ಇದನ್ನ ಮಾಡಿ ನೋಡಿ!
ನಿಮ್ಮ ಮನಸ್ಸನ್ನ ತಯಾರಿ ಮಾಡ್ಕೊಳ್ಳಿ
ನಾವು ಯೆಹೋವನ ಬಗ್ಗೆ ಬೈಬಲಿಂದ ಕಲಿಯೋ ವಿಷ್ಯಗಳು ನಮ್ಮ ಹೃದಯದ ಒಳಗೆ ಹೋಗಬೇಕಂದ್ರೆ ನಾವು ತಯಾರಿ ಮಾಡ್ಕೊಬೇಕು. ಇದಕ್ಕೆ ಎಜ್ರ ಒಂದು ಒಳ್ಳೇ ಮಾದರಿ. ಅವನು “ಯೆಹೋವನ ನಿಯಮ ಪುಸ್ತಕದಲ್ಲಿದ್ದ ವಿಷ್ಯಗಳನ್ನ ಅಧ್ಯಯನ ಮಾಡಬೇಕಂತ . . . ತನ್ನ ಹೃದಯವನ್ನ ಸಿದ್ಧ ಮಾಡ್ಕೊಂಡಿದ್ದ.” (ಎಜ್ರ 7:10, ಪಾದಟಿಪ್ಪಣಿ) ನಮ್ಮ ಮನಸ್ಸನ್ನ ತಯಾರಿ ಮಾಡ್ಕೊಳ್ಳೋದು ಹೇಗೆ?
ಪ್ರಾರ್ಥನೆ ಮಾಡಿ. ಪ್ರತಿ ಸಲ ಅಧ್ಯಯನ ಮಾಡೋ ಮುಂಚೆ ಪ್ರಾರ್ಥನೆ ಮಾಡಿ. ಕಲ್ತಿರೋ ವಿಷ್ಯನ ಅರ್ಥಮಾಡ್ಕೊಳ್ಳೋಕೆ, ಪಾಲಿಸೋಕೆ ಯೆಹೋವನ ಸಹಾಯ ಕೇಳಿ.—ಕೀರ್ತ. 119:18, 34.
ದೀನತೆ ಬೆಳೆಸ್ಕೊಳ್ಳಿ. ಅಹಂಕಾರದಿಂದ ನಡ್ಕೊಳ್ಳೋ, ತಮ್ಮ ಬುದ್ಧಿ ಮೇಲೆ ಆತ್ಕೊಳ್ಳೋ ಜನ್ರಿಗೆ ದೇವರು ಸತ್ಯನ ತಿಳಿಸಲ್ಲ. (ಲೂಕ 10:21) ನಮಗೆ ತುಂಬ ಗೊತ್ತು ಅಂತ ಬೇರೆಯವ್ರಿಗೆ ತೋರಿಸೋಕೆ ಅಧ್ಯಯನ ಮಾಡಬಾರದು. ನಮ್ಮಲ್ಲಿ ಏನಾದ್ರೂ ಬದಲಾವಣೆ ಮಾಡ್ಕೊಬೇಕು ಅಂತ ಗೊತ್ತಾದಾಗ ದೀನತೆಯಿಂದ ಒಪ್ಕೊಬೇಕು ಮತ್ತು ಬದಲಾವಣೆ ಮಾಡ್ಕೊಬೇಕು.
ರಾಜ್ಯ ಗೀತೆ ಕೇಳಿಸ್ಕೊಳ್ಳಿ. ಹಾಡುಗಳಿಗೆ ಮನಸ್ಸು ಮುಟ್ಟೋ ಶಕ್ತಿ ಇದೆ ಮತ್ತು ಅವು ಆರಾಧನೆ ಮಾಡೋಕೆ ನಮ್ಮ ಮನಸ್ಸನ್ನ ತಯಾರಿ ಮಾಡುತ್ತೆ. ಹಾಗಾಗಿ ಅಧ್ಯಯನ ಶುರು ಮಾಡೋ ಮುಂಚೆ ಹೃದಯನ ಸಿದ್ಧ ಮಾಡ್ಕೊಳ್ಳೋಕೆ ಒಂದಾದ್ರೂ ರಾಜ್ಯ ಗೀತೆ ಕೇಳಿಸ್ಕೊಳ್ಳಿ.