“ತೊಂದರೆಯ ಸಮಯದಲ್ಲಿ” ಶುಶ್ರೂಷೆ ಪೂರೈಸಲು ಸಿಕ್ಕಿದ ತರಬೇತಿ
1 “ತೊಂದರೆಯ ಸಮಯದಲ್ಲಿ” ಯೋಗ್ಯ ಹೃದಯದ ವ್ಯಕ್ತಿಗಳನ್ನು ಹುಡುಕಲು ನಮ್ಮನ್ನು ತರಬೇತಿಗೊಳಿಸಲಿಕ್ಕೆಂದೇ ನಮ್ಮ ರಾಜ್ಯ ಸೇವೆಯಲ್ಲಿ ಹಿಂದೆ ಕೆಲವು ಲೇಖನಗಳನ್ನು ತಯಾರಿಸಲಾಗಿತ್ತು. ಅವುಗಳಲ್ಲಿನ ಸಮಯೋಚಿತ ಸಲಹೆಗಳನ್ನು ನಾವು ಗಣ್ಯಮಾಡುತ್ತೇವೆ ಅಲ್ಲವೇ? (2 ತಿಮೊ. 4:2) ಆ ಸಲಹೆಗಳಲ್ಲಿ ಯಾವುದನ್ನಾದರೂ ಅನ್ವಯಿಸಿದ್ದೀರೋ? ಉದಾಹರಣೆಗೆ, ನಮಗೆ ಕಲಿಸಲಾದ ಒಂದು ವಿಷಯವೇನೆಂದರೆ ಬೈಬಲಿನ ಸುವಾರ್ತೆಯನ್ನು ಕೇಳಲು ಇಲ್ಲವೆ ಕೇಳದಿರಲು ಮನೆಯವರಿಗಿರುವ ಹಕ್ಕನ್ನು ನಾವು ಗೌರವಿಸಬೇಕು. ಇದು ವಿವೇಕಯುತ ಏಕೆಂದರೆ ನಾವು ವಿಭಿನ್ನ ಧರ್ಮಗಳ ಜನರ ಮನೆಗೆ ಆಮಂತ್ರಣವಿಲ್ಲದೆ ಭೇಟಿನೀಡುತ್ತಿದ್ದೇವೆ. ನಾವು ನಿರೂಪಣೆಯನ್ನು ಆರಂಭಿಸುವ ಮುಂಚೆ, ಮನೆಯವರಿಗೆ ಕೇಳಲು ಮನಸ್ಸಿದೆಯೋ ಎಂದು ಮೊದಲು ಕಂಡುಹಿಡಿಯಬೇಕು. ಹೀಗೆ ಮಾಡುವ ಮೂಲಕ ನಾವು ಅವರ ಹಕ್ಕನ್ನು ಗೌರವಿಸುತ್ತೇವೆಂದು ಅವರಿಗೆ ಮನದಟ್ಟುಮಾಡಿಸುತ್ತೇವೆ.
2 ಸಮಸ್ಯೆಗಳನ್ನು ಆದಷ್ಟು ತಡೆಯಲಿಕ್ಕಾಗಿ ಎಚ್ಚರಿಕೆ, ವಿವೇಚನೆ, ಜಾಣ್ಮೆ ತೋರಿಸುತ್ತೇವೆ. ಜಾಣ್ಮೆ ತೋರಿಸುವುದರಲ್ಲಿ ಯಾವಾಗ ಏನು ಹೇಳಬಾರದು ಎಂಬುದನ್ನು ತಿಳಿದಿರುವುದು ಸೇರಿದೆ. (ಯೋಹಾ. 16:12) ಜನರನ್ನು ಒತ್ತಾಯದಿಂದ ಅಥವಾ ಆಮಿಷವೊಡ್ಡಿ ಮತಾಂತರಿಸಲು ನಾವು ಹೋರಾಟ ನಡೆಸುತ್ತಿಲ್ಲ. ಕ್ರಿಸ್ತನ ಶಿಷ್ಯರಾದ ನಾವು ಶಾಂತಿ ಹಾಗೂ ಸಾಂತ್ವನದ ಸಂದೇಶವನ್ನು ಸಾರುತ್ತಿದ್ದೇವೆ. ಆದರೆ ಟೆರಿಟೊರಿಯಲ್ಲಿರುವ ಎಲ್ಲರೂ ಆ ಸಂದೇಶವನ್ನು ಸ್ವೀಕರಿಸುವುದಿಲ್ಲ ಇಲ್ಲವೆ ನಮ್ಮ ಒಳ್ಳೇ ಹೇತುವನ್ನು ಅರ್ಥಮಾಡಿಕೊಳ್ಳುವುದಿಲ್ಲ. ಹೀಗಿರುವುದರಿಂದ, ಕ್ರೈಸ್ತರು ತಮ್ಮನ್ನು ಹಿಂಸಿಸುವವರಿಂದ ಇಲ್ಲವೆ ಹಿಂಸೆಯ ಸ್ಥಳದಿಂದ ದೂರ ಓಡಿಹೋಗಬೇಕು. (ಮತ್ತಾ. 10:23; ಅ. ಕಾ. 14:5-7) ಇತ್ತೀಚಿನ ತಿಂಗಳುಗಳಲ್ಲಿ ವಿರೋಧವನ್ನು ಎದುರಿಸಿದ ಸಹೋದರರು ಇದನ್ನೇ ಮಾಡಿದ್ದಾರೆ. ಅವರು ಆಸಕ್ತಿ ತೋರಿಸುವವರಿಗೆ ಗಮನಕೊಟ್ಟಿದ್ದಾರೆ. ಇದರಿಂದ ಅವರಿಗೆ ಒಳ್ಳೇ ಫಲಿತಾಂಶಗಳು ಸಿಕ್ಕಿವೆ. ಆದರೆ ಈ ಹಿಂದೆ ನಮ್ಮನ್ನು ವಿರೋಧಿಸಿದವರು ಮುಂದೊಂದು ದಿನ ಕಾರಣಾಂತರದಿಂದ ಬದಲಾಗಬಲ್ಲರು ಎಂಬದನ್ನು ನಾವು ನೆನಪಿನಲ್ಲಿಡತಕ್ಕದ್ದು.
3 ಟೆರಿಟೊರಿಯಲ್ಲಿರುವ ಜನರನ್ನು ಕೆರಳಿಸುವಂಥ ಧಾರ್ಮಿಕ ವಿಷಯಗಳ ಬಗ್ಗೆ ಜಾಗರೂಕರಾಗಿರುವುದರ ಕುರಿತ ಮುದ್ರಿತ ಸಲಹೆಗಳನ್ನು ಹಿರಿಯರು ಆಗಾಗ್ಗೆ ನೆನಪಿಗೆ ತರುವುದನ್ನು ಸಹೋದರರು ತುಂಬ ಗಣ್ಯಮಾಡುತ್ತಾರೆ. (2 ಪೇತ್ರ 3:1, 2) ಆದುದರಿಂದ, 2008ರ ಜನವರಿಯಿಂದ ಮೇ ಮತ್ತು ಆಗಸ್ಟ್ ತಿಂಗಳ ನಮ್ಮ ರಾಜ್ಯ ಸೇವೆಯಲ್ಲಿನ ಲೇಖನಗಳಲ್ಲಿರುವ ಅಂಶಗಳನ್ನು ಸೂಕ್ತವಾಗಿರುವಾಗೆಲ್ಲ ಕೂಟದ ಭಾಗಗಳಲ್ಲಿ ಒಳಗೂಡಿಸಬಹುದು. ಕ್ಷೇತ್ರ ಸೇವೆಗಾಗಿ ಗುಂಪನ್ನು ನೇಮಿಸುವ ಮುಂಚೆಯೂ ಅವುಗಳನ್ನು ತಿಳಿಸಬಹುದು. ಹೀಗೆ ಮಾಡುವುದರಿಂದ ಹಳೆಯ ಸೇವಾ ವಿಧಾನಗಳನ್ನು ಮತ್ತು ಜನರು ತಪ್ಪರ್ಥಮಾಡಿಕೊಳ್ಳಬಹುದಾದ ಪದಪ್ರಯೋಗಗಳನ್ನು ಬಿಟ್ಟು, ಸದ್ಯದ ಏರ್ಪಾಡಿಗನುಸಾರ ಅಧೀನತೆಯಿಂದ ಕೆಲಸಮಾಡಲು ಎಲ್ಲರಿಗೂ ಸಹಾಯವಾಗುವುದು. ಕ್ಷೇತ್ರ ಸೇವಾ ಗುಂಪುಗಳಿಗೆ ಆ ಸೂಚನೆಗಳನ್ನು ಪದೇ ಪದೇ ನೆನಪುಹುಟ್ಟಿಸುವಲ್ಲಿ ಅವರು ಸಾರ್ವಜನಿಕ ಸ್ಥಳಗಳಲ್ಲಿ ಸೇರಿಬರುವಾಗ ಗಟ್ಟಿಯಾಗಿ ಮಾತಾಡದಂತೆ ಇಲ್ಲವೆ ಅನುಚಿತ ಗಮನಸೆಳೆಯದಂತೆ ಹೆಚ್ಚು ಜಾಗ್ರತೆ ವಹಿಸುವರು.
4 ಎಲ್ಲಕ್ಕಿಂತ ಮಿಗಿಲಾಗಿ, ಸಮಸ್ಯೆ ಏಳುವ ಮುಂಚೆಯೇ ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮ ಹೃದಯವನ್ನು ಸಿದ್ಧಪಡಿಸಬೇಕು. ಹೇಗೆ? ದೇವರ ವಾಕ್ಯದ ದೈನಂದಿನ ಅಧ್ಯಯನ ಹಾಗೂ ಪ್ರಾರ್ಥನೆಯ ಮೂಲಕವೇ. ನಮ್ಮ ನಂಬಿಕೆ ಸಜೀವವಾದದ್ದೂ, ಧೈರ್ಯದಿಂದ ಕ್ರಿಯೆಗೈಯುವಂತೆ ಪ್ರಚೋದಿಸುವಂಥದ್ದೂ ಆಗಿರಬೇಕು. (ಎಜ್ರ 7:10; ಕೀರ್ತ. 78:7, 8; ಯಾಕೋ. 2:17; w09 9/15 ಪುಟ 12-15 ನೋಡಿ.) ಯೆಹೋವನ ಮೇಲಿನ ಭರವಸೆಯು, ಜನರ ಗುಂಪು ನಮ್ಮನ್ನು ಸುತ್ತುವರಿದಾಗ ಶಾಂತರಾಗಿರಲು ಮತ್ತು ಪೊಲೀಸ್ ಅಧಿಕಾರಿಗಳಿಗೆ ನಮ್ಮ ಚಟುವಟಿಕೆಯ ಬಗ್ಗೆ ಗೌರವದಿಂದ ವಿವರಿಸಲು ಸಹಾಯಮಾಡುವುದು.
5 ನೀವು ವಿರೋಧಕ್ಕೆ ಹೆದರಿ ಶುಶ್ರೂಷೆಯಲ್ಲಿ ಪಾಲ್ಗೊಳ್ಳುವುದನ್ನು ಕಡಿಮೆಗೊಳಿಸಿರುವಲ್ಲಿ, ಧೈರ್ಯ ತಂದುಕೊಳ್ಳಿ. ಯೇಸುವಿನ ಮರಣಾನಂತರ ಅಪೊಸ್ತಲರೆಲ್ಲರೂ ಸಾರುವುದನ್ನು ಸ್ವಲ್ಪ ಸಮಯಕ್ಕೆ ನಿಲ್ಲಿಸಿದರಾದರೂ, ಪುನಃ ಒಮ್ಮೆ ಸಕ್ರಿಯರಾದರೆಂಬ ಮಾತನ್ನು ನೆನಪಿಗೆ ತನ್ನಿ. (ಮತ್ತಾ. 26:56; ಅ. ಕಾ. 5:28) ಜನರು ನಮ್ಮ ಸಂದೇಶವನ್ನು ತಿರಸ್ಕರಿಸುವಾಗ ಅ. ಕಾರ್ಯಗಳು 18:9, 10ರಲ್ಲಿ ದಾಖಲಾಗಿರುವ ಯೇಸುವಿನ ಆಶ್ವಾಸನೆಯನ್ನು ಮನಸ್ಸಿನಲ್ಲಿಡಿ. ಸುವಾರ್ತೆಯನ್ನು ಸಾರುತ್ತಾ ಇರಲು ಬೇಕಾದ ಧೈರ್ಯಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಿರಿ. (ಅ. ಕಾ. 4:29, 30) ನಿಮ್ಮ ಕೇಳುಗರ ಹೃದಯವನ್ನು ಮುಟ್ಟುವ ವಿಧಗಳನ್ನು ಹುಡುಕಿರಿ. ಯೆಹೋವನು ಹೃದಯವನ್ನು ಓದಬಲ್ಲನು ಮತ್ತು ಪ್ರಾಮಾಣಿಕ ಹೃದಯದ ಜನರನ್ನು ತನ್ನೆಡೆಗೆ ಸೆಳೆಯಬಲ್ಲನು ಎಂಬುದನ್ನು ಎಂದಿಗೂ ಮರೆಯದಿರಿ.—1 ಸಮು. 16:7; ಯೋಹಾ. 6:44.