ಆಡಳಿತ ಮಂಡಲಿಯಿಂದ ನಿಮಗೊಂದು ಪತ್ರ
ಪ್ರಿಯ ಸಹೋದರ ಸಹೋದರಿಯರೇ,
“ನಮ್ಮ ಪ್ರಾರ್ಥನೆಗಳಲ್ಲಿ ನಿಮ್ಮೆಲ್ಲರ ಕುರಿತು ತಿಳಿಸುವಾಗ ಯಾವಾಗಲೂ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ನಿಮ್ಮ ನಂಬಿಗಸ್ತ ಕ್ರಿಯೆಯನ್ನು, ನಿಮ್ಮ ಪ್ರೀತಿಪೂರ್ವಕ ಪ್ರಯಾಸವನ್ನು ಮತ್ತು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ನಿಮಗಿರುವ ನಿರೀಕ್ಷೆಯಿಂದ ಉಂಟಾದ ನಿಮ್ಮ ತಾಳ್ಮೆಯನ್ನು ನಾವು ನಮ್ಮ ದೇವರೂ ತಂದೆಯೂ ಆಗಿರುವಾತನ ಮುಂದೆ ಎಡೆಬಿಡದೆ ಮನಸ್ಸಿನಲ್ಲಿಟ್ಟುಕೊಂಡಿದ್ದೇವೆ.” (1 ಥೆಸ. 1:2, 3) ನಮಗೂ ನಿಮ್ಮ ಬಗ್ಗೆ ಇದೇ ಭಾವನೆ ಇದೆ. ನಿಮ್ಮನ್ನು ಕೊಟ್ಟದ್ದಕ್ಕಾಗಿ ಮತ್ತು ನೀವು ಮಾಡುತ್ತಿರುವ ಒಳ್ಳೆಯ ಕೆಲಸಗಳಿಗಾಗಿ ನಾವು ಯೆಹೋವನಿಗೆ ಕೃತಜ್ಞತೆ ತಿಳಿಸುತ್ತೇವೆ.
ಕಳೆದ ವರ್ಷವಿಡೀ ನೀವೆಲ್ಲರೂ ದೇವರ ರಾಜ್ಯದ ಚಟುವಟಿಕೆಗಳಲ್ಲಿ ಅಂದರೆ ‘ನಂಬಿಗಸ್ತ ಕ್ರಿಯೆಗಳು’ ಮತ್ತು ‘ಪ್ರೀತಿಪೂರ್ವಕ ಪ್ರಯಾಸದಲ್ಲಿ’ ಕಾರ್ಯನಿರತರಾಗಿದ್ದಿರಿ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ನಿಮ್ಮಲ್ಲಿ ಅನೇಕರು ಬೇರೆ ಬೇರೆ ವಿಧದಲ್ಲಿ ಸೇವೆಯನ್ನು ಹೆಚ್ಚಿಸಲು ಪ್ರಯತ್ನಿಸಿದಿರಿ. ಕೆಲವರು ಪ್ರಚಾರಕರ ಅಗತ್ಯವಿರುವ ಪ್ರದೇಶಗಳಿಗೆ ಸ್ಥಳಾಂತರಿಸಿದರು. ಅಷ್ಟೇ ಏಕೆ, ಅವರಲ್ಲಿ ಕೆಲವರು ತಮ್ಮ ದೇಶವನ್ನೇ ಬಿಟ್ಟು ಬೇರೆ ದೇಶಗಳಿಗೆ ಹೋಗಿ ಸೇವೆ ಮಾಡಿದರು. ಇನ್ನು ಕೆಲವರು ಸಾರ್ವಜನಿಕ ಸಾಕ್ಷಿಕಾರ್ಯದಲ್ಲಿ ಭಾಗವಹಿಸುವ ಮೂಲಕ ಸೇವೆಯನ್ನು ಹೆಚ್ಚಿಸಿದರು. ಸ್ಮರಣೆಯ ಸಮಯದಲ್ಲಿ, ಸಂಚರಣ ಮೇಲ್ವಿಚಾರಕರ ಭೇಟಿಯ ಸಮಯದಲ್ಲಿ ಮತ್ತು 2014 ಆಗಸ್ಟ್ನಲ್ಲಿ ನಡೆದ ವಿಶೇಷ ಅಭಿಯಾನದ ಸಮಯದಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವ ಮೂಲಕ ಸಹ ಕೆಲವರು ಸೇವೆಯನ್ನು ಹೆಚ್ಚಿಸಿದರು. ನಿಮ್ಮ ಪರಿಸ್ಥಿತಿಗಳು ಭಿನ್ನವಾಗಿದ್ದರೂ ನೀವೆಲ್ಲರೂ ಪೂರ್ಣಮನಸ್ಸಿನಿಂದ ಯೆಹೋವನ ಸೇವೆ ಮಾಡುತ್ತಿದ್ದೀರಿ. ಇದಕ್ಕಾಗಿ ನಿಮ್ಮನ್ನು ನಾವು ಪ್ರಶಂಸಿಸುತ್ತೇವೆ. (ಕೊಲೊ. 3:23, 24) ನಿಮ್ಮ ಈ ‘ನಂಬಿಗಸ್ತ ಕ್ರಿಯೆಗಳಿಗಾಗಿ’ ಯೆಹೋವನಿಗೆ ನಾವು ಕೃತಜ್ಞತೆ ತಿಳಿಸುತ್ತೇವೆ.
ಭೂವ್ಯಾಪಕವಾಗಿ ಆಧ್ಯಾತ್ಮಿಕ ಕೆಲಸಕ್ಕಾಗಿ ಉಪಯೋಗಿಸುವ ಕಟ್ಟಡಗಳನ್ನು ಕಟ್ಟುವ ಕೆಲಸದಲ್ಲೂ ನೀವು ಪಡುತ್ತಿರುವ “ಪ್ರೀತಿಪೂರ್ವಕ ಪ್ರಯಾಸವನ್ನು” ನಾವು ತುಂಬ ಗಣ್ಯ ಮಾಡುತ್ತೇವೆ. ಯೆಹೋವನ ಜನರ ಸಂಖ್ಯೆ ಹೆಚ್ಚುತ್ತಾ ಇರುವುದರಿಂದ ಇಂಥ ಕಟ್ಟಡಗಳ ಅಗತ್ಯ ಸಹ ತುಂಬ ಹೆಚ್ಚಾಗಿದೆ. (ಯೆಶಾ. 60:22) ಕಳೆದ ವರ್ಷ ಪ್ರಚಾರಕರ ಉಚ್ಚಾಂಕ 82,01,545 ಇತ್ತು. ಪ್ರತಿ ತಿಂಗಳು ನಡೆಸಿದ ಬೈಬಲ್ ಅಧ್ಯಯನಗಳ ಸರಾಸರಿ ಸಂಖ್ಯೆ 94,99,933 ಆಗಿತ್ತು. ಇಷ್ಟೊಂದು ಪ್ರಗತಿಯಾಗುತ್ತಾ ಇರುವುದರಿಂದ ಅನೇಕ ಕಡೆಗಳಲ್ಲಿರುವ ಬ್ರಾಂಚ್ ಆಫೀಸುಗಳನ್ನು ವಿಸ್ತರಿಸಬೇಕಾಗಿದೆ ಅಥವಾ ದುರಸ್ತಿ ಮಾಡಬೇಕಾಗಿದೆ. ಅಷ್ಟೇ ಅಲ್ಲದೆ, ಅನೇಕ ರಾಜ್ಯ ಸಭಾಗೃಹಗಳನ್ನೂ ಕಟ್ಟಬೇಕಿದೆ. ಭಾಷಾಂತರ ಮಾಡುವವರು ತಮ್ಮ ಭಾಷೆಯನ್ನಾಡುವ ಪ್ರದೇಶದಲ್ಲೇ ಇದ್ದು ಕೆಲಸ ಮಾಡಬೇಕಾಗಿದೆ. ಆದ್ದರಿಂದ ಪ್ರಾದೇಶಿಕ ಭಾಷಾಂತರ ಕಛೇರಿಗಳನ್ನೂ ಕಟ್ಟಬೇಕಿದೆ.
‘ನಾನು ಈ ಕಟ್ಟಡ ನಿರ್ಮಾಣ ಕೆಲಸಕ್ಕೆ ಹೇಗೆ ಬೆಂಬಲ ಕೊಡಬಹುದು?’ ಎಂದು ನಾವೆಲ್ಲರೂ ಸ್ವತಃ ಕೇಳಿಕೊಳ್ಳಬೇಕು. ನಮ್ಮಲ್ಲಿ ಕೆಲವರಿಗೆ ಸ್ವಯಂ ಸೇವಕರಾಗಿ ಕೆಲಸ ಮಾಡಲು ಸಾಧ್ಯವಿರಬಹುದು. ನಮಗೆ ನಿರ್ಮಾಣ ಕೆಲಸ ಗೊತ್ತಿರಲಿ, ಗೊತ್ತಿಲ್ಲದೇ ಇರಲಿ, ನಾವೆಲ್ಲರೂ ಈ ಕೆಲಸಕ್ಕೆ ಬೆಂಬಲ ಕೊಡಬಹುದು. ಹೇಗೆಂದರೆ, ನಮ್ಮಲ್ಲಿರುವುದನ್ನು ಕಾಣಿಕೆಯಾಗಿ ಕೊಡುವ ಮೂಲಕವೇ. (ಜ್ಞಾನೋ. 3:9, 10) ದೇವದರ್ಶನ ಗುಡಾರವನ್ನು ನಿರ್ಮಿಸುವ ಸಮಯದಲ್ಲಿ ಇಸ್ರಾಯೇಲ್ಯರು ಎಷ್ಟೊಂದು ಧಾರಾಳವಾಗಿ ಕಾಣಿಕೆಗಳನ್ನು ಕೊಟ್ಟರೆಂದರೆ ಕೊನೆಗೆ ‘ಕೊಡುವುದನ್ನು ನಿಲ್ಲಿಸಿ’ ಅಂತ ಅವರಿಗೆ ಹೇಳಬೇಕಾಯಿತು. (ವಿಮೋ. 36:5-7) ಇಂಥ ಬೈಬಲ್ ಉದಾಹರಣೆಗಳನ್ನು ಓದುವಾಗ ನಮ್ಮೆಲ್ಲರಿಗೂ ಹೆಚ್ಚನ್ನು ಕೊಡಬೇಕೆಂಬ ಮನಸ್ಸು ಬರುತ್ತದೆ. ಆದ್ದರಿಂದ, ಇಂಥ ಪ್ರಾಮುಖ್ಯ ವಿಷಯಗಳಿಗಾಗಿ ನೀವು ಪಡುತ್ತಿರುವ “ಪ್ರೀತಿಪೂರ್ವಕ ಪ್ರಯಾಸವನ್ನು” ನೋಡಿ ನಾವು ದೇವರಿಗೆ ಕೃತಜ್ಞತೆ ತಿಳಿಸುತ್ತೇವೆ.
ನಮ್ಮ ಸಹೋದರರು ಕಷ್ಟಗಳ ಮಧ್ಯೆಯೂ ದೃಢರಾಗಿದ್ದು, ತಾಳ್ಮೆ ತೋರಿಸುವುದನ್ನು ನೋಡುವಾಗ ನಾವು ತುಂಬ ಸಂತೋಷಿಸುತ್ತೇವೆ. ದಕ್ಷಿಣ ಕೊರಿಯಾದ ಸಹೋದರರ ಉದಾಹರಣೆಯನ್ನು ಗಮನಿಸಿ. ತಮ್ಮ ನಂಬಿಕೆಯನ್ನು ಬಿಟ್ಟುಕೊಡದೇ ಇದ್ದದಕ್ಕಾಗಿ 1950ರಿಂದ ಅವರಿಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತಿದೆ. ಅಂದಿನಿಂದ ಇಂದಿನವರೆಗೂ ಸಹೋದರರನ್ನು ಸೆರೆಮನೆಗೆ ಹಾಕಲಾಗುತ್ತಿದ್ದರೂ ಅವರು ತಮ್ಮ ನಿರ್ಣಯದಲ್ಲಿ ಯಾವುದೇ ಬದಲಾವಣೆ ಮಾಡದೆ ಈ ಕಷ್ಟವನ್ನು ತಾಳಿಕೊಳ್ಳುತ್ತಿದ್ದಾರೆ. ಈ ಉತ್ತಮ ಉದಾಹರಣೆ ಖಂಡಿತವಾಗಿಯೂ ನಮ್ಮ ನಂಬಿಕೆಯನ್ನು ಬಲಪಡಿಸುತ್ತದೆ.
ಎರಿಟ್ರೀಯ ದೇಶದಲ್ಲಿ ಮೂವರು ಸಹೋದರರಿಗೆ 20ಕ್ಕೂ ಹೆಚ್ಚು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಇತರರಿಗೆ ಅದಕ್ಕಿಂತ ಕಡಿಮೆ ಅವಧಿಯ ಸೆರೆಮನೆ ವಾಸವನ್ನು ವಿಧಿಸಲಾಗಿದೆ. ಅವರಲ್ಲಿ ಸಹೋದರಿಯರು ಮತ್ತು ಮಕ್ಕಳೂ ಇದ್ದಾರೆ. ಇವರನ್ನು ಬಿಡಿಸಲು ಅನೇಕ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಇಷ್ಟೆಲ್ಲಾ ಆದರೂ ನಮ್ಮ ಸಹೋದರ ಸಹೋದರಿಯರು ರಾಜಿಮಾಡಿಕೊಂಡಿಲ್ಲ, ತೀವ್ರವಾದ ಕಷ್ಟ, ನೋವಿನ ಪರಿಸ್ಥಿತಿಯಲ್ಲೂ ನಿಷ್ಠಾವಂತರಾಗಿದ್ದಾರೆ. ಆದ್ದರಿಂದ ನಾವು ತಪ್ಪದೇ ಅವರಿಗೋಸ್ಕರ ಪ್ರಾರ್ಥಿಸುತ್ತೇವೆ.—ರೋಮ. 1:8, 9.
ನಿಮ್ಮಲ್ಲಿ ಅನೇಕರು ನಿಮ್ಮ ನಂಬಿಕೆಯ ಕಾರಣ ಸೆರೆಮನೆಗೆ ಹೋಗಿಲ್ಲ ಅನ್ನುವುದೇನೋ ನಿಜ. ಆದರೂ ನೀವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೀರಿ. ನಿಮಗೆ ವಯಸ್ಸಾಗಿರಬಹುದು, ಗಂಭೀರ ಆರೋಗ್ಯ ಸಮಸ್ಯೆ ಇರಬಹುದು, ನಿಮ್ಮ ಸಂಗಾತಿ ಅಥವಾ ಸಂಬಂಧಿಕರಿಂದ ವಿರೋಧವನ್ನು ಎದುರಿಸುತ್ತಿರಬಹುದು ಅಥವಾ ಬೇರೆ ಯಾರಿಗೂ ಗೊತ್ತಿಲ್ಲದ ವೈಯಕ್ತಿಕ ಸಮಸ್ಯೆಗಳಿರಬಹುದು. ಇಷ್ಟೆಲ್ಲಾ ಸಮಸ್ಯೆಗಳ ಮಧ್ಯೆ ಸಹ ನೀವು ಯೆಹೋವನಿಗೆ ನಿಷ್ಠೆಯಿಂದ ಸೇವೆ ಮಾಡುತ್ತಿದ್ದೀರಿ. (ಯಾಕೋ. 1:12) ಆದ್ದರಿಂದ ನಾವು ನಿಮ್ಮನ್ನು ಪ್ರಶಂಸಿಸುತ್ತೇವೆ. ನೀವು ನಂಬಿಗಸ್ತರಾಗಿ ಇರುವುದರಿಂದ ನಾವು ಯೆಹೋವನಿಗೆ ಕೃತಜ್ಞತೆ ತಿಳಿಸುತ್ತೇವೆ.
ನಿಮ್ಮ ‘ನಂಬಿಗಸ್ತ ಕ್ರಿಯೆಗಳು, ಪ್ರೀತಿಪೂರ್ವಕ ಪ್ರಯಾಸ’ ಮತ್ತು ‘ತಾಳ್ಮೆಯನ್ನು’ ನೋಡಿ ‘ಯೆಹೋವನಿಗೆ ಕೃತಜ್ಞತೆ ಸಲ್ಲಿಸುತ್ತೇವೆ.’ ಯಾಕೆಂದರೆ “ಆತನು ಒಳ್ಳೆಯವನು.” (ಕೀರ್ತ. 106:1) ನಾವು ನಿಮ್ಮನ್ನು ತುಂಬ ಪ್ರೀತಿಸುತ್ತೇವೆ. ನೀವು ಸದಾಕಾಲಕ್ಕೂ ಯೆಹೋವನ ಸೇವೆ ಮಾಡುವಂತೆ ಆತನು ನಿಮಗೆ ಬೇಕಾದ ಶಕ್ತಿ ಕೊಟ್ಟು ಪೋಷಿಸಿ, ಆಶೀರ್ವದಿಸಲಿ ಎಂದು ನಾವು ಪ್ರಾರ್ಥಿಸುತ್ತೇವೆ.
ನಿಮ್ಮ ಸಹೋದರರು,
ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ