ಯುವ ಜನರು ಪ್ರಶ್ನಿಸುವುದು . . .
ನಾನು ದೀಕ್ಷಾಸ್ನಾನಕ್ಕೆ ಸಿದ್ಧಳಾಗಿದ್ದೇನೊ?
ಪ್ರಿಯ ವಾಚ್ಟವರ್ ಸೊಸೈಟಿ:
ನನ್ನ ಹೆಸರು ಶ್ಯಾರನ್; ನನಗೆ 13 ವರ್ಷ ಪ್ರಾಯ. ನಾನು ದೀಕ್ಷಾಸ್ನಾನಕ್ಕೆ ಸಿದ್ಧಳೊ ಅಲ್ಲವೊ ಎಂದು ಸಂಶಯಿಸುತ್ತಿದ್ದೇನೆ. ಸಿದ್ಧಳೆಂದು ಭಾವಿಸುತ್ತೇನೆ, ಆದರೆ ಅಷ್ಟೊಂದು ನಿಶ್ಚಯವಿಲ್ಲ. ಇದು ಇತರ ಯುವ ಕ್ರೈಸ್ತರ ಮನಸ್ಸಿನಲ್ಲಿಯೂ ಇದೆ ಎಂಬುದು ನಿಶ್ಚಯ. ನನ್ನನ್ನು ಸರಿಪಡಿಸಲು ಸಹಾಯವಾಗುವಂತೆ ನೀವು ದಯವಿಟ್ಟು ಒಂದು ಲೇಖನವನ್ನು ಬರೆಯುವಿರೊ?
ಶ್ಯಾರನ್ ಹೇಳಿದ್ದು ನಿಜ. ದೀಕ್ಷಾಸ್ನಾನದ ಪ್ರಶ್ನೆ ಅನೇಕ ದೇವಭಯವುಳ್ಳ ಯುವ ಜನರ ಮನಸ್ಸಿನಲ್ಲಿದೆ. ಯೆಹೋವನ ಸಾಕ್ಷಿಗಳಾಗಿರುವ ಯುವಕರಿಗೆ, ದೇವರನ್ನು ಸೇವಿಸಲು ತಾವು ತಮ್ಮ ಸ್ವಂತ ನಿರ್ಧಾರವನ್ನು ಮಾಡಬೇಕು, ತಮ್ಮ ಹೆತ್ತವರು ಅದನ್ನು ತಮಗಾಗಿ ಮಾಡಲಾರರು ಎಂಬುದು ಗೊತ್ತು. ತನ್ನ ಶಿಷ್ಯರು ದೇವರಿಗೆ ಮಾಡುವ ಸಮರ್ಪಣೆಯನ್ನು ದೀಕ್ಷಾಸ್ನಾನದ ಮೂಲಕ ಸೂಚಿಸಬೇಕೆಂದು ಯೇಸು ಕ್ರಿಸ್ತನು ಆಜ್ಞಾಪಿಸಿದನೆಂದೂ ಅವರು ಬಲ್ಲರು.--ಮತ್ತಾಯ 28:19, 20.
ದೇವರ ಸಮರ್ಪಿತ ಸೇವಕನಾಗಿದ್ದೇನೆಂದು ಹೇಳಿ ಬಹಿರಂಗ ಘೋಷಣೆ ಮಾಡುವುದು ಒಂದು ಮಹಾ ಜವಾಬ್ದಾರಿ. ನಿಮ್ಮ ಸ್ನೇಹಿತರನ್ನು ಅಥವಾ ಹೆತ್ತವರನ್ನು ಮೆಚ್ಚಿಸಲಿಕ್ಕಾಗಿ ನೀವು ಇದರೊಳಗೆ ಧಾವಿಸಲು ಬಯಸಲಾರಿರೆಂಬುದು ನಿಶ್ಚಯ. ಇದಲ್ಲದೆ, ಯಾರೂ ನಿಮ್ಮನ್ನು ದೀಕ್ಷಾಸ್ನಾನಕ್ಕೆ ಬಲಾತ್ಕರಿಸಬಾರದು. (ಕೀರ್ತನೆ 110:3) ಆದರೂ, ಎಲ್ಲರೂ ತನ್ನ ಶಿಷ್ಯರಾಗುವ ‘ಖರ್ಚನ್ನು ಲೆಕ್ಕಿಸಬೇಕೆಂದು’ ಯೇಸು ಬುದ್ಧಿಹೇಳಿದನು. (ಲೂಕ 14:28) ಕ್ರಿಸ್ತನ ಶಿಷ್ಯನಾಗಬೇಕೊ, ಬಾರದೊ ಎಂದು ನೀವು ತೂಗಿ ನೋಡಬೇಕೆಂದು ಇದರ ಅರ್ಥವಲ್ಲ. ಶಿಷ್ಯರಾಗುವುದು ಯೋಗ್ಯ ಸಂಗತಿಯೆಂಬುದು ಸ್ಪಷ್ಟ. ಆದರೆ, ಯೆಹೋವನ ಸಾಕ್ಷಿಯಾಗುವುದರಲ್ಲಿ ಏನೆಲ್ಲಾ ಸೇರಿದೆಯೆಂದು ನಿಮಗೆ ಪೂರ್ಣವಾಗಿ ಗೊತ್ತಿರಬೇಕು.a ಆ ಬಳಿಕ, ನೀವು ಈ ಜವಾಬ್ದಾರಿಯನ್ನು ವಹಿಸಲು ನಿಜವಾಗಿಯೂ ಸಿದ್ಧರೊ ಎಂದು ನಿರ್ಧರಿಸಬೇಕು.--ಜ್ಞಾನೋಕ್ತಿ 20:25 ಹೋಲಿಸಿ.
‘ನನಗೆ ಸಾಕಷ್ಟು ವಯಸ್ಸಾಗಿದೆಯೆ?’
ಹದಿಹರೆಯವರಿಗೆ ವಯಸ್ಸಾಗುವಾಗ, ಕೆಲವು ನಿರ್ದಿಷ್ಟ ಅವಕಾಶ ಹಾಗೂ ಜವಾಬ್ದಾರಿಗಳಲ್ಲಿ ಭಾಗವಹಿಸಲು ತಮಗೆ ಹಕ್ಕಿದೆ ಎಂದು ಅವರು ನೆನಸುತ್ತಾರೆ. ಕುಟುಂಬದ ಕಾರನ್ನು ನಡೆಸುವುದರಲ್ಲಿ, ಶಾಲಾನಂತರದ ಉದ್ಯೋಗಕ್ಕೆ ಅನುಮತಿ ಕೇಳುವುದರಲ್ಲಿ, ತಮ್ಮ ಖರ್ಚಿಗಾಗಿ ಸ್ವಂತ ಹಣಬೇಕೆಂದು ಹೇಳುವುದರಲ್ಲಿ ಅವರು ಕ್ಷಿಪ್ರತೆ ತೋರಿಸುತ್ತಾರೆ. ಆದರೆ ದೀಕ್ಷಾಸ್ನಾನದ ಪ್ರಶ್ನೆ ಬರುವಾಗ, ತಾವು ಇನ್ನೂ ಚಿಕ್ಕವರು ಯಾ ಆ ಜವಾಬ್ದಾರಿಗೆ ಸಿದ್ಧರಲ್ಲ ಎಂದು ಅನೇಕ ಯುವ ಜನರು ನೆವ ಹೇಳುತ್ತಾರೆ. ಆಂಡ್ರೆ ಎಂಬ ಯುವಕನು ಅವಲೋಕಿಸಿದ್ದು: “ಅನೇಕ ಯುವ ಜನರು ದೀಕ್ಷಾಸ್ನಾನಕ್ಕೆ 17 ಯಾ 18 ವಯಸ್ಸಿನ ತನಕ ಕಾಯುತ್ತಾರೆ, ಆದರೆ ಅದು ಜಾಸ್ತಿ ವಯಸ್ಸು.” ಏಕೆ? “ಏಕೆಂದರೆ ಇದಕ್ಕೆ ಎಷ್ಟೋ ಮೊದಲು ಅವರು ಅನೇಕ ಇತರ ತೀರ್ಮಾನಗಳನ್ನು ಮಾಡುವ ವಯಸ್ಸಿನವರಾಗಿರುತ್ತಾರೆ.”
ಹೌದು, ನೀವು ಕೇವಲ ಹದಿಹರೆಯದವರೆಂಬುದು ‘ಎರಡು ಮನಸ್ಸು’ ಉಳ್ಳವರಾಗುವುದಕ್ಕೆ ನೆವವಾಗಿರುವುದಿಲ್ಲ; ಕ್ರೈಸ್ತನಾಗಿರುವ ಸ್ಥಾನವನ್ನು ತಕ್ಕೊಳ್ಳುವುದರಲ್ಲಿ ಹಿಂಜರಿಯಲಿಕ್ಕೂ ಅದು ನ್ಯಾಯವಾದ ಕಾರಣವಲ್ಲ. (1 ಅರಸು 18:21) “ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು” ಎಂದು ಬೈಬಲು ಸಲಹೆ ನೀಡುತ್ತದೆ. (ಪ್ರಸಂಗಿ 12:1) ಅತಿ ಎಳೆಯ ಪ್ರಾಯದಲ್ಲಿಯೆ ಯೆಹೋವನನ್ನು ಸೇವಿಸಲಾರಂಭಿಸಿದವರಲ್ಲಿ ಪ್ರವಾದಿ ಸಮುವೇಲನು ಒಬ್ಬನು. (1 ಸಮುವೇಲ 3:1-18; 12:2) ಕೀರ್ತನೆಗಾರ ದಾವೀದನು ಸಹ ಇದೇ ರೀತಿ, “ಕರ್ತನಾದ ಯೆಹೋವನೇ, ಬಾಲ್ಯಾರಭ್ಯ ನನ್ನ ನಿರೀಕ್ಷೆಯೂ ಭರವಸವೂ ನೀನಲ್ಲವೋ?” ಎಂದು ಹೇಳಸಾಧ್ಯವಾಯಿತು.—ಕೀರ್ತನೆ 71:5.
ತದ್ರೀತಿ, ಇಂದು ಸಾವಿರಾರು ಮಂದಿ ಕ್ರೈಸ್ತ ಯುವ ಜನರು—ಕೆಲವು ಹದಿಪ್ರಾಯಕ್ಕೂ ಮೊದಲಿನವರು ಸಹ—ದೇವರನ್ನು ಸೇವಿಸಲಿಕ್ಕಾಗಿ ಸಮರ್ಪಣೆ ಮಾಡಲು ತಾವು ಸಾಕಷ್ಟು ಜವಾಬ್ದಾರರು ಎಂದು ತೋರಿಸಿಕೊಟ್ಟಿದ್ದಾರೆ. ಕೆಲವು ಹದಿಪ್ರಾಯದವರು ಗಂಭೀರ ಮನೋಭಾವವಿಲ್ಲದೆ ದೀಕ್ಷಾಸ್ನಾನದಂಥ ಬಹಳ ವ್ಯಾಪನೆಯುಳ್ಳ ನಿರ್ಧಾರವನ್ನು ಮಾಡಲು ತೀರಾ ಬೇಜವಾಬ್ದಾರರು ಮತ್ತು ಭಾವನಾತ್ಮಕವಾಗಿ ಅಪ್ರೌಢರು ಎಂಬುದು ಒಪ್ಪತಕ್ಕ ವಿಷಯ. (ಜ್ಞಾನೋಕ್ತಿ 22:15) ಆದರೆ ಇದು ನಿಮ್ಮ ವಿಷಯದಲ್ಲಿ ಸತ್ಯವೊ? (ನಿಮ್ಮ ಹೆತ್ತವರಿಗೆ ಈ ವಿಷಯದಲ್ಲಿ ತುಂಬ ಹೇಳುವ ಅವಕಾಶವಿದೆ ಎಂಬುದು ನಿಸ್ಸಂಶಯ.) 40 ವರ್ಷ ಪ್ರಾಯದವನ ಪಕ್ವತೆಯನ್ನು ದೇವರು ಹದಿಪ್ರಾಯದವನಿಂದ ಬಯಸುವುದಿಲ್ಲ. ನೀವು “ಯೌವನದ ಇಚ್ಫೆಗಳಿಗೆ” ಅಧೀನರೆಂಬುದು ಆತನಿಗೆ ಚೆನ್ನಾಗಿ ತಿಳಿದದೆ. (2 ತಿಮೊಥಿ 2:22) ಆದರೆ ನೀವು ನ್ಯಾಯಸಮ್ಮತವಾದ ಗಂಭೀರತೆಯುಳ್ಳವರೂ ಜವಾಬ್ದಾರರೂ ಆಗಿರುವಷ್ಟು ವಯಸ್ಸಿನವರಾಗಿದ್ದರೆ, ಪ್ರಾಯಶಃ ಸಮರ್ಪಿಸಿಕೊಳ್ಳಲು ಯೋಗ್ಯ ವಯಸ್ಸಿನವರಾಗಿದ್ದೀರಿ. ಆದರೂ, ನೀವು ಕೇಳಿಕೊಳ್ಳತಕ್ಕದಾದ ಇತರ ಪ್ರಶ್ನೆಗಳಿವೆ.
‘ನಾನು ಸಾಕಷ್ಟು ಜ್ಞಾನವನ್ನು ಪಡೆದಿದ್ದೇನೆಯೆ?’
ಎಫ್. ಫಿಲಿಪ್ ರೈಸ್ ಅವರ ದಿ ಆ್ಯಡೊಲೆಸೆಂಟ್ ಎಂಬ ಪುಸ್ತಕ ಅವಲೋಕಿಸುವುದು: “ಆಕ್ರಮಣ ಮತ್ತು ಪರೀಕ್ಷೆಯ ಸಮಯದಲ್ಲಿ ಧರ್ಮದ ಕುರಿತ ಆಳವಿಲ್ಲದ, ಸರಳ ಸಾಮಾನ್ಯ ಜ್ಞಾನವು ಅನೇಕ ವೇಳೆ ಸ್ಥಿರವಾಗಿ ನಿಲ್ಲದು.” ಆದರೂ, ಶ್ರೀ ರೈಸ್ ಗಮನಿಸುವುದು: “ಇಂದಿನ ಯುವ ಜನರು ಶೋಚನೀಯವಾಗಿ ತಿಳಿವಳಿಕೆಯಿಲ್ಲದವರಾಗಿದ್ದಾರೆ ಎಂಬುದಕ್ಕೆ ಕೆಲವು ಸೂಚನೆಗಳಿವೆ. ವಿಶ್ವವಿದ್ಯಾಲಯದ ಪ್ರಾಟೆಸ್ಟಾಂಟ್ ಮತ್ತು ಜ್ಯೂವಿಶ್ ಎರಡನೆಯ ವರ್ಷದ ವಿದ್ಯಾರ್ಥಿಗಳ ಬೈಬಲ್ ಜ್ಞಾನದ ಅಧ್ಯಯನವು ಹಳೆಯ ಮತ್ತು ಹೊಸ ಒಡಂಬಡಿಕೆಗಳ ಸಂಬಂಧದಲ್ಲಿ ಅವರ ನಿಜ ಅಜ್ಞಾನವನ್ನು ತೋರಿಸಿತು.”
ದೀಕ್ಷಾಸ್ನಾನ ಹೊಂದುವವನ ವಿಷಯದಲ್ಲಿ ಇದು ನಿಜವಾಗಿರಬಾರದು. ಶಿಷ್ಯನಾಗಲು ಅಥವಾ ಕಲಿಸಲ್ಪಟ್ಟವನಾಗಲು ಒಬ್ಬನು ಮೊದಲಾಗಿ ‘ಜ್ಞಾನ ಪಡೆಯ’ ಬೇಕು. (ಯೋಹಾನ 17:3; ಮತ್ತಾಯ 28:19) ಆದುದರಿಂದ, ದೀಕ್ಷಾಸ್ನಾನ ಹೊಂದುವ ಮೊದಲಾಗಿ ನಿಮಗೆ “ದೈವೋಕ್ತಿಗಳ ಮೂಲಪಾಠ” ಗಳಾದರೂ ತಿಳಿದಿರಬೇಕೆಂದು ಅಪೇಕ್ಷಿಸುವುದು ನ್ಯಾಯಸಮ್ಮತವಲ್ಲವೆ? (ಇಬ್ರಿಯ 5:12) ಇದರಲ್ಲಿ ಆತ್ಮ, ಮೃತರ ಸ್ಥಿತಿ, ದೇವರ ನಾಮದ ಶುದ್ಧೀಕರಣ, ರಾಜ್ಯ, ಮತ್ತು ಪ್ರಾಯಶ್ಚಿತ್ತ--ಇಂಥವುಗಳ ಕುರಿತು ಬೈಬಲು ಏನು ಕಲಿಸುತ್ತದೆಂದು ತಿಳಿದಿರುವುದು ಸೇರಿರುವುದು.
ನೀವು ಹೆತ್ತವರ ಕೂಡ ಕ್ರೈಸ್ತ ಕೂಟಗಳಿಗೆ ಹೋಗಿರುವ ಕಾರಣ ಬೈಬಲಿನ ತುಸು ಜ್ಞಾನ ನಿಮಗಿದೆಯೆಂಬುದು ಸತ್ಯ. ಆದರೆ ಈ ರೀತಿ ಪಡೆದಿರುವ ಜ್ಞಾನವು ಆಳವಿಲ್ಲದ್ದಾಗಿರುವುದರಿಂದ “ಆಕ್ರಮಣ ಮತ್ತು ಪರೀಕ್ಷೆಯ ಸಮಯದಲ್ಲಿ . . . ಸ್ಥಿರವಾಗಿ” ನಿಲ್ಲುವುದು ಅಸಂಭವನೀಯ. ಇತರರಿಗೆ “ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರ” ವನ್ನು ನೀವು ಕೊಡಶಕ್ತರಾಗಬೇಕು.—1 ಪೇತ್ರ 3:15.
ತಾನು ಬೈಬಲ್ ಸತ್ಯಗಳನ್ನು ನಂಬಿದ್ದೇನೆಂದು ಟೆರಿ ಹೇಳಿದಳು. ಆದರೂ ಆಕೆ ಒಪ್ಪಿಕೊಳ್ಳುವುದು: “ನನ್ನ ಸ್ವಂತ ಪ್ರಶ್ನೆಗಳನ್ನು ಹಾಕಿ, ಬಳಿಕ ಅವುಗಳಿಗೆ ಉತ್ತರ ಪಡೆಯುವದು, ಹೀಗೆ ನಾನು ಹಿಂದೆಂದೂ ನನ್ನನ್ನು ತೃಪ್ತಿ ಪಡಿಸಿಕೊಂಡದ್ದಿಲ್ಲ. ಇತ್ತೀಚೆಗೆ ನಾನು ಹೀಗೆ ಮಾಡಲು ಆರಂಭಿಸಿದೆ.” ಇಂಥ ಬೈಬಲ್ ಅಧ್ಯಯನ ಕಾರ್ಯಕ್ರಮದ ಫಲಿತಾಂಶವೊ? “ನನ್ನ ನಂಬಿಕೆ ಹೆಚ್ಚುತ್ತಿದೆ, ಮತ್ತು ಈಗ ನನಗೆ ಜನರೊಂದಿಗೆ ನಿಜ ನಿಶಿತ್ಚಾಭಿಪ್ರಾಯದಿಂದ ಮಾತಾಡಲು ಸಾಧ್ಯವಾಗುತ್ತದೆ. ಇದು ಸತ್ಯವೊ ಎಂದು ಕೇಳಿಕೊಳ್ಳಲು ಭಯಪಡಬಾರದೆಂದು ನಾನು ಎಲ್ಲ ಸಾಕ್ಷಿ - ಯುವ ಜನರಿಗೆ ಹೇಳುತ್ತೇನೆ. ಕಂಡು ಹಿಡಿಯಿರಿ! ಸಂಶೋಧನೆ, ಅಧ್ಯಯನವನ್ನು ಮಾಡಿರಿ. ‘ಸಕಲ ವಿಷಯಗಳನ್ನು ಪರಿಶೋಧಿಸಿರಿ.’ ಆಗ ನೀವು ಸಂಪೂರ್ಣ ಹೃದಯದಿಂದ ನಿಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳಲು ಶಕ್ತರಾಗುವಿರಿ.”—1 ಥೆಸಲೊನೀಕ 5:21.
“ವಾಕ್ಯದ ಪ್ರಕಾರ ನಡೆಯುವರಾಗಿರಿ”
ಆದರೆ ನಾವು, “ವಾಕ್ಯದ ಪ್ರಕಾರ ನಡೆಯವವರು” ಆಗಿರಬೇಕು, “ಅದನ್ನು ಕೇಳುವವರು ಮಾತ್ರವೇ” ಆಗಿರಬಾರದು. (ಯಾಕೋಬ 1:22) ಗುರುತರವಾದ ತಪ್ಪುಗಳನ್ನು ಅಡಗಿಸಿಡುತ್ತಾ ‘ಕಪಟಿಯಾಗಿ’ ನೀವು ನಿಮ್ಮನ್ನು ದೀಕ್ಷಾಸ್ನಾನಕ್ಕೆ ಒಪ್ಪಿಸಿಕೊಡಸಾಧ್ಯವಿಲ್ಲ. (ಕೀರ್ತನೆ 26:4) ಇಂಥ ತಪ್ಪುಗಳಲ್ಲಿ ಲೈಂಗಿಕ ದುರಾಚಾರ, ಕುಡುಕತನ, ಮಾದಕ ಪದಾರ್ಥದ ದುರುಪಯೋಗ, ಅಥವಾ 1 ಕೊರಿಂಥ 6:9, 10ರಲ್ಲಿ ಹೇಳಿರುವ ಸಕಲ ಪಾಪಗಳು ಸೇರಿರುವುವು. ಇದರ ಸಂಬಂಧದಲ್ಲಿ ನಿಮಗೆ ಸಮಸ್ಯೆ ಇದ್ದಿರುವಲ್ಲಿ ಕ್ರೈಸ್ತ ಹಿರಿಯರೊಂದಿಗೆ ಮಾತಾಡುವಂತೆ ನಿಮ್ಮ ಹೆತ್ತವರ ಮುಖೇನ ಏಕೆ ಏರ್ಪಡಿಸಬಾರದು? ನಿಮಗೆ ದಯಾಪೂರ್ವಕವಾದ ಸಹಾಯ ಕೊಡಲ್ಪಡುವುದೆಂಬ ಖಾತ್ರಿ ಇರಲಿ.—ಯಾಕೋಬ 5:14, 15.
ನೀವು ನಿಮ್ಮ ಹೆತ್ತವರನ್ನು ಕಾಣುವ ವಿಧ ಯಾ ಕ್ರೈಸ್ತ ಹಿರಿಯರಿಂದ ಬರುವ ಸಲಹೆಯನ್ನು ವೀಕ್ಷಿಸುವ ವಿಧ, ಮತ್ತು ನಿಮ್ಮ ಮಿತ್ರರನ್ನು ಆರಿಸಿಕೊಳ್ಳುವ ರೀತಿಯಲ್ಲಿಯೂ ಬದಲಾವಣೆಗಳು ಅವಶ್ಯವಿರಬಹುದು. (ಜ್ಞಾನೋಕ್ತಿ 6:20; 13.20; 1 ಕೊರಿಂಥ 15:33; ಇಬ್ರಿಯ 13:17) ಇಂಥ ಬದಲಾವಣೆಗಳನ್ನು ಮಾಡುವುದು ಸುಲಭವಾಗಿರಲಿಕ್ಕಿಲ್ಲ, ಆದರೆ ಜ್ಞಾನೋಕ್ತಿ 11:19 ನಮಗೆ ಜ್ಞಾಪಕ ಹುಟ್ಟಿಸುವುದು: “ಧರ್ಮನಿರತನಿಗೆ ಜೀವ, ಅಧರ್ಮಾಸಕ್ತನಿಗೆ ಮರಣ.”
ನೀವು ಪರಿಪೂರ್ಣರಾಗಿರಬೇಕೆಂದು ಯೆಹೋವನು ಅಪೇಕ್ಷಿಸುತ್ತಾನೊ? ಇಲ್ಲ. “ನನ್ನ ಹೃದಯವನ್ನು ಶುದ್ಧಿ ಮಾಡಿಕೊಂಡಿದ್ದೇನೆ; ನನ್ನ ಪಾಪವನ್ನು ಕಳೆದುಕೊಂಡು ನಿರ್ಮಲನಾಗಿದ್ದೇನೆ ಎಂದು ಯಾರು ಹೇಳಬಲ್ಲರು?” ಎಂದು ಕೇಳುತ್ತದೆ ಜ್ಞಾನೋಕ್ತಿ 20:9. ಅಪೂರ್ಣರಾಗಿರುವ ನಾವು ಇನ್ನೂ ತಪ್ಪು ಮಾಡುವ ಪ್ರವೃತ್ತಿಯಲ್ಲಿದ್ದೇವೆ. ಆದರೆ ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಕಾರಣ, ನಾವು ದೇವರೊಂದಿಗೆ ಸುಸಂಬಂಧದಲ್ಲಿರಬಲ್ಲೆವು. (1 ಯೋಹಾನ 2:1, 2) ಉದಾಹರಣೆಗೆ, ಅಶುದ್ಧ ಅಭ್ಯಾಸವಾದ ಮುಷ್ಟಿ ಮೈಥುನದಂಥ ಕೆಟ್ಟ ಅಭ್ಯಾಸಗಳ ವಿರುದ್ಧ ಕಠಿಣ ಹೋರಾಟ ನಡೆಸುತ್ತಿರುವ ಹುಡುಗ ಯಾ ಹುಡುಗಿ, ತಾವು ದೀಕ್ಷಾಸ್ನಾನಕ್ಕೆ ಅನರ್ಹರೆಂದು ಎಣಿಸುವ ಅವಶ್ಯವಿಲ್ಲ.b ಹೌದು, ಅನೀತಿಯನ್ನು ಸತತ ತಡೆಯುವುದರ ಮೂಲಕ ಒಬ್ಬನು ಯೆಹೋವನ ಹೃದಯವನ್ನು ಸಂತೋಷಪಡಿಸಬಹುದು!—ಜ್ಞಾನೋಕ್ತಿ 27:11.
‘ನಾನು ದೇವರನ್ನು ನನ್ನ ಸ್ನೇಹಿತನಾಗಿ ಮಾಡಿದ್ದೇನೊ?’
ಪ್ರಾಯಶಃ ಅತಿ ವಿಷಮ ಪ್ರಶ್ನೆಯು ನಿಮಗೆ ದೇವರೊಂದಿಗಿರುವ ಸಂಬಂಧದ ವಿಷಯವಾಗಿರುತ್ತದೆ. ಇದು ಜ್ಞಾಪಕದಲ್ಲಿರಲಿ: ನೀವು ನಿಮ್ಮನ್ನು ಸಮರ್ಪಿಸಿಕೊಳ್ಳುವುದು ಒಂದು ಕೆಲಸ ಯಾ ಧ್ಯೇಯಕ್ಕಲ್ಲ; ಒಂದು ಸಂಘಕ್ಕೂ ಅಲ್ಲ. ಅದು ದೇವರಿಗೆನೇ. ಈ ದೇವರು ನಿಮಗೆ ಭಾವನಾರೂಪನೆಂದೂ ಬಹು ದೂರದಲ್ಲಿರುವವನೆಂದೂ ಕಾಣುತ್ತದೊ? ಅಥವಾ ನೀವು ಆತನನ್ನು ವ್ಯಕ್ತಿಯಾಗಿ ತಿಳಿದು ಪ್ರೀತಿಸುತ್ತೀರೊ? (ವಿಮೋಚನಕಾಂಡ 34:6, 7) ಹಾಗಿರುವಲ್ಲಿ, ನೀವಾತನೊಂದಿಗೆ ಯಾಂತ್ರಿಕವಾಗಿಯಲ್ಲ, ಹೃತ್ಪೂರ್ವಕವಾಗಿ ಅನೇಕ ವೇಳೆ ಮಾತಾಡುತ್ತೀರೆಂದು ಕಂಡುಕೊಳ್ಳುವಿರಿ.—ಕೀರ್ತನೆ 62:8.
ದೇವರ ಕುರಿತು ಇತರರಿಗೆ ಮಾತಾಡಲು ನೀವು ನಿರ್ಬಂಧಕ್ಕೊಳಗಾಗುವುದೂ ನಿಮಗೆ ತಿಳಿದು ಬರುವುದು. (2 ಕೊರಿಂಥ 5:14 ಹೋಲಿಸಿ.) ಜ್ಞಾನೋಕ್ತಿ 15:7 ಹೇಳುವುದು: “ಜ್ಞಾನಿಗಳ ತುಟಿಗಳು ತಿಳುವಳಿಕೆಯನ್ನು ಬಿತ್ತುವವು.” ನೀವು ಇದನ್ನು ಇತರರಿಗೆ ಕ್ರಮವಾಗಿ ಸಾರುವುದರ ಮೂಲಕ ಮಾಡುತ್ತಿದ್ದೀರೊ? ಅಥವಾ ವಿನೋದ ವಿಹಾರ, ಮನೋರಂಜನೆ, ಯಾ ಸೋಮಾರಿತನವು ಸಹ ಇತರರು ದೇವರನ್ನು ತಿಳಿಯುವಂತೆ ಸಹಾಯ ಮಾಡುವುದರಿಂದ ನಿಮ್ಮನ್ನು ತಡೆದು ಹಿಡಿಯುವಂತೆ ನೀವು ಬಿಡುತ್ತೀರೊ?—ಜ್ಞಾನೋಕ್ತಿ 19:24.
ಹೌದು, ದೀಕ್ಷಾಸ್ನಾನವು ಅರ್ಥಪೂರ್ಣವಾಗಬೇಕಾದರೆ ದೇವರು ನಿಮ್ಮ ಅತಿ ಆಪ್ತ ಸ್ನೇಹಿತನಾಗಿರಲೇಬೇಕು. (ಯಾಕೋಬ 2:23 ಹೋಲಿಸಿ.) ವಿಷಯವು ಈಗ ಹಾಗಿಲ್ಲದಿರುವುದಾದರೆ ತಪ್ಪು ದೇವರದ್ದಲ್ಲ, ಏಕೆಂದರೆ ಆತನು ಸಕಲರನ್ನೂ ಅವರು ತನ್ನನ್ನು ಹುಡುಕುವಂತೆ ಮಮತೆಯಿಂದ ಆಮಂತ್ರಿಸುತ್ತಾನೆ. (ಅಪೊಸ್ತಲರ ಕೃತ್ಯ 17:27) ಮತ್ತು ವ್ಯಕ್ತಿಪರವಾದ ಅಧ್ಯಯನ, ಪ್ರಾರ್ಥನೆ, ಆತನ ಜನರೊಂದಿಗೆ ಸಹವಸಿಸುವುದನ್ನು ಪಟ್ಟು ಹಿಡಿದು ಮಾಡುವುದರಿಂದ, ನೀವು ಸಕಾಲದಲ್ಲಿ ದೇವರಿಗೆ ಸಮೀಪದಲ್ಲಿರುವಿರೆಂದು ತಿಳಿಯುವಿರಿ. (ರೋಮಾಪುರ 12:12; 1 ತಿಮೊಥಿ 4:15; ಇಬ್ರಿಯ 10:24, 25) ದೀಕ್ಷಾಸ್ನಾನವು ಹೀಗೆ ‘ದೇವರ ಸಮೀಪಕ್ಕೆ’ ಬರುವುದರ ಸ್ವಾಭಾವಿಕ ಪರಿಣಾಮವಾಗಿರುವುದು.—ಯಾಕೋಬ 4:8.
ದೃಷ್ಟಾಂತಕ್ಕೆ, ಸಿಂಡಿ ಎಂಬ ಒಬ್ಬ ಚಿಕ್ಕ ಹುಡುಗಿಯನ್ನು ಪರಿಗಣಿಸಿರಿ. ಅವಳು ಬರೆಯುವುದು: “14 ವರ್ಷ ವಯಸ್ಸಿನಲ್ಲಿ ನಾನು ದೀಕ್ಷಾಸ್ನಾನ ಹೊಂದಿದೆ. ಅದಕ್ಕೆ ಮನಸ್ಸಿಲ್ಲದೆ ಇರುವುದೆಂದರೆ ಏನೆಂದು ನನಗೆ ಗೊತ್ತು. ಆದರೆ ಅದು ಒಬ್ಬನು ಮಾಡಸಾಧ್ಯವಿರುವ ಅತಿ ಆಶ್ಚರ್ಯಕರ ಸಂಗತಿ ಎಂದು ನಾನು ಹೇಳ ಬಯಸುತ್ತೇನೆ. ಯೆಹೋವನು ನಿಮಗೆ ಸಮ್ಮತಿ ಸೂಚಿಸಿದ್ದಾನೆಂದೂ, ‘ಆತನು ನಿಮ್ಮನ್ನು ಬಿಡುವುದೂ ಇಲ್ಲ, ತ್ಯಜಿಸುವುದೂ ಇಲ್ಲ’ ವೆಂಬ ತಿಳಿವಳಿಕೆ ನಿಮಗಿರುವುದನ್ನು ಭಾವಿಸಿರಿ. (ಇಬ್ರಿಯ 13:5) ಯಾವನಾದರೂ ನನ್ನೊಂದಿಗೆ, ತಾನು ಯೆಹೋವನಿಗೆ ಸಮರ್ಪಿಸಿಕೊಳ್ಳಬೇಕೊ ಎಂದು ಕೇಳುವಲ್ಲಿ ನಾನು ಹೌದು! ಎಂದು ಹೇಳುವೆನು. ಆದರೆ ಇನ್ನೊಬ್ಬನನ್ನು ಮೆಚ್ಚಿಸುವ ಸಲುವಾಗಿ ಇದನ್ನು ಮಾಡಬೇಡಿ. ನಿಮಗೆ ಮನಸ್ಸಿರುವ ಕಾರಣವೇ ಇದನ್ನು ಮಾಡಿರಿ.” (g90 4/8)
[ಅಧ್ಯಯನ ಪ್ರಶ್ನೆಗಳು]
a ಮಾರ್ಚ್ 22, 1990ರ ಅವೇಕ್! ಸಂಚಿಕೆಯಲ್ಲಿ “ಶುಡ್ ಐ ಗೆಟ್ ಬ್ಯಾಪ್ಟೈಸ್ಡ್?” ನೋಡಿ.
b ಕ್ವೆಶ್ಚನ್ಸ್ ಯಂಗ್ ಪೀಪ್ಲ್ ಆಸ್ಕ್—ಆನ್ಸರ್ಸ್ ದ್ಯಾಟ್ ವರ್ಕ್ ಎಂಬ ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಪ್ರಕಾಶಿತ ಪುಸ್ತಕದ 25, 26 ಅಧ್ಯಾಯಗಳನ್ನು ನೋಡಿ.
[ಪುಟ 13 ರಲ್ಲಿರುವಚಿತ್ರ]
ಅನೇಕ ಯುವ ಜನರು ದೀಕ್ಷಾಸ್ನಾನಕ್ಕೆ ಅರ್ಹತೆ ಪಡೆಯುತ್ತಾರೆ. ನೀವೊ?