ಸುವಾರ್ತೆ ಸಾರುವಾಗ ಕರಪತ್ರಗಳನ್ನು ಚೆನ್ನಾಗಿ ಬಳಸಿ
1. ದೇವಜನರು ಕರಪತ್ರಗಳನ್ನು ಹೇಗೆ ಬಳಸುತ್ತಾ ಬಂದಿದ್ದಾರೆ?
1 ಸುವಾರ್ತೆ ಸಾರಲು ಯೆಹೋವನ ಸಾಕ್ಷಿಗಳು ಎಷ್ಟೋ ವರ್ಷಗಳಿಂದ ಕರಪತ್ರಗಳನ್ನು (ಟ್ರ್ಯಾಕ್ಟ್) ಬಳಸುತ್ತಿದ್ದಾರೆ. ಸಹೋದರ ಸಿ.ಟಿ.ರಸಲ್ ಮತ್ತು ಅವರ ಸಂಗಡಿಗರು ಬೈಬಲ್ ವಿದ್ಯಾರ್ಥಿಗಳ ಕರಪತ್ರಗಳು ಎಂಬ (ಇಂಗ್ಲಿಷ್) ಕರಪತ್ರಗಳನ್ನು 1880ರಲ್ಲಿ ಪ್ರಕಾಶಿಸಲು ಆರಂಭಿಸಿದರು. ಇವನ್ನು ಕಾವಲಿನಬುರುಜು ಓದುಗರಿಗೆ ಕೊಡಲಾಗುತಿತ್ತು. ಅವರು ಅದನ್ನು ಜನರಿಗೆ ಉಚಿತವಾಗಿ ಹಂಚುತ್ತಿದ್ದರು. ಕರಪತ್ರಗಳಿಗೆ ಎಷ್ಟು ಮಹತ್ವ ಕೊಡಲಾಯಿತು ಎಂದರೆ ಸುವಾರ್ತೆ ಸಾರುವ ಕೆಲಸ ಇನ್ನಷ್ಟು ಪ್ರಗತಿಯಾಗಲು, ಸಿ.ಟಿ.ರಸಲ್ ಅವರು 1884ರಲ್ಲಿ ನಮ್ಮ ಸೊಸೈಟಿಯನ್ನು ಆದಾಯರಹಿತ ಕಾನೂನುಬದ್ಧ ಸಂಸ್ಥೆಯನ್ನಾಗಿ ರಿಜಿಸ್ಟರ್ ಮಾಡಿಸುವಾಗ “ಟ್ರ್ಯಾಕ್ಟ್” ಎಂಬ ಪದವನ್ನು ಕೂಡಿಸಿದರು. ಹೀಗೆ ಅದನ್ನು ಝಯನ್ಸ್ ವಾಚ್ಟವರ್ ಟ್ರ್ಯಾಕ್ಟ್ ಸೊಸೈಟಿ ಎಂದು ಕರೆಯಲಾಯಿತು, ಈಗ ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಪೆನ್ಸಿಲ್ವೇನಿಯ ಎಂದು ಕರೆಯಲಾಗುತ್ತದೆ. 1918ರಷ್ಟಕ್ಕೆ ಬೈಬಲ್ ವಿದ್ಯಾರ್ಥಿಗಳು 30ಕೋಟಿಗಿಂತಲೂ ಹೆಚ್ಚು ಕರಪತ್ರಗಳನ್ನು ಹಂಚಿದರು. ಹೀಗೆ ಕರಪತ್ರಗಳು ಅಂದಿನಿಂದ ಇಂದಿನವರೆಗೂ ಉಪಯುಕ್ತ ಸಲಕರಣೆಗಳಾಗಿ ಬಳಸಲಾಗುತ್ತಿದೆ.
2. ಕರಪತ್ರಗಳು ಯಾಕೆ ಅಷ್ಟು ಪರಿಣಾಮಕಾರಿ?
2 ಅವು ಅಷ್ಟು ಪರಿಣಾಮಕಾರಿನಾ? ಕರಪತ್ರಗಳು ವರ್ಣರಂಜಿತ ಚಿತ್ರಣಗಳಿಂದ ಕೂಡಿರುವುದರಿಂದ ಜನರ ಮನಸ್ಸನ್ನು ಸೆಳೆಯುತ್ತವೆ. ಅವು ಕೇವಲ ಕೆಲವೇ ಹಾಳೆಗಳಿಂದ ಕೂಡಿದ್ದರೂ ಸಂದೇಶ ಸ್ಪಷ್ಟ ನಿಖರ. ಪತ್ರಿಕೆ, ಪುಸ್ತಕವನ್ನು ನೋಡಿ ಮೂಗುಮುರಿಯುವವರು ಕರಪತ್ರ ನೋಡುವಾಗ ಆಕರ್ಷಿತರಾಗುತ್ತಾರೆ. ಕರಪತ್ರಗಳನ್ನು ನೀಡುವುದು ಸುಲಭ, ಹೊಸ ಪ್ರಚಾರಕರಿಗೆ ಮತ್ತು ಚಿಕ್ಕ ಮಕ್ಕಳಿಗೂ ಇವುಗಳಿಂದ ಸಾಕ್ಷಿಕಾರ್ಯ ಮಾಡಬಹುದು. ಕರಪತ್ರಗಳು ಚಿಕ್ಕದಾಗಿರುವುದರಿಂದ ತೆಗೆದುಕೊಂಡು ಹೋಗಲು ಕೂಡ ಕಷ್ಟ ಆಗುವುದಿಲ್ಲ.
3. ಕರಪತ್ರದ ಮಹತ್ವವನ್ನು ವಿವರಿಸುವ ನಿಮ್ಮ ಸ್ವಂತ ಅನುಭವವನ್ನು ಅಥವಾ ಪ್ರಕಾಶಿತ ಅನುಭವವನ್ನು ಹೇಳಿ?
3 ಅನೇಕರಿಗೆ ಸತ್ಯ ಮುಟ್ಟಿರುವುದು ಕರಪತ್ರಗಳಿಂದಲೇ. ಒಬ್ಬ ಮಹಿಳೆ ದಾರಿಯಲ್ಲಿ ಕರಪತ್ರ ಬಿದ್ದಿರುವುದನ್ನು ನೋಡಿದಳು. ಆಕೆ ಅದನ್ನು ಎತ್ತಿಕೊಂಡು ಓದಿದಳು. ನಂತರ “ನನಗೆ ಸತ್ಯ ಸಿಕ್ಕಿತು” ಎಂದು ಕೂಗಿದಳು. ಕ್ರಮೇಣ ಕೂಟಗಳಿಗೆ ಹಾಜರಾದಳು, ಬೈಬಲ್ ಅಧ್ಯಯನ ಮಾಡಿದಳು ಮತ್ತು ದೀಕ್ಷಾಸ್ನಾನ ಪಡೆದಳು. ಇದೆಲ್ಲ ಹೇಗೆ ಸಾಧ್ಯ ಆಯಿತು? ಬೈಬಲ್ ಸಂದೇಶ ಇರುವ ಆ ಕರಪತ್ರದಿಂದಲೇ.
4. ತಿಂಗಳ ಸಾಹಿತ್ಯ ನೀಡುವಿಕೆಯಾಗಿ ಕರಪತ್ರಗಳನ್ನು ಆಯ್ಕೆ ಮಾಡಿರುವಾಗ ನಮ್ಮ ಗುರಿ ಏನಾಗಿರಬೇಕು?
4 ಮನೆಮನೆ ಸೇವೆ: ಸಾಕ್ಷಿಕೊಡಲು ಕರಪತ್ರಗಳು ಪರಿಣಾಮಕಾರಿ ಆಗಿರುವುದರಿಂದ ನವೆಂಬರ್ ತಿಂಗಳಿನಿಂದ ಆರಂಭಿಸಿ ಸಾಹಿತ್ಯ ನೀಡುವಿಕೆಯಲ್ಲಿ ಯಾವ್ಯಾವ ತಿಂಗಳಿನಲ್ಲಿ ಕರಪತ್ರಗಳನ್ನು ನೀಡಲಿದ್ದೇವೆ ಅನ್ನುವ ಸೂಚನೆಗಳು ಇರುವವು. ನಮ್ಮ ಗುರಿ ಏನಂದರೆ, ಕರಪತ್ರಗಳನ್ನು ಹಂಚುತ್ತಾ ಹೋಗುವುದಲ್ಲ. ಬದಲಾಗಿ ಅವನ್ನು ಮನೆಯವರೊಂದಿಗೆ ಸಂಭಾಷಣೆ ಆರಂಭಿಸಲು ಬಳಸುವುದೇ ಆಗಿದೆ. ಮನೆಯವನು ಮೊದಲ ಭೇಟಿಯಲ್ಲಿ ಅಥವಾ ಪುನರ್ಭೇಟಿಯ ಸಮಯದಲ್ಲಿ ಆಸಕ್ತಿ ತೋರಿಸಿದರೆ ಬೈಬಲ್ ಅಧ್ಯಯನ ಹೇಗೆ ಮಾಡಲಾಗುವುದು ಎಂದು ತೋರಿಸಲು ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ಅಥವಾ ಇತರ ಅಧ್ಯಯನ ಸಾಹಿತ್ಯವನ್ನು ಬಳಸಬಹುದು. ಮನೆಮನೆ ಸೇವೆಯಲ್ಲಿ ಕರಪತ್ರಗಳನ್ನು ಪರಿಚಯಿಸುವುದು ಹೇಗೆ? ಪ್ರತಿಯೊಂದು ಕರಪತ್ರಕ್ಕೆ ಅದರದ್ದೇ ಆದ ವೈಶಿಷ್ಟ್ಯತೆ ಇದೆ. ಮೊದಲು ನಾವು ಅವುಗಳ ಸಮಗ್ರ ಪರಿಚಯ ಮಾಡಿಕೊಳ್ಳಬೇಕು.
5. ಮನೆಮನೆ ಸೇವೆಯಲ್ಲಿ ಕರಪತ್ರಗಳನ್ನು ಹೇಗೆ ಕೊಡಬಹುದು?
5 ನಮ್ಮ ನಿರೂಪಣೆ ನಮ್ಮ ಸೇವಾಕ್ಷೇತ್ರಕ್ಕೆ ಹಾಗೂ ಕೊಡಲಿರುವ ಕರಪತ್ರಕ್ಕೆ ಹೊಂದಿಕೆಯಲ್ಲಿರಬೇಕು. ಕರಪತ್ರವನ್ನು ಮನೆಯವನಿಗೆ ತೋರಿಸಿ ನಾವು ನಮ್ಮ ಸಂಭಾಷಣೆಯನ್ನು ಆರಂಭಿಸಬಹುದು. ಕರಪತ್ರದ ಮುಖಪುಟ ಮನೆಯವನ ಆಸಕ್ತಿ ಕೆರಳಿಸಬಹುದು. ಅಥವಾ ನಾವೇ ನಮ್ಮಲ್ಲಿರುವ ಕೆಲವು ಕರಪತ್ರಗಳನ್ನು ತೋರಿಸಿ ನಿಮಗೆ ಯಾವುದು ಇಷ್ಟ ಅಂತ ಕೇಳಬಹುದು. ಮನೆಬಾಗಿಲನ್ನು ತೆರೆಯಲು ಭಯಪಡುವ ಕ್ಷೇತ್ರದಲ್ಲಿ ನಾವು ಸೇವೆ ಮಾಡುತ್ತಿರುವುದಾದರೆ, ಮನೆಯವರಿಗೆ ಕರಪತ್ರದ ಮುಖಪುಟ ಕಾಣುವಂತೆ ಹಿಡಿದು ಮಾತಾಡಬಹುದು. ಇಲ್ಲವೆ ನಾವು ಒಂದು ಪ್ರಾಮುಖ್ಯ ವಿಷಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿದುಕೊಳ್ಳಲು ಬಂದಿದ್ದೆ ಎಂದು ಹೇಳಿ ಅವರು ಒಪ್ಪುವಲ್ಲಿ ಕರಪತ್ರವನ್ನು ಬಾಗಿಲ ಅಡಿಯಿಂದ ಒಳಕ್ಕೆ ತಳ್ಳಿ ಬರಬಹುದು. ಕರಪತ್ರದ ಶೀರ್ಷಿಕೆ ಪ್ರಶ್ನೆ ಆಗಿರುವಲ್ಲಿ ಅದರ ಬಗ್ಗೆ ಮನೆಯವನ ಅಭಿಪ್ರಾಯವನ್ನು ಕೇಳಬಹುದು ಅಥವಾ ಅವರ ಆಸಕ್ತಿ ಕೆರಳಿಸಬಲ್ಲ ಮತ್ತು ಸಂಭಾಷಣೆಯನ್ನು ಮುಂದುವರಿಸಬಲ್ಲ ನಮ್ಮದೇ ಒಂದು ಪ್ರಶ್ನೆಯನ್ನು ಕೇಳಬಹುದು. ನಂತರ ಆ ವಿಷಯಕ್ಕೆ ಸಂಬಂಧಿಸಿದ ಭಾಗವನ್ನು ಕರಪತ್ರದಿಂದ ಓದಿ, ಆ ಭಾಗದಲ್ಲಿ ಪ್ರಶ್ನೆ ಬರುವ ಕಡೆ ತುಸು ನಿಲ್ಲಿಸಿ ಅದರ ಕುರಿತು ಮನೆಯವನಿಗೆ ಮಾತಾಡಲು ಬಿಡಬಹುದು. ಮುಖ್ಯ ವಚನಗಳನ್ನು ಬೈಬಲ್ ತೆರೆದು ಓದಿ ಹೇಳಬಹುದು. ಹೀಗೆ ಒಂದು ನಿರ್ದಿಷ್ಟ ವಿಷಯಭಾಗವನ್ನು ಚರ್ಚಿಸಿದ ನಂತರ ನಮ್ಮ ಸಂಭಾಷಣೆಯನ್ನು ಮುಕ್ತಾಯಗೊಳಿಸಿ, ಪುನರ್ಭೇಟಿ ಮಾಡಲು ಸರಿಯಾದ ಯೋಜನೆ ಮಾಡಬಹುದು. ಮನೆಮನೆ ಸೇವೆ ಮಾಡುತ್ತಿರುವಾಗ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಏನು ಮಾಡಬಹುದು? ಸಾಹಿತ್ಯ ಬಿಟ್ಟು ಬರಬಹುದೆಂಬ ನಿರ್ದೇಶನ ನಿಮಗೆ ಸಭೆಯಿಂದ ಸಿಕ್ಕಿರುವಲ್ಲಿ, ಇತರರ ಕಣ್ಣಿಗೆ ಬೀಳದ ಹಾಗೆ ಕರಪತ್ರವನ್ನು ಆ ಮನೆಯಲ್ಲಿ ಬಿಟ್ಟು ಬರಬಹುದು.
6. ಬೀದಿ ಸಾಕ್ಷಿಕಾರ್ಯದಲ್ಲಿ ಕರಪತ್ರಗಳನ್ನು ಬಳಸುವುದು ಹೇಗೆ?
6 ಬೀದಿ ಸಾಕ್ಷಿಕಾರ್ಯ: ಬೀದಿ ಸಾಕ್ಷಿಕಾರ್ಯದಲ್ಲಿ ನೀವು ಕರಪತ್ರಗಳನ್ನು ಬಳಸಿದ್ದೀರಾ? ನಿಂತು ಮಾತಾಡುವಷ್ಟು ಸಮಯವಿಲ್ಲದೆ ಕೆಲವು ದಾರಿಹೋಕರು ಗಡಿಬಿಡಿಯಿಂದ ಹೋಗುತ್ತಿರುತ್ತಾರೆ. ಅಂಥವರಿಗೆ ಎಷ್ಟು ಆಸಕ್ತಿ ಇದೆಯೆಂದು ನಮಗೆ ಅಳೆಯಲು ಅಸಾಧ್ಯ. ಹಾಗಾಗಿ ಹೊಸ ಪತ್ರಿಕೆಗಳನ್ನು ಅವರಿಗೆ ಕೊಡುವ ಬದಲು ಕರಪತ್ರಗಳನ್ನು ಕೊಡಬಹುದು. ಅವುಗಳಲ್ಲಿ ಸಂದೇಶ ಚುಟುಕಾಗಿ, ಚಿತ್ರಗಳಿಂದ ವಿವರಿಸಲಾಗಿರುವ ಕಾರಣ ಸಮಯ ಸಿಕ್ಕಾಗ ಅವರೇ ಅದನ್ನು ಓದಬಹುದು. ಜನರು ಗಡಿಬಿಡಿಯಲ್ಲಿಲ್ಲ ಅಂದರೆ ನಾವು ಕರಪತ್ರದಲ್ಲಿರುವ ಕೆಲವು ವಿಷಯಗಳನ್ನು ಅವರೊಂದಿಗೆ ಚರ್ಚಿಸಬಹುದು. ಆದರೆ ಮಾತಾಡುವ ಮುನ್ನ ಗಮನಿಸಿ, ತೊಂದರೆ ಮಾಡುವಂತೆ ಕಂಡರೆ ಮಾತಾಡಬೇಡಿ.
7. ಅನೌಪಚಾರಿಕ ಸಾಕ್ಷಿಕಾರ್ಯದಲ್ಲಿ ಕರಪತ್ರಗಳನ್ನು ಹೇಗೆ ಬಳಸಬಹುದು ಅನ್ನುವದಕ್ಕೆ ಅನುಭವಗಳನ್ನು ತಿಳಿಸಿ.
7 ಅನೌಪಚಾರಿಕ ಸಾಕ್ಷಿಕಾರ್ಯ: ಕರಪತ್ರಗಳನ್ನು ಬಳಸಿ ಅನೌಪಚಾರಿಕವಾಗಿ ಸಾಕ್ಷಿ ನೀಡುವುದು ಸುಲಭ. ಒಬ್ಬ ಸಹೋದರ ಮನೆಯಿಂದ ಹೊರಬರುವ ಮೊದಲು ಕೆಲವೊಂದು ಕರಪತ್ರಗಳನ್ನು ಕಿಸೆಯಲ್ಲಿ ಇಟ್ಟುಕೊಳ್ಳುತ್ತಾರೆ. ಆತ ಯಾರನ್ನಾದರೂ ಭೇಟಿಯಾಗುವಾಗ ಉದಾಹರಣೆಗೆ ಕಿರಾಣಿ ಅಂಗಡಿಯವರನ್ನು ಭೇಟಿಯಾದಾಗ ‘ನಿಮಗೆ ಓದಲು ಒಂದು ಚಿಕ್ಕ ಕರಪತ್ರ ಕೊಡಲಾ’ ಎಂದು ಕೇಳಿ ಒಪ್ಪಿದರೆ ಕರಪತ್ರ ಕೊಡ್ತಾರೆ. ಒಂದು ಸಾರಿ ಸಾಕ್ಷಿ ದಂಪತಿ ನಗರವೊಂದಕ್ಕೆ ಟ್ರಿಪ್ ಹೊರಟಿದ್ದರು. ಅವರು ಹೋಗುವಾಗ ಬೇರೆ ಬೇರೆ ಭಾಷೆಯ ಜನರನ್ನು ಭೇಟಿಯಾಗಬಹುದು ಎಂದು ನೆನಸಿ ಸರ್ವ ದೇಶಗಳ ಜನರಿಗಾಗಿ ಸುವಾರ್ತೆ ಕಿರುಪುಸ್ತಕವನ್ನು ಮತ್ತು ಬೇರೆ ಬೇರೆ ಭಾಷೆಯ ಕರಪತ್ರಗಳನ್ನು ತೆಗೆದುಕೊಂಡು ಹೋದರು. ದಾರಿಯ ಬದಿಯಲ್ಲಿ ವಸ್ತುಗಳನ್ನು ಮಾರುವ ವ್ಯಾಪಾರಸ್ಥ ಅಥವಾ ಪಾರ್ಕ್ನಲ್ಲಿ ತಮ್ಮ ಪಕ್ಕದಲ್ಲಿ ಕುಳಿತ ವ್ಯಕ್ತಿ ಬೇರೆ ಭಾಷೆಯನ್ನು ಮಾತಾಡುವುದನ್ನು ಕೇಳಿಸಿಕೊಂಡರೆ ಅವರಿಗೆ ಅವರ ಭಾಷೆಯಲ್ಲಿ ಕರಪತ್ರಗಳನ್ನು ಕೊಡುತ್ತಿದ್ದರು.
8. ಕರಪತ್ರಗಳು ಒಂದು ರೀತಿ ಬೀಜ ಇದ್ದಂತೆ. ಹೇಗೆಂದು ವಿವರಿಸಿ.
8 “ಬೀಜಬಿತ್ತು”: ಕರಪತ್ರಗಳನ್ನು ಬೀಜಗಳಿಗೆ ಹೋಲಿಸಬಹುದು. ಯಾವ ಬೀಜ ಮೊಳಕೆಯೊಡುಯುತ್ತೆ ಫಲಕೊಡುತ್ತೆ ಅನ್ನೋದು ರೈತನಿಗೆ ಗೊತ್ತಿಲ್ಲದ ಕಾರಣ ಆತನು ಬೀಜಗಳನ್ನು ಹೊಲದುದ್ದಕ್ಕೂ ಹರಡಿಸುತ್ತಾನೆ. ಪ್ರಸಂಗಿ 11:6 ಹೇಳುತ್ತೆ “ಮುಂಜಾನೆ ಬೀಜಬಿತ್ತು, ಸಂಜೆಯ ತನಕ ಕೈದೆಗೆಯಬೇಡ; ಇದು ಸಫಲವೋ, ಅದು ಸಫಲವೋ, ಒಂದು ವೇಳೆ ಎರಡೂ ಚೆನ್ನಾಗುವವೋ ನಿನಗೆ ತಿಳಿಯದು.” ಹಾಗಾದರೆ ನಾವು ಸಹ ಕರಪತ್ರಗಳೆಂಬ ಪರಿಣಾಮಕಾರಿ ಸಲಕರಣೆ ಬಳಸಿ ‘ತಿಳುವಳಿಕೆಯನ್ನು ಬಿತ್ತುತ್ತಾ’ ಇರೋಣ.—ಜ್ಞಾನೋ. 15:7.
[ಪುಟ 3ರಲ್ಲಿರುವ ಸಂಕ್ಷಿಪ್ತ ವಿವರಣೆ]
ಸಾಕ್ಷಿಕೊಡಲು ಕರಪತ್ರಗಳು ಪರಿಣಾಮಕಾರಿ. ಆದ್ದರಿಂದ ನವೆಂಬರ್ ತಿಂಗಳಿನಿಂದ ಆರಂಭಿಸಿ ಸಾಹಿತ್ಯ ನೀಡುವಿಕೆಯಲ್ಲಿ, ಯಾವ್ಯಾವ ತಿಂಗಳಿನಲ್ಲಿ ಕರಪತ್ರಗಳನ್ನು ನೀಡಲಿದ್ದೇವೆ ಅನ್ನುವ ಸೂಚನೆಗಳು ಇರುವವು.