶಾಲ, ರೆನ್ ಹಾಡುಹಕ್ಕಿಯಲ್ಲಿ ನೂರಾರು ಗೀತಗಳಿವೆ, ಮತ್ತು ಮಾಕಿಂಗ್ಬರ್ಡ್ [ಅಣಕ ಹಕ್ಕಿ] ತನ್ನ ಸರ್ವವಿನ್ಯಾಸದ ಹಾಡನ್ನು ತಾಸುಗಟ್ಟಲೆ ಹಾಡಬಲ್ಲದು. ಆದರೆ ಹಾಡಿನ ಒಟ್ಟು ಮೊತ್ತದ ವಿಷಯದಲ್ಲಿ ಬ್ರೌನ್ ತ್ರ್ಯಾಷರ್ ಹಕ್ಕಿಗೆ 2,000 ಹಾಡುಗಳು ಗೊತ್ತಿವೆ ಎಂದು ಹೇಳಲಾಗಿದೆ. ಇದೇ ರೀತಿ, ನೈಟಿಂಗೇಲ್, ತ್ರಷ್, ತ್ರ್ಯಾಷರ್, ಫಿಂಚ್, ರಾಬಿನ್, ಮೆಡೊಲಾರ್ಕ್, ಬ್ಲ್ಯಾಕ್ಬರ್ಡ್, ವಾರ್ಬ್ಲರ್, ಕಾರ್ಡಿನಲ್, ಸುಪರ್ಬ್ ಲೈರ್ ಬರ್ಡ್, ರಾಬಿನ್ ಚ್ಯಾಟ್, ಸ್ಕೈಲಾರ್ಕ್, ಮತ್ತು ಭೂಮಿಯ ಇತರ ಕಡೆಗಳಲ್ಲಿರುವ ಇತರ ಅನೇಕ ಪಕ್ಷಿಗಳು ಸಂಗೀತ ಕೌಶಲವುಳ್ಳವುಗಳೆಂಬ ಹೆಸರಿಗೆ ಅರ್ಹತೆ ಪಡೆಯಬಲ್ಲವು.
ಅರುಣೋದಯದ ಮುಖ್ಯ ಸಂಗೀತ ಮತ್ತು ಸಂಧ್ಯಾ ಮೇಳಗೀತಗಳಲ್ಲದೆ ಬೇರೆ ಗೀತಗಳೂ ಇವೆ. “ಪಿಸುಗುಟ್ಟುವ” ಗೀತಗಳು ನಮಗೆ ವಿಶೇಷ ರೀತಿಯಲ್ಲಿ ರಸಕರ. ಇದು ಮುಖ್ಯ ಗೀತಗಳ ಅಂಶಗಳ ಹೆಚ್ಚು ಸದ್ದಿಲ್ಲದ ಹಾಡುವಿಕೆ. ಇದರಲ್ಲಿ ಪರಿವರ್ತನೆ ಮತ್ತು ಸಂಕಲನಗಳಿದ್ದು ಅದು ಕೆಲವೇ ಗಜ ದೂರ ಕೇಳಿಸುತ್ತದೆ. ಅನೇಕ ವೇಳೆ ಹಕ್ಕಿಗಳು ಗೂಡಿನಲ್ಲಿ ಕಾವಿಗೆ ಕೂತುಕೊಳ್ಳುವಾಗ ಅಥವಾ ದಟ್ಟವಾದ ಕುರುಚಲು ಸಸ್ಯಗಳ ಏಕಾಂತತೆಯಲ್ಲಿ ಗಂಡು ಮತ್ತು ಹೆಣ್ಣು ಹಕ್ಕಿಗಳಿಂದ ಹಾಡಲ್ಪಡುವ ಈ ಸದ್ದುಮಂದಯಿಸುವ ಹಾಡುಗಳು ಮೌನ ತೃಪ್ತಿಯನ್ನು ಪ್ರತಿಬಿಂಬಿಸಬಹುದು.
ಅನೇಕ ಜಾತಿಯ ಜೋಡಿ ಹಕ್ಕಿಗಳು ಜೋಡಿ ಗೀತೆಯನ್ನು ಹಾಡುತ್ತವೆ. ಅವು ಜೊತೆಗೂಡಿ ಒಂದೇ ಗೀತವನ್ನು, ವಿಭಿನ್ನ ಗೀತಗಳನ್ನು, ಯಾ ಒಂದೇ ಗೀತದ ವಿಭಿನ್ನ ಭಾಗಗಳನ್ನು ಪರ್ಯಾಯವಾಗಿ ಹಾಡಬಹುದು. ಅವು ಎಷ್ಟು ಪೂರ್ಣ ತಾಳಬದ್ಧವಾಗಿ ಹಾಡುತ್ತವೆಂದರೆ ಅದು ಒಂದೇ ಹಕ್ಕಿ ಹಾಡುತ್ತಿರುವಂತೆ ಕೇಳಿಸುತ್ತದೆ. ಒಂದು ಹಕ್ಕಿ ಇನ್ನೊಂದು ಹಕ್ಕಿ ಗೀತ ಆರಂಭಿಸುವ ಸಮಯವನ್ನು ಮಿಲಿಸೆಕೆಂಡುಗಳಲ್ಲಿ ಅಳೆಯಲಾಗುತ್ತದೆ. ಹಾಡುವುದು ಎರಡು ಹಕ್ಕಿಗಳು, ಒಂದಲ್ಲ ಎಂದು ಖಾತ್ರಿ ಮಾಡಿಕೊಳ್ಳುವ ಒಂದೇ ಮಾರ್ಗ ಅವುಗಳ ಮಧ್ಯೆ ನಿಲ್ಲುವುದೇ. ದಕ್ಷಿಣ ಅಮೆರಿಕದಲ್ಲಿ ಪ್ರಸಿದ್ಧ ಜೋಡಿ ಗೀತೆಯ ಹಕ್ಕಿಗಳು, ಅಲ್ಲಿಯ ಕಾಡುಗಳಲ್ಲಿ ಅತ್ಯಂತ ಸುಂದರ ಹಾಡುಗಳನ್ನು ಹಾಡುವವುಗಳೆಂದು ಅನೇಕರು ಪರಿಗಣಿಸಿರುವ ಮ್ಯುಸಿಷನ್ ರೆನ್ ಹಕ್ಕಿಗಳೆ.
ನಿರ್ಲಜ್ಜೆಯ ಕೃತಿಚೌರ್ಯ
ವಾಚಿಕ ಅನುಕರಣೆ ಇವುಗಳಲ್ಲಿ ಅನೇಕ ಜಾತಿಗಳ ಒಂದು ಪ್ರಿಯ ಅಭ್ಯಾಸ. ಪಕ್ಷಿಶಾಸ್ತ್ರಜ್ಞರು ಇದೊಂದು ತಬ್ಬಿಬ್ಬಾಗಿಸುವ ಘಟನೆಯೆಂದು ಹೇಳಿದರೂ ಅದರಲ್ಲಿ ಯಾವ ಪ್ರಯೋಜನವೂ ಇರುವುದನ್ನು ಕಾಣುವುದಿಲ್ಲ. ಆದರೂ ಒಬ್ಬ ಸಂಶೋಧಕನು ಆ ಪಕ್ಷಿಗಳು ಕೇವಲ ಆಡುತ್ತವೆಂದು ಹೇಳಿದನು. ಉತ್ತರ ಅಮೆರಿಕದಲ್ಲಿ ಮಾಕಿಂಗ್ಬರ್ಡ್ ಹಕ್ಕಿ ಇದರಲ್ಲಿ ಹೆಚ್ಚುಗಾರಿಕೆಯನ್ನು ತೋರಿಸುತ್ತದೆ. ಅದರ ವಿಜ್ಞಾನ ಸಂಬಂಧದ ಮಿಮಸ್ ಪಾಲ್ಲಿಗಾಟಸ್ (mimus polyglottos) ಎಂಬ ಹೆಸರಿನ ಅರ್ಥ “ಅನೇಕ ನುಡಿಗಳ ಅನುಕರಣ ನಿಪುಣ” ಎಂದಾಗಿದೆ. ಕೇವಲ ಒಂದು ತಾಸಿನ ಗಾಯನದಲ್ಲಿ, ಒಂದು ಹಕ್ಕಿ 55 ಹಕ್ಕಿಜಾತಿಗಳನ್ನು ಅನುಕರಿಸಿತಂತೆ.
ಆದರೆ ಈ ಅಣಕ ಹಕ್ಕಿಗೆ ಅನುಕರಣೆಯಲ್ಲಿ ಏಕಸ್ವಾಮ್ಯವಿಲ್ಲ. ಆಸ್ಟ್ರೇಲಿಯದ ಸುಪರ್ಬ್ ಲೈರ್ಬರ್ಡ್ ಹಕ್ಕಿಗೆ “ಸಕಲ ಹಕ್ಕಿ ಹಾಡುಗಳಲ್ಲಿ ಅತ್ಯಂತ ಬಲಾಢ್ಯ ಹಾಗೂ ಸರ್ವ ವಿನ್ಯಾಸದ ಹಾಡು ಇದೆ,” ಆದರೂ “ಅದು ತನ್ನ ಸ್ವಂತ ಹಾಡಿಗೆ ಸಮೀಪದಲ್ಲಿ ಜೀವಿಸುವ ಸುಮಾರು ಪ್ರತಿಯೊಂದು ಹಕ್ಕಿಜಾತಿಯ ಹಾಡನ್ನೂ ಸೇರಿಸುತ್ತದೆ.” ರಾಬರ್ಟ್ ಬರ್ಟನ್, ಬರ್ಡ್ ಬಿಹೇವಿಯರ್ ಪುಸ್ತಕದ 130-1 ಪುಟಗಳಲ್ಲಿ, ಬೌಅರ್ ಕುಂಜ ಪಕ್ಷಿ, ಮಾರ್ಶ್ ವಾರ್ಬ್ಲರ್ ಮತ್ತು ಕನೇರಿ ಹಕ್ಕಿಗಳ ಅನುಕರಣೆಯ ವಿಷಯ ವರದಿ ಮಾಡುತ್ತಾರೆ. ಆಸ್ಟ್ರೇಲಿಯನ್ ಬೌಅರ್ ಪಕ್ಷಿಗಳು, “ಬೆಕ್ಕು, ನಾಯಿ, ಕೊಡಲಿಯ ಮರ ಕಡಿತ, ಮೋಟಾರು ಹಾರ್ನ್, ಬೇಲಿ ತಂತಿಯ ಸದ್ದು” ಮತ್ತು ಅನೇಕ ವಿಧದ ಹಕ್ಕಿಗಳನ್ನು ಅನುಕರಿಸುವುದು ದಾಖಲೆಯಾಗಿದೆ. ಒಂದು ಬೌಅರ್ ಹಕ್ಕಿ ಒಂದು ಹದ್ದನ್ನು ಎಷ್ಟು ಉತ್ತಮವಾಗಿ ಅನುಕರಿಸಿತೆಂದರೆ ಅದು ಒಂದು ಕೋಳಿ ಮತ್ತು ಅದರ ಮರಿಗಳನ್ನು ಮರೆಗೆ ಓಡುವಂತೆ ಮಾಡಿತು. ಈ ಬೌಅರ್ ಪಕ್ಷಿಗಳು ಮರ ಕಡಿಯುವ ಕೊಡಲಿಯನ್ನು ತಮ್ಮ ಜೊತೆಯಾಗಿ ತೆಗೆದುಕೊಳ್ಳಲಿಕ್ಕಾಗಲಿ, ಸದ್ದು ಮಾಡುವ ಬೇಲಿ ಸರಿಗೆಗಳನ್ನು ಅಲ್ಲಿಂದ ಓಡಿಸಲಿಕ್ಕಾಗಲಿ ಹಾಡಲಿಲ್ಲವೆಂಬುದು ನಿಶ್ಚಯ! ಪ್ರಾಯಶಃ ಅವುಗಳೂ, ಅವುಗಳನ್ನು ಆಲಿಸುತ್ತಿದ್ದ ಜನರಂತೆ ವಿನೋದದಲ್ಲಿ ತಲ್ಲೀನವಾಗಿದ್ದವು.
ಯೂರೋಪಿನ ಮಾರ್ಶ್ ವಾರ್ಬ್ಲರ್ ಹಕ್ಕಿ ಇತರರಿಂದ ಎಷ್ಟು ಕದಿಯುತ್ತದೆಂದರೆ “ಅದರ ಕೃತಿಚೌರ್ಯದ ಪೂರ್ತಿ ಎಲ್ಲೆ ಬೆಲ್ಚಿಯಮಿನಲ್ಲಿ ಮಾಡಿದ ಒಂದು ಅಧ್ಯಯನದ ಮೂಲಕ ಮಾತ್ರ ತಿಳಿದುಬಂತು. ಧ್ವನಿಮಾಪಕಗಳ ವಿಶೇಷ್ಲಣೆಯು, ಪ್ರಾಯಶಃ ಅದರ ಪೂರ್ತಿ ಸರ್ವ ಭಂಡಾರವೇ ಧ್ವನಿ ಅನುಕರಣೆಯಿಂದ ಮಾಡಲ್ಪಟ್ಟಿತ್ತು ಎಂದು ತೋರಿಸಿತು. ಆ ಧ್ವನಿಮಾಪಕದಲ್ಲಿ ಸುಮಾರು ಒಂದು ನೂರು ಯೂರೋಪಿಯನ್ ಹಕ್ಕಿಜಾತಿಗಳ ಹಾಡನ್ನು ಗುರುತಿಸಲಾದದ್ದು ಮಾತ್ರವಲ್ಲ, ಈ ಮಾರ್ಶ್ ವಾರ್ಬ್ಲರ್ ಪಕ್ಷಿ ತನ್ನ ಚಳಿಗಾಲದ ವಾಸಸ್ಥಳದಲ್ಲಿ ಕೇಳಿರುವ ಒಂದು ನೂರಕ್ಕೂ ಹೆಚ್ಚು ಆಫ್ರಿಕನ್ ಹಕ್ಕಿಜಾತಿಗಳ ಹಾಡನ್ನೂ ಗುರುತಿಸಲಾಯಿತು.”
ಕನೇರಿ ಹಕ್ಕಿಗಳು “ಭೇದ ತೋರಿಸದೆ ಯಾವುದನ್ನೂ ನಕಲು ಮಾಡುವುದರಿಂದ ಅವು ಜನಪ್ರಿಯ ಗೂಡುಹಕ್ಕಿಗಳಾಗುತ್ತವೆ. 1900 ಗಳ ಆದಿಭಾಗದಲ್ಲಿ ಒಂದು ಯುರೇಷಿಯನ್ ಬುಲ್ಫಿಂಚ್ ಹಕ್ಕಿಗೆ ‘ಗಾಡ್ ಸೇವ್ ದ ಕಿಂಗ್’ ಎಂಬ ಗಾನವನ್ನು ಸಿಳ್ಳು ಹಾಕಲು ಕಲಿಸಲ್ಪಟ್ಟ ಪ್ರಸಿದ್ಧ ಉದಾಹರಣೆ ಇದೆ. ಮರು ಕೋಣೆಯಲ್ಲಿದ್ದ ಇನ್ನೊಂದು ಕನೇರಿ ಒಂದು ವರ್ಷದೊಳಗೆ ಅದೇ ರಾಗವನ್ನು ಕಲಿಯಿತು, ಮತ್ತು ಆ ಬುಲ್ಫಿಂಚ್ ಹಕ್ಕಿ ಮೂರನೆಯ ಗೆರೆಯ ಅಂತ್ಯದಲ್ಲಿ ಮುಂದುವರಿಸಲು ತುಂಬ ತಾಮಸ ಮಾಡಿದಾಗ, ಆ ಕನೇರಿ ಮಧ್ಯೆ ಹಾಡಿ ಆ ರಾಗವನ್ನು ಮುಗಿಸುತ್ತಿತ್ತು.
ಅವುಗಳ ಹಾಡನ್ನು ಹಾಡುವಾಗ ವಿವಿಧ ಜಾತಿಯ ಹಕ್ಕಿಗಳಿಗೆ ವಿವಿಧ ವೇದಿಕೆಗಳು ಇಷ್ಟ. ಕೆಲವು ಹಕ್ಕಿಗಳು ನೆಲದ ಮೇಲಿಂದ, ಇನ್ನು ಕೆಲವು ಕಳೆಗಳ ತುದಿಯಿಂದ, ಮತ್ತು ಕೆಲವು ಮರಗಳ ತುದಿಯ ರೆಂಬೆಗಳಲ್ಲಿ ಕುಳಿತು ಹಾಡುತ್ತವೆ. ಮಾಕಿಂಗ್ಬರ್ಡ್ಗಳು ಇಂಥ ಎತ್ತರದ ತೆರೆದ ಸ್ಥಳವನ್ನು ಆರಿಸಿಕೊಂಡು, ಅಲ್ಲಿಂದ ಆಗಾಗ 3-6 ಮೀಟರುಗಳಷ್ಟು ಮೇಲೇರಿ ಹೋಗಿ ಆ ಬಳಿಕ ಕೆಳಗೆ ಬಂದು ತಂಗುತ್ತವೆ, ಮತ್ತು ಈ ಸಮಯದಲ್ಲೆಲ್ಲ ಹಾಡುತ್ತಾ ಇರುತ್ತವೆ. ತೆರೆದ ಬಯಲಲ್ಲಿ ಗೂಡು ಕಟ್ಟುವ ಹಕ್ಕಿಗಳು ಅನೇಕ ವೇಳೆ ತಾವು ತಮ್ಮ ಪ್ರದೇಶದ ಮೇಲಿಂದ ಹಾರಿ ಹೋಗುವಾಗ ಹಾಡುತ್ತವೆ. ಕವಿ ಷೆಲಿ ಬರೆದ “ಓಡ್ ಟು ಎ ಸ್ಕೈಲಾರ್ಕ್” ಎಂಬ ಸುಂದರ ಗೀತದಲ್ಲಿ ತೋರಿಸಿರುವಂತೆ, ಸ್ಕೈಲಾರ್ಕ್ ಬಾನಾಡಿ ಹಕ್ಕಿಯ ಸಂಬಂಧದಲ್ಲಿ ಇದು ನಿಜ. ಅದರಲ್ಲಿ ಅವನು ಈ “ಗೆಲವಿನ ಆತ್ಮ” ಮೇಲೇರಿ ಹೋಗಿ “ಮುನ್ಸಂಕಲ್ಪಿಸದ ಕಲೆಯ ವಿಪುಲ ಧಾಟಿ” ಯಲ್ಲಿ ತನ್ನ ಹೃದಯದಲ್ಲಿರುವುದನ್ನು ಸುರಿಸುವುದರ ಕುರಿತು ಮಾತನಾಡುತ್ತಾನೆ.
ವಸಂತ ಕಾಲ ಮತ್ತು ಬೇಸಗೆಯ ಮೊದಲಲ್ಲಿ ಅರಣೋದಯದ ಮತ್ತು ಸಂಧ್ಯಾ ಗೀತಗಳಿಗೆ ಸಮಯ. ಬೈಬಲು ಸಹ, ಇದು ಹಕ್ಕಿಗಳು ಹಾಡುವ ವಿಶೇಷ ಕಾಲವೆಂದು ಹೇಳುತ್ತದೆ. ಸೊಲೊಮೋನನ ಪರಮಗೀತವು ಚಳಿಗಾಲ ದಾಟಿದ ಬಳಿಕ, ಹೂವುಗಳು ಅರಳಿ, ಮರದಲ್ಲಿ ಹಣ್ಣು ಹುಟ್ಟುವಾಗ, ವಲಸೆ ಹೋದ ಪಕ್ಷಿಗಳು ತಮ್ಮ ಚಳಿಗಾಲದ ವಾಸಸ್ಥಾನದಿಂದ ಹಿಂದೆ ಬಂದು, “ಪಕ್ಷಿಗಳು ಕೂಗುವುವು, ಮೆಲುದನಿಯ ಪಾರಿವಾಳದ ಕೂಜಿತ ಧ್ವನಿ ನಮ್ಮ ದೇಶದಲ್ಲಿ ಕೇಳುವುದು” ಎಂದು ಹೇಳುತ್ತದೆ. (2:11, 12, The New English Bible) ಆದರೆ ಅನೇಕ ಪಕ್ಷಿಗಳು ವಸಂತ ಕಾಲ ಮತ್ತು ಬೇಸಗೆಯ ಬಳಿಕವೂ, ಜೊತೆಗಳು ಕೂಡಿ ಗೂಡು ಕಟ್ಟುವ ಸಮಯವು ಕಳೆದ ಬಳಿಕವೂ ಹಾಡುತ್ತವೆ.
ಒಬ್ಬ ಲೇಖಕನು ಹಕ್ಕಿಯ ಹಾಡಿನಲ್ಲಿ ಅಧಿಕಾಂಶ ಭ್ರಮೆಗೊಳಿಸುವ ವಿಷಯವೆಂದು ಹೇಳಿ, “ಅತಿ ಮಹತ್ತಾದ ರಹಸ್ಯವು ಹಾಡಿನ ಈ ವಿಶದವಾದ ಹೊರಸುರಿತವು ಏಕೆ ವಿಕಾಸಗೊಳ್ಳಬೇಕಿತ್ತೆಂಬುದೇ” ಎಂದೂ “ಇದು ಯಾವ ಸಂಭವನೀಯ ಕಾರ್ಯಕ್ಕೂ ಅನಗತ್ಯವಾಗಿ ವಿಶದ” ವೆಂದೂ ಹೇಳುತ್ತಾನೆ. ಆದರೆ ಅವನು ಪ್ರಾಯಶಃ, ಈ “ವಿಶದವಾದ ಹೊರಸುರಿತ” ಮೊದಲನೆಯದಾಗಿ ವಿಕಾಸಗೊಳ್ಳಲಿಲ್ಲವೆಂದೂ, ಅದನ್ನು ಗುಬ್ಬಚ್ಚಿಗಳಿಗೂ ಇತರ ಗೂಡಿನಲ್ಲಿ ಕುಳಿತುಕೊಳ್ಳುವ ತಾಯಿ ಹಕ್ಕಿಗಳಿಗೂ ಚಿಂತೆ ತೋರಿಸುವ ಯೆಹೋವ ದೇವರು ಅವುಗಳನ್ನು ಸೃಷ್ಟಿಸುವ ಸಮಯದಲ್ಲಿ ಈ ಸಂಗೀತದ ವರದಾನವನ್ನು ಕೊಟ್ಟನೆಂದೂ ಗ್ರಹಿಸಬೇಕು. (ಧರ್ಮೋಪದೇಶಕಾಂಡ 22:6, 7; ಮತ್ತಾಯ 10:29) ಪ್ರಾಯಶಃ ಈ “ಕಾರ್ಯ” ಗಳಲ್ಲಿ ಒಂದು ಪಕ್ಷಿಗಳಿಗೆ ಸಂತೋಷವನ್ನು ಕೊಡುವುದೇ ಆಗಿದೆ. ಮಾಕಿಂಗ್ಬರ್ಡ್ಗಳು ಮತ್ತು ಇತರ ಹಲವು ಹಕ್ಕಿಗಳು ಅನೇಕ ವೇಳೆ ಅತಿ ರಾತ್ರಿಯ ವರೆಗೂ ಹಾಡುತ್ತವೆ. ಅದು ಅವುಗಳ—ಮತ್ತು ನಮ್ಮ—ಸಂತೋಷಕ್ಕಾಗಿ ಅಲ್ಲವೆಂದು ಯಾರು ಹೇಳಬಹುದು?
ಅವು ಹಾಡುವ ವಿಧ ಮುಂದುವರಿಯುತ್ತಿರುವ ರಹಸ್ಯ
ಇಂಥ ವಿಶದವಾದ ಹಾಡುಗಳನ್ನು ಅವು ಏಕೆ ಹಾಡುತ್ತವೆಂಬುದು “ಅತಿ ಮಹಾ ರಹಸ್ಯ” ವಾಗಿರಲಿಕ್ಕಿಲ್ಲ; ಅವು ಹೇಗೆ ಹಾಡುತ್ತವೆಂಬುದೇ ಈ ರಹಸ್ಯವಾಗಿರಬಹುದು. ಹಿಂದೆ ಅನೇಕ ವಿಚಾರ ಸರಣಿಗಳಿದ್ದವು. ಈಗಲೂ, ತೀವ್ರ ವೈಜ್ಞಾನಿಕ ಸಂಶೋಧನೆಯ ಬಳಿಕ, ಸರ್ವಾನುಮತದ ಸಮ್ಮತಿಯಿಲ್ಲ. ಹಕ್ಕಿಯ ದನಿ ಪೆಟ್ಟಿಗೆಯ ಹೆಸರು ಸಿರಿಂಕ್ಸ್ ಗಾನಾಂಗ. ಇದು ವಿಶೇಷ ಸ್ನಾಯುಗಳಿಂದ ನಿಯಂತ್ರಿತವಾಗುವ ಸ್ಥಿತಿಸ್ಥಾಪಕ ಪೊರೆಗಳಿರುವ ಒಂದು ಎಲುಬಿನಂಥ ಪೆಟ್ಟಿಗೆಯಾಕಾರದ ಅನುರಣನಕಾರಕ ಕುಹರ. ವಿವಿಧ ಜಾತಿಯ ಹಕ್ಕಿಗಳಲ್ಲಿ ಇದು ತೀರಾ ವಿಭಿನ್ನವಾಗಿರುತ್ತದೆ. ಇದರ ಅತಿ ಜಟಿಲ ರೂಪ ಹಾಡುಹಕ್ಕಿಗಳಲ್ಲಿ ಕಂಡುಬರುತ್ತದೆ. ಇದು ಶ್ವಾಸನಾಳ ಯಾ ಉಸಿರುಗೊಳವೆ ಕೆಳಭಾಗದ ಕೊನೆಯಲ್ಲಿದ್ದು ಇದರಲ್ಲಿ ಎರಡು ಪ್ರತ್ಯೇಕ ಧ್ವನಿ ಉಗಮಗಳಿವೆ. ಪ್ರತಿ ಉಗಮಕ್ಕೆ ತನ್ನದೇ ಆದ ನರ, ಸ್ನಾಯು, ಮತ್ತು ಪೊರೆಗಳಿವೆ. ಈ ಕಾರಣದಿಂದಲೆ ಹಾಡುಹಕ್ಕಿಗಳಿಗೆ ‘ಎರಡು ಸರ್ವಗಳು’ ಇವೆಯೆಂದು ಹೇಳಲಾಗುತ್ತದೆ. ಪೊರೆಗಳಲ್ಲಿರುವ ಸ್ನಾಯು ಬಿಗಿತವನ್ನು ವರಸೆಯಾಗಿ ಬರಿಸಿ ಮತ್ತು ವಾಯುವಿನ ಒತ್ತಡವನ್ನು ಬದಲಾಯಿಸುವುದರಿಂದ ಹಕ್ಕಿಯು ಸರ್ವದ ಉಕ್ಕನ್ನೂ ಮಟ್ಟವನ್ನೂ ಮಾರ್ಪಡಿಸುತ್ತದೆ. ಹೆಚ್ಚು ಹಾಡುನಳಿಕೆಯ ಸ್ನಾಯುಗಳಿರುವ ಹಕ್ಕಿಗಳಿಗೆ ವಿವಿಧ ಜಟಿಲ ಹಾಡು ಯಾ ಕರೆಗಳನ್ನು ಉತ್ಪಾದಿಸುವ ಸಾಮರ್ಥ್ಯವಿದೆ. ಈ ಗರಿ ಧರಿಸಿರುವ ಗಾಯಕರಲ್ಲಿ ಅತಿ ಬಹುಮುಖಸಾಮರ್ಥ್ಯವಿರುವವುಗಳಿಗೆ ಏಳರಿಂದ ಒಂಭತ್ತು ಜೋಡಿ ಇಂಥ ಸ್ನಾಯುಗಳಿವೆ.
ಬರ್ಡ್ ಬಿಹೇವಿಯರ್ ಎಂಬ ಪುಸ್ತಕದಲ್ಲಿ ರಾಬರ್ಟ್ ಬರ್ಟನ್, ಈ ಹಕ್ಕಿಗಳ ಹಾಡುವ ಸಾಮರ್ಥ್ಯ ನಮ್ಮ ತಿಳಿವಳಿಕೆಗೆ ಏಕೆ ಮೀರಿದ್ದೆಂದು ತೋರಿಸುತ್ತಾರೆ: “ಒಂದೇ ಸಮಯದಲ್ಲಿ ಸಿರಿಂಕ್ಸ್ ಗಾನಾಂಗದ ಪ್ರತಿ ಅರ್ಧ ಭಾಗದಿಂದ ಬರುವ ವಿಭಿನ್ನ ಶ್ರುತಿಗಳಿರುವ ಎರಡು ರಾಗಗಳನ್ನು ಒಮ್ಮೆಯೇ ಹಾಡುವ ರೀಡ್ ವಾರ್ಬ್ಲರ್ ಮತ್ತು ಬ್ರೌನ್ ತ್ರ್ಯಾಷರ್ ಹಕ್ಕಿಗಳಂಥ ಜಾತಿಗಳಲ್ಲಿ ಧ್ವನಿ ಉತ್ಪಾದನೆ ಪರಮಾವಧಿಯನ್ನು ಏರುತ್ತದೆ. ಬ್ರೌನ್ ತ್ರ್ಯಾಷರ್ ತನ್ನ ಹಾಡಿನ ಒಂದು ಕಡೆಯಲ್ಲಿ ನಾಲ್ಕು ಪ್ರತ್ಯೇಕ ಧ್ವನಿಗಳನ್ನು ಮಾಡುತ್ತದೆ. ಈ ಚಳಕವು ಹೇಗೆ ಸಾಧಿಸಲ್ಪಡುತ್ತದೆ ಎಂಬುದು ತಿಳಿದಿರುವುದಿಲ್ಲ.
ಕಳೆದ 20 ವರ್ಷಗಳಲ್ಲಿ ಹಕ್ಕಿಗಳು ಹಾಡುವುದು ಹೇಗೆಂಬ ವಿಷಯದ ಒಪ್ಪಲ್ಪಟ್ಟಿರುವ ವಿಚಾರ ಸರಣಿಯು ಈ ಸಿರಿಂಕ್ಸಿನ ಮೇಲೆ ಮಾತ್ರ ಆಧಾರಿತವಾಗಿದೆ. ಏಕಕಾಲಿಕವಾಗಿ, ಒಂದರಿಂದ ಒಂದು ಸ್ವತಂತ್ರವಾಗಿ ವರ್ತಿಸಸಾಧ್ಯವಿರುವ ಎರಡು ಅಸಂಬಂಧಿತ ನಾದಗಳನ್ನು ಉತ್ಪಾದಿಸುವ “ಎರಡು ಸರ್ವಗಳು” ಹಕ್ಕಿಹಾಡುಗಳ ಗುಣಮಟ್ಟ ಮತ್ತು ವೈವಿಧ್ಯಕ್ಕೆ ಪೂರ್ಣವಾಗಿ ಕಾರಣಭೂತವೆಂದು ಹೇಳಲಾಗಿದೆ. ಎರಡು ಧ್ವನಿಗಳು ಸಿರಿಂಕ್ಸನ್ನು ಬಿಟ್ಟ ಬಳಿಕ, ಅವು ಬಾಯಿಂದ ಹೊರಬರುವ ತನಕ ಉಸಿರುಗೊಳವೆಯ ಉದ್ದಕ್ಕೂ ಪ್ರಯಾಣಿಸಬೇಕು. ಆದರೆ, ಈ ಹಾಡಿನ ಉತ್ಪಾದನೆಯಲ್ಲಿ ಉಸಿರುಗೊಳವೆಗಾಗಲಿ ಅದರ ಅನುರಣನ ಶಕಿಗ್ತಾಗಲಿ ಯಾವ ಪಾತ್ರವೂ ಕೊಡಲ್ಪಟ್ಟಿರುವುದಿಲ್ಲ.
ಕಳೆದ ಕೆಲವು ವರ್ಷಗಳಲ್ಲಿ, ಗಾಢವಾದ ವೈಜ್ಞಾನಿಕ ಸಂಶೋಧನೆಯ ಪರಿಣಾಮವಾಗಿ ಒಂದು ಹೊಸ ವಿಚಾರ ಸರಣಿ ಎದ್ದು ಬಂದಿದೆ. ಅದು “ಎರಡು ಹಾಡುನಾಳಿಕೆಯ ಉಗಮಗಳ ಮಧ್ಯೆ ಸಹಕಾರಿ ಸಂಯೋಜನೆಯನ್ನು” ಮತ್ತು ಅನುರಣಿಸುವ ಯಾ ವಾಚಿಕ ಹಾದಿಯಾಗಿರುವ ಶ್ವಾಸನಾಳದ ಕ್ರಿಯಾಶೀಲ ಭಾಗವಹಿಸುವಿಕೆಯನ್ನು ಕೇಳಿಕೊಳ್ಳುತ್ತದೆ. ಇದರಿಂದ ಪರಿಣಮಿಸುವ ಚಿತ್ರವು “ಸಿರಿಂಕ್ಸ್ ಗಾನಾಂಗ ಮತ್ತು ವಾಚಿಕ ನಾಳದ ಆಕಾರದ ಮಧ್ಯೆ ಒತ್ತಾದ ಸುಸಂಘಟನೆಯನ್ನೊಳಗೊಂಡಿದೆ. ಈ ಸುಸಂಘಟನೆಯು ಅನುರಣನೆಗಳ ಎಡೆಬಿಡದ ಸರಿಪಡಿಸುವಿಕೆಯನ್ನು, ಅನೇಕ ವೇಳೆ ಅತಿ ವೇಗವಾಗಿ ಮತ್ತು ನಿಷ್ಕೃಷ್ಟತೆಯಿಂದ ಹಾಡುನಳಿಕೆಯಿಂದ ಹೊರಬರುವುದರ ಬದಲಾವಣೆಗಳಿಗೆ ಸಮಾನ ಮಾಡುವಂತೆ ರೂಪಿಸಲ್ಪಟ್ಟಿದೆ.” ಪ್ರತಿಯೊಂದು “ಸರ್ವ”ವನ್ನು ವಿಂಗಡವಾಗಿ ಕೇಳುವಲ್ಲಿ, ಪೂರ್ಣಗೊಂಡಿರುವ ಹಾಡಿನ ಕೆಲವು ಶ್ರುತಿಗಳು ಕಾಣೆಯಾಗಿರುವುದು ಕಂಡುಬರುತ್ತದೆ.
ತನ್ನ ವಾಚಿಕ ಶೋಧಕವನ್ನು ಬದಲಾಯಿಸಲು ಹಾಡುಹಕ್ಕಿಗಿರುವ ಸಾಮರ್ಥ್ಯವನ್ನು ನೇಚರ್ ಪತ್ರಿಕೆಯ ಒಂದು ಲೇಖನದಲ್ಲಿ ಸೀವ್ಟನ್ ನೊವಿಕಿ ಚರ್ಚಿಸುತ್ತಾರೆ: “ಹಕ್ಕಿ ತನ್ನ ವಾಚಿಕ ಶೋಧಕವನ್ನು ಅನೇಕ ವಿಧಗಳಲ್ಲಿ ಸರಿಹೊಂದಿಸಿಕೊಳ್ಳಬಲ್ಲದು: ಉದಾಹರಣೆಗೆ, ಶ್ವಾಸನಾಳದ ಉದ್ದವನ್ನು ಹೆಚ್ಚುಕಡಮೆ ಮಾಡಿ, ದನಿ ಪೆಟ್ಟಿಗೆಯನ್ನು ಸಂಕೋಚಿಸಿ, ಅಥವಾ ತನ್ನ ಮುಂಗತ್ತನ್ನು ಮತ್ತು ಕೊಕ್ಕನ್ನು ಉಬ್ಬಿಸಿ ಇದನ್ನು ಮಾಡಬಲ್ಲದು. ಇಂಥ ಆಕಾರ ಬದಲಾವಣೆಗಳು, ಹಾಡುಹಕ್ಕಿಗಳಲ್ಲಿ ಸಾಮಾನ್ಯವಾಗಿ ನೋಡುವಂಥ ತಲೆ ಚಲನೆಗೆ ಹೊಂದಿಕೊಂಡಿರಸಾಧ್ಯವಿದೆ.” ನೊವಿಕಿ ಮುಕ್ತಾಯ ಮಾಡುತ್ತಾ ಹೇಳುವುದು: “ಹಿಂದಿನ ವಿಚಾರ ಸರಣಿಗಳಿಗೆ ವ್ಯತಿರಿಕ್ತವಾಗಿ, ಹಕ್ಕಿಹಾಡುಗಳನ್ನು ಅನೇಕ ಚಾಲಕ ವ್ಯವಸ್ಥೆಗಳು ಹೊಂದಿಕೆಯಾಗಿ ವರ್ತಿಸಿ ಹೊರಬರುವ ಸುಸಂಘಟಿತ ಉತ್ಪಾದನೆಯಾಗಿ ವೀಕ್ಷಿಸಬೇಕು.”
ಸಂಶೋಧಕರು ಹಕ್ಕಿಯ ಸರ್ವ ಮತ್ತು ಸ್ಪಷ್ಟವಾಗಿದ ಸಿಳ್ಳುಗಳ ಮಧ್ಯೆ ವ್ಯತ್ಯಾಸವನ್ನು ತೋರಿಸುತ್ತಾರೆ. ಜರ್ನಲ್ ಆಫ್ ಥಿಯೊರೆಟಿಕಲ್ ಬಯಾಲಜಿಯಲ್ಲಿ ಬರೆಯುತ್ತಾ ಎನ್.ಎಚ್. ಫೆಚ್ಲರ್, ಹಕ್ಕಿಯ ಹಾಡಿನ ಸ್ಪಷ್ಟ ಸರ್ವದ ಸಿಳ್ಳು ಸಿರಿಂಕ್ಸಿನ ಕಂಪಿಸುವ ಪೊರೆಗಳಿಂದ ಬಾರದೆ ಪೂರ್ತಿ ಭಿನ್ನವಾದ ರಚನೆಯಿಂದ ಬರುತ್ತದೆಂದು ಕಾಣುತ್ತದೆಂದೂ, ಅದು “ಶುದ್ಧ ವಾಯುಚಲನ ವಿಜ್ಞಾನದ ಮೂಲಕ, ಯಾಂತ್ರಿಕವಾಗಿ ಚಲಿಸುವ ಯಾವ ಹೊರಮೈಯ ಸಹಾಯವಿಲ್ಲದೆನೇ” ಬರುವ ಸಾಧ್ಯತೆ ಇದೆಯೆಂದು ಹೇಳುತ್ತಾರೆ. ಆ ಗೀತ ಕೌಶಲವುಳ್ಳ ಕೆಲವು ಹಕ್ಕಿಗಳು ಉಪಯೋಗಿಸುವ ಸೊಗಸಾದ ಸ್ವಚ್ಛ ಧ್ವನಿ ಇನ್ನೂ ನಮ್ಮ ತಿಳಿವಳಿಕೆಗೆ ಮೀರಿರುತ್ತದೆ.
ರಾಕಿಫೆಲರ್ ಯೂನಿವರ್ಸಿಟಿ ಫೀಲ್ಡ್ ಸೆಂಟರಿನ ಜೆಫ್ರಿ ಸಿಂಕ್ಸ್ ಈ ತುಣುಕು ಸೂಚನೆಯನ್ನು ಕೊಡುತ್ತಾರೆ: “ಹಾಡುಹಕ್ಕಿಗಳಲ್ಲಿ ಸರ್ವದ ಪರಮ ಮಟ್ಟದ ನೈಪುಣ್ಯವಿದೆಯೆಂದು ಕಂಡುಕೊಳ್ಳಲು ಓದುಗರು ಹರ್ಷಿಸಬಹುದು ಯಾ ಅದು ಅವರನ್ನು ನಮ್ರರಾಗಿ ಮಾಡಬಹುದು. . . . ನಾನೂ ನನ್ನ ಸಂಗಾತಿಗಳೂ ಪರಮ ಸರ್ವ ಮಟ್ಟದ ಗ್ರಹಿಕೆಯ ವಿಷಯದಲ್ಲಿ ಅನೇಕ ಜಾತಿಯ ಹಾಡುಹಕ್ಕಿಗಳನ್ನು ಪರೀಕ್ಷಿಸಲಾಗಿ ಅವುಗಳಲ್ಲಿ ಈ ಸಾಮರ್ಥ್ಯ ತುಂಬ ವ್ಯಾಪಕವೆಂದು ಕಂಡುಕೊಂಡಿದ್ದೇವೆ.”
ಅವುಗಳಿಗೂ ರಮ್ಯ, ನಮಗೂ ರಮ್ಯ
ಮ್ಯೂಸಿಕ್ ಪರ್ಸೆಪ್ಶನ್ನಲ್ಲಿ ಸೀಫ್ಟನ್ ನೊವಿಕಿ ಮತ್ತು ಪೀಟರ್ ಮಾರ್ಲರ್ ಬರೆದುದು: “ಪ್ರಾಣಿಗಳ ವರ್ತನೆಯನ್ನು ಅಧ್ಯಯನ ಮಾಡುವ ವಿಜ್ಞಾನಿಗಳಾದ ನಾವು ಸಂಪರ್ಕ ಸಂಕೇತವೆಂದೆಣಿಸುವ ಹಕ್ಕಿಹಾಡಿನ ಆಚಾರಾರ್ಥಕ ಮತ್ತು ವಿಕಾಸಕ ವಿಶೇಷತೆಯಲ್ಲಿ ಎಷ್ಟು ಮುಳುಗಿ ಹೋಗುತ್ತೇವೆಂದರೆ ಪ್ರಾಕೃತಿಕ ಸಂಗೀತವಾಗಿರುವ ಅದರ ಬಲಾಢ್ಯವಾದ ಸೌಂದರ್ಯೋಪಾಸನೆಯನ್ನು ನಾವು ಮರೆತು ಬಿಡುತ್ತೇವೆ.” ಅವರು ಆ ಬಳಿಕ ನೆನಪಿಸಿಕೊಳ್ಳುವುದೇನಂದರೆ, 1920ನೆಯ ದಶಕದ ಮತ್ತು ಆನಂತರದ ಕೆಲವು ವಿಜ್ಞಾನಿಗಳು, “ಹಕ್ಕಿಯ ಹಾಡನ್ನು ಹಕ್ಕಿಯ ವೀಕ್ಷಣದಿಂದಲೂ ನಮ್ಮ ವೀಕ್ಷಣದಿಂದಲೂ ಸುಂದರವಾದ ಆದ್ಯ ಕಲೆಯಾಗಿ ವೀಕ್ಷಿಸಬೇಕು.”
ಗೂಡಿನಲ್ಲಿ ಕುಳಿತಿರುವ ತಾಯಿಯ ಪಿಸುಗಾನ, ಅಗಾಧವಾದ ಕಾಡಿನಲ್ಲಿ ಮ್ಯುಸಿಷನ್ ರೆನ್ ಹಕ್ಕಿಗಳು ಹಾಡುವ ಜೋಡಿ ಗೀತ, ಸ್ಕೈಲಾರ್ಕ್ ಹಕ್ಕಿಯ ಮುನ್ಸಂಕಲ್ಪಿತವಲ್ಲದ ಕಲೆಯ ಅಮಿತ ಧ್ವನಿ, ಬೌಅರ್ಬರ್ಡ್ ಹಕ್ಕಿ, ಕೋಳಿ ತನ್ನ ಮರಿಗಳನ್ನು ಮರೆಗೆ ಕೊಂಡೊಯ್ಯುವಷ್ಟೂ ಉತ್ತಮವಾಗಿ ಹದ್ದನ್ನು ಅನುಕರಿಸುವುದು, ಪ್ರಾತಃಕಾಲದ ಆದಿ ತಾಸುಗಳಲ್ಲಿ ಮಾಕಿಂಗ್ಬರ್ಡ್ ಹಕ್ಕಿಯ ಸರ್ವಸುರಿತ, ಮತ್ತು ಇದೆಲ್ಲವನ್ನೂ ಪರಮಾವಧಿಗೇರಿಸುತ್ತಾ ಹೊರವಲಯವನ್ನು ಸಂಗೀತದಿಂದ ತುಂಬಿಸುವ ಅರುಣೋದಯದ ಮೇಳಗೀತ! ಇದೆಲ್ಲ ಸಂಖ್ಯಾಸಂಗ್ರಹಣ ಮತ್ತು ಧ್ವನಿಮಾಪಕವನ್ನು ಮೀರಿ ಹೋಗಲೇ ಬೇಕು. ಹಕ್ಕಿಗಳು ಹಾಡುವುದು ಹೇಗೆಂಬ ವಿಷಯ ನಮ್ಮ ತಿಳಿವಳಿಕೆಗೆ ಮೀರಬಹುದಾದರೂ, ಆ ರಹಸ್ಯವು ಆ ಅದ್ಭುತಕರವಾದ ನಿಪುಣ ಹಾಡುಹಕ್ಕಿಗಳ ಕಡೆಗೂ ಅವುಗಳನ್ನು ಸೃಷ್ಟಿಸಿದ ದೇವರ ಕಡೆಗೂ ನಮ್ಮ ಹೃದಯಸ್ಪರ್ಶಿತ ಗಣ್ಯತೆಯನ್ನು ವರ್ಧಿಸಬೇಕು! (g91 5/22)
[ಪುಟ 16,17 ರಲ್ಲಿರುವಚಿತ್ರ]
ಮೇಲೆ ಬಲಕ್ಕೆ, ಪ್ರದಕ್ಷಿಣವಾಗಿ: ಕೆಂಪು ಹಣೆಯ ಫಿಂಚ್, ಸ್ಯಾಟಿನ್ ಬೌಅರ್ಬರ್ಡ್, ಹಾಡು ಗುಬ್ಬಚ್ಚಿ, ಬಣ್ಣ ಬಣ್ಣಗಳ ರೆನ್, ಈಸರ್ನ್ಟ್ ಮೆಡೊಲಾರ್ಕ್
[ಕೃಪೆ]
Philip Green
[ಕೃಪೆ]
Philip Green
[ಕೃಪೆ]
J. P. Myers/VIREO/H. Armstrong Roberts
[ಕೃಪೆ]
Philip Green
[ಕೃಪೆ]
T. Ulrich/H. Armstrong Roberts
[ಪುಟ 15 ರಲ್ಲಿರುವ ಚಿತ್ರ ಕೃಪೆ]
Paul A. Berquist